Feeds:
ಲೇಖನಗಳು
ಟಿಪ್ಪಣಿಗಳು

Archive for ಮೇ, 2011

ಹುಡುಗಿ, ಲವ್ವು, ಫೀಲು, ಸೆಕ್ಸು…ಕಥೆ ಅಂತಾ ಬರೆಯಲು ಕುಳಿತರೆ ಮತ್ತದೇ ಪದಗಳು ಉದುರುತ್ತವೆ. ಬೋಳಿಮಗನದ್ದು, ಈ ವಯಸ್ಸೇ ಹಾಗೆ ಅಂದುಕೊಳ್ಳುವ ಹೊತ್ತಿಗೆ ನೆನಪಾದಳು ಅಕ್ಕಯ್ಯ.
ಆವತ್ತು ಶ್ರಾವಣಿ ಬಸ್ಸಿನಲ್ಲಿ ಸಿಗದೇ ಹೋಗಿದ್ದರೆ, ಅವಳ ಪಕ್ಕದಲ್ಲೇ ಕುಳಿತ ನನ್ನೊಂದಿಗೆ ಮಾತನಾಡದಿದ್ದರೆ ಬಹುಶಃ ಅಕ್ಕಯ್ಯ ನೆನಪಾಗುತ್ತಿರಲಿಲ್ಲ! ಮಾಲಕ್ಕ ಅಲಿಯಾಸ್ ಅಕ್ಕಯ್ಯನ ಕುರಿತೊಂದು ಕಥೆ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.

ಪಟೇಲ್ ಪರಮಣ್ಣ!
ಹತ್ತೂರು ಸೀಮೆಯಲ್ಲಿ ಚಿರಪರಿಚಿತ ಹೆಸರು. ಪಟೇಲ್ ಪರಮಣ್ಣ ಗೊತ್ತಿಲ್ಲವಾದರೂ, ಆತನ ಹೆಂಡತಿ ಬಡ್ಡಿ ಭವಾನಮ್ಮನ ಹೆಸರು ಕೇಳದ ಓಣಿಗಳೇ ಹತ್ತೂರು ಸೀಮೆಯಲಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಭವಾನಮ್ಮನ ವಹಿವಾಟುಗಳಿಂದಲೇ ಪಟೇಲ್ ಪರಮಣ್ಣನ ಹೆಸರು ನಾಲ್ಕಾರು ಜನರ ಬಾಯಿಯಲ್ಲಿ ಹರಿದಾಡಿದ್ದು. ಇಂಥ ದಂಪತಿಗಳ ೧೮ ಮಕ್ಕಳಲ್ಲಿ ಪ್ರಥಮ ಸುಪುತ್ರಿಯೇ ನಮ್ಮ ಈ ಅಕ್ಕಯ್ಯ.

“ಈ ಮಾಣಿಯೊಂದು ಯಾವಾಗ್ಲೂ ತಿರುಗ್ತಾ ಇರ‍್ತಾ. ಸುಡುಗಾಡು ಮನ್ನ್ಯಾಥ ಒಂದು ದಿನ ಕೆಲಸಕ್ಕೆ ಬಂದ್ರೆ, ಮೂರು ದಿನ ಬರದಿಲ್ಲೆ. ನಮ್ಮ ಮನೆ ಮಳ್ಳು ಅಮ್ಮಂಗೆ ಇದೆಲ್ಲ ಎಂಥೂ ಗೊತಾಗ್ತಲ್ಲೆ…”ಇಂಥದ್ದೊಂದು ಸುಪ್ರಭಾತ ಪರಮಯ್ಯನ ಮನೆ ಕೊಟ್ಟಿಗೆಯಲ್ಲಿ ಕೇಳಿದರೆ, ಅದು ಅಕ್ಕಯ್ಯನ ಸಂಗೀತ ಎಂದು ಯಾರಿಗೂ ಹೇಳಬೇಕಿಲ್ಲ. ಪಕ್ಕದ ಮನೆ ಸುಮನತ್ತೆ ಕಳೆದ ೧೮ ವರ್ಷಗಳಿಂದ ಅಕ್ಕಯ್ಯನ ಈ ಹಾಡು ಕೇಳುತ್ತಲೇ ಇದ್ದಾಳೆ. ಒಂದೊಮ್ಮೆ, ಬೆಳಿಗ್ಗೆ ೬.೬೦ಕ್ಕೆ ಸರಿಯಾಗಿ ಈ ಸುಪ್ರಭಾತ ಕೇಳದೇ ಹೋದರೆ, ಆವತ್ತು ಅಕ್ಕಯ್ಯನಿಗೆ ಮೈ ಹುಷಾರಿಲ್ಲ ಅಂತಾ ನಾವು ಅಂದುಕೊಳ್ಳಬೇಕಿತ್ತು.

“ಅಕ್ಕಯ್ಯಂಗೆ ೮ ವರ್ಷ ಇರಕಿದ್ರೆ ಮದ್ವೆ ಆಗಿತ್ತು. ಇಲ್ಲೆ ಪಡೆಗೋಡು ಹತ್ರಾ ಲಿಂಗದಹಳ್ಳಿಗೆ ಕೊಟ್ಟಿದ್ದ. ಮದ್ವೆ ಆಗಿ ಮೂರೇ ವರ್ಷಕ್ಕೆ ಗಂಡ ಸತ್ತು ಹೋದ. ಆಮೇಲೆ ಭವಾನಮ್ಮ, ಅಕ್ಕಯ್ಯನ ಮನೆಗೆ ಕರೆದುಕೊಂಡು ಬಂದು ಇಟ್ಕಂಡ. ಆವತ್ತಿನಿಂದ ಇವತ್ತಿನವರೆಗೂ ಅಕ್ಕಯ್ಯ ಒಂದೇ ತರ ಇದ್ದ. ಕೊಟ್ಟಿಗೆ ಕೆಲ್ಸ, ಅಡುಗೆ ಮನೆ…ಇದಿಷ್ಟೆ ಅವಳ ದಿನಚರಿ. ಯಾರ ಮನೆಗೂ ಹೋಗದಿಲ್ಲೆ. ಯಾರ ಹತ್ರಾನೂ ಮಾತಾಡದಿಲ್ಲೆ. ಒಂದು ಹೊಸ ಬಟ್ಟೆ, ಹೊಸ ಸೀರೆ ಉಟ್ಟಿದ್ದನ್ನ ಆನಂತೂ ನೋಡಲ್ಲೆ”ಆವತ್ತು ಅಕ್ಕಯ್ಯನ ಕುರಿತು ಇವಿಷ್ಟು ಹೇಳಿದ ಅಮ್ಮ, ಮತ್ಯಾವತ್ತೂ ಅವಳ ಬಗ್ಗೆ ಹೇಳಲೇ ಇಲ್ಲ.

