ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ವ್ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಇಂಥದ್ದೊಂದು ಮಂತ್ರದ ಸಾಲು ಎಚ್‌ಎಸ್‌ಆರ್ ಲೇ ಔಟ್‌ನಲ್ಲಿರುವ ಕನ್ನಡದ ಕುಳ್ಳ ಬಂಗ್ಲೆ ಶ್ಯಾಮರಾವ್ ದ್ವಾರಕನಾಥರ ಮನೆಯಲ್ಲಿ ಕೇಳಿಬರುತ್ತದೆ.
‘ಈವರೆಗೆ ೩೦೦ಕ್ಕೂ ಅದಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ ನಿರ್ಮಾಪಕನಾಗಿ ಸರಿಸುಮಾರು ೫೦ ಚಿತ್ರಗಳಲ್ಲಿ ದುಡಿದಿರುವೆ. ಕೇವಲ ೬ ವರ್ಷಗಳಲ್ಲಿ(೧೯೮೨-೧೯೮೮ರ ಅವಯಲ್ಲಿ) ೧೭ ಚಿತ್ರ ನಿರ್ಮಿಸಿದ್ದೆ. ಈ ವರ್ಷ ೩ ಚಿತ್ರಗಳಲ್ಲಿ ಕಾಣಿಸಿಕೊಳ್ಳುವೆ. ನಟ,ನಾಯಕ, ನಿರ್ಮಾಪಕ, ನಿರ್ದೇಶಕನಾಗಿ ಚಿತ್ರರಂಗದಲ್ಲಿ ಬೆಳೆಯಲು ರಾಘವೇಂದ್ರ ಸ್ವಾಮಿಗಳ ಅನುಗ್ರಹವೇ ಕಾರಣ. ರಾಯರಿಲ್ಲದೆ ನಾನಿಲ್ಲ. ಮಂತ್ರಾಲಯದಲ್ಲೊಂದು ಸ್ವಂತ ಮನೆ ಇದೆ. ವರ್ಷಕ್ಕೆ ಸಾಕಷ್ಟು ಸಲ ರಾಯರ ಸನ್ನಿಧಾನಕ್ಕೆ ಹೋಗುವೆ’ ಎಂದು ಅಕ್ಕಿ ರೊಟ್ಟಿ ಮತ್ತು ಚಹಾದೊಂದಿಗೆ ಮಾತಿಗೆ ಕುಳಿತರು ದ್ವಾರಕೀಶ್.
ಬೆಳಿಗ್ಗೆ ೭.೩೦ಕ್ಕೆ ದಿನಪತ್ರಿಕೆ ಓದಿನೊಂದಿಗೆ ಅವರ ದಿನಚರಿ ಆರಂಭವಾಗುತ್ತದೆ. ದಿನಪತ್ರಿಕೆ ಹಾಕುವ ಹುಡುಗನೂ ಇವರ ಅಭಿಮಾನಿ. ಶುಕ್ರವಾರ ಎಲ್ಲ ಪತ್ರಿಕೆಗಳನ್ನು ಇವರ ಮುಂದಿಟ್ಟು ಚಿತ್ರರಂಗದ ಕುರಿತು ಸ್ವಲ್ಪ ಹರಟೆ ಹೊಡೆಯುವುದು ಆ ಹುಡುಗನ ದಿನಚರಿ! ಚಿತ್ರೀಕರಣವಿದ್ದರೆ ಬೆಳಿಗ್ಗೆ ೭ಗಂಟೆಗೆ ಮನೆ ಬಿಡುತ್ತಾರೆ. ಉಳಿದ ದಿನ ಹೆಂಡ್ತಿ, ಮಗ, ಸೊಸೆ ಜತೆಗೆ ತಿಂಡಿಗೆ ಕುಳಿತರೆ ಭರ್ತಿಯಾಗಿ ಒಂದು ಗಂಟೆ ಕಾಲ ಸಿನಿಮಾ ವಿಮರ್ಶೆ. ೫ ಜನ ಗಂಡು ಮಕ್ಕಳಲ್ಲಿ ಇಬ್ಬರು ವಿದೇಶದಲ್ಲಿದ್ದಾರೆ. ಒಬ್ಬ ಮಗನ ಸಂಸಾರ ಇವರ ಜತೆಗಿದೆ. ಕುಟುಂಬದ ಜತೆ ಡೈನಿಂಗ್ ಟೇಬಲ್‌ನಲ್ಲಿ ಊಟ/ತಿಂಡಿಗೆ ಕುಳಿತರೆ ಸಿನಿಮಾ ಮಾತುಕತೆ ಕಟ್ಟಿಟ್ಟ ಬುತ್ತಿ. ಮೊಮ್ಮಗಳನ್ನು ಶಾಲೆಗೆ ಡ್ರಾಪ್ ಮಾಡಿ, ಬೆಳಿಗ್ಗೆ ೯ ಗಂಟೆ ಸುಮಾರಿಗೆ ಮನೆಯಲ್ಲಿಯೇ ಇರುವ ತಮ್ಮ ಪ್ರತ್ಯೇಕ ಕಚೇರಿಗೆ ಬಂದು ಕೂರುತ್ತಾರೆ. ೯ರಿಂದ ೧೧ರ ಅವ ಸ್ನೇಹಿತರು, ಅಭಿಮಾನಿಗಳಿಗೆ ಮೀಸಲಿಟ್ಟ ಸಮಯ. ೧೧.೩೦-೧೨ ಗಂಟೆ ಸುಮಾರಿಗೆ ದೇವರ ಮನೆ ಪ್ರವೇಶಿಸಿದರೆ, ನಂತರದ ೨೦-೩೦ ನಿಮಿಷ ರಾಯರಿಗೆ ಅರ್ಪಣೆ.
