ಹೈಸ್ಕೂಲ್‌ಗೆ ಹೋಗುತ್ತಿದ್ದ ಕಾಲದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳು ಅಂದರೆ ನಮಗೆಲ್ಲ ಸಂಭ್ರಮದ ಮಾಸ. ಪಾಠವೆಲ್ಲ ಮುಗಿದಿದ್ದರೂ, ತಪ್ಪದೇ ಶಾಲೆಗೆ ಹೋಗುತ್ತಿದ್ದೆವು. ಪಾಠ ಜೋರಾಗಿ ನಡೆಯುತ್ತಿದ್ದ ಕಾಲದಲ್ಲೇ ಶಾಲೆಗೆ ಚಕ್ಕರ್ ಹೊಡೆಯುವ ನಾವು, ಶಾಲೆಯಿಂದ ಬರುವಾಗ ಆಲೆಮನೆ ಸಿಗುತ್ತದೆ ಎಂಬ ಕಾರಣಕ್ಕಾಗಿ ತುಂಬಾ ಶ್ರದ್ದೆಯಿಂದ ಶಾಲೆಗೆ ಹೋಗುತ್ತಿದ್ದೆವು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ!
ರೈತರು ಗದ್ದೆಯಲ್ಲಿ ಬೆಳೆದ ಕಬ್ಬಿನ ರಸವನ್ನು ತೆಗೆದು ಬೆಲ್ಲ ಮಾಡುವ ಪ್ರಕ್ರಿಯೆಗೆ ಮಲೆನಾಡಿನ ಭಾಷೆಯಲ್ಲಿ ‘ಆಲೆಮನೆ’ ಅನ್ನುತ್ತಾರೆ. ಕಬ್ಬನ್ನು ಅರೆಯುವ ಸಾಧನ ಒಂತರಹ ಎತ್ತಿನ ಗಾಡಿಯಂತಹದ್ದು! ಆದರೆ ಈ ಯಂತ್ರ ಎಳೆಯಲು ಎತ್ತಿಗೆ ಬದಲಾಗಿ ಕೋಣವನ್ನು ಬಳಸುತ್ತಾರೆ. ಅದು ಯಾಕೆ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ. ತಾರತಮ್ಯತೆ ಹೋಗಲಾಡಿಸುವ ಉದ್ದೇಶದಿಂದ ಇರಬಹುದು ಅಂದುಕೊಂಡಿದ್ದೇನೆ!
ನಮ್ಮ ಶಾಲೆ ಮತ್ತು ಮನೆಯ ಮಾರ್ಗಮಧ್ಯದಲ್ಲಿ ಗೀಜಗಾರು ಅಂತಾ ಊರಿದೆ. ಹಕ್ಕಲುದಿಂಬದ ಗದ್ದೆ ಬಯಲು ಎಂಬ ಪರ್ಯಾಯ ನಾಮವೂ ಅದಕ್ಕಿದೆ! ಆ ಗದ್ದೆ ಬಯಲಿನ ಒಂದು ಮೂಲೆಯಲ್ಲಿ ಪ್ರತಿ ವರ್ಷ ಆಲೆಮನೆ ನಡೆಯುತ್ತಿತ್ತು. ಆಲೆ ಕಣ ಅಂತಲೇ ಆ ಜಾಗ ನಮಗೆಲ್ಲ ಚಿರಪರಿಚಿತ. ಸುಮಾರು ೧೫-೨೦ ದಿನಗಳ ತನಕ ೪೦-೫೦ ಮನೆಗಳ ಆಲೆಮನೆ ನಡೆಯುತ್ತಿತ್ತು. ಆಹ್ವಾನ ಇರಲಿ, ಇರದೇ ಇರಲಿ ಒಂದಷ್ಟು ಹುಡುಗರ ಗ್ಯಾಂಗ್ ಸಂಜೆ ೫.೧೫ಕ್ಕೆ ಆಲೆ ಕಣದಲ್ಲಿ ಹಾಜರ್! ಕಬ್ಬಿನ ಹಾಲು, ಕೊಪ್ಪರಿಗೆಯಲ್ಲಿ ಕೊತ ಕೊತ ಕುದಿಯುವ ಬಿಸಿ ಬಿಸಿ ಬೆಲ್ಲ, ಹಕ್ಕಲುದಿಂಬದ ತಿಮ್ಮನ ಬೈಗುಳ…
