Feeds:
ಲೇಖನಗಳು
ಟಿಪ್ಪಣಿಗಳು

253905_1947032795604_1236060303_32252492_3040003_n

ನಾನು ಯಾವತ್ತು ಖಾಕಿ ಚಡ್ಡಿ ಹಾಕಿಕೊಂಡು ಆರ್‌ಎಸ್‌ಎಸ್‌ನ ನಮಾಜ್‌ ಕಾರ್ಯಕ್ರಮಕ್ಕೆ ಹೋದವನಲ್ಲ. “ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ. ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ. ಇದುವೆ ನವಗಾನ” ಎಂದು ಪ್ರಾರ್ಥನೆ ಮಾಡುವ ಅವಶ್ಯಕತೆಯೂ ಕಾಣಿಸಲಿಲ್ಲ. ಆದ್ರೆ ದುರಾದೃಷ್ಟವಶಾತ್‌ ಆರ್‌ಎಸ್‌ಎಸ್‌ನಲ್ಲಿ ಹಗಲು-ಇರುಳು ದುಡಿಯಯವ ಹಲವು ಮಿತ್ರರು ಬದುಕಿನ ಹಾದಿಯಲ್ಲಿ ಸಿಕ್ಕರು.

ನಂಗೆ ಆರ್‌ಎಸ್‌ಎಸ್‌ ಚಡ್ಡಿ ಕುರಿತು ಅಷ್ಟೇನು ಕಾಳಜಿಯಿಲ್ಲ ಅಥವಾ ಆರ್‌ಎಸ್ಸೆಸ್ಸಿಗರನ್ನು ಚಡ್ಡಿ ಎಂದು ಅಣಗಿಸುವವರನ್ನು ಕಂಡು ಖುಷಿಯೂ ಆಗುವುದಿಲ್ಲ. ಇವಿಷ್ಟು ವಿಚಾರ ಹೇಳಿ ವಿಷಯಕ್ಕೆ ಬರುತ್ತೇನೆ.

ಆರ್‌ಎಸ್‌ಎಸ್‌ ಅಂದ್ರೆ ಖಾಕಿ ಚಡ್ಡಿ. ಕೇಸರಿ ಬಾವುಟ. ಹಿಂದುತ್ವದ ಢಂಗುರ…ಸಂಘದ ವಿರುದ್ಧ ಮಾತಾಡುವ ಹಲವರಿಗೆ ಕಾಣಿಸುವುದು ಇವಿಷ್ಟೆ. ನಂಗೆ ಮೊದ್ಲು ಆರ್‌ಎಸ್‌ಎಸ್‌ ಅಂದ್ರೆ ಕಂಡಿದ್ದು ಬ್ಯಾಟರಾಯನಪುರದಲ್ಲಿನ ನೆಲೆ. ‘ನರೇಂದ್ರ ನೆಲೆ’ ಎಂಬುದು ಆ ಜಾಗದ ಹೆಸ್ರು. ಹಿಂದು ಸೇವಾ ಪ್ರತಿಷ್ಠಾನದ ಅಂಗವಿದು. ಚಿಂದಿ ಆಯುವ ಮಕ್ಕಳು, ಅನಾಥರು, ಅಶಕ್ತ ಮಕ್ಕಳು, ಹರುಕು-ಮುರುಕು ಬಟ್ಟೆ ಹಾಕಿಕೊಂಡು ಬದುಕುವ ಮಕ್ಕಳನ್ನೆಲ್ಲ ಒಟ್ಟು ಹಾಕಿ…(ಹಿಂದುಭಯೋತ್ಪಾದನೆ ಪಾಠ ಮಾಡುವ ಕೇಂದ್ರ ಅನ್ನಬಹುದು ವಿರೋಧಿಗಳು!) ಅವರಿಗೆ ವಸತಿ, ಊಟ, ಪಾಠ ಹೇಳಿಕೊಡುವ ಕೇಂದ್ರವಿದು. ರಾಷ್ಟ್ರಶಕ್ತಿ ಕೇಂದ್ರದ ಗೆಳೆಯ ರಾಜೇಶ್‌ ತಮ್ಮ ಮದುವೆ ನಂತರದ ಬೀಗರೌತಣದ ಊಟವನ್ನು ಇದೇ ಮಕ್ಕಳ ಜೊತೆಗೆ ಮಾಡಿಕೊಂಡಿದ್ದರು. ಅದಕ್ಕು ಮೊದಲೇ ನನಗೆ ನೆಲೆ ಪರಿಚಯವಾಗಿತ್ತು. ೨೦೦೦ನೇ ಇಸವಿಯಲ್ಲಿ ೧೫ ಮಕ್ಕಳಿಂದ ಶುರುವಾದ ನೆಲೆ ಇಂದು ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿನ ೮ ಕೇಂದ್ರ ಹೊಂದಿದೆ. ಸಾವಿರಾರು ಮಕ್ಕಳಿಗೆ ಹೊಸದೊಂದು ಬದುಕು ನೀಡಿದೆ.

ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಅಬಲಾಶ್ರಮ ಕೂಡ ಇದೇ ಆರ್‌ಎಸ್‌ಎಸ್‌ನದ್ದು ಎಂದು ಯಾರಾದ್ರು ಬೊಬ್ಬೆ ಹೊಡಿದಾಗ ನನಗೆ ನೆನಪಾಗುತ್ತದೆ. ಹಾಗೆಯೇ ಖಾಕಿ ಚೆಡ್ಡಿಯ ನೆಪದಲ್ಲಿ ನೆನಪಾಗುವ ಮತ್ತೊಂದು ವಿಚಾರವೆಂದರೆ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಮತ್ತು ಅಲ್ಲಿನ ಕೃಷಿ ಪ್ರಯೋಗಗಳು.

ಬೆಂಗಳೂರಿನ ನಚಿಕೇತ ಮನೋವಿಕಾಸ ಕೇಂದ್ರ ಟ್ರಸ್ಟ್‌ನ ಕುರಿತು ಹೇಳದೆ ಇರಲು ಸಾಧ್ಯವೇ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಪಾಲಿಗೆ ಆರ್‌ಎಸ್‌ಎಸ್‌ ಅಂದ್ರೆ ರಾಷ್ಟ್ರೋತ್ಥಾನ ಪರಿಷತ್‌. ಅಲ್ಲಿನ ಅದ್ಭುತವಾದ ಲೈಬ್ರರಿ. ಅಲ್ಲಿನ ರಕ್ತದಾನ ಕೇಂದ್ರ.

ಹಿಂದು-ಮುಸ್ಲಿಂ ಗಲಾಟೆ ಕಿಚ್ಚು ಹೊತ್ತಿಸುವ ಆರ್‌ಎಸ್‌ಎಸ್‌ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಬೇಕು ಅಂದ್ರೆ, ಕಾರ್ಕಳದ್ದೊ, ಬಂಟ್ವಾಳದ್ದೊ, ಹುಬ್ಬಳ್ಳಿಯದ್ದೋ ಸೇವಾ ಭಾರತಿಗೆ ಭೇಟಿ ನೀಡಲೇಬೇಕು!

ಶಿವಳ್ಳಿಯ ಸಾವಯವ ಕೇಂದ್ರದ ಕೆಲಸದ ಬಗ್ಗೆ ತಿಳಿದುಕೊಳ್ಳಬೇಕು. ಬೆಳಗಾವಿಯ ಅಂಧರ ಸೇವಾ ಕೇಂದ್ರವನ್ನು ನೋಡಬೇಕು. ಎಲ್ಲೋ ಬೆಂಕಿ ಹಚ್ಚಿದ್ರು, ಅದೆಲ್ಲೋ ಧರ್ಮದ ಹೆಸ್ರಲ್ಲಿ ಅವಘಡ ನಡೀತು. ಅದ್ಯಾವುದೋ ಮಸೀದಿ ಉರುಳಿ ಬಿತ್ತು. ಅದೆಲ್ಲೋ ಮುಸ್ಲಿಂರಿಗೆ ಏಟು ಬಿತ್ತು. ಕ್ರೈಸ್ತರ ಮೇಲೆ ದಾಳಿಯಾಯ್ತು. ಆಗೆಲ್ಲ ಚೆಡ್ಡಿಗಳನ್ನು ಕೆದುಕುವವರ ಧ್ವನಿ ಏರುತ್ತದೆ.

ಅಯ್ಯೋ ಆರ್‌ಎಸ್‌ಎಸ್‌ ವಿರೋಧಿಗಳ ಬೈಬಲ್ಲನ್ನೇ ಮರೆತು ಬಿಟ್ಟೆ. ಅದೆ ಕಣ್ರಿ ‘ನಾತೂರಾಂ ಗೋಡ್ಸೆ ಗಾಂಧಿಯನ್ನು ಕೊಂದಿದ್ದು!’ ಅದೇ ಅಲ್ವಾ ಬಹುತೇಕರು ಆರ್‌ಎಸ್‌ಎಸ್‌ ವಿರೋಧಿಸಲು ಕಾರಣ. ಇತ್ತೀಚೆಗೆ ತೀರ ಮಗ್ನನಾಗಿ ಗೋಕಾಕರು ಅನುವಾದಿಸಿದ ಗಾಂಧಿ ಆತ್ಮಕತ್ಯೆ ಸತ್ಯಾನ್ವೇಷಣೆ ಓದುತ್ತಿದ್ದೆ. ಸದ್ಯಕ್ಕೆ ಆಫ್ರಿಕದಲ್ಲಿ ಗಾಂಧಿಜೀ ಹೋರಾಟ, ಅಲ್ಲಿ ಅವರಿಗಿದ್ದ ವಿರೋಧಿಗಳು, ಅವರ ಮೇಲಾದ ದಾಳಿಗಳನ್ನು ವಿವರಿಸುವ ಅಧ್ಯಾಯದಲ್ಲಿದ್ದೀನಿ. ಹೋಗ್ಲಿ ಬಿಡಿ ಗೋಡ್ಸೆ ಗಾಂಧಿಯನ್ನು ಕೊಂದಿದ್ದಾರೆ. ಗೋಡ್ಸೆ ಆರ್‌ಎಸ್‌ಎಸ್ಸಿಗರು. ಹಾಗಾಗಿ ಅದಕ್ಕೆ ಸಂಘವೇ ಕಾರಣ ಒಪ್ಪಿಕೊಳ್ಳೋಣ.

ಈಗ ವಿಷ್ಯಕ್ಕೆ ಬರುತ್ತೇನೆ. ನಾನಿಲ್ಲಿ ಕರ್ನಾಟಕದಲ್ಲಿ ಸಂಘದ ಭಾಗವಾಗಿ ಕೆಲಸ ಮಾಡುತ್ತಿರುವ ಒಂದಷ್ಟು ಸಂಸ್ಥೆಗಳನ್ನು ಹೆಸರಿಸಿದೆ. ಬಹುಶಃ ಇಂಥ ೧೦೦ಕ್ಕೂ ಅಧಿಕ ಸಂಸ್ಥೆಗಳು ನಮ್ಮ ರಾಜ್ಯದಲ್ಲಿವೆ. ದೇಶದಲ್ಲಿ ಅದೆಷ್ಟು ಸಾವಿರ ಘಟಕಗಳಿವೆಯೋ ಗೊತ್ತಿಲ್ಲ.

ನಿಜ ಹಿಂದುತ್ವದಿಂದ ಆರ್‌ಎಸ್‌ಎಸ್‌ನ್ನು ಬೇರೆಯಿಡಲು ಸಾಧ್ಯವಿಲ್ಲ. ನೆನಪಿಡಿ ಹಿಂದುತ್ವ ಎಂಬುದು ಆರ್‌ಎಸ್‌ಎಸ್‌ನ ಒಂದು ಭಾಗವಷ್ಟೆ. ಹೇಗೆ ಸೇವೆ ಎಂಬುದು ಸಂಘದ ಒಂದು ಮಜಲೋ, ಹಾಗೆಯೇ ಸಂಪನ್ಮೂಲ, ಜ್ಞಾನ, ಹಿಂದುತ್ವ ಎಲ್ಲವೂ ಸಂಘದ ಬೇರೆ ಬೇರೆ ಮಜಲುಗಳು.

ಎಲ್ಲೇ ಕೋಮು ಗಲಭೆಯಾದ್ರು ಅದಕ್ಕೆ ಸಂಘವೇ ಕಾರಣ ಎಂಬುದು ಶುದ್ಧ ಹುಚ್ಚುತನ. ನೀವು ಪತ್ರಿಕೆಯಲ್ಲಿ ಆರ್‌ಎಸ್‌ಎಸ್‌ ಪ್ರೇರಿತ ವ್ಯಕ್ತಿಗಳ ಬರಹವನ್ನು ಓದಿ, ಸಂಘದವರು ಹೀಗೆ ಎಂದು ನಿರ್ಧರಿಸಿದರೆ ಅದು ನಿಮ್ಮ ತಪ್ಪು. ಯಾಕಂದ್ರೆ ನಿಜವಾದ ಸಂಘದ ಕಾರ್ಯಕರ್ತ ಯಾವ ಟೀವಿಯಲ್ಲೂ ಬರಲಾರ. ಪತ್ರಿಕೆಯಲ್ಲೂ ಕಾಣಿಸಿಕೊಳ್ಳುವುದಿಲ್ಲ. ತನ್ನ ಪಾಡಿಗೆ ತಾನು ಸೇವೆ ಮಾಡುತ್ತಾನೆ ಮತ್ತು ಸಂಘದ ಸೇವಾ ವಿಭಾಗದಲ್ಲಿ ಎಲ್ಲ ಧರ್ಮದವರು ದುಡಿಯುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಢೋಂಗಿ ಹಿಂದುತ್ವ ಸಂಘದ ಧ್ಯೇಯವಲ್ಲ. ಯಾವತ್ತು ಅದನ್ನು ಸಂಘ ಪ್ರತಿಪಾದಿಸಿಲ್ಲ. ಭಾರತದ ಬದುಕು ಹಿಂದುತ್ವ ಎಂದಿದ್ದು. ಯೋಗ, ಸಾವಯವ ಎಲ್ಲ ನಮ್ಮ ಮೂಲಭೂತ ಅಂಶಗಳು. ಹಿಂದಿನಿಂದ ಬಂದಿದ್ದು ಎಂಬುದನ್ನು ಆರ್‌ಎಸ್‌ಎಸ್‌ ಸಾರಿದ್ದು.

ನಮ್ಮಲ್ಲಿ ಸಾಕಷ್ಟು ಢೋಂಗಿ ಹಿಂದುತ್ವವಾದಿಗಳಿದ್ದಾರೆ. ಅವರೆಲ್ಲ ಎಲೆಕ್ಷನ್‌ಗಾಗಿ ಹಿಂದುತ್ವ ಎನ್‌ಕ್ಯಾಶ್‌ ಮಾಡಿಕೊಳ್ಳುವವರು. ಸೀಟು ಸಿಗುವವರೆಗೆ, ಗೆಲ್ಲುವರೆಗೆ ಹಿಂದುತ್ವ ಬೇಕು ಅವರಿಗೆ. ವೋಟು ಭದ್ರ ಪಡಿಸಿಕೊಳ್ಳಲು ಚುನಾವಣೆ ಹತ್ತಿರ ಬಂದಾಗ ಹಿಂದು ಜಾಗೃತಿ ಸಮಾವೇಶ ಮಾಡಬೇಕು. ಅಲ್ಲಲ್ಲಿ ಕೋಮು ಗಲಭೆ ಹುಟ್ಟುಹಾಕಿ ಮತಗಳನ್ನು ಬಾಚಿಕೊಳ್ಳಬೇಕು. ಇನ್ನೊಂದು ವರ್ಗಕ್ಕೆ ಸಂಘದ ಹೆಸ್ರಲ್ಲಿ ಪ್ರಚಾರ ಬೇಕು. ಬೇರೆ ಧರ್ಮದ ಪರ ಎಂಬುದೆಲ್ಲವನ್ನೂ ವಿರೋಧಿಸಬೇಕು. ಹಾಗಾಗಿಯೇ ಜಲ್ಲಿಕಟ್ಟಿನಲ್ಲಿ ಸಾವಿರಾರು ಮಂದಿಗೆ ಗಾಯವಾಗಿದ್ದು, ಹಲವರು ಸತ್ತಿದ್ದನ್ನು ಮರೆತು, ಜಲ್ಲಿಕಟ್ಟನ್ನು ಸುಪ್ರೀಂಕೋರ್ಟ್‌ ತಡೆಯುತ್ತಿರುವುದೇಕೆ ಎಂಬ ಕನಿಷ್ಟ ವಿವೇಚನೆಯೂ ಇಲ್ಲದೆ ಬೊಬ್ಬೆ ಹೊಡೆಯುತ್ತಾರೆ! ಅಲ್ಲಿಯೆ ಅವರ ಅವಿವೇಕಿತನ ಬಯಲಾಗಿ ಬಿಡುತ್ತದೆ.

ಆದರೆ ಅವುಗಳಿಂದ ಆಚೆ ನಿಂತ ಸಂಘ, ಸಂಘದ ಕಾರ್ಯಕರ್ತರು ವರ್ಷದ ೩೬೫ ದಿನವೂ ಒಂದಿಲ್ಲೊಂದು ಸೇವಾ ಕಾರ್ಯ ಮಾಡುತ್ತ ಇರುತ್ತಾರೆ ಮತ್ತು ನಿಜವಾದ ಸ್ವಯಂಸೇವಕನೊಬ್ಬ ಅವಿವೇಕಿಯಾಗಿ ಬೊಬ್ಬೆ ಹೊಡೆಯಲಾರ. ಇವಿಷ್ಟಕ್ಕು ಜಾಸ್ತಿಯೇನೂ ಹೇಳುವುದಕ್ಕಿಲ್ಲ ಆರ್‌ಎಸ್‌ಎಸ್‌ ಕುರಿತು. ಮಿಕ್ಕಿದ್ದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.

 

 

 

10176248_1016426135046467_8592841298822724174_nನಮ್ಮಲ್ಲಿ ಒಂದು ಮಾತಿದೆ. ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದ್ರು, ಅದು ತನ್ನ ಮೂಲ ಬುದ್ಧಿಯಾದ ಉಚ್ಛೆ ಹೊಯ್ಯುವುದನ್ನು ಬಿಡುವುದಿಲ್ಲವಂತೆ! ಹಾಗಾಗಿ ಆಗಾಗ ಕೋಲಾಹಲ ಹುಟ್ಟುಹಾಕಿ, ಚಾಲ್ತಿಯಲ್ಲಿರುವವರನ್ನು ಕಾಲೆಳೆದು, ವಿಮರ್ಶೆ ಮಾಡಿ ಪ್ರಚಾರ ತೆಗೆದುಕೊಳ್ಳುವವರನ್ನು ನಿರ್ಲಕ್ಷ್ಯ ಮಾಡುವುದೇ ಒಳಿತು ಎಂಬುದು ಯಾವತ್ತೋ ಅರ್ಥವಾಗಿಬಿಟ್ಟಿದೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ಕುರಿತ ಇವತ್ತಿನ ಅಷ್ಟಾವಧಾನದಲ್ಲಿಯೂ ಆರ್.ಗಣೇಶ್ ಅದೇ ಮಾತು ಹೇಳಿದ್ರು. ಎಸ್‌ಎಲ್‌ಬಿ ಕಾದಂಬರಿ ವಿಷ್ಯದಲ್ಲಿ ಒಂದಷ್ಟು ವಿಮರ್ಶಕರು ಎಷ್ಟೋ ವರ್ಷದ ಹಿಂದೆ ಹಾಕಿದ ಸವಾಲನ್ನು ಇವತ್ತಿನವರೆಗೂ ಸ್ವೀಕರಿಸಿಲ್ಲವಂತೆ!
ವಿಷ್ಯ ಅದಲ್ಲ. ಅವಧಾನವೆಂಬುದೇ ಒಂಥರ ಜಟಿಲವಾದ, ಸಂಕೀರ್ಣವಾದ ಕಲೆ. ನನಗಂತು ಆರ್.ಗಣೇಶ್ ಅಂದ್ರೆ ಇವತ್ತಿಗೂ ವಿಸ್ಮಯವಾಗಿಯೇ ಕಾಣಿಸುತ್ತಾರೆ. ಅಷ್ಟೆಲ್ಲ ವಿಷಯವನ್ನು ಏಕಕಾಲದಲ್ಲಿ ಮನಸ್ಸಿನಲ್ಲಿ ಇಟ್ಟುಕೊಳ್ಳುವ ಅವರನ್ನು ಮನುಷ್ಯರು ಅಲ್ಲವೇ ಅಲ್ಲ ಅಂತ ಯಾವತ್ತೋ ನಿರ್ಧರಿಸಿಬಿಟ್ಟಿದ್ದೇನೆ(ಅದೊಂಥರ ವಿಶೇಷವಾದ ದೇವಸೃಷ್ಟಿ ಅಂದುಕೊಳ್ಳಿ). ಅಂಥವರ ಅವಧಾನಕ್ಕೆ ಒಂದು ಕಾದಂಬರಿ ವಸ್ತುವಾಗುತ್ತದೆ ಎಂದರೆ? ಅದು ಕಾದಂಬರಿಕಾರನ ಶ್ರೇಷ್ಠತೆಯನ್ನು ತೋರಿಸುತ್ತದೆ.
ಅವಧಾನದಲ್ಲಿ ಸವಾಲಿಗೆ ಬೇಕಾದ ಕನಿಷ್ಟ ಪ್ರಶ್ನೆಗಳನ್ನು ಹುಟ್ಟುಹಾಕುವ ಅರ್ಹತೆಯಾದರೂ ಕಾದಂಬರಿಗೆ ಇರಬೇಕು. ಯಾವುದೋ ಛಂದಸ್ಸಿನಲ್ಲಿ ಒಂದು ಪದ್ಯರಚನೆ ಮಾಡಲು ಬೇಕಾದ ಸರಕಾದರೂ ಕಾದಂಬರಿಯಲ್ಲಿ ಸಿಗಬೇಕು. ಕಾವ್ಯವಾಚನಕ್ಕೆ ಬೇಕಾದ ರಾಗ,ತಾಳಗಳನ್ನು ಹುಟ್ಟುಹಾಕುವ ಸನ್ನಿವೇಶಗಳು ಸಿಗಬೇಕು.
ನಾವೆಲ್ಲ ಕಾದಂಬರಿ ಓದುವುದು ಓರ್ವ ಸಾಮಾನ್ಯ ಓದುಗರಾಗಿ. ಅದ್ರಲ್ಲಿ ಕಂದಪದ್ಯ ಯಾವುದು? ಛಂದಸ್ಸು ಏನಿದೆ? ಕಾವ್ಯ ಸವಾಲಿಗೆ ಯಾವ ರಾಗಗಳು ಸೂಕ್ತವಾಗುತ್ತವೆ ಇವ್ಯಾವುದು ನಮಗೆ ಸಂಗತಿಗಳಾಗುವುದಿಲ್ಲ.
ನಂದು ಒಂಥರ ನಿಯಮಿತ ಓದು. ಒಂದಷ್ಟು ಜನರನ್ನು ಮಾತ್ರ ಓದುತ್ತೇನೆ ಮತ್ತು ಒಂದಷ್ಟೇ ಜನರನ್ನೇ ಓದುತ್ತೇನೆ. ನಂಗೆ ಒಬ್ಬ ಓಶೋನ ೬೦೦ ಕೃತಿಗಳಿವೆ. ಶಿವರಾಮಕಾರಂತರ ವಿಜ್ಞಾನ ಪ್ರಪಂಚ ಸರಣಿ ಮುಗಿಸುವಾಗ ಅರ್ಧ ಆಯುಷ್ಯ ಕಳೆದಿರುತ್ತದೆ! ಎಸ್.ಎಲ್.ಭೈರಪ್ಪನವರ ಅಷ್ಟು ಕಾದಂಬರಿಗಳನ್ನು ಇನ್ನು ಓದಿ ಮುಗಿಸಿಲ್ಲ. ಅದಕ್ಕಿಂತ ಹೆಚ್ಚಾಗಿ ಪರ್ವವನ್ನು ಅರ್ಧಕ್ಕೆ ನಿಲ್ಲಿಸಿದ್ದೇನೆ. ಮೂಲಭಾರತವನ್ನು ಓದಿದ ನಂತರವೇ ಪರ್ವ ಓದುವುದು ಅಂತ ನಿರ್ಧಾರ ಮಾಡಿದ್ದೇನೆ. ನೀವು ನಗಬಹುದು. ಆದರೆ ನನಗೆ ಭೈರಪ್ಪನವರ ಅತ್ಯಂತ ಸಪ್ಪೆ ಕಾದಂಬರಿ ಅನ್ನಿಸಿದ್ದು ಪರ್ವ. ಅದಕ್ಕೆ ಕಾರಣ ನಾನು ಪೂರ್ತಿ ಮಹಾಭಾರತವನ್ನು ಓದದೆ ಇರುವುದು. ಹೀಗಿರುವಾಗ ಸದ್ಯಕ್ಕಂತು ಸಿಕ್ಕಿದ್ದನ್ನೆಲ್ಲ ಓದುತ್ತೇನೆ ಎಂಬ ಭ್ರಮೆಯಲ್ಲಂತೂ ನಾನಿಲ್ಲ.
ಮೊದಲು ಎಸ್‌ಎಲ್‌ಬಿಯನ್ನು ಓದಿದ್ದು ಎರಡನೇ ವರ್ಷದ ಡಿಗ್ರಿಯಲ್ಲಿರುವಾಗ. ನನ್ನ ರೂಮೇಟ್ ವಿಶ್ವಾಸ ಬಹುಶಃ ಉಡುಪಿ ಸೆಂಟ್ರಲ್ ಲೈಬ್ರರಿಯಿಂದ ಆ ಪುಸ್ತಕ ತಂದಿದ್ದ ಅನ್ನಿಸುತ್ತೆ. ಅಲ್ಲಿಯವರೆಗೆ ನನಗೆ ಎಸ್.ಎಲ್.ಭೈರಪ್ಪ ಅಂತ ಓರ್ವ ಲೇಖಕರು ಇದ್ದಾರೆ ಅಂತಲೇ ಗೊತ್ತಿರಲಿಲ್ಲ. ಅದು ಅಂಚು ಕಾದಂಬರಿ. ಅದರಲ್ಲಿನ ಪಾತ್ರಗಳು ಈಗ ದೇವರಾಣೆ ನೆನಪಿಲ್ಲ! ಯಾಕಂದ್ರೆ ೧೦ ವರ್ಷಗಳ ಕೆಳಗೆ ಓದಿದ ಕೃತಿ ಅದು. ಅದರ ನಂತ್ರ ನಂಗೆ ಸಿಕ್ಕಿದ್ದು ಭಿತ್ತಿ. ಅವರ ಆತ್ಮಕಥನ ಓದುವಾಗ ನಾನು ಅಕ್ಷರಶಃ ಭೈರಪ್ಪನವರ ಅಭಿಮಾನಿಯಾಗಿದ್ದೆ.
ಆಮೇಲೆ ಅನ್ವೇಷಣೆ, ಗ್ರಹಣ, ಗೃಹಭಂಗ, ವಂಶವೃಕ್ಷ, ಮಂದ್ರ, ಸಾಕ್ಷಿ, ಸಾರ್ಥ, ಧಮಶ್ರಿ, ತಬ್ಬಲಿ ನೀನಾದೆ ಮಗನೇ, ನೆಲೆ, ಜಲಪಾತ, ಆವರಣ, ಕವಲು, ನಾನೇಕೆ ಬರೆಯುತ್ತೇನೆ ಹಾಗೂ ಸತ್ಯ ಮತ್ತು ಸೌಂದರ್ಯ ಇವುಗಳನ್ನೆಲ್ಲ ಓದಿದೆ. ಇನ್ನು ಒಂದಷ್ಟು ಓದಲು ಬಾಕಿ ಇದೆ.
ನಂಗೆ ಇದುವರೆಗೆ ಅತಿಯಾಗಿ ಕಾಡಿದ್ದು ಮಂದ್ರ. ಅದನ್ನು ಓದುವಾಗ ನನಗೂ ಅತಿಯಾದ ಸೆಕ್ಸ್ ಅಂತ ಅನ್ನಿಸಿದರೂ, ತೀರ ಕಲಾವಿದರ ಜಗತ್ತಿನಲ್ಲಿ ಅದು ಸಹಜ ಅಂತ ಎಷ್ಟೋ ಕಡೆ ಓದಿದ್ದೆ. ಮಂದ್ರ ಓದುವ ಮೊದಲು ಪ್ರೋತಿಮಾ ಬೇಡಿಯ ಜೀವನ ಚರಿತ್ರೆ ಓದಿದ್ದು ಅದಕ್ಕೆ ಕಾರಣವಿರಬಹುದು. ಸಂಗೀತದ ಕನಿಷ್ಟ ಜ್ಞಾನವು ನನಗಿಲ್ಲ. ಹೀಗಾಗಿ ಮಂದ್ರದಲ್ಲಿನ ರಾಗಗಳ ಒಳನೋಟ ನಂಗೆ ಅರ್ಥವಾಗಿರಲಿಲ್ಲ. ಸಾಮಾಜಿಕವಾಗಿ ನೋಡಿದಾಗ ಅಲ್ಲಿನ ಪಾತ್ರಗಳು ಕಾಡಿದ್ದವು. ಅವಧಾನದಲ್ಲಿ ಗಣೇಶರು ಸಂಗೀತದ ರಾಗಗಳಿಗೆ ಭೈರಪ್ಪನವರ ಸಾಲುಗಳನ್ನು ತಾಳೆ ಹಾಕುವಾಗ ಸಂಗೀತದ ಸ್ವಲ್ಪವಾದರು ಜ್ಞಾನ ಪಡೆದು ಮತ್ತೆ ಮಂದ್ರ ಓದಬೇಕು ಅನ್ನಿಸ್ತಿದೆ.
ಇನ್ನೊಂದು ಕಾದಂಬರಿ ಕವಲು. ಅದನ್ನು ಬರೆದ ನಂತರ ಭೈರಪ್ಪನವರೊಂದಿಗೆ ಆರ್‌ವಿ ಟೀಚರ‍್ಸ್ ಕಾಲೇಜಿನಲ್ಲಿ ಒಂದು ಸಂವಾದವಿತ್ತು. ಆವತ್ತಲ್ಲಿ ಭೈರಪ್ಪ ಕಾದಂಬರಿ ವಾಸ್ತವಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಒಂದು ವರದಕ್ಷಿಣೆ ಕಾನೂನು ಹೇಗೆ ಸಮಾಜ ದಿಕ್ಕು ತಪ್ಪಿಸಬಹುದು ಎಂಬುದಕ್ಕೆ ಸಾಕ್ಷಿ ಸಮೇತವಾಗಿ ಮಾತನಾಡಿದರು. ಪಾಶ್ಚತ್ಯ ಜಗತ್ತಿನ ಸಾಂಸಾರಿಕ ತಲ್ಲಣಗಳನ್ನು ವಿವರಿಸಿದರು.
ಭೈರಪ್ಪ ಬಲಪಂಥೀಯರು. ಆರ್‌ಎಸ್‌ಎಸ್‌ನವರು ಅಂತ ಅದೆಷ್ಟೋ ವಿಮರ್ಶಕರು ಬೊಬ್ಬೆ ಹೊಡೆಯುತ್ತಾರೆ. ನಿಜ ಗಣೇಶರು ಹೇಳಿದಂತೆ ನನಗೂ ಕೂಡ ಇವತ್ತಿನವರೆಗೆ ಭೈರಪ್ಪನರಲ್ಲಿ ಯಾವ ಸಿದ್ಧಾಂತವೂ ಕಾಣಿಸಲಿಲ್ಲ. ಯಾಕಂದ್ರೆ ನನ್ನ ಓದನ್ನು ಪಾತ್ರಗಳು ಆವರಿಸಿಕೊಂಡು ಇರುತ್ತವೆ ಹೊರತು ಸಿದ್ಧಾಂತವಲ್ಲ.
ಬೇಸಿಕಲಿ ಈ ವಿಮರ್ಶಕರಿಗೆ ಭೈರಪ್ಪನವರ ಕಾದಂಬರಿಯ ಸರಕು ಬೇಡ. ಅವ್ರ ಹೆಸರಿನಿಂದ ತಮಗೆ ಬರಬಹುದಾದ ಕೀರ್ತಿ ಬೇಕು. ಭೈರಪ್ಪನವರ ವಿರುದ್ಧ ಮಾತನಾಡಿ ಗಿಟ್ಟಿಸಿಕೊಳ್ಳಬಹುದಾದ ಅಕಾಡೆಮಿ ಪ್ರಶಸ್ತಿಗಳು ಬೇಕು. ನಮ್ಮಲ್ಲಿ ಒಂದಷ್ಟು ಪ್ರಶಸ್ತಿಗಳಿವೆ. ಅದನ್ನೇ ನಂಬಿಕೊಂಡು ಜೀವನ ನಡೆಸುವ ಬ್ರೋಕರ್‌ಗಳೂ ಇದ್ದಾರೆ! ನೀವೊಂದು ೨೦ ಸಾವಿರ ನಗದು ಕೊಟ್ಟರೆ ನಿಮ್ಮ ಹೆಸರಿನಲ್ಲಿ ಪುಸ್ತಕ ಪ್ರಕಾಶಿಸಿ, ಆ ಪುಸ್ತಕಕ್ಕೆ ಒಂದಷ್ಟು ಅವಾರ್ಡ್‌ಗಳನ್ನು ಕೊಡಿಸುತ್ತಾರೆ. ಎಲ್ಲ ಮೂಲದಿಂದ ಬರುವ ಹಣ ಅವರಿಗೆ. ಹೆಸರು ಮಾತ್ರ ನಿಮಗೆ! ಇದನ್ನೇ ಜೀವನವನ್ನಾಗಿಸಿಕೊಂಡ ಪ್ರಕಾಶಕರು ಇದ್ದಾರೆ ಎಂದರೆ ನೀವು ನಂಬಬೇಕು! ಹಾಗಾಗಿಯೇ ಭೈರಪ್ಪನವರ ಕೃತಿಗಳಿಗೆ ವಿರುದ್ಧವಾಗಿ ಹತ್ತಿಪ್ಪತ್ತು ಕೃತಿಗಳು ಬರುವುದು ಅನ್ನಿ. ಇವತ್ತು ನೋಡ್ಲಿಕ್ಕೆ ಬೇಕು ಅಂದ್ರೆ ಅವ್ಯಾವ ಕೃತಿಯೂ ಸಿಗಲಿಕ್ಕಿಲ್ಲ. ಲೈಬ್ರರಿ ಸ್ಕೀಂನಲ್ಲಿ ಎಲ್ಲೋ ಕೊಳೆಯುತ್ತ ಇರುತ್ತದೆ!
ಇವತ್ತಿನ ಗಣೇಶರ ಅವಧಾನ ನಮ್ಮ ಓದಿನ ಮಟ್ಟ ಮೀರಿದ್ದು ಎಂಬುದು ಒಂದು ಕಡೆ. ಆದರೆ ಭೈರಪ್ಪನವರನ್ನು ಹೀಗೂ ಒಂದು ಆಯಾಮದಲ್ಲಿ ನೋಡಬಹುದೇ ಎಂಬುದು ಇನ್ನೊಂದು ಕಡೆ. ಯಾಕಂದ್ರೆ ನಾನು ಡಿಗ್ರಿಯಲ್ಲಿದ್ದಾಗ ನನ್ನ ರೂಮೆಟ್ಸ್ ಇಬ್ಬರು ಎಸ್‌ಎಲ್‌ಬಿ ಅಪಾರ ಅಭಿಮಾನಿಗಳು. ಅವರಿಗೆ ಆವತ್ತು ಈ ಸಾಹಿತ್ಯದ ಜಗತ್ತು ಗೊತ್ತಿರಲಿಲ್ಲ. ಈಗಲೂ ಅಷ್ಟೆ. ಅವರು ದುಡುಯುತ್ತಿರುವ ಕ್ಷೇತ್ರವೇ ಬೇರೆ. ಭೈರಪ್ಪನವರ ವಿಚಾರದಲ್ಲಿ ಇಂಥ ಓದುಗರು ಅದೆಷ್ಟೋ ಸಿಗುತ್ತಾರೆ.
ನಾನಿಲ್ಲಿ ಹೇಳಹೊರಟಿರುವುದು ಇಷ್ಟನ್ನೇ. ಅವಧಾನ ಮಾಡ್ಲಿಕ್ಕು ಭೈರಪ್ಪನವರ ಕಾದಂಬರಿ ಶ್ರೇಷ್ಠವಾದುದು. ಇದ್ಯಾವ ಸಾಹಿತ್ಯದ ಲವಲೇಷವೂ ಇಲ್ಲದೇ ಕೇವಲ ಬದುಕಾಗಿ ನೋಡುವುದಿದ್ದರು ತರಕಾರಿ ಮಾರುವ ಸಾಮಾನ್ಯನಿಗೂ ಭೈರಪ್ಪನವರ ಕಾದಂಬರಿಯ ಅದೆಷ್ಟೋ ಪಾತ್ರಗಳು ಕಾಡುತ್ತವೆ ಎಂದಾದರೆ ಓರ್ವ ಬರಹಗಾರನಿಗೆ ಅದಕ್ಕಿಂತ ಶ್ರೇಷ್ಠವಾದ ಬಿರುದು ಇನ್ನು ಯಾವುದಿದೆ? ಬಹುಶಃ ಭಾರತದಲ್ಲಿ ಓರ್ವ ಕಾದಂಬರಿಕಾರನ ಕಾದಂಬರಿಗಳು ಅವಧಾನಕ್ಕೆ ಸರಕಾಗಿದ್ದು ಇದೇ ಮೊದಲು ಅನ್ನಿಸುತ್ತದೆ(ಬೇರೆ ಮಾಹಿತಿ ಇದ್ರೆ ತಿಳಿಸಿ). ಆರ್.ಗಣೇಶರು ಕಾಳಿದಾಸನಿಗೂ, ಎಸ್‌ಎಲ್‌ಬಿಯವರ ಚಿಂತನೆಗೂ ಇರುವ ಸಾಮ್ಯತೆಯನ್ನು ವಿವರಿಸುತ್ತಿದ್ದರು. ಕಾಳಿದಾಸ ಅತ್ಯಂತ ಶ್ರೇಷ್ಠ ಅಂತ ಎಲ್ಲ ಸಂಸ್ಕೃತ ವಿದ್ವಾಂಸರು ಹೇಳುತ್ತಾರೆ. ನಾನು ಕಾಳಿದಾಸನ ಯಾವ ಕೃತಿಯನ್ನು ಈವರೆಗೆ ಓದಿಲ್ಲ. ಅಷ್ಟರ ಮಟ್ಟಿಗಿನ ಸಂಸ್ಕೃತ ನನಗೆ ಗೊತ್ತೂ ಇಲ್ಲ. ಅಂಥ ಕವಿಗೆ ಎಸ್‌ಎಲ್‌ಬಿ ಹೋಲಿಕೆಯಾಗುತ್ತಾರೆ ಅಂದರೆ…ಹೇಳಿಲಿಕ್ಕೆ ಇನ್ನೇನು ಬಾಕಿ ಇದೆ ಅಲ್ವಾ? ಇಂಥ ಅವಧಾನದ ಪರಿಕಲ್ಪನೆ ಯಾರು ಕೊಟ್ಟರೋ ಗೊತ್ತಿಲ್ಲ. ಖಂಡಿತ ಅವರಿಗೊಂದು ನಮಸ್ಕಾರ.

