Feeds:
ಲೇಖನಗಳು
ಟಿಪ್ಪಣಿಗಳು

Archive for ಮೇ, 2010

ಹೇಗೆ ತೂಗಿ ನೋಡಿದರೂ, ಆವತ್ತು ಸಚಿನ್ ದ್ವಿಶತಕ ಭಾರಿಸಿದ್ದು  ಎಲ್ಲಾ  ಪತ್ರಿಕೆಗಳಲ್ಲಿ  ಲೀಡ್ ಸುದ್ದಿಯಾಗಬೇಕಿತ್ತು. ಕೇಂದ್ರದ ರೈಲ್ವೆ ಮತ್ತು ವಿತ್ತ  ಸಚಿವರು ಪ್ರತಿ ವರ್ಷ ಮುಗಂಡ ಪತ್ರ ಮಂಡಿಸುತ್ತಾರೆ. ಬಜೆಟ್, ಚುನಾವಣೆ ಫಲಿತಾಂಶ, ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ…ಇವೆಲ್ಲ   ಸುದ್ದಿಮನೆಯಲ್ಲಿ  ಪೂರ್ವನಿರ್ಧಾರಿತ ಲೀಡ್ ಸುದ್ದಿಗಳು. ವಿನ್ಯಾಸದಲ್ಲಿ  ಸೈ ಎನ್ನಿಸಿಕೊಳ್ಳುವ ಹಪಹಪಿತನವಿರುವ ಪತ್ರಿಕೆಗಳು, ಬಜೆಟ್ ಮಂಡನೆಗೆ ವಾರ ಮೊದಲೇ ರಂಗ ತಯಾರಿ ನಡೆಸಿರುತ್ತವೆ! ಆವತ್ತು ಆಗಿದ್ದು  ಕೂಡ ಹಾಗೆ! ಬಹುತೇಕ ಕನ್ನಡ ಪತ್ರಿಕೆಗಳು ಮಮತಾ ಬ್ಯಾನರ್ಜಿಯ ಮುಂಗಡ ಪತ್ರವನ್ನೇ ಲೀಡ್ ಮಾಡಿದವು. ಇನ್ನು  ಹಲವು ಇಂಗ್ಲಿಷ್ ಪತ್ರಿಕೆಗಳು ಅರ್ಧ ಜಾಗ ಮಮತಾಗೆ ಮತ್ತರ್ಧ ಜಾಗವನ್ನು ಸಚಿನ್‌ಗೆ ನೀಡಿದವು.

ಆದರೆ, ನನ್ನ  ಲೆಕ್ಕದಲ್ಲಿ  ಸಚಿನ್ ದ್ವಿಶತಕ ಆವತ್ತು ಮೊದಲ ಲೀಡ್ ಸುದ್ದಿಯಾಗಬೇಕಿತ್ತು.  ೧೯೭೧ರಿಂದ ಈವರೆಗೆ ನಡೆದ ಅಂತಾರಾಷ್ಟ್ರೀಯ ಏಕ ದಿನ ಪಂದ್ಯಗಳಲ್ಲಿ  ಮೊತ್ತ ಮೊದಲ ದ್ವಿಶತಕ ದಾಖಲಾಗಿದೆ. ಆ ಗರಿ ಭಾರತದ ಬೆನ್ನಿನಲ್ಲಿದೆ. ಕ್ರಿಕೆಟ್ ಲೋಕದ ದೃವತಾರೆ ಸಚಿನ್ ತೆಂಡೂಲ್ಕರ್, ಸಯ್ಯದ್ ಅನ್ವರ್ ಅವರ ಏಕದಿನ ಪಂದ್ಯದ ಗರಿಷ್ಠ  ರನ್ ದಾಖಲೆ ಮುರಿದು, ಮೊತ್ತ ಮೊದಲ ದ್ವಿಶತಕ ಭಾರಿಸಿದ್ದಾರೆ. ಕ್ರಿಕೆಟ್‌ನಲ್ಲಿ   ೧೬ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿವೆ. ಆಸ್ಟ್ರೇಲಿಯಾದಂಥ ತಂಡದಲ್ಲಿ ಬಹುಮುಖ ಪ್ರತಿಭೆ ಹೊಂದಿರುವ ಆಟಗಾರರಿಗೆ ಯಾವತ್ತು ಕೊರತೆಯಾಗಿಲ್ಲ. ಇಷ್ಟೆಲ್ಲದರ ನಡುವೆ ಭಾರತೀಯ ಆಟಗಾರನೊಬ್ಬ  ಸಾಧನೆ ಮಾಡಿರುವುದನ್ನು  ಹೆಮ್ಮೆಯಿಂದ ಹೇಳಿಕೊಳ್ಳಬೇಕು ತಾನೆ? ಕ್ರಿಕೆಟ್‌ಗೆ ಅದರದ್ದೆ  ಆದ ಒಂದು ನೋಡುಗ ವಲಯವಿದೆ. ಸಾವಿರಾರು ಕ್ರೀಡೆಗಳ ನಡುವೆಯೂ ಕ್ರಿಕೆಟ್ ತನ್ನದೇ ಆದ ಜನಪ್ರಿಯತೆ ಗಳಿಸಿದೆ. ಇನ್ನೂ  ಕ್ರಿಕೆಟ್ ಸುದ್ದಿಯನ್ನು, ಬಜೆಟ್‌ಗಿಂತ ಹೆಚ್ಚಾಗಿ ಜನ ಓದುತ್ತಾರೆ ಎಂಬುದರಲ್ಲಿ  ಯಾವುದೇ ಅನುಮಾವಿಲ್ಲ.

