Archive for ಏಪ್ರಿಲ್, 2008
ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ…?!
Posted in ಚಿಂತನ ಚಾವಡಿ on ಏಪ್ರಿಲ್ 27, 2008| 3 Comments »
ಮಹಿಳಾ ಮೀಸಲಾತಿ ಇನ್ನೂ ಅನಿವಾರ್ಯವೇ? ಹೀಗೊಂದು ಪ್ರಶ್ನೆ ನನ್ನ ತಲೆಯಲ್ಲಿ ಗಿರಕಿ ಹೊಡೆಯಲು ಪ್ರಾರಂಭಿಸಿದ್ದು ಮೊನ್ನೆ ಬಸಲ್ಲಿ ಕುಳಿತಿದ್ದ ನನ್ನನ್ನು ಇದು ಲೇಡೀಸ್ ಸೀಟು ಸಾರ್ ಎಂದು ಮಹಿಳೆಯೊಬ್ಬಳು ಎಬ್ಬಿಸಿದ ನಂತರ!ಥಟ್ಟನೆ ಅಕ್ಕ ಗುನುಗುತ್ತಿದ್ದ ಮಹಿಳೆಗೆ ಎಷ್ಟೇ ಮೀಸಲಾತಿ ಕೊಟ್ಟರೂ ಅತ್ತೆ ಮನೆಯಲ್ಲಿ ದಬ್ಬಳಿಕೆ ಸಹಿಸಿಕೊಂಡು ಇರುವ ಮಹಿಳೆಗೆ ಆ ಸಂಕೋಲೆಯಿಂದ ಹೊರಬಂದು ಮೀಸಲಾತಿ ಉಪಯೋಗಿಸಿಕೊಳ್ಳುವುದು ತುಂಬಾನೇ ಕಷ್ಟ ಅನ್ನೋ ಡೈಲಾಗ್ ನೆನಪಾಯಿತು!ಅತ್ತೆ ಮನೆಯಲ್ಲಿ ಸಂಕಷ್ಟ ಇರೋ ಮಹಿಳೆಗೆ ಮೀಸಲಾತಿ ಉಪಯೋಗ ಆಗೋದು ಬಸ್ಸಿನ ಸೀಟಲ್ಲಿ ಮಾತ್ರ ಅನ್ನಿಸಿತು!
ಈ ಬೆಂಗಳೂರು ಹೀಗಾದ್ರೆ ಹೇಗೆ…?!
Posted in ಚಿಂತನ ಚಾವಡಿ on ಏಪ್ರಿಲ್ 18, 2008| 1 Comment »
ಮೊನ್ನೆಮೊನ್ನೆವರೆಗೆ ೧ರೂ ಇದ್ದ ಲಿಂಬೆಹಣ್ಣು ಇವತ್ತು ೩ರೂ ಆಗಿದೆ ಸಾರ್. ಅಕ್ಕಿಯಂತೂ ಮಾತನಾಡಿಸುವ ಹಾಗೇ ಇಲ್ಲ. ಅದಕ್ಕೆ ಈಗ ನಮ್ಮ ಲ್ಯಾಂಡ್ರಿಯಲ್ಲೂ ಬೆಲೆ ಏರಿಕೆ! ಹಾಗಂದವ ಲ್ಯಾಂಡ್ರಿಯೊಳಗಿನ ಅಗಸ. ಇವತ್ತು ಬಟ್ಟೆ ತೊಳೆಯಲಾರೆ ಅನ್ನಿಸಿದಾಗ, ಬಟ್ಟೆಯಲ್ಲಿ ನನ್ನಿಂದ ತೆಗೆಯಲಾಗದಷ್ಟು ಕಲೆಯಿದೆ ಅಂತಾ ಗೊತ್ತಾದಾಗ ನಾನು ಬಟ್ಟೆ ಲ್ಯಾಂಡ್ರಿಗೆ ಕೊಡೋದು. ಈಗ ಎರಡು ತಿಂಗಳಾಗಿತ್ತು ಲ್ಯಾಂಡ್ರಿ ಕಡೆ ಹೋಗದೆ ಅದ್ಯಾಕೋ ಇವತ್ತು ಹೋದ್ರೆ ರೇಟು ಒಂದು ಪ್ಯಾಂಟಿಗೆ ೨೦ರೂ ಆಗಿದೆ! ಅಲ್ಲಯ್ಯಾ ಇನ್ನೊಂದು ೪೦ರೂ ಇದಕ್ಕೆ ಸೇರಿಸಿದರೆ ಯೂಸ್ ಅಂಡ್ ಥ್ರೋ ಪ್ಯಾಂಟ್ ಬರತ್ತಲ್ಲಾ ಅಂತಾ ಅವನ ಹತ್ರಾ ಜಗಳ ಹೊಡೆದಿದ್ದಕ್ಕೆ ಅಂವ ಲಿಂಬೆ ಹಣ್ಣು, ಅಕ್ಕಿ ಕಥೆ ಹೇಳಿದ!ಒಂದು ಬಟ್ಟೆ ವಾಷ್ ಮಾಡಲು ಆತನಿಗೆ ತಗುಲುವ ಖರ್ಚು ಅಬ್ಬಬ್ಬಾ ಅಂದ್ರೆ ೪ರೂ. ಇನ್ನೂ ಇದು ಬೆಂಗಳೂರು ಇಲ್ಲಿ ಎಲ್ಲವೂ ಕಾಸ್ಟ್ಲಿ ಅಂತಾನೇ ಭಾವಿಸಿದರು ಆರಾಮವಾಗಿ ೬ರೂಗೆ ಅವ ಒಂದು ಬಟ್ಟೆ ಒಗೆದು ಕೊಡಬಹುದು. ಅಷ್ಟು ಕೆಲಸಕ್ಕೆ ಅವ ೨೦ರೂ ಅಂತಾನೇ ಅಂದ್ರೆ? ಅವ ಅಂತಾನೇ ಅಂದ್ರೆ ಅನ್ನೋದು ಸಮಸ್ಯೆಯೆ ಅಲ್ಲ. ಅವ ಹೇಳಿದನ್ನೇ ಕೊಟ್ಟು ನಾವು ಬಟ್ಟೆ ಒಗೆಸಿಕೊಂಡು ಬರ್ತಿವಲ್ವಾ? ಹಾಗಾಗಿಯೇ ಇವತ್ತು ಎಲ್ಲದರ ಬೆಲೆಯೂ ಏರಿಕೆ ಆಗ್ತಾ ಇರೋದು.
