‘ತಬ್ಬಲಿಯು ನೀನಾದೆ ಮಗನೇ’ ಎಂಬ ಕೃತಿಯನ್ನು ಓದಲು ಸೂಚಿಸಿದ ಬ್ಲಾಗ್ ಮಿತ್ರರಿಗೆ ಧನ್ಯವಾದ ಹೇಳುತ್ತಾ ಮಾತು ಆರಂಭಿಸುತ್ತಿದ್ದೇನೆ. ಅಜ್ಜ, ಮೊಮ್ಮಗನ ತರ್ಕ ಸರಣಿಯಲ್ಲಿ ಇಡೀ ಭರತಭೂಮಿಯ ಆಚಾರ-ವಿಚಾರಗಳನ್ನು ಪ್ರತಿನಿಸುವ ಕೃತಿ ತಬ್ಬಲಿ ನೀನಾದೆ. ಆ ಕೃತಿಯನ್ನು ಓದದ ಈ ತಲೆಮಾರಿನ ಎಲ್ಲಾ ಯುವಕರು ಒಮ್ಮೆ ಓದಲೇ ಬೇಕು ಎಂಬ ಪ್ರೀತಿಪೂರ್ವಕ ಆಗ್ರಹ ನನ್ನದು. ನಮ್ಮ ಹೆಮ್ಮಯ ಭಾರತದ ಚಿಂತನಾ ಲಹರಿಯನ್ನು ಅರ್ಥೈಸಿಕೊಳ್ಳಲಿಕ್ಕೋಸ್ಕರವಾದರೂ ನೀವು ಆ ಕಾದಂಬರಿಯನ್ನು ಓದಬೇಕು.
ಪುಣ್ಯಕೋಟಿ ತಳಿಯ ಹಸುವಿನ ವರ್ಣನೆಯೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಮೊದಲ ೧೦-೧೫ ಪುಟಗಳು ಸ್ವಲ್ಪ ಬೋರ್ ಅನ್ನಿಸುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಕಾದಂಬರಿಕಾರರ ಮೊದಲ ಪುಟಗಳು ತುಂಬಾ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಮುಂದೆ ಹೋದಂತೆ ಕಾದಂಬರಿ ಸೊರಗುತ್ತಾ ಹೋಗುತ್ತದೆ. ಆದರೆ ಭೈರಪ್ಪನವರು ಅಂತಹ ಲೇಖಕರಿಗೆ ತದ್ವಿರುದ್ಧ ಅಂದರೂ ತಪ್ಪಗಲಾರದು. ಕಾದಂಬರಿ ಅಂತ್ಯ ಭಾಗಕ್ಕೆ ತಲುಪಿ ಮುಗಿದಿದ್ದರೂ, ಮುಗಿಯಿತು ಅನ್ನಿಸುವುದಿಲ್ಲ ಅವರ ಕೃತಿಗಳು. ಅದರಲ್ಲೂ ತಬ್ಬಲಿ…‘ಮನೋಭಾವ ಬದಲಿಸಿಕೊಂಡು ಮುಂಬೈಯಿಂದ ವಾಪಾಸು ಬಂದ ಕಾಳಿಂಗನ ಮುಂದಿನ ಬದುಕನ್ನು ಒಂಚೂರು ವಿವರಿಸಬೇಕಿತ್ತು. ಕಾದಂಬರಿ ಅಪೂರ್ಣವಾದಂತೆ ಭಾಸವಾಗುತ್ತಿದೆ ನನಗೆ’ ಎಂದು ರಾಜಾರಾಮನ ಬಳಿ ಹೇಳಿದರೆ, ಅವ ‘ಮಗಾ ಈಗಲೇ ೩೦೦ ಪುಟ ದಾಟಿದೆ ಸರಿಯಾಗಿ ನೋಡು ಅಂದ!’
ಗೊಲ್ಲ ವಂಶದ ಕಾಳಿಂಗಜ್ಜನ ಹಟ್ಟಿಯೇ ಕಾದಂಬರಿಯ ಕೇಂದ್ರ. ಅಮೆರಿಕಕ್ಕೆ ಹೋಗಿ ಕೃಷಿ ಪದವಿ ಗಳಿಸಿ ಮನೆಗೆ ಬರುವ ಕಾಳಿಂಗಜ್ಜನ ಮೊಮ್ಮಗ ಮರಿ ಕಾಳಿಂಗನೇ ಕಥಾ ನಾಯಕ. ಮರಿ ಕಾಳಿಂಗನ ಹೆಂಡತಿ ಹೀಲ್ಡಾ ಮತ್ತು ಆತನ ಸ್ನೇಹಿತ ವೆಂಕಟರಮಣ ಕಾದಂಬರಿಯ ಜೀವಾಳ ಅಂತಾ ಅನ್ನಿಸಿದರೂ, ಅಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಜೀವವಿದೆ. ದೇವಸ್ಥಾನದ ಗಂಟೆಯೂ ಅದರದ್ದೇ ಆದ ರೀತಿಯಲ್ಲಿ ಮಾತಾಡುತ್ತದೆ. ಹಾಲು ಕರೆಯುವ ಯಂತ್ರವೂ ಒಂದಿಷ್ಟು ವಿಚಾರಗಳ ಪ್ರತೀಕದಂತೆ ಭಾಸವಾಗುತ್ತದೆ.
