Feeds:
ಲೇಖನಗಳು
ಟಿಪ್ಪಣಿಗಳು

Archive for ಮೇ, 2012

‘ಸತ್ಯಮೇವ ಜಯತೆ…!’

ಹಾಗಂತ ಒಂದು ಕಾರ್ಯಕ್ರಮ  ಸ್ಟಾರ್ ವಾಹಿನಿಯಲ್ಲಿ ಬರುತ್ತಿದೆ. ಹಿಂದಿಯಲ್ಲಿ ಬರುತ್ತಿರುವ ಈ ಕಾರ್ಯಕ್ರಮ ನಮ್ಮ ನಾಡಿನ ನಗರ ಪ್ರದೇಶ ಹಾಗೂ ಇಂಟರ್‌ನೆಟ್ ಜಗತ್ತನ್ನು ತಲುಪಿದೆ. ಇಂಥ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡುತ್ತೇನೆ ಅಂತಾ ಅದರ ರೂವಾರಿ ಅಮಿರ್‌ಖಾನ್ ಸಂಬಂಧಿತರಿಗೆ ಪತ್ರ ಬರೆಯುತ್ತಾರೆ. ಅಲ್ಲಿಂದ ಮುಂದೆ ನಡೆದಿದ್ದನ್ನು ಮತ್ತೆ ಹೇಳಬೇಕಿಲ್ಲ. ಒಂದಷ್ಟು ಮಂದಿಗೆ ಭಾಷಾಭಿಮಾನ ಉಕ್ಕಿ ಹರಿಯಿತು. ಡಬ್ಬಿಂಗ್, ಭಾಷೆಯ ಕಗ್ಗೊಲೆ…ದೊಡ್ಡ, ದೊಡ್ಡ ಪದಗಳನ್ನು ಬಳಸಿ ಬೊಬ್ಬೆ ಹೊಡೆದರು.

ಒಂದು ಸಂಚಿಕೆ ನೋಡಿ ಡಬ್ಬಿಂಗ್ ಪರ ನಿಲ್ಲಬೇಡಿ ಅಂತ ಒಂದಷ್ಟು ಮಂದಿ ಕೂಗಿದ್ರು. ಇನ್ನೊಂದಷ್ಟು ಜನ ಅಮಿರ್‌ಖಾನ್ ತೇಜೋವಧೆಗೆ ಮುಂದಾದರು. ಅಮಿರ್ ದುಡ್ಡಿಗಾಗಿ ಈ ಕಾರ್ಯಕ್ರಮ ಮಾಡುತ್ತಿದ್ದಾರೆ, ಅವರದ್ದು ಪೊಳ್ಳು ದೇಶಭಕ್ತಿ ಅಂತೆಲ್ಲ ಬೊಬ್ಬೆ ಹೊಡೆದರು. ಮೇ.೨೭ರ ಭಾನುವಾರದಂದು ‘ಸತ್ಯಮೇಯಜಯತೆ’ಯ ೪ನೇ ಸಂಚಿಕೆ ಬಿತ್ತರಗೊಂಡಿದೆ. ಆಸ್ಪತ್ರೆಗಳ ಕರ್ಮಕಾಂಡವನ್ನು ಹೊತ್ತು ತಂದ ಸಂಚಿಕೆಯದು. ಹಾಗೆ ನೋಡಿದರೆ ವಾರದಿಂದ ವಾರಕ್ಕೆ ಸಂಚಿಕೆ ಉತ್ತಮಗೊಳ್ಳುತ್ತಿದೆ. ಮೊದಲ ಸಂಚಿಕೆಯ ತಪ್ಪನ್ನು ಅಮಿರ್ ನಂತರದ ಸಂಚಿಕೆಗಳಲ್ಲಿ ತಿದ್ದಿಕೊಳ್ಳುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರತಿ ವಾರವೂ ಭಿನ್ನವಾದ ಸಾಮಾಜಿಕ ಸಮಸ್ಯೆಯನ್ನು ಎತ್ತಿಕೊಂಡು ಬರುತ್ತಿದ್ದಾರೆ.