೨.೩೦-೩.೩೦ ನಿದ್ದೆ/ಟಿವಿ ನೋಡುವ ಸಮಯ. ಸಂಜೆ ೪.೩೦-೫ಗಂಟೆಗೆ ಸೆಂಚುರಿ ಕ್ಲಬ್‌ಗೆ ಹೋಗುತ್ತಾರೆ. ‘ಕ್ಲಬ್ ಎಂದಾಕ್ಷಣ ಗುಂಡು ಹಾಕುವ ಜಾಗ ಅಂತಾ ಅಂದುಕೊಳ್ಳಬೇಡಿ. ಅಲ್ಲಿ ೬೦ವರ್ಷ ಮೇಲ್ಪಟ್ಟವರೇ ಇರುತ್ತಾರೆ. ಅಲ್ಲಿನ ಗ್ರಂಥಾಲಯಕ್ಕೆ ಹೋಗುತ್ತೇನೆ. ಅರ್ಧ ಜನ ಓದುತ್ತಿರುತ್ತಾರೆ. ಇನ್ನು ಕೆಲವರು ಕುರ್ಚಿಯಲ್ಲೇ ನಿದ್ದೆಗೆ ಜಾರಿರುತ್ತಾರೆ. ೭.೩೦-೮ಗಂಟೆ ವೇಳೆಗೆ ದಿನಸಿ ಖರೀದಿ ಪೂರೈಸಿಕೊಂಡು ಮನೆಗೆ ಮರಳುತ್ತೇನೆ. ಹೆಂಡ್ತಿ ಧಾರಾವಾಹಿಯಲ್ಲಿ ಮುಳುಗಿರುತ್ತಾಳೆ. ಅವಳ ಹತ್ತಿರ ರಿಮೋಟ್ ಕಸಿದುಕೊಳ್ಳಲು ನಿತ್ಯವೂ ಜಗಳ ಆಡಬೇಕು. ಅರ್ಧ ಗಂಟೆ ವಾರ್ತೆ ವಿಕ್ಷೀಸುವೆ. ಊಟದ ನಂತರ ಡೈರಿ ಬರೆಯುತ್ತೇನೆ. ನಿತ್ಯವೂ ಡೈರಿ ಬರೆಯುವುದು ಉತ್ತಮ ಹವ್ಯಾಸ. ಇದರಿಂದಾಗಿ ಪ್ಲ್ಯಾಶ್‌ಬ್ಲಾಕ್‌ನ ನೆನಪುಗಳು ಸದಾ ಜತೆಗಿರುತ್ತದೆ. ೯.೩೦ಕ್ಕೆ ಹಾಸಿಗೆ ಏರಿದರೆ ಅರ್ಧ-ಮುಕ್ಕಾಲು ಗಂಟೆ ಚಿತ್ರರಂಗದ ಮಿತ್ರರ ಕರೆಗಳಲ್ಲೇ ಮಗ್ನನಾಗಿರುವೆ. ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಡಿಮೆ. ಮನಸ್ಸಿನ ನೆಮ್ಮದಿ ದೃಷ್ಟಿಯಿಂದ ಏಕಾಂಗಿಯಾಗಿ ಬದುಕುವುದು ಗೆಳೆಯ ರಜನಿಕಾಂತ್ ಕಲಿಸಿದ ಪಾಠ’ ಎನ್ನುತ್ತಾರೆ ಆಪ್ತ ಮಿತ್ರದ ರೂವಾರಿ.
