Feeds:
ಲೇಖನಗಳು
ಟಿಪ್ಪಣಿಗಳು

Archive for ಸೆಪ್ಟೆಂಬರ್, 2008

ಹೇ ಏಸುವೇ, ಇವರನ್ನು ಕಾಪಾಡಪ್ಪ ತಂದೆ…!

ಹಿಂದು ಧರ್ಮದಲ್ಲಿ ದಲಿತರನ್ನು ಶೋಷಿಸಿಲಾಗುತ್ತಿದೆ, ಹಿಂದುಳಿದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ, ಅಂತಹವರು ಕ್ರಿಶ್ಚಿಯನ್ನರಾದರೆ ತಪ್ಪೇನು? ಎಂದು ವಾದಿಸುವವರು ಬಹಳ ಜನರಿದ್ದಾರೆ. ಹಾಗಂತ ಆ ರೀತಿ ವಾದ ಮಾಡುವವರು ಯಾವತ್ತೂ ಮತಾಂತರಗೊಂಡಿಲ್ಲ! ಮತಾಂತರಗೊಂಡ ಹಿಂದುವನ್ನು ಕ್ರೈಸ್ತ ಸಮುದಾಯ ಯಾವ ತರಹ ಸ್ವೀಕರಿಸುತ್ತದೆ ಎಂಬುದರ ಕುರಿತು ಮತಾಂತರ ಸಮರ್ಥಿಸುವ ವಿಚಾರವಾದಿಗಳಲ್ಲಿ ಉತ್ತರವಿಲ್ಲ. ಒಬ್ಬ ದಲಿತ, ಕ್ರೈಸ್ತನಾಗಿ ಪರಿವರ್ತನೆಗೊಂಡ ನಂತರ ಅನುಭವಿಸುವ ನೋವು, ಸಂಕಟಗಳ ಕುರಿತು ಅವರಿಗೆ ಗೊತ್ತಿಲ್ಲ. ಕ್ರೈಸ್ತರಲ್ಲೂ ಅನೇಕ ಪಂಗಡಗಳಿವೆ. ಅವರಲ್ಲೂ ಒಳ ಜಗಳ ಸಾಕಷ್ಟಿದೆ ಎಂಬುದರ ಪರಿವೇ ಅವರಿಗಿಲ್ಲ!

‘ತನ್ನ ಪತ್ನಿ ಸೀತೆಯನ್ನು ರಾವಣನಿಂದ ರಕ್ಷಿಸಿಕೊಳ್ಳಲಾಗದ ರಾಮ ದೇವರಾಗುವುದು ಹೇಗೆ?’ ‘ಬ್ರಾಹ್ಮಣರಿಗೆ ಮೂಲ ಪುರುಷನಾದ ವಶಿಷ್ಟ ಮಹರ್ಷಿ, ಶ್ರೀರಾಮನಿಗೆ ಗುರು ಆಗಿದ್ದಾನೆ. ಈತನು ವೇಶ್ಯೆಯಾದ ಊವರ್ಶಿ ಗರ್ಭದಲ್ಲಿ ಹುಟ್ಟಿದನು. ಸೂಳೆಯಾದ ಊವರ್ಶಿ ಮಹಾವಿಷ್ಣುವಿಗೆ ಕುಮಾರಿ. ವಶಿಷ್ಟನು ಈ ಶೂದ್ರ ಸ್ತ್ರೀಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಇವರಿಬ್ಬರ ಸಂತಾನದಿಂದ ಬಂದವರೇ ಬ್ರಾಹ್ಮಣರು’  ಇಂತಹ ಭವ್ಯವಾದ, ದಿವ್ಯವಾದ ಸಾಲುಗಳು ಸಿಕ್ಕಿದ್ದು ಮಂಗಳೂರಿನ ಚರ್ಚ್ ಮೇಲೆ ಬಜರಂಗದಳದವರು ದಾಳಿ ನಡೆಸಿ ವಶಪಡಿಸಿಕೊಂಡ ‘ಸತ್ಯದರ್ಶಿನಿ’ ಎಂಬ ಮಹಾಗ್ರಂಥದಲ್ಲಿ! ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದ ಚರ್ಚ್‌ಗಳ ಮೇಲೆ ಬಜರಂಗದಳದವರು ದಾಳಿ ನಡೆಸಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. ದುರಂತವೆಂದರೆ ಸತ್ಯದರ್ಶಿನಿಯಲ್ಲಿ ಕ್ರೈಸ್ತ ಪಾದ್ರಿಗಳು ಸಾರಲು ಹೊರಟ ವಿಚಾರದ ಕುರಿತು ಯಾರೂ ಉಸಿರನ್ನೇ ಎತ್ತುತ್ತಿಲ್ಲ.

ಅಲ್ಲೆಲ್ಲೋ ಡೆನ್ಮಾರ್ಕ್‌ನಲ್ಲಿ ಪ್ರವಾದಿ ಮಹಮ್ಮದರ ವ್ಯಂಗ್ಯ ಚಿತ್ರ ಬರೆಯಲಾಗಿತ್ತಂತೆ. ಅದಕ್ಕೆ ಬೆಂಗಳೂರಿನ ಶಿವಾಜಿ ನಗರದಲ್ಲಿ ಈಗೊಂದು ಎರಡು ವರ್ಷದ ಹಿಂದೆ ನಡೆದ ಗಲಾಟೆಯ ಕ್ಷಣಗಳು ನಿಮಗೆ ನೆನಪಿರಬಹುದು. ದುರಂತ ನೋಡಿ ಪ್ರವಾದಿ ನಿಂದನೆಗೆ ಒಳಗಾದರೆ, ಏಸುವನ್ನು ಬೈದರೆ ನಮ್ಮ ದೇಶದಲ್ಲಿ ದೊಡ್ಡ ಗಲಭೆಯೇ ನಡೆಯುತ್ತದೆ. ನಮ್ಮವರೇ ಬಣ್ಣ ಬಣ್ಣದ ಹೇಳಿಕೆ ನೀಡಿ, ಹಲವು ಬಗೆಯ ವಾದ ಮಂಡಿಸಿ ಅಂತಹ ಗಲಭೆಯನ್ನು ಸಮರ್ಥಿಸುತ್ತಾರೆ. ಆದರೆ ರಾಮನನ್ನು, ಕೃಷ್ಣನನ್ನು ಅವಹೇಳನ ಮಾಡಿದರೆ, ದಲಿತರು, ಅಸ್ಪೃಶ್ಯತೆ…ಇತ್ಯಾದಿ, ಇತ್ಯಾದಿ ಕೂಗು ಕೇಳಿಬರುತ್ತದೆ ಹೊರತೂ ಅವಹೇಳನ ಮಾಡಿದವರ ಬಣ್ಣ ಬಯಲಾಗುವುದೇ ಇಲ್ಲ!

‘ಸೀತೆಯನ್ನು ರಕ್ಷಿಸಲು ಸೋತ ರಾಮ ದೇವರಲ್ಲ ಎಂದಾದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾಗದೇ ಶಿಲುಬೆಗೇರಿದ ಏಸು ಜಗತ್ತಿಗೆ ಮಹಾಪ್ರಭುವಾಗುವುದು ಹೇಗೆ?! ವಸಿಷ್ಟರು ಊವರ್ಶಿ ಗರ್ಭದಲ್ಲೇ ಹುಟ್ಟಿರಬಹುದು, ನಿಮ್ಮ ಏಸು ಯಾರ ಗರ್ಭದಲ್ಲಿ ಜನ್ಮ ಪಡೆದ?! ಆತನ ತಂದೆ ತಾಯಿಗಳು ಯಾರು ಎಂಬುದರ ಕುರಿತು ಆ ಪರಿ ಗೊಂದಲವಿದೆಯಲ್ಲಾ? ಅದಕ್ಕಿಂತ ನಮ್ಮ ವಸಿಷ್ಟರೇ ಶ್ರೇಷ್ಠರಲ್ವಾ?!’ ಹಾಗಂತ ಅವರನ್ನು ಯಾರು ಪ್ರಶ್ನಿಸುವವರೇ ಇಲ್ಲದಂತಾಗಿದ್ದರು. ಅಂತಹದ್ದೊಂದು ಸಾಹಸಕ್ಕೆ ಕೈಹಾಕಿದ ಬಜರಂಗದಳದವರ ವಿರುದ್ಧ ಕೆಲವರು ಹರಿಹಾಯುತ್ತಿದ್ದಾರೆ. ಅದನ್ನು ನಿಷೇಧಿಸಿ ಅಂತಾ ಹಲವರು ಕಿರುಚುತ್ತಿದ್ದಾರೆ!

ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಬಜರಂಗದಳದವರಿಗೆ ಜೈಲು ಶಿಕ್ಷೆ ಪ್ರಾಪ್ತವಾಯಿತು. ಆದರೆ ಹಿಂದು ದೇವರನ್ನು ಬೆತ್ತಲೆಗೊಳಿಸಿದ ಎಂ.ಎಫ್ ಹುಸೇನ್‌ಗೆ ಯಾವ ಶಿಕ್ಷೆಯಾಯಿತು? ಆತನ ವಿರುದ್ಧ ನಮ್ಮ ಸರಕಾರಗಳು ಯಾವ ಕ್ರಮ ಕೈಗೊಂಡವು?! ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿರುವ ನ್ಯೂಲೈಫ್ ಚರ್ಚಿನ ಪಾದ್ರಿಗಳನ್ನು ಯಾವ ಜೈಲಿಗೆ ಹಾಕಿದರು? ಹಾಗಾದರೆ ಅವರುಗಳು ಮಾಡುವುದೆಲ್ಲಾ ಅಪರಾಧವಲ್ಲವಾ? ಅದೆಲ್ಲಾ ನಮ್ಮ ಕೋಮಿನವರನ್ನು ಉದ್ರೇಕಿಸುವುದಿಲ್ಲವಾ? ಇದಕ್ಕೆಲ್ಲಾ ಯಾವ ಕೋಮು ಸೌಹಾರ್ದಿಗಳು ಉತ್ತರಿಸುತ್ತಾರೆ? ಹಿಂದುಗಳಿಗೆ ಅನ್ಯಾಯವಾದಾಗ ‘ಸಬ್ ಕೋ ಸನ್ಮತಿ ದೇ ಭಗವಾನ್’ ಅಂತಾ ಅಂಗಲಾಚುವ ಮಂದಿ ನಮ್ಮಲ್ಲಿ ಎಷ್ಟಿದ್ದಾರೆ? ನೀವೆ ಹೇಳಿಬಿಡಿ.

“ಮುಸ್ಲಿಂ ಎಂಬ ಕಾರಣಕ್ಕೆ ವೀಸಾ ವಿಳಂಬ: ಪ್ರಧಾನಿ ಜತೆ ತೆರಳದ ಸಂಪಾದಕ” ಎಂದು ಮಂಗಳವಾರ ಒಂದು ಸುದ್ಧಿ ಬಂದಿತ್ತು. ನೀವು ಗಮನಿಸಿದ್ದೀರೋ, ಬಿಟ್ಟಿದ್ದರೋ ಗೊತ್ತಿಲ್ಲ. ಅಸ್ಸಾಂನ ಪ್ರಮುಖ ದಿನಪತ್ರಿಕೆಯೊಂದರ ಸಂಪಾದಕರಾದ ಹೈದರ್ ಹುಸೇನ್‌ಗೆ ಮುಸ್ಲಿಂ ಎಂಬ ಕಾರಣಕ್ಕೆ ಅಮೆರಿಕ ವೀಸಾ ಕೊಡಲು ಸತಾಯಿಸಿದ ಸುದ್ಧಿ ಅದು. ಅದೇ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ…?! ಕ್ರೈಸ್ತರು ಮುಸ್ಲಿಂ ಮೇಲೆ ಅನುಮಾನಪಡಬಹುದು, ಮುಸ್ಲಿಂ ಕ್ರೈಸ್ತರನ್ನು ಅವಮಾನಿಸಬಹುದು. ಆದರೆ ಹಿಂದು ಮಾತ್ರ ಹಾಗೆ ಮಾಡುವಂತಿಲ್ಲ. ಬಾಂಗ್ಲಾ ನಿರಾಶ್ರಿತ ಎಂದು ಹೇಳಿಕೊಂಡು ದೇಶದ ಒಳನುಗ್ಗಿ ಬಾಂಬ್ ಇಡುವ ಭಯೋತ್ಪಾದಕನಿಗೂ ಜಾಗ ಕೊಡಬೇಕು ಅನ್ನುವವರು ನಮ್ಮವರೇ! ಇದು ಯಾವ ನ್ಯಾಯ ಸ್ವಾಮಿ?

