‘ಇನ್ನೊಂದು ಸಲ ವಿವಾದಿತ ವಿಚಾರಗಳನ್ನು ಎತ್ತಿಕೊಂಡು ಬ್ಲಾಗ್ ಕಡೆಗೆ ಕಾಲಿಟ್ಟರೆ, ನೀನು ಒಬ್ಬನೇ ಸಿಕ್ಕಾಗ ಹೊಡೆಯುತ್ತೇವೆ’ ಅಂತಾ ಸುಶ್ರುತನ ಗ್ಯಾಂಗ್ ಅವಾಜು ಹಾಕಿದೆ! ಬ್ಲಾಗ್ ಲೋಕ ತಣ್ಣಗೆ ಇರಬೇಕಂತೆ! ವಿವಾದಗಳು ಬೇಡವಂತೆ! ಬ್ಲಾಗ್ ಲೋಕದ ನಿದ್ದೆಗೆಡಿಸುವ ಒಂದಷ್ಟು ಉಗ್ರ ಮಂದಿಯಲ್ಲಿ ನಾನು ಒಬ್ಬನಂತೆ…ಅಬ್ಬಬ್ಬ ಅದೆಷ್ಟೆಲ್ಲ ಆರೋಪ ನನ್ನ ಮೇಲೆ! ಇನ್ನೊಂದು ಕ್ಷಣ ಅಲ್ಲೇ ನಿಂತಿದ್ದರೆ ಬಹುಶಃ ಹೊಡೆತವೇ ಬಿದ್ದು ಬಿಡುತ್ತಿತ್ತೇನೋ ನನಗೆ! ಹಾಗಾಗಿ ನನಗೆ ಬರೆಯಲು ವಿಷಯಗಳೇ ಸಿಗುತ್ತಿಲ್ಲ ಮಾರಾಯ್ರೆ! ಈ ಬೇಸಿಗೆ ದಿನದಲ್ಲಿ ಮೈ-ಕೈಗಳನ್ನು ತಣ್ಣಗಿಟ್ಟುಕೊಳ್ಳುವುದೇ ಸಾಹಸವಾಗಿದೆ, ಬ್ಲಾಗ್ ಅನ್ನು ತಣ್ಣಗಿಡಬೇಕು ಅಂದ್ರೆ?! ಎ.ಸಿ ರೂಮಿನಲ್ಲಿ ಕುಳಿತ ಮಂದಿಯನ್ನು ಸದಾ ಬೈಯ್ಯುತ್ತಿದ್ದವ, ಬ್ಲಾಗಿಗೆ ಎ.ಸಿ ಹಾಕಿಸಿದರೆ ನೀವೆಲ್ಲ ನನಗೆ ಬೈಯ್ಯಬಹುದು ಅಲ್ವಾ?!
ಅಂದಹಾಗೆ, ಸುಶ್ರುತನ ಬೈಗುಳದಿಂದ ಮನಸಿಗೆ ಸ್ವಲ್ಪ ರಿಲ್ಯಾಕ್ಸ್ ಸಿಗಲಿ ಅಂತಾ ಈ ಸಲ ಯುಗಾದಿ ಹಬ್ಬಕ್ಕೆ ಮನೆಗೆ ಹೋಗಿದ್ದೆ! ಯುಗಾದಿಗೆ ಮನೆಗೆ ಹೋಗುವ ರೂಢಿ ಬಿಟ್ಟು ೬-೭ ವರ್ಷವೇ ಕಳೆದು ಹೋಗಿತ್ತು. ಅಪರೂಪಕ್ಕೆ ಹೋಗಿದ್ದಕ್ಕೋ, ಅಥವಾ ಅವಳು ಊರಿಗೆ ಬಂದಿದ್ದಕ್ಕೋ ಗೊತ್ತಿಲ್ಲ , ಈ ಸಲ ಯುಗಾದಿಯಂತೂ ಸೂಪರ್!
