Posted in ಚಿಂತನ ಚಾವಡಿ on ಸೆಪ್ಟೆಂಬರ್ 12, 2011|
6 Comments »
ಬದುಕು ನಿಂತ ನೀರಾಗಬಾರದು. ಹರಿಯುವ ನದಿಯಾಗಬೇಕು ಅಂತಾರೆ ಬಲ್ಲವರು. ೪-೫ ವರ್ಷ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೆ, ಸ್ವಾಭಾವಿಕವಾಗಿ ಅದು ನಮಗೆ ಬೇಸರ ತರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಒಂದೇ ಕಡೆ ಅಂಟಿಕೊಂಡರೆ ಬದುಕಿನ ಒಂದಷ್ಟು ಅನುಭವಗಳನ್ನು ಕಳೆದುಕೊಳ್ಳುತ್ತೇವೆ. ಹೀಗೆಲ್ಲ ಯೋಚಿಸಿ ಕೆಲಸದಲ್ಲೊಂದು ಪುಟ್ಟ ಬದಲಾವಣೆ ಮಾಡಿಕೊಂಡಿದ್ದೇನೆ. ಸುಮಾರು ೪ ವರ್ಷಗಳಿಂದ ಕೈಹಿಡಿದು ನಡೆಸಿದ್ದ ಮುದ್ರಣ ಮಾಧ್ಯಮದಿಂದ, ದೃಶ್ಯ ಮಾಧ್ಯಮದತ್ತ ಹೆಜ್ಜೆ ಹಾಕಿದ್ದೇನೆ. ಅದಕ್ಕೂ, ಇದಕ್ಕೂ ಏನು ವ್ಯತ್ಯಾಸ ಅಂತಾ ಬಹಳಷ್ಟು ಮಂದಿಕೇಳಿದ್ದಾರೆ. ಅಲ್ಲ, ಅಂಥ ಒಳ್ಳೆ ಪತ್ರಿಕೆ ಬಿಟ್ಟು ಇಲ್ಲಿಗ್ಯಾಕೆ ಬಂದ್ರಿ ಅನ್ನುವ ದಾಟಿಯಲ್ಲಿ ಮಾತಾಡಿದವರೂ ಇದ್ದಾರೆ.
ಕೆಟ್ಟ ಬಾಸಿನ ಕಾಟ ತಾಳಲಾರದೆ ಬಿಟ್ಟಿದ್ದೇನೆ ಅಂದವರಿಗೂ ಕೊರತೆಯಿಲ್ಲ! ಇಲ್ಲಿ ಒಂದು ಸ್ಪಷ್ಟೀಕರಣ ಕೊಡಬೇಕಿದೆ. ಕೆಟ್ಟ ಬಾಸಿನ ಕಾಟ ಅಂದವರು ಹೆಸರಿಸಿರುವ ವ್ಯಕ್ತಿ, ನನಗೆ ಯಾವತ್ತೂ ಬಾಸ್ ಆಗಿರಲಿಲ್ಲ. ಬಾಸಿಸಂ ಸಂಸ್ಕೃತಿ ಒಪ್ಪಿಕೊಂಡು ಕೆಲಸ ಮಾಡಬೇಕಾದ ಯಾವ ಅನಿವಾರ್ಯತೆಯೂ ನನಗಂತೂ ಇಲ್ಲ. ಜಗತ್ತು ಸಾಕಷ್ಟು ವಿಶಾಲವಾಗಿದೆ ಅಂತಾ ನಂಬಿದವನು. ಅವರ ಜೊತೆಗೆ ನನ್ನ ನಂಟು ಇವತ್ತಿಗೂ ಚೆನ್ನಾಗಿದೆ. ಬೇರೆಯವರ ಪಾಲಿಗೆ ಅವರು ಹೇಗೋ ಗೊತ್ತಿಲ್ಲ.
