Feeds:
ಲೇಖನಗಳು
ಟಿಪ್ಪಣಿಗಳು

Archive for ಡಿಸೆಂಬರ್, 2010

ಕಣ್ಣು ಮುಚ್ಚಿ ಬಿಡುವುದರೊಳಗೆ ೨೦೧೦ ಮುಳುಗುವ ಹೊತ್ತಾಗಿದೆ. ೨೦೦೯ಕ್ಕೆ ಹೋಲಿಸಿದರೆ ಈ ವರ್ಷ ಬೇಗ ಮುಗಿಯಿತೇನೊ ಅನ್ನಿಸುತ್ತಿದೆ. ಪ್ರತಿವರ್ಷ ಕಳೆದಾಗಲೂ ಹೀಗೆ ಅನ್ನಿಸುತ್ತದೆ! ಹೊಸ ವರ್ಷದಂದು ಮಾಡಿಕೊಂಡ ಸಂಕಲ್ಪಗಳು ಟ್ರಂಕಿನೊಳಗೆ ಜೋಪಾನವಾಗಿವೆ. ಇವುಗಳಿಗೆ ತುಕ್ಕು ಹಿಡಿಯುವುದಿಲ್ಲ, ಜಿರಳೆ ಕಾಟವಿಲ್ಲ. ಇಲಿ ತಿನ್ನುವುದಿಲ್ಲ, ನಾಯಿಯಂತೂ ಮೂಸುವುದೇ ಇಲ್ಲ! ಜಗತ್ತು ದುಡ್ಡಿನ ಹಿಂದೆ ಓಡುತ್ತಿದೆ. ಜನ ಕಾರು, ಸೈಟು, ಬಂಗಲೆಯ ಕನಸಿನಲ್ಲೇ ನಿದ್ರೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮದ ಮಂದಿಗೆಲ್ಲ ಉಗಿಯುತ್ತಿದ್ದಾರೆ ಮತ್ತು ಉಗಿಯುತ್ತಲೇ ಇರುತ್ತಾರೆ. ಅವರು, ಅವರ ಪಾಡಿಗೆ ಮಾಡಬೇಕಾದ ಕೆಲಸ ಮಾಡುತ್ತಾರೆ. ಹೋಗ್ಲಿ ಬಿಡಿ, ಈ ಜಗತ್ತು ಹೀಗೇನೆ. ಅದರ ಕುರಿತಾಗಿ ಯೋಚಿಸಿದರೆ ಸುಮ್ಮನೆ ಸಮಯ ಹಾಳು ಅನ್ನುತ್ತಾ ಸಿನಿಮಾ, ನಾಟಕಕ್ಕೆ ಹೋದರೆ, ಅಲ್ಲಿ  ಮತ್ತದೇ ವ್ಯವಸ್ಥೆಯನ್ನು ಬಿಂಬಿಸುವ ದೃಶ್ಯಗಳು, ಕಥೆಗಳು. ನಡು ನಡುವೆಯೆ ಹಾಸ್ಯ, ಹಾಡು, ಕುಣಿತ…

ಎಲ್ಲರ ಮನೆಯ ದೋಸೆಯೂ ತೂತು ಎಂಬಂತೆ, ವ್ಯವಸ್ಥೆಯ ಎಲ್ಲ ಭಾಗಗಳೂ ಹಾಗೆ ಆಗಿವೆ. ನಮ್ಮ ಮನೆ ಕಥೆ ಹೇಳಿಕೊಂಡು ಇನ್ನೊಬ್ಬರಿಗೆ ಯಾಕೆ ಮನರಂಜನೆ ನೀಡಬೇಕು ಎಂಬ ವಾದ ಕೆಲವರದ್ದು. ಹಾಗಾಗಿ ಅವರ ಸುತ್ತಲಿನ ವ್ಯವಸ್ಥೆಯ ಕುರಿತು ಯಾವತ್ತೂ ಮಾತನಾಡುವುದಿಲ್ಲ. ದುಡಿಯುವ ಕ್ಷೇತ್ರದ ಕುರಿತು ಹೇಳುವುದಿಲ್ಲ. ಹಾಗೆ ಹೇಳಿದರೆ ಸುಮ್ಮನೆ ನಿಷ್ಠುರ. ಎಲ್ಲರ ಕೆಂಗಣ್ಣು ನಮ್ಮ ಮೇಲೆ.