ಲೈವ್‌ ಮರ್ಡರ್‌ ಕಾರ್ಯಕ್ರಮ ವಿರೋಧಿಸಿ ಶ್ರೀವತ್ಸ ಜೋಷಿಯವರು ಫೇಸ್‌ಬುಕ್‌ ನಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ಅದಕ್ಕೆ ವರದಿಗಾರನೊಬ್ಬ ಪ್ರತಿಕ್ರಿಯಿಸಿದ್ದ. ‘ಒಂದು ಒಳ್ಳೆ ಕಾರ್ಯಕ್ರಮ ಹಾಕಿದ್ರೆ ಜನ ನೋಡಲ್ಲ, ನೀವು ಸಾಮಾಜಿಕ ಜಾಲತಾಣದವರು ಹಾಗೆ, ಹೀಗೆ… ಜನಕ್ಕಾಗಿ ಏನು ಮಾಡ್ತೀರಿ’ ಇತ್ಯಾದಿ. ಬಹಳ ಮಜ ಅಂದ್ರೆ ಟಿವಿ ಮಾಧ್ಯಮದಲ್ಲಿ ದುಡಿಯುವ, ಅದಕ್ಕಿಂತ ಮುಖ್ಯವಾಗಿ ದೊಡ್ಡ ಹುದ್ದೆಯಲ್ಲಿ ಕುಳಿತು ಆಳುವ ಅನೇಕರಿಗೆ ಒಳ್ಳೆ ಕಾರ್ಯಕ್ರಮಕ್ಕೆ ಟಿಆರ್‌ಪಿ ಬರಲ್ಲ ಅನ್ನೊ ತಪ್ಪು ಕಲ್ಪನೆಯಿದೆ.
ಸರಿ ಹಾಗಿದ್ರೆ ಕೆಟ್ಟದ್ದಕ್ಕೆಲ್ಲ ಟಿಆರ್‌ಪಿ ಬರುತ್ತ ಅನ್ನೋದು ನನ್ನ ಪ್ರಶ್ನೆ. ಹಾಗೊಂದು ವೇಳೆ ನಮ್ಮ ಸುದ್ದಿವಾಹಿನಿಯಲ್ಲಿ ಕುಳಿತವರ ಭ್ರಮೆಯಂತೆ ಕೆಟ್ಟದ್ದಕ್ಕೆ, ಕ್ರೈಂಗೆ, ಅತಿರಂಜನೀಯಕ್ಕೆ ಟಿಆರ್‌ಪಿ ಬರುವುದೇ ಆಗಿದ್ದರೆ, ಕನ್ನಡದಲ್ಲಿ ಎಲ್ಲ ವಾಹಿನಿಗಳು ನಂಬರ್‌ ಒನ್‌ ವಾಹಿನಿಗಳಾಗಿರಬೇಕಿತ್ತು! ಮಜ ಗೊತ್ತ, ಕನ್ನಡದ ಒಂದು ಸುದ್ದಿವಾಹಿನಿಯ ಒಟ್ಟು ಜಿಆರ್ಪಿ ಒಂದು ಧಾರಾವಾಹಿಯ ವಾರದ ಟಿವಿಆರ್‌ ಆಗಿರುತ್ತೆ. ಒಂದು ರಿಯಾಲಿಟಿ ಶೋನ ತಾಜಾ ಎಪಿಸೋಡ್‌ಗೆ ಬರುವ ಟಿವಿಆರ್‌, ಒಂದು ವಾರದ ಬಿಟಿವಿಯದ್ದೊ, ಪಬ್ಲಿಕ್‌ ಟಿವಿಯದ್ದೊ ಒಟ್ಟಾರೆ ಜಿಆರ್‌ಪಿ. ನಿಮಗೆ ಹೀಗೆ ಹೇಳಿದ್ರೆ ಅರ್ಥವಾಗಲ್ಲ ಅನ್ನೋದು ನಂಗೆ ಗೊತ್ತು. ಆದ್ರೆ ನಾನಿಲ್ಲಿ ಇದನ್ನು ಉಲ್ಲೇಖ ಮಾಡಿದ್ದು ಇಷ್ಟಕ್ಕೆ, ಖಂಡಿತ ಒಂದು ಧಾರವಾಹಿ, ಸುದ್ದಿ ವಾಹಿನಿಯ ಕ್ರೈಂನಷ್ಟು ಅತಿರಂಜನೀಯವಾಗಿರಲಾರದು. ಕೆಟ್ಟದ್ದಕ್ಕೆ ಟಿಆರ್‌ಪಿ ಬರುತ್ತೆ ಅಂತಾಗಿದ್ರೆ ಇವತ್ತು ಕನ್ನಡದ ಎಲ್ಲ ಸುದ್ದಿವಾಹಿನಿಗಳು ೧೫೦-೨೦೦ ಜಿಆರ್‌ಪಿಯಲ್ಲಿ ಇರಬೇಕಿತ್ತು.
ಟಿವಿ೯, ೧೨೦-೧೬೦ ಜಿಆರ್‌ಪಿಯಲ್ಲಿ ಪ್ರತಿ ವಾರ ಲೀಡ್‌ನಲ್ಲಿರುತ್ತೆ. ನಂತರದ ಸ್ಥಾನದಲ್ಲಿ ಅಸ್ಥಿರ. ಕನ್ನಡದಲ್ಲಿ ನಂಬರ್‌.೨ ಎನಿಸಿಕೊಂಡ ವಾಹಿನಿಯ ಗರಿಷ್ಠ ಜಿಆರ್‌ಪಿ ೬೫ರ ಗಡಿ ದಾಟುವುದಿಲ್ಲ. ಮಿಕ್ಕವೆಲ್ಲ ೩೦, ೧೯, ೧೨ ಈ ಥರ ಜಿಆರ್‌ಪಿ. ಹಾಗಿದ್ದ ಮೇಲೆ ಒಳ್ಳೆದು ಕೊಟ್ರೆ ಜನ ನೋಡಲ್ಲ, ಕೆಟ್ಟದ್ದಕ್ಕೆ ಟಿಆರ್‌ಪಿ ಬರುತ್ತೆ ಅಂತ ನೀವು ಯಾವ ಆಧಾರದ ಮೇಲೆ ಹೇಳುವಿರಿ?
ಒಂದು ಕಾಲದಲ್ಲಿ ಟಿವಿ೯ನ ಕ್ರೈಂ ಎಪಿಸೋಡ್‌ಗೆ ಭರ್ಜರಿ ಟಿಆರ್‌ಪಿ ಬರುತ್ತಿತ್ತು. ಆಗ ಕನ್ನಡಕ್ಕೆ ನ್ಯೂಸ್‌ ಚಾನೆಲ್‌ ಎಂಬ ಪರಿಕಲ್ಪನೆಯೆ ಹೊಸದು. ಟಿವಿ೯ ಕ್ರೈಂನಿಂದ ಯಶಸ್ವಿಯಾಯಿತು ಎಂದು ಮುಂದೆ ಬಂದ ಎಲ್ಲ ಕನ್ನಡದ ಸುದ್ದಿ ವಾಹಿನಿಗಳು ಕ್ರೈಂನ್ನು ಗೆಲುವಿನ ಮಂತ್ರ ಎಂದು ಭಾವಿಸಿಕೊಂಡರು. ಆದ್ರೆ ಟಿವಿ೯ ಸಖತ್‌ ಚಾಣಾಕ್ಷ. ಅದು ನ್ಯೂಸ್‌ ಆಧಾರಿತ ಕಾರ್ಯಕ್ರಮಗಳಿಂದಲೇ ಗೆಲುವಿನ ನಗೆ ಬೀರುತ್ತ ಬಂದಿತು. ಕನ್ನಡದ ಮಟ್ಟಿಗೆ ತುಸು ವೃತ್ತಿಪರವಾಗಿ ಕಾಣಿಸುವ ವಾಹಿನಿಯದು. ಯಾಕಂದ್ರೆ ಅದ್ರಲ್ಲಿ ಹೆಚ್ಚಿನದ್ದು ಆಜ್‌ತಕ್‌ ವಾಹಿನಿಯ ಕಾಪಿ-ಪೇಸ್ಟ್‌!
ನೀವು ಕೆಟ್ಟದ್ದನ್ನು, ಕ್ರೈಂನ್ನು ಬಿತ್ತರಿಸಿ ೧೫೦ ಜಿಆರ್‌ಪಿ ಗಳಿಸಿದ್ದರೆ, ನಿಮ್ಮ ವಾದ ಸರಿ ಅನ್ನಬಹುದಿತ್ತು. ಆದರೆ ಕನ್ನಡದ ಉಳಿದೆಲ್ಲ ವಾಹಿನಿಗಳ ಒಟ್ಟು ಜಿಆರ್‌ಪಿ ನಂಬರ್‌ ಒನ್‌ ವಾಹಿನಿ ಜಿಆರ್‌ಪಿಗೆ ಸಮನಾಗಿ ನಿಲ್ಲುವುದಿಲ್ಲ.
ನಂಬರ್‌ ಒನ್‌ ಧಾರವಾಹಿಯ ಸರಾಸರಿ ಟಿವಿಆರ್‌ ೭-೮. ಅಂದ್ರೆ ಒಟ್ಟು ೪೨-೪೮ ಜಿಆರ್‌ಪಿ ಒಂದು ಧಾರವಾಹಿಯಿಂದ ಬರುತ್ತೆ. ಕನ್ನಡದ ೩,೪,೫ನೇ ಸ್ಥಾನದಲ್ಲಿರುವ ನ್ಯೂಸ್‌ ಚಾನೆಲ್‌ಗಳು ವಾರವಿಡಿ, ೨೪ ಗಂಟೆಗಳ ಕಾಲ ನಾನ್‌ಸೆನ್ಸ್‌ಗಳನ್ನು ಓಡಿಸಿದರೂ,ಅವುಗಳ ವಾರದ ಜಿಆರ್‌ಪಿ ೩೦ರ ಗಡಿ ದಾಟಲಾರದು! ಇಲ್ಲಿ ಹಲವಾರು ಅಂಶಗಳು ಕಾರಣವಾಗುತ್ತವೆ ಎಂಬುದನ್ನು ಒಪ್ಪಬಹುದಾದರೂ, ಕೆಟ್ಟದ್ದನ್ನು ಮಾತ್ರ ಜನ ನೋಡ್ತಾರೆ. ಕ್ರೈಂ, ರೊಚ್ಚಿಗೆದ್ದಿದ್ದು ಮಾತ್ರ ಜನಕ್ಕೆ ಇಷ್ಟವಾಗುತ್ತೆ ಎಂಬ ಲಾಜಿಕ್ಕು ತಪ್ಪು ಎಂಬುದು ತೀರ ಸ್ಪಷ್ಟವಾಗಿ ಸಾಬೀತಾಗುತ್ತದೆ.
ಕೆಟ್ಟದ್ದನ್ನು ವಿರೋಧಿಸುವ ಜನಕ್ಕೆ ಪರ್ಯಾಯ ಒಳಿತು. ಆ ಸ್ಪೇಸ್‌ನ್ನು ಆಕ್ರಮಿಸಿಕೊಳ್ಳುವ ಕೆಲಸವನ್ನು ಕನ್ನಡದ ಯಾವ ಸುದ್ದಿ ವಾಹಿನಿಗಳು ಮಾಡುತ್ತಿಲ್ಲ ಎಂಬುದು ದುರಂತ. ಹಾಗಂತ ಯತ್ನ ಮಾಡುವುದೇ ಇಲ್ಲ ಅಂತಲ್ಲ, ತೀರ ಅಪರೂಪ. ಹೀಗೆ ಅಪರೂಪವಾಗಿ ಮಾಡಿದಾಗ ಖಂಡಿತ ಟಿಆರ್‌ಪಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಒಂದು ಕಾರ್ಯಕ್ರಮದ ಟಿಆರ್‌ಪಿ ಆಧರಿಸುವ ಅಂಶಗಳು ತುಂಬಾ ಇರುತ್ತವೆ.
ಈ ಟಿಆರ್‌ಪಿ ಎನ್ನುವುದೇ ಒಂಥರ ಲಾಜಿಕ್ಕಿಲ್ಲದ, ಲೆಕ್ಕಕೆ ಸಿಗದ ಮಾಪನ ಎಂಬುದು ನಂತರದ ಮಾತು ಬಿಡಿ. ಆದರೆ ಮಾರ್ಕೆಟಿಂಗ್‌ನ ದೃಷ್ಟಿಯಿಂದ, ಜಾಹೀರಾತುದಾರರ ದೃಷ್ಟಿಯಿಂದ ನಾವು ಆ ವ್ಯವಸ್ಥೆಯನ್ನು ಒಪ್ಪಿಕೊಳ್ಳಲೇಬೇಕು.
ತುಂಬ ಜನ ಟಿಆರ್‌ಪಿ ಬಗ್ಗೆ ಮಾತಾಡುತ್ತಾರೆ. ಆದ್ರೆ ಬಹಳಷ್ಟು ಪತ್ರಕರ್ತರಿಗೆ ಅದರ ಉದ್ದಗಲ ಖಂಡಿತವಾಗಿಯೂ ಗೊತ್ತಿಲ್ಲ. ಪ್ರತಿ ವಾಹಿನಿಯಲ್ಲೂ ಈ ಟಿಆರ್‌ಪಿಯ ಆಳ-ಅಗಲ ಗೊತ್ತಿರುವುದು ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ. ಟಿಆರ್‌ಪಿ, ಟಿವಿಆರ್‌, ಟಿವಿಎಚ್‌, ಜಿಆರ್‌ಪಿ, ಟೈಂಸ್ಪೆಂಡ್‌, ರೀಚು ವಗೈರೆ, ವಗೈರೆಗಳನ್ನು ಅರ್ಥ ಮಾಡಿಕೊಳ್ಳಲು ಹೊರಟರೆ ಖಂಡಿತ ತಲೆ ಹಾಳಾಗುತ್ತದೆ. ಹೀಗಾಗಿ ಒಂದು ವಾಹಿನಿಗೆ ವಾರಕ್ಕೆ ಎಷ್ಟು ಅಂಕ ಬಂತು ಎಂಬುದಷ್ಟೆ ಟಿಆರ್‌ಪಿ ಎಂಬ ಭ್ರಮೆ ಅನೇಕ ಮಂದಿಯಲ್ಲಿದೆ!
ಹಾಗೆ ನೋಡಿದ್ರೆ ಮನರಂಜನೆ ವಾಹಿನಿಯಲ್ಲಿ ಏನೂ ಇಲ್ಲ. ಯಾಕಂದ್ರೆ ಅಲ್ಲಿ ದಿನ ಹೊಸತನ್ನು ಕೊಡಲು ಸಾಧ್ಯವಿಲ್ಲ. ಆ ಲೆಕ್ಕದಲ್ಲಿ ಮನರಂಜನೆ ವಾಹಿನಿಗಿಂತ ಸುದ್ದಿ ವಾಹಿನಿ ವೀಕ್ಷಕರ ಪ್ರಮಾಣ ಹೆಚ್ಚಿರಬೇಕಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಒಂದು ಆಜ್‌ತಕ್‌, ಒಂದು ಟೈಂಮ್ಸ್‌ ನೌ ವಾಹಿನಿಗಳು ನಂಬರ್‌ನಲ್ಲಿ ಮನರಂಜನೆ ವಾಹಿನಿಗೆ ಸಡ್ಡು ಹೊಡೆದು ನಿಲ್ಲುತ್ತವೆ. ಆದರೆ ಕನ್ನಡದಲ್ಲಿ ಪರಿಸ್ಥಿತಿ ಹಾಗಿಲ್ಲ. ಕನ್ನಡದಲ್ಲಿ ನಂಬರ್‌ ಒನ್‌ ಮನರಂಜನೆ ವಾಹಿನಿ ಅಂಕ ೪೦೦-೫೦೦ ಇದೆ. ನಂಬರ್‌ಒನ್‌ ಸುದ್ದಿ ವಾಹಿನಿ ೧೨೦-೧೫೦ರಲ್ಲಿದೆ. ೪ರಿಂದ ೫ ಪಟ್ಟು ವ್ಯತ್ಯಾಸವಿದೆ.
ಇವಿಷ್ಟು ಟಿಆರ್‌ಪಿ ಎಂಬ ಭಾಷೆಯಲ್ಲಿ ಮಾತಾಡುವವರ ದಾಟಿಯ ಬರಹವಾಯ್ತು.
ಆದ್ರೆ ಇಂದು ಸುದ್ದಿ ವಾಹಿನಿಗಳ ಅವಿವೇಕಿತನ ನೋಡಿ ಜನ ಉಗೀತಾ ಇದ್ದಾರೆ. ಜನವೇಕೆ, ಅದರೊಳಗೆ ಕೆಲಸ ಮಾಡುವ ಮಂದಿಯೇ ಉಗಿದುಕೊಂಡು, ಏನಾದ್ರು ಹಾಳಾಗ್ಲಿ ಹೋಗ್ಲಿ ಸಂಬಳ ಕೊಡ್ತಾರಾ, ಇಲ್ವಾ ಸಾಕು ಎಂದುಕೊಂಡು ಬರುತ್ತಿದ್ದಾರೆ. ಇದು ವಾಸ್ತವವಾಗಿ ಅರ್ಥವಾಗಬೇಕಿರುವುದು ಒಂದು ಸುದ್ದಿ ವಾಹಿನಿ ನಡೆಸುವ ಸಂಪಾದಕರಿಗೆ ಹಾಗೂ ಆಡಳಿತ ಮಂಡಳಿಗೆ. ಯಾರು, ನಿರ್ಧಾರ ತೆಗೆದುಕೊಳ್ಳುವ ಮಟ್ಟದಲ್ಲಿ ಇರುತ್ತಾರೋ, ಅವರಿಗೆ ಅರ್ಥವಾಗಬೇಕು. ಒಬ್ಬ ವರದಿಗಾರನಿಗೆ, ನಿರೂಪಕನಿಗೆ ಬೈದರೆ ಪ್ರಯೋಜನ ಇಲ್ಲ. ಪಾಪ ಅವನ ಕೈಯ್ಯಲ್ಲಿ ಏನು ಇರುವುದಿಲ್ಲ. ಕೊಡುವ ಸಂಬಳಕ್ಕೆ ಮೇಲಿಂದ ಬಂದ ಅಸೈನ್‌ಮೆಂಟ್‌ ಮುಗಿಸುತ್ತಾನೆ ಅಷ್ಟೆ. ಅದಕ್ಕೂ ಮೀರಿ ಏನೋ ಯತ್ನ ಮಾಡುವವರಿದ್ದರೂ, ಇಂಡಸ್ಟ್ರಿಯಲ್ಲಿ ಅವರನ್ನು ಅಷ್ಟೆ ವ್ಯವಸ್ಥಿತವಾಗಿ ತುಳಿಯುವ ಮಹಾ’ಸ್ವಾಮಿ’ಗಳದ್ದೆ ಸುವರ್ಣಯುಗ!
ನಿಮಗೆ ಟಿಆರ್‌ಪಿ ಅಳತೆಗೋಲೆ ಆಥರವಿದೆ. ಕೋಟಿಯಲ್ಲಿ ಸಾವಿರವನ್ನು ಅಳೆಯುವುದು. ಅಂಥದ್ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೈತಿದ್ದಾರೆ ಅಂದ್ರೆ, ಅದನ್ನು ಹೇಗೆ ನಿರ್ಲಕ್ಷ್ಯ ಮಾಡುವಿರಿ ಎಂಬುದು ಅರ್ಥವಾಗುತ್ತಿಲ್ಲ. ಜನಕ್ಕೆ ಬೇಡ, ಇಷ್ಟವಾಗುತ್ತಿಲ್ಲ ಅಂತಾದ್ರೆ, ಅದು ಫ್ಲ್ಯಾಪ್‌ ಕಾನ್ಸೆಪ್ಟ್‌ ಎಂದೇ ಅರ್ಥವಲ್ಲವೇ? ಅದನ್ನೇ ಮತ್ತೆ, ಮತ್ತೆ ತೋರಿಸಿದ್ರೆ ಹೇಗೆ ವಾಹಿನಿಯ ನಂಬರ್‌ ಇಂಪ್ರ್ಯೂ ಆಗುತ್ತೆ.
ಒಬ್ಬ ಸಂಪಾದಕ ಬಂದ ತಕ್ಷಣ ೫೮ ನಂಬರ್‌ ಇರುವ ಒಂದು ವಾಹಿನಿ ನಾವೇ ನಂಬರ್‌.೨ ಎಂದು ಜಾಹೀರಾತು ಹಾಕಿಕೊಂಡಿತ್ತಂತೆ. ಜೋರಾಗಿ ನಗು ಬಂತು. ೫ ವರ್ಷದಿಂದ ೫೮ರಲ್ಲೇ ಇದ್ದೀರಿ. ನಾಚ್ಕೆ ಆಗಬೇಕು. ನಿಮ್ಮ ವಾಹಿನಿಗೆ ಎರಡು ಸಲ ನಂಬರ್‌ ಕೊಟ್ರು, ನಿಮ್ಮ ಒಟ್ಟು ನಂಬರ್‌, ಮೊದಲ ಸ್ಥಾನದಲ್ಲಿರುವ ವಾಹಿನಿಗೆ ಸರಿಸಮಾಂತರವಾಗುವುದಿಲ್ಲ. ಅಂಥದ್ರಲ್ಲಿ ನೀವು ಅದನ್ನು ಸಂಭ್ರಮಿಸುತ್ತೀರಲ್ಲಾ? ಇದು ನಮ್ಮ ಕನ್ನಡದ ವಾಹಿನಿಗಳ ಮೆಂಟಾಲಿಟಿ ತೋರಿಸುತ್ತೆ. ಅಂದ್ರೆ ಮೇಲಕ್ಕೆ ಹೋಗುವುದು ಹಾಳಾಗ್ಲಿ, ಇದ್ದಲ್ಲಿ ಇದ್ರೆ ಖುಷಿ!
ಒಂದು ಅದ್ಭುತವಾದ ಊಟವಿದೆ. ಅದನ್ನು ಹೇಗೆ ಬಡಿಸುವಿರಿ ಎಂಬುದು ಅತ್ಯಂತ ಮಹತ್ವದಾಗುತ್ತೆ. ಹಾಗೆ ಒಂದು ಒಳ್ಳೆ ಕಾರ್ಯಕ್ರಮ ಮಾಡುವಾಗಲೂ ಅದನ್ನು ಯಾವ ಥರ ನಿರೂಪಿಸುವಿರಿ ಎಂಬುದು ಮಹ್ವತದ್ದು.
ನನಗೊಂತು ಎಷ್ಟೋ ಸಲ ಟಿವಿ೯ ವೃತ್ತಿಪರವಾಗಿ ಬೆಸ್ಟ್‌ ವಾಹಿನಿಯಂತೆ ಕಾಣಿಸುತ್ತೆ. ಯಾಕಂದ್ರೆ ಅವರಿಗೆ ಜನರ ನಾಡಿಮಿಡಿತ ಅರ್ಥವಾಗಿಬಿಟ್ಟಿದೆ. ಇವತ್ತಿನ ಟ್ರೆಂಡ್‌ನ್ನು ಟಪ್‌ ಅಂತ ಸೆರೆ ಹಿಡಿಯುತ್ತಾರೆ. ಅಲ್ಲಿ ಕೆಟ್ಟದ್ದನ್ನು ಎಷ್ಟು ಅದ್ಭುತವಾಗಿ ಕೊಡುತ್ತಿದ್ದರು ಎಂಬುದಕ್ಕೆ ವಾರೆಂಟ್‌ ಉದಾಹರಣೆ. ಇಡೀ ಶೋ ಸ್ಕ್ರಿಪ್ಟ್‌ ಕೇಳಬೇಕು ಅನ್ನಿಸುತ್ತಿತ್ತು. ಅದೇ ಥರ ಒಳ್ಳೆದನ್ನು ಕೊಡ್ತಾರೆ. ಎರಡನ್ನು ತುಂಬಾ ಚೆನ್ನಾಗಿ ಬ್ಯಾಲೆನ್ಸ್‌ ಮಾಡ್ತಾರೆ. ಹಾಗಂತೆ ಅಲ್ಲೂ ಸುದ್ದಿಯನ್ನು ಚೂಯಿಂಗ್‌ಗಂನಂತೆ ಎಳೆಯುವುದಿಲ್ಲ ಎಂದಲ್ಲ. ಆದ್ರು ಇರುವುದರಲ್ಲಿ ಉತ್ತಮ. ನನ್ನಂತೆ ಸುಮಾರು ಜನಕ್ಕೆ ಅನ್ನಿಸಿರಬೇಕು. ಹಾಗಾಗಿಯೇ ಇವತ್ತಿಗು ಅದು ನಂಬರ್‌ ಒನ್‌ ಸುದ್ದಿ ವಾಹಿನಿ.
ಕ್ರೈಂಡೈರಿ ಕೂಡ ಹಾಗೆ ಗೆದ್ದಿದ್ದು ಅದ್ರ ನಿರೂಪಣೆಯಿಂದ, ಸ್ಕ್ರಿಪ್ಟ್‌ನಿಂದ. ಅಂಥದ್ದೆ ಸೂತ್ರವನ್ನು ಒಳ್ಳೆಯದ್ದಕ್ಕು ಅಳವಡಿಸಿಕೊಂಡರೆ ಗೆಲ್ಲಲ್ಲು ಸಾಧ್ಯವಿಲ್ಲವೆ? ಖಂಡಿತ ೨೪ ಗಂಟೆ ಒಳ್ಳೆದನ್ನೆ ಕೊಡಿ, ಯಾವುದೋ ಸ್ವಾಮಿಗಳ ಪ್ರವಚನ ಹಾಕಿ ಅನ್ನುತ್ತಿಲ್ಲ. ಯಾವುದೋ ಕಿತ್ತೋದ ಸಂಸಾರದ ಡೈವರ್ಸ್‌ ಚರ್ಚೆ, ಇನ್ನು ಯಾವುದೋ ರಾಜಕಾರಣಿಯ ವಿವಾದ ವಗೈರೆ, ವಗೈರೆ…ಯಾರಿಗೆ ಬೇಕು ಇವೆಲ್ಲ? ಯಾವ ಕಾರಣಕ್ಕಾಗಿ ನಾವು ಅದನ್ನು ನೋಡಬೇಕು? ಅವನ ಕ್ಷೇತ್ರದ ಜನಕ್ಕೆ ಅವನ್ನ ಪರಿಚಯ ಇರಲ್ಲ. ಅಂಥವ್ರನ್ನ ಕರೆದುಕೊಂಡು ಬಂದು ಚರ್ಚೆಗೆ ಕೂರಿಸಿಕೊಳ್ಳುತ್ತಾರೆ. ಕನ್ನಡ ಪದಗಳನ್ನು ನೆಟ್ಟಗೆ ಉಚ್ಚರಿಸಲು ಬರದ ಕನ್ನಡ ಓರಾಟಗಾರರಿಂದ ಕನ್ನಡದ ಪರ ಚರ್ಚೆ! ಪದೇ, ಪದೇ ಸುದ್ದಿವಾಹಿನಿ ಎಂಬುದು ಅನಕ್ಷರಸ್ಥರ, ಅವಿವೇಕಿಗಳ ಸಂತೆ ಎಂಬುದನ್ನು ನಮ್ಮ ಕನ್ನಡದ ಸುದ್ದಿ ವಾಹಿನಿಗಳು ಸಾಬೀತುಗೊಳಿಸುತ್ತಿವೆ!!! ಇವತ್ತಿನ ಟ್ರೆಂಡ್‌ ನೋಡಿದ್ರೆ, ಮುಂದೊಂದು ದಿನ ಪತ್ರಕರ್ತರಿಗೆ ಯಾರಾದ್ರು ಕಲ್ಲು ಹಿಡಿದು ಹೊಡೆದ್ರು ಅಚ್ಚರಿಯಿಲ್ಲ! ನ್ಯೂಸ್‌ ಚಾನೆಲ್‌ ವರದಿಗಾರಿಕೆ ಎಂಬುದು ಖಂಡಿತ ಇವತ್ತು ಅಪಾಯದಮಟ್ಟದಲ್ಲಿದೆ.
ಖಂಡಿತ ಕನ್ನಡಕ್ಕೊಂದು ಒಳ್ಳೆ ಸುದ್ದಿ ವಾಹಿನಿ ಬೇಕಿದೆ. ಏನಾದ್ರು ಒಂದಷ್ಟು ಮಾಹಿತಿ ಕೊಡುವ, ಸುದ್ದಿಯ ಎರಡು ಮುಖಗಳನ್ನು ಎತ್ತಿ ಹಿಡಿಯುವ ಅಂದೆಲ್ಲ ಅಂದುಕೊಳ್ಳುವ ಹೊತ್ತಿಗೆ ಯಾವುದೋ ರಿಯಲ್‌ ಎಸ್ಟೇಟ್‌ ಉದ್ಯಮಿಯ, ರಾಜಕಾರಣಿಯ ಇನ್ನೊಂದು ಸುದ್ದಿವಾಹಿನಿ ತಲೆ ಎತ್ತಿಕೊಂಡಿರುತ್ತದೆ. ೨ ಕೋಟಿ ಇದ್ದವನು ಸಿನಿಮಾ ಮಾಡಬಹುದು, ೨೦ ಕೋಟಿ ಇದ್ದವನು ನ್ಯೂಸ್‌ ಚಾನೆಲ್‌ ಮಾಡಬಹುದು ಎಂಬಂಥ ಯುಗವಿದು! ದುಡ್ಡು ಅವ್ರದ್ದು, ಕಾಸು ಅವ್ರದ್ದು, ಅಧಿಕಾರ ಅವ್ರದ್ದು. ಒಳ್ಳೆದಾಗ್ಲಿ ಬಿಡಿ. ಟಿವಿ ಆಫ್‌ ಮಾಡಿ ಸುಖವಾಗಿ ನಿದ್ದೆ ಮಾಡಿ!

