Posted in ಚಿಂತನ ಚಾವಡಿ on ಜೂನ್ 23, 2008|
5 Comments »
“ಅವ ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಮಲಗುತ್ತಿದ್ದನಂತೆ. ಭಕ್ತರನ್ನು ವಶೀಕರಿಸಲು ಏನೇನೋ ಬಳಸುತ್ತಿದ್ದನಂತೆ. ಗಾಂಜಾ ಮೊದಲಾದ ಮಾದಕ ವಸ್ತುವನ್ನು ಉಪಯೋಗಿಸುತ್ತಿದ್ದನಂತೆ. ಆದರೂ ಸಂನ್ಯಾಸಿಯಂತೆ!” ಅನ್ನೋ ಎಲ್ಲಾ ಅಂತೆಕಂತೆಗಳಿರುವುದು ಓಶೋ ರಜನೀಶನ ಕುರಿತಾಗಿ. ನಾನಂತೂ ಓಶೋವನ್ನೇ ಕಾಣಲಿಲ್ಲ. ಇನ್ನೂ ಅವನ ಚಟುವಟಿಕೆಗಳನ್ನು ಕಾಣುವುದೆಂತು? ಅದೆಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ಓಶೋ ಕುರಿತಾಗಿ ಸಾಕಷ್ಟು ಅಪಸ್ವರವಿದೆ. ಅವನನ್ನು ಸಂತ, ಸಾಧು, ಸಾಧಕ ಎಂಬುದನ್ನು ಎಷ್ಟೋ ಜನ ಒಪ್ಪುವುದಿಲ್ಲ. ಒಪ್ಪಬೇಕು ಅಂತಾನೂ ಅವ ಹೇಳಿಲ್ಲ!
ಅಂತಹ ಓಶೋ ನನಗೆ ಪರಿಚಿತವಾಗಿದ್ದು ನಾಲ್ಕು ವರ್ಷದ ಕೆಳಗೆ ಸ್ತ್ರೀ ಮುಕ್ತಿ-ಹೊಸದೊಂದು ದೃಷ್ಟಿಕೋನ ಎಂಬೊಂದು ಅದ್ಬುತ ಪುಸ್ತಕದಿಂದ. ಗೆಳೆಯ ಅವಧಾನಿಗಳು ಪರಿಚಯಿಸಿಕೊಟ್ಟ ಪುಸ್ತಕವದು. ವೈಚಾರಿಕವಾದ ಸೆಕ್ಸ್ ಪುಸ್ತಕ ಅಂತಾನೇ ಅದನ್ನು ಕರೆಯಬಹುದು. ಸ್ತ್ರೀ ಬದುಕಿನ ಬಗೆಗೆಗೊಂದು ವಿಭಿನ್ನ ಆಯಾಮ ಕಲ್ಪಿಸಿಕೊಡುವ, ಸೆಕ್ಸ್ ಕುರಿತಾಗೊಂದು ವಿಚಿತ್ರ ಬಗೆಯ ಪರಿಕಲ್ಪನೆಯನ್ನು ಕಟ್ಟಿಕೊಡುವ ಪುಸ್ತಕ. “ಮನುಷ್ಯ ಯಾರನ್ನಾದರೂ ಅನುಭೋಗಿಸಬೇಕು ಅನ್ನಿಸಿದರೆ ಅನುಭವಿಸಬಿಡಬೇಕು. ತನ್ನೊಳಗಿನ ತೃಷೆಯನ್ನು, ಆಸೆಯನ್ನು ಕಟ್ಟಿಕೊಂಡಿರಬಾರದು” ಅನ್ನುತಾರೆ ಓಶೋ(ಸೆಕ್ಸ್ ವಿಚಾರದಲ್ಲಿ ಒಂತರಹ ದನಗಳ ತರಹವೇ ಬದುಕಬೇಕೆಂಬ ದಾಟಿಯ ಮಾತುಗಳವು!) ನನಗೇನೋ ಅನುಭವಿಸಬೇಕೆಂದಿದೆ ಆದರೆ ಆಕೆಗೆ ಇರಬೇಕಲ್ಲ? ಅಂತಹ ಭೋಗ ಬಲಾತ್ಕಾರವಾಗದೇ ಅಂದರೆ? ಅವಳ ಸಮ್ಮತಿಯಿಲ್ಲದಿದ್ದರೆ, ಅವಳಿಗೆ ಭೋಗದಲ್ಲಿ ಆಸಕ್ತಿಯಿರದಿದ್ದರೆ ನೀವು ಮೈಮೇಲೆ ಬಿದ್ದು ಅವಳಿಗೆ ಹಪಹಪಿಸುವುದು ವ್ಯರ್ಥ. ಅವಳಿಂದ ನಿಮಗೆ ನೈಜ ಸುಖದ ಅನುಭವವೇ ಸಿಗುವುದಿಲ್ಲ ಎಂಬುದು ಅವರ ವಾದ. ಇದ್ದರೂ ಇರಬಹುದು ನನಗಂತೂ ಸದ್ಯಕ್ಕೆ ಅದರ ಅನುಭವವಿಲ್ಲ!
