Feeds:
ಲೇಖನಗಳು
ಟಿಪ್ಪಣಿಗಳು

Posterಇವತ್ತು ನಾಲ್ಕು ಜನ ಬರಹಗಾರರನ್ನು ಒಟ್ಟು ಹಾಕಿ ಒಂದು ಪತ್ರಿಕೆಯ ಪುರವಣಿಗೆ ಬರೆಸುವುದೇ ದೊಡ್ಡ ಕಷ್ಟ. ಅಂಥದ್ರಲ್ಲಿ ಒಂದು ಪುಸ್ತಕಕ್ಕೆ ಬರೆಸುವುದು ದೊಡ್ಡ ಸಾಹಸ…’ ಹಿಂದಿನ ಪುಸ್ತಕದ ಟೈಂನಲ್ಲಿ ಗೆಳೆಯ ವಿಕಾಸ್ ನೆಗಿಲೋಣಿ ಹೇಳಿದ ಮಾತಿದು. ನಂಗೂ ಅದೇ ಭಯಂಕರ ಅನುಮಾನ ಇತ್ತು. ಆದ್ರೂ ’ಇಂಥದ್ದೊಂದು ಪುಸ್ತಕಕ್ಕೆ ನಾಲ್ಕಾರು ಜನರ ಕೊಡುಗೆ ಇದ್ರೆ ಆ ಪುಸ್ತಕದೊಳಗಿನ ಸರಕಿನ ಮೌಲ್ಯ ಹೆಚ್ಚಾಗುತ್ತೆ’ ಎಂಬ ನಂಬಿಕೆ ನನ್ನದು. ಧೈರ್ಯ ಮಾಡಿ ಒಂದಷ್ಟು ಗೆಳೆಯರನ್ನು ಕೇಳಿದೆ. ಒಂದಲ್ಲ, ಎರಡನೇ ಪುಸ್ತಕವೂ ಅದೇ ಮಾದರಿಯಲ್ಲಿ ರೆಡಿ ಆಯ್ತು ಅನ್ನೋದೇ ಖುಷಿ. ’ನೀವೂ ಪತ್ರಕರ್ತರಾಗಬೇಕೆ?’ ಪುಸ್ತಕಕ್ಕೆ ಬರೆದುಕೊಡಿ ಅಂತ ಕೇಳಿದ್ದು ಕೆಲವು ಗೆಳೆಯರನ್ನು ಮಾತ್ರ. ಅದ್ರಲ್ಲಿ ಯಾರೂ ’ಆಗಲ್ಲ’ ಎನ್ನದೇ ಖುಷಿಯಿಂದಲೇ ಬರೆದುಕೊಟ್ಟಿದ್ದಾರೆ. ಅದೇ ಖುಷಿಗಾಗಿ ಇದೊಂದು ಸಣ್ಣ ಬರಹ ಕೂಡ.
ಈ ಕೋಡ್ಸರ ದಿನ ಫೋನ್ ಮಾಡಿ ಟಾರ್ಚರ್ ಕೊಡ್ತಾನಪ್ಪ. ಏನೋ ಒಂದು ಬರೆದುಕೊಟ್ಟರೆ ಸಾಕು… ಹಾಗಂತ ಮೂಲಾಜಿಗೆ ಬಿದ್ದು ನಮ್ಮ ಎರಡೂ ಪುಸ್ತಕಕ್ಕೂ ಯಾರೂ ಬರೆದಿಲ್ಲ. ಎಲ್ಲರೂ ’ಇದು ನನ್ನದೇ ಸ್ವಂತ ಪುಸ್ತಕ’ ಎಂದುಕೊಂಡೆ ಬರೆದವರು. ಈ ಅನುಭವ ನಂಗೆ ಎರಡೂ ಪುಸ್ತಕದಲ್ಲಿ ಆಗಿದೆ.
’ಪತ್ರಿಕೆಗೆ ಬರೆಯೋದು ಹೇಗೆ?’ ಬುಕ್‌ಗೆ ೧೩ ಜನ ಬರೆದಿದ್ದಾರೆ. ಈ ಸಲ ೬ ಜನ. ಎಲ್ಲ ಬರಹಗಳೂ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಹಾಗಂತ ನಾನು ಕೇಳಿದ ತಕ್ಷಣ ಬರೆದುಕೊಡಲೇ ಬೇಕು ಎಂಬ ಮೂಲಾಜು ಯಾರಿಗೂ ಇರಲಿಲ್ಲ. ನಾನು ಕೂಡ ಎಲ್ಲರೂ ಬರೆದುಕೊಡಲೇ ಬೇಕು ಅಂತ ಅಪೇಕ್ಷಿಸಿರಲಿಲ್ಲ ಹಾಗೂ ಬರೆದು ಕೊಡುತ್ತಾರೆ ಅಂತ ನಿರೀಕ್ಷೆಯನ್ನೂ ಮಾಡಿರಲಿಲ್ಲ. ಒಂದು ಪ್ರಯತ್ನ ನೋಡೋಣ ಅಂತಲೇ ಹೊರಟ್ಟಿದ್ದು.
ಖಂಡಿತ ಎರಡೂ ಪುಸ್ತಕಗಳೂ ಪತ್ರಿಕೋದ್ಯಮದಲ್ಲಿ ದಾಖಲೆಯಾಗಿ ಉಳಿಬಲ್ಲವು ಅನ್ನುವುದರಲ್ಲಿ ಅನುಮಾನವಿಲ್ಲ. ”ನೀವೂ ಪತ್ರಕರ್ತರಾಗಬೇಕೆ?’ ಹೀಗೊಂದು ಪುಸ್ತಕದ ಪರಿಕಲ್ಪನೆಯಿದೆ. ಇದ್ರಲ್ಲಿ ನೀವು ಇಂಥದ್ದನ್ನೇ ಬರೆದುಕೊಡಬೇಕು ಸರ್’ ಅಂತ ರವಿಶಂಕರ್.ಕೆ.ಭಟ್ಟರಿಗೆ(ಅವ್ರು ಕೆಲವಷ್ಟು ವಿಷಯದಲ್ಲಿ ಭಯಂಕರ ಪರ್ಟಿಕ್ಯುಲರ್) ಕೇಳಿದೆ. ಒಪ್ಪಿಕೊಳ್ಳಲಿಕ್ಕೆ ಆ ಮನುಷ್ಯ ಟೈಂ ತಗೊಂಡ್ರು. ಬಟ್ ಒಪ್ಪಿಕೊಂಡರೆ ಬರೆದುಕೊಡ್ತಾರೆ ಅಂತ ಭರವಸೆ ಇತ್ತು. ನಿಜ ಹೇಳಬೇಕು ಅಂದ್ರೆ ನಾನು ಅವರಿಗೆ ಈ ಅಸೈನ್‌ಮೆಂಟ್ ಕೊಟ್ಟ ಕ್ಷಣದಿಂದ ಅವ್ರು ಬರೆಯುವ ಸ್ಥಿತಿಯಲ್ಲೇ ಇರಲಿಲ್ಲ. ನಾನು ಇದ್ನೆಲ್ಲ ಕಣ್ಣಾರೆ ನೋಡ್ತಾ ಇದ್ದಿದ್ರಿಂದ ಅವ್ರಿಗೆ ಕೊಟ್ಟ ಡೆಡ್‌ಲೈನ್‌ನ ಚೂರು, ಚೂರೇ ವಿಸ್ತರಣೆ ಮಾಡ್ತಾ ಹೋದೆ. ಕೊನೆಗ್ಯಾಕೊ ಇದು ಆಗಿಹೋಗುವ ಕೆಲಸ ಅಲ್ಲ ಅನ್ನಿಸ್ತು. ’ಸರ್ ಇಂತಿಷ್ಟು ದಿನದಲ್ಲಿ ಬೇಕೆ ಬೇಕು’ ಅಂದೆ. ೬ ದಿನ ನಿರಂತರವಾಗಿ ಬರೆದಿದಾರೆ. ಅದು ಸಖತ್ ಇಂಟರೆಸ್ಟಿಂಗ್. ಅವರ ಆಫೀಸಿನ ಪಾಳಿ ಮುಗಿಯುವುದು ರಾತ್ರಿ ೧.೩೦. ಅದರ ನಂತರ ಬೆಳಗಿನ ಜಾವ ೪ ಗಂಟೆವರೆಗೆ ಆಫೀಸಿನಲ್ಲಿಯೇ ಕುಳಿತು, ದಿನ ಬರೆದಿದ್ದನ್ನು ನನಗೆ ಮೇಲ್ ಮಾಡಿ ಹೋಗ್ತಿದ್ರು. ಹೀಗೆ ೬ ದಿನ ಮಾಡಿದ್ದಾರೆ. ಜೊತೆಗೆ ಪುಸ್ತಕವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಾಕಷ್ಟು ಸಲಹೆ, ಸೂಚನೆ ಕೊಟ್ಟಿದ್ದಾರೆ. ಇಷ್ಟಲ್ಲದೆ ಪೂರ್ತಿ ಪುಸ್ತಕದ ಕೆಲಸ ಮುಗಿದ ಮೇಲೆ ಎಲ್ಲ ಲೇಖನಗಳನ್ನು ಒಮ್ಮೆ ಕಣ್ಣಾಡಿಸಿ ಸಣ್ಣ, ಪುಟ್ಟ ತಪ್ಪುಗಳನ್ನು ಸರಿಪಡಿಸುವಲ್ಲಿಯೂ ಅವರ ಕೈವಾಡವಿದೆ. ಈ ಪ್ರೀತಿಗೆ ಏನು ಹೇಳೋಣ ಅಥವಾ ಏನು ಕೊಡೋಣ ಅಲ್ವಾ?
ರುದ್ರಣ್ಣ ಹರ್ತಿಕೋಟೆ ಅವರದ್ದು ಆಲ್‌ಮೋಸ್ಟ್ ಇದೇ ರೀತಿ ಕಥೆ. ಮನೆಯಲ್ಲಿ ಯಾರಿಗೋ ಅನಾರೋಗ್ಯ, ಆಸ್ಪತ್ರೆ ಓಡಾಟದ ನಡುವೆ ’ವಿನಾಯಕ ಕ್ಷಮೆ ಇರಲಿ. ತಡವಾಗಿ ಹೋಯ್ತು’ ಎನ್ನುತ್ತಲೇ ಲೇಖನ ಕೊಟ್ಟವರು. ’ಸರ್ ನೀವು ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ನಾನಿನ್ನು ಹುಟ್ಟೇ ಇರಲಿಲ್ಲ. ಅಷ್ಟು ದೊಡ್ಡ ಮಾತು ಯಾಕೆ ಸರ್’ ಅಂದೆ. ಅಷ್ಟಾಗಿಯೂ, ’ಇಲ್ಲ ಸರ್ ಇದಕ್ಕೆ ಇನ್ನೊಂದಷ್ಟು ಸೇರಿಸಿದ್ರೆ ಚೆನ್ನಾಗಿತ್ತು’ ಅಂತ ಮತ್ತೆ ಶಿಕ್ಷೆ ಕೊಟ್ಟೆ! ಅದನ್ನೂ ತೀರ ಖುಷಿಯಿಂದಲೇ ಪೂರೈಸಿಕೊಟ್ಟರು.
ರಶ್ಮಿ ಕೂಡ ಅದೇ ಥರ. ಲೇಖನದ ಬರೆದಿದ್ದರ ಜೊತೆಗೆ ಇಡೀ ಪುಸ್ತಕವನ್ನು ೩ ಸಲ ನೋಡಿ ಒಂದಷ್ಟು ತಪ್ಪು ಹೆಕ್ಕಿ ಕೊಟ್ಟರು. ಬೆಳಗಿನ ಜಾವ ಎದ್ದು ಹೋಗಿ ಮುಖಪುಟ ಚಿತ್ರ ಕ್ಲಿಕ್ಕಿಸಿಕೊಂಡ ಬಂದ ಸೋಮಣ್ಣ, ಸುರೇಶ್ ಸರ್, ಚಂದ್ರ ಗಂಗೊಳ್ಳಿ….ಎಲ್ಲರೂ ಅದೇ ಥರ. ಹಾಗೆ ನೋಡಿದ್ರೆ ಇಡೀ ಈ ಟೀಂನಲ್ಲಿ ನಾನು ಮತ್ತು ರಶ್ಮಿ ಇಬ್ಬರೇ ತುಂಬ ಚಿಕ್ಕವರು. ಅದೇ ಕಾರಣಕ್ಕೆ ನಾವು ಪುಸ್ತಕದಲ್ಲಿ ಮಾರ್ಗದರ್ಶನ, ಉಪದೇಶದ ಸಾಹಸ ಮಾಡ್ಲಿಲ್ಲ! ಜಸ್ಟ್ ವಿಷಯ ಏನಿದೆ ಅಷ್ಟನ್ನು ಹೇಳಿ ಮುಗಿಸಿದ್ದೇವೆ.
ಪುಸ್ತಕದ ಸಾಹಸಕ್ಕೆ ಬಿದ್ದಿದ್ದು, ಮಿಥಿಲಾ ಪ್ರಕಾಶನ ಮಾಡಿದ್ದು ಎರಡೂ ದುಡ್ಡಿಗೋ, ಹೆಸರಿಗೋ ಅಲ್ಲ. ಪುಸ್ತಕವನ್ನು ನಾನೇ ಪ್ರಕಟಿಸ್ತೀನಿ ಅಂತ ಹೊರಟಾಗ್ಲೆ ನಾಗೇಶ್ ಹೆಗಡೆ ಬೇಡ ಎಂದಿದ್ದರು. ಮಣಿಕಾಂತ್, ನವೀನ್ ಇಬ್ಬರೂ ಇದ್ರಲ್ಲಿನ ಕಷ್ಟಗಳನ್ನು ಹೇಳಿದ್ರು. ಮಜ ಅಂದ್ರೆ ಮೊದಲನೆ ಪುಸ್ತಕದಲ್ಲೂ ನಾನು ಬರೆದ ಲೇಖಕರಿಗೆ ೨ ಪುಸ್ತಕದ ಹೊರತಾಗಿ ಏನೂ ನೀಡಿಲ್ಲ. ಏನು ಕೊಡಬಹುದು ಅಂತ ಮೊದಲನೇ ಪುಸ್ತಕದ ಬಿಡುಗಡೆ ಹೊತ್ತಿಗೆ ನಾನು, ಶ್ರೀನಿಧಿ ಟಿ.ಜಿ. ಇಬ್ಬರೂ ಭಯಂಕರ ಚರ್ಚೆ ಮಾಡಿ, ಏನು ಕೊಟ್ಟರೂ ಚಿಕ್ಕದಾಗುತ್ತೆ, ಏನೂ ಕೊಡೋದೇ ಬೇಡ ಅಂತ ಡಿಸೈಡ್ ಮಾಡಿದ್ವಿ! ಕನಿಷ್ಠ ಒಂದು ಹತ್ತು ಪುಸ್ತಕವನ್ನಾದ್ರು ಉಡುಗೊರೆಯಾಗಿ ಕೊಡಬಹುದಿತ್ತೇನೋ, ಅದನ್ನು ತಲುಪಿಸೋಕೂ ಸೋಮಾರಿತನ ಮಾಡಿದೆ. ಬಟ್ ಈ ಸಲ ಖಂಡಿತ ಆ ಕೆಲಸ ಮಾಡುವೆ.
ಪುಸ್ತಕ ಮಾಡುವುದರ ಜೊತೆಗೆ ಅದನ್ನು ತಲುಪಿಸುವುದು ಮಹತ್ವದ್ದು. ಆಗ ಮಾತ್ರ ಅದಕ್ಕೆ ಹಾಕಿದ ಶ್ರಮ ಸಾರ್ಥಕ. ಸಾವಿರ ಕಾಪಿ ಪ್ರಿಂಟ್ ಹಾಕಿ ಅದ್ರಲ್ಲಿ ೩೦೦ ಲೈಬ್ರರಿಗೆ ಹಾಕಿ, ಮತ್ತೆ ೨೦೦ ಪರಿಚಯಸ್ಥರಿಗೆಲ್ಲ ಕೊಟ್ಟು ಉಳಿದ ೫೦೦ ಪುಸ್ತಕವನ್ನು ಪಂಚವಾರ್ಷಿಕ ಯೋಜನೆಯಲ್ಲಿ ಖಾಲಿ ಮಾಡಿದ್ರೆ, ನಮ್ಮ ಶ್ರಮಕ್ಕೆ ಅರ್ಥವಿರಲ್ಲ. ಹಾಗಾಗಿಯೇ ನಾನು ಬೇರೆ ಪ್ರಕಾಶನಕ್ಕೆ ಪುಸ್ತಕ ಕೊಡುವ ಸಾಹಸ ಮಾಡಲಿಲ್ಲ. ’ನೀವೂ ಪತ್ರಕರ್ತರಾಗಬೇಕೆ?’ ಪುಸ್ತಕಕ್ಕೆ ಆಲ್‌ಮೋಸ್ಟ್ ೩ ತಿಂಗಳು ಶ್ರಮ ಹಾಕಿದೀನಿ. ಪ್ಲಸ್ ಉಳಿದ ಲೇಖಕರ ಶ್ರಮವಿದೆ. ನಾನು ಮೊದಲನೆ ಪುಸ್ತಕದಲ್ಲಿ ಹೇಳಿದಂತೆ ಕನಿಷ್ಠ ೫೦೦೦ ಜನರನ್ನು ಈ ಪುಸ್ತಕ ತಲುಪಿದ್ರೆ ನಮ್ಮ ಶ್ರಮ ಸಾರ್ಥಕ. ಮಾರ್ಕೆಟಿಂಗ್‌ಗೆ ಇನ್ನೊಂಚೂರು ಎಫರ್ಟ್ ಹಾಕಿದ್ರೆ ’ಪತ್ರಿಕೆಗೆ ಬರೆಯೋದು ಹೇಗೆ?’ ಇಷ್ಟೊತ್ತಿಗೆ ಎರಡನೇ ಮುದ್ರಣವನ್ನು ಖಾಲಿ ಮಾಡಬಹುದಿತ್ತು. ಆದ್ರೆ ನಾನೇ ಸೀರಿಯಲ್, ಶಾರ್ಟ್ ಮೂವಿ ಮತ್ತೊಂದು ಹೊಸ ಪುಸ್ತಕ ಅಂತ ಒಂದಷ್ಟು ತಲೆ ಮೇಲೆ ಹಾಕಿಕೊಂಡು ಆ ಪುಸ್ತಕದ ಮಾರ್ಕೆಟಿಂಗ್‌ನಲ್ಲಿ ಸೋಮಾರಿಯಾದೆ. ನವಕರ್ನಾಟಕ, ಸಪ್ನ, ಬಿಬಿಸಿಯಲ್ಲಿ ಪುಸ್ತಕ ಇವತ್ತಿಗೂ ಚೆನ್ನಾಗಿ ಮಾರಾಟವಾಗ್ತಿದೆ. ಅದಕ್ಕೆ ಸ್ಟಿಕ್‌ಆನ್ ಆಗಿರುವೆ!
ಪುಸ್ತಕ ಉದ್ಯಮ ಖಂಡಿತ ನಷ್ಟದ್ದಲ್ಲ. ಮೊದಲನೆ ಆವೃತ್ತಿ ಸ್ವಲ್ಪ ಕಷ್ಟ. ಖರ್ಚು ಜಾಸ್ತಿ. ಒಂದಷ್ಟು ಉಚಿತವಾಗಿ ಕೊಡಲೇ ಬೇಕಾಗುತ್ತೆ. ಜೊತೆಗೆ ಪುಸ್ತಕದಂಗಡಿಗಳು ದುಡ್ಡು ಕೊಡುವುದು ಸಖತ್ ಲೇಟ್ ಆಗುತ್ತೆ. ಬಟ್ ದ್ವೀತಿಯ ಆವೃತ್ತಿಯಿಂದ ತಕ್ಕಮಟ್ಟಿನ ಲಾಭ ಸಿಗುತ್ತೆ. ಹೀಗಾಗಿ ಮೊಸಳೆ ಕಣ್ಣೀರಿನ ಸೀನ್‌ಗಳು, ಯಾವುದೋ ಗ್ರ್ಯಾಂಟ್‌ಗಳಿಗೆ ಲಾಭಿಗಳೆಲ್ಲ ಖಂಡಿತ ಇಲ್ಲ!
ಒನ್ಸ್ ಅಗೈನ್ ಮತ್ತೆ ಹೇಳಲಿಕ್ಕೆ ಹೊರಟ್ಟಿದ್ದು ಅದನ್ನೇ. ಒಬ್ಬ ಶ್ರೀವತ್ಸ ಜೋಶಿಗೆ, ರೋಹಿತ್‌ಗೆ, ಟಿ.ಜಿ, ಡಿ.ಎಸ್.ಗೆ, ಭಟ್ಟರಿಗೆ…ಹಾಗೂ ಬರೆದ ಎಲ್ಲ ಲೇಖಕರಿಗೂ ’೫೦೦೦ ರೂ. ಗೌರವ ಧನ ಕೊಡ್ತೀನಿ, ಒಂದಿಪ್ಪತ್ತು ಪುಸ್ತಕ ಕೊಡ್ತೀನಿ’ ಅಂದ್ರು, ಅವರಿಗದು ದೊಡ್ಡ ಮೊತ್ತವಲ್ಲ ಹಾಗೂ ವಿಷಯವೂ ಅಲ್ಲ. ನಂಗೆ ಏನೋ ಒಂದು ಕೊಟ್ಟಿದ್ದೀನಿ ಎಂಬ ಸಮಾಧಾನ ಆಗಬಹುದು ಅಷ್ಟೆ. ಹೀಗಾಗಿ ಖಂಡಿತ ಅವರ ಪ್ರೀತಿಗೆ ಧನ್ಯವಾದಕ್ಕಿಂತ ದೊಡ್ಡ ಪದ ನನ್ನ ಬಳಿಯಿಲ್ಲ. ಕೊನೆಯದಾಗಿ ನನಗನ್ನಿಸಿದ್ದು ’ನಾವು ಒಳ್ಳೆಯವರಾಗಿದ್ರೆ, ನಮಗೂ ಒಳ್ಳೆಯವರೇ ಸಿಗ್ತಾರೆ…’
’ನೀವೂ ಪತ್ರಕರ್ತರಾಗಬೇಕೆ?’ ಖಂಡಿತ ತುಂಬಾ ಸುಂದರವಾಗಿ ಮೂಡಿಬಂದಿದೆ. ಅವರ ಬರಹಕ್ಕೆ ನ್ಯಾಯ ಒದಗಿಸುವಂತೆ ಚೆಂದವಾದ ವಿನ್ಯಾಸ, ಮುದ್ರಣದ ಪ್ರಯತ್ನವನ್ನೂ ಮಾಡಿದ್ದೇನೆ ಎಂಬ ನಂಬಿಕೆ ನನ್ನದು. ೨೧ ಶನಿವಾರ ಸಿಗೋಣ. ಪುಸ್ತಕದ ಜೊತೆ ಇನ್ನೊಂದಷ್ಟು ಮಾತಾಡೋಣ ಅಲ್ವಾ?