ಚಿತ್ರದಂತೆ. ಬಿಡಿಸ್ತಾ ಹೋದ್ರೆ ಎಷ್ಟು ದೂರ ಬೇಕಾದ್ರು ಬಿಡಿಸಬಹುದು. ಸಾಕು ಅಂದಾಗ ನಿಲ್ಲಿಸಬಹುದು. ಯಾವುದ್ರಲ್ಲೆ ಆಗ್ಲಿ ನಾವು ಎಲ್ಲಿಗೆ ಚೌಕಟ್ಟನ್ನು ಹಾಕಿಕೊಳ್ತೀವಿ ಅನ್ನೋದು ಮಹತ್ವದ್ದು. ಪ್ರತಿದಿನ ಎಷ್ಟೋ ಅವಮಾನ ಆಗುತ್ತೆ. ನೋವಾಗುತ್ತೆ. ಎಲ್ಲ ಅವಮಾನಕ್ಕು ಉತ್ತರ ಕೊಡ್ತೀವಿ ಅಂತ ಹೋದ್ರೆ ನಮ್ಮ ಕಥೆ ಮುಗೀತು! ಅದೊಂಥರ ಹೈವೆಯಲ್ಲಿ ನೀವು ಚಟಕ್ಕೆ ಬಿದ್ದು ಸಂಬಂಧವೇ ಇಲ್ಲದ ಯಾರನ್ನೋ ಓವರ್‌ಟೇಕ್‌ ಮಾಡಿದ ಹಾಗೆ. ಇದ್ರಿಂದ ನನ್ನ ಬದುಕಿಗೆ ಏನು ಪ್ರಯೋಜನ ಇಲ್ಲ ಅನ್ನೋದು ಬಹಳ ದೂರ ಹೋದ ನಂತ್ರ ಅರಿವಾಗುತ್ತೆ.

ನಾವು ಪ್ರತಿಸಲ ನಮ್ಮದೇ ಶ್ರೇಷ್ಠ, ನಾವೇ ಮಹಾನ್‌ ಬುದ್ದಿವಂತರು, ನಾವೇ ದೊಡ್ಡ ಶ್ರೀಮಂತರು ಅಂದೊಕೊಳ್ತಾ ಇರ್ತಿವಿ. ಸೈಕಲ್‌ನಲ್ಲಿ ಬದುಕುತ್ತಿದ್ದವನಿಗೆ ಬೈಕ್‌ ಬಂದಾಕ್ಷಣ ನಾನು ಶ್ರೀಮಂತ ಆಗಿಬಿಟ್ಟೆ ಅನ್ನೋ ಭ್ರಮೆ. ಬೈಕ್‌ನವನಿಗೆ ಕಾರು ಬಂದ್ರೆ ಭ್ರಮೆ. ಆದ್ರೆ ಸಿಗ್ನಲ್‌ನಲ್ಲಿ ನಿಂತಾಗ್ಲೆ ಗೊತ್ತಾಗೋದು ನಂದು ತೀರ ಸಣ್ಣ ಕಾರು. ಪಕ್ಕದವನ ಬಳಿ ಬೆಂಜ್‌ ಇದೆ. ಅದಕ್ಕು ಪಕ್ಕದವನ ಹತ್ರ ಬಿಎಂಡಬ್ಲ್ಯು ಇದೆ. ಈ ಕಡೆ ಪಕ್ಕದವನದ್ದು ಜಾಗ್ವಾರ್‌ ಕಾರು ಅಂತ!

ತೃಪ್ತಿ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇದೆ. ಮೇಲಿನ ಹೋಲಿಕೆ ಭ್ರಮೆಯನ್ನು ಹೋಗಲಾಡಿಸುತ್ತೆ. ಹಾಗಂತ ಅದಕ್ಕೆ ಹೊಟ್ಟೆಕಿಚ್ಚು ಪಟ್ಟುಕೊಂಡು, ಜಿದ್ದಿಗೆ ತೆಗೆದುಕೊಂಡು ಹೊರಟ್ರೆ ಬದುಕಿನ ಕಥೆ ಮುಗೀತು. ಕೆಲವು ಸಲ ಅವಮಾನ, ನೋವು, ಯಾರೋ ಆಡಿಕೊಂಡಿದ್ದು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತೆ ನಿಜ. ಹಾಗಂತ ಪ್ರತಿ ಅವಮಾನವನ್ನು ಸವಾಲಾಗಿ ತೆಗೆದುಕೊಂಡ್ರೆ ಜೀವನ ಅನ್ನೋದು ಏನೂ ಅರ್ಥವಾಗದೆಯೆ ಮುಕ್ಕಾಲು ಆಯುಷ್ಯ ಕಳೆದು ಹೋಗುತ್ತೆ!

ಬದುಕಿಗೊಂದು ಇತಿಮಿತಿಯಿಲ್ಲ. ನಾವು ಹೇಗೆ ತೆಗೆದುಕೊಳ್ಳುತ್ತೀವೊ ಹಾಗೆ ಅಂತ ಎಷ್ಟೊ ಸಲ ಅಂದುಕೊಳ್ತಾ ಇರ್ತಿನಿ. ಬೆಳಿಗ್ಗೆ ಹೂವಿನ ಆಂಟಿ ಬರ್ತಾಳೆ. ಆಕೆ ಫಸ್ಟ್‌ಟ್ರಿಪ್‌ ಬಂದಾಗ ನಂಗಂತು ಬೆಳಗಾಗಿರುವುದಿಲ್ಲ! ತಿಂಗಳಿಗೆ ಒಂದ್ಸಲ ದುಡ್ಡು ಇಸಿದುಕೊಳ್ಳಬೇಕು ಅಂತ ಸೆಕೆಂಡ್‌ ಟ್ರಿಪ್‌ ಬರುವಾಗ ಹೂವು ಹಾಕ್ತಾರೆ. ಅಪ್ಪಿ, ತಪ್ಪಿ ನೀವೇನಾದ್ರು ‘ಏನ್‌ ಆಂಟಿ ಹಳೆ ಹೂ ಹಾಕ್ತೀರಾ? ದೇವ್ರಿಗೆ ಮುಡಿಸೋಕೆ ಮನಸ್ಸು ಬರಲ್ಲ’ ಅಂದ್ರೆ ನಿಮ್ಮ ಕಥೆ ಮುಗೀತು. ಬೆಳಿಗ್ಗೆ ಎದ್ದು ಮಾರ್ಕೆಟ್‌ಗೆ ಹೋಗಿ ಹೂ ತರೋದ್ರಿಂದ ಹಿಡಿದು, ನಿನ್ನೆ ಮಳೆ ಬಂತು ಇಷ್ಟು ಲಾಸ್‌ ಆಯ್ತು ಅನ್ನೊವರೆಗಿನ ಕಥೆ! ಬೆಳ್ಳಂಬೆಳಿಗ್ಗೆ ಕರೆಕ್ಟಾಗಿ ಒಂದು ಗಂಟೆ ೨೨ ನಿಮಿಷ ಡಮಾರ್‌ ಅಂದಿರುತ್ತೆ. ಓಕೆ ಮುಂದೊಂದು ದಿನ ಈಕೆಯ ಕಥೆ ಯಾವುದೋ ಕಥೆಗೊಂದು ಪಾತ್ರ ಆಗುತ್ತೆ ಅಂತ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬೇಕು!’ ಹಳೆ ಹೂವಾದ್ರು ಪರ್ವಾಗಿಲ್ಲ. ನೀವೇ ಗ್ರೇಟ್‌. ಕೊಡೊ ೭ ರೂಪಾಯಿಗೆ ಸೂಪರ್‌ ಹೂವು ಹಾಕಿದ್ದೀರಿ’ ಅಂತ ಅಂದುಕೊಂಡು ಏರಿಸಲಾಗದ ಹೂವನ್ನು ಕಸದ ಬುಟ್ಟಿಗೆ ಎಸೆದು, ೧೦ ರೂಪಾಯಿಗೊಂದು ಮಳ ಹೂವು ಖರೀದಿಸಿ ಏರಿಸುವುದು, ಆಂಟಿಗೆ ಕಂಪ್ಲೆಂಟ್‌ ಮಾಡೋದಕ್ಕಿಂತ ಉತ್ತಮ!

ಅವರವರಿಗೆ ಅವರ ಜಗತ್ತೇ ಶ್ರೇಷ್ಠ. ರಾಮಣ್ಣನ ಅಂಗಡಿ ಹೋದ್ರೆ ‘ಸುಸ್ತಾಗಿ ಹೋಯ್ತು ಸಾರ್‌. ಈ ಅಂಗಡಿಯೂ ಬೇಡ ಮತ್ತೊಂದು ಬೇಡ. ಯಶವಂತಪುರಕ್ಕೆ ಹೋಗಿ ಮೂಟೆ ಇಳಿಸಿಕೊಂಡು ಬರುವಾಗ ಬೆನ್ನೆಲ್ಲ ಬಿದ್ದು ಹೋಗುತ್ತೆ. ಒಬ್ರೆ ಒದ್ದಾಡೊಕೆ ಆಗಲ್ಲ. ನಾವು ನಿಮ್ಮ ಥರ ಓದಿಕೊಂಡು ಕೆಲಸಕ್ಕೆ ಸೇರಿಕೊಂಡು ಬಿಡಬೇಕಿತ್ತು’ ಅಂತಿರುತ್ತಾರೆ.

‘ನಾವು ದುಡಿಯೋದೆಲ್ಲ ಲಾಭ ಕಂಪನಿಗೆ. ತೀರ ಸಂಬಳವೊಂದನ್ನೇ ನಂಬಿಕೊಂಡ್ರೆ ನಾನು ಈ ಬೆಂಗ್ಳೂರಲ್ಲಿ ಬದುಕೋಕೆ ಆಗಲ್ಲ. ನಾನು ಸ್ವಂತದ್ದು ಏನಾದ್ರು ಮಾಡಬೇಕು’ ಅಂತ ನಾನು ಯೋಚಿಸ್ತಾ ಇರ್ತಿನಿ! ಅಲ್ಲೆಲ್ಲೋ ಹೊಟೆಲ್‌ಗೆ ಹೋದ್ರೆ, ಅವ್ರಿಗೆ ಬಿಬಿಎಂಪಿ ಚುನಾವಣೆ ತಲೆಬಿಸಿ. ಮೋಸ್ಟ್ಲಿ ಇವ್ರೆ ಈ ದೇಶದ ಎಲ್ಲ ಉಸ್ತುವಾರಿಯನ್ನು ನೋಡಿಕೊಳ್ಳೋದು ಇರಬೇಕು ಅನ್ನೋ ರೇಂಜಿಗೆ ಆಡ್ತಾ ಇರ್ತಾರೆ ಒಂದಷ್ಟು ಜನ. ಈ ಕಡೆ ಸಿನಿಮಾ ಪ್ರೆಸ್‌ಮೀಟ್‌ ಹೋದ್ರೆ ಅದೊಂದು ಬೇರೆಯದೆ ಜಗತ್ತು. ಅವ್ರಿಗೆ ಬಿಬಿಎಂಪಿ ಚುನಾವಣೆಯೂ ಬೇಡ, ರಾಮಣ್ಣನ ಕಷ್ಟ ಸುಖವೂ ಬೇಡ. ‘ ಆ ಸಿನಿಮಾ ಹಂಗಿತ್ತು. ಮೊನ್ನೆ ಆ ನಟ ಹಾಗೆ ಅಂದ, ನೀವ್ಯಾಕೆ ಆ ಪ್ರೆಸ್‌ಮೀಟ್‌ಗೆ ಬಂದಿಲ್ಲ, ಆ ಹೀರೋಯಿನ್‌ ಅವನ ಹಿಂದೆ ಬಿದ್ದಿದಾಳಂತೆ ಹೌದಾ, ಆ ನಾಯಕ ಯಾವುದೋ ನಿರ್ದೇಶಕನಿಗೆ ಸಿನಿಮಾ ಮಾಡುತ್ತಿದ್ದಾನಲ್ಲ’ ಎಂಬಿತ್ಯಾದಿ ಮಾತುಗಳು.

ಈ ಕಡೆ ಚಾನೆಲ್‌ಗೆ ಬಂದ್ರೆ ಅವ್ರಿಗೆ ಇನ್ನೊಂದು ಜಗತ್ತಿನ ಪರಿವೇ ಇಲ್ಲ. ಟಿಆರ್‌ಪಿ, ರಿಯಾಲಿಟಿ ಶೋ, ನಮ್ಮ ಶೋ ಅದಕ್ಕಿಂತ ಚೆನ್ನಾಗಿತ್ತು ವಗೈರೆ, ವಗೈರೆಗಳು…’ಸಾರ್‌ ಸೀನ್‌ ಕಳ್ಸಿ ಸಾರ್‌, ನಾಳೆ ಆ ಹೀರೋ ಡೇಟ್‌ ಇಲ್ಲ. ನಾಡಿದ್ದು ಆ ಹೀರೋಯಿನ್‌ ಡೇಟಿಂಗ್‌ನಲ್ಲಿ ಇರ್ತಾಳೆ’ ಅಂತ ಸೀರಿಯಲ್‌ ಮ್ಯಾನೇಜರ್‌ ಅಳಲು. ಅವನಿಗೆ ಒಂದು ಹೂವಿನ ಆಂಟಿ ಸ್ಟೋರಿ, ಸಿನಿಮಾ ಪ್ರೆಸ್‌ಮೀಟ್‌ ಯಾವುದೂ ಮುಖ್ಯ ಅಲ್ಲ. ಆವತ್ತಿನ ದಿನಕ್ಕೆ ಬೇಕಾದ ಸ್ಕ್ರಿಪ್ಟ್‌ನ ಪ್ರಿಂಟೌಟ್‌ ನಿರ್ದೇಶಕರಿಗೆ ಕೊಟ್ಟು, ಬೇಕಾದ ಕಲಾವಿದರನ್ನು ಸೆಟ್‌ಗೆ ತಂದು ಗುಡ್ಡೆ ಹಾಕಿ, ಬರೆದ ಪ್ರಾಪರ್ಟಿಗಳನ್ನು ತಂದು ಹೂತಾಕಿದರೆ ಮ್ಯಾನೇಜರ್‌ನ ಆವತ್ತಿನ ಜೀವನ ಮುಗೀತು. ನಾನು ಒಂದು ಹತ್ತು ನಿಮಿಷ ಆರಾಮವಾಗಿ ನಿದ್ದೆ ಮಾಡಬಹುದು ಅನ್ನೋದು ಅವನ ಯೋಚನೆ!

‘ಗುರು ಇವತ್ತು ಈ ಕುದುರೆನೆ ಗೆಲ್ಲೋದು. ಅದ್ರ ಮೇಲೆ ದುಡ್ಡು ಹಾಕು. ನಾನು ಎಷ್ಟು ಗೆದ್ದೆ ಗೊತ್ತಾ’ ಬೈಕ್‌ ಹತ್ತಿ ಆಫೀಸ್‌ಗೆ ಹೊರಟ್ರೆ ರೇಸ್‌ಕೋರ್ಸ್‌ ರೋಡಿನಲ್ಲಿ ಕೇಳುವ ಮಾತು. ಜೆಸಿ ರಸ್ತೆಗೆ ಹೋದ್ರೆ ಅವ್ರಿಗೆ ಕಾರು, ಸೀಟು, ಟಯರ್‌, ನಟ್ಟು, ಬೋಲ್ಟು ಬಿಟ್ಟು ಬೇರೆ ಪ್ರಪಂಚ ಬೇಡ!

ಪ್ರತಿ ದಿನ ನಾವು ನಮ್ಮದೆ ಆದ ಭ್ರಮೆಯಲ್ಲಿ ಬದುಕ್ತಾ ಇರ್ತಿವಿ. ‘ನಾನು ಇವತ್ತು ಆ ಕೆಲಸ ಮಾಡಿದೆ. ಭಯಂಕರ, ಇವತ್ತು ಇದೊಂದು ಬರೆದುಬಿಟ್ಟೆ ಅದ್ಭುತ. ನಾನೊಬ್ಬ ಮಹಾನ್‌ ಅಂಕಣಕೋರ. ನನ್ನ ಪತ್ರಿಕೆ ೭ ಲಕ್ಷ ಪ್ರಸರಣ ಇದೆ. ನಂಗಷ್ಟು ಅಭಿಮಾನಿಗಳು ಇದಾರೆ’ ಅಂತೆಲ್ಲ ಬೀಗುತ್ತಾ ಇರ್ತಿವಿ. ‘ಸಾರ್‌ ಇವತ್ತು ನಿಮ್ಮ ಬರಹ ಅದ್ಭುತ ಬಿಡಿ ಸಾರ್‌. ಶರ್ಟ್‌ ಎಲ್ಲಿ ತಗೊಂಡ್ರಿ ಸಾರ್‌. ಸೂಪರ್‌ ಆಗಿದೆ. ನೀವು ಹಾಕಿದ ಚೆಡ್ಡಿಯಂತೂ ವಿಶ್ವದ ಹನ್ನೆರಡನೆ ಅದ್ಭುತದಂತಿದೆ’ ಸಹೋದ್ಯೋಗಿಯೊಬ್ಬ ಚೆನ್ನಾಗಿ ರೈಲು ಹತ್ತಿಸಿ ಉಬ್ಬಿಸುತ್ತಿರುತ್ತಾನೆ. ನಾಳೆ ಆಗೋ ಇಂಕ್ರಿಮೆಂಟಿನ ಚಿಂತೆ ಅವನಿಗೆ. ಬಾಸ್‌ನ ಚೆನ್ನಾಗಿ ಇಟ್ಟುಕೊಳ್ಳದೆ ಹೋದ್ರೆ, ನಾಳೆ ಎಲ್ಲೂ ಕೆಲಸ ಸಿಗದೆ ಹೋದ್ರೆ ನನ್ನ ಬದುಕು, ನನ್ನ ಹೆಂಡ್ತಿ, ಮಕ್ಕಳು ಅನ್ನೋ ಆಲೋಚನೆ. ಹೀಗಾಗಿ ತನ್ನ ತನವನ್ನು ಮಾರಿಕೊಂಡು ಆತ ದಿನ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಾನೆ. ಲಾಭ ಆಗುವ ವ್ಯಕ್ತಿಗಳಿಗೆ ದಿನಕ್ಕೆ ಮೂರು ಸಲ ನಮಸ್ಕಾರ ಹಾಕ್ತಾನೆ. ಮನುಷ್ಯ ಎಷ್ಟು ಸ್ವಾರ್ಥಿ ಅಂದ್ರೆ, ಲಾಭ ಆಗದವರಿಗೆ ಕನಿಷ್ಟ ಒಂದು ನಗುವನ್ನು ಆತ ಬೀರಲಾರ! ಅಲ್ಲೆಲ್ಲೋ ಬೀದರ್‌ನಲ್ಲಿ ರಸ್ತೆಗೆ ಟಾರ್‌ ಹಾಕುತ್ತಿರುವ ಲಂಬಾಣಿ ಮಹಿಳೆ ಇದ್ಯಾವುದರ ಪರಿವೇ ಇಲ್ಲದೆ, ಮಗುವಿನ ಕುಂಡೆ ತೊಳಿಸಲು ನೀರಿಲ್ಲದೆ, ಅಂಕಣಕೋರನ ಬರಹ ಹರಿದು ಕುಂಡೆ ಒರೆಸುತ್ತಿರುತ್ತಾಳೆ!

“ನೀನು ಏನಯ್ಯ ನೆಟ್ಟಗೆ ಬರಿಯಕ್ಕೆ ಬರಲ್ಲ, ಅವನ್ನ ನೋಡು ಜಗತ್ತಿನ ಒಂಬತ್ತನೆ ಅದ್ಭುತ ಬರಹಗಾರ. ಅವಳನ್ನು ನೋಡು, ಸ್ಕ್ರೀನ್‌ ಪ್ಲೆ ಬರೆದ್ರೆ ಹೆಂಗೆ ಇರುತ್ತೆ ಗೊತ್ತಾ? ಬರೆದ್ರೆ ಆಥರ ಬರೀಬೇಕು. ನೀವೆಲ್ಲ ವೇಸ್ಟು’ ಅಂತ ಒಂದು ಫ್ರೇಮ್‌ನಲ್ಲಿ ಯಾರೋ ಬೈತಾ ಇರ್ತಾರೆ. “ಸಾರ್‌ ನೀವೆಷ್ಟು ಅದ್ಭುತವಾಗಿ ಬರಿತೀರಿ ಸಾರ್‌. ನಾನು ನಿಮ್ಮ ಬ್ಲಾಗ್‌ ಯಾವಾಗ್ಲೂ ಓದ್ತೀನಿ. ಮೊನ್ನೆ ನಿಮ್ಮ ಪುಸ್ತಕ ಸಿಗ್ತು’ ಅಂತ ಇನ್ನೊಂದು ಫ್ರೇಮ್‌ನಲ್ಲಿ ಮತ್ತೊಬ್ಬ ಹೇಳ್ತಾ ಇರ್ತಾನೆ. ನಾನಂತೂ ಎರಡೂ ಫ್ರೇಮ್‌ನಲ್ಲೂ ನಕ್ಕು ಥ್ಯಾಂಕ್ಸ್‌ ಹೇಳ್ತೀನಿ.

