Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘ಚಂದನ್ ಶರ್ಮಾ’

kannada-news-channel

“ಇವನು ಪತ್ರಕರ್ತ. ಇವನ ಎದ್ರು ಹುಷಾರಾಗಿ ಮಾತಾಡಿ. ನಿಮ್ಮ ಬಗ್ಗೆ ಬರೆದು ಬಿಡ್ತಾನೆ” ಹಾಗಂತ ಯಾರಾದ್ರು ಗೆಳೆಯರು ನನ್ನನ್ನು ಇಂಟ್ರಡ್ಯೂಸ್‌ ಮಾಡುವಾಗ, “ನಿಮಗೇನು ಬಿಡಿ ಪತ್ರಕರ್ತರು. ಟ್ರಾಫಿಕ್‌ ಪೋಲಿಸ್ರು ಹಿಡಿಯಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಲಂಚ ಕೇಳಲ್ಲ. ಎಲ್ಲ ಕಡೆ ನಿಮಗೆ ಫ್ರೀ” ಎಂದು ಅಣಕಿಸುವಾಗ, ಅದೆಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಸುದ್ದಿಯಿಂದಾಗಿ, ಘಟನೆಯಿಂದಾಗಿ ಮಾಧ್ಯಮಗಳು, ಪತ್ರಕರ್ತರು ಹಿಗ್ಗಾಮುಗ್ಗ ಉಗಿಸಿಕೊಳ್ಳುವಾಗ ಒಂದು ಬಗೆಯಲ್ಲಿ ಇರಿಟೇಟ್‌ ಆಗುತ್ತಿರುತ್ತದೆ.

ಪ್ರೆಸ್ಟಿಟ್ಯೂಟ್‌ ಎಂದು ಹ್ಯಾಷ್‌ಟ್ಯಾಗ್‌ ಹಾಕಿ ಉಗಿಸಿಕೊಳ್ಳುವುದು ಮಾಧ್ಯಮಗಳಿಗೆ ಮಾಮೂಲಾಗಿದೆ. ಸಾಮಾನ್ಯನಿಗೆ ಪತ್ರಕರ್ತನ ಇತಿಮಿತಿಗಳು ಗೊತ್ತಿಲ್ಲದೆ ಇರುವುದು ಅಥವಾ ಪತ್ರಿಕೋದ್ಯಮದ ಕುರಿತಾಗಿ ಇರುವ ಭ್ರಮೆಗಳು ಇದಕ್ಕೆಲ್ಲ ಕಾರಣ. ಓರ್ವ ರಾಧಾ ಹಿರೇಗೌಡರನ್ನೋ, ಅರುಣ್‌ ಬಡಿಗೇರ್‌ ಅವರನ್ನೋ ಅಥವಾ ಇನ್ನು ಯಾವುದೇ ನಿರೂಪಕ/ನಿರೂಪಕಿ, ಪತ್ರಕರ್ತರನ್ನು ಏಕವಚನದಲ್ಲಿ, ವೈಯಕ್ತಿಕವಾಗಿ ಬೈಯ್ಯವ ಮೊದಲು ನೀವು ತಿಳಿದುಕೊಳ್ಳಬೇಕಾದ ಅಂಶಗಳು ಸಾಕಷ್ಟಿವೆ.

ಈ ಹಿಂದೆ “ಉಗಳಲು ಆಗದೆ, ನುಂಗಲು ಆಗದೆ” ಎಂದು ಒಂದು ಲೇಖನ ಬರೆದಿದ್ದೆ. ಅದರ ದ್ವಿತೀಯಾರ್ಧವಿದು ಅಂದುಕೊಳ್ಳಿ. ಅಲ್ಲಿ ಹೇಳಿದ ಅಂಶಗಳನ್ನು ಮತ್ತೆ ರಿಪೀಟ್‌ ಮಾಡುವುದಿಲ್ಲ. ಸುದ್ದಿ ವಾಹಿನಿಗಳಿಗೆ ಹಿಗ್ಗಮುಗ್ಗ ಬೈಯ್ಯುತ್ತೀವಿ. ಖಂಡಿತ ಅತಿರೇಕದ ಕೆಲವಕ್ಕೆ ನಾನು ಸಾಕಷ್ಟು ಬೈದಿರುವೆ. ಪತ್ರಿಕೆ, ವಾಹಿನಿಗಳು ಒಂದು ಉದ್ಯಮ. ಒಂದು ಸುದ್ದಿ ವಾಹಿನಿ ವರ್ಷಪೂರ್ತಿ ಏನು ತೊಡಕಿಲ್ಲದೆ ಆರಾಮವಾಗಿ ರನ್‌ ಆಗಲು ಕನಿಷ್ಟ ೨೨-೨೫ ಕೋಟಿ ರೂ. ಅಗತ್ಯವಿದೆ. ಇಷ್ಟು ಬಂಡವಾಳ ಹಾಕಿ ವಾಹಿನಿ ನಡೆಸುವ ಆಡಳಿತ ಮಂಡಳಿ ಇದನ್ನು ವಾಪಾಸ್‌ ತೆಗೆಯುವ ವಿಧಾನವನ್ನು ಹುಡುಕಿಕೊಳ್ಳಲೇ ಬೇಕು.