ಅಷ್ಟಕ್ಕೂ ಮತಾಂತರಗೊಂಡ ಹಿಂದುವನ್ನು ಕ್ರೈಸ್ತ ಸಮುದಾಯ ಯಾವ ತರಹ ಸ್ವೀಕರಿಸುತ್ತದೆ ಎಂಬುದರ ಕುರಿತು  ನಮಗೆಷ್ಟು ಗೊತ್ತಿದೆ? ಒಬ್ಬ ದಲಿತ, ಕ್ರೈಸ್ತನಾಗಿ ಪರಿವರ್ತನೆಗೊಂಡ ನಂತರ ಅನುಭವಿಸುವ ನೋವು, ಸಂಕಟಗಳನ್ನು ಬಲ್ಲವರ್ಯಾರು? ಕ್ರೈಸ್ತರಲ್ಲೂ ಅನೇಕ ಪಂಗಡಗಳಿವೆ. ಅವರಲ್ಲೂ ಒಳ ಜಗಳ ಸಾಕಷ್ಟಿದೆ ಎಂಬುದರ ಪರಿವು ನಮಗಿದೆಯಾ? ಮೊನ್ನೆ ಸಿಕ್ಕಿಬಿದ್ದ ನ್ಯೂಲೈಫ್ ಚರ್ಚಿನ ಮಂದಿ ಕ್ರೈಸ್ತ ಧರ್ಮದ ಬಂಡಾಯಕೋರರು! “ಪೆಂತ ಕೊಸ್ತ” ಎಂಬ ಪಂಥಕ್ಕೆ ಸೇರಿದ ನ್ಯೂಲೈಫ್‌ಗೂ, ರೋಮನ್ ಕ್ಯಾಥೋಲಿಕ್‌ರ ಆಚಾರ, ವಿಚಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅವರಿಬ್ಬರ ನಡುವೆ ಸಾಕಷ್ಟು ಒಳಜಗಳವಿದೆ. ಪ್ರೊಟೆಸ್ಟಂಟ್ ಮತ್ತು ಕ್ಯಾಥೋಲಿಕ್‌ರು, ಬ್ರಾಹ್ಮಣ ಮತ್ತು ಶೂದ್ರರಿಗಿಂತ ಹೆಚ್ಚು ಬಡಿದಾಡುತ್ತಾರೆ ಎಂಬುದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು? ಪರಿವರ್ತಿತ ಕ್ರೈಸ್ತನಿಗೆ ಸಾಕಷ್ಟು ಚರ್ಚುಗಳು ಪ್ರವೇಶ ನೀಡುವುದಿಲ್ಲ. ಅರ್ಥಾತ್ ಇದು ಅಸ್ಪೃಶ್ಯತೆಯೇ ಅಲ್ಲವಾ? ‘ಸಬ್ ಕೋ ಸನ್ಮತಿ ದೇ ಭಗವಾನ್’ಎಂದು ಅಂಗಲಾಚುವ ಮಂದಿ ಈ ಕುರಿತು ಯಾಕೆ ಮಾತಾಡುವುದಿಲ್ಲ?

೧೯೦೧ ರಲ್ಲಿ ಮೇಘಾಲಯದಲ್ಲಿ ಕ್ರೈಸ್ತರ ಸಂಖ್ಯೆ ಶೇ. ೬.೧೬ ರಷ್ಟಿತ್ತು. ೧೯೯೧ ರ ಹೊತ್ತಿಗೆ ಅದು ಶೇ. ೬೪.೫೮ ಕ್ಕೆ ಏರಿಕೆಯಾಗಿದೆ. ೯೦ ವರ್ಷದಲ್ಲಿ ಈ ಪರಿ ಏರಿಕೆ ಹೇಗಾಯಿತು? ಮತಾಂತರ ಎಂಬುದೇ ಪ್ರಶ್ನಗೆ ಸಿಗುವ ಉತ್ತರ! ೧೯೦೧ ರಲ್ಲಿ ಶೇ. ೦.೦೫ ಪ್ರಮಾಣದ ಕ್ರೈಸ್ತರಿದ್ದ ಮಿಜೋರಾಮ್ ಈಗ ಸಂಪೂರ್ಣ ಕ್ರಿಶ್ಚಿಯನ್ ಸಾಮ್ರಾಜ್ಯ! ನಾಗಾಲ್ಯಾಂಡ್, ತ್ರಿಪುರಾ, ಮಣಿಪುರ. ಅಸ್ಸಾಂ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ದೇಶದ ಶೇ. ೨.೫ ರಷ್ಟು ಜನ ಕ್ರೈಸ್ತರು ಹಾಗಂತ ಮಿಷನರಿಗಳು ಕೊಟ್ಟ ಲೆಕ್ಕ. ಪರಿವರ್ತನೆಗೆ ಒಳಗಾಗಿರುವವರನ್ನೂ ಸೇರಿಸಿದರೆ ಆ ಸಂಖ್ಯೆ ಎಷ್ಟಾಗುತ್ತದೋ ಬಲ್ಲವರ್ಯಾರು!

ಹಣದ ಆಮಿಷ ಒಡ್ಡಿ, ಇತರ ಆಮಿಷ ಒಡ್ಡಿ ಇನ್ನೊಬ್ಬರ ಹೆಂಡಿರನ್ನೇ ಲಫಟಾಯಿಸಿಕೊಂಡು ಹೋಗುವ ಈ ಕಾಲದಲ್ಲಿ ಆಮಿಷದಿಂದ ಮತಾಂತರ ಮಾಡುವುದು ದೊಡ್ಡ ಸಾಹಸವಲ್ಲ ಬಿಡಿ! ಆದರೂ ನಾವು ಅದಕ್ಕೆ ನಮ್ಮದೇ ತಪ್ಪುಗಳನ್ನು ಮಂಡಿಸುತ್ತೇವೆ. ಕ್ರೈಸ್ತರನ್ನು ನಿರಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸುತ್ತೇವೆ ಎಂಬುದು ನಿಜಕ್ಕೂ ದುರಂತದ ಪರಾಕಾಷ್ಠೆ. ಮತಾಂತರ ಎಂಬುದು ಕ್ರೈಸ್ತರಿಗೆ ಎಷ್ಟು ಪರಮಪ್ರಿಯವಾದ ವಿಚಾರವೆಂದರೆ ಮತಾಂತರರದ ಕುರಿತು ಆ ನಾಡಿನಲ್ಲಿ ಫಿಎಚ್‌ಡಿ ಮಾಡಿದವರು ಹಲವರಿದ್ದಾರೆ!

The conversion process begins with three predispositions: (1) an inclination to seek answers to the mysteries, tragedies, and the circumstances of life through religion and (2) a sense of an enduring frustration that (3) has not been met through one’s present faith. These feelings prompt individuals to become religious seekers. They are oriented toward the kind of answers that might come from a transempirical source… ಹಾಗಂತ ಹೆನ್ರಿ ನ್ಯೂಟನ್ ಮಲೋನಿ ಎಂಬ ಮನಶಾಸ್ತ್ರಜ್ಞನೊಬ್ಬ ಮತಾಂತರ ಮಾಡುವವರು ಅನುಸರಿಸುವ ವಿಧಾನ ಕುರಿತ ಆಡಿರುವ ಮಾತುಗಳಿವು. ಕ್ರೈಸ್ತರ ಮತಾಂಧತೆಗೆ ಇದಕ್ಕಿಂತ ಒಳ್ಳೇ ಮಾತು ಬೇಕೇ? ಮತಾಂತರ ಎಂಬ ದಂಧೆಯನ್ನು ಕ್ರೈಸ್ತರು ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ ಎಂದು ಗೊತ್ತಿದ್ದರೂ ನಾವು ನಮ್ಮ ಧರ್ಮದ ಹುಳುಕುಗಳೇ ಮತಾಂತರಕ್ಕೆ ಕಾರಣ ಅನ್ನುತ್ತೇವಲ್ಲಾ?

ವೇದಿಕೆಯಲ್ಲಿ ನಿಂತು ಭಾಷಣ ಬಿಗಿಯುವ ಮಂದಿಗೆ, ಎಸಿ ರೂಮಿನಲ್ಲಿ ಕೂತು ಗೀಚುವ ಮಂದಿ ಎಡ, ಬಲ…ಯಾವ ಸಂಘಟನೆಯಲ್ಲಿದ್ದರೂ ಯಾವತ್ತೂ ಅವರಿಗೆ ಕಷ್ಟವಿಲ್ಲ. ಆದರೆ ಸಾಮಾನ್ಯ ಕಾರ್ಯಕರ್ತ ಅನ್ನಿಸಿಕೊಂಡವನನ್ನು ಜೈಲಿಗೆ ಹಾಕಿದರೆ ಒಮ್ಮೊಮ್ಮೆ ಆರು ತಿಂಗಳಾದರೂ ಬಿಡಿಸಿಕೊಂಡು ಬರುವವರು ಯಾರೂ ಇರುವುದಿಲ್ಲ. ಆದರೂ ಇಂಥ ಕೃತ್ಯಗಳನ್ನೆಲ್ಲಾ ವಿರೋಧಿಸುತ್ತಾ, ವರ್ಷಕ್ಕೆ ೬ ತಿಂಗಳು ಜೈಲಿನಲ್ಲಿ ಕೊಳೆಯಲು ಬಜರಂಗಿಯೊಬ್ಬ ಸಿದ್ಧ ಎಂದರೆ ಆತನ ದೇಶಪ್ರೇಮಕ್ಕೊಂದು ಸಲಾಮ್ ಅನ್ನಲ್ಲೇ ಬೇಕು. ಅಷ್ಟಕ್ಕೂ ಬಜರಂಗದಳ ಎಂಬದು ಯೂನಿವರ್ಸಿಟಿ ಪ್ರೊಫೆಸರ್‌ಗಳ ಸಂಘಟನೆಯಲ್ಲ! ಅಕಾಡೆಮಿಕ್ ನಾಟಕಕಾರರೂ ಅದರಲ್ಲಿ ಇಲ್ಲ!

ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು…ತುತ್ತು ಊಟಕ್ಕೂ ದಿನದ ದುಡಿಮೆಯನ್ನೇ ಆಧರಿಸಿರುವ ಮಂದಿಯೇ ಹೆಚ್ಚು. ಆದರೂ ಅವರು ತಮ್ಮ ನೋವು ಸಂಕಟಗಳನ್ನೆಲ್ಲಾ ಮರೆತು ದೇಶದ ಒಳಿತಿಗಾಗಿ ಜೀವನದ ಒಂದಿಷ್ಟು ಕ್ಷಣ ಕೊಡುತ್ತಾರೆ. ಅಂತಹವನಿಗೂ ಅಡ್ಡಗಾಲಾಗಿ ನಿಂತು, ಆತನನ್ನು ಜೈಲಿಗೆ ಕಳುಹಿಸಿ ಎಂದು ಕೂಗಾಡುತ್ತಾರಲ್ಲ ನಮ್ಮಲ್ಲಿಯ ಕೆಲ ಮಂದಿ! ೩೫೫ ನೇ ವಿಯನ್ನು ರಾಜ್ಯಕ್ಕೆ ವಿಧಿಸುತ್ತೇವೆ ಎಂದು ಕಿರುಚತ್ತಾರಲ್ಲ? ನಾವು ನಮ್ಮ ತತ್ವ, ಸಿದ್ಧಾಂತಗಳನ್ನೆಲ್ಲಾ ಬದಿಗಿಟ್ಟು ಅಂತಹ ಕೆಳ ಮಟ್ಟದ ಕಾರ್ಯಕರ್ತರ ಬಗ್ಗೆ ಆಲೋಚಿಸಬೇಕಿದೆ. ಈಗಲೇ ಈ ಪರಿ ಉರಿಯುತ್ತಿರುವ ಮತಾಂಧರು, ಭಯೋತ್ಪಾದಕರಿಗೆ ಸಡ್ಡು ಹೊಡೆಯುವ ಸಂಘಟನೆಯೊಂದು ದೇಶದಲ್ಲಿ ಇಲ್ಲದಿದ್ದಿದರೆ ದೇಶದ ಸ್ಥಿತಿ ಇಷ್ಟೊತ್ತಿಗೆ ಹೇಗಿರುತ್ತಿತ್ತು ಎಂಬುದನ್ನು ಒಮ್ಮೆ ಕಲ್ಪಿಸಿಕೊಂಡು ನೋಡಿ. ಓ ಏಸುವೇ, ಹಾಗೆ ಕಲ್ಪಿಸಿಕೊಂಡ ನಂತರವೂ ಮತಾಂಧರನ್ನು ಪ್ರೋತ್ಸಾಹಿಸುವವರನ್ನು ನೀನೇ ಕಾಪಾಡಪ್ಪಾ ತಂದೆ! ಎಂದು ಪ್ರಾಥಿಸೋಣ ಅಲ್ವಾ?!