ನಟರು, ಹೆಸರಿದ್ದಾಗ ಅಭಿಮಾನಿಗಳ ಭಯದಿಂದ ಹೊರ ಬರುವುದಿಲ್ಲ. ಹೆಸರು ಹೋದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮನಸ್ಸು ಬರುವುದಿಲ್ಲ. ಹೀಗಾಗಿ ನಾಲ್ಕು ಗೋಡೆಗಳ ನಡುವೆಯೇ ಸಿನಿಮಾ ಮಂದಿಯ ಜೀವನ ಕಳೆದುಹೋಗುತ್ತದೆ. ಈ ಗೊಂದಲದಿಂದ ಹೊರಬಂದು ಸಾಮಾನ್ಯನಂತೆ ಎಲ್ಲರ ಜತೆ ಬದುಕುವವ ನಿಜವಾದ ಕಲಾವಿದ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಇವರು, ಬಂಧು-ಬಳಗದವರ ಮನೆ ಕಾರ್ಯಕ್ರಮಗಳನ್ನು ತಪ್ಪಿಸುವುದಿಲ್ಲ. ಹುಟ್ಟೂರಾದ ಹುಣಸೂರಿಗೆ ವರ್ಷಕ್ಕೊಮ್ಮೆ ಹೋಗುತ್ತಾರೆ. ಮೈಸೂರಿನಲ್ಲಿರುವ ಅಣ್ಣನ ಮನೆಗೆ ಆಗಾಗ ಭೇಟಿ ನೀಡುತ್ತಾರೆ.
‘ಕಲಾವಿದರು ಹಣದ ಹಿಂದೆ ದುಂಬಾಲು ಬೀಳಬಾರದು. ತಮಿಳು/ತೆಲುಗಿನಂತೆ ಉತ್ತಮ ಕಥೆ, ನಿರ್ಮಾಪಕರಿಗೆ ನಾಯಕ/ನಾಯಕಿಯರು ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲವಾದರೆ ಕನ್ನಡ ಸಿನಿಮಾ ಜಗತ್ತು ಕೂಡ ಮರಾಠಿ, ಬಂಗಾಳಿ, ಗುಜರಾತಿ ಚಿತ್ರ ರಂಗದ ರೀತಿಯಲ್ಲಿಯೇ ಮೂಲೆಗುಂಪಾಗಿ ಹೋಗುತ್ತದೆ. ನಾವೆಲ್ಲ , ನಮ್ಮ ಭಾಷೆಯ ಚಿತ್ರ ರಂಗ ಬೆಳೆಯಬೇಕೆಂಬ ಕನಸು ಕಂಡವರು. ಈಗಿನ ಸಿನಿಮಾಗಳನ್ನು ನೋಡಿದರೆ ಬೇಸರವಾಗುತ್ತಿದೆ. ಸದ್ಯಕ್ಕೆ ಯಾವ ಸಿನಿಮಾವನ್ನೂ ಮಾಡುವ ಇರಾದೆಯಿಲ್ಲ’ ಎಂದು ದ್ವಾರಕೀಶ್ ಮಾತು ಮುಗಿಸುವ ಹೊತ್ತಿಗೆ ಮನೆಗೆ ಅಭಿಮಾನಿಯೊಬ್ಬರ ಆಗಮನವಾಗಿತ್ತು .
ಮೂಲ ಹೆಸರು-ಬಂಗ್ಲೆ ಶ್ಯಾಮರಾವ್ ದ್ವಾರಕನಾಥ್
ಜನ್ಮ ದಿನಾಂಕ- ೧೯.೦೮.೧೯೪೨
ಮೂಲ ಸ್ಥಳ-ಹುಣಸೂರು(ಮೈಸೂರು ಜಿಲ್ಲೆ)
ವಿದ್ಯಾಭ್ಯಾಸ- ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ವೀರ ಸಂಕಲ್ಪ(೧೯೬೪)
ಇಷ್ಟದ ನಿರ್ದೇಶಕ-ವಿ.ಶಾಂತಾರಾಮ್(ಹಿಂದಿ)
ಇಷ್ಟದ ನಟ/ನಟಿ-ದಿಲೀಪ್ ಕುಮಾರ್