Feeds:
ಲೇಖನಗಳು
ಟಿಪ್ಪಣಿಗಳು

Archive for ಜೂನ್, 2011

ಹಾಯ್ ಕೋತಿ,

ಈ ಸುಡುಗಾಡು ಕಾಂಕ್ರಿಟು ಜಂಗಲ್ಲಿಗೆ ಬಂದ ಮೇಲೆ ಮೊಬೈಲು, ಮೆಸೇಜು, ಇಮೇಲ್, ಜಿಟಾಕ್‌ಗಳ ಭರಾಟೆಯಲ್ಲಿ ಪತ್ರ ಬರೆಯೋದೆ ಮರೆತು ಹೋದಂತಾಗಿತ್ತು ನೋಡು. ಇವತ್ತು ಬೆಳಿಗ್ಗೆ ಇಂಟರ್‌ನೆಟ್‌ನಲ್ಲೊಂದು ಪ್ರೇಮಪತ್ರ ನೋಡಿದಾಗ ನೆನಪಾಗಿದ್ದು ನನ್ನ ಡಿಗ್ರಿಯ ದಿನಗಳು. ನಿಂಗೆ ಪತ್ರ ಬರೆದು ಅಂಚೆ ಡಬ್ಬಿಯಲ್ಲಿ ಹಾಕೋದು ಅಂದ್ರೆ ನನಗಾವಾಗ ಎಲ್ಲಿಲ್ಲದ ಖುಷಿ. ನಮ್ಮಿಬ್ಬರ ಆರಂಭದ ಪ್ರೀತಿಗೆ ಸೇತುವೆ “ಇಂಗ್ಲೆಂಡ್‌ಲೆಟರ್” ಅಲ್ವಾ?! ಅದು ಇಂಗ್ಲೆಂಡ್ ಲೆಟರ್ ಅಲ್ಲ, ಇನ್‌ಲ್ಯಾಂಡ್ ಲೆಟರ್ ಎಂದು ತಿಳಿಯದಷ್ಟೂ ಗುಗ್ಗು ನಾನಾಗಿದ್ದೆ. ನೆಟ್‌ವರ್ಕ್ ಇಲ್ಲದ ಊರಿನಲ್ಲಿ ಹುಟ್ಟಿಕೊಂಡ ನಾನು, ನಿನ್ನ ಜೊತೆ ಮಾತಾಡಬೇಕು ಅಂದ್ರೆ, ಪತ್ರ ಮಾತ್ರ ಸಾಧನವಾಗಿತ್ತು.

ಭಾರತ್ ಸಂಚಾರ ನಿಗಮ್‌ನ ದೂರವಾಣಿ ಮನೆಯಲ್ಲಿ ಇತ್ತಾದರೂ, ವಾರದಲ್ಲಿ ಆರು ಮುಕ್ಕಾಲು ದಿನ ಸರಿಯೇ ಇರುತ್ತಿರಲಿಲ್ಲ. ಇನ್ನುಳಿದ ಕಾಲು ದಿನ ಫೋನು ಅಮ್ಮನನ್ನು ಬಿಟ್ಟು ಅಲ್ಲಾಡುತ್ತಿರಲಿಲ್ಲ! ಓದು-ಬರಹದ ಜುಗುಪ್ಸೆ ಹುಟ್ಟಿದ್ದ ದಿನದಲ್ಲೂ ಬೇಸರವಿಲ್ಲದೆ ನಿನಗೆ ಪತ್ರ ಬರೆದಿದ್ದೆ ಗೊತ್ತಾ? ನಿನಗೆ ಪತ್ರ ಬರೆಯಲು ಶುರುವಿಟ್ಟರೆ ಈಗಲೂ ನನ್ನ ಕಣ್ಣುಗಳು ಅರಳುತ್ತವೆ.

