ಈಗೊಂದು ೭ ವರ್ಷದ ಕೆಳಗಿನ ಮಾತು. ದಾವಣಗೆರೆಯ ಯಾವುದೋ ಮೆಡಿಕಲ್ ಕಾಲೇಜು ಸಂಭಾಗಣದಲ್ಲಿ ಕಾರ್ಯಕ್ರಮ. ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಇದೆ ಅಂದಮೇಲೆ ಕೇಳುವುದು ಬೇಡ! ಸಭಾಂಗಣ ಕಿಕ್ಕಿರಿದಿತ್ತು. ಎಂದಿನಂತೆ ಭರ್ಜರಿ ಭಾಷಣ. ಮಾತು ಮುಗಿದ ಮೇಲೆ ಒಂದು ೫೦-೬೦ ಜನ ಬಂದು ಅವರಿಗೆ ಕೈಕುಲುಕುವುದು, ಸಾರ್ ನಾವು ದೇಶಸೇವೆ ಮಾಡಬೇಕು ಅನ್ನುವುದು ಮಾಮೂಲು. ಅದ್ರಲ್ಲಿ ಕೆಲವ್ರು ಆಸಕ್ತಿಯಿಂದ ಮತ್ತೆ ಸಂಪರ್ಕಕ್ಕೆ ಬರುತ್ತಾರೆ. ಹಲವರು ಹಾಗೆ ಮರೆತು ಹೋಗುತ್ತಾರೆ. ಕಾರ್ಯಕ್ರಮ ಎಲ್ಲ ಮುಗಿದ ಮೇಲೆ ಓರ್ವ ಮಹಿಳೆ ಬಂದ್ರು. ಅವರು ಡಾಕ್ಟರ್ ಅಂತೆ. ’ಸಾರ್ ನಾನೊಂದು ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ತುಂಬಾ ಅದ್ಭುತವಾದ ಜಾಗ. ಇವತ್ತು ರಾತ್ರಿ ಅಲ್ಲೇ ಊಟ ಮಾಡಬೇಕು’ ಅಂದ್ರು. ಬೆಂಗಳೂರಿನಿಂದ ಹೋಗಿದ್ದು ನಾವಿಬ್ಬರು ಮಾತ್ರ. ಸರಿ ಆಯ್ತು ಅಂತ ಹೊರಟ್ವಿ.
ಆ ಮಹಿಳೆ ಕರೆದುಕೊಂಡು ಹೋಗಿದ್ದು ಒಂದು ಅನಾಥಾಶ್ರಮಕ್ಕೆ. ಡಾಕ್ಟರ್ ಆಗಿರುವ ಮಹಿಳೆ ತಣ್ಣಗೆ ಒಂದಿಪ್ಪತ್ತೈದು ಮಕ್ಕಳನ್ನು ಸಾಕುತ್ತಿದ್ದಾರೆ. ಜೊತೆಗೆ ಒಂದೆರಡು ಸಣ್ಣ-ಪುಟ್ಟ ಸಂಸ್ಥೆಗಳು ಅವರೊಂದಿಗೆ ಕೈಜೋಡಿಸಿವೆ. ಆ ಮಕ್ಕಳು ಚಿತ್ರ ಬಿಡಿಸುವುದು, ಹಾಡುವುದು ಎಲ್ಲ ನೋಡಿ ನಮಗೆ ಎದೆ ಚೂರ್ ಅಂತು. ಆ ವೈದ್ಯೆಯ ಮೇಲೆ ಅಭಿಮಾನವೂ ಹೆಚ್ಚಾಯ್ತು. ನಮ್ಮಿಬ್ಬರಿಗೂ ಅದೊಂದು ಅವಿಸ್ಮರಣೀಯ ಘಳಿಗೆ.