ಊಹುಂ, ಕನ್ನಡದ ಕೆಲ ಪತ್ರಿಕೆಗಳಿಗೆ ಅದೊಂದು ಮಹತ್ವದ ಸುದ್ದಿ  ಅನ್ನಿಸಲಿಲ್ಲ. ಇಂಗ್ಲಿಷ್‌ನ ಕೆಲ ಪತ್ರಿಕೆಗಳಿಗೆ ಕೂಡ ಸಚಿನ್ ಡಬ್ಬಲ್ ಧಮಾಕ ರುಚಿಸಲಿಲ್ಲ. ಅವರೆಲ್ಲ ಬ್ಯಾನರ್ಜಿ ಬಜೆಟ್ ಸುದ್ದಿಯನ್ನೇ ಲೀಡ್ ಮಾಡಿದವು. ಹಾಗಾಗಿಯೇ ‘ದಿ ಎಕನಾಮಿಕ್ ಟೈಮ್ಸ್’ ಯಾವತ್ತೂ  ಎಲ್ಲಾ  ಪತ್ರಿಕೆಗಳಿಗಿಂತ ಭಿನ್ನ ಅನ್ನಿಸುವುದು. ವಾಣಿಜ್ಯ ಸುದ್ದಿಗಳಿಗೆ ಮೀಸಲಾದ ಪತ್ರಿಕೆಯ ಮುಖಪುಟದಲ್ಲಿ  ಸಚಿನ್ ಭಾವಚಿತ್ರ ರಾರಾಜಿಸುತ್ತಿತ್ತು. ಮೊದಲ ಲೀಡ್‌ನಲ್ಲಿ  ಸಚಿನ್ ಮತ್ತು ಜಾಹೀರಾತು ಸಂಬಂಧಿ ಲೇಖನವಿತ್ತು. ವಾಣಿಜ್ಯ ಪತ್ರಿಕೆಯೊಂದರಲ್ಲಿ  ಮುಂಗಡ ಪತ್ರ ಎಂಬುದು ಮೂಲೆಗುಂಪಾಗಿತ್ತು. ಸುದ್ದಿಯ ಗ್ರಹಿಕೆಯಲ್ಲಿ, ಗೌಪ್ಯ ಸುದ್ದಿಯೊಂದನ್ನು ತಿಂಗಳುಗಳ ಮುಂಚಿತವಾಗಿ ಕಲೆ ಹಾಕುವುದರಲ್ಲಿ  ಬಹುಶಃ  ಎಕನಾಮಿಕ್ ಟೈಮ್ಸ್  ಮೀರಿಸುವ ಪತ್ರಿಕೆಯಿಲ್ಲ.  ಹಿಂದುಸ್ತಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಏಷಿಯನ್ ಏಜ್, ಡಿಎನ್‌ಎ ಮೊದಲಾದ ಪ್ರತಿಷ್ಠಿತ ದಿನಪತ್ರಿಕೆಗಳನ್ನು ನಾಚಿಸುವಷ್ಟು  ತಾಕತ್ತು ಎಕನಾಮಿಕ್ ಟೈಮ್ಸ್‌ಗಿದೆ ಎಂಬುದಕ್ಕೆ ಸಾಕಷ್ಟು  ನಿದರ್ಶನಗಳು ಸಿಗುತ್ತವೆ.