Read Full Post »

ಅಲ್ಲಿ ನಡೆವ ಘಟನೆಗಳ ಪರಿವೇ ನಮಗಿಲ್ಲ…!

(‘ನನ್ನದೆಂಬ ನಾಲ್ಕು ಮಾತು’ ಅನ್ನೋ ಅಂಕಣ ಇದಿನಿಂದ ಆರಂಭವಾಗುತ್ತಿದೆ. ಪ್ರತಿ ಗುರುವಾರ ಅಕ್ಷರ ವಿಹಾರದಲ್ಲಿ ಈ ಅಂಕಣ ಮೂಡಿ ಬರಲಿದೆ)

೧೯೮೯ರಿಂದ ಇವತ್ತಿನವರೆಗೆ ಅಲ್ಲಿ ಬಾಂಬ್ ಸ್ಫೋಟ, ಉಗ್ರರ ದಾಳಿ…ಇಂತಹ ರಕ್ತ ಕಾರುವ ಕೃತ್ಯಗಳಿಗೆ ಬಲಿಯಾದವರ ಸಂಖ್ಯೆ ಸುಮಾರು ೭೫,೦೦೦. ದಿನಕ್ಕೊಬ್ಬ ಯೋಧ ಅಲ್ಲಿ ವೀರ ಮರಣವನ್ನಪ್ಪುತ್ತಿದ್ದಾನೆ. ಸಾಮಾನ್ಯ ಜನ ಅಲ್ಲಿ ವಾಸಿಸುವುದೇ ದೊಡ್ಡ ಸಾಹಸವಾಗಿದೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಮೇಲೆ ಕಾಮುಕರ ಕಣ್ಣು ಯಾವಾಗ ಬೀಳುತ್ತದೆಯೋ ಹೇಳಲು ಸಾಧ್ಯವಿಲ್ಲ. ಹಿಂದು ಎನಿಸಿಕೊಂಡವನಂತೂ ಅಲ್ಲಿ ಬದುಕಲು ಸಾಧ್ಯವೇ ಇಲ್ಲ. ಇಷ್ಟೆಲ್ಲದರ ನಡುವೆಯೂ ಅವರು ಅಲ್ಲಿ ಬದುಕುತ್ತಿದ್ದಾರೆ. ಈ ನಾಡು ನಮ್ಮದು, ಬಿಟ್ಟುಕೊಡೆವು ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಇದು ಕೊಲ್ಲಿ ರಾಷ್ಟ್ರದ ಕಥೆಯಲ್ಲ, ದೇಶದ ಗಡಿಯಲ್ಲಿರುವ , ದೇಶದ ಅವಿಭಾಜ್ಯ ಅಂಗವೆನಿಸಿರುವ ಕಾಶ್ಮೀರಿ ಕಣಿವೆಯ ಕಥೆ. ಅಲ್ಲಿ ಬದುಕುವವರ ವ್ಯಥೆ.

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿ ಎಂಬ ಕೂಗು ನೆಹರೂ ಮತ್ತು ಜಿನ್ನಾ ಎಂಬ ಮೇಧಾವಿ ನಾಯಕರಿಬ್ಬರು ಸೇರಿ ಅಖಂಡ ಭಾರತವನ್ನು ತುಂಡರಿಸಿದ ದಿನದಿಂದಲೂ ಕೇಳಿ ಬರುತ್ತಿದೆ. ಅದರ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ವರೆಗೆ ಮೂರು ಅಧಿಕೃತ ಯುದ್ಧ ನಡೆದಿದೆ.

೧೯೪೭-೪೮ ರ ಅವಧಿಯಲ್ಲಿ ನಾಲ್ಕು ಸಲ ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ ಮಾಡಿತು. ಇದರ ಪರಿಣಾಮವಾಗಿ ಉದ್ಭವಿಸಿದ್ದು ಮೊದಲನೇ ಕಾಶ್ಮೀರ ಕದನ. ಎರಡು ರಾಷ್ಟ್ರಕ್ಕೂ ಸ್ವಾತಂತ್ರ್ಯದ ಸ್ಪೂರ್ತಿ. ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ದಾಹ. ವರ್ಷಗಳ ಕಾಲ ನಡೆದ ಈ ಯುದ್ಧ ೧೯೪೮ ರ ಡಿಸೆಂಬರ್ ಅಂತ್ಯದ ಸುಮಾರಿಗೆ ನಿಂತಿತು. ೧,೨೦೦ ಭಾರತೀಯ ಸೈನಿಕರು ಯುದ್ಧ ಭೂಮಿಯಲ್ಲಿ ಮಡಿದರು. ೩,೨೦೦ ಸೈನಿಕರು ಗಾಯಗೊಂಡರು. ಕೈ ಕಾಲು ಕಳೆದುಕೊಂಡರು. ಆವತ್ತಿನಿಂದಲೂ ಅಲ್ಲಿ ವಾಸಿಸುವ ಜನತೆಗೆ ನೆಮ್ಮದಿಯಿಲ್ಲ. ಬದುಕಿನ ಕುರಿತಾಗಿ ಭರವಸೆಯಿಲ್ಲ. ಸಾವು ಯಾವ ಘಳಿಗೆಯಲ್ಲಿ ಅಪ್ಪಿಕೊಳ್ಳಬಹುದೆಂಬುದು ಗೊತ್ತಿಲ್ಲ.

ಇವತ್ತು ಅಲ್ಲಿ ನೆಲೆ ನಿಂತಿರುವವರು ಉಸಿರನ್ನು ಅಂಗೈನಲ್ಲಿ ಹಿಡಿದುಕೊಂಡೇ ಬದುಕುತ್ತಿದ್ದಾರೆ! ಉಗ್ರರ, ಪಾಕ್‌ನ ಗುಪ್ತಚರರ ಸಂಸ್ಥೆಗಳ , ಕೆಲ ಪಟ್ಟಭದ್ರ ಮುಸ್ಲಿಂ ಸಂಘಟನೆಗಳ ತಾಣವಾಗಿರುವ ಜಮ್ಮು, ಕಾಶ್ಮೀರ, ಲಡ್ಹಾಕ್ ಮೂರು ಭಾಗಗಳಲ್ಲೂ ಬಾಂಬ್ ಎಂಬುದು ಸರ ಪಟಾಕಿಯಂತೆ ಸಿಡಿಯುತ್ತಲೇ ಇರುತ್ತದೆ. ೨೦೦೦ ದ ದಶಕದ ಸುಮಾರಿಗೆ ೩೦,೦೦೦ ಕ್ಕೂ ಹೆಚ್ಚು ಮಂದಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ ಎಂದು ಸರಕಾರ ಹೇಳಿತ್ತು. ೨೦೦೫ ರ ಹೊತ್ತಿಗೆ ೬೦,೦೦೦ ಜನ ಬಲಿಯಾಗಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಒಟ್ಟಿನಲ್ಲಿ ಅಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಮೊದಲ ಕಾಶ್ಮೀರ ಯುದ್ಧದಲ್ಲಿ ಸೈನಿಕರು ರಕ್ತ ಸುರಿಸಿದರು. ಕಾಶ್ಮೀರ ದೇಶದ ಕೈ ವಶವಾಯಿತು. ಮುಗಿಯಿತು ಕಾಶ್ಮೀರದ ಅಧ್ಯಾಯ… ಊಹುಂ ಮುಗಿಯಲಿಲ್ಲ . ಆಗಷ್ಟೇ ಆರಂಭವಾಯಿತು ಕಾಶ್ಮೀರಿ ಕಣಿವೆಯ ಅಧ್ಯಾಯ. ಕೆಲ ಪಾಕಿಸ್ತಾನಿ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಭಾರತದ ವಿಜಯವನ್ನು ಸಹಿಸಲು ಸಾಧ್ಯವಾಗಲಿಲ್ಲ. ಭಯೋತ್ಪಾದಕತೆಯಂತಹ ದುಷ್ಕೃತ್ಯಗಳು ಹುಟ್ಟಿಕೊಂಡಿತು. ೧೯೬೫ ರಲ್ಲಿ ಮತ್ತೆ ಭಾರತ -ಪಾಕ್ ಯುದ್ಧ ಆರಂಭವಾಯಿತು. ಅದು ಎರಡನೇ ಕಾಶ್ಮೀರಿ ಕದನ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಡೆದ ಈ ಕಾಳಗದಲ್ಲಿ ೩,೩೦೦ ಭಾರತೀಯ ಯೋಧರು ಅಸುನೀಗಿದರು. ೮,೫೦೦ ಕ್ಕೂ ಅಧಿಕ ಯೋಧರು ಅಂಗ ಹೀನರಾದರು. ಮತ್ತೆ ವಿಜಯ ಮಾಲೆ ಭಾರತ ಮಾತೆಯ ಮುಡಿಯೇರಿತು. ಕಾಶ್ಮೀರ ಭದ್ರವಾಗಿ ಭಾರತದ ಪಾಲಾಯಿತು.

೧೯೯೪ ರಿಂದ ಅಲ್ಲಿ ನಡೆಯುತ್ತಿರುವ ಮಾರಣಹೋಮಕ್ಕೆ ಇಲ್ಲದಂತಾಗಿದೆ. ವರ್ಷಕ್ಕೆ ಸರಾಸರಿ ೨,೫೦೦ ವಿದ್ವಂಸಕ ಕೃತ್ಯಗಳು ನಡೆಯುತ್ತಿದೆ. ೧೯೯೭ರ ಮಾರ್ಚ್ ೨೨ ರಂದು ಭಯೋತ್ಪಾದಕರು ಬುದ್ಧಗಾಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಏಳು ಜನ ಕಾಶ್ಮೀರಿ ಪಂಡಿತರನ್ನು ಬಹಿರಂಗವಾಗಿ ಹತ್ಯೆ ಮಾಡಿದರು. ೧೯೯೮ ರ ಜನವರಿಯಲ್ಲಿ ಕಾಶ್ಮೀರದ ಕೆಲ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಕಾಶ್ಮೀರಿ ಪಂಡಿತರನ್ನು ಮುಸ್ಲಿಂ ಭಯೋತ್ಪಾದಕರು ಒಕ್ಕಲೆಬ್ಬಿಸಿದರು. ಊರು ಬಿಡಲು ಒಲ್ಲೆ ಎಂದ ಪಂಡಿತರಿಗೆ ಕೊಡಬಾರದ ಹಿಂಸೆ ಕೊಟ್ಟರು. ಪಂಡಿತರ ಮನೆಯಲ್ಲಿನ ಹೆಣ್ಣು ಮಕ್ಕಳ ಮಾನವನ್ನು ಸಾಧ್ಯವಾದಷ್ಟೂ ಹರಾಜಿಗೆ ಹಾಕಿದರು. ಅದೂ ಮನೆ ಯಜಮಾನನ ಎದುರಿಗೆ! ಇಡೀ ಕಾಶ್ಮೀರವನ್ನು ನೋಡುವುದಾದರೆ ಜಮ್ಮು ಹಿಂದುಗಳ ಸಂಖ್ಯೆ ಹೆಚ್ಚಿರುವ ಭಾಗ. ಕಾಶ್ಮೀರ ಮುಸ್ಲಿಂರಿಂದ ಭರ್ತಿಯಾಗಿರುವ ಪ್ರದೇಶ. ಲಡ್ಹಾಕ್‌ನಲ್ಲಿ ಬುದ್ಧ ಜನಾಂಗದ ಪ್ರಾಬಲ್ಯ ಹೆಚ್ಚು. ಈ ವರಗೆ ಮಾರಣಾಂತಿಕ ಕೃತ್ಯಗಳು ಹೆಚ್ಚಾಗಿ ನಡೆದದ್ದು ಜಮ್ಮು ಭಾಗದಲ್ಲೇ. ಉಗ್ರರು ಹೋರಾಡುತ್ತಿರುವುದೇ ಕಾಶ್ಮೀರವನ್ನು ಮುಸ್ಲಿಂ ರಾಜ್ಯ ಎಂದು ಘೋಷಿಸಿ ಎಂದಲ್ಲವೇ?!

