Feeds:
ಲೇಖನಗಳು
ಟಿಪ್ಪಣಿಗಳು

Archive for ಸೆಪ್ಟೆಂಬರ್, 2010

ನನ್ನ ಸಿಟ್ಟಿಗೆ ಅನಾಮತ್ ಆರು ಹೆಣಗಳು ಉರುಳಿದ್ದವು! ಯಾವತ್ತೊ ಆ ಕೊಲೆಗಳು ನಡೆಯಬೇಕಿತ್ತು. ಪಾಪ ಬಡ ಜೀವ ಬದುಕಿಕೊಳ್ಳಲಿ ಅಂತಾ ಬಿಟ್ಟಿದ್ದೆ. ಅದೇ ನಾನು ಮಾಡಿದ ದೊಡ್ಡ  ತಪ್ಪು  ನೋಡಿ. ಅದಕ್ಕೆ ಪ್ರಾಯಶ್ಚಿತ ಎಂಬಂತೆ ಭಕ್ತಿಗೀತೆ, ಭಾವಗೀತೆ, ಪಾಪ್ ಗೀತೆ, ಪಾಪಿ ಗೀತೆ…ಇತ್ಯಾದಿಗಳನ್ನೆಲ ಕಿವಿಗೆ ಕೇಳಿಸುತ್ತಿದ್ದ  ನನ್ನ  ಅಮೂಲ್ಯವಾದ ಸ್ಪೀಕರ್ ಬಲಿ ಕೊಡಬೇಕಾಯಿತು.

ಸಿಸ್ಟಮ್‌ನಲ್ಲಿ  ಹಾಡು ಕೇಳುತ್ತಾ, ಏನೋ ಬರೆಯುತ್ತಾ ಕುಳಿತಿದ್ದೆ. ತಕ್ಷಣ ಸ್ಪೀಕರ್ ಆಫ್ ಆಯಿತು. ಅರೆ ಹೊಸ ಸ್ಪೀಕರ್, ಇದಕ್ಕೆ ಏನು ರೋಗ ಬಂತಪ್ಪ   ಅಂತಾ ನೋಡಿದ್ರೆ… ಸ್ಪೀಕರ್ ಒಳಗೆ ೨ ಜಿರಲೆಗಳು ವಿಜಯೋತ್ಸವ ಆಚರಿಸುತ್ತಿದ್ದವು. ಮೈಯೆಲ್ಲ  ಉರಿದು ಹೋಯಿತು. ಪಾಪ ಬದುಕಿಕೊಳ್ಳಲಿ ಅಂತಾ ಬಿಟ್ಟರೆ ಈ ರೀತಿ ಮಾಡೋದಾ ಎನ್ನುತ್ತಾ ಸ್ಪೀಕರ್ ಬಿಚ್ಚಲು ಹೋದ್ರೆ…ಹೂಂ, ಏನು ಮಾಡಿದ್ರು ಆ ಸ್ಪೀಕರ್‌ನ ಓಪನ್ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿ  ಜಿರಲೆಗಳು ನುಸುಳಲಿಕ್ಕೆ ಜಾಗವೇ ಇಲ್ಲ. ಅದ್ಹೇಗೆ ಒಳಹೊಕ್ಕು ಸ್ಪೀಕರ್ ವೈರ್‌ನ್ನು ಹರಿದು ತಿಂದವು ಅನ್ನುವುದೇ ಅರ್ಥ ಆಗ್ಲಿಲ್ಲ. ಹೋಗ್ಲಿ  ಕರೆಂಟ್ ಹೊಡೆದಾದ್ರು ಸಾಯಬಾರದಿತ್ತಾ?! ವೈರ್ ತಿಂದು ನಗು ಬಿರುತ್ತಿವೆ ಹುಚ್ಚು ಮುಂಡೆವು. ಮೈ ಉರಿಯದೇ ಇರತ್ತಾ ಹೇಳಿ?!

