Archive for ಮಾರ್ಚ್, 2008
ಪುರೋಹಿತ ಪುಡಾರಿಗಳು ಮತ್ತು ದೇವರು….!
Posted in ಚಿಂತನ ಚಾವಡಿ on ಮಾರ್ಚ್ 30, 2008| 1 Comment »
(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ ಅವಹೇಳನ ಮಾಡುವ ಅಥವಾ ಯಾವುದೋ ಒಂದು ವರ್ಗದ ದ್ವೇಷಿಯಾಗಿ ಏಕಮುಖಿ ಚಿಂತನೆಯೊಂದಿಗೆ ಬರೆಯುತ್ತಿರುವ ಬರಹವಲ್ಲ. ಪ್ರಸ್ತುತದ ಒಂದು ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದರ ಎಡ ಬಲಗಳ ಸುತ್ತ ಅವಲೋಕಿಸಲು ಹೊರಟ್ಟಿದ್ದೇನೆ . ಇಲ್ಲಿ ಪರ ವಿರೋದಗಳ ದ್ವಂದ ಮಿಶ್ರಣದ ಎರಡು ಮಜಲುಗಳ ಅವಲೋಕನ ಇದೆ. ಆ ನಿಲುವು ನನ್ನೊಳಗಿನ ಗೊಂದಲ ಅಂತಾನೂ ನೀವು ಭಾವಿಸಬಹುದು. ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ. ಇಲ್ಲಿನ ಬರಹಕ್ಕಿಂತ ಭಿನ್ನವಾದೊಂದು ಆಲೋಚನೆ ನಿಮ್ಮಿಂದ ಹರಿದು ಬಂದರೆ ಖಂಡಿತಾ ಅದನ್ನು ನಾನು ಸ್ವೀಕರಿಸುತ್ತೇನೆ.)
ಜಾತಿ ಬಿಟ್ಟ “ಜೋಕು”ಮಾರನೇ…..!!
Posted in ಕ್ರಿಯೇಟಿವ್ ಪೇಜ್ on ಮಾರ್ಚ್ 24, 2008| 2 Comments »
ಹಾಯ್ ಪೆದ್ದು,
ನೀನು ಬರೆದ ಪತ್ರ ಕುಂಠುತ್ತಾ, ತೆವಳುತ್ತಾ ಬಂದು ನನ್ನ ಕೈ ಸೇರಿತು ಮಾರಾಯ! ನಿನಗೆ ನಾನು ಪೆದ್ದು ಅನ್ನೋದು ಅದಕ್ಕೆ ನೋಡು ಮಾಡೋದೆಲ್ಲಾ ಅನಾಹುತಗಳೇ, ಅಲ್ವೋ ಜೋಯ್ಸರನ್ನ ರಾಜಾರೋಷವಾಗಿ ಬೈದಿದ್ದೀಯಲ್ಲಾ? ಆ ಪತ್ರ ಮೊದ್ಲು ಸೇರಿದ್ದು ಜೋಯ್ಸರ ಕೈಯನ್ನೇ ಗೊತ್ತಾ! ಯಾವಾಗ್ಲೂ ಮಂತ್ರ ಹೇಳೋ, ಜ್ಯೋತಿಷ್ಯ ನೋಡೋ ಜೋಯ್ಸ ಅಂತಾ ನಮ್ಮಪ್ಪನ್ನ ಅಣಗಿಸುತ್ತಾ ಇದ್ದೆಯಲ್ವಾ? ನೋಡು ನಮ್ಮಪ್ಪ ಓದೋಕೇ ಅಂತಾ ಇಸ್ಕೂಲಿಗೆ ಹೋಗದೇ ಮಂತ್ರ ಕಲಿತಿದ್ದು ಇವತ್ತು ಹೆಲ್ಪ್ ಆಯಿತು. ನಮ್ಮಪ್ಪನಿಗೇನಾದ್ರೂ ಓದ್ಲಿಕ್ಕೆ ಬಂದಿದ್ದರೆ, ನೀನು ಬರೆದ ಕಾಗದವನ್ನು ಓದಿ ಬಿಟ್ಟಿದ್ದರೆ, ನನ್ನ ನಿನ್ನ ಒಟ್ಟಿಗೆ ಯಾವ್ಯಾದೋ ಮಂತ್ರ ಹೇಳಿ ಬೇರೆ ಗ್ರಹಕ್ಕೆ ಪಾರ್ಸೆಲ್ ಮಾಡಿ ಬಿಡುತ್ತಿದ್ದರು! ನೀನು ಮಾಡೋ ಕಪಿಚೇಷ್ಟೆಗೆ ಇದ್ದವರನ್ನೆಲ್ಲಾ ಬಲಿ ಕೊಡ್ತಿಯ ಮಾರಾಯ! ಮತ್ತೆ ಪೆದ್ದು ಅಂದ್ರೆ ಜಗಳಕ್ಕೆ ಬೇರೆ ಬರ್ತಿಯಾ!