*******

ನನ್ನ ಹೆಸರು ಶ್ರಾವಣಿ. ಊರು ಚಿಕ್ಕಮಗಳೂರು ಜಿಲ್ಲೆಯ ಕಳಸ. ಕಳೆದ ೫-೬ ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ಸದ್ಯಕ್ಕೆ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್. ವಾಟ್ ಅಬೌಟ್ ಯೂ?

ಹೌದು, ಆವತ್ತು ಎನ್.ಆರ್ ಪುರದಲ್ಲಿ ಪರಿಚಿತವಾಗಿದ್ದು ಇದೇ ಶ್ರಾವಣಿ. ಶಾರದೆಯನ್ನು ನೋಡುವ ಸಲುವಾಗಿ ಶಿವಮೊಗ್ಗದಿಂದ ಶೃಂಗೇರಿಗೆ ಹೊರಟ್ಟಿದ್ದೆ. ಹೆಬ್ಬಾವು ಹರಿದಂತಿರುವ ತಿರುವುಗಳು, ಹಣ್ಣಿಲ್ಲದೆ ಸೊರಗಿರುವ ನೇರಳೆ ಮರಗಳು, ಕರಡವಿಲ್ಲದೆ ಬೋಳು-ಬೋಳಾಗಿರುವ ಬ್ಯಾಣಗಳು, ಹಳೆ ಪೊರೆ ಕಳಚಿ ಹೊಸ ಹಸಿರಿನೊಂದಿಗೆ ಮೈದಳೆದು ನಿಂತಿರುವ ಮರಗಳ ನಡುವೆಯೇ ಬಸ್ಸು ಸಾಗುತ್ತಿತ್ತು. ಕಿಟಕಿಯಾಚೆಗಿನ ಪ್ರಪಂಚವನ್ನು ನೋಡುತ್ತಿದ್ದವನಿಗೆ ಪಕ್ಕದಲ್ಲೊಂದು ಸುಂದರವಾದ ಹುಡುಗಿ ಕುಳಿತಿದ್ದಾಳೆಂದು ಗೊತ್ತಾಗಿದ್ದು ಬಸ್ಸು ಎನ್.ಆರ್ ಪುರವನ್ನು ಪ್ರವೇಶಿಸಿದಾಗ.

ನನ್ನ ಹೆಸರು ಸಂಜಯ್. ನಾನೂ ಕೂಡ ಕಳೆದೆರಡು ವರ್ಷಗಳಿಂದ ಬೆಂಗಳೂರಲ್ಲೇ ಇದ್ದೇನೆ. ನಿಮ್ಮಷ್ಟು ಒಳ್ಳೆ ಉದ್ಯೋಗದಲಿಲ್ಲ. ಹೊಟ್ಟೆ ಪಾಡಿನ ಕೆಲಸ. ಊರಿಗೆ ಬಂದಿದ್ದೆ. ಹಾಗೆ ಶಾರದಾಂಬೆಯ ದರ್ಶನ ಮಾಡಿಕೊಂಡು ಹೋಗೋಣ ಅಂತಾ ಶೃಂಗೇರಿ ಕಡೆ ಹೊರಟ್ಟಿದ್ದೇನೆ…

ಉಭಯ ಕುಶಲೋಪಚರಿಯೊಂದಿಗೆ ಇಬ್ಬರ ಮಾತುಕತೆ ಆರಂಭವಾಯಿತು. ಬಸ್ಸು ದೂರ ಸಾಗುತ್ತಾ ಹೋದಂತೆ ನಮ್ಮ ಸ್ನೇಹ ಗಟ್ಟಿಯಾಗುತ್ತಾ ಹೋಯಿತು.

ಹೌದು, ತುಂಬಾ ಒಳ್ಳೇ ಕೆಲಸ! ನಾವು ಯಾರಿಗಾಗಿ ಪ್ರಾಜೆಕ್ಟ್ ಮಾಡ್ತಾ ಇದ್ದೀವಿ, ಇದರಿಂದ ಯಾರಿಗೆ ಉಪಯೋಗ ಅನ್ನೋದು ಎಷ್ಟೋ ಸಲ ನಮಗೂ ಗೊತ್ತಿರುವುದಿಲ್ಲ. ನಿಜ, ಕೈ ತುಂಬಾ ಸಂಬಳ ಬರತ್ತೆ. ಒಂತರಹ ಹೈಟೆಕ್ ಕೂಲಿ. ನಾವು ಹೊಟ್ಟೆ ಪಾಡಿಗೇ ದುಡಿಯುವುದು ಕಣ್ರೀ…

ಮುಖದಲ್ಲಿನ ಅಸಹನೆಯ ಗೆರೆಗಳ ನಡುವೆಯೇ ಸಣ್ಣದೊಂದು ನಗು ಮಿಣುಕಾಡಿತ್ತು. ಆ ನಗುವಿನ ಹಿಂದಿರಬಹುದಾದ ನೋವಿನ ಸುಳಿವೂ ನನಗೆ ಸಿಕ್ಕಿರಲಿಲ್ಲ. ಸಹಜವಾಗಿ ಹುಡುಗಿ ಇಷ್ಟವಾಗಿ ಬಿಟ್ಟಿದ್ದಳು. ಆಂಟಿಯಾಗಿರಬಹುದೆಂಬ ಕಲ್ಪನೆಯೂ ಮನಸ್ಸಿಗೆ ಬರಲಿಲ್ಲ! ಆಂಟಿ ಎಂದು ಸುಳಿವು ನೀಡಬಹುದಾದ ಯಾವ ಲಕ್ಷಣಗಳೂ ಕಾಣಿಸಲೂ ಇಲ್ಲ!

ಶೃಂಗೇರಿ ಮಠ, ಮಠ, ಮಠ. ಇಳಿರಿ ಇದೇ ಲಾಸ್ಟ್ ಸ್ಟಾಪ್…
ಬಸ್ಸಿನ ಆ ಹುಡುಗನ ಕೂಗು ಕಿವಿಗಡಚತೊಡಗಿತು.

ಫಸ್ಟ್ ಟೈಂ ಬರ‍್ತಾ ಇರೋದಾ?
ಅಂತಾ ಅವಳು ಇಳಿಯಲು ಅಣಿಯಾದಾಗ ನಾನು ಭ್ರಮಾ ಲೋಕದಿಂದ ಹೊರಬಂದಾಗಿತ್ತು.
ಶಾರದೆ ದರ್ಶನ, ವಿದ್ಯಾರಣ್ಯರ ಉದ್ಯಾನವನ, ಊಟ…ಇವೆಲ್ಲ ಮುಗಿಯುವಾಗ ಶ್ರಾವಣಿ ನನ್ನ ಬದುಕಿನ ಅವಿಭಾಜ್ಯ ಅಂಗ ಅನ್ನಿಸಿಬಿಟ್ಟಿದ್ದಳು. ಹಠ ಮಾಡಿ ಕಳಸದ ಬಳಿಯಿರುವ ಅವಳ ಮನೆಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಆಕೆ ಗೆಳತಿಯಾಗಿದ್ದಳು.

