Feeds:
ಲೇಖನಗಳು
ಟಿಪ್ಪಣಿಗಳು

Archive for ಏಪ್ರಿಲ್, 2010

ಅಡುಗೆ ಮಾಡಲು ಬೇಸರವಾಗಿದೆ ಎಂದು ಹೋಟೆಲ್‌ಗೆ ಹೋದ್ರೆ, ಬರಪೀಡಿತ ಪ್ರದೇಶದಲ್ಲಿ  ಆಹಾರ ಪೊಟ್ಟಣಕ್ಕಾಗಿ ಕ್ಯೂ ನಿಂತಿರುತ್ತಾರಲ್ಲ, ಥೇಟು ಅದೇ ರೀತಿಯ ವಾತಾವರಣ ದರ್ಶಿನಿಗಳೆದುರು! ಬಿಲ್ ಪಡೆಯಲು ಕ್ಯೂ, ಐಟಂ ಕೊಳ್ಳಲು ಮುತ್ತಿಗೆ. ಅಲ್ಲಿ  ನಿಲ್ಲುವುದಕ್ಕಿಂತ ಮನೆಯಲ್ಲಿ  ಪಾತ್ರೆ ತೊಳೆದು ಅಡುಗೆ ಮಾಡುವುದೇ ಲೇಸು ಅನ್ನಿಸಿಬಿಡುತ್ತದೆ ಎಷ್ಟೊ  ಸಲ! ಇನ್ನು  ಬಿಎಂಟಿಸಿ ಬಸ್ಸಿನ ಕಥೆ ಹೇಳುವುದೇ ಬೇಡ. ಐದೈದು ನಿಮಿಷಕ್ಕೊಂದು ಬಸ್ಸು  ಬುರುಬುರು ತಿರುಗುತ್ತದೆ ಎಂಬುದೇನೋ ನಿಜ. ಆದ್ರೂ, ಒಂದೂ ಬಸ್ಸು  ಯಾವತ್ತೂ  ಖಾಲಿಯಿರುವುದಿಲ್ಲ. ನಮ್ಮೂರಲ್ಲಿ  ದಿನಕ್ಕೆ ಒಂದೇ ಸಲ ಬಸ್ಸು  ಬಂದ್ರು, ಮಲಗುವಷ್ಟು  ಜಾಗ ಇರುತ್ತಪ್ಪೊ! ಇತ್ತೀಚೆಗೆ ದುಬಾರಿಯುತ ವಜ್ರ ಬಸ್ಸಲ್ಲೂ  ಹೌಸ್‌ಫುಲ್. ಈ ರಗಳೆಯೇ ಬೇಡ ಬೈಕ್ ಖರೀದಿಸಿ ಬಿಡೋಣ ಅಂದ್ರೆ, ಮೈಸೂರು ರಸ್ತೆಯ ಘನಘೋರ ಟ್ರಾಫಿಕ್ ಕಣ್ಣೆದುರಿಗೆ ಬರುತ್ತದೆ. ಎಂ.ಜಿ ರಸ್ತೆ  ನೆನಪು ಮಾಡಿಕೊಂಡ್ರೆ ಮೈ ನಡುಗುತ್ತದೆ. ಅಂಥ ರಸ್ತೆಗಳನ್ನೆಲ್ಲ  ನೆನಪಿಸಿಕೊಂಡು ಬಿಎಂಟಿಸಿ ಬಸ್ಸಿನತ್ತಲೇ  ಹೆಜ್ಜೆ  ಹಾಕುವುದು ಅನಿವಾರ್ಯ. ಹೋಗ್ಲಿ  ಕಾರು…

ಹೌದು, ಕಾರು ಕೊಳ್ಳುವುದೇನೋ ಸುಲಭ. ಆದ್ರೆ ಅದರ ನಿರ್ವಹಣೆ…ಮಹಾನಗರಿಯ ಅಲಂಕಾರ ಪ್ರಿಯ ಹುಡುಗಿಯೊಬ್ಬಳನ್ನು ಕಟ್ಟಿಕೊಂಡಷ್ಟು, ಜಾತಿ ನಾಯಿಯೊಂದನ್ನು ಸಾಕಿದಷ್ಟೇ ಕಷ್ಟದ ಕಾಯಕ!