ಗಳು, ಗಳು, ಗಳು…ನಿಜ, ಇಲ್ಲಿ ಯಾವುದಕ್ಕೂ ಜೀವ ಇಲ್ಲ. ನಮ್ಮ ಕಣ್ಣುಗಳು ಎಲ್ಲದಕ್ಕೂ ಜೀವ ತುಂಬಿಸಿಕೊಂಡು ನೋಡಬೇಕಷ್ಟೆ. ಒಂದಷ್ಟು ದಿನದ ನಂತರ ಆ ಕಣ್ಣಿಗೂ ಬೇಜಾರು. ಆವತ್ತು ಇಲ್ಲಿಗೆ ಬಂದಾಗ ಇದ್ದಷ್ಟು ಕನಸು, ಕಲ್ಪನೆ, ಭ್ರಮೆಗಳು ಈಗಿಲ್ಲ. ಇರಲು ಸಾಧ್ಯವೂ ಇಲ್ಲ. ಒಂದು ವಸ್ತುವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಆರಾಧಿಸಿದರೆ ಸಹಜವಾಗಿ ಅದರ ಮೌಲ್ಯ ಕುಸಿಯುತ್ತದೆ. ಆದರೆ ಕಾಗದದ ನೋಟು ಮಾತ್ರ ಯಾಕೆ ಈ ಮಾತಿಗೆ ಹೊರತಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಸರಿಯಾಗಿ ನೋಡಿದರೆ ಅದು ಯಕಶ್ಚಿತ್ ಕಾಗದದ ನೋಟು. ಅದನ್ನು ಉತ್ಪಾದಿಸುವುದು ಭತ್ತ, ಗೋಧಿ ಬೆಳೆದಷ್ಟು ದೊಡ್ಡ ಕೆಲಸವಲ್ಲ. ಕಾರು, ಬೈಕು ತಯಾರಿಸಲು ಬೇಕಾದಷ್ಟು  ಶ್ರಮ ಬೇಕಿಲ್ಲ. ಆದ್ರೂ ಅವೆಲ್ಲಕ್ಕಿಂತ ಹೆಚ್ಚಿನ ಮೌಲ್ಯ ಆ ನೋಟಿಗೆ! ಬಹುಶಃ ಬ್ರಹ್ಮದೇವ ನಿದ್ದೆ ಬಾರದ ಅರ್ಧ ರಾತ್ರಿಯಲ್ಲಿ  ಮಾಡಿದ ಸೃಷ್ಟಿಯಿರಬೇಕು ಈ ನೋಟುಗಳು!