ಹೊಸಕೆರೆಹಳ್ಳಿ ರಿಂಗ್‌ರೋಡ್‌ನಲ್ಲಿರುವ ಮಂತ್ರಿ ಅಪಾರ್ಟ್‌ಮೆಂಟ್‌ಲ್ಲಿ ನನ್ನ ಮನೆಯಿದೆ. ಬೆಂಗ್ಳೂರಿಗೆ ಬಂದ ಮೇಲೆ ಕಾಂಟ್ಯಾಕ್ಟ್ ಮಾಡ್ತೀನಿ. ಮೊಬೈಲ್ ನಂಬರ್ ಕೊಟ್ಟಿರಿ…
ಅಂತಾ ಬಸ್ ನಿಲ್ದಾಣದವರೆಗೆ ಬಂದು ಬಿಟ್ಟುಕೊಟ್ಟಳು.

ಹಸಿರು-ಬಿಳಿ ಬಣ್ಣದ ಸಹಕಾರ ಸಾರಿಗೆ ಬಸ್ಸು ಶಿವಮೊಗ್ಗೆಯ ಹಾದಿ ಹಿಡಿದು ಹೊರಟಾಗ, ಕಿಟಕಿಯಾಚೆಗಿನ ಪ್ರಪಂಚದಲ್ಲಿ ಮತ್ತೆ ಕನಸುಗಳಿಗೆ ರೆಕ್ಕೆ-ಪುಕ್ಕ ಬಂದಂದಿತ್ತು.

***

ಅಕ್ಕಯ್ಯನ ಗಂಡ ಸತ್ತ ಮೇಲೆ, ಬಡ್ಡಿ ಭವಾನಮ್ಮ ಮಗಳನ್ನ ಮನೆಗೆ ತಂದಿಟ್ಟುಕೊಂಡಳು. ಅವಳ ಪಾಲಿಗೆ ಗಂಡನ ಮನೆ ಕಡೆಯಿಂದ ಬರಬೇಕಿದ್ದ ದುಡ್ಡು, ಒಡವೆಗಳನ್ನೆಲ್ಲ ಸೀರೆ ಸೆರೆಗಿನಲ್ಲಿ ಕಟ್ಟಿಕೊಂಡು ಬಂದಳು. ಕತ್ತಲೆಯ ಕೋಣೆಯಲ್ಲಿದ್ದ ಕಪಾಟಿನಲ್ಲಿ ಅಕ್ಕಯ್ಯನ ಆಸ್ತಿಯನ್ನು ಭದ್ರವಾಗಿಟ್ಟು ಬೀಗ ಜಡಿದಳು. ಮನೆಯಲ್ಲಿದ್ದ ಅಂಥದ್ದೆ ಮತ್ತೊಂದು ಕತ್ತಲೆ ಗೂಡಿನಲ್ಲಿ ಅಕ್ಕಯ್ಯನಿಗೂ ಒಂದು ಹಾಸಿಗೆ ಹಾಸಿ ಕೊಟ್ಟಳು. ಗಂಡ, ಸಂಸಾರ ಇತ್ಯಾದಿ ಪದಗಳ ಅರ್ಥ ತಿಳಿಯುವ ಮೊದಲೇ ಮಾಲಕ್ಕನ ಬದುಕು ಸತ್ತು ಹೋಗಿತ್ತು. ಉಸಿರಾಡುವ ದೇಹ ಮಾತ್ರ ಉಳಿದಿತ್ತು ಎಂಬುದು ಎಲ್ಲರಿಗೂ ತಿಳಿಯಲು ಬಹಳ ದಿನ ಬೇಕಾಗಲಿಲ್ಲ.

ಗಂಡ ಸತ್ತ ಮೇಲೆ ಮನೆ, ಕೊಟ್ಟಿಗೆ ಕೆಲಸ ಹಾಸಿಗೆ ಇವಿಷ್ಟೆ ಅವಳ ಬದುಕಾಯಿತು. ನಾಲ್ಕಾರು ಜನ ಸೇರಿದ ಜಾಗದಲ್ಲಿ ಅಕ್ಕಯ್ಯ ಕಾಣಿಸಿಕೊಳ್ಳುತ್ತಿರಲಿಲ್ಲ. ಮನೆಗೆ ಯಾರಾದ್ರು ಬಂದರೆ ಮೊದ-ಮೊದಲು ಮಾತಾಡುತ್ತಿದ್ದಳು. ಅವರಿವರ ಸುದ್ದಿ ಕೇಳುತ್ತಿದ್ದಳು. ಕ್ರಮೇಣ ಅದು ಕಡಿಮೆಯಾಯಿತು. ಗೌರಿ ದನ, ಬೆಳ್ಳಿ ಎಮ್ಮೆ, ಕರಿ ಕುನ್ನಿ ಜತೆಗೆ ಮಾತಾಡಲು ಅಕ್ಕಯ್ಯ ಶುರುವಿಟ್ಟಳು. ಭಾಷೆ ಬರುವ ಮನುಷ್ಯನಿಗೇ ತನ್ನ ಮಾತು ಅರ್ಥವಾಗುತ್ತಿಲ್ಲ. ಅಂದಮೇಲೆ ಈ ಮೂಕ ಪ್ರಾಣಿಗಳಿಗೆ ಎಲ್ಲಿಂದ ಅರ್ಥವಾಗಬೇಕು ಅಂತಾ ಬಹುಶಃ ಒಂದು ದಿನ ಅಕ್ಕಯ್ಯನಿಗೆ ಅನ್ನಿಸಿರಬೇಕು. ಕೊನೆಗೆ ಆ ಪ್ರಾಣಿಗಳ ಜತೆ ಮಾತಾಡುವುದನ್ನೂ ನಿಲ್ಲಿಸಿ ಬಿಟ್ಟಳು. ತನ್ನಷ್ಟಕ್ಕೆ ತಾನೇ ಮಾತಾಡಲು, ಹಲುಬಲು ಶುರುವಿಟ್ಟಳು.