ಹೌದು, ಈ ಕಾರ್ಯಕ್ರಮಕ್ಕೆ ಸ್ಟಾರ್ ವಾಹಿನಿ ಬೃಹತ್ ಮೊತ್ತ ನೀಡುತ್ತಿದೆ. ಅಮಿರ್‌ಖಾನ್‌ರಂಥ ಸ್ಟಾರ್ ನಟರಿಗೆ ಹೋಲಿಸಿದರೆ ಅದು ಕಡಿಮೆ ಮೊತ್ತ. ಅದಕ್ಕಿಂತ ಹೆಚ್ಚಾಗಿ ನಮ್ಮ ಕನ್ನಡದ ವಾಹಿನಿಗಳು ಅತ್ತೆ-ಸೊಸೆ ಜಗಳದ ಧಾರವಾಹಿಗಳಿಗೆ ನೀಡುತ್ತಿರುವ ಮೊತ್ತಕ್ಕೆ ಹೋಲಿಸಿದರೂ ಇದು ಕಡಿಮೆ. ಕನ್ನಡದ ಒಂದಷ್ಟು ನಿರ್ದೇಶಕರು ಡಬ್ಬಿಂಗ್ ವಿರೋಧಿಸಲು ಕಾರ್ಯಕ್ರಮದ ಬಜೆಟ್‌ನ್ನು ಕೂಡ ಚರ್ಚೆಗೆ ತಂದರು. ಕನ್ನಡದಲ್ಲಿ ಮೆಗಾ ಸಿರಿಯಲ್‌ಗಳ ಹಾವಳಿ ಸಿಕ್ಕಾಪಟ್ಟೆ. ಇದಕ್ಕೆ ಮೂಲ ಕಾರಣ ಅದರ ಹಿಂದಿರುವ ದುಡ್ಡು. ನಮ್ಮ ವಾಹಿನಿಗಳು ಒಂದು ಎಪಿಸೋಡ್‌ಗೆ  ೫೦ ಸಾವಿರದಿಂದ ೬೫ ಸಾವಿರ ರೂಪಾಯಿವರೆಗೆ ನೀಡುತ್ತವೆ. ಸ್ಟಾರ್ ಡೈರೆಕ್ಟರ್ ಅನ್ನಿಸಿಕೊಂಡಂತೆ, ಅವರ ಸಿರಿಯಲ್‌ಗೆ ನೀಡುವ ಹಣ ಕೂಡ ಹೆಚ್ಚುತ್ತ ಹೋಗುತ್ತದೆ. ಇಲ್ಲಿ ಸಿರಿಯಲ್ ನಿರ್ಮಾಪಕರಿಗೆ ಸಿಂಹಪಾಲು. ನಮ್ಮಲ್ಲಿ ಹೆಚ್ಚಾಗಿ ನಿರ್ದೇಶಕ ಮಹಾನುಭವರೇ ಬೇರೆ ನಿರ್ಮಾಣ ಸಂಸ್ಥೆ ಹೆಸರಿನಲ್ಲಿ ನಿರ್ಮಾಪಕರಾಗಿರುತ್ತಾರೆ! ಎಪಿಸೋಡ್‌ಗೆ ೮೦,೦೦೦ರೂ. ಸಂಭಾವನೆ ಪಡೆದು, ೨೫-೩೦ ಸಾವಿರ ರೂ.ಗೆ ಒಂದು ಎಪಿಸೋಡ್ ಮುಗಿಸಿ, ಉಳಿದ ಹಣ ಜೇಬಿಗಿಳಿಸುವ ನಿರ್ದೇಶಕರು ನಮ್ಮಲ್ಲಿದ್ದಾರೆ.

