ಅನೈತಿಕ ಸಂಬಂಧಗಳು ನಮ್ಮ ಸಮಾಜದಲ್ಲಿ ಹಿಂದೆಯೂ ಇತ್ತು. ಈಗಲೂ ಇದೆ. ಗಂಡು-ಹೆಣ್ಣು ಎಂಬ ಭಿನ್ನ ಸೃಷ್ಟಿಗೆ ಜೀವ ಇರುವವರೆಗೂ ಇರುತ್ತದೆ. ಆದರೆ ಸಂಬಂಧಗಳ ಸ್ವರೂಪ ಬದಲಾಗುತ್ತಿರುತ್ತದೆ. ದೇವದಾಸಿ ಪದ್ಧತಿ ಈಗಿಲ್ಲ. ಗೆಜ್ಜೆ ಕಟ್ಟುವ ಮನೆತನಗಳು ಕಾಣುವುದಿಲ್ಲ. ಮಾಲೆಯರು ಎಂಬ ಜಾತಿಯನ್ನು ಅಸ್ಪೃಶ್ಯವಾಗಿ ಕಾಣುವ ಸ್ಥಿತಿಯಿಂದ ದೂರ ಸಾಗಿ ಬಂದಿದ್ದೇವೆ. ಹಾಗಂತ ಅನೈತಿಕ ಸಂಬಂಧಗಳು ಕಡಿಮೆಯಾಗಿಲ್ಲ. ಹಳ್ಳಿಯಿಂದ ಪೇಟೆಗೆ ಬಂದು ಮೊಕ್ಕಾಂ ಹೂಡಿರುವ ಮಂದಿಯ ಬೆನ್ನಲ್ಲೇ ಈ ಸಂಬಂಧಗಳು ಅಪಾರ್ಟ್‌ಮೆಂಟ್‌ನ ಮಂಚವನ್ನೇರಿವೆ. ಲಿವಿಂಗ್ ಟುಗೇದರ್ ಮೊದಲಾದ ಹೊಸ ಶಬ್ದಗಳೊಂದಿಗೆ ಮೈದಳೆದು ನಿಂತಿವೆ. ಈ ಹೊಸ ಸ್ವರೂಪವೇ ಕವಲು ಕಾದಂಬರಿಯ ಜೀವಾಳ.
ಧಮಶ್ರಿ, ತಬ್ಬಲಿ ನಿನಾದೇ ಮಗನೆ, ಮಂದ್ರ…ಮೊದಲಾದ ಕಾದಂಬರಿಗಳಿಗೆ ಹೋಲಿಸಿದರೆ ಕವಲು ಸಪ್ಪೆ ಅನ್ನಿಸುತ್ತದೆ. ಆದರೆ ಈ ಹೋಲಿಕೆ ಎಷ್ಟರ ಮಟ್ಟಿಗೆ ಸಮಂಜಸ ಅನ್ನುವುದು ಮುಖ್ಯ ಪ್ರಶ್ನೆ. ‘ಒಂದು ಕಾದಂಬರಿ ಬರೆದ ನಂತರ ನಾನು ಆ ವಿಚಾರದಿಂದ ಹೊರಬರುತ್ತೇನೆ’ ಹಾಗಂತ ಭೈರಪ್ಪನವರು ಸಾವಿರಾರು ಸಲ ಹೇಳಿದ್ದಾರೆ. ಖಂಡಿತಾ ಒಂದು ಆವರಣದಿಂದ ಭೈರಪ್ಪ ಹೊರಬಂದಿದ್ದಾರೆ. ಮಂದ್ರದ ಛಾಯೆ ಇಲ್ಲಿಲ್ಲ. ಭೈರಪ್ಪನವರು ಕವಲು ಮೂಲಕ ಜಗಿದು ರಸ ಬತ್ತಿರುವ ಹಳಸಲನ್ನೇ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಒಪ್ಪುವಂಥ ಮಾತು. ಪದೇ ಪದೇ ಅನೈತಿಕ ಲೈಂಗಿಕ ಚಟುವಟಿಕೆಯನ್ನು ವಿವರಿಸುವ ದೃಶ್ಯಗಳು ಕಾದಂಬರಿಯಲ್ಲಿ ಬರುತ್ತದೆ. ಆದರೆ ಅದು ಹಳೆಯದಾ?