ಖಾಯಿಲೆ ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯಾ ಅನ್ನುತ್ತಾರೆ ಮಲೆನಾಡಿನಲ್ಲಿ. ಆದರೆ ಅದು ಅಕ್ಕಯ್ಯನ ವಿಚಾರದಲ್ಲಿ ಸುಳ್ಳು. ಕಳೆದ ೧೮ ವರ್ಷಗಳಿಂದ ಅಕ್ಕಯ್ಯ ಮೈಗೆ ಹುಷಾರಿಲ್ಲೆ ಎಂದು ಆಸ್ಪತ್ರೆಗೆ ಹೋಗಿದ್ದನ್ನು ಯಾರೂ ನೋಡಲಿಲ್ಲ. ನಾಲ್ಕಾರು ದಿನ ಹಾಸಿಗೆ ಹಿಡಿದು ಮಲಗಿದ್ದನ್ನು ಯಾರೂ ಕಾಣಲಿಲ್ಲ. ಬೆಳಿಗ್ಗೆ ೬.೬೦ಕ್ಕೆ ಕೊಟ್ಟಿಗೆಯಲ್ಲಿ ಸುಪ್ರಭಾತ ಕೇಳಿಲಿಲ್ಲ ಎಂದಾದರೆ, ಆವತ್ತು ಅಕ್ಕಯ್ಯನಿಗೆ ಹುಷಾರಿಲ್ಲದೇ ಇರಬಹುದು ಎಂಬುದು ನಮ್ಮ ಊಹೆಯಷ್ಟೆ. ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹುಚ್ಚರು, ಬೇಡುವವರು, ಅಕ್ಕಯ್ಯನಂಥವರಿಗೆಲ್ಲ ರೋಗಗಳೇ ಬರುವುದಿಲ್ಲವೋ ಅಥವಾ ರೋಗ ಬಂದರೂ ಕೇಳುವವರು ಯಾರು ಇಲ್ಲ ಎಂದು ನಿರ್ಧರಿಸಿ ಹೇಳಿಕೊಳ್ಳುವುದಿಲ್ಲವೋ ಗೊತ್ತಿಲ್ಲ. ಖಾಯಿಲೆ ಎಂಬುದು ಮನಸ್ಸಿಗೋ ದೇಹಕ್ಕೋ ಎಂಬ ಅನುಮಾನವನ್ನು ಹುಟ್ಟಿಸಿ ಬಿಡುತ್ತಾರೆ ಇವರೆಲ್ಲ.

ಒಂದಂತು ಸತ್ಯ. ಮನುಷ್ಯನಿಗೆ ತನ್ನೊಳಗಿದ್ದನ್ನು ಯಾರಿಗಾದ್ರೂ ಹೇಳಿಕೊಳ್ಳಬೇಕು ಅಂತಾ ತುಂಬಾ ಅನ್ನಿಸತ್ತೆ. ಯಾರೂ ತನ್ನನ್ನೂ ಕೇಳುತ್ತಿಲ್ಲ ಎಂಬ ಭಾವ, ಅವರೊಳಗಿನ ಎಲ್ಲಾ ನೋವನ್ನು ಹಿಡಿದಿಟ್ಟುಕೊಳತ್ತೆ. ಇಷ್ಟೆಲ್ಲದರ ನಡುವೆಯೂ ಅಕ್ಕಯ್ಯ ಅಪರೂಪಕ್ಕೆ ಪಕ್ಕದ ಮನೆ ಸುಮನತ್ತೆ ಜತೆ ಮಾತಾಡುತ್ತಾಳೆ. ಆವಾಗಾವಾಗ ಏನೇನೋ ಹಲುಬುತ್ತಾಳೆ. ಸುಮನತ್ತೆ ಅದೆಷ್ಟನ್ನು ಕೇಳಿಸಿಕೊಳ್ಳುತ್ತಾಳೋ, ಅದೆಷ್ಟನ್ನು ಅರ್ಥ ಮಾಡಿಕೊಳ್ಳುತ್ತಾಳೋ ಯಾರಿಗೂ ಗೊತ್ತಿಲ್ಲ. ಅಡುಗೆ ಮಾಡಲು ಬೇಜಾರು ಬಂದಾಗ ಅಕ್ಕಯ್ಯ ಚೂರು ಪಾರು ಆಸೆ(ಪದಾರ್ಥ) ಕೇಳುವುದು ಈ ಸುಮನತ್ತೆ ಬಳಿಯೇ!

ಹಾಗೆ ನೋಡಿದ್ರೆ, ಪಟೇಲರ ಮನೆ, ಹತ್ತೂರಲ್ಲಿಯೇ ಶ್ರೀಮಂತ ಕುಟುಂಬ ಎನ್ನಬಹುದು. ಪಟೇಲರ ಮಗನ ಮದ್ವೆ ಮೆರವಣಿಗೆಯನ್ನು ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ೨ ಸಾವಿರ ಜನ ಆಗಿತ್ತು. ಮದ್ವೆಗೆ ೧೦ ಲಕ್ಷ ರೂ ಖರ್ಚಾಯಿತು ಅಂತಾ ಭವಾನಮ್ಮ ಹತ್ತೂರು ಸೀಮೆ ತುಂಬಾ ದರ್ಪದಿಂದ ಡಂಗುರ ಸಾರಿಕೊಂಡು ಹೋಗಿದ್ದು ಎಲ್ಲರಿಗೂ ನೆನಪಿದೆ. ಆದ್ರೆ ಆ ಸಂಭ್ರಮದಲ್ಲೂ ಅಕ್ಕಯ್ಯ ಹಳೆ ಸೀರೆಯುಟ್ಟು ಮನೆಯೊಳಗೆ ಕುಳಿತಿದ್ದು ಯಾರ ಕಣ್ಣಿಗೂ ಬಿದ್ದಂತಿಲ್ಲ. ಬಿದ್ದರೂ ಅದು ನಮ್ಮ ಜನರಿಗೆ ಚರ್ಚೆಯ ವಿಷಯ ಅನ್ನಿಸಿದಂತಿಲ್ಲ.

ಅಕ್ಕಯ್ಯನಿಗೂ ಸಂತೋಷವಾಗಿದ್ದಿದೆ. ತಮ್ಮ ವೆಂಕಟನ ಮದ್ವೆ ಸಂಭ್ರಮದ ಕುರಿತು ಸುಮನತ್ತೆ ಬಳಿ ಕೇಳಿ ತಿಳಿದುಕೊಂಡಿದ್ದಾಳೆ. ತಾನೂ ಸಂಭ್ರಮ ಪಟ್ಟಿದ್ದಾಳೆ. ಆದ್ರೂ ಅದೆಷ್ಟು ಕರೆದರೂ ಮದ್ವೆ ಮನೆಗೆ ಬರಲು ಮಾತ್ರ ಒಪ್ಪಿರಲಿಲ್ಲ. ಗಂಗೆ ದನ, ಬೆಳ್ಳಿ ಎಮ್ಮೆಗೆ ಅಕ್ಕಚ್ಚು ಕೊಟ್ಟು, ಹುಲ್ಲು ಹಾಕಿಕೊಂಡು ಮನೆ ಕಾಯ್ದುಕೊಂಡು ಇರುತ್ತೇನೆ ಅಂದಳು. “ಅಕ್ಕ ಅದೆಲ್ಲ ದಿನ ಇರ್ತು’ ಬಾ ಎಂದ ತನ್ನ ಸಹೋದರಿಯರ ಕರೆಗೆ ಕಿವಿಗೊಡಲಿಲ್ಲ. “ಅಯ್ಯೋ ಮದ್ವೆ ಮನೆಲಿ ಎಂತಾ ನೋಡದು ಇರ‍್ತೆ? ಯಂಗೆ ನೋಡ ವಯಸ್ಸಲ” ಅಂದು ಬಿಟ್ಟಳು. ಅಕ್ಕಯ್ಯನ ಈ ಮಾತಿನ ಹಿಂದೆ, ಅವಳ ಹಳೆಯ ಬದುಕಿನ ನೆನಪುಗಳಿರಬಹುದೆ?

