ಬರೆದಿದ್ದೇ, ಬರೆದು, ಬರೆದು ಬೇಜಾರಾಗಿದೆ. ಹೊಸತೇನಾದ್ರು…ಅಂತಾ ಆಲೋಚಿಸುತ್ತಿದ್ದಾಗ ಸಿಕ್ಕವಳು ಲೈನು ಹಾಕಿದ ಆ ಹುಡುಗಿ! ಇವಳು ವಾಸ್ತವವೋ, ಕಲ್ಪನೆಯೋ ಅಂತಾ ಮಾತ್ರ ಯಾವ ಕಾರಣಕ್ಕೂ ಕೇಳಬೇಡಿ! ನಾನು ಲೈನು ಹೊಡೆಯುತ್ತಿದೆ ಎಂದರೆ, ನನ್ನ ಶೇ.೯೦ರಷ್ಟು ಮಿತ್ರರು ನಂಬಲಿಕ್ಕಿಲ್ಲ. ಆ ಪರಿ ಒಳ್ಳೆ ಹುಡುಗ ಈ ಕೋಡ್ಸರ!
ನನ್ನ ಪಾಲಿಗೆ ಡಿಗ್ರಿಯ ಮೂರು ವರ್ಷದ ಬದುಕು ಸಿಕ್ಕಾಪಟ್ಟೆ ಮಸ್ತ್. ಓದುವುದೊಂದನ್ನು ಬಿಟ್ಟು ಉಳಿದಿದ್ದೆಲ್ಲಾ ಮಾಡಿದ್ದೇನೆ! ಮಠ, ಕಾಲೇಜು, ದುಡಿಮೆ…ಇವಿಷ್ಟೆ ನನ್ನ ಆಗಿನ ಪ್ರಪಂಚ. ನನ್ನದೇ ದುಡಿಮೆ. ನನ್ನದೇ ಖರ್ಚು. ಹಾಗಾಗಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಉಡುಪಿಯಲ್ಲಿ ಓದುವ ಬಹುತೇಕರ ಹಣೆಬರಹ ಹೀಗೆ. ಹಾಗಂತ, ಕಾರಿಡಾರ್‌ನಲ್ಲಿ ನಿಂತು ಹುಡುಗಿಯರನ್ನು ಚುಡಾಯಿಸುವವರ ಗುಂಪಿನಲ್ಲಿ, ಪುಗಸಟ್ಟೆ ಜಗಳ ಆಡಿಕೊಳ್ಳುವವರ ಗ್ಯಾಂಗ್‌ನಲ್ಲಿ, ಚಾಲುಕ್ಯಕ್ಕೆ ಹೋಗಿ ಸಿಗರೇಟು ಎಳೆಯುವ, ಪೂಲ್‌ಗೆ ಹೋಗಿ ಸ್ನೂಕರ್ ಆಡುವವರ ತಂಡದಲ್ಲಿ…ಊಹುಂ, ಎಲ್ಲೂ ಕಾಣಿಸಿಕೊಳ್ಳಲಿಲ್ಲ.
ಗೋವಿಂದ ಕಲ್ಯಾಣ ಮಂಟಪ, ಶಾಮಿಲಿ, ಅಂಬಲ್ಪಾಡಿ ದೇವಸ್ಥಾನ…ಎಲ್ಲೇ ಬಡಿಸುವುದು ಇದ್ದರೂ ನಾವೊಂದಿಷ್ಟು ಮಠದ ಹುಡುಗರು ಹಾಜರ್. ಅದಕ್ಕೆ ತಕ್ಕಂತೆ ಬೆಳಿಗ್ಗೆ ಅಂತಿಮ ಅವ ಸಂಸ್ಕೃತ, ಮಧ್ಯಾಹ್ನ ಮೊದಲನೆ ಪಿರಿಯಡ್ ಇಂಗ್ಲೀಷ್. ಈ ಹುಡುಗರು ಕ್ಲಾಸಿಗೆ ಬಂಕ್ ಹಾಕಿ ಬಡಿಸಲು ಹೋಗುತ್ತಾರೆ ಅನ್ನೋದು ಪಿಪಿಸಿಯ ಎಲ್ಲಾ ಅಧ್ಯಾಪಕರಿಗೂ ಗೊತ್ತಿತ್ತು. ಇನ್ನೂ ಮಜ ಅಂದ್ರೆ, ಕೆಲವು ಸಲ ಪಂಕ್ತಿ ನಡುವೆ ಲೆಕ್ಚರ್‌ಗಳು ಪ್ರತ್ಯಕ್ಷ! ಮೊದಲೆಲ್ಲ ಭಯ ಆಗ್ತಿತ್ತು. ಆಮೇಲೆ ಮಾಮೂಲು. ಶೇ.೬೦ರಷ್ಟು ಹಾಜರಿ ಉಳಿಸಿಕೊಂಡು ಉಳಿದೆಲ್ಲ ತರಗತಿಗಳಿಗೂ ಬಂಕ್! ಸದಾ ನನಗೆ ಬೈಯ್ಯುವ ಮ್ಯಾಥ್ಸ್ ರಾಘು ಸರ್, ನನ್ನನ್ನು ತಿಗಣೆಯಂತೆ ಕಾಡಿದ ಸೋಮಯಾಜಿ ಸರ್‌ಗಳ ಕಣ್ಣಿಗೇ ಬೀಳುತ್ತಿದೆ.
