ನಾನು ಯಾವತ್ತು ಖಾಕಿ ಚಡ್ಡಿ ಹಾಕಿಕೊಂಡು ಆರ್‌ಎಸ್‌ಎಸ್‌ನ ನಮಾಜ್ ಕಾರ್ಯಕ್ರಮಕ್ಕೆ ಹೋದವನಲ್ಲ. “ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ. ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ. ಇದುವೆ ನವಗಾನ” ಎಂದು ಪ್ರಾರ್ಥನೆ ಮಾಡುವ ಅವಶ್ಯಕತೆಯೂ ಕಾಣಿಸಲಿಲ್ಲ. ಆದ್ರೆ ದುರಾದೃಷ್ಟವಶಾತ್ ಆರ್‌ಎಸ್‌ಎಸ್‌ನಲ್ಲಿ ಹಗಲು-ಇರುಳು ದುಡಿಯಯವ ಹಲವು ಮಿತ್ರರು ಬದುಕಿನ ಹಾದಿಯಲ್ಲಿ ಸಿಕ್ಕರು.
ನಂಗೆ ಆರ್‌ಎಸ್‌ಎಸ್ ಚಡ್ಡಿ ಕುರಿತು ಅಷ್ಟೇನು ಕಾಳಜಿಯಿಲ್ಲ ಅಥವಾ ಆರ್‌ಎಸ್ಸೆಸ್ಸಿಗರನ್ನು ಚಡ್ಡಿ ಎಂದು ಅಣಗಿಸುವವರನ್ನು ಕಂಡು ಖುಷಿಯೂ ಆಗುವುದಿಲ್ಲ. ಇವಿಷ್ಟು ವಿಚಾರ ಹೇಳಿ ವಿಷಯಕ್ಕೆ ಬರುತ್ತೇನೆ.
ಆರ್‌ಎಸ್‌ಎಸ್ ಅಂದ್ರೆ ಖಾಕಿ ಚಡ್ಡಿ. ಕೇಸರಿ ಬಾವುಟ. ಹಿಂದುತ್ವದ ಢಂಗುರ…ಸಂಘದ ವಿರುದ್ಧ ಮಾತಾಡುವ ಹಲವರಿಗೆ ಕಾಣಿಸುವುದು ಇವಿಷ್ಟೆ. ನಂಗೆ ಮೊದ್ಲು ಆರ್‌ಎಸ್‌ಎಸ್ ಅಂದ್ರೆ ಕಂಡಿದ್ದು ಬ್ಯಾಟರಾಯನಪುರದಲ್ಲಿನ ನೆಲೆ. ‘ನರೇಂದ್ರ ನೆಲೆ’ ಎಂಬುದು ಆ ಜಾಗದ ಹೆಸ್ರು. ಹಿಂದು ಸೇವಾ ಪ್ರತಿಷ್ಠಾನದ ಅಂಗವಿದು. ಚಿಂದಿ ಆಯುವ ಮಕ್ಕಳು, ಅನಾಥರು, ಅಶಕ್ತ ಮಕ್ಕಳು, ಹರುಕು-ಮುರುಕು ಬಟ್ಟೆ ಹಾಕಿಕೊಂಡು ಬದುಕುವ ಮಕ್ಕಳನ್ನೆಲ್ಲ ಒಟ್ಟು ಹಾಕಿ…(ಹಿಂದುಭಯೋತ್ಪಾದನೆ ಪಾಠ ಮಾಡುವ ಕೇಂದ್ರ ಅನ್ನಬಹುದು ವಿರೋಧಿಗಳು!) ಅವರಿಗೆ ವಸತಿ, ಊಟ, ಪಾಠ ಹೇಳಿಕೊಡುವ ಕೇಂದ್ರವಿದು. ರಾಷ್ಟ್ರಶಕ್ತಿ ಕೇಂದ್ರದ ಗೆಳೆಯ ರಾಜೇಶ್ ತಮ್ಮ ಮದುವೆ ನಂತರದ ಬೀಗರೌತಣದ ಊಟವನ್ನು ಇದೇ ಮಕ್ಕಳ ಜೊತೆಗೆ ಮಾಡಿಕೊಂಡಿದ್ದರು. ಅದಕ್ಕು ಮೊದಲೇ ನನಗೆ ನೆಲೆ ಪರಿಚಯವಾಗಿತ್ತು. ೨೦೦೦ನೇ ಇಸವಿಯಲ್ಲಿ ೧೫ ಮಕ್ಕಳಿಂದ ಶುರುವಾದ ನೆಲೆ ಇಂದು ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿನ ೮ ಕೇಂದ್ರ ಹೊಂದಿದೆ. ಸಾವಿರಾರು ಮಕ್ಕಳಿಗೆ ಹೊಸದೊಂದು ಬದುಕು ನೀಡಿದೆ.
ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಅಬಲಾಶ್ರಮ ಕೂಡ ಇದೇ ಆರ್‌ಎಸ್‌ಎಸ್‌ನದ್ದು ಎಂದು ಯಾರಾದ್ರು ಬೊಬ್ಬೆ ಹೊಡಿದಾಗ ನನಗೆ ನೆನಪಾಗುತ್ತದೆ. ಹಾಗೆಯೇ ಖಾಕಿ ಚೆಡ್ಡಿಯ ನೆಪದಲ್ಲಿ ನೆನಪಾಗುವ ಮತ್ತೊಂದು ವಿಚಾರವೆಂದರೆ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಮತ್ತು ಅಲ್ಲಿನ ಕೃಷಿ ಪ್ರಯೋಗಗಳು.
ಬೆಂಗಳೂರಿನ ನಚಿಕೇತ ಮನೋವಿಕಾಸ ಕೇಂದ್ರ ಟ್ರಸ್ಟ್‌ನ ಕುರಿತು ಹೇಳದೆ ಇರಲು ಸಾಧ್ಯವೇ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಪಾಲಿಗೆ ಆರ್‌ಎಸ್‌ಎಸ್ ಅಂದ್ರೆ ರಾಷ್ಟ್ರೋತ್ಥಾನ ಪರಿಷತ್. ಅಲ್ಲಿನ ಅದ್ಭುತವಾದ ಲೈಬ್ರರಿ. ಅಲ್ಲಿನ ರಕ್ತದಾನ ಕೇಂದ್ರ.
ಹಿಂದು-ಮುಸ್ಲಿಂ ಗಲಾಟೆ ಕಿಚ್ಚು ಹೊತ್ತಿಸುವ ಆರ್‌ಎಸ್‌ಎಸ್ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಬೇಕು ಅಂದ್ರೆ, ಕಾರ್ಕಳದ್ದೊ, ಬಂಟ್ವಾಳದ್ದೊ, ಹುಬ್ಬಳ್ಳಿಯದ್ದೋ ಸೇವಾ ಭಾರತಿಗೆ ಭೇಟಿ ನೀಡಲೇಬೇಕು!
ಶಿವಳ್ಳಿಯ ಸಾವಯವ ಕೇಂದ್ರದ ಕೆಲಸದ ಬಗ್ಗೆ ತಿಳಿದುಕೊಳ್ಳಬೇಕು. ಬೆಳಗಾವಿಯ ಅಂಧರ ಸೇವಾ ಕೇಂದ್ರವನ್ನು ನೋಡಬೇಕು. ಎಲ್ಲೋ ಬೆಂಕಿ ಹಚ್ಚಿದ್ರು, ಅದೆಲ್ಲೋ ಧರ್ಮದ ಹೆಸ್ರಲ್ಲಿ ಅವಘಡ ನಡೀತು. ಅದ್ಯಾವುದೋ ಮಸೀದಿ ಉರುಳಿ ಬಿತ್ತು. ಅದೆಲ್ಲೋ ಮುಸ್ಲಿಂರಿಗೆ ಏಟು ಬಿತ್ತು. ಕ್ರೈಸ್ತರ ಮೇಲೆ ದಾಳಿಯಾಯ್ತು. ಆಗೆಲ್ಲ ಚೆಡ್ಡಿಗಳನ್ನು ಕೆದುಕುವವರ ಧ್ವನಿ ಏರುತ್ತದೆ.