ನಾವು ಕಥೆಯಲ್ಲಿ ಇದು ಹಳೆಯದು, ಇದು ಹೊಸತು, ಸಮಕಾಲೀನ ಎಂದು ವಿಗಂಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಕಾಲ ಎಷ್ಟೇ ಬದಲಾದರೂ ಸೆಕ್ಸ್ ಎಂಬುದು ಸೆಕ್ಸೇ. ಗಂಡಸು , ಗಂಡಸೇ. ಹೆಂಗಸು ಹೆಂಗಸೇ. ಪ್ರಾಕೃತಿಕ ಸೃಷ್ಟಿಗಳಿಗೆ ಕಾಲ ಬದಲಾಗಿದ್ದು ಗೊತ್ತಾಗುವುದಿಲ್ಲ! ಮಲಗುವ ಕೊಣೆ ಹೊಸದಾದರೆ, ನಮ್ಮ ಸೆಕ್ಸ್ ಹೊಸತು ಎಂಬ ಭಾವನೆ ಮೂಡಬಹುದು. ಆದರೆ, ಅದು ಹೊಸತಾಗಿರಲು ಸಾಧ್ಯವಿಲ್ಲ. ಗಂಡಸಿನ ಜೊತೆಗೆ ಮಲಗುವ ಹುಡುಗಿ ಬದಲಾದರೂ, ಅಲ್ಲಿ ನಡೆಯುವ ಕ್ರಿಯೆ ಹಳತೇ ಅಲ್ಲವೇ?! ಹೀಗೇ ಆಲೋಚಿಸುತ್ತಾ ಹೋದರೆ ನಮಗೆ ಹೊಸತು ಸಿಗುವುದೇ ಕಷ್ಟವಾಗುತ್ತದೆ.
ಮಾಸ್ತಿ, ಜಯಂತ್ ಕಾಯ್ಕಿಣಿ, ಅನಂತಮೂರ್ತಿ…ಯಾರದ್ದೇ ಕಥೆಗಳನ್ನು ಓದಿ. ಅಲ್ಲಿ ನಡೆಯುವ ಕ್ರಿಯೆಗಳೆಲ್ಲ ಹಳತೆ. ಸನ್ನಿವೇಶ ಹೊಸತು. ಪಾತ್ರಗಳು ಹೊಸತು. ನಿರೂಪಣೆ ಹೊಸತು. ನನಗಂತೂ ಈ ಸಲ ಭೈರಪ್ಪನವರು ಹೊಸ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ನನ್ನ ಪೂರ್ವ ನಿರ್ಧಾರಿತ ಭಾವನೆಗಳು, ಸಿದ್ದಾಂತಗಳಿಂದ ಅಲ್ಲ. ಕವಲು, ಭೈರಪ್ಪನವರ ಈ ಹಿಂದಿನ ಕಾದಂಬರಿಗಳಂತೆ ತರ್ಕಕ್ಕೆ ಹೆಚ್ಚಿನ ಒತ್ತು ಕೊಡುವುದಿಲ್ಲ. ಬದಲಾಗಿ ಕಥೆಗೆ ಪ್ರಾಮುಖ್ಯತೆ ನೀಡುತ್ತದೆ. ಈ ಕಾದಂಬರಿ ಒಂತರಹ ಧಾರವಾಹಿಯಂತೆ ಭಾಸವಾಗುತ್ತದೆ. ಇಲ್ಲಿ ೨ ಟ್ರ್ಯಾಕ್‌ಗಳಿವೆ. ಒಂದು ಉದ್ಯಮಿ ಜಯ್‌ಕುಮಾರ್ ಕುಟುಂಬದ ಕಥೆ. ಇನ್ನೊಂದು ಪ್ರಾಧ್ಯಾಪಕಿ ಇಳಾ ಮತ್ತು ಆಕೆಯ ಗಂಡ ವಿನಯ್‌ಚಂದ್ರರ ಕಥೆ. ಒಂದು ಕಡೆ ಗಂಡಸು ದುರ್ಬಲಿ. ಇನ್ನೊಂದೆಡೆ ಹೆಂಗಸು ದುರ್ಬಲಿ. ಒಂದೆಡೆ ಮಂಗಳೆ ಎಂಬ ಆಧುನಿಕ ಸೂಳೆ ಜಯ್‌ಕುಮಾರ್ ಕುಟುಂಬವನ್ನು ಆಳುತ್ತಾಳೆ. ಇನ್ನೊಂದೆಡೆ ಇಳಾಗೆ ಸೊಪ್ಪು ಹಾಕದ ವಿನಯ್‌ಚಂದ್ರ, ಆಕೆಯ ಮೇಲೆ ಅಧಿಕಾರ ಚಲಾಯಿಸುತ್ತಾನೆ.
