Feeds:
ಲೇಖನಗಳು
ಟಿಪ್ಪಣಿಗಳು

Archive for ಡಿಸೆಂಬರ್, 2014

ಹಾಯ್ ಪುಟ್ಟಿ,
ಎಕ್ಸ್‌ಟ್ರೀಮ್ಲಿ, ಎಕ್ಸ್‌ಟ್ರೀಮ್ಲಿ ಸ್ವಾರಿ ಕಣೆ! ನಿಂಗೊಂದು ಪತ್ರ ಬರಿದೆ ವರ್ಷಗಳೆ ಕಳೆದು ಹೋಗಿತ್ತು ನೋಡು. ಮದ್ವೆ ಆದ್ಮೇಲೆ ಹುಡುಗ್ರು ಕಳೆದು ಹೋಗ್ತಾರೆ ಅನ್ನೋ ನಿನ್ನ ಮಾತಿಗು, ನಾನು ಪತ್ರ ಬರಿದೆ ಇರೋದಕ್ಕೂ ಸರಿ ಹೋಗಿತ್ತು. ಹಾಗಂತ ನಿನ್ನ ಮೇಲೆ ನಂಗೆ ಪ್ರೀತಿ ಕಡಿಮೆ ಆಗಿದೆ ಅಂತಲ್ಲ. ಮದ್ವೆಗು ಮೊದ್ಲು ನಿನ್ನ ಎಷ್ಟು ಪ್ರೀತಿಸುತ್ತಿದ್ನೊ, ಈಗ ಅದಕ್ಕಿಂತ ಒಂಚೂರು ಜಾಸ್ತಿನೆ ಪ್ರೀತಿಸ್ತೀನಿ. ಈ ಮಾತು ಕೇಳಿ ನೀನು ’ಹನ್ನೊಂದು ಗಂಟೆ ಶಿವಮೊಗ್ಗ ಟ್ರೈನ್ ಹೋಯ್ತು’ ಅಂದುಕೊಂಡು ಇರ್ತಿಯ ಅಂತ ನಂಗೆ ಖಚಿತವಾಗಿ ಗೊತ್ತು. ಆದ್ರೂ ಪತ್ರ ಯಾಕೆ ಬರೆದಿಲ್ಲ ಅಂದ್ರೆ, ಈಗ ದಿನ ಎದುರಿಗೆ ಸಿಕ್ತಿಯಲ್ವಾ ಅದ್ಕೆ!
ಆದ್ರು ಪತ್ರದ ಸವಿಯೇ ಬೇರೆ ಬಿಡು! ಹಾಗಾಗಿ ನಿನ್ನ ಹಕ್ಕೋತ್ತಾಯದ ಮೇರೆಗೆ ಈ ಪತ್ರ. ಲೈಫ್ ಸಿಕ್ಕಾಪಟ್ಟೆ ಬ್ಯೂಸಿ ಆಗಿದೆ. ಈ ಹಾಳಾದ ಸಂಸಾರ ಅಂತ ಆದ್ಮೇಲೆ ನಿಜವಾಗ್ಲೂ ಕಳೆದು ಹೋಗಿಬಿಟ್ಟಿದ್ದೀನಿ. ಹಿಂದೆ ಆಗಿದ್ರೆ ನಾನೊಬ್ಬನೆ. ಹೆಂಗೆ ಬದುಕಿದ್ರು ಕಳೀತಿತ್ತು. ’ಉಂಡ್ಯ, ತಿಂದ್ಯ, ಮಲಗಿದ್ಯ…ಅದೆಲ್ಲಕ್ಕಿಂತ ಹೆಚ್ಚಾಗಿ ಸ್ನಾನ ಮಾಡಿ ದೇವರ ಪೂಜೆ ಮಾಡಿದ್ಯ’ ಅಂತ ಕೇಳೋರು ಯಾರು ಇರಲಿಲ್ಲ! ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬಂದ್ರು ನಡೆಯುತ್ತಿತ್ತು. ಬರದೆ ಇದ್ರು ಓಕೆ, ಓಕೆ.
ಅದ್ಕೆ ಕಣೆ ನಾನು ನಿಂಗೆ ಯಾವಾಗ್ಲೂ ರೇಗಿಸುವುದು ’ನೀ ಊರಿಗೆ ಹೋದ ನಮ್ಮ ಮನೆ ಮಹಡಿ ಮೇಲೆ ಬಾವುಟ ಹಾರಿಸಿ ಸ್ವತಂತ್ರ ದಿನಾಚರಣೆ ಆಚರಿಸುತ್ತೀನಿ. ಬಂದವರಿಗೆಲ್ಲ ಬೋಂದಿ ಲಾಡು ಕೊಡ್ತೀನಿ’ ಅಂತ! ಈ ಸ್ವತಂತ್ರ ದಿನಾಚರಣೆ, ಗಾಂಧಿ ಜಯಂತಿ ಮಜವೇ ಬೇರೆ ಬಿಡು. ಶಾಲೆಯಲ್ಲಿ ತಿಂದ ಬೋಂದಿ ಲಾಡಿನ ರುಚಿ, ನಿನ್ನ ಕೈಯಡುಗೆಯ ರುಚಿ ಎರಡು ಒಂದೆ ಅಂತ ಅರ್ಥವಾಗುವುದು ನೀನು ಊರಿಗೆ ಹೋದಾಗಲೆ!