ಯಸ್, ಒಬ್ಬ ಚಕ್ರವರ್ತಿಯ ಸುತ್ತ ಸಿಗುವುದು ಬರೀ ಇಂಥದ್ದೆ ಅನುಭವಗಳು. ಅವರ ಭಾಷಣ ಕೇಳುತ್ತಿದ್ರೆ ಒಂದಷ್ಟು ಜನಕ್ಕೆ ರೋಷ ಉಕ್ಕಿಬರುತ್ತೆ. ಬ್ರಿಟಿಷರ ಕಾಲದ ಕಥೆ ಹೇಳುತ್ತಿದ್ದರೆ ಚಚ್ಚಿ ಬಿಡಬೇಕು ಅನ್ನಿಸುತ್ತೆ. ಇನ್ನು ಹಲವರಿಗೆ ಅವೆಲ್ಲ ಸುಳ್ಳು ಅನ್ನಿಸುತ್ತೆ. ಇತಿಹಾಸ ಯಾವತ್ತಿದ್ರೂ ಇತಿಹಾಸ. ಅದನ್ನು ಕಂಡವರಿಲ್ಲ. ಹೀಗಾಗಿ ಅದು ಬರಹಗಾರನ ಇತಿಹಾಸ. ನೀವು ಯಾರು ಬರೆದಿದ್ದನ್ನು ಓದುತ್ತೀರೋ ಅದರ ಮೇಲೆ ಇತಿಹಾಸ ಅವಲಂಬಿಸಿರುತ್ತೆ. ಚಕ್ರವರ್ತಿ ಬರೀ ಬಲಪಂಥೀಯ ಇತಿಹಾಸ ಓದಿಕೊಂಡು ಭಾಷಣ ಬಿಗಿಯುತ್ತಾರೆ ಅಂತ ಅನೇಕ ಬುದ್ಧಿಜೀವಿಗಳು ಆರೋಪಿಸುತ್ತಾರೆ. ಅವರು ಎಲ್ಲವನ್ನೂ ಓವರ್ ಆಗಿ ಹೇಳ್ತಾರೆ ಎನ್ನುತ್ತಾರೆ. ’ಅಲ್ಲ ನೀವು ಸತ್ಯ ಮುಚ್ಚಿಟ್ಟು ಬ್ರಿಟಿಷ್ ಅಧಿಕಾರಿಗಳ ಪಾಠ ಹೇಳಿಕೊಟ್ರಿ. ವಾಸ್ಕೋಡಿಗಾಮ ಗ್ರೇಟ್ ಅಂದ್ರಿ ಬಿಟ್ಟರೆ ಉದ್ದಮ್ ಸಿಂಗ್ ಬಗ್ಗೆ ಎಲ್ಲೂ ಹೇಳಲೇ ಇಲ್ಲ. ಭಾರತೀಯರು ಭಾರತೀಯರಿಗೆ ಮೋಸ ಮಾಡಿದಷ್ಟು ಹೇಳಿದ್ರೆ ಬಿಟ್ರೆ, ಬ್ರಿಟಿಷರು ಮೋಸ ಮಾಡಿದ್ರು ಎಂಬ ಇತಿಹಾಸ ಮುಚ್ಚಿಟ್ರಿ’ ಎಂಬ ಅವರ ಮರು ಉತ್ತರಕ್ಕೆ ಯಾರೂ ಮಾತೇ ಆಡಲ್ಲ ಅನ್ನೋದು ನಂತರದ ಮಾತು ಬಿಡಿ!