ಖಂಡಿತ ಒಂದು ವಾಹಿನಿಯನ್ನೋ, ಪೇಪರನ್ನೋ ನಂಬರ್‌.೧ ಮಾಡುವುದು ಇವತ್ತಿಗೆ ಸವಾಲೇ ಅಲ್ಲ. ಅದನ್ನು ಕಾಪಾಡಿಕೊಂಡು ಹೋಗುವುದು ಹಾಗೂ ಅದಕ್ಕಿಂತ ಮುಖ್ಯವಾಗಿ ಹಾಕಿದ ಬಂಡವಾಳಕ್ಕೆ ಉತ್ತರವಾಗಿ ಆದಾಯ ತರುವುದು ಅತಿ ದೊಡ್ಡ ಸವಾಲು. ನಾನು ೨೦೦೭ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಪತ್ರಿಕೋದ್ಯಮ ಜಗತ್ತಿನ ಸ್ವರೂಪ ಸಂಪೂರ್ಣ ಭಿನ್ನವಾಗಿತ್ತು. ಮಾಮೂಲಿ ಪತ್ರಕರ್ತನಿಗೆ ೭ ಸಾವಿರ ರೂ ಸಂಬಳ ಸಿಕ್ಕರೆ ಹಬ್ಬ. ಹಿರಿಯ /ಮುಖ್ಯ ಉಪ ಸಂಪಾದಕರಿಗೆ ೨೫ ಸಾವಿರ ರೂ. ಸಂಬಳವಂತೆ ಅಂದ್ರೆ ನಾವೆಲ್ಲ ಬೆರಗಿನಿಂದ ನೋಡ್ತಾ ಇದ್ವಿ. ವರ್ಷಕ್ಕೊಮ್ಮೆ ಯಾವುದೋ ಸುದ್ದಿಮನೆಯ ಪತ್ರಕರ್ತ ಇನ್ನೊಂದು ಸುದ್ದಿ ಮನೆಗೆ ಜಂಪ್‌ ಆದ ಅಂದ್ರೆ ಅದು ದೊಡ್ಡ ಸುದ್ದಿ.

೨೦೧೦-೧೧ರ ಹೊತ್ತಿಗೆ ಈ ಚಿತ್ರಣವೇ ಬದಲಾಗಿ ಹೋಯ್ತು. ಕನ್ನಡದಲ್ಲಿ ಸಾಕಷ್ಟು ಸುದ್ದಿ ವಾಹಿನಿಗಳು ಬಂದವು. ಹೊಸ ಪತ್ರಿಕೆಗಳು ಹುಟ್ಟಿದವು. ಪೈಪೋಟಿ ಎಂಬುದು ತಾರರಕ್ಕೇರಿತು. ಒಳ್ಳೆ ಪತ್ರಕರ್ತನ್ನ ಉಳಿಸಿಕೊಳ್ಳುವುದು ಎಂಬುದೆ ಆಡಳಿತ ಮಂಡಳಿಗೆ ಸವಾಲಾಯ್ತು. ಹಲವು ಸುದ್ದಿ ಮನೆಗಳು ಒಡೆದು, ಚೂರಾಗಿ ಬೇರೆ ಬೇರೆ ಕಡೆ ವಲಸೆಹೋಯ್ತು. ೩೦-೪೦ ಸಾವಿರ ರೂ. ಅಂದ್ರು ಸಂಬಳವೇ ಅಲ್ಲ ಎಂಬ ಸ್ಥಿತಿ ತಲುಪಿ, ಪತ್ರಿಕೋದ್ಯಮ ಕೂಡ ದುಡಿಯುವವನ ಪಾಲಿಗೆ ಇನ್ನೊಂದು ಸಾಫ್ಟ್‌ವೇರ್‌ ಜಗತ್ತಾಗಿ ಪರಿವರ್ತನೆಗೊಂಡ ಹಂತಕ್ಕೆ ಬಂದು ನಿಂತಿದೆ. ಉದ್ಯೋಗ ಭದ್ರತೆ ಎಂಬುದು ಇವತ್ತು ಪತ್ರಿಕೋದ್ಯಮ ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸವಾಲು.