ಎಂಥೆಥ ಮಜ-ಮಜವಾಗಿರುವ ಪತ್ರಗಳನ್ನು ಬರೆದಿದ್ದೆ ಅಲ್ವಾ? ಅವಷ್ಟನ್ನೂ ಡಿಟಿಪಿ ಮಾಡಿಸಿ, ಸಿಡಿಯಲ್ಲಿ ಹಾಕಿಟ್ಟುಕೊಂಡಿದ್ದೇನೆ. ಹಾಗೆ ನೋಡಿದ್ರೆ, ನನಗೆ ಪತ್ರ ಬರೆದು ಅಭ್ಯಾಸವೇ ಇರಲಿಲ್ಲ. ಪತ್ರಕ್ಕಿರಬೇಕಾದ ರೀತಿ-ರಿವಾಜುಗಳೆಲ್ಲ ಗೊತ್ತಿರಲಿಲ್ಲ. ಅಂಥ ಸಮಯದಲ್ಲಿ ನನಗೆ ಪತ್ರ ಬರೆಯುವ ಚಟ ಕಲಿಸಿದ ಪಾಪಿ ನೀನು! ನನಗಿನ್ನೂ ಚೆನ್ನಾಗಿ ನೆನಪಿದೆ. ಆವತ್ತು ಜನವರಿ ಹತ್ತು. ನನ್ನ ೨೧ನೇ ಹುಟ್ಟುಹಬ್ಬ. ತುಂಗೆ ನದಿ ತಟದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆಯಂತೆ ಎಂದು ಊರೆಲ್ಲ ಸುದ್ದಿಯಾಗಿತ್ತು. ಕಾಲೇಜಿಗೆ ಹೊರಟ್ಟಿದ್ದ ನಾನು, ಮಾನಸಿ, ವರ್ಷಾ…ಕ್ಲಾಸ್‌ಗೆ ಬಂಕ್ ಹಾಕಿ ರಮೇಶ್-ಸುಹಾಸಿನಿ ಜೋಡಿಯನ್ನು ನೋಡಲು ಬಂದ್ವಿ. ಅಂದಹಾಗೆ ನೀನು ನನಗೆ ಮೊದ್ಲು ನೋಡಲು ಸಿಕ್ಕಿದ್ದು ಭೀಮನಕಟ್ಟೆಯಲ್ಲಿ ಕಣೋ. ತುಂಗೆಯಾಚೆಗಿನ ಗದ್ದೆಯಲ್ಲಿ ನಡೆಯುವ ಶೂಟಿಂಗ್ ನೋಡಲು ದೋಣಿ ಹತ್ತಿದ್ವಿ. ಗಿಳಿ ಹಸಿರು ಬಣ್ಣದ ಶರ್ಟ್, ಆಗಿನ್ನು ಚಿಗುರುತ್ತಿದ್ದ ಮೀಸೆ, ಬಾಚದ ಕೂದಲಿನ ನಿನ್ನನ್ನು ನೋಡಿದ್ರೆ, ಎಂಥವರಿಗೂ ರೇಜಿಗೆ ಹುಟ್ಟುತ್ತಿತ್ತು. ಈ ಸಿನಿಮಾ ಮಂದಿಯೇ ಹಾಗಿರಬೇಕು ಅನ್ನಿಸುತ್ತಿತ್ತು. ಮೊದಲ ಸಲ ನಿನ್ನನ್ನು ನೋಡಿದಾಗ, ಮುಂದೊಂದು ದಿನ ನನಗೂ, ನಿನಗೂ ಲವ್ ಶುರುವಾಗಬಹುದು ಎಂಬ ಕನಸು ಕೂಡ ಇರಲಿಲ್ಲ!

ನೀವು ಇದೇ ಊರಿನವರಾ ಮ್ಯಾಮ್? ಇಲ್ಲಿ ಒಳ್ಳೆ ದೇವಸ್ಥಾನ ಎಲ್ಲಿದೆ? ನದಿ ಪಕ್ಕ ವಿಶಾಲವಾದ ಬಯಲು ಎಲ್ಲಾದ್ರು ಇದೆಯಾ ಅಂತಾ ನೀನು ಕೇಳಿದಾಗ, ಅಯ್ಯೋ ಕರ್ಮವೆ ಇವನೊಬ್ಬ “ಬಯಲು” ಗಿರಾಕಿ ಅಂದುಕೊಂಡಿದ್ದೆ! ನಮ್ಮಲ್ಲಿ “ಬಯಲು ಕಡೆ ಹೋಗುವುದು” ಅಂದ್ರೆ ಬೇರೇನೆ ಅರ್ಥವಿದೆ! ನೀನೊಬ್ಬ ಕಥೆಗಾರ, ನಿರ್ದೇಶಕ ಅನ್ನುವ ಕಲ್ಪನೆಯೂ ನನಗೆ ಇರಲಿಲ್ಲ. ಆಮೇಲೆ ಸಿನಿಮಾದಲ್ಲಿ ಲೋಕೆಷನ್ ಹೇಗಿರಬೇಕು, ಕ್ಯಾಮೆರಾ ವರ್ಕ್‌ನಿಂದ ಚಿತ್ರದ ಗುಣಮಟ್ಟ ಹೇಗೆ ಉತ್ತಮವಾಗತ್ತೆ ಅಂತೆಲ್ಲ ಒಂದು ದಿನ ನೀನು ವಿವರಿಸಿದೆ. ಆಗಲೆ ನನಗೆ ಗೊತ್ತಾಗಿದ್ದು ನೀನು ಆವತ್ತು ದೇವಸ್ಥಾನ ಮತ್ತು ಬಯಲನ್ನು ಯಾಕೆ ಕೇಳಿದೆ ಎಂದು. ಎಷ್ಟೋ ಸಲ ಹಾಗೆ ಆಗುತ್ತೆ ಕಣೊ. ನಮಗೆ ಎದುರುಗಡೆಯವರ ಮಾತಿನ ಅರ್ಥ ಗೊತ್ತಾಗದೆ, ಅಪಾರ್ಥ ಮಾಡಿಕೊಂಡು ಬಿಡುತ್ತೇವೆ. ಆಮೇಲೆ ಆಗಬಾರದ್ದೆಲ್ಲ ಆಗುತ್ತೆ. ಇನ್ನೊಬ್ಬರು ಯಾವ ದೃಷ್ಟಿಕೋನದಲ್ಲಿ ಮಾತಾಡುತ್ತಿರಬಹುದು ಎಂದು ನಮಗೆ ಅರ್ಥ ಆಗುವ ಹಾಗಿದ್ರೆ ಎಷ್ಟು ಚೆನ್ನಾಗಿತ್ತು ಅಲ್ವಾ? ನನ್ನ-ನಿನ್ನ ನಡುವಣ ಅದೆಷ್ಟೋ ಜಗಳಕ್ಕೆ ಬ್ರೇಕ್ ಬಿದ್ದಿರುತ್ತಿತ್ತು ಅಲ್ವಾ? ಹೋಗ್ಲಿ ಬಿಡು, ಜಗಳ ಆಡುವುದರಲ್ಲೂ ಒಂಥರ ಮಜವಿದೆ.

