Feeds:
ಲೇಖನಗಳು
ಟಿಪ್ಪಣಿಗಳು

Archive for ಜುಲೈ, 2008

ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎ.ಸಿ ರೂಮಿನಲ್ಲಿ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ “ಲಗೋರಿ” ಎಂದು ಕಿರುಚುತ್ತಾ ಕುಣಿದು ಕುಪ್ಪಳಿಸುತ್ತಿದ್ದ. “ಜುಮುರು ಮಳೆಯಲ್ಲಿ ತೊಯ್ಯ ಬೇಡವೋ ಥಂಡಿ ಆಗತ್ತೆ” ಅಂತಾ ಕೂಗಿ ಹೇಳಲು ತುಟಿ ತೆರೆದರೆ ಸ್ವರ ಸಹಕಾರ ನೀಡಲಿಲ್ಲ. ಅವಳ ನೆನಪು ಮಾಸಿಯೇ ಹೋಗಿದೆ. ಶ್ರವಣನ ಲಗೋರಿ ಎಂಬ ಕೂಗು ಕೇಳದಿದ್ದಿದರೆ ಇವತ್ತೂ ಕೂಡಾ ಅವಳು ನೆನಪಾಗುತ್ತಿರಲಿಲ್ಲ. ಯಾಕೆಂದರೆ ಅವಳನ್ನು ನೆನಪಿಸಿಕೊಳ್ಳಬೇಕಾದಷ್ಟು ನೆನಪಿಸಿಕೊಂಡು, ಅವಳಿಗಾಗಿ ಸುರಿಸಲು ಸಾಧ್ಯವಿರುವಷ್ಟು ಕಣ್ಣೀರು ಸುರಿಸಿ ಆಗಿ ಹೋಗಿದೆ! ಆದರೂ ಅವಳನ್ನು ನಾನಿಷ್ಟು ಬೇಗ ಮರೆಯಬಾರದಿತ್ತು. ನಾನು ಹಾಗಂದುಕೊಳ್ಳುವುದಕ್ಕೆ ಇರಬೇಕು ಅವಳು ಆಗಾಗ ಏನೇನೋ ನೆವದಿಂದ ನೆನಪಾಗುವುದು. ಸುಮ್ಮಸುಮ್ಮನೆ ನನ್ನಲ್ಲಿ ಕಣ್ಣೀರು ತರಿಸುವುದು!
ಇವನೊಬ್ಬ ಬಿಕುನಾಸಿ ಅಪ್ಪಾ. ಒಂದು ಕೊಡೆ ತಂದು ಕೊಡಲು ಯೋಗ್ಯತೆಯಿಲ್ಲ. ಇವನಿಗ್ಯಾಕೆ ಬೇಕಿತ್ತು ಮಕ್ಕಳು. ಈಗ ಮುರಿದು ಬೀಳತ್ತೋ, ಆಗ ಮುರಿದು ಬೀಳತ್ತೋ ಅನ್ನೋ ಸೋಗೆ ಗುಡಿಸಲು ಕಟ್ಟಿಕೊಳ್ಳಲು ಇವನಿಗೆ ಈ ಬೆಟ್ಟದ ತಪ್ಪಲೇ ಬೇಕಿತ್ತಾ? ಜಿಟಿ ಜಿಟಿ ಜಿನುಗುತ್ತಿದ್ದ ಮಳೆಯಲ್ಲೇ ಅಪ್ಪನನ್ನು ಶಪಿಸುತ್ತ, ಸಟ ಸಟ ಹೆಜ್ಜೆ ಹಾಕುತ್ತಾ ಹೋಗುತ್ತಿದೆ. ಕಂಬ್ಳಿ ಕೊಪ್ಪೆ ಹಾಕೊಬೇಕಂತೆ! ಛೀ ಎಲ್ಲರಿಗೂ ಕೊಡೆಯಿದೆ, ನನಗೆ ಮಾತ್ರ ಕಂಬ್ಳಿ ಕೊಪ್ಪೆ, ಜರಿ ಕೊಪ್ಪೆ. ನಾನು ಮಳೆಯಲ್ಲಿ ತ್ಯೊಯ್ದರೂ ಸರಿ ಕಂಬ್ಳಿ ಕೊಪ್ಪೆ ಧರಿಸಲಾರೆ ಅಂತಾ ಹಠ ಮಾಡಿಕೊಂಡು ಹೊರಟ್ಟಿದ್ದೆ. ಪುಣ್ಯಕ್ಕೆ ಮನೆಯಿಂದ ಹೊರಡುವಾಗ ಮಳೆ ಬರಲಿಲ್ಲ. ಮನೆ ಸೇರುವಾಗ ಮಳೆ ಬಂತು. ಈಗಲಾದರೂ ಅಪ್ಪನಿಗೆ ಮಗನ ಕಷ್ಟ ಗೊತ್ತಾಗಲಿ ಅಂದುಕೊಳ್ಳುತ್ತಾ ಹೆಜ್ಜೆ ಹಾಕುತ್ತಿರುವಾಗಲೇ ಯಾರೋ ಕರೆದಂತಾಯಿತು.
ಏ ರವಿ ಅದ್ಯಾವ ಹಾಳಾದ ಹುಡುಗಿ ಕನಸು ಕಾಣುತ್ತಿದ್ಯೋ?! ಆಗಿಂದ ಕರಿತಾ ಇದ್ದೀ ಒಂದ್ಸರಿಯೂ ತಿರುಗಿ ನೋಡಲು ಆಯಿಜಿಲ್ಲ್ಯ ನಿಂಗೆ ಅಂತಾ ರಶ್ಮಿ ಏದುಸಿರು ಬಿಡುತ್ತಾ ಗೊಣಗಿದಳು. ಈ ಬಡಪಾಯಿ ಜೀವಕ್ಕೆ ಬದುಕೇ ಭಾರವಾಗಿದೆ. ಇನ್ನು ಇದಕ್ಕೊಂದು ಮಣಭಾರದ ಹುಡುಗಿ ಬೇಕಾ? ಅಪ್ಪ ಹೆಂಡತಿ ಕಟ್ಟಿಕೊಂಡು, ಮಕ್ಕಳನ್ನು ಮಾಡಿ ಸಾಕುತ್ತಿರುವ ಸೌಭಾಗ್ಯವೇ ಸಾಕು ಅಂದುಕೊಂಡರೂ, ಯಾಕೋ ಅವಳ ಹತ್ತಿರ ಅದನ್ನು ಹೇಳಲು ಮನಸ್ಸಾಗಲಿಲ್ಲ. ಏನೂ ಉತ್ತರ ನೀಡದೇ ಸುಮ್ಮನೆ ನನ್ನ ನಡುಗೆ ಮುಂದುವರೆಸಲು ಹೆಜ್ಜೆ ಮುಂದಿಟ್ಟೆ. ಮಲೆನಾಡಿನ ಪೆದ್ದು ಜಾತಿಯ ಮುದ್ದು ಹುಡುಗಿ ಅವಳು. ಆವತ್ತು ಅವಳು ನನ್ನ ಉದ್ದಟತನ ನೋಡಿ ಬೀಟ್ಟು ಹೋಗಿದ್ದರೆ…ಗೊತ್ತಿಲ್ಲ ನಾನಿಂದೇನಾಗಿರುತ್ತಿದ್ದೆ ಎಂದು. ಯಾಕೆ ಕೋಪನಾ? ಅಲ್ದೋ ಮಳೆಯಲ್ಲಿ ತೊಯ್ದುಕೊಂಡು ಹೋಗ್ತಾ ಇದ್ಯೆಲ್ಲಾ? ನಾಳೆ ಥಂಡಿ ಜ್ವರ ಬಂದು ಮಲಗಿದರೆ? ಬಾ ಮನೆವರಿಗೆ ಬಿಟ್ಟಿಕ್ಕೆ ಹೋಗ್ತಿ. ಊಹುಂ ಉತ್ತರಿಸುವ ತವಕವಿರಲಿಲ್ಲ. ಆದರೂ ಅವಳು ಹಠ ಬಿಡಲಿಲ್ಲ. ಮಳೆಯೂ ನಿಲ್ಲಲಿಲ್ಲ….
ಹಾಗೇ ಗೆಳತಿಯಾದವಳು ರಶ್ಮಿ. ಮಲೆನಾಡು ಅಂದ್ರೆ ಆವತ್ತು ಹಾಗಿತ್ತು. ಊರಲ್ಲಿ ಹುಡುಗರ ಹಿಂಡು ಹಿಂಡಿತ್ತು.  ಲಗೋರಿ, ಕಣ್ಣಮುಚ್ಚಾಲೇ ಆಟಕ್ಕೆಂದು ದೊಡ್ಡ ತಂಡವೇ ಇತ್ತು. ಆ ಎಲ್ಲಾ ಆಟಗಳು ನನ್ನ ಬದುಕಿನಲ್ಲೆ ಹುದುಗಿ ಹೋಗಿತ್ತಾದ್ದರಿಂದ ನಾನು ಯಾವ ಆಟವನ್ನು ಪ್ರತ್ಯೇಕವಾಗಿ ಆಡಲು ಹೋಗುತ್ತಿರಲಿಲ್ಲ. ಬಾಲ್ಯದಲ್ಲಿ ಎಲ್ಲರೊಟ್ಟಿಗೆ ಸೇರಿ ನಾನು ಆಟವಾಡುತ್ತಿದ್ದೆ. ತಿಳುವಳಿಕೆ ಬಂದ ಮೇಲೆ ನನಗ್ಯಾಕೋ ಆಟಕ್ಕೆ ಹೋಗಲು ಮನಸಾಗುತ್ತಿಲ್ಲ. ನೀನು ತೊಟ್ಟಿರುವ ಅಂಗಿ ನನ್ನದಾಗಿತ್ತು ಅಂತಾ ಯಾರಾದರೂ ಗಟ್ಟಿಯಾಗಿ ಹೇಳಿದರೆ ಅನ್ನೋ ಭಯ, ಯಾರೋ ತೊಟ್ಟು ಬಿಟ್ಟ ಅಂಗಿಯನ್ನು ಧರಿಸುವಷ್ಟು ದರಿದ್ರತೆ ನಮ್ಮ ಮನೆಯಲ್ಲಿದೆಯಲ್ಲಾ ಅನ್ನೋ ನೋವು.
 ರಶ್ಮಿಗೆ ಅದ್ಯಾಕೆ ನನ್ನ ಮೇಲೆ ಕನಿಕರ ಉಕ್ಕಿ ಬಂತೋ ಗೊತ್ತಿಲ್ಲ. ಅದೆಲ್ಲಾ ವಿಧಿ ಲೀಲೆ ಇರಬೇಕು! ಅವಳು ನನ್ನ ನಿರುತ್ತರವನ್ನು ಲಕ್ಷಿಸದೆ ಅವಳ ಛತ್ರಿಯಲ್ಲಿ ಮನೆವೆರೆಗೂ ಬಿಟ್ಟಳು. ಒಳಗೆ ಬಾ ಎಂದು ಅವಳನ್ನು ಕರೆಯಲು ಮನಸ್ಸಾಗಲಿಲ್ಲ. ಯಾಕೆಂದರೆ ಕರೆದರೂ ಅವಳಿಗೆ ಅಂತಾ ಒಂದು ಲೋಟ ಕಾಫಿ ಕೊಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಅಂದು ನಮ್ಮ ಮನೆಯಿತ್ತು. ಅಂದಿನ ನನ್ನ ವರ್ತನೆ ಕುರಿತಾಗಿ ನನಗೆ ಇವತ್ತಿಗೂ ಬೇಸರವಿದೆ. ಆವತ್ತೂ ಬೇಸರವಾಗಿತ್ತು!