ಬೆಲೆ ಏರಿಕೆ ಅನ್ನೋ ಪದಕ್ಕೆ ಒಂದು ಲೆಕ್ಕಾಚಾರವೇ ಇಲ್ಲದಂತಾಗಿದೆ ಇವತ್ತು. ಬೆಂಗಳೂರು ಹೊಟೆಲ್‌ಗಳಲ್ಲಿ ರೈಸ್‌ಸೂಪ್ ಅಂತಾ ಒಂದು ಐಟಂ ಸಿಗತ್ತೆ. ಅದಕ್ಕೆ ಬೆಲೆ ಎಷ್ಟು ಗೊತ್ತಾ? ಬರೊಬ್ಬರಿ ೨೫ರೂ! ಅಂದಹಾಗೆ ಈ ರೈಸ್‌ಸೂಪ್ ಅಂದ್ರೆ ಏನು ಗೊತ್ತಾ? ಅಪ್ಪಟ ಅನ್ನದ ತಿಳಿ! ಅದಕ್ಕೆ ಅದೇನೋ ಕಲರ್ ಪೌಡರು, ಹಚ್ಚಹಸಿರಾದ ಒಂದಿಷ್ಟು ತರಕಾರಿ ಹಾಕಿ ಕೊಡ್ತಾರೆ. ಅಲ್ಲಾರೀ ೧೮ರೂಗೆ ಒಂದು ಕಿಲೋ ಅಕ್ಕಿ ಬರತ್ತೆ ಅಂತಹದ್ದರಲ್ಲಿ ಅನ್ನದ ತಿಳಿಗೆ ೨೫ ಅಂದ್ರೆ..ರೀ ಸ್ವಾಮಿ ಬೇಕಾದ್ರೆ ಕುಡಿರಿ ಬೇಡದೇ ಹೋದ್ರೆ ಎದ್ದು ಹೋಗಿ ಅಂತಾನೇ ಹೋಟೆಲ್‌ನವ. ಈ ಬೆಂಗಳೂರು ಸಾಪ್ಟ್‌ವೇರ್ ಮಂದಿ ಕುರಿಗಳ ತರ ತಲೆಯಾಡಿಸಿ ಅದನ್ನೆ ಕುಡಿದುಕೊಂಡು ಬರುತ್ತವೆ. ಅವು ಏನಾದ್ರು ಕುಡಿದುಕೊಂಡು ಬಂದು ಸಾಯಲಿ ಯಾಕಂದ್ರೆ ಅವು ಕುಡಿಯೋದು ಅವರು ದುಡಿದ ದುಡ್ಡಿನಲ್ಲೇ ಹೊರತು ನಮ್ಮ ಅಪ್ಪನ ಮನೆ ಗಂಟಲ್ಲೇನು ಅಲ್ಲ ಅನ್ನಬಹುದು. ಆದ್ರೆ ೧೦೦ಕ್ಕೆ ೯ ಮಂದಿ ಇರೋ ಇವು ಮಾಡಿಬರೋ ಈ ಕೆಲಸದಿಂದ ಇನ್ನುಳಿದ ೯೧ಮಂದಿ ಮಧ್ಯಮ ವರ್ಗದವರು ಕಷ್ಟ ಅನುಭವಿಸಬೇಕಲ್ಲ ಅನ್ನೋದು ನೋವಿನ ಸಂಗತಿ.
ಹೌದು ಬೆಲೆ ಏರಿಕೆಗೆ ಕಾರಣ ನಾವೇ. ಎಷ್ಟಂದ್ರೂ ಬೆಂಗಳೂರು ಪುರುಸೊತ್ತು ಇಲ್ಲದ ನಾಡು ಅಂತಾ ಫೇಮಸ್ ಆಗಿಬಿಟ್ಟಿದೆ! ಹಾಗಾಗಿ ಅಗಸ ಎಷ್ಟು ಹೇಳಿದರೂ ಕೊಟ್ಟು ಬಟ್ಟೆ ತೊಳೆಸಿಕೊಂಡು ಬರುತ್ತೀವಿ. ಹೋಟೆಲ್‌ನವ ಎಷ್ಟು ಬೆಲೆಗೆ ಏನೂ ಕೊಟ್ಟರೂ ತಿಂದು ಬರುತ್ತೀವಿ. ತಕರಾರು ಮಾಡ್ಲಿಕ್ಕೂ ನಮಗೆ ಪುರುಸೊತ್ತು ಇಲ್ಲ. ನಾವು ಮಾಡಿದರೂ ಅವರು ಕೇಳೋದು ಇಲ್ಲ! ಇನ್ನೂ ನಮ್ಮ ಬಟ್ಟೆ ನಾವು ಒಗೆದುಕೊಂಡರೆ ನಮ್ಮನ್ನು ನಾವು ಡೀಗ್ರೇಡ್ ಮಾಡಿಕೊಂಡತೆ ಅಂತಾ ಭಾವಿಸುವ ಮಂದಿಯೂ ಇದ್ದಾರೆ!
