Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2008

`ಕೈಲಾಗದವರು ಮೈ ಪರಚಿಕೊಂಡರು’ ಇಂತಹದ್ದೊಂದು ಮಾತು ನಮ್ಮಂತಹವರನ್ನು ನೋಡಿಯೇ ಹುಟ್ಟಿರಬೇಕು, ಹಾಗಂತ ಮುಂಬಯಿ ದಾಳಿಯ ನಂತರ ಅನ್ನಿಸತೊಡಗಿದೆ. ಭಾರತದ ಮಾನ ಉಳಿಸಿಕೊಳ್ಳಲು ನಾವು ನಮ್ಮ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಬಹುದು. ದಾಳಿಯ ಗಾಯ ಮುಚ್ಚಲು ನಮ್ಮ ಶೌರ್ಯದ ಇತಿಹಾಸ ಹೇಳಬಹುದು, ಅಥವಾ ಮತ್ತಿನೇನೋ ನೆವ ಹೇಳಬಹುದು. ಆದರೆ ವಾಸ್ತವ ಇದೆಲ್ಲಕ್ಕಿಂತ  ಭಿನ್ನವಾಗಿದೆ…

 

 

ನಮ್ಮ ಪುಣ್ಯ, ಭಯೋತ್ಪಾದಕರಿನ್ನೂ ಆರ್‌ಡಿಎಕ್ಸ್, ಎ.ಕೆ-೪೭ ಕಾಲದಲ್ಲಿಯೇ ಇದ್ದಾರೆ, ಅಥವಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅವರ ಬಳಿಯಿದ್ದರೂ ಅದನ್ನು ಪ್ರಯೋಗಿಸುವ ಸಾಹಸಕ್ಕೆ ಕೈಹಾಕುತ್ತಿಲ್ಲ. ಒಂದೊಮ್ಮೆ  ರಾಸಾಯನಿಕ ಅಸ್ತ್ರಗಳೇನಾದರೂ ಭಯೋತ್ಪಾದಕರ ಕೈಗೆ ಸಿಕ್ಕರೆ…?

 

 ಅಂತಹದ್ದೊಂದು ಸನ್ನಿವೇಶವನ್ನು ನೆನಸಿಕೊಂಡಾಗ ಮೈಯೆಲ್ಲಾ  ನಡುಗಿತ್ತಿದೆ. ನಮ್ಮ ವ್ಯವಸ್ಥೆ ಇದೇ ರೀತಿ ಮುಂದುವರಿದರೆ ದೇಶದ ಮೇಲೆ ಅಂತಹ ಮಾರಾಕಾಸ್ತ್ರ  ಪ್ರಯೋಗಕ್ಕೆ  ಹೆಚ್ಚಿನ ದಿನವೇನೂ ಬೇಕಿಲ್ಲ. ನಾವೆಲ್ಲಾ  ಅನಿವಾರ್ಯವಾಗಿ “ಪಾಕಿಸ್ತಾನ್ ಜಿಂದಾಬಾದ್” ಅನ್ನುವ ಕಾಲ ಸಮೀಪಿಸಿದರೂ ಅಚ್ಚರಿಯಿಲ್ಲ ಅನ್ನಿಸುತ್ತಿದೆ.

 

 

`ಜವಬ್ದಾರಿ ವ್ಯವಸ್ಥೆಯ ಮೇಲಿಲ್ಲ. ನಮ್ಮ  ಮೇಲೆ ಇದೆ’ ಹಾಗಂತ  ಹೇಳುವುದು ತುಂಬಾ ಸುಲಭ. ಆದರೆ ಕ್ಷೇತ್ರದ ಒಬ್ಬ  ಶಾಸಕನಿಗೆ ಮೂಗುದಾರ ಹಾಕಲು  ಸಾಮಾನ್ಯ ಪ್ರಜೆಗಳಿಂದ ಸಾಧ್ಯವಿದೆಯಾ?