ಈಗ ಹೇಳಿದ್ದು ಕನ್ನಡದ ಕಥೆ. ಅತ್ತೆ-ಸೊಸೆ ಧಾರಾವಾಹಿಗಳ ವ್ಯಥೆ. ಓರ್ವ ನಿರ್ದೇಶಕನ ಒಂದು ಧಾರಾವಾಹಿ ನೋಡಿದರೆ, ಉಳಿದ ಮೂರನ್ನು ನೋಡುವ ಅಗತ್ಯವೇ ಇರುವುದಿಲ್ಲ. ಹಾಗೆ ನೋಡಿದರೆ ಅಮಿರ್‌ಖಾನ್ ಕಾರ್ಯಕ್ರಮದ ರೂಪುರೇಷೆಯೇ ಭಿನ್ನ. ಅದೊಂದು ಸಂಶೋಧನೆ ಆಧಾರಿತ ಕಾರ್ಯಕ್ರಮ. ಅಲ್ಲಿ ಕರ್ನಾಟಕದಿಂದ ಹಿಡಿದು, ಕಾಶ್ಮೀರದ ತುದಿಯವರೆಗಿನ ಎಲ್ಲ ಪ್ರದೇಶಗಳ ಘಟನೆ ಬರುತ್ತದೆ. ಜೊತೆಗೆ ಈ ಕಾರ್ಯಕ್ರಮ ಹಲವು ಭಾಷೆಯ ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ. ದೇಶವೇ ಕಾರ್ಯಕ್ರಮವನ್ನು ವೀಕ್ಷಿಸುತ್ತದೆ. ಈ ಎಲ್ಲ ದೃಷ್ಟಿಕೋನದಿಂದ ನೋಡಿದಾಗ, ಅಮಿರ್‌ಖಾನ್ ಈ ಕಾರ್ಯಕ್ರಮಕ್ಕೆ ಅತ್ಯಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದನ್ನು ಕನ್ನಡದ ಖ್ಯಾತ ನಿರ್ದೇಶಕರುಗಳು ಗಮನಿಸಬೇಕಾಗುತ್ತದೆ. ಅಮಿರ್‌ಖಾನ್, ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಬಹುಶಃ ಡಬ್ಬಿಂಗ್ ವಿರುದ್ಧ ಬೊಬ್ಬೆ ಹೊಡೆಯುವ ಕೆಲವರಿಗೆ ತಿಳಿದಿರಲಿಕ್ಕಿಲ್ಲ!

ಡಬ್ಬಿಂಗ್ ಬೇಡ ಎಂದು ಬೊಬ್ಬೆ ಹೊಡೆಯುವ ಅಪ್ಪಟ ಕನ್ನಡಾಭಿಮಾನಿಗಳನ್ನು ಒಪ್ಪೊಣ. ಆದರೆ, ಒಂದು ಸತ್ಯಮೇವಜಯತೆಯನ್ನು ನಿರ್ಮಿಸಲು ಅವರಿಂದ ಸಾಧ್ಯವಿದೆಯಾ? ಶ್ರೀಕೃಷ್ಣ, ಜೈ ಹನುಮಾನ್‌ನಂಥ ಒಂದು ಧಾರವಾಹಿಯನ್ನು ನಮ್ಮ ಕನ್ನಡದ ನಿರ್ದೇಶಕರು ನೀಡಿದ್ದಾರಾ? ಅತ್ತೆ-ಸೊಸೆ ನಡುವೆ ಜಗಳ ತಂದಿಡುವ ಸಿರಿಯಲ್‌ಗಳು, ತಂದೆಯ ಆಸ್ತಿಗೆ ಮಗಳು ಹೊಂಚು ಹಾಕುವ ಕಥೆಗಳು…ಇವೆ ಅಲ್ವಾ ನಮ್ಮ ಸಮಾಜಕ್ಕೆ ನಿಮ್ಮ ಬಹುಪಾಲು ಕೊಡುಗೆ?