ಟೆಸ್ಟರ್, ಸ್ಕ್ರೂ ಡ್ರೈವರ್ ಸೆಟ್ ತರಬೇಕು ಅಂತಾ ತುಂಬಾ ದಿನದಿಂದ ಅಂದುಕೊಳ್ಳುತ್ತಿದ್ದೆ. ಆದ್ರೆ ಅವುಗಳಿಗೆ ಇರೋದು ಚೂರುಪಾರು ಕೆಲಸ. ಹಾಗಾಗಿ ಮೇಲುಗಡೆ ಓನರ್ ಮನೆಯಿಂದ ಸ್ಕ್ರೂಡ್ರೈವರ್ ತಂದು ಕೆಲಸ ಮುಗಿಸುತ್ತಿದ್ದೆ! ಇವತ್ತು ಹೇಗಾದ್ರು ಮಾಡಿ ಜಿರಲೆ ಹೊರ ತೆಗೆದು ಕೊಲೆ ಮಾಡ್ಲೆ  ಬೇಕು ಅಂತಾ ನಿರ್ಧಾರ ಮಾಡಿ ಆಗಿತ್ತು. ಹಾಗಾಗಿ ಅಂಗಡಿ ಹೋಗಿ ಸ್ಕ್ರೂ  ಡ್ರೈವರ್ ಸೆಟ್ ತಂದೆ.

ಎಷ್ಟು  ಕಸರತ್ತು ಮಾಡಿದ್ರು ಸ್ಪೀಕರ್ ಓಪನ್ ಆಗ್ಲಿಲ್ಲ. ಮೈ ಉರಿ ಇಳಿಯಲಿಲ್ಲ. ತಣ್ಣೀರು ಸ್ನಾನ ಮಾಡಿದ್ರೆ ಇಳಿಯುತ್ತಿತ್ತೇನೊ, ಆದ್ರೆ ಬೆಳಿಗ್ಗೆಯೆ ಬಿಸಿ ನೀರು ಸ್ನಾನ ಮಾಡಿ ಆಗಿತ್ತು. ದಿನಕ್ಕೊಂದು ಸ್ನಾನ ಮಾಡೋದೆ ಕಷ್ಟದಲ್ಲಿ. ಇನ್ನು  ೨ನೇ ಸ್ನಾನ? ಛೇ, ಎಲ್ಲಾದ್ರೂ ಉಂಟೆ!

ಕ್ರಿಮಿನಲ್ ಐಡಿಯಾ ಆಲೋಚಿಸುತ್ತಿರುವಾಗ ನಮ್ಮ ಓನರ್ ಎಂಟ್ರಿ ಆಯ್ತು. ಹೀಗೆಲ್ಲ  ಆಯ್ತು  ಅಂತಾ ವಿವರಿಸುವಾಗ ಅವರು ರೂಂನಲ್ಲಿ   ಆಶ್ರಯ ಪಡೆದಿರುವ ಜಿರಲೆಗಳ ಸಂಹಾರ ಮಾಡುವ ಐಡಿಯಾ ಕೊಟ್ಟರು. ನಮ್ಮ  ಪಕ್ಕದ ಮನೆಯಲ್ಲೂ  ಜಿರಲೆ ಕಾಟ ಇತ್ತಂತೆ. ಲಕ್ಷ್ಮಣ ರೇಖೆ ಪ್ರಭಾವದಿಂದ ಎಲ್ಲಾ  ಮಾಯವಂತೆ. ಅಷ್ಟೊತ್ತಿಗೆ ನಂಗೆ ಮಾರ್ಟಿನ್ ಜಾಹೀರಾತು ನೆನಪಾಯಿತು. ವಿಲ ವಿಲ ಒದ್ದಾಡುವ ಜಿರಲೆ ಕಣ್ಣು  ಮುಂದೆ ಬಂತು. ನನ್ನ ಸ್ಪೀಕರ್ ತಿಂದ ಜಿರಲೆ ಬಡ್ಡಿ  ಮಗನನ್ನು ಹಾಗೆ ಒದ್ದಾಡಿಸಿ ಸಾಯಿಸಬೇಕು, ಅದನ್ನು ಬೇರೆ ಜಿರಲೆಗಳು ನೋಡಿ ಭಯ ಪಟ್ಟು  ಕಾಲು ಕೀಳಬೇಕು ಅನ್ನುವ ಯೋಚನೆ ಬಂತು. ಮತ್ತೆ ಅಂಗಡಿ ಕಡೆ ಓಡಿದೆ.