ಈ ಸಲ ಊರಿಗೆ ಹೋದಾಗ ವರದಹಳ್ಳಿಗೆ ಹೋಗಿದ್ದೆ. ಅಲ್ಲಿಂದ ಬರುತ್ತಿರುವಾಗ ಹಕ್ಕಲು ದಿಂಬದ ಗದ್ದೆ ಬಯಲು ಕಣ್ಣಿಗೆ ಬಿತ್ತು. ಆಲೆ ಕಣವಿದ್ದ ಜಾಗದಲ್ಲಿ ಹುಲ್ಲು ಬೆಳೆದು ನಿಂತಿದೆ. ಕೋಣವನ್ನು ಕಟ್ಟಿ ಹಾಕುತ್ತಿದ್ದ ಹಟ್ಟಿ ಕಾಣದಾಗಿದೆ…ಮನೆಗೆ ಬಂದವನೇ ‘ಈ ಸಲ ಆಲೆಮನೆ ಇಲ್ಲಾ’ ಅಂತಾ ಅಮ್ಮನನ್ನು ಕೇಳಿದೆ. ಕಳೆದ ನಾಲ್ಕಾರು ವರ್ಷದಿಂದ ಯಾರು ಗದೆಯಲ್ಲಿ ಕಬ್ಬು ಹಾಕುತ್ತಿಲ್ಲ …ಅಮ್ಮ ಮಾತು ಮುಗಿಸುತ್ತಿದ್ದಂತೆ, ವರದಹಳ್ಳಿಯಲ್ಲಿ ನಾಳೆ ಆಲೆಮನೆ ಇದೆ. ಕರೆದು ಹೋಗಿದ್ದಾರೆ…ತಂಗಿ ಮಾತಿಗೆ ಶುರುವಿಟ್ಟಳು.
ಕಿವಿ ನೆಟ್ಟಗಾದರು ಬಸ್‌ಗೆ ಟಿಕೆಟ್ ಬುಕ್ ಮಾಡಿಸಿ ಆಗಿಹೋಗಿತ್ತು. ಟಿಕೆಟ್ ಕ್ಯಾನ್ಸಲ್ ಮಾಡಿಸಬಹುದಾಗಿತ್ತೇನೋ, ಆದರೆ ಸುದ್ದಿ ಸಂಪಾದಕರಿಗೆ ಫೋನ್ ಮಾಡಿ ಒಂದು ದಿನ ಹೆಚ್ಚುವರಿ ರಜೆ ಪಡೆಯುವುದು ಶಾನೇ ಕಷ್ಟದ ಕೆಲಸವಾಗಿತ್ತು. ಹಾಗಾಗಿ ಒಲ್ಲದ ಮನಸ್ಸಿನಿಂದ ಬೆಂಗಳೂರಿನ ಹಾದಿ ಹಿಡಿದುಬಿಟ್ಟೆ…
ಕೆನ್‌ವೋಲಾಗೆ ಹೋಗಿ ಎರಡು ಲೋಟ ಕಬ್ಬಿನ ಹಾಲು ಕುಡಿದೆ. ಆದರೂ ಸಮಾಧಾನವಾಗಲಿಲ್ಲ. ನಿತ್ಯವೂ ಆಲೆಮನೆಗೆ ಹೋಗುವ ನಮಗೆ ಬೈಯ್ಯುತ್ತಾ, ಕೊಪ್ಪರಿಗೆಯಿಂದ ಕೊತ-ಕೊತ ಕುದಿಯುವ ಜೋನಿ ಬೆಲ್ಲವನ್ನು ಪ್ರೀತಿಯಿಂದ ನೀಡುತ್ತಿದ್ದ ಹಕ್ಕಲು ದಿಂಬದ ತಿಮ್ಮ, ಎಷ್ಟು ದುಡ್ಡು ಕೊಟ್ಟರೂ, ಬೆಂಗಳೂರಿನ ಯಾವ ಕೆನ್‌ವೊಲಾದಲ್ಲೂ ಸಿಗುವುದೇ ಇಲ್ಲ ಅಲ್ವಾ…?