ಇಲ್ಲಿ ಮಳೆ ಅಂದ್ರೆ ಮಳೆ ಕಣೋ. ಕರೆಂಟ್ ಇಲ್ಲದೆ ೧೫ದಿನ ಆಯಿತು. ಪೋನಿನ ಜೀವ ಹೋಗಿ ಎರಡು ವಾರಗಳ ಮೇಲಾಯಿತು. ಇನ್ನೂ ಆ ಅಂಚೆಯವನೋ…! ಸಂಬಂಧಿಕರ ಮನೇಲಿ, ಹೆಂಡ್ತಿ ಮನೆಲಿ ಎಲ್ಲೂ ಕಾರ್ಯಕ್ರಮಗಳು ಇಲ್ಲದೇ ಹೋದರೆ, ತಾನು ಅಂಚೆಯವ ಅನ್ನೋದು ನೆನಪಾದರೆ ಜೋಯ್ಸ್‌ರ ಮನೇಲಿ ಒಂದು ಲೋಟ ಕಾಫಿ ಕುಡಿದು, ಒಂದು ಕವಳ ಹಾಕಿ ಜೋಯ್ಸರ ಹತ್ತಿರ ಒಂದು ಗಡದ್ದಾದ ಹರಟೆಹೊಡೆದು ಹೋಗುವ ಮನಸಾದರೆ ಅಮ್ಮವ್ರೆ ನಿಮಗೊಂದು ಪತ್ರ ಬಂದೈತಿ ಅಂತಾ ಮನೆ ಕಡೆ ಬರ್ತಾನೆ. ಮೊದ್ಲೆಲ್ಲಾ ಕಾಲೇಜಿನಿಂದ ಬರೋವಾಗ ನಾನೇ ಹೋಗಿ ನಿನ್ನ ಪತ್ರ ಕಲೆಕ್ಟ್ ಮಾಡಿಕೊಂಡು ಬರ್ತಿದ್ದೆ. ಈಗ ಆ ಅಂಚೆಯವ ಬರೋವರೆಗೂ ಕಾಯಬೇಕು. ಇದನೆಲ್ಲಾ ನೆನಸಿಕೊಂಡರೆ ನಂಗಂತೂ ಈ ಊರು ತುಂಬಾ ಬೋರ್ ಅನ್ನಿಸ್ತಾ ಇದೆ. ನಿನ್ನನ್ನ ಯಾವಾಗ ಸೇರಿಕೊಳ್ಳುತ್ತೀನೋ ಅನ್ನಿಸ್ತಾ ಇದೆ!
ಏ ಈ ಸರಿ ಹಳೆ ಮಳೆ ಸಖತ್ತಾಗಿ ಹೊಯ್ತಾ ಇದೆ ಕಣೋ. ತುಂಗೆ ತುಂಬಿ ಹರಿತಾ ಇದೆ. ಹೋದ ವರ್ಷ ನೀನು ಇದೇ ಟೈಂನಲ್ಲೇ ನಮ್ಮ ಮನೆಗೆ ಬಂದಿದ್ದೆ ಅಲ್ವಾ? ನಾನು ನೀನು ದೊಪ್ಪನೆ ಬೀಳುತಿದ್ದ ಮಳೆಯಲ್ಲಿ ತುಂಗೆ ತೀರಕ್ಕೆ ಹೋಗಿ ಕುಣಿದು ಕುಪ್ಪಳಿಸಿದ್ವಲ್ಲಾ? ಮಳೆ ಬಂತ್ ಗಿಳಿ ಪೋಪೋಪೋ ಅಂತಾ ಚಿಕ್ಕ ಮಕ್ಕಳ ತರಹ ಹಾಡಿ ಆಟ ಆಡಿದ್ವಲ್ಲಾ? ಆ ಮೇಲೆ ಅಮ್ಮನ ಹತ್ರಾ ಬೈಸಿಕೊಂಡು ಹಲಸಿನ ಹಪ್ಪಳ ಸುಟ್ಟು ಅದನ್ನ ಪಾಲು ಮಾಡೋವಾಗ ನಂಗೆ ಜಾಸ್ತಿ ನಿಂಗೆ ಜಾಸ್ತಿ ಅಂತಾ ಕಿತ್ತಾಡಿಕೊಂಡಿದ್ವಲ್ಲಾ? ಈ ಮಳೆ ನೋಡೋವಾಗ ಅದೆಲ್ಲಾ ನೆನಪಾಗುತ್ತಿದೇಯೋ ಪೆದ್ದೇಶ!
ನಿಂಗೆ ಇವೆಲ್ಲಾ ಎಲ್ಲಿ ನೆನಪಾಗತ್ತೆ ಹೇಳು? ಹೋಗ್ಲಿ ನನ್ನ ನೆನಪಾದರೂ ಇದೆಯಲ್ವಾ ಅಷ್ಟೆ ಸಮಾಧಾನ ನಂಗೆ. ಮತ್ತೆ ಹೇಗೆ ನಡಿತಾ ಇದೆ ಕೆಲ್ಸಾ? ನಮ್ಮೂರ ಕಡೆ ಯಾವಾಗ ಬರ್ತಿಯಾ? ಅಲ್ವೋ ನಾನು ಜಾತಿ ಬಿಟ್ಟವನು ಅಂತಾ ಉದ್ದುದ್ದಾ ಭಾಷಣ ಬಿಗಿತೀಯಾ ಮತ್ತೆ ನನ್ನನ್ನು ಜ್ಯೋಯ್ಸರ ಮಗಳು ಅಂತಾ ಜಾತಿ ಹೆಸರಿನಲ್ಲೇ ಅಣಗಿಸುತ್ತೀಯಲ್ವೋ? ಸಾಹಿತಿಯಾಗ್ಲಿಕ್ಕೆ ಪೂರ್ವಭಾವಿಯಾಗಿ ತಯಾರಿನಾ ಇದು?! ಹೇಳೋದೊಂದು, ತಿನ್ನೊದೊಂದು ಅಂತಾರಲ್ಲಾ ಹಾಗೆ ಆಯಿತು ನೋಡು ನಿನ್ನ ಕಥೆ! ನಮ್ಮ ಅಪ್ಪಾ ನಿನ್ನ ತರಹ ಅಲ್ಲಾ, ಇಸ್ಕೂಲಿಗೆ ಹೋಗದೆ ಹೋದ್ರು ಆಡಿದ ಮಾತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೊದು ಅವರಿಗೆ ಚೆನ್ನಾಗಿ ಗೊತ್ತು. ಅಂದಹಾಗೆ ಮಾರ್ಕೇಟ್‌ನ ಗಯ್ಯಾಳಿಗಳು ನಂಗೆ ಮಾವನ ಮನೆ ಕಡೆಯಿಂದ ಸಂಬಂಧಿಗಳಾಗಲ್ಲಿಕ್ಕೆ ಇರುವವರು! ಹಾಗೆ ಹೇಳು ಅಂತಾ ನಮ್ಮ ಅಮ್ಮ ನಂಗೆ ಹೇಳಿಕೊಟ್ಟರು! ಖಂಡಿತವಾಗಿಯೂ ಇದು ನನ್ನ ಮಾತಲ್ಲ ಕಣೋ, ಅಮ್ಮನದ್ದೆ.
