ಪೇಪರ್‌ನಲ್ಲಿ ಇದ್ದವರೆಲ್ಲ ಚಾನೆಲ್‌ಗಳಿಗೆ ಹೋಗಿದ್ದಿರಲ್ಲ. ಅಲ್ಲಿ ನಿಮಗೇನು ಕೆಲಸ? ಹಾಗಂತ ಎದುರಿಗೆ ಸಿಕ್ಕ ತುಂಬಾ ಜನ ಕೇಳುತ್ತಿರುತ್ತಾರೆ. ನಾನು ದೃಶ್ಯ ಮಾಧ್ಯಮ ಸೇರುವ ಮೊದಲು ಇದೇ ಪ್ರಶ್ನೆಯನ್ನು ಪತ್ರಿಕೆಯಿಂದ ವಲಸೆ ಹೋದ ವಿಕಾಸ್, ಸುಧ್ವನ ಮೊದಲಾದ ಗೆಳೆಯರಿಗೆ ಕೇಳಿದ್ದೆ. ಹಾಗೆ ನೋಡಿದರೆ ದೃಶ್ಯ ಮಾಧ್ಯಮ ಅನ್ನುವುದು ನಿಂತಿರುವುದೇ ಬರವಣಿಗೆಯಲ್ಲಿ. ಪತ್ರಿಕೆಗೆ ಬರೆದಿದ್ದಕ್ಕಿಂತ ಹೆಚ್ಚು ನಾವಿಲ್ಲ ಬರೆಯುತ್ತೇವೆ. ಆದರೆ ಇಲ್ಲಿನ ಬರವಣಿಗೆಯಿಂದ ಪತ್ರಿಕೆಯಷ್ಟು ಗುರತಿಸಿಕೊಳ್ಳಲು ಸಾಧ್ಯವಿಲ್ಲ.
ಸುದ್ದಿ ವಾಹಿನಿಗಳಿಗೆ ಬಂದರೆ ಇಲ್ಲಿನ ಹೆಚ್ಚು ಕಾರ್ಯಕ್ರಮಗಳು ಸ್ಕ್ರಿಪ್ಟ್ ಆಧಾರಿತವಾಗಿರುತ್ತವೆ. ಒಂದು ಗಂಟೆಗೊಮ್ಮೆ ಬರುವ ಸುದ್ದಿಗಳನ್ನು ಸುದ್ದಿ ವಾಚಕರಿಗೆ ಬರೆದುಕೊಡಲಾಗಿರುತ್ತದೆ. ಹೆಚ್ಚಿನ ಸುದ್ದಿ ವಾಚಕರು ಬರೆದು ಕೊಟ್ಟಿದ್ದನ್ನೇ ಓದುತ್ತಾರೆ ಮತ್ತು ಓದಬೇಕು ಎಂಬುದು ಇಲ್ಲಿನ ನಿಯಮ. ಇದರ ಹೊರತಾಗಿ ನಡೆಯುವ ಚರ್ಚೆಗಳು ಅಥವಾ ಲೈವ್ ಡಿಸ್ಕಷನ್ಸ್ ಎಂದು ಏನು ಕರೆಯುತ್ತೇವೊ, ಅದಕ್ಕೆ ಮಾತ್ರ ವಾರ್ತಾ ವಾಚಕರೇ ಸಿದ್ಧತೆ ನಡೆಸಿ ಪಾಯಿಂಟ್‌ಗಳನ್ನು ಬರೆದುಕೊಂಡಿರುತ್ತಾರೆ. ಇನ್ನೂ ಕಾರ್ಯಕ್ರಮ ವಿಭಾಗದಿಂದ ಪ್ರಸಾರವಾಗುವ ಅರ್ಧ ಗಂಟೆ/ಒಂದು ಗಂಟೆಯ ಹೆಚ್ಚಿನ ಕಾರ್ಯಕ್ರಮಗಳು ಬರವಣಿಗೆ ಆಧರಿಸಿ ಇರುತ್ತದೆ. ಬರಹದ ಮೇಲೆ ಇಡೀ ಕಾರ್ಯಕ್ರಮ ವಿನ್ಯಾಸಗೊಂಡಿರುತ್ತದೆ. ಆದರೆ ಎಲ್ಲೂ ಬರಹಗಾರ ಕಾಣಿಸಿಕೊಳ್ಳುವುದಿಲ್ಲ. ಎಂಡ್ ಟೈಟಲ್‌ನಲ್ಲಿ ಬರಹಗಾರನಿಗೆ ಕಾಣಿಸಿಕೊಳ್ಳುವ ಅವಕಾಶವಿದ್ದರೂ ನಾನಂತೂ ಹೆಚ್ಚಿನ ಕಾರ್ಯಕ್ರಮಗಳಿಗೆ ಎಂಡ್ ಟೈಟಲ್ ಹಾಕಿಸುವುದಿಲ್ಲ.