ಕೆಲಸ ಬದಲಿಸಿದ್ದರಿಂದ ಒಂದಷ್ಟು ಲಾಭವಾಗಿದೆ. ಒಂದಷ್ಟು ನಷ್ಟವಾಗಿದೆ. ಮುಖ್ಯವಾಗಿ ನನ್ನ ನಿತ್ಯದ ೧೪ ತಾಸಿನ ನಿದ್ದೆಗೆ ಕಡಿವಾಣ ಬಿದ್ದಿದೆ. ವಿಶ್ರಾಂತಿಯ ಸಮಯ ೧೨ ತಾಸಿಗೆ ಇಳಿಕೆಯಾಗಿದೆ! ಇದೆಲ್ಲ ಪುರಾಣ ಸುಮ್ನೆ ಡೈರಿಯಲ್ಲಿ ಗೀಚಿಕೊಳ್ಳಿ, ಇಲ್ಲಿ ಯಾಕೆ ಹೇಳುವಿರಿ ಅನ್ನಬಹುದು ನೀವು! ದೃಶ್ಯ ಮಾಧ್ಯಮ ಹೇಗಿರಬಹುದು ಎಂಬ ಪರಿಕಲ್ಪನೆ ನಮ್ಮಲ್ಲಿ ಸಾಕಷ್ಟು ಜನರಿಗೆ ಇಲ್ಲ. ಅಲ್ಲಿ ಕಾಲಿಡುವವರೆಗೂ ನನಗೂ ಇರಲಿಲ್ಲ. ಹಾಗಾಗಿ ಒಂದಷ್ಟು ಬರಯಬೇಕು ಅನ್ನಿಸಿದೆ.
೨೪*೭ ಎಂಬುದೇ ಒಂದು ರೀತಿಯ ಧಾವಂತದ ಬದುಕು. ಏನನ್ನಾದರೂ ಬ್ರೇಕ್ ಮಾಡುತ್ತ ಇರಬೇಕು. ಏನು ಸಿಗದಿದ್ದರೆ ಕೊನೆಗೆ ಯಾರ ಸಂಸಾರವನ್ನಾದರೂ ಬ್ರೇಕ್ ಮಾಡಬೇಕು! ಮುದ್ರಣ ಮಾಧ್ಯಮದ ರೀತಿಯಲ್ಲಿನ ಪುರುಸೊತ್ತು ಎಂಬ ಪದ ಇಲ್ಲಿಲ್ಲ. ಹಾಗಂತ ಕಚೇರಿಯ ವೇಳೆಯಲ್ಲಿ ಒತ್ಲಾ ಹೊಡೆಯುವವರಿಗೂ ಈ ಜಗತ್ತಿನಲ್ಲಿ ಕೊರತೆಯಿಲ್ಲ ಅನ್ನೋದು ನಂತರದ ಮಾತು ಬಿಡಿ!
ಪೇಪರ್‌ಗಳು ಈ ಸ್ಪರ್ಧೆಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಮುಖ್ಯವಾದ ಸುದ್ದಿಗಳು ಯಾವತ್ತೂ ತಪ್ಪಿ ಹೋಗೋದಿಲ್ಲ. ಒಂದು ಪತ್ರಿಕೆಯಲ್ಲಿ, ಇನ್ನೊಂದು ಪತ್ರಿಕೆಯಿಂದ ಮಿಸ್ ಆದ ಸುದ್ದಿಗಳ ಪಟ್ಟಿ ಮಾಡಿ, ಮಿಸ್ ಮಾಡಿದವನು ಮುಖ್ಯಸ್ಥರಿಗೆ ಬೇಡದ ವ್ಯಕ್ತಿಯಾಗಿದ್ದರೆ, ಅವನಿಗೊಂದಷ್ಟು ಉಗಿದು ಕೈತೊಳೆದುಕೊಳ್ಳುವುದು ಮುದ್ರಣ ಮಾಧ್ಯಮದ ಸಂಸ್ಕೃತಿ.