ಅದೇನೋ ಬ್ಲಾಗ್ ಬರಹ ಅಂದ್ರೆ ಅದು ನಂಗೊಂಚೂರು ಅರ್ಥವಾಗ್ಲಿಲ್ಲ. ಬ್ಯಾಗ್ ಕುರಿತಾಗಿ ಬರೆಯೋದಾ? ಅದೇನೇನು ಕುರಿತಾಗಿ ಬರಿತೀಯೋ ನೀನು. ಒಟ್ಟಲ್ಲಿ ಬರೆದು ಬರೆದೇ ನನ್ನಂತಹವಳನ್ನ ಕುರಿಮಾಡ್ತಿಯಾ ನೋಡು ನೀನು. ಇನ್ನೂ ಏನೇನೋ ಬರಿಬೇಕು ಅಂದ್ಕೊಂಡಿದ್ದೆ. ಈಗ ಒಂದು ನೆನಪಾಗ್ತಾ ಇಲ್ಲ ನೋಡು. ನೆನಪಾದರೆ ಇನ್ನೊಂದು ಪತ್ರ ಹಾಕ್ತಿನಿ. ಅಂದಹಾಗೆ ಬೆಂಗಳೂರಲ್ಲಿ ಹಾಳುಮೂಳು ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಹಾಗೆನೆ ಕಂಡ ಕಂಡ ಚೆಂದದ ಹುಡ್ಗಿಯರಿಗೆಲ್ಲಾ ಲೈನ್ ಹಾಕಿ ಕಣ್ಣು ನೋವು ಬರಿಸಿಕೊಳ್ಳಬೇಡ! ಬಾಯ್……
ಇಂತಿ ನಿನ್ನ
ಪುಟ್ಟಿ
ಎಲ್ಲಾ ಭಾರತೀಯರು ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ…?!
Posted in ಚಿಂತನ ಚಾವಡಿ on ಮಾರ್ಚ್ 20, 2008| 4 Comments »
“ಎಲ್ಲಾ ಭಾರತೀಯರು ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ಕೊಚ್ಚಿಕೊಂಡು ಹೋಗುತಿತ್ತು” ಆವತ್ತು ಇಂಗ್ಲೆಂಡ್ ಅನ್ನೋದು ಭಾರತದ ಒಂದು ಜಿಲ್ಲೆಗೆ ಸಮನಾಗಿತ್ತು. ಆದ್ರೂ ಕೂಡಾ ಭಾರತೀಯರು ಆಂಗ್ಲರ ಗುಲಾಮರಾದರು. ಅದಕ್ಕೆ ಕಾರಣ ಭಾರತದ ಮಣ್ಣು. ಈ ದೇಶದ ಮಣ್ಣೆ ಅಂತಹದ್ದು. ಈ ಮಣ್ಣಿನಲ್ಲಿ ಮಹಾವೀರ,ಬುದ್ದ, ಪತಂಜಲಿಗಳು ಜನಿಸುತ್ತಾರೆಯೇ ಹೊರತು, ಕೋಟಿಕೋಟಿ ಜನ ಇಲ್ಲಿ ಹುಟ್ಟಿದರೂ ಒಬ್ಬ ಹಿಟ್ಲರ್, ಒಬ್ಬ ಮುಸಲೋನಿಯನ್ನು ಈ ನಾಡು ಜಗತ್ತಿಗೆ ನೀಡಲಾರದು. ಇದು ಐದು ಸಾವಿರ ವರ್ಷದ ಇತಿಹಾಸದಿಂದ ಸಾಬೀತಾದ ಮಾತು.ಇಂತಹದ್ದೊಂದು ಸುಂದರ ಸಾಲುಗಳು ಓದಲು ಸಿಕ್ಕಿದ್ದು ಓಶೋ ರಜನೀಶರ ನನ್ನ ಪ್ರೀತಿಯ ಭಾರತ ಅನ್ನೋ ಪುಸ್ತಕದಲ್ಲಿ.
ಆ ಪುಸ್ತಕವನ್ನೊಮ್ಮೆ ಓದಬೇಕು ಅನ್ನುವ ನನ್ನ ಹಂಬಲ ನಿನ್ನೆಗೆ ತೀರಿತು. ಇಲ್ಲಿನ ರಸ್ತೆಗಳು ಸರಿಯಿಲ್ಲ, ರಾಜಕಾರಣ ಸರಿಯಿಲ್ಲ. ಮೂಲಭೂತ ವ್ಯವಸ್ಥೆಗಳು ಸರಿಯಿಲ್ಲ. ಒಟ್ಟಲ್ಲಿ ದೇಶವೇ ಸರಿಯಿಲ್ಲ. ಅಮೇರಿಕಾ, ಇಂಗ್ಲೆಂಡ್‌ಗಳು ಸ್ವರ್ಗ! ಎಲ್ಲ ವೈಭವಗಳೂ ಅಲ್ಲಿವೆ. ಅಂತಾ ವಾದಿಸುವವರ ಗ್ಯಾಂಗ್‌ನಲ್ಲಿ ಈ ವರೆಗೆ ನಾನು ಒಬ್ಬನಾಗಿದ್ದೆ. ಆದರೆ ಅದೆಲ್ಲಕ್ಕಿಂತ ಭಿನ್ನವಾದ ನಮಗೆ ಗೊತ್ತಿರದ ಗೊತ್ತಿದ್ದರೂ ಅರ್ಥೈಸಿಕೊಳ್ಳಲಾಗಿರದ ದಿವ್ಯ ಭವ್ಯ ಭಾರತದ ವಾಕ್ಚಿತ್ರದಂತಿರುವ ಓಶೋರ ಪುಸ್ತಕ ನನ್ನ ನಿಲುವುಗಳನ್ನೇ ಬದಲಿಸಿದೆ ಅಂದರೂ ತಪ್ಪಾಗಲಾರದು.