“ರೆವಾ ಎಲೆಕ್ಟ್ರಿಕ್ ಕಾರು ಕಂಪನಿಯನ್ನು  ಮಹೀಂದ್ರ ಸಂಸ್ಥೆ  ಖರೀದಿಸುತ್ತದೆ” ಎಂಬ ಸ್ಕೂಪ್ ಸುದ್ದಿಯನ್ನು ತಿಂಗಳುಗಳ ಹಿಂದೆ ಎಕನಾಮಿಕ್ ಟೈಮ್ಸ್  ಮುಖಪುಟದಲ್ಲಿ  ಪ್ರಕಟಿಸಿತ್ತು. ವಾಣಿಜ್ಯ ಪುಟವನ್ನು ವಾಣಿಜ್ಯವಾಗಿಯೇ ನೋಡಿದರೆ, ರೇವಾ ಸಂಸ್ಥೆ  ಮಾರಾಟ ಒಂದು ಮಹತ್ತರ ಸುದ್ದಿ. ರಾಷ್ಟ್ರಮಟ್ಟದ ದಿನಪತ್ರಿಕೆಯೊಂದಕ್ಕೆ ಮುಖಪುಟ ಸುದ್ದಿಯಾಗಿರುವ ರೇವಾ ಮಾರಾಟ, ರಾಜ್ಯದ ಪತ್ರಿಕೆಗಳಿಗೆ ಲೀಡ್ ಆಗಲೇಬೇಕಾದ ಸುದ್ದಿ. ಬೆಂಗಳೂರು ಮೂಲದ ಏಕೈಕ ಕಾರು ಉತ್ಪಾದಕ ಸಂಸ್ಥೆ  ರೇವಾ. ನಮ್ಮ  ದೇಶದಲ್ಲಿ  ಸ್ವತಂತ್ರವಾಗಿ ಕಾರು ಉತ್ಪಾದನೆ ಮಾಡುವ ಯಾವ ಸಂಸ್ಥೆಯೂ ಇಲ್ಲ. ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಉತ್ಪಾದಕ ಘಟಕ ಹೊಂದಿವೆ. ಈ ದೃಷ್ಟಿಯಿಂದ ನೋಡಿದಾಗ ರೇವಾ ಸಂಸ್ಥೆ  ಮಾರಾಟ ನಮಗೆ ಮಹತ್ತರದ ಸುದ್ದಿ. ಇವತ್ತು ಈ ಸುದ್ದಿ  ಅಧಿಕೃತವಾಗಿ ಹೊರಬಂದಿದೆ. ಆದರೆ, ಎಕನಾಮಿಕ್ ಟೈಮ್ಸ್  ತಿಂಗಳ ಹಿಂದೆ ಈ ಸುದ್ದಿಯನ್ನು ಬಿತ್ತರಿಸಿತ್ತು!