ಲಷ್ಕರ್-ಇ-ತಯ್ಬಾ, ಜೈಶ್-ಇ-ಮಹಮ್ಮದ್, ಹಿಜಬುಲ್ ಮುಜಾಹಿದ್ದೀನ್, ಅಲ್‌ಖೈದಾ ಮೊದಲಾದ ಅಪ್ಪಟ ಭಯೋತ್ಪಾದಕ ಸಂಘಟನೆಗಳು ಇಡೀ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಹೋರಾಡುತ್ತಿದ್ದರೆ, ಪಾಕ್‌ನ ಇನ್ನೂ ಕೆಲ ಸಂಘಟನೆಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲು ಯತ್ನಿಸುತ್ತಿವೆ. ಇನ್ನು ಜಮ್ಮು ಕಾಶ್ಮೀರ ಲಿಬೆರೆಷನ್ ಫ್ರಂಟ್, ಹುರ್ರಿಯತ್ ಕಾನ್ಪರೆನ್ಸ್‌ನ ಹುರಿಯಾಳುಗಳು ಕಾಶ್ಮೀರವನ್ನು ಸ್ವಾಯತ್ತಗೊಳಿಸಿ. ನಾವೇ ಇಲ್ಲಿ ಪ್ರಧಾನಿಗಳಾಗಿ ಇರುತ್ತೇವೆ ಎನ್ನುತ್ತಿದ್ದಾರೆ. ಒಂದು ವರದಿಯ ಪ್ರಕಾರ ಸುಮಾರು ನಾಲ್ಕು ಲಕ್ಷ ದೇಶ ವಿದ್ರೋಹಿಗಳು ಕಾಶ್ಮೀರದುದ್ದಕ್ಕೂ ಬದುಕುತ್ತಿದ್ದಾರೆ. ಅಂದಹಾಗೆ ೨,೫೦,೦೦೦ ಭಾರತೀಯ ಕುಟುಂಬಗಳು ಇಂತಹ ರಕ್ಕಸರ ನಡುವೆ ನೆಲೆಸಿದೆ.

ಮತ್ತೆ ಪಾಕಿಸ್ತಾನಕ್ಕೆ ಕಾಶ್ಮೀರದ ನೆನಪಾಗಿದ್ದು ೧೯೯೯ ರಲ್ಲಿ. ಅಲ್ಲಿಯವರೆಗೂ ಪಾಕಿಸ್ತಾನ ಕೈ ಕಟ್ಟಿ ಕುಳಿತಿತ್ತು ಎಂದೇನಲ್ಲ. ಅಥವಾ ಕಾಶ್ಮೀರದಲ್ಲಿ ನೆಮ್ಮದಿ ನೆಲೆಯೂರಿತ್ತು ಎಂದಲ್ಲ. ಸ್ಫೋಟಗಳು, ದಾಳಿಗಳು ನಡೆಯುತ್ತಲೇ ಇತ್ತು. ರಕ್ತ ಗಡಿ ಭಾಗದ ತುಂಬಾ ಹರಿದಾಡುತ್ತಲೇ ಇತ್ತು. ಆದರೂ ಅಧಿಕೃತವಾಗಿ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಕೈ ವಶ ಮಾಡಿಕೊಳ್ಳಬೇಕು ಅನ್ನಿಸಿದ್ದು ೧೯೯೯ ರಲ್ಲಿ ಅಷ್ಟೇ! ಕಾರ್ಗಿಲ್ ವಾರ್ ಅಥವಾ ೩ನೇ ಕಾಶ್ಮೀರಿ ಕದನ ೧೯೯೦ರ ಮೇ ತಿಂಗಳ ಸುಮಾರಿಗೆ ಆರಂಭವಾಯಿತು. ಜುಲೈ ೨೬ಕ್ಕೆ ಅಂತ್ಯಗೊಂಡಿತು. ಹಾಗಾಗಿಯೇ ನಾವು ಜುಲೈ ೨೬ನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ ಆಚರಿಸುವುದು. ಹೌದು ಮತ್ತೇ ಕಾಶ್ಮೀರ ದೇಶದ ಪಾಲಾಯಿತು. ಹಾಗೆ ಕಾಶ್ಮೀರ ಉಳಿಯಬೇಕಾದರೆ ನಮ್ಮ ನಾಡಿನ ಸಹಸ್ರಾರು ಯೋಧರ ರಕ್ತ ತೊಟ್ಟಿಕ್ಕಿದೆ. ಸುಮಾರು ೫೨೭ ಯೋಧರು ರಣಾಂಗಣದಲ್ಲಿ ವೀರ ಮರಣವನ್ನಪ್ಪಿದರು. ೧,೪೦೦ಕ್ಕೂ ಅಕ ಸೈನಿಕರು ವಿಕಲಚೇತನರಾದರು. ಇಲ್ಲಿಗೆ ಮುಗಿಯಿತಾ ಕಾಶ್ಮೀರ ಕದನದ ಅಧ್ಯಾಯ? ಅಂದರೆ…

ಇಲ್ಲ ಮತ್ತದೇ ಆರ್‌ಡಿಎಕ್ಸ್, ಅದೇ ರೈಫಲ್, ಅದೇ ಎ.ಕೆ ೪೭ ಬಂದೂಕುಗಳ ಗುಂಡಿನ ಮಳೆ! ಭಯೋತ್ಪಾದನೆಗೆ ಬಳಸುವ ಬಾಂಬ್‌ಗಳ, ಗುಂಡಿನ ಶ್ರೇಣಿ ಬದಲಾಗಿದೆ. ಆಧುನಿಕ ಅಸ್ತ್ರಗಳು ಬಳಕೆಯಾಗುತ್ತಿದೆ. ವಿದ್ವಂಸಕ ಕೃತ್ಯ ಹಾಗೇ ನಡೆದುಕೊಂಡು ಬರುತ್ತಿದೆ. ೨೦೦೧ರ ಅಕ್ಟೋಬರ್‌ನಲ್ಲಿ ಉಗ್ರರು ಶ್ರೀನಗರದಲ್ಲಿನ ಸದನದ ಮೇಲೆ ದಾಳಿ ನಡೆಸಿದರು. ಅಂದು ನಡೆದ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ಮೂವತ್ತೆಂಟು. ೨೦೦೩ ರ ಜುಲೈನಲ್ಲಿ ಸಶಸ್ತ್ರಧಾರಿ ಭಯೋತ್ಪಾದಕರು ಶ್ರೀನಗರದಲ್ಲಿ ಗುಂಡಿನ ಮಳೆ ಸುರಿಸಿದರು. ೨೭ ಜನರ ಹೆಣ ಉರುಳಿ ಬಿತ್ತು. ಮೇ.೩ ೨೦೦೬ ರಂದು ಜಮ್ಮುವಿನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ೩೫ ಜನ ಹಿಂದುಗಳು ಬಲಿಯಾದರು. ಮೊನ್ನೆ ಜುಲೈ ೧೯ ರಂದು ಜಮ್ಮುವಿನಲ್ಲಿ ಆದ ಸ್ಫೋಟದಲ್ಲಿ ೯ ಸೈನಿಕರು ಮೃತರಾದರು. ೨೫ಕ್ಕೂ ಅಧಿಕ ಸೈನಿಕರು ಗಾಯಗೊಂಡರು. ಅಲ್ಲಿ ದಾಳಿ, ಸ್ಫೋಟ, ಸಾವು ಎಂಬುದು ನಿರಂತರ…ಆದರೆ ನಮಗೆ ಕಾಶ್ಮೀರದಲ್ಲಿ ನಡೆಯುವ ಘಟನೆಗಳ ಪರಿವೇ ಇರುವುದಿಲ್ಲ!

ದೀಪಾವಳಿ ಸಡಗರಕ್ಕೆ ಎರಡೇ ದಿನ ಬಾಕಿಯಿತ್ತು. ಇಡೀ ದೇಶವೇ ಹಬ್ಬದ ಸಂಭ್ರಮದಲ್ಲಿ ಮುಳುಗಿತ್ತು. ಅಷ್ಟೊತ್ತಿಗೆ ಕೇಳಿಸತೊಡಗಿತು ಬಾಂಬ್ ಎಂಬ ಭಯಾನಕ ರಕ್ಕಸನ ಚೀತ್ಕಾರ. ಹೌದು ೨೦೦೫ರ ಅ.೨೯ ರಂದು ಹೊಸದಿಲ್ಲಿಯಲ್ಲಿ ನಡೆದ ಸರಣಿ ಸ್ಫೋಟದ ಕಥೆಯಿದು. ಸರಿಸುಮಾರು ೭೦ ಜನರನ್ನು ಬಲಿ ತೆಗೆದುಕೊಂಡ ದುರಂತ ಅಧ್ಯಾಯವೊಂದರ ಪುಟವಿದು. ೨೦೦೬-ಮಾರ್ಚ್-೭ ವಾರಾಣಸಿಯಲ್ಲಿ ಬಾಂಬ್ ಸಿಡಿದ ದಿನ. ೨೧ ಜನರ ರಕ್ತವನ್ನು ಉಗ್ರರು ಹೀರಿ ಕುಡಿದ ದಿನ. ೧೧ ಜುಲೈ ೨೦೦೬ ಇಡೀ ಮುಂಬಯಿ ನಗರವನ್ನು ದಂಗು ಬಡಿಸಿದ ದಿನವದು. ಆವತ್ತಿನ ಸರಣಿ ಬಾಂಬ್ ಸ್ಫೋಟದಿಂದಾಗಿ ನಗರದ ರೈಲುಗಳು ಭಸ್ಮವಾದವು. ಸುಮಾರು ೨೧೦ ಜನ ಸುಟ್ಟು ಕರಕಲಾದರು. ೭೯೫ ಮಂದಿ ದೇಹದ ಅಂಗಾಂಗಗಳನ್ನೆಲ್ಲಾ ಸುಟ್ಟುಕೊಂಡು ಆಸ್ಪತ್ರೆ ಸೇರಿದರು. ದೇಶ ಮರೆಯಲಾಗದ ಸ್ಫೋಟಗಳಲ್ಲಿ ಅದೂ ಒಂದು. ಅದು ಸಿಮಿ, ಲಷ್ಕರ್-ಇ-ತಯ್ಬಾದಂತಹ ಕಟ್ಟಾ ಉಗ್ರರು ನಡೆಸಿದ ದಾಳಿಯಾಗಿತ್ತು. ೨೦೦೭ ರ ಮೇನಲ್ಲಿ ೧೫ ಜನರನ್ನು ಬಲಿ ತೆಗೆದುಕೊಂಡ ಹೈದರಾಬಾದ್ ಸರಣಿ ಸ್ಫೋಟ, ೨೦೦೭ರ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲೇ ನಡೆದ ಮತ್ತೊಂದು ಸರಣಿ ಸ್ಫೋಟ ೨೦೦೮ ರ ಮೇ ತಿಂಗಳಿನಲ್ಲಿ ಜೈಪುರದಲ್ಲಿ ನಡೆದ ಸೋಟ, ಬೆಂಗಳೂರು, ಅಹಮದಾಬಾದ್, ದೆಹಲಿಯ ಸ್ಫೋಟ…ಊಹುಂ ಲೆಕ್ಕಕ್ಕೆ ನಿಲುಕದಷ್ಟು ಸ್ಫೋಟಗಳು ಈ ದೇಶದಲ್ಲಿ ಆಗಿದೆ. ಆಗುತ್ತಲೇ ಇದೆ.

ನಮ್ಮ ಜನರು ಅದಕ್ಕೆ ಒಗ್ಗಿ ಹೋಗಿದ್ದಾರೆ! ಒಂದು ಕಾಲದಲ್ಲಿ ಬಾಂಬ್ ಸ್ಫೋಟದ ಕುರಿತು ಚರ್ಚೆಯಾದರೂ ನಡೆಯುತ್ತಿತ್ತು. ಆದರೆ ಇವತ್ತು? ಕಾಶ್ಮೀರ ನೆನಪಿಸಿಕೊಳ್ಳುವುದು ಹಾಳಾಗಲಿ, ನಮ್ಮ ಕಾಲು ಬುಡದಲ್ಲೇ ಒಂದು ಬಾಂಬ್ ಬಿದ್ದರೆ, ಬಿದ್ದ ತಕ್ಷಣ ಚೇಳು ಕಚ್ಚಿದಂತೆ ಆಡುತ್ತೇವೆ. ಬಾಂಬ್ ಸ್ಫೋಟವಾಗಿ ವಾರ ಕಳೆಯುವುದರೊಳಗೆ ಬಾಂಬ್ ಸಿಡಿದಿದೆ ಎಂಬುದನ್ನೇ ಮರೆತುಬಿಡುತ್ತೇವೆ. ದೇಶದ ಪ್ರತಿಯೊಂದು ಮಹಾ ನಗರಿಯೂ ಇನ್ನೊಂದು ಕಾಶ್ಮೀರವಾಗುತ್ತಿದೆ. ಹಳಿಯಾಳದ ಕಾನನದಲ್ಲೂ ಬಾಂಬ್ ಸಿಗುತ್ತದೆ! ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳು ಉಗ್ರರ ಚಟುವಟಿಕೆಗೆ ಆಶ್ರಯ ತಾಣವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸ್ಫೋಟ ದೊಡ್ಡದು ಎಂದು ನಮಗೆ ಅನ್ನಿಸುವುದಿಲ್ಲ ಅಲ್ಲವೇ? ಹೌದು, ಹಾಗಾಗಿಯೇ ಸಿಮಿ ಉಗ್ರನೊಬ್ಬ ಸ್ಫೋಟ ಮಾಡಿದ್ದು ನಾನೇ ಅಂತಾ ಮೇಲ್ ಕಳಿಸುತ್ತಾನೆ, ಲಷ್ಕರ್ ಉಗ್ರ ಹೇಳಿ,ಹೇಳಿ ಬಾಂಬ್ ಇಡುತ್ತಾನೆ….ನಾವು ಚೂಪಗೆ ನೋಡುತ್ತಲೇ ಇರುತ್ತೇವೆ!