ನಮಗೆನೋ ತಿಂಗಳ ಕೊನೆಗೆ ಗಂಟೆ ಭಾರಿಸಿದ ಹಾಗೇ ಸ್ಯಾಲರಿ ಬರತ್ತೆ. ಆದ್ರೆ ಕೂಲಿಯವರಿಗೆ, ಹಮಾಲಿಗಳಿಗೆ, ಕೆಳವರ್ಗದ ಜನತೆಗೆ ಕೆಲಸ ಸಿಕ್ಕಿದರೆ ಮಾತ್ರ ಕಾಸು. ಆವತ್ತು ದುಡಿದು ಆವತ್ತೆ ಉಣ್ಣೋದು ಅನ್ನುವ ಬದುಕು ಅವರದ್ದು. ಹೀಗೆ ಬೆಲೆ ಏರಿಕೆಯಾದರೆ ಅವರ ಗತಿಯೇನಾಗಬಹುದು. ಅವರದ್ದು ಸಂಬಳ ಹೆಚ್ಚಾಗತ್ತೆ! ಅನ್ನೋದು ನಂತರದ ಮಾತು. ನಮ್ಮ ಜನರ ಮಜ ಅದೇ ಗಾಡಿಯಲ್ಲಿ ತರಕಾರಿಮಾರಲು ಬರುವವನ ಬಳಿ, ಕೂಲಿಗೆ ಕೆಲಸಕ್ಕೆ ಬರುವವನ ಬಳಿ ವ್ಯವಹಾರದಲ್ಲಿ ಚೌಕಾಸಿ ಮಾಡುತ್ತೇವೆ! ಅದೇ ಮಾಲ್‌ಗಳಿಗೋ, ಬಜಾರ್ಗಳಿಗೋ ಹೋದರೆ? ಛೇ ಅಲ್ಲೆಲ್ಲಾ ಚೌಕಾಸಿ ಮಾಡಿದರೆ ನಮ್ಮ ಪ್ರಿಸ್ಟೇಜ್ ಹಾಳಾಗಿಬಿಡತ್ತೆ. ಅದು ಅಲ್ಲದೇ ಅವೆಲ್ಲಾ ಇರೋದು ಚೌಕಾಸಿ ಮಾಡದ ಜನರಿಗಾಗಿಯೇ ಅಂದುಬಿಡುತ್ತೇವೆ! ಆ ಮಾರ್ವಾಡಿ ಅಷ್ಟು ದೊಡ್ಡ ಏಸಿ ಮಾಲ್ ಕಟ್ಟಿದ್ದು ನಮ್ಮಂಥ ಬಕ್ರಾಗಳಿಂದಾನೇ ಅನ್ನೋದು ಕೊನೆಯವರೆಗೂ ನಮಗೆ ಅರ್ಥವೇ ಆಗೋದಿಲ್ಲ!
ಆದ್ರೂ ಈ ಬೆಲೆ ಏರಿಕೆಗೆ ಒಂದು ಕಡಿವಾಣ ಹಾಕೋದು ಇವತ್ತು ಅನಿವಾರ್ಯವಾಗಿದೆ. ಆ ದಿಸೆಯಲ್ಲಿ ನಾವೇನು ಮಾಡಬಹುದು ಅನ್ನೋದನ್ನ ನೀವೆ ಚಿಂತಿಸಿ. ಬಟ್ಟೆಯಲ್ಲಿ ನನ್ನ ಕೈಯಿಂದ ತೆಗೆಯಲಾಗದ ಕಲೆಯಾಗಿತ್ತು ಹಾಗಾಗಿ ನಾನು ಇವತ್ತು ಅರ್ದದಿನ ಹಾಳುಮಾಡಿಕೊಂಡು ೧೦ರೂಗೆ ಪ್ಯಾಂಟ್ ತೊಳೆದುಕೊಡುವವನನ್ನು ಹುಡುಕಿ ನನ್ನ ಬಟ್ಟೆ ವಾಷ್‌ಗೆ ಕೊಟ್ಟು ಬಂದೆ.
ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ…..