***
ನನಗೆ ಎಚ್ಚರವಾದಾಗ ರೂಮಿನ ಗೆಳೆಯ ಕಂಪ್ಯೂಟರ್ ಬಿಚ್ಚಿಕೊಂಡು ಧೂಳು ಒರೆಸುತ್ತಾ ಕುಳಿತ್ತಿದ್ದ. ಇನ್ನು ಜಾಗವಿಲ್ಲ ಎನ್ನುವಷ್ಟು ಧೂಳು ಕಂಪ್ಯೂಟರಿನ ಹೊರ ಆವರಣವನ್ನು ಆವರಿಸಿತ್ತು. ಹಾಗಾಗಿಯೇ ಅವ ಧೂಳು ಒರೆಸಲು ಶುರುವಿಟ್ಟಿರಬೇಕು ಎಂದುಕೊಳ್ಳುತ್ತಾ, ಬೆಡ್ ಶೀಟ್ ಎಳೆದು ಮಲಗಿದೆ. ಪಕ್ಕನೆ, ಕಂಪ್ಯೂಟರ್ ಒಳಗೆ ಏನಿರಬಹುದೆಂಬ ಕುತೂಹಲ ಉಂಟಾಯಿತು. ಬೆಡ್ ಶೀಟ್ ಬದಿಗಿಟ್ಟು , ಎದ್ದು ಕುಳಿತೆ.
ಇದು ರ್‍ಯಾಮ್, ಮದರ್ ಬೋರ್ಡ್…ಅವ ಒಂದೊಂದೇ ಭಾಗ ಪರಿಚಯಿಸಿದ. ಮದರ್ ಬೋರ್ಡು ಕಂಪ್ಯೂಟರಿನ ಜೀವಾಳ. ಕಂಪ್ಯೂಟರ್ ವರ್ಕ್ ಆಗಲು ಪ್ರೋಸೆಸರ್ ಬೇಕು…ಅವ ಹೇಳುತ್ತಾ ಹೋದ, ನಾನು ಕೇಳುತ್ತಾ ಕುಳಿತೆ. ಕಂಪ್ಯೂಟರ್ ಕೆಲಸ ಮಾಡುವ ರೀತಿ ನೋಡಿದರೆ, ಅದರ ಒಳ ಅಂಗಾಂಗಗಳೆಲ್ಲ ತೀರಾ ಚಿಕ್ಕದು. ಒಂದು ಅಂಗೈನಷ್ಟು ಅಗಲದ ಮದರ್‌ಬೋರ್ಡ್‌ಗೆ ಅದೆಷ್ಟು ಶಕ್ತಿಯಿದೆ ಅಲ್ವಾ? ಸಿಲಿಕಾನ್ ಚಿಪ್‌ನಲ್ಲಿ ಅದೆಷ್ಟು ಸಾಮರ್ಥ್ಯವಿದೆ. ಅದನ್ನು ನೋಡಿದರೆ ನಮ್ಮ ದೇಹದ ಎಷ್ಟೋ ಅಂಗಾಗಳು ‘ನ್ಯಾಷನಲ್ ವೇಸ್ಟ್’ ಅನ್ನಿಸದೆ ಇರಲಾರದು!!!