ಗೋವನ್ನು ತಾಯಿ-ತಂದೆ, ದೇವರು ಎಂದು ನಂಬಿರುವ ಅರುಣಗಿರಿ ಬೆಟ್ಟದ ತಪ್ಪಲಿನ ಕಾಳಿಂಗಜ್ಜ, ಒಲ್ಲದ ಮನಸ್ಸಿನಿಂದ ಮೊಮ್ಮಗ ಕಾಳಿಂಗನನ್ನು ವಿದ್ಯಾಭ್ಯಾಸ ಮಾಡಿಸುತ್ತಾನೆ. ಆದರೆ ಮೊಮ್ಮಗ ಹಸು ಎಂದರೆ ಹಾಲು ಕೊಡುವ ಸರಕು, ಮಾಂಸ ನೀಡುವ ಪ್ರಾಣಿ ಎಂದು ಭಾವಿಸುತ್ತಾನೆ. ಅಮೆರಿಕೆಯಿಂದ ಮರಳಿದ ನಂತರ ‘ಹೈನೋದ್ಯಮ’ವನ್ನು ಆರಂಭಿಸುತ್ತಾನೆ…ಹುಟ್ಟಿ ಬೆಳೆದ, ಆಡಿ ಕಳೆದ ನಾಡಿನ ಆಚಾರ-ವಿಚಾರಗಳನ್ನು ವಿರೋಸುತ್ತಾನೆ…ಮಾತು ಬರದ ತನ್ನ ತಾಯಿ, ಹಟ್ಟಿಯಲ್ಲಿನ ಹಸು ಎರಡು ಒಂದೇ ಜಾತಿಯವು ಎಂಬ ನಿಲುವು ತಳೆಯುತ್ತಾನೆ!
ಇಲ್ಲ, ಹೆಚ್ಚು ವಿವರಿಸಲು ನನಗೆ ಪದಗಳು ದೊರೆಯುತ್ತಿಲ್ಲ. ಹಾಗಾಗಿ ನೀವೊಮ್ಮೆ ಓದಿಬಿಡಿ!
ನಮ್ಮ ಮನೆಯಲ್ಲೂ ಕೊಟ್ಟಿಗೆಯಿದೆ. ಅಪ್ಪ ಹಸುವಿನೊಂದಿಗೆ ಗಂಟೆಗಟ್ಟಲೇ ಹರಟುತ್ತಾರೆ. ತೋಟಕ್ಕೆ ಬೇಲಿ ಕಟ್ಟುವುದು, ಗಿಡಕ್ಕೆ ಗೊಬ್ಬರ ಹಾಕುವುದು…ಇವೆಲ್ಲಾ ನನಗೆ ಬಲು ಪ್ರೀತಿಯ ಕೆಲಸ. ಆದರೆ ಹಸು, ಹಾಲು ಕರೆಯುವುದು, ಕೊಟ್ಟಿಗೆ ಕಡೆ ಹೋಗುವುದು…ಇವೆಲ್ಲಾ ನನಗೆ ಮೊದಲಿನಿಂದಲೂ ಅಲರ್ಜಿ. ನಾಯಿ, ಬೆಕ್ಕು…ಇತ್ಯಾದಿಗಳಿಂದ ನಾನು ಸದಾ ದೂರ.(ಕೆಲವೊಮ್ಮೆ ಮನುಷ್ಯರಿಂದಲೂ!) ಅಪ್ಪ ಹಸುವಿನೊಂದಿಗೆ ಮಾತಾಡುವುದು ನೋಡಿ ನನಗೆ ನಗು ಬರುತ್ತಿತ್ತು. ನಮ್ಮ ಮನೆ ವಿಜಯ ಸತ್ತಾಗ ಅಪ್ಪ ಊಟ ಬಿಟ್ಟಿದ್ದು ನೊಡಿ, ನಕ್ಕಿದೆ. ಆದರೆ ಈ ಕಾದಂಬರಿ ಓದಿದ ನಂತರ, ಮಾತು ಬರದ ವಿಜಯನ ಜತೆ ಹರಟೆ ಹೊಡೆಯುವ ಅಪ್ಪನ ನೆನಪಾಯಿತು.