‘ಅವನು ಅಷ್ಟಾವಧಾನ ಮಾಡ್ತಾನಂತೆ. ಅವನೆಷ್ಟು ಬುದ್ದಿವಂತ ಇರ್‌ಬಹುದು. ಅವ್ರು ಶತವಧಾನ ಮುಗಿಸಿ ಸಹಸ್ರಾವಧಾನವನ್ನೂ ಮಾಡಿದ್ರಂತೆ, ಖಂಡಿತ ಜಗತ್ತಿನಲ್ಲಿ ಅವರೇ ಶ್ರೇಷ್ಠರು. ಅವರು ತಲೆಯೊಳಗೆ ಏನಿದೆ ಅಂತ ನೋಡಬೇಕು. ಅವಳು ಹಾಡ್ತಾಳೆ, ಬರಿತಾಳೆ, ಪೇಂಟಿಂಗ್‌ ಮಾಡ್ತಾಳೆ, ಡ್ಯಾನ್ಸ್‌ ಗೊತ್ತಿದೆ. ಮಲ್ಟಿ ಟ್ಯಾಲೆಂಟ್‌. ನಾನು ಅವಳ ಅರ್ಧದಷ್ಟಾದ್ರು ಆಗೋದು ಹೇಗೆ. ನನ್ನ ನೆಚ್ಚಿನ ಬರಹಗಾರರ ಥರ ಕಥೆ ಬರೆಯೋದು ಹೇಗೆ’ ಅಂತ ನನ್ನ ಮನಸ್ಸು ಯೋಚಿಸ್ತಾ ಇರುತ್ತೆ.

ಇಷ್ಟೆಲ್ಲದರ ನಡುವೆ ‘ರೀ ಇಲ್ನೋಡಿ ಪೇಪರು’ ಅಂದ್ರೆ, ನಾನು ಜಗತ್ತಿನ ಏನೋ ವಿಸ್ಮಯದ ಸುದ್ದಿ ಬಂದಿರಬೇಕು ಅಂತ ತಿರುಗ್ತೀನಿ. ಕೊನೆಗೆ ನೋಡಿದ್ರೆ, ‘ಚಿನ್ನದ ರೇಟು ೨೩ ಸಾವಿರಕ್ಕೆ ಬಂದಿದೆಯಂತೆ. ನಾನೊಂದು ನಕ್ಲೇಸ್‌ ಮಾಡಿಕೊಳ್ಳಬೇಕು’ ಅಂತ ಹೆಂಡ್ತಿಯ ಕಾಮಿಡಿ ಅಪ್ಲಿಕೇಷನ್‌!

‘ಅಮ್ಮ ತಾಯಿ ೨೯ ಸಾವಿರ ಇದ್ದಾಗ ಮಾಡಿಸಿದ ಅರ್ಧ ಕೆಜಿ ಬಂಗಾರವೇ ವೇಸ್ಟು ಈಗ’ ಅಂತೇನಾದ್ರು ಅಂದ್ರೆ, ಮತ್ತದು ಹೂವಿನ ಆಂಟಿ ಥರ ಒಂದು ಗಂಟೆ ೨೨ ನಿಮಿಷದ ದೃಶ್ಯ. ಅದಕ್ಕಿಂತ ಸೈಲೆಂಟಾಗಿ ಸಂಜೆ ೫ ಗಂಟೆಗೆ ಮಲ್ಲೇಶ್ವರಂ ಹೋಗಿ ಯಾವುದೋ ಆಭರಣದಂಗಡಿಯಲ್ಲಿ ಕಾರ್ಡ್‌ ಉಜ್ಜಿ, ಸೀರೆಯುಟ್ಟ ಲಲನೆಯರತ್ತ ಕಣ್ಣು ಹಾಯಿಸಿ, ಸಿಟಿಆರ್‌ನಲ್ಲಿ ಎರಡು ದೋಸೆ ತಿಂದು ಬರೋದೆ ಎಷ್ಟೋ ಸುಖ!

‘ಸಾರ್‌ ಆ ಮನುಷ್ಯ ಎಷ್ಟು ಸ್ವಾರ್ಥಿ ಅಂದ್ರೆ, ಆಫೀಸ್‌ಗೆ ಬಂದ ಕೇಕ್‌ನ್ನು ಮನೆಗೆ ಕಳಿಸಿಬಿಡ್ತಾನೆ. ದ್ರಾಕ್ಷಿ ಬೆಳೆಗಾರರದಿಂದ ಹಣ್ಣು ಪೀಕಿ, ಅದನ್ನು ಆಫೀಸ್‌ಗೆ ಗೊತ್ತಾಗದಂತೆ ಕಾರಿನ ಡಿಕ್ಕಿಗೆ ಹಾಕಿಸಿದ. ನಾನು ಡಿಕ್ಕಿಗೆ ಹಾಕಿದೆ ಎಂಬ ಕೃತಜ್ಞತೆಗೂ ಒಂದು ಹಣ್ಣು ಕೊಡಲಿಲ್ಲ’ ಅನ್ನುತ್ತಿದ್ರು ಅವ್ರು. ಬದುಕು ಇರೋದೆ ಇಲ್ಲಿ. ಕೋಟಿ ಮಾಡಿದವನ ಪಕ್ಕ ಎರಡು ಕೋಟಿ ಮಾಡಿದವನು ಸಿಗ್ತಾನೆ. ಬುದ್ಧಿವಂತನ ಎದ್ರಿಗೆ ಇನ್ನೊಬ್ಬ ಅತಿ ಬುದ್ಧಿವಂತ. ಅಂದ್ರೆ ಇಂಥ ಹೋಲಿಕೆಗೆ, ಸಮರಕ್ಕೆ ಅಂತ್ಯವಿಲ್ಲ.

ಕನಿಷ್ಠ ಮಾನವೀಯತೆ, ವಾಸ್ತವ ಸ್ಥಿತಿಯ ಅರಿವು, ಎರಡು ಜನವಾದ್ರು ಬದುಕಿದ್ರೆ ಅವನ ಥರ ಬದುಕಬೇಕು ಅನ್ನೋ ಹಾಗೆ ಬದುಕುಬೇಕು ಅಲ್ವಾ? ಬದುಕಿನ ಎಲ್ಲ ಸಮರಗಳು ಕಳೆದು ಈ ಅಂಶ ಅರ್ಥವಾಗುವಾಗ ನಮಗೆ ೬೨ ವರ್ಷದ ಮೂರು ತಿಂಗಳು ಆಗಿರುತ್ತೆ! ಹಾಗಾಗಿಯೇ ಮಠದಲ್ಲಿ, ಸೇವೆ ಮಾಡುವ ಕ್ಷೇತ್ರಗಳಲ್ಲೆಲ್ಲ ನಮಗೆ ತೀರ ವಯಸ್ಸಾದವರೇ ಕಾಣಿಸುವುದು.

ಇವಿಷ್ಟು ಓದಿದ ಮೇಲೆ ಏನು ಸಿಕ್ಕಿಲ್ಲ, ಏನು ಅರ್ಥವಾಗಿಲ್ಲ ಅಂತ ಬೈಕೊಬೇಡಿ. ಯಾಕಂದ್ರೆ ಹೀಗೆ ಬರೆಯುವುದು ನನ್ನ ಬದುಕಿನ ಇನ್ನೊಂದು ಫ್ರೇಂ! ಇಂಥ ಸುಂದರ ಬದುಕಿಗೊಂದು ಜೈಹೋ.

udupiಜಯಂತ್ ಕಾಯ್ಕಿಣಿ ಗೋಕರ್ಣದ ಸಮುದ್ರ ತೀರದಂಚಿನ ಅನುಭವ, ಮುಂಬೈ ಶಹರೆಯ ಸವಿನೆನಪುಗಳನ್ನು ಕಥೆಯಾಗಿಸಿರುವುದನ್ನು ಓದುವಾಗ ಬಾಯಂಚಿನಲ್ಲಿ ಒಂದು ಬಗೆಯ ನೀರು ಬರುತ್ತೆ. ಚಿತ್ತಾಲರ ಕಥೆಗಳನ್ನು ಓದುವಾಗಲೆಲ್ಲ ಘಟ್ಟದ ಕೆಳಗಿನ ಚಿತ್ರಣ ಕಣ್ಮುಂದೆ ಕಾಡುತ್ತೆ. ತೇಜಸ್ವಿಯ ಮೂಡಿಗೆರೆ ನಮ್ಮನ್ನೆಲ್ಲ ಮಲೆನಾಡಿನಲ್ಲಿ ಪ್ರಯಾಣ ಬೆಳೆಸುತ್ತೆ. ಬರೆಯುವ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಜಾಗ ಕಾಡುವುದು, ಅವರು ಅದರ ಕುರಿತು ಆಗಾಗ ಬರೆಯುವುದು, ಸಾಧ್ಯವಿದ್ದಲೆಲ್ಲ ಆ ಊರನ್ನು ತುರುಕಿ ಸಂಭ್ರಮಿಸುವುದು ಸುಳ್ಳಲ್ಲ. ಹಾಗೆ ನನ್ನ ಪಾಲಿಗು ಸದಾ ಎದೆಭಾರವೆನಿಸುವ ಊರು ’ಉಡುಪಿ’.
ಬಹುಶಃ ನಾನು ನನ್ನೂರನ್ನು ಅಷ್ಟೊಂದು ಮಿಸ್ ಮಾಡಿಕೊಂಡೆ ಅನ್ನಿಸಲ್ಲ. ಆದ್ರೆ ಉಡುಪಿ ಎಂದಾಗ ಒಂಚೂರು ಎದೆಭಾರವಾಗುತ್ತೆ. ಯಾರೊ ಉಡುಪಿ-ಮಣಿಪಾಲದ ಹೆಸರು ಎತ್ತಿದರೆ ಕಿವಿ ನೆಟ್ಟಗಾಗುತ್ತೆ. ಅಂಥದ್ದೇನಿದೆ ಆ ಊರಲ್ಲಿ? ಅಷ್ಟ ಮಠಗಳ ಒಣ ಒಳ ಜಗಳ, ಜಾತ್ಯಾತೀತತೆ ವಾದ-ವಿವಾದ, ಮಣಿಪಾಲದ ಕತ್ತಲ ರಾತ್ರಿಯ ಪಬ್ಬು-ಬಾರುಗಳು, ಮಲ್ಪೆಯ ಸಮುದ್ರ ತೀರ, ಸಂತೆಕಟ್ಟೆಯ ಒಣ ಮೀನಿನ ವಾಸನೆ…ಉಡುಪಿಯೆಂದರೆ ಹೊರಜಗತ್ತಿನ ಸಾಕಷ್ಟು ಜನರ ಕಣ್ಣಿನಂಚಿಗೆ ಬರುವುದು ಇವಿಷ್ಟು ಮಾತ್ರ!
ಆದ್ರೆ ಉಡುಪಿಯನ್ನೇ ದೇಹವಾಗಿಸಿಕೊಂಡು, ಮಲ್ಪೆ ಸಮುದ್ರದ ಬಿಸಿ ಗಾಳಿಯಲ್ಲಿ ಉಸಿರಾಡಿ ಮರಳ ರಾಶಿಯಲ್ಲಿ ಹೊರಳಾಡಿದ ನನ್ನಂಥ ಅದೆಷ್ಟೊ ಮಲೆನಾಡಿನ ಹುಡುಗರ ಪಾಲಿಗೆ ಉಡುಪಿಯೆಂದೊಡನೆ ಬಿಚ್ಚಿಕೊಳ್ಳುವ ಅನುಭವ ಸಾವಿರಾರು!
ನಿಟ್ಟೂರು, ಸಂಪೆಕಟ್ಟೆ, ನಗರ, ಹೊಸನಗರದವರೆಲ್ಲ ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿಗೆಂದು ಘಟ್ಟದ ಕೆಳಗೆ ಇಣುಕಿದರೆ ಮೊದಲು ಕಾಣುವ ನಗರಿಯೇ ಉಡುಪಿ. ಸಾಗರ, ಸಿದ್ದಾಪುರದ ಮಂದಿ ಬಾಳೆಬರೆ ಘಾಟಿ ದಾಟಿ ಹೊಸಂಗಡಿ ಹವಾ ತೆಗೆದುಕೊಂಡು ಕಲಿಯಲು ಹೋಗುವುದು ಕೂಡ ಉಡುಪಿ-ಮಣಿಪಾಲಕ್ಕೆ.
ಅಂದ್ಹಾಗೆ ಮಣಿಪಾಲದಿಂದ ಜೋರಾಗಿ ’ಕೂಹೂ’ ಎಂದರೆ ಉಡುಪಿಗೆ ಕೇಳಿಸುತ್ತೆ. ಉಡುಪಿ ಬೋರ್ಡ್ ಹಾಕಿಕೊಂಡು ಇರುವ ಎಂಜಿಎಂ, ಯುಪಿಎಂಸಿ ಕಾಲೇಜು, ಇಂದ್ರಾಳಿಯೆಲ್ಲ ಒಂಧರ್ಥದಲ್ಲಿ ಇರೋದು ಮಣಿಪಾಲದಲ್ಲಿ. ಇಂದ್ರಾಳಿ ಏರು ಹತ್ತಿದರೆ ಮಣಿಪಾಲ ಸಿಗುತ್ತದೆ. ಎಷ್ಟೋ ಸಲ ನಾವೆಲ್ಲ ಪೆಟ್ಟು ಮುಗಿಸಿ ತಡರಾತ್ರಿಯಲ್ಲಿ ಮಣಿಪಾಲದಿಂದ ಉಡುಪಿಗೆ ಕಾಲ್ನಡಿಗೆಯಲ್ಲಿ ಹೋಗಿದ್ದು ಇದೆ.
’ಅರೆ ಪೆಟ್ಟು!’
ಬಹುಶಃ ಈಗೊಂದು ೧೦ ವರ್ಷದ ಕೆಳಗೆ ನೀವು ಕರಾವಳಿ ಭಾಷೆಯಲ್ಲಿ ಪೆಟ್ಟು ಎಂದರೆ ಬೇರೆಯದೆ ಅರ್ಥ ಬರುತ್ತಿತ್ತು. ’ಉಡುಪಿ-ಮಂಗಳೂರು ಅಂಡರ್‌ವರ್ಲ್ಡ್ ಅಡ್ಡವಂತೆ. ಮುಂಬೈ-ದುಬೈನಲ್ಲಿ ಇರುವ ಡಾನ್‌ಗಳು, ಶೆಟ್ಟರೆಲ್ಲ ಉಡುಪಿಗೆ ಆಗಾಗ ಬರುತ್ತಾರಂತೆ! ಅಲ್ಲಿ ಬದುಕುವುದು ಬಹಳ ಕಷ್ಟವಂತೆ’ ಎಂಬ ಮಾತು ಕೇಳುತ್ತಿತ್ತು. ಆದರೆ ನಾವೆಲ್ಲ ಓದುವ ಹೊತ್ತಿಗೆ ಆ ಪೆಟ್ಟಿನ ಪರಿಭಾಷೆ ಬದಲಾಗಿತ್ತು. ಅಂಥ ದೊಡ್ಡ ಮಟ್ಟದ ಹೊಡೆದಾಟ, ರೌಡಿಸಂ ಎಲ್ಲ ಅಕ್ಷರಶಃ ನಿಶಬ್ಧವಾಗಿತ್ತು. ಎಲ್ಲೊ ವರ್ಷಕ್ಕೊಂದು ಗ್ಯಾಂಗ್‌ವಾರ್ ಆದರೆ ಕರಾವಳಿಯ ಸಂಜೆಯ ಪತ್ರಿಕೆಗಳಿಗೆ ಹಬ್ಬದೂಟ!
ಮತ್ತೆ ಪೆಟ್ಟು ಅಂದ್ರೆ ಎಂಥದ್ದು ಮಾರಾಯ್ರೆ?
’ನಿಮಗೆಂಥ ಮಂಡೆಪೆಟ್ಟಾ?!’ ನೀವು ಉಡುಪಿಯ ಸುತ್ತಮುತ್ತಲಿನ ಜನರ ಬಾಯಲ್ಲಿ ದಿನಕ್ಕೆ ಕನಿಷ್ಟ ಹತ್ತು ಸಲ ಈ ಎಂಬ ಪದವನ್ನು ಕೇಳುತ್ತೀರಿ! ಅಂದಹಾಗೆ ನಾನು ಹೇಳಲಿಕ್ಕೆ ಹೊರಟಿರುವುದು ಈ ಮಂಡೆಪೆಟ್ಟಿನ ವಿಚಾರವೂ ಅಲ್ಲ ಮಾರಾಯ್ರೆ!
ಒಮ್ಮೆ ಅಮ್ಮ ಮನೆಯಿಂದ ಫೋನ್ ಮಾಡಿದಾಗ ’ಪೆಟ್ಟಲ್ಲಿ ಇದ್ದಿ. ಆಮೇಲೆ ಫೋನ್ ಮಾಡ್ತಿ’ ಅಂದು ಬಿಟ್ಟೆ. ಆವತ್ತು ಕೆಲಸ ಕೆಟ್ಟುಹೋಗಿತ್ತು ನೋಡಿ. ಉಡುಪಿಗೆ ಹೋಗಿ ಮಗ ಹಾಳಾಗಿ ಬಿಟ್ಟ. ಪೆಟ್ಟು, ಹೊಡೆದಾಟ ಎಂಬಿತ್ಯಾದಿ ಶುರು ಮಾಡಿಬಿಟ್ಟ ಎಂದು ಅಮ್ಮ ದಂಗಾಗಿ ಹೋಗಿದ್ದರು. ನಿಜ, ಬದುಕಿನಲ್ಲಿ ಹಾಳಾಗಲೇಬೇಕು ಎಂದು ನಿರ್ಧರಿಸಿದವರಿಗೂ ಈ ಉಡುಪಿ-ಮಣಿಪಾಲಕ್ಕಿಂತ ಒಳ್ಳೆ ಜಾಗ ಸಿಗಲಿಕ್ಕಿಲ್ಲ. ಮಣಿಪಾಲದ ಎಂಡ್‌ಪಾಯಿಂಟ್‌ನ್ನು ಅವರೆಲ್ಲ ಮರೆಯಲ್ಲಿಕ್ಕಿಲ್ಲ! ಆದ್ರೆ ಇದೇ ಉಡುಪಿ ನನ್ನಂಥ ಲಕ್ಷಾಂತರ ಮಂದಿಯ ಬದುಕನ್ನು ಉದ್ದಾರ ಮಾಡಿದೆ ಎಂಬಷ್ಟು ಕೃತಜ್ಞ ನಾನು.
ಭಾಸ್ಕರ ಭಟ್ರು, ಪ್ರಭಾಕರ್ ಭಟ್ರು, ರಮೇಶ, ರಾಜಾ, ಡಯಾನ ಕ್ಯಾಟೆರಿಂಗ್…ಪೆಟ್ಟಿಗೆ ಸೈ ಎನಿಸಿಕೊಂಡ ಹೆಸರುಗಳಿವು. ಬಹುಶಃ ಈ ಕ್ಯಾಟೆರಿಂಗ್ ಅನ್ನೋ ಪದ ಕಿವಿಗೆ ಬಿದ್ದ ಮೇಲೆ ಪೆಟ್ಟಿನ ಅರ್ಥ ತಿಳಿದಿರಬಹುದು. ಮದುವೆ, ಉಪನಯನದಿಂದ ಹಿಡಿದು ಬೊಜ್ಜದವರೆಗೆ ಎಲ್ಲ ಬಗೆಯ ಕಾರ್ಯಕ್ರಮಗಳಿಗೂ ’ಊಟ ಬಡಿಸುವ ವ್ಯವಸ್ಥೆ’ಯನ್ನು ಕರಾವಳಿ ಭಾಷೆಯಲ್ಲಿ ಸ್ವಚ್ಛಂದವಾಗಿ ’ಪೆಟ್ಟು’ ಎನ್ನುತ್ತಾರೆ.
ಈ ಪೆಟ್ಟಿನ ಜೊತೆಯಲ್ಲೆ ಅಂಟಿಕೊಂಡ ಮತ್ತೊಂದು ವಿಸ್ಮಯ ಕೊಂಕಣಿ ಹುಡುಗಿಯರು! ಕೊಂಕಣಿ ಹುಡುಗಿಯರ ವಿಚಾರ ಬಂದಾಗ ರಥಬೀದಿಯನ್ನು ಇಲ್ಲಿಗೆ ಎಳೆದು ತರದಿರಲು ಸಾಧ್ಯವೇ ಇಲ್ಲ. ’ಅಷ್ಟ ಮಠಗಳ ಕಟ್ಟೆಯ ಮೇಲೆ ಕುಳಿತು ಲೈನ್ ಹೊಡೆಯುವುದು’ ಎಂಬ ಪರಿಕಲ್ಪನೆಯನ್ನು ನಮಗೆಲ್ಲ ಕಲಿಸಿದ್ದೆ ಈ ಕೊಂಕಣಿ ಹುಡುಗಿಯರು.
ಎಲ್ಲ ಸರಿ ಈ ಪೆಟ್ಟಿಗೂ ಕೊಂಕಣಿ ಹುಡುಗಿಯರಿಗೂ ಏನು ಸಂಬಂಧ? ಇದೊಂಥರ ಉಡುಪಿ-ಮಣಿಪಾಲದ ಬಾಂಧವ್ಯವಿದ್ದಂತೆ! ಇಡೀ ಉಡುಪಿ-ಮಣಿಪಾಲವನ್ನು ಪೂರ್ತಿಯಾಗಿ ಜಾಲಾಡಿದರೆ ಹೆಚ್ಚು ಸಿಗುವುದು ಮಾಧ್ವರು ಮತ್ತು ಕೊಂಕಣಿಗರು. ರಥಬೀದಿ ಬಿಟ್ಟರೆ ಸಿಗುವುದು ವೆಂಕಟರಮಣಸ್ವಾಮಿ ದೇವಸ್ಥಾನ.
’ಉಡುಪಿ ಹೋಟೆಲ್‌ಗಳು’ ವಿಶ್ವದಲ್ಲೇ ಜನಪ್ರಿಯ. ಆದ್ರೆ ನೀವು ನಿಜವಾಗ್ಲು ಅಲ್ಲಿನ ಊಟದ ರುಚಿ ನೋಡಬೇಕು ಅಂದ್ರೆ ಉಡುಪಿ-ಮಣಿಪಾಲದ ಯಾವುದಾದ್ರೊಂದು ಮದ್ವೆ ಊಟ ಮಾಡಬೇಕು. ರಥಬೀದಿಯ ಕೃಷ್ಣಾಪುರ, ಪುತ್ತಿಗೆ ಮಠದ ಛತ್ರದಿಂದ-ಅಂಬಲ್ಪಾಡಿ ದೇವಸ್ಥಾನ, ಹೈವೆಯ ಶ್ಯಾಮಿಲಿವರೆಗೆ, ಪಿಪಿಸಿ ಬಳಿಯ ಎಲ್‌ವಿಟಿ-ಅಂಬಾಗಿಲಿನ ಎಲ್‌ವಿಟಿವರೆಗೆ, ಇಂದ್ರಾಳಿಯ ಶಾರದಾ ಕಲ್ಯಾಣಮಂಪದಿಂದ-ಉದ್ಯಾವರ, ಹಿರಿಯಡ್ಕದವರೆಗೆ…ಒಂಥರ ಬೆಂಗಳೂರಿನಲ್ಲಿ ಬಾರ್‌ಗಳು ಸಿಕ್ಕಂತೆ ಉಡುಪಿ-ಮಣಿಪಾಲದಲ್ಲಿ ಕಲ್ಯಾಣ ಮಂಟಪಗಳು ಸಿಗುತ್ತವೆ.
ಒಂದು ಕಾಲದಲ್ಲಿ ನಮ್ಮನ್ನೆಲ್ಲ ಹೊಟ್ಟೆ ಹೊರೆದಿದ್ದು, ಸಾಕಿದ್ದು ಇದೇ ಕಲ್ಯಾಣ ಮಂಟಪಗಳು ಮತ್ತು ಪೆಟ್ಟು. ಮಲೆನಾಡಿನಿಂದ ಉಡುಪಿಗೆಂದು ನಾವೆಲ್ಲ ಓದಲಿಕ್ಕೆ ಬರುತ್ತಿದ್ದಿದ್ದಕ್ಕೆ ಪ್ರಮುಖ ಕಾರಣ ಉಡುಪಿಯಲ್ಲಿ ಶಿಕ್ಷಣ ತುಂಬಾ ಅಗ್ಗ ಮತ್ತು ಅದ್ಭುತ. ಈಗೊಂದು ೧೦ ವರ್ಷದ ಕೆಳಗೆ ಮಲೆನಾಡಿನ ಪ್ರತಿ ಮನೆಯಲ್ಲೂ ಬಡತನ. ಇವತ್ತಿನಂತೆ ಪ್ರಿಕೆಜಿ-ಎಲ್‌ಕೆಜಿಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಮಕ್ಕಳನ್ನು ಓದಿಸುವ ಸ್ಥಿತಿಯಲ್ಲಿ ಯಾರು ಇರಲಿಲ್ಲ ಮತ್ತು ಅಷ್ಟು ಹುಚ್ಚರು ಆಗಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆ ಫಲಿತಾಂಶ ಬರದಿದ್ದರೆ ’ಮನೆಯಲ್ಲಿ ಸಗಣಿ ತೆಗೆದುಕೊಂಡು, ಸೋಗೆ ಬಾಚಿಕೊಂಡು’ ಇರು ಮಗನೆ ಎನ್ನುತ್ತಿದ್ದರು. ಆಗ ನಮಗೆಲ್ಲ ಕಾಣಿಸುತ್ತಿದ್ದಿದ್ದು ಉಡುಪಿಯ ಅಷ್ಟಮಠಗಳು ನೀಡುವ ಉಚಿತ ವಸತಿ ಮತ್ತು ಕೃಷ್ಣಮಠದ ಉಚಿತ ಊಟ. ನಾವೆಲ್ಲ ಯಾವತ್ತು ಅದಕ್ಕೆ ಚಿರಋಣಿಗಳು.
ನೀವು ಇದನ್ನು ಒಪ್ಪದಿರಬಹುದು. ಇದಕ್ಕೆ ಜಾತಿಯ ಲೇಪ ಅಂಟಿಸಿ ಗಲಾಟೆ ಮಾಡಬಹುದು. ಆದ್ರೆ ನಾನು ಮಾತ್ರ ತುಂಬಾ ನೋವಿನಿಂದ ಹೇಳ್ತೀನಿ. ಕೆಳವರ್ಗದವರಿಗೆ ಪ್ರತಿ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಉಚಿತ ಹಾಸ್ಟೆಲ್‌ಗಳಿವೆ. ಆದರೆ ಮೇಲ್ವರ್ಗದ ಒಬ್ಬ ಬಡ ಜಾಣ ಓದ್ತೀನಿ ಅಂದ್ರೆ ಆತನಿಗಿರುವ ಆಸರೆ ಉಡುಪಿ ಮತ್ತು ಉಜಿರೆಗಳು ಮಾತ್ರ. ಇದು ನುಂಗಲು ಕಹಿಯಾದ್ರು ಇವತ್ತಿಗೂ ಸತ್ಯ. ಬಹುಶಃ ನನ್ನಲ್ಲಿ ಉಡುಪಿ ಎಂಬುದು ಇವತ್ತಿಗೂ ಎದೆಯಲ್ಲಿ ಭಾರ ಹುಟ್ಟು ಹಾಕುವುದಕ್ಕೆ ಇದು ಒಂದು ದೊಡ್ಡ ಕಾರಣ.
ಹೋಗ್ಲಿ ಬಿಡಿ ನಾವು ಹುಡುಗಿ, ಲೈನು, ರಥಬೀದಿಯಲ್ಲಿದ್ದಾಗ ಇಂಥ ಗಂಭೀರ ವಿಷಯಗಳು ಬೇಡ! ನಮಗೆಲ್ಲ ಪೆಟ್ಟು ಎಂಬುದು ಪಾರ್ಟ್‌ಟೈಂ ಜಾಬ್. ಫುಲ್‌ಟೈಂ ಸಂಪಾದನೆಯ ಮಾರ್ಗ. ಸತ್ಯವಾಗಲು ನಾನಂತು ಪಿಪಿಸಿಯಲ್ಲಿ ಡಿಗ್ರಿಯ ೫,೫೦೦ರೂ ಶುಲ್ಕವನ್ನು ಮೂರು ವರ್ಷವೂ ಈ ಪೆಟ್ಟಿನ ಸಂಪಾದನೆಯಿಂದಲೆ ತುಂಬಿರುವೆ. ನನ್ನಂಥ ಹಲವರದ್ದು ಇದೇ ಕಥೆ. ಆವತ್ತು ಮಧ್ಯಾಹ್ನದ ಊಟ ಬಡಿಸಿದ್ರೆ ೧೧೦ರೂ. ಕೊಡುತ್ತಿದ್ದರು. ರಾತ್ರಿ ಊಟಕ್ಕೂ ಸುಮಾರು ಇಷ್ಟೆ ಹಣ. ಬೆಳಿಗ್ಗೆ ತಿಂಡಿಗೆ ೪೦-೫೦ರೂ. ನಾವೆಲ್ಲ ಬೆಳಿಗ್ಗೆ ತಿಂಡಿ ಬಡಿಸಲು ಹೋಗುತ್ತಿದ್ದಿದ್ದು ರಜಾದಿನಗಳಲ್ಲಿ ಮಾತ್ರ. ಕಾಲೇಜು ೪.೩೦ಕ್ಕೆ ಮುಗಿಯುತ್ತಿದ್ದರಿಂದ ರಾತ್ರಿ ಊಟ ಬಡಿಸುವುದು ಸಮಸ್ಯೆ ಆಗುತ್ತಿರಲಿಲ್ಲ.
ಆದ್ರೆ ದೊಡ್ಡ ಸವಾಲು ಇದ್ದಿದ್ದು ಮಧ್ಯಾಹ್ನದ ಪೆಟ್ಟಿನಲ್ಲಿ. ನಮಗೆ ಪಿಪಿಸಿಯಲ್ಲಿ ಮಧ್ಯಾಹ್ನನದ ಕೊನೆ ಅವಧಿ ವಾರದಲ್ಲಿ ೩ ದಿನ ರಮೇಶಣ್ಣನ ಸಂಸ್ಕೃತ ಕ್ಲಾಸು. ಹೀಗಾಗಿ ಶೇ.೬೫ ಅಂಟೆಡೆನ್ಸ್‌ಗಿಂತ ಮಿಕ್ಕೆಲ್ಲ ಕ್ಲಾಸುಗಳೆಲ್ಲ ಬಂಕು. ಇನ್ನು ಊಟದ ನಂತರದ ಮೊದಲ ಅವಧಿ ಕೃಷ್ಣಮೂರ್ತಿಯವರ ಇಂಗ್ಲಿಷ್. ಪೆಟ್ಟು ಇರಲಿ, ಇರದಿರಲಿ ಅವರ ಕ್ಲಾಸ್‌ಗೆ ಹೋಗಿದ್ದು ಅಷ್ಟರಲ್ಲೆ ಇದೆ ಬಿಡಿ! ಸಮಸ್ಯೆಯಾಗುತ್ತಿದ್ದಿದ್ದು ಒಂದೊಂದು ಸಲ ಇವರೆಡು ಅವಧಿಯಲ್ಲಿ ಒಂದು ರಾಘು ಸರ್ ಗಣಿತ ಅಥವಾ ಎ.ಪಿ.ಭಟ್ಟರ ಫಿಸಿಕ್ಸ್ ಬಂದುಬಿಡುತ್ತಿತ್ತು. ಇನ್ನೂ ಮಜ ಅಂದ್ರೆ, ನಾವು ಈ ಕ್ಲಾಸ್‌ಗೂ ಬಂಕ್ ಹಾಕಿ ಪೆಟ್ಟಿಗೆ ಹೋಗುತ್ತಿದ್ದೆವು. ಯಾವುದೋ ಊಟದ ಪಂಕ್ತಿಯಲ್ಲಿ ನಡುಮಧ್ಯದಲ್ಲಿ ರಾಘು ಸಾರ್ ಪ್ರತ್ಯಕ್ಷ! ಅಲ್ಲಿಗೆ ನಮ್ಮ ಕಥೆ ಫಿನಿಷ್. ಮುಂದಿನ ಕ್ಲಾಸ್‌ನಲ್ಲಿ ನನಗೊಂದು ಪ್ರಶ್ನೆ ಕಟ್ಟಿಟ್ಟ ಬುತ್ತಿ! ಜೊತೆಗೆ ನಿನ್ನೆ ಪೆಟ್ಟಿಗೆ ಹೋಗಿದ್ದಕ್ಕೆ ಒಂದಷ್ಟು ಟಾಂಟ್! ಇದು ಮೂರು ವರ್ಷಗಳಲ್ಲಿ ಅದೆಷ್ಟು ಸಲ ಆಗಿದೆಯೋ ಗೊತ್ತಿಲ್ಲ. ರಮೇಶಣ್ಣ ಕೊಠಡಿಗೆ ಕರೆದು ಅದೆಷ್ಟು ಸಲ ಬೈದಿದ್ದಾರೊ ಲೆಕ್ಕವಿಲ್ಲ!
ಕಾಲೇಜು ದಿನಗಳು ಅಂದ್ರೆ ಹಾಗೆ. ಪ್ರತಿಯೊಬ್ಬರಿಗು ಅವರ ಕಲ್ಪನೆಯ, ಕನಸಿನ ಒಂದೊಂದು ಹುಡುಗಿ. ಕೆಲವರಿಗೆ ೩-೪! ನಮಗೆ ನಾವೇ ಅಂದುಕೊಂಡು ಯಾರ‍್ಯಾರನ್ನೋ ಲವ್ ಮಾಡುವುದು. ಇಂಥವರಿಗೆ ವೇದಿಕೆ ರಥಬೀದಿ. ಆವತ್ತಿನ ಕಾಲಕ್ಕೆ ಹೆಚ್ಚಾಗಿ ಚೆಂದ ಇರುತ್ತಿದ್ದಿದ್ದು, ಸ್ವಲ್ಪ ಮಾಡ್ ಆಗಿ ಬರುತ್ತಿದ್ದವರಲ್ಲಿ ಹೆಚ್ಚಿನವರು ಕೊಂಕಣಿ ಹುಡುಗಿಯರು. ಊರಿಗೆ ಬಂದವನು ನೀರಿಗೆ ಬರದೇ ಇರುವನೆ ಎನ್ನುವಂತೆ ಎಲ್‌ವಿಟಿಗೆ ಬಂದು ವೆಂಕಟರಮಣನಿಗೆ ಕೈಮಗಿದವರು ರಥಬೀದಿಗೆ ಬರದೇ ಇರುವರಾ?! ನಮ್ಮ ಹುಡುಗರು ಆ ಹುಡುಗಿಯರನ್ನು ನೋಡಲಿಕ್ಕೆ ಅಂತ ಅಷ್ಟ ಮಠದ ಕಟ್ಟೆಯ ಮೇಲೆ ಒಂದೊಂದು ಖಾಯಂ ಜಾಗ ಮಾಡಿಕೊಂಡಿರುತ್ತಿದ್ದರು. ಆ ಹುಡುಗಿಯರಿಗೂ ಇವರು ಲೈನ್ ಹಾಕುವುದು, ಕಿಚಾಯಿಸುವುದು ಎಲ್ಲವೂ ಗೊತ್ತಿರುತ್ತಿತ್ತು(ಇದು ಸಕ್ಸಸ್ ಆಗಿ ರಿಯಲ್ ಲವ್ ಆಗಿದ್ದು ಬೆರಳೆಣಿಕಯಷ್ಟು ಮಾತ್ರ)ಪ್ರತಿದಿನ ಸಂಜೆ ಎಲ್ಲ ಮಠಗಳು ಎದುರು ಒಂದಷ್ಟು ಹುಡುಗರು ಈ ರೀತಿ ನೋಡಲು ಸಿಗುತ್ತಿದ್ದರು. ನಮಗೆಲ್ಲ ಈ ಹುಡುಗ-ಹುಡುಗಿಯರ ಸಂಜ್ಞೆಯ ಸಂಭಾಷಣೆ ನೋಡುವುದೇ ಖುಷಿ. ಯಾಕಂದ್ರೆ ನನ್ನ ಹುಡುಗಿ ಇದ್ದಿದ್ದು ರಥಬೀದಿಯಿಂದ ೨೦ ಕಿಲೋಮೀಟರ್ ದೂರದಲ್ಲಿ! ಆಕೆ ಒಂದು ದಿನವೂ ರಥಬೀದಿಗೆ ಬಂದಿದ್ದನ್ನು ನಾ ಕಾಣಲಿಲ್ಲ!!!
ಕೊಂಕಣಿ-ಮಾಧ್ವ, ಹುಡುಗಿ-ಪೆಟ್ಟು…ಉಡುಪಿಯೆಂದರೆ ಇವಿಷ್ಟೇನಾ? ಖಂಡಿತ ಇಲ್ಲ. ಇದರಾಚೆಗಿನ ಉಡುಪಿ ಸಾಕಷ್ಟಿದೆ ಮತ್ತು ಸುಂದರವಾಗಿದೆ. ವಿದ್ಯಾರ್ಥಿ ಜೀವನವೇ ಒಂದು ರೀತಿಯಲ್ಲಿ ಬದುಕಿನ ಸುವರ್ಣಯುಗ. ಮದುವೆಯಾಗಿ, ಲೈಫ್‌ನಲ್ಲೊಂದು ಹೆಂಡ್ತಿ ಬಂದು, ದಿನ ನಿತ್ಯದ ಜಂಜಾಟದ ನಡುವೆ ಮನಸ್ಸಿಗೇನಾದ್ರು ಒಂಚೂರು ರಿಲ್ಯಾಕ್ಸ್ ನೀಡುವುದು ಅಂತಿದ್ದರೆ, ಈ ದಿನಗಳ ನೆನಪು ಮಾತ್ರ.
ಉಡುಪಿಯ ಸೊಳ್ಳೆ ಮತ್ತು ಜನರ ಬಗ್ಗೆ ಹೇಳಲೇ ಬೇಕು. ಇಲ್ಲಿ ಅತ್ಯಂತ ಉಪದ್ರವಿ ಎಂದರೆ ಸೊಳ್ಳೆಗಳು. ಇಲ್ಲಿನ ಸೆಕೆಗೋ ಅಥವಾ ನಗರಸಭೆಯ ಅಸಡ್ಡೆಯಿಂದಾದ ಕೊಳಕಿಗೋ ಉಡುಪಿಯಲ್ಲಿ ವಿಪರೀತ ಸೊಳ್ಳೆ. ನಿಮಗೆ ಉಡುಪಿಗೆ ಕಾಲಿಟ್ಟ ತಕ್ಷಣ ಭಯ ಹುಟ್ಟಿಸುವ ಸಂಗತಿಯೆಂದರೆ ಇಲ್ಲಿನ ’ಆನೆಕಾಲು ರೋಗ’ ಪೀಡಿತರು. ಅವರ ಕಾಲನ್ನೊಮ್ಮೆ ನೀವು ನೋಡಿದ್ರೆ ಖಂಡಿತಾ ಉಡುಪಿಯಲ್ಲಿ ಇರೋದು ಬೇಡ ಅನ್ನಿಸುತ್ತೆ. ಎದೆ ಝಲ್ ಅನ್ನಿಸುತ್ತೆ. ಅದನ್ನು ಬಿಟ್ಟರೆ, ಉಡುಪಿಯಲ್ಲಿದ್ದು ವರ್ಷಕ್ಕೊಮ್ಮೆ ಮಲೇರಿಯಾ ಬರಲಿಲ್ಲ ಅಂದ್ರೆ ಆ ವ್ಯಕ್ತಿಯ ಹುಟ್ಟಿನಲ್ಲೇ ಏನೋ ದೋಷವಿದೆ ಎಂದರ್ಥ! ಅಷ್ಟರ ಮಟ್ಟಿಗೆ ಸೊಳ್ಳೆಗಳು ಈ ಅವಳಿ ನಗರವನ್ನು ಆಳುತ್ತವೆ.
ಅತ್ಯಂತ ನಿರುಪದ್ರವಿಗಳೆಂದರೆ ಇಲ್ಲಿನ ಜನ. ನಮ್ಮ ಅದಮಾರು ಮಠದಿಂದ ಪಿಪಿಸಿಗೆ ಸುಮಾರು ೫ ನಿಮಿಷದ ಹಾದಿ. ಆ ಹಾದಿ ಒಂಥರ ಕೊಂಕಣಿ ಓಣಿ. ಜಪಾನ್ ಸೂರ್ಯ ಮುಳಗದ ನಾಡಂತೆ. ಹಾಗೆ ಈ ಗಲ್ಲಿ ಸೂರ್ಯಕಿರಣ ಮನೆಯೊಳಗೆ ಪ್ರವೇಶಿಸದ ನಾಡು! ಈ ಮನೆಗಳ ಬಾಗಿಲು ತೆರೆಯುವುದು ಬಹುಶಃ ನವರಾತ್ರಿ ಶಾರಾದದೇವಿ ಉತ್ಸವವಂದು ಮಾತ್ರ. ಮಿಕ್ಕ ದಿನಗಳಲ್ಲಿ ಆ ಮನೆಗಳಲ್ಲಿ ಜನ ಇದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಬಹುಶಃ ಇಲ್ಲಿನ ಜನ ಜೀವನ ಪೂರ್ತಿ ದುಡ್ಡು ಉಳಿಸಿ ಮದ್ವೆಗೆ ಖರ್ಚು ಮಾಡುತ್ತಾರೇನೋ ಎಂದು ಎಷ್ಟೋ ಸಲ ನನಗನ್ನಿಸಿದ್ದಿದೆ. ಹಾಗೆ ಮಾಡಿದ ಮದ್ವೆಯಲ್ಲಿ ಇವತ್ತಿನಂತೆ ಡೈವರ್ಸ್ ಆಗದಿದ್ದರೆ, ಮದ್ವೆ ಮಾಡಿದವ ಅಪ್ಪ-ಅಮ್ಮ ಬಚಾವ್. ಇಲ್ಲವಾದ್ರೆ ಜೀವನ ಪೂರ್ತಿ ಮಾಡಿದ ಸೇವಿಂಗ್ ಯಜ್ಞ ’ಸ್ವಾಹಾ!’
ಏಕಾದಶಿ, ಜೀವನದ ಹಸಿವನ್ನೆಲ್ಲ ನೀಗಿಸುವ ದಿನ. ಯಾಕಂದ್ರೆ ಏಕಾದಶಿ ದಿನ ಕೃಷ್ಣ ಮಠದಲ್ಲಿ ಊಟವಿಲ್ಲ. ಆವತ್ತು ನಾವೆಲ್ಲ ಜೈಲಿನಿಂದ ಬಿಡುಗಡೆಯಾದ ಹಕ್ಕಿಯಂತೆ. ಒಂದು ಗುಟುಕಿನಲ್ಲಿ ೨೦-೩೦ ಚಪಾತಿ ತಿಂದು ಕಾಮತ್ ಹೊಟೇಲ್‌ನ ಅನ್‌ಲಿಮಿಟೆಡ್ ಊಟಕ್ಕೆ ಕತ್ತರಿ ಹಾಕಿಸಿದ ಶಾಪ ಖಂಡಿತ ಇವತ್ತಿಗೂ ನಮ್ಮ ಮೇಲಿದೆ! ಕಿದಿಯೂರು, ಮಿತ್ರಸಮಾಜ, ರಥಬೀದಿಯ ಆಚಾರ್ಯ ದರ್ಶಿನಿ ಮರೆಯಲಾಗದ ಬುತ್ತಿಗಳು.
ಊಹುಂ, ಉಡುಪಿಯೆಂದರೆ ಇವಿಷ್ಟೆ ಅಲ್ಲ. ಈ ಕಥೆಯೂ ಕರಾವಳಿ ಜನರ ’ಉದಯವಾಣಿ ಪತ್ರಿಕೆ ಇದ್ಹಂಗೆ! ಇಲ್ಲಿನ ಜನಕ್ಕೆ ಉದಯವಾಣಿ ಪತ್ರಿಕೆ ಇಲ್ಲದೆ ಖಂಡಿತ ಇವತ್ತಿಗೂ ಬೆಳಗಾಗುವುದಿಲ್ಲ. ಇದ್ನೆಲ್ಲ ಹೇಳಲು ಕುಳಿತರೆ ಪದಗಳು ಸಿಗೋದಿಲ್ಲ. ಸಮುದ್ರದ ನೀರಿನಂತೆ ಮೊಗೆದಷ್ಟು ಮುಗಿಯದ ಈ ನಗರಿಯಲ್ಲಿ ರಥಬೀದಿಯ ಉತ್ಸವ ನನ್ನಂಥವನ ಪಾಲಿಗೆ ಸದಾ ಕಣ್ಣಂಚಿನಲ್ಲಿ ಉಳಿಯುತ್ತೆ…