ಆದ್ರೆ ಇಲ್ಲಿ ಹಾಗಾಗುವುದಿಲ್ಲ. ಮತ್ತೊಂದು ವಾಹಿನಿಯಲ್ಲಿ ಬರುತ್ತಿರುವುದನ್ನು ಕದ್ದಾದರೂ ಬ್ರೇಕಿಂಗ್ ಅಂತಾ ಪ್ರಕಟಿಸುತ್ತೇವೆ. ಕನ್ನಡದ ಎಲ್ಲಾ ಸುದ್ದಿ ವಾಹಿನಿಗಳು ಹೆಚ್ಚಾಗಿ ರಾಷ್ಟ್ರೀಯ ವಾಹಿನಿಗಳಿಂದ ಯಥಾವತ್ತಾಗಿ ಕದಿಯಲ್ಪಡುತ್ತವೆ. ಈ ಪದ ಉಪಯೋಗಿಸಲು ಖಂಡಿತ ಕಾರಣವಿದೆ. ಅಲ್ಲಿ ಬರುತ್ತಿರುವ ಸುದ್ದಿಯನ್ನು ತೆಗೆದುಕೊಂಡರೆ, ಅದು ಕಳ್ಳತನವಾಗುವುದಿಲ್ಲ. ಆದ್ರೆ ದೃಶ್ಯಗಳನ್ನೂ ಭಟ್ಟಿ ಇಳಿಸಿದಾಗ, ಅದನ್ನು ಕಳ್ಳತನ ಅನ್ನದೆ ಬೇರೆ ಪದ ಬಳಸುವುದು ಸೂಕ್ತವಲ್ಲ! ಎಷ್ಟೋ ಸಲ ಕೃಪೆ ಅನ್ನುವ ಪದ ಕೂಡ ಬಾರದಿರುವುದು ಇದಕ್ಕೆ ಮುಖ್ಯ ಕಾರಣ.
ಇನ್ನು ತಪ್ಪು ಸುದ್ದಿ, ಅಜರುದ್ದೀನ್ ಮಗ ಸತ್ತೇ ಹೋದ ಅಂತಾ ಕೆಲವಷ್ಟು ವಾಹಿನಿಗಳು ಬಿತ್ತರಿಸಿದವು. ವಾಸ್ತವವಾಗಿ ಬೈಕ್‌ನಲ್ಲಿ ಅವನ ಹಿಂದೆ ಕುಳಿತವ ಸತ್ತಿದ್ದ. ಯಾರೋ ಟ್ರಾನ್ಸ್‌ಲೇಷನ್ ಬಾರದ ಕಾಪಿ ಎಡಿಟರ್ ಒಬ್ಬ, ಆಂಗ್ಲವಾಹಿನಿ ನೋಡಿ ಅಜರುದ್ದಿನ್ ಮಗನೇ ಸತ್ತ ಎಂದು ಮಾಡಿರುತ್ತಾನೆ! ಸುದ್ದಿ ನೋಡಲು ಪುರುಸೊತ್ತು ಇಲ್ಲದ ಸುದ್ದಿ ವಿಭಾಗದ ಮುಖ್ಯಸ್ಥ ಅದನ್ನೇ ಕಳುಹಿಸಿರುತ್ತಾನೆ. ಇಂಥ ೫೦-೧೦೦ ತಪ್ಪುಗಳು ಪ್ರತಿನಿತ್ಯ ಎಲ್ಲಾ ವಾಹಿನಿಗಳಲ್ಲೂ ಸಿಗುತ್ತವೆ! ಇಲ್ಲಿ ಸುದ್ದಿಯನ್ನು ಖಾತ್ರಿಪಡಿಸಿಕೊಳ್ಳುವಷ್ಟು ಸಮಯವಿಲ್ಲ. ನಾವು ಬರೆದ ಸುದ್ದಿಯನ್ನು ಮತ್ತೊಮ್ಮೆ ನಾವೇ ಓದುವಷ್ಟು ವ್ಯವಧಾನ ಯಾರಿಗೂ ಇಲ್ಲ. ಹಾಗಾಗಿ ತಪ್ಪುಗಳು ಸಹಜ. ಅಕ್ಷರ ದೋಷಗಳು ಮಾಮೂಲು.