ಅಯ್ಯೋ ಆರ್‌ಎಸ್‌ಎಸ್ ವಿರೋಧಿಗಳ ಬೈಬಲ್ಲನ್ನೇ ಮರೆತು ಬಿಟ್ಟೆ. ಅದೆ ಕಣ್ರಿ ‘ನಾತೂರಾಂ ಗೋಡ್ಸೆ ಗಾಂಧಿಯನ್ನು ಕೊಂದಿದ್ದು!’ ಅದೇ ಅಲ್ವಾ ಬಹುತೇಕರು ಆರ್‌ಎಸ್‌ಎಸ್ ವಿರೋಧಿಸಲು ಕಾರಣ. ಇತ್ತೀಚೆಗೆ ತೀರ ಮಗ್ನನಾಗಿ ಗೋಕಾಕರು ಅನುವಾದಿಸಿದ ಗಾಂಧಿ ಆತ್ಮಕತ್ಯೆ ಸತ್ಯಾನ್ವೇಷಣೆ ಓದುತ್ತಿದ್ದೆ. ಸದ್ಯಕ್ಕೆ ಆಫ್ರಿಕದಲ್ಲಿ ಗಾಂಧಿಜೀ ಹೋರಾಟ, ಅಲ್ಲಿ ಅವರಿಗಿದ್ದ ವಿರೋಧಿಗಳು, ಅವರ ಮೇಲಾದ ದಾಳಿಗಳನ್ನು ವಿವರಿಸುವ ಅಧ್ಯಾಯದಲ್ಲಿದ್ದೀನಿ. ಹೋಗ್ಲಿ ಬಿಡಿ ಗೋಡ್ಸೆ ಗಾಂಧಿಯನ್ನು ಕೊಂದಿದ್ದಾರೆ. ಗೋಡ್ಸೆ ಆರ್‌ಎಸ್‌ಎಸ್ಸಿಗರು. ಹಾಗಾಗಿ ಅದಕ್ಕೆ ಸಂಘವೇ ಕಾರಣ ಒಪ್ಪಿಕೊಳ್ಳೋಣ.
ಈಗ ವಿಷ್ಯಕ್ಕೆ ಬರುತ್ತೇನೆ. ನಾನಿಲ್ಲಿ ಕರ್ನಾಟಕದಲ್ಲಿ ಸಂಘದ ಭಾಗವಾಗಿ ಕೆಲಸ ಮಾಡುತ್ತಿರುವ ಒಂದಷ್ಟು ಸಂಸ್ಥೆಗಳನ್ನು ಹೆಸರಿಸಿದೆ. ಬಹುಶಃ ಇಂಥ ೧೦೦ಕ್ಕೂ ಅಧಿಕ ಸಂಸ್ಥೆಗಳು ನಮ್ಮ ರಾಜ್ಯದಲ್ಲಿವೆ. ದೇಶದಲ್ಲಿ ಅದೆಷ್ಟು ಸಾವಿರ ಘಟಕಗಳಿವೆಯೋ ಗೊತ್ತಿಲ್ಲ.
ನಿಜ ಹಿಂದುತ್ವದಿಂದ ಆರ್‌ಎಸ್‌ಎಸ್‌ನ್ನು ಬೇರೆಯಿಡಲು ಸಾಧ್ಯವಿಲ್ಲ. ನೆನಪಿಡಿ ಹಿಂದುತ್ವ ಎಂಬುದು ಆರ್‌ಎಸ್‌ಎಸ್‌ನ ಒಂದು ಭಾಗವಷ್ಟೆ. ಹೇಗೆ ಸೇವೆ ಎಂಬುದು ಸಂಘದ ಒಂದು ಮಜಲೋ, ಹಾಗೆಯೇ ಸಂಪನ್ಮೂಲ, ಜ್ಞಾನ, ಹಿಂದುತ್ವ ಎಲ್ಲವೂ ಸಂಘದ ಬೇರೆ ಬೇರೆ ಮಜಲುಗಳು.
ಎಲ್ಲೇ ಕೋಮು ಗಲಭೆಯಾದ್ರು ಅದಕ್ಕೆ ಸಂಘವೇ ಕಾರಣ ಎಂಬುದು ಶುದ್ಧ ಹುಚ್ಚುತನ. ನೀವು ಪತ್ರಿಕೆಯಲ್ಲಿ ಆರ್‌ಎಸ್‌ಎಸ್ ಪ್ರೇರಿತ ವ್ಯಕ್ತಿಗಳ ಬರಹವನ್ನು ಓದಿ, ಸಂಘದವರು ಹೀಗೆ ಎಂದು ನಿರ್ಧರಿಸಿದರೆ ಅದು ನಿಮ್ಮ ತಪ್ಪು. ಯಾಕಂದ್ರೆ ನಿಜವಾದ ಸಂಘದ ಕಾರ್ಯಕರ್ತ ಯಾವ ಟೀವಿಯಲ್ಲೂ ಬರಲಾರ. ಪತ್ರಿಕೆಯಲ್ಲೂ ಕಾಣಿಸಿಕೊಳ್ಳುವುದಿಲ್ಲ. ತನ್ನ ಪಾಡಿಗೆ ತಾನು ಸೇವೆ ಮಾಡುತ್ತಾನೆ ಮತ್ತು ಸಂಘದ ಸೇವಾ ವಿಭಾಗದಲ್ಲಿ ಎಲ್ಲ ಧರ್ಮದವರು ದುಡಿಯುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಢೋಂಗಿ ಹಿಂದುತ್ವ ಸಂಘದ ಧ್ಯೇಯವಲ್ಲ. ಯಾವತ್ತು ಅದನ್ನು ಸಂಘ ಪ್ರತಿಪಾದಿಸಿಲ್ಲ. ಭಾರತದ ಬದುಕು ಹಿಂದುತ್ವ ಎಂದಿದ್ದು. ಯೋಗ, ಸಾವಯವ ಎಲ್ಲ ನಮ್ಮ ಮೂಲಭೂತ ಅಂಶಗಳು. ಹಿಂದಿನಿಂದ ಬಂದಿದ್ದು ಎಂಬುದನ್ನು ಆರ್‌ಎಸ್‌ಎಸ್ ಸಾರಿದ್ದು.