ಪೋರ್ನ್‌ ಬ್ಯಾನ್‌ ರಾಷ್ಟ್ರೀಯ ವಿಪತ್ತು ಎಂಬಂತೆ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಫೇಸ್ಬುಕ್‌, ವಾಟ್ಸಪ್‌ನಲ್ಲಿ ಒಂದಷ್ಟು ಜೋಕುಗಳು ಹರಿದಾಡುತ್ತಿವೆ. ಪರ-ವಿರೋಧದ ನಿಲುವುಗಳು ಇದ್ದೇ ಇದೆ! ನೀವು ಯಾವುದೇ ಸೆಕ್ಸ್‌ ವೀಡಿಯೋ ನೋಡಿದ್ರೂ, ಅದು ಸಹಜವಾಗಿದ್ದಲ್ಲ, ಸಂಪಾದನೆಗೊಂಡ ಆವೃತಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಕ್ಯಾಮೆರ ಫ್ರೇಮ್‌ಗಳು, ಬದಲಾಗುವ ಸ್ಥಳಗಳು, ಮ್ಯೂಸಿಕ್‌ನಲ್ಲಿನ ವ್ಯತ್ಯಯಗಳು ಎಲ್ಲವೂ ಕೂಡ ಇದೊಂದು ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋನಂತೆ ಎಡಿಟೆಡ್‌ ಆವೃತಿ ಮತ್ತು ಪೂರ್ತಿ ಸ್ಕ್ರಿಪ್ಟೆಡ್‌ ಎಂಬುದನ್ನು ಸೂಚಿಸುತ್ತದೆ.
ಜಗತ್ತಿಗೆ ಚಲಿಸುವ ಚಿತ್ರಗಳ ಪರಿಕಲ್ಪನೆ ಬಂದಾಗಿನಿಂದ ಈ ಪೊರ್ನೊಗ್ರಫಿಯ ಇತಿಹಾಸ ಸಿಗುತ್ತೆ. ಅಂದ್ರೆ ೧೮೯೦ರ ದಶಕದಿಂದಲೆ ಈ ಉದ್ಯಮ ಆರಂಭವಾಗಿದ್ದು ಎಂಬ ಅನುಮಾನದಿಂದ ಗೂಗಲ್‌ನಲ್ಲಿ ಇಂಥ ಚಿತ್ರಗಳು ಎಲ್ಲಿ ತಯಾರಾಗುತ್ತವೆ, ಹೇಗೆ ತಯಾರಾಗುತ್ತವೆ, ಇವುಗಳ ಹಕ್ಕಿಕತ್ತು ಏನು ಎಂಬ ಕುರಿತು ಒಂದಷ್ಟು ದಿನದ ಹಿಂದೆ ಸುಮ್ಮನೆ ಜಾಲಾಡಿದ್ದೆ.
ಈ ಪೋರ್ನ್‌ ವೀಡಿಯೋ ಉತ್ಪಾದಕ ಪ್ರೊಡೆಕ್ಷನ್‌ ಹೌಸ್‌ಗಳು ಮುಖ್ಯವಾಗಿ ಬೇರು ಬಿಟ್ಟಿರುವುದು ಯೂರೋಪ್‌ ಮತ್ತು ಅಮೆರಿಕದಲ್ಲಿ. ಒಂದು ಅಂದಾಜಿನ ಪ್ರಕಾರ ೨೦೧೨ರವೇಳೆಗೆ ಈ ನೀಲಿಚಿತ್ರ ಜಗತ್ತಿನ ವಾರ್ಷಿಕ ಆದಾಯ ೧೫-೨೦ ಶತಕೋಟಿ ಡಾಲರ್‌. ಅಮೆರಿಕದ ೨ ಪ್ರಮುಖ ವೆಬ್‌ಸೈಟ್‌ಗಳು ವರ್ಷಕ್ಕೆ ಸುಮಾರು ೪ ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆಸುತ್ತಿವೆ. ಅಲ್ಲಿಗೆ ಇದೊಂದು ವ್ಯವಸ್ಥಿತ ಉದ್ಯಮ ಎಂಬುದನ್ನು ಖಾತ್ರಿಪಡಿಸಿಕೊಂಡು ಇಂಟರ್‌ನೆಟ್‌ನಲ್ಲಿ ಜಾಲಾಡುತ್ತ ಹೋದಾಗ ನನಗೆ ಇಂಗ್ಲಿಷ್‌ನ ೨ ಅತ್ಯದ್ಭುತ ಲೇಖನ ಸಿಕ್ಕಿತ್ತು.
ಮುಖ್ಯವಾಗಿ ಅಮೆರಿಕದ ಸ್ಯಾನ್‌ ಫೆರ್ನಾಂಡೊ ವ್ಯಾಲಿ ಇಂಥ ಚಿತ್ರಗಳನ್ನು ಉತ್ಪಾದಿಸುವ ಅತಿ ಹೆಚ್ಚು ಪ್ರೊಡೆಕ್ಷನ್‌ ಹೌಸ್‌ಗಳನ್ನು ಹೊಂದಿರುವ ಅಡ್ಡ. ಅಲ್ಲಿಗೆ ಭೇಟಿ ನೀಡುವ ಲೇಖಕಿಯೊಬ್ಬಳು ಅಲ್ಲಿನ ಇಡೀ ಜಗತ್ತನ್ನು ವಿವರಿಸಿ ಒಂದು ಅದ್ಭುತವಾದ ಲೇಖನ ಬರೆಯುತ್ತಾಳೆ. ಇಡೀ ಪೋರ್ನ್‌ ಜಗತ್ತು ಒಂದು ಹಾಲಿವುಡ್‌ ಸಿನಿಮಾ ಉದ್ಯಮದಂತೆ ಎಂಬುದನ್ನು ಆಕೆ ಬರೆಯುತ್ತಾಳೆ. ಅಲ್ಲೊಬ್ಬ ನಿರ್ದೇಶಕ ಇರುತ್ತಾನೆ, ಆತನಿಗೆ ಸಹಾಯಕರು ಇರುತ್ತಾರೆ. ಸ್ಕ್ರಿಪ್ಟ್‌ ಇರುತ್ತೆ. ಕಾಲ್‌ಶೀಟ್‌ ಕೊಟ್ಟ ಸಮಯಕ್ಕೆ ಪೋರ್ನ್‌ ಮಾಡೆಲ್‌ಗಳು ಬರುತ್ತಾರೆ. ಶೂಟಿಂಗ್‌ ಮುಗಿಸಿಕೊಂಡು ಹೋಗುತ್ತಾರೆ ಎಂಬುದರಿಂದ ಹಿಡಿದು ಯಾವ್ಯಾವ ಫ್ರೇಮ್‌ಗಳು ಎಲ್ಲಿ, ಹೇಗೆ ಶೂಟ್ ಆಗುತ್ತೆ ಎಂಬುದನ್ನು ಆಕೆ ವಿವರಿಸುತ್ತಾಳೆ.
ಇದಿಷ್ಟು ಕಾನೂನಿನ ಅಂಗೀಕೃತ ಚೌಕಟ್ಟಿನಲ್ಲಿ ನಡೆಯುವ ನೀಲಿ ಚಿತ್ರ ಉದ್ಯಮದ ಕಥೆ. ಅಂದ್ರೆ ಈ ಚಿತ್ರ ನಿರ್ಮಾಣ ಸಂಸ್ಥೆಗಳು ಅಮೆರಿಕ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಇಲ್ಲಿ ಬರುವ ನಟ, ನಟಿ, ನಿರ್ದೇಶಕರೆಲ್ಲರಿಗೆ ಸಂಭಾವನೆ ಕೊಡುತ್ತವೆ. ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ಇದೊಂದು ಹೊಟ್ಟೆ ಪಾಡಿನ ಉದ್ಯಮ. ಕನ್ನಡದಲ್ಲಿ ದಿನಕ್ಕೆ ೫೦ ಧಾರಾವಾಹಿಗಳು ಓಡುವಂತೆ ಅಲ್ಲಿಯೂ ದಿನಕ್ಕೆ ನೂರಾರು ಪೋರ್ನ್‌ ಚಿತ್ರಗಳ ಶೂಟಿಂಗ್‌ ನಡೆಯುತ್ತದೆ. ವೆಬ್‌ಸೈಟ್‌, ಡಿವಿಡಿ, ಪ್ರಿಂಟ್‌ ಮುಂತಾದ ಮಾಧ್ಯಮಗಳ ಮೂಲಕ ಅವು ಬಿತ್ತರಗೊಳ್ಳುತ್ತವೆ. ಅದ್ರಿಂದ ಸಂಸ್ಥೆ ಆದಾಯ ಗಳಿಸುತ್ತದೆ. ಹೀಗಾಗಿ ಇಲ್ಲಿ ದುಡ್ಡಿಗಾಗಿ ಅಥವಾ ಚಪಲ ತೀರಿಸಿಕೊಳ್ಳಲು ಇಷ್ಟ ಇದ್ದವರು ಮಾತ್ರ ಕೆಲಸ ಮಾಡುತ್ತಾರೆ.
ಆದರೆ ಇದೇ ಜಗತ್ತಿನ ಇನ್ನೊಂದು ಮುಖವಿದೆ. ಅದು ಮಾಫಿಯ ಜಗತ್ತು. ತೆರಿಗೆ ರಹಿತವಾಗಿ, ಕಾನೂನುಬಾಹೀರವಾಗಿ ನಡೆಯುವ ಜಗತ್ತಿದು. ಇಲ್ಲಿ ಹೆಣ್ಣುಮಗಳೊಬ್ಬಳಿಗೆ ಡ್ರಗ್‌ ನೀಡಿಯೋ, ಕಿಡ್ನಾಪ್‌ಮಾಡಿಯೋ, ಬೆದರಿಕೆಯಿಂದಲೊ ನೀಲಿ ಚಿತ್ರಗಳು ತಯಾರಾಗುತ್ತವೆ. ಯಾವುದೋ ಹೊಟೇಲ್‌ನಲ್ಲಿ, ಬಚ್ಚಲು ಮನೆಯಲ್ಲಿ ಸಿಸಿ ಕ್ಯಾಮೆರ ಇಟ್ಟು ಶೂಟಾದ ಅಸ್ಪಷ್ಟವಾದ, ಲೈಟಿಂಗ್‌ ಇಲ್ಲದ, ಎಡಿಟಿಂಗ್ ಇಲ್ಲದ ವೀಡಿಯೋಗಳು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತವೆ! ಇದೊಂದು ಅಪಾಯಕಾರಿ ಪ್ರಪಂಚ. ಅನೇಕ ಹೆಣ್ಣುಮಕ್ಕಳ ಬದುಕನ್ನು ಬೀದಿಗೆ ತರುವ ಪ್ರಪಂಚ. ಇದ್ರಿಂದ ಸರ್ಕಾರಕ್ಕೆ ನಯಾ ಪೈಸೆ ಆದಾಯವೂ ಬರುವುದಿಲ್ಲ. ಅಮೆರಿಕ ಸರ್ಕಾರ ಇಂಥವರನ್ನು ಹಿಡಿದು, ಹಿಡಿದು ಬುಟ್ಟಿಗೆ ತುಂಬುತ್ತಿದೆ.
ನಾನು ಮೇಲೆ ಮಾತಾಡಿದ ಅಮೇರಿಕದ ಇಂಡಸ್ಟ್ರಿಯಂತೆ ಜಗತ್ತಿನ ಉಳಿದ ದೇಶಗಳ ಉದ್ಯಮವಿದೆ. ಆದ್ರೆ ನೀವು ಏಷ್ಯಾಕ್ಕೆ ಬಂದ್ರೆ ಅದೊಂಚೂರು ಭಿನ್ನವಾಗಿದೆ. ಇಲ್ಲಿ ಅನೇಕ ರಾಷ್ಟ್ರಗಳಲ್ಲಿ ದಟ್ಟ ದರಿದ್ರವಾದ ಬಡತನವಿದೆ ಮತ್ತು ಸಿಂಗಲ್‌ ಮಾಮ್‌, ಸೂಳೆಗಾರಿಕೆ ಎಂಬ ಸಂಸ್ಕೃತಿ ಹೆಚ್ಚಾಗಿದೆ. ಹೀಗಾಗಿ ಈ ಸಂಸ್ಕೃತಿಯವರು ಹೊಟ್ಟೆಪಾಡಿಗಾಗಿ, ದುಡ್ಡಿನ ಆಮಿಷಕ್ಕಾಗಿ, ಬದುಕಿನ ಅನಿವಾರ್ಯತೆಗಾಗಿ ನೀಲಿ ಚಿತ್ರ ಜಗತ್ತಿನೊಳಗೆ ಒಂದಾಗಿದ್ದಾರೆ.
ಇವಿಷ್ಟು ಹಾರ್ಡ್‌ಕೋರ್‌ ಪೋರ್ನ್‌ ಕಥೆ! ಭಾರತ ಇವತ್ತೊಂದು ಸಂಕೀರ್ಣ ಸ್ಥಿತಿಯಲ್ಲಿದೆ. ಸಹಸ್ರಮಾನದ ತಲೆಮಾರು ಅಥವಾ ಮಿಲೇನಿಯಂ ಜನರೇ‍ಷನ್‌ ಎಂದು ಕರೆಸಿಕೊಳ್ಳುವ ಇಂದಿನ ಯುವ ಸಮುದಾಯ ಒಂದು ರೀತಿ ಅತಂತ್ರ ಸ್ಥಿತಿಯಲ್ಲಿದೆ. ಆಕಡೆ ಪೂರ್ತಿಯಾಗಿ ಪಾಶ್ಚಾತ್ಯ ಸಂಸ್ಕೃತಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಈಕಡೆ ಭಾರತೀಯಯಾಗಿ ಉಳಿಯುವ ಇರಾದೆಯೂ ಇಲ್ಲ. ವೇಗಯುತವಾಗಿ ಐಷಾರಾಮಿತನ ಬರಬೇಕು, ಬದುಕನ್ನು ಎಂಜಾಯ್‌ ಮಾಡಿಬಿಡಬೇಕು ಎಂಬ ಚಪಲ. ಹಾಗಂತ ಪೂರ್ತಿಯಾಗಿ ಪಾಶ್ಚಾತ್ಯರಂತೆ ಅಪ್ಪ-ಅಮ್ಮ, ಗಂಡ, ಸಂಸಾರ, ಸಮಾಜವನ್ನು ಬಿಟ್ಟು ಏಕಾಂಗಿಯಾಗುವ ನಿಲ್ಲುವ ಧೈರ್ಯವಿಲ್ಲ( ನಮ್ಮಲ್ಲಿ ಬಹಳ ಜನಕ್ಕೆ ಪಾಶ್ಚತ್ಯರೆಲ್ಲ ಮೂರು ಬಿಟ್ಟವರಂತೆ ಬದುಕುತ್ತಾರೆ ಎಂಬ ಬಹುದೊಡ್ಡ ತಪ್ಪು ಕಲ್ಪನೆಯಿದೆ. ಶೇ. ೩೦-೪೦ರಷ್ಟು ಪಾಶ್ಚಾತ್ಯರು ಮಾತ್ರ ಹಾಗೆ ಬದುಕುವುದು. ಉಳಿದ ೬೦-೭೦ರಷ್ಟು ಮಂದಿ ಶುದ್ಧವಾಗಿ ಭಾರತೀಯರಂತೆ ಸಂಸಾರ, ಸಂಬಂಧ ಎಂಬ ಸಂಕೋಲೆಯಲ್ಲಿನ ಬದುಕನ್ನು ಇಷ್ಟಪಡುವವರು. ಅವರ ಚಿಂತನೆ, ಬದುಕಿನ ಶೈಲಿಯಲ್ಲಿ ಒಂಚೂರು ವ್ಯತ್ಯಾಸವಿರುತ್ತದೆ. ಆದರೆ ಬದುಕಿನ ಮೂಲ ಉದ್ದೇಶ ನಮ್ಮ ದೇಶದಂತೆ ಇದೆ).
ಇಂಥ ಒಂದು ಸಂದಿಗ್ಧ ಸ್ಥಿತಿ ಹುಟ್ಟು ಹಾಕಿರುವುದೇ ಕಾರ್ಪೊರೇಟ್‌ ಹಾದರಿಕೆ! ಬಹುಶಃ ಈ ಪದ ಬಳಕೆ ತಪ್ಪಾಗಬಹುದು. ಯಾಕಂದ್ರೆ ಒಬ್ಬ ಓಶೋ, ಭೈರಪ್ಪನವರನ್ನು ಓದಿಕೊಂಡ ನಾನಂತೂ ಸೆಕ್ಸ್‌ನ್ನು ಅಸಹ್ಯ, ತಪ್ಪು, ಕಾನೂನು ಬಾಹೀರ ಎಂಬ ರೀತಿಯಲ್ಲಿ ಮಾತನಾಡಲಾರೆ. ಆದ್ರೆ ಯಾವುದೋ ಆಮಿಷಕ್ಕೆ ಒಳಗಾಗಿ ಸೆಕ್ಸ್‌ನ್ನು, ದೇಹವನ್ನು ಮಾರಿಕೊಳ್ಳುವ ಪ್ರಕ್ರಿಯೆಗೆ ನಾನಂತೂ ಹಾದರಿಕೆ ಎಂತಲೇ ಕರೆಯುತ್ತೇನೆ. ಸ್ವಯಂ ಇಚ್ಛೆಯಿಂದ, ಪ್ರೀತಿಯಿಂದ ದೈಹಿಕ ಸಂಬಂಧ ಇಟ್ಟುಕೊಂಡಿದ್ದರೆ ಅದು ಬೇರೆಯ ಮಾತು ಹಾಗೂ ಅವರ ಬದುಕಿನ ಸ್ವತಂತ್ರವದು.
ಸಾಫ್ಟ್‌ವೇರ್‌, ಮಾಧ್ಯಮ ಸೇರಿದಂತೆ ಕಾರ್ಪೊರೇಟ್‌ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಗೆಳೆಯರು ಮಾತಾಡುವುದನ್ನು ಕೇಳಿದ್ದೇನೆ. ‘ಅದೊಂದು ಹುಡುಗಿಯಿಂದ ಇಡೀ ಆಫೀಸ್‌ ಹಾಳಾಗಿದೆ. ಆ ಹುಡುಗಿ ಬಂದವಳೆ ಎಷ್ಟು ಬೇಗ ಬೆಳೆಯುತ್ತಿದ್ದಾಳೆ. ತಲೆಯಲ್ಲಿ ಎರಡಕ್ಷರವಿಲ್ಲದಿದ್ದರೂ ಎದೆಯೊಳಗಿನ ಎರಡಕ್ಷರಗಳು ಕೆಲಸ ಮಾಡುತ್ತಿವೆ’ ಇಂಥ ಹತ್ತಾರು ಮಾತುಗಳನ್ನು ನಿತ್ಯವೂ ಕೇಳುತ್ತಿರುತ್ತೇವೆ. ಇಂಥ ಹುಡುಗಿಯರಿಂದ ನಿಜವಾದ ಪ್ರತಿಭಾವಂತ ಕಳೆದು ಹೋಗಿರುತ್ತಾನೆ. ತನ್ನ ತನವನ್ನು ಪೂರ್ತಿಯಾಗಿ ಕಳೆದುಕೊಂಡು ಕೆಲಸ ಮಾಡುತ್ತಿರುತ್ತಾನೆ. ಇದೆಲ್ಲ ಎಷ್ಟು ದಿನ ನಡೆಯುತ್ತೆ ಎಂಬುದು ನಂತರದ ಮಾತು. ಆದ್ರೆ ನಡೆದಷ್ಟೆ ದಿನದಲ್ಲಿ ಬೇರೆಯವರು ಅನುಭವಿಸುವ ನೋವು, ಯಾತನೆ ದೊಡ್ಡದಿದೆ.
ಪೋರ್ನ್‌ ಜಗತ್ತಿಗಿಂತ ಭಯಾನಕವಾದ ಜಗತ್ತೊಂದು ಇಲ್ಲಿ ನಿರ್ಮಾಣವಾಗುತ್ತಿದೆ. ನಿಜವಾಗಿಯೂ ಪ್ರತಿಭೆ ಹೊಂದಿದ್ದು ಬೆಳವಣಿಗೆ ಬೇರೆ. ಅಂಥ ಬೆಳವಣಿಗೆಗಳು ಕಣ್ಣಿಗೆ ಸ್ಪಷ್ಟವಾಗಿಯೂ ಕಾಣುತ್ತದೆ. ಯಾರಿಗೂ ಕಾಣದಂತೆ ಕತ್ತಲಿನಲ್ಲಿ ನಡೆದ ಬೆಳವಣಿಗೆಗಳು, ಮನಸ್ಸಿಗಂತೂ ಅರ್ಥವಾಗುತ್ತದೆ! ಇದ್ರಿಂದ ಹುಡುಗರು ಮಾತ್ರವಲ್ಲ, ಪ್ರತಿಭಾವಂತ ಅನೇಕ ಹುಡುಗಿಯರು ವ್ಯಥೆ ಪಡುತ್ತಿದ್ದಾರೆ.
ಸರಿ, ತಪ್ಪುಗಳ ನಿರ್ಣಯ ಕಷ್ಟ. ಒಂದು ಅಧಿಕಾರ, ದುಡ್ಡಿಗಾಗಿ ತಮ್ಮನ್ನು ತಾವು ಕದ್ದು-ಮುಚ್ಚಿ ಮಾರಿಕೊಳ್ಳುವವರಿಗಿಂತ ತೀರ ‘ನನ್ನ ಹೊಟ್ಟೆಪಾಡೇ ಇದು’ ಅಂತ ಒಪ್ಪಿಕೊಂಡು, ಪೂರ್ತಿ ಬಿಚ್ಚಿ ಬೆತ್ತಲಾಗಿ ನಿಲ್ಲುವವರೇ ಉತ್ತಮರು ಅನ್ನಿಸುತ್ತಾರೆ. ನಾನು ಯಾವಾಗ್ಲೂ ಹೇಳ್ತಾ ಇರ್ತಿನಿ ಈ ಹಾಕಿಸಿಕೊಳ್ಳುವ ಪ್ರಕ್ರಿಯೆ ಹಾಕಿಸಿಕೊಂಡವಳು ಮತ್ತು ಹಾಕಿದವನಿಗೆ ಮಾತ್ರ ಗೊತ್ತಿರುತ್ತೆ ಅಂತ! ಒಂದು ನಾಗರೀಕತೆಯ ಅಂತ್ಯವಾಗಬೇಕಾಗಿದ್ದು ಅನಾಗರೀಕತೆಯಲ್ಲೇ! ಅಂದ್ರೆ ಮನುಷ್ಯರಿಗೆ ಒಂದು ಹಂತದಲ್ಲಿ ಬಟ್ಟೆ ತೊಡುವುದು ಗೊತ್ತಿರಲಿಲ್ಲ. ಅದರ ವ್ಯುತ್ಕ್ರಮ ರೂಪವಾಗಿ ಮುಂದೊಂದು ದಿನ ಗೊತ್ತಿದ್ದು ಬಟ್ಟೆ ತೊಡಲಾಗದ ಸಮಾಜವು ನಿರ್ಮಾಣವಾಗುತ್ತೆ. ಅದೇ ಈ ಪ್ರಸ್ತುತ ನಾಗರೀಕತೆಯ ಅಂತ್ಯ!
ಅಂದಹಾಗೆ ಸೆಕ್ಸ್‌ ಎಂಬುದು ನನ್ನ ಪ್ರಕಾರ ಭಾರತದ ಮಟ್ಟಿಗೆ ತೀರ ವೈಯಕ್ತಿಕವಾಗಿದ್ದು. ನೀವು ಎಲ್ಲರಲ್ಲಿಯೂ ತೋರಿಸಿಕೊಳ್ಳಲಾಗದೆ ತೀರ ಗೌಪ್ಯತೆಯಿಂದ ನಿಮ್ಮ ದಾಂಪತ್ಯದ ಸಂಬಂಧವನ್ನು ಕಾಪಾಡಿಕೊಳ್ಳುವುದು ಅದ್ರಿಂದ ಮಾತ್ರ. ಯಾವತ್ತು ಅದು ಮುಕ್ತವಾಗುತ್ತೋ ಆವತ್ತು ಒಂದು ನಾಯಿಗು, ದನಕ್ಕು, ಮನುಷ್ಯನಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಆಗ ಬಟ್ಟೆ ಹಾಕಿಕೊಂಡು ಬದುಕುವುದು, ಈ ಪೋರ್ನು ಬ್ಯಾನ್‌ ಎಂಬ ರಾಷ್ಟ್ರೀಯ ವಿಪತ್ತು ಯಾವುದು ಇರುವುದಿಲ್ಲ! ಅಕ್ರಮಕ್ಕೆ ಕಡಿವಾಣ ಹಾಕುವುದು ಅವಶ್ಯ ಕೆಲಸ. ಮೋದಿ ಮಾಡಿದ್ದು ಅದನ್ನೆ. ಅಂದಹಾಗೆ ಅದಕ್ಕಿಂತ ಮುಂಚೆ ಒಬಾಮಾ ಈ ಕೆಲಸ ಮಾಡಿದ್ದಾರೆ. ಯಾಕೆ ಎಲ್ಲ ಪೋರ್ನ್ ತಾಣಗಳಿಗೂ ಕಡಿವಾಣ ಬಿದ್ದಿಲ್ಲ ಎಂಬುದಕ್ಕೂ ಇದೇ ಉತ್ತರ. ಅಮೆರಿಕ ಕೊಟ್ಟ ಪಟ್ಟಿಯನ್ನೇ ಭಾರತ ಭಟ್ಟಿಯಿಳಿಸಿದೆ ಜೊತೆಗೊಂದಿಷ್ಟು ಭಾರತೀಯ ವೆಬ್‌ಸೈಟ್‌ಗಳನ್ನು ಸೇರಿಸಿ. ಉದ್ಯಮವಾಗಿ ನಡೆಯುವ ನೀಲಿಚಿತ್ರಕ್ಕೆ ಅವಕಾಶ ನೀಡಿದೆ. ಮೋದಿಗೆ ಜೈ! ಇದನ್ನು ವಿರೋಧಿಸಿ ಟೌನ್‌ಹಾಲ್‌ನಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿದ್ರೆ ಅವರಿಗಂತೂ ಮೊದಲು ಜೈ!!!