ಅಯ್ಯಯ್ಯಪ್ಪ, ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಈಗ ಮೈಯೆಲ್ಲ ಬೆವರುತ್ತೆ. ನನ್ನ-ನಿನ್ನ ಪ್ರೀತಿಗೆ ಭರ್ತಿ ೭ ವರ್ಷ ತುಂಬಿದೆ. “ನಿಮ್ಮೂರು ಸೂಪರ್ ಕಣೆ. ನಿನ್ನಂಥ ಚೆಂದದ ಹುಡುಗಿಯನ್ನು ಹುಟ್ಟುಹಾಕಿದ ಊರು ಅಂತಾ ಸೂಪರ್ ಅಂದಿದ್ದಲ್ಲ! ನಿಮ್ಮ ಮನೆ ಹತ್ರ ಇರೋ ತುಂಗಾನದಿ, ಪಕ್ಕದಲ್ಲಿರೋ ದೇವಸ್ಥಾನ, ನದಿಯಾಚೆಗಿನ ಹಚ್ಚಹಸಿರಿನ ಗದ್ದೆಗಳು, ಬಾವಿಯ ಸಿಹಿ ಸಿಹಿಯಾದ ನೀರು, ನಿಮ್ಮಪ್ಪ ಡಬ್ಬ ಜೋಯ್ಸ, ನಿಮ್ಮೂರಿನ ಮುಗ್ಧ ಮನಸಿನ ಜನಗಳು, ನಿನ್ನಂಥ ಗಯ್ಯಾಳಿ ಹುಡುಗಿಯರು…ಇದ್ನೆಲ್ಲ ಕಂಡು ಸೂಪರ್ ಅಂದಿದ್ದು ಗೊತ್ತಾಯ್ತ?” ಎಂದು ನೀನು ನನ್ನನ್ನು ರೇಗಿಸಿದ್ದು ನೆನಪಿದ್ಯಾ? ಆವತ್ತೆ ಅಲ್ವಾ ನಾನು ನಿನಗೆ ಪ್ರಪೋಸ್ ಮಾಡಿದ್ದು, ನೀನು ನಿನ್ನ ಬದುಕಿನ, ಕನಸುಗಳ ಕುರಿತು ಹೇಳಿಕೊಂಡಿದ್ದು. ಅಬ್ಬ ಅದೊಂತು ನನಗೆ ಯಾವತ್ತು ಮರೆಯಲಾಗದ ಕ್ಷಣ.

ಅಲ್ಲಿಂದ ನಂತರದ್ದೆಲ್ಲ ಒಂಥರಹ ಸಿನಿಮಾವೆ. ಹಾಗೆ ನೋಡಿದ್ರೆ, ನನ್ನ-ನಿನ್ನ ಪ್ರೀತಿಯೇ ನೀನು ಸ್ವತಂತ್ರವಾಗಿ ನಿರ್ದೇಶನ ಮಾಡಿದ ಮೊದಲ ಸಿನಿಮಾ! ನೀನು ನಮ್ಮ ಮನೆಗೆ ಬಂದಿದ್ದು, ನಮ್ಮಪ್ಪ/ನಿಮ್ಮ ಮಾವ ಡಬ್ಬ ಜೋಯ್ಸರ ಜೊತೆ ಮಾತಾಡಿದ್ದು, ಅವರನ್ನ ಒಪ್ಪಿಸಿದ್ದು, ನಾನು ಬೆಂಗಳೂರಿಗೆ ಬಂದಿದ್ದು, ಕೆಲಸ ಹಿಡಿದಿದ್ದು…ಅಷ್ಟಕ್ಕೂ ನಿರ್ದೇಶಕ ನೀನೇ ಕಣೊ.

ಹೌದು ಕಣೋ ನಾನು ಎಲ್ಲದರಲ್ಲೂ ನಿಧಾನ. ಅದ್ಕೆ ಅಲ್ವಾ ನೀನು ನಂಗೆ “ಡಕೋಟ ಎಕ್ಸ್‌ಪ್ರೆಸ್” ಅಂತಾ ಹೆಸರಿಟ್ಟಿದ್ದು. ಡ್ರೆಸ್ ಮಾಡಿಕೊಳ್ಳಲು ಶುರು ಮಾಡಿದ್ರೆ ಮುಕ್ಕಾಲು ಗಂಟೆ, ಸ್ನಾನಕ್ಕೆ ಹೊರಟರೆ ಒಂದೂವರೆ ಗಂಟೆ ಎಂದು ಯಾವಾಗ್ಲೂ ಸಿಡುಕುತ್ತಿಯಾ ಅಲ್ವಾ? ನಿನ್ನ ಹಾಗೆ ೫ ನಿಮಿಷದಲ್ಲಿ ತುಳಸಿ ನೀರು ಪ್ರೋಕ್ಷಣ್ಯ ಮಾಡಿಕೊಂಡ ರೀತಿ ಸ್ನಾನ ಮಾಡೋಕೆ ನನಗೆ ಬರಲ್ಲ. ಇಸ್ತ್ರಿ ಇಲ್ಲದ ಶರ್ಟು, ಬಾಚಣಿಗೆ ಕಾಣದ ಕೂದಲಿನೊಂದಿಗೆ ಗೊರಬನ ರೀತಿ ಬದುಕು ಸಾಧ್ಯವಿಲ್ಲ. ನಿನ್ನ ಸಿಗರೇಟು ಸೇದುವ ಚಟ ಬಿಡಿಸಿದೆ. ಆದ್ರೆ ಡ್ರೆಸ್‌ಸೆನ್ಸ್ ಕಲಿಸುವಲ್ಲಿ ಸೋತು ಹೋಗಿದ್ದೇನೆ. ನೀನು ಫೌಡರು, ಸೆಂಟು ಹಾಕಿದ್ದನ್ನು ನೋಡಲೇ ಇಲ್ಲ. ನಾಯಕಿಗೆ ಇಂಥ ಮೇಕಪ್ ಇರ‍್ಲಿ, ಈ ಸೀರೆ ಚೆಂದ ಅನ್ನುವ ನಿನಗೆ, ನನ್ನ-ನಿನ್ನ ಮೇಕಪ್ಪು, ಡ್ರೆಸ್‌ಗಳ ಕುರಿತು ಕಾಳಜಿಯೇ ಇಲ್ಲ ಹೋಗೊ. ಬರೀ ಮುಖವಾಡದ ಬದುಕು ನಿಂದು. ಐ ಹೇಟ್ ಯೂ ಹಂಡ್ರೆಡ್ ಟೈಮ್ಸ್….