ಅಲ್ಲಿಂದಲೇ ಪರಿಚಯವಾದದ್ದು ಓಶೋ ಎಂಬೋರ್ವ ಚಿಂತಕ. ಓಶೋ ಅಂತಹ ಪುಸ್ತಕಗಳನ್ನು ಓದಿದಾಗ ಆತನ ಮೇಲಿರುವ ಆಪಾದನೆಗಳೆಲ್ಲಾ ನಿಜವೇನೋ ಅನ್ನಿಸತ್ತೆ(ಇಲ್ಲದಿದ್ದರೂ ಅದು ನಿಜವೇ ಅನ್ನುತ್ತಾರೆ ಹೆಚ್ಚಿನ ಮಂದಿ!)ಆದರೆ ಅವನ ಚಿಂತನೆಯ ವೋಗ ಅಲ್ಲಿಗೆ ನಿಲ್ಲುವುದಿಲ್ಲ. ನಾನು ಇದುವರೆಗೆ ಓದಿದ ಓಶೋ ಬರೆದ ಪುಸ್ತಕಗಳಲ್ಲಿ ಅದ್ಬುತವಾದ ಪುಸ್ತಕ”ಭಜಗೋವಿಂದಂ ಮೂಢಮತೆ”. ಊಹುಂ ಓಶೋ ವೈಚಾರಿಕತನವನ್ನು ಊಹಿಸಲು ಸಾಧ್ಯವಿಲ್ಲ. ಸೆಕ್ಸ್ ಮೊದಲಾದ ಸಮಾಜದಲ್ಲಿನ ಒಂತರಹ ನಿರ್ಬಂಧಿತ ವಿಚಾರದ ಕುರಿತಾಗಿ ಮಾತಾಡುವ ಓರ್ವ ಆಧ್ಯಾತ್ಮದ ಕುರಿತಾಗಿಯೂ ಅಷ್ಟೇ ಫ್ರೌಡವಾಗಿ ಮಾತಾಡಬಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆ ಪರಿ ಉನ್ನತವಾದ ಪುಸ್ತಕವದು. ನಾನು ಓಶೋವನ್ನು ಇಷ್ಟಪಡುವುದು ಅಂತಹ ಚಿಂತನೆಗಳಿಗಾಗಿಯೇ.
ಒಪ್ಪಲು ಸಾಧ್ಯವಿಲ್ಲ, ಆಡುವ ಮಾತೊಂದು ಮಾಡುವ ಕೃತಿ ಇನ್ನೊಂದು ಎಂಬ ಕೆಟಗರಿಯ ಮಂದಿಯನ್ನು ನಾವು ಸ್ವೀಕರಿಸಲು ಸಾಧ್ಯವೇ ಇಲ್ಲ. ಹೌದು ನನಗೆ ಓಶೋ ಇಷ್ಟವಾಗುವುದು ಹಾಗಾಗಿಯೇ. ಅವ ಆಧ್ಯಾತ್ಮದ ನಡುವೆ ಕುರುಡು ಕಟ್ಟಲೆಗಳನ್ನು ತೂರಿಸಲಿಲ್ಲ. ಎಲ್ಲವನ್ನು ಮುಕ್ತವಾಗಿಯೇ ಮಾತನಾಡಿದ. ನಮ್ಮಲ್ಲಿ ಹಲವು ಸಂನ್ಯಾಸಿಗಳಿದ್ದಾರೆ. ಅವರಲ್ಲಿ ಕೆಲವರು ಅನೈತಿಕ ಸಂಬಂಧ ಹೊಂದಿರುವುದರ ಕುರಿತು ಸಾಕಷ್ಟು ಗುಸುಗುಸುವಿದೆ. ಮುಲ್ಲಾಗಳಿದ್ದಾರೆ, ಫಾದರ್‌ಗಳಿದ್ದಾರೆ. ಅವರಲ್ಲಿ ಸಾಕಷ್ಟು ಜನ ಮಾಡಬಾರದ ಹಲ್ಕಾ ಕೆಲಸಗಳನೆಲ್ಲಾ ಮಾಡಿ ಮುಗಿಸಿ ಚರ್ಚ್, ಮಸೀದಿಗೆ ಬಂದು ಒಳ್ಳೆಯ ಉಪದೇಶ ನೀಡುತ್ತಾರೆ! ಎಂದು ಜನ ಮಾತಾಡುವುದನ್ನು ಕೇಳಿದ್ದೇವೆ. ಅರ್ಥಾತ್ ಸೆಕ್ಸ್‌ನಂತಹ ದೇಹಸಹಜವಾದ ಅಭಿರುಚಿಯನ್ನು ತ್ಯಾಗ ಮಾಡುವುದು ಅಷ್ಟು ಸುಲಭದ ಕಾಯಕವಲ್ಲ. ಅದನ್ನು ತ್ಯಾಗಮಾಡಿದ್ದೇವೆ. ನಾವು ಮಹಾನ್ ತ್ಯಾಗಿಗಳು ಎಂಬ ಮುಖವಾಡ ಧರಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ನನಗನ್ನಿಸುತ್ತದೆ. ಹಾಗಾಗಿಯೇ ನಾನು ಓಶೋವನ್ನು ಇಷ್ಟಪಡುತ್ತೇನೆ.