ಖಂಡಿತ ಕನ್ನಡದಲ್ಲಿ ಒಳ್ಳೆ ಕಾರ್ಯಕ್ರಮಗಳು ಬಂದಿಲ್ಲ ಅನ್ನುತ್ತಿಲ್ಲ, ಅಥವಾ ಬೇರೆ ಭಾಷೆಗಳಲ್ಲಿ ಬರುವುದೆಲ್ಲ ಶ್ರೇಷ್ಠ ಅಂತ ವಾದ ಮಾಡಲು ಸಾಧ್ಯವಿಲ್ಲ. ಇತರೆ ಭಾಷೆಗಳಲ್ಲೂ ಸಾವಿರಾರು ತೋಪು ಧಾರವಾಹಿಗಳು ಬರುತ್ತವೆ. ಕೆಟ್ಟ ಕಾರ್ಯಕ್ರಮಗಳು ಬರುತ್ತವೆ. ಅವನ್ನು ಕನ್ನಡಕ್ಕೆ ಡಬ್ ಮಾಡಿದಾಗ ವಿರೋಧವನ್ನು ಒಪ್ಪಬಹುದು. ಆದರೆ ‘ಸತ್ಯಮೇವ ಜಯತೆ’ಯಂಥ ಒಂದು ಕಾರ್ಯಕ್ರಮ ಡಬ್ ಆಗುವುದಾದರೆ, ಅದು ನಿಜಕ್ಕೂ ಹೆಮ್ಮೆಯ ಸಂಗತಿ.

ನಿಮಗೆ ಬೇರೆ ಭಾಷೆಯ ಹಿರೋಯಿನ್ ಆಗಬಹುದು. ಅವಳಿಗೆ ಕನ್ನಡ ಬಾರದಿದ್ದರೂ ಕಷ್ಟಪಟ್ಟು ಇಂಗ್ಲಿಷ್‌ನಲ್ಲಿ, ಬಂಗಾಳಿಯಲ್ಲಿ ಕನ್ನಡದ ವಾಕ್ಯ ಬರೆದುಕೊಟ್ಟು ಮಾತನಾಡಿಸುತ್ತೀರಿ. ಯಾಕೆಂದರೆ ಆಕೆಯಿಂದ ನಿಮ್ಮ ಚಿತ್ರ ಹಿಟ್ ಆಗುತ್ತೆ. ಅವಳು ಸೊಂಟ ಬಳುಕಿಸಿದರೆ ನಿಮ್ಮ ಜೇಬು ತುಂಬುತ್ತೆ. ಅದಕ್ಕಿಂತ ಹೆಚ್ಚಾಗಿ ಅವಳು ಇಲ್ಲಿನ ಸ್ಟಾರ್ ನಟಿಯರಿಗಿಂತ ಕಡಿಮೆ ಬೆಲೆಗೆ ಸಿಗುತ್ತಾಳೆ ಅಥವಾ ಬಹುಭಾಷೆಯಲ್ಲಿ ಆಕೆ ಜನಪ್ರಿಯವಾಗಿದ್ದರೆ, ಅವಳಿಂದ ನಿಮಗೆ ಜಾಸ್ತಿ ರಿಟರ್ನ್ಸ್ ಬರುತ್ತದೆ. ಆಗ ನಿಮ್ಮ ಭಾಷಾಪ್ರೇಮ ಮಾಯವಾಗಿ ಬಿಡುತ್ತೆ. ಕನ್ನಡದಲ್ಲಿ ಸೊಗಸಾಗಿ ಹಾಡಬಲ್ಲ ಸಹಸ್ರ ಕಂಠಗಳಿವೆ. ಬೇರೆ ಭಾಷೆಯ ಗಾಯಕರಿಂದ ಹಾಡಿಸುವಾಗ ಕನ್ನಡಿಗರ ಊಟಕ್ಕೆ ಕುತ್ತು ಬರುತ್ತಿದೆ ಅಂತ ಆಗ ನಿಮಗೆ ಅನ್ನಿಸುವುದೇ ಇಲ್ಲ.