ಶಂಕರಾಚಾರ್ಯರು ಮಂಡನ ಮಿಶ್ರರೊಂದಿಗೆ ಚರ್ಚೆಗಿಳಿಯುತ್ತಾರೆ. ಮಿಶ್ರರ ಹೆಂಡತಿಯೇ ಆ ಚರ್ಚೆಗೆ ಜಡ್ಜು! ವಾದದಲ್ಲಿ ಶಂಕರರು ಗೆಲ್ಲುತ್ತಾರೆ. ಆದರೆ ಅದು ಅರ್ದ ಗೆಲುವು! ಹಾಗಂತ ಜಡ್ಜ ಆಗಿದ್ದ ಮಿಶ್ರರ ಹೆಂಡತಿ ಭಾರತಿ ಹೇಳೋದು. ಕೊನೆಗೆ ಆಕೆ ವಾದಕ್ಕಿಳಿಯುವುದು ಆಕೆಯಿಂದ ಶಂಕರರು ಜಯ ಸಾಧಿಸಲಾಗದೇ ಮರಳುವುದು ತುಂಬಾ ಸುಂದರ ಕಥೆಯದು. ಶಂಕರರಿಗೆ ಗೆಲುವು ಸಾಧ್ಯವಾಗಲಿಲ್ಲ ಅನ್ನೋದಕ್ಕಿಂತ ಗೆಲುವಿನ ಬೆನ್ನತ್ತಿ ಹೋಗಲು ಮನಸಾಗಲಿಲ್ಲವಂತೆ. ಅದಕ್ಕೆ ಓಶೋ ಕೊಡುವ ಸಮರ್ಥನೆ ನಿಜಕ್ಕೂ ಅದ್ಬುತ. ಭಾರತ ಜಗತ್ತಿಗೆ ತನ್ನನ್ನು ತಾನು ಗೆಲ್ಲುವುದನ್ನು ಭೋಧಿಸಿದ ರಾಷ್ಟ್ರ ಅಂತಾರೆ ಓಶೋ. ಅಲೆಗ್ಸಾಂಡರ್, ಹಿಟ್ಲರ್ ಎಲ್ಲಾ ಜಗತ್ತನ್ನೇ ಗೆಲ್ಲ ಹೊರಟರು. ಅವರು ಶ್ರೇಷ್ಠರಲ್ಲ ಯಾಕೆಂದರೆ ಅವರಿಂದ ಅವರನ್ನೇ ಜಯಿಸಲು ಆಗಲಿಲ್ಲ. ಹಾಗೇ ಜಯಿಸಲು ಸಾಧ್ಯವಾಗಿದ್ದಿದ್ದರೆ ಅವರಿಗೆ ಜಗತ್ತನ್ನು ಗೆಲ್ಲಬೇಕು ಅನ್ನಿಸುತ್ತಿರಲಿಲ್ಲ. ಪ್ರಪಂಚದಲ್ಲಿ ರಕ್ತದ ಹೊಳೆ ಹರಿಯುತ್ತಿರಲಿಲ್ಲ. ಮಹಾವೀರ, ಬುದ್ದರು ತಮ್ಮನ್ನು ತಾವು ಗೆದ್ದರು ಆ ಮುಖೇನ ವಿಶ್ವವನ್ನೇ ಅವರಿಗೆ ಗೊತ್ತಿಲ್ಲದಂತೆ ಗೆದ್ದುಬಿಟ್ಟರು. ಅದು ಭಾರತದ ಶ್ರ್‍ಏಷ್ಠತೆ ಅನ್ನುತ್ತಾ ಅವುಗಳನ್ನು ಓಶೋ ಸಾಬೀತುಪಡಿಸಿದ ರೀತಿ ಇದೆಯಲ್ವಾ? ಅಬ್ಬಾ ರೋಮಾಂಚನವದು.
ಯಾಜ್ಞವಲ್ಕ್ಯರಿಂದ ಗೆದ್ದ ಮೊದಲ ಮಹಿಳೆ ಗಾರ್ಗಿ ಅನ್ನೋ ಆ ಕಥೆಯ ನಿರೂಪಣೆ, ಬುದ್ದ, ಚೈತನ್ಯ, ಮೀರಾಳ ಕಥೆಗಳು, ಕುರುಡನಾಗಿಯೂ ಘಜ್ನಿಯನ್ನು ಕೊಂದ ಪೃಥ್ವಿರಾಜನ ಕಥೆ…..ಹೀಗೆ ಒಂದರ ಮೇಲೊಂದು ಕಥೆಗಳು. ಎಲ್ಲವೂ ರೋಮಾಂಚನಗೊಳಿಸುವಂತಹವೇ. ಭಾರತ ಯಾಕೆ ವಿಶ್ವದ ಇತರರಿಗಿಂತ ಬಿನ್ನ, ಭಾರತದಲ್ಲಿನ ಆಧ್ಯಾತ್ಮಿಕತೆಯ, ಧ್ಯಾನದ ಮಹಿಮೆ ಏನು? ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಭಾರತಕ್ಕಿರುವ ಅಗಾದ ಶಕ್ತಿಯಾದರೂ ಏನೂ? ಹೀಗೆ ಹಲವು ವೈಚಾರಿಕ ಸಂಗತಿಗಳ ಭಂಡಾರ ಈ ಪುಸ್ತಕ.
ಭಾರತ ಎಂದಿಗೂ ಹೇಡಿಯಲ್ಲ, ಶಾಂತಿಪ್ರಿಯವಷ್ಟೆ. ಹಿಂಸೆಯ ವಿರೋಧಿಯಷ್ಟೆ. ಭಾರತೀಯರೆಲ್ಲರೂ ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ತೊಳೆದು ಹೋಗುತಿತ್ತು. ಇಂಗ್ಲೆಂಡ್ ನಾಶಮಾಡಲು ನಮಗೆ ಅಣುಬಾಂಬ್ ಬೇಕಿರಲಿಲ್ಲ, ಉಚ್ಛೆಯೇ ಸಾಕಿತ್ತು ಅನ್ನೊ ಈ ಮಾತನ್ನು ಪೃಥ್ವಿರಾಜನ, ಅಲೆಗ್ಸಾಂಡರ್ ವಿರುದ್ದ ಹೋರಾಡಿದ ಪೋರಸ್‌ನ ಉದಾಹರಣೆ ಕೊಟ್ಟು ವಿವರಿಸುವುದಿದೆಯಲ್ವಾ? ….ಊಹುಂ ಅದನ್ನು ನನಗಂತೂ ಮಾತುಗಳಿಂದ ವಿವರಿಸಲಾಗುತ್ತಿಲ್ಲ.