ಮದರ್ ಬೋರ್ಡ್, ಸಿಲಿಕಾನ್ ಚಿಪ್…ಇವುಗಳಲೆಲ್ಲ ಕೆಪಾಸಿಟರ್, ಟ್ರಾನ್ಸಿಸ್ಟರ್, ರೆಸಿಸ್ಟರ್ ಬಿಟ್ಟು ನನಗೆ ಮತ್ತೇನೂ ಕಾಣಿಸಲಿಲ್ಲ…ಕ್ಷಮಿಸಿ…ಅವಿಷ್ಟು ಬಿಟ್ಟು ಉಳಿದ ಭಾಗಗಳ ಪರಿಚಯ ನನಗಿರಲಿಲ್ಲ! ನಿತ್ಯ ೧೨ ಗಂಟೆ ನಿದ್ದೆ ಮಾಡುವ ನನ್ನ ದಿನಚರಿ ಪೂರ್ಣಗೊಂಡಿರಲಿಲ್ಲ. ಹಾಗಾಗಿ ಮತ್ತೆ ಬೆಡ್‌ಶೀಟ್ ಎಳೆದುಕೊಂಡು ಮಲಗಿದೆ.
ಭೌತಶಾಸ್ತ್ರ(ಫಿಸಿಕ್ಸ್) ನನ್ನ ಬಲು ಪ್ರಿಯವಾದ ವಿಷಯ. ಅದರಲ್ಲೇ ಯಾವಾಗಲೂ ಕಡಿಮೆ ಅಂಕ ಬರುತ್ತಿತ್ತು ಎಂಬ ವಿಚಾರ ಬದಿಗಿರಲಿ ಬಿಡಿ! ವಿಜ್ಞಾನದ ಉಪಯೋಗ ತಿಳಿಸುವ ವಿಷಯವದು. ಕಂಪ್ಯೂಟರ್ ಬಿಡಿ ಭಾಗ ನೋಡಿದ ನಂತರ , ಪದವಿಯ ಭೌತಶಾಸ್ತ್ರ ವಿಜ್ಞಾನ ಜಗತ್ತಿನ ಕಿರು ಬೆರಳಿಗೆ ಸಮಾನವಾದದ್ದು ಅಂತಾ ಅನ್ನಿಸಲು ಶುರುವಾಯಿತು. ಮತ್ತೆ ಬೆಡ್ ಶೀಟ್ ಎಳೆದುಕೊಂಡು ಮಲಗಿದೆ. ಆದರೆ ರೆಸಿಸ್ಟರ್‌ನ ನೆನಪು ನನ್ನ ನಿದ್ದೆಯ ಕೆಪಾಸಿಟಿಯನ್ನು ಕಡಿಮೆಮಾಡಿಬಿಟ್ಟಿತ್ತು!
ವಿಜ್ಞಾನ ಬರವಣಿಗೆ ಮತ್ತು ಬೋಧನೆ ಇವೆರಡೂ ತುಂಬಾ ಕಷ್ಟದ ವಿಷಯ. ಎಂಎಸ್‌ಸಿ ಮುಗಿಸಿ, ಭಿನ್ನಾಣದೊಂದಿಗೆ ತರಗತಿಗೆ ಬರುವ ಅದೆಷ್ಟೋ ಮೇಡಂಗಳಿಗೆ ವಿಜ್ಞಾನ ಬೋಧನೆ ಮಾಡಲು ಬರುತ್ತಿರಲಿಲ್ಲ. ಬೋಸಲು ಬರುತ್ತಿರಲಿಲ್ಲ ಅನ್ನುವುದಕ್ಕಿಂತ ಅವರು ಮಾಡುವ ಪಾಠ ನಮಗೆ ಅರ್ಥವಾಗುವುತ್ತಿರಲಿಲ್ಲ ಅನ್ನುವುದು ಸೂಕ್ತವೇನೋ! ಇನ್ನು, ಎ.ಪಿ ಭಟ್ಟರಂಥ ಪ್ರಾಧ್ಯಾಪಕರು ನಡು ಮಧ್ಯಾಹ್ನದ ಅವಯಲ್ಲಿ ತರಗತಿಗೆ ಬಂದರೂ, ನಮ್ಮ ನಿದ್ದೆ ಓಡಿಹೋಗುತ್ತಿತ್ತು. ಬಹುಶಃ ಕೆಪಾಸಿಟರ್, ರೆಸಿಸ್ಟರ್ ಅನ್ನುವ ಪದಗಳಾದರೂ ಇವತ್ತು ನನಗೆ ನೆನಪಿದೆ ಅಂದರೆ, ಅದರ ಹಿಂದೆ ಭಟ್ಟರ ಪಾಠದ ಕೈವಾಡವಿದೆ.