ಇನ್ನೊಬ್ಬರ ಸಂಸಾರ ಸರಿ ಮಾಡುತ್ತೇವೆ ಅಂತಾ ಫೋಸು ಕೊಡುತ್ತೀರಿ. ಯಾರದ್ದೋ ಮನೆ ಕಥೆಗಳನ್ನು ಟಿವಿ ಪರದೆಯಲ್ಲಿ ಹೇಳಿಸುತ್ತೀರಿ. ಅಷ್ಟಕ್ಕೂ ನಿಮ್ಮ ಮನೆ ದೋಸೆಯ ತೂತುಗಳು ಸರಿ ಇವೆಯಾ ಅಂದರೆ ಉತ್ತರವಿಲ್ಲ. ಜಟಕಾ ಬಂಡಿ ಹತ್ತಿಳಿದಿರುವ ಅವರ ಸಂಸಾರದ ಕಥೆಯನ್ನು, ಹಳೆಯ ವೈಭವಗಳನ್ನು ಹೇಳುವಂತಿಲ್ಲ! ಯಾರೊ ಪರದೇಶಿಗಳ ಕಥೆ ತಂದು ಸ್ಕ್ರೀನ್ ಮೇಲೆ ಇಡಬೇಕು…ಅಮಿರ್ ಖಾನ್ ಅಂಥ ಕೆಟ್ಟ ಸಾಹಸ ಮಾಡುತ್ತಿಲ್ಲ ಅಲ್ವಾ?

ಈ ಹೊತ್ತಿನಲ್ಲಿ ಮತ್ತೆ ಡಬ್ಬಿಂಗ್ ವಿವಾದ ಎತ್ತಿರುವುದಕ್ಕೂ ಕಾರಣವಿದೆ. ಒಂದೇ ಎಪಿಸೋಡ್ ನೋಡಿ ಥ್ರಿಲ್ ಆಗಿ ಮಾತನಾಡುವುದು ಥರವಲ್ಲ. ತಾರೆ ಝಮೀನ್ ಪರ್, ಪೀಪ್ಳಿ ಲೈವ್‌ನಂಥ ಅದ್ಭುತ ಸಿನಿಮಾಗಳನ್ನು ಕೊಟ್ಟ ಅಮೀರ್‌ಖಾನ್ ತಾಕತ್ತಿನ ಕುರಿತು ಅನುಮಾನವಿರಲಿಲ್ಲ. ಆದರೂ ಅನೇಕ ಸಿನಿಮಾ ಸ್ಟಾರ್‌ಗಳು ಟಿವಿ ಪರದೆ ಮೇಲೆ ತೋಪಾಗಿದ್ದಾರೆ. ಹೀಗಾಗಿ ನಾಲ್ಕು ಎಪಿಸೋಡ್‌ವರೆಗೆ ಕಾದು ನೋಡಬೇಕಿತ್ತು. ನಾಲ್ಕನೆ ಕಂತಿನಲ್ಲಿ ಅವರು ಎತ್ತಿಕೊಂಡಿದ್ದು ವೈದ್ಯಕೀಯ ಕ್ಷೇತ್ರದಿಂದ ನಡೆಯುತ್ತಿರುವ ಹಗಲು ದರೋಡೆಯನ್ನು. ದೇಶದಲ್ಲಿ ಚರ್ಚೆಯಾಗಲೇ ಬೇಕಾದ ವಿಚಾರವಿದು.