ಮಂಗಳೆಗೆ ಮದುವೆಗೆ ಮೊದಲೇ ಅನೈತಿಕ ಸಂಬಂಧವಿರುತ್ತದೆ. ಇಳಾಗೆ ಮದುವೆಯ ನಂತರ ಶುರುವಾಗುತ್ತದೆ. ನಾನು ಮೊದಲಿಗೆ ೨ ಟ್ರ್ಯಾಕ್‌ನ್ನು ಓದುತ್ತಾ ಹೋದೆ. ಕೊನೆಗೆ ಕುತೂಹಲ ತಾಳಲಾಗದೆ ಮಂಗಳೆಯ ಟ್ರ್ಯಾಕ್‌ನ್ನು ಪೂರ್ತಿ ಓದಿ, ತದನಂತರ ಇಳಾ ಕಥೆ ಓದಲು ಆರಂಭಿಸಿದೆ. ಅಷ್ಟರ ಮಟ್ಟಿಗೆ ನನಗೆ ಕಥೆ ಇಷ್ಟವಾಯಿತು.
ಕಥೆಯ ನಿರೂಪಣೆ ಕುರಿತು ಕೆಮ್ಮುವಂತಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿ, ಲೀವಿಂಗ್ ಟುಗೆದರ್ ಎಂಬ ಪರಿಕಲ್ಪನೆಯ ಬೆನ್ನತ್ತಿ ಹೋಗಿದ್ದಾರೆ ಲೇಖಕರು. ಆಧುನಿಕ ಜೋಡಿಗಳು ಸಮಾಜಕ್ಕೆ ಸೊಪ್ಪು ಹಾಕದೇ ಇರಬಹುದು. ಮದುವೆ ಎಂಬ ಬಂಧನ ಅವರಿಗೆ ಬೇಡವಾಗಿರಬಹುದು. ಆದರೆ ಬೆಳೆದ ಮಗು, ತನ್ನ ಅಪ್ಪ ಯಾರು ಎಂಬುದುನ್ನು ತಾಯಿಯ ಬಳಿ ಕೆಳುವುದಿದೆಯಲ್ಲ, ಅದನ್ನು ಕಾದಂಬರಿ ಸಾರುತ್ತದೆ. ಈ ಟುಗೆದರ್ ಸಂಬಂಧಗಳು ಚಿರಾಯುವಾಗಿ ಉಳಿದರೆ ಖಂಡಿತಾ ಸಮಸ್ಯೆಯಿಲ್ಲ. ಆದರೆ, ಗೆಟ್ ಟುಗೇದರ್ ಎಂಬಂಥ ಸಂಬಂಧಗಳಾಗಿ ಬಿಟ್ಟರೆ ತುಂಬಾ ಕಷ್ಟವಾಗುತ್ತದೆ. ಚರ್ಮ ಸುಕ್ಕುಗಟ್ಟುವವರೆಗೆ, ಯೌವ್ವನ ಇಳಿಯುವವರೆಗೆ ಎಲ್ಲವೂ ಚೆಂದವಾಗಿರುತ್ತದೆ. ಸಮಸ್ಯೆ ಆರಂಭವಾಗುವುದು ನಂತರದ ಬದುಕಿನಲ್ಲಿ. ಕಾದಂಬರಿ ಮುಗಿಯುವ ಹೊತ್ತಿಗೆ ಮಂಗಳೆಯ ಮಗ ತೇಜಸ್ಸು ತನ್ನ ಅಪ್ಪ ಯಾರು ಎಂದು ಪೀಡಿಸಲು ಶುರು ಮಾಡುತ್ತಾನೆ. ಪ್ರಪಂಚದ ಪರಿವೇ ಇಲ್ಲದ ಮಗು ಹಾದರಕ್ಕೆ ಅರ್ಥ ಏನು ಎಂದು ತಾಯಿ ಬಳಿ ಕೇಳುತ್ತದೆ. ಆಗ ಓದುಗನಿಗೆ ಅರ್ಥವಾಗುತ್ತದೆ ಈ ಸಂಬಂಧಗಳ ಹಣೆ ಬರಹ!