ಇನ್ನೂ, ಕನ್ನಡ ವಾಹಿನಿಗಳಲ್ಲಿ ಕನ್ನಡಕ್ಕಿಂತ ಇಂಗ್ಲಿಷ್‌ನದ್ದೇ ಅಬ್ಬರ ಹೆಚ್ಚು! ಸಾಮಾನ್ಯ ಕನ್ನಡ ಪದಗಳನ್ನೂ ಇಂಗ್ಲಿಷ್‌ನಲ್ಲೇ ಹೇಳುತ್ತಾರೆ. ಬಹುಶಃ ಈ ಕಾಲದ ಜನಕ್ಕೆ ಇಂಗ್ಲಿಷ್ ಅರ್ಥವಾಗುತ್ತೆ ಅನ್ನೋ ಕಾರಣವಿರಬಹುದು!
ಅದಕ್ಕಿಂತ ಮಜ ನಿರೂಪಕರದ್ದು. ತೆರೆಯ ಮೇಲೆ ಬರುವ ನಿರೂಪಕರು ವೀಕ್ಷಕರ ಪಾಲಿಗೆ ಹೀರೋಗಳು, ಬುದ್ಧಿವಂತರು! ವಾಸ್ತವವಾಗಿ ಅಲ್ಲಿ ಅವರ ಬುದ್ಧಿವಂತಿಕೆ ಸಾಸಿವೆ ಕಾಳಿನಷ್ಟು ಇರುವುದಿಲ್ಲ. ಕಾಪಿ ಎಡಿಟರ್‌ಗಳು ನಿರೂಪಣೆ ಬರೆದುಕೊಟ್ಟಿರುತ್ತಾರೆ. ಪರದೆಯ ಮೇಲೆ ಅದು ಬರುತ್ತದೆ. ಅದನ್ನು ನೋಡಿ ಓದುವುದಷ್ಟೇ ನಿರೂಪಕರ ಕೆಲಸ. ಹೀಗೆ ಬರೆದಿದ್ದನ್ನು ಸ್ಪಷ್ಟವಾಗಿ, ತಪ್ಪಿಲ್ಲದೆ, ಒಮ್ಮೆ ಬರವಣಿಗೆಯಲ್ಲಿ ತಪ್ಪಿದ್ದರೂ ಅದನ್ನು ಸರಿಪಡಿಸಿಕೊಂಡು ಓದುವವ ಉತ್ತಮ ನಿರೂಪಕನಾಗುತ್ತಾನೆ. ನಮ್ಮ ಕನ್ನಡದ ದುರಂತವೆಂದರೆ, ಎಷ್ಟೋ ನಿರೂಪಕರಿಗೆ ಕನ್ನಡ ಓದಲು ಬರುವುದಿಲ್ಲ. ಒತ್ತಕ್ಷರಗಳ ಕಥೆ ಹಾಳಾಗಲಿ, ಸರಳ ಕನ್ನಡವನ್ನು ತಪ್ಪು ಓದುತ್ತಾರೆ. ಕಾಪಿ ಎಡಿಟರ್ ತಪ್ಪು ಬರೆದುಕೊಟ್ಟಿದ್ದರೆ, ಅದನ್ನೇ ಓದಿ ಬರುತ್ತಾರೆ! ಸುದ್ದಿಯ ಜ್ಞಾನ, ಅದರ ಹಿನ್ನೆಲೆ ಏನು ಎಂದು ಹೆಚ್ಚಿನ ನಿರೂಪಕರಿಗೆ ಗೊತ್ತಿರುವುದಿಲ್ಲ. ಆದರೆ ದುರಂತ ನೋಡಿ, ಅವರೇ ಸ್ಟಾರ್‌ಗಳು!
