Feeds:
ಲೇಖನಗಳು
ಟಿಪ್ಪಣಿಗಳು

Archive for ಮಾರ್ಚ್, 2011

ಹುಡುಗಿಯೆಂದರೆ ಹಾಗೆ,

ಕೇದಗೆಯ ಘಮದಂತೆ

ಅಲ್ಲ, ಕೇದಗೆಯ ಹೂವಿನಂತೆ

ಬಿದರಿನ ಮಟ್ಟಿಯಲ್ಲಿ

ಸರ್ಪಗಾವಲಿನಲ್ಲಿ ಬೆಳೆದು

ಹಾದಿಹೋಕರ ಕಣ್ಣು ಕುಕ್ಕುವುದು

 

ಕೀಳುವ ಬಯಕೆಯಾಗಿ ಮಟ್ಟಿಯನೇರಿದರೆ

ಚುಚ್ಚುವ ಬಿದಿರ ಮುಳ್ಳುಗಳು

ಬಗ್ಗದೆ ಗಟ್ಟಿಯಾಗಿ ಏರುತ್ತ ಹೋದಂತೆ

ಮೂಗಿಗಡಚುವ ಪರಿಮಳ

ಕಿತ್ತ ಹೂವಿನೊಂದಿಗೆ ಕೆಳಗಿಳಿದರೆ

ಚೂಪಗೆ ಕಾದು ಕುಳಿತಿಹರು ಹಲವರು!

 

ಘಮವೆಂಬುದು ನೈಸರ್ಗಿಕವಾದರೂ

ಒಂದು ಬಗೆಯ ಕೃತಕ ಸುಗಂಧದಂತೆ

ತಾಸೆರಡುತಾಸಿಗೆ ಆರಿ ಹೋಗುವುದು

ಸಂಜೆಯೊಳಗೇ ಬಾಡುವುದು ಸೂರ್ಯನ ತಾಪಕ್ಕೆ

ಮುಳ್ಳು ತರಚಿದ ಗಾಯ ಮಾಸುವುದರೊಳಗೆ

ಕಳಚಿ ಬೀಳುವುದು ಘಮದ ಮುಖವಾಡ

 

ಕೇದಗೆಯ ಜಾತಿಯೇ ಹಾಗೆ

ಸೂಕ್ಷ್ಮ, ಅತಿ ಸೂಕ್ಷ್ಮ,

ಎಷ್ಟಂದರೂ ಪಕ್ಕೆಗಳಿಲ್ಲದ ಹೂವದು!

ಚೂರು ಕೈಜಾರಿದರೂ ಒಂದೇಸಳೂ ಸಿಗದು

ಮುಂಜಾನೆ ಕಂಡ ಬೆಡಗಿನ  ಕೇದಗೆಯಲ್ಲ

ಆದರೂ ಅದರ ಆಕರ್ಷಣೆಗೆ ಸೋಲದವರಿಲ್ಲ

 

ಬಿದಿರ ಮಟ್ಟಿ ಏರದ ಹೊರತು ಅರ್ಥವಾಗುವುದಿಲ್ಲ

ಕೆಳಗೇ ಕುಳಿತು ಇಣುಕಿದರೆ ಪ್ರಯೋಜನವಿಲ್ಲ

ದ್ವಂದಗಳ ನಡುವೆ ಕಳೆದಿದೆ ಹಲವು ಶಿವರಾತ್ರಿ

ಈ ಸಲ ಹಬ್ಬಕ್ಕಾದರೂ ಕೀಳಬೇಕಿದೆ ಕೇದಗೆಯ

ಶಿವನ ಮುಡಿಯೇರಿದ ಪ್ರಸಾದವಾದರೆ…

ಕಿವಿಗೆ ಮುಡಿದುಕೊಂಡರಾಯಿತು ಸುಮ್ಮನೆ!