ಅಯ್ಯೊ ನೋಡು ಈ ಪುರಾಣದಲ್ಲಿ ವೆರಿ ವೆರಿ ಇಂಪಾರ್ಟೆಂಟ್ ವಿಚಾರವನ್ನೆ ಮರೆತುಬಿಟ್ಟೆ. ಅಂದಹಾಗೆ ನಿಮ್ಮಪ್ಪ ಜೋಯ್ಸರು ಆರಾಮ ಇದಾರಾ?! ಛೇ, ಆಗೆಲ್ಲ ನಾನು ಜೋಯ್ಸರನ್ನ ಏಕವಚನದಲ್ಲಿ ಆರಾಮವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಈಗ ಹಾಗಾಗಲ್ಲ. ಯಾಕಂದ್ರೆ ಅವ್ರು ತಮ್ಮ ಮಗಳನ್ನು ’ತನು,ಮನದಿಂದ’ ಧಾರೆ ಎಳೆದು ಕೊಟ್ಟಿದ್ದಾರೆ. ಧನವನ್ನು ಮಾತ್ರ ಕೊಡದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೆ! ಹೋಗ್ಲಿ ಬಿಡು ಯಾರು ಕೊಟ್ಟ ದುಡ್ಡು ಎಷ್ಟು ದಿನ ಬರುತ್ತೆ ಅಲ್ವಾ? ಆದ್ರೂ ಕೊಟ್ಟಿದ್ರೆ ಕಾಫಿಪುಡಿ ಖರ್ಚಿಗೆ ಆಗ್ತಾ ಇತ್ತೇನಪ್ಪ! ಅವ್ರು ನಂಗೆ ಅಂತ ಕೊಡೋದು ಬೇಡವಾಗಿತ್ತು. ಮಗಳ ಸುಖ-ದುಃಖ, ಶಾಂತಿ, ನೆಮ್ಮದಿಗೆ ಅಂತ ಕೊಟ್ಟಿದ್ರೆ ಸಾಕಾಗಿತ್ತು. ಹಿಂಗೆಲ್ಲ ಜೋರಾಗಿ ಅಂದುಬಿಟ್ರೆ ನಾಳೆಯಿಂದ ನೀನು ಮನೆಯಲ್ಲಿ ಕಾಫಿ ಮಾಡೋದನ್ನೆ ನಿಲ್ಲಿಸಿಬಿಡ್ತಿಯ!
ಇವತ್ತು ಸುಮ್ಮನೆ ನಿಂಗೆ ಬರೆದ ಹಳೆಯ ಪತ್ರಗಳು, ನೀನು ಅದ್ಕೆ ಬರೆದ ಉತ್ತರಗಳನ್ನು ಜಾಲಾಡುತ್ತ ಕುಳಿತ್ತಿದ್ದೆ. ಅಬ್ಬಬ್ಬ ಆವತ್ತೆಲ್ಲ ಅದೆಷ್ಟು ಕನಸುಗಳು ನಮ್ಮಿಬ್ಬರದ್ದು. ನಮ್ಮಿಬ್ಬರ ಜೋಡಿ ಅಂದ್ರೆ ಜಗತ್ತಿನಲ್ಲಿ ಸ್ವರ್ಗಕ್ಕೆ ಮೂರೆ ಗೇಣು. ಮೊಬೈಲ್ ಇಲ್ಲದ ಕಾಲದಲ್ಲಿ, ಇಂಟರ್‌ನೆಟ್ ಕಾಣದ ಯುಗದಲ್ಲಿ ನಾವಿಬ್ಬರು ಅಂದೆಂಥ ಅದ್ಭುತವಾದ ಲವ್ ಮಾಡಿಬಿಟ್ವಿ. ಈಗ ನೆನಪಿಸಿಕೊಂಡ್ರೆ ಒಂಥರ ಥ್ರಿಲ್ ಆಗುತ್ತೆ. ಇನ್‌ಲ್ಯಾಂಡ್ ಲೆಟರ್‌ನಿಂದ ಇಷ್ಟೊಂದು ಅದ್ಭುತವಾದ ಲವ್ ಸಾಧ್ಯವ ಅನ್ನಿಸುತ್ತೆ. ಟಿಫನ್ ಬಾಕ್ಸ್‌ನಿಂದ, ನೋಟ್‌ಬುಕ್‌ನಿಂದ…ಇನ್ನು ಎಂಥೆಂಥವುಗಳಿಂದಲೋ ಲವ್ ಆಗುತ್ತಂತೆ. ಅಂಥದ್ರಲ್ಲಿ ನಮ್ಮ ಇನ್‌ಲ್ಯಾಂಡ್ ಲೆಟರ್ ಮಹಾ ಅಲ್ಲ ಬಿಡು!