Posted in ಕ್ರಿಯೇಟಿವ್ ಪೇಜ್ on ಏಪ್ರಿಲ್ 11, 2008| 2 Comments »
ಹಾಯ್ ಅವಾಂತರೇಶ,
ಅಪ್ಪಾ, ಅಮ್ಮ ನನ್ನನ್ನು ಸುಳಿದು ಬಿಟ್ಟು ವರ್ಷಗಳೇ ಕಳೆದಿವೆ. ಇನ್ನೂ ನನ್ನ ಪಾಲಿಗೆ ಉಳಿದಿರುವವನು ನೀನೊಬ್ಬನೇ. ನೀನೆ ನನ್ನನ್ನು ಆ ಪರಿ ಬೈಯ್ಯುತ್ತಿರುವಾಗ ನಾನು ಬದುಕಿಯೂ ಅರ್ಥವಿಲ್ಲ ಅಂತಾ ನಿನ್ನ ಕಾಗದದ ಓದಿದ ಮೇಲೆ ನಾನು ನಿರ್ಧಾರ ಮಾಡಿದೆ. ಆ ಕುರಿತು ಸುದೀರ್ಘವಾಗಿ ಚಿಂತಿಸಿದೆ. ನಿನ್ನ ಬಿಟ್ಟು ನಾನು ಬದುಕಬಹುದಾ? ಅಂತಾ ಆಲೋಚಿಸಿದೆ. ಆಮೇಲೆ ಅಂತಿಮವಾಗಿ ಸಾಯಲೇ ಬೇಕು ಅಂತಾ ತುಂಗೆಯ ತೀರಕ್ಕೆ ಹೋದೆ. ಈ ಹಾಳು ಬಿಸಿಲಿಗೆ ತುಂಗೆ ಬತ್ತಿ ಬರಡಾಗಿದ್ದಳು. ತುಂಗೆಯ ಒಡಲಲ್ಲಿ ನೀರೆ ಇರಲಿಲ್ಲ. ಆದ್ರೂ ನಾನು ತುಂಗೆಗೆ ಹಾರಿಯೇ ಸಾಯೋದು ಅಂತಾ ನಿನ್ನ ಪತ್ರ ಓದಿದ ಮರುಕ್ಷಣವೇ ನಿರ್ಧರಿಸಿ ಆಗಿತ್ತು. ಹಾಗಾಗಿ ನೀರಿಲ್ಲದ ನದಿಗೆ ಕಣ್ಣು ಮುಚ್ಚಿ ಹಾರಿಯೇ ಬಿಟ್ಟೆ ಮಾರಾಯ!
ಮತ್ತೆ ನೀನಿನ್ನು ಸಾಯಲಿಲ್ಲವಾ ಅಂತಾ ನನ್ನನ್ನು ಶಪಿಸುತ್ತಾ ನಿನ್ನಷ್ಟಕ್ಕೆ ನೀನೆ ಗೊಣಗಿಕೊಳ್ಳುತ್ತಿರುತ್ತೀಯಾ ಅಂತಾ ನಂಗೆ ಗೊತ್ತು ಕಣೋ ಚಿನ್ನುಮರಿ! ಆಮೇಲಿನ ಕಥೆ ಹೇಳ್ತಿನಿ ಕೇಳು. ನಾನು ಕಣ್ಣುಮುಚ್ಚಿ ತುಂಗೆಗೆ ಹಾರಿದ್ನಾ, ಅಯ್ಯೋ ಎಂತ ಮರುಳಿ ನಾನು ಯಕಶ್ಚಿತ ಹುಡುಗನೊಬ್ಬ ಬೈದ ಅಂತಾ ನನ್ನ ಬದುಕನ್ನ ಬಲಿಕೊಡ್ತಾ ಇದೀನಲ್ಲಾ ಅಂತಾ ಅನ್ನಿಸತೊಡಗಿತು ನಂಗೆ. ಆದ್ರೆ ಪ್ರಯೋಜನ ಏನು ಹೇಳು? ಅಷ್ಟೊತ್ತಿಗಾಗಲೇ ನಾನು ನದಿಗೆ ಜಿಗಿದು ಆಗಿತು. ನನ್ನ ಪುಣ್ಯವೋ ನಿನ್ನ ಪಾಪವೋ ಗೊತ್ತಿಲ್ಲ ತುಂಗೆ ನನ್ನ ಜೀವವನ್ನು ತೆಗೆದುಕೊಳ್ಳಲು ಬಿಲ್‌ಕುಲ್ ಒಪ್ಪಲಿಲ್ಲ! ನದಿಗೆ ಹಾರಿದ್ದು ಅನ್ನೋದು ನಂಗೊಂದುಸಾರಿ ಈಜುಕೊಳಕ್ಕೆ ಹಾರಿದ ಹಾಗೆ ಆಯಿತು ಅಷ್ಟೆ! ಕೈಕಾಲೆಲ್ಲಾ ಕಲ್ಲಿಗೆ ತಾಗಿ ಕೆತ್ತಿಹೊಯಿತು. ರಕ್ತ ಒತ್ತರಿಸಿ ಬಂತು. ಅಷ್ಟೊತ್ತಿಗೆ ನಮ್ಮಪ್ಪ ಜೋಯ್ಸ್‌ಂಗೆ ಯಾರೋ ನಿಮ್ಮ ಮಗಳು ತುಂಗೆ ಹಾರಿದಾಳೆ ಅಂತಾ ಸುದ್ದಿ ಕೊಟ್ಟರಂತೆ!
ಜೋಯ್ಸ್ ಓಡೋಡಿ ಬಂದವನೆ ಏ ಪುಣ್ಯಾತ್‌ಗಿತ್ತಿ ನೀನಿನ್ನು ಸಾಯಲಿಲ್ಲವೇನೆ ಮಾರಯಿತಿ ಅಂದ! ದನ ಎಳೆದುಕೊಂಡು ಹೋಗೋ ಹಾಗೆ ನನ್ನನ್ನು ದರದರನೆ ಎಳೆದುಕೊಂಡು ಹೋದ ಮನೆವರೆಗೂ. ಇವೆಲ್ಲಾ ಆಗಿದ್ದು ನಿನ್ನಿಂದಲೆ ತಲೆಹರಟೆ.