Read Full Post »

ಆಗ ಪ್ರಥಮ ಬಿಎಸ್ಸಿಯಲ್ಲಿದ್ದೆ. ಉಡುಪಿಯ ಜಿಲ್ಲಾ  ಗ್ರಂಥಾಲಯದಿಂದ ಹೊತ್ತು ತಂದ ಆ ಪುಸ್ತಕದ ಹೆಸರು  “ಹುಚ್ಚು  ಮನಸ್ಸಿನ ಹತ್ತು ಮುಖಗಳು”. ಅಲ್ಲಿಯವರೆಗೂ ಸಾಹಿತ್ಯದ ಘಮಟೂ ಇರಲಿಲ್ಲ. ಬರವಣಿಗೆ ಅಂದರೆ ಏನೆಂದು ಗೊತ್ತಿರಲಿಲ್ಲ.  ಪತ್ರಿಕೆ ಓದುತ್ತಿದ್ದೆ. ಕಥೆಗಳ ಗೀಳಿತ್ತು. ಕಾದಂಬರಿ, ಗಂಭೀರ ಪುಸ್ತಕ ಓದುತ್ತಿರಲಿಲ್ಲ.  ಹೈಸ್ಕೂಲ್-ಕಾಲೇಜುಗಳಲ್ಲಿ  ಸಾಕಷ್ಟು  ಭಾಷಣ ಬಿಗಿದು, ಅನೇಕ ಬಹುಮಾನ ಗೆದ್ದಿದ್ದು  ನಿಜ. ಕೆಲವೆಡೆ “ಬಹುನಾಮ” ಲಭಿಸಿದ್ದು  ಸುಳ್ಳಲ್ಲ! ಹಾಗಂತ ಯಾವುದೂ ಅಧ್ಯಯನ ಮಾಡಿ ಸಿದ್ಧಪಡಿಸಿದ ಭಾಷಣಗಳಲ್ಲ. ಬಾಯಿಗೆ ಬಂದಂತೆ ಬುರುಡೆ ಬಿಟ್ಟಿದ್ದು! ಹಾಳೂರಲ್ಲಿ  ಉಳಿದವನೇ ಜಾಣ ಎಂಬಂತೆ, ನನಗೆ ಬಹುಮಾನ ಕೊಡುವುದು ಅನೇಕ ತೀರ್ಪುಗಾರರಿಗೆ ಅನಿವಾರ್ಯವಾಗಿತ್ತು ಅನ್ನಿಸುತ್ತದೆ.

ಶಿವರಾಮ ಕಾರಂತರ ‘ಹುಚ್ಚು  ಮನಸಿನ..’ ಕೃತಿ ಬದುಕಿಗೆ ಹೊಸ ಆಯಾಮ ನೀಡಿತು. ಅವರ ಬದುಕಿನ ಅನುಭವಗಳು ನನ್ನಲ್ಲಿ  ಒಂದು ರೀತಿ ಹೊಟ್ಟೆಕಿಚ್ಚು  ಹುಟ್ಟಿಸಿತು. ಅಬ್ಬ  ಪುಣ್ಯಾತ್ಮ ರು! ಬದುಕಿದ ೯೫ ವರ್ಷಗಳಲ್ಲಿ  ಅದೆಷ್ಟು  ಕ್ಷೇತ್ರಗಳಲ್ಲಿ   ಕೈಯಾಡಿಸಿದರು ಅಂದುಕೊಂಡೆ. ಯಕ್ಷಗಾನದಿಂದ ವಿಜ್ಞಾನ ಪ್ರಪಂಚದವರೆಗೆ, ಸಿನಿಮಾದಿಂದ ರಾಜಕೀಯದವರೆಗೆ…ಬದುಕಿದರೆ ಕಾರಂತರಂತೆ ಬದುಕಬೇಕೆಂಬ  ಹುಚ್ಚುತನಕ್ಕೆ ಬಿದ್ದು  ಬರೆಯಲು ಶುರುವಿಟ್ಟೆ!  ಅವರ ಬದುಕಿನ ಶೇ.೧೦ರಷ್ಟು  ಅನುಭವ ಪಡೆಯುವುದೂ ಕಷ್ಟದಾಯಕ ಎಂದು ಈಗೀಗ ಅರ್ಥವಾಗುತ್ತಿದೆ. ಆದ್ರೂ ಬರವಣಿಗೆ ನನ್ನ  ಪಾಲಿಗೆ ಒಂದಷ್ಟು  ವಿಶಿಷ್ಠ  ಅನುಭವ ನೀಡಿದೆ.