Read Full Post »

ಯಾವಾಗಲೂ ಬೆಳಿಗ್ಗೆ  ೬ ಗಂಟೆ ೬೦ ನಿಮಿಷಕ್ಕೆ ಸರಿಯಾಗಿ ಎದ್ದುಬಿಡುವ ನಾನು  ಮೊನ್ನೆ  ಏಳುವುದು ಸ್ವಲ್ಪ ಲೇಟಾಯಿತು. ಅದೇನೋ ತರಕಾರಿ ತಗೊಂಡು ಬರಬೇಕಿತ್ತಂತೆ. ತಡಿರಿ ಒಂದ್ನಿಮಿಷ, ಮುಖ ತೊಳೆದು ತಗೊಂಡು ಬರ್‍ತೀನಿ ಅಂದ್ರೆ ಅಕ್ಕಾ ಕೋಪ ಮಾಡಿಕೊಂಡು ಅಂಗಡಿ ಕಡೆಗೆ ಓಡಿದಳು. ಯಾವಾಗಲೂ  ಮೂಗಿನ ತುದಿಗೆ ಸಿಟ್ಟು! ಅದರಲ್ಲೂ ಹುಡುಗರ ಸೋಮಾರಿತನ ಕಂಡರೆ ಮೈಮೇಲೆ ಚೇಳು ಕಡಿದವರಂತೆ ಆಡುತ್ತಾರೆ. ಹಾಗಾಗಿಯೇ ನಾನು ಅಕ್ಕನನ್ನು ಮಹಿಳಾವಾದಿ ಅಂತಾ ಅಣಗಿಸುವುದು! (ನಿಜ ಹೇಳಬೇಕು ಅಂದ್ರೆ ಅಕ್ಕಾ ಯಾವ ವಾದಿಯೂ ಅಲ್ಲ(ನ್ಯಾಯವಾದಿ ಕೂಡ!))

ಅಂಗಡಿಯಿಂದ  ಗೇಟಿನ ಬಳಿ ಬರುತ್ತಿದ್ದಂತೆ  ‘ಏ ಮೆಣಸಿನ ಕಾಯಿ ತರೋದು ಮರೆತು ಬಿಟ್ಟು ಬಂದೆ ತಗೊಂಡು ಬಾರೋ ಪ್ಲೀಸ್’ ಅಂತಾ ರಾಗ ಶುರುಮಾಡಿದರು. ಸಿಕ್ಕಿದ್ದೇ ಛಾನ್ಸು ಮಿಸ್ ಮಾಡಿಕೊಳ್ಳಬಾರದು ಅನ್ನಿಸಿತು. ಅರೆ ಅದೇನಕ್ಕೋ ಒಂದ್ಸರಿ ಅಂಗಡಿಗೆ ಹೋಗಿ ಬರೋದ್ರೊಳಗೆ ಮಹಿಳೆಯ ಸ್ವಾಭಿಮಾನ ಕುಸಿದು ಹೋಯ್ತಾ? ಅಂತಾ ನಾನೂ ರಾಗವಾಗಿಯೇ ಕೇಳಿದೆ. ಆಮೇಲೆ ಇನ್ನೂ ಹೆಚ್ಚಿಗೆ ಮಾತಾಡಿದರೆ ದೋಸೆ ಮಾಡುವುದನ್ನೇ ಕ್ಯಾನ್ಸಲ್ ಮಾಡುತ್ತಾರೆ ಅಂತಾ ಮೆಣಸಿನಕಾಯಿ ತಗೊಂಡು ಬಂದೆ ಬಿಡಿ!

ಈ ಪೀಠಿಕೆಯನ್ನು ಇಲ್ಲಿ ಯಾಕೆ ತಗೊಂಡು ಬಂದೆ ಅಂದ್ರೆ,  ನಾವು ಎಷ್ಟೇ ಸ್ವಾಭಿಮಾನಿಯಾಗಿ, ಕೆಲ ವಾದಿಗಳ ಮುಖವಾಡ ಹಾಕಿಕೊಂಡು ಬದುಕುತ್ತೇವೆ ಅಂದ್ರೂ ನಮಗೆ ಪರಾವಲಂಬಿಗಳಾಗಿ ಬದುಕುವ ಸಮಯ ಬದುಕಿನ ಒಂದೆಲ್ಲಾ ಒಂದು ಗಳಿಗೆಯಲ್ಲಿ ಬಂದೇ ಬರತ್ತೆ. ಗಂಡನಿಗೆ ಹೆಂಡತಿ ಬೇಕು, ಅಕ್ಕನಿಗೆ  ತಮ್ಮ  ಬೇಕು, ಹಾಗೇ ತಮ್ಮನಿಗೂ ಅಕ್ಕಾ ಬೇಕು. ಅಣ್ಣನಿಗೆ ತಂಗಿ ಬೇಕು. ತಂಗಿಗೂ ಅಣ್ಣ ಬೇಕು. ಆದ್ರೂ ನಾವು ಮಹಿಳಾವಾದ, ಪುರುಷವಾದ ಗುದ್ದಾಡುತ್ತೇವೆ! ಭಾಷಣ ಬಿಗಿಯುತ್ತೇವೆ!

ಅಮ್ಮಾ ಮತ್ತು ಅಕ್ಕನ ಕುರಿತಾಗಿ ಆಲೋಚಿಸುತ್ತಿದೆ. ಅಮ್ಮ  ಮನೆಗೆ ಬಂದ ಯಾರ ಹತ್ತಿರವಾದರೂ ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರು ಕೆಲಸ ಮಾಡಿ ಅಂತಾ ಹೇಳದಿದ್ದರೂ, ಬಂದವರೇ ಕೇಳಿಕೊಂಡು ಕೆಲಸ ಮಾಡಿಕೊಡುತ್ತಾರೆ. ಅದಕ್ಕೆ ಕಾರಣ ಅಮ್ಮ ಬಂದವರ ಮೇಲೆ ತೋರಿಸುವ ಪ್ರೀತಿ, ವಾತ್ಸಲ್ಯ. ಬಹುಶಃ ನಮ್ಮ  ಅಮ್ಮನಿಗೆ ಮಹಿಳಾವಾದದ ಗಂಧ ಗಾಳಿಯೂ ಗೊತ್ತಿರಲಿಕ್ಕಿಲ್ಲ. ತೀರಾ ವಿದ್ಯಾವಂತೆಯೂ  ಅಲ್ಲ. ಸಾಹಿತ್ಯ, ಫೆಮಿನಿಸಂಗಳ ಪರಿವೇ ನಮ್ಮ ಅಮ್ಮನಿಗಿಲ್ಲ.

 ಅಕ್ಕ ಈಗಿನ ಕಾಲದವಳು. ಓದಿಕೊಂಡವಳು. ಅದರಲ್ಲೂ ದೊಡ್ಡ ದೊಡ್ಡ ಅಕಾಡೆಮಿಕ್ ಸಾಹಿತಿಗಳನ್ನು ಓದಿಕೊಂಡವಳು. ಹಾಗಾಗಿಯೇ ಅವಳ ಸ್ವಭಾವ ಒಂತರಹ! ಅಕ್ಕನಿಗೆ ಇನ್ನೊಬ್ಬರಿಂದ ಕೆಲಸ ಮಾಡಿಸಿಕೊಂಡು ಗೊತ್ತಿಲ್ಲ.

ಅಡಿಗೆ ಮನೆ ಹೊಕ್ಕ ಹೆಣ್ಣು  ಮಗಳನ್ನು ಶೋಷಿಸುತ್ತೇವೆ ಎಂಬುದು ನಿಜ. ಆದರೆ ಇದೇ ಸಮಾಜದ ಒಂದು ವರ್ಗ ಹೆಣ್ಣಿಗೆ ಪ್ರೋತ್ಸಾಹ ನೀಡುತ್ತದೆ ಎಂಬುದು ಸುಳ್ಳಲ್ಲ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪ್ರಭಾವ ಹೇಗಿದೆಯೋ ಹಾಗೆ, ಪ್ರತಿ ಸ್ತ್ರೀ ಸಾಧನೆಯ ಹಿಂದೆಯೂ ಪುರುಷನ ಕೈ ಇರುತ್ತದೆ. ಒಮ್ಮೆ ಈ ಸಮಾಜದಲ್ಲಿ ಪುರುಷರೂ ಮಾತ್ರ ಇದ್ದಿದ್ದರೆ ಅಥವಾ ಮಹಿಳೆ ಮಾತ್ರ ಇದ್ದಿದ್ದರೆ  ನಮ್ಮ  ಸಮಾಜ ಹೇಗಿರಬಹುದಿತ್ತು ಎಂಬುದನ್ನು ಅಕಾಡೆಮಿಕ್ ಮಹಿಳಾವಾದಿಗಳು ಒಮ್ಮೆ ಆಲೋಚಿಸಬೇಕು.

ಇತ್ತೀಚೆಗೆ ಯಾವುದೋ ಒಂದು ಬ್ಲಾಗ್ ನೋಡುತ್ತಿದೆ.  ಹುಡುಗಿಯರಿಗೆ ಬಕೆಟ್ ಹಿಡಿಯಲೇ ಮೀಸಲಾಗಿರುವ ಬ್ಲಾಗ್ ಅದು ಅನ್ನಿಸಿತು ನನಗೆ! ಹುಡುಗಿಯರು ಅಂದಾಕ್ಷಣ ಜೊಲ್ಲು ಸುರಿಸಿಕೊಂಡು ನೌಕ್ರಿ ಕೊಡುವ ಮಂದಿ ಇವತ್ತು ಹೆಚ್ಚಾಗಿದ್ದಾರೆ. ಹುಡುಗಿ ಸ್ವಲ್ಪ ಚೆಲ್ಲು ಚೆಲ್ಲಾಗಿದ್ದರೆ, ಸ್ವಲ್ಪ ನಗಲು ಗೊತ್ತಿದ್ದರೆ, ಅರೆ ನಗ್ನ ಬಟ್ಟೆ  ತೊಡಲು ಸಿದ್ಧವಿದ್ದರೆ ಅವಳ ಎದುರಿಗೆ ಎಂತಹ ಪ್ರತಿಭಾವಂತನಿಗೂ ಕೆಲಸ ಸಿಗಲಾರದು. ಇವತ್ತಿನ ಹುಡುಗಿಯರೂ ಕಡಿಮೆ ಇಲ್ಲ ಬಿಡಿ. ಕಂಪನಿಯ ಮುಖ್ಯ ಸ್ಥಾನದಲ್ಲಿ ಕುಳಿತವನನ್ನು ಬುಟ್ಟಿಗೆ ಹಾಕಿಕೊಳ್ಳುವ ಎಲ್ಲಾ ಕಲೆಯೂ ಅವರಿಗೆ ಚೆನ್ನಾಗಿ ಗೊತ್ತಿದೆ. aರ್ಥಾತ್ ಎಲ್ಲೋ ಒಂದು ಕಡೆ ಹುಡುಗರು ಶೋಷಣೆಗೆ ಒಳಗಾಗುತ್ತಿದ್ದಾರೆ ಅಲ್ವಾ?!

ಮುಖವಾಡ ಧರಿಸಿರುವ ಮಹಿಳಾವಾದಿಗಳ ಕಥೆ ಹೇಳುತ್ತಾ ಹೋದರೆ…ನಮ್ಮ ನಾಲಿಗೆ ಹೊಲಸಾಗುತ್ತದೆ ಹೊರತು ಮತ್ತೇನೂ ಬದಲಾವಣೆಯಾಗುವುದಿಲ್ಲ! ಒಂದು ಮೆಣಸಿನ ಕಾಯಿಂದಾಗಿ ಇಷ್ಟೆಲ್ಲಾ ಬರೆಯಬೇಕಾಯಿತು!
(ವಿಶೇಷ ಸೂಚನೆ: ಆದರೂ ನಾನು ಅಕ್ಕನಿಗೆ ಹೆದರುತ್ತೀನಿ. ಈ ಲೇಖನವೇನಾದ್ರೂ ಅಕ್ಕನ ಕಣ್ಣಿಗೆ ಬಿದ್ದರೆ ಮನೆಯಲ್ಲಿರುವ ಒಂದೇ ಒಂದು ಲಟ್ಟಣ್ಣಿಗೆ ಮುರಿಯಬಹುದೆಂಬ ಭಯ ನನ್ನನ್ನು ಕಾಡ್ತಾ ಇದೆ!)