ದೊಡ್ಡ ಹೂಡಿಕೆಯ ಹಿಂದೆ ಬಂದಿದ್ದು ಪೈಪೋಟಿ. ವಿಷಯದಲ್ಲಿ ಅಲ್ಲ, ಗುಣಮಟ್ಟದಲ್ಲಿ ಅಲ್ಲ, ಬಿತ್ತರಿಸುವ ಸುದ್ದಿಯಲ್ಲೂ ಅಲ್ಲ. ಬದಲಾಗಿ ಆದಾಯ ಗಳಿಕೆಯಲ್ಲಿ. ಪ್ರತಿ ಸುದ್ದಿಮನೆಯೂ ಲಕ್ಸ್‌, ಲೈಫ್‌ ಬಾಯ್‌ ಸೋಪಿನಂತಾಯ್ತು. ಹಾರ್ಸ್‌ ಕಾಡೋಂ ಕಂಪನಿಯಾಯ್ತು. ನಮ್ಮ ಪ್ರಾಡಕ್ಟ್‌ ಮಾರಾಟ ಮಾಡಬೇಕು, ಇಲ್ಲ, ನಮ್ಮದು ಮಾರಾಟವಾಗಬೇಕು ಎಂಬ ಜಿದ್ದಿಗೆ ಆಡಳಿತ ಮಂಡಳಿಗಳು ಬಿದ್ದವು. ೨೨ ಕೋಟಿ ಹಾಕಿದವ. ಕನಿಷ್ಟ ೧೫ ಕೋಟಿಯನ್ನಾದರು ವಾಪಾಸ್‌ ತೆಗೆಯುವ ಆಲೋಚನೆಗೆ ಬಿದ್ದ. ಅದಕ್ಕಿರುವ ಮಾರ್ಗಗಳನ್ನು ಹುಡುಕಿ ಹೊರಟ. ಒಂದು ಕಾಂಗ್ರೆಸ್‌ ಪ್ರಣಾಳಿಕೆ, ಮತ್ತೊಂದು ಬಿಜೆಪಿ ಪ್ರಣಾಳಿಕೆ. ಯಾರು ದುಡ್ಡು ಕೊಡ್ತಾರೊ ಅವರ ಸರಹದ್ದಿನ ಮಾಧ್ಯಮಗಳು. ಸೋಪು ಮಾರುವವನಿಗೆ ಯಾರಾದ್ರೆ ಏನು? ಹಾಕಿದ ಬಂಡವಾಳ ಬಂದ್ರಾಯ್ತು!

ಪತ್ರಿಕೋದ್ಯಮದ ಮೌಲ್ಯ ಕಡಿಮೆಯಾಯ್ತು. ‘ನಿಮ್ಮವರು ಟ್ರಾಫಿಕ್‌ ಪೋಲಿಸ್ರಿಂದ ವಸೂಲಿ ಮಾಡ್ತಾರೆ. ನಾನ್ಯಾಕೆ ಸುಮ್ಮನೆ ಬಿಡಲಿ ನಿನ್ನ. ಕೊಡು ಮಗನೆ ೨೦೦ ರೂ. ಲಂಚ. ನೀನು ಪತ್ರಕರ್ತನಾದ್ರೆ ನನಗೇನು?” ಎಂದು ಯಾವ ಮೂಲಾಜು ಇಲ್ಲದೆ ಟ್ರಾಫಿಕ್‌ ಪೋಲಿಸ್‌ ಲಂಚ ತೆಗೆದುಕೊಳ್ಳಲು ಶುರುಮಾಡಿದ. ಮೇಲಿನವ ಹೇಳಿದ ಅಂದ್ರೆ ವರದಿಗೆ ಹೋದವನಿಗೆ ಕರುಣೆಯಿಲ್ಲದೆ ಹೊಡೆಯಲು ಅಡಿಯಿಟ್ಟ. ಪತ್ರಕರ್ತರ ಬಳಿ ಸರ್ಕಾರಿ ಅಧಿಕಾರಿಗಳು ಲಂಚ ಕೇಳುವುದಿಲ್ಲ. ಪತ್ರಕರ್ತರಿಗೆ ಎಲ್ಲ ಕೆಲಸವೂ ಉಚಿತವಾಗಿ ಆಗುತ್ತದೆ ಎಂಬುದು ನಿಮ್ಮ ಮೊದಲನೆ ಭ್ರಮೆ.