ಹಾಗಂತ ವಿಶ್ವದ ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಾವೇ ಶ್ರೇಷ್ಠ ಅಂತಾ ನಿರೂಪಿಸಿಕೊಳ್ಳಲು ಹೊರಟ ಪುಸ್ತಕ ಇದಲ್ಲ. ಎಲ್ಲೂ ಭಾರತದ ವೈಭವವಿಲ್ಲ. ಭಾರತ ಶ್ರೇಷ್ಠ ಅನ್ನೋ ದಾಟಿಯ ಮಾತಿಲ್ಲ. ಸಕಾರಾತ್ಮಕ ಭಾರತದ ಚಿತ್ರಣವಿದೆ. ಗತಿಸಿಹೋದ ಇತಿಹಾಸದ ಕಥೆಗಳಿದೆ ಅಷ್ಟೆ. ಯೋಗಿಗಳ ಸಾದುಗಳ ಕಥೆಯಿದೆ. ಆಧ್ಯಾತ್ಮಿಕಥೆಯ ಮಂಥನವಿದೆ. ಇಡೀ ಪುಸ್ತಕದ ತಿರುಳೇ ಆಧ್ಯಾತ್ಮ ಅಂದರೂ ತಪ್ಪಾಗಲಾರದು.
ಓಶೋ ಇಷ್ಟವಾಗೋದು ಅದಕ್ಕೆ. ಯಾವುದೇ ಇಸಂ, ಧರ್ಮ, ಮತಗಳಿಗೆ ಅವಲಂಬಿತವಾಗದೇ ವೈಭವೀಕರಿಸದೇ ಶುದ್ದ ಆಧ್ಯಾತ್ಮವನ್ನು ಸರಳವಾಗಿ ಹೇಳುತ್ತಾ ಹೋಗುತ್ತಾರೆ. ಅದು ಕುಡಾ ಯಾವುದೇ ಮುಚ್ಚುಮರೆ, ಕಟ್ಟಲೆಗಳ ಕೊಂಡಿಗೆ ಸಿಲುಕಿಕೊಳ್ಳದೆ!ವಿದ್ಯಾನಂದ ಶೆಣೈ, ಚಕ್ರವರ್ಥಿ ಸೂಲಿಬೆಲೆಯಂತಹ ಬಲಪಂಥೀಯವಾದಿಗಳು ಭಾರತದ ಕುರಿತಾಗಿ ಹೇಳಿದರೆ, ಬೈರಪ್ಪನವರು ಭಾರತದ ಮಹಿಮೆ ವಿವರಿಸಿದರೆ ನಮಗೆ ಅದೆಲ್ಲಾ ಕಥೆ ಅನ್ನಿಸತ್ತೆ. ಕೆಲವೊಮ್ಮೆ ಕೋಮು ಕುಮ್ಮಕ್ಕೂ ಅಂತಾನೂ ಅನ್ನಿಸತ್ತೆ! ಆದ್ರೆ ಯಾವುದನ್ನು ಸುಲಭಕ್ಕೆ ಒಪ್ಪಿಕೊಳ್ಳದಂತಹ ಓಶೋವೇ ಭಾರತದ ಕುರಿತಾಗಿ ಹೇಳಿದರೆ? ಓಶೋ ಹೇಳಿದರೇನೂ ಅದನ್ನು ಭಾಷಾಂತರಿಸಿದವರು ಭಟ್ಟರು ಅಂದಾರು ಎಡಬಂಡಗಿ ಎಡಪಂಥೀಯರು! ಎಷ್ಟಂದ್ರೂ ಬುದ್ದಿಜೀವಿಗಳವರು ಎಲ್ಲಿ ಯಾವ ತರಹದ ಬುದ್ದಿ ಉಪಯೋಗಿಸಬೇಕೆಂದು ಚೆನ್ನಾಗಿ ಬಲ್ಲವರು! ನಮಗ್ಯಾಕೆ ಅವರ ಸಹವಾಸ.
ಓಶೋ ಅರ್ಥೈಸಿಕೊಂಡು ಭಾಷಾಂತರಿಸುವುದು ಅಷ್ಟು ಸುಲಭದ ಮಾತಲ್ಲ. ಭಾಷೆ ಮೇಲೆ ಅಗಾದ ಪಾಂಡಿತ್ಯವುಳ್ಳ ವಿಶ್ವೇಶ್ವರ ಭಟ್ಟರಂತಹ ಬೆರೆಳೆಣಿಕೆ ಮಂದಿ ಮಾತ್ರ ಕನ್ನಡದಲ್ಲಿ ಆ ಕಾರ್ಯ ಮಾಡುವವರು. ಆದ್ರೂ ಈ ಪುಸ್ತಕದಲ್ಲಿ ಓಶೋ ಮೂಲ ಭಾಷೆಯ ದಾಟಿ ಬರಲಿಲ್ಲ ಅನ್ನಿಸಿತು( ಓಶೋರ ಭಜಗೋವಿಂದಂ ಮೂಡಮತೆ ಕೃತಿಗೆ ಹೋಲಿಸಿ ನೋಡಿದಾಗ)ಮತ್ತೆ ಅಕ್ಷರ ದೋಷಗಳು ತುಂಬಾನೇ ತುಂಬಿವೆ. ಇನ್ನೂ ಲೇಯೌಟ್ ಜೊತೆ ಆಟ ಆಡಲು ಹೋಗದಿದ್ದರೆ ಪುಸ್ತಕವನ್ನು ಓದುಗನ ಕೈಗೆ ಇನ್ನೂ ಕಮ್ಮಿ ಬೆಲೆಗೆ ಕೊಡಬಹುದಿತ್ತೇನೋ ಅನ್ನಿಸಿತ್ತು. ಹಾಗೇನೇ ಓಶೋನತ್ತ ಬರಹಗಾರನ ಪುಸ್ತಕಕ್ಕೆ ಲೇಯೌಟ್ ಮುಖ್ಯವೇ ಅಲ್ಲ ಅನ್ನೋದು ನನ್ನ ಅಭಿಪ್ರಾಯ. ೨೦೦ಪುಟಕ್ಕೆ ೨೦೦ರೂ ಅಂದ್ರೆ ಕನ್ನಡದ ಮಟ್ಟಿಗೆ ಕಾಸ್ಟ್ಲಿ ಆಯಿತು. ಇಷ್ಟೆಲ್ಲದರ ನಡುವೆಯೂ ಅದೊಂದು ಅದ್ಬುತ ಪುಸ್ತಕ. ಅಂತಹದೊಂದು ಪುಸ್ತಕವನ್ನು ಕನ್ನಡಿಗರ ಕೈಗಿಟ್ಟ ಭಟ್ಟರಿಗೆ ನೂರು ಪ್ರಣಾಮಗಳು. ಇಡೀ ಪುಸ್ತಕ ಓದಿದ ಮೇಲೆ ಒಂದ್ಸಾರಿ ಗಟ್ಟಿಯಾಗಿ ಬೋಲೋ ಭಾರತ ಮಾತಕೀ ಜೈ ಅನ್ನಬೇಕು ಅನ್ನಿಸಿತು.