ಅಂದು ಬರೆದ ಬರಹಗಳಿಂದಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಲಭಿಸಿತು. ಮಾತುಗಾರಿಕೆ ಚೆನ್ನಾಗಿ ಇದೆ ಎಂದು ಭಾವಿಸಿ ದೃಶ್ಯ ಮಾಧ್ಯಮದ ಕನಸು ಕಟ್ಟಿಕೊಂಡು ಬಂದೆ. ಅದಕ್ಕಾಗಿ ಬರೆದ ಪರೀಕ್ಷೆಗಳು, ಎದುರಿಸಿದ ಇಂಟರ್‌ವ್ಯೂಗಳು ಸಾಕಷ್ಟು.  ವಾಹಿನಿಗಳಲ್ಲಿ  ಅವಕಾಶ ಲಭಿಸಬೇಕಾದರೆ “ತಲೆ ಅಥವಾ…. “ಇರಬೇಕು ಎಂಬುದು ಇತ್ತೀಚಿನ ಗಾದೆ. ಅವೆರೆಡೂ ನನಗೆ ಇಲ್ಲವಾದ್ದರಿಂದ ಆ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಗಲಿಲ್ಲ. ಆ ಕುರಿತು ಇವತ್ತು ಖಂಡಿತ ಒಂಚೂರು ಬೇಸರವಿಲ್ಲ.

ಮುದ್ರಣ ಮಾಧ್ಯಮ ಕೈಬೀಸಿ ಕರೆಯಿತು. ಈಗ ಬರೆಯುವುದೇ ಕಾಯಕವಾಗಿದೆ. ಮಾತು ಮರೆತಂತಾಗಿದೆ. ಹಾಗಂತ ಪತ್ರಿಕೆಗೆ ಬರೆಯುವುದಕ್ಕೂ  ಬ್ಲಾಗ್‌ನಲ್ಲಿ  ಗೀಚುವುದಕ್ಕೂ  ತುಂಬಾ ವ್ಯತ್ಯಾಸವಿದೆ. ಪತ್ರಿಕೆಗಾಗಿ ದಿನ ಬರೆಯುವುದು ರೂಢಿಯಾಗಿದೆ. ಆದಾಗ್ಯೂ ಬ್ಲಾಗ್‌ಗಾಗಿ ವಾರಕ್ಕೊಂದು ಬರಹ ಬರೆಯುವುದು ಕಷ್ಟದ ಕಾಯಕ. ಅದೆಷ್ಟೊ  ಬರಹಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಅದನ್ನು  ಪೂರ್ತಿಗೊಳಿಸಲು ಎಷ್ಟು  ದಿನಗಳಾದರೂ  ಮನಸು ಬರುವುದೇ ಇಲ್ಲ. ಕಥೆ ಬರೆಯುವಾಗ ನನಗೆ ಈ ಸಮಸ್ಯೆ  ಸಹಜ. ಇತ್ತೀಚೆಗಂತೂ ವರ್ಷಕ್ಕೊಂದು ಕಥೆ ಬರೆಯುವುದು ಕಷ್ಟವಾಗಿದೆ. (ಯೋಗರಾಜ್ ಭಟ್ಟರು  ೧.೫- ೨ ವರ್ಷಕ್ಕೊಂದು ಚಿತ್ರ ಮಾಡಿದರೂ, ಗೆಲ್ಲುವಂತ ಚಿತ್ರ ಮಾಡುತ್ತಾರೆ. ಹಾಗೆ ನನ್ನ ಕಥೆಗಳೂ ಕೂಡ ಎಂದು ನನಗೆ ನಾನೇ ಸಮಧಾನ ಹೇಳಿಕೊಳ್ಳಬೇಕಷ್ಟೆ!!!)