ಈ ಮಾನವೀಯತೆ, ಕೋಮುವಾದ ಅಂತ ಹಲವರು ಭಯಂಕರ ಭಾಷಣ ಬಿಗಿಯುತ್ತಾರೆ. ಸತ್ಯವಾಗ್ಲು ಇವತ್ತಿಗೂ ನಂಗೆ ಅದೆಲ್ಲ ಏನು ಅರ್ಥ ಆಗಿಲ್ಲ. ದೇಶಭಕ್ತಿ, ರಾಷ್ಟ್ರಸೇವೆ ಮಾತಾಡುವ ಚಕ್ರವರ್ತಿಗೆ ಅಭಿಮಾನಿಗಳಷ್ಟೆ ವಿರೋಧಿಗಳಿದ್ದಾರೆ. ಅವರನ್ನು ಹಿಂದುತ್ವದ ಐಕಾನ್ ಎಂಬಂತೆ ಬಿಂಬಿಸುತ್ತಾರೆ. ಮಜ ಅಂದ್ರೆ ಅವರೆಲ್ಲೂ ಮುಸ್ಲಿಂರನ್ನೋ, ಕ್ರೈಸ್ತರನ್ನೋ ವಿರೋಧಿಸುವುದು ಹಿಂದೂತ್ವ ಎಂದಿಲ್ಲ. ನಮ್ಮ ದೇಶದ ಸಂಸ್ಕೃತಿ, ಬದುಕಿನ ಪದ್ಧತಿಯ ಹಿಂದುತ್ವದ ಬಗ್ಗೆ ಮಾತಾಡಿದವರು.
ಸೂಲಿಬೆಲೆ ಹೊಸಕೋಟೆ ತಾಲೂಕಿನ ಪುಟ್ಟ ಊರು. ಚಕ್ರವರ್ತಿ ತಂದೆ ಮೇಷ್ಟ್ರು ಆಗಿದ್ದವರು. ಸೂಲಿಬೆಲೆಯಲ್ಲೊಂದು ಸ್ವಂತ ಮನೆಯನ್ನು ಕಟ್ಟಿದ್ದಾರೆ. ಅವರ ಮನೆಯಲ್ಲೊಂದು ಕುಟುಂಬ ಇದೆ. ಅದು ಗೌಸ್‌ಫೀರ್ ಕುಟುಂಬ. ಮನೆ ಕೆಲಸ ಮಾಡುವ ಗೌಸ್‌ಫೀರ್, ಸುಲ್ತಾನ್, ರಜಿಯಾ ಎಲ್ಲರೂ ಮನೆಯ ಸದಸ್ಯರೆಲ್ಲರ ಜೊತೆ ಕುಳಿತು ಊಟ ಮಾಡ್ತಾರೆ. ದೇವ್ರಾಣೆ ಅವರ‍್ಯಾರಿಗೂ ಈ ಕೋಮುವಾದ, ಹಿಂದುತ್ವ ಏನು ಗೊತ್ತಿಲ್ಲ. ನೀವು ಸೂಲಿಬೆಲೆಗೆ ಹೋದ್ರೆ ನಿಮಗಲ್ಲಿ ಜಾತಿ, ದೇಶ, ಭಾಷೆ ಯಾವುದೂ ಕಾಣಿಸಿಲ್ಲ. ಅಲ್ಲಿ ಸಿಗೋದೊಂದೆ. ಅದು ಅಮ್ಮನ ಪ್ರೀತಿ. ಚಕ್ರವರ್ತಿ ಜೊತೆಗೆ ಯಾರೇ ಅಪರಿಚಿತರು ಆ ಮನೆಗೆ ಹೋದ್ರೂ ಕೊನೆಗವ್ರು ಆ ಮನೆಯ ಸದಸ್ಯರಾಗುತ್ತಾರೆ.