ಏನೋ ತಣ್ಣಗೆ ಬರೆಯಬೇಕು ಅಂತಾ ಹೊರಟ್ಟಿದ್ದೇನೋ ನಿಜ. ಆದರೆ, ಏನು ಬರೆಯಲು ಹೊರಟಿರುವೆ ಎಂಬುದೇ ಮರೆತುಹೋಗಿದೆ. ಮತ್ತದೇ ಬಣಗುಟ್ಟುವ ಊರಿನ ಕುರಿತು ಬರೆಯಲೇ…ಅಯ್ಯಯ್ಯೋ ಮರೆತೇ ಬಿಟ್ಟಿದ್ದೆ…ಇಷ್ಟು ದಿನ ಊರು ಮನೆ ಸುದ್ದಿಯನ್ನೆಲ್ಲ ಕದ್ದು ತಂದು ಕಥೆ, ಬರಹವನ್ನಾಗಿಸುತ್ತಿದೆ! ಈಗ ಅದಕ್ಕೂ ಕಡಿವಾಣ ಬಿದಿದ್ದೆ. ನಾನು ಬ್ಲಾಗ್‌ನಲ್ಲಿ ಬರೆಯುತ್ತಿರುವುದು ನಮ್ಮೂರಿನ ಮಂದಿಗೂ ಗೊತ್ತಾಗಿಬಿಟ್ಟಿದೆ. ’ಮಾಣಿ ನನ್ನ ಬಗ್ಗೆ ಎಂತದೋ ಬರದ್ಯಡಲಾ, ಎಂತಾ ಅದು?’ ಹಾಗಂತ, ಕ್ರಿಷ್ಣಣ್ಣ ಶಾನೇ ಖುಷಿಯಿಂದ ಕೇಳಿದರು! ಅಯ್ಯೋ ಕ್ರಿಷ್ಣಣ್ಣ, ನಿನ್ನ ಗುಣಗಾನ ಮಾಡಿದ್ದೇನೆ ಅಂತಾ ನಾನು ಯಾವ ಮುಖ ಇಟ್ಟುಕೊಂಡು ಹೇಳಲಿ ಹೇಳಿ?
ನಮ್ಮೂರಿನ ಮಂದಿ ಬ್ಲಾಗ್, ನೆಟ್ ಉಪಯೋಗಿಸುವಷ್ಟು ಬುದ್ದಿವಂತರಾಗಿಲ್ಲ ಎಂಬ ಭಂಡ ಧೈರ್ಯದ ಮೇಲೆ ಇಷ್ಟು ದಿನ ಬರೆಯುತ್ತಿದ್ದೆ. ಬೆಂಗಳೂರಿಗೆ ಬಂದು, ಕುಳಿತಿರುವ ನಮ್ಮ ಅಕ್ಕ-ಪಕ್ಕದ ಊರಿನ ಒಂದಷ್ಟು ಪಡ್ಡೆ ಹುಡುಗ, ಹುಡುಗಿಯರು ನನ್ನ ಆಹಾರಕ್ಕೆ ಕಲ್ಲು ಹಾಕಿಬಿಟ್ಟಿದ್ದಾರೆ! ನಾನು ಬರೆದಿದ್ದು, ಬರೆಯದೇ ಇರುವುದು…ಎಲ್ಲದಕ್ಕೂ ಕಾಲು-ಬಾಲ ಸೇರಿಸಿ, ಉಪ್ಪು-ಕಾರದ ಒಗ್ಗರಣೆ ಹಾಕಿ, ವರದಿ ಒಪ್ಪಿಸುವ ಪತ್ರಕರ್ತರಲ್ಲದ(ಟೆಕ್ಕಿಗಳು, ಅಕೌಟೆಂಟ್‌ಗಳು…)ಮಂದಿ ಹೆಚ್ಚಾಗಿಬಿಟ್ಟಿದ್ದಾರೆ! ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ನಮ್ಮೂರಿನ ಯಲಕೋಡು ಅಮ್ಮಮ್ಮ(ಅಜ್ಜಿ) ಕೂಡ, ‘ಮಾಣಿ ಕಥೆ, ಕವನ ಎಲ್ಲ ಬರಿತ್ಯಡಲಾ, ಎಷ್ಟು ದುಡ್ಡು ಸಿಕ್ತಾ ಅದನ್ನೆಲ್ಲ ಬರೆದರೆ, ನಿನ್ನ ಚೂರು-ಪಾರು ಖರ್ಚಿಗಾದ್ರೂ ಆಗ್ತನಾ?’ ಅಂತಾ ವಿಚಾರಿಸಲು ಶುರುವಿಟ್ಟಿದ್ದಾರೆ! ಅದ್ಯಾವ ಘಳಿಗೆಯಲ್ಲಿ ಸುಶ್ರುತ ಸುಪಾರಿ ಕೊಟ್ಟನೋ ಗೊತ್ತಿಲ್ಲ. ನನ್ನೆಲ್ಲ ಬರವಣಿಗೆಗೂ ವಿಘ್ನ ಉಂಟಾಗಿದೆ. ಯಾವುದಕ್ಕೂ ಒಂದ್ಸಲ ದೈವಜ್ಞ ಸೋಮಯಾಜಿಗಳ ಹತ್ತಿರ ಹೋಗಿ ಬರುತ್ತೇನೆ!
ನಮ್ಮೂರ ಮಂದಿಯ ಬದುಕು ನಿಜಕ್ಕೂ ತುಂಬಾ ಅದ್ಬುತ. ಅವರ ವ್ಯಕ್ತಿತ್ವ, ಅವರ ರೀತಿ-ನೀತಿ, ಬದುಕಿನ ಪಥ…ಎಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ೩-೪ ಕಾದಂಬರಿ ಬರೆಯಬಹುದು. ಸಂವೇದನೆಯನ್ನು ಸರಿಯಾಗಿ ಸೆರೆ ಹಿಡಿದರೆ ನಾಲ್ಕಾರು ಪ್ರಶಸ್ತಿಗಳನ್ನು ಬಾಚಿಕೊಳ್ಳಬಹುದು…ಕ್ಷಮಿಸಿ, ಪಡೆದುಕೊಳ್ಳಬಹುದು!!! ಸಬ್ಸಿಡಿ ಹಣ, ಅಕಾಡೆಮಿ ಗ್ರ್ಯಾಂಟು…ಇವೆಲ್ಲವನ್ನೂ ಪಡೆದುಕೊಳ್ಳಲು ವೇದಿಕೆ ಸಜ್ಜು ಮಾಡಿಕೊಂಡರೆ, ನಮ್ಮೂರಿನ ಕುರಿತಾಗಿ ಧಾರಾವಾಹಿಯನ್ನೋ, ಸಿನಿಮಾವನ್ನೋ ಖಂಡಿತವಾಗಿಯೂ ಮಾಡಬಹುದು!!! ತಿಪ್ಪನ, ಚೌಡನ ಬದುಕನ್ನು ಸಮಾಜದ ಮುಂದಿಟ್ಟು , ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು. ನನ್ನಂಥವ ಪ್ರಶಸ್ತಿ ಪಡೆದು ಮೂರು ದಶಕಗಳು ಕಳೆದರೂ, ತಿಪ್ಪ, ಚೌಡನ ಬದುಕಿನಲ್ಲಿ ಯಾವುದೇ ಬದಲಾವಣೆ ಆಗದಿರುವುದನ್ನು, ದುರಂತ ಅನ್ನಬೇಕೋ, ವಾಸ್ತವ ಅನ್ನಬೇಕೋ ನನಗಂತೂ ಗೊತ್ತಿಲ್ಲ. ಯಾಕೆಂದರೆ, ನಾನೀಗ ತಣ್ಣಗೆ ಬರೆಯಲು ಹೊರಟಿರುವೆ!