ಆಮೇಲೆ ಅಮ್ಮ ಅದೇನೇನೋ ಸೊಪ್ಪು ಸದೆಯ ರಸವನ್ನೆಲ್ಲಾ ಹಿಂಡಿ ನನ್ನ ಗಾಯದ ಮೇಲೆ ಸುರಿದಳು ವಟವಟ ಅಂತಾ ನನ್ನ ಬೈಯ್ಯುತ್ತಾ! ನಂಗೆ ಆವಾಗ ಎಷ್ಟು ಉರಿಯಾಯಿತು ಗೊತ್ತಾ? ನಾನು ಆವಾಗ ನಿನಗೆ ಹಾಕಿದ ಶಾಪ ಇದೆಯಲ್ವಾ? ಏಳು ಜನ್ಮ ಕಳೆದರೂ ಹೋಗೋದಿಲ್ಲ ಬಿಡು. ಅಲ್ವೆ ಸಾಯೋವಂತದ್ದು ನಿನಗೆ ಏನಾಗಿತ್ತೆ? ನಾ ಆವತ್ತೆ ಅವ್ರ ಹತ್ರಾ ಬಡಿದುಕೊಂಡೆ ಹೆಣ್ಣುಮಗಳನ್ನು ಕಾಲೇಜಿಗೆ ಕಳುಹಿಸಬೇಡಿ ವಯಸ್ಸಿಗೆ ಬಂದಿದಾಳೆ ಬೇಗ ಮದ್ವೆ ಮಾಡಿಬಿಡಿ ಅಂತಾ. ಈಗ ನೋಡು ಅವಾಂತರಾನ. ನೀನೆನಾದ್ರೂ ಸತ್ತಿದ್ದರೆ ನಮ್ಮ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿತ್ತು ಅಂತಾ ಶುರುಹಚ್ಚಿಕೊಂಡರು ನೋಡು ಪ್ರವಚನನಾ……ಎಲ್ಲಾ ಆಗಿದ್ದು ನಿನ್ನಿಂದಲೆ ಮೂರುಕಾಸಿನವನೇ….
ಇಲ್ಲ ಅಮ್ಮ ನಾನು ಸಾಯಬೇಕು ಅಂತಾ ಹೋಗಿದ್ದಲ್ಲಾ, ಈಜು ಕಲಿಯಬೇಕು ಅಂತಾ ಆಸೆಯಾಯಿತು ನೀರಿಲದ ತುಂಗೆ ನೋಡಿ ಅದ್ಕೆ ಹಾರಿದೆ….ಅಂತೆಲ್ಲಾ ಕಥೆ ಹೇಳಿ ತೆರೆದಿದ್ದ ಅಮ್ಮನ ಬಾಯಿ ಮುಚ್ಚಿಸುವಾಗ ಸಾಕುಸಾಕಾಗಿ ಹೋಯಿತು ಮಾರಾಯ. ಅಮ್ಮನ ಬಾಯಿ ಮುಚ್ಚಿಸೋದಕ್ಕಿಂತ ನಿನ್ನ ಜೊತೆ ಜಗಳವಾಡೋದೆ ಎಷ್ಟೋ ಲೇಸು ಕಣೋ. ಅಮ್ಮನದ್ದು ನಿಂತಿತು ಅನ್ನೋವಾಗ ಅಪ್ಪನದ್ದೂ ಶುರುವಾಯಿತು ಮಗಳು ಕಲಿತು ಜಾಣೆಯಾಗಲೀ ಅಂತಾ ಕಾಲೇಜಿಗೆ ಕಳುಹಿಸಿದರೆ ಇವಳು ಈಜೋದು, ಕೆದುಕೋದು ಅಂತಾ ಬರೀ ಬೇಡದೇ ಇರೋದನ್ನೇ ಕಲಿತು ಬಂದಿದಾಳೆ. ಈ ವರ್ಷ ಶ್ರಾವಣಕ್ಕೆ ಹೇಗಾದ್ರೂ ಮಾಡಿ ಇವಳನ್ನ ದಾಟಿಸಿಬಿಡಬೇಕು……ಗೊತ್ತಲ್ಲ ನಿಂಗೆ ಜೋಯ್ಸರ ಪುರಾಣ ಹೇಗಿರತ್ತೆ ಅಂತಾ.
ನಿನ್ನಜ್ಜಿ ಇನ್ನೊದ್ಸಾರಿ ನಮ್ಮ ಮನೆ ಕಡೆ ಕಾಲಿಡು ನೀನು ಇವತ್ತಿಗೆ ನನ್ನ ನಿನ್ನ ಸಂಬಂಧ ಕಳೆಯಿತು ಅಂತಾ ನಿಂಗೆ ನೇರವಾಗಿ ಹೇಳಿ ಬಿಡಬೇಕು ಅನ್ನಿಸ್ತು ಆ ಘಟನೆಯಾದ ಬಳಿಕ. ಆದ್ರೂ ಯಾಕೋ ನಿನಗೆ ಹಾಗೆ ಹೇಳಲು ಮನಸೇ ಬರ್ತಾ ಇಲ್ಲ ಮಾರಾಯ. ಎಷ್ಟಂದ್ರೂ ನೀನು ನನ್ನವ ಅಂತಾ ಅನ್ನಿಸ್ತಾ ಇದೆ!