ನಿಜ, ಓದು, ಬರೆಯಲು ಇಂಬು ನೀಡುತ್ತದೆ. ಹಾಗಾಗಿ ಕಳೆದ ನಾಲ್ಕಾರು ತಿಂಗಳಿನಿಂದ ಮತ್ತೆ ಓದಲು ಶುರುವಿಟ್ಟಿದ್ದೇನೆ. ಅನುಭವಕ್ಕಾಗಿ ಪತ್ರಿಕೋದ್ಯಮ ಆಯ್ದುಕೊಂಡಿದ್ದು. ನನ್ನ  ನಿರೀಕ್ಷೆ  ಸುಳ್ಳಾಗಲಿಲ್ಲ.  ವೃತ್ತಿ, ನನ್ನ  ಪಾಲಿಗೆ ಸಾಕಷ್ಟು  ಭಿನ್ನ  ಅನುಭವ ನೀಡಿದೆ. ಅನಾಥಾಲಯದಿಂದ ಪಂಚತಾರ ಹೋಟೆಲ್‌ಗಳವರೆಗೂ ಕರೆದುಕೊಂಡು ಹೋಗಿದೆ. ಅನೇಕ ಬಗೆಯ ವ್ಯಕ್ತಿಗಳ ಭೇಟಿ ಅವಕಾಶ ನೀಡಿದೆ. ಅನೇಕ ಸ್ನೇಹಿತರನ್ನು  ದೊರೆಕಿಸಿಕೊಟ್ಟಿದೆ. ಆಶ್ರಮದಿಂದ ಸಿನಿಮಾವರೆಗಿನ ಪ್ರಪಂಚದಲ್ಲಿ  ಬದುಕುತ್ತಿರುವ ಅನೇಕ ಗೆಳೆಯರನ್ನು  ಸಂಪಾದಿಸಿಕೊಟ್ಟಿದೆ. ಅಷ್ಟರಮಟ್ಟಿಗೆ ನನ್ನ ಕೆಲಸಕ್ಕೆ ಋಣಿ.