ಮರುದಿನ ಬೆಳಗಾಗುವ ವೇಳೆಗೆ ನನ್ನ ನಿನ್ನೆಯ ವರ್ತನೆ ಬಗೆಗೆ ಬೇಸರವಾಗಿತ್ತು. ರಶ್ಮಿ ಹತ್ತಿರ ನನ್ನ ವರ್ತನೆಯ ಕುರಿತಾಗಿ ಕ್ಷಮೆ ಕೇಳಬೇಕು ಅನ್ನಿಸಿತು. ಅವಳ ಮನೆ ಹಾದಿ ಹಿದಿಕೊಂಡು ಹೊರಟೆ. ಜುಗ್ಗ ತಿಮ್ಮಣ್ಣ ಭಟ್ಟ ಅವಳಪ್ಪ. ಒಂದೆಲ್ಲಾ ಒಂದು ಕೊಂಕು ಮಾತನಾಡುವ ಅವನ ಮನೆಗೆ ಹೋಗೋದು ಅಂದ್ರೆ ನನಗೆ ಮೊದಲಿನಿಂದಲೂ ಬೇಸರದ ಸಂಗತಿ. ಆದ್ರೂ ಹೋಗುವುದು ಅನಿವಾರ್ಯವಾಗಿತ್ತು. ನಾನು ಹೋಗುತ್ತಿರುವುದು ರಶ್ಮಿ ಮನೆಗೆ ಹೊರತು ತಿಮ್ಮಣ್ಣ ಭಟ್ಟನ ಮನೆಗಲ್ಲ ಅಂದುಕೊಂಡು ಹೊರಟೆ.
ಎ.ಸಿ ರೂಮಿನಲ್ಲಿ ಕುಳಿತು ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿರುವವನಿಗೆ ಹೆಂಡತಿ ಕಾಫಿ ತಂದಿಟ್ಟದ್ದು ಗೊತ್ತಾಗಲಿಲ್ಲ. ಮನೆಗೆ ಬಂದ ರಶ್ಮಿಯನ್ನು ಕಾಫಿ ಕೊಡದೆ, ಒಳಕ್ಕೂ ಕರೆಯದೆ ಕಳುಹಿಸಿದ ಆ ಕ್ಷಣಗಳೆ ನೆನಪಾಗುತ್ತಿತ್ತು.
ಅವಳ ಮನೆಯತ್ತ ಹೆಜ್ಜೆ ಹಾಕತೊಡಗಿದೆ. ಅವಳು ಈಗ ನನ್ನನ್ನು ಹೇಗೆ ರೀಸಿವ್ ಮಾಡಿಕೊಳ್ಳಬಹುದು, ನನ್ನ ಮೇಲೆ ಅವಳಿಗೆ ಕೋಪ ಬಂದಿರಬಹುದಾ…ಇತ್ಯಾದಿಯಾಗಿ ಅವಳ ಕುರಿತಾಗಿ ಆಲೋಚಿಸುತ್ತಲೇ ಹೆಜ್ಜೆ ಹಾಕುತ್ತಿದೆ. ಗಕ್ಕನೆ ತಲೆಯೆತ್ತಿ ನೋಡಿದಾಗ ನನ್ನ ನಡುಗೆ ತಿಮ್ಮಣ್ಣ ಭಟ್ಟರ ಮನೆ ದಾಟಿ ಮೂರು ಮಾರು ದೂರ ಸಾಗಿತ್ತು. ನನ್ನನ್ನು ನಾನೇ ಶಪಿಸಿಕೊಳ್ಳುತ್ತಾ ಮತ್ತೆ ಹಿಂದಕ್ಕೆ ಬಂದೆ. ಅವಳ ಮನೆಯಂಗಳಕ್ಕೆ ಕಾಲಿಡುವಾಗಲೇ ಭಟ್ಟರ ದರ್ಶನವಾಯಿತು.
ಹೇಗಿದ್ದರೂ ಇನ್ನೊಬ್ಬರಿಂದ ಹೇಳಿಸಿಕೊಳ್ಳುವುದು ನಮ್ಮ ಜನ್ಮ ಸಿದ್ದ ಹಕ್ಕು, ಹಾಗಂದುಕೊಂಡೇ ಭಟ್ಟರ ಮನೆಯಂಗಳದೊಳಕ್ಕೆ ಕಾಲಿಟ್ಟೆ. ಪಾಪ ಭಟ್ಟರು ನನ್ನ ಮನಸ್ಸಿನ ಆಲೋಚನೆಗೆ ನಿಜಕ್ಕೂ ಮೋಸ ಮಾಡಲಿಲ್ಲ. “ಮಳೆಗಾಲ ಶುರುವಾಯಿತು. ನಮ್ಮ ಮನೇಲಿ ಯಾವುದು ಹಳೇ ಬಟ್ಟೆ ಇಲ್ಲೆ ಮಾಣಿ. ನೀ ಬತ್ತೆ ಅಂತಾ ಮುಂಚೆನೆ ಹೇಳಿದ್ರೆ ಹಾವಗೊಲ್ಲ ಯೆಂಕನಿಗೆ ನಾನು ಬಟ್ಟೆ ಕೋಡ್ತಾ ಇರ್ಲೆ” ಭಟ್ಟರ ಮಾತು ಮುಂದುವರೆಯುತ್ತಿತ್ತೇನೋ ಅಷ್ಟೊತ್ತಿಗೆ ರಶ್ಮಿ ಎಂಟ್ರಿ ಆಯಿತು.
ಯಾವಾಗ ಬಂದ್ಯೋ, ಆಸ್ರಿಗೆ ಎಂಥಾ ಕುಡಿತೇ ಅಂತಾ ಮಲೆನಾಡಿನ ಸಂಪ್ರದಾಯದಂತೆ ಮಾತು ಶುರುವಿಟ್ಟವಳು. ಭಟ್ಟರ ಎದುರಿಗೆ ಬಂದ ವಿಚಾರ ತಿಳಿಸಲು ಸಾಧ್ಯವಾಗಲಿಲ್ಲ. ತಿಳಿಸುವುದು ಸೌಜನ್ಯ ಅಂತಾನೂ ಅನ್ನಿಸಲಿಲ್ಲ. ಬಂದ ಸಂಕಟಕ್ಕೆ ಒಂದು ಕುಂಟು ನೆವ ಹೇಳಲೇ ಬೇಕಾದ ಅನಿವಾರ್ಯತೆ ಎದುರಾಯಿತು. ಹೌದು ಬಟ್ಟೆ ಇತ್ತಾ ಎಂದು ಕೇಳಲೇ ಬಂದಿದ್ದೆ. ತಂಗಿಗೆ ಶಾಲೆ ಶುರುವಾಯಿತು. ನಿನ್ನದು ಹಳೆ ಬಟ್ಟೆ ಯಾವುದಾದರೂ ಇತ್ತೇನೋ ಅಂತಾ ಬಂದೆ. ಸಿಗಬೇಕಾದ ಆತಿಥ್ಯ ಭಟ್ಟರಿಂದ ದಕ್ಕಿತು. ಆಸ್ರಿಗೆ ಎಂಥದು ಬೇಡ ಎನ್ನುತ್ತಾ ನನ್ನ ಪಾಡಿಗೆ ನಾನು ಎದ್ದು ಹೊರಟೆ. ಕಣ್ಣಲ್ಲಿ ನೀರು ತುಂಬಿತ್ತು. ಅದು ಅವಳಿಗೂ ಗೊತ್ತಾಗಿತ್ತು. ಏನೂ ಮಾತಾಡದೇ ಅವಳು ಒಳಕ್ಕೆ ನಡೆದಳು.
ಘಟನೆಯನ್ನು ನೆನಪಿಸಿಕೊಳ್ಳುತ್ತಾ ನನ್ನನ್ನು ನಾನೇ ದೂಷಿಸಿಕೊಳ್ಳುತ್ತಾ ಸುಮಾರು ನಮ್ಮೂರಿನ ಅರಳಿಕಟ್ಟೆವರೆಗೆ ಬಂದಿದ್ದೆ. ಅಷ್ಟೊತ್ತಿಗೆ ಅವಳು ನನ್ನನ್ನು ಹಿಂಬಾಲಿಸಿಕೊಂಡು ಬಂದಳು. ಅವಳು ಯಾಕೆ ಅಷ್ಟು ರಿಸ್ಕು ತೆಗೆದುಕೊಂಡಳೋ ಗೊತ್ತಿಲ್ಲ. ಯಾಕೆಂದರೆ ತಪ್ಪು ನನ್ನದೇ ಇತ್ತು. ಅವಳಪ್ಪ ಆಡಿದ ಮಾತಿನಲ್ಲೇನೂ ತಪ್ಪಿರಲಿಲ್ಲ. ಆದರೂ ಅವಳಪ್ಪನ ವರ್ತನೆ ಬೇಸರ ತಂದಿರಬೇಕು, ಹಾಗಾಗಿಯೇ ಬಂದಿರಬೇಕು ಅಂದುಕೊಂಡೆ. ಹೌದು ನಾನಂದುಕೊಂಡಿದ್ದು ಸರಿಯಾಗಿಯೇ ಇತ್ತು.