ನಾನು ವೈಯಕ್ತಿಕವಾಗಿ ದೃಶ್ಯ ಮಾಧ್ಯಮದ ಬರವಣಿಗೆ ರೂಪ ನೋಡಿದ್ದು ಸೇತುರಾಂ ಮೂಲಕ. ಅವರು ‘ಅನಾವರಣ’ ಧಾರವಾಹಿ ಮಾಡುವ ಮೊದಲು ಮಂಥನದ ಸುಮಾರು ೧೦ ಸಂಚಿಕೆಗಳ ಸ್ಕ್ರಿಪ್ಟ್‌ನ್ನು ನನಗೆ ಕೊಟ್ಟಿದ್ದರು. ಆವತ್ತು ಅದರ ತಲೆಬುಡ ನನಗೆ ಅರ್ಥವಾಗಿರಲಿಲ್ಲ! ಯಾಕಂದರೆ ಪೇಪರ್‌ನ ಬರವಣಿಗೆ ಸ್ವರೂಪಕ್ಕೂ, ದೃಶ್ಯ ಮಾಧ್ಯಮದ ಬರವಣಿಗೆ ಸ್ವರೂಪಕ್ಕೂ ಬಹಳ ವ್ಯತ್ಯಾಸವಿದೆ. ಅದನ್ನು ಮತ್ತೆ ವಿಗಂಡಿಸಿದರೆ ಮನರಂಜನೆ ವಾಹಿನಿಗಳ ಬರವಣಿಗೆಗೂ, ಸುದ್ದಿ ವಾಹಿನಗಳ ಬರವಣಿಗೆಗೂ ತುಂಬಾ ವ್ಯತ್ಯಾಸವಿದೆ. ಸಿರಿಯಲ್‌ಗಳು ನಿಂತಿರುವುದೇ ಸ್ಪ್ರಿಪ್ಟ್ ಮೇಲೆ ಎಂದು ಎಲ್ಲ ವಾಹಿನಿಗಳೂ ಹೇಳಿಕೊಳ್ಳುತ್ತವೆ ಎಂಬುದು ನಿಜ. ಆದರೆ ದುರಂತವೆಂಬಂತೆ ಆ ಗೌರವ ಯಾವತ್ತೂ ಬರಹಗಾರನಿಗೆ ದಕ್ಕುವುದಿಲ್ಲ! ಪರಮೇಶ್ವರ್ ಗುಂಡ್ಕಲ್, ವಿನಾಯಕ ತದ್ದಲಸೆಯಂಥ ಒಂದಷ್ಟು ಕಥೆಗಾರರು, ಬರಹದ ಮೌಲ್ಯ ಗೊತ್ತಿದವರೂ ಇವತ್ತು ಮನರಂಜನೆ ವಾಹಿನಿ ಒಳಹೊಕ್ಕಿರುವುದರಿಂದ ತಕ್ಕ ಮಟ್ಟಿಗೆ ಇವತ್ತು ಮನರಂಜನೆ ವಾಹಿನಿಗಳು ಬರಹಗಾರರನ್ನು ಗುರುತಿಸುತ್ತಿವೆ.