ನ್ಯೂನತೆ, ಕೊರತೆಗಳು ಪ್ರತಿಯೊಂದು ಕ್ಷೇತ್ರದಲ್ಲೂ  ಸಹಜ. ಸಮಸ್ಯೆ ಎಂಬುದು ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಗರಿಕನವರೆಗೂ ಇದೆ. ಅದರ ಮೀತಿ, ಅವರ ವ್ಯಾಪ್ತಿಗೆ ಸಮನಾಗಿ ಹರಡಿರುತ್ತದೆಯಷ್ಟೆ. ಹಾಗೆ, ಪತ್ರಿಕೋದ್ಯಮದ ಕುರಿತು ಇವತ್ತು ಎಲ್ಲೆಡೆ ಸಾಕಷ್ಟು  ಚರ್ಚೆಯಾಗುತ್ತಿದೆ. ಆ ಚರ್ಚೆಗಳು ಸಕರಾತ್ಮಕವಾದ ಫಲಿತಾಂಶ ನೀಡಿದರೆ, ಅದು ಖಂಡಿತ ಒಳ್ಳೆ ಬೆಳವಣಿಗೆ. ಹೊರಗಿನವರ ಚರ್ಚೆ, ಕೂಗಾಟದಿಂದ ಉದ್ಯಮದ ಒಳಗೆ  ಏನೂ ಬದಲಾವಣೆ ಸಾಧ್ಯವಿಲ್ಲ  ಎಂಬುದನ್ನು ರಾಡಿಯಾ-ಪತ್ರಿಕೋದ್ಯಮ ಹಗರಣ ಸಾಬೀತುಪಡಿಸಿದೆ. ಹಾಗಾಗಿಯೇ ಕೆಲವರು ಮುಸುಕು ಧರಿಸಿಕೊಂಡು ಪತ್ರಿಕೋದ್ಯಮದ, ಪತ್ರಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ ಅನ್ನಿಸುತ್ತದೆ! ಅಂಥ ಅನಾಮಧೇಯ ದಾಳಿ ಎಷ್ಟೇ ನಿಖರವಾಗಿದ್ದರೂ, ಅದಕ್ಕೆ ಬೆಲೆಯಿಲ್ಲ  ಎಂಬುದು ನನ್ನ ವೈಯಕ್ತಿಕ ನಿಲುವು. ಸಮಾಜದ ಕುರಿತು ಅಷ್ಟೆಲ್ಲ  ಮುತುವರ್ಜಿ, ಕಾಳಜಿ ಇರುವವರು ಮುಸುಕು ಬಿಚ್ಚಿಟ್ಟು  ಯಾಕೆ ದಾಳಿ ಮಾಡಬಾರದು? ಮುಂದೊಂದು ದಿನ ಇವರು ಬೈದ ವ್ಯಕ್ತಿಗಳ ಜೊತೆಗೆ ಕೆಲಸ ಮಾಡಬೇಕಾದ ಪ್ರಮೇಯ ಬರಬಹುದೆಂಬ ಅಳಕು ಇರಬಹುದಾ? ಹೋಗ್ಲಿ  ಬಿಡಿ. ಆ ಚರ್ಚೆಯಿಂದ ನಮಗೇನು ಪ್ರಯೋಜನವಿಲ್ಲ. ವರ್ಲ್ಡ್‌ಪ್ರೆಸ್, ಬ್ಲಾಗ್‌ಸ್ಪಾಟ್‌ಗಳು ಅಂತರ್ಜಾಲದಲ್ಲಿ  ಪುಗ್ಸಟ್ಟೆ  ಜಾಗ ನೀಡಿವೆ. ಹಾಗಾಗಿ ನನ್ನಂತೆ ಏನು ಬೇಕಾದರೂ ಗೀಚಿಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಹಾಗಾಗಿ ಅನಾಮಿಕರ ಬ್ಲಾಗ್‌ಗಳನ್ನು ತೆಗೆಳುವುದು  ಸರಿಯಲ್ಲ. ನಮಗೆ ಸರಿ ಕಾಣದಿದ್ದರೆ  ಆ ಕಡೆ ತಲೆ ಹಾಕುವುದು ಬೇಡ ಎಂಬ ನಿರ್ಧಾರ ಮಾಡಿದ್ದೇನೆ.

ವ್ಯವಸ್ಥೆ  ಅಂತರಾಳ ಅರ್ಥವಾದಂತೆ ಬರವಣಿಗೆಗೆ ಕಡಿವಾಣ ಬೀಳುತ್ತದೆ. ಯಾರ ಕುರಿತು, ಯಾವುದರ ಕುರಿತು ಬರೆದರೆ ಏನಾಗಬಹುದು ಎಂದು ಮನಸ್ಸು  ಯೋಚನೆ ಮಾಡುತ್ತದೆ. ಆಗೊಂದು ಟ್ಯಾಬ್ಲಾಯ್ಡ್‌ನಲ್ಲಿ  ಕೆಲಸ ಮಾಡುತ್ತಿದ್ದೆ. ವರದಿಗಾರರೊಬ್ಬರು ಪೋಲೀಸ್ ಇನ್ಸ್‌ಪೆಕ್ಟರ್ ಒಬ್ಬರ ಕುರಿತು ಸುದ್ದಿ  ತಂದಿದ್ದರು. ಅದನ್ನು ನೋಡಿದ ಸಂಪಾದಕರು ‘ಲೋ ಬೋ..ಮಗನೆ, ಇವನು ನನ್ನ  ಫ್ರೆಂಡು ಅನ್ನುವುದು ಗೊತ್ತಿಲ್ಲವ ನಿನಗೆ…ಲೋ…’ ಎನ್ನುತ್ತ ವರದಿಯನ್ನು ಕಸದ ಬುಟ್ಟಿಗೆ ಬಿಸಾಡಿದರು. ಆವತ್ತೆ ಈ ಉದ್ಯಮದ ಉದ್ದಗಲ ಅರ್ಥವಾಗಿ ಬಿಟ್ಟಿತ್ತು. ಇಲ್ಲಿನ ಕುರಿತು ಇಟ್ಟುಕೊಂಡ  ಕನಸು ಕಲ್ಪನೆಗಳು ಸತ್ತು ಹೋಗಿತ್ತು. ಇವಿಷ್ಟರ  ಹೊರತಾಗಿ ಮತ್ತೇನು ಹೇಳಲಾರೆ. ಇಂದಿನ ಉದ್ಯಮದ ಸ್ಥಿತಿಯ ಕುರಿತು ನನ್ನ ವಯೋಮಾನದ ಅನೇಕ ಗೆಳೆಯರಲ್ಲಿ  ಬೇಸರವಿದೆ. ಅದು ನಾವೆಲ್ಲ  ಒಟ್ಟಾಗಿ ಸೇರಿದಾಗ ಮಾತನಾಡಿಕೊಳ್ಳಲು ಸೀಮಿತ. ನೀವುಗಳು, ನಿಮ್ಮ ಕಚೇರಿಯಲ್ಲಿ, ವ್ಯವಸ್ಥೆಯಲ್ಲಿ  ನಡೆಯುವ ಘಟನೆಗಳನ್ನು ಇತರರೆದುರು ಹೇಳಿಕೊಳ್ಳಲು ಹೇಗೆ ಇಷ್ಟಪಡುವುದಿಲ್ಲವೊ, ಹಾಗೆ ನಾವುಗಳು ಕೂಡ. ಇದನ್ನು ವೃತ್ತಿ ಗೌರವ ಎಂದು ಭಾವಿಸಿಕೊಳ್ಳಿ.