ನಮ್ಮ ಮನೆಯ ಕೊಟ್ಟಿಗೆಯಲ್ಲಿ ಈಗ ಒಂದೇ ಕರುವಿದೆ. ಉಳಿದವೆಲ್ಲವನ್ನೂ ನಾನು ಜಗಳ ಹೊಡೆದು ಮಾರಾಟ ಮಾಡಿಸಿದ್ದೇನೆ. ಕೊಟ್ಟಿಗೆ ಕೆಲಸ ನಿಮ್ಮ ಕೈಲಾಗದು, ಡೈರಿಯಿಂದ ಹಾಲು ತೆಗೆದುಕೊಳ್ಳಿ ಅಂತಾ ಅಪ್ಪನನ್ನು ಒಪ್ಪಿಸಲು ಹರಸಾಹಸವನ್ನೇ ಮಾಡಿದೆ. ಕೊನೆಗೂ ಒಂದು ಕರುವನ್ನು ಕೊಟ್ಟಿಗೆಯಲ್ಲಿ ಉಳಿಸಿಕೊಂಡರು…ಕಾದಂಬರಿ ಓದುತ್ತಾ ಹೋದ ಹಾಗೆ ಅದೆಲ್ಲಾ ನೆನಪಾಯಿತು. ಕಣ್ಣಲ್ಲಿ ನೀರೂರಿತು.
ಪೂಜೆ-ಪುನಸ್ಕಾರ…ಇವೆಲ್ಲವೂ ನಮ್ಮ ಮನೆಯಲ್ಲಿ ಜೋರಾಗಿಯೇ ಇದೆ. ೧೦-೧೫ ಸಾವಿರ ರೂ. ಖರ್ಚು ಮಾಡಿ ಉಪನಯನ ಮಾಡಿದ್ದು ವ್ಯರ್ಥವಾಗಬಾರದು ಅಂತಾ ಜನಿವಾರ ಹಾಕಿದ ೨ ವರ್ಷ ನಿಷ್ಠೆಯಿಂದ ಸಂಧ್ಯಾವಂದನೆ ಮಾಡಿದೆ! ನಂತರ ನಾನದರ ಸುದ್ದಿಗೂ ಹೋಗಲಿಲ್ಲ. ಆ ಕುರಿತು ಬುದ್ದಿ ಹೇಳಿದರೂ ಕೇಳದ ನನ್ನನ್ನು ಒತ್ತಾಯಿಸುವುದನ್ನೇ ಬಿಟ್ಟು ಬಿಟ್ಟರು. ‘ನಮ್ಮ ಹಣೆ ಮೇಲೆ ಬರೆದಿದ್ದು ಆಗತ್ತೆ’ ಅಂತಾ ಅಮ್ಮ ಯಾವಾಗಲಾದರೂ ಗೊಣಗುತ್ತಿರುತ್ತಾರೆ….ಇದೆಲ್ಲಾ ಯಾಕೋ ಒಮ್ಮೆಗೆ ನೆನಪಿಗೆ ಬಂತು…ಓದಿದವರು, ವಿದ್ಯಾವಂತರು, ವಿಚಾರವಂತರೆಂಬ ಫೋಸು ಕೊಡುವ ನಾವು ಹಳ್ಳಿಗರ ಮುಗ್ದ ಭಾವನೆಯನ್ನು ಕೊಲ್ಲುವ ಕೆಲಸ ಮಾಡುತ್ತಿದ್ದೇವೆ ಅಂತಾ ನನಗೆ ಅದೆಷ್ಟೋ ಸಲ ಅನ್ನಿಸುತ್ತದೆ…
ಅಂದಹಾಗೆ ಇದು ‘ಪ್ರಗತಿ’ ವಿರೋಧಿ ಕಾದಂಬರಿಯಂತೆ ಮಾರಾಯ್ರೇ!!!
ಇದರ ಬೆನ್ನಿಗೆ ‘ಸಾರ್ಥ’ ಎಂಬ ಮತ್ತೊಂದು ಕಾದಂಬರಿಯನ್ನು ಓದಿ ಮುಗಿಸಿದೆ. ಇತಿಹಾಸಿಕ ಕಥಾವಸ್ತುವನ್ನು ಹೊಂದಿರುವ ಈ ಕೃತಿ, ‘ಮಂದ್ರ’ಕ್ಕಿಂತಲೂ ಉತ್ತಮವಾಗಿದೆ ಅನ್ನಿಸಿತು ನನಗೆ. ಮನಃಶಾಸ್ತ್ರ, ತತ್ವಶಾಸ್ತ್ರ ಇಷ್ಟ ಪಡುವವರು ಓದಲೇ ಬೇಕಾದ ಕೃತಿಯಿದು. ಭಾವನೆಗಳನ್ನು ಬರಹದ ಸರಕನ್ನಾಗಿಸುವ ಅಭಿಪ್ಸೆಯುಳ್ಳ ಮಂದಿಗೂ ಈ ಕೃತಿ ಉತ್ತಮ ಆಹಾರ. ಹೀಗೆ ಸುಮ್ಮನೆ ಓದುತ್ತೇನೆ ಎನ್ನುವವರಿಗೆ ಒಂಚೂರು ಬೋರ್ ಅನ್ನಿಸಬಹುದು. ಯಾಕೆಂದರೆ ಕಥಾವಸ್ತುವೇ ವಿಚಾರ ಪ್ರಧಾನವಾಗಿದೆ…