ತಿರ್ಥಹಳ್ಳಿಯ ಜೋಯ್ಸರ ಮಗಳೇ!!!
Posted in ಕ್ರಿಯೇಟಿವ್ ಪೇಜ್ on ಮಾರ್ಚ್ 18, 2008| 2 Comments »
ಪುಟ್ಟಿ,
ಹಾಳಾದ ಈ ಬ್ಲಾಗಿಗೆ ಬರೆಯೋದನ್ನ ಶುರುಹಚ್ಚಿಕೊಂಡ ಮೇಲೆ ನಿನಗೆ ಲೇಟರ್ ಬರೆಯೋದೇ ಮರೆತುಹೋಗಿತ್ತು ನೋಡು. ನಂಗೊತ್ತು ನೀನು ಚೂಪು ಮೂತಿ ಮಾಡಿಕೊಂಡು, ಮುಖ ಕೆಂಪೇರಿಸಿಕೊಂಡು, ನನ್ನ ಮೇಲೆ ಹರಿಹಾಯ್ತ ಕುತಿರುತ್ತೀಯಾ ಅಂತಾ. ಎಷ್ಟಂದ್ರೂ ನೀನು ಜೋಯ್ಸರ ಮಗಳಲ್ವಾ? ಹಾಗಾಗಿ ಮೂಗಿನ ತುದಿಗೆ ಸಿಟ್ಟು ನಿಂಗೆ!
ಏ ನೀನು ನಂಗೆ ಮೊದಲನೇ ಸಾರಿ ನೋಡ್ಲಿಕ್ಕೆ ಸಿಕ್ಕಿದ್ದು ಭಿಮನಕಟ್ಟೆಯ ದೋಣಿಯಲ್ಲಿ ಅಲ್ವಾ? ಅದೇ ಕಣೆ ನಾನು ದೋಣಿಯಲ್ಲಿ ಕೂತಿದ್ದೆ. ಅಷ್ಟೊತ್ತಿಗೆ ನೀನು ಗಯ್ಯಾಳಿ ತರ ಎಂಟ್ರಿ ಕೊಟ್ಟೆ. ದೋಣಿಯ ಅಂಬಿಗನ ಹತ್ತಿರ ಅದ್ಯಾವುದೋ ಭಾಷೆಯಲ್ಲಿ ಅದೇನೋ ಮಾತಾಡಿದೆ. ನಾನು ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು ನಿನ್ನನ್ನೇ ನೋಡಿದಕ್ಕೆ ಏನೋ ಹುಡುಗ ಹುಡುಗಿ ಅಂದ್ರೆ ಕುಣಿಯೋ ಗೊಂಬೆನಾ ಅಂತಾ ನನ್ನ ಮೇಲೆ ಜಗಳ ಬಂದೆ! ಆಮೇಲೆ ನಾನು ಸಿಟ್ಟಾದೆ. ಕೊನೆಗೆ ಇವ ವಿಶ್ವಾಮಿತ್ರನ ವಂಶದವನಿರಬೇಕು ಅಂತಾ ಗೊಣಗುಟ್ಟಿ ಮತ್ತೆ ನೀನು ಸುಮ್ಮನಾದೆಯಲ್ಲಾ? ಹೋಗ್ಲಿಬಿಡು ಆ ವಿಚಾರ ಮತ್ತೆ ಈಗ್ಯಾಕೆ?
ಏನೇ ಹೇಳು ನಿಮ್ಮೂರು ಮಾತ್ರ ನಿಜಕ್ಕೂ ಸುಪರ್ ಕಣೇ. ನಿನ್ನಂತಹ ಚೆಂದದ ಹುಡುಗಿಯನ್ನು ಹುಟ್ಟುಹಾಕಿದ ಊರು ಅಂತಾ ಸುಪರ್ ಅಂದಿದ್ದಲ್ಲಾ! ನಿಮ್ಮ ಮನೆ ಹತ್ರಾ ಇರೋ ತುಂಗಾನದಿ, ಆಚೆ ಕಡೆ ಇರೋ ದೇವಸ್ಥಾನ, ಸದಾ ಹಸಿರಾಗಿ ಕಂಗೊಳಿಸೋ ಗದ್ದೆಗಳು ಅವನ್ನೆಲ್ಲಾ ಕಂಡು ಸುಪರ್ ಅಂದಿದ್ದು ಗೊತ್ತಾಯ್ತ?! ನಿಮ್ಮಪ್ಪಾ ನಿಂಗೆ ಒಂಚೂರು ಆಸ್ತಿಕೊಡ್ತಾನಾ ಕೇಳು. ತಗೊಂಡು ಹಾಯಾಗಿ ಅಲ್ಲೆ ಸೆಟಲ್ ಆಗಿ ಬಿಡೋಣ. ನಂಗೆ ಅಂತಾ ಈ ಮಾತು ಹೇಳಿದಲ್ಲ. ಅಮ್ಮನ ಬಿಟ್ಟು ಅಭ್ಯಾಸವೇ ಇಲ್ಲದೇ ಇರೋ ನಿಂಗೋಸ್ಕರನೇ ಹೇಳಿದ್ದು! ಆಮೇಲೆ ಆಸ್ತಿಗೋಸ್ಕರ ನೀ ನನ್ನ ಇಷ್ಟಪಟ್ಟಿದ್ದಾ ಅಂತಾ ಜಗಳ ಆಡಬೇಡ!