ನಮ್ಮಲ್ಲಿ ಸಾಕಷ್ಟು ಢೋಂಗಿ ಹಿಂದುತ್ವವಾದಿಗಳಿದ್ದಾರೆ. ಅವರೆಲ್ಲ ಎಲೆಕ್ಷನ್‌ಗಾಗಿ ಹಿಂದುತ್ವ ಎನ್‌ಕ್ಯಾಶ್ ಮಾಡಿಕೊಳ್ಳುವವರು. ಸೀಟು ಸಿಗುವವರೆಗೆ, ಗೆಲ್ಲುವರೆಗೆ ಹಿಂದುತ್ವ ಬೇಕು ಅವರಿಗೆ. ವೋಟು ಭದ್ರ ಪಡಿಸಿಕೊಳ್ಳಲು ಚುನಾವಣೆ ಹತ್ತಿರ ಬಂದಾಗ ಹಿಂದು ಜಾಗೃತಿ ಸಮಾವೇಶ ಮಾಡಬೇಕು. ಅಲ್ಲಲ್ಲಿ ಕೋಮು ಗಲಭೆ ಹುಟ್ಟುಹಾಕಿ ಮತಗಳನ್ನು ಬಾಚಿಕೊಳ್ಳಬೇಕು. ಇನ್ನೊಂದು ವರ್ಗಕ್ಕೆ ಸಂಘದ ಹೆಸ್ರಲ್ಲಿ ಪ್ರಚಾರ ಬೇಕು. ಬೇರೆ ಧರ್ಮದ ಪರ ಎಂಬುದೆಲ್ಲವನ್ನೂ ವಿರೋಧಿಸಬೇಕು. ಹಾಗಾಗಿಯೇ ಜಲ್ಲಿಕಟ್ಟಿನಲ್ಲಿ ಸಾವಿರಾರು ಮಂದಿಗೆ ಗಾಯವಾಗಿದ್ದು, ಹಲವರು ಸತ್ತಿದ್ದನ್ನು ಮರೆತು, ಜಲ್ಲಿಕಟ್ಟನ್ನು ಸುಪ್ರೀಂಕೋರ್ಟ್ ತಡೆಯುತ್ತಿರುವುದೇಕೆ ಎಂಬ ಕನಿಷ್ಟ ವಿವೇಚನೆಯೂ ಇಲ್ಲದೆ ಬೊಬ್ಬೆ ಹೊಡೆಯುತ್ತಾರೆ! ಅಲ್ಲಿಯೆ ಅವರ ಅವಿವೇಕಿತನ ಬಯಲಾಗಿ ಬಿಡುತ್ತದೆ.
ಆದರೆ ಅವುಗಳಿಂದ ಆಚೆ ನಿಂತ ಸಂಘ, ಸಂಘದ ಕಾರ್ಯಕರ್ತರು ವರ್ಷದ ೩೬೫ ದಿನವೂ ಒಂದಿಲ್ಲೊಂದು ಸೇವಾ ಕಾರ್ಯ ಮಾಡುತ್ತ ಇರುತ್ತಾರೆ ಮತ್ತು ನಿಜವಾದ ಸ್ವಯಂಸೇವಕನೊಬ್ಬ ಅವಿವೇಕಿಯಾಗಿ ಬೊಬ್ಬೆ ಹೊಡೆಯಲಾರ. ಇವಿಷ್ಟಕ್ಕು ಜಾಸ್ತಿಯೇನೂ ಹೇಳುವುದಕ್ಕಿಲ್ಲ ಆರ್‌ಎಸ್‌ಎಸ್ ಕುರಿತು. ಮಿಕ್ಕಿದ್ದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.