ಇಂತಿ
ಪುಟ್ಟಿ
ಪರೋಹಿತ ಪುಡಾರಿಗಳು ಮತ್ತು ದೇವರು-೨
Posted in ಚಿಂತನ ಚಾವಡಿ on ಏಪ್ರಿಲ್ 8, 2008| 1 Comment »
ಗೆಳೆಯ ಶ್ರೀಕಾಂತ್ ಮೊನ್ನೆ ಸಿಕ್ಕಿದ್ದ. ಅವ ಇಲ್ಲೆ ಬೆಂಗಳೂರಿನಲ್ಲಿ ಪುರೋಹಿತನಂತೆ. ಇವತ್ತು ಅಪ್ಪಾ ಅಮ್ಮನಿಗೆ ಮೂರು ಹೊತ್ತು ಊಟ ಹಾಕ್ತಾ ಇದೀನಿ ಅನ್ನೋದೆ ನನ್ನ ಸಂತೋಷ ಮಾರಾಯ ಅಂತಿದ್ದ. ನಾನು ಹೈಸ್ಕೂಲ್ ಓದ್ತಾ ಇರೋವಾಗ ಇಕ್ಕೇರಿ ಪ್ರೌಡಶಾಲೆಯಲ್ಲಿ ನನ್ನ ಜೊತೆ ಓದಿದವನು ಆತ. ಅವನ ಕಷ್ಟ ನನಗೆ ಚೆನ್ನಾಗಿ ಗೊತ್ತು. ಅವ ಜಾತಿಯಿಂದ ಹವ್ಯಕ. ಅವನ ಅಪ್ಪಾ ಮೇಸ್ತ್ರಿ(ಗಾರೆ) ಕೆಲಸ ಮಾಡುತ್ತಿದ್ದರು. ಆವತ್ತು ಮಲೆನಾಡಿನಲ್ಲಿ ಹಳ್ಳಿಗಳಲ್ಲಿ ಗಾರೆ ಕೆಲಸ ಸಿಗುತ್ತಿದ್ದದ್ದು ಅಷ್ಟರಲ್ಲೇ ಇತ್ತು. ಸಿಕ್ಕರೂ ಕೈಗೆ ಬರುತ್ತಿದ್ದ ಸಂಬಳವೂ ಹಾಗೇ ಇತ್ತು. ಹಾಗಾಗಿ ಒಂದು ಹೊತ್ತು ಊಟಕ್ಕಿದ್ದರೆ ಮೂರು ಹೊತ್ತು ಊಟಕ್ಕಿಲ್ಲದ ಮನೆ ಗೆಳೆಯ ಶ್ರೀಕಾಂತ್‌ನದ್ದು. ಅದೂ ಅಲ್ಲದೇ ಅವರಪ್ಪನಿಗೆ ದುಡಿಯಲು ಆಗುತ್ತಿರಲಿಲ್ಲ. ಆದ್ರೂ ಹೊಟ್ಟೆಪಾಡಿಗಾಗಿ ದುಡಿಮೆ ಅನ್ನೋದು ಅವರಿಗೆ ಅನಿವಾರ್ಯವಾಗಿತ್ತು. ಅವನ್ನ ಕಂಡಗಲೆಲ್ಲಾ ನಂಗೆ ನೋವಾಗುತ್ತಿತ್ತು. ಅವನಿಗೆ ಸಹಾಯ ಮಾಡೋಣ ಅಂದ್ರೆ ನನ್ನಲ್ಲಿನ ಶ್ರ್‍ಈಮಂತಿಕೆಯೂ ಅಷ್ಟರಲ್ಲೇ ಇತ್ತು. ಅವ ಎಸ್ಸೆಸ್ಸೆಲ್ಸಿ ಮುಗಿಸಿ ಮನೆ ಬಿಟ್ಟ ಅದೇಗೋ ಮಂತ್ರ ಕಲಿತ ಬೆಂಗಳೂರಿಗೆ ಬಂದು ಪುರೋಹಿತ್ಯ ಆರಂಭಿಸಿದ. ಅಂತಹ ಗೆಳೆಯ ಅಪ್ಪಾ ಅಮ್ಮನಿಗೆ ಮೂರುಹೊತ್ತಿನ ಊಟ ಹಾಕುವಷ್ಟು ಶ್ರ್‍ಈಮಂತನಾಗಿದ್ದೇನೆ ಅಂದಾಗ ನನಗೆ ನಿಜಕ್ಕೂ ಸಂತಸವಾಯಿತು. ಹೌದು ಬೆಂಗಳೂರಿನ ಪುರೋಹಿತರನ್ನು ಕಂಡಾಗ ಮೈ ಉರಿಯತ್ತೆ ಆದ್ರೆ ಶ್ರೀಕಾಂತ್‌ನಂತಹ ಗೆಳೆಯರನ್ನು ಕಂಡಾಗ ಮಲೆನಾಡಿನ ಎಷ್ಟೋ ಜನರಿಗೆ ಅನ್ನಕೊಟ್ಟ ವೃತ್ತಿ ಅದು ಅಂತಾ ಸಂತಸವಾಗತ್ತೆ.