ಈಗೊಂದು ೭ ವರ್ಷದ ಕೆಳಗಿನ ಮಾತು. ದಾವಣಗೆರೆಯ ಯಾವುದೋ ಮೆಡಿಕಲ್ ಕಾಲೇಜು ಸಂಭಾಗಣದಲ್ಲಿ ಕಾರ್ಯಕ್ರಮ. ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಇದೆ ಅಂದಮೇಲೆ ಕೇಳುವುದು ಬೇಡ! ಸಭಾಂಗಣ ಕಿಕ್ಕಿರಿದಿತ್ತು. ಎಂದಿನಂತೆ ಭರ್ಜರಿ ಭಾಷಣ. ಮಾತು ಮುಗಿದ ಮೇಲೆ ಒಂದು ೫೦-೬೦ ಜನ ಬಂದು ಅವರಿಗೆ ಕೈಕುಲುಕುವುದು, ಸಾರ್ ನಾವು ದೇಶಸೇವೆ ಮಾಡಬೇಕು ಅನ್ನುವುದು ಮಾಮೂಲು. ಅದ್ರಲ್ಲಿ ಕೆಲವ್ರು ಆಸಕ್ತಿಯಿಂದ ಮತ್ತೆ ಸಂಪರ್ಕಕ್ಕೆ ಬರುತ್ತಾರೆ. ಹಲವರು ಹಾಗೆ ಮರೆತು ಹೋಗುತ್ತಾರೆ. ಕಾರ್ಯಕ್ರಮ ಎಲ್ಲ ಮುಗಿದ ಮೇಲೆ ಓರ್ವ ಮಹಿಳೆ ಬಂದ್ರು. ಅವರು ಡಾಕ್ಟರ್ ಅಂತೆ. ’ಸಾರ್ ನಾನೊಂದು ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ತುಂಬಾ ಅದ್ಭುತವಾದ ಜಾಗ. ಇವತ್ತು ರಾತ್ರಿ ಅಲ್ಲೇ ಊಟ ಮಾಡಬೇಕು’ ಅಂದ್ರು. ಬೆಂಗಳೂರಿನಿಂದ ಹೋಗಿದ್ದು ನಾವಿಬ್ಬರು ಮಾತ್ರ. ಸರಿ ಆಯ್ತು ಅಂತ ಹೊರಟ್ವಿ.
ಆ ಮಹಿಳೆ ಕರೆದುಕೊಂಡು ಹೋಗಿದ್ದು ಒಂದು ಅನಾಥಾಶ್ರಮಕ್ಕೆ. ಡಾಕ್ಟರ್ ಆಗಿರುವ ಮಹಿಳೆ ತಣ್ಣಗೆ ಒಂದಿಪ್ಪತ್ತೈದು ಮಕ್ಕಳನ್ನು ಸಾಕುತ್ತಿದ್ದಾರೆ. ಜೊತೆಗೆ ಒಂದೆರಡು ಸಣ್ಣ-ಪುಟ್ಟ ಸಂಸ್ಥೆಗಳು ಅವರೊಂದಿಗೆ ಕೈಜೋಡಿಸಿವೆ. ಆ ಮಕ್ಕಳು ಚಿತ್ರ ಬಿಡಿಸುವುದು, ಹಾಡುವುದು ಎಲ್ಲ ನೋಡಿ ನಮಗೆ ಎದೆ ಚೂರ್ ಅಂತು. ಆ ವೈದ್ಯೆಯ ಮೇಲೆ ಅಭಿಮಾನವೂ ಹೆಚ್ಚಾಯ್ತು. ನಮ್ಮಿಬ್ಬರಿಗೂ ಅದೊಂದು ಅವಿಸ್ಮರಣೀಯ ಘಳಿಗೆ.
ಯಸ್, ಒಬ್ಬ ಚಕ್ರವರ್ತಿಯ ಸುತ್ತ ಸಿಗುವುದು ಬರೀ ಇಂಥದ್ದೆ ಅನುಭವಗಳು. ಅವರ ಭಾಷಣ ಕೇಳುತ್ತಿದ್ರೆ ಒಂದಷ್ಟು ಜನಕ್ಕೆ ರೋಷ ಉಕ್ಕಿಬರುತ್ತೆ. ಬ್ರಿಟಿಷರ ಕಾಲದ ಕಥೆ ಹೇಳುತ್ತಿದ್ದರೆ ಚಚ್ಚಿ ಬಿಡಬೇಕು ಅನ್ನಿಸುತ್ತೆ. ಇನ್ನು ಹಲವರಿಗೆ ಅವೆಲ್ಲ ಸುಳ್ಳು ಅನ್ನಿಸುತ್ತೆ. ಇತಿಹಾಸ ಯಾವತ್ತಿದ್ರೂ ಇತಿಹಾಸ. ಅದನ್ನು ಕಂಡವರಿಲ್ಲ. ಹೀಗಾಗಿ ಅದು ಬರಹಗಾರನ ಇತಿಹಾಸ. ನೀವು ಯಾರು ಬರೆದಿದ್ದನ್ನು ಓದುತ್ತೀರೋ ಅದರ ಮೇಲೆ ಇತಿಹಾಸ ಅವಲಂಬಿಸಿರುತ್ತೆ. ಚಕ್ರವರ್ತಿ ಬರೀ ಬಲಪಂಥೀಯ ಇತಿಹಾಸ ಓದಿಕೊಂಡು ಭಾಷಣ ಬಿಗಿಯುತ್ತಾರೆ ಅಂತ ಅನೇಕ ಬುದ್ಧಿಜೀವಿಗಳು ಆರೋಪಿಸುತ್ತಾರೆ. ಅವರು ಎಲ್ಲವನ್ನೂ ಓವರ್ ಆಗಿ ಹೇಳ್ತಾರೆ ಎನ್ನುತ್ತಾರೆ. ’ಅಲ್ಲ ನೀವು ಸತ್ಯ ಮುಚ್ಚಿಟ್ಟು ಬ್ರಿಟಿಷ್ ಅಧಿಕಾರಿಗಳ ಪಾಠ ಹೇಳಿಕೊಟ್ರಿ. ವಾಸ್ಕೋಡಿಗಾಮ ಗ್ರೇಟ್ ಅಂದ್ರಿ ಬಿಟ್ಟರೆ ಉದ್ದಮ್ ಸಿಂಗ್ ಬಗ್ಗೆ ಎಲ್ಲೂ ಹೇಳಲೇ ಇಲ್ಲ. ಭಾರತೀಯರು ಭಾರತೀಯರಿಗೆ ಮೋಸ ಮಾಡಿದಷ್ಟು ಹೇಳಿದ್ರೆ ಬಿಟ್ರೆ, ಬ್ರಿಟಿಷರು ಮೋಸ ಮಾಡಿದ್ರು ಎಂಬ ಇತಿಹಾಸ ಮುಚ್ಚಿಟ್ರಿ’ ಎಂಬ ಅವರ ಮರು ಉತ್ತರಕ್ಕೆ ಯಾರೂ ಮಾತೇ ಆಡಲ್ಲ ಅನ್ನೋದು ನಂತರದ ಮಾತು ಬಿಡಿ!
ಈ ಮಾನವೀಯತೆ, ಕೋಮುವಾದ ಅಂತ ಹಲವರು ಭಯಂಕರ ಭಾಷಣ ಬಿಗಿಯುತ್ತಾರೆ. ಸತ್ಯವಾಗ್ಲು ಇವತ್ತಿಗೂ ನಂಗೆ ಅದೆಲ್ಲ ಏನು ಅರ್ಥ ಆಗಿಲ್ಲ. ದೇಶಭಕ್ತಿ, ರಾಷ್ಟ್ರಸೇವೆ ಮಾತಾಡುವ ಚಕ್ರವರ್ತಿಗೆ ಅಭಿಮಾನಿಗಳಷ್ಟೆ ವಿರೋಧಿಗಳಿದ್ದಾರೆ. ಅವರನ್ನು ಹಿಂದುತ್ವದ ಐಕಾನ್ ಎಂಬಂತೆ ಬಿಂಬಿಸುತ್ತಾರೆ. ಮಜ ಅಂದ್ರೆ ಅವರೆಲ್ಲೂ ಮುಸ್ಲಿಂರನ್ನೋ, ಕ್ರೈಸ್ತರನ್ನೋ ವಿರೋಧಿಸುವುದು ಹಿಂದೂತ್ವ ಎಂದಿಲ್ಲ. ನಮ್ಮ ದೇಶದ ಸಂಸ್ಕೃತಿ, ಬದುಕಿನ ಪದ್ಧತಿಯ ಹಿಂದುತ್ವದ ಬಗ್ಗೆ ಮಾತಾಡಿದವರು.
ಸೂಲಿಬೆಲೆ ಹೊಸಕೋಟೆ ತಾಲೂಕಿನ ಪುಟ್ಟ ಊರು. ಚಕ್ರವರ್ತಿ ತಂದೆ ಮೇಷ್ಟ್ರು ಆಗಿದ್ದವರು. ಸೂಲಿಬೆಲೆಯಲ್ಲೊಂದು ಸ್ವಂತ ಮನೆಯನ್ನು ಕಟ್ಟಿದ್ದಾರೆ. ಅವರ ಮನೆಯಲ್ಲೊಂದು ಕುಟುಂಬ ಇದೆ. ಅದು ಗೌಸ್‌ಫೀರ್ ಕುಟುಂಬ. ಮನೆ ಕೆಲಸ ಮಾಡುವ ಗೌಸ್‌ಫೀರ್, ಸುಲ್ತಾನ್, ರಜಿಯಾ ಎಲ್ಲರೂ ಮನೆಯ ಸದಸ್ಯರೆಲ್ಲರ ಜೊತೆ ಕುಳಿತು ಊಟ ಮಾಡ್ತಾರೆ. ದೇವ್ರಾಣೆ ಅವರ‍್ಯಾರಿಗೂ ಈ ಕೋಮುವಾದ, ಹಿಂದುತ್ವ ಏನು ಗೊತ್ತಿಲ್ಲ. ನೀವು ಸೂಲಿಬೆಲೆಗೆ ಹೋದ್ರೆ ನಿಮಗಲ್ಲಿ ಜಾತಿ, ದೇಶ, ಭಾಷೆ ಯಾವುದೂ ಕಾಣಿಸಿಲ್ಲ. ಅಲ್ಲಿ ಸಿಗೋದೊಂದೆ. ಅದು ಅಮ್ಮನ ಪ್ರೀತಿ. ಚಕ್ರವರ್ತಿ ಜೊತೆಗೆ ಯಾರೇ ಅಪರಿಚಿತರು ಆ ಮನೆಗೆ ಹೋದ್ರೂ ಕೊನೆಗವ್ರು ಆ ಮನೆಯ ಸದಸ್ಯರಾಗುತ್ತಾರೆ.
ಒಂದ್ಸಲ ಮೈಸೂರಿನಲ್ಲಿ ಕಾರ್ಯಕ್ರಮ. ಸಂಜೆ ಎಬಿವಿಪಿ ಸದಸ್ಯರೊಬ್ಬರ ಮನೆಗೆ ಊಟಕ್ಕೆ ಹೋದ್ವಿ. ಮಂಡ್ಯ, ಮೈಸೂರು ನಡುವೆ ಎಲ್ಲೋ ಬರುತ್ತೆ ಅವರ ಮನೆ. ತುಂಬಾ ಪ್ರೀತಿಯಿಂದ ಊಟಕ್ಕೆ ಕರೆದಿದ್ರು. ವಾಸ್ತವವಾಗಿ ನಾವಿಬ್ಬರು ಏನೋ ತಿಂದುಕೊಂಡು ಹೋಗಿದ್ವಿ. ಆದ್ರೆ ಆ ಮನೆಯವರಿಗೆ ಚಕ್ರವರ್ತಿ ಊಟಕ್ಕೆ ಬರಬೇಕು ಅಂತ ಬಹುದಿನದ ಆಸೆಯಂತೆ. ಹಿಂದೆ ಹಲವು ಸಲ ಕರೆದಿದ್ರಂತೆ ಕೂಡ. ಆವತ್ತಿನ ಊಟ ನಿಜವಾಗ್ಲೂ ಬದುಕಿನಲ್ಲಿ ನೆನಪಿನಲ್ಲಿ ಉಳಿಯುತ್ತೆ. ಅದೆಷ್ಟು ಪ್ರೀತಿ ಇತ್ತು ಅಂದ್ರೆ, ’ಛೇ ಜನ ಎಷ್ಟು ಪ್ರೀತಿಸ್ತಾರೆ. ಇವ್ರೆಲ್ಲ ತುಂಬ ಕೆಳಮಟ್ಟದ ಕಾರ್ಯಕರ್ತರು ವಿನಾಯಕ. ಆವತ್ತಿನ ದುಡಿಮೆ ಇದ್ರೆ ಮಾತ್ರ ಇವ್ರಿಗೆ ಆವತ್ತಿನ ಊಟ. ಆದ್ರೆ ಅದ್ಯಾವುದನ್ನು ಲೆಕ್ಕಿಸದೆ ಸಂಘ, ಸೇವೆ ಅಂತ ಬರ್ತಾರೆ’ ಅಂದಿದ್ರು.
ಒಬ್ಬ ಚಕ್ರವರ್ತಿಯ ಸುತ್ತ ಖಂಡಿತವಾಗಿಯೂ ಒಂದು ಹತ್ತು ಲಕ್ಷ ರೂ. ಹೊಂದಿರುವ ವ್ಯಕ್ತಿ ಸಿಗಲಾರ. ಸಿಗೋರೆಲ್ಲ ಇಂಥವ್ರೆ. ಒಬ್ಬರಿಗಿಂತ ಒಬ್ಬರದ್ದು ಅದ್ಭುತವಾದ ಕಥೆಗಳು. ಎಲ್ಲರಿಗೂ ಒಂದೇ ಹಂಬಲ. ಬದುಕಿದ್ದಕ್ಕೆ ಸಾರ್ಥಕ ಆಗಬೇಕು. ದೇಶಕ್ಕೆ ಏನಾದ್ರು ಮಾಡಬೇಕು!
’ರೀ ಸ್ವಾಮಿ ನಿಮಗೆ ಮಾಡೋಕೆ ಬೇರೆ ಕೆಲ್ಸ ಇಲ್ಲ. ನೀವಿಲ್ಲಿ ದೇಶ, ದೇಶ ಅಂತ ಬಡ್ಕೋಳಿ. ಅಲ್ಲವರು ಆರಾಮವಾಗಿ ಕೊಳ್ಳೆ ಹೊಡೆದು ಚೆನ್ನಾಗಿ ತಿಂದು ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ತಾರೆ. ನೀವೋಬ್ಬರು ಹಾಳಾಗಿದ್ದು ಸಾಲ ಅಂತ ಆ ಹುಡುಗ್ರನ್ನು ಹಾಳು ಮಾಡಿ’ ಅಂತ ಆವಾಗವಾಗ ಬಯ್ಯುತ್ತ ಇರ್ತಿದ್ದೆ. ಖಂಡಿತ ಅವರು ಯಾರನ್ನೂ ನನ್ನ ಜೊತೆ ಬನ್ನಿ ಎಂದು ಕರೆದಿಲ್ಲ ಮತ್ತು ಕರೆಯುವುದಿಲ್ಲ. ಅವ್ರಿಗೆ ಒಂದು ತಂಡ ಕಟ್ಟಬೇಕು, ಏನೋ ಮಾಡಬೇಕು ಎಂಬ ಹಂಬಲವೂ ಇಲ್ಲ. ಅಥವಾ ಜೊತೆಗೆ ಬಂದವರಿಗೆಲ್ಲ ಕೊಡ್ಲಿಕ್ಕೆ ಅವರ ಹತ್ರ ಏನು ಕೆಲಸವೂ ಇಲ್ಲ. ’ರಾಷ್ಟ್ರಸೇವೆ, ಜಾಗೃತಿ ನನ್ನ ಕೆಲಸ. ನನ್ನ ಪಾಡಿಗೆ ನಾನು ಮಾಡ್ತಾ ಹೋಗ್ತೀನಿ. ಜೊತೆಗೆ ಬರುವವರು ಬರಬಹುದು’ ಎಂಬ ಲೆಕ್ಕಾಚಾರ. ಅವರಾಗಿಯೇ ಬಂದ್ರೆ ಆ ಹುಡುಗರಿಗೆ ಬರಬೇಡಿ ಎನ್ನಲು ಸಾಧ್ಯವಿಲ್ಲ!
ಒಂದು ಲಕ್ಷ ಜನ ಭಾಷಣ ಕೇಳಿ ಥ್ರಿಲ್ ಆಗಿರುತ್ತಾರೆ. ಅದ್ರಲ್ಲಿ ೯೯,೯೦೦ ಜನ ಆ ಭಾಷಣವನ್ನು ಕಾಂಪೌಂಡ್‌ನಿಂದ ಹೊರಗೆ ಹೋಗುತ್ತಿದ್ದಂತೆ ಮರೆಯುತ್ತಾರೆ. ಖಂಡಿತ ಒಬ್ಬ ಅನಾಥ ಹುಡುಗನಿಗೆ ೧೦೦ ರೂ. ಪ್ರೀತಿಯಿಂದ ಕೈಯೆತ್ತಿ ಕೊಡಲ್ಲ. ಅದ್ರ ಪ್ರಯೋಜನ ಏನು ಅನ್ನೋದು ನನ್ನ ವಾದ. ’ಲಕ್ಷದಲ್ಲಿ ೧೦೦ ಜನ ಇನ್ನೊಬ್ಬರಿಗೆ ಸಹಾಯ ಮಾಡಿದ್ರು ಸಾಕು. ಇವತ್ತಿನ ಭಾಷಣ ಸಾರ್ಥಕ’ ಎಂಬುದು ಅವರ ಉತ್ತರ.
ಏನಿಲ್ಲ ಅಂದ್ರು ಇವತ್ತು ೧೦೦೦ ಜನ ಅವ್ರಿಂದಾಗಿ ಬದ್ಲಾಗಿದ್ದಾರೆ. ಇದ್ದಿದ್ರಲ್ಲಿ ಸ್ವಲ್ಪವನ್ನು ಬೇರೆಯವರಿಗೆ ಹಂಚಿಕೊಂಡು ತಿನ್ನುವುದನ್ನು, ಅಸಹಾಯಕರಿಗೆ ಸಹಾಯ ಮಾಡುವುದನ್ನು ಕಲಿತ್ತಿದ್ದಾರೆ. ಅದು ಅವರ ಬದುಕಿನ ಸಾರ್ಥಕತೆ.
ಮೊನ್ನೆ ಸಂಜು ಅಣ್ಣನಿಗೆ ೩೫ ವರ್ಷ ಆಯ್ತು. ಅದ್ರ ಸಂಭ್ರಮ ಅಂತ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದ. ಹೀಗೆ ಅವ್ರು ನನ್ನನ್ನು ಸೇರಿಸಿ ನೂರಾರು ಜನ್ರಿಗೆ ಅಣ್ಣ. ಅದ್ಕೆ ಹೇಳಿದ್ದು ಒಬ್ಬ ಸಿದ್ಧರಾಮಯ್ಯ ಹೋದ್ರೆ ಮತ್ತೊಬ್ಬ ಬರ್ತಾನೆ. ಆದ್ರೆ ಒಬ್ಬ ಚಕ್ರವರ್ತಿ ಹಾಗಲ್ಲ ಅಂತ. ದುಡ್ಡು ಮಾಡಿಕೊಳ್ಳುವುದಿದ್ರೆ. ಅಥವಾ ಬದುಕಿನಲ್ಲಿ ಬೇರೆ ಇನ್ನು ಏನೇ ಮಾಡಿಕೊಳ್ಳುವುದಿದ್ದರು ಅವರ ಪ್ರತಿಭೆಗೆ ಯಾವುದೂ ಅಸಾಧ್ಯವಲ್ಲ. ಅಂದಹಾಗೆ ಚಕ್ರವರ್ತಿ ಒಂದು ಸಲ ಭಾಷಣಕ್ಕೆ ಬಂದ್ರೆ ಎಷ್ಟು ಚಾರ್ಜ್ ಮಾಡ್ತಾರೆ ಅಂತ ಬಹಳಷ್ಟು ಜನ ನನ್ನ ಬಳಿ ಕೇಳಿದ್ದಾರೆ. ಅವರು ಏನು ಜಾರ್ಜ್ ಮಾಡಲ್ಲ. ಬಳ್ಳಾರಿಯಲ್ಲಿ ಭಾಷಣ ಅಂದ್ರೆ, ಅಲ್ಲಿನ ಟಿಕೆಟ್ ಮತ್ತು ವಸತಿ ವ್ಯವಸ್ಥೆ ಮಾಡಬೇಕು ಅಷ್ಟೆ. ಅದ್ರ ಮೇಲೆ ಒಂದು ರೂಪಾಯಿ ಕೊಟ್ಟರು ಅದನ್ನು ಅವರ ಸ್ವಂತಕ್ಕೆ ಬಳಸುವುದಿಲ್ಲ. ಹಾಗಂತ ಅವರಿಗೆ ಬೇರೆ ಯಾವುದೇ ರೀತಿಯ ದುಡಿಮೆ ಇಲ್ಲ. ಲೇಖನ ಬರೆದು, ಟಿವಿಗೆ ಕಾರ್ಯಕ್ರಮ ಕೊಟ್ಟು ಅವರು ವೈಯಕ್ತಿಕವಾಗಿ ದುಡಿದುಕೊಳ್ಳುವ ಹಣವೇ ಅವರ ಸಂಪಾದನೆ ಹೊರತು ಯಾವುದೇ ಸಾರ್ವಜನಿಕ ಕಾರ್ಯಕ್ರಮದಿಂದ ಬಂದಿದಲ್ಲ. ಹಾಗಾಗಿಯೇ ರಾಜ್ಯದ ಮುಖ್ಯಮಂತ್ರಿಗೆ ಚಕ್ರವರ್ತಿ ಗೊತ್ತಿಲ್ಲದೇ ಹೋದ್ರು, ನನ್ನಂಥ ಸಾವಿರಾರು ಮಂದಿಗೆ ಗೊತ್ತು.
ರಾಷ್ಟ್ರಶಕ್ತಿ ಕೇಂದ್ರ ಚಕ್ರವರ್ತಿಯಿಂದ ಸ್ಪೂರ್ತಿ ಪಡೆದ ಹುಡುಗರು ಕಟ್ಟಿದ ಸಂಘಟನೆ. ಆನೇಕಲ್‌ನ ಜಿಗಣಿ ಫ್ಯಾಕ್ಟರಿಯಲ್ಲಿ ಒಂದಷ್ಟು ಹುಡುಗರು ಕೆಲಸ ಮಾಡುತ್ತಾರೆ. ಅವರಿಗೆಲ್ಲ ರಾಷ್ಟ್ರಸೇವೆಯ ಹುಚ್ಚು. ಹಾಗಂತ ಒಂದು ಹೊತ್ತು ಕೆಲಸ ಮಾಡ್ಲಿಲ್ಲ ಅಂದ್ರೆ, ಅದು ಅವರ ಮನೆಯ ಆರ್ಥಿಕತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆದ್ರೂ ಅವ್ರೆಲ್ಲ ಶಿಫ್ಟ್ ಬದ್ಲು ಮಾಡಿಕೊಂಡು ರಾಷ್ಟ್ರಕ್ಕೆ ಏನೋ ಒಂದಷ್ಟು ಮಾಡುತ್ತಾರೆ ಅಂದ್ರೆ, ಖಂಡಿತ ಅದ್ರ ಹಿಂದೆ ಒಬ್ಬ ಚಕ್ರವರ್ತಿ ಇದ್ದಾರೆ.
ಹೀಗೆ ಹೇಳುತ್ತ ಹೋದ್ರೆ ನನ್ನ ಹತ್ರ ೩ ಪುಸ್ತಕಕ್ಕೆ ಆಗುವಷ್ಟು ಸರಕಿದೆ! ನಂಗೊಂದು ಭಯಂಕರ ಆಸೆಯಿತ್ತು. ಅದು ಅವ್ರು ಚುನಾವಣೆಗೆ ನಿಲ್ಲಬೇಕು ಅಂತ. ಕಾರಣವಿಷ್ಟೆ ಇಡೀ ದೇಶದಲ್ಲಿ ಒಂದು ವಿಧಾನಸಭೆ ಮಾದರಿ ಕ್ಷೇತ್ರ ಅನ್ನಿಸಿಕೊಳ್ಳಬೇಕು. ಅಲ್ಲಿ ಬಡವರಿರಬಾರದು, ಭ್ರಷ್ಟಾಚಾರ ಇರಬಾರದು ಇತ್ಯಾದಿ, ಇತ್ಯಾದಿ. ಚಕ್ರವರ್ತಿ ಏನಾದ್ರೂ ಎಂಎಲ್‌ಎ ಆದ್ರೆ ಅದು ಸಾಧ್ಯವಾಗಬಹುದು ಅಂತಿತ್ತು. ’ಹಾಲು ಎಷ್ಟೆ ಚೆನ್ನಾಗಿದ್ರು, ಪಾತ್ರೆ ಕೆಟ್ಟಿದ್ರೆ ಹಾಲು ಒಡೆಯುತ್ತೆ’ ಎಂಬುದು ಅವರ ಉತ್ತರ. ಎಂಎಲ್‌ಎ ಆಗ್ಲಿಕ್ಕೆ ೨೫೦ ಜನ ಇದಾರೆ. ಆದ್ರೆ ರಾಷ್ಟ್ರಸೇವೆಗೆ ಯಾರೂ ಇಲ್ಲ. ನಾನು ಅಲ್ಲಿ ಹೋದ್ರೆ ಇಲ್ಲಿ ನನ್ನ ಕೆಲಸ ಯಾರು ಮಾಡುತ್ತಾರೆ ಎಂಬ ಅವರ ವಾದಕ್ಕೆ ಖಂಡಿತ ಉತ್ತರವಿಲ್ಲ!
ಫೈನಲಿ, ನನ್ನ ಪಾಲಿಗೆ ಚಕ್ರವರ್ತಿ ಅಂದ್ರೆ ಅನಾಥಾಶ್ರಮ, ಬಡವರು, ಅಸಹಾಯಕರು ಎಲ್ಲಕ್ಕಿಂತ ಹೆಚ್ಚಾಗಿ ರಾಮಕೃಷ್ಣ ಆಶ್ರಮ, ಸ್ವಾಮಿ ವಿವೇಕಾನಂದ ಆದರ್ಶಗಳು ಎಲ್ಲವೂ ಹೌದು. ಅವರು ದುಡ್ಡು ಕೊಡಬೇಕು, ಸಹಾಯ ಮಾಡಬೇಕು ಅಂತಿಲ್ಲ. ಆದ್ರೆ ಸಹಾಯ ಮಾಡುವ ನೂರಾರು ಕೈಗಳನ್ನು ಸೃಷ್ಟಿಸುತ್ತಾರೆ. ಅವರಂತೆ ಬದುಕಲು, ಆ ಪರಿ ದೇಶವೆಂಬ ಹುಚ್ಚುತನದಲ್ಲಿ ತಿರುಗಾಡಲು ನಮಗ್ಯಾರಿಗೂ ಸಾಧ್ಯವಿಲ್ಲ. ನಿಜವಾಗ್ಲೂ ಅದೊಂಥರ ದೇವ್ರು ಅವ್ರಿಗೆ ಕೊಟ್ಟ ಶಕ್ತಿ. ಅವ್ರಮ್ಮ ಮದ್ವೆ ಆಗು ಅಂತ ಅದೆಷ್ಟು ಸಲ ಶಾಪ ಹಾಕಿದ್ರು, ಅದನ್ನು ಲೆಕ್ಕಿಸದೆ ರಾಷ್ಟ್ರ, ರಾಷ್ಟ್ರ ಅಂತ ಸದಾ ಮುನ್ನುಗುವ ಅವರ ವ್ಯಕ್ತಿತ್ವಕ್ಕೆ ರಿಪ್ಲೆಸ್‌ಮೆಂಟ್ ಎಂಬ ಕಷ್ಟ. ಅವ್ರಿಗೆ ಬಿಲೇಟೆಡ್ ಹುಟ್ಟುಹಬ್ಬದ ಶುಭಾಶಯಗಳು. ಅವರ ಕೋಮುವಾದ ಸದಾ ಹೀಗೆ ಇರಲಿ! ಓದುವ ನಿಮಗೆಲ್ಲ ಇದು ಒಂಚೂರು ಜಾಸ್ತಿನೇ ಹೊಗಳಿಕೆ ಅನ್ನಿಸಬಹುದು. ಆದ್ರೆ ತೀರಾ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ವಾಸ್ತವ. ನಾನು ಸೂಟ್‌ಕೇಸ್‌ನಲ್ಲಿ ನಾಲ್ಕು ಬಟ್ಟೆ ಹಾಕಿಕೊಂಡು ಆವತ್ತು ಅನಾಥವಾಗಿ ಬೆಂಗಳೂರಿಗೆ ಬಂದು ಇವತ್ತು ಹೀಗಿದ್ದೇನೆ ಅಂದ್ರೆ, ಸುತ್ತಲಿನ ಕೊಳಕುಗಳ ನಡುವೆಯೂ ಎಲ್ಲೋ ಕಷ್ಟ ನೋಡಿದಾಗ ಕಣ್ಣಂಚು ಒಂಚೂರು ಒದ್ದೆ ಮಾಡಿಕೊಳ್ಳುವ ಮನಸ್ಥಿತಿ ಉಳಿದಿದೆ ಎಂದ್ರೆ, ಖಂಡಿತ ಅದ್ರ ಹಿಂದೆ ಅಣ್ಣನ ವ್ಯಕ್ತಿತ್ವದ ಪ್ರಭಾವ ಇದೆ.