ಎಲ್ಲಿದ್ದ ಬದುಕು, ಎಲ್ಲಿಗೆ ಬಂದು ನಿಂತಿದೆ ಅಲ್ವಾ? ಇನ್ನು ಮದ್ವೆ, ಮಕ್ಕಳು, ಸಂಸಾರ…ಕಲ್ಪಿಸಿಕೊಂಡ್ರೆ ಮೈ ಜುಂ ಅನ್ನುತ್ತೆ. ಆದ್ರೂ ಇವತಲ್ಲ ನಾಳೆ ಮದ್ವೆ ಆಗಲೇ ಬೇಕು. ಪಾತ್ರೆ ತೊಳಿಯುವ ವಿಷಯಕ್ಕೆ, ಬಟ್ಟೆ ಇಸ್ತ್ರಿಗೆ, ಸ್ನಾನಕ್ಕೆ ನಿನ್ನ ಜೊತೆ ದಿನ ಜಗಳ ಆಡಲೇ ಬೇಕು. ಹೋಗ್ಲಿ ಬಿಡು, ನಿನ್ನ ಜೊತೆಗಿನ ಜಗಳ, ಈ ಆಫೀಸಿನಲ್ಲಿ ಮಾಡುವ ಅರ್ಥವಿಲ್ಲದ ಕೆಲಸದಷ್ಟು ಕೆಟ್ಟದ್ದೇನಲ್ಲ! ಅದು ಯಾವುದೋ ಕ್ಲೈಂಟು, ಯಾವುದೋ ಪ್ರಾಜೆಕ್ಟು! ಅದರಿಂದ ಯಾರಿಗೆ ಲಾಭ, ಯಾರಿಗೆ ಉಪಯೋಗ ಅಂತ ದೇವರಾಣೆ ಪ್ರೊಗ್ರಾಮ್ಸ್ ಬರಿಯೋ ನನಗೂ ಗೊತ್ತಿಲ್ಲ. ಅವ್ರು ದುಡ್ಡು ಕೊಡ್ತಾರೆ, ನಾವು ಕೆಲಸ ಮಾಡ್ತಿವಿ ಅಷ್ಟೆ. ಮ್ಯಾನೇಜರ್ ಯಾಕೊ ಕರಿತಿದಾರೆ ಬಾಯ್ ಕಣೋ. ಮತ್ತೆ ಸಿಗ್ತೀನಿ. ನಿನಗೆ ಈವರೆಗೆ ೨೪ ಪತ್ರ ಬರೆದಿರುವೆ. ಇದು ೨೫ನೇ ಪತ್ರ. ಮತ್ತೆ ಮನಸ್ಸಾದಾಗ ಇನ್ನೊಂದು ಪತ್ರ ಬರೆಯುವೆ. ಪೋಸ್ಟ್ ಮಾಡೋಕೆ ಟೈಂ ಇಲ್ಲ. ಸೋ, ಟೈಪ್ ಮಾಡಿದ ಈ ಪತ್ರವನ್ನು ಇಮೇಲ್ ಮೂಲಕವೇ ಕಳುಹಿಸುತ್ತಿರುವೆ. ಕ್ಷಮೆ ಇರಲಿ. ಟೇಕ್ ಕೇರ್, ಟಾಟಾ….

ಇಂತಿ ನಿನ್ನ ಡಕೋಟ ಎಕ್ಸ್‌ಪ್ರೆಸ್.