ಒಂದ್ಸಲ ಮೈಸೂರಿನಲ್ಲಿ ಕಾರ್ಯಕ್ರಮ. ಸಂಜೆ ಎಬಿವಿಪಿ ಸದಸ್ಯರೊಬ್ಬರ ಮನೆಗೆ ಊಟಕ್ಕೆ ಹೋದ್ವಿ. ಮಂಡ್ಯ, ಮೈಸೂರು ನಡುವೆ ಎಲ್ಲೋ ಬರುತ್ತೆ ಅವರ ಮನೆ. ತುಂಬಾ ಪ್ರೀತಿಯಿಂದ ಊಟಕ್ಕೆ ಕರೆದಿದ್ರು. ವಾಸ್ತವವಾಗಿ ನಾವಿಬ್ಬರು ಏನೋ ತಿಂದುಕೊಂಡು ಹೋಗಿದ್ವಿ. ಆದ್ರೆ ಆ ಮನೆಯವರಿಗೆ ಚಕ್ರವರ್ತಿ ಊಟಕ್ಕೆ ಬರಬೇಕು ಅಂತ ಬಹುದಿನದ ಆಸೆಯಂತೆ. ಹಿಂದೆ ಹಲವು ಸಲ ಕರೆದಿದ್ರಂತೆ ಕೂಡ. ಆವತ್ತಿನ ಊಟ ನಿಜವಾಗ್ಲೂ ಬದುಕಿನಲ್ಲಿ ನೆನಪಿನಲ್ಲಿ ಉಳಿಯುತ್ತೆ. ಅದೆಷ್ಟು ಪ್ರೀತಿ ಇತ್ತು ಅಂದ್ರೆ, ’ಛೇ ಜನ ಎಷ್ಟು ಪ್ರೀತಿಸ್ತಾರೆ. ಇವ್ರೆಲ್ಲ ತುಂಬ ಕೆಳಮಟ್ಟದ ಕಾರ್ಯಕರ್ತರು ವಿನಾಯಕ. ಆವತ್ತಿನ ದುಡಿಮೆ ಇದ್ರೆ ಮಾತ್ರ ಇವ್ರಿಗೆ ಆವತ್ತಿನ ಊಟ. ಆದ್ರೆ ಅದ್ಯಾವುದನ್ನು ಲೆಕ್ಕಿಸದೆ ಸಂಘ, ಸೇವೆ ಅಂತ ಬರ್ತಾರೆ’ ಅಂದಿದ್ರು.
ಒಬ್ಬ ಚಕ್ರವರ್ತಿಯ ಸುತ್ತ ಖಂಡಿತವಾಗಿಯೂ ಒಂದು ಹತ್ತು ಲಕ್ಷ ರೂ. ಹೊಂದಿರುವ ವ್ಯಕ್ತಿ ಸಿಗಲಾರ. ಸಿಗೋರೆಲ್ಲ ಇಂಥವ್ರೆ. ಒಬ್ಬರಿಗಿಂತ ಒಬ್ಬರದ್ದು ಅದ್ಭುತವಾದ ಕಥೆಗಳು. ಎಲ್ಲರಿಗೂ ಒಂದೇ ಹಂಬಲ. ಬದುಕಿದ್ದಕ್ಕೆ ಸಾರ್ಥಕ ಆಗಬೇಕು. ದೇಶಕ್ಕೆ ಏನಾದ್ರು ಮಾಡಬೇಕು!