ವೈದ್ಯರು, ನ್ಯಾಯ್ಯಾಧೀಶರ ಬಳಿ ಯಾವುದನ್ನೂ ಮುಚ್ಚಿಡಬಾರದು ಎಂಬ ಮಾತಿತ್ತು. ಅವರ ಬಳಿ ಸುಳ್ಳು ಹೇಳಿದರೆ ನಮಗೆ ಆಪತ್ತು ಎಂಬ ಭಾವನೆಯಿತ್ತು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಬಹುತೇಕ ವೈದ್ಯರು ಮತ್ತು ನ್ಯಾಯಾಧೀಶರು ಸತ್ಯ ಹೇಳುವುದೇ ಕಷ್ಟದ ಸಂಗತಿ! ಎಂಬಿಬಿಎಸ್ ಮುಗಿಸಿದ ಹೆಚ್ಚಿನ ಮಂದಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುತ್ತಾರೆ. ಎಕ್ಸ್‌ರೆ, ಸ್ಕ್ಯಾನ್, ಲ್ಯಾಬ್ ಪರೀಕ್ಷೆಯಿಂದ ಹಿಡಿದು ಎಲ್ಲ ಬಗೆಯ ವೈದ್ಯಕೀಯ ಸೇವೆಗಳು ಒಂದೇ ಸೂರಿನಡಿಯಲ್ಲಿ ಇವೆ ಎಂಬ ಬೋರ್ಡ್! ಹೀಗಿದ್ದಾಗ ರೋಗಿಗಳು ಆಸ್ಪತ್ರೆಗೆ ಕಾಲಿಡಲು ಯೋಚಿಸಬೇಕು. ನೀವು ಜ್ವರ ಅಂತಾ ಕಾಲಿಟ್ಟರೆ, ನಿಮಗೆ ಮೂತ್ರ ಪರೀಕ್ಷೆಯಿಂದ ಎಲ್ಲ ಬಗೆಯ ಪರೀಕ್ಷೆ ಮಾಡಿಸುತ್ತಾರೆ. ಟೈಪಾಯ್ಡ್ ಇರಬಹುದು, ಇದು ಡೆಂಗ್ಯು ಲಕ್ಷಣ ಅಂತೆಲ್ಲ ಹೆದರಿಸುತ್ತಾರೆ. ಯಾಕೆಂದರೆ ಅವರದ್ದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ! ಅವರಿಗೆ ವ್ಯಾಪಾರ ಆಗಬೇಕಲ್ವಾ? ಇಂಥ ಅನುಭವ ಅದೆಷ್ಟೋ ಮಂದಿಗೆ ಆಗಿದೆ ಮತ್ತು ಆಗುತ್ತಿರುತ್ತದೆ.

ಮೆಡಿಕಲ್ ಅನ್ನೋದು ೫ ವರ್ಷದ ಕೋರ್ಸ್. ಸರ್ಕಾರಿ ಸೀಟು ಸಿಕ್ಕರೂ ೫-೬ ಲಕ್ಷ ರೂಪಾಯಿ ಖರ್ಚಾಗುತ್ತದೆ. ಇಲ್ಲ ಅಂದರೆ ೩೦-೪೦ ಲಕ್ಷ. ಖಾಲಿ ಎಂಬಿಬಿಎಸ್ ಮಾಡಿದರೆ ಬೆಲೆಯಿಲ್ಲ. ಎಂಡಿ ಮಾಡಲೇ ಬೇಕು. ಎಂಡಿ ಆಗಲು ಖಾಸಗಿ ಕಾಲೇಜಿನಲ್ಲಿ ಸುಮಾರು ೫೦-೭೦ ಲಕ್ಷ ರೂ. ಬೇಕು. ಇಷ್ಟೆಲ್ಲ ಖರ್ಚು ಮಾಡಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿ ಕೇವಲ ೩೦ ರೂ. ಶುಲ್ಕದಲ್ಲಿ ತಪಾಸಣೆ ನಡೆಸಬೇಕು ಅಂದರೆ ಹೇಗೆ? ಇರೋ ರೋಗವನ್ನು ಒಂದೇ ಸಲ ಗುರುತಿಸಿಬಿಟ್ಟರೆ ವೈದ್ಯನ ಬದುಕು ಸಾಗುವುದು ಹೇಗೆ? ಹಾಗಂತ ಹಾಸನದಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿರುವ ಗೆಳತಿಯೊಬ್ಬಳು ಹೇಳುತ್ತಿದ್ದಳು. ವೈದ್ಯಕೀಯ ಪದವಿ ಪಡೆಯುವವರ ಸಾಲಿನಲ್ಲಿ ನಿಂತು ನೋಡಿದರೆ ಈ ವಾದ ಸರಿ. ಆದರೆ ಸಾಮಾನ್ಯನಾಗಿ ನಿಂತು ನೋಡಿದರೆ…?

ಇಂಥ ಒಂದು ವಿಚಾರವನ್ನು ಈ ಸಲದ ಸತ್ಯಮೇವ ಜಯತೆಯಲ್ಲಿ ಅಮಿರ್ ಕೈಗೆತ್ತಿಕೊಂಡಿದ್ದರು. ಇಡೀ ಕಾರ್ಯಕ್ರಮವನ್ನು ಅವರು ತೆಗೆದುಕೊಂಡ ಹೋದ ರೀತಿ ನಿಜಕ್ಕೂ ಅದ್ಭುತ.