ವಿಜ್ಞಾನ ಬರವಣಿಗೆಯೂ ಹಾಗೆ. ಅನಂತ್ ಚಿನಿವಾರ್, ನಾಗೇಶ್ ಹೆಗಡೆಯಂಥ ಬೆರಳೆಣಿಕೆಯ ಮಂದಿ ಬರೆದ ವೈಜ್ಞಾನಿಕ ಬರಹಗಳು ಮಾತ್ರ ಬಾಯಿ ಚಪ್ಪರಿಸಿಕೊಂಡು ಓದುವಂತೆ ಇರುತ್ತವೆ. ಕನ್ನಡ ಪತ್ರಿಕೆಗಳು ವಿಜ್ಞಾನಕ್ಕೆ ನೀಡುವ ಆದ್ಯತೆಯೂ ಅಷ್ಟರಲ್ಲಿಯೇ ಇದೆ ಬಿಡಿ! ಸಾಹಿತಿಕ, ವೈಚಾರಿಕ ಬರಹಗಳೆಲ್ಲ ಒಂದು ಹಂತದವರೆಗೆ ಓದುಗರಿಗೆ ಇಷ್ಟವಾಗುತ್ತವೆ. ಆದರೆ ವೈಜ್ಞಾನಿಕ ಬರಹಗಳು ಹಾಗಲ್ಲ. ಈ ಬರಹಗಳಿಗೆ ಸದಾ ಜೀವಂತಿಕೆ ಇರುತ್ತದೆ. ವಿಜ್ಞಾನ ನಿತ್ಯವೂ ನಮ್ಮ ಆಸಕ್ತಿಯನ್ನು ಕೆರಳಿಸುತ್ತದೆ. ಆದಾಗ್ಯೂ ಕನ್ನಡ ಬರಹ ಜಗತ್ತಿನಲ್ಲಿ ವೈಜ್ಞಾನಿಕ ಬರಹಗಾರರ ಕೊರತೆ ಎದ್ದು ಕಾಣುತ್ತಿದೆ ಅಂದುಕೊಳ್ಳುವ ಹೊತ್ತಿಗೆ ನಿದ್ದೆ ಮರುಕಳಿಸಿತ್ತು.
***
ಕಣ್ಣಾ ಮುಚ್ಚೆ, ಗಾಡೆ ಗೂಡೆ, ಉದ್ದಿನ ಹುರುಟೆ…
ಈ ಸಾಲು ಕೇಳುತ್ತಿದ್ದಂತೆ ನಮ್ಮೆಲ್ಲರ ಆಲೋಚನೆಯೂ ಒಮ್ಮೆ ಸವೆದುಹೋದ ಬದುಕಿನ ಪುಟಗಳತ್ತ ಸಾಗುತ್ತದೆ. ನಾವೆಷ್ಟೇ ಬೇಡ ಅಂದುಕೊಂಡರೂ ಕೂಡಾ, ಆ ಸಾಲು ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ. ನಾವು ಅಡಗಿ ಕುಳಿತುಕೊಳ್ಳುತ್ತಿದ್ದ ಹಳೆ ಮನೆಯ ಕೊಣೆಗಳು ನೆನಪಾಗುತ್ತವೆ. ಹಿತ್ತಲಿನ ಅಂಗಳ, ಮುಂಬದಿಯ ಮೂಲೆಗಳ…ಹಿಂದಿನ ನೆನಪುಗಳೆಲ್ಲ ಒತ್ತರಿಸಿ ಬರುತ್ತದೆ.