1

ಇಂಗ್ಲಿಷ್ ಸುದ್ದಿವಾಹಿನಿ ಜಗತ್ತಿನ ಅನಭಿಷಕ್ತ ದೊರೆ ಟೈಮ್ಸ್ ನೌ ವಾಹಿನಿ ಅಂದಾಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಅರ್ನಾಬ್ ಗೋಸ್ವಾಮಿ ನಡೆಸಿಕೊಡುವ ನ್ಯೂಸ್ ಅವರ್ ಕಾರ್ಯಕ್ರಮ. ತೀರ ಆವೇಷ ಬಂದಂತೆ ಆಡುವ ಅರ್ನಾಬ್ ವರ್ತನೆ ಕುರಿತು ಸಾಕಷ್ಟು ಜನ ಟೀಕೆ ಮಾಡುವುದು ಸುಳ್ಳಲ್ಲ. ಆದಾಗ್ಯೂ ಅದು ದೇಶದಲ್ಲಿ ಅತಿ ಹೆಚ್ಚು ವೀಕ್ಷಕರನ್ನು, ಅತಿ ಹೆಚ್ಚು ಟಿಆರ್‌ಪಿ ಹೊಂದಿರುವ ಶೋ ಎಂಬುದು ಸುಳ್ಳಲ್ಲ. ಇದೀಗ ಅಂಥ ಅನಾರ್ಬ್ ಟೈಮ್ಸ್‌ನ ಹೊಸ್ತಿಲು ದಾಟಿ ನಿಂತಿದ್ದಾರೆ ಎಂಬಂಥ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಖಂಡಿತ ಟೈಮ್ಸ್ ನೌ ಎಂಬ ವಾಹಿನಿಯ ಎತ್ತರದ ಹಿಂದೆ ಅರ್ನಾಬ್ ನೆರಳು ದೊಡ್ಡಾಗಿದೆ. ಕೇವಲ ನಿರೂಪಕ ಮಾತ್ರವಲ್ಲ, ಇಡೀ ವಾಹಿನಿಯ ಸೂತ್ರಧಾರನಾಗಿ ಅರ್ನಾಬ್ ೧೦ ವರ್ಷಗಳ ಕಾಲ ಈ ವಾಹಿನಿಯಲ್ಲಿ ನಿಂತಿದ್ದರು. ಆದಾಗ್ಯೂ…
ಬಹುಶಃ ನಾನು ಕೆಲ ವರ್ಷಗಳ ಹಿಂದೆ ಇದೇ ಬ್ಲಾಗ್‌ನಲ್ಲಿ ಈ ಪುಸ್ತಕದ ಕುರಿತು ಬರೆದಿದ್ದೆ. “ದಿ ಟಿಒಐ ಸ್ಟೋರಿ”. ಸಮೀರ್ ಜೈನ್ ಹಾಗೂ ಅವರ ಟೈಮ್ಸ್ ಆಫ್ ಇಂಡಿಯಾದ ಜರ್ನಿ ಕುರಿತ ಪುಸ್ತಕವಿದು. ಅಲ್ಲಿಂದಲೇ ಮಾಧ್ಯಮ ಜಗತ್ತಿನ ಮಾರಾಟ ಶಕೆ ಆರಂಭಗೊಂಡಿದ್ದು ಎಂದರೂ ತಪ್ಪಲ್ಲ. ಅಂದಹಾಗೆ ಸಮೀರ್ ಜೈನ್ ಟೈಮ್ಸ್ ಇಂಡಿಯಾದ ಮಾತೃಸಂಸ್ಥೆಯಾದ ಬೆನೆಟ್ ಆಂಡ್ ಕೊಲ್‌ಮನ್‌ನ ಭಾರತೀಯ ಉಪಾಧ್ಯಕ್ಷರು. ತಾವು ಮುನ್ನಡೆಸುವ ಸಂಸ್ಥೆಯನ್ನು ನಂಬರ್ ಒನ್ ಮಾಡಲಿಕ್ಕೆ ಹುಟ್ಟಿದವರು ಅಂತಾರಲ್ಲ, ಒಂಥರ ಅದೇ ಜಾತಿಗೆ ಸೇರಿದ ವ್ಯಕ್ತಿ ಇವರು!
ಟೈಮ್ಸ್ ಆಫ್ ಇಂಡಿಯಾ ಎಂಬೊಂದು ಪತ್ರಿಕೆ ಹೇಗೆ ಸುದ್ದಿ ಪತ್ರಿಕೆಗಳ ಆಟದ ನಿಯಮವನ್ನು ಬದಲಿಸಿತು ಎಂಬ ವಿಚಾರವನ್ನು ಸಮೀರ್ ಈ ಪುಸ್ತಕದಲ್ಲಿ, ಹಲವು ಅನುಭವಗಳೊಂದಿಗೆ ಬಿಚ್ಚಿಡುತ್ತ ಹೋಗುತ್ತಾರೆ. ತಾವು ಉದ್ಯೋಗಕ್ಕೆ ಸೇರಿದ ೭-೮ ವರ್ಷದಲ್ಲಿ ಉನ್ನತ ಹುದ್ದೆ ಏರಿ, ತಮ್ಮ ಕಪಿಮುಷ್ಠಿಯಲ್ಲಿದ್ದ ಟೈಮ್ಸ್ ಇಂಡಿಯಾ ಎಂಬ ಪತ್ರಿಕೆಯನ್ನು ದೇಶದಲ್ಲಷ್ಟೇ ಅಲ್ಲ, ಪ್ರಪಂಚದಲ್ಲೂ ನಂಬರ್ ಒನ್ ಇಂಗ್ಲಿಷ್ ಪತ್ರಿಕೆಯನ್ನಾಗಿಸುತ್ತಾರೆ. ಇವರ ಬೆನೆಟ್ ಸಂಸ್ಥೆಯಿಂದ ೨೦೦೬ರಲ್ಲಿ ಆರಂಭಗೊಂಡ ವಾಹಿನಿ ಟೈಮ್ಸ್ ನೌ.
ಕಾರ್ಪೊರೇಟ್ ಸಂಸ್ಕೃತಿ ಎಂಬುದು ಕನ್ನಡ ಪತ್ರಿಕೋದ್ಯಮಕ್ಕೆ ಇತ್ತೀಚಿನ ವರ್ಷಗಳಲ್ಲಿ ಪರಿಚಿತವಾಗಿದ್ದು. ಕನ್ನಡದ ಸಮೀರ್ ಜೈನ್ ಎನ್ನಬಹುದಾದ ವಿಜಯ ಸಂಕೇಶ್ವರ್ ವಿಜಯ ಕರ್ನಾಟಕ ಹುಟ್ಟಿ ಹಾಕಿದ ನಂತರ ಕನ್ನಡ ಪತ್ರಿಕೋದ್ಯಮದಲ್ಲೂ ಒಂದು ತಲ್ಲಣ ಶುರುವಾಗಿದ್ದು ಸುಳ್ಳಲ್ಲ. ಅದನ್ನು ಟೈಮ್ಸ್ ಆಫ್ ಇಂಡಿಯಾ ಸಮೂಹವೇ ಖರೀದಿಸಿದ ಮೇಲಂತೂ ಕನ್ನಡದಲ್ಲಿ ಸುದ್ದಿ ವ್ಯಾಪಾರದ ಯುಗ ಜೋರಾಯ್ತು. ಅದಕ್ಕೂ ಮೊದಲೇ ಮನರಂಜನೆ ವಾಹಿನಿಗಳು ಕನ್ನಡದಲ್ಲಿ ವ್ಯಾಪಾರ ಶುರುವಿಟ್ಟರು, ಅವುಗಳನ್ನು ಸುದ್ದಿಯ ಆಯಾಮದಿಂದ ನೋಡುವ ಪ್ರಮೇಯ ಬರಲಿಲ್ಲ. ಹೀಗಾಗಿ ಅಲ್ಲಿನ ವ್ಯಾಪಾರಿ ಮಾರುಕಟ್ಟೆ ನಮಗಷ್ಟು ಅರ್ಥವಾಗಲಿಲ್ಲ.
ಒಂದು ಸಂಸ್ಥೆ ವ್ಯಾಪಾರಕ್ಕೆ ಇಳಿದಾಗ, ಲಾಭ-ನಷ್ಟವೇ ಮುಖ್ಯವಾದಾಗ ಅದನ್ನು ಮುನ್ನಡೆಸುವ ಸೂತ್ರಧಾರ ಕೂಡ ಬಹಳ ಮುಖ್ಯ. ಬಹಳಷ್ಟು ಸಂಸ್ಥೆಗಳು ಈ ಮುಖ್ಯಸ್ಥರ ಆಯ್ಕೆಯಲ್ಲಿಯೇ ಎಡವಿ, ಆರಾರು ತಿಂಗಳಿಗೊಮ್ಮೆ ಮುಖ್ಯಸ್ಥರನ್ನು ಬದಲಿಸುತ್ತಿರುತ್ತವೆ. ಆದರೆ ಸಮೀರ್ ಜೈನ್ ಯಾವತ್ತೂ ಆ ವಿಷಯದಲ್ಲಿ ಲೆಕ್ಕಾಚಾರ ತಪ್ಪಲಿಲ್ಲ. ೨೦೦೬ರಲ್ಲೇ ಅರ್ನಾಬ್ ಟೈಮ್ಸ್ ನೌಗೆ ಮುಖ್ಯಸ್ಥರಾಗಿ ಬಂದು ಕೂರುತ್ತಾರೆ. ಈಗ ೨೦೧೬. ಅಂದರೆ ೧೦ ವರ್ಷಗಳ ಕಾಲ ಪ್ರತಿ ಗುರುವಾರವೂ ಟಿಆರ್‌ಪಿ ಲೆಕ್ಕ ಹಾಕುವ ವಾಹಿನಿಯೊಂದರಲ್ಲಿ ಮುಖ್ಯಸ್ಥರಾಗಿ ಉಳಿಯುತ್ತಾರೆ ಎಂಬುದೇ ದೊಡ್ಡ ಆಘಾತಕಾರಿ ಸುದ್ದಿ! ಅದರಲ್ಲೂ ವಾಹಿನಿಯೊಂದು ನಂಬರ್ ಒನ್ ಸ್ಥಾನದಲ್ಲಿ ಇರುವಾಗಲೇ ವಾಹಿನಿ ಬಿಡುವ ನಿರ್ಧಾರ ಮತ್ತೊಂದು ವಾವ್ ಎಂಬ ಸಂಗತಿ.
ಸಮೀಕ್ಷೆಗಳ ಪ್ರಕಾರ ಪ್ರತಿ ೩-೪ ವರ್ಷಕ್ಕೊಮ್ಮೆ ನೋಡುಗನ ಅಭಿರುಚಿ ಬದಲಾಗುತ್ತದೆ. ನೆಚ್ಚಿನ ವಾಹಿನಿಯೂ ಬದಲಾಗುತ್ತದೆ. ಹೀಗಾಗಿ ಸುದೀರ್ಘವಾಗಿ ಒಂದು ವಾಹಿನಿ ಜನಪ್ರಿಯತೆ ಉಳಿಸಿಕೊಳ್ಳುವುದು, ನಂಬರ್ ಒನ್ ಆಗಿರುವುದು ಬಹಳ ಕಷ್ಟದ ಸಂಗತಿ. ಇದರಾಚೆಗೆ ನೋಡಿದರೆ ೬-೮ ವರ್ಷ ಒಂದೇ ವಾಹಿನಿ ಒಂದು ಭಾಷೆಯ ಉದ್ಯಮವನ್ನು ಆಳುವುದು ಇದೆ. ಆದಾಗ್ಯೂ ಒಬ್ಬ ಮುಖ್ಯಸ್ಥ ಒಂದೇ ವಾಹಿನಿಯಲ್ಲಿ ಸುದೀರ್ಘವಾಗಿ ಉಳಿದುಕೊಳ್ಳುವುದು ಬಲು ಕಷ್ಟ. ಅಲ್ಲಿನ ಒತ್ತಡ, ಲಾಭ-ನಷ್ಟದ ಲೆಕ್ಕ ಬರೆಯುವ ಕೆಲಸದಲ್ಲಿ ಕ್ರಿಯಾಶೀಲ ಮುಖ್ಯಸ್ಥನಿಗೆ ಜಿಗುಪ್ಸೆ ಹುಟ್ಟಿ, ಒಳಗಿರುವ ಕಟೆಂಟ್ ಎಲ್ಲ ಕಳೆದು ಹೋಗಿ ಅವನಾಗಿಯೇ ಆಚೆ ಬರುವ ಪ್ರಸಂಗ ಬರುತ್ತದೆ.
ಅಮೆರಿಕದಲ್ಲಿ ಕುಳಿತು ಕರ್ನಾಟಕದ ಮಾರುಕಟ್ಟೆಗೆ ಜಾಹೀರಾತು ನೀಡುವವನಿಗೆ ಇಲ್ಲಿನ ಪೇಪರ್ ಯಾವುದು? ಅದ್ರಲ್ಲಿ ಕಟೆಂಟ್ ಏನು ಬರುತ್ತೆ? ಅದರ ಬಗ್ಗೆ ಎಷ್ಟು ಚರ್ಚೆಯಾಗುತ್ತೆ? ವಿಶ್ವಾಸಾರ್ಹತೆ ಏನು ಎಂಬುದು ಮುಖ್ಯವಲ್ಲ. ಎಷ್ಟು ಸರ್ಕ್ಯುಲೇಷನ್ ಹೊಂದಿದೆ? ವಾಹಿನಿ ಎಷ್ಟು ಜನರನ್ನು ತಲುಪಿ ಎಷ್ಟು ಟಿಆರ್‌ಪಿ ಗಳಿಸುತ್ತದೆ ಎಂಬುದಷ್ಟೇ ಬೇಕು. ಇದರ ಆಧಾರದ ಮೇಲೆ ಆತ ಜಾಹೀರಾತಿನ ಪ್ರಮಾಣವನ್ನು, ದರವನ್ನು ನಿರ್ಧರಿಸುತ್ತಾನೆ. ಮಾರುಕಟ್ಟೆಯಲ್ಲಿ ತನ್ನ ಪತ್ರಿಕೆ ಜಾಹೀರಾತಿನ ದರವೆಷ್ಟಕ್ಕೆ ನಿಲ್ಲುತ್ತದೆ, ವರ್ಷದ ಅಂತ್ಯಕ್ಕೆ ಹೂಡಿದ ಹಣದ ಮೇಲೆ ಎಷ್ಟು ಲಾಭ ಬರುತ್ತದೆ ಎಂಬುದು ಮಾಲೀಕನ ಲೆಕ್ಕ. ಹೀಗಾಗಿ ವಾಹಿನಿ, ಪತ್ರಿಕೆ ಎರಡೂ ನಂಬರ್ ಗೇಮ್. ಡಂಪ್ ಮಾಡಿ ಬಂತಾ, ಫೇಕ್ ನಂಬರ್ ಬಂತಾ ಅನ್ನೋದು ಮುಖ್ಯವಲ್ಲ. ಮಾರುಕಟ್ಟೆಯಲ್ಲಿ ನಂಬರ್ ಒನ್. ಟು ಆಗಿದ್ದು ಜಾಹೀರಾತು ತೂಗಬೇಕಷ್ಟೆ.
ಟ್ಯಾಲೆಂಟ್ ವಸರ್ಸ್ ವ್ಯಾಪಾರ ಅಂತ ಬಂದಾಗ ಗೆಲ್ಲೋದು ವ್ಯಾಪಾರವೇ. ಟೈಮ್ಸ್‌ನಂಥ ದೊಡ್ಡ ಸಂಸ್ಥೆಗೆ ಯಾರಿಲ್ಲದಿದ್ದರೂ ದೊಡ್ಡ ಸಂಗತಿಯಲ್ಲ. ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಿಂದ ಹೊರಬಿದ್ದಾಗ ಕನ್ನಡ ಪತ್ರಿಕೋದ್ಯಮದಲ್ಲಿ ದೊಡ್ಡ ತಲ್ಲಣವೇ ಸೃಷ್ಟಿಯಾಯ್ತು. ಪತ್ರಿಕೆ ಕಥೆ ಮುಗಿದೇ ಹೋಯ್ತು ಎಂಬಂಥ ಮಾತುಗಳು ಕೇಳಿಬಂದವು. ಅವೆಲ್ಲವೂ ಹೊರ ಜಗತ್ತಿಗಷ್ಟೆ ಸುದ್ದಿ. ಭಟ್ಟರು ಬಿಟ್ಟು ೩-೪ ತಾಸಿನೊಳಗೆ ಎಕನಾಮಿಕ್ ಟೈಮ್ಸ್‌ನಲ್ಲಿದ್ದ ಈ.ರಾಘವನ್ ಅವರನ್ನು ಕರೆತಂದು ಆವತ್ತಿನ ಪತ್ರಿಕೆಯನ್ನು ಆರಾಮವಾಗಿಯೇ ಹೊರತಂದಿತ್ತು ಸಮೂಹ. ಅದಾಗಿ ೨-೩ ವರ್ಷ ಕಳೆದರೂ ವಿಜಯ ಕರ್ನಾಟಕದ ನಂಬರ್ ಒನ್ ಪಟ್ಟಕ್ಕೇನೂ ಕುತ್ತು ಬರಲಿಲ್ಲ. ಕೊನೆಗೂ ಸರ್ಕ್ಯುಲೇಷನ್‌ನಲ್ಲಿ ವಿಜಯ ಕರ್ನಾಟಕವನ್ನು ಕೆಳಗಿಳಿಸಲು ಅದೇ ಪತ್ರಿಕೆ ಮೊದಲು ಆರಂಭಿಸಿದ ಸಂಕೇಶ್ವರ್ ಅವರೇ ಬರಬೇಕಾಯ್ತು.
ಇದೇ ಕಥೆಯನ್ನು, ಇಂಥದ್ದೇ ಲೆಕ್ಕಾಚಾರಗಳನ್ನು “ದಿ ಟಿಒಐ ಸ್ಟೋರಿ” ಹೇಳುತ್ತೆ. ಒಂದು ಕಾರ್ಪೊರೇಟ್ ಸಂಸ್ಥೆ ಹೇಗೆ ರೂಪುಗೊಂಡು, ಹೇಗೆಲ್ಲ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ ಎಂಬುದಕ್ಕೊಂದು ಉತ್ತಮ ಪುಸ್ತಕ. ಹಾಗೆಯೇ ಕನ್ನಡ ಪತ್ರಿಕೋದ್ಯಮ ಜಗತ್ತಿನ ವ್ಯಾಪಾರಿ ಮನೋಭಾವವನ್ನು, ಕಾರ್ಪೊರೇಟ್ ಮನಸ್ಥಿತಿಯನ್ನು ಜೀರ್ಣಿಸಿಕೊಳ್ಳಲಾಗದೆ ಸುದ್ದಿ, ಬದ್ಧತೆ, ಘನತೆ ಅಂತೆಲ್ಲ ೧೯೬೦ರ ದಶಕದ ಪತ್ರಿಕೋದ್ಯಮ ಕಾಲದಂತೆ ಯೋಚಿಸುವ ನಮಗೂ ದುಡ್ಡು ಹಾಕಿದವನ ಆಲೋಚನೆ, ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಮೀರ್ ಜೈನ್ ಅವರ ಪುಸ್ತಕವನ್ನು ಓದಬೇಕು.
ಮುಳ್ಳುತಂತಿಯ ಮೇಲಿನ ನಡುಗೆಯಿದು. ಅದರಲ್ಲೂ ಕಾರ್ಪೊರೇಟ್ ವಾಹಿನಿಯ ಮುಖ್ಯಸ್ಥರಾಗುವುದು ಅಂದರೆ…ಸಾಮಾನ್ಯ ನಿರೂಪಕರಾಗಿದ್ದ ಅರ್ನಾಬ್ ಟೈಮ್ಸ್ ನೌನಲ್ಲಿ ಕಟೆಂಟ್ ಎಂಬ ವಿಷಯದಲ್ಲಿ ಅವರ ಪ್ರತಿಭೆಯನ್ನು ಸಾಬೀತುಪಡಿಸಿಕೊಂಡರು. ಆದರೆ, ಅದರಿಂದ ಆಚೆ ಬಂದು ಟೈಮ್ಸ್ ನೌನಂಥ ಬೆಳೆದ ಸಂಸ್ಥೆಗೆ ಸಡ್ಡು ಹೊಡೆದು ನಿಲ್ಲಬಲ್ಲರೇ ಎಂಬುದು ದೊಡ್ಡ ಪ್ರಶ್ನೆ. ಇವತ್ತಿನ ಕಾರ್ಪೊರೆಟ್ ಮಾಧ್ಯಮದ ದುರಂತವೇ ಇದು. ಬಹುಬೇಗ ದೊಡ್ಡ ಅವಕಾಶ ಸಿಗುತ್ತದೆ. ಆದರೆ ಅಷ್ಟೇ ಬೇಗ ನಿವೃತ್ತಿಯೂ ಹತ್ತಿರವಾಗುತ್ತದೆ. ಒಂದು ವಾಹಿನಿಯಲ್ಲಿ ಆತ ದೊಡ್ಡ ಹುದ್ದೆ ಏರಿ ನಂಬರ್ ತರಲು ಅಸಮರ್ಥನಾದರೆ, ನಂಬರ್ ಗೇಮ್‌ನಲ್ಲಿ ಸೋತರೆ ವೃತ್ತಿ ಜೀವನ ಬಹುತೇಕ ಮುಗಿದಂತೆ.
ಒಬ್ಬ ಪತ್ರಕರ್ತನಿಗೆ ಸುದ್ದಿಯ ವಿಷಯದಲ್ಲಿ ಅಂಥದ್ದೊಂದು ಆಟಿಟ್ಯೂಡ್, ಜೋಶ್ ಇರಬೇಕು. ಅರ್ನಾಬ್ ನಂಗಂತೂ ಇಷ್ಟವಾಗಿದ್ದು ಅದಕ್ಕೆ. ಸುದ್ದಿ ಎಂಬ ವಿಚಾರದಲ್ಲಿ ಮುನ್ನುಗ್ಗುತ್ತಿದ್ದರು. ಮಿಕ್ಕಿದ್ದೆಲ್ಲವೂ ನಂತರದ್ದು ಎಂಬಂತೆ. ಅಂಥ ಅರ್ನಾಬ್ ಮುಂದಿನ ಪಯಣಕ್ಕೆ ಶುಭವಾಗಲಿ…

(ಸಂಗೀತ ಪಿ ಮೆನನ್ ಬರೆದ ಈ ಪುಸ್ತಕ ಈಗಲೂ ಲಭ್ಯವಿದೆ)

india-politics-water_7427e596-78f5-11e6-85ec-37294133f8ac

ನಮ್ಮ ಮನೆಲಿ ಟೀವಿ ಇದ್ರು ಆನ್ ಆಗೋದು ಅಷ್ಟಕಷ್ಟೆ. ಅದ್ರಲ್ಲೂ ನಾನೊಬ್ಬನೆ ಇದ್ರೆ ಟೀವಿ ಹಾಕೋದು ತುಂಬಾ ಕಡಿಮೆ. ನ್ಯೂಸ್ ಚಾನೆಲ್‌ನವ್ರು ಬೆಂಕಿ ಹೊತ್ತಿಸ್ತಾರೆ. ಧಾರವಾಹಿಗಳಲ್ಲಿ ಮನೆ ಹಾಳು ವಿಚಾರಗಳನ್ನು ಬಿಟ್ಟು ಹೊಸದೇನು ಕಾಣಿಸ್ತಿಲ್ಲ. ಹಾಗಂತ ಅದರ ಹೊರತಾಗಿ ನೋಡ್ಲಿಕ್ಕೆ ಚಾನೆಲ್‌ಗಳಿಲ್ಲ ಅಂತಲ್ಲ. ಟಾಟಾ ಸ್ಕೈನಲ್ಲಿ ೪೭೫ಕ್ಕೂ ಪ್ಲಸ್ ಚಾನೆಲ್‌ಗಳು ಬರುತ್ತವೆ. ಬೇಸರವಾದ್ರೆ ಕೇಳೋಕೆ ಒಂದಷ್ಟು ಮ್ಯೂಸಿಕ್ ಚಾನೆಲ್‌ಗಳಿವೆ. ಭಕ್ತಿ ಬೇಕು ಅಂದ್ರೆ ಧಾರ್ಮಿಕ ವಾಹಿನಿಗಳಿವೆ. ಆಟದಲ್ಲಿ ಆಸಕ್ತಿಯಿದ್ರೆ ಅದಕ್ಕೂ ಆಪ್ಷನ್ ಇದೆ. ಮಾಹಿತಿಗೆ ಅಂತ ಡಿಸ್ಕವರಿ, ಬಿಬಿಸಿಯಂಥ ವಾಹಿನಿಗಳಿವೆ. ಸಿನಿಮಾಕ್ಕೊಂದು ಪ್ರತ್ಯೇಕ, ಕಾರ್ಟೂನ್‌ಗೆ ಮತ್ತೊಂದು, ಫ್ಯಾಷನ್‌ಗೆ ಮಗದೊಂದು…ಹೀಗೆ ಒಂದು ಹೊಟೆಲ್‌ನಲ್ಲಿ ಮೆನುವಿನಲ್ಲಿ ಸಿಗುವಷ್ಟು ಆಯ್ಕೆಗಳು ನಮ್ಮೆದುರಿಗಿವೆ.
ನ್ಯೂಸ್ ಚಾನೆಲ್‌ಗಳು ಬೆಂಕಿ ಹೊತ್ತಿಸುತ್ತಿವೆ. ವೆಲ್, ನೋಡಬೇಡಿ ಬಿಡಿ. ಹಾಗಂತ ಉಚಿತವಾಗಿ ಫೇಸ್‌ಬುಕ್‌ನಲ್ಲಿ, ವಾಟ್ಸಪ್‌ನಲ್ಲಿ ಕುಟ್ಟೋರು ನೋಡದೆ ಉಳಿದ್ರಾ? ರಾಜ್ಯದ ೮-೧೦ ಚಾನೆಲ್‌ಗಳನ್ನು ಬಿಟ್ಟು ನಿಮ್ಮ ಮನೆ ಟೀವಿಯಲ್ಲಿ ಮಿಕ್ಕ ೪೬೨ ಚಾನೆಲ್‌ಗಳು ಇದ್ದವಲ್ಲ?! ಹೇಳೋದು ಸುಲಭ. ಬಿಡೋದು ಕಷ್ಟ. ಮೊನ್ನೆ ನಾನು ಕೂಡ ಟೀವಿ ಆನ್ ಮಾಡಿಕೊಂಡೆ ಇದ್ದೆ. ಕಾರಣವಿಷ್ಟೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬೆಂಕಿ ಬೀಳ್ತಾ ಇದೆಯೋ, ನಾನು ಯಾವ ರೂಟ್‌ನಲ್ಲಿ ಆಫೀಸ್‌ಗೆ ಹೋಗ್ಲಿ, ಪೋಲಿಸರು ಎಲ್ಲಿ ಕಿರಿಕ್ ಮಾಡ್ತಾ ಇದಾರೆ ಅನ್ನೋ ಭಯ, ತಳಮಳ, ಕುತುಹಲ ಎಲ್ಲವೂ ಸೇರಿ ನನಗೆ ಸುದ್ದಿವಾಹಿನಿಗಳನ್ನು ನೋಡಲೇಬೇಕಿತ್ತು.
ನೀವು ಒಳಹೊಕ್ಕ ಹೊಟೆಲ್‌ನಲ್ಲಿ ವೆಜ್ಜು, ನಾನ್‌ವೆಜ್ ಎರಡೂ ಇದೆ. ಅವ ಅದನ್ನು ಬೋರ್ಡ್‌ನಲ್ಲೇ ಹಾಕಿದಾನೆ ಕೂಡ. ಹಾಗಂತ ನಿಮಗೇನು ನಮ್ಮ ಹೊಟೆಲ್‌ಗೆ ಬನ್ನಿ ಅಂತ ಒತ್ತಾಯ ಮಾಡ್ತಿಲ್ಲ. ಫೈನ್, ನೀವು ಒಂದ್ಸಲ ಹೊಟೆಲ್ ಒಳಗೆ ಹೊಕ್ಕಿದ್ರಿ. ಗೊತ್ತಾಯ್ತು. ಮತ್ತೆ ಮತ್ತೆ ಅದೇ ಹೊಟೆಲ್ ಒಳಗೆ ಹೊಕ್ಕಿ, ಹೊರಗೆ ಬಂದು ಆ ಹೊಟೆಲ್‌ಗೆ ಬೈದರೆ? ನೋಡುವವರಿಗೆ ನಿಮ್ಮ ಬುದ್ಧಿಯ ಕುರಿತೇ ಅನುಮಾನ ಶುರುವಾಗುತ್ತೆ!
ಈ ಹಿಂದೆ ಸಾಕಷ್ಟು ಸಲ ಬರೆದುಬಿಟ್ಟಿದೀನಿ. ಮತ್ತೆ ಅದೇ ತಂಗಳು ಬಗ್ಗೆ ಮಾತಾಡಲ್ಲ. ಇವತ್ತು ಸುದ್ದಿ ಎಂಬುದು ವ್ಯಾಪಾರದ ಸರಕು. ಸುದ್ದಿಸಂಸ್ಥೆಗಳು ವ್ಯವಸ್ಥಿತ ಉದ್ಯಮ. ಅತ್ಯಾಚಾರ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿ, ಈಗಷ್ಟೆ ಜೈಲಿನಿಂದ ಬಿಡುಗಡೆಯಾದ ಅಣ್ಣನಿಗೆ ಶುಭಕೋರಿ ಮುಖಪುಟದಲ್ಲೊಂದು ಜಾಹೀರಾತಿನ ಕಟೌಟ್ ಬಿತ್ತು ಅಂದ್ರೆ ಮುಗೀತು ಕಥೆ! ಅಲ್ಲಿಂದ ಮುಂದೆ ಅಣ್ಣ ಏರ್ಪಡಿಸುವ ರಕ್ತದಾನ ಶಿಬಿರ, ಬಡ ರೋಗಿಗಳಿಗೆ ಹಾಲು-ಹಣ್ಣು ಹಂಚಿಕೆ ಸುದ್ದಿಯನ್ನೇ ಬರೆಯಬೇಕು. ೨ನೇ ಪುಟದ ಈ ಸುದ್ದಿಗಳಿಗೆಲ್ಲ ಆಧಾರವಾಗಿರುವ ೧೧ನೇ ಪುಟದಲ್ಲಿನ ಅಣ್ಣನ ಜಾಹೀರಾತು ನೋಡಿಯಾದ್ರು, ನಾವೆಲ್ಲ ಜೈಲಿನಿಂದ ಬಿಡುಗಡೆಯಾದ ನಂತರ ಅಣ್ಣ ಮಾಡುವ ವಹಿವಾಟುಗಳ ಕುರಿತು ಬರೆಯುವಂತಿಲ್ಲ!
ಮತ್ತದೆ ಪ್ರಶ್ನೆ. ಸಾಮಾಜಿಕ ಜವಬ್ದಾರಿ, ಮಾನವೀಯತೆಯ ಮಾತು! ಹಾಗಾದ್ರೆ ದೇಶದಲ್ಲಿ ಹೆಂಡದಂಗಡಿಗಳು ಬಂದ್ ಆಗಬೇಕು. ಮಾಂಸದ ಅಂಗಡಿಗಳು ಬಂದ್ ಆಗಬೇಕು. ರಾಜಕೀಯ ಪಕ್ಷಗಳಂತೂ ಇರಲೇಬಾರದು! ಕುರಿ ಕಡಿಯುವವನು ಮಾನವೀಯತೆ ಅಂತ ಕುಳಿತುಕೊಂಡ್ರೆ, ಅವನ ಹೆಂಡ್ತಿ, ಮಕ್ಕಳು ಉಪವಾಸ ಬೀಳ್ತಾರೆ ಅಷ್ಟೆ.
ಇಡೀ ಬೆಂಗಳೂರು ಬೆಚ್ಚಗೆ ಮಲಗಿದೆ. ಮನೆಯಿಂದ ಕರೆ ಮೇಲೆ ಕರೆ. ಇವತ್ತು ಆಫೀಸ್‌ಗೆ ಹೋಗಬೇಡ ಅಂತ. ನಂಗೆ ಒಬ್ಬನಿಗೆ ಅಲ್ಲ ಪ್ರತಿ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲ ಪತ್ರಕರ್ತರಿಗೂ ಅವರ ಅಪ್ಪ, ಅಮ್ಮ, ಸಂಬಂಧಿಕರು ಕರೆ ಮಾಡಿ ಇದೇ ಮಾತು ಹೇಳಿರುತ್ತಾರೆ. ಕೆಲಸಕ್ಕಿಂತ ಜೀವ ದೊಡ್ಡದು. ಅದ್ರಲ್ಲೂ ಹೆಣ್ಣುಮಕ್ಕಳಿಗಂತೂ ಬಿಲ್‌ಕುಲ್ ಕರ್ಫ್ಯೂ ದಿನ ಕೆಲಸಕ್ಕೆ ಹೋಗೋದಕ್ಕೆ ಮನೆಯವರು ಒಪ್ಪಿರಲ್ಲ. ಆದ್ರೂ ನಮ್ಮ ವಾಹಿನಿಗಳ, ಪತ್ರಿಕೆಗಳ ವರದಿಗಾರರೆಲ್ಲ ಫೀಲ್ಡ್‌ಗೆ ಇಳಿದ್ರು. ’ನಿಮಗೇನು ಪ್ರೆಸ್‌ನವ್ರು. ಪೊಲೀಸ್‌ನವ್ರು ಹೊಡೆಯಲ್ಲ…’ ಹಂ. ಹೌದು, ಒಂದು ಮಟ್ಟಕ್ಕೆ ಸತ್ಯ. ಆದ್ರೆ ಇಂಥ ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸರಿಗೆ ಮೊದಲನೆ ಸಿಟ್ಟು ಮಾಧ್ಯಮದವರ ಮೇಲೆಯೇ ಇರುತ್ತೆ. ಸಾಕಷ್ಟು ಗಲಭೆಗಳಲ್ಲಿ ಸಾಕಷ್ಟು ಪತ್ರಕರ್ತರಿಗೆ ಚೆನ್ನಾಗಿಯೇ ಏಟು ಬಿದ್ದಿದೆ.
ವಾಹಿನಿಗಳು ಇರೋದೆ ಟಿಆರ್‌ಪಿಗೆ. ನನ್ನಂಥ ನೂರು ಜನ ಬಂದ್ ದಿನ ಟೀವಿ ನೋಡಿದ್ರು, ಆಟೊಮ್ಯಾಟಿಕ್ ಆಗಿ ಟಿಆರ್‌ಪಿ ಹೆಚ್ಚಾಗುತ್ತೆ. ಎಲ್ಲ ಸೆನ್ಸ್‌ಷನಲ್ ಇಷ್ಯೂಗಳಿದ್ದಾಗಲೂ ಟಿಆರ್‌ಪಿ ಮೀಟರ್ ಏರುತ್ತೆ. ಅಂಥ ಸ್ಥಿತಿಯನ್ನು ಎನ್‌ಕ್ಯಾಶ್ ಮಾಡಿಕೊಳ್ಳದೆ ಇರೋದು ವೃತ್ತಿಧರ್ಮಕ್ಕೆ ವಿರೋಧ. ಅಯ್ಯೋ ರಕ್ತ, ಅಯ್ಯೋ ಬೆಂಕಿ ಅಂತ ಕುಳಿತ್ರೆ…ಒನ್ಸ್ ಅಗೈನ್ ನಮ್ಮದು ಕುರಿ ಕಡಿಯುವವನ ಕಥೆಯೇ ಆಗುತ್ತದೆ. ೧೫೦ರೂ.ಗೊಂದು ಜಿಬಿ ಡೇಟಾಕೊಡುವ ಕಾಲದಲ್ಲಿ ರಿಲಯನ್ಸ್ ಜೀಯೊ ಲಗ್ಗೆಯಿಟ್ಟರೆ, ಅನಿವಾರ್ಯವಾಗಿ ಮಿಕ್ಕವರು ಅದರೊಂದಿಗೆ ಸ್ಪರ್ಧೆಗಳಿಯಲೇ ಬೇಕು. ಚಾನೆಲ್‌ಗಳ ಬೆಂಕಿ ವಿಷ್ಯುವಲ್ಸ್‌ನ ಕಥೆಯೂ ಹಾಗೆ.
ಹಾಗಂತ ಎಲ್ಲ ಸಲ ಟಿಆರ್‌ಪಿ ಮಾತಿಟ್ಟುಕೊಂಡು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ವಾಹಿನಿಗಳ ಎಲ್ಲ ನಿಲುವನ್ನು ಸಮರ್ಥಿಸುವುದಿಲ್ಲ. ಒಂದಷ್ಟು ಬಿಗುವಿನ ಪರಿಸ್ಥಿತಿಯಲ್ಲಿ, ಜಗತ್ತೇ ಹೊತ್ತಿ ಉರಿಯುವಾಗ ಟಿಆರ್‌ಪಿ ಮೀಟರ್ ಏರುತ್ತೆ ನಿಜ. ಆದ್ರೆ ಉಳಿದ ದಿನಗಳಲ್ಲಿ ರಕ್ತ, ಬೆಂಕಿಗಳು ಖಂಡಿತ ಟಿಆರ್‌ಪಿ ಮೀಟರ್ ಏರಿಸಲ್ಲ. ವಾರವಿಡಿ ಕ್ರೈಂನ್ನು ಹಾಕಿದ್ರು ಕನ್ನಡದ ಬಹುತೇಕ ನ್ಯೂಸ್ ಚಾನೆಲ್‌ಗಳು ಟಿಆರ್‌ಪಿ ೫೦ರ ಗಡಿ ದಾಟುವುದೇ ಇಲ್ಲ. ಅಂದ್ರೆ ಜನರ ಆಯ್ಕೆ ಈ ಸರಕಲ್ಲ ಎಂದಾಯ್ತು.
ನಮಗೂ ಗೊತ್ತಿರುತ್ತೆ ಒಂದಷ್ಟು ಜನರದ್ದು ಬೋಗಸ್ ಹೋರಾಟ ಅಂತ. ಟೀವಿ ಕ್ಯಾಮೆರಾ ಎದುರು ಹೋರಾಟ ಜೋರು. ಚಾನೆಲ್‌ನವ್ರು ಆ ಕಡೆ ಹೋಗ್ತಾ ಇದ್ದಂತೆ ನಮ್ಮ ಓರಾಟಗಾರರೆಲ್ಲ ಬಾರ್‌ನಲ್ಲಿ ಇರುತ್ತಾರೆ! ಆದ್ರೆ ನಾವು ಅಂಥವರನ್ನು ಪ್ರಮೋಟ್ ಮಾಡ್ತೀವಿ. ಅದಕ್ಕೆ ಕಾರಣಗಳು ನೂರೆಂಟು. ಮಾಧ್ಯಮಗಳು ಮಾಡಬಹುದಾದ ಒಂದು ಉತ್ತಮ ಕೆಲಸವೆಂದರೆ, ಇಂಥವರನ್ನು ಆರಂಭದಲ್ಲೇ ಪ್ರಚಾರ ಕೊಡದೆ ಮೆಟ್ಟಿಬಿಡಬೇಕು. ಒಂದಷ್ಟು ಹೋರಾಟಗಾರರಲ್ಲಿ ಒಬ್ಬನ ಕಾಲರ್ ಹಿಡಿದು ಕಾವೇರಿ ನದಿ ಎಲ್ಲಿ ಹುಟ್ಟುತ್ತೆ, ಎಲ್ಲಿ ಹರಿಯುತ್ತೆ, ಯಾರಿಗೆ ನಷ್ಟ ಅಂತ ಕೇಳಿದ್ರೆ, ಖಂಡಿತ ಅವನ ಬಳಿ ಉತ್ತರವಿಲ್ಲ. ’ನಂಗೆ ಇಲ್ಲಿಗೆ ಬಾ ಅಂತ ದುಡ್ಡು ಕೊಟ್ಟವನು ಇದ್ನೆಲ್ಲ ಹೇಳಿಲ್ಲ’ ಅಂತಿದ್ದ. ಇದು ನಮ್ಮಲ್ಲಿನ ಸಾಕಷ್ಟು ಹೋರಾಟಗಳ ಒಳಮುಖ.
ಖಂಡಿತ ಸಾಮಾನ್ಯ ದಿನಗಳಲ್ಲಿ ಇದೊಂದು ಹೋರಾಟವನ್ನು ದಿನಿವಿಡಿ ಹಾಕಿದ್ದರಿಂದ ೧೨೦ ಟಿಆರ್‌ಪಿ ಬಂದಿದ್ದು ಕನ್ನಡದ ಮಟ್ಟಿಗಂತೂ ಇಲ್ಲ. ಕ್ರೈಂನಲ್ಲಿ ಭರ್ಜರಿ ಟಿಆರ್‌ಪಿ ಬರುತ್ತೆ. ವಿವಾದಗಳನ್ನೇ ಜನ ನೋಡ್ತಾರೆ ಅನ್ನೋದು ಎಲ್ಲ ವಾಹಿನಿಗಳ ಮಾರ್ಕೆಟಿಂಗ್ ಮತ್ತು ರಿಸರ್ಚ್ ತಂಡ ನೀಡುವ ಅಧ್ಯಯನ ವರದಿ. ಹಾಗಿದ್ರೆ ಕನ್ನಡದ ಎಲ್ಲ ಸುದ್ದಿವಾಹಿಗಳದ್ದು ೨೫೦ ಟಿಆರ್‌ಪಿ ಆಗಬೇಕಿತ್ತು. ಖಂಡಿತ ಆಗಿಲ್ಲ. ೧೫೦ರ ಗಡಿ ದಾಟಿದ್ದು ಟಿವಿ-೯ ಮಾತ್ರ. ಟಿವಿ-೯ನಲ್ಲಿ ಕ್ರೈಂ ಜೊತೆಗೆ ವಿಶೇಷ ಬರುತ್ತೆ, ನಿಮಗೊಂದು ಸಲಾಂ ಬರುತ್ತೆ. ತಿಳುವಳಿಕೆಗೆ ಹತ್ತಾರು ಕಾರ್ಯಕ್ರಮ ಬರುತ್ತೆ ಹಾಗೂ ಅವರ ವಿಶೇಷ ಕಾರ್ಯಕ್ರಮಗಳ ಸ್ಲಾಟ್ ಬದಲಾಗುವುದು ತೀರ, ತೀರ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ. ಅದೇ ಹಾದಿ ತುಳಿದ ಪಬ್ಲಿಕ್ ಟಿವಿ ದ್ವಿತೀಯ ಸ್ಥಾನದಲ್ಲಿದೆ. ಅದ್ರಲ್ಲೂ ಬೆಳಕು, ಪಬ್ಲಿಕ್ ಹೀರೋ ಎಂಬ ಒಳ್ಳೆ ಕಾರ್ಯಕ್ರಮ ಬರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಭಾವನೆಗಳನ್ನು ಎನ್‌ಕ್ಯಾಶ್ ಮಾಡಿಕೊಂಡು ಟಿಆರ್‌ಪಿ ಹೆಚ್ಚಿಸಿಕೊಳ್ಳುವುದು, ಸಂಸ್ಥೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಕಲೆ. ಅದು ಖಂಡಿತ ಪುಗ್ಸಟ್ಟೆ ಸಲಹೆ ಕೊಟ್ಟಷ್ಟು ಸುಲಭದ ಮಾತಲ್ಲ ಹಾಗೂ ಆ ಸ್ಥಾನದಲ್ಲಿ ಯಶಸ್ವಿಯಾದ ಕನ್ನಡಿಗರು ಬೆರಳೆಣಿಕೆಯ ಮಂದಿ.
ನಾನ್‌ಸೆನ್ಸ್ ಕಾರ್ಯಕ್ರಮಗಳು, ಜ್ಯೋತಿಷ್ಯದ ಕಾರ್ಯಕ್ರಮಗಳು ಟಿಆರ್‌ಪಿ ಹುಟ್ಟಿಸುವ ಟ್ರೆಂಡ್ ನರೇಂದ್ರಬಾಬು ಶರ್ಮಾರೊಂದಿಗೆ ಮುಗಿದು ಹೋಗಿದೆ! ಇಂಥ ಹೊತ್ತಿನಲ್ಲಿ ನಮ್ಮ ಮಾಧ್ಯಮಗಳು ಕ್ರೆಡಿಬಿಲಿಟಿ ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಮಾಡಬಹುದು. ಆದ್ರೆ ಮಾಡ್ತಿಲ್ಲ ಎಂಬುದು ದುರಂತವಷ್ಟೆ.
ಇನ್ನೂ ಪತ್ರಕರ್ತರ ಮಾನವೀಯತೆ ಮಾತು. ಫೇಸ್‌ಬುಕ್, ಟ್ವಿಟರ್, ವಾಟ್ಸಪ್‌ನಲ್ಲಿ ಕುಳಿತು ಕುಟ್ಟುವ ಎಲ್ಲರಿಗೂ ಮಾನವೀಯತೆ ಇದ್ಯಾ? ಅಪಘಾತವಾಗಿ ಬಿದ್ರೆ ನಿಮಗೆಲ್ಲ ಅವನ ರಕ್ಷಣೆಗಿಂತ ಆತನ ಪೋಟೊ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ ಲೈಕ್, ಕಮ್ಮೆಂಟ್ ತೆಗೆದುಕೊಳ್ಳೋದು ಮುಖ್ಯವಲ್ವಾ? ಇವತ್ತು ಫೇಸ್‌ಬುಕ್, ವಾಟ್ಸಪ್‌ಗಳು ಮಾಧ್ಯಮಕ್ಕಿಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಕಾವೇರಿ ಗಲಾಟೆಯನ್ನೇ ತೆಗೆದುಕೊಳ್ಳಿ. ನಮ್ಮ ಮಾಧ್ಯಮಗಳು ಎಷ್ಟು ಗಂಟೆ ಅವಮಾನವೀಯ ಸುದ್ದಿ ಪ್ರಕಟಿಸಿದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ಅಪಾಯಕಾರಿ ವೀಡಿಯೋ, ಸಂದೇಶಗಳು ರವಾನೆಯಾಗಿವೆ ಎಂಬುದನ್ನು ಲೆಕ್ಕಹಾಕಿ.
ಮೂರನೆ ವ್ಯಕ್ತಿ ಬಗ್ಗೆ ಬೊಟ್ಟು ಮಾಡಿ ತೋರಿಸೋದು ತುಂಬ ಸುಲಭ. ಆದ್ರೆ ನಮ್ಮ ಕಾಲು ಬುಡಕ್ಕೆ ಬಂದಾಗ ಕಷ್ಟ,ಕಷ್ಟ. ಮಾನವೀಯತೆಯ ಕುರಿತು ಬೊಬ್ಬೆ ಹೊಡೆಯುವ ನೀವು ಅದೆಷ್ಟು ಮಾನವೀಯ ಸಂದೇಶ. ವೀಡಿಯೋ ದಿನ ಶೇರ್ ಮಾಡ್ತೀರಾ? ಅದೆಷ್ಟು ಜನಕ್ಕೆ ಸಹಾಯ ಮಾಡ್ತೀರ. ಪಬ್ಲಿಕ್ ಟಿವಿ ವರದಿಗಾರ್ತಿ ಪವಿತ್ರ ಕೆಲ ದಿನಗಳ ಹಿಂದೆ ಗಾಯಗೊಂಡ ಹಸುಗಳಿಗೆ ಚಿಕಿತ್ಸೆ ಕೊಡಿಸಿದ ಫೋಟೊ ಹಾಕಿದ್ರು. ಅದೇ ಥರ ಸಾಕಷ್ಟು ಪತ್ರಕರ್ತರು ಅವರ ವರದಿಗಾರಿಕೆ ಸಮಯದಲ್ಲಿ ಮಾನವೀಯ ಕೆಲಸ ಮಾಡುತ್ತಾರೆ. ಅದು ಸುದ್ದಿಯಾಗಿ ಸ್ಕ್ರೀನ್ ಮೇಲೆ ಬರಲ್ಲ ಅಷ್ಟೆ. ನಮ್ಮ ನಾಟಿ ವೈದ್ಯದ ಜಗಳದಾಚೆಗೂ ಸುವರ್ಣನ್ಯೂಸ್‌ನ ವಿಜಯಲಕ್ಷ್ಮಿ ಶಿಬನೂರು, ಸಾಕಷ್ಟು ಅಸಹಾಯಕರಿಗೆ ತಮ್ಮ ಕಿಸೆಯಿಂದ ಸಹಾಯ ಮಾಡುವ ಪತ್ರಕರ್ತೆಯಲ್ಲೊಬ್ಬರು. ಹೀಗೆ ಹುಡುಕಿಕೊಂಡು ಹೋದ್ರೆ ನಿಮ್ಮಂತೆಯೇ ಮಾನವೀಯತೆಯುಳ್ಳ ಸಾಕಷ್ಟು ಪತ್ರಕರ್ತರು ಸಿಗ್ತಾರೆ. ಥಟ್ಟನೆ ನೆನಪಾದ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಿದೆ.
ಇಲ್ಲಿ ತಪ್ಪಿತಸ್ಥರು ಯಾರು? ಎಂಬ ಪ್ರಶ್ನೆ ಬಂದಾಗ, ರಾಜ್ಯದ ೮ ಚಾನೆಲ್‌ಗಳು ಬಿಟ್ಟು ನಿಮ್ಮ ಮನೆ ಟೀವಿಯಲ್ಲಿ ಮಿಕ್ಕ ೪೬೨ ಚಾನೆಲ್‌ಗಳು ಇದ್ದವಲ್ಲ ಎಂಬುದಷ್ಟೆ ನನಗೆ ಕಾಣುವ ಉತ್ತರ.
ನೀವೊಂದು ಪಟ್ಟಣ್ಣದ ನಡು ಬೀದಿಗೆ ಬಂದು ನಿಂತರೆ, ನಿಮಗೆ ದೇವಸ್ಥಾನ, ಕಿರಾಣಿ ಅಂಗಡಿ, ಹೊಟೆಲ್, ಬಾರು, ಪಬ್ಬು, ಮಸಾಜ್ ಪಾರ್ಲರ್ ಎಲ್ಲವೂ ಕಾಣಿಸುತ್ತದೆ. ಯಾವುದಕ್ಕೆ ಹೋಗಬೇಕು ಎಂಬುದನ್ನು ನಡುಬೀದಿಯಲ್ಲಿ ನಿಂತ ನೀವೇ ನಿರ್ಧರಿಸಬೇಕಷ್ಟೆ. ನಿಮ್ಮ ಮನೆಯಲ್ಲಿನ ಸೆಟಾಪ್ ಬಾಕ್ಸ್ ಕೂಡ ಹಾಗೆ…