Read Full Post »

ನನಗಿನ್ನೂ ಚೆನ್ನಾಗಿ ನೆನಪಿದೆ. ಕರ್ಕಿಕೊಪ್ಪ  ಹೈಸ್ಕೂಲ್‌ನ ಸಿಮೆಂಟ್ ಕಟ್ಟೆಯದು. ಸುಮಾರು ೪೦೦-೫೦೦ ಜನ ಕೂರಬಹುದಾದ ಆ ಉದ್ದನೆಯ ಕಟ್ಟೆ , ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಲ್ಲ  ವೇದಿಕೆಯಾಗಿತ್ತು.  ವಾರ್ಷಿಕೋತ್ಸವವನ್ನು ಹೊರತುಪಡಿಸಿ ಉಳಿದೆಲ್ಲ  ಕಾರ್ಯಕ್ರಮಗಳೂ ಅಲ್ಲೆ ನಡೆಯುತ್ತಿದ್ದವು. ನನಗೆ ಭವ್ಯ ಭಾರತ ಕಂಡಿದ್ದು  ಅದೇ ಕಟ್ಟೆಯಲ್ಲಿ. ವಿದ್ಯಾನಂದ ಶೈಣೆಯವರು ಭಾರತದ ಕುರಿತು ವಿವರಿಸುತ್ತ ಹೋದಂತೆ ಮೈಯಲ್ಲೊಂದು ರೀತಿ ರೋಮಾಂಚನ. ಹಿಂದಿನ ಸಾಲಿನಲ್ಲಿ  ಗಲಾಟೆ ಮಾಡುತ್ತ ಕುಳಿತಿರುತ್ತಿದ್ದ  ನಾವೆಲ್ಲ  ಆವತ್ತು ಅಕ್ಷರಶಃ ಮೌನಿಗಳಾಗಿದ್ದೆವು. ವಿದ್ಯಾನಂದರ ವಾಗ್ಜರಿಯ ಕುರಿತು ಹೇಳಬೇಕಿಲ್ಲ.  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅವರು ಹೇಳುವಾಗ ಭಾರತ ಶ್ರೇಷ್ಠ  ಎಂದು ಯಾವ ಚರ್ಚೆಯೂ ಇಲ್ಲದೆ ಒಪ್ಪಿಕೊಂಡಾಗಿತ್ತು.

ಆಗ ಅವರು ನಮ್ಮ ನಾಡಿನ ಭೂಪಟ ಇಟ್ಟುಕೊಂಡು ‘ಭಾರತ ದರ್ಶನ’ ಮಾಡುತ್ತಿದ್ದರು. ನಮ್ಮೂರಿನ ಪಕ್ಕದ ಕೆಳದಿ, ಇಕ್ಕೇರಿಯಿಂದ ಹಿಡಿದು, ಅಮರನಾಥ, ಕಾಶಿಯವರೆಗೂ ಶೆಣೈಯವರ ಮಾತು ಹಾದುಹೋಗಿತ್ತು. ಬಹುಶಃ ಭಾರತದ ಕುರಿತು ನನ್ನಲ್ಲಿ  ಒಂದು ಭವ್ಯ ಕಲ್ಪನೆ ಹುಟ್ಟಿಸಿದ್ದು  ಅಂದಿನ ಭಾರತ ದರ್ಶನ. ಅಲ್ಲಿಂದ ನಂತರ ಓದಲು ಸಿಕ್ಕಿದ್ದು  ಓಶೋ, ಭೈರಪ್ಪನವರಂಥ ಲೇಖಕರು. ಅಥವ ನಾನು ಓದಿದ್ದು  ಅಂಥ ಸಾಹಿತ್ಯಗಳನ್ನು. ಆಗೆಲ್ಲ ಕೇಸರಿ, ಹಸಿರು, ಕೆಂಪು ಪಂಗಡಗಳ ಪರಿಚಯವಿರಲಿಲ್ಲ. ಇದೆಲ್ಲ ನಮ್ಮ  ಧ್ವಜದ ಬಣ್ಣ  ಎಂದು ಭಾವಿಸಿದ್ದೆ!

ಒಂದರ್ಥದಲ್ಲಿ ನೋಡಿದರೆ ಇಲ್ಲಿನ ಬಹುತೇಕ ಆಚರಣೆಗಳಿಗೆ ಒಂದು ಸೂಕ್ತ ಕಾರಣವಿತ್ತು. ಒಂದು ದಿಕ್ಕಿನಲ್ಲಿ  ಭಾರತ ಮೌಢ್ಯರ ನಾಡು ಎಂದು ಕರೆಸಿಕೊಂಡಿದೆ. ಆದರೆ ಇದೇ ನಾಡು ವಿಜ್ಞಾನದ ವೈಭವ ಮೆರದ ನಾಡು ಎಂಬ ಕೀರ್ತಿಯನ್ನೂ ಗಳಿಸಿದೆ. ‘ವಿವಿಧತೆಯಲ್ಲಿ  ಏಕತೆ’ ಕಂಡ ನಾಡು ಎಂದು ಸಮಾಜ ವಿಜ್ಞಾನದ ಪುಸ್ತಕದಲ್ಲಿ  ಆಗಾಗ ಓದುತ್ತಿದ್ದೆವು. ನೂರೆಂಟು ಜಾತಿಗಳು, ಹತ್ತಾರು ಧರ್ಮಗಳು, ಎಲ್ಲ  ಧರ್ಮದ ಹಬ್ಬಗಳಿಗೂ ರಜೆಗಳು ಸಿಗುವುದು ಬಹುಶಃ  ನಮ್ಮಲ್ಲಿ  ಮಾತ್ರ. ಈಗೀಗ ರಜೆ ಸಿಗುವುದು ಮಾತ್ರ ನಮಗೆ ಮಹತ್ವದ್ದು. ಉಳಿದಿದ್ದೆಲ್ಲ  ನಗಣ್ಯ!