ಅವನೊಬ್ಬ ಎಡವಟ್ಟು  ಸೇಟು. ಅವನ ಕೆಲ ಉಚ್ಚಾರಣೆಗಳು ಬಹಳ ಮಜ ಇರತ್ತೆ. ಈಸ್ಪ್ರೆ  ಬೇಕಾ ಅಂದ? ಹೂಂ ಜಿರಲೆ ಸಾಯಿಸೊ ಈಸ್ಪ್ರೆನೇ ಕೊಡಪ್ಪ  ಅಂದೆ. ಆಮೇಲೆ ಶುರುವಾಯಿತು ಆಪರೇಷನ್ ಜಿರಲೆ ಕಂ ರೂಂ ಕ್ಲೀನಿಂಗ್. ಇಡೀ ರೂಂಗೂ ಒಂದ್ಸಲ ಹಿಡಿ(ಪೊರಕೆ) ಮುಟ್ಟಿಸಬೇಕು ಅಂದುಕೊಳ್ಳುತ್ತಾ ೭-೮ತಿಂಗಳೇ ಕಳೆದಿತ್ತು. ಜಿರಲೆ ಸಾಯಿಸುವ ನೆವದಲ್ಲಿ  ರೂಂ ಕ್ಲೀನ್ ಮಾಡಿದ್ದು  ನಂಗೆ ಗೊತ್ತೆ ಆಗಲಿಲ್ಲ! ಸ್ಪ್ರೆ  ಮಾಡಿದ ತಕ್ಷಣ ಜಿರಲೆ ಸಾಯದೆ ಇರೋದನ್ನ  ಕಂಡು ಸ್ಪ್ರೆ  ಮೇಲೆ ಸ್ವಲ್ಪ  ಅನುಮಾನ. ಜಿರಲೆ ಕೊಲ್ಲುವುದು ನಂಗೆ ದೊಡ್ಡ  ಕೆಲಸ ಅಲ್ಲ. ಆದ್ರೆ ಕೊಂದ ಜಿರಲೆಯನ್ನು ರೂಂನಿಂದ ಹೊರಗೆ ಹಾಕುವುದು ನನ್ನ ಕೈಯಲ್ಲಿ  ಆಗದ ಕೆಲಸ. ಹಾಗಾಗಿಯೇ ಎಷ್ಟೋ  ದಿನ ಪಾತ್ರೆ ತೊಳೆಯುವಾಗ ಜಿರಲೆ ಕಂಡ್ರು ಸುಮ್ಮನೆ ಬಿಟ್ಟಿದ್ದು. ಪಾಪ ಬಡ ಜೀವ ಅನ್ನೊ  ಮೃದು ಭಾವ ತಳೆದಿದ್ದು!

ಸ್ಪ್ರೆ ಹಾಕಿದ ತಕ್ಷಣ ಜಿರಲೆ ಸಾಯಲಿಲ್ಲ.  ಒಂದೆರಡು ಜಿರಲೆಯನ್ನು ಹಿಡಿಯಿಂದ ಬಡಿದು ಸಾಯಿಸಿದೆ. ಕ್ರಮೇಣ ಎಲ್ಲೆಲ್ಲೊ  ಇದ್ದ  ಜಿರಲೆಗಳು ನಿಧಾನವಾಗಿ ಒದ್ದಾಡುತ್ತಾ  ಮುಖ್ಯ ವೇದಿಕೆ ಬಂದವು. ಆಮೇಲೆ ಸ್ಪ್ರೆ ಮೇಲೆ ನಂಬಿಕೆ ಹುಟ್ಟಿದ್ದು. ಸ್ಪ್ರೆ  ಮಾಡಿದ ಸುಮಾರು ಅರ್ಧ ಗಂಟೆವರೆಗೂ ಜಿರಲೆಗಳು ಒದ್ದಾಡುತ್ತವೆ. ನಂತರ ನಿಧಾನ ಸಾಯುತ್ತವೆ(ನಿಮ್ಮ ಮಾಹಿತಿಗೆ!).
ಮುಖ್ಯ ಅಪರಾಯನ್ನು ಕೊಲ್ಲೋಕ್ಕೆ ಮರೆತು ಹೋಗಿತ್ತು. ಸ್ಪೀಕರ್ ಒಳಗೆ ನಲಿಯುತ್ತಿದ್ದ ಜಿರಲೆಗಳಿಗೂ ಮಾರ್ಟಿನ್ ಅಮೃತ ಸಿಂಚನವಾಯಿತು. ಆದ್ರೆ ಅವು ಸತ್ತವೊ, ಇಲ್ಲವೊ ಗೊತ್ತಾಗಲಿಲ್ಲ. ಅಂಗಡಿಯವನಿಗೆ ಕೊಟ್ಟು  ಸ್ಪೀಕರ್ ಬಿಚ್ಚಿಸಿದ ಮೇಲೆ ಫಲಿತಾಂಶ ತಿಳಿಯುತ್ತೆ. ಸದ್ದು  ಕೇಳಿಸದ ಕಾರಣ ಆ ಜಿರಲೆಗಳು ಸತ್ತಿವೆ ಅಂದುಕೊಂಡಿದ್ದೇನೆ.