ಇದೊಂದು ಮಹಿಳಾ ವಿರೋಧಿ ಕಾದಂಬರಿ ಅಂತಾ ಅದ್ಯಾಕೆ ಎಲ್ಲ ಬೊಬ್ಬೆ ಹೊಡೆಯುತ್ತಿದ್ದಾರೋ ನನಗಂತೂ ಅರ್ಥವಾಗುವುದಿಲ್ಲ. ಇಲ್ಲಿ ಜಯಕುಮಾರ್ ಎಂಬ ಉದ್ಯಮಿಯ ಮರ್ಯಾದೆಯನ್ನು ಎಷ್ಟು ಕಳೆಯಲು ಸಾಧ್ಯವೋ ಅಷ್ಟನ್ನು ಕಳೆದಿದ್ದಾರೆ ಲೇಖಕರು. ವೈಜಯಂತಿ ಎಂಬ ಜಯಕುಮಾರ್ ಮೊದಲ ಹೆಂಡತಿಗೆ ಬೇಕಾದಷ್ಟು ಗೌರವ, ಮನ್ನಣೆ ಸಿಕ್ಕದೆ. ಮಂಗಳೆ, ಇಳಾ, ಮಾಲಾ ಕೆರೂರ್, ಚಿತ್ರಾ ಹೊಸೂರ್ ಇತ್ಯಾದಿ ಮಹಿಳಾವಾದಿಗಳಿಗೆ ಸಾಕಷ್ಟು ಜಾಡಿಸಿದ್ದಾರೆ ಎಂಬುದು ನಿಜ. ಅದರ ಬೆನ್ನಲ್ಲೇ ವೈಜಯಂತಿಗೆ, ಅವರ ಮಗಳು ಪುಟ್ಟಕ್ಕನಿಗೆ, ವಿನಯ್‌ಚಂದ್ರರ ಮಗಳಿಗೆ ಗೌರವ ಧಕ್ಕಿದೆ. ಬಹುಶಃ ಇವರೆಲ್ಲ ಮಹಿಳೆಯರು ಅಲ್ಲವೆಂದು ಕಾಣತ್ತೆ. ಅಥವಾ ಸೀರೆಯುಟ್ಟ ಸಂಸ್ಕಾರಯುತ ಮಹಿಳೆಯರಿಗೆ ಗೌರವ ಸಿಕ್ಕಿದೆ, ಅವರು ಈ ಕಾಲದ ಮಹಿಳೆಯರಲ್ಲ ಎಂಬ ವಾದವೂ ಆಗಿರಬಹುದು ನಮ್ಮ ವಿಮರ್ಶಕ ಕಂ ವಿಮರ್ಶಕಿಯರದ್ದು!