ಒಂತರಹ ಮಜವಾದ ಬದುಕು ಅದು. ಎಲ್ಲಾ ಪ್ರಾಧ್ಯಾಪಕರು ನನಗೆ ಸಿಕ್ಕಾಪಟ್ಟೆ ಬೈಯ್ಯುತ್ತಿದ್ದರು. ಸಾಮರ್ಥ್ಯಕ್ಕೆ ತಕ್ಕಷ್ಟು ಅಂಕ ತೆಗೆಯಲ್ಲ, ಸರಿಯಾಗಿ ಓದಲ್ಲ ಎಂಬುದಷ್ಟೆ ಕಾರಣ. ೫ನೇ ಕ್ಲಾಸಿನಿಂದ ಸ್ವಂತದ ಖರ್ಚಿಗೆ ದುಡಿಕೊಳ್ಳುವುದು ರೂಡಿಯಾಗಿಬಿಟ್ಟಿತ್ತು. ಅದಕ್ಕಿಂತ ಹೆಚ್ಚಾಗಿ ದುಡಿಕೊಳ್ಳುವುದು ನನ್ನ ಪಾಲಿಗೆ ಅನಿವಾರ್ಯವಾಗಿತ್ತು. ಲಕ್ಷಗಟ್ಟಲೆ ಇನ್‌ವೆಸ್ಟ್ ಮಾಡಿ ಡಾಕ್ಟರ್, ಎಂಜಿನಿಯರ್ ಆದ್ರೆ, ೨೩ ವರ್ಷ ಕಷ್ಟಪಟ್ಟರೆ ಉಳಿದ ಬದುಕು ಸಂತೋಷವಾಗಿರತ್ತೆ ಅನ್ನೋದು ನಿಜ. ಆದ್ರೆ, ನನ್ನ ಪಾಲಿಗೆ ಹಣಕ್ಕಿಂತ ಅನುಭವ, ವ್ಯಕ್ತಿತ್ವಗಳೇ ಬದುಕು. ಖಾಲಿ ಹಣ ಸಂಪಾದನೆಗೆ ಎಂಜಿನಿಯರಿಂಗ್ ಪದವಿಯೇ ಬೇಕು ಅಂತೇನೂ ಇಲ್ಲ. ಇರೋ ಮೂರು ದಿನದಲ್ಲಿ ಸಾಧ್ಯವಾದಷ್ಟು ಹೊಸ ಕ್ಷೇತ್ರಗಳನ್ನು ಪರಿಚಯ ಮಾಡಿಕೊಳ್ಳಬೇಕು ಅನ್ನೋ ಹಂಬಲ. ಆ ಕಾರಣಕ್ಕಾಗಿಯೇ ಪತ್ರಿಕೋದ್ಯಮ ಆಯ್ದುಕೊಂಡಿದ್ದು. ಕೆಲಸವಿಲ್ಲದೆ, ಕೆಲಸವಿದ್ದರೂ ಸಂಬಳವಿಲ್ಲದೆ, ಸಂಬಳವಿದ್ದರೂ ಬಾಡಿಗೆ ಕಟ್ಟಲು ಸಾಕಾಗದ ಒಂದು ವರ್ಷದ ನರಯಾತನೆಯ ನಡುವೆಯೂ ಈ ವೃತ್ತಿಯಲ್ಲಿ ಉಳಿದುಕೊಂಡಿದ್ದು. ನಮ್ಮ ಮನೆಯವರಿಗೆ ನನ್ನ ಆಯ್ಕೆ ಇವತ್ತಿಗೂ ಇಷ್ಟವಿಲ್ಲ.