ಏರ್‌ಟೆಲ್-ಜೈನ್ ಖರೀದಿ, ವಾಣಿಜ್ಯ ಸಂಬಂಧಿ ಸರಕಾರದ ಹೊಸ ನೀತಿಗಳು…ಹೀಗೆ ದೇಶದಲ್ಲಿನ  ಎಲ್ಲಾ  ವಾಣಿಜ್ಯ ಬೆಳವಣಿಗೆಗಳನ್ನು ಎಕನಾಮಿಕ್ ಟೈಮ್ಸ್  ವಾರಗಟ್ಟಲೆ ಮುಂಚಿತವಾಗಿ ಪ್ರಕಟಿಸಿರುತ್ತದೆ. ಇನ್ನು  ವರದಿಗಾರಿಕೆ ಶೈಲಿಯ ಕುರಿತು ಕೆಮ್ಮುವಂತಿಲ್ಲ. ಯಾವ ವಾಕ್ಯವನ್ನು ಯಾರ ಬಾಯಿಯಿಂದ ಹೇಳಿಸಬೇಕು ಎಂಬ ವಿಷಯದಲ್ಲಿ  ಅಲ್ಲಿನ ವರದಿಗಾರರ ನಿಪುಣರು! ವಿನ್ಯಾಸವೂ ಹಾಗೆ, ಸುದ್ದಿಗೆ ಸರಿಹೊಂದುವ ಅದೆಷ್ಟೊ  ಕ್ರಿಯಾಶೀಲ ವಿನ್ಯಾಸಗಳು ಬರುತ್ತಿರುತ್ತವೆ. ಅಂದಹಾಗೆ ವಾಣಿಜ್ಯ ಪ್ರತಿಕೆಗಳಲ್ಲಿ  ಸ್ಪರ್ಧೆ ಕೂಡ ಅದೇ ರೀತಿ ಇದೆ. ಬ್ಯೂಸಿನೆಸ್ ಲೈನ್ ಮೇಲ್ನೋಟಕ್ಕೆ ಸಪ್ಪೆ ಅನ್ನಿಸಿದರೂ, ಸುದ್ದಿಯಲ್ಲಿ  ಪ್ರಬಲವಾದ ಪ್ರತಿಸ್ಪರ್ಧೆ ನೀಡುತ್ತದೆ. ಬ್ಯೂಸಿನೆಸ್ ಸ್ಟಾಂಡರ್ಡ್, ವಿನ್ಯಾಸ ಹಾಗೂ ಸುದ್ದಿಯಲ್ಲಿ  ಎಕನಾಮಿಕ್ ಟೈಮ್ಸ್‌ಗೆ ಸರಿಸಾಟಿಯಾಗಿ ನಿಲ್ಲಬಲ್ಲದು. ಸ್ಪರ್ಧೆ ಹೆಚ್ಚಾದಾಗ ಪತ್ರಿಕೆಗಳ ಗುಣಮಟ್ಟ  ಸುಧಾರಣೆ ಸಾಧ್ಯ ಎಂಬುದಕ್ಕೆ ವಾಣಿಜ್ಯ ವಲಯ ಉತ್ತಮ ಉದಾಹರಣೆ.

“ರೀ ವಿನಾಯಕ್, ಹಳದಿ ಬಣ್ಣದಲ್ಲಿ  ಬರುತ್ತಲ್ಲ  ಅದೇಯೇನ್ರಿ  ಎಕನಾಮಿಕ್ ಟೈಮ್ಸ್  ಅಂದ್ರೆ. ನಮ್ಮ ಸರ್ ದಿನ ಓದ್ತಾ ಇರ್‍ತಾರೆ ಆ ಪತ್ರಿಕೆಯನ್ನ…”ಹಾಗಂತ ವಾಹಿನಿಯೊಂದರಲ್ಲಿ  ಕೆಲಸ ಮಾಡುವ ಗೆಳತಿಯೊಬ್ಬಳು ಕೇಳುತ್ತಿದ್ದಳು! ನನಗೆ ನಗಬೇಕೊ, ಬೈಯ್ಯಬೇಕೋ ಗೊತ್ತಾಗಲಿಲ್ಲ. ಓದುಗರು ಒತ್ತಟ್ಟಿಗಿರಲಿ, ಬಹುಶಃ ಬಹುತೇಕ ಸ್ಥಳೀಯ ಪತ್ರಕರ್ತರ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿಯೇ ಇರಬೇಕು ನಮ್ಮ  ನಾಡಿನ ವಾಣಿಜ್ಯ ಪುಟಗಳು ಕೇವಲ ಜಾಹೀರಾತು ಆಧಾರಿತವಾಗಿರುವುದು!

Read Full Post »