ಆದದ್ದೆಲ್ಲಾ ಒಳಿತಿಗೆ ಅನ್ನೋ ಮಾತು ಅಕ್ಷರಶಃ ನಿಜ. ತಿಮ್ಮಣ ಭಟ್ಟರು ಅಂದು ಕೂಚೋದ್ಯ ನುಡಿಯದಿದ್ದರೆ ರಶ್ಮಿ ನನ್ನ ಪಾಲಿಗೆ ಖಂಡಿತಾ ಬೆಳಕಾಗುತ್ತಿರಲಿಲ್ಲವೇನೋ! ನಾನಂದುಕೊಂಡಂತೆ ಅವಳಿಗೆ ಅವಳಪ್ಪನ ವರ್ತನೆ ಬೇಸರ ತರಿಸಿತ್ತು. ಪಾಪ ಹೆಣ್ಣುಮಗಳು ಕಣ್ಣೀರಿಟ್ಟಳು. ಯಾಕೋ ಅವಳ ಗುಣ ನಂಗೆ ತುಂಬಾ ಇಷ್ಟವಾಯಿತು. ನನ್ನ ನೋವು, ನಲಿವುಗಳನ್ನು ಅವಳ ಬಳಿ ಹೇಳಿಕೊಳ್ಳಬೇಕು ಅನ್ನಿಸಿತು. ಆದರೂ ಅದು ಸರಿಯಾದ ಜಾಗವಲ್ಲ ಅನ್ನಿಸಿತು. ಮಾತನಾಡಲಿಕ್ಕಿದೆ ಬರುತ್ತೀಯಾ ಅಂತಾ ಹೆಣ್ಣು ಮಗಳೊಬ್ಬಳನ್ನು ಕರೆಯುವುದು ಸರಿಯಲ್ಲ. ಅಷ್ಟಕ್ಕೂ ಕರೆದು ದುಃಖ ತೋಡಿಕೊಳ್ಳಲು ಅವಳೇನೂ ಬಂದುವಲ್ಲ ಬಳಗವಲ್ಲ. ಹೈಸ್ಕೂಲ್‌ವರೆಗೆ ನನ್ನ ಜೂನಿಯರ್ ಆಗಿದ್ದವಳು, ನನ್ನ ಕುರಿತು ಒಂಚೂರು ತಿಳಿದುಕೊಂಡಿದ್ದವಳು ಅಷ್ಟೆ. ಹಾಗೇ ಆಲೋಚಿಸುತ್ತಾ ನಿನ್ನೆಯ ನನ್ನ ವರ್ತನೆ ಕುರಿತು ಕ್ಷಮೆ ಕೇಳಿದೆ. ನಾನೇಕೆ ಮನೆಗೆ ಕರೆಯಲಿಲ್ಲ ಎಂಬುದನ್ನೂ ಸಂಕೋಚವಿಲ್ಲದೇ ಹೇಳಿದೆ. ಸರಿ ನೀನಿನ್ನು ಹೊರಡು ಇಂತ ಜಾಗದಲ್ಲಿ ನಾನು ನೀನು ಒಟ್ಟಿಗೆ ಕಂಡರೆ ಜನರ ಬಾಯಲ್ಲಿ ಆಡಿಕೊಳ್ಳುವ ವಸ್ತುವಾಗುತ್ತೇವೆ ಎಂದೆ. ಅರ್ಥವಾಯಿತು ಅವಳಿಗೆ. ನಾಳೆ ಸಂಜೆ ೪ ಘಂಟೆ ಹೊತ್ತಿಗೆ ದೇವಸ್ಥಾನದ ಹತ್ತಿರ ಬಾ ಸುಮ್ಮನೆ ಹರಟೋಣ ಅಂದಳು. ತುಂಬಾ ಖುಷಿಯಾಯಿತು. ಅದೆ ಖುಷಿಯಲ್ಲೆ ಮನೆ ತಲುಪಿದೆ.
ಹೆಚ್ಚು ಏಕಾಂಗಿತನ ಬಯಸುವವನು ನಾನು. ನನ್ನ ಕಷ್ಟಗಳನ್ನು ನಾನೇ ನುಂಗಿಕೊಳ್ಳಬೇಕು ಹೊರತು ಬೇರ್‍ಎಯವರಲ್ಲಿ ತೊಡಿಕೊಳ್ಳಬಾರದು ಎಂಬ ನಿಲುವು ನನ್ನದಾಗಿತ್ತು. ಅಂದು ನನಗೆ ರಶ್ಮಿಯಂತಹ ಆಪ್ತರು ಇಲ್ಲದೇ ಹೋಗಿದ್ದೆ ನನ್ನ ಆ ನಿಲುವಿಗೆ ಕಾರಣವಾಗಿರಬಹುದು. ಯಾಕೋ ಅವಳ ಹತ್ತಿರ ನನ್ನ ಸಂಕಷ್ಟಗಳನ್ನು ಹೇಳಿಕೊಳ್ಳಬೇಕು ಅನ್ನಿಸಿತ್ತು. ಹಾಗಾಗಿ ಮಾರನೇ ದಿನ ಸಂಜೆ ನಾಲ್ಕು ಘಂಟೆಗೆ ಖುದ್ದಾಗಿ ನಮ್ಮೂರ ಹನುಮಂತ ಗುಡಿಯ ಸಮೀಪ ಹೋದೆ. ಊರ ತುದಿಯ ಬೊಮ್ಮನ ಗುಡ್ಡದ ತುದಿಗೆ ಹನುಮಂತನ ಗುಡಿಯಿದೆ. ಮಧ್ಹಾನ ೧೨ ಘಂಟೆ ನಂತರ ಕಪಿಗಳನ್ನು ಬಿಟ್ಟರೆ ಮತ್ತ್ಯಾರೂ ಹನುಮಂತನನ್ನು ಮಾತಾಡಿಸಲು ಹೋಗುವುದಿಲ್ಲ! ನಮ್ಮೂರಿನ ಜನರಿಗೆ ದೇವರ ಮೇಲೆ ಭಕ್ತಿ ಇಲ್ಲವೆಂದೇನಲ್ಲ. ಆದರೂ ಊರಿನ ದೇವರ ಮೇಲೆ ಒಂತರಹ ಅಸಡ್ಡೆ. ಪರ ಊರಿನ ಚೌಡಮ್ಮ, ಮಾರಮ್ಮ ದರ್ಶನಕ್ಕೆ ಶುಕ್ರವಾರ, ಮಂಗಳವಾರ ತಪ್ಪದೇ ಹೋಗುತ್ತಾರೆ. ಶೆಟ್ಟಿಸರದ ಪೂಜಾರಪ್ಪನಿಗೆ ಶನಿ ದೇವರು ಮೈಮೇಲೆ ಬರುತ್ತೆ ಅಂತಾ ಶನಿವಾರ ಓಡುತ್ತಾರೆ. ಆದರೂ ಆಂಜನೇಯನಿಗೆ ಮಾತ್ರ ಮಲತಾಯಿ ಧೋರಣೆ! ಹಾಗಾಗಿಯೇ ಇರಬೇಕು ಅವಳು ಆ ಸ್ಥಳ ಸೂಚಿಸಿದ್ದು. ಯಾರಾದರೂ ಕಂಡರೆ ದೇವಸ್ಥಾನಕ್ಕೆ ಬಂದಿದ್ದೆ ಅಂತಲೂ ಹೇಳಬಹುದಲ್ಲ!
ನಾನು ದೇವಸ್ಥಾನದ ಬಳಿ ತಲುಪುವಾಗ ಘಂಟೆ ನಾಲ್ಕುಕಾಲು ಕಳೆದಿತ್ತು. ಅವಳು ಆಂಜನೇಯ ಗುಡಿ ಪಕ್ಕದಲ್ಲಿರುವ ಅರಳಿ ಮರದ ಹತ್ತಿರ ಕಾಯುತ್ತಾ ಕುಳಿತಿದ್ದಳು. ಸುಮ್ಮನೆ ಕಿರು ನಗು ಬೀರುತ್ತಾ ಎಂಟ್ರಿ ಕೊಟ್ಟೆ. ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ. ಏನು ಮಾತಾಡಬೇಕೆಂದು ತೋಚದೆ! ಕೊನೆಗೆ ಅವಳೆ ಮಾತಿಗೆ ಶುರುವಿಟ್ಟಳು. ಮಾತು ಆರಂಭವಾಗಿದ್ದು ಕಾಡು ಹರಟೆ ಅಂತಲೇ. ನಂತರ ಸಾಗಿದ್ದು ಬದುಕಿನತ್ತ…ಸುಮಾರು ಎರಡುವರೆ ತಾಸುಗಳ ಕಾಲದ ಮಾತುಕತೆ.
ಅಲ್ಲಿಂದ ನಂತರ ರಶ್ಮಿ ನನ್ನ ಬದುಕಿನ ಅವಿಭಾಜ್ಯ ಅಂಗವಾದಳು. ಪಿಯುಸಿಗೆ ನಿಲ್ಲಿಸಿದ್ದ ನನ್ನ ಓದನ್ನು ಮುಂದುವರೆಸುವಂತೆ ಪ್ರೇರೇಪಿಸಿದಳು. ಎಷ್ಟೋ ಸಲ ಫೀಜಿಗೆ, ಪುಸ್ತಕಕ್ಕೆ ಅಂತಾ ಅವಳೇ ದುಡ್ಡು ಕೊಟ್ಟಿದ್ದು ಇದೆ. ನನ್ನನ್ನು ಐ.ಎ.ಎಸ್ ಆಫೀಸರ್ ಮಾಡಬೇಕೆಂಬ ಕನಸು ಕಂಡಳು. ಆ ನಿಟ್ಟಿನಲ್ಲಿ ಅಧ್ಯಯನ ಮಾಡಲು ಬೇಕಾದ ವ್ಯವಸ್ಥೆಗಳನ್ನೆಲ್ಲಾ ಒದಗಿಸಿ ಕೊಟ್ಟಳು. ಡಿಗ್ರಿ ಓದಲು ಶುರುವಿಟ್ಟ ನಂತರ ನಾನು ಅದು ಇದು ಅಂತಾ ಸಣ್ಣ ಪುಟ್ಟ ಉದ್ಯೋಗ ಮಾಡಿ ಪುಡಿಗಾಸು ಸಂಪಾದನೆ ಮಾಡಲು ಶುರುವಿಟ್ಟೆ. ಆದರೂ ನನ್ನ ಬಿ.ಎ ಯ ಮುಕ್ಕಾಲು ಭಾಗ ಹೊಣೆ ಹೊತ್ತವಳು ಅವಳೇ. ಯಾರ್ಯಾರೋ ಸ್ನೇಹಿತೆಯರದ್ದೆಲ್ಲಾ ಪುಸ್ತಕ ತರಿಸಿಕೊಟ್ಟು, ಅದು ಓದು ಇದು ಅಂತಾ ಒಂದಿಷ್ಟು ಪುಸ್ತಕಗಳನ್ನು ಕೈಗಿಟ್ಟು…ನಿಜಕ್ಕೂ ಯಾವೊದೋ ಜನ್ಮದಲ್ಲಿ ನನ್ನ ಹತ್ತಿರದ ಬಂಧುವಾಗಿದ್ದಿರಬೇಕು. ಅದಾದ ನಂತರ ನಿತ್ಯ ಸಿಗುತ್ತಿದ್ದಳು. ಗಂಟೆಗಟ್ಟಲೆ ಹರಟುತ್ತಿದ್ದೆವು.