ನಾವೆಲ್ಲ ಚಿಕ್ಕವರಿದ್ದಾಗ ಪರೀಕ್ಷೆ ಮುಗಿದು, ಬೇಸಿಗೆ ರಜೆ ಬರುವುದನ್ನೇ ಕಾಯುತ್ತಿದ್ದೆವು! ಬೇಸಿಗೆ ರಜೆ ಬಂತೆಂದರೆ, ಸಂಭ್ರಮವೋ ಸಂಭ್ರಮ. ಊರು ತುಂಬೆಲ್ಲ ಹುಡುಗರ ಹಿಂಡು-ಹಿಂಡು! ಮುಗಿಲು ಮುಟ್ಟುವಷ್ಟು ಗಲಾಟೆ. ( ಆದರೂ, ಮಹಾನಗರಿ ಬಸ್ಸು-ಕಾರುಗಳ ಘರ್ಜನೆಯ ಎದುರು ನಾವು ಸೋಲನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ) ಊರಿನವರ್‍ಯಾರಿಗೂ ಮಧ್ಯಾಹ್ನ ನಿದ್ದೆ ಮಾಡಲು ಬಿಡುತ್ತಿರಲಿಲ್ಲ! ಪ್ರತಿ ಮನೆಯ ಅಂಗಳವೂ ಆಟದ ಮೈದಾನ.
ಅಡಿಕೆ ಸುಗ್ಗಿಗೆ ಚಪ್ಪರ ಹಾಕುವುದು ಮಲೆನಾಡಿನ ರೂಢಿ. ಅಡಿಕೆ ಮರದ ಕಂಬಗಳನ್ನು ಬಳಸಿ ಮಾಡುತ್ತಿದ್ದ ಮನೆಯಂಗಳದ ಚಪ್ಪರ, ನಮಗೆಲ್ಲ ‘ಕಂಬ-ಕಂಬ’ ಎಂಬ ಆಟದ ವೇದಿಕೆಯಾಗಿತ್ತು! ಕಂಬ ಸಿಕ್ಕವರೆಲ್ಲ ಗೆದ್ದರು, ಸಿಗದವರು ಔಟ್(ಕಳ್ಳ) ಎಂಬುದು ಆ ಆಟದ ನಿಯಮ. ಹಾಗಾಗಿ ಕಂಬಗಳ ಲೆಕ್ಕಾಚಾರದಿಂದಲೇ ಎಷ್ಟು ಹುಡುಗರು ಊರಲ್ಲಿ ಇದ್ದರು ಎಂಬುದು ತಿಳಿಯುತ್ತಿತ್ತು.
ಅಂದಹಾಗೆ ಬೇಸಿಗೆ ರಜೆಯಲ್ಲಿ ನಮ್ಮೂರಿನಲ್ಲಿ ಆ ಪರಿ ಹುಡುಗರು ಸೇರಲು ಕಾರಣವಿತ್ತು. ಅಜ್ಜಿ ಮನೆ ಎಂಬ ಮಮತೆಯೊಂದು ಊರನ್ನು ಆವರಿಸಿತ್ತು. ಹೌದು, ನಾವು ಚಿಕ್ಕವರಿದ್ದಾಗ ಅಜ್ಜಿ ಮನೆಗೆ(ಅಮ್ಮನ ತವರು) ಹೋಗುವುದು ಅಂದರೆ ತುಂಬಾ ಖುಷಿಯ ವಿಚಾರ. ಬೇಸಿಗೆ ರಜೆ, ಅಕ್ಟೋಬರ್ ರಜೆಯಲ್ಲಿ ಕನಿಷ್ಠ ೧೫ದಿನವಾದರೂ ಅಜ್ಜಿ ಮನೆಯಲ್ಲಿ ಉಳಿದು, ಸುತ್ತಾಡಿಕೊಂಡು ಬರುವ ವಾಡಿಕೆ. ಪರ ಊರಿನ ಮಂದಿ, ಅಜ್ಜಿ ಮನೆಯನ್ನು ಅರಸಿಕೊಂಡು ನಮ್ಮೂರಿಗೆ ಬರುವಾಗ, ನಾವು ಊರಲ್ಲೇ ಇರುವುದು. ಅವರು ಮನೆಗೆ ಮರಳುತ್ತಿದ್ದಂತೆ, ನಾವು ನಮ್ಮ ಅಜ್ಜಿ ಮನೆ ಕಡೆ ಹೆಜ್ಜೆ ಹಾಕುವುದು…ಇದು ಆವತ್ತಿನ ದಿನ ನಮ್ಮೂರಿನಲ್ಲಿದ್ದ ಅಲಿಖಿತ ನಿಯಮ!