ನೀವ್ಯಾಕೆ ಆ ಸುದ್ದಿ ಅಷ್ಟು ಹಾಕ್ತೀರ? ಇದನ್ನು ಇಷ್ಟು ಹಾಕ್ತೀರಾ? ಸುದ್ದಿ ನೋಡುವಾಗ್ಲೆ ಗೊತ್ತಾಗುತ್ತೆ ಯಾರು ಈ ಸುದ್ದಿ ಹಾಕ್ಲಿಕ್ಕೆ ದುಡ್ಡು ಕೊಟ್ಟಿದಾರೆ? ಯಾರು ಆ ಸ್ಲಾಟು ಖರೀದಿ ಮಾಡಿದಾರೆ ಅಂತ! ನೀವು ಅದಕ್ಕಿಂತ ಜಾಸ್ತಿ ಕೊಟ್ಟರೆ ಖಂಡಿತ ನಿಮ್ಮ ಸುದ್ದಿಯನ್ನು ಅದರ ಮುಂದಿನ ಭಾಗದಲ್ಲೇ ಹಾಕುತ್ತಾರೆ! ಕಾಂಡೋಮು ಮಾರುವವನಿಗೆ ಗಿರಾಕಿ ಯಾರಾದ್ರೆ ಏನು ಅಲ್ವಾ?

ಇಲ್ಲಿ ಬಡವಾಗಿದ್ದು ಸಾಮಾನ್ಯ ಪತ್ರಕರ್ತ. “ನಮಗೆ ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತು. ಕೆಲಸ ಮಾಡುವ ಹಾಗಿದ್ರೆ ಮಾಡಿ. ಇಲ್ಲ ಅಂದ್ರೆ ರೈಟ್‌ ಹೇಳಿ. ರಿಕ್ಷಾ, ಲಾರಿ ಡ್ರೈವರ್‌ ಕೂರಿಸಿಕೊಂಡು ಪತ್ರಿಕೋದ್ಯಮ ಮಾಡಲು ಗೊತ್ತು’’ ಎನ್ನುತ್ತಾನೆ ಕಾಸು ಹಾಕಿದವ. ಆಗ ಸಂಬಳಕ್ಕೆ ದುಡಿಯುವವನು ಯಾರೇ ಆದರು ಮುಚ್ಚಿಕೊಂಡು ಸುಮ್ಮನಿರಬೇಕು. ಇಲ್ಲವಾದರೆ ರಾಜಿನಾಮೆ ಬಿಸಾಡಿ ಮನೆ ಕಡೆ ಮುಖ ಮಾಡಬೇಕು. ಇಲ್ಲಿ ಆಕೆ ರಾಧಾ ಹಿರೇಗೌಡರ್‌, ಈಕೆ ಇನ್ನೊಬ್ಬಳು. ಅವನು ಚಂದನ್‌ ಶರ್ಮಾ ಎಂಬುದು ಮುಖ್ಯವಾಗುವುದಿಲ್ಲ. ಬಿಟ್ಟ ಅರ್ಧಗಂಟೆಗೆ ಹೊಸ ಸಂಪಾದಕರನ್ನು ತಂದು ಕೂರಿಸುವ ಕಾಲವಿದು. ಇಲ್ಲಿ ಆಡಳಿತ ಮಂಡಳಿಗೆ ಯಾರು ಅನಿವಾರ್ಯವಲ್ಲ.

ಪರದೆ ಮೇಲೆ ಬರುವವರು, ಅಂಕಣ ಬರೆಯುವವರು ಮಾತ್ರ ಜನರ ಪಾಲಿಗೆ ಪತ್ರಕರ್ತರು. ಆದರೆ ಅವರ ಹೊರತಾಗಿ ದಿನನಿತ್ಯ ಒಂದು ಪತ್ರಿಕೆಯಲ್ಲಿ ೬೦-೧೦೦ ಜನ ಕೆಲಸ ಮಾಡುತ್ತಾರೆ. ಒಂದು ಸುದ್ದಿ ವಾಹಿನಿಯಲ್ಲಿ ೨೦೦-೩೦೦ಜನ ಕೆಲಸ ಮಾಡುತ್ತಾರೆ. ಅವರೆಲ್ಲರು ಪತ್ರಕರ್ತರೆ. ನೀವು ನ್ಯೂಸೂಳೆಗಳು ಎಂದು ಬೈದಿದ್ದು ಅವರಿಗು ಅನ್ವಯವಾಗುತ್ತದೆ ಮತ್ತು ಅವರಿಗೆ ತಾವು ಮಾಡುತ್ತಿರುವ ಕೆಲಸದ ಮೇಲೆ ಕೀಳರಿಮೆ ಹಾಗೂ ಬೇಸರ ಉಂಟು ಮಾಡುತ್ತದೆ.