ಬಿ.ಎ ಯನ್ನು ಮುಗಿಸಿ ಐ.ಎ.ಎಸ್ ಅಧ್ಯಯನಕ್ಕೆ ಹೈದ್ರಾಬಾದ್‌ಗೆ ಹೋಗಬೇಕೆಂದು ತೀರ್ಮಾನವಾಯಿತು. ಆದರೂ ನನಗೆ ರಶ್ಮಿ ಬಿಟ್ಟು ಬದುಕುವುದು ಅಸಾಧ್ಯ ಅನ್ನಿಸತೊಡಗಿತ್ತು. ಅದಾಗಲೇ ನಾನು ಅವಳನ್ನು ಪ್ರೀತಿಸತೊಡಗಿದ್ದೆ. ಈ ವಿಚಾರವನ್ನು ಅವಳಿಗೆ ತಿಳಿಸಿದೆ. “ಪ್ರೀತಿ ಪ್ರೇಮವೆಲ್ಲಾ ಬದುಕಿನಲ್ಲಿ ನೆಲೆ ಕಂಡ ನಂತರ. ನೀನು ಮೊದಲು ಬದುಕನ್ನು ಪ್ರೀತಿಸಬೇಕು. ಬದುಕನ್ನು ಪ್ರೀತಿಸುವ ಸ್ಥಿತಿ ನಿನ್ನ ಬದುಕಿನಲ್ಲಿ ಬರಬೇಕಾದರೆ ನಿನ್ನ ಕಾಲ ಮೇಲೆ ನೀನು ನಿಂತುಕೊಳ್ಳಬೇಕು. ನಿನ್ನನ್ನು ಆಡಿಕೊಂಡವರೆಲ್ಲಾ ಗೌರವಿಸುವ ಸ್ಥಿತಿಗೆ ತಲುಪಬೇಕು. ನಾನು ನಿನ್ನ ಜೊತೆ ಸದಾ ಇರುತ್ತೇನೆ. ಆದರೆ ಸಮಯ ನಿನ್ನ ಜೊತೆ ಇರದು. ಹಾಗಾಗಿ ಮೊದಲು ಐ.ಎ.ಎಸ್ ನಂತರ ಪ್ರೀತಿ, ಪ್ರೇಮ…’ಅಂತಾ ನಯವಾಗಿ ನನ್ನ ಮನಸ್ಸನ್ನು ಬದಲಿಸಿ ಹೈದ್ರಾಬಾದ್‌ಗೆ ಕಳುಹಿಸಿದಳು.
ಹೈದ್ರಾಬಾದ್ ಸೇರಿದ ನಂತರ ನನ್ನದು ಒಂತರಹ ವನವಾಸದ ಬದುಕೇ. ಓದು,ಓದು,ಓದು… ಇದನ್ನು ಬಿಟ್ಟರೆ ಸಮಯ ಸಿಕ್ಕಾಗ ಒಂದಿಷ್ಟು ಪುಡಿಗಾಸು ಸಂಪಾದನೆ. ಪತ್ರದ ಮೂಲಕ ನನ್ನ ರಶ್ಮಿಯ ಒಡನಾಟ. ಅಪರೂಪಕ್ಕೆ ಫೋನ್. ಆದರೂ ನನ್ನ ಓದು, ಯೋಗಕ್ಷೇಮದ ಕುರಿತಾಗಿ ಅವಳ ಕಾಳಜಿ ಒಂಚೂರು ಕಮ್ಮಿಯಾಗಿರಲಿಲ್ಲ. ಸದಾ ನನಗೆ ಚೈತನ್ಯ ತುಂಬುವುದನ್ನು ಮರೆಯುತ್ತಿರಲಿಲ್ಲ. ಹೀಗೆ ಸಾಗಿತ್ತು ಎರಡು ವರ್ಷ.
ಐ.ಎ.ಎಸ್ ಪಾಸಾಯಿತು. ಪಾಸಾಗುತ್ತಲೇ ಕರ್ನಾಟಕದಲ್ಲೇ ನೌಕ್ರಿಯೂ ಸಿಕ್ಕಿತು. ಅದೇ ಸಂತಸದಲ್ಲಿ ಊರಿಗೆ ಮರಳಿದೆ. ರಶ್ಮಿ ಜತೆಗೆ ಮಾತಾಡಲು ಮನ ಹಪಹಪಿಸುತ್ತಿತ್ತು. ಯಾಕೆಂದರೆ ನನ್ನ ಸಾಧನೆಯ ಕುರಿತು ನನಗಿಂತ ಹೆಚ್ಚು ಸಂತಸ ಪಡುವವಳು ಅವಳು. ಐ.ಎ.ಎಸ್ ಪಾಸಾಗಿದ್ದನ್ನು, ಉದ್ಯೋಗ ಸಿಕ್ಕಿದ್ದನ್ನು ಫೋನಿನಲ್ಲೇ ತಿಳಿಸಿದ್ದೆ. ತುಂಬಾ ಖುಷಿ ಪಟ್ಟಳು. ಅವಳಿಗೊಂದು ಜತೆ ಬಟ್ಟೆ ತರುವುದಾಗಿ ಭರವಸೆ ಕೊಟ್ಟಿದ್ದೆ. ಹನುಮಂತ ಗುಡಿಯ ಅರಳಿಕಟ್ಟೆ ಹತ್ತಿರ ನಾನು ಬರುವ ದಿನ, ಸಮಯ ಎಲ್ಲವನ್ನೂ ತಿಳಿಸಿದ್ದೆ!
ಮನೆಗೆ ಬಂದವನೇ ಓಡಿದ್ದು ಅರಳಿಕಟ್ಟೆಗೆ. ರಶ್ಮಿ ಬಂದಿದ್ದಳು. ಯಾಕೋ ಅವಳ ಮೊಗದಲ್ಲಿ ಗೆಲುವಿರಲಿಲ್ಲ. ಚೆಲ್ಲು ಚೆಲ್ಲು ನಗೆಯಿರಲಿಲ್ಲ. ಸಂಪ್ರದಾಯದಂತೆ ಮಾತಾಡಿಸಿದಳು. ಯಾಕೆ ನಾನು ನಿನಗಿಂತ ದೊಡ್ಡ ವ್ಯಕ್ತಿ ಆಗುತ್ತೇನೆ ಅಂತಾ ಹೊಟ್ಟೆಕಿಚ್ಚಾ? ಎಂದು ಅಣಗಿಸಿದೆ. ಅದಕ್ಕೂ ಅವಳ ಉತ್ತರವಾಗಲೀ, ಕುಚೋದ್ಯವಾಗಲೀ ಇರಲಿಲ್ಲ. ನಾನು ಬಟ್ಟೆ ಗಿಫ್ಟ್ ಕೊಡುತ್ತಿದ್ದ ಹಾಗೆ ಮದುವೆಗೆ ಅಡ್ವಾನ್ಸ್‌ ಆಗಿ ಉಡುಗೊರೆ ಕೊಡುತ್ತಿರುವುದಕ್ಕೆ ಧನ್ಯವಾದಗಳು ಅಂತಾ ಕರೆಯೋಲೆ ಕೊಟ್ಟು ಮಾತಿಗೂ ನಿಲ್ಲದೇ ಹೊರಟುಹೋದಳು.
ಊಹುಂ ಖಂಡಿತಾ ನಾನು ಆ ಶಾಕ್‌ನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಸ್ವೀಕರಿಸಲೇಬೇಕಿತ್ತು. ಕರೆಯೋಲೆ ಒಳಗೆ ಒಂದು ಪತ್ರ ಇಟ್ಟಿದ್ದಳು. ಅವಳು ಮೊದಲೇ ಮಾವನ ಮಗನ ಪ್ರೀತಿ ಬಲೆಗೆ ಬಿದ್ದಿದ್ದಳಂತೆ. ಆದರೆ ನನ್ನ ಸಾಧನೆಗೆ ಮುಳುವಾಗಬಾರದು ಅಂತಾ ಅದನ್ನು ಮುಚ್ಚಿಟ್ಟು ತನ್ನ ಮದುವೆಯನ್ನು ನನ್ನ ಐ.ಎ.ಎಸ್ ಮುಗಿಯುವವರೆಗೆ ಮುಂದೂಡಿದ್ದಳಂತೆ. ಹಾಗಂತ ಆ ಪತ್ರದಲ್ಲಿತ್ತು…ಮಗ ಬಂದು ಅಪ್ಪಾ ಇವತ್ತು ಪಿಚ್ಚರಿಗೆ ಹೋಗಬೇಕು ಅಂತಾ ಎಬ್ಬಿಸಿದ ಎಚ್ಚರವಾಯಿತು. ಅವಳ ಮದುವೆಯ ನಂತರವೂ ನಾನು ಅವಳನ್ನು ಸಹೋದರಿ ಅಂತಾ ಸ್ವೀಕರಿಸಬಹುದಿತ್ತು. ಆದರೆ ಅದಕ್ಕೆ ಮನಸ್ಸು ಒಪ್ಪಲಿಲ್ಲ. ಪ್ರೇಮ ಭಗ್ನದ ಸಿಟ್ಟಿನಿಂದ ಅವಳ ಮದುವೆಗೂ ಹೋಗಲಿಲ್ಲ…ಅಪ್ಪಾ ಬೇಗ ರೆಡಿಯಾಗು ಫಿಲ್ಮಂಗೆ ಸಮಯವಾಯಿತು. ಮಗ ಶ್ರವಣ ಹಠ ಹಿಡಿದ. ಎ.ಸಿ ರೂಂನಿಂದ ಬಲವಂತವಾಗಿ ಕದಲಬೇಕಾಯಿತು. ನನ್ನ ಹಳೆ ನೆನಪಿಗೊಂದು ಬ್ರೇಕ್ ಹಾಕಿ ಫಿಲ್ಮಂಗೆ ಹೊರಟ್ಟಿದ್ದೇನೆ…

Read Full Post »

ಏನು ಬ್ಯೂಸಿ ಅಂತೀರಾ…ನಮ್ಮ ಮಾತುಗಳು ಆರಂಭವಾಗುವುದೇ ಇಲ್ಲಿಂದ. ಪಿಕ್‌ನಿಕ್‌ಗೆ ಪುರುಸೊತ್ತು ಇದೆ, ಚಲನಚಿತ್ರ ಅಂದ್ರೆ ನಮ್ಮ ಕೆಲಸಗಳೆಲ್ಲಾ ಮರೆತು ಹೋಗತ್ತೆ. ಧಾರಾವಾಹಿ ನೋಡಲು ನಮ್ಮಲ್ಲಿ ಸಾಕಷ್ಟು ಸಮಯವಿದೆ. ಆದ್ರೂ ಒಂದಿಷ್ಟು ಕೆಲಸಗಳಿಗೆ ಮಾತ್ರ ನಮ್ಮದು ಅದೇ ರಾಗ! ಯಾವುದಾದರೂ ಒಳ್ಳೆ ಕೆಲಸ ಮಾಡುತ್ತೇವೆ, ಒಳ್ಳೆ ವಿಚಾರ ಹೇಳುತ್ತೇವೆ ಅಂತಾ ನಮ್ಮ ಈ ಪ್ಯಾಟಿ ಜನರನ್ನು ಕರೆದು ನೋಡಿ ಊಹುಂ ಸುತಾರಾಂ ಅವರಿಗೆ ಪುರುಸೊತ್ತಿರದು!