’ರೀ ಸ್ವಾಮಿ ನಿಮಗೆ ಮಾಡೋಕೆ ಬೇರೆ ಕೆಲ್ಸ ಇಲ್ಲ. ನೀವಿಲ್ಲಿ ದೇಶ, ದೇಶ ಅಂತ ಬಡ್ಕೋಳಿ. ಅಲ್ಲವರು ಆರಾಮವಾಗಿ ಕೊಳ್ಳೆ ಹೊಡೆದು ಚೆನ್ನಾಗಿ ತಿಂದು ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ತಾರೆ. ನೀವೋಬ್ಬರು ಹಾಳಾಗಿದ್ದು ಸಾಲ ಅಂತ ಆ ಹುಡುಗ್ರನ್ನು ಹಾಳು ಮಾಡಿ’ ಅಂತ ಆವಾಗವಾಗ ಬಯ್ಯುತ್ತ ಇರ್ತಿದ್ದೆ. ಖಂಡಿತ ಅವರು ಯಾರನ್ನೂ ನನ್ನ ಜೊತೆ ಬನ್ನಿ ಎಂದು ಕರೆದಿಲ್ಲ ಮತ್ತು ಕರೆಯುವುದಿಲ್ಲ. ಅವ್ರಿಗೆ ಒಂದು ತಂಡ ಕಟ್ಟಬೇಕು, ಏನೋ ಮಾಡಬೇಕು ಎಂಬ ಹಂಬಲವೂ ಇಲ್ಲ. ಅಥವಾ ಜೊತೆಗೆ ಬಂದವರಿಗೆಲ್ಲ ಕೊಡ್ಲಿಕ್ಕೆ ಅವರ ಹತ್ರ ಏನು ಕೆಲಸವೂ ಇಲ್ಲ. ’ರಾಷ್ಟ್ರಸೇವೆ, ಜಾಗೃತಿ ನನ್ನ ಕೆಲಸ. ನನ್ನ ಪಾಡಿಗೆ ನಾನು ಮಾಡ್ತಾ ಹೋಗ್ತೀನಿ. ಜೊತೆಗೆ ಬರುವವರು ಬರಬಹುದು’ ಎಂಬ ಲೆಕ್ಕಾಚಾರ. ಅವರಾಗಿಯೇ ಬಂದ್ರೆ ಆ ಹುಡುಗರಿಗೆ ಬರಬೇಡಿ ಎನ್ನಲು ಸಾಧ್ಯವಿಲ್ಲ!
ಒಂದು ಲಕ್ಷ ಜನ ಭಾಷಣ ಕೇಳಿ ಥ್ರಿಲ್ ಆಗಿರುತ್ತಾರೆ. ಅದ್ರಲ್ಲಿ ೯೯,೯೦೦ ಜನ ಆ ಭಾಷಣವನ್ನು ಕಾಂಪೌಂಡ್‌ನಿಂದ ಹೊರಗೆ ಹೋಗುತ್ತಿದ್ದಂತೆ ಮರೆಯುತ್ತಾರೆ. ಖಂಡಿತ ಒಬ್ಬ ಅನಾಥ ಹುಡುಗನಿಗೆ ೧೦೦ ರೂ. ಪ್ರೀತಿಯಿಂದ ಕೈಯೆತ್ತಿ ಕೊಡಲ್ಲ. ಅದ್ರ ಪ್ರಯೋಜನ ಏನು ಅನ್ನೋದು ನನ್ನ ವಾದ. ’ಲಕ್ಷದಲ್ಲಿ ೧೦೦ ಜನ ಇನ್ನೊಬ್ಬರಿಗೆ ಸಹಾಯ ಮಾಡಿದ್ರು ಸಾಕು. ಇವತ್ತಿನ ಭಾಷಣ ಸಾರ್ಥಕ’ ಎಂಬುದು ಅವರ ಉತ್ತರ.
ಏನಿಲ್ಲ ಅಂದ್ರು ಇವತ್ತು ೧೦೦೦ ಜನ ಅವ್ರಿಂದಾಗಿ ಬದ್ಲಾಗಿದ್ದಾರೆ. ಇದ್ದಿದ್ರಲ್ಲಿ ಸ್ವಲ್ಪವನ್ನು ಬೇರೆಯವರಿಗೆ ಹಂಚಿಕೊಂಡು ತಿನ್ನುವುದನ್ನು, ಅಸಹಾಯಕರಿಗೆ ಸಹಾಯ ಮಾಡುವುದನ್ನು ಕಲಿತ್ತಿದ್ದಾರೆ. ಅದು ಅವರ ಬದುಕಿನ ಸಾರ್ಥಕತೆ.