ಇಷ್ಟಕ್ಕೂ ಮೀರಿ ಅನ್ನಿಸಿದ್ದನ್ನು ಸಾಕಷ್ಟು  ಸಲ ನೇರವಾಗಿ ಹೇಳಿದ್ದೇನೆ ಮತ್ತು ಹೇಳುತ್ತೇನೆ. ಯಾಕಂದ್ರೆ ನನಗೆ ಬರವಣಿಗೆ ಕನಸು ಕಟ್ಟಿಕೊಟ್ಟಿದ್ದೆ ಶಿವರಾಮ ಕಾರಂತರು. ವಾಸ್ತವಕ್ಕೆ ಅವರೆಷ್ಟು  ಹತ್ತಿರವಾಗಿದ್ದರೂ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ನನ್ನ ಬ್ಲಾಗ್‌ನಿಂದ ಕೆಲವರ ಮನಸ್ಸಿಗೆ ನೋವಾಗಿರಬಹುದು. ಅವೆಲ್ಲವೂ ವಾಸ್ತವವೇ ಆಗಿರುವುದರಿಂದ ಆ ಕುರಿತು ರಾಜಿ ಪ್ರಶ್ನೆಯಿಲ್ಲ. ನೀನು ಬರೆದದ್ದು ತಪ್ಪು  ಎಂದು ಸೂಕ್ತ ದಾಖಲೆಗಳೊಂದಿಗೆ ಮನವರಿಕೆ ಮಾಡಿಕೊಟ್ಟರೆ, ಖಂಡಿತ ನಾನು ಅದನ್ನು ತಿದ್ದಿಕೊಳ್ಳುತ್ತೇನೆ.