ನನ್ನ ಈ ಅಕ್ಷರ ವಿಹಾರ ಬ್ಲಾಗಿಗೆ ೭ ವರ್ಷ ತುಂಬಿದೆಯಂತೆ. ಹಾಗಂತ ವರ್ಲ್ಡ್‌ಪ್ರೆಸ್‌ನವರು ಬ್ಲಾಗ್‌ನ ಬರ್ತಡೆಗೊಂದು ವಿಶ್ ಮಾಡಿದ್ದಾರೆ. ೭ ವರ್ಷದಲ್ಲಿ ಬ್ಲಾಗಿಗೆ ಅಂತ ಸುಮಾರಷ್ಟು ಬರೆದಿರುವೆ. ಒಂದಷ್ಟು ಬಾಲಿಶವಾಗಿದೆ. ಇನ್ನೊಂದಷ್ಟು ಓಕೆ,ಓಕೆ. ಮತ್ತೊಂದಷ್ಟು ಒಂದು ಮಟ್ಟಕ್ಕಿದೆ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ನಮ್ಮ ಬದುಕೇ ಒಂದು ರೀತಿ ಬರವಣಿಗೆ. ದಿನ ಒಂದೆಲ್ಲ ಒಂದು ಬರೆಯುತ್ತಲೇ ಇರುತ್ತೇವೆ. ಆದ್ರೆ ಅಲ್ಲೆಲ್ಲ ನಮ್ಮ ಬರವಣಿಗೆಗೆ ಒಂದು ಚೌಕಟ್ಟಿದೆ. ಇತಿ-ಮಿತಿಯಿದೆ. ನಾವಲ್ಲಿ ಬರೆಯುವುದು ಒಂದು ಸಂಸ್ಥೆಗೆ. ಹೀಗಾಗಿ ನನ್ನ ಖುಷಿಗೆ, ಸ್ವತಂತ್ರವಾಗಿ ಬರೆಯಲು ವೇದಿಕೆ ಕಲ್ಪಿಸಿಕೊಟ್ಟಿದ್ದು ಈ ಬ್ಲಾಗ್. ಜೊತೆಗೆ ನನ್ನಂತೆ ಬರೆಯಬಲ್ಲ, ಚಿಂತಿಸಬಲ್ಲ ಹಾಗೂ ಬರೆದಿದ್ದನ್ನು ಪ್ರೀತಿಯಿಂದ ಓದುವ ಒಂದಷ್ಟು ಮಿತ್ರರನ್ನು ಗಳಿಸಿಕೊಟ್ಟಿದೆ.
ನಾನು ಬ್ಲಾಗ್ ಆರಂಭಿಸಿದಾಗ ಪತ್ರಕರ್ತರು ಬ್ಲಾಗ್‌ನಲ್ಲಿ ಬರೆಯವುದು ಅಪರಾಧ ಎನ್ನುವಂಥ ಕಾಲವಿತ್ತು. ಖಂಡಿತ ನಾನಂತು ಇದನ್ನು ಎದುರಿಸಿದ್ದೇನೆ. ಕೈಲಾಗದವರು ಬ್ಲಾಗ್‌ನಲ್ಲಿ ಮೈಪರಚಿಕೊಳ್ಳುತ್ತಾರೆ ಎನ್ನುತ್ತಿದ್ದರು. ಆಗೆಲ್ಲ ಈ ಬ್ಲಾಗ್, ಅಂತರ್ಜಾಲ ವೇದಿಕೆಗಳು ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ಜೊತೆಗೆ ಪತ್ರಿಕೋದ್ಯಮ ಕೂಡ ಇಷ್ಟರ ಮಟ್ಟಿಗೆ ಕಾರ್ಪೊರೇಟಿಕರಣಗೊಂಡಿರಲಿಲ್ಲ. ಕೊನೆಗೆ ಹಾಗೆಲ್ಲ ಮಾತನಾಡಿದವರು ವೆಬ್‌ಸೈಟ್, ಬ್ಲಾಗ್‌ಗಳಿಗೆ ಬಂದ್ರು ಅನ್ನೋದು ನಂತರದ ಮಾತು ಬಿಡಿ.
ನಾನು ಪಿಯುಸಿ ಓದಿದ್ದು ಉಜಿರೆಯಲ್ಲಿ. ಸಿದ್ಧವನಕ್ಕೆ ಎಲ್ಲ ಪತ್ರಿಕೆಗಳು ಬರುತ್ತಿದ್ದವು. ನಾವು ಓದುತ್ತಿದ್ದಾಗ ವಿಜಯಕರ್ನಾಟಕ ಉತ್ತುಂಗದಲ್ಲಿತ್ತು. ವಿಶ್ವೇಶ್ವರಭಟ್ಟರು, ಚಕ್ರವರ್ತಿ, ಪ್ರತಾಪ್‌ಸಿಂಹ ಮೊದಲಾದವರ ಅಂಕಣಗಳು ಬರುತ್ತಿತ್ತು. ಅದ್ನೆಲ್ಲ ಓದಿದ ನನಗೆ ಬರೆಯಬೇಕೆಂಬ ಹಂಬಲ ಶುರುವಾಯ್ತು. ಡಿಗ್ರಿಗೆ ಬಂದಾಗ ಬರವಣಿಗೆ ಶುರುವಾಗಿ ಕೊನೆಗೆ ಅದೇ ಬದುಕಾಯ್ತು. ಓದಿನ ಗೀಳು ಕಥೆ ಬರೆಯಲು ಸ್ಪೂರ್ತಿ ನೀಡ್ತು. ಆಗೆಲ್ಲ ಬರೆದಿದ್ದು ಸುಮಾರಷ್ಟು ತಿರಸ್ಕೃತಗೊಂಡಿತ್ತು. ತೀರ ಅನಿರೀಕ್ಷಿತವಾಗಿ ನನ್ನ ನೆಚ್ಚಿನ ಬರಹಗಾರರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ತು. ಸುದ್ದಿಮನೆಯ ಒಳಹೊರಗುಗಳನ್ನು ತಿಳಿದುಕೊಳ್ಳುವಂತಾಯ್ತು.
ನಾನು ಕಳೆದ ೮ ವರ್ಷಗಳಲ್ಲಿ ೫ ಸಂಸ್ಥೆ ಬದಲಿಸಿದ್ದೇನೆ. ಸುಮಾರಷ್ಟು ಜನ ಅದಕ್ಕೆ ಆಡಿಕೊಂಡ್ರು. ಆದ್ರೆ ನನ್ನ ಪಾಲಿಗೆ ಆ ಬದಲಾವಣೆ ಎಲ್ಲ ರೀತಿಯಲ್ಲೂ ಲಾಭ ಮಾಡಿಕೊಟ್ಟಿದೆ. ಹಾಗೆ ಬದಲಾವಣೆ ಮಾಡಿದ್ದರಿಂದ ನನಗೆ ಇವತ್ತು ಟ್ಯಾಬ್ಲಾಯ್ಡ್‌ನಿಂದ ಹಿಡಿದು ರಿಯಾಲಿಟಿ ಶೋಗಳವರೆಗಿನ ಬರವಣಿಗೆ ಗೊತ್ತಾಗಿದೆ. ಬೇರೆ-ಬೇರೆ ಮಾದರಿಯ ಕೆಲಸ ಕಲಿತ್ತಿದ್ದೇನೆ. ಕಾಮರ್ಸ್‌ನಿಂದ ಸಿನಿಮಾವರೆಗಿನ ಬರವಣಿಗೆ ಜಗತ್ತಿನ ಅರಿವಾಗಿದೆ. ಖಂಡಿತ ಎಲ್ಲ ಬರವಣಿಗೆಗಳು ಒಂದೇ ಅಲ್ಲ. ಪತ್ರಿಕೆಯಲ್ಲಿ ಯಾವುದೋ ಸುದ್ದಿ ಎಡಿಟ್ ಮಾಡಲಿಕ್ಕು, ಯಾವುದೋ ಒಂದು ರಿಯಾಲಿಟಿ ಶೋಗೆ ಸ್ಕ್ರಿಪ್ಟ್ ಬರೆಯವುದಕ್ಕೂ ತುಂಬಾ ವ್ಯತ್ಯಾಸವಿದೆ. ಸಾಪ್ತಾಹಿಕಕ್ಕೆ ಬರೆದ ಕಥೆಗಳೆಲ್ಲ ಧಾರವಾಹಿಗೆ ಕಥೆಯಾಗುವುದಿಲ್ಲ. ಇದೆಲ್ಲ ಅರ್ಥವಾಗಬೇಕು ಅಂದ್ರೆ ನಾಲ್ಕು ಕಡೆಗಳಲ್ಲಿ ಕೆಲಸ ಮಾಡಲೇಬೇಕು. ನಾವೆಷ್ಟು ಸರಿಯಾಗಿ, ಚೆನ್ನಾಗಿ ಬರೆಯುತ್ತೇವೆ ಎಂಬುದು ನಂತರದ ಮಾತು. ಆದ್ರೆ ಈ ಬದಲಾವಣೆ ನಾನು ಈ ಮಾದರಿಗೆ ತಕ್ಕಂತೆ ಬರೆಯಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತೆ.
ಮಾಧ್ಯಮದಲ್ಲಿ ಖಂಡಿತ ಈಗಲೂ ಬರವಣಿಗೆಗೆ ಬೆಲೆಯಿದೆ ಮತ್ತು ಚೆನ್ನಾಗಿ ಬರೆಯಬಲ್ಲವರ ಕೊರತೆಯಿದೆ. ಅದಕ್ಕೆ ಕಾರಣ ಮೊದಲೇ ಹೇಳಿದೆ. ಬರೆಯುವುದನ್ನು ಎಲ್ಲರು ಬರೆಯುತ್ತಾರೆ. ಆದ್ರೆ ಅದ್ರಲ್ಲಿ ಎಷ್ಟು ಅಂಶವನ್ನು ಬಳಸಿಕೊಳ್ಳುವವರು ಎಡಿಟ್ ಮಾಡಿಕೊಳ್ಳಬೇಕು ಎಂಬುದು ಮುಖ್ಯವಾಗುತ್ತದೆ. ಒಂದು ಅರ್ಧಗಂಟೆಯ ನ್ಯೂಸ್‌ಪ್ರೊಗ್ರಾಂ ಸ್ಕ್ರಿಪ್ಟ್ ಬೇಡುವ ಶ್ರಮ ಬೇರೆ ರೀತಿಯದ್ದು. ೩ ಸೆಗ್ಮೆಂಟ್‌ಗೆ ಕನಿಷ್ಟ ೬ ಪುಟಗಳಷ್ಟು ಬರೆಯಬೇಕು ಹಾಗೂ ಆ ಬರವಣಿಗೆ ಮಾದರಿ ಒಂದು ಪತ್ರಿಕೆ, ಒಂದು ಧಾರವಾಹಿ ಎಲ್ಲದಕ್ಕಿಂತ ಭಿನ್ನವಾಗಿದ್ದು. ನನಗಿನ್ನೂ ನೆನಪಿದೆ, ಸುವರ್ಣ ನ್ಯೂಸ್‌ನಲ್ಲಿದ್ದಾಗ ವ್ಯುಜಿಕ್ ಬಗ್ಗೆ ಒಂದು ಸ್ಕ್ರಿಪ್ಟ್ ಬರೆದಿದ್ದೆ. ಸ್ಟೀವ್ ಜಾಬ್ಸ್ ಕುರಿತು ಒಂದು ಸೆಗ್ಮೆಂಟ್ ಕಾರ್ಯಕ್ರಮ ಮಾಡಿದ್ದೆ…ಒಂದು ನ್ಯೂಸ್‌ಪ್ರೊಗ್ರಾಂನ ಸ್ಕ್ರಿಪ್ಟ್ ಹೇಗಿರಬೇಕು ಅನ್ನೋದಕ್ಕೆ ನೀವು ಟಿವಿ-೯ನ ವಾರೆಂಟ್ ಕಾರ್ಯಕ್ರಮ ನೋಡಬೇಕು. ನಾನು ಇವತ್ತಿಗೂ ಪುರುಸೊತ್ತಿದ್ದಾಗ ಆ ಕಾರ್ಯಕ್ರಮ ನೋಡ್ತೀನಿ. ಅದಕ್ಕೆ ನೀವು ಟಿವಿ ನೋಡ್ತಾ ಇರಬೇಕು ಅಂತಿಲ್ಲ. ಸುಮ್ಮನೆ ಟಿವಿ ಆನ್ ಮಾಡಿಟ್ಟು ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ವಾಯ್ಸ್‌ಓವರ್ ಕೇಳ್ತಾ ಇದ್ರೆ ಸಾಕು. ಈ ರೀತಿ ಸ್ಕ್ರಿಪ್ಟ್‌ನ್ನು ಆಜ್‌ತಕ್ ವಾಹಿನಿ ತುಂಬ ಅದ್ಭುತವಾಗಿ ಮಾಡುತ್ತೆ. ಅದರ ಕನ್ನಡೀಕರಣವನ್ನು ಟಿವಿ-೯ ಚೆನ್ನಾಗಿ ಮಾಡುತ್ತೆ. ಇಲ್ಲಿ ಒಂದು ಬರವಣಿಗೆಯ ತಾಕತ್ತನ್ನು ವಿವರಿಸಲು ಇದ್ನೆಲ್ಲ ಉದಾಹರಿಸಿದೆಯಷ್ಟೆ. ಕೆಲವರಿಗೆ ನ್ಯೂಸ್ ಚಾನೆಲ್ ಕ್ರೈಂ ಕುರಿತು ಅಸಮಾಧಾನವಿರಬಹುದು. ಆದ್ರೆ ಅದ್ರ ನಡುವೆಯೂ ಒಂದು ಕಾರ್ಯಕ್ರಮವನ್ನು ನೋಡುವಂತೆ ಮಾಡುವುದು ಸ್ಕ್ರಿಪ್ಟ್‌ನ, ನರೇಷನ್‌ನ ತಾಕತ್ತು.
ಮೊದಲು ಬರೆಯಲು ಶುರು ಮಾಡಿದಾಗ ಒಂದು ರೀತಿ ಭ್ರಮೆಯಿತ್ತು. ನನ್ನ ಒಂದು ಬರಹ ಸಮಾಜದಲ್ಲಿ ಏನೋ ಮಾಡಿಬಿಡುತ್ತೆ, ಒಂದು ಸಿರಿಯಲ್ ಬರೆದ್ರೆ ಬದುಕು ಬದಲಾಗಿಬಿಡುತ್ತೆ ಅಂತ! ಹೇಳಿದ್ನಲ್ಲ ಬದುಕಿನಲ್ಲಿ ಪ್ರತಿಯೊಂದು ಒಂದೊಂದು ಥರದ ಪಾಠ ಕಲಿಸುತ್ತೆ ಅಂತ. ಹಾಗೆ ಪ್ರತಿ ಬರವಣಿಗೆಯೂ ನಮ್ಮೊಳಗಿನ ಅಹಂಕಾರವನ್ನು, ಭ್ರಮೆಯನ್ನು ಮುರಿಯುತ್ತೆ. ಒಂದು ಬರಹ ಯಾರಿಗೋ ಸ್ಪೂರ್ತಿಯಾಗಬಹುದು ಹೊರತು ಅದ್ರಿಂದ ಏನು ಬದಲಾಗುವುದಿಲ್ಲ ಮತ್ತು ಯಾರೂ ಬದಲಾಗುವುದಿಲ್ಲ. ಏನೋ ಬದಲಾವಣೆಗೆ ಬರೆಯುತ್ತೇನೆ ಅಂದುಕೊಂಡರೆ ಅದು ಬರಹಗಾರನೊಬ್ಬನ ಭ್ರಮೆಯಷ್ಟೆ. ಹಾಗಂದುಕೊಂಡು ನನ್ನೊಳಗಿನ ಖುಷಿಗಾಗಿ ಬ್ಲಾಗ್‌ನಲ್ಲಿ ಬರೆದಿದ್ದು ಹೆಚ್ಚು. ನನ್ನ ಪಾಲಿಗೆ ಬರವಣಿಗೆ ಅನ್ನೋದು ಒಂಥರ ಬೇಸರ ಕಳೆಯುವ ಜೊತೆಗಾರ. ಏಕಾಂಗಿತನ ಹೋಗಲಾಡಿಸುವ ಸಾಧನ. ಜೊತೆಗೆ ಏಕಾಗ್ರತೆಯ ಮಾರ್ಗವೂ ಹೌದು.
ಇದ್ರಲ್ಲಿ ಎರಡು ವಿಧ. ಒಂದಷ್ಟು ದುಡ್ಡಿಗಾಗಿ ಅಥವಾ ಹೊಟ್ಟೆಪಾಡಿಗಾಗಿ ಬರೆಯುವುದು. ಒಂದಷ್ಟು ಎಲ್ಲಿ ಪ್ರಕಟವಾಗುತ್ತೆ, ಏನಕ್ಕೆ ಬರೆಯುತ್ತೇನೆ ಎಂದು ಖಂಡಿತ ಗೊತ್ತಿರುವುದಿಲ್ಲ. ಒಂದು ರೀತಿಯ ಸಾಫ್ಟ್‌ವೇರ್ ಔಟ್‌ಸೋರ್ಸಿಂಗ್ ಪ್ರಾಜೆಕ್ಟ್‌ಗಳಿದ್ದಂತೆ! ಕ್ಲೈಂಟ್ ಕಾಸು ಕೊಡ್ತಾರೆ, ಬರೆದು ಕೊಡ್ತೀನಿ ಅನ್ನುವಂಥದ್ದು. ಇನ್ನೊಂದು ಖುಷಿಗೆ ಬರೆಯುವುದು. ಅದಕ್ಕೆ ಕಾಸು ಬರಬೇಕು ಅಂತಿಲ್ಲ. ಜನ ಓದಿ ಖುಷಿಪಟ್ಟು ಪತ್ರಿಕ್ರಿಯೆ ಕೊಡಬೇಕು ಅಂತಿಲ್ಲ. ಅದನ್ನು ಬರೆದು ಮುಗಿಸಿದ ನಂತರ ಸಿಗುವ ಖುಷಿಗೆ, ಮತ್ತೆ ಓದಿದಾಗ ಆಗುವ ಆನಂದಕ್ಕೆ ಬೆಲೆಯಿಲ್ಲ.
ಯಸ್, ಬರವಣಿಗೆಗೆ ಇವತ್ತು ಬೆಲೆಯಿದೆ. ಸರಿಯಾಗಿ ಬರೆದ್ರೆ ತಿಂಗಳ ಅಂತ್ಯಕ್ಕೆ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್‌ನಷ್ಟು ದುಡಿಯಬಹುದು ಎಂಬುದಕ್ಕೆ ಉದಾಹರಣೆಯಾಗಿ ಹಲವು ಬರಹಗಾರರು ಸಿಗುತ್ತಾರೆ. ಈ ದುಡಿಮೆ ಎಷ್ಟು ದಿನ ಎಂಬುದು ಆತನ ವೈಯಕ್ತಿಕ ತಾಕತ್ತು ಮತ್ತು ಸಂಪರ್ಕಗಳನ್ನು ಅವಲಂಬಿಸಿರುತ್ತದೆ. ಹಾಗಂತ ಇದು ಖಂಡಿತ ಸುಲಭ ಎಂದುಕೊಳ್ಳಬೇಡಿ. ಉದಾಹರಣೆಗೆ ೨ ಸಿರಿಯಲ್‌ಗಳ ಸಂಬಳ ಎಣಿಸುವಾಗ ತುಂಬ ಆನಂದವಾಗುತ್ತೆ. ಆದ್ರೆ ಅದರ ಹಿಂದಿರುವ ರಗಳೆಯೂ ಅಷ್ಟೆ ಇದೆ. ದೇವರ ತಲೆ ಮೇಲೆ ಹೂವು ಮೂಡಿಸುವುದು ತಪ್ಪಬಹುದು. ಆದ್ರೆ ಒಂದು ದಿನವೂ ಸೀರಿಯಲ್ ಬರವಣಿಗೆ ತಪ್ಪುವುದಿಲ್ಲ. ಒಂದು ಎಪಿಸೋಡ್‌ಗೆ ಕನಿಷ್ಟ ೧೧-೧೩ ಪುಟದ ಸ್ಕ್ರಿಪ್ಟ್ ಬೇಕು. ಜ್ವರ ಬರ್ಲಿ, ನೆಗಡಿಯಾಗಲಿ, ಮದ್ವೆ-ಉಪನಯನಗಳಿರಲಿ, ನಿಮ್ಮ ಪಾಡಿಗೆ ನೀವು ಬರೆಯುತ್ತಲೇ ಇರಬೇಕು. ಒಂದು ವಾರಕ್ಕಾಗುವಷ್ಟು ಒಂದೇ ಸಲ ಬರೆದಿಟ್ಟು ಹೋಗಲು ಸಾಧ್ಯವಿಲ್ಲ. ಯಾಕಂದ್ರೆ ಇದ್ದಕ್ಕಿದ್ದಂತೆ ಯಾವುದೋ ನಟಿಗೆ ಹುಷಾರಿಲ್ಲದೆ ಸೀನ್‌ಗಳು ಬದಲಾಗುತ್ತವೆ. ಸ್ಕ್ರೀನ್‌ಪ್ಲೇನಲ್ಲಿ ವ್ಯತ್ಯಾಸವಾಗುತ್ತೆ. ಆ ಎಲ್ಲ ಬದಲಾವಣೆಗಳನ್ನು ತತಕ್ಷಣ ಮಾಡಿಕೊಡಲು ಬರಹಗಾರ ಸಿದ್ಧನಿರಬೇಕು.
ಮೊನ್ನೆ ಯಾರೋ ನಿರ್ಮಾಪಕರು ಬಂದಿದ್ರು. ಸಾರ್ ೭೫೦ ರೂ. ಕೊಡ್ತೀವಿ ಸೀರಿಯಲ್ ಬರೆದು ಕೊಡ್ತೀರಾ ಅಂತ. ಖಂಡಿತ ಇಷ್ಟು ಹಣಕ್ಕೂ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಬರೆಯುವವರಿದ್ದಾರೆ. ಯಾಕಂದ್ರೆ ಅವ್ರಿಗೆಲ್ಲ ಒಂದು ಸೀರಿಯಲ್ ಅಂತ ಸಿಕ್ಕಿದ್ರೆ ಸಾಕಾಗಿರುತ್ತೆ. ಅಷ್ಟರ ಮಟ್ಟಿಗೆ ಸ್ಪರ್ಧೆಯೂ ಇದೆ. ಇವೆಲ್ಲವನ್ನೂ ಎದುರಿಸಲು ನಾವು ತಯಾರಿರಬೇಕು. ಕೆಲ ನಿರ್ಮಾಪಕರಿಗೆ ಸ್ಕ್ರಿಪ್ಟ್ ಅಂತಾದ್ರೆ ಸಾಕು. ಅದ್ರ ಗುಣಮಟ್ಟ ಬೇಕಿಲ್ಲ. ’ಕಂಡಿದೀವಿ ಬಿಡ್ರಿ ನೀವೇನು ಬರೆದು ಕಿಸಿಯುತ್ತೀರಿ ಎಂಬುದನ್ನು. ಸ್ಕ್ರಿಪ್ಟ್‌ನಿಂದ ಒಂದು ಸೀರಿಯಲ್ ಓಡುವುದು ಅಷ್ಟರಲ್ಲೇ ಇದೆ’ ಎಂದು ಮುಲಾಜಿಲ್ಲದೆ ಹೇಳುತ್ತಾರೆ. ಈ ಉದ್ಯಮದಲ್ಲಿ ಯಾವಾಗ್ಲೂ ದುಬಾರಿಯೆನಿಸುವುದು ಬರಹಗಾರ ಮಾತ್ರ! ಹಾಗಂತ ಒಬ್ಬ ನಟನಿಗೋ, ಕ್ಯಾಮೆರಾದವನಿಗೋ ಈ ಮಾತು ಹೇಳಲು ಸಾಧ್ಯವಿಲ್ಲ. ಅದೆಲ್ಲ ಒಂದು ಸಂಘಟಿತ ಕ್ಷೇತ್ರ. ಆದ್ರೆ ಬರವಣಿಗೆ ಮಾತ್ರ ಅಸಂಘಟಿತ. ೫೦೦ರೂ-೫೦೦೦ ರೂ.ವರೆಗೂ ಸ್ಕ್ರಿಪ್ಟ್ ಬರೆಯುವವರಿದ್ದಾರೆ! ಎಲ್ಲವನ್ನು ಧನಾತ್ಮಕವಾಗಿ ತೆಗದುಕೊಂಡು, ಇಷ್ಟೆಲ್ಲ ಸವಾಲುಗಳನ್ನು ಎದುರಿಸಿಕೊಂಡು ಬರೆಯುವುದ್ರಿದೆ ಖಂಡಿತ ಇಲ್ಲಿಯೂ ಉತ್ತಮ ಆದಾಯ ಗಳಿಕೆ ಸಾಧ್ಯ…