ಯಲ್ಲಾಪುರ, ಉತ್ತರಕನ್ನಡದ ಬಡತನ ನೋಡಿದರೆ ಸಾಗರದ ನಾವು ಎಷ್ಟೋ ವಾಸಿ ಅನ್ನಿಸತ್ತೆ. ಇವತ್ತಿಗೂ ತುತ್ತು ಕೂಳಿಗೆ ಗತಿಯಿಲ್ಲದ ಮಂದಿ ಆ ಭಾಗದಲ್ಲಿದ್ದಾರ್‍ಎ. ಜಾತಿಯಲ್ಲಿ ಬ್ರಾಹ್ಮಣ ಅನ್ನಿಸಿಕೊಂಡರೆ ಮುಗಿತು. ಅವ ಸಮಾಜದ ಲೆಕ್ಕದಲ್ಲಿ ಶ್ರೀಮಂತನೆ! ಒಂದು ಕಾಲದಲ್ಲಿ ಇತರೆ ವರ್ಗದವರ ಪಾಡು ಹೇಗಾಗಿತ್ತೋ ಅದೇ ಪಾಡು ಇವತ್ತು ಬ್ರಾಹ್ಮಣರದ್ದಾಗಿದೆ. ಬ್ರಾಹ್ಮಣರು ಅಂದ್ರೆ ಅದೆಂತದೋ ಮೂದಲಿಕೆ. ಶತಶತಮಾನಗಳ ಕಾಲ ಬ್ರಾಹ್ಮಣರು ಇತರೆ ಜನಾಂಗವನ್ನೂ ತುಳಿದರೂ ಅದಕ್ಕೆ ಪ್ರತಿಫಲ ಇವತ್ತು ಅನುಭವಿಸುತ್ತಿದ್ದಾರೆ ಅಂತಾ ಹೇಳೋದು ತುಂಬಾ ಸುಲಭ. ಯಾಕಂದರೆ ಹಾಗೇ ಹೇಳುವವರು ದಲಿತರ ನೋವನ್ನು ಕಂಡಿರುವುದಿಲ್ಲ. ಬಡ ಬ್ರಾಹ್ಮಣರ ನೋವನ್ನು ಕಂಡಿರುವುದಿಲ್ಲ! ಆ ಬಡತನದ ನೋವನ್ನು ತೀರಿಸಿಕೊಳ್ಳಲೆಂದೇ ಬ್ರಾಹ್ಮಣರು ತಮ್ಮ ಮೂಲ ಕಸುಬಾದ ಪುರೋಹಿತ್ಯವನ್ನು ಅರೆಸಿಕೊಂಡು ಬೆಂಗಳೂರಿಗೆ ಬರುತ್ತಿರುವುದು. ಹಳ್ಳಿಗಳ್ಳಲ್ಲಿ ಪುರೋಹಿತರಿಗೆ ಬೆಲೆಯಿಲ್ಲ. ಬೆಲೆಯಿದ್ದರೂ ಸಂಪಾದನೆ ತೀರಾ ಕಡಿಮೆ. ಓದಿ ದಡ ಸೇರಲು ಓದಬೇಕಾದ ಕಾಲದಲ್ಲಿ ಹಣವಿಲ್ಲ. ಪುಕ್ಕಟ್ಟೆ ಊಟ ಮಾಡಿಕೊಂಡು ಮಠದಗಳಲ್ಲಿ ಇದ್ದುಕೊಂಡು ಕಲಿಯಬಹುದಾದ ವಿದ್ಯೆಯೆಂದರೆ ಬ್ರಾಹ್ಮಣರ ಪಾಲಿಗೆ ಪೌರೋಹಿತ್ಯ ಹಾಗಾಗಿ ಬಡತನವಿದ್ದವರೆಲ್ಲಾ ಅದರತ್ತ ಲಗ್ಗೆ ಇಟ್ಟರು. ಒಳ್ಳೆ ಸಂಪಾದನೆ ಮಾಡಲೆಂದು ಬೆಂಗಳೂರಿಗೆ ಬಂದು ದುಡಿಮೆ ಶುರು ಹಚ್ಚಿಕೊಂಡರು ಅದರಲ್ಲಿ ತಪ್ಪೆನಿದೆ? ಪುರೋಹಿತ ದುಡ್ಡು ಮಾಡೋದು ವೇದಾಂತಿಗಳ, ಬರಗಾರರ ಕಣ್ಣು ಕುಕ್ಕಿಸತ್ತೆ. ಸಾಹಿತಿಗಳ ಬಾಯಿಗೆ ಆಹಾರವಾಗತ್ತೆ ಆದ್ರೆ ಇತರರು ಎಂತೆಂತಹದೋ ಹಾದರ ಮಾಡಿ ಹಣ ಸಂಪಾದಿಸುತ್ತಿದ್ದಾರಲ್ಲಾ? ಕೆಲ ಸಾಹಿತಿಗಳು ರಾಜಕಾರಣಿಗಳ ಸುತ್ತಾ ಸುತ್ತಾಡುತ್ತಿದ್ದಾರಲ್ಲಾ ಅವೆಲ್ಲಾ ತಪ್ಪಲ್ವಾ ಅಂದರೆ ನಮ್ಮಲ್ಲಿ ಉತ್ತರವಿಲ್ಲ.