ಮೊನ್ನೆ ಅದ್ಯಾಕೋ ನನ್ನ ಸಂಚಿ ನಾಗಿ ಕಥೆ ಓದಿದ ವೆಂಕಟ ಲಕ್ಷ್ಮಿಯವರು ಇಂದಿನ ಕತೆಗಾರರ ಕುರಿತಾಗಿ ಮಾತಾಡಲು ಕುಳಿತರು. ಇವತ್ತಿನ ಬರಹಗಾರರಿಗೆಲ್ಲಾ ಪೇಶನ್ಸ್‌ ಇಲ್ಲ. ಕಥೆಗಳೆಲ್ಲಾ ಚಿಕ್ಕದಾಗುತ್ತಿದೆ. ವಿಷಯ ವಿಸ್ತಾರವಾದದ್ದನ್ನು ಆಯ್ದುಕೊಂಡು ನರೇಶನನ್ನು ಚಿಕ್ಕದಾಗಿ ಮಾಡುತ್ತಾರೆ. ನಿಮ್ಮ ಕಥೆಯೂ ಹಾಗೇ ಆಗಿದೆ ಅಂತಾ ಅವರು ಮಾತು ಮುಗಿಸಿದರು. ಆಫ್‌ಕೋರ್ಸ್ ಅದು ನಿಜ ಕೂಡಾ. ಆದರೆ ಅದಕ್ಕಿಂತ ಮುಖ್ಯವಾಗಿ ಕಥೆ ಓದುವ ಮಂದಿಗೆ ಎಷ್ಟು ಪೇಶನ್ಸ್‌ ಇದೆ ಅನ್ನೋದು ಮುಖ್ಯವಾಗತ್ತೆ.
ಶಿವರಾಮ ಕಾರಂತರು ಒಂದು ಕುಚೋದ್ಯ ಹೇಳುತ್ತಿದ್ದರು. ಅವರ ಮೂಕಜ್ಜಿಯ ಕನಸಿಗೆ ಪ್ರಶಸ್ತಿ ಬಂದಾಗ ಅನೇಕ ಕಡೆ ಅವರಿಗೆ ಸನ್ಮಾನ ಆಯಿತಂತೆ. ಸಾಕಷ್ಟು ಜನ ಅವರ ಕಾದಂಬರಿ ಗುಣಗಾನ ಮಾಡಿದರಂತೆ. ಆದ್ರೆ ಅದರಲ್ಲಿ ಮುಕ್ಕಾಲು ಪಾಲು ಜನ ಕಾದಂಬರಿ ಓದದೇ ಗುಣಗಾನ ಮಾಡಿದವರಂತೆ! ಈ ವಿಚಾರವನ್ನು ಕಾರಂತರು ತುಂಬಾ ಸೊಗಸಾಗಿ ಬರೆದುಕೊಳ್ಳುತ್ತಾರೆ.
 ಇತ್ತೀಚೆಗೆ ನನ್ನ ಬರಹವನ್ನು ಸುಮ್‌ಸುಮ್ನೆ ಹೊಗಳುವವರೆ ಹೆಚ್ಚಾಗಿದ್ದಾರೆ. ನಾನು ಬ್ಲಾಗ್‌ ನಿಲ್ಲಿಸುತ್ತೀನಿ ಅಂತಾ ಮೊನ್ನೆ ಚೇತನಕ್ಕಾ ಅದ್ಯಾಕೋ ಗುನುಗುತ್ತಿದ್ದರು. ತಕ್ಷಣ ನನಗೆ ಕಾರಂತರ ಮಾತು ನೆನಪಾಯಿತು. ಒಂದು ಕೃತಿಯನ್ನು, ಬರಹವನ್ನು ಪೂರ್ಣ ಓದದೇ ಹೊಗಳುವ ಟ್ರೆಂಡು ಆವತ್ತಿನಿಂದ ಇವತ್ತಿನವರೆಗೂ ಇದೆ. ಸುದೀರ್ಘ ಬರಹವನ್ನೋ, ಕಥೆಯನ್ನೋ ಬರೆದರೆ ಅದರಲ್ಲೂ ಇಂಟರ್‌ ನೆಟ್, ಬ್ಲಾಗ್‌ಗಳಲ್ಲಿ ಬರೆದರೆ ಖಂಡಿತಾ ಜನ ಓದಲ್ಲ. ಅಂದಹಾಗೆ ಬ್ಲಾಗ್‌ ಎಂಬುದು ನನ್ನ ಮಟ್ಟಿಗಂತೂ ಪ್ರಭಾವಶಾಲಿ ಅನ್ನಿಸುವ ಓದುವ ಮಾಧ್ಯಮವಲ್ಲ.
ಮೊನ್ನೆ ಹೀಗೆ ಪುತ್ತೂರಿನ ಕುಂಟನಿ ನಿವಾಸದಿಂದ ಅಮೆರಿಕದ ಕೆಲ ಮಿತ್ರರ ಬ್ಲಾಗ್‌ವರೆಗೂ ಸುಮ್ನೆ ಒಂದು ವಾಕಿಂಗ್‌ ಹೋಗಿ ಬಂದೆ. ಎಷ್ಟೊಂದು ಅದ್ಬುತ ಬರಹಗಳಿದ್ದವು ಅಂದ್ರೆ ಕೆಲವು ವಾಸ್ತವವಾಗಿ ಚರ್ಚೆಯಾಗಬೇಕಿತ್ತು. ಆದ್ರೆ ಒಂದು ಕಮ್ಮೆಂಟ್ ಕೂಡ ಕೆಲ ಬರಹಗಳಿಗೆ ಇರಲಿಲ್ಲ. ವಾಸ್ತವವಾಗಿ ಬರಹಗಾರ ಜನ ಕಮ್ಮೆಂಟ್ ಮಾಡಲಿ, ಪ್ರತಿಕ್ರಿಯೆ ನೀಡಲಿ ಅಂತಾ ಬರೆಯುವುದಿಲ್ಲ( ನನ್ನಂತಹವನು, ಇತರರ ಕುರಿತು ನನಗೆ ಗೊತ್ತಿಲ್ಲ) ಆದ್ರೂ ಅಂತಹ ಬರಹದ ಕುರಿತು ಕನಿಷ್ಟ ಪಕ್ಷ ಚರ್ಚೆ ನಡೆಸಬೇಕು. ಸಾಹಿತ್ಯವಲಯದಲ್ಲಿ ಒಂದಿಷ್ಟು ವಿಚಾರ ಚರ್ಚೆಯಾಗಬೇಕು( ಯಾಕಂದ್ರೆ ಇಂದಿನ ಸಾಹಿತ್ಯವಲಯ ಜನಪ್ರಿಯ ವಾಗಿರುವುದೇ ಮಾತಿಗಾಗಿ, ಉಪದೇಶಕ್ಕಾಗಿ, ಚರ್ಚೆಗಾಗಿ ಹೊರತು ಕೃತಿಗಾಗಿ, ಕಾರ್ಯಕ್ಕಾಗಿ ಅಲ್ಲ!)
“ಇನ್ನೊಂದು ಸಾಹಿತ್ಯ ಚರಿತ್ರೆ” ಅಂತಾ ಆ ಪುಸ್ತಕದ ಹೆಸರು. ಸುಮತೀಂದ್ರ ನಾಡಿಗರು ಬರೆದ ಪುಸ್ತಕ. ಆಗಿನ ಕಾಲದಲ್ಲಿ ಸಾಹಿತಿಯೊಬ್ಬನ ಕವನ, ಲೇಖನಗಳು ಹೇಗೆ ಚರ್ಚೆಯಾಗುತ್ತಿತ್ತು, ಅನಂತಮೂರ್ತಿ, ಅಡಿಗರಂತಹ ದಿಗ್ಗಜರ ನಡುವೆ ಯಾವ ತರಹ ಒಂದು ವಿಚಾರದ ಕುರಿತಾಗಿ ಚರ್ಚೆ ನಡೆಯುತ್ತಿತ್ತು ಅನ್ನುವುದು ವಿವರಿಸುವ ಅದ್ಬುತ ಪುಸ್ತಕವದು. ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರನೊಬ್ಬ ಹೇಗೆ ವಿಕಸಿತಗೊಳ್ಳುತ್ತಾ ಹೋಗುತ್ತಾನೆ ಎಂಬುದನ್ನು ಆ ಪುಸ್ತಕದಿಂದ ಅರಿತುಕೊಳ್ಳಬಹುದು.
ಯಾವೊಬ್ಬನೂ ಹುಟ್ಟುತಲೇ ಸರ್ವಜ್ಞನಾಗುವುದಿಲ್ಲ. ತಪ್ಪುಗಳನ್ನು ತಿದ್ದಿಕೊಳ್ಳುತ್ತಲೇ ಫ್ರೌಡನಾಗುತ್ತಾ ಹೋಗುತ್ತಾನೆ. ಹಾಗೇ ಬರಹಗಾರನೊಬ್ಬ ಪ್ರೌಡನಾಗಲು ಆತನ ಲೇಖನದ ಮೇಲೆ ನಾವು ಹುಟ್ಟುಹಾಕುವ ಚರ್ಚೆ ಸಹಕಾರಿಯಾಗುತ್ತದೆ. ಜತೆಗೆ ನಮ್ಮ ಚಿಂತನಾ ಲಹರಿಯೂ ವಿಕಸಿತಗೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ಪು.ತಿ.ನ, ಅ.ನಕೃ, ಅಡಿಗ, ಮೊದಲಾದ ಸಾಹಿತಿಗಳ ಕಾಲದಲ್ಲಿ ಸಾಹಿತ್ಯ ಸಮಾಜದ ಚರ್ಚಿತ ವಿಷಯಗಳಲ್ಲಿ ಒಂದಾಗಿದ್ದು (ಲಂಕೇಶ್, ಅನಂತಮೂರ್ತಿ, ತೇಜಸ್ವಿ ಕಾಲದ ಸಾಹಿತ್ಯ ಸಮರವೇ ಬೇರೆ ತರಹದ್ದು!)ಅಂತಾ ನನ್ನಗನ್ನಿಸುತ್ತದೆ.
ಆದರೆ ಇವತ್ತು ನಮ್ಗೆ ಒಂದು ವಿಚಾರದ ಕುರಿತು ಚರ್ಚೆ ಮಾಡುವುದು ಹಾಳಾಗಲೀ, ಬರಹವನ್ನು ಸಂಪೂರ್ಣ ಓದುವಷ್ಟು ಪುರುಸೊತ್ತು ಇಲ್ಲ ಅಲ್ವಾ? ಅಂದಿನ ಜನಾಂಗಕ್ಕೂ ಇಂದಿನ ಪೀಳಿಗೆಗೂ ಇರುವ ವ್ಯತ್ಯಾಸ ಅದೇಷ್ಟು ಅಲ್ವಾ? ಹಾಗಾಗಿಯ ನಾನಂತೂ ಚಿಕ್ಕ ಚಿಕ್ಕ ಕಥೆಯನ್ನೇ ಬರೆಯುವುದು! ಅದು ಕಥೆಯೋ, ಬರಹವೋ ಅಂತಾ ನನಗೂ ಕೆಲವೊಮ್ಮೆ ಅರ್ಥವಾಗುವುದಿಲ್ಲ!