ಮೊನ್ನೆ ಸಂಜು ಅಣ್ಣನಿಗೆ ೩೫ ವರ್ಷ ಆಯ್ತು. ಅದ್ರ ಸಂಭ್ರಮ ಅಂತ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದ. ಹೀಗೆ ಅವ್ರು ನನ್ನನ್ನು ಸೇರಿಸಿ ನೂರಾರು ಜನ್ರಿಗೆ ಅಣ್ಣ. ಅದ್ಕೆ ಹೇಳಿದ್ದು ಒಬ್ಬ ಸಿದ್ಧರಾಮಯ್ಯ ಹೋದ್ರೆ ಮತ್ತೊಬ್ಬ ಬರ್ತಾನೆ. ಆದ್ರೆ ಒಬ್ಬ ಚಕ್ರವರ್ತಿ ಹಾಗಲ್ಲ ಅಂತ. ದುಡ್ಡು ಮಾಡಿಕೊಳ್ಳುವುದಿದ್ರೆ. ಅಥವಾ ಬದುಕಿನಲ್ಲಿ ಬೇರೆ ಇನ್ನು ಏನೇ ಮಾಡಿಕೊಳ್ಳುವುದಿದ್ದರು ಅವರ ಪ್ರತಿಭೆಗೆ ಯಾವುದೂ ಅಸಾಧ್ಯವಲ್ಲ. ಅಂದಹಾಗೆ ಚಕ್ರವರ್ತಿ ಒಂದು ಸಲ ಭಾಷಣಕ್ಕೆ ಬಂದ್ರೆ ಎಷ್ಟು ಚಾರ್ಜ್ ಮಾಡ್ತಾರೆ ಅಂತ ಬಹಳಷ್ಟು ಜನ ನನ್ನ ಬಳಿ ಕೇಳಿದ್ದಾರೆ. ಅವರು ಏನು ಜಾರ್ಜ್ ಮಾಡಲ್ಲ. ಬಳ್ಳಾರಿಯಲ್ಲಿ ಭಾಷಣ ಅಂದ್ರೆ, ಅಲ್ಲಿನ ಟಿಕೆಟ್ ಮತ್ತು ವಸತಿ ವ್ಯವಸ್ಥೆ ಮಾಡಬೇಕು ಅಷ್ಟೆ. ಅದ್ರ ಮೇಲೆ ಒಂದು ರೂಪಾಯಿ ಕೊಟ್ಟರು ಅದನ್ನು ಅವರ ಸ್ವಂತಕ್ಕೆ ಬಳಸುವುದಿಲ್ಲ. ಹಾಗಂತ ಅವರಿಗೆ ಬೇರೆ ಯಾವುದೇ ರೀತಿಯ ದುಡಿಮೆ ಇಲ್ಲ. ಲೇಖನ ಬರೆದು, ಟಿವಿಗೆ ಕಾರ್ಯಕ್ರಮ ಕೊಟ್ಟು ಅವರು ವೈಯಕ್ತಿಕವಾಗಿ ದುಡಿದುಕೊಳ್ಳುವ ಹಣವೇ ಅವರ ಸಂಪಾದನೆ ಹೊರತು ಯಾವುದೇ ಸಾರ್ವಜನಿಕ ಕಾರ್ಯಕ್ರಮದಿಂದ ಬಂದಿದಲ್ಲ. ಹಾಗಾಗಿಯೇ ರಾಜ್ಯದ ಮುಖ್ಯಮಂತ್ರಿಗೆ ಚಕ್ರವರ್ತಿ ಗೊತ್ತಿಲ್ಲದೇ ಹೋದ್ರು, ನನ್ನಂಥ ಸಾವಿರಾರು ಮಂದಿಗೆ ಗೊತ್ತು.