ತುಂಬಾ ದಿನಗಳಾಗಿತ್ತು ಏನ್ನನ್ನೂ  ಓದದೆ. ಯಾಕೋ ಇತ್ತೀಚೆಗೆ ಓದು ತುಂಬಾ ಬೇಜಾರನ್ನಿಸುತ್ತಿದೆ. ದೂರದ ಬೆಟ್ಟ  ನುಣ್ಣಗೆ ಅನ್ನುವ ಹಾಗೆ, ಬರಗಾರರನ್ನು ಹತ್ತಿರದಿಂದ ನೋಡಬಾರದು! ಯಾಕಂದ್ರೆ ಅವರನ್ನು ನೋಡಿದ ನಂತರ ಅವರ ಬರವಣಿಗೆ ಇಷ್ಟವಾಗುವುದು ತುಂಬಾ ಕಷ್ಟ. ಲವ್ ಜಿಹಾದ್ ಕುರಿತು ಪುಂಖಾನು-ಪುಂಖವಾಗಿ ಬರೆದು, ತೃಷೆ ತೀರಿಸಿಕೊಳ್ಳಲು ಯಾವ ಧರ್ಮದ ಹೆಣ್ಣು ಮಗಳಾದ್ರು ಸರಿ ಎನ್ನುವ ಜಾತಿಯ ಬರಹಗಾರರ ಪ್ರಮಾಣ ನಮ್ಮಲ್ಲಿ ಹೆಚ್ಚಾಗುತ್ತಿದೆ! ವ್ಯಕ್ತಿಯ ಯೋಗ್ಯತೆ ಗೊತ್ತಾದಾಗ, ಎಷ್ಟೇ ಕಷ್ಟಪಟ್ಟರೂ ಅವರ ಬರವಣಿಗೆ ಓದಲು ನನ್ನ ಮಟ್ಟಿಗಂತೂ ಸಾಧ್ಯವಿಲ್ಲ. ಆದ್ರೂ, ಓಶೋರಂಥ ತೀರಾ ಬೆರಳೆಣಿಕೆ ಮಂದಿ ಅವೆಲ್ಲವನ್ನೂ ಮೀರಿ ಬರೆಯುತ್ತಾರೆ! ಅಕ್ಷರ ರಕ್ಕಸರನ್ನು ಓದಲು ಕುಳಿತರೆ ಕಣ್ಣಿಂದ ನೋಡಿದ್ದೆಲ್ಲ  ಮರೆತು ಹೋಗುವಷ್ಟು  ಸೊಗಸು ಶೈಲಿ.

ಖಂಡಿತವಾಗಿಯೂ ಓದಿದಷ್ಟೂ  ಬರವಣಿಗೆ ಅಭಿವೃದ್ಧಿಯಾಗುತ್ತದೆ. ಹೊಸ-ಹೊಸ ಆಲೋಚನೆಗಳು ಹುಟ್ಟುತ್ತವೆ. ಕಥೆ-ಕಾದಂಬರಿಗಳನ್ನು ಬರಹಗಾರನ ಹೆಸರನ್ನು ಹೊರಗಿಟ್ಟು  ಓದಬಹುದು. ಓದಬೇಕು ಕೂಡ. ಆದ್ರೂ ಕೂಡ ಓದಲು ಮನಸ್ಸಿರಲಿಲ್ಲ.  ಎಸ್.ಎಲ್ ಭೈರಪ್ಪ, ಓಶೋ, ಕಾರಂತರು…ಈ ಮೂವರು ಬರಹಗಾರರನ್ನು ಓದಲು ನನ್ನ ಪಾಲಿಗೆ ಮೂಡು ಬೇಕಿಲ್ಲ. ಉಳಿದವರ ಬರಹ ಓದಲು ಮಾನಸಿಕ ವೇದಿಕೆ ಅಗತ್ಯ. ಈ ಸಲದ ಸೋಮಾರಿತನಕ್ಕೆ ಅದು ಹುಸಿಯಾಗಿದೆ! ಸುಶ್ರುತನ ಬಳಿ ಪರ್ವ ತೆಗೆದುಕೊಂಡು ಬಹುಶಃ  ೬ ತಿಂಗಳು ಕಳೆದಿದೆ. ಇನ್ನೂ ೪೦೦ ಪುಟ ಓದಲು ಬಾಕಿಯಿದೆ!