Read Full Post »

ಸಂಚಿ ನಾಗಿ ಅಂತಾನೇ ಆಕೆ ನಮಗೆಲ್ಲಾ ಪರಿಚಿತೆ. ರಾಮ ಭಟ್ರ ಮನೆಯ ಕೆಸದಾಕೆ ಅವಳು. ಅವಳ ಕಥೆ ಮಗಳ ಕಥೆಗಿಂತಲೂ ದೊಡ್ಡದು. ಆದ್ರೂ ಮಗಳ ಕಥೆ ಅವಳಗಿಂತಲೂ ದೊಡ್ಡದು! ಕುಂದಾಪುರದ ಕಡೆಯವಳು, ಬಾಬು ಸೇರಿಗಾರನ ಜೊತೆ ಓಡಿಬಂದವಳು ಅಂತಾರೆ ಕೆಲವರು. ಇನ್ನೂ ಕೆಲವರು ನಾಗಿ ಅಂದ್ರೆ ಹುಟ್ಟಾ ಸೂಳೆ ಅಂತಾ ಮೂಗು ಮುರಿತಾರೆ. ಹಾಗಾಗಿ ನಮಗೆಲ್ಲಾ ನಾಗಿ ಅಂದ್ರೆ ಮೊದಲಿಂದಲೂ ಕೂತುಹಲ. ನಾಗಿ ಮ್ಯಾಲೆ ಎಂತಹದೋ ಒಂತರಹ ಗುಮಾನಿ! ಊರಿನ ಜನ ಏನೇ ಆಡಿಕೊಂಡರು ಎಲ್ಲರಿಗೂ ನಾಗಿ ಬೇಕು. ಚಿಕ್ಕ ಪುಟ್ಟ ಕೆಲಸಗಳು ಬಂದಾಗ ಊರ ಜನರ ಬಾಯಲ್ಲಿ ಮೊದಲು ಬರೋ ಹೆಸರು ನಾಗಿಯದ್ದು. ನಿತ್ಯ ಕೆಲಸ ರಾಮ ಭಟ್ರ ಮನೆಯಲ್ಲೇ ಆದರೂ ನಾಗಿ ಯಾವತ್ತು ಯಾರು ಹೇಳಿದ ಕೆಲಸ ನಿರಾಕರಿಸಿದವಳಲ್ಲ. ಮಾಡಿದ ಕೆಲಸಕ್ಕೆ ದುಡ್ಡು ಕೇಳಿದವಳೂ ಅಲ್ಲ. ಬಾಯಿ ತುಂಬಾ ತುಂಬುವ ಹೊಗೆಸೊಪ್ಪಿನ ಒಂದು ಎಲೆ ಅಡಿಕೆ ಕೊಟ್ಟು ಬಿಟ್ಟರೆ ಮುಗೀತು. ಮತ್ತೆ ನಾಗಿಗೆ ದುಡ್ಡು, ಕಾಸು ಏನೂ ಬ್ಯಾಡ. ಹಾಗಾಗಿಯೇ ಇರಬೇಕು ಅವಳಿಗೆ ಸಂಚಿ ನಾಗಿ ಅಂತಾ ಹೆಸರು ಬಂದಿದ್ದು!
ಬೊಮ್ಮನ ಗುಡ್ಡ. ಅದರ ಕೆಳಗೆ ಸೇರಿಗಾರರ ಕೇರಿ. ಅಲ್ಲೆ ಪುಟ್ಟದೊಂದು ಸೋಗೆ ಗುಡಿಸಲು. ನಾಗಿಗೂ ಒಂದು ಗುಡಿಸಲು ಇದೆ ಅಂತಾ ನಮಗೆಲ್ಲಾ ಗೊತ್ತಾಗಿದ್ದು ಆಕೆ ಮನೆ ಹೊದಿಕೆಗೆ ಅಂತಾ ಸೋಗೆ ಕೇಳಲು ಬರುತ್ತಿದ್ದರಿಂದ. ನಾಗಿ ಊರಿನ ಮಂದಿಗೆಲ್ಲಾ ಬೇಕಾದವಳು ಅನ್ನೋದೇನೋ ನಿಜ. ಆದರೆ ಊರಿನ ಮಕ್ಕಳ್ಯಾರೂ ನಾಗಿ ಮನೆ ಕಡೆ ಸುಳಿಯುವ ಹಾಗಿಲ್ಲ! ನಾಗಿ ಮನೆ  ಊರಿನ ನಿಷೇಧಿತ ಪ್ರದೇಶ ಅಂದ್ರೂ ತಪ್ಪಗಲಾರದು. ನಾವೆಲ್ಲಾ ಶಾಲೆಗೆ ಹೋಗುವಾಗ ನಾಗಿ ಮನೆ ಇಲ್ಲೆಲ್ಲೋ ಬರತ್ತಂತೆ ಅಂದುಕೊಂಡು ಹೋಗುತ್ತಿದ್ದೇವು. ನಮ್ಮಂತ ಹುಡುಗರಿಗೆಲ್ಲಾ ನಾಗಿ ಜತೆ ನಾಗಿ ಮನೆಯೂ ಒಂದು ಕುತೂಹಲದ ವಸ್ತು.
ನಮ್ಮ ಜತೆಯೇ ಓದಿದ ಹುಡುಗಿ ಸುಮ. ನಾಗಿ ಮಗಳು ಅಂತಾ ನಮಗೆಲ್ಲಾ ಅವಳ ಮೇಲೆ ಒಂಚೂರು ಕರುಣೆ, ಹಿಡಿಯಷ್ಟು ಪ್ರೀತಿ. ನಾಗಿಗೆ ತದ್ವಿರುದ್ದದ ಸ್ವಭಾವ ಅವಳದ್ದು.  ಬಜಾರಿ ಹೆಣ್ಣು. ಮೇಷ್ಟ್ರಿಗೆಲ್ಲಾ ಎದುರುತ್ತರ ಕೊಡುತ್ತಿದ್ದಳು. ಅಪ್ಪಾ ಗೊತ್ತಿಲ್ಲದ ಮಗಳೇ ಎಷ್ಟು ಸೊಕ್ಕು ನಿನಗೆ ಅಂತಾ ಮೇಷ್ಟ್ರು ಅವಳಿಗೆ ಹೊಡೆಯುತ್ತಿದ್ದರು. ಆವಾಗೆಲ್ಲಾ ನಮಗೆ ಆ ಭಾಷೆಯ ಅರ್ಥ ತಿಳಿತಾ ಇರ್ಲಿಲ್ಲ. ನಾಗಿ ಮಗಳಿಗೆ ಹೊಡೆದರು ಅನ್ನೋದೆ ನಮಗೆ ಖುಷಿ! ಆದ್ರೂ ಒಂದೊಂದ್ಸಾರಿ ಅಯ್ಯೋ ಪಾಪ ಅನ್ನಿಸುತ್ತಿತ್ತು. ಹೆಗಡೆ ಮಗಳು ಏನೂ ಮಾಡಿದರೂ ಹೊಡೆಯದ ಮೇಷ್ಟ್ರು, ನಾಗಿ ಮಗಳಿಗೆ ಮಾತ್ರ ಹೊಡಿತಾರೆ ಅಂತಾ ಸಿಟ್ಟು ಬರುತ್ತಿತ್ತು. ಆದ್ರೆ ಅವಳಿಗೆ ಮಾತ್ರ ಅದ್ಯಾವುದೂ ತಿಳಿಯುತ್ತಲೇ ಇರಲಿಲ್ಲ. ಅದೇ ತುಂಟುತನ, ಅದೇ ಪೆದ್ದುತನ ಅವಳದ್ದು.
ನಿತ್ಯ ಹುಣಸೆ ಬೀಜ, ಪೆರಲೆ ಹಣ್ಣು ತಂದು ಕೊಡುತ್ತಿದ್ದರಿಂದ ನನಗೆ ಸುಮಿ ಬಹಳ ಕೋಸ್ಲ್‌ ಫ್ರೆಂಡ್‌ ಆಗಿಬಿಟ್ಟಿದ್ದಳು! ಆದ್ರೂ ಅವಳ ಜತೆ ಹೆಚ್ಚು ಮಾತಾಡಲು ಹೆದರಿಕೆ. ಯಾರಾದ್ರೂ ನೋಡಿದರೆ ಬೈಯ್ಯುತಾರೆ ಅನ್ನೋ ಭಯ. ಸುಮಾರು ಎಸ್ಸೆಸ್ಸಲ್ಸಿ ಮುಗಿಯುವವರೆಗೂ ಅವಳು ನನ್ನ ಕ್ಲಾಸ್‌ಮೇಟು ಆಗಿದ್ದಳು. ನಾನು ಅಂದ್ರೆ ಅವಳಿಗೆ ತುಂಬಾ ಇಷ್ಟ. ಅವಳ ಮನಸಿನ ನೋವು ನಲಿವು ಎಲ್ಲವನ್ನು ಮುಚ್ಚುಮರೆ ಇಲ್ಲದೆ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಳು. ಹಾಗೇ ಕಥೆ ಹೇಳಬೇಕು ಅನ್ನಿಸಿದಾಗಲೆಲ್ಲಾ ಹುಣಸೆ ಬೀಜದ ನೆವದಲ್ಲಿ ನನ್ನ ಹತ್ತಿರ ಬರುತ್ತಿದ್ದಳು! ಹಾಗೇ ಒಂದು ದಿನ ಸುಮಿ, ನಾಗಿ ಹೇಳಿದ ಕಥೆ ಹೇಳಿದ್ದಳು.
ನಾಗಿ ತಾಯಿ ಕುಂದಾಪುರದಲ್ಲಿ ಸೂಳೆಗಾರಿಕೆ ಮಾಡಿಕೊಂಡು ಬದುಕುತ್ತಿದ್ದವಳಂತೆ. ಒಂದು ಮಗು ಆಗುತ್ತಿದ್ದ ಹಾಗೆ ಮಗಳಿಗೂ ಆ ಸುಳೇಗಾರಿಕೆ ಸೋಂಕು ತಾಗಬಾರದು ಅಂತಾ ಘಟ್ಟ ಹತ್ತಿ ಬಂದವಳು ನಾಗಿ ತಾಯಿ ಅಲಿಯಾಸ್‌ ಐಗಿನ ಮನೆ ಸುಬ್ಬಿ! ಐಗಿನ ಮನೆಯ ಐಯ್ಯನವರ ಮನೆ ಆಳಾಗಿ ಕೆಲಸ ಮಾಡುತ್ತಿದ್ದ ಸುಬ್ಬಿಗೆ ನಾಗಿ ಓದಬೇಕು, ಒಳ್ಳೆ ಹುಡುಗನ್ನ ಹುಡುಕಿ ನಾಗಿಗೊಂದು ಮದ್ವೆ ಮಾಡಬೇಕೆಂಬ ಆಸೆಯಿತ್ತು. ನಾಗಿ ಯಾವುದೇ ಕಾರಣಕ್ಕೂ ತನ್ನಂತೆ ಸೂಳೆ ಅನ್ನಿಸಿಕೊಳ್ಳಬಾರದೆಂಬ ಹಂಬಲವಿತ್ತು. ಹಾಗಾಗಿ ಮಗುವನ್ನು ಇಸ್ಕುಲಿಗೂ ಕಳುಹಿಸಿದಳು. ನಾಗಿ ಆಗೆಲ್ಲಾ ಚೆಂದದ ಚೆಂದನದ ಗೊಂಬೆಯಂತ ಹುಡುಗಿ. ತಾಯಿಗೆ ಮಗಳ ರೂಪದ್ದೇ ಚಿಂತೆ. ಯಾರ ಕಾಮುಕ ಕಣ್ಣಿಗೆ ಮಗಳು ಬೀಳುತ್ತಾಳೋ ಎಂಬುದೇ ಯೋಚನೆಯಾಗಿತ್ತು.  ನಿತ್ಯ ಒಲೆ ಬುಡದಲ್ಲಿ ಕೂತು ಬೆಂಕಿ ಹಚ್ಚಿಸುವಾಗ ಮಗಳಿಗೆ ಬುದ್ದಿವಾದ ಹೇಳುತ್ತಿದ್ದಳು. ಬದುಕಿನ ಕುರಿತಾಗಿ ಕನಸು ಕಟ್ಟಿಕೊಡುತ್ತಿದ್ದಳು.