ಬರವಣಿಗೆಯೆಂಬುದು, ಸಂತೆ ಮಾರುಕಟ್ಟೆಯ ಮೀನಿನಂಗಡಿ ಇದ್ದಂತೆ. ಮಾರುಕಟ್ಟೆ  ಒಳ ಹೊಕ್ಕಂತೆ ಒಳ್ಳೊಳ್ಳೆ ಮೀನುಗಳು ಕಾಣಿಸುತ್ತವೆ. ಕೆಲವರಿಗೆ ಬಂಗಡೆ ಇಷ್ಟವಾದರೆ, ಮತ್ತೆ ಹಲವರಿಗೆ ಸಿಗಡಿ ಮೀನು ರುಚಿಯಾಗಬಹುದು. ಹೀಗಾಗಿ ನನ್ನ ಪಾಲಿಗೆ ಯಾವತ್ತೂ ನಾನು ಚೆನ್ನಾಗಿ ಬರೆಯುತ್ತೇನೆ ಎಂಬ ಅಹಂಕಾರ, ಭ್ರಮೆಯಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಬರವಣಿಗೆ ಎಂಬುದು ವಿಶಾಲ ಜಗತ್ತಿನ ಪುಟ್ಟದ್ದೊಂದು ಭಾಗ. ಅಲ್ಲಿಂದ ಹೊರ ಬಂದರೆ ಅದ್ಭುತವಾಗಿ ಕ್ರಿಕೆಟ್ ಆಡುವ ಸಚಿನ್ ಕಾಣುತ್ತಾನೆ, ನಟನೆ ಮಾಡುವ ಅಮಿರ್ ಖಾನ್ ಕಣ್ಣು ಕುಕ್ಕಿಸುತ್ತಾನೆ. ಕೈಕಾಲುಗಳಿಲ್ಲದೆ  ಸಾಧನೆ ಮಾಡಿದ ಶ್ರೀಧರ್ ರಾಮಾನುಜಂರಂಥ ಅನೇಕ ಮಂದಿ ಕಣ್ಣೆದುರು ಬರುತ್ತಾರೆ. ಆಗೆಲ್ಲ  ನಾನು ‘ಕೊಳಗದೊಳಗಿನ ಕಪ್ಪೆ’ ಅನ್ನಿಸಿ ಬಿಡುತ್ತದೆ. ಸಾಸಬೇಕಾಗಿದ್ದು  ಸಾಕಷ್ಟಿದೆ. ಕಟ್ಟಿಕೊಂಡ ಕನಸುಗಳು ಬತ್ತಿಲ್ಲ ಮತ್ತು ಬತ್ತುವುದಿಲ್ಲ. ಬೇರೆಯವರ ಪಾಲಿಗೆ ನಾನು ಹೇಗೆ ಅನ್ನಿಸಿದ್ದೇನೊ ಗೊತ್ತಿಲ್ಲ. ಅದನ್ನು ಕೇಳಿ ತಿಳಿದುಕೊಳ್ಳುವ ಹಂಬಲವೂ ಇಲ್ಲ…

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು  ಕೇಳಿದಿರಿ ಅಲ್ಲಿ  ನೀವು
ಇಂದು ನಾ ಹಾಡಿದರು ಅಂದಿನಂತೆ ಕುಳಿತು ಕೇಳುವಿರಿ
ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೆ ಬಿರುದು ಸಮ್ಮಾನ….

ಹೌದು, ನನ್ನ ಹಾಡಿಗೆ ಭರ್ತಿ ಮೂರು ತುಂಬಿದೆ. ಹಾಗೆ ನೋಡಿದರೆ, ನಾನು ಹಾಡಲು ಶುರುವಿಟ್ಟಿದ್ದು  ನನಗಾಗಿ, ನನ್ನ  ಬೇಸರ ಕಳೆದುಕೊಳ್ಳಲಿಕ್ಕಾಗಿ, ಅನ್ನಿಸಿದ್ದನ್ನು ನನ್ನೆದುರಿಗೆ ನಾನೇ ಹೇಳಿಕೊಳ್ಳಲಿಕ್ಕಾಗಿ. ಆ ಕಾರಣಕ್ಕಾಗಿಯೇ ನನಗೆ ಯಾವತ್ತೂ  ಬರವಣಿಗೆ ಎಂಬುದು ಒಂದು ರೀತಿಯ ಅಕ್ಷರ ವಿಹಾರ. ಅಂಥದ್ದೊಂದು ವಿಹಾರದಲ್ಲಿ  ಭಾಗಿಯಾಗಿ ಹರಸಿದ, ಪ್ರೋತ್ಸಾಹಿಸಿದ, ಕಾಲೇಳೆದ, ಕಿವಿ ಹಿಂಡಿದ ಎಲ್ಲ  ಬ್ಲಾಗ್ ಓದುಗರಿಗೂ ಧನ್ಯವಾದಗಳು…

Read Full Post »