ಸೆಕ್ಸ್ ಮನುಷ್ಯನನ್ನು ಯಾವ ಪರಿ ಕಾಡುತ್ತದೆ ಎಂಬೊಂದನ್ನು ಬೈರಪ್ಪನಪ್ಪವರು “ಮಂದ್ರಾ”ದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಅದನ್ನು ಓದುವಾಗ ಅದೊಂದು ಕೆಟ್ಟ ಕಾದಂಬರಿ ಅನ್ನಿಸತ್ತೆ. ಆದರೆ ಅದನ್ನು ಓದಿ ಸಮಾಜವನ್ನು ನೋಡುವಾಗ ಅದು ವಾಸ್ತವ ಎಂಬ ಅರಿವಾಗತ್ತೆ. ಇನ್ನೂ ಸೆಕ್ಸ್ ಎಂಬುದು ಸಂನ್ಯಾಸಿಗಳನ್ನು ಹೇಗೆ ಕಾಡತ್ತೆ ಎಂಬುದನ್ನು ಶಿವರಾಮಕಾರಂತರು “ಕೇವಲ ಮನುಷ್ಯರು” ಕಾದಂಬರಿಯಲ್ಲಿ ಕೆತ್ತಿದ್ದಾರೆ! ಕಪಟ ಸಂನ್ಯಾಸಿಗಳ ಮುಖವಾಡ ಕಳಚಿಟ್ಟಿದ್ದಾರೆ. ಒಳಗೊಂದು ಹೊರಗೊಂದು ಎಂಬ ಆ ಎಲ್ಲಾ ಮರೀಚಿಕೆಯಿಂದ ಓಶೋ ಹೊರನಿಲ್ಲುತ್ತಾರೆ ಅಲ್ಲವೇ?
ಹಾಗಂತ ಓಶೋ ಭೊಗವನ್ನೇ ಪ್ರೋತ್ಸಾಹಿಸಿದರು ಎಂಬುದನ್ನು ನಾನಂತೂ ಒಪ್ಪುವುದಿಲ್ಲ. ಭೊಗಕ್ಕೆ ಕಡಿವಾಣ ಹಾಕಲಿಲ್ಲ. ಕಟ್ಟಲೆ ವಿಧಿಸಲಿಲ್ಲ ಅಷ್ಟೆ. ಭಾರತ ಭೊಗಭೂಮಿಯಲ್ಲ ತ್ಯಾಗಭೂಮಿ ಎಂಬುದನ್ನು ಓಶೋ ಕಣಕಣಗಳಲ್ಲೂ ನಿರೂಪಿಸಿದ್ದಾರೆ. ಬಿಕ್ಷು ರಾಜನಾಗುವುದನ್ನು ಕೇಳಿದ್ದೇವೆ. ಆದರೆ ರಾಜ ಸ್ವಪ್ರೇರಣೆಯಿಂದ ಬಿಕ್ಷುವಾಗುವ ಉದಾಹರಣೆ ಎಲ್ಲಾದರೂ ಇದೆಯಾ? ಇದೆ ಅದು ಭಾರತದಲ್ಲಿ ಮಾತ್ರ ಸಾಧ್ಯವಿದೆ. ರಾಜನಾಗಿದ್ದ ಗೌತಮ ಬುದ್ದನಾದ. ಬಿಕ್ಷುವಾದ. ಮಹಾವೀರ ಕೂಡಾ ಹಾಗೇ. ಇಂಥ ಅದ್ಬುತ ತ್ಯಾಗ, ಜಗತ್ತಿನಲ್ಲಿ ಬೇರೆಲ್ಲಿದೆ? ಎನ್ನುತ್ತಾರೆ ಓಶೋ. ಸಂತ ಏಕನಾಥರ ತ್ಯಾಗದ ಕುರಿತಾಗಿ ಮಾತನಾಡುತ್ತಾರೆ. ಹಾಗೇ ಮೀರಾಳ ಪ್ರೇಮದ ಕುರಿತಾಗಿಯೂ ಮಾತನಾಡುತ್ತಾರೇ! ಸಂಭೋಗದಿಂದ ಸಮಾಧಿ ತಲುಪುವುದನ್ನೂ ವಿವರಿಸುತ್ತಾರೆ. ಭೋಗಿಗಳಿಗೆ ಭೋಗದಿಂದಲೇ ಧ್ಯಾನ ಸ್ಥಿತಿ ತಲುಪುವುದನ್ನು ಹೇಳುತ್ತಾರೆ. ತ್ಯಾಗಿಗಳಿಗೆ ಬುದ್ದ, ಮಹಾವೀರರ ಹಾದಿ ತೋರಿಸುತ್ತಾರೆ. ಎಂತಹ ಅದ್ಬುತ ಅಲ್ವಾ?