ನಿನ್ನೆ ಗಲಭೆಯಲ್ಲಿ ವಾಹಿನಿಯ ವರದಿಗಾರರಿಗೆ ಹೊಡೆದರಂತೆ. ಈ ಹಿಂದೆಯೂ ಹಲವರು ಹೊಡೆತ ತಿಂದಿದ್ದಾರೆ. ಸುಮಾರಷ್ಟು ಜನ ‘ಸರಿಯಾಯ್ತು. ಹೊಡೆತ ಬೀಳಬೇಕಿತ್ತು’ ಎನ್ನುತ್ತಾರೆ. ‘ಮಾಧ್ಯಮದವರಿಗೆ ಬುದ್ಧಿ ಬರಬೇಕು ಅಂದ್ರೆ ಹೊಡೆತ ಬೀಳಬೇಕು’ ಅಂದವರಿದ್ದಾರೆ.  ಒನ್ಸ್‌ ಅಗೈನ್‌, ಅಲ್ಲಿ ವರದಿಗೆ ಹೋದವನು ತಿಂಗಳ ಸಂಬಳಕ್ಕೆ ದುಡಿಯುವ ಪತ್ರಕರ್ತ ಹೊರತು ವಾಹಿನಿಯನ್ನು ನಿಯಂತ್ರಿಸುವವನು ಅಲ್ಲ. ಅವನು ವರದಿ ಮಾಡಲಾರೆ ಎಂದರೆ, ಅಲ್ಲಿ ಚಿತ್ರಗಳನ್ನು ಶೂಟ್‌ ಮಾಡಿ ಕ್ಯಾಸೆಟ್‌ ಕೊಡದಿದ್ದರೆ, ಆ ಸುದ್ದಿಯನ್ನು ಮಿಸ್‌ ಮಾಡಿದರೆ, ಖಂಡಿತ ಆ ಕ್ಷಣದಲ್ಲಿ ಅವನಿಗೆ ರಿಪ್ಲೇಸ್‌ಮೆಂಟ್‌ನ್ನು ವಾಹಿನಿ ತರುತ್ತದೆ. ಇಷ್ಟಾಗಿಯೂ ಕರ್ತವ್ಯ ನಿಭಾಯಿಸಿ, ಹೊಡೆತ ತಿಂದು ಕೊನೆಗೆ ಇತರರಿಂದ ಛೀ, ಥೂ ಅನ್ನಿಸಿಕೊಳ್ಳುವ ಭಾಗ್ಯ ಬಹುಶಃ ಪತ್ರಕರ್ತರಿಗೆ ಮಾತ್ರ!