Read Full Post »

ಅದ್ಯಾಕೋ ಗೊತ್ತಿಲ್ಲ ಇತ್ತೀಚೆಗಂತೂ ಹಬ್ಬಕ್ಕೆ ಅಂತಾ ಊರಿಗೆ ಹೋದರೂ, ನಮ್ಮೂರು ಬಿಕೋ ಅನ್ನಿಸುತ್ತದೆ. ಊರು ಬಿಟ್ಟು ತುಂಬಾ ವರ್ಷವಾಯಿತು, ಅದಕ್ಕೆ ಹಾಗನ್ನಿಸುತ್ತೇನೋ ಅಂದುಕೊಂಡಿದ್ದೆ. ಆದ್ರೆ ಮೊನ್ನೆ ಮಾತಿಗೆ ಸಿಕ್ಕ ಗೋಪಿ ಮಾವ ಹೇಳುತ್ತಿದ್ದರು “ಹಿಂಗೆ ಊರು ಮನೆ ಮಕ್ಕಳೆಲ್ಲಾ ಬೆಂಗಳೂರು ಸೇರಿದರೆ, ಊರಲ್ಲಿ ಕುಳಿತು ವೃದ್ಧಾಶ್ರಮ ನಡೆಸುವ ಬ್ಯೂಸಿನೆಸ್ ಶುರುಮಾಡಬಹುದು’ ಅಂತಾ! ನಮ್ಮೂರಲ್ಲಿ ಅಬ್ಬಬ್ಬಾ ಅಂದ್ರೆ ೩೫-೪೦ ಮನೆಗಳಿರಬಹುದು. ಅಷ್ಟೂ ಮನೆಯಲ್ಲಿ ಯುವಕರು ಅಂತಾ ಇಲ್ಲವೇ ಇಲ್ಲ! ಎಲ್ಲಾ ಮನೆಯ ವಯಸ್ಸಿಗೆ ಬಂದ ಯುವಕರು ಬೆಂಗಳೂರು ಸೇರಿಕೊಂಡು ಕೂತಿದ್ದಾರೆ.  ಊರಲ್ಲಿ ವಾಸಿಸುತ್ತಿರುವರೆಲ್ಲಾ ೫೦ ರ ಪ್ರಾಯ ದಾಟಿದವರು! ಇನ್ನೂ ಸರಿಯಾಗಿ ಹೇಳುವುದಾದರೆ ನಿವೃತ್ತರು! ನಮ್ಮೂರಂತೂ ಅಪ್ಪಟ ನಿವೃತ್ತರ ಕೇರಿಯಾಗಿದೆ!
 
ಅಪ್ಪಾ ಮೊನ್ನೆ ಹೇಳುತ್ತಿದ್ದರು-ಒಂದು ಕಾಲದಲ್ಲಿ ಚೌತಿ ಹಬ್ಬ ಅಂದ್ರೆ ಸಾಗರ ಸೀಮೆಯವರೆಲ್ಲಾ ನಮ್ಮೂರಿನ ಕಡೆ ತಿರುಗಿ ನೋಡುತ್ತಿದ್ದರಂತೆ. ಕಾಡಪ್ಪನವರ ಮನೆ, ಗಣಪಯ್ಯನವರ ಹಬ್ಬದ ಹೊಡೆತ ಅಂದ್ರೆ… ಅಷ್ಟು ಸಂಭ್ರಮ, ಅಷ್ಟು ಸಡಗರವಾಗಿರುತ್ತಿತಂತೆ ಹಬ್ಬಗಳು.
 
ತೀರಾ ಹಿಂದೇನಲ್ಲಾ, ನಾವು ಶಾಲೆಗೆ ಹೋಗುತ್ತಿದ್ದಾಗಲೂ ನಮ್ಮೂರಲ್ಲಿ ಚೌತಿ ಜೋರಾಗಿಯೇ ನಡೆಯುತ್ತಿತ್ತು. ತಿಪ್ಪನ ಮನೆ ಹುಡ್ಗ ಬಾಳೆ ಕಂಬ ಕಡಿದು, ತೋರಣ ಕಟ್ಟಿದ ಅಂದ್ರೆ ನೋಡುವ ಹಾಗೇ ಇರುತ್ತಿತ್ತು. ಮಣ್ಣಿನ ಗಣಪತಿ ಮೂರ್ತಿ ಹಬ್ಬದ ಬೆಳಿಗ್ಗೆ ಸಾಗರದಿಂದ ರಿಕ್ಷಾದಲ್ಲಿ ಬರುತ್ತಿತ್ತು.  ಸಾಗರ ನಮ್ಮೂರಿಂದ ಸುಮಾರು ೭-೮ ಕಿಲೋಮೀಟರ್ ದೂರವಿದೆ. ನಾವು ಹುಟ್ಟುವ ಮೊದಲು ಅಲ್ಲಿಂದ ಗಣಪತಿಯನ್ನು ತಲೆ ಮೇಲೆ ಹೊತ್ತುಕೊಂಡು ಬರುತ್ತಿದ್ದರಂತೆ!
 
ಇನ್ನೂ ಪಟಾಕಿಯನ್ನು ಕಾಂಪಿಟೇಷನ್ ಮೇಲೆ ಸುಡಲಾಗುತ್ತಿತ್ತು. ನಾವು ಚಿಕ್ಕವರಿದ್ದಾಗ ಶಿವಕಾಶಿ ಕಂಪನಿ ಪಟಾಕಿ ಬಾಕ್ಸ್ ಬಹಳ ಫೇಮಸ್ಸು!
 
ಅಚಿಗೆ ಕಿರಣನ ಮನೇಲಿ ಪಟಾಕಿ ಬಾಕ್ಸ್ ತಗಂಡು ಬೈಂದ, ಇಚಿಗೆ ಮಂಜು ಮನೇಲೂ…
 ಅಂತಾ ಹಠ ಹಿಡಿದು ಅಪ್ಪನ ಹತ್ತಿರ ಪಟಾಕಿ ಬಾಕ್ಸ್ ತರಿಸಿಕೊಳ್ಳುವುದು.
 
ಮಾಣಿ ಈ ವರ್ಷ ಅಡಿಕೆಗೆ ರೇಟಿಲ್ಲೆ. ಮತ್ತೆ ದೀಪಾವಳಿಗೆ ಪಟಾಕಿ ತಪ್ಪಲೆ ಸಾಧ್ಯವಿಲ್ಲೆ. ಈ ಬಾಕ್ಸ್‌ಲ್ಲೆ ದೀಪಾವಳಿಗೂ ಉಳಿಸಿಕೋ…
ಅಂತಾ ಅಪ್ಪಾ ಕೂಗುತ್ತಿದ್ದರು. ಅಪ್ಪನ ಲೆಕ್ಕಾಚಾರದಲ್ಲೇ ಹೋದರೆ ಪ್ರತಿ ವರ್ಷವೂ ಅಡಿಕೆಗೆ ರೇಟಿಲ್ಲ! ಹಾಗಂತ ಒಂದು ವರ್ಷವೂ ದೀಪಾವಳಿಗೆ ಇನ್ನೊಂದು ಬಾಕ್ಸ್ ಪಟಾಕಿ ತರೋದು ತಪ್ಪಲಿಲ್ಲ! ವರ್ಷ ವರ್ಷ ಅಪ್ಪ ಹಳೆ ಡೈಲಾಗನ್ನು ನೆನಪು ಮಾಡಿಕೊಳ್ಳಲು ಮರೆಯುತ್ತಿರಲಿಲ್ಲ!
 
ನಾವು ಹುಟ್ಟುವ ಮೊದಲು ನಮ್ಮ ಮನೇಲಿ, ನಾಲ್ಕು ದಿನ ಗಣಪತಿ ಇಡುತ್ತಿದ್ದರಂತೆ. ನನಗೆ ತಿಳುವಳಿಕೆ ಬಂದ ಕಾಲಕ್ಕೆ ಅದು ಎರಡು ದಿನಕ್ಕೆ ಇಳಿದಿತ್ತು. ಈಗ ಒಂದೇ ದಿನ! ನಿಜ ಹೇಳಬೇಕು ಅಂದ್ರೆ ಚೌತಿ ಹಬ್ಬಕ್ಕಿಂತ ಚೌತಿ ಮಾರನೇ ದಿನ ಆಚರಿಸುವ ಪಂಚಮಿ ಹಬ್ಬ ನಮಗೆಲ್ಲಾ ಜೋರು. ಪಂಚಮಿಗೆ ಎಲ್ಲಾ ಅತ್ತೆಯರೂ(ಅಪ್ಪನ ಅಕ್ಕ-ತಂಗಿಯರು) ಬರುತ್ತಿದ್ದರು. ಹಬ್ಬಕ್ಕೆ ಮುಂಚೆ ಅತ್ತೆ ಮನೆಗೆ ಹೋಗಿ ಹಬ್ಬಕ್ಕೆ ಬನ್ನಿ ಕರೆದು ಬರಲಾಗುತ್ತಿತ್ತು. ಪಂಚಮಿ ಹಬ್ಬ ಅಂದ್ರೆ ನಮ್ಮ ಫ್ಯಾಮಿಲಿಯೆಲ್ಲಾ ಒಟ್ಟಿಗೆ ಕೂತು ನಗುತ್ತಾ,ಹರಟುತ್ತಾ ಊಟ ಮಾಡುವ ಹಬ್ಬ.
 
ಒಟ್ಟಲ್ಲಿ ಚೌತಿಗೆ ಊರು ತುಂಬಾ ಜನವೇ ಜನ. ಪಟಾಕಿಯ ಸದ್ದು, ನಮ್ಮಂಥ ಕಿಡಿಗೇಡಿ ಹುಡುಗರ ಕಿತಾಪತಿ…ಅಬ್ಬಬ್ಬಾ ಈವಾಗ ನೆನಸಿಕೊಂಡರೆ…ಅವರಿವರು ಉಡುಗೊರೆ ಕೊಟ್ಟ ಬಟ್ಟೆಯಲ್ಲೇ ಅರ್ಧ ಆಯುಷ್ಯ ಕಳೆದ ನನಗೆ ಅಪ್ಪಾ  ಹಬ್ಬಕ್ಕೆ ಹೊಸ ಬಟ್ಟೆ ತರುತ್ತಾರೆ ಅಂದ್ರೆ ಅದೆಂತದೋ ಒಂತರಹ ಸಂಭ್ರಮ. ಚಪ್ಪಲ್ಲಿ ಇಲ್ಲದೇ, ಬಟ್ಟೆ ಇಲ್ಲದೇ ಬದುಕುವ, ಬಡತನದ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿರುವ ಅಪ್ಪನ ಮೇಲೆ ಆವತಂತು ಒಂಚೂರು ಕನಿಕರವಿರಲಿಲ್ಲ. ಅಪ್ಪಾ ಹಬ್ಬಕ್ಕೆ ಹೊಸ ಬಟ್ಟೆ ತರಲಿಲ್ಲ ಎಂಬುದೊಂದೇ ಸಿಟ್ಟು!
 
ಅಂತಹದ್ದೊಂದು ಸಡಗರವನ್ನು ಊರಿನ ಯಾವ ಮನೆಯಲ್ಲೂ ಕಾಣದೇ ಸುಮಾರು ೧೫ ವರ್ಷದ ಮೇಲಾಯಿತು. ಊರಿನ ಯಾವ ಮನೆಯಲ್ಲೂ ಇವತ್ತು ಚೌತಿ ಮರುದಿನದ ಪಂಚಮಿ ಹಬ್ಬವಿಲ್ಲ. ಹಬ್ಬವಿದ್ದರೂ ಸಡಗರ, ಫ್ಯಾಮಿಲಿಯೆಲ್ಲಾ ಒಟ್ಟಾಗಿ ಸೇರುವ ಸಂಪ್ರದಾಯವಿಲ್ಲ. ಬೇರೆಯವರ ಕಥೆ ಹಾಳಾಗಲಿ ನನ್ನ ಅತ್ತೆಯಂದಿರನ್ನು ನೋಡದೇ ಸುಮಾರು ಏಳು ವರ್ಷವಾಯಿತು.
 