ಮಾಧ್ಯಮ ಕುರಿತಾಗಿ ಏನಾದರೂ ಮಾತನಾಡಿದರೆ ಜನಕ್ಕೆ ಖುಷಿ. ಮಾಧ್ಯಮದವರು ಉಳಿದ ಕ್ಷೇತ್ರದ ಕುರಿತಾಗಿ ಬರೆಯುತ್ತಾರೆ ಎಂಬ ಸಿಟ್ಟು, ಅವರ ಆ ಖುಷಿಗೆ ಕಾರಣವಾಗಿರಬಹುದು. ಪ್ರಾಜೆಕ್ಟ್‌ನಲ್ಲಿ ಸಹೊದ್ಯೋಗಿಗಳಿಗೆ ಮೋಸ ಮಾಡುವ ಸಾಫ್ಟ್‌ವೇರ್ ಕ್ಷೇತ್ರದ ವ್ಯವಸ್ಥಾಪಕನ ಕುರಿತು ಬರೆಸಬಹುದು. ವೇತನ ಏರಿಕೆ ನೆಪದಲ್ಲಿ ಒಂದಷ್ಟು ಹುಡುಗಿಯರನ್ನು ಖಾಸಗಿ ಕೋಣೆಗೆ ಕರೆಯುವ ಕಚೇರಿಯ ಅಧಿಕಾರಿಯ ಕುರಿತು ಬ್ರೇಕಿಂಗ್ ನ್ಯೂಸ್ ಹಾಕಿಸಬಹುದು. ಹಾಕಲು ಕಾಸು ಕೇಳುವವನ ಕುರಿತು? ಎಂಬ ಪ್ರಶ್ನೆ ಅನೇಕರದ್ದು. ಹಾಗಂತ ಇಡೀ ಮಾಧ್ಯಮ ಕ್ಷೇತ್ರವೇ ಹೀಗೇ ಎನ್ನಲು ಸಾಧ್ಯವಿಲ್ಲ. ಪ್ರತಿ ಕಚೇರಿಯಂತೆ ಮಾಧ್ಯಮ ಕಚೇರಿಗಳು. ಇಲ್ಲಿನ ಮಂದಿಯೂ ಉಪ್ಪು, ಹುಳಿ, ಖಾರ ತಿಂದು ಬದುಕುವವರು. ಸಂಸಾರ, ಮನೆ, ಮಕ್ಕಳು…ಇತ್ಯಾದಿ ಹೊಂದಿದವರು. ಸ್ವಾಮಿಗಳ ಕುರಿತಾಗಿ ಸಮಾಜ ಭ್ರಮೆಯಲ್ಲಿ ಬದುಕುತ್ತಿರುವಂತೆ, ಸಂವಹನ ಮಾಧ್ಯಮಗಳ ಕುರಿತು ಭ್ರಮೆ ಇಟ್ಟುಕೊಂಡಿದೆ. ಹಾಗಂತ ಇದು ಪುಕ್ಕಟ್ಟೆ ಭ್ರಮೆಯಲ್ಲ.
ಬೇರೆ ಕ್ಷೇತ್ರದ ಒಬ್ಬಾತ, ಮಾಧ್ಯಮದವನಿಗೆ ಕಾಫಿ ಕೊಡಿಸಿದ ಅಂದರೆ, ಅದರ ಹಿಂದೆ ಆತನ ಲಾಭ ಇರುತ್ತದೆ. ಅವನ ಫೋಟೊ, ಅವನ ಕುರಿತಾದ ಸುದ್ದಿ ಹಾಕಿಸಿಕೊಳ್ಳಲು ಹುನ್ನಾರ ಎಂಬುದು ಅರ್ಥವಾಗುತ್ತದೆ. ಕೆಲವರಿಗೆ ಅವರ, ಸ್ನೇಹಿತರು, ಮಕ್ಕಳು, ಕುಟುಂಬದ ಕುರಿತು ಪ್ರಚಾರ ತೆಗೆದುಕೊಳ್ಳುವ ಬಯಕೆ. ಹಾಗಾಗಿ ಕಾಫಿ ಜೊತೆಗೆ ಒಂದಷ್ಟು…ಕೊಡುವಾಗ ತೆಗೆದುಕೊಳ್ಳುವುದರಲ್ಲಿ ತಪ್ಪೇನಿದೆ ಎನ್ನುತ್ತಾ ಜೇಬಿಗಿಳಿಸುತ್ತಾರೆ.