ಮಾಂಡೋವಿ

Goa-Zuari.jpg“ಮೊಣಕಾಲಿಗಿಂತ ಕೆಳಗೆ ಬರದಂತೆ ಲಂಗ ತೊಟ್ಟ ಲಲನೆಯರು, ಬ್ರೆಜಿಲ್ ಬೀದಿಯಂತೆಯೋ, ಕೊಲಂಬಿಯಾದ ತಪ್ಪಿಲಿನಂತೆಯೋ ಕಾಣುವ ಕೇರಿಗಳು, ಅಲ್ಲಲ್ಲಿ ಕೇಳಿಸುವ ಪೋರ್ಚುಗೀಸ್ ಮಿಶ್ರಿತ ಕೊಂಕಣಿ, ಅರೆಬರೆಬೆಂದ ಹಿಂದಿ, ಮತಾಂತರಗೊಂಡ ಮೀನುಗಾರರು, ಜಗತ್ತಿನ ಪರಿವೇ ಇಲ್ಲದೆ ಪ್ರೀತಿಯಲ್ಲಿ ಮುಳುಗಿದ ಜೋಡಿಗಳು, ವಾರಾಂತ್ಯ ಕಳೆಯಲು ಬಂದ ಸಹೋದ್ಯೋಗಿಗಳು, ಬದುಕಿನ ಎಲ್ಲ ದುಃಖವನ್ನು ಮರೆಯಲೆಂಬಂತೆ ಕೈಯ್ಯಲ್ಲಿ ಸಾರಾಯಿ ಸೀಸೆ ಹಿಡಿದು ತಿರುಗುವ ಈಗಷ್ಟೆ ಮೀಸೆ ಚಿಗುರಿದ ತರುಣರು, ಲೆಕ್ಕ ಮಾಡಿ ಮೂರು ಮನೆಗೆ ಒಂದರಂತೆ ಸಿಗುವ ಬಾರುಗಳು, ಬದುಕಿನ ಜರ್ನಿಯನ್ನು ಮುಗಿಸಿದವರಂತೆ ಬಸ್ಸಿನಲ್ಲೇ ಕುಳಿತು ಬೈಬಲ್ ಓದುವ ಮುದುಕಿಯರು, ಒಣ ಮೀನಿನ ವಾಸನೆ, ಘನಮಾಡಿದ ಅಕ್ಕಿಯಲ್ಲಿ ಸಿಗುವ ಕಲ್ಲಿನಂತೆ ಅಪರೂಪಕ್ಕೆ ಕಾಣಿಸುವ ಹಣೆಗೆ ಕುಂಕುಮವಿಟ್ಟ ಶ್ರೀಮತಿಯರು…ಇವ್ಯಾವುದರ ಪರಿವೂ ಇಲ್ಲದೆ ಅವಳು ತನ್ನ ಹಾದಿಯಲ್ಲಿ ಸಾಗುತ್ತಿರುತ್ತಾಳೆ. ಭಾರತದ ಸ್ವರ್ಗವದು…” ಹಾಗಂತ ಆಫೀಸಿನ ಕೊಲೀಗು ವತ್ಸಲ ಹೇಳಿದಾಗಲೇ ಯಾಕೆ ಆಕೆಯನ್ನು ಮೀಟ್‍ಮಾಡಿ ಬರಬಾರದು ಅನ್ನಿಸ್ತು..
***
“ಮೇಡಂ, ಆಚೆಗೊಂದು ಡ್ಯಾಂ, ಈಚಿಗೊಂದು ಡ್ಯಾಂ. ಆದ್ರೂ ಕುಡಿಯಾಕೆ ನೀರು ಇರಹಂಗೆ ಇಲ್ರಿ. ಈ ಲೋಂಡ ದಾಟಿದ್ರೆ ಮುಗಿತು ನೋಡ್ರಿ ಕಥಿ. ಮಳಿಯಾದ್ರ ಬದುಕು, ಇಲ್ಲಂದ್ರ ಇಲ್ರಿ, ಅದ್ಕ ಹಿಂಗ ಗಂಟು ಮೂಟಿ ಕಟ್‍ಕೊಂಡು ಗುಳೆ ಹೋಗ್ತೀವ್ರಿ…”
ರೈಲಿನಲ್ಲಿ ಕುಳಿತ ಭೀಮಪ್ಪ ತನ್ನ ಅಳಲನ್ನು ಹೇಳಿಕೊಳ್ಳುತ್ತಿದ್ದ.
“ಧಾರವಾಡ ದಾಟಿದ್ರೆ ಮುಗಿತ್ರಿ. ಬೆಳಗಾಂ, ಬಾಗಲಕೋಟಿ, ಗದಗ…ಹಿಂಗೆ ಎಲ್ಲಿ ನೋಡಿದ್ರು ನೀರು ಸಿಗಹಂಗೆ ಇಲ್ರಿ. ಅದ್ಕಾರಿ ನಾವು ಕಳಸಾ-ಬಂಡೂರಿ ಯೋಜನೆಯಾಗಬೇಕು ಅಂತ ಸೆಟೆದು ನಿಂತಿವ್ರಿ. ಕೊನಿಗೆ ಕನಿಷ್ಟ ಪಕ್ಷ ಕುಡಿಯಾಕಾದ್ರು ನೀರು ಸಿಗ್‍ತೈತ್ರಿ. ಘಟ್ಟದ ಕೆಳಗೆ ಇಳಿದ್ರೆ ದೊಡ್ಡ ಸಮುದ್ರಾನೆ ಐತಿ. ಆದ್ರೆ ಪ್ರಯೋಜನ ಏನ್ ಬಂತ್ರಿ? ಸಮುದ್ರದ ನೀರು ಸಮುದ್ರದ್ದೆ. ಪಟ್ಟಣ್ಣದಲ್ಲಿ ಕುಳಿತ್ ಮಂದಿಗೆ ನಮ್ ನೋವು ಅರ್ಥ ಆಗಂಗೆ ಇಲ್ರಿ…”
ಭೀಮಪ್ಪನ ಮಾತು ಮುಂದುವರಿಯುವ ಹೊತ್ತಿಗೆ ರೈಲು ಭೀಮಘಢದ ದಟ್ಟ ಕಾಡನ್ನು ತಲುಪಿಯಾಗಿತ್ತು.
ಬೆಳಗಾವಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಜೀವಜಲವೆಂದರೆ ಮಲಪ್ರಭ ಹಾಗೂ ಮಹಾದಾಯಿ ನದಿಗಳು ಎಂದು ಅಪ್ಪ ಹೇಳುತ್ತಿದ್ದ ನೆನಪು. ಭೀಮಘಡದಲ್ಲಿ ಹುಟ್ಟುವ ಮಹಾದಾಯಿಗೆ ಗಂಡನ ಮನೆ ಗೋವಾ. ಆಕೆಯೂ ನನ್ನಂತೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತಿರುವವವಳು. ಮಹಾದಾಯಿ ಮೈತುಂಬಿಕೊಂಡಿರುವ ಹೊತ್ತಿನಲ್ಲಿ ಎಲ್ಲರಿಗೂ ಬೇಕು.
ನನಗೆ ನೆನಪಿನಲ್ಲಿ ಉಳಿದಂತೆ ನರಗುಂದ, ರೋಣ, ನವಲಗುಂದ, ಸವದತ್ತಿ ಭಾಗದ ನೀರಿನ ಹಾಹಾಕಾರ ನೀಗಿಸಲು ನಾವು ಹೈಸ್ಕೂಲ್‍ಗೆ ಹೋಗುವ ಹೊತ್ತಿಗೆ ಮಲಪ್ರಭೆ ಅಣೆಕಟ್ಟು ಕಟ್ಟಲಾಯ್ತು.
ಬೆಳಗಾವಿ ಜಿಲ್ಲೆಯ ಮತ್ತೊಂದು ಮಗ್ಗುಲಿನಲ್ಲಿರೋದು ಮಹಾದಾಯಿ ನದಿ. ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ, ದೂದ್‍ಸಾಗರ್ ಮೊದಲಾದ ಉಪನದಿಗಳಿಂದ ಕೂಡಿದ ಕಣಿವೆಯದು. ತವರುಮನೆಯಲ್ಲಿ ಮೈತುಂಬಿಕೊಂಡು ಸಡಗರದಿಂದ ಹೊರಟ ಹುಡುಗಿ ಗಂಡನ ಮನೆಯ ಹೊಸ್ತಿಲು ತುಳಿದಂತೆ ಇದೆ ಗೋವಾ ಎಂದು ನಮ್ಮೂರು ಕಡೆ ಆಗಾಗ ಹೇಳ್ತಾ ಇರ್ತಾರೆ.
ಈ ಅಣೆಕಟ್ಟು ಒಂದಷ್ಟು ಜನರ ಬದುಕಿಗೆ ಬೆಳಕು ನೀಡಿದರು ಮತ್ತೊಂದಷ್ಟು ಮಂದಿಯ ಬದುಕನ್ನು ಮುಳುಗಿಸುತ್ತದೆ. ಹಾಗೆ ಮುಳುಗಡೆಯಾಗಿ ಮಲಪ್ರಭೆಯ ದಂಡೆಯಿಂದ ಎದ್ದು ಬಂದವರಲ್ಲೊಬ್ಬರು ನಾವು. ಹಲವರ ಬದುಕು ಮುಳುಗಿಸಿದ ಈ ಅಣೆಕಟ್ಟು ಭರ್ತಿಯಾಗಿದ್ದು ಅಷ್ಟರಲ್ಲೇ ಇದೆ.
***
“ಮಗ ಗೋವಾಕ್ಕೆ ಹೋದ್ರೆ ಬದುಕು ಮರೆತುಹೋಗುತ್ತೆ ಕಣೆ. ಭೂಲೋಕದ ಸ್ವರ್ಗವದು. ಬರಿ ಅಮಲು. ನೀನೊಂದ್ಸಲ ಅಲ್ಲಿಗೆ ಹೋಗಿ ಬಾ. ನಂತ್ರ ಬದುಕಿನಲ್ಲಿ ಹೀಗೆಲ್ಲ ಗೌರಮ್ಮ ಥರ ಕುಳಿತಿರಲ್ಲ. ಐ ವಿಲ್ ಬೆಟ್ ಯು…”
ವತ್ಸಲಾಗೆ ಹೇಗಾದ್ರು ಮಾಡಿ ನನ್ನನ್ನು ಮೊದಲಿನಂತೆ ನೋಡುವ ಆಸೆ. ನನಗಿಂತ ಹೆಚ್ಚಾಗಿ ಆಕೆಗೆ ನನ್ನ ಬದುಕಿನಲ್ಲಿ ಖುಷಿ ಕಾಣುವ ಇರಾದೆ.
ಯಾರಿಗಾಗಿ ಬದುಕುತ್ತಿದ್ದೇನೆ? ಯಾಕಾಗಿ ಬದುಕುತ್ತಿದ್ದೇನೆ? ಇವೆರಡು ಬಹುವಾಗಿ ಕಾಡುತ್ತಿರುವ ಪ್ರಶ್ನೆ. ಉತ್ತರ ಹುಡುಕಾಟ ನಿರಂತರ ಎಂದುಕೊಳ್ಳುತ್ತ ತಲೆಯೆತ್ತಿದ್ರೆ ಜನವೆಲ್ಲ ರೈಲನ್ನು ಇಳಿಯುವ ಧಾವಂತದಲ್ಲಿದ್ರು. ಕಿಟಕಿಯಾಚೆಗೆ ಹಳದಿ ಬಣ್ಣದಲ್ಲಿ ವಾಸ್ಕೊಡ ಗಾಮ ಎಂಬ ಬೋರ್ಡು ಕಾಣಿಸುತ್ತಿತ್ತು.
ಗೋವಾವನ್ನು ಕಂಡುಹಿಡಿದವನು ವಾಸ್ಕೋಡಿಗಾಮ. ಆತನೇ ಭಾರತಕ್ಕೆ ಮೊದಲು ಬಂದ ವಿದೇಶಿ ನೌಕಾಯಾನಿ ಅಂತೆಲ್ಲ ಹೈಸ್ಕೂಲಿನ ಪಾಠದಲ್ಲಿ ಓದಿದ ನೆನಪು. ಈ ಬದುಕು ಎಷ್ಟು ವಿಚಿತ್ರ. ಹೈಸ್ಕೂಲ್‍ನಲ್ಲಿ ನಾನು ಹೀಗೆಲ್ಲ ಇರಲೇ ಇಲ್ಲ. “ಹೆಣ್ಣುಮಕ್ಕಳು ಎಷ್ಟು ತಗ್ಗಿ, ಬಗ್ಗಿ ನಡೆದ್ರು ಸಾಲದು. ಕೊಟ್ಟ ಹೆಣ್ಣು ಯಾವತ್ತಿದ್ರು ಕುಲಕ್ಕೆ ಹೊರಗೆ. ಗಂಡನ ಮನೆ ದೀಪ ಬೆಳಗೋಳು. ಅಲ್ಲಿ ನಿನ್ನ ಜೊತೆ ದಿನ ಅಪ್ಪ, ಅಮ್ಮಬರಲ್ಲ. ನೀನು ಹೀಗೆ ಗಂಡುಬೀರಿ ಥರ ಇದ್ರೆ ಎಲ್ಲೂ ಬದುಕಲ್ಲ. ಶಿಸ್ತು ಕಲಿ, ಎದುರಾಡೋದು ಬಿಡು…” ದಿನ ಬೈದು, ಬೈದು ಅಮ್ಮ ನನ್ನ ಧ್ವನಿಯನ್ನು ಸಾಕಷ್ಟು ಕರಗಿಸಿದ್ದಳು. ಊರಿನ ಉಳಿದೆಲ್ಲ ಟಿಪಿಕಲ್ ಹುಡುಗಿಯರಂತೆ ನನ್ನನ್ನು ತಯಾರು ಮಾಡಿದ್ಲು. ಅಮ್ಮ ಹೇಳಿದ್ದು ನಿಜ. ಬದುಕಿನ ಹಾರಾಟ, ಚೀರಾಟ ಎಲ್ಲ ಜಾಸ್ತಿ ದಿನ ಜೊತೆ ಇರಲಾರದು ಎಂದುಕೊಳ್ಳುವ ಹೊತ್ತಿಗೆ ನಾನು ಗೋವಾ ತಲುಪಿದ್ದೇನೆ ಎಂಬುದು ದಿಟವಾಯ್ತು. ಹೊರಗಿಳಿದು ಬಂದ್ರೆ ಕ್ಯಾಬ್‍ನವನು ಕಾಯುತ್ತಿದ್ದ. ಹೊಟೆಲ್‍ನಲ್ಲಿ ರೂಮು ಬುಕ್ ಆಗಿತ್ತು. ನನ್ನ ಪ್ರಶ್ನೆಗೆ ಇಲ್ಲಾದರು ಉತ್ತರ ಸಿಗಬಹುದಾ ಎಂಬ ಆಸೆಯೊಂದು ಸಣ್ಣಗೆ ಚಿಗುರಿತ್ತು.
***
ಮುಳುಡಗೆಯಾದ ನಂತರ ಅಪ್ಪ ನರಗುಂದ ತಾಲೂಕಿನ ಶಿರಕೋಳದ ಹಣಸಿಯಲ್ಲಿ ಒಂದಷ್ಟು ಭೂಮಿ ಖರೀದಿಸಿ ಬೇಸಾಯ ಆರಂಭಿಸಿದರು. ಅಮ್ಮ ಹೊಲದ ಕೆಲಸದಲ್ಲಿ ಅಪ್ಪನಿಗೆ ಸಾಥ್. ಅದ್ಯಾಕೊ ಅಲ್ಲಿ ವಿದ್ಯಾಭ್ಯಾಸ ಅಷ್ಟೊಂದು ಚೆನ್ನಾಗಿಲ್ಲವೆಂದು ಕಾಲೇಜಿಗೆ ಧಾರವಾಡಕ್ಕೆ ಬಂದೆ.
ಧಾರವಾಡದ ಎಲ್‍ಎಲ್‍ಬಿಯ 5 ವರ್ಷ ಬದುಕಿನ ಸುವರ್ಣಯುಗ. ಆಗೆಲ್ಲ ಬದುಕಿನ ಕುರಿತಾಗಿ ಪ್ರಶ್ನೆಗಳಿರಲಿಲ್ಲ. ಹಾಸ್ಟೆಲ್ ಗೆಳೆತಿಯರು, ಕಾಲೇಜಿನಲ್ಲಿ ಚುಡಾಯಿಸುವ ಹುಡುಗರು, ಸುತ್ತಾಟ, ತಿನ್ನೋದು, ಕಾರ್ಯಕ್ರಮಗಳು, ಸಿನಿಮಾ, ಸಂಗೀತ, ಕ್ಲಾಸು, ಓದು…ಇವಿಷ್ಟು ಬಿಟ್ಟು ಬೇರೆಯ ಜಗತ್ತು ಗೊತ್ತಿರಲಿಲ್ಲ.
ಹೀಗೆ ದಿನ ಕಳೆಯುತ್ತಿರುವಾಗ ಪರಿಚಯವಾದವನು ಸುಮಂತ್. ಫೇಸ್ಬುಕ್, ವಾಟ್ಸಪು ಗೊತ್ತಿಲ್ಲದ ಕಾಲಕ್ಕೆ, ಇಂಟರ್‍ನೆಟ್ ಕಾಣದ ಸಮಯದಲ್ಲಿಯೇ ಸಖತ್ ಫ್ಲರ್ಟ್ ಮಾಡುತ್ತಿದ್ದ ಹುಡುಗ. ಹೂವಿನ ಮಕರಂದಕ್ಕೆ ದುಂಬಿಗಳು ಮುತ್ತಿಗೆ ಹಾಕುವಂತೆ ಚೆಂದದ ಹುಡುಗಿಯರು ಅವನನ್ನು ಸುತ್ತುವರಿಯುತ್ತಿದ್ದರು. ಅದ್ಯಾವುದೋ ಫುಟ್ಬಾಲ್ ಆಟಗಾರ ಹೇರ್‍ಸ್ಟೈಲ್, ಸ್ಮಾರ್ಟ್ ಆದ ಬೈಕು, ಜೀನ್ಸು, ಕೈಗೊಂದು ಬ್ಯಾಂಡ್…ಅವನ್ನ ನೋಡಿದ್ರೆ ಯಾವ ಮಗ್ಗುಲಿನಿಂದಲೂ ಯಾರೂ ತಿರಸ್ಕರಿಸುವಂತೆ ಇರಲಿಲ್ಲ. ಆದ್ರು ನಂಗೆ ಹುಡುಗರು ಅಂದ್ರೆ ಸ್ವಲ್ಪ ದೂರ. “ನೋಡು ಬದುಕಿನಲ್ಲಿ ಮದ್ವೆ ಅಂತ ಆಗೋದು ಒಂದೇ ಸಲ. ಪಟ್ಟಣ್ಣಕ್ಕೆ ಹೋಗಿ ನೀನು ಕೆಡಬ್ಯಾಡ. ಹಂಗೇನಾದ್ರು ಮಾಡಿದ್ರೆ ನಾವಿಬ್ರು ಜೀವಂತವಾಗಿರಲ್ಲ. ನಮಗೆ ಎಲ್ಲಕ್ಕಿಂತ ಮರ್ಯಾದೆ ಮುಖ್ಯ” ಎಂದು ಮನೆ ಬಿಟ್ಟು ಹೊರಡುವಾಗ ಅಮ್ಮ ಹೇಳಿದ ಮಾತುಗಳೆ ಕಿವಿಯಲ್ಲಿ ಗುನುಗುತ್ತಿತ್ತು.
ತನ್ನಿಂದ ಯಾರು ದೂರವಿರುತ್ತಾರೋ ಅವ್ರನ್ನು ಪಟಾಯಿಸಿಕೊಳ್ಳಬೇಕು ಅನ್ನೋದು ಅವನ ಕ್ರೇಜ್. ಹಾಗೆ ಪುಷ್ಪ, ಶೀತಲ್‍ನನ್ನು ಆತ ಪಟಾಯಿಸಿದ್ದ. ಆ ನಂತರ ಅವನ ಕಣ್ಣು ಬಿದ್ದಿದ್ದು ನನ್ನ ಮೇಲೆ.
***
ಸ್ನಾನ ಮುಗಿಸಿ ರೆಡಿಯಾಗಿ ರೂಮಿನಿಂದ ಹೊರಬಂದು ನೋಡಿದಾಗ ವತ್ಸಲ ಹೇಳಿದ್ದು ಒಂದು ಕ್ಷಣಕ್ಕೆ ನಿಜವೆನ್ನಿಸ್ತು. ಇದು ಭಾರತದ ಸ್ವರ್ಗ. ಅಮಲಿನ ಜಗತ್ತು. ಭೋರ್ಗರೆಯುವ ಸಮುದ್ರದ ತಟದಲ್ಲಿ ತುಟಿಗೆ ತುಟಿಯಿಟ್ಟು ಪ್ರೀತಿಸಿಕೊಳ್ಳುತ್ತಿರುವವರು ಅದೆಷ್ಟು ಜನ, ಮರಳಿನ ದಂಡೆಯಲ್ಲಿ ಬಗೆಬಗೆಯ ಆಟವಾಡಿ ಬದುಕಿನ ನೋವನ್ನೆಲ್ಲ ಮರೆಯುತ್ತಿರುವವರು ಅದೆಷ್ಟು ಮಂದಿ. ನಾನ್ಯಾಕೆ ಈ ಬದುಕನ್ನು ನೋವು ಅಂತ ಆಲೋಚಿಸುತ್ತೇನೆ. ಅವರೆಲ್ಲ ಬದುಕಿನ ಖುಷಿಯನ್ನು ಅನುಭವಿಸುತ್ತಿರಬಹುದಲ್ಲವೇ?
ಒಂಚೂರು ಮೇಲಕ್ಕೆ ಇಣುಕಿದ್ರೆ, ಮೂರು ಜಿಲ್ಲೆಯದ್ದು ಅದೇ ಗೋಳು. ಹತ್ತಾರು ಕಿಲೋಮೀಟರ್ ದೂರಕ್ಕೆ ಹೋಗಿ ನೀರು ಹೊತ್ತುಕೊಂಡು ಬರಬೇಕು. ಹೀಗಾಗಿ ಊರಿಗೆ ಹೋಗಲಿಕ್ಕೆ ಬೇಜಾರು. ಆದ್ರು ಅಪ್ಪ-ಅಮ್ಮನ ಪ್ರೀತಿಗಾದ್ರು ಊರಿಗೆ ಹೋಗ್ಲೆಬೇಕು. ನೀರಿಲ್ಲದ ಊರಿನಲ್ಲಿ ಸ್ವಚ್ಛತೆಯನ್ನು ನಿರೀಕ್ಷೆ ಮಾಡುವಂತಿಲ್ಲ. ಆದರೆ ಅಪ್ಪ-ಅಮ್ಮ ಎಂಬ ನಾಲ್ಕು ಅಕ್ಷರ ಇದನ್ನೆಲ್ಲ ಮರೆಸಿ ಒಂದಷ್ಟು ಖುಷಿ ಕೊಡುತ್ತಿತ್ತು.
ನನ್ನ ಮದುವೆ ಮಾಡಿ ಎರಡೇ ವರ್ಷಕ್ಕೆ ಭೀಕರವಾದ ಬರಗಾಲ. ಊರಲ್ಲಿ ನೀರಿಲ್ಲದೆ, ಹೊಲದಲ್ಲೆ ಏನು ಬೆಳೆಯದೆ, ಮದ್ವೆಗೆ ಮಾಡಿದ ಸಾಲ ತೀರಿಸಲಾಗದೆ ಅಪ್ಪ ಆತ್ಮಹತ್ಯೆ ಮಾಡಿಕೊಂಡ್ರು. “ಮಗ ಈ ಮಹಾದಾಯಿ ಯೋಜನೆಯೊಂದು ಆಗಿಬಿಡ್ಲಿ. ನಮ್ಮ ಡ್ಯಾಂಗೆ ನೀರು ಬರುತ್ತೆ. ನಾನು ಹೊಲದಾಗೆ ಬಂಗಾರ ಬೆಳೆದು ನಿಗೊಂದು ನಕ್ಲೇಸ್ ಮಾಡಿಸಿಕೊಡ್ತೀನಿ…” ಎನ್ನುತ್ತಿದ್ದ ಅಪ್ಪನ ಮುಗ್ಧ ಪ್ರೀತಿಯೇ ಇಲ್ಲದ ಮೇಲೆ ಬದುಕಿನಲ್ಲಿ ಇನ್ನೇನು ಇದೆ? ಅಪ್ಪನ್ನ ಕಳೆದುಕೊಂಡಿದ್ದೇ ನಾನಿಂದು ಬದುಕಿನ ಅರ್ಥ ಹುಡುಕುವಂತೆ ಮಾಡಿರಬಹುದಾ?
ಮಹಾದಾಯಿಯನ್ನು ಮಲಪ್ರಭೆಗೆ ತಂದು ಸೇರಿಸುವ ಕನಸು ಹೊತ್ತವರ ಜಗತ್ತು ಅಲ್ಲಿದೆ. ಉತ್ತಬೇಕು, ಬಿತ್ತಬೇಕು, ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಲಾಯರ್ ಮಾಡಬೇಕು. ಮಗಳಿಗೊಂದು ಸರ, ಮಗನಿಗೊಂದು ಉಂಗುರ…ಇದನ್ನೇ ಬದುಕಿನ ಸರ್ವಸ್ವವೆಂಬಂತೆ ತಿಳಿದವರ ಜಗತ್ತದು.
“ಮಗ ನೀನು ಈ ಕೊಂಪೆಯಲ್ಲಿದ್ದು ನಮ್ಮ ಥರ ಸಾಯಬೇಡ. ಬೆಳಿಗ್ಗೆ ಎದ್ರೆ ನೀರಿಲ್ಲ, ರಾತ್ರಿ ಮಲಗೋವಾಗ ನೀರಿಲ್ಲ. ನೀನು ಭರ್ತಿ ನೀರು ಇರೋ ಪಟ್ಟಣ್ಣ ಸೇರು. ಗಂಡ, ಸಂಸಾರ, ಮಕ್ಕಳು ಅಂತ ಸುಖವಾಗಿ ಇರು. ನಂಗಂತು ಗಂಡು ಮಗ ಆಗ್ಲಿಲ್ಲ. ನಿಂಗಾದ್ರು ಆಗ್ಲಿ…” ಅಮ್ಮನ ಪ್ರಪಂಚವದು.
“ನನ್ಮಗಂದ್ ಬಾಸು. ನೋಡೊ ಆ ಫಿಗರ್‍ನ ಹೆಂಗೆ ಪಟಾಯಿಸಿದ. ಆಫೀಸ್ ಹೆಂಗೆ ದರಿದ್ರ ಆಗಿದೆ ನೋಡು. ಅವನಿಗಿದೆ ಹಬ್ಬ..” ಜೋರಾಗಿ ಕಿರುಚಿತ್ತಿದ್ದ.
“ಲೋ ಹೇಳಿದೆ ಮಗ ಈ ಬಿಸಿಲಿನಲ್ಲಿ ಬೀಯರ್ ಕುಡಿಬೇಡ ಅಂತ. ಈಗ ನೋಡು ನಿನ್ನ ಕಂಟ್ರೋಲ್ ಮಾಡೋಕೆ ಆ ಶಿವನೆ ಬರಬೇಕು..” ಅವನ ಗೆಳೆಯ ತಲೆಮೇಲೆ ಕೈಹೊತ್ತು ಕುಳಿತ್ತಿದ್ದ.
“ಲೋ ಬಾರೋ ಐ ಆಮ್ ಫಿಟ್ ಆಂಡ್ ಫೈನ್. ನಂಗೇನು ಆಗಿಲ್ಲ. ಲೋ ಮಚ್ಚ ಇನ್ನು ಎರಡು ಬಾಟಲಿ ಕುಡಿದಿಲ್ಲ ಕಣೋ. ಇಷ್ಟಕ್ಕೆಲ್ಲ ಕಿಕ್ ಕೊಡುತ್ತೇನೋ ಈ ದರಿದ್ರ ಬೀರು? ಗೋವಾಕ್ಕೆ ಬಂದಿರೋದು ಕುಡಿಯೋಕೆ. ಚೆನ್ನಾಗಿ ಕುಡಿದು ಈ ಸಮುದ್ರದಂಚಲ್ಲಿ ಮಲಗಿಬಿಡ್‍ಬೇಕು ಮಚಾ. ಏನು ಅಂದ್ರೆ ಏನು ಗೊತ್ತಾಗಬಾರದು ನಂಗೆ. ಹಂಗೆ ಕುಡಿಬೇಕು ಮಚಾ. ಬಾರೋ ಮಗ..”
ಒಂದೇ ನದಿಯ ಎರಡು ತೀರಗಳಲ್ಲಿ ಅದೆಷ್ಟು ವ್ಯತ್ಯಾಸವಿದೆ ಅಲ್ವಾ?
***
ಗಂಡು-ಹೆಣ್ಣು ವ್ಯತ್ಯಾಸವೇನಿದೆ? ಇಬ್ರದ್ದು ಜೀವವಲ್ವಾ? ಇಬ್ರು ಉಸಿರಾಡಲ್ವಾ? ನಮ್ಮಿಬ್ರ ನಡುವೆ ದಿನ ಇದೇ ಜಗಳ. “ಆಯ್ತಮ್ಮ ಇನ್ಮುಂದೆ ನಾನು ಚೂಡಿದಾರ್ ಹಾಕ್ಕೊತೀನಿ. ನೀನು ಪ್ಯಾಂಟ್-ಶರ್ಟ್ ಹಾಕಿಕೊ. ನಾನು ಮನೆಲಿ ಪಾತ್ರೆ ತೊಳೆದುಕೊಂಡು ಇರ್ತಿನಿ. ನೀನು ಆಫೀಸ್‍ಗೆ ಹೋಗು ಆಯ್ತಾ?”