ಅಂದ್ಹಾಗೆ ನಿಮ್ಮ ತೀರ್ಥಹಳ್ಳಿ ಹೇಗಿದೆ? ತುಂಗಾನದಿಯಲ್ಲಿ ನೀರಿದೆ ತಾನೆ? ನೆನಪಿದ್ಯ ನಿಂಗೆ, ನಾನು ಲವ್ ಮಾಡಲ್ಲ ಅಂದಿದ್ದಕ್ಕೆ ನೀನು ನೀರಿಲ್ಲದ ನದಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು! ಹಾಗೇನಾದ್ರು ಆಗಿದ್ರೆ ನನ್ನ ಬದುಕಿನಲ್ಲಿ ಎಂಥೆಂಥ ಕಾಮಿಡಿ ಸೀನ್‌ಗಳೆಲ್ಲ ಮಿಸ್ ಆಗ್ತಿತ್ತು. ಅದ್ಯಾಕೊ ನನಗೆ ಇವತ್ತಿಗು ನಿಮ್ಮೂರು ತೀರ್ಥಹಳ್ಳಿ ವಂಡರ್‌ಫುಲ್ ಕಣೆ. ನೀನು ಹುಟ್ಟಿದ ಊರು ಅಂತಲ್ಲ, ನಿನ್ನ ತವರೂರು ಅಂತಾನೂ ಅಲ್ಲ. ಆದ್ರೂ ತೀರ್ಥಳ್ಳಿ ಅಂದ್ರೆ ಏನೋ ಒಂಥರ ಟಚ್ಚಿ, ಟಚ್ಚಿ!
ನೀನು ಇಲ್ಲಿ ನನ್ನ ಪಕ್ಕದಲ್ಲಿ ಕುಳಿತಿದಿಯಲ್ವಾ? ಸೋ, ನಾನು ಪತ್ರನ ಮತ್ತೆ ನಿನ್ನ ಅಡ್ರೆಸ್‌ಗೆ ಪೋಸ್ಟ್ ಮಾಡಲ್ಲ. ಈಗ ನಿಂದು-ನಂದು ಒಂದೆ ಅಡ್ರೆಸ್! ಆಗಾಗ ಡೋರ್ ನಂಬರ್ ಮಾತ್ರ ಬದ್ಲಾಗ್ತ ಇರುತ್ತೆ. ಹಾಗಾಗಿ ಇಲ್ಲೇ ಪತ್ರ ಓದಿ ನನ್ನ ಒಂದು ರೂಪಾಯಿ ಉಳಿತಾಯ ಮಾಡು. ಮತ್ತೆ ಮನೆ ಕಡೆ ಎಲ್ಲ ಆರಾಮಲ್ವಾ?
ಸರಿ ಕಣೆ ಆಫೀಸ್‌ಗೆ ಟೈಂ ಆಯ್ತು. ಪುರುಸೊತ್ತು ಆದಾಗ ಇನ್ನೊಂದು ಪತ್ರ ಬರಿತೀನಿ. ಅಲ್ಲಿವರೆಗೂ ಹ್ಯಾಪಿ ಇಂಡಪೆಂಡೆನ್ಸ್ ಡೆ. ನಾನು ಈ ಸಿಲಿಕಾನ್ ಸಿಟಿಗೆ ಬಂದು ಶಾನೆ ಇಂಪ್ರ್ಯೂ ಆಗಿದೀನಿ ಕಣೆ. ಮೊದ್ಲಿನ ಥರ ಗುಗ್ಗು ಅಲ್ಲ. ಪೆದ್ದು ಅಲ್ಲ. ನೀಟಾಗಿ ಡ್ರೆಸ್ ಮಾಡಿಕೊಂಡು ಆಫೀಸ್‌ಗೆ ಹೋಗ್ತೀನಿ. ಅದ್ಕೆ ಪತ್ರದ ತುಂಬೆಲ್ಲ ಇಷ್ಟೊಂದು ಇಂಗ್ಲಿಷ್ ಪದಗಳು.
ಸರಿ ಬರ‍್ಲಾ? ಬರಬೇಡ ಅಂದ್ರು ಸಂಜೆ ಗ್ಯಾರೆಂಟಿ ಬರ್ತಿನಿ! ಅಲ್ಲಿವರೆಗೂ ನಿಂಗೆ ಮತ್ತೊಮ್ಮೆ ಹ್ಯಾಪಿ ಇಂಡಪೆಂಡೆನ್ಸ್ ಡೆ.
ಇಂತಿ
ನಿನ್ನ ಪುಟ್ಟ

Read Full Post »