ಈ ಜೇಬಿಗೆ ಇಳಿಸುವ ಪ್ರಕ್ರಿಯೆಯ ಹಿಂದೆ ಸಾಕಷ್ಟು  ಆಲೋಚನೆಗಳಿವೆ. ಹೀಗೆ ಕೊಟ್ಟವರು, ತಾವು ಕೊಟ್ಟಿದ್ದನ್ನು, ಅದಕ್ಕೆ ಕಾರಣವನ್ನು ಹೇಳುವುದಿಲ್ಲ. ಆತ ತೆಗೆದುಕೊಂಡಿದ್ದನ್ನು ಮಾತ್ರ ಹೇಳುತ್ತಾರೆ. ಎರಡನೆಯದಾಗಿ ಇವತ್ತು ಲಂಚವಿಲ್ಲದ ಕ್ಷೇತ್ರ ತುಂಬಾ ವಿರಳ. ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಚಿಕ್ಕ-ಪುಟ್ಟ ಕೆಲಸಕ್ಕೂ ೫೦೦-೬೦೦ರೂ. ಕೇಳುತ್ತಾನೆ. ಅವರೊಂದಿಗೆ ಗಲಾಟೆ, ಜಗಳ ಎಲ್ಲವೂ ವ್ಯರ್ಥ. ಸುಮ್ಮನೆ ಕೊಟ್ಟು ಬಂದವನೇ ಜಾಣ. ಯಾಕಂದ್ರೆ ಆತ ತೆಗೆದುಕೊಂಡ ೬೦೦ರೂ.ನಲ್ಲಿ ೩೦೦ ಮೇಲಿನ ಅಧಿಕಾರಿಗಳಿಗೆ ಹೋಗುತ್ತದೆ. ಹಾಗಾಗಿ ನೀವು ಆತನ ವಿರುದ್ಧ ಯಾವ ಕ್ರಮವನ್ನೂ ನಿರೀಕ್ಷಿಸುವಂತಿಲ್ಲ. ಹೆಸರಿಗೆ ಮಾತ್ರ ಪತ್ರಕರ್ತರು. ಅವರೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪತ್ರಿಕೆಯಲ್ಲಿ ಬರೆಯುತ್ತೇನೆ/ಟಿವಿಯಲ್ಲಿ  ಹಾಕುತ್ತೇನೆ ಎಂಬ ಬೆದರಿಕೆಗೆ ಯಾವ ಅಧಿಕಾರಿಯೂ ಹೆದರುವುದಿಲ್ಲ. ಎಷ್ಟು  ಅಧಿಕಾರಿಗಳ ವಿರುದ್ಧ, ಅದೆಷ್ಟು ದಿನ ಬರೆಯುತ್ತೀರಿ ಎಂಬ ವಾದ ಅವರದ್ದು. ಅದು ವಾಸ್ತವ ಕೂಡ ಹೌದು.
ಸರಕಾರಿ ಕಚೇರಿಗಿಂತ ಭಿನ್ನವಾಗೇನಿಲ್ಲ ಮಾಧ್ಯಮ ಜಗತ್ತು. ವರದಿಗಾರ ತೆಗೆದುಕೊಳ್ಳದಿದ್ದರೆ, ಮುಖ್ಯ ವರದಿಗಾರನ ಹತ್ತಿರ ಹೋಗುತ್ತಾರೆ. ಅಲ್ಲಿ  ವಿಫಲವಾದರೆ ಸಂಪಾದಕರ ಬಳಿ ಹೋಗುತ್ತಾರೆ. ಅದು ಯಶಸ್ವಿಯಾಗದಿದ್ದರೆ ಜಾಹೀರಾತಿನವರ ಬಳಿ ಹೋಗುತ್ತಾರೆ. ಪ್ರತಿ ಸಂಸ್ಥೆಯೂ ಜಾಹೀರಾತು ಆಧಾರಿತ. ಮಾಧ್ಯಮದ ಆದಾಯದ ಮೂಲವೇ ಅದಾಗಿರುವುದರಿಂದ, ಅದನ್ನು ವಿರೋಧಿಸುವುದು ಥರವಲ್ಲ. ಆದರ್ಶ, ಸಿದ್ದಾಂತ…ನೀನು ದುಡ್ಡು  ಹಾಕಿ ಕೈ ಸುಟ್ಟುಕೊಳ್ಳುತ್ತೀಯಾ? ಎಂಬ ಯಜಮಾನನ ಪ್ರಶ್ನೆಗೆ ಉತ್ತರವಿಲ್ಲವಾಗುತ್ತದೆ. ಸಹೊದ್ಯೋಗಿಗಳಿಗೆ ಸಂಬಳ ಕೊಡುತ್ತೀಯಾ ಎಂದರೆ ಮಾತು ನಿಲ್ಲುತ್ತದೆ. ಹಾಗಾಗಿಯೇ ಅನೇಕ ಘಟನೆಗಳ ಕುರಿತು ಮರು ದಿನವೇ ಸ್ಪಷ್ಟೀಕರಣ ಪ್ರಕಟವಾಗುವುದು! ಈ ಎಲ್ಲ ಪ್ರಕ್ರಿಯೆಗಳ ನಡುವೆ ಸಾಮಾನ್ಯ ಪತ್ರಕರ್ತನೊಬ್ಬ ಸೋತಿರುತ್ತಾನೆ. ಇಷ್ಟೆಲ್ಲದರ ನಡುವೆಯೂ ತಮ್ಮತನ ಉಳಿಸಿಕೊಂಡು ಬಂದವರು ಅನೇಕರಿದ್ದಾರೆ.

ಯಾವುದೇ ಕ್ಷೇತ್ರದ ಯಾವ ಕಚೇರಿಯನ್ನು ಕೆದಕಿದರೂ ಇಂಥ ಅನೇಕ ಪ್ರಕರಣಗಳ ಸಿಗುತ್ತವೆ. ಯಾಕಂದ್ರೆ ಎಲ್ಲ ಕಡೆ ಕೆಲಸ ಮಾಡುತ್ತಿರುವವರು ಮನುಷ್ಯರು ಹಾಗೂ ದುಡ್ಡಿಗಾಗಿ ಮಾಡುತ್ತಿರುವುದು. ಪ್ರತಿಯೊಬ್ಬರಿಗೂ, ಅವರು ದುಡಿಯುತ್ತಿರುವ ಕ್ಷೇತ್ರ ಒಂಥರ ಮುಳ್ಳು ತಂತಿ ಮೇಲಿನ ನಡುಗೆ. ಕೆಲಸದ ಆಯ್ಕೆ ಪ್ರಕ್ರಿಯೆಯ ಪ್ರಹಸನವೇ ಒಂದು ರೀತಿ ಮಜ. ಈ ಕುರಿತು ವರದಿ ಬಿತ್ತಿರಿಸದರೆ ಬ್ರೇಕಿಂಗ್ ವಾಹಿನಿಗಳ ಕಾಲು ಬುಡದಲ್ಲೇ ಖಂಡಿತವಾಗಿಯೂ ಬ್ರೇಕಿಂಗ್ ನ್ಯೂಸ್ ಸಿಗುತ್ತದೆ! ಇಲ್ಲಿ ಬದುಕುವ ಆಸೆಯುಳ್ಳವರ್‍ಯಾರು, ಅವರಿಗೇ ಸ್ವತಃ ಅನುಭವವಾಗಿದ್ದರೂ ಅಂಥ ವರದಿ ಸೆರೆ ಹಿಡಿಯುವ ಸಾಹಸಕ್ಕೆ ಹೋಗುವುದಿಲ್ಲ. ಇಲ್ಲಿ ಪ್ರತಿಯೊಬ್ಬರೂ ಅವರ/ಅವರ ಸ್ನೇಹಿತರ, ಕುಟುಂಬದ ಪಾಲಿಗೆ ಸತ್ಯ ಹರಿಶ್ಚಂದ್ರರು. ಇತರರ ಪಾಲಿಗೆ ಮಾತ್ರ ಭ್ರಷ್ಟರು. ಎಲ್ಲವನ್ನೂ ಕಂಡು ಕಾಣದಂತೆ ಜೈ, ಜೈ ಅಂದವನೆ ಜಾಣ. ಹೋಗ್ಲಿ ಬಿಡಿ ಈ ಜಗತ್ತು ಹೀಗೇನೆ….ಅಂದುಕೊಳ್ಳುತ್ತಲೇ ಮುಂದಿನ ವರ್ಷವನ್ನು ಸ್ವಾಗತಿಸೋಣ ಅಲ್ವಾ? ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು…ಗಳು…ಗಳು…

Read Full Post »