ಅದನ್ನೆಲ್ಲಾ ನೆನಸಿಕೊಂಡ್ರೆ, ಬೆಂಗಳೂರಿನ ಗಲ್ಲಿ, ಗಲ್ಲಿಗಳಲ್ಲಿ ಹಬ್ಬ ಕಳೆದು ಹತ್ತು ದಿನವಾದರೂ ನೇತಾಡುವ ಗಣಪನನ್ನು ಕಂಡರೆ ಯಾಕೋ ಬೇಜಾರಾಗತ್ತೆ. ಊರಿನ ಹಬ್ಬ ನೆನಪಾಗತ್ತೆ. ಅಮ್ಮ ಹಠ ಮಾಡದೆ ಹೋದರೇ ಒಂದು ದಿನವೂ ಹಬ್ಬಕ್ಕೆ ಹೋಗಲಾಗದ ನಮ್ಮ ಪರಿಸ್ಥಿತಿ ನೆನಸಿಕೊಂಡರೆ ಮರುಕವೇ ಮರುಕ! ಇತ್ತೀಚೆಗೆ ಬರುತ್ತಿರುವ ಗಣೇಶನ ಮುಖದಲ್ಲೂ ಹಬ್ಬದ ಗೆಲುವಿಲ್ಲ ಬಿಡಿ!
 
 

Read Full Post »

ಮಲೆನಾಡಿನ ಮಟ್ಟಿಗೆ ಚೌತಿ, ದೀಪಾವಳಿ ಎರಡೂ ದೊಡ್ಡ ಹಬ್ಬ. ಗಣಪತಿ ಮೂರ್ತಿ ಕೂರಿಸುವ ಮನೆಗಳಿಗೆ ಚೌತಿ ವಿಶೇಷ ಹಬ್ಬ. ಹಾಗಾಗಿ ಹಬ್ಬಕ್ಕೆ ಊರಿಗೆ ಬರಲೇ ಬೇಕು ಅಂತಾ ಅಮ್ಮನ ಕಟ್ಟಾಜ್ಞೆ!  ಈ ಹಾಳಾದ ಬೆಂಗಳೂರಿನಲ್ಲಿ ಅದೆಷ್ಟು ಜನ ವಾಸವಾಗಿದ್ದಾರೋ ಗೊತ್ತಿಲ್ಲ. ಹಬ್ಬ, ಹರಿದಿನಗಳಲ್ಲಿ ಊರಿಗೆ ಹೊರಟು ನಿಂತರೆ ಬಸ್ಸು, ರೈಲಿನಲ್ಲಿ ಸೀಟಿಲ್ಲ. ಸೀಟು ಬೇಕು ಅಂದ್ರೆ ಹತ್ತು-ಹದಿನೈದು ದಿನಗಳ ಮೊದಲು ಟಿಕೇಟ್ ಕಾಯ್ದಿರಿಸಬೇಕು. ಆಫೀಸ್‌ನಲ್ಲಿ ಬಾಸ್‌ ಒಪ್ಪಿಸಿ,  ರಜಾ ಮಂಜೂರು ಮಾಡಿಸಿಕೊಂಡು ಹೋಗೋದು ಅಂದ್ರೆ… ಹಾಗಾಗಿ ನಾನಂತೂ ಊರಿಗೆ ಹೊರಡುವ ನಿರ್ಧಾರ ತೆಗೆದುಕೊಳ್ಳುವುದೇ ಕೊನೆ ಕ್ಷಣದಲ್ಲಿ. ಆಗೆಲ್ಲ ಪ್ಯಾಸೆಂಜರ್ ರೈಲೇ ಗತಿ. ರೈಲನ್ನು ಎಷ್ಟು ಹಳಿದರೂ, ರೈಲಿನ ಪ್ರಯಾಣದಷ್ಟು ಮಜ ಬಸ್ಸಲ್ಲಿ ಸಿಗಲ್ಲ! ಅಂತಹದೊಂದ್ದು ರೈಲು ಪಯಣದ ಕಥೆ ಹೇಳಹೋರಟ್ಟಿದ್ದೀನಿ ಕೇಳಿ…

ರೀಸರ್ವೇಷನ್ ಸಿಕ್ಕಿಲ್ಲಾ ಮರಾಯಾ, ಲಾಲೂ ಪಾದವೇ ಗತಿ ಅಂತಾ ಗೆಳೆಯ ಮನೋಜನಿಗೆ ಪೋನ್ ಮಾಡಿದೆ. ಹಬ್ಬದ ಹಿಂದಿನ ರೈಲು ಹತ್ತೋದು ಅಂದ್ರೆ ನರಕದ ಬಾಗಿಲವರೆಗೆ ಹೋಗಿ ಬಂದಂತೆ ಸರಿ! ಏ ಪುಣ್ಯಾತ್ಮ ಒಂದು ಕೆಲ್ಸ ಮಾಡು, ಮೆಜೆಸ್ಟಿಕ್‌ಗೆ ಹೋಗಲೇ ಬೇಡ ಕೆಂಗೇರಿಗೆ ಹೋಗಿ ರೈಲು ಹತ್ತು, ಕುಳಿತುಕೊಳ್ಳಲು ಸೀಟಾದ್ರು ಸಿಗತ್ತೆ ಅಂತಾ ಗೆಳೆಯ ಕ್ರಿಮಿನಲ್ ಐಡಿಯಾ ಕೊಟ್ಟ!

ಮೈಸೂರು-ಶಿವಮೊಗ್ಗ ಟ್ರೈನು, ಊರಿಗೆ ಮುಂಚೆ ಬಂದು ಮೇಜೆಸ್ಟಿಕ್‌ನಲ್ಲಿ ನಿಂತಿರತ್ತೆ ಅಂತಾ ಬೈದುಕೊಳ್ಳುತ್ತಾ ಕೆಂಗೇರಿಗೆ ಸುಮಾರು ಎಂಟುವರೆ ಸುಮಾರಿಗೆ ಹೊರಟೆ. ಅಲ್ಲಿ ನೋಡಿದ್ರೆ ನೂರಾರು ಜನ ನಿಂತಿದ್ರು. ಎಲ್ಲಾ ಮೇಜೆಸ್ಟಿಕ್‌ನಲ್ಲಿ ಸೀಟು ಸಿಗಲ್ಲ ಅಂತಾ ಇಲ್ಲಿಗೆ ಬಂದು ನಿಂತವರು! ನಿಜ ಹೇಳಬೇಕು ಅಂದ್ರೆ ನಾನು ಮೂರುನಾಲ್ಕು ಸಲ ರೈಲಲ್ಲಿ ಹೋದ್ರು ಹಿಂದಿನ ಸ್ಟಾಪಿಗೆ ಹೋಗಿ ಸೀಟು ಹಿಡಿದುಕೊಂಡು ಬರೋ ಕ್ರಿಮಿನಲ್ ಐಡಿಯಾ ನಂಗೆ ಈವರೆಗೆ ಹೊಳೆದಿರಲಿಲ್ಲ! ಅಬ್ಬಾ ತಲೆಗಳೇ! ನಾವೆಲ್ಲಾ ವೇಸ್ಟು ಅಂತಾ ನನ್ನನ್ನು ನಾನೇ ಬೈದುಕೊಳ್ಳುತ್ತಾ ನಿಂತೆ. ಅಷ್ಟು ಹೊತ್ತಿಗೆ ತೀರ್ಥಹಳ್ಳಿ ಹೋಗುವವ ಯಾರೋ ಪರಿಚಯವಾದ. ಅವನ ಊರು ತೀರ್ಥಹಳ್ಳಿ ಅಂದಾಕ್ಷಣ ನನ್ನ ಕಿವಿ ನೆಟ್ಟಗಾಯಿತು. ಯಾಕಂದ್ರೆ ಅದು ಜೋಯ್ಸರ ಮಗಳ ಊರು! ಹೀಗೆ ಹರಟುತ್ತಾ ರೈಲಿಗೆ ಕಾಯುತ್ತಾ ನಿಂತಿದ್ದೆವು.

ಅಷ್ಟೋತ್ತಿಗೆ ರೈಲು ಚುಕುಬುಕು ಸದ್ದು ಮಾಡುತ್ತಾ ಬಂತು. ನಿಂತವರಿಗೆಲ್ಲಾ ಏನೋ ಒಂತರಹ ಸಂಭ್ರಮ. ದೂರದಿಂದ ನೋಡಿದ್ರೆ ರೈಲು ೮೦ ರ ಪ್ರಾಯದ ಮುದುಕಿ ತರ ನಿಧಾನವಾಗಿ ಬರುತ್ತಿತ್ತು. ಸಾರ್ ಹತ್ತಿರ ಬರುತ್ತಿದ್ದ ಹಾಗೇ ನೋಡಿ ರೈಲಿನ ವೇಗ ಎಷ್ಟಿರತ್ತೆ ಅಂದ ಅವ. ಅವ ಹೇಳಿದ ಹಾಗೆ ಆಯಿತು. ಓಡುತ್ತಿರುವ ರೈಲನ್ನು ಬಿಎಂಟಿಸಿ ಬಸ್ಸು ಹತ್ತಿದ ಹಾಗೆ, ಹತ್ತಲು ಸಾಧ್ಯವೇ ಇಲ್ಲ!

ಎಷ್ಟು ಬೋಗಿ ಮುಂದೆ ಚಲಿಸಿದರೂ ರೈಲು ನಿಲ್ಲಲೇ ಇಲ್ಲ.  ಹಿಂದೆ ನಿಂತಿದ ಒಂದಿಷ್ಟು ಜನ ಸೀಟಿ ಹೊಡೆದರು, ಹೋಲ್ಡಾನ್ ಅಂತಾ ಕಿರುಚಿದರು. ಜನ ಜಾಸ್ತಿ ಇರೋದನ್ನ ನೋಡಿ ಇನ್ನು ಒಂದು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಬಹುದೆಂದು ನಾವು ಚೀಲ ಕೈಯಲ್ಲಿ ಹಿಡಿದು ಮುಂದೆ ಮುಂದೆ ಓಡಿದ್ವಿ. ಆದ್ರೂ ರೈಲು ನಿಲ್ಲಲ್ಲೇ ಇಲ್ಲ!

ಮತ್ತೆ ವಾಪಾಸು ತೀರ್ಥಹಳ್ಳಿಯವ ಇದ್ದಲ್ಲಿ ಬಂದೆ. ಸಾರ್ ಅದು ಶಿವಮೊಗ್ಗ ಟ್ರೈನ್ ಅಲ್ಲ. ಬೇರೆಯಾವುದೋ. ಶಿವಮೊಗ್ಗ ರೈಲು ಬರೋ ಹತ್ತು ನಿಮಿಷ ಮುಂಚೇನೆ ಇಲ್ಲಿ ಅನೌನ್ಸ್‌ ಮಾಡ್ತಾರ್‍ಎ ಅಂದ. ನನ್ನ ಮುಖ ಪೆಚ್ಚಾಗಿತ್ತು. ಆದ್ರೂ ರೈಲು ನಿಲ್ಲಿಸಲಿಲ್ಲ ಅಂತಾ ಸೀಟಿ ಹೊಡೆಯುವವರಷ್ಟು ಮೂರ್ಖ ನಾನಲ್ಲ ಅಂತಾ ನನಗೆ ನಾನೇ ಸಮಾಧಾನ ಮಾಡಿಕೊಂಡೆ!

ಕೊನೆಗೂ ಬರಬೇಕಿದ್ದ ಟ್ರೈನು ಬಂತು. ಹತ್ತುವ ವೇಗದಲ್ಲಿ ಯಾರೋ ಒಬ್ಬನ ಬ್ಯಾಗು ಕೆಳಗೆ ಬಿತ್ತು. ಎತ್ತಲು ಸಾಧ್ಯವಿಲ್ಲದ ಹಾಗೇ ಹಳಿ ಮೇಲೆ ಬಿದ್ದ ಬ್ಯಾಗನ್ನು, ಅದನ್ನು ಎತ್ತಲು ಬಿಡದ ಜನಸಂದಣಿಯನ್ನು ಕಂಡು ನನಗನ್ನಿಸಿತು, ರೈಲು ಪ್ರಯಾಣ ಅದೆಷ್ಟು ಕಷ್ಟ ಅಂತಾ. ಪ್ರತಿ ಸಾರಿ ರೈಲಲ್ಲಿ ಪ್ರಯಾಣಿಸುವ ಮುಂಚೆ ನನಗೆ ಹೀಗೆ ಅನ್ನಿಸುತ್ತಿರುತ್ತದೆ! ರೈಲಲ್ಲಿ ಹತ್ತಿ ಸೀಟು ಗಿಟ್ಟಿಸಿದಾಗ ಮೌಂಟ್‌ ಎವರೆಸ್ಟ್ ಶಿಖರ ಏರಿದ್ದಕ್ಕಿಂತ ದೊಡ್ಡ ಸಾಧನೆ ಮಾಡಿದೆ ಅನ್ನಿಸಿತು. ಮೇಲುಗಡೆ ಹತ್ತಿ, ಯಾರು ಎಬ್ಬಿಸಿದರೂ ಏಳಬಾರದೆಂದು ನಿರ್ಧರಿಸಿ ಮಲಗಿದೆ.