ವೈಯಕ್ತಿಕವಾಗಿ ನನಗೆ ಆಸ್ಪತ್ರೆಯಲ್ಲಿ ಅನೇಕ ಸಲ ಕೆಟ್ಟ ಅನುಭವಗಳಾಗಿವೆ. ಗೆಳೆಯನೊಬ್ಬನಿಗೆ ಮದ್ಯರಾತ್ರಿಯಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ಇಂದಿರಾನಗರದ ಆಸ್ಪತ್ರೆಯೊಂದಕ್ಕೆ ಮದ್ಯರಾತ್ರಿಯಲ್ಲೇ ಓಡುತ್ತಾನೆ. ಆತನನ್ನು ಹಾಸಿಗೆ ಮೇಲೆ ಕೂರಿಸಿಕೊಂಡ ವೈದ್ಯರು ಅದೇನೇನೊ ಸ್ಕ್ಯಾನ್ ಮಾಡುತ್ತಾರೆ. ನಿಮ್ಮ ಹೃದಯಕ್ಕೆ ತಕ್ಷಣ ಶಸ್ತ್ರ ಚಿಕಿತ್ಸೆ ನಡೆಯಬೇಕು. ಇಲ್ಲವಾದರೆ, ನೀವು ಸತ್ತು ಹೋಗುವಿರಿ ಅನ್ನುತ್ತಾರೆ. ಹೆದರಿದ ಆತ ಸುಮ್ಮನೆ ಹಾಸಿಗೆ ಮೇಲೆ ಮಲಗುತ್ತಾನೆ. ಶಸ್ತ್ರಚಿಕಿತ್ಸೆಯೂ ನಡೆಯುತ್ತದೆ. ಮರುದಿನ ೧೨ ಗಂಟೆ ಹೊತ್ತಿಗೆ ಬಿಲ್ ನೀಡುತ್ತಾರೆ. ಬರೋಬ್ಬರಿ ೧ ಲಕ್ಷದ ೭೨ ಸಾವಿರ ರೂಪಾಯಿ ಬಿಲ್ ಆಗಿದೆ! ಕಟ್ಟದಿದ್ದರೆ ವಿಧಿಯಿಲ್ಲ. ಆಸ್ಪತ್ರೆಯಿಂದ ಡಿಸಾರ್ಜ್ ಮಾಡುವುದಿಲ್ಲ. ಬಿಲ್‌ಗೆ ವಿವರಣೆ ಕೊಟ್ಟಿದ್ದಾರೆ. ಆ ಮೆಷಿನ್ ಹಾಕಿದ್ದೇವೆ. ಹೃದಯದ ಬ್ಲಾಕ್‌ಗಳನ್ನು ಈ ಸ್ಪೋಟ ನಡೆಸಿ ತೆಗೆದಿದ್ದೇವೆ ಅಂತೆಲ್ಲ ವಿವರಿಸಿದ್ದಾರೆ. ಹೌದಾ ಅದನ್ನೆಲ್ಲ ಮತ್ತೊಮ್ಮೆ ತೋರಿಸಿ, ನಾವು ನೋಡಿಲ್ಲ ಅನ್ನುವ ಹಾಗಿಲ್ಲ! ಬೆಂಗಳೂರಿನ ಪ್ರತಿ ನಿತ್ಯ ಸಾವಿರಾರು ರೋಗಿಗಳಿಗೆ ಈ ಅನುಭವ ಆಗುತ್ತೆ. ಇನ್ನು ದೇಶದಲ್ಲಿ ಅದೆಷ್ಟು ಮಂದಿಗೆ ಹೀಗೆ ವೈದ್ಯರು ಯಾಮಾರಿಸುತ್ತಾರೆಯೋ ಗೊತ್ತಿಲ್ಲ…! ಹೀಗೆ ಯಾಮಾರಿಸುವ ವೈದ್ಯರ ಕಥೆಯನ್ನು ಅಮಿರ್ ಕೈಗೆತ್ತಿಕೊಂಡು ಬಂದಿದ್ದರು.