“ಅಲ್ಲ ಕಣೋ ನೀನು ಹಾಗ್ಯಾಕೆ ಅಂದುಕೊಳ್ತಿಯಾ? ಗಂಡು ಈ ಕೆಲಸ ಮಾಡಬೇಕು? ಹೆಣ್ಣು ಈ ಕೆಲಸ ಮಾಡಬೇಕು ಅಂತ ಉಳಿದವರ ಥರ ನೀನು ಯಾಕೆ ಟಿಪಿಕಲ್ ಆಗಿ ಯೋಚಿಸ್ತೀಯಾ? ಇಬ್ರು ಕೆಲಸಕ್ಕೆ ಹೋಗೋಣ. ಇಬ್ರು ಪಾತ್ರೆ ತೊಳೆಯೋಣ. ಗಂಡ-ಹೆಂಡ್ತಿ ಅನ್ನೋದು ಮಂಚದಲ್ಲಿ ದೇಹ ಶೇರ್ ಮಾಡಿಕೊಳ್ಳೋದಕ್ಕೆ ಮಾತ್ರವಲ್ಲ ಕಣೋ. ಎಲ್ಲದಕ್ಕು..”
“ಯಾವತ್ತು ಹೆಣ್ಣು-ಗಂಡು ಒಂದೇ ಆಗ್ಲಿಕ್ಕೆ ಸಾಧ್ಯವಿಲ್ಲ. ನಿಂಗೆ ಹೇರೋ ಶಕ್ತಿ ಇದೆ. ಅದಕ್ಕೆ ನೀನು ಹೆಣ್ಣು, ತಾಯಿ ಎಲ್ಲವೂ ಹೌದು. ನೋಡು ನಿನ್ನಷ್ಟು ಕಾಳಜಿ, ಪ್ರೀತಿ ನಂಗೆ ಯಾವತ್ತೂ ಬರಲ್ಲ ಕಣೆ. ಒಂದಷ್ಟು ಕೆಲಸ ನೀನೇ ಮಾಡಿದ್ರೆ ಚೆಂದ. ಇನ್ನೊಂದಷ್ಟು ನಾನು ಮಾಡಿದ್ರೆ ಚೆಂದ..”
“ಅಲ್ಲ ಕಣೋ ಸುಮಂತ್ ನಾನು ನಿಂಗೆ ಅದನ್ನೆ ಹೇಳ್ತಾ ಇರೋದು. ನಿಂಗೆ ನೀನೇ ಯಾಕೆ ಈಥರ ರಿಸ್ಟ್ರಿಕ್ಷನ್ ಹಾಕ್ಕೊತೀಯಾ? ನೀನು ಮಾಡೋದನ್ನ ನಾನು ಮಾಡಬಾರದು ಅಂತ ಯಾಕೆ ಅಂದುಕೊಳ್ತೀಯಾ ಅದಕ್ಕು ಹೆರಿಗೆಗೂ ಯಾಕೆ ಹೋಲಿಕೆ ಮಾಡ್ತೀಯಾ? ನಿನ್ನ ಸಹಕಾರವಿಲ್ಲದೆ ನಾನು ಹೆರೋಕೆ ಸಾಧ್ಯವಿಲ್ಲ. ಹೋಗ್ಲಿ ಬಿಡು. ಮತ್ತ್ಯಾಕೆ ಆ ವಿಷ್ಯದಲ್ಲಿ ಜಗಳ?…”
ಒಂದರ್ಥದಲ್ಲಿ ಬದುಕಿನುದ್ದಕ್ಕು ಗೆದ್ದಿದ್ದು ಅವನೇ. ನನ್ನ ಎದುರು ಅವನು ಪ್ರತಿ ಸಲ ಸೋಲು ಒಪ್ಪಿಕೊಳ್ತಿದ್ದ. “ಆಯ್ತಮ್ಮ. ನಿನ್ನ ಒಪ್ಪಿಸೋಕೆ ಸಾಧ್ಯವಿಲ್ಲ. ನೀನೇ ಗೆದ್ದೆ ಬಿಡು. ಈವಾಗ ನಾನು ಏನು ಮಾಡಬೇಕು ಹೇಳು?” ಎನ್ನುತ್ತ ಪ್ರೀತಿಯ ಸೆಟೆಯಲ್ಲಿ ಸೆಳೆದುಬಿಡ್ತಿದ್ದ. ಸೋಲಬಾರದು ಅಂದುಕೊಂಡ ನಾನು ಅವನ ಪ್ರೀತಿಗೆ ಸೋತುಬಿಡ್ತಿದ್ದೆ.
“ನನ್ನ ಲೈಫ್‍ಲ್ಲಿ ಕನಿಷ್ಟ 4 ಹುಡುಗಿಯರನ್ನು ಅನುಭವಿಸಿದೀನಿ ಕಣೆ. ನಾನು ಇರೋದೇ ಹೀಗೆ. ಏನಿವಾಗ ನಿಂದು? ಬೇಕಿದ್ರೆ ಮದ್ವೆಯಾಗು ಇಲ್ಲ ಅಂದ್ರೆ ಬಿಡು. ನಾನು ನಿನ್ನ ಪ್ರೀತಿಸ್ತೀನಿ. ಕೇರ್ ಮಾಡ್ತೀನಿ ಅಷ್ಟೆ. ಹಾಗಂತ ನನ್ನ ಲೈಫು, ನನ್ನ ಟೇಸ್ಟ್ ಯಾವುದಕ್ಕು ಕಡಿವಾಣ ಹಾಕಿಕೊಳ್ಳಲ್ಲ. ನಾನು ನಿನ್ನ ಮೈ ಮುಟ್ಟೋ ಮೊದ್ಲೆ ಗೊತ್ತಿರಲಿಲ್ವಾ ನಾನು ಹೀಗೆ ಅಂತ? ಮತ್ತ್ಯಾಕೆ ನೀನು ನನ್ನ ಲವ್ ಮಾಡಿದೆ? ಮತ್ತ್ಯಾಕೆ ಹತ್ರ ಬಂದೆ? ಬಟ್ಟೆ ಕಳಚುವಾಗಲಾದ್ರು ನಿಂಗೆ ಜ್ಞಾನೋದಯ ಆಗ್ಲಿಲ್ಲ. ಮಿಕ್ಕಿದೆಲ್ಲ ವೇದಾಂತ ಮಾತಾಡ್ತೀಯ? ಲಾಯರ್ ಆಗಿ ಇದೊಂದು ಪಾಯಿಂಟ್ ನಿಂಗೆ ಹೊಳೆಯಲಿಲ್ವಾ?”
***
ಸಣ್ಣಗೆ ಹುಟ್ಟಿ ಗೌರಮ್ಮನಂತೆ ಬೆಳೆದು ಮಹಾದಾಯಿಯಾಗಿ, ಅರ್ಧದಲ್ಲಿ ಸೀರೆ ಬದಲಿಸಿ ಮಾಡರ್ನ್ ಜಗತ್ತಿಗೆ ಮೈಕೊಡವಿ, ಹೃದಯ ಬಿಚ್ಚಿ ಮಾಂಡೋವಿಯಾಗಿ ಹರಿದ ಆಕೆಯೀಗ ಅರಬ್ಬಿ ಸಮುದ್ರ ಸೇರುವ ತುದಿಗೆ ಬಂದು ನಿಂತಿದ್ದೇನೆ. ಅವಳು ತನ್ನನ್ನು ತಾನು ಮರೆತು ಲೀನವಾಗುವ ಹೊತ್ತು. ಅದೆಷ್ಟು ವಿಶಾಲವಾಗಿ ಮೈಚಾಚಿಕೊಂಡಿದ್ದಾಳೆಂದರೆ, ಅರಬ್ಬಿ ಸಮುದ್ರದ ತುದಿ ಯಾವುದು? ಮಾಂಡೋವಿಯ ತುದಿ ಯಾವುದು ತಿಳಿಯುತ್ತಿಲ್ಲ. ಇಬ್ಬರು ಒಬ್ಬರನ್ನೊಬ್ಬರು ಸೇರಿ ಬಿಟ್ಟಿದ್ದಾರೆ. ಅದೇ ಅಲ್ವಾ ಬದುಕಿನ ಧ್ಯಾನಸ್ಥ ಸ್ಥಿತಿ. ನಮ್ಮನ್ನು ನಾವು ಮರೆತು, ನಮಗೆ ನಾವು ಯಾರೆಂದು ಗೊತ್ತಿಲ್ಲದ ಸ್ಥಿತಿ.
ಅದ್ಯಾಕೊ ಬದುಕಲ್ಲಿ ಮೈಕೊಡವಿ ಎಳಬೇಕು ಅನ್ನಿಸ್ತು. “ಅದೆಷ್ಟು ದಿನ ಅಂತ ಹೀಗೆ ಗೌರಮ್ಮ ಥರ ಕುಳಿತಿರುತ್ತೀಯಾ? ಬಾರೆ ಸಾಕು. ನಾವು ಕಂಡಿದೀವಿ ಈಥರದವರನ್ನು. ಹೀಗೆ ಕುಳಿತವರ್ಯಾರು ಬದುಕಿನಲ್ಲಿ ಉದ್ದಾರ ಆಗಲಿಲ್ಲ. ಉರಿಯೋ ವಯಸ್ಸಲ್ಲಿ ಉರಿದು ಎಂಜಾಯ್ ಮಾಡಬೇಕು. ಆಮೇಲೆ ಗಂಡ, ಸಂಸಾರ ಎಲ್ಲ ಇದ್ದಿದ್ದೆ” ಎನ್ನುವ ಗೆಳತಿಯರ ಮಾತು ಕಿವಿಗೆ ಕುಕ್ಕು ತೊಡಗಿತು.
ಕಂಡ-ಕಂಡ ಹುಡುಗಿಯರನ್ನ ಆಟ ಆಡಿಸಿ ಬುಟ್ಟಿಗೆ ಹಾಕಿಕೊಳ್ಳೊ ಸುಮಂತನ್ನ ಆಟ ಆಡಿಸಬೇಕು ಅಂತ ಹಠಕ್ಕೆ ಬಿದ್ದೆ. ಬಲವಂತವಾಗಿ ಬದುಕಿಗೆ ಹಾಕಿಕೊಂಡಿದ್ದ ಎಲ್ಲ ಚೌಕಟ್ಟುಗಳನ್ನು ಕಳಚಿಕೊಂಡೆ. ಅವನ ಜೊತೆ ರೇಸಿಗೆ ಬಿದ್ದೆ. ಅಷ್ಟೆ, ಮುಗೀತು. ಅವನ್ನ ಓವರ್ ಟೇಕ್ ಮಾಡೋ ಭರದಲ್ಲಿ ನನಗೆ ಗೊತ್ತಿಲ್ಲದ್ದಂತೆ ಬದುಕಿನಲ್ಲಿ ಯೂಟರ್ನ್ ತೆಗೆದುಕೊಳ್ಳಲಾಗದಷ್ಟು ದೂರ ಸಾಗಿ ಬಂದಿದ್ದೆ.
***
ಡೈಮಂಡ್, ಇಸ್ಪೀಟು, ಆಟೀನು, ಕಳವರ…ಕ್ಯಾಸಿನೋದಲ್ಲಿ ಕುಳಿತವನಿಗೆ ಹಡಗಿನಾಚೆಯ ಮಾಂಡೋವಿ ಆಟ ಕಾಣುಸುತ್ತಿಲ್ಲ. ಪಕ್ಕದ ಹುಡುಗಿ ಆಗಾಗ ಡ್ರಿಂಕ್ಸ್ ಸರ್ ಗ್ಲಾಸ್‍ಗೆ ಸುರಿಯುತ್ತಿದ್ದಾಳೆ. ಆಡಿ, ನೀವಿನ್ನು ಆಟ ಆಡಿ. ಕಳೆದುಕೊಂಡ ದುಡ್ಡು ಮತ್ತೆ ಬರುತ್ತೆ ಅಂತ ಚಿಯರ್ ಮಾಡುತ್ತಿದ್ದಾಳೆ. “ಸಾಕಪ್ಪ ಒಂದ್ಸಲ ಕಳೆದುಕೊಂಡ ದುಡ್ಡು ಮತ್ತೆ ಬಂತು” ಎಂದು ಒಂದಷ್ಟು ದುಡ್ಡು ಗೆದ್ದವ ಹೊರಡಲು ರೆಡಿಯಾದ್ರೆ, ಆಕೆ ಬಿಡುತ್ತಿಲ್ಲ. ನನ್ನ ಜೊತೆಯೂ ಸ್ವಲ್ಪ ಆಟವಾಡಲ್ವಾ ಎಂದು ಕೈ ಚಾಚುತ್ತಿದ್ದಾಳೆ. ಈತನಿಗೆ ಮತ್ತೆ ಕಳೆದು ಹೋಗಬಹುದೆಂಬ ಭಯ. ಎಷ್ಟಂದ್ರು ಜೂಜಾಟವದು. ಪಾಂಡವರು ಸರ್ವಸ್ವವನ್ನು ಕಳೆದುಕೊಂಡ ಆಟವದು. ಸೌಂದರ್ಯ ಸಮರದಲ್ಲಿ ಸೋತವನೆ ಅಮರ…
ಅದೆಷ್ಟು ವಿಚಿತ್ರವಾಗಿದೆ ಬದುಕಿನ ಎರಡು ತೀರಗಳು. ಘಟ್ಟದ ಮೇಲಿನ ಮಹಾದಾಯಿ ಕೆಳಗಿಳಿಯುತ್ತಿದ್ದಂತೆ ಮಾಂಡೋವಿ. ನಿಜ ಮಹಾದಾಯಿಗಿಂತ ಮಾಂಡೋವಿ ಸಖತ್ ಥ್ರಿಲ್ಲಿಂಗ್. ಆದ್ರೆ ಅದೆಷ್ಟು ದಿನ? ವಾರಾಂತ್ಯದ ರಜ ಕಳೆಯುವ 2-4 ದಿನ. ನಂತರ ಮತ್ತದೆ ಬದುಕು, ಮತ್ತದೆ ಜಗತ್ತು. ಇದೆಲ್ಲ “ಒಂಥರ ರಿಚಾರ್ಜ್ ಪಾಯಿಂಟ್ ಥರ ಕಣೆ…” ಅವನ ಮಾತು ನೆನಪಾಗುತ್ತಿದೆ.
ಬದಲಾದೆ. ಯಾರಿಗಾಗಿ, ಯಾಕಾಗಿ ಬದ್ಲಾದೆ ಅಂದ್ರೆ ಉತ್ತರವಿಲ್ಲ. ಹಾಗಂತ ಬದ್ಲಾಗಿದ್ದಕ್ಕೆ ಬೇಸರವೂ ಇಲ್ಲ. ಯಾರೂ ಊಹಿಸದ ಹಾಗೆ ಬದ್ಲಾಗಿಬಿಟ್ಟೆ. ಒಂಥರ ಘಟ್ಟ ಇಳಿದ ಮಹಾದಾಯಿಯಂತೆ. ಲೈಫ್‍ಸ್ಟೈಲ್ ಬದ್ಲಾಯ್ತು. ಮೈ-ಮನಗಳೆಲ್ಲ ಬದ್ಲಾಯ್ತು. ಸುಮಂತ್ ಮಾಡಿದ್ದೆಲ್ಲ ಸರಿ. ಅದು ಅವನ ಆಯ್ಕೆ. ಅವನ ದಾರಿ ಎಂಬಷ್ಟರ ಮಟ್ಟಿಗೆ ಬದ್ಲಾಗಿಬಿಟ್ಟೆ.
ಆದ್ರು ಕೊನೆಗೆ ಉಳಿದ್ದಿದ್ದು ಅನಾಥ ಭಾವ ಮಾತ್ರ. ಯಾರು ಎಷ್ಟು ದಿನ ಅಂತ ಬದುಕಿನಲ್ಲಿ ಜೊತೆಗಿರುತ್ತಾರೆ? ಎಲ್ಲ ಒಂದಷ್ಟು ದಿನ ಬಂದು ಹೋಗುವ ಆಗುಂತಕರು ಅಷ್ಟೆ. ನಿನ್ನೆ ಜೊತೆಗಿದ್ದ ಗೆಳೆಯ, ಗೆಳತಿ ನಾಳೆ ಹಾಗೆ ಇರ್ತಾರೆ ಅನ್ನೋಕ್ಕೆ ಆಗಲ್ಲ. ಬೇರೆಯವರ ಕಥೆ ಹಾಳಾಗ್ಲಿ, ಮೊನ್ನೆ ಹಾಗಿದ್ದ ನಾನು ಇವತ್ತು ಹೇಗಾದೆ? ನಾಳೆ ಹೇಗಿರುತ್ತೇನೆ? ನಂಗೆ ಗೊತ್ತಿಲ್ಲ.
ಈ ಬದುಕಿನ ಅರ್ಥವೇನು? ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಅದೇ ಒಂಟಿತನ ಕಾಡ್ತಾ ಇದೆ. ಕೆಲವು ಸಲ ಹಾಗೆ. ಎಲ್ಲ ಜೊತೆಗಿದ್ರು ನಾವು ಒಂಟಿ ಅನ್ನಿಸಲು ಶುರುವಾಗಿ ಬಿಡುತ್ತೆ. ನಮ್ಮ ಸುತ್ತ ಯಾರಿಲ್ಲ ಅನ್ನಿಸುತ್ತೆ. ಇದ್ರು ಅವ್ರೆಲ್ಲ ಎಷ್ಟು ದಿನ ಇರ್ತಾರೆ ಅನ್ನಿಸುತ್ತೆ. ಯಾಕಂದ್ರೆ ನಾವು ಒಂಟಿಯಾಗಿ ಬಂದಿರೋದು. ಹೋಗೋದು ಒಂಟಿಯಾಗಿಯೇ ಅಲ್ವಾ?
***
12 ದಿನಗಳ ಆಸ್ಪತ್ರೆ ವಾಸ ಬದುಕನ್ನು ಸಾಕಾಗಿಸಿತ್ತು. ಆದಾಗ್ಯೂ ಅವನ್ನ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕೂಡಿಟ್ಟ 6 ಲಕ್ಷ ಕಳೆದುಕೊಂಡೆ ಅಷ್ಟೆ.
ಹೇಳಿದ್ನಲ್ಲ ಅವನ್ನ ಓವರ್ ಟೇಕ್ ಮಾಡೋ ಭರದಲ್ಲಿ ನಾನು ನನ್ನ ದಾರಿಯತ್ತ ತಿರುಗಿ ನೋಡಲಾಗದಷ್ಟು ದೂರ ಸಾಗಿ ಬಂದಿದ್ದೆ. ಅವನ ನನ್ನ ಪಟಾಯಿಸಿದ್ದ. ಪುಷ್ಪ ಅವನ ಜೊತೆಗಿನ ರಾತ್ರಿಗಳನ್ನು ಹಂಚಿಕೊಳ್ಳುವಾಗ ಕೇಳಲು ಅಹಸ್ಯವೆನಿಸುತ್ತಿತ್ತು. ಆದ್ರೆ ನಾನು ಅವನ ಬಲೆಗೆ ಬಿದ್ದಿದ್ದೆ. ಅದೇ ನನಗೆ ಅರ್ಥವಾಗದ ಪ್ರಶ್ನೆ. ಹೆಣ್ಣು-ಗಂಡಿಗೆ ವ್ಯತ್ಯಾಸವಿಲ್ಲ ಎಂಬಷ್ಟು ಗಟ್ಟಿಗಿತ್ತಿ ನಾನು. ಹೆಣ್ಣು ಭೋಗದ ಸರಕಲ್ಲ ಎಂಬ ಥಿಯೆರಿ ನಂದು. ಆದ್ರೆ ನಂಗೆ ತದ್ವಿರುದ್ಧವಾಗಿ ಯೋಚಿಸುವವನ ಜೊತೆ ಪ್ರೀತಿ! ಅವನ ಪ್ರೀತಿಗೆ ಮರುಳಾಗಿದ್ದೆ. ಅದಕ್ಕೆ ಇರಬೇಕು ಪ್ರೀತಿ ಕುರುಡು ಎನ್ನುವುದು.
‘ಪ್ರೀತಿಗೂ ಸೆಕ್ಸ್‍ಗು ಸಂಬಂಧವಿಲ್ಲ. ಅದೊಂದು ಬದುಕಿನ ಬೇರೆಯದೆ ಸ್ಥಿತಿ’ ಎನ್ನುತ್ತಿದ್ದ. ನಿಜ. ಮದ್ವೆಯಾದ ಮೇಲೂ ಆತ 3-4 ಹುಡುಗಿಯರನ್ನು ಅನುಭವಿಸಿದ್ದ. ಅದನ್ನು ನನ್ನ ಬಳಿ ಹೇಳಿದ್ದ ಕೂಡ. ಆದ್ರು ನನ್ನ ಮೇಲೆ ಒಂಚೂರು ಪ್ರೀತಿ ಕಡಿಮೆಯಾಗಲಿಲ್ಲ. ಮೊದ್ಲು ನಂಗೆ ಸ್ವಲ್ಪ ಪೊಸೆಸೀವ್‍ನೆಸ್, ನನ್ನಿಂದ ಅವ ದೂರವಾಗಬಹುದೆಂಬ ಭಯ ಕಾಡಿತ್ತು. ಆಮೇಲೆ ಅನ್ನಿಸಿದ್ದು ಅವಳ ಜೊತೆ 10 ನಿಮಿಷ ಸುಖಿಸಬಹುದು. ಆದ್ರೆ ಕೊನೆಗೆ ಬದುಕು ನನ್ನೊಂದಿಗೆ ಅಲ್ವಾ? ಅಂತ. ಸರಿ ಅದು ನಿನ್ನ ಟೇಸ್ಟು ಅಂದೆ.
ನಂತ್ರ ಅವನಿಗು ಅರಿವಾಗಿರಬೇಕು. ಬೇರೆ ಹುಡುಗಿಯರ ಸಹವಾಸ ಬಿಟ್ಟಿದ್ದ. ನನ್ನನ್ನು ಪ್ರೀತಿಸಲು, ಪೂಜಿಸಲು ಶುರು ಮಾಡಿದ್ದ.
ಅಪ್ಪನ್ನ ಕಳೆದುಕೊಂಡೆ. ಅಮ್ಮನು ಜಾಸ್ತಿ ದಿನ ಬದುಕಲಿಲ್ಲ. ಬದುಕು ಅನಾಥವೆನಿಸಲು ಶುರುವಾಯ್ತು. ಬದುಕಿನಲ್ಲಿ ಏನಿದೆ ಎಂಬ ಪ್ರಶ್ನೆ ಶುರುವಾಗಿದ್ದು ಅಪ್ಪ ಸತ್ತ ನಂತ್ರ. ಬದುಕಿನ ತುದಿ ಯಾವುದು? ನಾನು ಏಕೆ ಬದುಕ್ತಾ ಇದೀನಿ? ನಾನು ಒಂದಿನ ಸಾಯ್ತೀನಿ. ಯಾವತ್ತು ಸಾಯಬಹುದು? ಹೇಗೆ ಸಾಯಬಹುದು ಅಂತೆಲ್ಲ ಯೋಚಿಸತೊಡಗಿದೆ. ಆಗೆಲ್ಲ ಅವನ ಪ್ರೀತಿ ನನ್ನನ್ನು ಬೇರೆ ಜಗತ್ತಿಗೆ ಕರೆದುಕೊಂಡು ಹೋಗುತ್ತಿತ್ತು.
ಬದುಕಿನ ಮಧ್ಯದಲ್ಲಿ ಇವ ಕೂಡ ನನ್ನ ಬಿಟ್ಟು ಹೋಗಬಹುದೆಂಬ ಕನಸು ಕಂಡಿರಲಿಲ್ಲ. ಊರಿಗೆ ಬಂದಾಗ ಒಂದು ದಿನ ಹಾವು ಕಚ್ಚಿಬಿಡ್ತು ಅಷ್ಟೆ. ಆಮೇಲೆ ಸುಮಾರು 12 ದಿನ ಆಸ್ಪತ್ರೆಲಿ. ಸಾಯುವ ಮೊದ್ಲು ಆತ ಹೇಳಿದ ಮಾತು: “ನನ್ನ ಕ್ಷಮಿಸಿ ಬಿಡು. ಸಂತೋಷದ ಅಮಲಿನಲ್ಲಿ ಸುಮಾರಷ್ಟು ಜನರ ಭಾವನೆಗಳ ಜೊತೆ ಆಟವಾಡಿಬಿಟ್ಟೆ” ಅಷ್ಟು ಹೇಳಿ ಮಾತು ಮುಗಿಸಿದ.
***
ನಿಜ, ಇಲ್ಲಿದ್ದವರೆಲ್ಲ ಖುಷಿಯ ಉತ್ತುಂಗದಲ್ಲಿದ್ದಾರೆ. ಅಮಲಿನಲ್ಲಿದ್ದಾರೆ. ಒಂದು ರೀತಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಾರೆ. ಯಾರಿಗೂ ಯಾವುದರ ಪರಿವಿಲ್ಲ. ಸುಖದ ಹಗಲು, ಸಂತೋಷದ ರಾತ್ರಿ, ಉನ್ಮಾದತೆ…ಬದುಕಿನ ಸುಖಕ್ಕೆ ಇದಕ್ಕಿಂತ ಹೆಚ್ಚಾಗಿ ಇನ್ನೇನು ಬೇಕು ಅಂತ ನಾನು ಇವರಂತೆ ಆಲೋಚಿಸಿದ್ದರೆ ಇರುವಷ್ಟು ದಿನ ಖುಷಿ-ಖುಷಿಯಾಗಿ ಇರಬಹುದಿತ್ತೇನೋ.
ಮತ್ತದೆ ಪ್ರಶ್ನೆ. ಸಮುದ್ರದೊಳಗೆ ಲೀನವಾದ ಮಾಂಡೋವಿ ಇನ್ನೆಷ್ಟು ದೂರ ಹರಿಯಬಹುದು? ಎಲ್ಲಿಗೆ ಹೋಗಿ ನಿಲ್ಲಬಹುದು ಅವಳ ಬದುಕಿನ ಪಯಣ? ಖಂಡಿತ ಗೊತ್ತಿಲ್ಲ. ಹಾಗೆ ಅರಬ್ಬಿ ಸಮುದ್ರವನ್ನು ಅರಸಿಕೊಂಡು ಹೋದರು ಅವಳ ಅಂತ್ಯದ ಬಿಂದು ಸಿಗಲಿಕ್ಕಿಲ್ಲ. ನಮ್ಮೂರಿನಲ್ಲಿ ಹುಟ್ಟಿದಾಕೆ ಈ ಊರಲ್ಲಿ ಅಂತ್ಯವಾಗಿದ್ದು ಗೊತ್ತಿದೆ. ಹಾಗಂತ ಅದು ಅವಳ ಸಾವಲ್ಲ. ಈ ಆತ್ಮ ಮತ್ತು ದೇಹವೆಂಬ ಪರಿಕಲ್ಪನೆಗೂ ಇದಕ್ಕು ಸಂಬಂಧವಿರಬಹುದಾ? ಬದುಕು ಪೂರ್ವ ನಿರ್ಧಾರಿತ ಎಂಬುದು, ಈ ಜಾತಕ-ಭವಿಷ್ಯವೆಂಬ ಪರಿಕಲ್ಪನೆಗಳೆಲ್ಲ ನಿಜವಿರಬಹುದಾ? ಇಲ್ಲ ಅಂದ್ರೆ ದ್ವೇಷಿಸುತ್ತಿದ್ದ ಅವನೇಕೆ ನನ್ನ ಬದುಕಿನ ಭಾಗವಾಗುತ್ತಿದ್ದ? ಸರ್ವವನ್ನು ವ್ಯಾಪಿಸಿಕೊಂಡವನು ಅದೇಕೆ ಹಾಗೆ ಅರ್ಧದಲ್ಲಿ ಬಿಟ್ಟು ಹೋಗುತ್ತಿದ್ದ? ಉತ್ತರ ಕಾಣುತ್ತಿಲ್ಲ.
ದೇಹ ಶಾಶ್ವತವಲ್ಲ. ಆತ್ಮವಾಗಿ ಮಾಂಡೋವಿ ಅರಬ್ಬಿ ಸಮುದ್ರ ಸೇರಿದ್ದಾಳೆ. ನಾನು ಅವಳಂತೆ ಹೊರಟಿದ್ದೇನೆ ಆತ್ಮಾವಲೋಕನ ಮಾಡಿಕೊಳ್ಳುತ್ತ. ಎಲ್ಲಿಗೆ ಹೋಗಿ ಸೇರುವನೆಂಬ ಅರಿವಿಲ್ಲ…ಮತ್ತೆ ಗೊತ್ತಿಲ್ಲದಂತೆ ಅವನ ಮಡಿಲನ್ನೇ ಸೇರಬಹುದೇ?

kannada-news-channel

“ಇವನು ಪತ್ರಕರ್ತ. ಇವನ ಎದ್ರು ಹುಷಾರಾಗಿ ಮಾತಾಡಿ. ನಿಮ್ಮ ಬಗ್ಗೆ ಬರೆದು ಬಿಡ್ತಾನೆ” ಹಾಗಂತ ಯಾರಾದ್ರು ಗೆಳೆಯರು ನನ್ನನ್ನು ಇಂಟ್ರಡ್ಯೂಸ್‌ ಮಾಡುವಾಗ, “ನಿಮಗೇನು ಬಿಡಿ ಪತ್ರಕರ್ತರು. ಟ್ರಾಫಿಕ್‌ ಪೋಲಿಸ್ರು ಹಿಡಿಯಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಲಂಚ ಕೇಳಲ್ಲ. ಎಲ್ಲ ಕಡೆ ನಿಮಗೆ ಫ್ರೀ” ಎಂದು ಅಣಕಿಸುವಾಗ, ಅದೆಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಸುದ್ದಿಯಿಂದಾಗಿ, ಘಟನೆಯಿಂದಾಗಿ ಮಾಧ್ಯಮಗಳು, ಪತ್ರಕರ್ತರು ಹಿಗ್ಗಾಮುಗ್ಗ ಉಗಿಸಿಕೊಳ್ಳುವಾಗ ಒಂದು ಬಗೆಯಲ್ಲಿ ಇರಿಟೇಟ್‌ ಆಗುತ್ತಿರುತ್ತದೆ.