***

ಕರೆಯದಿದ್ದರೂ ಇನ್ನೊಮ್ಮೆ ಅವಳನ್ನು ಭೇಟಿ ಮಾಡಬೇಕು ಅಂದುಕೊಂಡವ, ಈ ಶನಿವಾರ ಸಾಯಂಕಾಲ ಮನೆಗೆ ಬರಬೇಕೆಂಬ ಅವಳ ಕರೆಯನ್ನು ನಿರಾಕರಿಸಲು ಸಾಧ್ಯವೇ ಇರಲಿಲ್ಲ! ಆರಂತಸ್ತಿನ ಅರ್ಪಾಟ್‌ಮೆಂಟ್. ಸಂಬಳಕ್ಕೆ ತಕ್ಕದಾದ ಬಂಗಲೆ ಅಂದುಕೊಳ್ಳುತ್ತಾ ಒಳ ಹೊಕ್ಕವನಿಗೆ ಮಲೆನಾಡಿನ ಆತಿಥ್ಯವೇ ದೊರೆಯಿತು. ಹುಡುಗಿಯೊಬ್ಬಳ ಸೌಂದರ್ಯ ಹೆಚ್ಚಿಸಬಹುದಾದ ಅತಿ ಮುದ್ದಾದ ನಗುವಿನೊಂದಿಗೆ ಮನೆಯೊಳಗೆ ಬರ ಮಾಡಿಕೊಂಡಳು.

ಏನ್ ಮೇಡಂ ಒಬ್ಬರಿಗೆ ಇಷ್ಟು ದೊಡ್ಡ ಮನೆಯಾ? ಸಾಫ್ಟ್‌ವೇರ್ ಮಂದಿಯ ಅರ್ಪಾಟ್‌ಮೆಂಟ್ ಕುರಿತು ಸಾಕಷ್ಟು ಕಥೆಗಳಲ್ಲಿ ಓದಿದ್ದೆ. ಈಗ ಪ್ರತ್ಯಕ್ಷವಾಗಿ ನೋಡಿದೆ!

ಹೌದು, ಅವನಿಂದ ದೂರವಾದ ಮೇಲೆ ನನಗೂ ಹಾಗೆ ಅನ್ನಿಸುತ್ತಿದೆ…
ಆಕೆ ತೀರಾ ಸ್ವಾಭಾವಿಕವಾಗಿ ಹೇಳುತ್ತಿದ್ದರೂ ನನ್ನ ಉಸಿರು ನಿಂತಂತಾಯಿತು. ಧಾರಾಕಾರ ಮಳೆಯನ್ನು ಎದುರಿಸಲಾಗದ ಗುಲಾಬಿಯ ಪಕ್ಕಗಳು ಬಿಡಿ ಬಿಡಿಯಾಗಿ ಬಿದ್ದಂತೆ, ಪ್ರೀತಿಯೆಂಬ ಕನಸಿನ, ಕಲ್ಪಿತ ಗೋಪುರವೊಂದು ಕುಸಿದು ಬಿದ್ದಿತ್ತು.

ನಾನು ಯಾವಾಗ್ಲೂ ಹೀಗೇ ನೋಡಿ. ಮನೆಗೆ ಬಂದವರಿಗೆ ಉಪಚಾರ ಮಾಡುವ ಬದಲು, ನನ್ನ ಕಥೆ ಹೇಳಿಕೊಳ್ಳಲು ಶುರುಮಾಡುತ್ತೇನೆ. ಹಾಗಾಗಿಯೇ ಇರಬೇಕು ಅಮ್ಮ ನನಗೆ ವಾಚಾಳಿ ಅಂತಾ ಬೈಯ್ಯುವುದು. ಅಂದಹಾಗೆ ಕುಡಿಯಲಿಕ್ಕೆ ಏನು ತೆಗೆದುಕೊಳ್ಳುತ್ತೀರಾ?

ಒಂದ್ ಪೆಗ್ ಬೀಯರ್…ಅಲ್ಲಲ್ಲ ನೀರು
ಸಾವರಿಸಿಕೊಳ್ಳುತ್ತಾ ಹೇಳಿದೆ.

ಸ್ವಾರಿ ನಾನು ರಂ ಮಾತ್ರ ಕುಡಿಯೋದು. ಬೀಯರ್ ಇಲ್ಲ. ಬೇಕಾದ್ರೆ ತರಿಸಿಕೊಡಬೇಕು.
ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತೀರಲ್ಲ ಮೇಡಂ?!
ಹೌದು, ಬದುಕು ಅದೊಂದನ್ನು ತುಂಬಾ ಚೆನ್ನಾಗಿ ಕಲಿಸಿಕೊಟ್ಟಿದೆ. ಬೇರೆಯವರನ್ನು ನಗಿಸಿದ್ರೂ ಒಂದರ್ಥದಲ್ಲಿ ನಮ್ಮ ನೋವು ಮರೆಯತ್ತೆ ಅಲ್ವಾ?!