ಲವ್, ಫೀಲು…ಆ ಕಾಲದಲ್ಲಿ ನನ್ನ ಬದುಕಿನ ಕುರಿತು ನನಗೆ ಭರವಸೆಯಿರಲಿಲ್ಲ. ನನ್ನ ಬಗಲಿಗೆ ಇನ್ನೊಬ್ಬಳನ್ನು ಕಟ್ಟಿಕೊಂಡು ಅವಳ ಕನಸು ಕಸಿದುಕೊಳ್ಳಲು…ಈಗಲೂ ಸುತರಾಂ ಇಷ್ಟವಿಲ್ಲ. ಹಾಗಾಗಿಯೇ ನಾನು ಹುಡುಗಿ ಅನ್ನೋ ವಿಷಯದಿಂದ ಸ್ವಲ್ಪ ದೂರ. ಈ ವಿಷಯದಲ್ಲಿ ಅನೇಕ ಗೆಳೆಯರು ನನ್ನನ್ನು ಆಡಿಕೊಳ್ಳುತ್ತಾರೆ. ನನಗೆ ಒಂಚೂರು ಬೇಜಾರಿಲ್ಲ. ಅದಕ್ಕಿಂತ ಹೆಚ್ಚಾಗಿ ಹುಡುಗಿ, ಚೆಂದ, ಫೀಲಿಂಗು…ಇವೆಲ್ಲ ಅವರವರ ಅಭಿರುಚಿ. ಈಗ ಇಷ್ಟವಾದವಳು ಇನ್ನೊಂದೆರಡು ವರ್ಷದ ನಂತರ ಇಷ್ಟವಾಗುತ್ತಾಳೆ ಅನ್ನಲು ಸಾಧ್ಯವಿಲ್ಲ. ಕೆಲ ಸಲ ಕೆಲವರು ಕಾರಣವಿಲ್ಲದೆಯೂ ಇಷ್ಟವಾಗಬಹುದು.
ಆದ್ರೂ ನೋಟ್ಸ್ ವಿಷಯಕ್ಕೆ ಹುಡುಗಿಯರೇ ಬೇಕು! ಇಂಟರ್‌ನಲ್‌ಗೆ ಮೂರುದಿನ ಮುಂಚೆ ನರ್ಮದಾ, ರಂಜನಿ, ರಂಜಿತಾ…ಮೂವರಲ್ಲಿ ಯಾರಾದ್ರೂ ನೋಟ್ಸ್ ಕೊಟ್ಟಿಲ್ಲ ಅಂದ್ರೆ ನಮ್ಮ ಕಥೆ ಡಮಾರ್! ನಮ್ಮ ಕ್ಲಾಸಲ್ಲಿ ೨೪ ಹುಡುಗರು. ೮೫ ಹುಡುಗಿಯರು. ಹಾಗಾಗಿ ಅದೆಷ್ಟೊ ಹುಡುಗಿಯರ ಹೆಸರು, ಪರಿಚಯ ಕಡೆವರೆಗೂ ಆಗಲಿಲ್ಲ. ನನಗೆ ಚೆನ್ನಾಗಿ ಪರಿಚಯವಿದ್ದದ್ದು, ನಾನು ಸರಿಯಾಗಿ ಮಾತಾಡಿದ್ದು ಈ ಮೂರು ಹುಡುಗಿಯರ ಹತ್ತಿರ ಮಾತ್ರ. ಈಗ ನರ್ಮದಾ ಮಾತ್ರ ಕಾಂಟ್ಯಾಕ್ಟ್‌ನಲ್ಲಿ ಇದಾಳೆ. ಉಳಿದಿಬ್ಬರಿಗೆ ಮದ್ವೆ ಆಗಿ, ಮಕ್ಕಳೂ ಆಗಿರಬಹುದು. ಇದರಲ್ಲಿ ಹುಡುಗಿಯರು ತುಂಬಾ ಫಾಸ್ಟ್. ಅವರಲ್ಲದಿದ್ದರೂ, ಅವರ ಹೆತ್ತವರು!
ಅಂದಹಾಗೆ ನಾನು ಲೈನು ಹಾಕಿದ ನನಗಿಂತ ಜೂನಿಯರ್ ಆಗಿದ್ದ ನೀಲಾವರದ ಆ ಹುಡುಗಿ ಹೆಸರು…?!(ನನ್ನ ಮುಂದಿನ ಕಥೆಯಲ್ಲಿ ಗ್ಯಾರಂಟಿ ಅವಳ ಹೆಸರನ್ನೇ ಬಳಸುತ್ತೇನೆ!!!)