ಪ್ರೆಸ್ಟಿಟ್ಯೂಟ್‌ ಎಂದು ಹ್ಯಾಷ್‌ಟ್ಯಾಗ್‌ ಹಾಕಿ ಉಗಿಸಿಕೊಳ್ಳುವುದು ಮಾಧ್ಯಮಗಳಿಗೆ ಮಾಮೂಲಾಗಿದೆ. ಸಾಮಾನ್ಯನಿಗೆ ಪತ್ರಕರ್ತನ ಇತಿಮಿತಿಗಳು ಗೊತ್ತಿಲ್ಲದೆ ಇರುವುದು ಅಥವಾ ಪತ್ರಿಕೋದ್ಯಮದ ಕುರಿತಾಗಿ ಇರುವ ಭ್ರಮೆಗಳು ಇದಕ್ಕೆಲ್ಲ ಕಾರಣ. ಓರ್ವ ರಾಧಾ ಹಿರೇಗೌಡರನ್ನೋ, ಅರುಣ್‌ ಬಡಿಗೇರ್‌ ಅವರನ್ನೋ ಅಥವಾ ಇನ್ನು ಯಾವುದೇ ನಿರೂಪಕ/ನಿರೂಪಕಿ, ಪತ್ರಕರ್ತರನ್ನು ಏಕವಚನದಲ್ಲಿ, ವೈಯಕ್ತಿಕವಾಗಿ ಬೈಯ್ಯವ ಮೊದಲು ನೀವು ತಿಳಿದುಕೊಳ್ಳಬೇಕಾದ ಅಂಶಗಳು ಸಾಕಷ್ಟಿವೆ.

ಈ ಹಿಂದೆ “ಉಗಳಲು ಆಗದೆ, ನುಂಗಲು ಆಗದೆ” ಎಂದು ಒಂದು ಲೇಖನ ಬರೆದಿದ್ದೆ. ಅದರ ದ್ವಿತೀಯಾರ್ಧವಿದು ಅಂದುಕೊಳ್ಳಿ. ಅಲ್ಲಿ ಹೇಳಿದ ಅಂಶಗಳನ್ನು ಮತ್ತೆ ರಿಪೀಟ್‌ ಮಾಡುವುದಿಲ್ಲ. ಸುದ್ದಿ ವಾಹಿನಿಗಳಿಗೆ ಹಿಗ್ಗಮುಗ್ಗ ಬೈಯ್ಯುತ್ತೀವಿ. ಖಂಡಿತ ಅತಿರೇಕದ ಕೆಲವಕ್ಕೆ ನಾನು ಸಾಕಷ್ಟು ಬೈದಿರುವೆ. ಪತ್ರಿಕೆ, ವಾಹಿನಿಗಳು ಒಂದು ಉದ್ಯಮ. ಒಂದು ಸುದ್ದಿ ವಾಹಿನಿ ವರ್ಷಪೂರ್ತಿ ಏನು ತೊಡಕಿಲ್ಲದೆ ಆರಾಮವಾಗಿ ರನ್‌ ಆಗಲು ಕನಿಷ್ಟ ೨೨-೨೫ ಕೋಟಿ ರೂ. ಅಗತ್ಯವಿದೆ. ಇಷ್ಟು ಬಂಡವಾಳ ಹಾಕಿ ವಾಹಿನಿ ನಡೆಸುವ ಆಡಳಿತ ಮಂಡಳಿ ಇದನ್ನು ವಾಪಾಸ್‌ ತೆಗೆಯುವ ವಿಧಾನವನ್ನು ಹುಡುಕಿಕೊಳ್ಳಲೇ ಬೇಕು.

ಖಂಡಿತ ಒಂದು ವಾಹಿನಿಯನ್ನೋ, ಪೇಪರನ್ನೋ ನಂಬರ್‌.೧ ಮಾಡುವುದು ಇವತ್ತಿಗೆ ಸವಾಲೇ ಅಲ್ಲ. ಅದನ್ನು ಕಾಪಾಡಿಕೊಂಡು ಹೋಗುವುದು ಹಾಗೂ ಅದಕ್ಕಿಂತ ಮುಖ್ಯವಾಗಿ ಹಾಕಿದ ಬಂಡವಾಳಕ್ಕೆ ಉತ್ತರವಾಗಿ ಆದಾಯ ತರುವುದು ಅತಿ ದೊಡ್ಡ ಸವಾಲು. ನಾನು ೨೦೦೭ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಪತ್ರಿಕೋದ್ಯಮ ಜಗತ್ತಿನ ಸ್ವರೂಪ ಸಂಪೂರ್ಣ ಭಿನ್ನವಾಗಿತ್ತು. ಮಾಮೂಲಿ ಪತ್ರಕರ್ತನಿಗೆ ೭ ಸಾವಿರ ರೂ ಸಂಬಳ ಸಿಕ್ಕರೆ ಹಬ್ಬ. ಹಿರಿಯ /ಮುಖ್ಯ ಉಪ ಸಂಪಾದಕರಿಗೆ ೨೫ ಸಾವಿರ ರೂ. ಸಂಬಳವಂತೆ ಅಂದ್ರೆ ನಾವೆಲ್ಲ ಬೆರಗಿನಿಂದ ನೋಡ್ತಾ ಇದ್ವಿ. ವರ್ಷಕ್ಕೊಮ್ಮೆ ಯಾವುದೋ ಸುದ್ದಿಮನೆಯ ಪತ್ರಕರ್ತ ಇನ್ನೊಂದು ಸುದ್ದಿ ಮನೆಗೆ ಜಂಪ್‌ ಆದ ಅಂದ್ರೆ ಅದು ದೊಡ್ಡ ಸುದ್ದಿ.

೨೦೧೦-೧೧ರ ಹೊತ್ತಿಗೆ ಈ ಚಿತ್ರಣವೇ ಬದಲಾಗಿ ಹೋಯ್ತು. ಕನ್ನಡದಲ್ಲಿ ಸಾಕಷ್ಟು ಸುದ್ದಿ ವಾಹಿನಿಗಳು ಬಂದವು. ಹೊಸ ಪತ್ರಿಕೆಗಳು ಹುಟ್ಟಿದವು. ಪೈಪೋಟಿ ಎಂಬುದು ತಾರರಕ್ಕೇರಿತು. ಒಳ್ಳೆ ಪತ್ರಕರ್ತನ್ನ ಉಳಿಸಿಕೊಳ್ಳುವುದು ಎಂಬುದೆ ಆಡಳಿತ ಮಂಡಳಿಗೆ ಸವಾಲಾಯ್ತು. ಹಲವು ಸುದ್ದಿ ಮನೆಗಳು ಒಡೆದು, ಚೂರಾಗಿ ಬೇರೆ ಬೇರೆ ಕಡೆ ವಲಸೆಹೋಯ್ತು. ೩೦-೪೦ ಸಾವಿರ ರೂ. ಅಂದ್ರು ಸಂಬಳವೇ ಅಲ್ಲ ಎಂಬ ಸ್ಥಿತಿ ತಲುಪಿ, ಪತ್ರಿಕೋದ್ಯಮ ಕೂಡ ದುಡಿಯುವವನ ಪಾಲಿಗೆ ಇನ್ನೊಂದು ಸಾಫ್ಟ್‌ವೇರ್‌ ಜಗತ್ತಾಗಿ ಪರಿವರ್ತನೆಗೊಂಡ ಹಂತಕ್ಕೆ ಬಂದು ನಿಂತಿದೆ. ಉದ್ಯೋಗ ಭದ್ರತೆ ಎಂಬುದು ಇವತ್ತು ಪತ್ರಿಕೋದ್ಯಮ ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸವಾಲು.

ದೊಡ್ಡ ಹೂಡಿಕೆಯ ಹಿಂದೆ ಬಂದಿದ್ದು ಪೈಪೋಟಿ. ವಿಷಯದಲ್ಲಿ ಅಲ್ಲ, ಗುಣಮಟ್ಟದಲ್ಲಿ ಅಲ್ಲ, ಬಿತ್ತರಿಸುವ ಸುದ್ದಿಯಲ್ಲೂ ಅಲ್ಲ. ಬದಲಾಗಿ ಆದಾಯ ಗಳಿಕೆಯಲ್ಲಿ. ಪ್ರತಿ ಸುದ್ದಿಮನೆಯೂ ಲಕ್ಸ್‌, ಲೈಫ್‌ ಬಾಯ್‌ ಸೋಪಿನಂತಾಯ್ತು. ಹಾರ್ಸ್‌ ಕಾಡೋಂ ಕಂಪನಿಯಾಯ್ತು. ನಮ್ಮ ಪ್ರಾಡಕ್ಟ್‌ ಮಾರಾಟ ಮಾಡಬೇಕು, ಇಲ್ಲ, ನಮ್ಮದು ಮಾರಾಟವಾಗಬೇಕು ಎಂಬ ಜಿದ್ದಿಗೆ ಆಡಳಿತ ಮಂಡಳಿಗಳು ಬಿದ್ದವು. ೨೨ ಕೋಟಿ ಹಾಕಿದವ. ಕನಿಷ್ಟ ೧೫ ಕೋಟಿಯನ್ನಾದರು ವಾಪಾಸ್‌ ತೆಗೆಯುವ ಆಲೋಚನೆಗೆ ಬಿದ್ದ. ಅದಕ್ಕಿರುವ ಮಾರ್ಗಗಳನ್ನು ಹುಡುಕಿ ಹೊರಟ. ಒಂದು ಕಾಂಗ್ರೆಸ್‌ ಪ್ರಣಾಳಿಕೆ, ಮತ್ತೊಂದು ಬಿಜೆಪಿ ಪ್ರಣಾಳಿಕೆ. ಯಾರು ದುಡ್ಡು ಕೊಡ್ತಾರೊ ಅವರ ಸರಹದ್ದಿನ ಮಾಧ್ಯಮಗಳು. ಸೋಪು ಮಾರುವವನಿಗೆ ಯಾರಾದ್ರೆ ಏನು? ಹಾಕಿದ ಬಂಡವಾಳ ಬಂದ್ರಾಯ್ತು!

ಪತ್ರಿಕೋದ್ಯಮದ ಮೌಲ್ಯ ಕಡಿಮೆಯಾಯ್ತು. ‘ನಿಮ್ಮವರು ಟ್ರಾಫಿಕ್‌ ಪೋಲಿಸ್ರಿಂದ ವಸೂಲಿ ಮಾಡ್ತಾರೆ. ನಾನ್ಯಾಕೆ ಸುಮ್ಮನೆ ಬಿಡಲಿ ನಿನ್ನ. ಕೊಡು ಮಗನೆ ೨೦೦ ರೂ. ಲಂಚ. ನೀನು ಪತ್ರಕರ್ತನಾದ್ರೆ ನನಗೇನು?” ಎಂದು ಯಾವ ಮೂಲಾಜು ಇಲ್ಲದೆ ಟ್ರಾಫಿಕ್‌ ಪೋಲಿಸ್‌ ಲಂಚ ತೆಗೆದುಕೊಳ್ಳಲು ಶುರುಮಾಡಿದ. ಮೇಲಿನವ ಹೇಳಿದ ಅಂದ್ರೆ ವರದಿಗೆ ಹೋದವನಿಗೆ ಕರುಣೆಯಿಲ್ಲದೆ ಹೊಡೆಯಲು ಅಡಿಯಿಟ್ಟ. ಪತ್ರಕರ್ತರ ಬಳಿ ಸರ್ಕಾರಿ ಅಧಿಕಾರಿಗಳು ಲಂಚ ಕೇಳುವುದಿಲ್ಲ. ಪತ್ರಕರ್ತರಿಗೆ ಎಲ್ಲ ಕೆಲಸವೂ ಉಚಿತವಾಗಿ ಆಗುತ್ತದೆ ಎಂಬುದು ನಿಮ್ಮ ಮೊದಲನೆ ಭ್ರಮೆ.

ನೀವ್ಯಾಕೆ ಆ ಸುದ್ದಿ ಅಷ್ಟು ಹಾಕ್ತೀರ? ಇದನ್ನು ಇಷ್ಟು ಹಾಕ್ತೀರಾ? ಸುದ್ದಿ ನೋಡುವಾಗ್ಲೆ ಗೊತ್ತಾಗುತ್ತೆ ಯಾರು ಈ ಸುದ್ದಿ ಹಾಕ್ಲಿಕ್ಕೆ ದುಡ್ಡು ಕೊಟ್ಟಿದಾರೆ? ಯಾರು ಆ ಸ್ಲಾಟು ಖರೀದಿ ಮಾಡಿದಾರೆ ಅಂತ! ನೀವು ಅದಕ್ಕಿಂತ ಜಾಸ್ತಿ ಕೊಟ್ಟರೆ ಖಂಡಿತ ನಿಮ್ಮ ಸುದ್ದಿಯನ್ನು ಅದರ ಮುಂದಿನ ಭಾಗದಲ್ಲೇ ಹಾಕುತ್ತಾರೆ! ಕಾಂಡೋಮು ಮಾರುವವನಿಗೆ ಗಿರಾಕಿ ಯಾರಾದ್ರೆ ಏನು ಅಲ್ವಾ?

ಇಲ್ಲಿ ಬಡವಾಗಿದ್ದು ಸಾಮಾನ್ಯ ಪತ್ರಕರ್ತ. “ನಮಗೆ ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತು. ಕೆಲಸ ಮಾಡುವ ಹಾಗಿದ್ರೆ ಮಾಡಿ. ಇಲ್ಲ ಅಂದ್ರೆ ರೈಟ್‌ ಹೇಳಿ. ರಿಕ್ಷಾ, ಲಾರಿ ಡ್ರೈವರ್‌ ಕೂರಿಸಿಕೊಂಡು ಪತ್ರಿಕೋದ್ಯಮ ಮಾಡಲು ಗೊತ್ತು’’ ಎನ್ನುತ್ತಾನೆ ಕಾಸು ಹಾಕಿದವ. ಆಗ ಸಂಬಳಕ್ಕೆ ದುಡಿಯುವವನು ಯಾರೇ ಆದರು ಮುಚ್ಚಿಕೊಂಡು ಸುಮ್ಮನಿರಬೇಕು. ಇಲ್ಲವಾದರೆ ರಾಜಿನಾಮೆ ಬಿಸಾಡಿ ಮನೆ ಕಡೆ ಮುಖ ಮಾಡಬೇಕು. ಇಲ್ಲಿ ಆಕೆ ರಾಧಾ ಹಿರೇಗೌಡರ್‌, ಈಕೆ ಇನ್ನೊಬ್ಬಳು. ಅವನು ಚಂದನ್‌ ಶರ್ಮಾ ಎಂಬುದು ಮುಖ್ಯವಾಗುವುದಿಲ್ಲ. ಬಿಟ್ಟ ಅರ್ಧಗಂಟೆಗೆ ಹೊಸ ಸಂಪಾದಕರನ್ನು ತಂದು ಕೂರಿಸುವ ಕಾಲವಿದು. ಇಲ್ಲಿ ಆಡಳಿತ ಮಂಡಳಿಗೆ ಯಾರು ಅನಿವಾರ್ಯವಲ್ಲ.

ಪರದೆ ಮೇಲೆ ಬರುವವರು, ಅಂಕಣ ಬರೆಯುವವರು ಮಾತ್ರ ಜನರ ಪಾಲಿಗೆ ಪತ್ರಕರ್ತರು. ಆದರೆ ಅವರ ಹೊರತಾಗಿ ದಿನನಿತ್ಯ ಒಂದು ಪತ್ರಿಕೆಯಲ್ಲಿ ೬೦-೧೦೦ ಜನ ಕೆಲಸ ಮಾಡುತ್ತಾರೆ. ಒಂದು ಸುದ್ದಿ ವಾಹಿನಿಯಲ್ಲಿ ೨೦೦-೩೦೦ಜನ ಕೆಲಸ ಮಾಡುತ್ತಾರೆ. ಅವರೆಲ್ಲರು ಪತ್ರಕರ್ತರೆ. ನೀವು ನ್ಯೂಸೂಳೆಗಳು ಎಂದು ಬೈದಿದ್ದು ಅವರಿಗು ಅನ್ವಯವಾಗುತ್ತದೆ ಮತ್ತು ಅವರಿಗೆ ತಾವು ಮಾಡುತ್ತಿರುವ ಕೆಲಸದ ಮೇಲೆ ಕೀಳರಿಮೆ ಹಾಗೂ ಬೇಸರ ಉಂಟು ಮಾಡುತ್ತದೆ.

ನಿನ್ನೆ ಗಲಭೆಯಲ್ಲಿ ವಾಹಿನಿಯ ವರದಿಗಾರರಿಗೆ ಹೊಡೆದರಂತೆ. ಈ ಹಿಂದೆಯೂ ಹಲವರು ಹೊಡೆತ ತಿಂದಿದ್ದಾರೆ. ಸುಮಾರಷ್ಟು ಜನ ‘ಸರಿಯಾಯ್ತು. ಹೊಡೆತ ಬೀಳಬೇಕಿತ್ತು’ ಎನ್ನುತ್ತಾರೆ. ‘ಮಾಧ್ಯಮದವರಿಗೆ ಬುದ್ಧಿ ಬರಬೇಕು ಅಂದ್ರೆ ಹೊಡೆತ ಬೀಳಬೇಕು’ ಅಂದವರಿದ್ದಾರೆ.  ಒನ್ಸ್‌ ಅಗೈನ್‌, ಅಲ್ಲಿ ವರದಿಗೆ ಹೋದವನು ತಿಂಗಳ ಸಂಬಳಕ್ಕೆ ದುಡಿಯುವ ಪತ್ರಕರ್ತ ಹೊರತು ವಾಹಿನಿಯನ್ನು ನಿಯಂತ್ರಿಸುವವನು ಅಲ್ಲ. ಅವನು ವರದಿ ಮಾಡಲಾರೆ ಎಂದರೆ, ಅಲ್ಲಿ ಚಿತ್ರಗಳನ್ನು ಶೂಟ್‌ ಮಾಡಿ ಕ್ಯಾಸೆಟ್‌ ಕೊಡದಿದ್ದರೆ, ಆ ಸುದ್ದಿಯನ್ನು ಮಿಸ್‌ ಮಾಡಿದರೆ, ಖಂಡಿತ ಆ ಕ್ಷಣದಲ್ಲಿ ಅವನಿಗೆ ರಿಪ್ಲೇಸ್‌ಮೆಂಟ್‌ನ್ನು ವಾಹಿನಿ ತರುತ್ತದೆ. ಇಷ್ಟಾಗಿಯೂ ಕರ್ತವ್ಯ ನಿಭಾಯಿಸಿ, ಹೊಡೆತ ತಿಂದು ಕೊನೆಗೆ ಇತರರಿಂದ ಛೀ, ಥೂ ಅನ್ನಿಸಿಕೊಳ್ಳುವ ಭಾಗ್ಯ ಬಹುಶಃ ಪತ್ರಕರ್ತರಿಗೆ ಮಾತ್ರ!

ಸ್ಪರ್ಧೆ ಹೆಚ್ಚಾಗಿದೆ. ಇದೊಂದು ಉದ್ಯಮವಾಗಿದೆ. ಇಲ್ಲಿ ನಾವೆಲ್ಲ ದಿನಗೂಲಿ ನೌಕರರು. ಹಾಗಂತ ಎಲ್ಲ ಪತ್ರಕರ್ತರ ಬಾಳು ಹಸನಾಗಿದೆಯೆ ಎಂದರೆ, ಖಂಡಿತ ಕನ್ನಡದಲ್ಲಿ ಅಂಥ ಪರಿಸ್ಥಿತಿ ಇಲ್ಲ. ಇಷ್ಟೆಲ್ಲ ದುಡಿದು, ಹೊಡೆತ ತಿಂದು, ತರಕಾರಿ ಮಾರುವವನಿಗಿಂತ ಕಡಿಮೆ ಸಂಬಳ ಪಡೆಯುವವರು ಇದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋದರೆ ೩-೪ತಿಂಗಳಿಗೊಮ್ಮೆ ಸಂಬಳ ಕೊಡುವ ಸಂಸ್ಥೆಗಳಿವೆ. ಎಷ್ಟೆ ಕಂಪನಿಗಳು ಹುಟ್ಟಿಕೊಂಡರು ಪತ್ರಿಕೋದ್ಯಮ ಎಂಬ ವ್ಯಾಪ್ತಿಯೆ ಚಿಕ್ಕದು. ಇಲ್ಲಿ ಅವಕಾಶ ಎಂಬುದು ತೀರ ಕಡಿಮೆ. ಹೀಗಾಗಿ ಇದ್ದ ಜಾಗದಲ್ಲಿ ಎಲ್ಲವನ್ನು ಸಹಿಸಿಕೊಂಡು ಇರಬೇಕು. ಇಲ್ಲವಾದಲ್ಲಿ ಈ ವೃತ್ತಿ ಬಿಟ್ಟು ಬೇರೆಡೆಗೆ ಮುಖ ಮಾಡಬೇಕು. ಈಗಾಗ್ಲೆ ಸಾಕಷ್ಟು ಜನ ಆ ಕೆಲಸ ಮಾಡುತ್ತಿದ್ದಾರೆ. ಇನ್ನು ಒಂದಷ್ಟು ಜನ ನಂದಿನಿ ಬೂತ್‌, ಕನ್ನಡಕ, ದಿನಸಿ ಅಂಗಡಿ ಇಟ್ಟುಕೊಂಡು ಒಂದು ಶಿಫ್ಟ್‌ನಲ್ಲಿ ಪತ್ರಿಕೋದ್ಯಮ ಕೆಲಸ ಮುಗಿಸಿ ನಂತ್ರ ಅಲ್ಲಿಗೆ ಹೋಗಿ ದುಡಿಯುತ್ತಾರೆ. ವಿಡಿಯೊ ಎಡಿಟರ್‌ಗಳಂತು ಒಂದು ಶಿಫ್ಟ್‌ ಮುಗಿಯುತ್ತಿದ್ದಂತೆ ಇನ್ನೆಲ್ಲೂ ಎಡಿಟಿಂಗ್‌ ಕೆಲಸ  ಒಪ್ಪಿಕೊಂಡು ತಮ್ಮ ಸಂಪಾದನೆ ಹಾದಿ ನೋಡಿಕೊಳ್ಳುತ್ತಾರೆ. ಅನಿವಾರ್ಯವಾಗಿ ಇರುವವರು ಅಥವಾ ಇಲ್ಲಿಯೆ ಇದ್ದು ಏನೋ ಮಾಡಬೇಕೆಂದು ತೀರ ಹಂಬಲವುಳ್ಳವರು ಮಾತ್ರ ಎಲ್ಲವನ್ನು ಸಹಿಸಿಕೊಂಡು ಇದ್ದಾರೆ.

ಖಂಡಿತ ಇದಕ್ಕೆ ತದ್ವಿರುದ್ಧವಾದ ಪತ್ರಕರ್ತರು ಇಲ್ಲ ಎಂದೆಲ್ಲ. ಹಫ್ತಾ ವಸೂಲಿ ಮಾಡುವವರು, ಪತ್ರಕರ್ತ ಎಂಬ ಕಾರ್ಡ್‌ ಒಂದಿದ್ದರೆ ಸಾಕು ಎನ್ನುವವರು ಇದ್ದಾರೆ. ಊರಿದ್ದಲ್ಲಿ ಹೊಲಸು ಇರುತ್ತೆ ಎಂಬಂತೆ, ಯಾವುದೇ ವೃತ್ತಿಗೆ ಹೋದರು ಅದು ಸಹಜ. ಅದ್ರಿಂದ ಪತ್ರಿಕೋದ್ಯಮ ಕೂಡ ಹೊರತಲ್ಲ. ಹಾಗಂತ ನೀವು ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು, ಎಲ್ಲರನ್ನೂ ಸೂಳೆಗಳು ಎಂದು ಸಂಭೋಧಿಸುವುದು, ಮಾರ್ಕೆಟಿನಲ್ಲೋ ಮೆಜೆಸ್ಟಿಕ್ಕಿನಲ್ಲೋ ಸೂಳೆಗಳ ಪಕ್ಕದಲ್ಲಿ ನಿಂತ ಹೆಂಗಸರೆನ್ನಲ್ಲ ಸೂಳೆಗಳೆಂದು ಸಂಬೋಧಿದಂತಾಗುತ್ತದೆ ಅಷ್ಟೆ!!!

 

 

 

 

ಸೆಲ್ಫಿಯಾಚೆಯ ನಗ್ನತೆ!

2015-01-21-povertyphilippines2

ಇತ್ತೀಚಿನ ದಿನದಲ್ಲಿ ಈ ಫೇಸ್‌ಬುಕ್‌ಗೆ ಬರೋದಕ್ಕೆ ಭಯ ಆಗ್ತಿದೆ. ಬೇನಾಮಿ ಹೆಸರಿನಲ್ಲಿ ಬರುವ ರಿಕ್ವೆಸ್ಟ್‌ಗಳ ಹಾವಳಿ ಒಂದು ಕಡೆಯಾದ್ರೆ, ಇನ್‌ಬಾಕ್ಸ್‌ಗೆ ನೂರಾರು ಸಂದೇಶಗಳು. ಒಂದೆಡೆ ಸೆಕ್ಸ್‌ಚಾಟ್‌ಗೆ ಹಪಹಪಿಸುವ ಜನ. ನಗ್ನ ದೇಹದ ಚಿತ್ರಕ್ಕೆ ಹಾತೊರೆಯುವವರು ಇನ್ನೊಂದೆಡೆ. ನಾವು ಪ್ರತಿಕ್ರಿಯಿಸಬೇಕು ಅಂತಿಲ್ಲ. ಅವರ ಪಾಡಿಗೆ ಅವರು ಕೇಳುತ್ತಲೆ ಇರ್ತಾರೆ. ಅವರ ಕಾಮ ದಾಹ ತಣಿಸಲು ಹೆಣ್ಣುಬೇಕು. ಹೆಣ್ಣು ಅಂದ್ರೆ ಬೋಗದ ಸರಕು. ರಾತ್ರಿಯ ರಾಣಿ. ಅವಳ ಭಾವನೆಗಳು, ನೋವು ಸಂಕಟಗಳನ್ನು ಕೇಳುವ ವ್ಯವಧಾನ ಯಾರಿಗೂ ಇಲ್ಲ. ಈ ವರ್ಚ್ಯುವಲ್ ಜಗತ್ತಿನಲ್ಲಿ ಅದು ಯಾರಿಗೂ ಬೇಕಿಲ್ಲ. ಇದಕ್ಕೆ ತುಪ್ಪ ಸುರಿದಂತೆ ನಗ್ನ ದೇಹದೊಂದಿಗಿನ ಸೆಲ್ಫಿ ಈಗಿನ ಟ್ರೆಂಡ್.

***

ಫಿಲಿಫೈನ್ಸ್!

ಏಷ್ಯಾ ಖಂಡದ ಒಂದು ಪುಟ್ಟ ದ್ವೀಪವಿದು. ಹಸಿವು, ಬಡತನ ಇವತ್ತಿಗೂ ಇಲ್ಲಿ ಪ್ರಸ್ತುತ. ಯಾಕಂದ್ರೆ ಈ ದೇಶಕ್ಕೆ ತನ್ನದು ಅಂತೊಂದು ಗಟ್ಟಿಯಾದ ಆದಾಯದ ಮೂಲವಿಲ್ಲ. ಇಂಥ ದೇಶದಲ್ಲಿ ಈಗ ೩೨ ವರ್ಷದ ಹಿಂದೆ ಜನಿಸಿದವಳು ನಾನು.

ಇಲ್ಲಿ ಹಲವು ಪುಟ್ಟ, ಪುಟ್ಟ ದ್ವೀಪಗಳಿವೆ. ಅದರ ಅಂಚಿನಲ್ಲಿ ನಗರಗಳು. ಹಾಗಂತ ಅವ್ಯಾವುವು ಮಹಾನಗರಗಳಾಗಿ ಬೆಳೆದಿಲ್ಲ. ಅನೇಕರಿಗೆ ಉದ್ಯೋಗ ನೀಡುವ, ಹಸಿವು ನೀಗಿಸುವ ಕೇಂದ್ರಗಳಾಗಿಲ್ಲ. ಚರ್ಚಿಗೆ ಹೋಗುವವರು ಹಾಗೂ ಚರ್ಚಿಗೆ ಹೋಗದವರು ಎಂಬ ಎರಡೇ ಜಾತಿ ಇಲ್ಲಿ.

ನಾನು ಚಿಕ್ಕವಳಿದ್ದಾಗಲೆ ಅಮ್ಮನ್ನ ಕಳೆದುಕೊಂಡೆ. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ ಅಜ್ಜಿ-ತಾತ ಕೂಡ ದೂರವಾದ್ರು. ನಮ್ಮದೇ ಬೀದಿಯಲ್ಲಿದ್ದ ಆಂಟಿ ಮನೆಯಲ್ಲಿ ಬೆಳೆದೆ. ಅಪ್ಪನ್ನ ಬಗ್ಗೆ ತಿಳಿದುಕೊಳ್ಳಲಿಕ್ಕೆ ನನ್ನಮ್ಮ ಸಿಂಗಲ್ ಮಾಮ್!