 ನಾಗಿ ಆಗಿನ್ನು ಹೈಸ್ಕುಲ್‌ ಮೆಟ್ಟಿಲು ಹತ್ತಿದ್ದಳು. ಅದಾಗಲೇ ಒಂದೆರಡು ಮಂದಿ ನಾಗಿ ಹಿಂದೆ ಬಿದ್ದರು. ಹಾಗೆ ಬಿದ್ದವರಲ್ಲಿ ಐಯ್ಯನವರ ಮಗ ರಾಮು, ಹೆಗಡೆಯವರ ಮಗ ಸೋಮು ಇಬ್ಬರು ಅಗ್ರಗಣ್ಯರು. ಆಗತಾನೇ ಯೌವ್ವನ ಮೊಳಕೆಯೊಡೆದಿದ್ದ ನಾಗಿಗೆ ತಾಯಿ ಬಿಟ್ಟು ಮತ್ತೊಬ್ಬ ಸಂಗಾತಿ ಬೇಕಿತ್ತು. ಆ ಇಬ್ಬರು ಕುಬೇರ ಕುವರರು ನಾಗಿಯನ್ನು ಇಂದ್ರಲೋಕದಲ್ಲಿಯೇ ತೇಲಾಡಿಸಿದರು. ಪಟ್ಟಣಕ್ಕೆ ಕರೆದುಕೊಂಡು ಹೋಗಿ ಐಸ್‌ಕ್ರೀಂ ಕೊಡಿಸಿದರು. ಪಿಚ್ಚರ್ ತೋರಿಸಿದರು. ನಾನು ನಿನ್ನನ್ನು ಮದ್ವೆ ಆಗುತ್ತೇನೆ ಅಂತಲೂ ನಂಬಿಸಿದರು. ಕಷ್ಟದಲ್ಲಿ ಬದುಕಿದ ನಾಗಿಗೆ ಆ ಕ್ಷಣಿಕ ಸುಖಗಳೆಲ್ಲಾ ಮೈ ಮರೆಸಿತು. ಬದುಕು ಅಂದ್ರೆ ಇದೆ ಅನ್ನಿಸಿಬಿಟ್ಟಿತ್ತು.
ಆ ಗಳಿಗೆಯನ್ನು ರಾಮು, ಸೋಮು ಇಬ್ಬರೂ ಚೆನ್ನಾಗಿ ಉಪಯೋಗಿಸಿಕೊಂಡರು. ನಾಗಿಯಿಂದ ಪಡೆಯಬೇಕಾದ ಸುಖವನ್ನೆಲ್ಲಾ ಪಡೆದರು. ಹೀಗೆ ದಿನಗಳುರುಳುವಾಗ ಒಂದು ದಿನ ಹೊಟ್ಟೆ ಮುಂದುಬರುತ್ತಿರುವುದರ ಅರಿವು ನಾಗಿಗಾಯಿತು. ಭಯದಿಂದ ನಾಗಿ ಸೋಮು ಬಳಿ ಹೋದರೆ ಅವ ರಾಮುವಿನತ್ತ ಕೈ ತೋರಿದ. ರಾಮು ಸೋಮುವಿನತ್ತ ಕೈ ತೋರಿಸಿದ. ಇಷ್ಟಾಗುವಾಗ ವಿಚಾರ ಸುಬ್ಬಿ ಬಳಿ ಹೋಯಿತು. ಆದರೆ ಅದಾಗಲೇ ನಾಗಿಗೆ ಸೂಳೆ ಪಟ್ಟ ಸಿಕ್ಕಿತ್ತು. ಪಂಚಾಯಿತಿ ಕಟ್ಟೆ ನಾಗಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು. ಅವಳು ಸುಬ್ಬಿ ಮಗಳು ಎಂಬುದನ್ನು ಊರಿಗೂರೇ ಒತ್ತಿ ಒತ್ತಿ ಹೇಳಿತು. ಇದೇ ಕೊರಗಿನಲ್ಲಿ ಸುಬ್ಬಿ ಸತ್ತಳು. ನಂತರ ಬೇಸತ್ತ ನಾಗಿ ಊರು ತ್ಯಜಿಸಿ ನಮ್ಮೂರಿಗೆ ಬಂದಳು ಅಂತಾ ಸುಮಿ ನನಗೆ ಹೇಳಿದಳು. ನಾನು ಎಸ್ಸೆಸ್ಸಲ್ಸಿ ಮುಗಿಸಿ ಮುಂದಿನ ಓದಿಗೋಸ್ಕರ ಊರು ಬಿಟ್ಟೆ. ನಾನು ಊರಿಗೆ ಹೋದಾಗ ಸುಮಿ ಸಿಗಲಿಲ್ಲ. ಸುಮಿ ಊರಲ್ಲಿ ಇದ್ದಾಗ ನಾನು ಹೋಗಲಿಲ್ಲ! ಒಟ್ಟಾರೆ ಆ ಕಥೆ ಹೇಳಿದ ನಂತರ ಸುಮಿ ನನಗೆ ಸರಿಯಾಗಿ ಮಾತಿಗೆ ಸಿಗಲಿಲ್ಲ.
ಶಿವಮೊಗ್ಗದಲ್ಲಿ ಎಂ.ಎ ಓದುತ್ತಿರುವ ನಿಮ್ಮೂರಿನ ಹುಡುಗಿ ಸುಮಾ ನಕ್ಸಲ್‌ ಪಡೆ ಸೇರಿದ್ದಾಳಂತೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದನ್ನು ಖಚಿತಪಡಿಸಿಕೊಳ್ಳಲು ಗಡಿಬಿಡಿಯಿಂದ ಊರಿಗೆ ಓಡಿದ್ದೆ. ಅಷ್ಟು ಕಷ್ಟ ಅನುಭವಿಸಿದರೂ ಎಂದೂ ಸುಮಿ ಕೊಲೆ, ರಕ್ತಪಾತದ ಮಾತಾಡಿದವಳಲ್ಲ. ಬಂದೂಕು ಕಂಡವಳಲ್ಲ. ಆದ್ರೂ ಈಕೆ ಹೇಗೆ ನಕ್ಸಲ್ ಆದಳು ಎಂಬ ಪ್ರಶ್ನೆ ಬಸ್ಸಿನುದ್ದಕ್ಕೂ ನನ್ನನ್ನು ಕಾಡುತ್ತಲೇ ಇತ್ತು. ಇದೇ ಗುಂಗಿನಲ್ಲೇ ಊರು ತಲುಪಿದರೆ, ಊರಲ್ಲಿ ಸೂರ್ಯ ಮೂಡುತ್ತಿರುವಾಗಲೇ ಸ್ಮಶಾನ ಮೌನ ಆವರಿಸಿತ್ತು. ನನ್ನಂತೆ ಸೂಳೆಗಾರಿಕೆ ಮಾಡಿಕೊಂಡು ಬದುಕಿದ್ದರೂ ಒಂಚೂರು ಗೌರವ ಉಳಿಯುತ್ತಿತ್ತು. ಯಾರನ್ನೋ ಕೊಲ್ಲುವ ಹೆಣ್ಣಾಗಲು ಹೋಗಿ ಕೊನೆಗೂ ಜೀವ ತೆತ್ತಳಲ್ಲ ಎಂದು ನಾಗಿ ಒಂದೇ ಸಮನೆ ಕಿರುಚುತ್ತಿದ್ದಳು.
ಆ ದರಿದ್ರಾ ಪ್ರಾಧ್ಯಾಪಕನಿಂದಲೇ ಇವಳ ಬದುಕು ಹಾಳಾಗಿದ್ದು, ಅವನ ಮಗಳು ಮದ್ವೆಯಾಗಿ ಅಮೆರಿಕಾಗೆ ಹೋದಳು. ಅವನ ಮಾತು ಕಟ್ಟಿಕೊಂಡು ಕ್ರಾಂತಿ ಮಾಡಲು ಹೊರಟ ಇವಳು ಸ್ಮಶಾನ ಸೇರಿದಳು.  ಈ ಮುಂಡೆವು ಇನ್ನೂ ಎಷ್ಟು ಮಕ್ಕಳನ್ನು ಹಾಳು ಮಾಡುತ್ತಾವೋ. ಇನ್ಮೇಲೆ ಮಕ್ಕಳನ್ನು ಇಸ್ಕೂಲಿಗೆ ಕಳುಹಿಸಬಾರದು ಎಂದು ಪಕ್ಕದಲ್ಲಿ ಯಾರೋ ಗುನುಗುತ್ತಿದ್ದರೆ, ನನಗೆ ಸುಬ್ಬಿ ಒಲೆ ಮುಂದೆ ಕುಳಿತು ನಾಗಿಗೆ ಮಾಡುತ್ತಿದ್ದ ಉಪದೇಶವನ್ನು ಸುಮಿ ವಿವರಿಸುತ್ತಿದ್ದದ್ದು ನೆನಪಾಗುತ್ತಿತ್ತು.