ಸಂಜೆ ಬೇಜಾರಾಗುತ್ತಿದೆ ಎಂದು ಪಾರ್ಕ್‌ನತ್ತ ಹೆಜ್ಜೆ  ಹಾಕಿದರೆ, ನಮ್ಮೂರಿನಲ್ಲಿ  ವರ್ಷಕ್ಕೊಮ್ಮೆ  ನಡೆಯುವ ಜಾತ್ರೆ, ತೇರಿಗೆ ಸೇರುವಷ್ಟು  ಜನ ಪ್ರತಿ ನಿತ್ಯ ಸಂಜೆ ಉದ್ಯಾನವನದಲ್ಲಿ  ಬೀಡು ಬಿಟ್ಟಿರುತ್ತಾರೆ. ಕುಳಿತುಕೊಳ್ಳಲು ಒತ್ತಟ್ಟಿಗಿರಲಿ, ನೆಮ್ಮದಿಯಿಂದ ನಿಂತುಕೊಳ್ಳಲು ಜಾಗವಿರುವುದಿಲ್ಲ. ಜಗಳವಿಲ್ಲದೆ ಆಟೋರಿಕ್ಷಾ  ಇಳಿದ ದಿನವೇ ಇಲ್ಲ.  ಹಾಡುಹಗಲೇ ದುಪ್ಪಟ್ಟು  ಹಣ ಕೇಳ್ತಾರೆ. ಮೂರು ಜನ ಹತಿದ್ರೆ ಒಂದುವರೆ ಪಟ್ಟು  ಬಾಡಿಗೆ ಕೊಡಿ ಅಂತಾರೆ. ಮನೆ, ಮುಖ್ಯರಸ್ತೆಯಲ್ಲೇ  ಇರಬೇಕು. ಒಂಚೂರು ಒಳಗಡೆ ಪ್ರದೇಶಕ್ಕೆ ಬರಲ್ಲ  ಹಲವು ಆಟೋ ಚಾಲಕರು. ಇದನ್ನೆಲ್ಲ  ಪ್ರಶ್ನಿಸಲು ಹೋದ್ರೆ, ಬೀದಿಯಲ್ಲೇ  ಜಗಳಕ್ಕೆ ಬರ್‍ತಾರೆ. ಈ ಕುರಿತು ಪೋಲಿಸರಿಗೆ ದೂರು ನೀಡಿದರೆ, ಅಯ್ಯೊ  ಅವರ ಕಥೆ ಮತ್ತೊಂದು ರೀತಿ.  ಮೆಜಸ್ಟಿಕ್‌ನಲ್ಲಿ  ನಿಂತು ಮೈಮಾರಿಕೊಳ್ಳುವ ಸೂಳೆಯಿಂದ ಸಾರ್ವಜನಿಕರೆದುರೇ  ಮಾಮೂಲಿ ಪೀಕುವ ಈ ಮಂದಿ, ಇನ್ಯಾರನ್ನು ಬಿಟ್ಟಾರು ಅಲ್ವಾ?!