ಇದೆಲ್ಲ ಹೇಳೊ ಮೊದ್ಲು ಈ ದ್ವೀಪದ ಸಂಬಂಧಗಳ ಬಗ್ಗೆ ಹೇಳಿಬಿಡ್ತೀನಿ. ಇಲ್ಲಿ ಆರೇಂಜ್ ಮ್ಯಾರೇಜ್ ಎಂಬ ಕಲ್ಪನೆಯೇ ಇಲ್ಲ. ಎಲ್ಲರೂ ಅವರವರ ಹುಡುಗನ್ನ ಅವರವರೇ ಆರಿಸಿಕೊಳ್ಳೋದು ಹೆಚ್ಚು. ಎಲ್ಲೋ ನೂರರಲ್ಲಿ ಒಂದೆರಡು ಮದುವೆಗಳು ಮಾತ್ರ ಕುಟುಂಬದವರಿಂದ ನಿಶ್ಚಿತವಾಗಿ ಆಗುತ್ತೆ. ೧೪-೧೬ ವರ್ಷಕ್ಕೆ ಇಲ್ಲಿನ ಹುಡುಗಿ ಸಂಬಂಧದ ಬಲೆಯಲ್ಲಿ ಬೀಳ್ತಾಳೆ. ಇಲ್ಲಿ ಹುಡುಗಿಯರು ಜಾಸ್ತಿ ಓದಲ್ಲ. ೧೮-೨೦ ವರ್ಷಕ್ಕೆ ಮದ್ವೆ ಆಗುತ್ತೆ. ಒಂದಷ್ಟು ಸಂಬಂಧಗಳು ಮದ್ವೆಗೆ ಮುಂಚೆಯೆ ಮುರಿದು ಬಿಡುತ್ತೆ. ಇನ್ನೊಂದಷ್ಟು ಮದ್ವೆವರೆಗೂ ತಲುಪುತ್ತೆ.

ಇಲ್ಲಿನ ಗಂಡಸರಿಗೆ ಸಂಸಾರದ ಬಗ್ಗೆ, ಸಂಬಂಧಗಳ ಬಗ್ಗೆ ಜಾಸ್ತಿ ಕಾಳಜಿಯಿಲ್ಲ. ಅದಕ್ಕಿಂತ ಮುಖ್ಯವಾಗಿ ಒಂದು ಉದ್ಯೋಗ ಅಂತಿಲ್ಲ. ಒಂದಷ್ಟು ಜನ ಮೀನು ಮಾರುತ್ತಾರೆ. ಇನ್ನೊಂದಷ್ಟು ಜನ ಅದು-ಇದು ಸಣ್ಣಪುಟ್ಟ ಕೆಲಸ ಮಾಡ್ತಾರೆ. ಕೆಲವ್ರು ಕೃಷಿನೂ ಮಾಡ್ತಾರೆ. ಆದ್ರೆ ಪಟ್ಟಣ್ಣವಾಸಿಗಳಲ್ಲಿ ದೊಡ್ಡ ಓದು, ದೊಡ್ಡ ಉದ್ಯೋಗ ಅಂತಿರೋದು ಕಡಿಮೆ. ಆವತ್ತಿನ ದುಡಿಮೆ ಆವತ್ತಿನ ಊಟ ಅನ್ನೋ ಸ್ಥಿತಿ.

ನಾಲ್ಕಾರು ಸಲ ಅನುಭವಿಸಿದ ನಂತ್ರ ಅವನಿಗೆ ಹುಡುಗಿ ಬೇಜಾರು ಬರುತ್ತೆ. ಅದಕ್ಕಿಂತ ಒಂದು ಸಂಸಾರ, ಒಂದು ಸೂರು ಅಂತ ಕಟ್ಟಿಕೊಳ್ಳಲು ಕೈಯಲ್ಲಿ ಏನು ಇರಲ್ಲ. ಮದ್ವೆ ಹೊತ್ತಿಗೆ ವರಾತ ತೆಗಿತಾನೆ. ಹುಡುಗಿ ಜೋರಿದ್ರೆ ಮದ್ವೆ ಆಗುತ್ತೆ. ಆದ್ರೆ ಮದ್ವೆ ಮರುದಿನದಿಂದ ಅವನು ಹೆಂಡ್ತಿಗೆ ಹೊಡೆಯಲು ಶುರು ಮಾಡ್ತಾನೆ. ಕುಡಿತಾನೆ. ಬೇರೆ ಹುಡುಗಿಯರ ಸಹವಾಸ ಆರಂಭಿಸ್ತಾನೆ. ಹೀಗೆಲ್ಲ ಆಗುವಾಗ್ಲು ನಿದ್ದೆ ಬರದ ರಾತ್ರಿಯಲ್ಲಿ ಹೆಂಗಸರಿಗೆ ೨-೩ ಮಕ್ಕಳು ಆಗುತ್ತೆ. ಕೆಲವರು ಮದ್ವೆಗೆ ಮುಂಚಿನ ಸಂಬಂಧದಲ್ಲಿ ಮಕ್ಕಳು ಮಾಡಿಕೊಂಡು, ನಂಬಿದ ಹುಡುಗನಿಂದ ಮೋಸ ಹೋಗಿ ಸಿಂಗಲ್ ಮಾಮ್ ಪಟ್ಟ ಕಟ್ಟಿಕೊಳ್ತಾರೆ. ಬಲವಂತವಾಗಿ ಮದ್ವೆ ಆದವರು ೬-೭ ವರ್ಷ ಸಂಸಾರ ಮಾಡಿ, ಆತನಿಂದ ಹೊಡೆತ ತಿಂದು, ಅವನ ಜೊತೆ ಬದುಕಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿ ಮಕ್ಕಳನ್ನು ಕಟ್ಟಿಕೊಂಡು ಸಿಂಗಲ್ ಮಾಮ್ ಆಗಿ ಹೊರಬೀಳ್ತಾರೆ. ಇದೆಲ್ಲ ಆಗೋ ಹೊತ್ತಿಗೆ ಆಕೆಗೆ ಅಬ್ಬಬ್ಬ ಅಂದ್ರೆ ೨೫-೨೭ ವರ್ಷ ಆಗಿರುತ್ತೆ. ಬದುಕು ಬಟಾನು ಬಯಲಿಗೆ ಬಂದಿರುತ್ತೆ. ಅವಳೊಬ್ಬಳೆ ಸಾಲದು ಎಂಬಂತೆ ೧,೨,೩ ವರ್ಷದ ೨-೩ ಮಕ್ಕಳು ಬೇರೆ ಅವಳ ಹೆಗಲಿನಲ್ಲಿ.

***

ಲೊಪೇಜ್ ವಿಕಿ ನನ್ನ ಹೆಸ್ರು. ಸಂಬಂಧಿಗಳಿಲ್ಲದೆ ಅನಾಥವಾಗಿದ್ದ ನಾನು ೧೮ನೇ ವರ್ಷದಲ್ಲಿ ನನ್ನ ಹುಡುಗನ್ನ ಹುಡುಕಿಕೊಂಡೆ. ಮದ್ವೆನೂ ಆಯ್ತು. ಮದ್ವೆಗೆ ಮೊದಲೆ ಬಸಿರಾಗಿದ್ದೆ. ಮದ್ವೆಯಾಗಿ ೫ ವರ್ಷ ಸಂಸಾರದ ನಡೆದಿತ್ತು. ೨ ಮಕ್ಕಳು ಆಗಿದ್ದವು. ೩ನೇ ಮಗು ಹೊಟ್ಟೆಯಲ್ಲಿತ್ತು. ಆಗ ೫ ತಿಂಗಳು ನನಗೆ.

ಹೇಳಿದ್ನಲ್ಲ ಎಲ್ಲ ಟಿಪಿಕಲ್ ಗಂಡಸರಂತೆ ಇವನು. ಆದ್ರು ಹೊಡೆತ ತಿನ್ನುತ್ತಲೇ ೫ ವರ್ಷ ಸಾಗಿಸಿದ್ದೆ. ಯಾಕೋ ಸಾಕು ಇವನ ಸಹವಾಸ ಅನ್ನಿಸ್ತು. ಅಲ್ಲಿಂದ ಹೊರಬಿದ್ದೆ. ಬದುಕಿನ ನೋವು-ಸಂಕಟ ಅರ್ಥವಾಗಿತ್ತು. ಕಣ್ಣಲ್ಲಿ ನೀರಿತ್ತು.

ಮನೆಯಿಂದ ಹೊರಗೆ ಬಿದ್ದೆ. ಇಲ್ಲಿ ಅಷ್ಟು ಸುಲಭದಲ್ಲಿ ತಿಂಗಳ ಖರ್ಚಿಗೆ ಸಾಕಾಗುವಷ್ಟು ಕೆಲಸ ಸಿಗಲ್ಲ. ಹೀಗೆ ಮನೆಯಿಂದ ಹೊರಬಿದ್ದು ವರ್ಷಾನುಗಟ್ಟಲೆ ಕೆಲಸ ಹುಡುಕುತ್ತಿರುವವರು, ಹಸಿವಾದವರು ಅನೇಕರು ಇರ್ತಾರೆ. ಅವರು ಏನು ಕೆಲಸ ಹೇಳಿದ್ರು ಮಾಡ್ತಾರೆ. ಅಂಥ ಸಮುದ್ರಕ್ಕೆ ಅನಿವಾರ್ಯವಾಗಿ ಬಿದ್ದೆ. ನನಗಿಂತ ಹೆಚ್ಚಾಗಿ ನನ್ನ ಪುಟ್ಟ ಮಕ್ಕಳ ಹೊಟ್ಟೆಯಲ್ಲಿ ಹಸಿವಿತ್ತು. ಜೊತೆಗೆ ಹೊಟ್ಟೆಯೊಳಗಿದ್ದ ಮಗುವಿನ ಉಸಿರಿತ್ತು. ಆದ್ರೆ ಯಾವ ಕಾರಣಕ್ಕು ನಾನು ನನ್ನ ನಂಬಿಕೆಯ ಜೊತೆ, ನೈತಿಕತೆಯ ಜೊತೆ ಸೋಲಬಾರದು ಅಂತ ಗಟ್ಟಿಯಾಗಿ ನಿರ್ಧಾರ ಮಾಡಿಕೊಂಡಿದ್ದೆ.

ಬೆಳಿಗ್ಗೆ ೩ ಗಂಟೆಗೆ ಎದ್ದು ಮೀನು ಮಾರೋರಿಗೆ ಹೋಗಿ ಸಹಾಯ ಮಾಡಿದೆ. ಯಾರ‍್ಯಾರ ಮನೆಯಲ್ಲಿ ಬಟ್ಟೆ ತೊಳೆಯೋದು ಇದೆ? ಕ್ಲೀನ್ ಮಾಡೋದಿದೆ ಅಂತ ಹುಡುಕಿಕೊಂಡು ಹೊರಟೆ. ಹಾಗಂತ ಇಲ್ಲಿ ಕ್ಲೀನ್ ಮಾಡೋದು, ಬಟ್ಟೆ ತೊಳೆಯೋದು ಎಲ್ಲ ನಮ್ಮ ಹೊಟ್ಟೆ ತುಂಬಿಸುವ ಉದ್ಯೋಗವಲ್ಲ. ಆದ್ರು ಬಸುರಿಯಾಗಿದ್ದರಿಂದ ಹೆರಿಗೆವರೆಗೂ ಈ ಕೆಲಸ ಮಾಡಲೇ ಬೇಕಾಯ್ತು.

ಹೀಗೆ ಕೆಲಸ ಹುಡುಕಿದಾಗ ಸಿಗಲ್ಲ. ಪುಟ್ಟ ಮಕ್ಕಳು ಇರುತ್ತವೆ. ಅವಕ್ಕೆ ಹಾಲು ಕುಡಿಸೋಕೆ ದುಡ್ಡು ಇರಲ್ಲ. ಆಗ ಅನೇಕ ಹೆಂಗಸ್ರು ದಾರಿ ತಪ್ಪಿ ಬಿಡ್ತಾರೆ. ದುಡ್ಡು ಕೊಡ್ತಾರೆ ಅಂದ್ರೆ ತಮ್ಮ ದೇಹದ ಭಾಗಗಳನ್ನು ಮಾರಾಟಕ್ಕಿಡ್ತಾರೆ. ಹಾಗಾಗಿ ಇಲ್ಲಿನ ಹೆಣ್ಣುಮಕ್ಕಳು ಬೇರೆ ದೇಶದವರಿಗೆ ಕಾಮದ ಸರಕು. ಫೇಸ್‌ಬುಕ್‌ನಲ್ಲಿ ಪಿಂಗ್ ಮಾಡಿ, ಯಾರಾದ್ರು ದುಡ್ಡು ಕೊಟ್ಟರೆ, ನಗ್ನ ಚಿತ್ರ ನೀಡಿ ದುಡ್ಡು ಕೊಟ್ಟವರನ್ನ ಖುಷಿಪಡಿಸಿ ಇವರ ಹೊಟ್ಟೆ ತುಂಬಿಸಿಕೊಳ್ಳೋದು ಇಲ್ಲಿನ ಅನೇಕರ ಹೊಟ್ಟೆಪಾಡು. ಎಲ್ಲರೂ ಹೀಗಲ್ಲ. ಆದ್ರೆ ಅಂಥ ಕೆಲವರಿಂದ ಈ ದೇಶದ ಎಲ್ಲ ಹೆಣ್ಣುಮಕ್ಕಳು ಸೆಕ್ಸ್ ಚಾಟ್‌ಗೆ ತೆರೆದುಕೊಂಡವರು ಅಂತ ಬೇರೆಯವರು ಭಾವಿಸಿಬಿಡ್ತಾರೆ.

***

ಇನ್ನು ಹೆಚ್ಚು ದಿನ ಕೆಲಸ ಮಾಡಿದ್ರೆ ಹಸಿವು ನೀಗಲ್ಲ ಅನ್ನಿಸ್ತು. ಮಗುಗೆ ಒಂದು ೪ ತಿಂಗಳು ಆಗ್ತಾ ಇದ್ದ ಹಾಗೆ ಹೊರಟೆ. ಇಲ್ಲಿನ ಒಂದು ಸಮಾಧಾನ ಸಂಗತಿ ಅಂದ್ರೆ ಒಂದಷ್ಟು ಏಜೆನ್ಸಿಗಳು ವಿದೇಶದಲ್ಲಿ ಕೆಲಸ ಕೊಡಿಸುತ್ತವೆ. ಹಾಗೆ ಕೆಲಸ ಕೊಡಿಸುವ ಒಂದು ಏಜೆನ್ಸಿಗೆ ಹೋಗಿ ನನ್ನ ಅರ್ಜಿ ಎಲ್ಲ ಪ್ರೊಸೆಸ್ ಮಾಡಿಸಿದೆ. ನಾನು ವಿದೇಶದಲ್ಲಿ ಕೆಲಸ ಮಾಡ್ಲಿಕ್ಕೆ ಅರ್ಹ ಅಂತ ಸರ್ಟಿಫಿಕೆಟ್ ಸಿಕ್ತು. ಆದ್ರೆ ಪ್ರೊಸೆಸಿಂಗ್ ಫೀ ಕೊಡ್ಲಿಕ್ಕೆ ಹಣ ಇರಲಿಲ್ಲ. ನೀವು ಅಲ್ಲಿ ಹೋಗಿ ಕೆಲಸಕ್ಕೆ ಸೇರಿ. ನಿಮ್ಮ ೫ ತಿಂಗಳ ಸಂಬಳದಲ್ಲಿ ಸ್ವಲ್ಪ ಸ್ವಲ್ಪ ನಮ್ಮ ಹಣ ಕಟ್ ಮಾಡಿಕೊಳ್ತೀವಿ ಅಂತ ಏಜೆನ್ಸಿಯವರು ಸಹಾಯ ಮಾಡಿ ಪುಣ್ಯಕಟ್ಟಿಕೊಂಡ್ರು.

ಮಕ್ಕಳನ್ನು ಇಲ್ಲೇ ಆಂಟಿ ಮನೇಲಿ ಬಿಟ್ಟೆ. ಪುಟ್ಟ ಮಗುನು ಬಿಟ್ಟು ಸಿಂಗಪುರಕ್ಕೆ ಹೊರಟೆ. ಅಲ್ಲಿ ಸಿಕ್ಕಿದ್ದು ಮನೆಯೊಂದರಲ್ಲಿ ಪುಟ್ಟ ಕಂದನನ್ನು ನೋಡಿಕೊಳ್ಳುವ ಕೆಲಸ. ಬದುಕು ಹೇಗಿರುತ್ತೆ ನೋಡಿ. ನನ್ನ ಪುಟ್ಟ ಕಂದನ್ನ ಬಿಟ್ಟು, ಯಾರೋ ದುಡ್ಡು ಕೊಡ್ತಾರೆ ಅಂತ ಇನ್ನೊಬ್ಬರ ಮನೆ ಕಂದನ ನೋಡಿಕೊಳ್ಳುವ ಕೆಲಸ!

ವರ್ಷ ಆಗುವ ಹೊತ್ತಿಗೆ ಎಲ್ಲವೂ ಅಂದುಕೊಂಡಂತೆ ಆಯ್ತು. ಕೈಯಲ್ಲಿ ಸ್ವಲ್ಪ ದುಡ್ಡು ಸೇರ‍್ತು. ಪ್ರತಿ ತಿಂಗಳು ಮಕ್ಕಳಿಗೆ ಅಂತ ಊರಿಗೆ ಇಲ್ಲಿಂದಲೇ ದುಡ್ಡು ಕಳಿಸ್ತಾ ಇದ್ದೆ. ವರ್ಷ ಆದಮೇಲೆ ಎಲ್ಲ ಮಕ್ಕಳನ್ನು ಕರೆದುಕೊಂಡು ಬಂದು ಇಲ್ಲಿ ಸೆಟೆಲ್ ಆದೆ. ಇಲ್ಲಿಗೆ ಬಂದು ೯ ವರ್ಷವಾಯ್ತು.

***

ನಗೊಂದು ಜೊತೆ ಬೇಕು. ನನ್ನ ಭಾವನೆಗಳನ್ನು ಹಂಚಿಕೊಳ್ಳಬೇಕು. ಬದುಕಿನಲ್ಲಿ ಬರಿ ನೋವೇ. ಇನ್ನಾದ್ರು ಚೂರು ಖುಷಿಪಡಬೇಕು ಅಂತ ಫೇಸ್‌ಬುಕ್‌ಗೆ ಬಂದೆ. ಒಂದಷ್ಟು ಜನರನ್ನು ಸ್ನೇಹಿತರನ್ನಾಗಿಸಿಕೊಂಡೆ. ಅವರ ಜೊತೆ ಮಾತಾಡುತ್ತ ನೋವನ್ನು ಮರೆತೆ. ಹೀಗೆ ಇಂಗ್ಲೆಂಡ್‌ನವನೊಬ್ಬ ಸ್ನೇಹಿತನಾದ. ೬ ತಿಂಗಳ ಚಾಟ್‌ನಲ್ಲಿ ಇಬ್ಬರು ಕಷ್ಟ-ಸುಖ ಹೇಳಿಕೊಂಡು ಫ್ರೆಂಡ್ಸ್ ಆದ್ವಿ. ನಾವಿಬ್ರು ಮದ್ವೆನೂ ಆಗಬೇಕು ಅಂತ ನಿರ್ಧಾರ ಮಾಡಿದ್ವಿ.

ನನ್ನ ಇಂಗ್ಲೆಂಡ್ ಕರೆಸಿಕೊಳ್ತೀನಿ, ಹಾಗೆ ಹೀಗೆ ಅಂತೆಲ್ಲ ಕಥೆ ಹೇಳಿದ್ದ ಅವ ೬ ತಿಂಗಳ ಬಳಿಕ ಬೇರೆಯದೆ ವರಾತ ತೆಗೆದ. ವೀಸಾಕ್ಕೆ ದುಡ್ಡು ಕೊಡು ಅಂತೆಲ್ಲ ಕೇಳಿದ. ಯಾಕೊ ಅನುಮಾನ ಬಂತು. ಕೊನೆಗೆ ಅವನ ನಿಜ ಬಣ್ಣ ಬಯಲಾಯ್ತು. ಅವನು ಫೇಕ್. ಅವನಿಂದ ನಂಗೇನು ನಷ್ಟ ಆಗ್ಲಿಲ್ಲ. ಬದುಕಿನ ಹಾದಿಯಲ್ಲಿ ತುಂಬಾ ಜನ ದೇಹದ ಸುಖಕ್ಕೆ ಕೇಳಿದ್ರು. ಕೊಡೋದಿದ್ರೆ ೫ ತಿಂಗಳ ಮಗು ಹೊಟ್ಟೆಯಲ್ಲಿದ್ದಾಗ್ಲೆ ಕೊಟ್ಟು ಬದುಕಿನಲ್ಲಿ ಸೆಟೆಲ್ ಆಗ್ತಿದ್ದೆ. ಆವಾಗ್ಲೆ ಹೇಳಿದ್ನಲ್ಲ ನಾನು ಬದುಕಿನಲ್ಲಿ ಸೋಲಬಾರದು ಅಂತ ನಿರ್ಧಾರ ಮಾಡಿದ್ದೆ. ಅದಕ್ಕೆ ಅಲ್ಲಿಂದ ಈ ಸಿಂಗಪುರದವರೆಗೆ ಬಂದೆ.

ಆತನಿಂದ ನಂಗೇನು ಆಗ್ಲಿಲ್ಲ. ಬಟ್ ಭಾವನೆಗಳ ಮೇಲೆ ಸಮಾಧಿ ಕಟ್ಟಿದ. ನಂಬಿಕೆಗಳನ್ನು ಘಾಸಿಗೊಳಿಸಿದ. ಗಂಡಸಿನ ಕುರಿತು ಮತ್ತೆ ಚಿಗುರಿದ್ದ ನಂಬಿಕೆಗೆ ಕೊಳ್ಳಿ ಇಟ್ಟ. ಹಾಗಂತ ನಾನೇನು ಗಂಡಸಿನ ವಿರೋಧಿಯಲ್ಲ.

ನಗ್ನವಾದವಳು ಬೇಕು. ಸುಖ ಕೊಡಬೇಕು. ಖುಷಿಪಡಿಸಬೇಕು. ಸುಮಾರು ೫ ವರ್ಷದಲ್ಲಿ ಮೊದಲು ೨ ವರ್ಷ ಬಿಟ್ಟು ನಂತರದ ೩ ವರ್ಷ ಗೊಂಬೆಯಂಥೆ ನಿಂತು ಆ ಕೆಲಸ ಮಾಡಿದ್ದೇನೆ. ಮತ್ತೆ ಅದನ್ನು ಮಾಡಲು ಮನಸ್ಸಿಲ್ಲ. ಕೊನೆಯದಾಗಿ ಒಂದೇ ಮಾತು. ನಗ್ನತೆ ನಾವು ಹುಟ್ಟುತ್ತಲೆ ನಮ್ಮ ಜೊತೆ ಬಂದಿರುತ್ತೆ. ನೆನಪಿಟ್ಟುಕೊಳ್ಳಿ. ಕಣ್ತುಂಬಿಕೊಳ್ಳಿ. ಒಂದು ಹೆಣ್ಣು ನಗ್ನವಾಗದೆ ನೀವ್ಯಾರು ಹುಟ್ಟಲ್ಲ. ಎಂಜಾಯ್ ಸೆಲ್ಫಿ ವಿತ್ ನ್ಯೂಡ್. ಥ್ಯಾಂಕ್ಸ್

(ಭಾವಾನುವಾದ)

 

 

 

 

 

maxresdefault.jpgಗಾಂಧೀಜಿಯವರ ಆತ್ಮಕತೆ ‘ಸತ್ಯಾನ್ವೇಷಣೆ’ ಓದುತ್ತಿದ್ದೆ. ಗೋಡ್ಸೆ ಗಾಂಧಿಯನ್ನು ಕೊಂದ ಎಂಬ ಕಾರಣಕ್ಕೆ ಗೋಡ್ಸೆ ಬಳಗವನ್ನು ವಿರೋಧಿಸುವ ಒಂದಷ್ಟು ಜನ. ಗೋಡ್ಸೆ ವಿರೋಧಿಗಳು ಎಂಬ ಕಾರಣಕ್ಕೆ ಗಾಂಧಿಯವರನ್ನು ಜರಿಯುವ ಮತ್ತೊಂದಷ್ಟು ಜನ. ಈ ಸಂಘರ್ಷದಲ್ಲಿ ಗಾಂಧೀಜಿ ಆಲೋಚನೆಗಳು ಕಳೆದು ಹೋದವೇನೋ ಎಂದು ಆಲೋಚಿಸುವ ಹೊತ್ತಿಗೆ ಪ್ರಧಾನಿ ಮೋದಿ ‘ಸ್ಟಾರ್ಟಪ್‌ ಇಂಡಿಯಾ’ಕ್ಕೆ ಕರೆ ಕೊಟ್ಟಿದ್ದಾರೆ.

ದಕ್ಷಿಣಾಫ್ರಿಕದಲ್ಲಿ ತಮ್ಮ ಮಗನಿಗೆ ವಿದ್ಯಾಭ್ಯಾಸ ಕೊಡಿಸಲು ಗಾಂಧೀಜಿ ಹೆಣಗುತ್ತಾರೆ. ಗುಜರಾತಿ ಭಾಷೆಯಲ್ಲಿಯೇ ಅವನ ವಿದ್ಯಾಭ್ಯಾಸ ನಡೆಯಬೇಕು ಎಂಬುದು ಅವರ ಬಯಕೆ. ಕೊನೆಗೆ ಅದು ಸಾಧ್ಯವಾಗುವುದಿಲ್ಲ. ಆಗ ಗಾಂಧೀಜಿ ಹೀಗೆ ಬರೆಯುತ್ತಾರೆ: “ಗುಲಾಮಗಿರಿಯ ಕೋಟೆಗಳಾಗಿರುವ ಸ್ಕೂಲು ಕಾಲೇಜುಗಳನ್ನು ತೊರೆದು ಬನ್ನಿ. ಗುಲಾಮಗಿರಿಯ ಸಂಕೋಲೆಗಳೊಡನೆ ಅಕ್ಷರ ಜ್ಞಾನವನ್ನು ಸಂಪಾದಿಸುವುದರ ಬದಲು, ಸ್ವಾತಂತ್ರ್ಯಕ್ಕಾಗಿ ಕಲ್ಲು ಒಡೆಯುತ್ತಾ ಅನಕ್ಷರಸ್ಥರಾಗಿ ಉಳಿಯುವುದು ಉತ್ತಮ”.

ಯಾಕೊ, ಗಾಂಧೀಜಿಯವರ ಈ ಸಾಲುಗಳು ತುಂಬಾ ಕಾಡುತ್ತಿವೆ. ಇಂದಿನ ಶಿಕ್ಷಣ ವ್ಯವಸ್ಥೆ ಒಂದು ರೀತಿ ಪ್ರಾಡಕ್ಟ್‌ಗಳನ್ನು ಹುಟ್ಟುಹಾಕುವ ಸಂಸ್ಥೆಯಾಗಿ ಕಾಣಿಸುತ್ತಿದೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಬೇರಿಂಗ್‌ ಉತ್ಪಾದಿಸುವ ಕಂಪನಿಯಲ್ಲೋ, ಆಪ್‌ ತಯಾರಿಸುವ ಸಂಸ್ಥೆಯಲ್ಲೋ, ಮೆಮೊರಿ ಚಿಪ್‌ಗಳಲ್ಲಿ ಪ್ರೋಗ್ರಾಂ ತುರುಕುವ ಜಗತ್ತಿನಲ್ಲೋ, ಸಾಮಾನ್ಯರ ರಕ್ತ ಹೀರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೋ ಗುಲಾಮಗಿರಿಗೆ ಸಜ್ಜಾಗಿ ಒಂದಷ್ಟು ಪ್ರಾಡಕ್ಟ್‌ಗಳು ಹೊರಬರುತ್ತವೆ.

ಈ ಸಾಲುಗಳು ನಿಮಗೆ ರುಚಿಸದೆ ಇರಬಹುದು. ನಾವು ನಮ್ಮ ಇಚ್ಛೆಯಿಂದ ಕೋರ್ಸ್‌ ಮಾಡಿದ್ದೇವೆ. ನೀವೇಕೆ ಅದನ್ನು ಗುಲಾಮಗಿರಿ ಎನ್ನುವಿರಿ? ಎಂದು ಪ್ರಶ್ನಿಸಬಹುದು. ಫೈನ್‌, ನೀವು ಕೋರ್ಸನ್ನು ಇಚ್ಛೆಯಿಂದಲೇ ಮಾಡಿದ್ದೀರಿ. ಆದರೆ ಕೋರ್ಸ್‌ ಮುಗಿಸಿದ ಶೇ.೭೦ರಷ್ಟು ಮಂದಿಯನ್ನು ಕೇಳಿನೋಡಿ. ಅವರ್ಯಾರು ಇಚ್ಛೆಯಂತೆ ಕೆಲಸ ಮಾಡುತ್ತಿರುವುದಿಲ್ಲ! ಶಿಕ್ಷಣಕ್ಕಾಗಿ ಮಾಡಿದ ಸಾಲ ತೀರಿಸಲಿಕ್ಕೋ, ದಿನನಿತ್ಯದ ಬದುಕಿಗಾಗಿಯೋ ತಾವು ಮಾಡಿದ ಕೋರ್ಸ್‌ನಲ್ಲಿ ಉತ್ತಮ ಸಂಬಳ ಸಿಗಬಹುದಾದ ಕೆಲಸ ಮಾಡುತ್ತಿರುತ್ತಾರೆ. ಹಾಗಂತ ನಾನು ಹೇಳುತ್ತಿಲ್ಲ. ಕೆಲಸ ಮಾಡುವ ಹಲವರು ಹೇಳುತ್ತಾರೆ! ‘ಅದೇ ಲೈಫು ಗುರು. ಅದೇ ಆಫೀಸು, ಅದೇ ಕೆಲಸ’ ಎಂದು ನಿರುತ್ಸಾಹದಿಂದ ಹೇಳುವವರೇ ನಮ್ಮಲ್ಲಿ ಹೆಚ್ಚು ಬಿಟ್ಟರೆ, ವಾವ್‌ ಅದ್ಭುತವಾದ ಕೆಲಸ. ದಿನ ಕಳೆದಿದ್ದೆ ಗೊತ್ತಾಗುವುದಿಲ್ಲ ಎಂಬುವವರು ಕಡಿಮೆ.

ಇಂಥ ಹೊತ್ತಿನಲ್ಲಿ ಮೋದಿ ‘ಮೇಕ್‌ ಇನ್‌ ಇಂಡಿಯಾ’ ಕನಸು ಘೋಷಿಸಿದ್ದಾರೆ. ಸ್ಟಾರ್ಟಪ್‌ಗಳಿಗೆ ಹೊಸ ಯೋಜನೆ ಅನೌನ್ಸ್‌ ಮಾಡಿದ್ದಾರೆ. ಅದೆನೇನೋ ವಿನಾಯಿತಿಗಳು. ನೀವು ನಿಮ್ಮ ಬುದ್ಧಿ ಉಪಯೋಗಿಸಿ ಸ್ವಂತ ಕೆಲಸ ಮಾಡಿ. ಖುಷಿಪಡಿ. ಸಾಕಷ್ಟು ಗಳಿಕೆ ಮಾಡಿರಿ. ನಿಜಕ್ಕು ಭಾರತ ಹೆಮ್ಮೆಪಡುವ ಕೆಲಸ. ಮತ್ತೊಂದಷ್ಟು ಬೇರಿಂಗ್‌ ಉತ್ಪಾದನೆ ಕಂಪನಿಗಳು, ತರತರೇವಾರಿ ಪ್ರೊಗ್ರಾಂಗಳನ್ನು ಬರೆದು ಸಾಫ್ಟ್‌ವೇರ್‌ ಹುಟ್ಟುಹಾಕುವ ಸಂಸ್ಥೆಗಳು, ಆನ್‌ಲೈನ್‌ ಆರ್ಡರ್‌ ಮಾಡಿದರೆ ಡೋರ್‌ ಡಿಲೆವರಿ ಕೊಡುವ ಸ್ಟಾರ್ಟಪ್‌ಗಳು ಹುಟ್ಟುತ್ತವೆ.

ಇನ್‌ ಬಿಟ್ವೀನ್‌ ಮಲ್ಲೇಶ್ವರಂನ ೯ನೇ ಕ್ರಾಸ್‌ನಲ್ಲಿ ಸಿಂಚು ದೋಸೆ ಅಂತೊಂದು ಕೈಗಾಡಿ ದೋಸೆ ಸೆಂಟರ್‌ ಇದೆ. ಆಟೋದಲ್ಲಿ ೯೯ ಥರದ ದೋಸೆ ಮಾಡುತ್ತಾನೆ. ಅವರ ಬುಟ್ಟಿಯಲ್ಲಿ ಬೇಬಿಕಾರ್ನ್‌, ಸ್ವೀಟ್‌ ಕಾರ್ನ್‌, ಪನ್ನೀರ್‌, ಚೀಸು ಸೇರಿ ೧೪ ಐಟಂಗಳಿದೆ. ನಮಗೆ ಗಣಿತದಲ್ಲಿ ಫರ್ಮ್ಯುಟೇಷನ್‌ ಮತ್ತು ಕಾಂಬಿನೇಷನ್‌ ಅಂತೊಂದು ಪಾಠವಿತ್ತು. ಅದನ್ನು ಆತ ಅದೆಷ್ಟು ಚೆನ್ನಾಗಿ ಬಳಿಸಿಕೊಂಡಿದ್ದಾನೆ ಎಂದರೆ, ಕೇವಲ ೧೫ ಐಟಂಗಳಿಂದ ೯೯ ದೋಸೆ ಮಾಡುತ್ತಾನೆ.

ಮೊನ್ನೆ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ(ಎಕನಾಮಿಕ್‌ ಟೈಮ್ಸ್‌) ಒಂದು ವರದಿ ಮಾಡಿತ್ತು. ನಮ್ಮ ದೇಶದಲ್ಲಿ ಶೇ.೮೦ರಷ್ಟು ಸ್ಟಾರ್ಟಪ್‌ಗಳು ಮೊದಲ ವರ್ಷದ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳುತ್ತಿಲ್ಲ ಎಂದು!

ಮೈಸೂರು-ಹುಣಸೂರು ಹೈವೆಯ ಹೂಟಗಳ್ಳಿಯಲ್ಲಿ ಪ್ರಿಯದರ್ಶಿನಿ ಅಂತೊಂದು ಹೊಟೆಲ್‌ ಇದೆ. ಅಲ್ಲಿ ಸಂಕ್ರಾಂತಿ ಪ್ರಯುಕ್ತ ಸದಸ್ಯರಿಗೆ ಏನೋ ಸ್ಪರ್ಧೆ. ೨೫ ಕೆಜಿ ಅಕ್ಕಿ ಗೆಲ್ಲುವ ಅವಕಾಶ ಎಂದಿತ್ತು. ನಂಗೆ ಸಖತ್‌ ಇಷ್ಟ ಆಯ್ತು. ಅಕ್ಕಿ ಗೆಲ್ಲುವ ಅವಕಾಶ. ವಾವ್‌ ಅನ್ನಿಸ್ತು. ಫಿಜ್ಜಾ ಜೊತೆ ಬರ್ಗರ್‌ ಫ್ರಿ ಎಂಬ ಕಾಲದಲ್ಲಿ ಭತ್ತದ ಕೃಷಿಕನ ಪರವಾಗಿ ಆಲೋಚಿಸಿ ಅಕ್ಕಿಯನ್ನು ಬಹುಮಾನವಾಗಿ ಇಟ್ಟ ಆ ಹೊಟೆಲ್‌ ಕುರಿತು ತುಂಬಾ ಖುಷಿಯಾಯ್ತು.

ಸ್ಟಾರ್ಟಪ್‌ಗಳ ಬಗ್ಗೆ ಮಾತಾಡುತ್ತಿದ್ವಿ. ಅದೇ ನನ್ನ ಹಾಗೆ ಅಲ್ಲಿ ದುಡಿಯುವುದು ಗುಲಾಮಿತನ, ಇಲ್ಲಿ ಕೆಲಸ ಮಾಡುವುದು ಕಷ್ಟ ಅಂತ ಆಲೋಚಿಸಿ ಉಮೇದಿನಲ್ಲಿ ಸ್ಟಾರ್ಟಪ್‌ ಮಾಡುವ ಮನಸ್ಸುಗಳು ಸಾಕಷ್ಟಿವೆ. ಒಂದಷ್ಟಕ್ಕೆ ಹೂಡಿಕೆದಾರರು ಸಿಗುತ್ತಾರೆ. ಅಷ್ಟಾಗಿಯೂ ವರ್ಷಕ್ಕೆ ಯಶಸ್ಸಾಗುವುದು ಶೇ.೨೦ರಷ್ಟು ಸ್ಟಾರ್ಟಪ್‌ಗಳು ಮಾತ್ರ. ಕಾರಣ ಮಾರುಕಟ್ಟೆಯನ್ನು ಆವರಿಸಿರುವ ದೊಡ್ಡ ಬಂಡವಾಳಗಾರರು ಹಾಗೂ ಅವರು ಮಾರುಕಟ್ಟೆಯನ್ನೇ ಬಾಚಿಕೊಂಡು ನೀಡುತ್ತಿರುವ ಸ್ಪರ್ಧೆ.

ಸಿಂಚು ದೋಸೆ ಕಥೆಗಿನ್ನು ಲಿಂಕ್‌ ಸಿಕ್ಕಿಲ್ಲ . ಅದೇ ಕಥೆ ಮುಂದುವರಿಸುತ್ತ ಅಲ್ಲಿಂದ ಮುಂದೆ ಸಾಗಿದರೆ ಸಿಗುವ ಸಾಯಿರಾಂ ಚಾಟ್ಸ್‌ ಸೆಂಟರ್‌ ಬಗ್ಗೆ ಹೇಳ್ತೀನಿ. ಮಲ್ಲೇಶ್ವರಂ ೧೫ ಕ್ರಾಸ್‌ನಲ್ಲಿರುವ ಸಾಯಿರಾಂನಲ್ಲೂ ೯೯ ವಿಧದ ಚಾಟ್ಸ್‌ಗಳಿವೆ ಮತ್ತು ಎಲ್ಲವೂ ಬಾಯಲ್ಲಿ ನೀರೂರಿಸುವವು. ಅಲ್ಲಿಂದ ಕಾರ್ಡ್‌ ರಸ್ತೆಗೆ ಬಂದರೆ ಅಜ್ಜನೊಬ್ಬ ಖರ್ಜೂರ, ದ್ರಾಕ್ಷಿ ಮಾರುತ್ತಾನೆ. ಅಲ್ಲಿಗೆ ಬರುವ ಪೊಲೀಸ್‌ ಪೇದೆ ೨೦೦ ರೂ. ಮಾಮೂಲು ಕೊಡಲ್ಲ ಎಂದ ಅಜ್ಜನನ್ನು ತಳಿಸಿ ಅಂಗಡಿ ಎತ್ತಂಗಡಿ ಮಾಡುತ್ತಾನೆ. ಬೀಟ್‌ ಪೊಲೀಸ್‌ನೊಬ್ಬ ಹಾದಿಯಲ್ಲಿ ಟೈಪ್‌ ರೈಟ್‌ ಮಾಡುವ ವೃದ್ಧನನ್ನು ತಳ್ಳಿಸಿದ ದೃಶ್ಯ ಕೆಲ ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಅಂಥ ಅದೆಷ್ಟು ಘಟನೆಗಳು ನಿತ್ಯವೂ ನಡೆಯುತ್ತವೆಯೋ ಗೊತ್ತಿಲ್ಲ.

ನಾವೀಗ ಆನ್‌ಲೈನ್‌ ಯುಗದಲ್ಲಿದ್ದೇವೆ. ಕುಳಿತಲ್ಲೇ ಎಲ್ಲವೂ ಆಗಬೇಕು. ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಭಾರತ ಹಳ್ಳಿಗಳ, ಕೃಷಿಪರ ರಾಷ್ಟ್ರ. ಅದೆಷ್ಟೆ ನಗರೀಕರಣವಾದರೂ, ಬೆಂಗಳೂರಿನ ಎಷ್ಟೋ ಹಳ್ಳಿ ಮೂಲೆಗಳು ಸೈಟ್‌ಗಳಾಗಿ ಬದಲಾದರು ಭಾರತದಲ್ಲಿ ಹಳ್ಳಿಯ ಪ್ರಮಾಣ ಶೇ.೬೫ಕ್ಕಿಂತ ಕಡಿಮೆಯೇನೂ ಆಗಿಲ್ಲ. ನಮ್ಮ ಆರ್ಥಿಕತೆ ಬೆನ್ನುಲುಬೇ ಕೃಷಿ.

೯೯ ದೋಸೆಗಳಲ್ಲಿ ಎಲ್ಲವೂ ತರಕಾರಿಯದ್ದೆ. ಪನ್ನೀರ್‌ ಮತ್ತು ಚೀಸ್‌ ಎರಡು ಇವತ್ತಿನದ್ದು. ಅವನದು ಅದೇ ಗೋಳು. ಸರ್‌ ಪೋಲಿಸ್ರಿಗೆ ದುಡ್ಡು ಕೊಟ್ಟೇ ಮುಗಿಯೋದಿಲ್ಲ. ಅಧಿಕಾರಿಗಳು ನೆಮ್ಮದಿಯಿಂದ ವ್ಯಾಪಾರ ಮಾಡೋಕೆ ಬಿಡಲ್ಲ. ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳು ಹಾಳಾಗಲಿ, ಬಾಡಿಗೆ ಪಡೆದು ಅಂಗಡಿ ನಡೆಸುವವರು ಮಾಮೂಲಿ ಕೊಡಬೇಕು. ಇಲ್ಲ ಅಂದ್ರೆ ದಬ್ಬಾಳಿಕೆ ಮಾಡ್ತಾರೆ.

ಅದೇನೋ ಸ್ಟಾರ್ಟಪ್‌, ವಿನಾಯಿತಿಗಳು…ಇಷ್ಟೆಲ್ಲದರ ನಡುವೆ ವರ್ಷಕ್ಕೆಶೇ. ೮೦ ಕಂಪನಿ ಬಾಗಿಲು ಹಾಕುತ್ತವೆ. ಇನ್‌ ಬಿಟ್ವೀನ್‌ ರಾಮಣ್ಣ ದಿನಕ್ಕೆ ೨೦೦ರೂ. ಪೊಲೀಸರಿಗೆ ಮಾಮೂಲಿ ಕೊಟ್ಟೂ ಅಂಗಡಿ ನಡೆಸುತ್ತಾನೆ. ಆ ೨೦೦ ರೂ. ದುಡಿಯಲು ಇಡಬಹುದಾದ ಬೇರೆ ಉತ್ಪನ್ನಗಳ ಕುರಿತು ಆಲೋಚಿಸುತ್ತಾನೆ. ೭ ಗಂಟೆಗೆ ಅಂಗಡಿ ಬಾಗಿಲು ತೆಗೆಯುವವನು, ಪೊಲೀಸ್‌ ಮಾಮೂಲಿ ಹೆಚ್ಚಾದಾಗ ೬ ಗಂಟೆಗೆ ಬಾಗಿಲು ತೆರೆಯುತ್ತಾನೆ. ಯಾಕಂದ್ರೆ ಅಂಗಡಿ ಬಿಟ್ಟು ಮತ್ತೊಂದು ಉದ್ಯೋಗ ರಾಮಣ್ಣನಿಗೆ ಗೊತ್ತಿಲ್ಲ. ಸಿಂಚು ದೋಸೆ ಪಾಯಿಂಟ್‌ನದ್ದು ಅದೇ ಕಥೆ.

ಇಷ್ಟೆಲ್ಲದರ ನಡುವೆ ನಿಮ್ಮ ಸಮಸ್ಯೆ ಏನು ಎನ್ನುವಿರಾ? ನಾವು ರೊಟ್ಟಿ ತಿನ್ನುವ, ದೋಸೆ ತಿನ್ನುವ ಉದ್ಯಮ ಹೆಚ್ಚಿಸಬೇಕು. ಹಾಗಿದ್ರೆ ದೇಶವಿಡಿ ಹೊಟೆಲ್‌ನೇ ಮಾಡಿಬಿಡಿ ಅನ್ನಬಹುದು ನೀವು. ಅದಲ್ಲ ಹೇಳುತ್ತಿರುವ ವಿಷಯ. ವಾಹನ ಬಳಕೆ ಹೆಚ್ಚಾಗುತ್ತಿದೆ. ಹಾಗಾಗಿ ಬೇರಿಂಗ್‌ ಕಂಪನಿಗಳು ಬೇಕು. ಹಾಗೆಯೆ ಕೃಷಿ ಉತ್ಪನ್ನ ಆಧಾರಿತ ಪ್ರಾಡಕ್ಟ್‌ಗಳ ಬಳಕೆಯೂ ಹೆಚ್ಚಾಗುವ ಉದ್ದಿಮೆಗಳು ಬರಬೇಕು. ಮೊಬೈಲ್‌, ಇಂಟರ್‌ನೆಟ್‌, ಸಾಫ್ಟ್‌ವೇರ್‌ನಿಂದ ದೇಶಕ್ಕೆ ಲಾಭವಿಲ್ಲ ಎಂದಲ್ಲ. ಆದರೆ ಅಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದ ಟೊಮೆಟೊ, ಬಾಳೆಕಾಯಿಯನ್ನು ರೈತ ಕಣ್ಣೀರಿಡುತ್ತ ರಸ್ತೆಗೆಸುಯುವಾಗ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಕರುಳು ಕಿವುಚುತ್ತದೆ.

ಖಂಡಿತ ಒಬ್ಬ ರಾಮಣ್ಣನಿಗೆ ನೀವು ಯಾವ ವಿನಾಯಿತಿಯನ್ನು ಕೊಡುವುದು ಬೇಡ. ಜೊತೆಗೆ ಆತ ನಾನಾ ಕಡೆ ಬ್ರ್ಯಾಂಚ್‌ಗಳನ್ನು ಮಾಡಲಾರ. ಅಧಿಕಾರಿಗಳ ದಬ್ಬಾಳಿಕೆಯಿಲ್ಲದೆ ನೆಮ್ಮದಿಯಿಂದ ವ್ಯಾಪಾರ ಮಾಡಲು ಬಿಡಿ. ಮಿಕ್ಕಿದ್ದು ಆತನಿಗೆ ಗೊತ್ತಿದೆ. ಹಾಗೆಯೇ ನೀವು ಸ್ಟಾರ್ಟಪ್‌ ಹೆಸರಿನಲ್ಲಿ ಒಂದಿಷ್ಟು ಕೃಷಿ ಆಧಾರಿತ, ನಮ್ಮ ನೆಲದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಬಲ್ಲ ಉದ್ದಿಮೆಯನ್ನು ಉತ್ತೇಜಿಸಿ. ಡೋರ್‌ ಡಿಲೆವರಿ ನೀಡುವ ಫಿಜ್ಜಾ ಕೇಂದ್ರಗಳು ಬೇಡ. ಎಳನೀರು, ಮಜ್ಜಿಗೆ ಡೋರ್‌ ಡಿಲೆವರಿ ಸಿಗಲಿ. ಈಗಿರುವ ಸ್ವಾಲವಂಬಿ ಕೇಂದ್ರಗಳು, ಗ್ರಾಮೀಣಾಭಿವೃದ್ಧಿ ಕೇಂದ್ರಗಳಿಗೆ ಇನ್ನಷ್ಟು ಜೀವ ತುಂಬಿ. ಆಗ ಖಂಡಿತ ಬೆಂಗಳೂರಿನಂಥ ನಗರದಲ್ಲಿ ಕಸ ನಿರ್ವಹಣೆ ಹೇಗೆ ಎಂಬ ಸಮಸ್ಯೆಯೇ ಬರುವುದಿಲ್ಲ.

ಇದ್ರಲ್ಲಿ ಖಂಡಿತ ಸಂಸ್ಕೃತಿ, ಸನಾತನತೆ ಯಾವ ಬೂದಿಯೂ ಇಲ್ಲ. ನಮ್ಮ ನೆಲದ ಮಂದಿ ಖುಷಿಯಾಗಿರಬಹುದೆಂಬುದಷ್ಟೆ ಆಶಯ. ಒಬ್ಬ ಗಾಂಧೀಜಿ ಶಾಖಾಹಾರದ ಕುರಿತು ಆಳವಾಗಿ ಅಧ್ಯಯಿನಿಸಿ ಇಂಗ್ಲೆಂಡ್‌, ದಕ್ಷಿಣಾಫ್ರಿಕಗಳಲ್ಲೂ ಸಸ್ಯಾಹಾರಿ ಉತ್ತೇಜನದ ಕೆಲಸ ಮಾಡಿದ್ದು ಇದೇ ಕಾರಣಕ್ಕೆ. ಆದರೆ ಅಂಥ ಗಾಂಧಿಯನ್ನು ಬದಿಗಿಟ್ಟ ನಾವು ಗೋಡ್ಸೆ, ಪಂಥ, ರಾಜಕೀಯದ ಗಾಂಧಿಯನ್ನುಮಾತ್ರ ಉಳಿಸಿಕೊಂಡಿದ್ದೇವೆ. ನಾನಿಲ್ಲಿ ಒಂದು ಬೆಂಗಳೂರಿನ ವ್ಯಾಪಾರಿಗಳ ಕಥೆಯನ್ನು ಉದಾಹರಿಸಿದ್ದೇನೆ. ಇದು ನಮ್ಮ ದೇಶದ ಎಲ್ಲ ಮೂಲೆಯ ಸಣ್ಣ ವ್ಯಾಪಾರಿ, ಉದ್ದಿಮೆದಾರರ ಕಥೆಯೂ ಹೌದು.

 

1kannada-news-channel

ಇದು ಇಂಟರ್‌ನೆಟ್ ಜಗತ್ತು. ಒಂದು ಸುದ್ದಿ, ಮಾಹಿತಿ ಮಾಧ್ಯಮಗಳಿಗಿಂತ ಮೊದಲು ಮೊಬೈಲ್‌ನಿಂದ ಓದುಗನ ಕೈಸೇರುತ್ತಿದೆ. ಜನ ಟಿವಿ ನೋಡ್ತಾರೋ, ಪೇಪರ್ ಓದ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಕೈಯ್ಯಲ್ಲಿರೋ ಮೊಬೈಲ್‌ನಿಂದ ಆಗಾಗ ಜಾಲತಾಣಗಳನ್ನು ಜಾಲಾಡುತ್ತಾರೆ. ನಗರವಾಸಿಗಳು ಮಾತ್ರ ಈ ಇಂಟರ್‌ನೆಟ್ ಜಗತ್ತಿನಲ್ಲಿ ಬದುಕೋರು ಅನ್ನೋ ಟ್ರೆಂಡ್ ಬದ್ಲಾಗ್ತಿದೆ. ಹಳ್ಳಿ ಮೂಲೆಯವನಿಗೂ ಸ್ಮಾರ್ಟ್‌ಫೋನ್ ಬಳಕೆ ಗೊತ್ತಾಗಿದೆ. ಹೀಗಿರುವಾಗ ನಮ್ಮ ಮಾಧ್ಯಮಗಳು ಅದೆಷ್ಟು ಎಚ್ಚರವಾಗಿದ್ದರು ಸಾಕಾಗಲಾರದು.
ಹೀಗೆಲ್ಲ ಸ್ಪರ್ಧೆ ಎದುರಾಗಿರುವಾಗಲು ನಮ್ಮ ಒಂದಷ್ಟು ಮಾಧ್ಯಮಗಳು ಮತ್ತಷ್ಟು ಬೇಜವಬ್ದಾರಿಯುತವಾಗುತ್ತಿರುವುದು ಬೇಸರದ ಸಂಗತಿ. ಜಾಲತಾಣದಲ್ಲಿ ಜಾಲಾಡುವಷ್ಟು ಜಾಣತನವಿರುವ ವ್ಯಕ್ತಿ ಖಂಡಿತ ವಿವೇಕಿ. ಆತನಿಗೆ ಒಂದು ಸುದ್ದಿಯನ್ನು ಕ್ರಾಸ್‌ಚೆಕ್ ಮಾಡಿ ಅದರ ಹಿನ್ನೆಲೆಯನ್ನು ಹುಡುಕುವಷ್ಟು ವಿವೇಚನೆ ಇರುತ್ತದೆ. ಇಂತಿಪ್ಪ ಕಾಲದಲ್ಲೂ ನೀವು ನಿಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು, ಸ್ಟೋರಿಗಳನ್ನು ಮಾಡಿಕೊಂಡು ಯಾರ ಕಿವಿ ಮೇಲೆ ಹೂವು ಇಡಲು ಹೊರಟಿರುವಿರಿ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.
ಮಾಧ್ಯಮ ಜಾಹೀರಾತು ಆಧಾರಿತ. ಪತ್ರಿಕೆಯೋ, ಟಿವಿಯೋ ಉಳಿಯಬೇಕಾದರೆ ಅದಕ್ಕೆ ಜಾಹೀರಾತು ಬೇಕು. ಪೇಯ್ಡ್ ನ್ಯೂಸ್‌ಗಳು ಬರುತ್ತವೆ ಎಂಬುದನ್ನೆಲ್ಲ ನಾವೆಲ್ಲ ಒಪ್ಪಿಕೊಂಡಿದ್ದೇವೆ. ಜಪಾನಿ ತೈಲದ ಜಾಹೀರಾತನ್ನು ಇದೇ ಒಂದು ದೃಷ್ಟಿಯಿಂದ ಸಹಿಸಿಕೊಂಡಿದ್ದೇವೆ! ಇಷ್ಟಾಗಿಯೂ ನಿಮ್ಮ ಒಂದಷ್ಟು ಬೇಜವಬ್ದಾರಿತನಕ್ಕೆ ಕೊನೆಯೆಂದು ಎಂಬುದಕ್ಕೆ ಮಾತ್ರ ಉತ್ತರ ಸಿಗುತ್ತಿಲ್ಲ.
ಹಿಂಗೆಲ್ಲ ಮಾತಾಡಿದ್ರೆ ನಾನು ಮಾಧ್ಯಮ ಜಗತ್ತಿನ ಜವಬ್ದಾರಿತನಕ್ಕೆ ರಾಯಭಾರಿಯಂತೆ ವರ್ತಿಸುತ್ತೇನೆ ಎಂದು ಒಂದಷ್ಟು ಜನ ಉರಿದುಕೊಳ್ತಾರೆ ಅಂತ ಗೊತ್ತು ಬಿಡಿ. ಆ ಹುದ್ದೆಯ ಕನಸು, ಭ್ರಮೆ ಎರಡು ಇಲ್ಲ. ಯಾವ ಮೀಡಿಯಾ ಯಾರ ಒಡೆತನದ್ದು? ಅಲ್ಲಿ ಯಾರ ಸುದ್ದಿ ಬರುತ್ತೆ, ಯಾರದ್ದು ಬರಲ್ಲ ಎನ್ನುವುದೆಲ್ಲ ಇವತ್ತು ಗುಟ್ಟಾಗಿ ಉಳಿದಿಲ್ಲ ಅಥವಾ ಓದುಗ ಅದನ್ನು ಬಯಸುವುದೂ ಇಲ್ಲ. ಆದ್ರೆ ಅದು ಸೃಷ್ಟಿಸಿರುವ ದುರಂತ ಪರದೇಶಿಗಳ ಮೇಲೆ ಮಾಧ್ಯಮಗಳ ಆಕ್ರಮಣ. ಜಾಹೀರಾತು ಎಂಬ ಹೆಸರಿನಲ್ಲೋ, ಪೇಯ್ಡ್ ಎಂಬ ಸ್ಪೇಸ್‌ನಿಂದಲೋ ದುಡ್ಡಿದ್ದವರು ಮಾಧ್ಯಮಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ. ಒಂದಷ್ಟು ಜನರ ಸುದ್ದಿಯನ್ನು ಯಾವ ಲೆಕ್ಕದಲ್ಲಿ ಅಳೆದು ತೂಗಿದರು ಹಾಕಲು ಸಾಧ್ಯವಿಲ್ಲ. ನಾಟಿ ವೈದ್ಯದಿಂದ ಅರಣ್ಯ ನಾಶ ಎನ್ನುವವರು, ಕೆಲವರ ರೆಸಾರ್ಟ್‌ನಿಂದಾಗುವ ಲೂಟಿ ಕುರಿತು, ಕಾರ್ಪೊರೇಟ್ ಆಸ್ಪತ್ರೆಗಳ ಸುಲಿಗೆ ಕುರಿತು ಮಾತನಾಡಲಾರರು! ಅವರು ಇಂಥದ್ದೇ ವಿಷಯದ ಕುರಿತು ಮಾತನಾಡಬೇಕು, ಇಂಥದ್ದನ್ನು ಮಾತನಾಡಬಾರದು ಎನ್ನಲು ನಾವ್ಯಾರು ಅಲ್ಲ. ಅವರ ಸ್ಪೇಸ್, ಅಧಿಕಾರ, ಅವರ ವಿವೇಚನೆ.
ವಿಷ್ಯ ಅದಲ್ಲ. ನೋಡಿದ್ರೆ ಗೊತ್ತಾಗುತ್ತೆ ಈ ಸುದ್ದಿಯಲ್ಲಿ ಏನು ಹುರುಳಿಲ್ಲ, ಇದು ಒಂದು ಮುಖದ ಸುದ್ದಿ ಅಂತ. ಆದ್ರು ನೀವು ಯಾರಿಗೂ ಕೇರ್ ಎನ್ನದೆ ಅಂಥದ್ದನ್ನೇ ಪ್ರಕಟಿಸ್ತೀರಿ. ನೋಡುಗ ಮುರ್ಖ ಅಂತ ನೀವೇ ನಿರ್ಧಾರ ಮಾಡಿಬಿಡ್ತೀರಿ! ನಿಮ್ಮ ಧೈರ್ಯವನ್ನು ಮೆಚ್ಚಲೇ ಬೇಕು. ಈ ನಡುವೆ ಮಾಧ್ಯಮಗಳಿಗೆ ಸುದ್ದಿಯ ಕೊರತೆ ಇದೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ತೀರ ೧೦-೨೦ರೂ. ಸಂಪಾದಿಸುವ ದುರ್ಬಲರ ಮೇಲೆ ಸವಾರಿ ನಡೆಸಿ, ಯಾರದ್ದೋ ಸಂಸಾರದ ಸಮಸ್ಯೆಯ ಸಂಧಾನ ನಡೆಸಿ ನೀವು ಸಾಮಾಜಿಕ ಕಾಳಜಿ ಮೆರೆಯುತ್ತಿರುವುದನ್ನು ನೋಡುಗ/ಓದುಗರಾದ ನಾವೆಲ್ಲ ನೋಡಿ, ಓದಿ ಭೇಷ್ ಎನ್ನಬೇಕು! ಸಂಭ್ರಮಿಸಬೇಕು.
’ಪತ್ರಿಕೆಗೆ ಬರೆಯೋದು ಹೇಗೆ?’ ಪುಸ್ತಕ ತಲುಪಿಸುವ ನಿಟ್ಟಿನಲ್ಲಿ ಸುಮಾರಷ್ಟು ಪತ್ರಿಕೋದ್ಯಮ ಕಾಲೇಜಿಗೆ ಹೋಗಿಬಂದೆ. ನಿರೀಕ್ಷಿತ ಫಲಿತಾಂಶ. ’ನಿಮ್ಮ ಮಾಧ್ಯಮದ ಹುಚ್ಚಾಟದ ಬಗ್ಗೆ ಬರೆಯಿರಿ’ ಸರ್ ಎಂಬ ಬಿಟ್ಟಿ ಸಲಹೆಯನ್ನು ತುಂಬ ಜನ ಕೊಟ್ಟರು. ’ಸರ್, ನಾವು ನಮ್ಮ ಮಕ್ಕಳಿಗೆ ಬಿ.ಎಡ್ ಮಾಡಿ ಎನ್ನುತ್ತಿದ್ದೇವೆ, ಪ್ರಾಧ್ಯಾಪಕರಾಗಿ ಎನ್ನುತ್ತೇವೆ ಹೊರತು ಪತ್ರಕರ್ತರಾಗಿ ಎನ್ನುವುದಿಲ್ಲ’ ಅಂತಾನು ಸುಮಾರಷ್ಟು ಜನ ಹೇಳಿದ್ರು. ಕೇಳುವಾಗ ಒಂದು ರೀತಿ ಪಿಚ್ಚೆನಿಸಿತು. ಅಲ್ಲ ಪತ್ರಿಕೋದ್ಯಮದ ಕಾಲೇಜುಗಳೇ ಪತ್ರಕರ್ತರಾಗಬೇಡಿ ಎನ್ನುತ್ತಿದ್ದಾರೆ ಅಂದ್ರೆ, ನಾವೆಂಥ ದುಸ್ಥಿತಿ ಸೃಷ್ಟಿಸಿಟ್ಟಿದ್ದೇವೆ? ಇದನ್ನೆಲ್ಲ ಸರಿ ಮಾಡುವವರು ಯಾರು? ಖಂಡಿತ ಯಾರ ಬಳಿಯೂ ಉತ್ತರವಿಲ್ಲ.
ಮೊನ್ನೆ ನಾಗೇಶ್ ಹೆಗಡೆಯವರ ಮನೆಯಲ್ಲಿ ಕುಳಿತಾಗ ಇದನ್ನೇ ಚರ್ಚಿಸ್ತಾ ಇದ್ವಿ. ನಾಗೇಶ್ ಹೆಗಡೆ, ನಿರಂಜನ ವಾನಳ್ಳಿ, ಶಿವಾನಂದ ಕಳವೆ, ಎಚ್.ಆರ್.ಶ್ರೀಶ ಇವರೆಲ್ಲ ನನಗಂತು ಸದಾ ಸಕಾರಾತ್ಮಕ ಪತ್ರಿಕೋದ್ಯಮದ ರಾಯಭಾರಿಗಳಂತೆ ಕಾಣಿಸುತ್ತಾರೆ. ತುಂಬ ವರ್ಷಗಳಿಂದ ಅವರೆಲ್ಲ ಸೃಜನಶೀಲ ಪತ್ರಿಕೋದ್ಯಮ ನಿರ್ಮಾಣದ ಕೆಲಸಗಳು, ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಾಲವೇ ಉತ್ತರಿಸಬೇಕು ಇದಕ್ಕೆಲ್ಲ ಅಂತ ನಾಗೇಶ್ ಹೆಗಡೆಯವರು ತಮ್ಮದೇ ಒಂದಷ್ಟು ಉದಾಹರಣೆಗಳೊಂದಿಗೆ ಹೇಳಿದಾಗ ಇನ್ನಷ್ಟು ಆತಂಕವಾಯ್ತು. ನಿಜ, ಇವತ್ತಿನ ದಿನದಲ್ಲಿ ಯಾರು ಯಾರನ್ನು ತಿದ್ದಲು ಸಾಧ್ಯವಿಲ್ಲ.
ಸಮಸ್ಯೆಯೆಂದ್ರೆ ಇವತ್ತು ಸುಮಾರಷ್ಟು ಜನ ’ಪತ್ರಿಕೋದ್ಯಮ ಅಂದ್ರೆ ಭ್ರಷ್ಟರ ಕೂಪ’ ಎಂಬ ಸಾರ್ವತ್ರಿಕ ತೀರ್ಮಾನಕ್ಕೆ ಬಂದಿರುವುದು. ’ಪತ್ರಕರ್ತರಿಗೇನು ಬಿಡಿ. ಯಾರನ್ನಾದ್ರು ಹೆದರಿಸಿ, ಬೆದರಿಸಿ ಬದುಕಿ ಬಿಡ್ತೀರ’ ಅಂತ ಎಷ್ಟೋ ಗೆಳೆಯರು ಹೇಳುತ್ತಾ ಇರ್ತಾರೆ. ಒಂದು ಕಾಲದಲ್ಲಿ ಪೀತ ಪತ್ರಿಕೋದ್ಯಮ ಉತ್ತುಂಗದಲ್ಲಿತ್ತು. ಸುದ್ದಿ ವಾಹಿನಿಗಳು ಬಂದಾಗ್ಲು ಜನ ಹೆದರುತ್ತ ಇದ್ದರು. ಆದರೆ ಇವತ್ತು ಕಾಲ ಹಾಗಿಲ್ಲ. ಯಾರದ್ದಾದ್ರು ನೆಗೆಟೀವ್ ಸುದ್ದಿ ಮಾಡ್ತೀವಿ ಅಂದ್ರೆ ಅವನೇ ಖುದ್ದಾಗಿ ಮಾಹಿತಿ ಕೊಡ್ತಾನೆ! ನಂಗೊಂದಿಷ್ಟು ಪ್ರಚಾರ ಆದ್ರು ಸಿಕ್ತು ಅಂತಾನೆ. ದುಡ್ಡು ಕೊಟ್ಟು ಒಂದು ಸುದ್ದಿ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಆತನಾದ್ರು ಎಷ್ಟು ಪತ್ರಿಕೆ, ಟಿವಿಗೆ ಅಂತ ದುಡ್ಡು ಕೊಡಬಲ್ಲ?! ಇನ್ ಬಿಟ್ವೀನ್ ಪೇಯ್ಡ್ ಸ್ಲಾಟ್‌ಗಳ ದರ ಟಿವಿಯಲ್ಲಿ ಗಣನೀಯವಾಗಿ ಕುಸಿದಿದೆ! ಇಷ್ಟರ ನಡುವೆಯೂ ಹಣ ಕೊಟ್ಟು ಮಾಧ್ಯಮಗಳನ್ನು ತೆಕ್ಕೆಯಲ್ಲಿ ಇಟ್ಟುಕೊಳ್ಳುವ ಒಂದಷ್ಟು ಕೋಟ್ಯಾಧಿಪತಿಗಳು ಇರಬಹುದು. ಹಾಗಂತ ಆ ದುಡ್ಡಿಗೆ ಎಲ್ಲ ಪತ್ರಕರ್ತರು ವಾರಾಸುದಾರರಲ್ಲ. ಒಂದಷ್ಟು ಮಂದಿ ಮಾತ್ರ.
ಅದಕ್ಕಿಂತ ಮಿಗಿಲಾಗಿ ದುರಂತ ಹುಟ್ಟು ಹಾಕುತ್ತಿರುವುದು ಸುದ್ದಿಯ ಮೂಲಗಳು. ಸ್ಪರ್ಧೆ ಹೆಚ್ಚಾದಾಗ ಪ್ರತಿ ಪತ್ರಕರ್ತನಿಗು ಸುದ್ದಿ ಬೇಕು. ಬೇರೆಯವರಿಗಿಂತ ಮೊದಲು ಸುದ್ದಿ ನೀಡಬೇಕೆಂಬ ಹಂಬಲ. ಹಾಗಾಗಿ ಎಲ್ಲ ಪತ್ರಕರ್ತರು ಒಂದಷ್ಟು ಸುದ್ದಿ ಸೋರ್ಸ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಇವತ್ತು ಆ ಸೋರ್ಸ್‌ಗಳೆ ಮಾಧ್ಯಮದ ಹಾದಿ ತಪ್ಪಿಸುವ ಕೇಂದ್ರಗಳಾಗಿವೆ. ತನಗೆ ಆಗದ ಯಾವನೋ ಬಗ್ಗೆಯೋ ಒಂದಷ್ಟು ದಾಖಲೆಗಳೊಂದಿಗೆ ಮಾಹಿತಿ ಕೊಡ್ತಾನೆ. ಸ್ಟೋರಿ ಫೈಲ್ ಮಾಡಲೇಬೇಕಾದ ಒತ್ತಡದಲ್ಲಿರುವ ಪತ್ರಕರ್ತ ಆ ಸುದ್ದಿಯನ್ನು ಕ್ರಾಸ್‌ಚೆಕ್ ಮಾಡುವ ಗೋಜಿಗೂ ಹೋಗುವುದಿಲ್ಲ.
ಮೊನ್ನೆ ಒಂದು ಪತ್ರಿಕೆ ತೀರ ಹಾಸ್ಯಾಸ್ಪದವಾಗಿ ಎಲ್‌ಇಡಿ ಬಲ್ಬ್ ವಿಷಕಾರಿ ಎಂದು ಬರೆದ ಸುದ್ದಿಯ ಕುರಿತು ಟಿ.ಜಿ.ಶ್ರೀನಿಧಿ ಹೇಳ್ತಾ ಇದ್ರು. ನಾಗೇಶ್ ಹೆಗಡೆ ಕೂಡ ಅದೇ ವಿಚಾರ ಪ್ರಸ್ತಾಪ ತೆಗೆದ್ರು. ಇದೇ ಇವತ್ತಿನ ದುರಂತ. ಖಂಡಿತ ಎಲ್ಲ ಪತ್ರಕರ್ತರು ಎಲ್ಲ ವಿಷಯದಲ್ಲಿ ನಿಪುಣರಲ್ಲ. ಅದರಲ್ಲು ವಿಜ್ಞಾನ, ವಾಣಿಜ್ಯ ಎಲ್ಲ ತುಸು ಜ್ಞಾನ ಬೇಡುವ ವಿಷಯಗಳು. ಅಂಥ ಸಂದರ್ಭದಲ್ಲಿ ಶ್ರೀನಿಧಿಯವರಿಗೋ, ನಾಗೇಶ್ ಹೆಗಡೆಯವರಿಗೋ, ಪವನಜಗೋ ಅಥವಾ ವಿಜ್ಞಾನ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿದ ಯಾರಿಗೋ ಕಾಲ್ ಮಾಡಿದ್ರೆ ವಿಷಯ ಸ್ಪಷ್ಟಪಡಿಸ್ತಾರೆ. ನಾನಂತು ಖುದ್ದಾಗಿ ಈ ಕೆಲಸ ಮಾಡುತ್ತಿದ್ದೆ. ಇವತ್ತು ಯಾವುದೋ ಒಂದು ಹೊಸ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸುವಾಗ, ಇಂಟರ್‌ನೆಟ್ ಸ್ಪೇಸ್‌ನಲ್ಲಿ ಏನಾದ್ರು ಗೊತ್ತಾಗದೆ ಹೋದ್ರೆ ಶ್ರೀನಿಧಿ, ಪವನಜರಿಗೆ ಕರೆ ಮಾಡಿ ತಲೆ ತಿನ್ನುತ್ತೇನೆ. ಯಾಕಂದ್ರೆ ಅವರೆಲ್ಲ ನಿತ್ಯವೂ ಆ ವಿಷಯದಲ್ಲಿ ಅಪ್‌ಡೇಟ್ ಮತ್ತು ಆಸಕ್ತಿಯುಳ್ಳವರು.
ಪ್ರತಿ ವರದಿಗಾರನಿಗೂ ಆಫೀಸು ಮೊಬೈಲ್ ಕೊಟ್ಟು, ಕರೆನ್ಸಿ ಕೊಟ್ಟಿರುತ್ತೆ. ದಿನದಲ್ಲಿ ಒಂದು ಸುದ್ದಿ ಕ್ರಾಸ್‌ಚೆಕ್ ಮಾಡಿಕೊಳ್ಳಲು ಬೇಕಾದ ೧೦ ನಿಮಷ ಸಮಯವಂತೂ ಇದ್ದೇ ಇರುತ್ತೆ. ಸಮಸ್ಯೆ ಅಂದ್ರೆ ಪತ್ರಕರ್ತರು ತಮ್ಮ ಮೂಗಿನ ನೇರಕ್ಕೆ ಯೋಚಿಸಿ ತಾವು ಬರೆದಿದ್ದೆ ಸರಿ ಎಂದು ಆಲೋಚಿಸುವುದು. ಬರೆದು ತಪ್ಪಾದ ನಂತರವೂ ಅದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ತಾವು ಎಷ್ಟು ಜನರ ಹಾದಿ ತಪ್ಪಿಸಿದ್ದೇವೆ ಎಂಬ ಅರಿವಿಲ್ಲದೆ ತಾವು ಬರೆದಿದ್ದೆ ಸರಿ ಎಂದು ವಾದಿಸುತ್ತ ಇರುತ್ತಾರೆ! ಒಂದು ನೆಗೆಟೀವ್ ಸ್ಟೋರಿ ಮಾಡುವಾಗ ಇರುವ ಆತುರ, ಕಾತುರತೆ ಅದರ ಇನ್ನೊಂದು ಮಗ್ಗಲನ್ನು ಅವಲೋಕಿಸುವಾಗ, ತಮ್ಮ ತಪ್ಪು ಅರಿತುಕೊಳ್ಳುವಾಗ ಇರುವುದಿಲ್ಲ. ಒಳ್ಳೆ ಸ್ಟೋರಿಗೆ ಮೆಸೇಜ್ ಹಾಕಿದ್ರೆ ಥ್ಯಾಂಕ್ಸ್ ಹೇಳುವವರು, ತಪ್ಪು ಮಾಡಿದಾಗ ತೋರಿಸಿದ್ರೆ ಸೌಜನ್ಯಕ್ಕು ಒಂದು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೊನ್ನೆ ಯಾರೋ ಹೇಳ್ತಾ ಇದ್ರು. ತಪ್ಪು ಒಪ್ಪಿಕೊಂಡ್ರೆ ದಡ್ಡರಾಗುತ್ತೇವೆ ಅಥವಾ ಸಣ್ಣವರಾಗಿ ಬಿಡುತ್ತೇವೆ ಎಂಬ ಭಯವೋ ಏನೋ ಗೊತ್ತಿಲ್ಲ!
ನಾನು ವಿಜಯಕರ್ನಾಟಕದಲ್ಲಿದ್ದಾಗ ಯಾವುದೋ ಪದ ತಪ್ಪು ಬರೆದಿದ್ದಕ್ಕೆ ಶ್ರೀಶ ಸರ್ ಕರೆದು ಹೇಳಿದ್ರು, ನೋಡು ಇನ್ನು ೧೦ ವರ್ಷ ಬಿಟ್ಟು ಯಾರೋ ಪೇಪರ್ ತೆಗೆದು ನೋಡುವವನು ಇದನ್ನೇ ಸರಿ ಅಂತ ಭಾವಿಸಿ ಅಭ್ಯಾಸ ಮಾಡ್ತಾನೆ. ಅವನ್ನ ಮಿಸ್‌ಲೀಡ್ ಮಾಡಿದ ಹಾಗಾಯ್ತು. ಅದಕ್ಕೆ ಬರೆಯೋ ಮೊದ್ಲು ಎರಡೆರಡು ಸಲ ಖಾತ್ರಿ ಮಾಡಿಕೊಳ್ಳಿ ಎಂದು. ಬಹುಶಃ ಇವತ್ತು ಹಾಗೆ ತಿದ್ದುವ ಹಿರಿಯರು ಇಲ್ಲ, ತಿದ್ದುಪಡಿಯನ್ನು ಪಾಸಿಟೀವ್ ಆಗಿ ಸ್ವೀಕರಿಸಿ ಸರಿ ಮಾಡಿಕೊಳ್ಳುವ ಕಿರಿಯರ ಪ್ರಮಾಣವೂ ಕಡಿಮೆ ಇದೆ.
ಜಾಹೀರಾತು, ಆದಾಯ ಇದೆಲ್ಲ ಹೊರತಾಗಿ ಪತ್ರಕರ್ತರ ಬೇಜವಬ್ದಾರಿತನ, ಅರ್ಧಂಬರ್ಧ ತಿಳುವಳಿಕೆ, ನಾನು ಸಣ್ಣವನಾಗಿ ಬಿಡುತ್ತೇನೆ ಎಂಬ ಈಗೋ, ಅವರನ್ನು ಕೇಳಬಾರದು, ಇವರ ಹತ್ರ ಹೇಳಿಸಿಕೊಳ್ಳಬಾರದೆಂಬ ಚೌಕಟ್ಟುಗಳೇ ಎಷ್ಟೋ ಸಲ ಅಭಾಸಯುತ ಸುದ್ದಿಗೆ, ವರದಿಗೆ ಕಾರಣವಾಗುತ್ತೆ. ಅದನ್ನು ತಪ್ಪಿಸುವ ಪ್ರಯತ್ನವನ್ನಾದರು ಒಂದಷ್ಟು ಪತ್ರಕರ್ತರು ಮಾಡಬಹುದೇನೊ. ಒನ್ಸ್ ಅಗೈನ್ ಅವರ ಸ್ಪೇಸ್, ಅವರ ಅಧಿಕಾರ. ನಾವೇನು ಮಾಡಬೇಕೋ ಅದನ್ನು ನಾವು ಮಾಡ್ತಾ ಹೋಗಬೇಕು ಅಷ್ಟೆ…