ಇಂತಿಪ್ಪೊ  ನನ್ನನ್ನು, ಛಂದ ಪುಸಕ್ತ ಮತ್ತೆ ಮೊದಲಿನ ಓದಿಗೆ ಶುರು ಹಚ್ಚಿದೆ. ವಸುಧೇಂದ್ರರ ‘ರಕ್ಷಕ ಅನಾಥ’ ಕೃತಿಯನ್ನು ಒಂದೂವರೆ ದಿನದಲ್ಲಿ  ಓದಿ ಮುಗಿಸಿದ್ದೇನೆ. ಈ ಕೃತಿ ವಸುಧೇಂದ್ರರ ಬರವಣಿಗೆ ತಾಕತ್ತನ್ನು ಮತ್ತಷ್ಟು ಹೆಚ್ಚಿಸಿದೆ ಅಂದರೆ ಬಹುಶಃ ತಪ್ಪಾಗಲಾರದು. ಅವರ ಸಾಫ್ಟ್‌ವೇರ್ ಕಚೇರಿಯ ಚಟುವಟಿಕೆಗಳ ಕುರಿತಾದ ಬರಹಗಳು ಹೊಟ್ಟೆ  ಹುಣ್ಣಾಗುವಷ್ಟು  ನಗಿಸುತ್ತವೆ. ಬಾಸ್ ಸಂದೀಪನ ಸಂಸ್ಕೃತಿ ಪರಿಚಯಿಸುವ ಹುಚ್ಚು  ನೆನಪಿಸಿಕೊಂಡಾಗಲೆಲ್ಲ  ನಗು ಉಕ್ಕುಕ್ಕಿ ಬರುತ್ತದೆ. ಇಂಗ್ಲೆಂಡ್‌ನ ದಂಪತಿಗಳು ಲೇಖಕರ ಕಚೇರಿಗೆ ಭೇಟಿ ನೀಡುತ್ತಾರೆ. ಯಾವುದೋ  ಪ್ರಾಜೆಕ್ಟ್  ಕುರಿತು ನಿರ್ಧಾರ ತೆಗೆದುಕೊಳ್ಳಲು ಅವರು ಬಂದಿರುತ್ತಾರೆ. ಸಭೆ ನಡೆಯುತ್ತಿರುವಾಗ ಇಲಿಯೊಂದು ಪ್ರವೇಶಿಸುವ ದೃಶ್ಯ ಸಖತ್ ಮಜವಾಗಿದೆ. ಇಲಿಗೆ ಹೆದರುವ ಈ ಮಂದಿ ಭಾರತವನ್ನು ಶತಮಾನಗಳ ಕಾಲ ಆಳಿದ್ದು  ಹೌದಾ? ಎನ್ನುವ ಸಂದೀಪನ ಪ್ರಶ್ನೆ ಎಲ್ಲರನ್ನೂ  ಚಿಂತನೆಗೆ ಹಚ್ಚಿಸುತ್ತದೆ.

ಇನ್ನೂ ರಿಸೆಷನ್ ಪರಿಣಾಮದಿಂದ ಸಾಫ್ಟ್‌ವೇರ್ ಕಚೇರಿಯಲ್ಲಾಗುವ ತಲ್ಲಣವನ್ನು, ಹೇಳಲು ಸಾಧ್ಯವಿಲ್ಲದಷ್ಟು  ಸೊಗಸಾಗಿ ವಿವರಿಸುತ್ತಾರೆ ವಸುಧೇಂದ್ರ. ಉದ್ಯೋಗ ಕಡಿತಕ್ಕೆ ಮುಂದಾಗುವ ಬಾಸ್, ಅದಕ್ಕೆ ಲೇಖಕರು ನೀಡುವ ಕೆಲ ಐಡಿಯಾಗಳು ಮಸ್ತಾಗಿವೆ. ವೆಚ್ಚ  ಕಡಿತಕ್ಕೆ ಮುಂದಾದ ಬಾಸ್, ಗುರುವಾರದ ಊಟಕ್ಕೆ ಕತ್ತರಿ ಹಾಕುತ್ತಾನೆ. ರಾಯರ ವಾರದಂದು ಉಪವಾಸವಿರಬೇಕು ಎಂಬ ಸಂದೇಶ ನೀಡುತ್ತಾನೆ. ಆವತ್ತು ಸಂಜೆ ಕಚೇರಿಯಲ್ಲಿ  ಯಾವೊಬ್ಬ  ಉದ್ಯೋಗಿಯೂ ಕಾಣುವುದಿಲ್ಲ. ಭಯಗೊಂಡ ಬಾಸ್ ಸಂದೀಪ ಹಾಗೂ ಲೇಖಕರು ಸಹೊದ್ಯೋಗಿಗಳನ್ನು  ಹುಡುಕಿಕೊಂಡು ಹೊರಟಾಗ ಕಚೇರಿಯಲ್ಲೊಂದು ಭಜನಾ ಮಂಡಳಿ ಆರಂಭವಾಗಿರುತ್ತದೆ! ಕೀ ಬೋರ್ಡ್, ಮೌಸ್ ಬಿಟ್ಟ  ಮಂದಿ ರಾಯರ ಭಜನೆಗಳನ್ನು ಹಾಡುತ್ತಿರುತ್ತಾರೆ. ಈ ಸನ್ನಿವೇಶವನ್ನು ಕಣ್ಣೆದೆರಿಗೆ ನಿಲ್ಲುವಂತೆ ವರ್ಣಿಸಿದ್ದಾರೆ ಲೇಖಕರು. ಈ ಲೇಖನ ಓದಿದ ನಂತರವೂ ನಗು ಬಾರದವರ ಕುರಿತು ನಾವು ಅನುಮಾನಿಸಬೇಕಾಗುತ್ತದೆ! ಅಷ್ಟೊಂದು ಸೊಗಸಾಗಿದೆ  ಬರಹ.