ಖಂಡಿತ ಯಾರೂ ಸರ್ವಜ್ಞರಲ್ಲ. ಸ್ವತಃ ನಾನು ಕೂಡ ಒಂದೆರಡು ಸಲ ತಪ್ಪು ಮಾಡಿದ್ದೇನೆ. ಆದ್ರೆ ಒಂದು ಸಲ ಮಾಡಿದ ತಪ್ಪು ನನ್ನಿಂದ ಸಾಮಾನ್ಯವಾಗಿ ಮರುಕಳಿಸುವುದಿಲ್ಲ. ಅಷ್ಟರ ಮಟ್ಟಿಗಿನ ಎಚ್ಚರಿಕೆ ವಹಿಸುತ್ತೇನೆ. ಇದಕ್ಕೆ ಕಾರಣವೂ ಇದೆ. ನಾನು ವಿಕೆಯಲ್ಲಿದ್ದಾಗ ಮುಖ್ಯಸ್ಥರೊಬ್ಬರು ಒಂದು ಒಳ್ಳೇ ಮಾತು ಹೇಳಿದ್ದರು. ಪತ್ರಿಕೆ ಎಂಬುದು ಟ್ರೆಂಡ್ ಸೆಟ್ ಮಾಡುತ್ತದೆ. ಇನ್ನು ೧೦ ವರ್ಷದ ನಂತರ ಯಾವುದೋ ಪದಕ್ಕಾಗಿ ಒಬ್ಬ ಪತ್ರಿಕೆ ತೆಗೆಯುತ್ತಾನೆ. ನೀವು ತಪ್ಪು ಬರೆದಿದ್ದರೆ, ಅವ ಅದನ್ನೇ ಸರಿಯಿದೆ ಅಂತಾ ಸ್ವೀಕರಿಸುತ್ತಾನೆ. ಒಟ್ನಲ್ಲಿ ಒಂದು ಭಾಷೆಯನ್ನು ಹಾದಿ ತಪ್ಪಿಸಿದಂತೆ ಆಗುತ್ತದೆ ಅನ್ನುವ ಅವರ ಮಾತು ಇವತ್ತಿಗೂ ನನ್ನ ಕಿವಿಯಲ್ಲಿದೆ. ಹಾಗೆ ನೋಡಿದ್ರೆ ಬ್ಲಾಗ್‌ನಲ್ಲೇ ನನ್ನಿಂದ ಹೆಚ್ಚು ಅಕ್ಷರದೋಷಗಳಾಗುವುದು. ಇಲ್ಲಿ ಹೆಚ್ಚಾಗಿ ಆಡುಭಾಷೆ ಬಳುಸುವುದು ಅದಕ್ಕೆ ಕಾರಣ.
ಇಷ್ಟೆಲ್ಲದರ ನಡುವೆಯೂ ಇಲ್ಲಿ ಕೆಲಸ ಮಾಡುವುದು ಒಂದು ರೀತಿ ಮಜವಾದ ಅನುಭವ. ನಮ್ಮ ಕೆಲಸದ ವೇಗ ಗೊತ್ತಾಗುತ್ತದೆ. ಸೋಮಾರಿಗಳಾಗಿದ್ದವರು ಚುರುಕಾಗುತ್ತಾರೆ. ಆದ್ರೂ ಸದ್ಯಕ್ಕೆ ಕ್ರೀಡೆಯಲ್ಲಿ ಕಳೆದುಹೋಗಿರುವ ನಾನು, ಮೊದಲಿನಷ್ಟೇ ಸೋಮಾರಿತನ ಉಳಿಸಿಕೊಂಡಿದ್ದೆನೆ!!!
Read Full Post »