ಚಪ್ಪಲಿಯೇ ಇಲ್ಲದೇ ಬದುಕುವ ನನ್ನಪ್ಪ, ಪಕ್ಕದ ಮನೆ ರಾಮಚಂದ್ರಣ್ಣ…ಪ್ಯಾಂಟಿನ ಪರಿವಿಲ್ಲದ ಶೇಷಜ್ಜ, ತನ್ನದೇ ಲಹರಿಯಲ್ಲಿ ಲೆಕ್ಕಾಚಾರ ಹಾಕುವ ಶಣ್ಣಣ್ಣ…ಇಸ್ಪೀಟು ಆಡಿಕೊಂಡೇ ಜೀವನ ಕಳೆಯುವ ಸ್ವಾಮಿರಾಯ…ಅಂತಹ ಗಂಡಸರ ನಡುವೆಯೇ ಸಂಸಾರ ತೂಗಿಸಿಕೊಂಡು ಹೋಗುವ ಒಂದಷ್ಟು ಹೆಂಗಸರು…ಎಲ್ಲರೂ ಇವತ್ತು ಬದಲಾಗುತ್ತಿದ್ದಾರಾ? ಅವರು ಬದಲಾಗದಿದ್ದರೂ, ನಾವು ಬಲವಂತವಾಗಿ ಅವರನ್ನು ಬದಲಾಯಿಸಲು ಹೊರಟ್ಟಿದ್ದೇವೆ. ಚಪ್ಪಲಿ ಹಾಕದಿದ್ದರೆ ಕಾಲಿಗೆ ಮುಳ್ಳು ಚುಚ್ಚುತ್ತದೆ, ನೀನು ಪ್ಯಾಂಟು ಹಾಕದಿದ್ದರೆ ನಮಗ್ಯಾರೂ ಹೆಣ್ಣು ಕೊಡುವುದಿಲ್ಲ…ಏನೇನೊ ನೆವ ಹೇಳಿ ಅವರ ಸುಂದರ ಬದುಕನ್ನು ಕಸಿದುಕೊಳ್ಳುತ್ತಿದ್ದೇವೆ…ಕ್ಷಮಿಸಿ…ಪ್ರಗತಿ ಹಾದಿಯಲ್ಲಿ ನಾವಿದ್ದೇವೆ! ಈ ಜಗತ್ತು, ಕೋಡ್ಸರ, ಖಂಡಿಕಾ, ಗೀಜಗಾರು, ಕುಗ್ವೆ…ಗಳಿಂದಿದಂಲೇ ಬದಲಾವಣೆ ಬಯಸಿದೇ ಎಂಬುದನ್ನು ಸಾಬೀತುಪಡಿಸಲು ಹೊರಟಿದ್ದೇವೆ!!!
ಅರೆ, ನಾನು ಬರೆಯಲಿಕ್ಕೆ ಹೊರಟ್ಟಿದ್ದೇ ಬೇರೆಯದನ್ನು. ಅವಳ ಕುರಿತು, ಅವಳ ಜತೆ ಆಡಿದ ಜಗಳದ ಕುರಿತು ಬರೆಯಲು ಹೊರಟವ, ಎಲ್ಲೆಲ್ಲಿಗೋ ಸಾಗಿ ಬಂದು ಬಿಟ್ಟೆ! ರೈಲು ಗಾಡಿಯ ಕುರಿತು, ಕ್ರಿಕೆಟ್ ಆಟದ ಕುರಿತು, ವರದಹಳ್ಳಿ ಪ್ರವಾಸದ ಕುರಿತು…ಕಡೆಗೆ ರಾಘಣ್ಣನ ಕುರಿತು ಬರೆಯಬೇಕು ಅಂದುಕೊಂಡವ…ಮತ್ತೆಲ್ಲಿಗೋ ಹೋಗಿ ಬಿಟ್ಟಿದ್ದೇನೆ. ತಣ್ಣಗೆ ಬರೆಯಲು ನನ್ನಿಂದ ಸಾಧ್ಯವೇ ಇಲ್ಲವೇನೋ ಅಂದುಕೊಂಡಿದ್ದೆ. ತಣ್ಣಗೆ ಬರೆಯಲು ಇನ್ನೂ ಎಷ್ಟೆಲ್ಲ ಸರಕುಗಳಿವೆ ಮಾರಾಯ್ರೇ!!! ಎಲ್ಲವನ್ನೂ ನಿಧಾನವಾಗಿ, ಡೀಟೈಲ್ ಆಗಿ ಇನ್ನೊಮ್ಮೆ ಬರೆಯುವೆ.