ದೃಶ್ಯ ಮಾಧ್ಯಮದ ದೊಡ್ಡ ದುರಂತವೆಂದರೆ ಇದು ಒಬ್ಬರಿಂದ ನಿಯಂತ್ರಣಗೊಳಿಸಲು ಸಾಧ್ಯವಿಲ್ಲ. ಉದಾಹರಣೆಗೆ ಒಂದು ಧಾರಾವಾಹಿಗೆ ಒಂದು ಅದ್ಭುತ ಕಥೆಯಿದೆ. ಡೈಲಾಗ್ ಅದ್ಭುತವಿದೆ. ಆದರೆ ನಾಯಕಿ ಪಾತ್ರಕ್ಕೆ ಆಯ್ಕೆಯಾದವಳಿಗೆ ಆ ಮಟ್ಟಕ್ಕೆ ಅಭಿನಯಿಸಲು ಬರುವುದಿಲ್ಲ. ಆಗ ಬರಹಗಾರ ಬರೆದಿದ್ದೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಸರಿ. ನನ್ನ ಈ ವಾದವನ್ನು ಕೆಲವರು ಒಪ್ಪುವುದಿಲ್ಲ. ನಿಮ್ಮ ತಪ್ಪು ಸಮರ್ಥಿಸಿಕೊಳ್ಳಲು ನುಣುಚಿಕೊಳ್ಳುವಿರಿ ಎನ್ನುತ್ತಾರೆ. ಆದರೆ ಸಿರಿಯಲ್ ಅಥವ ಒಂದು ಅರ್ಧ ಗಂಟೆ ಕಾರ್ಯಕ್ರಮದಲ್ಲಿ ‘ಮೇಕಿಂಗ್ ಅನ್ನುವುದು’ ಅತ್ಯಂತ ಮಹತ್ವದ್ದು.
ಅದ್ಭುತವಾದ ಅಡುಗೆ ಸಿದ್ಧವಿದೆ. ಆದರೆ ಬಡಿಸುವವನ ಮೈ-ಕೈ ಎಲ್ಲ ಗಲೀಜಾಗಿದೆ. ಅಡುಗೆಯ ಘಮ ಮೂಗಿಗೆ ಬಡಿಯುತ್ತಿದ್ದರೂ ನಮಗೆ ತಿನ್ನಲು ಒಂಥರ ವಾಕರಿಕೆ ಅಲ್ವಾ? ದೃಶ್ಯ ಮಾಧ್ಯಮ ಕೂಡ ಒಂಥರ ಹಾಗೆ. ಕೆಟ್ಟ ಕಥೆ, ಕೆಟ್ಟ ಡೈಲಾಗ್ ಆದ್ರೆ ಅದ್ಭುತ ಪಾತ್ರವರ್ಗ. ಆಗಲೂ ಒಂದು ಸಿರಿಯಲ್ ಕ್ಲಿಕ್ ಆಗುತ್ತದೆ. ಯಾಕಂದರೆ ಒಬ್ಬ ಸಾಮಾನ್ಯ ನೋಡುಗನ ಮನಸ್ಸಿನಲ್ಲಿ ಅಚ್ಚಿಳಿಯದೆ ಉಳಿಯುವುದು ಪಾತ್ರಗಳು ಮತ್ತು ಕಥೆ ಮಾತ್ರ. ಅದ್ಭುತವಾಗಿದ್ದರೆ ಕೆಲವೊಮ್ಮೆ ಪಾತ್ರಗಳ ಆಡುವ ಮಾತು ಕೂಡ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಪಾತ್ರಧಾರಿಗಳು, ಕ್ಯಾಮೆರ, ವಿಷ್ಯುವಲ್ ಎಡಿಟಿಂಗ್, ನಿರ್ದೇಶನ ಎಲ್ಲವೂ ಸೇರಿ ಒಂದು ಕಾರ್ಯಕ್ರಮ/ಧಾರವಾಹಿ/ಸಿನಿಮಾ ಸಿದ್ಧಗೊಳ್ಳುವುದು. ಯೋಗರಾಜ್ ಭಟ್ಟರಂಥ ನಿರ್ದೇಶಕರು, ಜಯಂತ್ ಕಾಯ್ಕಿಣಿಯಂಥ ಸಾಹಿತಿಗಳು ಇದ್ದಾಗ ನಟ/ನಟಿ, ಕಥೆಯನ್ನು ಹೊರತಾಗಿ ಒಂದು ಹಂತಕ್ಕೆ ಅದ್ಭುತ ಎನ್ನಿಸುವ ಒಂದು ಸಿನಿಮಾ ಹೊರಬರುತ್ತದೆ. ಅದು ಅವರ ವೈಯಕ್ತಿಕ ತಾಕತ್ತು ಅಷ್ಟೆ. ಅಮೀರ್ ಖಾನ್ ಏಕಾಂಗಿಯಾಗಿ ಒಂದು ಸಿನಿಮಾ ಗೆಲ್ಲಿಸಬಹುದು. ಅದು ಆತನ ವೈಯಕ್ತಿಕ ತಾಕತ್ತು. ಆದರೆ ಇಡೀ ದೃಶ್ಯ ಮಾಧ್ಯಮ ಅನ್ನುವುದು ಒಂದು ತಂಡದ ಕೆಲಸ. ಇಲ್ಲಿ ಎಲ್ಲವೂ ಸಮತೂಕದಲ್ಲಿ ಹೋಗಬೇಕು. ಇದು ದೃಶ್ಯ ಮಾಧ್ಯಮದ ಸವಾಲು ಮತ್ತು ಅದ್ಭುತ ಎರಡೂ ಹೌದು.
ಪತ್ರಿಕೆಯಲ್ಲಿ ನಾನೊಂದು ಕಥೆ ಬರೆದರೆ ಅದಕ್ಕೆ ನಾನೇ ಸೂತ್ರಧಾರ. ಅದರ ಚೆನ್ನಾಗಿ ಬಂದರೂ, ಕೆಟ್ಟದಾಗಿ ಬಂದರೂ ಎರಡಕ್ಕೂ ನಾನೇ ನೇರ ಹೊಣೆ. ಆದರೆ ದೃಶ್ಯ ಮಾಧ್ಯಮದಲ್ಲಿ ಹಾಗಲ್ಲ. ಇಲ್ಲಿ ಎಲ್ಲದಕ್ಕೂ ಎಲ್ಲರೂ ಹೊಣೆ. ದುರಂತವೆಂದರೆ ಒಬ್ಬರ ತಲೆ ಮೇಲೆ ಮತ್ತೊಬ್ಬರು ಗೂಬೆ ಕೂರಿಸಿ ನುಣುಚಿಕೊಳ್ಳಲು ದೃಶ್ಯ ಮಾಧ್ಯಮ ಉತ್ತಮ ವೇದಿಕೆಯಾಗಿಬಿಟ್ಟಿದೆ. ಅದೇ ಕಾರಣಕ್ಕೆ ಕೆಲವು ನಿರ್ದೇಶಕರು ಅವರೇ ಸ್ವಂತವಾಗಿ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದುಕೊಳ್ಳುವುದು.