ಭಾರತ, ಪಾಶ್ಚತ್ಯರ ಕಣ್ಣು ಕುಕ್ಕಿದ್ದು ಇಂಥ ವೈಶಿಷ್ಟ್ಯಗಳಿಂದ. ಅಪರೂಪಗಳಿಂದ. ಇಕ್ಕೇರಿಗೆ ಬಂದ ವಿದೇಶಿ ಹೆಣ್ಣು ಮಗಳಿಗೆ ಬಸವನ ಅಡಿಗೆ ನುಸಿಯುವುದು ಒಂದು ರೀತಿಯ ಥ್ರಿಲ್.(ನಮಗೆ ಚಿಕ್ಕವರಾಗಿದ್ದ  ಇದು ಒಂದು ರೀತಿ ಥ್ರಿಲ್ ಆಗಿತ್ತು. ಬುದ್ದಿ ಬಂದ ನಂತರವಲ್ಲ!) ಗೋಕರ್ಣದ ಲಿಂಗವನ್ನು ಕೈಯಿಂದ ಮುಟ್ಟುವುದು ಅಂದರೆ ಒಂದು ರೀತಿ ರೋಮಾಂಚನ. ಅವರ ಕಣ್ಣಲ್ಲಿ  ಭಾರತ ಎಂದರೆ ಒಂದು ಅದ್ಭುತ. ಅಲ್ಲಿಂದ ಬಂದ ಹೆಣ್ಣುಮಗಳು ಸೀರೆಯುಟ್ಟು  ಸಂಭ್ರಮಿಸುತ್ತಾಳೆ. ಮಲ್ಲಿಗೆ ಮುಡಿದು ಫೋಟೊ ತೆಗಿಸಿಕೊಳ್ಳುತ್ತಾಳೆ. ಯುವಕರು ಮಡಿಯುಟ್ಟು  ಮೆರವಣಿಗೆಯಲ್ಲಿ  ಭಾಗವಹಿಸುತ್ತಾರೆ. ಪಂಚೆ ತೊಟ್ಟು , ಅಂಗಿ ಬಿಚ್ಚಿ  ಉಡುಪಿಯ ಕೃಷ್ಣನ ರಥವನ್ನೆಳೆಯುತ್ತಾರೆ. ನಮ್ಮಲ್ಲಿ  ಒಂದಷ್ಟು  ಜನಕ್ಕೆ ಇದೆಲ್ಲ  ಒಂದು ವರ್ಗಕ್ಕೆ ಮೀಸಲಾದ ಆಚರಣೆ. ಇನ್ನೊಂದಷ್ಟು  ಮಂದಿಗೆ ಇದನ್ನೆಲ್ಲ  ಮಾಡುವವರು ಮೂಢರಾಗಿ ಕಾಣುತ್ತಾರೆ!

ಅವರು ಸಂಭ್ರಮಿಸುವ ಆಚರಣೆಗಳು ನಮಗೆ ಮೂಢ ಎನ್ನಿಸುತ್ತಿವೆ. ಹಾಗಂತ ಅವರು ಸಂಭ್ರಮಿಸುತ್ತಾರೆ ಎಂಬ ಕಾರಣಕ್ಕಾಗಿ ನಾವದನ್ನು ಒಪ್ಪಿಕೊಳ್ಳಬೇಕು ಎಂದೇನಲ್ಲ. ಅವರು ಮುಂದುವರಿದ ಜನ ಕುಡಿಯುತ್ತಾರೆ, ಕುಣಿಯುತ್ತಾರೆ ಎಂದು ನಾವು ಅವರನ್ನು ಅನುಸರಿಸುತ್ತಿದ್ದೇವೆ. ಹಲವಾರು ವಾದಗಳ ಸೋಗಿನಲ್ಲಿ  ಪಶ್ಚಿಮದ ರಾಷ್ಟ್ರಗಳತ್ತ ಬೊಟ್ಟು  ಮಾಡಿ ತೋರಿಸುತ್ತೇವೆ. ಆದರೆ ಅವೆಲ್ಲವುಗಳಿಂದ ಜಿಗುಪ್ಸೆಗೊಂಡಿರುವ ಪಾಶ್ಚಾತ್ಯರು ನಮ್ಮನ್ನು ಅನುಸರಿಸುತ್ತಾರೆ, ಇಲ್ಲಿ  ಬಂದು ಕಲಿಯುತ್ತಾರೆ ಎಂಬುದನ್ನು ಮುಚ್ಚಿಡುತ್ತಿದ್ದೇವೆ.

ಹುಡುಗಿಯೊಬ್ಬಳು ಯಾರನ್ನೊ ಕಟ್ಟಿಕೊಂಡು ಓಡಿ ಹೋದಳು ಅಂದಾಗ ದೊಡ್ಡ  ಚರ್ಚೆಯಾಗುತ್ತಿತ್ತು. ಹುಡುಗನೊಬ್ಬ ಬಾರ್‌ನಲ್ಲಿ  ಕಾಣಿಸಿಕೊಂಡರೆ ಅಪರಾಧವೆಂಬಂತೆ ಇತ್ತು. ನಡು ರಸ್ತೆಯಲ್ಲಿ  ಹುಡುಗ, ಹುಡುಗಿ ಕೈ ಹಿಡಿದು ಓಡಾಡಿದರೆ ಅದೇನೋ ಒಂದು ರೀತಿಯ ಭಾವ. ತೀರಾ ಹಿಂದೇನಲ್ಲ, ಸುಮಾರು ೧೫-೨೦ ವರ್ಷಗಳ ಹಿಂದಿನ ಚಿತ್ರಣವಿದು. ಹುಡುಗಿ ಹಣೆಗೆ ಇಟ್ಟುಕೊಳ್ಳಲಿಲ್ಲ  ಎಂದರೆ ಹೆತ್ತವರು ಕೆಂಡದಂತಾಗುತ್ತಿದ್ದರು. ಬೆಳಿಗ್ಗೆ  ಎದ್ದ  ತಕ್ಷಣ, ಸಂಜೆ ಕಾಲು ತೊಳೆದ ನಂತರ ದೇವರಿಗೆ ನಮಸ್ಕಾರ ಹಾಕಬೇಕಿತ್ತು. ಈಗೀಗ ಆ ಎಲ್ಲ  ಆಚರಣೆಗಳು ಕಣ್ಣಿಗೆ ಕಾಣುವುದು ತೀರಾ ಅಪರೂಪ.