ಹೌದು ಮಲೆನಾಡಿನಲ್ಲಿ ದಲಿತರ ಉದ್ದಾರ ಮಾಡಲೆಂದೇ ನಕ್ಸಲಿಸಂ ಹುಟ್ಟಿಕೊಂಡಿದೆ! ಇವತ್ತು ಶೃಂಗೇರಿ ಸುತ್ತಾ ಮುತ್ತಲಿನ ದಲಿತರೆಲ್ಲಾ ಮೂರು ಹೊತ್ತು ನೆಮ್ಮದಿಯ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಕ್ಸಲೀಯರೇ ಕಾರಣ(ಊಟ ಮಾಡುತ್ತಿದ್ದರೆ ಮಾತ್ರ!)ಊರಿಗೊಂದು ಬಾವಿಯಾಗಿದೆ, ರಸ್ತೆಯಾಗಿದೆ, ಶಾಲೆಯಾಗಿದೆ ಅಂದರೆ ಅದೆಲ್ಲಾ ನಕ್ಸಲೀಯರ ಶ್ರಮದ ಫಲ! ಇನ್ನೂ ದಲಿತ ಸಂಘರ್ಷ ಸಮಿತಿ, ದಲಿತ್ತೋದ್ದಾರಕ ಸಮಿತಿ…..ಹೀಗೆ ಹತ್ತಾರು ಸಂಸ್ಥೆಗಳು ದಲಿತರ ಒಳಿತಿಗಾಗಿ ದನಿ ಎತ್ತುತ್ತಿವೆ. ಅದೆಲ್ಲಕ್ಕಿಂತಾ ಮುಖ್ಯವಾಗಿ ಅನೇಕ ಸಾಹಿತಿಗಳು ದಲಿತರ ಪರ ಅನುಕಂಪದ ಮಾತಾಡುತ್ತಾ, ಕೃತಿ ರಚಿಸುತ್ತಾ ತಾವು ಗಳಿಸಿದ ಹಣದಲ್ಲಿ ಅವರಿಗೆ ಅರ್ಧ ನೀಡುತ್ತಾ ಇದ್ದಾರೆ! ಆದರೆ ಮಲೆನಾಡಿನ ಬಡ ಬ್ರಾಹ್ಮಣರ ಪರವಾಗಿ ಯಾರಿದ್ದಾರೆ. ದಲಿತರು ಬ್ರಾಹ್ಮಣರನ್ನು ನಿಂದಿಸುವುದಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣರೇ ಬ್ರಾಹ್ಮಣರನ್ನು ನಿಂದಿಸುತ್ತಾರೆ ಅದೆಂತದೋ ಒಂತರಹ ಜ್ಞಾನೋದಯವಾಗಿ!(ಬ್ರಾಹ್ಮಣರ ವಿರೋದಿ ಅಲೆ ತಪ್ಪು ಅಂತಾ ನಾನು ಇಲ್ಲಿ ಹೇಳುತ್ತಿಲ್ಲ. ದಲಿತ ಉದ್ದಾರ ಅನ್ನೋದು ಭಾಷಣಕ್ಕೆ ಮಾತ್ರ ಸೀಮಿತ. ಇವತ್ತಿಗೂ ಮಲೆನಾಡು ಭಾಗದಲ್ಲಿ ದಲಿತರು ಕಷ್ಟದ ಜೀವನ ನಡೆಸುತ್ತಿದ್ದಾರೆ. ದಲಿತರ ಹೆಸರು ಹೇಳಿಕೊಂಡು ಅವರ ಮೇಲೆ ಅನುಕಂಪ ತೋರುವ ನಾಟಕ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವವರು ಗಿಟ್ಟಿಸಿಕೊಳ್ಳುತ್ತಲೇ ಇದ್ದಾರೆ. ಆ ಬೇಸರದ ನುಡಿಗಳು ಮೇಲಿನವು. ಬಡವನಾದವ ಬ್ರಾಹ್ಮಣನಾದರೂ ಅಷ್ಟೇ, ದಲಿತನಾದರೂ ಅಷ್ಟೇ ಅವನ ಪಾಲಿಗೆ ಬೆನ್ನೆಲ್ಲಾ ಹೊಟ್ಟೆಯೇ!)
ಹೀಗೆಲ್ಲಾ ಅವಲೋಕಿಸಿದ ಪುರೋಹಿತರು ಮಾಡುತ್ತಿರುವುದು ಸರಿ ಅನ್ನಿಸತ್ತಾದರೂ ಯಾರ್ಯಾರೋ ಎಂತೆಹದ್ದೋ ಹಾದರ ಮಾಡುತ್ತಾರೆ ಅಂತಾ ದೇವರ ಹೆಸರಿನಲ್ಲು ಹಣಸುಲಿಗೆ ಮಾಡುವುದು ಸರಿಯಲ್ಲ. ದೇವರು ಭಾವದ ಒಂದು ಪ್ರತೀಕ ಹೊರತು ಮಾರಾಟದ ಸರಕಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದ ಮೇಲೆ ಇನ್ನೆನೂ ಮಾಡೋದು ಅದು ಬ್ರಾಹ್ಮಣನಾಗಿ ಅಂದರೆ ನನ್ನ ಮಟ್ಟಿಗಂತೂ ಉತ್ತರವಿಲ್ಲ. ವೈಚಾರಿಕವಾಗಿ ದೇವರನ್ನು ಮಾರಾಟದ ಸರಕನ್ನಾಗಿಸೋದು ತಪ್ಪು. ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ ಹೊರತು ಶಂಕರ ಭವತಿ ಶಿಲಾ ಆಗಬಾರದು ಅಲ್ವಾ? ಆದ್ರೆ ದೇವರು ಎಂಬುದು ಹಣ ಮಾಡೋ ಸರಕಾದರೆ ಶಂಕರನೂ ಶಿಲೆ ಅನ್ನಿಸಿಬಿಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ. ಇಂತಹದೊಂದು ಸಮಸ್ಯೆ ತಪ್ಪಿಸಲು ಏನು ಮಾಡಬಹುದು ಅನ್ನೋದನ್ನಾ ನೀವೆ ತಿಳಿಸಿ.
ಮೂಲಾ ನಕ್ಷತ್ರದ ಅನಿಷ್ಟದವಳೇ……
Posted in ಕ್ರಿಯೇಟಿವ್ ಪೇಜ್ on ಏಪ್ರಿಲ್ 3, 2008| 2 Comments »