ರಾಷ್ಟ್ರಶಕ್ತಿ ಕೇಂದ್ರ ಚಕ್ರವರ್ತಿಯಿಂದ ಸ್ಪೂರ್ತಿ ಪಡೆದ ಹುಡುಗರು ಕಟ್ಟಿದ ಸಂಘಟನೆ. ಆನೇಕಲ್‌ನ ಜಿಗಣಿ ಫ್ಯಾಕ್ಟರಿಯಲ್ಲಿ ಒಂದಷ್ಟು ಹುಡುಗರು ಕೆಲಸ ಮಾಡುತ್ತಾರೆ. ಅವರಿಗೆಲ್ಲ ರಾಷ್ಟ್ರಸೇವೆಯ ಹುಚ್ಚು. ಹಾಗಂತ ಒಂದು ಹೊತ್ತು ಕೆಲಸ ಮಾಡ್ಲಿಲ್ಲ ಅಂದ್ರೆ, ಅದು ಅವರ ಮನೆಯ ಆರ್ಥಿಕತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆದ್ರೂ ಅವ್ರೆಲ್ಲ ಶಿಫ್ಟ್ ಬದ್ಲು ಮಾಡಿಕೊಂಡು ರಾಷ್ಟ್ರಕ್ಕೆ ಏನೋ ಒಂದಷ್ಟು ಮಾಡುತ್ತಾರೆ ಅಂದ್ರೆ, ಖಂಡಿತ ಅದ್ರ ಹಿಂದೆ ಒಬ್ಬ ಚಕ್ರವರ್ತಿ ಇದ್ದಾರೆ.
ಹೀಗೆ ಹೇಳುತ್ತ ಹೋದ್ರೆ ನನ್ನ ಹತ್ರ ೩ ಪುಸ್ತಕಕ್ಕೆ ಆಗುವಷ್ಟು ಸರಕಿದೆ! ನಂಗೊಂದು ಭಯಂಕರ ಆಸೆಯಿತ್ತು. ಅದು ಅವ್ರು ಚುನಾವಣೆಗೆ ನಿಲ್ಲಬೇಕು ಅಂತ. ಕಾರಣವಿಷ್ಟೆ ಇಡೀ ದೇಶದಲ್ಲಿ ಒಂದು ವಿಧಾನಸಭೆ ಮಾದರಿ ಕ್ಷೇತ್ರ ಅನ್ನಿಸಿಕೊಳ್ಳಬೇಕು. ಅಲ್ಲಿ ಬಡವರಿರಬಾರದು, ಭ್ರಷ್ಟಾಚಾರ ಇರಬಾರದು ಇತ್ಯಾದಿ, ಇತ್ಯಾದಿ. ಚಕ್ರವರ್ತಿ ಏನಾದ್ರೂ ಎಂಎಲ್‌ಎ ಆದ್ರೆ ಅದು ಸಾಧ್ಯವಾಗಬಹುದು ಅಂತಿತ್ತು. ’ಹಾಲು ಎಷ್ಟೆ ಚೆನ್ನಾಗಿದ್ರು, ಪಾತ್ರೆ ಕೆಟ್ಟಿದ್ರೆ ಹಾಲು ಒಡೆಯುತ್ತೆ’ ಎಂಬುದು ಅವರ ಉತ್ತರ. ಎಂಎಲ್‌ಎ ಆಗ್ಲಿಕ್ಕೆ ೨೫೦ ಜನ ಇದಾರೆ. ಆದ್ರೆ ರಾಷ್ಟ್ರಸೇವೆಗೆ ಯಾರೂ ಇಲ್ಲ. ನಾನು ಅಲ್ಲಿ ಹೋದ್ರೆ ಇಲ್ಲಿ ನನ್ನ ಕೆಲಸ ಯಾರು ಮಾಡುತ್ತಾರೆ ಎಂಬ ಅವರ ವಾದಕ್ಕೆ ಖಂಡಿತ ಉತ್ತರವಿಲ್ಲ!