ನಾನು ವೈಯಕ್ತಿಕವಾಗಿ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಾಗ ಅನೇಕರು ‘ಪೇಪರ್‌ಗೆ ಬರೆದಂಗೆ ಇಲ್ಲಿ ಬರೆಯುತ್ತೀಯಾ’ ಅಂತ ಹಿಯ್ಯಾಳಿಸಿದರು. ನಾನು ತೀರಾ ತಲೆಕೆಡಿಸಕೊಳ್ಳಲಿಲ್ಲ. ಕಾರಣವಿಷ್ಟೆ. ಹಾಗೆ ಹೇಳಿವದರು ಎಷ್ಟು ಬರೆದಿದ್ದಾರೆ ಎಂಬುದು ಬಲು ಮುಖ್ಯವಾಗುತ್ತದೆ. ಪುಗ್ಸಟ್ಟೆ ಸಲಹೆ ಕೊಡುವವರು, ಆಡಿಕೊಳ್ಳುವವರಿಗೆ ಬರವಣಿಗೆಯ ಮೌಲ್ಯ ಗೊತ್ತಾಗಲು ಸಾಧ್ಯವಿಲ್ಲ. ಒಬ್ಬ ಬರಹಗಾರನಿಗೆ ಮಾತ್ರ ಬರವಣಿಗೆಯ ಮೌಲ್ಯ ಗೊತ್ತಾಗಲು ಸಾಧ್ಯ. ‘ಓರ್ವ ಬರೆಯುವ ಸಂಪಾದಕರಿದ್ದರೆ ಪತ್ರಿಕೆ ಅದ್ಭುತವಾಗಿ ಮೂಡಿ ಬರಲು’ ಹಾಗಂತ ನಾನು ಸದಾ ಹೇಳುತ್ತಿರುತ್ತೇನೆ. ಕಾರಣವಿಷ್ಟೆ, ಬರೆಯುವ ಸಂಪಾದಕರು ಸುದ್ದಿಮನೆಯೊಳಗಿರುವ ಬರಹಗಾರರನ್ನು ಗುರುತಿಸಿ ಬರೆಸಬಲ್ಲರು. ಒಂದು ಮುಕ್ತ ಚರ್ಚೆಗೆ ವೇದಿಕೆ ಒದಗಿಸಬಲ್ಲರು.
ಚೂರು ವೈಯಕ್ತಿಕ ವಿಚಾರಕ್ಕೆ ಬಂದರೆ ವಿಜಯ ಕರ್ನಾಟಕದ ಸೇರಿದ ಆರಂಭದ ದಿನಗಳಲ್ಲಿ ನನ್ನ ಹೆಚ್ಚಿನ ಬರಹಗಳು ಕೆಲವರಿಂದ ತಿರಸ್ಕೃತಗೊಳ್ಳುತ್ತಿದ್ದವು. ಕೊನೆಗೆ ಆವತ್ತು ಸಂಪಾದಕ ಸ್ಥಾನದಲ್ಲಿ ಕುಳಿತ ವಿಶ್ವೇಶ್ವರ ಭಟ್ಟರ ಬಳಿ ನೇರವಾಗಿ ನನ್ನ ಬರಹಗಳನ್ನು ತೆಗೆದುಕೊಂಡು ಹೋದೆ. ಬಹುಶಃ ಆವತ್ತಿನಿಂದ ಇವತ್ತಿನವರೆಗೂ ನಾನು ನೇರವಾಗಿ ಸಂಪಾದಕರಿಗೆ ನನ್ನ ಬರಹ ಕಳಿಸುತ್ತೇನೆ ಮತ್ತು ತಿರಸ್ಕೃತಗೊಳ್ಳುವುದು ತೀರಾ ವಿರಳ. ಯಾಕೆಂದರೆ ಭಟ್ಟರು ಬರಹದ ದೃಷ್ಟಿಕೋನ ನೋಡುವ ಬಗೆ ನಿಜಕ್ಕೂ ಅದ್ಭುತ.