ಹೌದು ಓಶೋ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಮನುಷ್ಯನಲ್ಲ ಅಥವಾ ಸಾಧುವೂ ಅಲ್ಲ. ಅದೊಂದು ಪ್ರತಿಭೆ. ಅದ್ಬುತವಾದೊಂದು ಶಕ್ತಿ. ವಿಚಾರ ಭಂಡಾರ. ಹಾಗಾಗಿ ನಾವು ಆತನನ್ನು ವೈಚಾರಿಕವಾಗಿಯೇ ಸ್ವೀಕರಿಸೋಣ. ಮನುಷ್ಯನ ಬದುಕಿರುವುದು ೧೦೦ ವರ್ಷ. ಅಂತಹ ಬದುಕಿನಲ್ಲಿ ನೀನು ಅದು ಮಾಡಬೇಡ, ಇದನ್ನು ನೋಡಬೇಡ ಎಂದು ಕಟ್ಟುಪಾಡು ವಿಧಿಸುವ ಹಕ್ಕು ಯಾರಿಗೂ ಇಲ್ಲ. ಆದರ್ಶಗಳು ಮನಸಿಗೆ ಆನಂದವನ್ನುಂಟುಮಾಡಬೇಕೇ ಹೊರತು ಅದೊಂದು ಬಂಧನವಾಗಬಾರದು. ನೀನು ನಿನ್ನ ಕೊಣೆಯೊಳಗೆ ಏನಾದರೂ ಮಾಡಿಕೋ. ಅದನ್ನು ಸಮಾಜಕ್ಕೆ ತರಬೇಡ. ನಿನ್ನ ರೋಗಗಳನ್ನೆಲ್ಲಾ ಸಮಾಜಕ್ಕೆ ಅಂಟಿಸಬೇಡ ಎಂದಷ್ಟೇ ಹೇಳಬಹುದು ಹೊರತೂ ಒಬ್ಬ ಇನ್ನೊಬ್ಬನಿಗೆ ಆಜ್ಞೆ ಮಾಡುವ ಹಕ್ಕಿಲ್ಲ. ಹಾಗೆ ಮಾಡಿದರೆ ಒಬ್ಬನ ಸುಂದರವಾದ ಬದುಕನ್ನು ನೀವು ಕಸಿದುಕೊಂಡಂತೆ ಎಂಬುದು ನನ್ನ ನಿಲುವು. ಹಾಗಾಗಿಯೇ ನನಗೆ ಓಶೋ ತುಂಬಾ ಇಷ್ಟವಾಗುವುದು. ಓಶೋ ಕುರಿತು ಆಡಿದಷ್ಟು ಇದೆ ಆದರೆ ಸದ್ಯಕ್ಕೆ ಇಷ್ಟು ಸಾಕು.
Read Full Post »
ಹಾಯ್ ಕಪೀಶ
ನಾನು ನಿಂಗೆ ಹೊಸ ಹೆಸರಿಟ್ಟಿದ್ದೇನೆ ಅಂತಾ ಕಣ್ಣು ಮಿಟುಕಿಸುತ್ತಿದ್ದೀಯಾ? ನೀನು ಬರೀ ಕಪೀಶ ಅಲ್ಲ. ಕಪೀಶೋತ್ತಮ ಕಪೀಶ! ಅಣ್ಣಾ ದೊರೆಯೆ, ನನ್ನ ಅಪ್ಪಾ ಜೋಯ್ಸನ್ನ ಸಾರ್ವಜನಿಕವಾಗಿ ಬೈಯ್ಯಬೇಡ ಅಂತಾ ನಾ ನಿಂಗೆ ಎಷ್ಟು ಸಲ ವದರಿದ್ದೀನಿ. ಆದ್ರೂ ನೀನು ಮಾತ್ರ ನಿನ್ನ ಚಾಳಿ ಬಿಟ್ಟಿಲ್ಲ. ಹಾಗಾಗಿ ಇನ್ನು ಮೇಲೆ ನಾನು ನಿನ್ನ ಪತ್ರವನ್ನು ಓದುವುದಿಲ್ಲ ಎಂಬುದಾಗಿ ನಿರ್ಧಾರ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಎದುರಿಗಿರುವ ಎಮ್ಮೆ ಕೋಣಗಳೇ ಸಾಕ್ಷಿ!
ಅದ್ಯಾಕೋ ಇತ್ತೀಚೆಗೆ ನಿನ್ನ ಪತ್ರಗಳು ತುಂಬಾ ಬೇಸರ ಮೂಡಿಸತೊಡಗಿವೆ. ಕಾಂಕ್ರೀಟು ಜಂಗಲ್ಲನ್ನು ಬೈಯ್ಯುವ ತೆವಲನ್ನು ಬಿಟ್ಟು ಮತ್ತೇನೂ ನಿನ್ನ ಪತ್ರದಲ್ಲಿ ಕಾಣುತ್ತಿಲ್ಲ. ಅದನ್ನ ಬಿಟ್ಟರೆ ಇನ್ನೂ ನಿನಗೆ ಗೊತ್ತಿರೋದು ನನ್ನನ್ನು ಅಣಗಿಸಿಸುವುದು ಮಾತ್ರ. ಮೊದಲೆಲ್ಲಾ ನೀನು ಪತ್ರದಲ್ಲಿ ಚೆಂದಚೆಂದದ ಪುಟ್ಟ ಪುಟಾಣಿ ಕಥೆಗಳನ್ನು ಬರೆಯುತ್ತಿದ್ದೆ ಅಲ್ವಾ? ಏ ಈಗ್ಲೂ ಅಂತಹದ್ದೇ ಕಥೆ ಬರೆಯೋ ಪ್ಲೀಸ್.