ಪುಸ್ತಕ ಎಲ್ಲಿ ಸಿಗುತ್ತೆ?

ಮಿಥಿಲಾ ಪ್ರಕಾಶನದ ಚೊಚ್ಚಲ ಕೃತಿ ಪತ್ರಿಕೆಗೆ ಬರೆಯೋದು ಹೇಗೆ? ಕಾರ್ಯನಿರತ ಪತ್ರಕರ್ತರು, ಫ್ರೀಲಾನ್ಸ್‌ ಬರಹಗಾರರು ಇದರಲ್ಲಿ ಬರೆದಿರುವುದು ವಿಶೇಷ. ಶ್ರೀವತ್ಸ ಜೋಶಿ, ಶಿವಾನಂದ ಕಳವೆ, ರೋಹಿತ್‌ ಚಕ್ರತೀರ್ಥ, ನವೀನ್‌ ಸಾಗರ್‌, ಶ್ರೀನಿಧಿ ಡಿ.ಎಸ್‌, ಶ್ರೀನಿಧಿ ಟಿ.ಜಿ, ಮಾವೆಂಸ ಪ್ರಸಾದ್‌, ಜಯದೇವ್‌ಪ್ರಸಾದ್‌ ಮೊಳೆಯಾರ್‌, ವಿಕಾಸ್ ನೇಗಿಲೋಣಿ, ರಜನಿ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಿಕಾ ಬರವಣಿಗೆ ಕುರಿತು ಬರೆದಿದ್ದಾರೆ. ನಿರಂಜನ ವಾನಳ್ಳಿ  ಮುನ್ನುಡಿ, ರವಿ ಹೆಗಡೆಯವರ ಬೆನ್ನುಡಿ ಪುಸ್ತಕಕ್ಕಿದೆ.

ಪುಸ್ತಕಕ್ಕಾಗಿ:ಮಿಥಿಲಾ ಪ್ರಕಾಶನ-9964071322. ಸ್ವಪ್ನ, ನವಕರ್ನಾಟಕ ಮಳಿಗೆ ಹಾಗೂ ಆನ್ ಲೈನ್,ಬಿಬಿಸಿ, ಸಾಹಿತ್ಯ ಭಂಡಾರ, ಹಾಗೂ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ. ಇಲ್ಲಿಯೂ ಸಿಗುತ್ತೆಪತ್ರಿಕೆ_ಮುಖಪುಟ.jpg

kod_invitation_final_last_last_last_last_last.jpgಭರ್ಜರಿ ಮೂರು ತಿಂಗಳ ಶ್ರಮಕ್ಕೊಂದು ಫಲ ಸಿಗುವ ದಿನ ಬಂದಿದೆ. ಹೀಗೊಂದು ಪುಸ್ತಕ ಆಗಬೇಕು ಅಂತ ತಲೆಗೆ ಬಂದಿದ್ದೆ ತಡ ಕೆಲಸ ಶುರು ಹಚ್ಚಿಕೊಂಡೆ. ಒಂದಷ್ಟು ಗೆಳೆಯರನ್ನು ಮಾತಾಡಿಸಿ ಪುಸ್ತಕದ ಕುರಿತು ಹೇಳಿದೆ. ಮೊದಲು ಇದ್ದ ಆಲೋಚನೆ ಇಂಪ್ರೂ ಆಗ್ತಾ, ಆಗ್ತಾ ಎಲ್ಲಿವರೆಗೆ ಬಂದಿದೆ ಅನ್ನೋದನ್ನ ನಿಮ್ಮ ಕೈ ಸೇರಲಿರುವ ಪುಸ್ತಕ ಹೇಳುತ್ತೆ.

ಕಾರ್ಯಕ್ರಮ ಹೇಗೆ ಆಗುತ್ತೋ ಏನೋ? ಪುಸ್ತಕದ ರೀಚು, ಮಾರಾಟದ ಕಥೆ ಏನು ಅಂತೆಲ್ಲ ಒಂಚೂರು ಭಯವಿದೆ. ಕಾರಣವಿಷ್ಟೆ ಈ ಪುಸ್ತಕದೊಂದಿಗೆ ನನ್ನದೇ ಕನಸಿನ ಮಿಥಿಲಾ ಪ್ರಕಾಶನ ಹುಟ್ಟುತ್ತಿದೆ. ವರ್ಷಗಳ ಹಿಂದೆ ನನ್ನ ಕಥಾಸಂಕಲನ ಮಾಡಬೇಕು ಅಂತ ಹಲವಾರು ಪ್ರಕಾಶಕರ ಹತ್ರ ತಿರುಗಾಡಿದೆ. ಆದ್ರೆ ಎಲ್ಲ ವಲ್ಲೆ ಅಂದ್ರು. ‘ಸೇಲೆಬಲ್‌ ಕಟೆಂಟ್‌ ಏನಾದ್ರು ಕೊಡಿ. ಅದೇ ಪರ್ಸನಾಲಿಟಿ ಡೆವಲೆಪ್‌ಮೆಂಟ್‌ ಥರದ್ದು, ಮಣಿಕಾಂತ್‌ ಬರೀತಾರಲ್ಲ ಆಥರದ್ದು’ ಅಂದ್ರು ಕೆಲವರು. ಇನ್ನು ಕೆಲವ್ರು ನಾವು ಪುಸ್ತಕ ಮಾಡ್ತೀವಿ. ಆದ್ರೆ ಮಾರಾಟ ನಿಮ್ಮದು ಅನ್ನೋ ಥರ ಮಾತಾಡಿದ್ರು. ಹೊಸ ಬರಹಗಾರನೊಬ್ಬನ ಪುಸ್ತಕವನ್ನು ಪ್ರಕಾಶಿಸುವುದು, ಅದ್ರಲ್ಲೂ ವಿಷಯಾಧಾರಿತ ಪುಸ್ತಕ ಪ್ರಕಾಶನ ತುಸು ಕಷ್ಟವೆ.

ಪ್ರಕಾಶಕರ ಇನ್ನೊಂದು ವರ್ಗವಿದೆ. ಸಾವಿರ ಕಾಪಿ ಪ್ರಿಂಟ್‌ ಹಾಕಿ ಅದ್ರಲ್ಲಿ ೩೦೦ ಲೈಬ್ರರಿಗೆ ಹಾಕಿ, ಬಿಡುಗಡೆಯಾದ ದಿನ ಒಂದು ೨೦೦ ಕಾಪಿ ಸೇಲ್‌ ಮಾಡಿ, ಮಿಕ್ಕಿದ್ದು ಮಾರಾಟ ಆದ್ರೆ ಆಯ್ತು, ಇಲ್ಲ ಅಂದ್ರೆ ಇಲ್ಲ ಅಂತ ಕೈತೊಳೆದುಕೊಳ್ಳುವ ಪ್ರಕಾಶಕರು. ಅಲ್ಲಿ ಪುಗ್ಸಟ್ಟೆ ೨೫ ಪುಸ್ತಕದ ಹೊರತಾಗಿ ಬರಹಗಾರನಿಗೆ ಏನು ಸಿಗುವುದಿಲ್ಲ. ಬಾಳ ಮಜ ಅಂದ್ರೆ ಮಣಿಕಾಂತ್‌ ಥರದ ಪುಸ್ತಕ ಬರೆದುಕೊಡಿ ಅಂದಕಡೆ ಮಣಿಕಾಂತ್‌ ರೆಫರೆನ್ಸ್‌ನಿಂದಾನೆ ಹೋಗಿದ್ದೆ! ಆರಂಭದಲ್ಲಿ ಮಣಿಕಾಂತ್‌ ಪುಸ್ತಕವನ್ನು ಯಾರೂ ಪ್ರಕಟಿಸಲು ಮುಂದೆ ಬರಲಿಲ್ಲ. ಅಮ್ಮ ಹೇಳಿದ ೮ ಸುಳ್ಳುಗಳು ೯೦ ಸಾವಿರ ಪ್ರಿಂಟ್‌ ತಲುಪಿದಾಗ ಈ ವಿಷಯವನ್ನು ಬರೆದುಕೊಂಡಿದ್ರು. ಇವತ್ತು ಅಮ್ಮ ಹೇಳಿದ ೮ ಸುಳ್ಳು ಲಕ್ಷ ಪ್ರತಿ ದಾಟಿದೆ. ಅಮ್ಮ ಅಂದ್ರೆ ಆಕಾಶ ಮತ್ತು ಇತರ ಎಲ್ಲ ಪುಸ್ತಕಗಳು ಸೇರಿ ಬಹುಶಃ ಮಣಿ ೨.೫ಲಕ್ಷಕ್ಕಿಂತ ಹೆಚ್ಚು ಪುಸ್ತಕ ಮಾರಾಟ ಮಾಡಿರಬಹುದು ಅಂತ ನಾವು ಮೊನ್ನೆ ಲೆಕ್ಕ ಹಾಕ್ತಾ ಇದ್ವಿ.

ಸಂಖ್ಯೆ ದೊಡ್ಡದಾಗಿ ಕಾಣುತ್ತೆ. ಆದ್ರೆ ಅದರ ಹಿಂದಿನ ಪರದಾಟ ಹೆಚ್ಚಿನವರಿಗೆ ಕಾಣಿಸಲ್ಲ. ಪುಸ್ತಕ ಬಿಡುಗಡೆ ಮಾಡಿದ ಆರಂಭದ ದಿನಗಳಲ್ಲಿ ಮಣಿ ಪುಸ್ತಕ ಹೊತ್ತುಕೊಂಡು ಸಿಕ್ಕಾಪಟ್ಟೆ ಅಲೆದಾಡಿದ್ದಾರೆ. ಸಾಹಿತ್ಯ ಸಮ್ಮೇಳನ, ಯಾವುದೋ ಸಣ್ಣ ಸಮಾರಂಭ, ನೂರಾರು ಜನ ಸೇರುವ ಎಲ್ಲೆಂದರಲ್ಲಿ ಮಣಿ ಸ್ವತಃ ತಾನೇ ನಿಂತು, ಪುಸ್ತಕದ ಲೇಖಕ ಎಂಬುದನ್ನು ಮರೆತು ಪುಸ್ತಕ ಮಾರಾಟ ಮಾಡಿದ್ದಾರೆ. ಬಂಡಲ್‌ಗಳನ್ನು ಹೊತ್ತು ಬಸ್‌ಗೆ ಹಾಕಿದ್ದಾರೆ. ಖಂಡಿತ ಇದೆಲ್ಲ ನಂಗು ಸ್ಫೂರ್ತಿ ಕೂಡ.

ಇಷ್ಟಾಗಿಯೂ ನಂಗಂತು ಪ್ರಕಾಶನದ ಕನಸು ಇರಲಿಲ್ಲ. ‘ಪತ್ರಿಕೆಗೆ ಬರೆಯೋದು ಹೇಗೆ?’ ಈ ಪ್ರಶ್ನೆಗೆ ಯಾರಾದ್ರು ಉತ್ತರ ಕೊಡಬೇಕು ಅಂತ ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಸಂಪಾದಕರ ಮಟ್ಟದಲ್ಲಿ ಇರೋರು ಯಾರಾದ್ರು ಬರೆದ್ರೆ ಚೆನ್ನಾಗಿರುತ್ತೆ. ಅದಿಲ್ಲ ಅಂದ್ರೆ ನನ್ನಂತ ಆರೆಂಟು ವರ್ಷ ಅನುಭವ ಉಳ್ಳವನು ಅದ್ರ ತಂತ್ರಗಳ ಕುರಿತು, ಪತ್ರಿಕೆಯ ಲೇಖನವೊಂದು ಬೇಡುವ ಅಗತ್ಯತೆಯ ಕುರಿತು ಬರೆಯಬೇಕು ಕೈಪಿಡಿ ಥರದಲ್ಲಿ ಅಂತ ಆಲೋಚಿಸುತ್ತಿದ್ದೆ.

ನಮ್ಮಲ್ಲಿ ಬರೆಯಬೇಕೆಂಬುದು ಬಹಳಷ್ಟು ಜನರ ಬಯಕೆ. ಬರೆಯುತ್ತಾರೆ ಕೂಡ. ಆದರೆ ಯಾವ ಪತ್ರಿಕೆಗೆ ಹೇಗೆ ಬರೆಯಬೇಕು? ಏನು ಬರೆಯಬೇಕು ಎಂದು ಗೊತ್ತಿಲ್ಲರುವುದಿಲ್ಲ. ಇನ್ನು ಕೆಲ ಪುರವಣಿಯಲ್ಲಿ ಕುಳಿತವರಿಗೆ ಲೇಖಕನಿಗೆ ಚ್ಯುತಿಯಾಗದಂತೆ ಹೇಗೆ ಎಡಿಟ್ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಅದಕ್ಕಿಂತ ಮುಖ್ಯವಾಗಿ ಪುರವಣಿಗಳು ಗಂಭೀರತೆ ಕಳೆದುಕೊಳ್ಳುತ್ತಿವೆ. ಓರ್ವ ಲೇಖಕನ ಲೇಖನಕ್ಕೆ ಪ್ರತಿಕ್ರಿಯಿಸುವ ಸೌಜನ್ಯತೆಯನ್ನು ಕಳೆದುಕೊಂಡಿದೆ ಎಂಬ ದೂರು ಇದೆ. ಮತ್ತೊಂದು ಮಗ್ಗುಲಿನಲ್ಲಿ ನೋಡಿದರೆ ಉದ್ದನೆಯ ಇಡೀ ಲೇಖನವನ್ನು ಪೂರ್ತಿಯಾಗಿ ನೋಡುವ ವ್ಯವದಾನ ಹಲವರಿಗಿಲ್ಲ ಎಂಬುದು ಬಹುವಾಗಿ ಕಾಡುತ್ತಿತ್ತು.

ಆ ಎಲ್ಲ ಆಲೋಚನೆಗಳಿಗೆ ಗೆಳೆಯ ಶ್ರೀನಿಧಿ ಡಿ,ಎಸ್‌ ಬೇರೆಯದೆ ರೂಪ ನೀಡಿದ್ರು. ಮಾಡೋದು ಮಾಡ್ತೀವಿ ಒಂದು ಡಾಕ್ಯುಮೆಂಟ್‌ ಆಗೋ ಥರದ ಪುಸ್ತಕವನ್ನೇ ಮಾಡೋಣ ಅಂದಾಯ್ತು. ಆದ್ರೆ ಬೇರೆಯವರೆಲ್ಲ ಇದಕ್ಕೆ ಬರೆಯಲಿಕ್ಕೆ ಒಪ್ಪುತ್ತಾರಾ ಎಂಬುದು ಪ್ರಶ್ನೆ. ಕೇಳಿ ನೋಡೋಣ ಬರೆದ್ರೆ ಆಯ್ತು. ಇಲ್ಲ ಅಂದ್ರೆ ಇಲ್ಲ ಅಂತ ನಿರ್ಧಾರ ಮಾಡಿದ್ವಿ. ಬಹಳ ಮಜ ಅಂದ್ರೆ ಒಬ್ಬ ಘನವೆತ್ತ ಸಂಪಾದಕರನ್ನು ಹೊರತುಪಡಿಸಿ, ನಾವು ಲೇಖನ ಕೇಳಿದ ಉಳಿದವ್ರೆಲ್ಲ ತಕ್ಷಣ ಒಪ್ಪಿ ಲೇಖನ ಬರೆದುಕೊಟ್ಟಿದ್ದಾರೆ ಹಾಗೂ ಅದೇ ಪುಸ್ತಕವಾಗಿ ಫೆ.೨೦ರ ಶನಿವಾರ ಸಂಜೆ ನಿಮ್ಮ ಕೈ ಸೇರುತ್ತಿದೆ. ಶ್ರೀವತ್ಸ ಜೋಶಿ, ಶಿವಾನಂದ ಕಳವೆ, ರೋಹಿತ್‌ ಚಕ್ರತೀರ್ಥ, ನವೀನ್‌ ಸಾಗರ್‌, ಶ್ರೀನಿಧಿ ಡಿ.ಎಸ್‌, ಶ್ರೀನಿಧಿ ಟಿ.ಜಿ, ಮಾವೆಂಸ ಪ್ರಸಾದ್‌, ಜಯದೇವ್‌ಪ್ರಸಾದ್‌ ಮೊಳೆಯಾರ್‌, ವಿಕಾಸ್ ನೇಗಿಲೋಣಿ, ರಜನಿ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ ಇದರಲ್ಲಿ ಬರೆದಿದ್ದಾರೆ. ವಾನಳ್ಳಿ ಸರ್‌ ಮುನ್ನುಡಿ, ರವಿ ಹೆಗಡೆಯವರ ಬೆನ್ನುಡಿ ಪುಸ್ತಕಕ್ಕಿದೆ.Poster.jpg

ಕೇವಲ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗುವ ಥರ ಬರೆಯುವುದನ್ನು ಉತ್ತೇಜಿಸುವುದು ಮಾತ್ರ ನಮ್ಮ ಉದ್ದೇಶವಲ್ಲ. ಅದು ಒಂದು ಸಕಾರಾತ್ಮಕ ಸಂದೇಶ ನೀಡಬೇಕು ಎಂಬುದು. ಪುಸ್ತಕ ಸರಿಯಾಗಿ ರೀಚ್‌ ಆಗಬೇಕು. ಒಂದಷ್ಟು ಜನರನ್ನು ತಲುಪಿ ಒಂದಷ್ಟು ಒಳ್ಳೆಯ ಬರಹಗಾರರು ಹುಟ್ಟಬೇಕು ಎಂಬ ಉದ್ದೇಶದಿಂದಲೇ ಇದಕ್ಕಾಗಿಯೇ ಒಂದು ಪ್ರಕಾಶನ ಹುಟ್ಟುಹಾಕಿ, ಪುಸ್ತಕ ಹೊರತರುವ ಸಾಹಸ ಮಾಡಿದ್ದೇನೆ. ಅದು ಏನಾಗುತ್ತೋ ಗೊತ್ತಿಲ್ಲ. ಪುಸ್ತಕದಲ್ಲಿ ಬರೆಯಲು ಒಪ್ಪಿ ಜೊತೆಗಿರುವ ಎಲ್ಲ ಲೇಖಕರಿಗು ಹೇಳಲು ಥ್ಯಾಂಕ್ಸ್‌ಗಿಂತ ಹೆಚ್ಚಾಗಿದ್ದು ಇನ್ನೇನು ಇಲ್ಲ. ಕಾರ್ಯಕ್ರಮ, ಪ್ರಿಂಟ್‌, ಸೇಲ್‌ ಇತ್ಯಾದಿ ವಿಷಯಗಳಲ್ಲಿ ನವೀನ್‌ ಸಾಗರ್‌, ಮಣಿಕಾಂತ್‌, ಶ್ರೀನಿಧಿ ಡಿ.ಎಸ್‌, ಶ್ರೀನಿಧಿ ಟಿ.ಜಿ ನೆರವನ್ನು ಮರೆಯಲು ಸಾಧ್ಯವಿಲ್ಲ. ನಾಗರಾಜ್‌ ವೈದ್ಯರ ವಿನ್ಯಾಸ, ಸತೀಶ್‌ ಬಾಬು ಚಿತ್ರಗಳು ನಿಮಗು ಇಷ್ಟವಾಗಬಹುದು.

ಈ ಪುಸ್ತಕ ಗೆಲ್ಲಿಸಿ ಇನ್ನೊಂದಷ್ಟು ಒಳ್ಳೆ ಪುಸ್ತಕಗಳನ್ನು ಹೊರತರಲು ಸ್ಫೂರ್ತಿ ನೀಡುವುದು ನಿಮ್ಮ ಕೈಯಲ್ಲಿದೆ. ಫೆ.೨೦ರ ಶನಿವಾರ ಸಂಜೆ ೪.೩೦ಕ್ಕೆ ಕೆ.ಆರ್‌.ಸರ್ಕಲ್ಲಿನ ಯುವಿಸಿಇ ಆವರಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ. ನೀವೆಲ್ಲ ಮುದ್ದಾಂ ಬರಬೇಕು. ಹಾಗೆಯೇ ಈ ಪುಸ್ತಕ ನಿಮ್ಮಿಂದ ಇನ್ನೊಂದಷ್ಟು ಜನರನ್ನು ತಲುಪುವಂತಾಗಿ, ಮತ್ತೊಂದಷ್ಟು ಜನ ಬರೆಯಲು ಶುರುವಿಟ್ಟರೆ ನಮ್ಮ ಪ್ರಯತ್ನ ಯಶಸ್ವಿ…ಶನಿವಾರ ಸಂಜೆ ಸಿಗೋಣ.