ಊಟದವರೆಗೂ ಇಂಥ ಒಗಟು ಸಂಭಾಷಣೆಗಳು ನಡೆಯುತ್ತಲೆ ಇದ್ದವು. ಊಟ ರೆಡಿ ಮಾಡಿ ಪೇಪರ್ ಹಾಸಿದಳು. ಫ್ರಿಜ್ ಒಳಗೆ ಇಟ್ಟ ಎರಡು ಬಾಟಲಿಗಳನ್ನು ತಂದು ಗ್ಲಾಸ್‌ಗೆ ಒಂದಷ್ಟು ರಂ ಸುರಿದಳು.
ಗಂಟೆ ೯ ದಾಟಿದೆ. ನಾನು ಹೊರಡ್ತೀನಿ. ನೀವು ಡ್ರಿಂಕ್ಸ್ ಮುಗಿಸಿ ಊಟ ಮಾಡಿ. ನನಗೆ ಕುಡಿಯೋ ಅಭ್ಯಾಸವಿಲ್ಲ…

ನೋ…ನೋ…ನೀವು ಹೋಗೊ ಹಾಗಿಲ್ಲ. ಕುಡಿಯೋದು ಬೇಡ. ನನ್ನ ಜೊತೆ ಸುಮ್ಮನೆ ಕುಳಿತುಕೊಳ್ಳಿ. ಡೋಂಟ್ ವರಿ. ನಾನೇನು ಓವರ್ ಲೋಡ್ ಆಗಲ್ಲ. ಎರಡಲ್ಲ, ೪ ಬಾಟಲಿ ಏರಿಸಿದರೂ ಮನಸನ್ನು ಕಂಟ್ರೋಲ್‌ನಲ್ಲಿಟ್ಟುಕೊಳ್ಳುವ ಶಕ್ತಿ ನನಗಿದೆ. ಪ್ಲೀಸ್ ನಿಮ್ಮ ಹತ್ರಾ ತುಂಬಾ ಮಾತಾಡ್ಲಿಕ್ಕಿದೆ.

ತೀರಾ ಸಿನಿಮಾಗಳಲ್ಲಿ ನೋಡುತ್ತಿದ್ದ ದೃಶ್ಯ ಕಣ್ಣೆದುರಿಗೆ ನಡೆಯುತ್ತಿದೆ ಅಂದುಕೊಳ್ಳುತ್ತಾ ಮುಜುಗರದಿಂದ ಕೂತರು, ಮುಂದೇನಾಗಬಹುದೆಂಬ ಕುತುಹಲವಿತ್ತು. ೪-೫ ಸಿಪ್ ಕುಡಿದು ಮುಗಿದಿರಬೇಕು.

ನೀವು ಟೇಸ್ಟ್ ನೋಡೋದಾದ್ರೆ ನೋಡಿ. ರಂ ಹುಡುಗಿಯರಿಗಾಗಿಯೇ ಇರೋ ಡ್ರಿಂಕ್ಸ್. ಗಂಡಸರ‍್ಯಾರು ಲೈಕ್ ಮಾಡಲ್ಲ. ನೀವು ಕುಡಿತದ ವಿಚಾರದಲ್ಲಿ ಹೆಂಗಸರ ಥರ ಆಡ್ತಾ ಇದ್ದಿರಿ. ಸೋ ಒಂದ್ಸಲ ಟೇಸ್ಟ್ ನೋಡಿ…

ಅದರಲ್ಲಿ ಅಂಥದ್ದು ಏನಿರಬಹುದು ಎಂಬ ಕುತುಹಲವಿತ್ತು. ಆದ್ರೂ ಅವಳಾಗಿಯೇ ಆಹ್ವಾನ ನೀಡಲಿ ಎಂದು ಕಾಯುತ್ತಿದೆ.
ನಂದು ಲವ್ ಮ್ಯಾರೇಜ್. ವಿಕ್ರಮ್ ಅಂತಾ ನನ್ನ ಕಲೀಗ್‌ಗಾಗಿದ್ದ. ಮದ್ವೆಗೆ ಮುಂಚೆ ತುಂಬಾ ಚೆನ್ನಾಗಿಯೇ ಇದ್ದ…

೨ ಸಿಪ್ ಏರಿಸಿದ ನನಗೆ ನಿಜಕ್ಕೂ ತಲೆ ಗಿರ್ ಅನ್ನುತ್ತಿತ್ತೊ ಅಥವಾ ಕುಡಿದರೆ ತಲೆ ಗಿರ್ ಅನ್ನುತ್ತೆ ಅನ್ನೋ ಸ್ನೇಹಿತರ ಮಾತು ಕೇಳಿ ನಾನಾಗಿಯೇ ತಲೆ ಗಿರ್ ಅನ್ನಿಸಿಕೊಂಡಿದ್ದೆನೊ ಗೊತ್ತಿಲ್ಲ. ಒಟ್ಟಲ್ಲಿ ಕಣ್ಣೆದುರಿಗಿನ ಲೋಕವೆಲ್ಲ ತೇಲಿದಂತೆ ಭಾಸವಾಗುತ್ತಿತ್ತು!

ಐದೇ ನಿಮಿಷಕ್ಕೆ ಸರಿಯಾದೆ. ನಾನು ಮಾತು ಮುಗಿಸುವವರೆಗೂ ಕುಡಿಯಬೇಡಿ ಅಂತಾ ಆಜ್ಞೆ ನೀಡಿ ಮುಂದುವರಿಸಿದಳು.

ಅವನ ಕುಡಿತ, ಬೈಗುಳ ಎಲ್ಲಾ ಸಹಿಸಿಕೊಂಡಿದ್ದೆ. ಈ ಮದ್ವೆ, ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಆದ್ರೂ ಹಠ ಮಾಡಿ ಗಂಟು ಹಾಕಿಕೊಂಡಿದ್ದೆ. ಹಾಗಾಗಿ ಏನು ಬಂದರೂ ಎದುರಿಸಬೇಕು. ಸಮಾಜದಲ್ಲಿ ತಲೆ ತಗ್ಗಿಸುವ ಹಾಗಾಗಬಾರದು ಎಂಬ ಭಾವನೆಯಲ್ಲಿ ನಾಲ್ಕಾರು ತಿಂಗಳು ದೂಡಿದೆ. ಇವತ್ತು ಸರಿ ಹೋಗಬಹುದು, ನಾಳೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅನೇಕ ರಾತ್ರಿ ಕಳೆದೆ. ಆವತ್ತು ಆ ಹಡ್ಬೆಯನ್ನು ಹಾಸಿಗೆಗೆ ಕರೆ ತಂದಾಗ ರೇಗಿ ಹೋಯಿತು. ಲೋ ರ‍್ಯಾಸ್ಕಲ್, ಮದ್ವೆಗೆ ಮುಂಚೇನೆ ನಿಂಗೆ ಬೇಕಾದ ಸುಖವನ್ನೆಲ್ಲ ಕೊಟ್ಟಿದ್ನಲ್ಲೊ. ಅದ್ಕೆ ಇವತ್ತು ಸರಿಯಾದ ಪ್ರತಿಫಲ ಕೊಟ್ಟೆ ಬಿಡು ಅಂತಾ ರಾತ್ರಿಯಿಡಿ ಅತ್ತುಬಿಟ್ಟೆ. ಅಳು ನನ್ನನ್ನು ಬಿಟ್ಟು ಮತ್ತೆ ಯಾರಿಗೂ ಕೇಳಿಸಲಿಲ್ಲ. ಮರು ದಿನವೇ ಅಲ್ಲಿಂದ ಹೊರಟು ಬಂದೆ. ಡೈವರ್ಸ್ ಕೊಡು. ನಿನಗೆ ಕೊಡಬೇಕಾದ ಪರಿಹಾರ ಬಿಸಾಡುತ್ತೇನೆ ಅಂದ. ನಾನೇನು ಸೂಳೆಯಲ್ಲ ನಿನಗೆ ಸಾಕು ಅನ್ನಿಸಿದಾಗ ಪರಿಹಾರ ಪಡೆದು ಹೋಗಲು ಅಂತಾ ಹೇಳಿ ಬಂದವಳು ಮತ್ತೆ ಮುಖ ತೋರಿಸಲಿಲ್ಲ. ಇವತ್ತಿಗೆ ೪ ವರ್ಷ ಕಳೆಯಿತು.
ಒಂದು ಪೆಗ್‌ನ್ನು ಗಟ ಗಟನೆ ಕುಡಿದು ಅಳು ಶುರುವಿಟ್ಟಳು. ಸುಮಾರು ೨೦ ನಿಮಿಷ ಅತ್ತಿರಬೇಕು.