ನೋಡು ನಮ್ಮಪ್ಪ ಜೋಯ್ಸ್ ಎಂತಹವನೇ ಆಗಿರಬಹುದು. ಆದ್ರೆ ಅವನನ್ನು ಸಾರ್ವಜನಿಕವಾಗಿ ಬೈಯ್ಯುವ ಅಧಿಕಾರ ನಿನಗಿಲ್ಲ. ಇನ್ನೂ ಮುಂದೆ ಮತ್ತೆ ಬೈದೆ ಅಂತಾದರೆ ನಾನಂತೂ ನಿನ್ನನ್ನು ಬಿಲ್‌ಕುಲ್ ಮಾತಾಡಿಸುವುದಿಲ್ಲ. ಏ ಬೆವರ್ಸಿ ಹೋಗೇ ನೀನಲ್ಲದಿದ್ದರೆ ಮತ್ತೊಬ್ಬಳು ಅಂತಾ ನೀನು ಹೇಳೆ ಹೇಳ್ತಿಯಾ ಅಂತಾ ನಂಗೆ ಗೊತ್ತು. ನಾನು ಈ ಸಲ ನಿನ್ನ ಆ ಗೊಡ್ಡು ಬೆದರಿಕೆಗಳಿಗೆಲ್ಲಾ ಬಗ್ಗುವುದಿಲ್ಲ ಎಂಬುದಾಗಿ ಈ ಪತ್ರದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ.
ಡಿಗ್ರಿ ಮುಗಿಸಿ ಮನೆಯಲ್ಲಿ ಕುಳಿತಿರುವ ನನ್ನ ಬದುಕು ನಿಜಕ್ಕೂ ನನಗೆ ಬೇಸರ ಮೂಡಿಸುತ್ತಿದೆ. ಅಪ್ಪಾ, ಅಮ್ಮ ನನ್ನ ಮದುವೆ ಮಾಡಬೇಕು ಅಂತಾ ಒಂದೇ ಸಮನೆ ಹಠ ಹಿಡಿದು ಕುಳಿತಿದ್ದಾರೆ. ನಾನು ಮದುವೆ ಆಗಲಾರೆ ಎಂದು ಕುಳಿತಿದ್ದೇನೆ. ಯಾಕೋ ನನಗೆ ಕೆಲವೊಮ್ಮೆ ಈ ಬದುಕು ಅರ್ಥವೇ ಆಗಲ್ಲ ಮಾರಾಯ. ಮದ್ವೆ ಆದ್ರೆ ನನ್ನ ಇಡೀ ಬದುಕೇ ಮುಗಿಯಿತು ಅನ್ನಿಸುತ್ತಾ ಇದೆ. ಆಫ್‌ಕೋರ್ಸ್ ನಿನ್ನನ್ನೇ ನಾನು ಮದ್ವೆ ಆದ್ರೂ ಕೂಡಾ! ಥೂ ಜೀವನೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಯಾವಾಗ ಸಾಯುತ್ತೇನೋ ಅನ್ನಿಸ್ತಾ ಇದೆ. ಬದುಕಿ ಸಾಧಿಸುವುದಾದರೂ ಏನು ಅಲ್ವಾ?
ಕೆಲವರು ಬದುಕಿನ ಪ್ರತಿ ಕ್ಷಣವನ್ನು ಎನ್‌ಜಾಯ್ ಮಾಡುತ್ತಾರೆ. ಆದರೆ ನನ್ನಿಂದ ಅದು ಸಾಧ್ಯವೇ ಇಲ್ಲ. ಮಾರಾಯ. ಒಮ್ಮೊಮ್ಮೆ ಏನಾದ್ರೂ ಸಾಧಿಸಬೇಕು, ಒಂದಿಷ್ಟು ಹೆಸರು ಮಾಡಬೇಕು ಅನ್ನಿಸತ್ತೆ. ಮತ್ತೆ ಕೆಲವೊಮ್ಮೆ ಸಾಧಿಸಿ ಆಗಬೇಕಾದದ್ದು ಏನು ಅನ್ನಿಸತ್ತೆ. ಸಾಧನೆ ಮಾಡಿದವನು ಸಾಯುತ್ತಾನೆ. ಮಾಡದವನು ಸಾಯುತ್ತಾನೆ ಅಲ್ವಾ?
ನನ್ನ ಪ್ರಶ್ನೆಗಳನ್ನೆಲ್ಲಾ ಕಂಡು ಅರವತ್ತರ ಅರಳು ಮರಳು ನಿನಗೆ ಈಗಲೇ ಶುರುವಾಗಿದೆ ಅಂತಾ ನೀನು ಅಣಗಿಸುತ್ತೀಯಾ ಅಂತಾ ಗೊತ್ತು. ಆದ್ರೂ ನನ್ನ ಸಮಸ್ಯೆಗಳನ್ನು ನಿನ್ನಲ್ಲಿ ಅಲ್ಲದೇ ಮತ್ಯಾರಲ್ಲಿ ಹೇಳಿಕೊಳ್ಳಲಿ ಅಲ್ವಾ? ಮದ್ವೆ ಆಗೋದು, ಸಮಸ್ಯೆ, ಆಗದೇ ಇರೋದು ಸಮಸ್ಯೆ. ನಿನ್ನನ್ನೇ ಮದ್ವೆ ಆಗ್ತೀನಿ ಅಂತಾ ಹಠ ಹಿಡಿದು ಕೂರೋದು ಮತ್ತು ದೊಡ್ಡ ಸಮಸ್ಯೆ. ದೊರೆ ನನ್ನ ಸಮಸ್ಯೆಗೆ ಏನಾದ್ರೂ ಪರಿಹಾರ ಹೇಳೋ ಪ್ಲೀಸ್.