ನಾವು ಪಾಶ್ಚಾತ್ಯ ಸಂಸ್ಕೃತಿಗೆ ತೀರಾ ಹತ್ತಿರದಲ್ಲಿದ್ದೇವೆ ಅನ್ನಿಸುತ್ತದೆ. ವಿದೇಶದಲ್ಲಿ  ೧೬ನೆ ವಯಸ್ಸಿಗೆ ಮಕ್ಕಳು ಸ್ವತಂತ್ರ ಗಳಿಸುತ್ತಾರಂತೆ. ಅಲ್ಲಿಂದ ನಂತರ ಅವರ ಲೈಂಗಿಕ ಸಂಬಂಧಗಳಿಗೆ ಯಾವುದೇ ಬಗೆಯ ಕಡಿವಾಣವಿಲ್ಲ. ಹುಡುಗ/ಹುಡುಗಿ ಇಷ್ಟಪಟ್ಟರೆ  ಮುಗಿಯಿತು. ಹುಡುಗನ ಕೋಣೆಗೆ ಹುಡುಗಿ ಯಾವುದೇ ಭಯವಿಲ್ಲದೆ ಬರಬಹುದಂತೆ. ಹಾಗಂತ ಭೈರಪ್ಪನವರು ‘ಕವಲು’ ಸಂವಾದದಲ್ಲಿ  ಹೇಳಿದ್ದರು. ನಮ್ಮ  ದೇಶದ ಈಗಿನ ಸ್ಥಿತಿ ಅದಕ್ಕಿಂತ ಭಿನ್ನವಾಗಿಲ್ಲ. ಕಾಲೇಜು ಮೆಟ್ಟಿಲು ಹತ್ತಿದಾಗಲೇ ಸಂಬಂಧಗಳು ಗರಿಗೆದರತೊಡಗಿವೆ. ಹುಡುಗಿಗೆ ಹುಡುಗನ ಕೋಣೆಗೆ ಬರಲು ತುಸು ಭೀತಿಯಿದೆ. ಆದರೆ ಆತನೊಂದಿಗೆ ಟ್ರಿಪ್ ಹೋಗಲು, ಲಾಡ್ಜ್‌ನಲ್ಲಿ ಉಳಿಯಲು ಯಾವುದೇ ಮುಜುಗರವಿಲ್ಲ  ಮತ್ತು ಏನು ಅನ್ನಿಸುವುದಿಲ್ಲ.

ನಿಜ, ಸಂಸ್ಕೃತಿ ಪ್ರಿಯರು ಎಲ್ಲ  ವಿಚಾರಗಳಿಗೂ ಹುಡುಗಿಯರನ್ನೇ ಗುರಿಯಾಗಿಸುತ್ತಾರೆ. ಆಕೆ ಅಡುಗೆ ಮನೆಯಲ್ಲಿ  ಸೌಟು ಹಿಡಿದುಕೊಂಡು ಇರಬೇಕು ಎಂಬಂತೆ ಮಾತಾಡುತ್ತಾರೆ. ಆಕೆಗೆ ಸ್ವತಂತ್ರ ಇಲ್ಲವೆ, ಕನಸುಗಳು ಇಲ್ಲವೆ, ಈ ಎಲ್ಲ  ಬಗೆಯ ಕಡಿವಾಣಗಳು ಹುಡುಗರಿಗೇಕೆ ಇಲ್ಲ? ಸ್ವಾತಂತ್ರ ನಂತರದ ಭಾರತದಲ್ಲಿ  ಹಲವರನ್ನು ಇಂಥ ಪ್ರಶ್ನೆಗಳು ಕಾಡಿವೆ. ಪರಿಣಾಮವಾಗಿ ದೇಶದಲ್ಲಿ  ಅನೇಕ ಮಹಿಳಾವಾದಿಗಳು, ಸ್ತ್ರೀಸಂವೇದನಾಶೀಲರ ಜನನವಾಗಿದೆ!