***

ಶ್ರಾವಣಿ ಪರಿಚಯವಾಗಿ ಒಂದು ವರ್ಷ ಕಳೆದಿತ್ತು. ಆವತ್ತು ರಾತ್ರಿ ೯.೩೦ರ ಸಮಯ. ಅಮ್ಮನ ಕರೆ. ಕುಡಿಯುತ್ತಾ ಕುಳಿತವನಿಗೆ ಅಮ್ಮನ ಕರೆ ರೀಸಿವ್ ಮಾಡಲು ಅದ್ಯಾಕೊ ಪಾಪ ಬೀತಿ ಕಾಡುತ್ತಿತ್ತು. ಮತ್ತೆ, ಮತ್ತೆ ರಿಂಗ್ ಆಗುವುದನ್ನು ನೋಡಲು ಆಗಲಿಲ್ಲ. ಫೋನ್ ತೆಗೆದೆ. “ಅಕ್ಕಯ್ಯ ಸತ್ತು ಹೋದ. ಪಾಪ ಹೆಣದ ಮೇಲೆ ಕೊಳ್ಳಿ ಇಡಕು ಮಕ್ಕಳು ಮರಿ ಯಾರೂ ಇಲ್ಲೆ. ಕಡಿಗೆ ಎಂಕ್ಟೇಶನೆ(ಅಕ್ಕಯ್ಯನ ತಮ್ಮ)ಕರ್ಮ ಹಿಡಿದ” ಅಮ್ಮ ಗೊಣಗುತ್ತಿದ್ದರೆ ತಲೆ ಗಿರ್ ಅನ್ನುತ್ತಿತ್ತು.

ತಕ್ಷಣ ಶ್ರಾವಣಿಗೆ ಕಾಲ್ ಮಾಡಿದೆ. “ಡೀಯರ್ ಇವತ್ತು ಗುರುವಾರ ಅಲ್ವೆನೊ. ಸೋ ಆಫೀಸ್‌ನಲ್ಲೆ ಇದೀನಿ. ಅಮೆರಿಕದ ಕ್ಲೈಂಟು ತಲೆ ತಿಂತಾ ಇದಾರೆ. ಆಮೇಲೆ ನಾನೇ ಮಾಡ್ತೀನಿ. ಬಾಯ್. ಟೇಕ್ ಕೇರ್” ಕಟ್ ಮಾಡಿದಳು.

ಉಳಿದಿದ್ದ ಅರ್ಧ ಸಿಪ್ ಬೀಯರ್‌ನ್ನು ಗಟ-ಗಟನೆ ಕುಡಿದು ಮುಗಿಸಿದೆ. ಮಹಾನಗರಿಯ ನಾನಾ ಅರ್ಪಾಟ್‌ಮೆಂಟ್‌ಗಳ ಭವ್ಯ ಬಂಗಲೆಯೊಳಗಿರಬಹುದಾದ ಅಕ್ಕಯ್ಯನಂಥ ಅನೇಕರತ್ತ ಮನಸು ಹೊರಳಿತು. ಶ್ರಾವಣಿಯ ಮುಂದಿನ ಬದುಕಿನ ದಿನಗಳನ್ನು ಕಲ್ಪಿಸಿಕೊಂಡು ಸಣ್ಣಗೆ ಭಯ ಉಂಟಾಯಿತು. ಫೋನು, ಬೀಯರ್, ಆಫೀಸುಗಳ ಜತೆಗೆ ಬೆಳ್ಳಿ ಎಮ್ಮೆ, ಗೌರಿ ದನ, ಅಕ್ಕಯ್ಯನ ಮಾತು ಎಲ್ಲವೂ ನೆನಪಾಗಿ ಕಣ್ಣಲ್ಲಿ ೨ ಹನಿ ನೀರು ಜಿನುಗಿತು.

(ಈ ಕಥೆಯಲ್ಲಿ ಸಿಕ್ಕಾಪಟ್ಟೆ ಅಕ್ಷರದೋಷಗಳಿವೆ. ತಿದ್ದಲು ಪ್ರಯತ್ನಪಟ್ಟು ಸುಸ್ತಾದೆ.  ಕಥೆಯನ್ನು ಓದಿ ಕುಡಿತದ ಕುರಿತ ಅನೇಕ ತಾಂತ್ರಿಕ  ದೋಷಗಳನ್ನು ತಿದ್ದಿಕೊಟ್ಟ ಗೆಳೆಯರಿಗೆ ಧನ್ಯವಾದಗಳು. ಇನ್ಮೇಲೆ ಕಥೆ ಬರೆಯಲಿಕ್ಕಾದ್ರು ಕುಡಿಯಬೇಕಪ್ಪೊ!!!)

Read Full Post »

ಅಂತಿಮ  ಕ್ಷಣದವರೆಗಿನ ಕುತೂಹಲಗಳು ಯಾವತ್ತೂ ಚೆಂದ. ಇಲ್ಲವಾದರೆ ಅದೊಂಥರ ಒನ್ ಸೈಡ್  ಮ್ಯಾಚ್‌ನಂತಾಗುತ್ತದೆ. ನನ್ನ ಪಾಲಿಗೆ ಮೊದಲ ಪುಸ್ತಕದ ಹೆರಿಗೆ ಅಕ್ಷರಶಃ ರೋಮಾಂಚನ ಪಂದ್ಯವಾಗಿತ್ತು. ಕಾರ್ಯಕ್ರಮದ ಹಿಂದಿನ ದಿನದ ಸಂಜೆವರೆಗೂ ಪುಸ್ತಕ ಬಿಡುಗಡೆಯಾಗತ್ತೊ, ಇಲ್ಲವೊ ಎಂಬ ಅನುಮಾನವಿತ್ತು! ಪುಸ್ತಕ ಬಿಡುಗಡೆಯಾಗುವುದು ನಿಕ್ಕಿ ಎಂದು ಶನಿವಾರ ಸಂಜೆ ೭ ಗಂಟೆಗೆ ತೀರ್ಮಾನವಾಗಿ, ಭಾನುವಾರ ಬೆಳಿಗ್ಗೆ ೧೧.೧೫ಕ್ಕೆ ಪುಸ್ತಕವೂ ಹೊರಬಂತು. ಒಂದೆಡೆ ಕಾರ್ಯಕ್ರಮಕ್ಕೆ ಬಂದವರನ್ನು ಕಂಡು ಖುಷಿಯಾದರೆ, ಇನ್ನೊಂದೆಡೆ ಕಾರ್ಯಕ್ರಮಕ್ಕೆ ಬಂದೇ ಬರ್ತೀವಿ ಅಂದವರೆಲ್ಲ ಕಾಣುತ್ತಿಲ್ಲವಲ್ಲ ಎಂಬ ಬೇಸರ.