ಮಲಗಿ ಹತ್ತು ನಿಮಿಷ ಕಳೆದಿರಲಿಲ್ಲ ಯಾರೋ ಕೂಗಾಡುತ್ತಾ ಎಬ್ಬಿಸಲು ಪ್ರಯತ್ನಿಸಿದರೂ ಆದರೂ ನಿದ್ದೆ ಬಂದಂತೆ ನಟಿಸುತ್ತಾ ಸುಮ್ಮನೆ  ಕಣ್ಣು ತೆರೆದು ನೋಡಿದರೆ ರೈಲಲ್ಲಿ ಕಾಲು ಹಾಕಲು ಜಾಗವಿರಲಿಲ್ಲ. ಮೆಜೆಸ್ಟಿಕ್ ಬಂದೇ ಬಿಟ್ಟಿತ್ತು. ಇನ್ನೂ ಈ ಅನಾಗರಿಕ ಜನರ ಹತ್ತಿರ ಬೋಳಿಮಗ…ಅಂತೆಲ್ಲಾ ಬೈಸಿಕೊಂಡು ಏಳುವ ಊಸಾಪರಿ ಯಾರಿಗೆ ಬೇಕಪ್ಪಾ ಅಂತಾ ಲೈಟಾಗಿ ಎದ್ದು ಕುಳಿತು ಬಿಟ್ಟೆ!

ಅಬ್ಬಾ ಅದೆಂತಾ ರೈಲು ಅಂತೀರಾ ಮಾರಾಯ್ರೆ, ನಮ್ಮ ಮಾರ್ಕೇಟಲ್ಲಿ ಇರುವ ಜನಕ್ಕಿಂತ ಹೆಚ್ಚು ಜನ ಒಂದೊಂದು ಬೋಗಿಯಲ್ಲಿ ಇದಾರೆ! ೧೧.೪೦ಕ್ಕೆ ರೈಲು ಮೆಜೆಸ್ಟಿಕ್‌ನಿಂದ ಹೊರಟಿತು. ಹೊರಡುತ್ತಿದ್ದ ಹಾಗೇ ಶುರುವಾಯಿತು ನೋಡಿ ಜನಗಳ ಕಚ್ಚಾಟ, ಜಗಳ! ಅದ್ಯಾಕೋ ನನಗೆ ರೈಲಲ್ಲಿ ಹೋಗೋವಾಗಲೆಲ್ಲಾ ತೇಜಸ್ವಿಯವರ “ಕಿರಗೂರಿನ ಗಯ್ಯಾಳಿಗಳ” ನೆನಪಾಗತ್ತೆ. ರೈಲಿನಲ್ಲಿ ಪ್ರಯಾಣಿಸಿದ ನಂತರವೇ ತೇಜಸ್ವಿ ಆ ಕೃತಿ ಬರೆದಿರಬೇಕು!

ಒಬ್ಬ ಲಗೇಜು ಇಡಲು ಮೀಸಲಿಟ್ಟ ಜಾಗದಲ್ಲಿ ಹಾಸಿ ಮಲಗಿಬಿಟ್ಟಿದ್ದ. (ರೈಲಲ್ಲಿ ಸೀಟಿನ ಅಡಿಗೆ, ಲಗೇಜು ಸ್ಟ್ಯಾಂಡಿನ ಮೇಲೆಲ್ಲ ಮಲಗುವುದು ಮಾಮೂಲು)  ಉಳಿದವರೆಲ್ಲಾ ನಿಲ್ಲಲು ಜಾಗವಿಲ್ಲ, ಲಗೇಜು ಇಡುವ ಜಾಗದಲ್ಲಿ ಮಲಗಿದ್ದೀಯಲ್ಲ ಅಂತಾ ಕೂಗಾಡುತ್ತಾ, ಅವನನ್ನು ಏಳಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಅವ ಮಾತ್ರ ಕಲ್ಲುಬಂಡೆಯಂತೆ ಮಲಗಿಯೇ ಇದ್ದ. ಇದ್ದ ಬದ್ದ ಸೂಟ್‌ಕೇಸ್‌ಗಳನ್ನೆಲ್ಲಾ ಜನ ಸಿಟ್ಟಿನಿಂದ ಅವನ ಮೇಲೆ ಎಸೆದರು. ಅದಕ್ಕೂ ಬಗ್ಗಲಿಲ್ಲ. ನಂತರ ಕೆಲವರು ಅವನ ಕಾಲು ಹತ್ತಿರ ಹೋಗಿ ಚೂರು ಪಾರು ಜಾಗ ಮಾಡಿಕೊಂಡು ಕುಳಿತರು. ಆಗಲೂ ಆ ಅಸಾಮಿ ಅಲ್ಲಾಡಲಿಲ್ಲ. ಅವನನ್ನು ಎಬ್ಬಿಸುವ ಪ್ರಯತ್ನ ಮಾಡಿದ ಜನ ಸುಸ್ತಾದರೆ ಹೊರತು ಅವನಿಗೆ ಮಾತ್ರ ಏನೂ ಆಗಲಿಲ್ಲ! ಅವನ ದುರಾದೃಷ್ಟವೋ, ಜನರ ಅದೃಷ್ಟವೋ ಗೊತ್ತಿಲ್ಲ. ಸುಮಾರು ಹೊತ್ತಿನ ನಂತರ ಅವನಿಗೊಂದು ಮೊಬೈಲ್ ಕಾಲು ಬಂತು. ನಡು ರಾತ್ರಿಯಲ್ಲಿ ಬಂದ ಆ ಕಾಲ್ ಎತ್ತಲೇ ಬೇಕಾದಷ್ಟು ಅನಿವಾರ್ಯವಾದ ಫೋನ್ ಕರೆಯಾಗಿತ್ತು ಅನ್ನಿಸತ್ತೆ. ಅವ ಎತ್ತಿ ಮಾತಾನಾಡಲು ಶುರುವಿಟ್ಟ! ನಮ್ಮ ಕೈಯಲ್ಲಿ ಎಬ್ಬಿಸಲಾಗದವನನ್ನು ಒಂದು ನಿರ್ಜೀವ ಮೊಬೈಲ್ ಎಚ್ಚರ ಮಾಡಿಸಿತಾ? ಎಂದು ಕೋಪಗೊಂಡ ಜನ “ಹೋ” ಎಂದು ಕೂಗಲು ಶುರುವಿಟ್ಟರು! ನಂತರ ಅವನಿಗೆ ಮಲಗುವ ಭಾಗ್ಯ ದೊರೆಯಲಿಲ್ಲ ಬಿಡಿ!

ನನ್ನ ಪಕ್ಕಕ್ಕೆ ತರಿಕೇರಿಯವನೊಬ್ಬ ಕುಳಿತಿದ್ದ. ಕಾಂತರಾಜ್ ಅಂತಾ ಅವನ ಹೆಸರಂತೆ. ಹೀಗೆ ಪರಿಚಯವಾಯಿತು. ಹರಟಲು ಶುರುವಾಯಿತು. ಅವ ತರಿಕೇರಿ ಎಂಎಲ್‍ಎ ಎಲೆಕ್ಷನ್‌ಗೆ ಸ್ಪರ್ಧಿಸಿದ ವ್ಯಕ್ತಿಯಂತೆ! ಠೇವಣಿಯನ್ನೂ ಗಳಿಸಿರಲಾರ ಎಂಬುದನ್ನು ಅವನ ಮುಖಚಹರೆಯೇ ಹೇಳುತ್ತಿತ್ತಾದ್ದರಿಂದ ನಾನು ಅದನ್ನು ಕೇಳಲು ಹೋಗಲಿಲ್ಲ!  “ಸಾರ್ ಏನೋ ಒಳ್ಳೆಯದು ಮಾಡಬೇಕು. ಭ್ರಷ್ಟರನ್ನು ಮಟ್ಟ ಹಾಕಬೇಕು ಅಂತಾ ಚುನಾವಣೆಗೆ ನಿಂತರೆ ನಮ್ಮ ಜನ ಠೇವಣಿಯನ್ನು ಕೊಡಲಿಲ್ಲ ಸಾರ್” ಅಂತಾ  ಕೊನೆಗೆ ಅವನೇ ಹೇಳಿಕೊಂಡ ಬಿಡಿ!

ಎದುರಿಗೆ ಕುಳಿತವನು ಶಿವಮೊಗ್ಗದವನು. ತಮಿಳುನಾಡಿನಲ್ಲಿ ಗಾರೆ ಕೆಲಸ ಮಾಡ್ತಾ ಇದಾನಂತೆ. ಅವನಿಗೆ ರೈಲಲ್ಲಿ ಸೀಗರೇಟು ಸೇದಲು ಆಗತ್ತಿಲ್ಲ ಎಂಬುದೇ ಚಿಂತೆ. ಸಾರ್ ದಿನಕ್ಕೆ ಎರಡು ಪ್ಯಾಕ್ ಸೇದ್ತೀನಿ ಸಾರ್ ಅಂತಾ ಅವನ ಲೈಫ್ ಸ್ಟೋರಿ ಹೇಳಲು ಶುರುವಿಟ್ಟ…. ನಂಗೆ ಎಂಎಲ್‌ಎ ಸಾಹೇಬರ ಕಥೆಯ ನಗುವೇ ಮಾಸಿರಲಿಲ್ಲ. ಆದ್ರೂ ಬಾಯಿ ಮುಚ್ಚಿಕೊಂಡು ಕಥೆ ಕೇಳಿದೆ.

ನನ್ನ ಪಕ್ಕದಲ್ಲಿ ಕುಳಿತ ಮತ್ತೊಬ್ಬನೂ ನನ್ನಂತಹವನೇ ಇರಬೇಕು! ಸಾರ್ ಬಸ್ಸಲ್ಲಿ ಹೋದ್ರೆ ಇಷ್ಟೆಲ್ಲಾ ಮಜ ಸಿಗತ್ತ ಹೇಳಿ ಅಂತಾ ಮಾತಿಗೆ ಶುರುವಿಟ್ಟ….

“ಇಲ್ಲ ಬಿಡಪ್ಪಾ ಬೆಂಗಳೂರಿನ ಪಿವಿಎಸ್ ಟಾಕೀಸ್‍ಗೆ ಹೋಗಿ ೧೦೦ ರೂ ಟಿಕೇಟ್ ಪಡೆದು ಸಿನಿಮಾ ನೋಡಿದರೂ ೬೯ ರೂಪಾಯಿಯ ರೈಲು ಪ್ರಯಾಣದ ಮಜ ಸಿಗಲ್ಲ” ಅನ್ನೊಣ ಅಂದುಕೊಂಡೆ. ಆದ್ರೂ ಅವ ಅದಕ್ಕೆ ಮತ್ತೊಂದು ಸ್ಟೋರಿ ಹೇಳಬಹುದೆಂಬ ಭಯ ಶುರುವಾಗಿತ್ತು. ಕಣ್ಣು ನಿದ್ದೆ ಬಯಸುತಿತ್ತು. ಎದ್ದಾಗ ಭದ್ರಾವತಿ ಬಂದಿತ್ತು. ಅಲ್ಲಿಂದ ಶಿವಮೊಗ್ಗದವರೆಗೂ ಇನ್ನೊಂದಿಷ್ಟು ಅನುಭವವಾಯಿತು!

ಏನೇ ಹೇಳಿ ರೈಲೆಂಬುದೊಂದು ಪುಟ್ಟ ವಿಶ್ವ. ಅಲ್ಲಿ ಎಲ್ಲಾ ಬಗೆಯ ಜನರು ನೋಡಲು ಸಿಗುತ್ತಾರೆ. ನೋಡುವಂಥ ಕಣ್ಣು ನಮಗಿರಬೇಕಷ್ಟೆ. ಹುಚ್ಚಾಪಟ್ಟೆ ಏರಿಕೆಯಾಗುತ್ತಿರುವ ಬಸ್ ದರದಿಂದಾಗಿ ಸಾಮಾನ್ಯ ಜನ ಪ್ರಯಾಣ ಮಾಡುವುದೇ ಕಷ್ಟವಾಗಿದೆ. ಅಂತಹ ಮಂದಿಗೆಲ್ಲಾ ರೈಲು ಆಸರೆ ಎಂಬುದೇ ಖುಷಿಪಡುವ ವಿಚಾರ.

Read Full Post »