ಹಾಗೆ ನೋಡಿದರೆ ಸ್ತ್ರೀ ಎಂಬ ಪದವೇ ನಮ್ಮ  ದೇಶದ ಸಂಸ್ಕೃತಿಯ ಪ್ರತಿಬಿಂಬ. ಒಂದು ಕುಟುಂಬದ ಸಾಂಸಾರಿಕ ಹೊಣೆಗಾರಿಕೆ ಹೊತ್ತವಳು ಆಕೆ. ಮಗು ತಂದೆಗಿಂತ ತಾಯಿಯ ಮಡಿಲಿನಲ್ಲೇ ಹೆಚ್ಚಾಗಿ ಬೆಳೆಯುವುದು. ಆ ಕಾರಣಕ್ಕಾಗಿ ಗಂಡು ದುಡಿಯುವ ಯಂತ್ರವಾದರೆ, ಹೆಣ್ಣು  ಮನೆ ನೋಡಿಕೊಳ್ಳುವ ಜವಬ್ದಾರಿ ಹೊತ್ತಳು. ಗಂಡ ಸತ್ತಾಗ ಹೆಣ್ಣಿನ ತಲೆ ಬೋಳಿಸುವುದು, ಬಾಲ್ಯ ವಿವಾಹ ಮಾಡಿ ಬೇಗ ಗಂಡ ಸತ್ತರೆ ಆಕೆಯನ್ನು ಒಂಟಿಯಾಗಿಸುವುದು ಮೊದಲಾದ ಒಂದಷ್ಟು ಆಚರಣೆಗಳು ಖಂಡಿತವಾಗಿಯೂ ಮೂಢ. ಅಂಥ ಬೆರಳೆಣಿಕೆಗಳಿಂದ ಇಡೀ ಭಾರತವೇ ಸರಿಯಿಲ್ಲ  ಎಂದು ನಿರ್ಧರಿಸಿಬಿಟ್ಟೆವು.

ಹುಡುಗಿಯೇ ಕುಡಿಯುತ್ತಾಳಂತೆ, ಪಬ್‌ನಲ್ಲಿ  ಕಾಣಿಸಿಕೊಳ್ಳುತ್ತಾಳಂತೆ. ನಾವು ಕುಡಿಯದಿದ್ದರೆ ಅವಮಾನ ಎಂಬ ಮಾತು ಇತ್ತೀಚೆಗೆ ಹುಡುಗರ ಕಡೆಯಿಂದ ಕೇಳಿ ಬರುತ್ತಿದೆ! ದೂರದ ಅಮೆರಿಕ, ಯೂರೋಪ್‌ಗಳಲ್ಲಿ  ಹಿಂದೆ ಕಾಣುತ್ತಿದ್ದ ಸನ್ನಿವೇಶಗಳೆಲ್ಲ  ಇಂದು ನಮ್ಮ  ನಾಡಿನಲ್ಲಿ  ಕಾಣಿಸಿಕೊಳ್ಳುತ್ತಿದೆ. ನಮಗೆ ಯಾವುದೂ ಕೂಡ ಅಸಹ್ಯ, ಅಸಹಜ ಅನ್ನಿಸುತ್ತಿಲ್ಲ. ಎಲ್ಲವನ್ನೂ ಸ್ವಾಭಾವಿಕವಾಗಿ ಸ್ವೀಕರಿಸುತ್ತಿದ್ದೇವೆ. ಹಾಗಾಗಿ ಭಾರತದಲ್ಲಿ  ಶ್ರೇಷ್ಠ  ಅಂದುಕೊಳ್ಳಲು ಇನ್ನು ಕೆಲ ವರ್ಷಗಳಲ್ಲಿ  ಏನು ಇರುವುದಿಲ್ಲ. ನಮ್ಮದು ಎಂಬ ಸ್ವಂತ ಗುರುತೇ ಇಲ್ಲದ ನಾಡು ಇದಾಗಲಿದೆ. ಇನ್ನು ಮುಂದೆ ಭಾರತ ದರ್ಶನ ಮಾಡುವುದಾರೆ, ನಮ್ಮಲ್ಲಿ  ಇಷ್ಟು  ಭ್ರಷ್ಟರಿದ್ದಾರೆ, ಇಷ್ಟು  ಅತ್ಯಾಚಾರಿಗಳಿದ್ದಾರೆ, ಇಷ್ಟು  ಕುಡುಕರಿದ್ದಾರೆ, ಇಷ್ಟು  ವಿಚ್ಛೇದನಗಳಾಗಿವೆ ಎಂಬ ಅಂಕಿ-ಅಂಶ ಕಲೆ ಹಾಕಬೇಕು! ಪಬ್ಬು, ಬಾರುಗಳನ್ನು  ವರ್ಣಿಸಬೇಕು. ನೋಟುಗಳ ರಾಶಿ ಸುರಿಯುವ ಎಂಎನ್‌ಸಿ ಕಂಪನಿಗಳ ಕಾಂಕ್ರೀಟು ಕಟ್ಟಡ ತೋರಿಸಬೇಕು. ಕಾಡುಗಳು, ನದಿಗಳು, ಬೆಟ್ಟಗಳು ಎಲ್ಲವೂ ಕಾಣೆಯಾಗುತ್ತಿವೆ. ಅದನ್ನೆಲ್ಲ  ಕಾಣುವ ಮೊದಲು ವಿದ್ಯಾನಂದರು ಹೊರಟು ಹೋದರು. ಆದರೆ ಅವರ ಮಾತಿನ ಗುಂಗಿನಲ್ಲಿ  ಇರುವ ನಾವು ಅನಿವಾರ್ಯವಾಗಿ ಎಲ್ಲವನ್ನೂ ನೋಡಬೇಕಿದೆ ಮತ್ತು ಒಪ್ಪಿಕೊಳ್ಳಬೇಕಿದೆ ಹಾಗೂ ಒಪ್ಪಿಕೊಂಡಾಗಿದೆ…

Read Full Post »