ಅಂದಹಾಗೆ ಸುಶ್ರುತ, ಶ್ರೀನಿದಿ, ವಿಕಾಸ್…ಸುಪಾರಿಗೆ ಹೆದರಿ, ತಣ್ಣಗಿರುವುದನ್ನು ಮಾತ್ರ ಬರೆಯುತ್ತೇನೆ ಅಂದುಕೊಳ್ಳಬೇಡಿ. ದೈವಜ್ಞ ಸೋಮಯಾಜಿಗಳ ಹತ್ತಿರ ಹೋಗಿ ಬಂದ ನಂತರ, ಬರಹದ ಲಹರಿಯನ್ನು ನೋಡಿ!!! ಕುವೆಂಪುವಿನಲ್ಲಿ ತೇಜಸ್ವಿಯನ್ನು ಅಪೇಕ್ಷಿಸುವುದು ಸರಿಯಲ್ಲ. ಕಾರಂತರಲ್ಲಿ, ಮಾಸ್ತಿಯ ಬರಹಗಳು ಹುಟ್ಟುವುದಿಲ್ಲ. ಹಾಗೆ, ನನಗೆ ಸುಶ್ರುತನ ತರಹ ಬರೆಯಲು ಆಗುವುದಿಲ್ಲ. ನಿದಿಗೆ ನನ್ನ ತರಹ ಬರೆಯಲು ಸಾಧ್ಯವಾಗುವುದಿಲ್ಲ. ವಿಕಾಸ್, ಸಂದೀಪ್ ಕಾಮತ್ ತರಹ ತಣ್ಣಗೆ ತಲೆಹರಟೆ ಮಾಡುವುದು ಎಲ್ಲರಿಗೂ ಶಾನೇ ಕಷ್ಟದ ಕೆಲಸ. ಶಿವು, ಮತ್ತವರ ಹೊಸ ತಂಡದಿಂದ ಹೊರಬರುತ್ತಿರುವ ನವಿರು-ನವಿರಾದ ಬರಹಗಳು ನಮಗ್ಯಾರಿಗೂ ಬರೆಯಲು ಸಾಧ್ಯವೇ ಆಗುವುದ್ಲಿಲ ಅಲ್ವಾ?!!! ಅಂದಹಾಗೆ, ನನ್ನೆಲ್ಲ ಮಿತ್ರರಿಗೂ ಹೊಸ ವರ್ಷದ, ಹೊಸ ಸಂವತ್ಸರದ ಶುಭಾಷಯಗಳು…
(ಸೂಚನೆ:-ಇದೊಂದು ಶುದ್ದಾತೀಶುದ್ದ ಲಘು ಬರಹ ಅಂತಾ ಹೇಳಿಕೊಳ್ಳದೇ ಹೋದರೆ, ಇದನ್ನು ಮತ್ತೊಂದು ವಿವಾದಿತ ಬರಹ ಅಂತಲೇ ಸ್ವೀಕರಿಸುತ್ತಾರೆನೋ ಕೆಲವರು ಎಂಬ ಭಯ ಮಾರಾಯ್ರೇ!!!)