ಎಲ್ಲರೂ ಮಡೆಸ್ನಾನದ ವಿರುದ್ಧ ಬರೆದಾಗ ನಾನು ಮಡೆಸ್ನಾನ ಸಮರ್ಥಿಸಿ ಬರೆದೆ. ಎಲ್ಲರೂ ವಿರುದ್ಧ ಮಾತನಾಡುತ್ತಿದ್ದಾರೆ, ನಾನೊಬ್ಬ ಪರ ಮಾತನಾಡಿದರೆ ನನಗೆ ಹೆಚ್ಚು ಪ್ರಚಾರ ಸಿಗಬಹುದು ಎನ್ನುವ ದುರುದ್ದೇಶದಿಂದ ಅದನ್ನು ಬರೆದಿರಲಿಲ್ಲ. ಬದಲಾಗಿ ಅಲ್ಲಿನ ಅನೇಕ ಸ್ಥಳೀಯ ಮಿತ್ರ ಅಭಿಪ್ರಾಯ ಒಟ್ಟಿಗೆ ಸೇರಿಸಿ ಬರೆದೆ. ಒಂದು ವಿಚಾರಕ್ಕೆ ಪರ ಮತ್ತು ವಿರೋಧ ಎಂಬ ೨ ಮುಖಗಳು. ಭಟ್ಟರ ಮುಂದೆ ಬರಹವನ್ನಿಟ್ಟು ನಾನು ಹೇಳಿದ್ದು ಇದೇ ಮಾತನ್ನು. ‘ಏನಾದ್ರೂ ಆಗಲಿ ಧೈರ್ಯ ಮಾಡಿ ಇದೊಂದು ಮುಖವನ್ನು ಪ್ರಕಟಿಸೋಣ’ ಎಂದರು. ನೀವೂ ನಂಬುತ್ತೀರೋ, ಬಿಡುತ್ತಿರೊ ಗೊತ್ತಿಲ್ಲ, ಆ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ನಿಜಕ್ಕೂ ನನ್ನ ಪಾಲಿಗೆ ದಾಖಲೆ. ಬಹುಶಃ ಬಹುತೇಕ ಪತ್ರಿಕೆಗಳು ಮಡೆಸ್ನಾನದ ಪರವಾದ ಬರಹ ಪ್ರಕಟಿಸಲು ಹಿಂಜರಿಯುತ್ತಿದ್ದವು. ಇಲ್ಲಿ ಪರ, ವಿರೋಧದ ಪ್ರಶ್ನೆಯಲ್ಲ. ಒಂದು ವಿಚಾರದ ಇನ್ನೊಂದು ಮುಖವನ್ನು ಪರಿಚಯಿಸುವ ಅಗತ್ಯವಿತ್ತು.
ಈ ಕೆಲಸ ದೃಶ್ಯ ಮಾಧ್ಯಮದಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಒಬ್ಬನೇ ಕುಳಿತು ಏನು ಮಾಡಲು ಸಾಧ್ಯವಿಲ್ಲ. ಬರಹಗಾರನಿಗೂ ಪಾತ್ರವರ್ಗಕ್ಕೂ ಪರಿಚಯವೇ ಇರುವುದಿಲ್ಲ. ನಿರ್ದೇಶಕರೊಬ್ಬರಿಗೆ ಬಿಟ್ಟು ಬೇರೆಯವರಿಗೆ ಬರೆಯುತ್ತಿರುವವರು ಯಾರು ಎಂಬುದೇ ಗೊತ್ತಿರುವುದಿಲ್ಲ. ಹಾಗಂತ ಇಲ್ಲಿ ಬರಹಗಾರನೇ ಶ್ರೇಷ್ಠ, ಉಳಿದವರು ನಿಕೃಷ್ಟ ಎಂದು ವಾದಿಸುತ್ತಿಲ್ಲ. ಇಲ್ಲಿ ಎಲ್ಲರೂ ಮುಖ್ಯ. ಅಹಂ ಬಂತು ಎಂದರೆ ಇಡೀ ಮಾಧ್ಯಮ ಹಾಳಾಗುತ್ತದೆ. ಇದೇ ಕಾರಣಕ್ಕೆ ಓರ್ವ ನಿಜವಾದ ಬರಹಗಾರ, ಬರಹವನ್ನು ಪ್ರೀತಿಸುವವನು ದೃಶ್ಯ ಮಾಧ್ಯಮಕ್ಕೆ ಬರೆಯಲು ಹಿಂದೇಟು ಹಾಕುತ್ತಾನೆ. ಹಾಗಾಗಿಯೇ ಬರಹಗಾರರಿಗೆ ದೃಶ್ಯ ಮಾಧ್ಯಮದಲ್ಲಿ ಬೇಡಿಕೆ ಹೆಚ್ಚಿದೆ. ಸ್ಕ್ರಿಪ್ಟ್ ಬರೆಯುವವರು ಸಂಖ್ಯೆ ಕಡಿಮೆಯಿದೆ. ಇದು ನನ್ನ ವೈಯಕ್ತಿಕ ಅನಿಸಿಕೆಯಷ್ಟೆ. ಚರ್ಚೆಗೆ ಅವಕಾಶವಿದೆ.