ಸ್ಪರ್ಧೆ ಹೆಚ್ಚಾಗಿದೆ. ಇದೊಂದು ಉದ್ಯಮವಾಗಿದೆ. ಇಲ್ಲಿ ನಾವೆಲ್ಲ ದಿನಗೂಲಿ ನೌಕರರು. ಹಾಗಂತ ಎಲ್ಲ ಪತ್ರಕರ್ತರ ಬಾಳು ಹಸನಾಗಿದೆಯೆ ಎಂದರೆ, ಖಂಡಿತ ಕನ್ನಡದಲ್ಲಿ ಅಂಥ ಪರಿಸ್ಥಿತಿ ಇಲ್ಲ. ಇಷ್ಟೆಲ್ಲ ದುಡಿದು, ಹೊಡೆತ ತಿಂದು, ತರಕಾರಿ ಮಾರುವವನಿಗಿಂತ ಕಡಿಮೆ ಸಂಬಳ ಪಡೆಯುವವರು ಇದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋದರೆ ೩-೪ತಿಂಗಳಿಗೊಮ್ಮೆ ಸಂಬಳ ಕೊಡುವ ಸಂಸ್ಥೆಗಳಿವೆ. ಎಷ್ಟೆ ಕಂಪನಿಗಳು ಹುಟ್ಟಿಕೊಂಡರು ಪತ್ರಿಕೋದ್ಯಮ ಎಂಬ ವ್ಯಾಪ್ತಿಯೆ ಚಿಕ್ಕದು. ಇಲ್ಲಿ ಅವಕಾಶ ಎಂಬುದು ತೀರ ಕಡಿಮೆ. ಹೀಗಾಗಿ ಇದ್ದ ಜಾಗದಲ್ಲಿ ಎಲ್ಲವನ್ನು ಸಹಿಸಿಕೊಂಡು ಇರಬೇಕು. ಇಲ್ಲವಾದಲ್ಲಿ ಈ ವೃತ್ತಿ ಬಿಟ್ಟು ಬೇರೆಡೆಗೆ ಮುಖ ಮಾಡಬೇಕು. ಈಗಾಗ್ಲೆ ಸಾಕಷ್ಟು ಜನ ಆ ಕೆಲಸ ಮಾಡುತ್ತಿದ್ದಾರೆ. ಇನ್ನು ಒಂದಷ್ಟು ಜನ ನಂದಿನಿ ಬೂತ್‌, ಕನ್ನಡಕ, ದಿನಸಿ ಅಂಗಡಿ ಇಟ್ಟುಕೊಂಡು ಒಂದು ಶಿಫ್ಟ್‌ನಲ್ಲಿ ಪತ್ರಿಕೋದ್ಯಮ ಕೆಲಸ ಮುಗಿಸಿ ನಂತ್ರ ಅಲ್ಲಿಗೆ ಹೋಗಿ ದುಡಿಯುತ್ತಾರೆ. ವಿಡಿಯೊ ಎಡಿಟರ್‌ಗಳಂತು ಒಂದು ಶಿಫ್ಟ್‌ ಮುಗಿಯುತ್ತಿದ್ದಂತೆ ಇನ್ನೆಲ್ಲೂ ಎಡಿಟಿಂಗ್‌ ಕೆಲಸ  ಒಪ್ಪಿಕೊಂಡು ತಮ್ಮ ಸಂಪಾದನೆ ಹಾದಿ ನೋಡಿಕೊಳ್ಳುತ್ತಾರೆ. ಅನಿವಾರ್ಯವಾಗಿ ಇರುವವರು ಅಥವಾ ಇಲ್ಲಿಯೆ ಇದ್ದು ಏನೋ ಮಾಡಬೇಕೆಂದು ತೀರ ಹಂಬಲವುಳ್ಳವರು ಮಾತ್ರ ಎಲ್ಲವನ್ನು ಸಹಿಸಿಕೊಂಡು ಇದ್ದಾರೆ.

ಖಂಡಿತ ಇದಕ್ಕೆ ತದ್ವಿರುದ್ಧವಾದ ಪತ್ರಕರ್ತರು ಇಲ್ಲ ಎಂದೆಲ್ಲ. ಹಫ್ತಾ ವಸೂಲಿ ಮಾಡುವವರು, ಪತ್ರಕರ್ತ ಎಂಬ ಕಾರ್ಡ್‌ ಒಂದಿದ್ದರೆ ಸಾಕು ಎನ್ನುವವರು ಇದ್ದಾರೆ. ಊರಿದ್ದಲ್ಲಿ ಹೊಲಸು ಇರುತ್ತೆ ಎಂಬಂತೆ, ಯಾವುದೇ ವೃತ್ತಿಗೆ ಹೋದರು ಅದು ಸಹಜ. ಅದ್ರಿಂದ ಪತ್ರಿಕೋದ್ಯಮ ಕೂಡ ಹೊರತಲ್ಲ. ಹಾಗಂತ ನೀವು ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು, ಎಲ್ಲರನ್ನೂ ಸೂಳೆಗಳು ಎಂದು ಸಂಭೋಧಿಸುವುದು, ಮಾರ್ಕೆಟಿನಲ್ಲೋ ಮೆಜೆಸ್ಟಿಕ್ಕಿನಲ್ಲೋ ಸೂಳೆಗಳ ಪಕ್ಕದಲ್ಲಿ ನಿಂತ ಹೆಂಗಸರೆನ್ನಲ್ಲ ಸೂಳೆಗಳೆಂದು ಸಂಬೋಧಿದಂತಾಗುತ್ತದೆ ಅಷ್ಟೆ!!!

 

 

 

 

Read Full Post »