ಈಗ ನಮ್ಮೂರು ಮೊದಲಿನಂತಿಲ್ಲ. ಕೇವಲ ನಮ್ಮೂರು ಮಾತ್ರವಲ್ಲ, ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಹಿಂದಿನ ಸಡಗರ, ವೈಭವವಿಲ್ಲ. ಏಪ್ರಿಲ್-ಮೇ ತಿಂಗಳಲ್ಲಿ ಅಜ್ಜಿ ಮನೆಗೆ ಬರುವ ಮಂದಿಯೂ ಇಲ್ಲ. ಅಜ್ಜಿ ಮನೆ ಅರಸಿಕೊಂಡು ಹೋಗುವ ಹುಡುಗರೂ ಇಲ್ಲ. ಅತ್ತೆ, ಮಾವ, ದೊಡ್ಡಾಯಿ…ಇತ್ಯಾದಿ ಪದಗಳೇ ಮರೆತು ಹೋದಂತಾಗುತ್ತಿದೆ. ಇವತ್ತಿನ ೩-೪ನೇ ತರಗತಿ ಮಕ್ಕಳು ಅಜ್ಜಿ ಮನೆಗ ಹೋಗಲು ಬಿಲ್‌ಕುಲ್ ಒಪ್ಪುವುದಿಲ್ಲ. ಒಪ್ಪುವುದಿಲ್ಲ ಅನ್ನುವುದಕ್ಕಿಂತ, ಪಾಲಕರು ಕಳುಹಿಸುವುದಿಲ್ಲ. ಸ್ವಿಮ್ಮಿಂಗ್ ಕ್ಲಾಸು, ಡಿಸ್ಕೊ ಕ್ಲಾಸು, ಟ್ಯೂಷನ್…ಇತ್ಯಾದಿಗಳನ್ನು ಬಿಟ್ಟು ಮತ್ತ್ಯಾವ ಕೆಲಸ ಮಾಡಿದರೂ ಟೈಂ ವೇಸ್ಟ್ ಅನ್ನುವ ಪಾಲಕರ ಸಂಖ್ಯೆಯೇ ಹೆಚ್ಚಾಗುತ್ತಿದೆ!
ಉದ್ಯೋಗದ ನಿಮಿತ್ತ ಮಹಾನಗರಗಳ ಜಾಡು ಹಿಡಿದಿರುವವರಿಗೆ, ಹುಟ್ಟಿ ಬೆಳೆದ ಮನೆಯನ್ನು ವರ್ಷಕ್ಕೊಮ್ಮೆ ಕಾಣುವುದೇ ಕಷ್ಟದ ಕೆಲಸವಾಗಿದೆ! ವಾಸವಾಗಿರುವ ಮನೆ ಹುಟ್ಟೂರಿನಂತಾದರೆ, ಆಫೀಸು ಒಂತರಹ ಅಜ್ಜಿಮನೆ! ಅಂದಹಾಗೆ, ನಾವೆಲ್ಲ ಪಿಯುಸಿ ಕಳೆಯುವವರೆಗಾದರೂ, ಅಜ್ಜನ ಮನೆಯಲ್ಲಿ ನ ಚೆಂದದ ಅತ್ತಿಗೆ ನೋಡಲ್ಕಿಕಾದರೂ ಅಜ್ಜಿ ಮನೆಗೆ ಹೋಗುತ್ತಿದ್ದೆವು ಮಾರಾಯ್ರೆ!
(ಸೂಚನೆ:- ಈ ಮೂರು ಬರಹಗಳು ವಿಜಯ ಕರ್ನಾಟಕದ ಸಿಂಪ್ಲಿ ಸಿಟಿ ಪುಟದಲ್ಲಿ ಪ್ರಕಟಗೊಂಡಿದೆ)
Read Full Post »