Read Full Post »

ಹೋಯ್ ಬಜಾರಿ
ನೀ ಪತ್ರ ಓದಲು ಒಲ್ಲೆ ಅಂದಮೇಲೆ ನಂಗೂ ಪತ್ರ ಬರೆಯಲು ಒಲ್ಲೆ ಅನ್ನಿಸುತ್ತಿದೆ! ನೀನು ಹೇಳಿದ ಹಾಗೇ ಬದುಕಿನ ಎಲ್ಲಾ ಘಟ್ಟಗಳು ಒಂದು ಕ್ರ್‍ಎಜು ಅಷ್ಟೆ. ಅವುಗಳಲ್ಲಿ ಈ ಲವ್ವು ಫೀಲುಗಳು ಒಂದು. ಒಂದು ವಯಸ್ಸಿನಲ್ಲಿ ಪ್ರತಿಯೊಬ್ಬನೂ ತನ್ನ ಚಿಂತನೆ, ಆಲೋಚನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿಯುತ್ತಾನೆ. ಅಪ್ಪ, ಅಮ್ಮ, ಗೆಳೆಯ ಎಲ್ಲಾ ಐಡೆಂಟಿಗಳನ್ನು ಕಳಚಿಕೊಂಡು ಬದುಕಲು ಪ್ರಯತ್ನಿಸುತ್ತಾನೆ. ಒಂದಿಷ್ಟು ದಿನ ಬದುಕಿಯೂ ಬದುಕುತ್ತಾನೆ! ಆ ಮೇಲೆ ಅವನಿಗೆ ತಾನು ಒಂಟಿ ಎಂಬ ಭಾವನೆ ಕಾಡಲು ಶುರುವಿಡತ್ತೆ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಂಗಾತಿ ಬೇಕು ಅನ್ನಿಸತ್ತೆ. ಹಾಗೇ ಶುರುವಾಗುವುದು ಈ ಲವ್ವು, ಫೀಲು. “ಹೆಣ್ಣು ಬಂದು ಮೂರು ದಿನ ಎಮ್ಮೆ ಬಂದು ಆರು ದಿನ’ ಅನ್ನೋ ತರಹದ್ದು ಇದರ ಟೇಸ್ಟು. ಒಂದಷ್ಟು ದಿನಕ್ಕೆ ಹೆಚ್ಚಿನವರಿಗೆ ತಾವು ಆರಿಸಿಕೊಂಡ ಜೀವನದ ಸಂಗಾತಿ ಕೂಡ ಬೋರ್ ಅನ್ನಿಸಿ ಬಿಡುತ್ತಾಳೆ. ಹಾಗಾಗಿಯೇ ಇರಬೇಕು ಕಣೇ ಕೆಲವರು ೬೦ ದಾಟಿದರೂ ೨೦ರ ಕೂಸುಗಳ ಜೊತೆ ಸುತ್ತಲು ಹಾತೊರೆಯುವುದು!
ಇದೊಂದು ತರಹ ವಿಚಿತ್ರ ಸಮಾಜ ಅಲ್ವಾ? ಎಲ್ಲಿ ನೋಡಿದರೂ ಗಂಡು, ಹೆಣ್ಣುಗಳ ಸಂಬಂಧ. ಕೆಲವು ನೈತಿಕವಂತೆ, ಇನ್ನೂ ಕೆಲವು ಅನೈತಿಕವಂತೆ! ಹುಡುಗ, ಹುಡುಗಿ ಒಟ್ಟಿಗೆ ಇದ್ದರು ಅಂದ್ರೆ ಅವರ ನಡುವೆ ಯಾವುದಾದರೂ ಒಂದು ಸಂಬಂಧ ಕಟ್ಟದೇ ಇದ್ದರೆ ನಮಗೆ ಸಮಾಧಾನವೇ ಇಲ್ಲ! ಇನ್ನೂ ನಮ್ಮ ಹಳ್ಳಿಯ ಮನೆಯ ಮಂದಿಗಳು ಇವತ್ತಿಗೂ ಬದುಕು ಅಂದ್ರೆ ಸಂಬಂಧ ಬೆಳೆಸುವುದು, ಮದ್ವೆ, ಸಂಸಾರ…ಇಷ್ಟೆ ಅನ್ನೋ ಜಾಡ್ಯದಲ್ಲೇ ಮುಳುಗಿ ಹೋಗಿದ್ದಾರೆ. ಒಂತರಹ ನಿನ್ನ ಅಪ್ಪ, ಅಮ್ಮಂದಿರಂತೆ! ಆದ್ರೆ ನಮಗೆಲ್ಲಾ ಅವುಗಳಿಗಿಂತ ಭಿನ್ನವಾದದ್ದು ಏನಿದೆ ಎಂದು ಆಲೋಚಿಸುವುದೇ ಒಂದು ಬದುಕು!
ಹೌದಲ್ವಾ ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ? ನನಗಂತೂ ಗೊತ್ತಿಲ್ಲ. ನನ್ನ ಮಟ್ಟಿಗೆ ಬದುಕೆಂಬುದೊಂದು ಮೂಕಜ್ಜಿಯ ಕನಸೇ ಸರಿ. ಹೋಗ್ಲಿ ಬಿಡು ಕೆಲವಷ್ಟು ವಿಚಾರಗಳ ಕುರಿತಾಗಿ ಜಾಸ್ತಿ ಆಲೋಚಿಸಬಾರದಂತೆ. ಹಾಗೆ ಆಲೋಚಿಸಿದರೆ ನಾವು ಹುಚ್ಚರಾಗುತ್ತೇವಂತೆ ಹೊರತು ಸಮಾಜ ಬದಲಾಗದಂತೆ. ಮತ್ತೆ ನಿನ್ನ ಮದ್ವೆ ವಿಚಾರ  ಎಲ್ಲಿಯವರೆಗೆ ಬಂತು? ನನ್ನ ಜೀವನದ ಗೆಳತಿಯಾದ ನೀನು ಬೇರೆಯವರ ಮನೆ ಸೇರುತ್ತೀಯಾ, ನಾನು ನಿನ್ನನ್ನು ಕಳೆದುಕೊಳ್ಳುತ್ತೀನಿ ಅನ್ನೋ ಭಯ ಕಾಡಲು ಶುರುವಿಟ್ಟಿದ್ದೆ ಕಣೇ. ಅಂದಹಾಗೆ ಈ ಬದುಕಿನಲ್ಲಿ ನಾವು ಎಲ್ಲವನ್ನು ಕಳೆದುಕೊಳ್ಳುವುದೇ ಹೊರತು ಗಳಿಸುವುದೇನನ್ನು ಇಲ್ಲ. ಯಾಕಂದ್ರೆ ನಾವು ಬರುವಾಗ ಏನನ್ನು ತರುವುದಿಲ್ಲ. ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದು ನನ್ನ ನಿಲುವು. ಹಾಗಾಗಿಯೇ ನಾನು ನಿನಗೆ ಆವತ್ತೇ ಹೇಳಿದ್ದು, ನೀನು ನನ್ನ ಗೆಳತಿ ಹೊರತು ಮತ್ತೇನೂ ಅಲ್ಲ ಅಂತಾ. ಅದನ್ನು ನೀನು ಖುಷಿಯಿಂದ ಸ್ವೀಕರಿಸಿದ್ದೆ. ಆದ್ರೂ ಜನ ನನ್ನ, ನಿನ್ನ ನೋಡಿ ಏನೇನೋ ಆಡಿಕೊಂಡರು. ನಾನು ನಿನಗೆ ಬರೆದ ಪತ್ರವನ್ನೆಲ್ಲಾ ಪ್ರೇಮ ಪತ್ರ ಅಂತಾ ಕರೆದರು! ಹೋಗ್ಲಿ ಬಿಡು ನಾವು ಬದುಕುವುದು ಆ ಜನಕ್ಕಾಗಿ ಅಲ್ಲ. ನಮಗಾಗಿ. ಮತ್ತೆ ವಿಶೇಷ. ನಂಗೂ ಈಗ ಕೆಲಸದ ಬ್ಯುಸಿ ಕಣೇ! ವರ್ಷಗಳ ನಂತರ ವೃತ್ತಿಯಲ್ಲಿ ಹೌದೋ ಅಲ್ವೋ ಅನ್ನೋ ತರಹ ನೆಲೆ ಕಂಡುಕೊಂಡಿದ್ದೇನೆ. ಪತ್ರಿಕೋದ್ಯಮ ಎಂಬ ಹಾದರದ ದಂಧೆಯಲ್ಲಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿದ್ದೇನೆ. ಅಂದಹಾಗೆ ನಿನಗೆ ಒಂದ್ಸಾರಿ ಈ ಹಾದರ ಲೋಕದ ಕಥೆ ಹೇಳಿದ್ದೆ ಅನ್ಸತ್ತೆ ಅಲ್ವಾ? ಒಂದಿಷ್ಟು ಕಚ್ಚೆ ಹರುಕರ, ಹುಡುಗಿಯರು ಅಂದ್ರೆ ಜೊಲ್ಲು ಸುರಿಸಿ ಅವಕಾಶ ಕೊಡುವ ಒಂದಿಷ್ಟು ತೆವಲು ತೆವಲು ಚೀಫ್‌ಗಳ ಜೀವನ ಚರಿತ್ರೆ ವಿವರಿಸಿದ್ದೆ ಅಲ್ವಾ? ಹೌದು ಕಣೇ ಈ ಫೀಲ್ಡ್‌ ಹಾಗೆ. ಎಷ್ಟೋ ಪತ್ರಕರ್ತ ಮಹಾಶಯರು ಇತರರಿಗೆ ಪುಂಖಾನು ಪುಂಖವಾಗಿ ಉಪದೇಶ ಮಾಡುತ್ತಾರೆ. ತಾವು ಮಾತ್ರ ಮಾಡಬಾರದ ಹಾದರವನ್ನೆಲ್ಲಾ ಮಾಡುತ್ತಾರೆ. ಇಲ್ಲಿ ಪ್ರತಿಭೆಗೆ ಬೆಲೆಯಿಲ್ಲ. ಕ್ರಿಯೇಟಿವಿಟಿಗೆ ಅವಕಾಶವಿಲ್ಲ. ಇಲ್ಲಿ ನೆಲೆಯೂರಲು ಲಾಭಿ ಬೇಕು. ಅದಿಲ್ಲವಾದರೆ ದಷ್ಟಪುಷ್ಟವಾದ ಮೊಲೆ ಬೇಕು. ನನಗಂತೂ ಇಲ್ಲಿನ ಬದುಕು ಸಾಕು ಸಾಕೆನಿಸಿದೆ. ಆದ್ರೂ ಒಂದು ಹುಂಬು!
ಯಾವ ರಾಜಕಾರಣಿಗೂ, ಯಾವ ರೌಡಿಗೂ, ಯಾವ ಲೋಪರ್‌ಗಳಿಗೂ ಕಮ್ಮಿಯಿಲ್ಲದ ಪತ್ರಕರ್ತರು ಅಲ್ಲಲ್ಲ ಪುತ್ರಕರ್ತರು ಇಲ್ಲಿದಾರೆ. ಅವರ ಬಗ್ಗೆ ನಾವೆಲ್ಲಾ ಮಾತಾಡೋದು ಮಹಾಪರಾಧವಾಗತ್ತೆ! ಹಾಗಾಗಿ ನನ್ನ ಮಾತನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಗೊತ್ತು ಗುರಿಯಿಲ್ಲದ ನಮ್ಮ ಬದುಕನ್ನೆಲ್ಲಾ ನೆನಸಿಕೊಂಡರೇನೆ ಮೈ ಜುಂ ಅನ್ನತ್ತೆ. ಎನಿ ವೇ ನೀನು ಮದ್ವೆಯಾಗಿ ಲೈಫಲ್ಲಿ ಬೇಗ ಸೆಟ್ಲ ಆಗಿ ಬಿಡು! ಮದ್ವೆ ಫಿಕ್ಸ್ ಆದರೆ ಕರೆಯೋಕೆ ಮರಿಬ್ಯಾಡ.
ನಿನ್ನ ಮದ್ವೆ ಊಟಕ್ಕೆ ಕಾಯುವವ…

Read Full Post »