ಪರಿಹಾರಕ್ಕೆ ಕಾಯುತ್ತಾ
ನಿನ್ನವಳು
Read Full Post »
Posted in ಚಿಂತನ ಚಾವಡಿ on ಜೂನ್ 4, 2008|
14 Comments »
ಮೊನ್ನೆ ನನ್ನ ಬರಹಗಳನ್ನೆಲ್ಲಾ ಹರಡಿಕೊಂಡು ಕೂತಿದ್ದಾಗ ಎಂ.ಎಫ್ ಹುಸೇನ್ ಇಶ್ಯೂ ಆದಾಗ ಗಿರೀಶ್ ಕಾರ್ನಾಡ್ ಹುಸೇನ್‌ನನ್ನು ಸಮರ್ಥಿಸಿದ್ದರ ವಿರುದ್ದವಾಗಿ ನಾನು ಕಾರ್ನಾಡರನ್ನು ಕೆದಕಿ ಬರೆದಿದ್ದ ಆರ್ಟಿಕಲ್ ಕಣ್ಣಿಗೆ ಬಿತ್ತು. ನಿಜಕ್ಕೂ ತಬ್ಬಿಬ್ಬಾದೆ. ಓರ್ವ ಜ್ಞಾನ ಪೀಠ ವಿಜೇತ ಸಾಹಿತಿಯೊಬ್ಬನಿಗೆ ಮೀಸೆ ಚಿಗುರದ ನನ್ನಂತಹ ಹುಡುಗ ಹೇಗೆಲ್ಲಾ ಬೈದಿದ್ದೇನಪ್ಪಾ ಅಂತಾ ಬೇಸರವಾಯಿತು. ಅದಾದ ಎರಡು ದಿನಕ್ಕೆ ಅಕ್ಕಾ, ಅಣ್ಣನ ಹತ್ತಿರ ಅದ್ಯಾವುದೋ ವಿಚಾರಕ್ಕೆ ಬುದ್ದಿಜೀವಿಗಳನ್ನು ಬೈಯಿ ಅಂತಾ ಗೊಣಗುತ್ತಿದ್ದಳು. ವಯಸ್ಸಿನಲ್ಲಿ, ಅಧ್ಯಯನದಲ್ಲಿ ಜ್ಞಾನದಲ್ಲಿ ನಮಗಿಂತ ಹಿರಿಯರಾದ ಎಡಪಂಥಿಯರನ್ನು ಬೈಯ್ಯುವಾಗ ನಿಜಕ್ಕೂ ನನಗೆ ಬೇಸರವಾಗುತ್ತದೆ. ಆದ್ರೆ ಅವರ ವಿಚಿತ್ರವಾದೊಂದು ವೈಚಾರಿಕತನವನ್ನು, ಅಸಂಬದ್ದ ತರ್ಕವನ್ನು ಕಂಡಾಗ ಬೈಯ್ಯಲೇ ಬೇಕು ಅನ್ನಿಸುತ್ತದೆ. ನಾವು ಬೈದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರಾ? ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಾ? ಊಹುಂ ಖಂಡಿತಾ ಇಲ್ಲ. ಆದರೂ ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಉತ್ತಮ ಅನ್ನೊ ಗಾದೆಯನ್ನು ನೆನಸಿಕೊಂಡು ಬೈಯ್ಯುತ್ತೇನೆ ನಾನಂತು!
ಎಡ, ಬಲ ಇವ್ಯಾವುದಕ್ಕೂ ಒಗ್ಗಿಕೊಂಡವ ನಾನಲ್ಲ. ಆದರೂ ಎಡದವರನ್ನು ಬೈಯ್ಯುವುದು ನನಗೆ ಇತ್ತೀಚೆಗೆ ತೆವಲಾಗಿಬಿಟ್ಟಿದೆ ಅನ್ನಿಸತ್ತೆ ಎಷ್ಟೋ ಸಲ. ಆದರೆ ಮಾತು ಮಾತಿಗೆ ಅನ್ಯರನ್ನು ಓಲೈಸುವ, ತಾವು ಹುಟ್ಟಿರುವುದೇ ಅನ್ಯರ ಓಲೈಕೆಗೆ ಅನ್ನೋ ತರಹ ಆಡುವ ಬುದ್ದಿಜೀವಿಗಳನ್ನು ಕಂಡಾಗ ನನ್ನದು ತೆವಲೇ ಅಲ್ಲ ಅನ್ನಿಸುತ್ತದೆ! ಅನಂತ ಮೂರ್ತಿ, ಕಾರ್ನಾಡ್ ಇತ್ಯಾದಿ ಮಹಾಪುರುಷರಿಗೆ ದೊಡ್ಡ ದೊಡ್ಡ ಇಂಗ್ಲೀಷ್ ಕಾದಂಬರಿಗಳೆಲ್ಲಾ ಅರ್ಥವಾಗತ್ತೆ. ಅದನ್ನು ಇತರರಿಗೆ ಅರ್ಥ ಮಾಡಿಸುವ ಶಕ್ತಿಯೂ ಅವರಿಗಿದೆ. ಆದರೆ ಕೆಲವೊಂದು ವಿಚಾರ ಬಂದಾಗ ಅವರೇಕೆ ಒಂತರಹ ಪೊಸೆಸೀವ್ ಆಗಿಬಿಡುತ್ತಾರೆ? ಅನ್ನುವುದು ನನಗೆ ಅರ್ಥವಾಗದೇ ಎಷ್ಟೋ ಸಲ ಬೈಯ್ಯುತ್ತೇನೆ ಅವರನ್ನು. ಖಂಡಿತಾ ಎಡಪಂಥ ಅವರದ್ದು ಅಂತಾ ಅವರನ್ನು ಬೈಯ್ಯಬೇಕು ಅನ್ನಿಸುವುದಿಲ್ಲ. ಯಾಕಂದರೆ ಬಲ ಚೆಡ್ಡಿವಾದಿಗಳ ಒಳಗುಟ್ಟು ಎಡಕ್ಕಿಂತ ಭಿನ್ನವಾಗಿಲ್ಲ. ಓ ತಾಯಂದಿರೇ, ಸಹೋದರಿಯರೇ….ಇತ್ಯಾದಿಯನ್ನು ಮೇಲ್ನೋಟಕ್ಕೆ ಹೇಳಿ ಒಳಗಡೆಯಿಂದ ಹುಡುಗಿಯರನ್ನು ಹಾಳು ಮಾಡುವ ಕೆಲ ಭಜರಂಗಿಗಳನ್ನು, ಬಾಯಲ್ಲಿ ಉಪದೇಶ ಮಾಡಿ ಒಳಗೆಲ್ಲಾ ಹಲ್ಕಾ ಕೆಲಸ ಮಾಡುವ ಅಪ್ಪಟ್ಟ ಚೆಡ್ಡಿವಾದಿಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿಯೇ ವಿದ್ಯಾರ್ಥಿ ಜೀವನದ ಕೆಲ ಘಳಿಗೆ ನಾನು ಬಲದಲ್ಲಿ ಗುರುತಿಸಿಕೊಂಡರು ನಂತರ ಅವರಿಗೊಂದು ಸಲಾಂ ಹೊಡೆದು ಬಂದಿದ್ದು.
ನಾನು ಇಷ್ಟಪಡುವುದು ಬಲ ವಿಚಾರಧಾರೆಯನ್ನು ಅಷ್ಟೆ. ಇನ್ನು ಬಲದಲ್ಲಿ ಗುರುತಿಸಿಕೊಂಡ ಕೆಲ ಆದರ್ಶನೀಯ ವ್ಯಕ್ತಿಗಳೂ ಇದ್ದಾರೆ. ಇವರು ನನ್ನ ಗುರು ಅಂತಾ ಎದೆ ತಟ್ಟಿ ಹೇಳಿಕೊಳ್ಳಬಹುದಾದ ವ್ಯಕ್ತಿಗಳೂ ಬಲದಲ್ಲಿದ್ದಾರೆ. ನಮ್ಮ ಚಿಂತನೆಯನ್ನು ನಮ್ಮ ವಾದಕ್ಕೆ ಸರಿಯಾಗಿಯೇ ತಿದ್ದಬಲ್ಲ ಜನ ಬಲದಲ್ಲಿದ್ದಾರೆ. ಹಾಗಾಗಿಯೇ ಬಲದ ನಿಲುವುಗಳು ನನಗೆ ಇಷ್ಟವಾಗುವುದು. ಎಲ್ಲಕ್ಕಿಂತ ಮೀಗಿಲಾಗಿ ಬಲದ ಚಿಂತನೆ ವಾಸ್ತವದಿಂದ ದೂರವಾಗಿದ್ದಲ್ಲ. ಎಡದ ಚಿಂತನೆ ಎಷ್ಟೋ ಸಲ ಕಲ್ಪನೆ ಅನ್ನಿಸಿ ಬಿಡತ್ತೆ(ಕ್ಷಮೆ ಇರಲಿ ನಾನು ಎಡದ ಮೂಲನಿಲುವನ್ನು ಅಧ್ಯಯನ ಮಾಡಿಲ್ಲ. ನಮ್ಮ ಸಮಾಜದ ಬುದ್ದಿಜೀವಿಗಳ ವರ್ತನೆ ನೋಡಿ, ಅವರು ಎಡದ ಮೂಲನಿಲುವನ್ನು ಅಭ್ಯಾಸಮಾಡಿರಬಹುದೆಂಬ ಭರವಸೆಯ ಮೇಲೆ ಮಾತಾಡುತ್ತಿದ್ದೇನೆ!)