ಮಹಿಳೆಯರನ್ನು ಜರಿದಷ್ಟೇ ಪುರುಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಾಡ್ಜ್‌ನಲ್ಲಿ ವೇಶ್ಯೆಯರೊಂದಿಗೆ ಸಿಕ್ಕಿ ಬೀಳುವ ಜಯಕುಮಾರ್ ಪುರುಷನಲ್ಲವೇ? ಮಹಿಳೆಯರನ್ನು ಬೇಕೆಂದಾಗಲೆಲ್ಲ ಭೋಗಿಸುವ ಸರಕಾರಿ ಅಧಿಕಾರಿ ಪ್ರಭಾಕರ ಗಂಡಸಲ್ಲವೇ? ವಿನಯಚಂದ್ರನ ದರ್ಪಕ್ಕೆ ಸಮನಾಗಿ ಮಂಗಳೆಯ ಅಧಿಕಾರಶಾಹಿತ್ವ ನಿಲ್ಲುತ್ತದೆ. ಎಲ್ಲೂ ಕಾದಂಬರಿ ಏಕಮುಖವಾಗಿ ಸಾಗುವುದಿಲ್ಲ. ಸ್ನಾತಕೋತ್ತರ ಪದವಿ ಪಡೆದು ವ್ಯವಸ್ಥಿತ ಸೂಳೆಗಾರಿಕೆಗಿಳಿಯುವ ಬುದ್ಧಿವಂತರ ಕುರಿತು ಹೇಳಿದ್ದಾರೆ. ಹಾಗಂತ ಎಲ್ಲೂ ಯಾವುದನ್ನೂ ವಿರೋಧಿಸುವುದಿಲ್ಲ. ಮಂಗಳೆ ಮಾಡಿದ್ದು ತಪ್ಪು ಎಂದು ಲೇಖಕರು ಯಾವ ಕಾರಣಕ್ಕೂ ಹೇಳಲು ಇಷ್ಟಪಡುವುದಿಲ್ಲ. ಶೇಖರನ ಪಾತ್ರದ ಮೂಲಕ ಜಯಕುಮಾರ್ ವೇಶ್ಯೆಯ ಬಳಿ ಹೋಗಲು ಉತ್ತೇಜನ ಕೊಡುತ್ತಾರೆ. ಪ್ರಭಾಕರನ ಮೂಲಕ ಮಂಗಳೆಗೆ ನೈತಿಕ ಧೈರ್ಯ ತುಂಬುತ್ತಾರೆ. ಹೀಗಿರುವಾಗ ತನ್ನ ಅಮ್ಮನ ಕುರಿತು ಬೇರೆ ಮೂಲಗಳಿಂದ ತಿಳಿದ ತೇಜಸ್, ಅಂತಿಮವಾಗಿ ಅಪ್ಪನ ಕುರಿತು ಕೇಳುವುದು ಅದ್ಯಾವ ಲೆಕ್ಕಾಚಾರದಲ್ಲಿ ತಪ್ಪಾಗುತ್ತದೆ?
ಆಧುನಿಕ ಸಮಾಜದ ಅಪಾರ್ಟ್‌ಮೆಂಟ್‌ಗಳಲ್ಲಿ , ಕಂಪನಿಗಳಲ್ಲಿ, ಐಷಾರಾಮಿ ವರ್ಗದಲ್ಲಿ, ಪಟ್ಟಣದಲ್ಲಿ, ವಲಸೆ ಹೋದ ದೇಶೀಯ ಮೂಲದ ವ್ಯಕ್ತಿಗಳಲ್ಲಿ ಆಗುತ್ತಿರುವ ಮಾನಸಿಕ, ನೈತಿಕ ಬದಲಾವಣೆಗಳನ್ನು ಈ ಕಾದಂಬರಿ ಬಿಂಬಿಸುತ್ತದೆ. ಮಂಗಳೆ ಅನೈತಿಕ ಸಂಬಂಧ ಶುರುವಾಗುವುದು ಅಪಾರ್ಟ್‌ಮೆಂಟ್‌ನ ಮಂಚದ ಮೇಲೆ. ಅಪಾರ್ಟ್‌ಮೆಂಟ್, ನಮ್ಮ ಸಮಾಜಕ್ಕೆ ಈ ಶತಮಾನದ ಕೊಡುಗೆ. ಹಾಗಾಗಿ ಕಾದಂಬರಿ ಸಮಕಾಲೀನವಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿನ ಯಾವ ಪಾತ್ರಗಳಲ್ಲೂ ತಾವು ಮಾಡುತ್ತಿರುವುದು ತಪ್ಪು, ಅಪರಾಧ ಎಂಬ ಭಾವನೆ ಬರುವುದಿಲ್ಲ. ಸೆಕ್ಸ್, ಅನೈತಿಕ ಸಂಬಂಧ ಸಹಜ ಅನ್ನಿಸುತ್ತದೆ. ಜತೆಯಾಗಿದ್ದವಳು ಕೈಕೊಟ್ಟ ತಕ್ಷಣ ಇನ್ನೊಂದು ಮದುವೆಗೆ, ಅಥವಾ ಮತ್ತೊಬ್ಬಳನ್ನು ಇಟ್ಟುಕೊಳ್ಳಲು ಎಲ್ಲರೂ ಯಾವ ಮುಜುಗರವೂ ಇಲ್ಲದೇ ತಯಾರಾಗುತ್ತಾರೆ. ಇವೆಲ್ಲ ಸಮಕಾಲೀನ ಬದಲಾವಣೆಗಳಲ್ಲವೆ?
ಪ್ರಕೃತಿ ಪುರುಷ. ಹಾಗಂತ ಮೊನ್ನೆ ಗೆಳತಿಯೊಬ್ಬಳು ಹೇಳುತ್ತಿದ್ದಳು. ಆಕೆ ಕೂಡ ಇವತ್ತಿನವಳು. ಇಂಗ್ಲೀಷ್ ಕಾದಂಬರಿ ಓದುವವಳು. ಇದು ಆಕೆಯೊಬ್ಬಳ ಅಭಿಪ್ರಾಯವಲ್ಲ. ಪ್ರಕೃತಿಯ ಅಲಿಖಿತ ನಿಯಮ. ಪಾಶ್ಚಾತ್ಯ ದೇಶಗಳಲ್ಲಿ ಇಂಥ ಭಾವನೆಯಿಲ್ಲ. ಅಲ್ಲಿ ಸ್ತ್ರೀ, ಪುರುಷ ಸಮಾನ ಎಂದು ಭಾಮಿನಿಯರು ಹೇಳಬಹುದು. ಅಥವಾ ಅದು ಸತ್ಯವೂ ಆಗಿರಬಹುದು. ಆದರೆ, ಮಗುವೊಂದು ತಾಯಿಯೆದುರು ಅಪ್ಪ ಯಾರು ಎಂದು ಕೇಳಿದಾಗ ಆ ತಾಯಿ ಮಗುವನ್ನು ಎದುರಿಸುವ, ಅದೇ ಪ್ರಶ್ನೆಯನ್ನು ಅಪ್ಪನ ಬಳಿ ಹೇಳಿದಾಗ ಆತ ಅದನ್ನು ಎದುರಿಸುವ ಬಗೆಯನ್ನು ಸುಮ್ಮನೆ ಕಲ್ಪಿಸಿಕೊಳ್ಳಿ…ಅದನ್ನೇ ಕಾದಂಬರಿ ಸಾರುತ್ತದೆ.
ಕಡೆಯದಾಗಿ ಸೆಕ್ಸ್ ಎಂಬ ಪದವನ್ನು ಗೂಗಲ್ ಸರ್ಚ್‌ನಲ್ಲಿ ಹುಡುಕಾಟ ನಡೆಸುವುದರಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದಿದೆ. ವಿಯೆಟ್ನಾಂ ಮೊದಲ ಸ್ಥಾನದಲ್ಲಿದೆಯಂತೆ ಹಾಗಂತ ಮೊನ್ನೆ ಬಂದ ಸುದ್ದಿಯನ್ನು ನೋಡಿರಬಹುದು. ಅಂದಹಾಗೆ ಇದು ಸಮಕಾಲೀನ ಬೆಳವಣಿಗೆ!
Read Full Post »