ಫೈನಲಿ, ನನ್ನ ಪಾಲಿಗೆ ಚಕ್ರವರ್ತಿ ಅಂದ್ರೆ ಅನಾಥಾಶ್ರಮ, ಬಡವರು, ಅಸಹಾಯಕರು ಎಲ್ಲಕ್ಕಿಂತ ಹೆಚ್ಚಾಗಿ ರಾಮಕೃಷ್ಣ ಆಶ್ರಮ, ಸ್ವಾಮಿ ವಿವೇಕಾನಂದ ಆದರ್ಶಗಳು ಎಲ್ಲವೂ ಹೌದು. ಅವರು ದುಡ್ಡು ಕೊಡಬೇಕು, ಸಹಾಯ ಮಾಡಬೇಕು ಅಂತಿಲ್ಲ. ಆದ್ರೆ ಸಹಾಯ ಮಾಡುವ ನೂರಾರು ಕೈಗಳನ್ನು ಸೃಷ್ಟಿಸುತ್ತಾರೆ. ಅವರಂತೆ ಬದುಕಲು, ಆ ಪರಿ ದೇಶವೆಂಬ ಹುಚ್ಚುತನದಲ್ಲಿ ತಿರುಗಾಡಲು ನಮಗ್ಯಾರಿಗೂ ಸಾಧ್ಯವಿಲ್ಲ. ನಿಜವಾಗ್ಲೂ ಅದೊಂಥರ ದೇವ್ರು ಅವ್ರಿಗೆ ಕೊಟ್ಟ ಶಕ್ತಿ. ಅವ್ರಮ್ಮ ಮದ್ವೆ ಆಗು ಅಂತ ಅದೆಷ್ಟು ಸಲ ಶಾಪ ಹಾಕಿದ್ರು, ಅದನ್ನು ಲೆಕ್ಕಿಸದೆ ರಾಷ್ಟ್ರ, ರಾಷ್ಟ್ರ ಅಂತ ಸದಾ ಮುನ್ನುಗುವ ಅವರ ವ್ಯಕ್ತಿತ್ವಕ್ಕೆ ರಿಪ್ಲೆಸ್‌ಮೆಂಟ್ ಎಂಬ ಕಷ್ಟ. ಅವ್ರಿಗೆ ಬಿಲೇಟೆಡ್ ಹುಟ್ಟುಹಬ್ಬದ ಶುಭಾಶಯಗಳು. ಅವರ ಕೋಮುವಾದ ಸದಾ ಹೀಗೆ ಇರಲಿ! ಓದುವ ನಿಮಗೆಲ್ಲ ಇದು ಒಂಚೂರು ಜಾಸ್ತಿನೇ ಹೊಗಳಿಕೆ ಅನ್ನಿಸಬಹುದು. ಆದ್ರೆ ತೀರಾ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ವಾಸ್ತವ. ನಾನು ಸೂಟ್‌ಕೇಸ್‌ನಲ್ಲಿ ನಾಲ್ಕು ಬಟ್ಟೆ ಹಾಕಿಕೊಂಡು ಆವತ್ತು ಅನಾಥವಾಗಿ ಬೆಂಗಳೂರಿಗೆ ಬಂದು ಇವತ್ತು ಹೀಗಿದ್ದೇನೆ ಅಂದ್ರೆ, ಸುತ್ತಲಿನ ಕೊಳಕುಗಳ ನಡುವೆಯೂ ಎಲ್ಲೋ ಕಷ್ಟ ನೋಡಿದಾಗ ಕಣ್ಣಂಚು ಒಂಚೂರು ಒದ್ದೆ ಮಾಡಿಕೊಳ್ಳುವ ಮನಸ್ಥಿತಿ ಉಳಿದಿದೆ ಎಂದ್ರೆ, ಖಂಡಿತ ಅದ್ರ ಹಿಂದೆ ಅಣ್ಣನ ವ್ಯಕ್ತಿತ್ವದ ಪ್ರಭಾವ ಇದೆ.
Archive for ಏಪ್ರಿಲ್, 2015
ಚಕ್ರವರ್ತಿ ಎಂಬ ಕೋಮುವಾದಿಯ ಕುರಿತು!
Posted in ಅವಿಭಾಗೀಕೃತ, tagged chakravathy soolibele, nation on ಏಪ್ರಿಲ್ 22, 2015| 5 Comments »