ಪುಸಕ್ತ ಮಾರಾಟದ ಕುರಿತ ವಸುಧೇಂದ್ರರ ಅನುಭವಗಳು, ದ್ರೌಪದಿಗೆ ಕೃಷ್ಣ ಸೀರೆ ನೀಡಿದ ಕುರಿತ ಅನುಮಾನ ನಮ್ಮನ್ನು ಗಂಭೀರವಾದ ಚಿಂತನೆಗೆ ಹಚ್ಚುತ್ತದೆ. ೫ ರೂ. ಕಡಿಮೆಯಿದೆ ಎಂದು ಕುರುಡನ ತಂದೆಗೆ ಪುಸಕ್ತ ನೀಡದ ಒಂದು ಘಟನೆ ಕಣ್ಣಲ್ಲಿ  ನೀರು ತರಿಸುತ್ತದೆ. ನಮ್ಮ  ವ್ಯಾಪಾರಿ ಬುದ್ಧಿಯ, ಘಟನೆಯ ನಂತರ ಪಶ್ಚಾತಾಪ ಪಡುವ ಎಷ್ಟೋ ಮಂದಿಯ ಜಾಣತನವನ್ನು ವಿವರಿಸುತ್ತದೆ. ಟೋಟ್ಟಲಿ  ನಾನು ಇತ್ತೀಚೆಗೆ ಓದಿದ ಒಂದು ಅತ್ಯುತ್ತಮ ಕೃತಿ(ಇತ್ತೀಚೆಗೆ ಏನು ಓದಿಲ್ಲ  ಎಂಬುದು ಇದಕ್ಕೆ ಕಾರಣವಿರಬಹುದು!)ಹಾಗೂ ನೀವೆಲ್ಲ  ಕೊಂಡು ಓದಲೇ ಬೇಕಾದ ಕೃತಿ ಅಂದುಕೊಳ್ಳುತ್ತೇನೆ. ನಮ್ಮಮ್ಮ, ಯುಗಾದಿ ನಂತರ ಲೇಖಕರು ಅಷ್ಟೆ  ತೂಕದ ಮತ್ತೊಂದು ಕೃತಿ ಕೊಟ್ಟಿದ್ದಾರೆ  ಎಂದರೆ ಬಹುಶಃ  ತಪ್ಪಾಗಲಾರದು. ಸಾಫ್ಟ್‌ವೇರ್ ಎಂಬ ಸೋಜಿಗದ ಜಗತ್ತಿನ ನಡುವೆಯೂ ಸ್ಟಾಲ್‌ನಲ್ಲಿ  ನಿಂತು ತೀರಾ ಮಾರ್ವಾಡಿ ಬುದ್ಧಿಯೊಂದಿಗೆ ಪುಸಕ್ತ ಮಾರುವ ವಸುಧೇಂದ್ರರ ಸಾಹಿತ್ಯ ಪ್ರೀತಿಗೊಂದು ಸಲಾಂ.

ಈಗ ಪರ್ವ ಹಿಡಿದು ಕುಳಿತ್ತಿದ್ದೇನೆ. ೧೪ ತಾಸುಗಳ ನಿದ್ದೆಗೆ ತಕ್ಕ ಮಟ್ಟಿನ ಕಡಿವಾಣ ಹಾಕಲು ಯತ್ನಿಸುತ್ತಿದ್ದೇನೆ! ಕಥೆಯೊಂದನ್ನು ಬರೆಯದೇ ಇವತ್ತಿಗೆ ಸರಿಯಾಗಿ ಒಂದು ವರ್ಷವಾಯ್ತು. ಇನ್ನೂ ಬರವಣಿಗೆಯಲ್ಲೂ  ತೀರಾ ಸೋಮಾರಿತನ. ಈ ಖಾಯಿಲೆಗಳಿಂದ ಯಾವತ್ತು ಮುಕ್ತಿ ಪಡೆಯುತ್ತೇನೊ ಗೊತ್ತಿಲ್ಲ!

Read Full Post »