ಮತ್ತೆ ವಿಶೇಷ? ಯಾವಾಗ ಬರ್ತಿಯಾ ಬೆಂಗಳೂರಿಗೆ… ಏನ್ ಸಖತ್ತಾಗಿದೆ ಗೊತ್ತಾ ಈ ಬೆಂಗಳೂರು. ಕೆಆರ್ ಮಾರ್ಕೆಟಗೆ ಹೋಗಿ ನಿಂತರೆ ನಿನಗಿಂತ ಬರೋಬ್ಬರಿ ಗಯ್ಯಾಳಿಗಳ ಹಿಂಡು ಹಿಂಡೇ ಇದೆ. ಅವರನ್ನ ಕಂಡಾಗಲೆಲ್ಲಾ ನಿನ್ನ ನೆನಪಾಗತ್ತೆ ಕಣೇ! ಅಂದಹಾಗೆ ಅವರೇನಾದ್ರೂ ನಿನ್ನ ಸಂಬಂಧಿಗಳಾ? ಅಪ್ಪನ ಕಡೆಯಿಂದ, ಅಮ್ಮನ ಕಡೆಯಿಂದ! ನಾನು ಹೀಗೆ ಕೇಳಿದೆ ಅಂತಾ ನಿಮ್ಮಪ್ಪನಿಗೆ ಮಾತ್ರ ಹೇಳ್ಬೇಡ ಮಾರಾಯಿತಿ. ಮೋದ್ಲೆ ನಂಗೆ ಜೋಯ್ಸರು ಅಂದ್ರೆ ಭಯ! ಹಾಗಂತ ಜೋಯ್ಸರ ಮಗಳಿಗೂ ಭಯಪಡ್ತೀನಿ ಅಂದ್ಕೊಬೇಡ…
ಸಾಕಲ್ವಾ ಇಷ್ಟು, ಕೊನೆಗೆ ಮತ್ತೊಂದು ಲೆಟರ್‌ಗೆ ವಿಷ್ಯನೇ ಇರಲ್ಲ. ನೀನೊಬ್ಬಳು ನೆಟ್‌ವರ್ಕ್ ಇಲ್ಲದ ಊರಲ್ಲಿ ಹುಟ್ಟಿಕೊಂಡಿದಿಯಾ. ನಿಮ್ಮನೇ ಪೋನು ಸರಿಯಿದ್ದಾಗ ನಿಂಗೆ ಸರಿಯಿರಲ್ಲ! ಅಂದ್ರೆ ನಿಂಗೆ ಪುರುಸೊತ್ತು ಇರಲ್ಲ ಅಂತಾ. ನಿಂಗೆ ಪುರುಸೊತ್ತು ಇದ್ದ್ರೂ ನಿಮ್ಮಪ್ಪ ಮನೇಲೇ ಇರ್ತಾರೆ ಅಂತಾ. ನಿವೆಲ್ಲಾ ಸರಿಯಿದ್ದಾಗ ಪೋನ್ ಸರಿಯಿರಲ್ಲ. ಒಟ್ಟಲ್ಲಿ ನಂಗೆ ಮಾತ್ರ ಕಾಗದ ಬರಿಯೋ ಕಾಟ ತಪ್ಪಿದಲ್ಲ.
ಇಂತಿ
ಪುಟ್ಟ.
ಹದ ಮಳೆಯ ಕಥೆ!
Posted in ಕ್ರಿಯೇಟಿವ್ ಪೇಜ್ on ಮಾರ್ಚ್ 17, 2008| 1 Comment »
ಮೊನ್ನೆ ತಾನೇ ಭಡ್ತಿಯವರು ಶಿವರಾತ್ರಿ ಕಳೆದರೂ ಹದ ಮಳೆ ಇನ್ನೂ ಬಿದ್ದಿಲ್ಲ ಅಂತಾ ಗಡ್ಡದಾಗಿ ವಿ.ಕ.ದಲ್ಲಿ ಬರೆದಿದ್ದರು ವರುಣ ದೇವನಿಗೆ ಅದ್ಯಾರೂ ಆ ಲೇಖನ ಒಯ್ದು ಕೊಟ್ಟರೋ ಗೊತ್ತಿಲ್ಲ! ಮಳೆ ಚೆನ್ನಾಗಿ ಜಡಿದಿದೆ. ಬೆಂಗ್ಳೂರಿಗರೆಲ್ಲಾ ಸಾಕಪ್ಪಾ ಹದ ಮಳೆಯ ಸಹವಾಸ ಅನ್ನೋ ತರಹ ಜಡಿದಿದೆ ನೋಡಿ ಮಳೆ! ಆದ್ರೂ ನಮ್ಮೂರಿನಲ್ಲಿ ಈ ಹದ ಮಳೆ ಹುಯ್ಯಿದಿದ್ದರೆ ಏನು ಪಸಂದಾಗಿತ್ತು ಗೊತ್ತಾ? ಅಲ್ಲಲ್ಲ ಈ ಮಳೆ ಹುಯ್ಯೋವಾಗ ನಾನು ನಮ್ಮೂರಲ್ಲಿ ಇದ್ದಿದ್ದರೆ ಏನೂ ಚೆಂದಾಗಿತ್ತು ಗೊತ್ತಾ? ಹೌದು ಮಲೆನಾಡಿನ ಹದ ಮಳೆಯ ಕಥೆಯೇ ಹಾಂಗೇ. ಅತ್ಲಾಗೇ ಆಲೆಮನೆ, ಇತ್ಲಾಗೇ ಚಾಲಿ ಸುಲಿಯದು ಮದ್ಯೆ ಈ ಮಳೆ ಕಾಟ ಮಾರಾಯ ಅಂತಾ ಮಲೆನಾಡಿನ ಯಜಮಾನರುಗಳು ಮಳೆ ಬಿದ್ದ ಮಾರನೇ ದಿನ ಹೇಳೋ ಕಥೆ ಕೇಳೋದಿದೆಯಲ್ಲಾ? ಅದು ಯಾವ ಪಿಕ್ಚರು ಕೊಡದ ಮಜ ಕೊಡತ್ತೆ!