ಪಾನಿಪುರಿ ಮಾರುವವರು, ಪುಟ್‌ಪಾತ್ ವ್ಯಾಪಾರಿಗಳ ಕೈಯಲ್ಲಿ  ಮಾಮೂಲಿ ಪೀಕುವ ಪೋಲಿಸರು ನಿತ್ಯವೂ ಕಾಣುತ್ತಾರೆ. ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುವ ಇನ್ಸ್‌ಪೆಕ್ಟರ್‌ಗಳನ್ನು  ನೋಡಿದಾಗ, ಪ್ಯಾದೆಗಳು ೫-೧೦ ರೂ. ಜೇಬಿಗಿಳಿಸುವುದು ತಪ್ಪು ಅನ್ನಿಸುತ್ತಿಲ್ಲ. ಅಷ್ಟರ ಮಟ್ಟಿಗೆ  ವ್ಯವಸ್ಥೆಯೆಂಬುದು ನಮ್ಮ  ಮನಸ್ಸನ್ನು ಬದಲಿಸಿ ಬಿಟ್ಟಿದೆ. ಟಿಕೆಟ್ ಕೊಡದೇ ಹಣ ಜೇಬಿಗಿಳಿಸುವ ಬಿಎಂಟಿಸಿ ನಿರ್ವಾಹಕರುಗಳ ಬಳಿ ಜಗಳ ಆಡುವುದು ಬಿಟ್ಟುಬಿಟ್ಟಿದ್ದೇನೆ. ‘ಸಾರ್ ೧೧ ವರ್ಷ ಆಯಿತು ಈ ಇಲಾಖೆ ಸೇರಿ. ೧೩ ಸಾವಿರ ಸಂಬಳ ಬರ್‍ತಾ ಇದೆ. ನಾನು ಒಂದು ರೂಪಾಯಿ ಮೋಸ ಮಾಡಲ್ಲ, ಮೇಲಿನ ಅಕಾರಿಗಳಿಗೂ ನಯಾಪೈಸೆ ಕೋಡೊಲ್ಲ’ ಎನ್ನುತ್ತಿದ್ದ  ನಮ್ಮ  ಏರಿಯಾದ ಕಂಡಾಕ್ಟರ್. ಹೌದು, ನಾವು ಮೋಸ ಮಾಡಿದರೆ ಮೇಲಿನವರಿಗೆ ಪಾಲು ಕೊಡುವುದು ಅನಿವಾರ್ಯ. ಹಾಗಾಗಿಯೇ ಒಬ್ಬ  ಭ್ರಷ್ಟನಿಂದ, ರಾಜಕಾರಣಿಯಿಂದ ಇಡೀ ವ್ಯವಸ್ಥೆಯೇ ಭ್ರಷ್ಟವಾಗುವುದು.

ಕಿಟಾರನೆ ಕಿರುಚುವ, ಅರೆ-ಬರೆ ಕನ್ನಡದಲ್ಲಿ  ಮಾತಾಡುವ ಕೆಲ ರೇಡಿಯೋ ಜಾಕಿಗಳಿಗೆ ಅದ್ಯಾವ ಪುಣ್ಯಾತ್ಮರು ಉತ್ತಮವಾಗಿ ವಾಗ್ಮಿಗಳು ಎಂಬ ಸರ್ಟಿಫಿಕೆಟ್ ಕೊಟ್ಟಿದ್ದಾರೋ ಆ ದೇವರೇ ಬಲ್ಲ. ಇನ್ನೂ ತೆಲುಗು, ತಮಿಳು ಮಿಶ್ರಿತ ಕನ್ನಡ ಮಾತಾಡುವವರು ಬೇಡ ಬೇಡ ಅಂದ್ರು ಕಾಲಿಗೆ ಒಡಾಯುತ್ತಾರೆ! ರಾತ್ರಿ ಎಂಟರ ನಂತರ ಮಹಾನಗರಿಯ ಬೀದಿಗಿಳಿಯಲು ವಾಕರಿಕೆ ಬರುತ್ತದೆ. ಮಹಾನಗರಿಯ ಎಲ್ಲಾ  ಮುಖ್ಯ ಗಲ್ಲಿಯಲ್ಲೂ  ಸೂಳೆಯರು ಸಾಲುಗಟ್ಟಿ  ನಿಂತಿರುತ್ತಾರೆ. ಅದಕ್ಕಿಂತ ಬೇಸರದ ಸಂಗತಿ ಎಂದರೆ, ಖಾಕಿ ತೊಟ್ಟ  ಬೀಟ್  ಪ್ಯಾದೆಗಳ ಎದುರೇ ವಹಿವಾಟು ಕುದುರಿಸುವ ದೃಶ್ಯಗಳು. ಇವರಿಬ್ಬರಲ್ಲಿ  ತಪ್ಪಿತಸ್ಥರು ಯಾರು ಎಂಬುದೇ ಅರ್ಥವಾಗುವುದಿಲ್ಲ! ಇಷ್ಟೆಲ್ಲದರ ನಡುವೆಯೂ ಮಹಾನಗರಿಯ ಜೀವನ ಅನಿವಾರ್ಯವಾಗಿ ಬಿಟ್ಟಿದೆ.  ಇಲ್ಲಿ  ಬಿಡಾರ ಹೂಡುವ ಮಂದಿಯ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಆದ್ರೂ ಟೋಟ್ಟಲೀ ಬೆಂಗಳೂರು ಸಖತ್ ಬೋರಿಂಗ್ ಮಗಾ!!!

Read Full Post »