ನಮಗೆ ಗೊತ್ತಿದ್ದು ಚರ್ಚೆ ಮಾಡಲಾಗದ, ನಾವೇ ಅನುಭವಿಸಿ ಹೇಳಿಕೊಳ್ಳಲಾಗದ ಅದೆಷ್ಟೋ ಘಟನೆಗಳ ಪ್ರತಿಬಿಂಬ ಸತ್ಯಮೇವ ಜಯತೆ. ತಮಿಳು, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಿಗೆ ಈ ಕಾರ್ಯಕ್ರಮ ಡಬ್ ಆಗುತ್ತಿದೆ. ಆದರೆ ಕನ್ನಡದಲ್ಲಿ ಮಾತ್ರ ಇದಕ್ಕೆ ಪ್ರಬಲ ವಿರೋಧ. ಚಿತ್ರರಂಗದಲ್ಲಿನ ಅನೇಕರ ಬದುಕಿನ ಪ್ರಶ್ನೆಯಂತೆ. ಒಂದು ಕಾರ್ಯಕ್ರಮ ಡಬ್ ಆದರೆ ಅಥವಾ ಅಂಥ ೧೦ ಕಾರ್ಯಕ್ರಮಗಳು ಡಬ್ ಆದರೆ ಯಾವೊಬ್ಬ ನಿರ್ದೇಶಕನಾದರೂ ಕನ್ನಡದಲ್ಲಿ ನೇಣು ಹಾಕಿಕೊಳ್ಳುತ್ತಾನಾ? ಅಷ್ಟಕ್ಕೂ ಕನ್ನಡದ ಮಹಾನ್ ನಿರ್ದೇಶಕ/ನಿರ್ಮಾಪಕ ಒಬ್ಬ ಕಲಾವಿದನಿಗೆ ನೀಡುತ್ತಿರುವ ಸಂಭಾವನೆ ಎಷ್ಟು? ನಮ್ಮನ್ನೇ ನಂಬಿ ಸಾವಿರಾರು ಜನ ಬದುಕುತ್ತಿದ್ದಾರೆ, ನಮ್ಮ ಸಿರಿಯಲ್‌ಗಳು ನಿಂತರೆ ಎಷ್ಟೋ ಜನ ಸಾಯುತ್ತಾರೆ ಎಂದು ಹಲವು ನಿರ್ದೇಶಕರು ಕಿರುಚುತ್ತಾರೆ. ಅವರೇ ಬಹಿರಂಗ ಪಡಿಸಲಿ ನಮ್ಮ ಕಲಾವಿದನಿಗೆ ಇಂತಿಷ್ಟು ನೀಡುತ್ತಿದ್ದೇವೆ ಎಂದು! ಖಂಡಿತಾ ಡಬ್ ಆಗುವುದರಿಂದ ಯಾವೊಬ್ಬ ಕಲಾವಿದನು ನೇಣು ಹಾಕಿಕೊಳ್ಳುವುದಿಲ್ಲ. ನಿರ್ದೇಶಕರಿಗೆ ಬರುವ ಲಾಭ ಹೋಗುತ್ತದೆ ಅಲ್ವಾ? ಇದನ್ನು ನೇರವಾಗಿ ಹೇಳಿಕೊಳ್ಳಲಾಗದೆ, ಸುತ್ತಿ ಬಳಸಿ ಹೇಳಿಕೊಳ್ಳುತ್ತಿದ್ದಾರಷ್ಟೆ. ಈಗ ಹೇಳಿ ಸತ್ಯಮೇವ ಜಯತೆಯಂಥ ಕಾರ್ಯಕ್ರಮವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಅನ್ನಿಸಲ್ವಾ

(ಈ ಲೇಖನದ ಪರಿಷ್ಕ್ರತ ಭಾಗ ಇವತ್ತಿನ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ)

 

Read Full Post »