ಹೋದ ವರ್ಷ ಈ ಮಳೆ ಯಾವಾಗ ಬಿದ್ದಿತ್ತು? ಈ ವರ್ಷ ಯಾವಾಗ ಬಿತ್ತು? ಇಷ್ಟು ಲೇಟಾಗಿ ಈ ಮಳೆ ಬಿದ್ದಿದ್ದರ ಪರಿಣಾಮ ಏನೂ? ಈ ಮಳೆಯಿಂದ ಯಾರ್ರ್ಯಾರ ಮನೆ ಮದ್ವೆ,ಉಪನಯನಗಳಿಗೆ ಹಾನಿಯಾಯಿತೂ ಅನ್ನೋದೆ ದೊಡ್ಡ ಚರ್ಚೆ ಈಗ ನಮ್ಮೂರಲ್ಲಿ!
ಮಳೆ ಬಿದ್ದು ಧೂಳು ಹಾರಿದ ಮೇಲೆ ನೆಲದಿಂದ ಘಮಗುಟ್ಟೋ ಮಣ್ಣಿನ ವಾಸನೆ ಇದೆಯಲ್ವಾ ಅದೇ ಒಂತರಹ ಚೆಂದ. ನಾವೆಲ್ಲಾ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಈ ದಿನಗಳು ಅಂದ್ರೆ ಶಾಲೆ ಪಾಠಗಳು ಮುಗಿದು ಥೈಯಾತಕ್ಕಾ ಅಂತಾ ಕುಣಿಯುವ ದಿನಗಳು. ಮಳೆ ಬಂತು ಅಂದ್ರೆ ಸಾಕು ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಅಂತಾ ಬೈಲಲ್ಲಿ ನಮ್ಮ ಪೇರೆಡ್ ಸ್ಟಾರ್ಟು! ಕೊನೆಗೂ ಬರೋ ಜ್ವರ ಕೊನೆಗೆ ಸಿಗೋ ಪೆಟ್ಟು…ಅವೆಲ್ಲಾ ಹೇಳ್ತಾಹೋದ್ರೆ….
ಒಟ್ಟಲ್ಲಿ ಶಿವರಾತ್ರಿ ಮಾರನೇ ದಿವಸದ ಹದಾ ಮಳೆ ಅಂದ್ರೆ ಹಾಂಗೆ. ಮಳೆ ಬಂದಿಲ್ಲ ಅಂದ್ರೆ ಈಶ್ವರ ತಲೆ ಮೇಲೆ ಬಿಸಿನೀರು ಹೊಯ್ದು ಮಳೆ ತರಿಸೋ ಪುಣ್ಯಾತ್ಮರಿಗೂ ಮಲೆನಾಡಿನಲ್ಲೇನೂ ಕಮ್ಮಿ ಇಲ್ಲ! ಒಟ್ಟಲ್ಲಿ ಶಿವರಾತ್ರಿ ಬೆಳ್ಳಿಗ್ಗೆ ಒಂದು ಮಳೇ ಬೇಕೇ ಬೇಕು ಮಲೆನಾಡಿಗರಿಗೆ!
ಅಯ್ಯೋ ರಾಮ ಮೊನ್ನೆ ಬೆಂಗಳೂರಲ್ಲಿ ಮಳೆ ಬಂತಾ.. ನಾನು ಬಸ್ಸಲ್ಲಿ ಹೋಗ್ತಾ ಇದ್ನಾ… ಜನ ಮಳೆಗೆ ಏನು ಬೈದ್ರು ಬೈದ್ರು ಅಂತೀರಾ…ಅನ್ ಸೀಜ್ನ್ ಮಳೆಯಂತೆ ಇದು! ಪ್ರಕೃತಿ ಹಾಳಾಗಿದ್ದರ ಪರಿಣಾಮವಂತೆ!ಸೈಕ್ಲೋನ್ ಇಫೆಕ್ಟ್ ಅಂತೆ! ಬಸ್ಸಲ್ಲಿ ಜನ ಒಂದೊಂದು ನೆವ ಹೇಳಿ ಏನು ಬೈದ್ರೂ ಬೈದ್ರೂ ಅಂತೀರಾ? ಆದ್ರೆ ಬೈದದ್ದು ಯಾರಿಗೆ ಅಂತಾ ಮಾತ್ರ ನಗಂತೂ ಬಸ್ಸು ಇಳಿದ ಮೇಲೂ ಅರ್ಥ ಆಗಿಲ್ಲ. ಎಷ್ಟಂದ್ರು ಮುಂದುವರಿದ ಜನ ನೋಡಿ ಹಾಗಾಗಿ ಅರ್ಥ ಮಾಡ್ಕೋಳೊದು ಭಾರಿ ಕಷ್ಟ!
ಇಲ್ಲಿಯವರಿಗೆ ಪಕ್ತಾ ದುಡ್ಡು ಮಾಡೋದೊಂದು ಬಿಟ್ಟರೆ ಮತ್ತೇನೂ ಗೊತ್ತೆ ಇಲ್ಲ! ಅಂತಾ ಮಲೆನಾಡಿನ ಯಜಮಾನರು ಪ್ಯಾಟೆಯವರಿಗೆ ಬೈಯೋದ್ಯಾಕೆ ಅಂತಾ ಅರ್ಥ ಆಗಿದ್ದು ಹದ ಮಳೆಯಿಂದಲೇ! ಹೋಗ್ಲಿ ಬಿಡಿ ಆ ಸುದ್ದಿ ನಮಗ್ಯಾಕೆ?!
ಆಯಿಯ ದೋಸೆ
Posted in ಕ್ರಿಯೇಟಿವ್ ಪೇಜ್ on ಮಾರ್ಚ್ 16, 2008| Leave a Comment »