ಸಿಪಿಯು ಒಳಗೂ ಜಿರಲೆ ಹೊಕ್ಕರೆ ಎಂಬ ಭಯದಿಂದ, ಅದನ್ನು ಬಿಚ್ಚಿ ಒಳಗಿನ ಧೂಳನ್ನೆಲ್ಲ  ತೆಗೆದಿರುವೆ. ರೂಂನಲ್ಲಿನ ಎಲ್ಲಾ  ಜಿರಲೆಗಳು ನಾಶವಾಗಿವೆ. ಮತ್ತೆ ಪ್ರವೇಶಿಸಬಾರದೆಂಬ ಕಾರಣಕ್ಕೆ ಪ್ರಮುಖ ದ್ವಾರಗಳಲ್ಲಿ  ಲಕ್ಷ್ಮಣ ರೇಖೆ ಎಳೆದಿದ್ದೇನೆ. ಇಷ್ಟೆಲ್ಲ  ಮುಗಿಯುವಾಗ ಗಂಟೆ ೧ದಾಟಿತ್ತು. ಅಡುಗೆ ಮಾಡಿ ಆಫೀಸ್‌ಗೆ ಹೋಗಬೇಕು ಎಂದು ನೆನಪಾಯಿತು. ಎಲ್ಲ  ಸಟಪಟನೆ ಜೋಡಿಸಿ ಕುಕ್ಕರ್ ಕೂಗಿಸಿ ಊಟಕ್ಕೆ ರೆಡಿಯಾಗುವಾಗ ಮತ್ತೆರಡು ಜಿರಲೆಗಳು ವಿಲವಿಲ ಒದ್ದಾಡುತ್ತಿದ್ದವು. ಮಾನಿಟರ್ ಒಳಗೂ ಸ್ಪ್ರೆ  ಮಾಡಿದ್ದೆ. ಅಲ್ಲಿನ ಜಿರಲೆಗಳು ಹೊರಬಂತೊ ಏನೋ ಗೊತ್ತಿಲ್ಲ. ಆದ್ರೂ ಸಿಕ್ಕ  ಸಣ್ಣ  ಜಾಗದಲ್ಲೇ  ತೂರಿಕೊಳ್ಳುವ ವಿಷ್ಯದಲ್ಲಿ  ಜಿರಲೆಗಳು ಮನುಷ್ಯರಿಗಿಂತ ಜೋರು!

ಜಿರಲೆ ನೆವದಿಂದ ರೂಂ ಕ್ಲೀನ್ ಆಗಿದೆ. ಇಲ್ಲ  ಅಂದ್ರೆ, ಇನ್ನೂ  ಆರು ತಿಂಗಳು ಬೇಕಿತ್ತು ಕೆಲ ಜಾಗದ ಧೂಳು ಹೋಗಲು! ಟೆಸ್ಟರ್ ಕಂ ಸ್ಕ್ರೂ ಸೆಟ್ ಮನೆಗೆ ಬಂದಿದೆ. ಸಿಪಿಯು ಕ್ಲೀನ್ ಆಗಿದೆ. ಬಂಗಾರದಂಥ ಸ್ಪೀಕರ್ ಮಾತ್ರ ಹಾಳಾಯಿತು. ತಿಂಡಿ ಆದ ತಕ್ಷಣ ಮತ್ತೆ ಮಲಗುತ್ತಿದ್ದ  ನನ್ನಂಥ ಶುದ್ಧ  ಸೋಮಾರಿಗೊಂದು ಕೆಲಸ ಕೊಟ್ಟು, ದಿನವನ್ನು  ಕ್ರಿಯಾಶೀಲವಾಗಿಸಿದ, ಒಂದು ಬರಹಕ್ಕೆ ಆಹಾರ ಒದಗಿಸಿದ ಜಿರಲೆಗೆ ಹೃತ್ಪೂರ್ವಕ ಧನ್ಯವಾದ ಹೇಳದಿರಲು ಮನಸ್ಸು ಒಪ್ಪುತ್ತಿಲ್ಲ!

Read Full Post »