‘ನನ್ನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಗಿಂತ ಅತಿಥಿಗಳೇ ಬೇಗ ಬರ್ತಾರೆ’ ಎಂಬ ಪ್ರಕಾಶಕರಾದ ಗೌರಿ ಸುಂದರ್ ಮಾತು ನಿಜವಾಗಿತ್ತು. ಜಿ.ವೆಂಕಟಸುಬ್ಬಯ್ಯ, ಎನ್.ಎಸ್ ಲಕ್ಷಿನಾರಾಯಣ ಭಟ್ಟರು, ಎಚ್.ಎಸ್ ದೊರೆಸ್ವಾಮಿ ಎಲ್ಲರಿಗಿಂತ ಮೊದಲು ಬಂದವರು. ಹಾಗಾಗಿ ಅವರೊಂದಿಗೆ ಸುಮಾರಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿತು. ಇವರೆಲ್ಲರ ಕುರಿತು ಕೇಳಿದ್ದೆ ಹೊರತು, ಹತ್ತಿರದಿಂದ ಮಾತನಾಡಿರಲಿಲ್ಲ. ವೆಂಕಟಸುಬ್ಬಯ್ಯನವರಂತೂ ತೀರಾ ಆಪ್ತರಂತೆ ಹೆಗಲ ಮೇಲೆ ಕೈಯಿಟ್ಟು ಮಾತಾಡಿಸಿದರು ವಯಸ್ಸು, ಪಾಂಡಿತ್ಯಗಳ ಅರಿವಿಲ್ಲದೆ. ನಿಂಘಟು ತಜ್ಞ, ಹಿರಿಯ ಸಾಹಿತಿಯೊಬ್ಬರೊಂದಿಗೆ ಮಾತಾಡುತ್ತಿದ್ದೇನೆ ಎಂಬ ಪರಿವೂ ನನಗೂ ಇರಲಿಲ್ಲ. ನನ್ನ ಪಾಲಿಗೆ ಇದೊಂದು ವಿಸ್ಮಯ ಕ್ಷಣ.

ಕಾರ್ಯಕ್ರಮದ ಕುರಿತು ತೀರಾ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ . ವಸುಧೇಂದ್ರ, ಲಕ್ಷ್ಮಿನಾರಾಯಣ್ ಭಟ್, ಸಿ.ಎನ್ ರಾಮಚಂದ್ರನ್, ವಿಜಯಾ ಸುಬ್ಬುರಾಜ್ ವೇದಿಕೆಯಲ್ಲಿದ್ದರು ಮತ್ತು ಮಾತನಾಡಿದರು. ಪುಸ್ತಕಕ್ಕೆ ಚೆಂದದ ಮುಖಪುಟ ರಚಿಸಿ ಕೊಟ್ಟ ಎಂ.ಡಿ ಮಂಜುನಾಥ್, ಚಿತ್ರ ಬಿಡಿಸಿಕೊಟ್ಟ ರಾಜೇಶ್ ಪುಜಾರ್ ಇಬ್ಬರೂ ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲಿಲ್ಲ. ಮುನ್ನುಡಿ ಬರೆದುಕೊಟ್ಟ ನಾಗೇಶ್ ಹೆಗಡೆ ಬಿಡುಗಡೆಗೆ ಬರಲಾರೆ ಎಂದು ಮೊದಲೇ ಹೇಳಿದ್ದರು. ಪುಸ್ತಕ ಬರೆಯುವದರಲ್ಲಿ ನನ್ನ ಶ್ರಮವಿದೆ ನಿಜ. ಆದರೆ ಪುಸ್ತಕ ಮುದ್ರಣಗೊಳ್ಳುವುದರ ಹಿಂದೆ ಈ ಗೆಳೆಯರ ಶ್ರಮವೂ ಇದೆ. ಹಾಗಾಗಿ ಇವರಿಗೆ ಧನ್ಯವಾದ ಹೇಳಲೇ ಬೇಕು.

ಯಾರಿಗೂ ವೈಯಕ್ತಿಕವಾಗಿ ಸಂಪರ್ಕಿಸಿ, ಕರೆ ಮಾಡಿ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಬ್ಲಾಗ್, ಮೇಲ್‌ಗಳನ್ನು ನೋಡಿ ಅನೇಕ ಗೆಳೆಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಎಲ್ಲರಿಗೂ ಥ್ಯಾಂಕ್ಸು. ಇನ್ನು ಅನೇಕರು ಕುಳಿತ ಜಾಗದಿಂದಲೇ ಶುಭ ಹಾರೈಸಿದ್ದಾರೆ. ಖಂಡಿತ ಅವರ ಶುಭ ಹಾರೈಕೆಗಳಿಗೂ ಕೃತಜ್ಞ. ನನಗೆ ಯಾವ ಜವಬ್ದಾರಿಯನ್ನೂ ನೀಡದೆ, ಎಲ್ಲವನ್ನೂ ನಿರ್ವಹಿಸಿದ ಸುಂದರ ಹಾಗೂ ಕಣ್ವ ಪ್ರಕಾಶನದ ಎಲ್ಲ ಗೆಳೆಯರಿಗೂ ಥ್ಯಾಂಕ್ ಹೇಳಬೇಕು. ಕಾರ್ಯಕ್ರಮದ ಕುರಿತು ಎಲ್ಲ ಕಡೆ ಪ್ರಚಾರ ನೀಡಿದ ಗೆಳೆಯ ಸುಶ್ರುತ, ವಿಕಾಸ್, ನಿಧಿ, ಅವಧಿ ಎಲ್ಲರಿಗೂ ಧನ್ಯವಾದಗಳು. ಅಂದಹಾಗೆ ಅನೇಕರು ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ. ನವ ಕರ್ನಾಟಕ ಮತ್ತು ಅಂಕಿತದಲ್ಲಿ ಲಭ್ಯವಿದೆಯಂತೆ.

Read Full Post »