ಅಭಿದಮನಿ

ಕಣ್ ಕಣ್ಣಲ್ಲೆ ಕಾಡಿ ಓಡುವೆಯಲ್ಲೆ
ಕೈಗೆ ಸಿಗದ ಅಲೆಗಳಂತೆ…
ಎದೆಯ ಕದವ ತಟ್ಟಿ ಸೆಳೆವೆಯಲ್ಲೆ
ಎಲೆಯಿಂದ ಜಾರುವ ಹನಿಗಳಂತೆ

ನೀ ಮೀಟುವ ಪ್ರೀತಿ ವೀಣೆಗೆ
ತಂತಿಯಾಗುವಾಸೆ ನನಗೆ
ನಿನ ಪ್ರೇಮದ ಬೆಳದಿಂಗಳಿಗೆ
ಮಲ್ಲಿಗೆಯಾಗಿ ಘಮವ ಬೀರುವೆ

ನಿನ ಪ್ರೇಮದ ಹೃದಯ ಕವಲುಗಳಿಗೆ
ಬಳ್ಳಿಯಂತೆ ಸುತ್ತಿಕೊಳ್ಳೋವಾಸೆ ಎನಗೆ
ಕಣ್ ಕಣ್ಣಲ್ಲೆ ಕಾಡಿ ಓಡುವೆಯಲ್ಲೆ
ಕೈಗೆ ಸಿಗದ ಅಲೆಗಳಂತೆ…

ನೀನೇ, ಬರಿ ನೀನೇ ಕಾಣುವೆ ಕಣ್ಣ ತುಂಬ
ಹೆಜ್ಜೆ ಹೆಜ್ಜೆಯಲೂ ನಿನ್ನದೇ ಬಿಂಬ
ಎದೆಯ ಕದವ ತಟ್ಟಿ ಸೆಳೆವೆಯಲ್ಲೆ
ಎಲೆಯಿಂದ ಜಾರುವ ಹನಿಗಳಂತೆ

ನಾ ಬಂಧಿಯಾಗಿರುವೆ ನಿನ ಪ್ರೀತಿ ಸೆರಗಿನಲಿ
ಹುಣ್ಣಿಮೆಯ ಬೆಳದಿಂಗಳಾಗು ಬಾ ನನ್ನೀ ಬದುಕಿನಲಿ
ನಿನ ಪ್ರೇಮದ ಹೃದಯ ಕವಲುಗಳಿಗೆ
ಬಳ್ಳಿಯಂತೆ ಸುತ್ತಿಕೊಳ್ಳೋವಾಸೆ ಎನಗೆ

’ಕಾನ್ವೆಂಟ್ ಮೆಟ್ಟಿಲು ಹತ್ತಿದ್ರೆ ಮಾತ್ರ ಬುದ್ಧಿವಂತರಾಗೋದು, ಸರ್ಕಾರಿ ಶಾಲೆಯಲ್ಲಿ ಓದಿದ್ರೆ ದಡ್ಡರಾಗ್ತಾರೆ’ ಎಂಬ ಕುರಿತು ಆಗಾಗ ಚರ್ಚೆ ಆಗುತ್ತಿರುತ್ತದೆ. ’ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರು ಮಾತ್ರ ಜಾಣರು. ಅವರು ಮಾತ್ರ ಬದುಕಬಲ್ಲರು ಎಂಬ ಭಾವನೆ ನಮ್ಮಲ್ಲಿ ಗಟ್ಟಿಯಾಗಿ ಬೇರೂರಿದೆ. ನವೆಂಬರ್ ಮಾಸದಲ್ಲಂತು ಅದ್ರ ಕುರಿತು ಭರ್ಜರಿ ಚರ್ಚೆ, ಜಾಗೃತಿ ಎಲ್ಲವೂ ಜೀವಂತ. ಆದ್ರೆ ಇಲ್ಲೊಬ್ಬರು ಕನ್ನಡ-ಇಂಗ್ಲೀಷು ಯಾವ ಶಾಲೆಯ ಮೆಟ್ಟಿಲನ್ನು ಹತ್ತದೇ ಎಲ್ಲರಿಗಿಂತ ಬುದ್ಧಿವಂತರೆನಿಸಿದ್ದಾರೆ!DSC07383

ಬಿಟ್‌ಬಿಡ್ರೊ ಯಪ್ಪಾ ನಮ್ಮನ್ನ ಬದುಕಾಕ
ಬದುಕ್ತೀವಿ ನಾವ್ಹೀಗೆ ನಮ್ಮಷ್ಟಕ್ಕ
ಕಪ್ಪೆ ಹಿಡಿದು ನುಂಗಿಂದಂಗ ಹಾವ
ನುಂಗಾಕ ಹತ್ತೀರ ಒಳ್ಳೆಯವರ ಜೀವ

ಕೋಳಿಪೀಳಿ ತಿಂದ್ಹಂಗ ಬೆಕ್ಕು ಹಿಡಿದುಕೊಂಡು
ತಿಂತೀರಾ ಒಳ್ಳೆಯವರನ್ನ ಬಡ್‌ಬಡಿದುಕೊಂಡು
ಬಿಟ್‌ಬಿಡ್ರೊ ಯಪ್ಪಾ ನಮ್ಮನ್ನ ಬದುಕಾಕ
ಬದುಕ್ತೀವಿ ನಾವೀಗ ನಮ್ಮಷ್ಟಕ್ಕ

ನಿಮ್ಮ ಪಲ್ಲಕ್ಕಿ ಹೊತ್ತವರ ಮರಳರಂತಾ
ಉರಿದು ನೆಲದಲ್ಲಿ ಹೊಂಟಿರಪ್ಪ ಮ್ಯಾಲ್ ಕುಂತಾ
ನೊಂದ ಬೆಂದ ಜನ ಒಮ್ಮೆ ರೊಚ್ಚಿಗೆದ್ದಾರ
ಊರುಬಿಟ್ಟ ಓಡ್ತೀರಾ ಹೊರಳಿ ನಿಂತರಾ…
ಪಕ್ಕಾ ಉತ್ತರ ಕರ್ನಾಟಕದ ಶೈಲಿಯ ಈ ಕವಿತೆಯನ್ನು ಅ,ಆ,ಇ,ಈ ಗೊತ್ತಿಲ್ಲದ, ಒಂದು ಎರಡು ಎಣಿಸಲು ಬರದ ಓರ್ವ ಅನಕ್ಷರಸ್ಥ ಬರೆದಿದ್ದು ಎಂದರೆ ನಂಬಲಿಕ್ಕೆ ಕಷ್ಟವಾಗಬಹುದು. ಅಥವ ಒಂದೇ ಕವಿತೆಗೆ ಅವರ ಪಾಂಡಿತ್ಯ ಮುಗಿದು ಹೋಗಿದ್ದರೆ ಅವರೇನು ಮಹಾ ಬಿಡಿ ಎನ್ನಬಹುದಿತ್ತು. ಆದ್ರೆ ಬಿಜಾಪುರ ಜಿಲ್ಲೆಯ ಬೀಳಗಿಯ ಅನಕ್ಷರಸ್ಥ ರೈತ ಸಿದ್ದಪ್ಪ ಸಾಬಣ್ಣ ಬಿದ್ರಿ ಇಂಥ ಸಾವಿರಾರು ಕವಿತೆಗಳನ್ನು ರಚಿಸಿದ್ದಾರೆ. ಈಗ್ಲೂ ಅವರಿಗೆ ಓದಲು ಬರುವುದಿಲ್ಲ. ಅ,ಆ,ಇ,ಈ ಜ್ಞಾನವಿಲ್ಲ. ಹಾಗಾದ್ರೆ ಇದೆಲ್ಲ ಹೇಗೆ ಸಾಧ್ಯವಾಯ್ತು ಎಂಬ ಪ್ರಶ್ನೆ ಏಳಬಹುದು.
ಇದೀಗ ತಾನೆ ಪರಿಸರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಶಿವಾನಂದ ಕಳವೆಯವರು ಈ ಅನಕ್ಷರಸ್ಥ ಪ್ರತಿಭೆಯನ್ನು ಹುಡುಕಿ ತಂದಿದ್ದರು. ಕಳವೆಯ ಕಾನ್ಮನೆಯ ಸಮಾರಂಭವೊಂದರಲ್ಲಿ ನೆಲಮೂಲದ ಮಂದಿಯನ್ನು ಪರಿಚಯಿಸಲು ಹೊರಟ ಕಳವೆಯವರಿಗೆ ಕಂಡಿದ್ದು ಇದೇ ಸಿದ್ದಪ್ಪ ಬಿದ್ರಿ. ಆವತ್ತು ಸಿದ್ದಪ್ಪನವರ ಕವಿತೆ ಜೊತೆಗೆ ಮಾತುಕತೆಯಿತ್ತು. ಉತ್ತರ ಕರ್ನಾಟಕದ ಭಾಷೆಯಲ್ಲಿ ನೂರಾರು ಕವಿತೆಗಳನ್ನು ಹೇಳುವ ಸಿದ್ದಪ್ಪ ಮೊದಲಿಗೆ ಆಶ್ಚರ್ಯದ ವ್ಯಕ್ತಿ ಅನ್ನಿಸಲಿಲ್ಲ. ಆದ್ರೆ ಅವರ ಕಥೆ ಕೇಳಲು ಕುಳಿತಾಗ ಮೈ ಜುಂ ಅಂದಿತ್ತು.
೫೮ ವರ್ಷದ ಸಿದ್ದಪ್ಪ ಶಾಲೆಗೆ ಹೋಗಿದ್ದು ೮ ದಿನ ಮಾತ್ರ. ಒಮ್ಮೆ ಅವರು ಶಾಲೆಗೆ ಹೋದಾಗ, ಅಲ್ಲಿ ಮಾಸ್ತರ್ ಹುಡುಗನೊಬ್ಬನಿಗೆ ಹೊಡೆಯುತ್ತಿದ್ದರಂತೆ. ಅದನ್ನು ಕಂಡು ಹೆದರಿದ ಸಿದ್ದಪ್ಪ  ಪಾಠಿಚೀಲ ಹಾಕಿಕೊಂಡು ನೇರವಾಗಿ ನಡೆದಿದ್ದು ಹೊಲಕ್ಕೆ. ಕುರಿ ಕಾಯುವ ಕೆಲಸಕ್ಕೆ. ಅಲ್ಲಿಂದ ನಂತರ ಸಿದ್ದಪ್ಪನ ಬದುಕು ಹೊಲ, ಕುರಿ ಇಷ್ಟಕ್ಕೆ ಸೀಮಿತವಾಯ್ತು.
ಹೀಗೆ ೨೦ ವರ್ಷಗಳ ಹೊಲದಲ್ಲಿ ಒಂಟಿಯಾಗಿ ಕುರಿಗಳ ಜೊತೆ ಮಾತಾಡುತ್ತಾ, ಆಡುತ್ತಾ ಜೀವನ ಸಾಗಿಸುತ್ತಿದ್ದ ಸಿದ್ದಪ್ಪ ೨೦ ವರ್ಷದ ಬಳಿಕ ಕವನ ಕಟ್ಟಲು ಆರಂಭಿಸುತ್ತಾರೆ. ೧೯೮೬ರಲ್ಲಿ ಅವರು ಮೊದಲ ಕವನ ರಚಿಸಿದ್ದಂತೆ. ಸಿದ್ದಪ್ಪ ಅವರ ಕವನ ರಚನೆಯ ಕಥೆ ಬಹಳ ಮಜವಾಗಿದೆ. ಅವರು ಹೊಲದಲ್ಲಿ ಕುಳಿತಾಗ ಅವರಿಗೊಂದು ಕವಿತೆ ಹೊಳೆಯುತ್ತದೆ. ಹಾಗಂತ ಅವರಿಗೆ ಪದಗಳ ಪರಿಚಯವಿಲ್ಲ. ಶಬ್ದಗಳ ಜೋಡಣೆಗೆ ಕನ್ನಡದಲ್ಲಿ ಎಷ್ಟು ಅಕ್ಷರಗಳಿವೆ, ಯಾವ್ಯಾವ ಅಕ್ಷರಗಳಿವೆ ಎಂಬುದು ಅವರಿಗೆ ಗೊತ್ತಿಲ್ಲ. ಹೊಳೆದ ಕವಿತೆಯೊಂದಿಗೆ ಹೊಲದಿಂದ ಊರಿಗೆ ಓಡಿಬರುತ್ತಾರೆ. ಅಲ್ಲಿ ಅಕ್ಷರ ಬಲ್ಲವರಿಗಾಗಿ ಹುಡುಕಾಡುತ್ತಾರೆ. ಹೀಗೆ ಓಡಿಬಂದು ತಂದ ಸಿದ್ದಪ್ಪ ಕವಿತೆಗಳನ್ನು ಮೊದಲಿಗೆ ಅಕ್ಷರ ರೂಪಕ್ಕೆ ಇಳಿಸಿದ್ದು ರಜಿಯಾ ಸುಲ್ತಾನ್ ಎಂಬ ಹುಡುಗಿ. ಹೊಳೆದ ಕವಿತೆಗಳನ್ನು ಸಿದ್ದಪ್ಪ ರಜಿಯಾ ಬಳಿ ಹೇಳುತ್ತಿದ್ದರು. ಆಕೆ ಅದನ್ನು ಬರೆದುಕೊಡುತ್ತಿದ್ದಳು. ಹಾಗಂತ ಆಕೆ ಬರೆದ ಕವಿತೆಯನ್ನು ಓದುವ, ಅದರಲ್ಲಿ ತಿದ್ದುಪಡಿ ಮಾಡಿ ಸರಿ-ತಪ್ಪು ವಿಮರ್ಶಿಸುವ ಭಾಗ್ಯ ಸಿದ್ದಪ್ಪನಿಗಿಲ್ಲ. ಯಾಕಂದ್ರೆ ಅವರಿಗೆ ಓದಲು ಬರುವುದಿಲ್ಲ.
ರಜಿಯಾ ಮದುವೆಯಾಗಿ ಹೋದ ಬಳಿಕ ಅವರಿವರ ಬಳಿ ಸಿದ್ದಪ್ಪ ಕವನ ಬರೆಸಿದರು. ಹೀಗೆ ಬರೆಸಿ ಬರೆಸಿ ಇವತ್ತು ೨೪ ಕವಿತೆ ಸಂಕಲನಗಳು ಸಿದ್ದಪ್ಪನವರಿಂದ ಪ್ರಕಟವಾಗಿದೆ.
’ಸರ್ ಈಗೀಗ ಮರೆವು ಜಾಸ್ತಿರಿ. ಒಂದು ಸಲ ಹೊಳೆದ ಕವನ ಇವತ್ತಿಗೂ ನೆನಪು ಅದಾರಿ. ಕೆಲವೊಂದು ಮರೆತು ಹೋಗದ. ಆದ್ರೂ ನೀವು ಪುಸ್ತಕ ನೋಡಿ ಒಂದೆರಡು ಸಾಲು ಹೇಳಿದ್ರೆ ಉಳಿದ ಸಾಲುಗಳು ಮತ್ತೆ ನೆನಪ್ ಆಗ್ತದ’ ಎನ್ನುವ ಸಿದ್ದಪ್ಪ ತಾವು ೧೮ ವರ್ಷದ ಹಿಂದೆ ಗೀಚಿದ ಕವನವನ್ನು ಈಗಲೂ ಹೇಳುತ್ತಾರೆ. ತಮ್ಮ ೨೪ ಪುಸ್ತಕಗಳಲ್ಲಿ ಇರುವ ೧೦೦೦ಕ್ಕೂ ಅಧಿಕ ಕವನದಲ್ಲಿ ಸುಮಾರು ೭೦೦-೮೦೦ ಕವನಗಳು ಸಿದ್ದಪ್ಪನವರ ಬಾಯಲ್ಲಿದೆ.
ಸಿದ್ದಪ್ಪ ಎಷ್ಟು ಅನಕ್ಷರಸ್ಥ ಎಂದರೆ, ತಾವು ಬರೆದ ಪುಸ್ತಕಗಳನ್ನು ಮಾರಾಟಕ್ಕೆ ತರುತ್ತಾರೆ. ಯಾರೋ ಅವರ ೪ ಪುಸ್ತಕ ಖರೀದಿಸಿ ೩೫೦ ರೂ. ಕೊಟ್ಟರು. ’ಸರ್ ಅಷ್ಟ್ ರೊಕ್ಕ ಯಾಕ್ ಕೊಡಾಕ್ ಹತ್ತೀರಿ?’ ಇದು ಸಿದ್ದಪ್ಪನವರ ಬಾಯಿಂದ ಬಂದ ಮಾತು. ’ಲೆಕ್ಕ ಮಾಡಿದ್ರೆ ಇಷ್ಟ ಆಗುತ್ತೆ’ ಅಂದ್ರು ಅವರು. ಅಂದ್ರೆ, ಎಷ್ಟು ಪುಸ್ತಕಕ್ಕೆ ಎಷ್ಟು ಬೆಲೆಯಾಯ್ತು ಎಂಬುದು ಸಿದ್ದಪ್ಪನಿಗೆ ತಿಳಿದಿಲ್ಲ.
ಇವರಿಗೆ ಎಲ್ಲಿಯೇ ಕವನ ಹೊಳೆಯಲಿ, ಅಲ್ಲಿ ಇರುವವರ ಬಳಿ ತಮ್ಮ ಕವನವನ್ನು ಅಕ್ಷರ ರೂಪಕ್ಕೆ ಇಳಿಸಿಕೊಳ್ಳುತ್ತಾರೆ. ’ಡಾಕ್ಟರ್, ಲಾಯರ್ ಎಲ್ಲ ನನ್ನ ಕವನ ಬರೆದಾರ್ರಿ. ನೂರಾರು ಕವಿತೆ ಹೊಳಿತಾವೆ. ಒಳ್ಳೆ ಕವಿತೆ ಮನಸ್ಸಿನಲ್ಲಿ ಉಳಿಯುತ್ತೆ. ವಿಧಾನಸೌಧದಲ್ಲಿ ಬಿಜಾಪುರದ ಎಂಎಲ್‌ಸಿಯೊಬ್ಬರು ಇದ್ದರು. ಅವರ ಬಳಿ ಕವನ ಬರೆಸಿದೀನ್ರಿ. ಬೆಂಗಳೂರು ರೈಲ್ವೆ ಸ್ಟೇಷನ್, ಮೈಸೂರಿನಲ್ಲಿ ಕವಿತೆ ಹೊಳೆದಿದ್ದು ಇದೆ’ ಎಂದು ನಗುತ್ತಾರೆ ಸಿದ್ದಪ್ಪ.
ಹಾಗಂತ ಸಿದ್ದಪ್ಪನವ್ರ ಬದುಕು ಖಂಡಿತ ಹೂವಿನ ಹಾಸಿಗೆಯಲ್ಲ. ತುತ್ತು ಅನ್ನಕ್ಕೆ ಕಷ್ಟಪಟ್ಟಿದ್ದಾರೆ.
ಇವರಿಗೆ ೪ ಎಕರೆ ಹೊಲವಿದೆ. ಜೋಳ, ಗೋಧಿ, ಸೂರ್ಯಕಾಂತಿ ಬೆಳೆಯುತ್ತಾರೆ. ಬರಡು ಭೂಮಿಯಲ್ಲಿ ಬೆಳೆ ನಂಬಿಕೊಳ್ಳುವಂತಿಲ್ಲ. ಸಿನಿಮಾ ನೋಡೋದು, ನಾಟಕ ನೋಡೋ ಹುಚ್ಚು. ರಾಜ್‌ಕುಮಾರ್, ಪಿ.ಬಿ.ಶ್ರೀನಿವಾಸ್ ಹಾಡುಗಳನ್ನು ಕೇಳಿಕೊಂಡು ಬೆಳೆದರು. ಇವರಿಗೆ ಈ ಶಬ್ಧಕ್ಕೆ ಇದೇ ಅರ್ಥ ಎಂಬುದು ನಿತ್ಯದ ಮಾತುಗಳಿಂದ ಮಾತ್ರ ತಿಳಿಯುತ್ತದೆ.
ಬಾಳ್ ಶಾಣ್ಯರಪ್ಪ
ನೀವ್ ಬಾಳ್ ಶಾಣ್ಯರು
ದುಡಿದವ್ರು ತಿಂದು ಗಪ್ಪನೆ ಕುಂತವ್ರು
ಬಾಹುಬೆಕ್ಕಿನಂತವ್ರು
ಬಾಳ್ ಶಾಣ್ಯರಪ್ಪ
ನೀವ್ ಬಾಳ್ ಶಾಣ್ಯರು
ದುಡಿಲಾರದ ದುಡಿದವರ ಗಂಟು ಹುಡುಕವರು
ಕಾಣದ್ಹಂಗ ಗಂಟು ನುಂಗಿ ಗಪ್ಪನೆ ಕುಂತವ್ರು
ಬಾಳ್ ಶಾಣ್ಯರಪ್ಪ
ನೀವ್ ಬಾಳ್ ಶಾಣ್ಯರು
ಸಿದ್ದಪ್ಪ ಅವರಿಗೆ ತಾನು ದಡ್ಡ ಭಾವನೆ ತುಂಬಾ ಇದೆ. ಹೀಗಾಗಿ ಬುದ್ಧಿವಂತರು, ಶಾಣ್ಯರ ಕುರಿತು ತುಂಬಾ ಕವಿತೆ ಬರೆದಿದ್ದಾರೆ. ೯ ಜನ ಮಕ್ಕಳಲ್ಲಿ ಇವರು ದೊಡ್ಡವರು. ಮನೆಯವರು ಸಿದ್ದಪ್ಪ ನಾಟಕ, ಸಿನಿಮಾ ನೋಡಿಕೊಂಡು ತಿರುಗುತ್ತಾನೆ ಅಂತಾ ಮದ್ವೆ ಮಾಡಿ ಮನೆಯಿಂದ ಹೊರ ಹಾಕಿದ್ರು. ಆಗ ಒಂದು ಹೊತ್ತಿನ ಊಟಕ್ಕೆ ಅಲೆದಾಡಿದ್ರು.
೧೯೯೦ರಲ್ಲಿ ಬರಗಾಲ ಬಿದ್ದಾಗ ಇವರ ’ಹೊಳೆಸಾಲು ಹೋರಿ’ ಪುಸ್ತಕ ಪ್ರಿಂಟ್ ಆಗಿತ್ತು. ಆಗ ಮನೆಯಲ್ಲಿ ತಿನ್ನಲು ಅನ್ನ ಇರಲಿಲ್ಲ. ಆಗ ಶಿಕ್ಷಣ ಇಲಾಖೆಯವರು ಈ ಪುಸ್ತಕ ಖರೀದಿಸಿ ಅನ್ನ ಕೊಟ್ಟರು ಎನ್ನುತ್ತಾರೆ ಸಿದ್ದಪ್ಪ. ಇವರ ಎಲ್ಲ ಪುಸ್ತಕಗಳನ್ನು ಯಾರ‍್ಯಾರೋ ಪ್ರಿಂಟ್ ಮಾಡಿಸಿದ್ದಾರೆ. ಖ್ಯಾತನಾಮರಿಂದ ಪುಸ್ತಕಕ್ಕೆ ಮುನ್ನುಡಿ ಬರೆಸಿದ್ದಾರೆ. ಹೀಗೆ ದಾನಿಗಳಿಂದ ಪುಸ್ತಕ ಪ್ರಿಂಟ್ ಮಾಡಿಸಿ ಸಿದ್ದಪ್ಪ ತಮ್ಮ ಬದುಕು ಕಂಡುಕೊಂಡಿದ್ದಾರೆ. ಹಾಗಂತ ಇವರಿಗೆ ಕವಿತೆ ಮಾರಾಟದ ಸರಕಲ್ಲ. ತೀರಾ ಪುಸ್ತಕ, ಪ್ರಶಸ್ತಿ ಯಾವುದರ ಹುಚ್ಚೂ ಇಲ್ಲ. ಅದೆಲ್ಲ ಶಾಣ್ಯರಿಗೆ ಮೀಸಲು ಎಂಬುದು ಇವರ ಭಾವನೆ! ಊರೂರು ಅಲೆದು ಕಾರ್ಯಕ್ರಮಗಳಲ್ಲಿ ತಮ್ಮ ಕವಿತೆ ಹೇಳಿ, ಮಾತಾಡುವ ಸಿದ್ದಪ್ಪ ಅದ್ರಲ್ಲೇ ಖುಷಿ ಕಂಡುಕೊಂಡಿದ್ದಾರೆ. ನಿಮಗೂ ಸಿದ್ದಪ್ಪ ಬಿದ್ರಿ ಬಳಿ ಮಾತಾಡಬೇಕು ಅನ್ನಿಸಿದ್ರೆ ೯೬೧೧೩೭೪೦೫೩ ನಂಬರ್‌ನಲ್ಲಿ ಸಿಗ್ತಾರೆ.
(ಬೇಸರದ ವಿಷಯ ಅಂದ್ರೆ ಇದನ್ನು ಕನ್ನಡ ನಾಡಿನ ಎರಡು ಗಣ್ಯ ಪತ್ರಿಕೆಗಳಿಗೆ ಕಳುಹಿಸಿದ್ದೆ. ಆದ್ರೆ ಎರಡು ಕಡೆ ಪ್ರಕಟಣೆಗೆ ಅಯೋಗ್ಯವಾಗಿದೆ! ಇಂಥ ವ್ಯಕ್ತಿಯನ್ನು ನಮ್ಮ ಮಾಧ್ಯಮಗಳು ಗುರುತಿಸಬೇಕಿತ್ತು ಅನ್ನೋದಷ್ಟೆ ನನ್ನ ಕಾಳಜಿ. ಇದೇ ವ್ಯಕ್ತಿಗೆ ಸನ್ಮಾನ ಮಾಡಿದ ಫೋಟೊ ಪತ್ರಿಕೆಯೊಂದರಲ್ಲಿ ಬಂದಿತ್ತು!)