ಇತ್ತೀಚೆಗೆ ಬ್ಲಾಗ್‌ಲೋಕದಲ್ಲಿ ಕೋಮುವಾದದ ಕುರಿತಾಗಿ ಚರ್ಚೆಯಾಯಿತು. ಬಹುಶಃ ಕೋಮುವಾದ, ಗೋದ್ರಾ, ಗಾಂಧಿ ಹತ್ಯೆ ಎಂಬತಲೆಬುಡವಿಲ್ಲದ ಬೈಗುಳವನ್ನು ಕೇಳಿ, ಕೇಳಿ ನಮಗೂ ಬೇಸರ ಬಂದಿದೆ. ಬಿಜೆಪಿ ಸಾಚಾ ಪಕ್ಷವಲ್ಲ ಅನ್ನುವುದನ್ನು ನಾನು ಒಪ್ಪುತ್ತೇನೆ. ಅದನ್ನು ಅದರ ರೀತಿಯಲ್ಲೇ ಹೇಳಲಿ. ಒಂದು ಗೋದ್ರಾ ಘಟನೆ ಮುಂದಿಟ್ಟುಕೊಂಡು ನೀವು ರಾಷ್ಟ್ರೀಯ ಪಕ್ಷವನ್ನು ಅಳೆಯುತ್ತೀರಿ ಅಂದರೆ, ಅದು ಕೋಮುವಾದಿ ಪಕ್ಷ ಅನ್ನುತ್ತೀರಿ ಅಂತಾದ್ರೆ ಕಮ್ಯುನಿಸ್ಟ್ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಎಸ್.ಇ.ಜೆಡ್ ಹೆಸರಲ್ಲಿ ನಡೆದಿದ್ದು ನರಮೇಧವಲ್ಲವೇ? ಅಲ್ಲಿ ಸತ್ತವರು ಮನುಷ್ಯರಲ್ಲವೇ? ಅಸ್ಸಾಂ, ಸಿಕ್ಕಿಂಗಳಲ್ಲಿ ನಕ್ಸಲಿಸಂಗೆ ಬಲಿಯಾಗುತ್ತಿರುವವರಿಗೆ ಹೊಣೆ ಯಾರು? ಕಾಶ್ಮೀರದಲ್ಲಿನ ಹಿಂದು ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ಹೊಣೆಗಾರರು ಯಾವ ಕೋಮಿನವರು? ಗೊದ್ರಾ ಒಪ್ಪೊಣ ಆದರೆ ಆ ಗಲಭೆ ಮೊದಲು ಆರಂಭವಾಗಿದ್ದು ಹೇಗೆ ಅನ್ನುವುದನ್ನು ಮಾತನಾಡಿ. ಗೊದ್ರಾ ಘಟನೆಯ ಪೂರ್ಣ ಚಿತ್ರಣ ನೀಡಿ. ನಿಮ್ಮ ಸಿದ್ದಾಂತಕ್ಕೆ ಬೇಕಾದ ಗಲಭೆಯ ಒಂದಿಷ್ಟು ಅಂಶವನ್ನು ಮುಂದಿಟ್ಟುಕೊಂಡು ಮಾತಾಡುತ್ತೀರಿ ಎಂದಾದರೆ ಅದಕ್ಕೆ ವಿರುದ್ದವಾಗಿ ನಾವು ಕೆಟ್ಟದಾಗಿ ಬೈಯ್ಯಲೇ ಬೇಕಾಗುತ್ತದೆ ಅಲ್ಲವೆ? ಇನ್ನೂ ಕಾಂಗ್ರೆಸ್‌ನ ಹಾದರದ ಬಗ್ಗೆ ಮಾತಾಡಲು ಸಾಕಷ್ಟಿದೆ. ನೆಹರು ಚರಿತ್ರೆಯೇ ಬೇಕಾದಷ್ಟಿದೆ. ಅದನ್ನು ನಮ್ಮ ನಾಡಿನ ಕೆಲ ಲೇಖಕರು ಆಧಾರಪೂರ್ಣವಾಗಿಯೇ ಬರೆದಿದ್ದಾರೆ. ಧರ್ಮದ, ಕೋಮುವಿನ ಆಧಾರದಲ್ಲಿ ಬಿಜೆಪಿಯನ್ನು ಬೈಯ್ಯುವ ಹಕ್ಕು ಯಾರಿಗೂ ಇಲ್ಲ. ಹಾದರದಿಂದ, ಭ್ರಷ್ಟತೆಯಿಂದ ಬೇಕಷ್ಟು ಬೈಯ್ಯಿರಿ. ನಿಮಗೆ ಬೈಯ್ಯಲು ಖಂಡಿತಾ ನಾನು ಒಂದಿಷ್ಟು ಅಂಶ ಕೊಡುವೆ!
ಮತ್ತೆ ಶುರುವಾಯಿತು ನನ್ನ ಬೈಗುಳ…..ಮೊದಲೇ ಹೇಳಿದ್ದೆನ್ನಲ್ಲಾ ನಾನ್ಯಾಕೆ ಬೈಯ್ಯುವೇ ಅಂತಾ! ನಂಗು ಬೈದು ಬೈದು ಬೇಸರ ಬಂದಿದೆ. ಇನ್ನೂ ಬೈಯ್ಯಬಾರದು ಅಂದು ಕೊಂಡಿದ್ದೇನೆ. ಏನು ಮಾಡೋದು ಹೇಳಿ ಬೈಯ್ಯುವುದು ನಮ್ಮ ಧರ್ಮ, ಬೈಸಿಕೊಳ್ಳುವುದು ಅವರ ಕರ್ಮ! ಅಂದಹಾಗೆ ಇದು ಬೈಯ್ಯುವುದು ನಮ್ಮ ಕರ್ಮ, ಬೈಸಿಕೊಳ್ಳುವುದು ಅವರ ಧರ್ಮ ಅಂತಾನೂ ಆಗಬಹುದಲ್ಲವೇ?!
Read Full Post »