 

ಭ್ರಷ್ಟತೆಯಿಂದ ಹೊರಗುಳಿದ ಸಮಾಜಮುಖಿ ಹೋರಾಟಗಾರನೊಬ್ಬನ ಮಾತನ್ನು ನಮ್ಮ ನಾಯಕರು ಕೇಳುತ್ತಾರಾ? ಒಮ್ಮೆ  ಆಲೋಚಿಸಿ ನೋಡಿ…`ಮೊದಲ ಸಲ ಸದನಕ್ಕೆ ಆಯ್ಕೆಯಾಗಿರುವ ಶಾಸಕ ಆರು ತಿಂಗಳ ನಂತರ ಮಾತಾಡಿಸಿದರೆ, ನಾನು ಬ್ಯುಸಿ ಅನ್ನುತ್ತಿದ್ದಾನೆ’ ಹಾಗಂತ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಿದ್ದರು. ಇನ್ನು  ಸಾಮಾನ್ಯ ಮನುಷ್ಯ ಆ ಶಾಸಕನ್ನು ಮಾತಾಡಿಸಿದರೆ, ಅವ ಹೇಗೆ ಪ್ರತಿಕ್ರಿಯಿಸಬಹುದು?

 

 

`ಮುಂದಿನ ಚುನಾವಣೆಯಲ್ಲಿ  ಅವನನ್ನು ಸೋಲಿಸಿದರಾಯಿತು ಬಿಡಿ…’ಹಾಗಂತ ನಮಗೇ ನಾವೇ ಸಮಾಧಾನ ಹೇಳಿಕೊಳ್ಳಬೇಕು! ಆದರೆ ಪ್ರಜೆಗಳ ಸಹಾಯವಿಲ್ಲದೇ ಅವ ಮುಂದಿನ ಚುನಾವಣೆಯಲ್ಲಿ  ಗೆದ್ದಿರುತ್ತಾನೆ! ಅಥವಾ ಸೋಲುತ್ತೇನೆ ಎಂಬುದು ಖಚಿತವಾದರೆ, ಜೀವಂತ ಪರ್ಯಂತಕ್ಕೆ ಸಾಕಗುವಷ್ಟು  ಸಂಪಾದಿಸಿಬಿಡುತ್ತಾನೆ…ಒಬ್ಬ  ಶಾಸಕನ ಕಥೆಯೇ ಹೀಗಾದರೆ, ಇನ್ನೂ ಮಂತ್ರಿಯಾದವರ ಕಥೆ? ವ್ಯವಸ್ಥೆಯ ಕಥೆ…?

 

 

ಯಾರನ್ನು  ಹೆದರಿಸಬೇಕೆಂದು ಈ ಮಾತನ್ನು ಇಲ್ಲಿ  ಇಡುತ್ತಿಲ್ಲ. ಸರಕಾರಕ್ಕೆ, ವ್ಯವಸ್ಥೆಗೆ ವಿರುದ್ಧವಾಗಿ ಒಂದು ಶಾಲೆ ನಿರ್ಮಿಸಬಹುದು. ಒಂದು ರಸ್ತೆ ಮಾಡಬಹುದು…ಆದರೆ ಪರ್ಯಾಯ ರಕ್ಷಣಾ ವ್ಯವಸ್ಥೆ ನಿರ್ಮಾಣ ಸಾಧ್ಯವಿಲ್ಲ. ರಕ್ಷಣಾ ಇಲಾಖೆ ಭ್ರಷ್ಟ  ಸರಕಾರದ ಕಪಿಮುಷ್ಠಿಯಲ್ಲಿ  ಸಿಲುಕಿ ಪರದಾಡುತ್ತಿರುವ ವಿಭಾಗ.

 

 

ಆ ಇಲಾಖೆಯಲ್ಲಿ  ದೇಶಕ್ಕಾಗಿ ತುಡಿತವುಳ್ಳರಿದ್ದಾರೆ. ಭಯೋತ್ಪಾದಕರಿಗೆ ಕ್ಷಣ ಮಾತ್ರದಲ್ಲಿ  ನೀರುಕುಡಿಸಬಲ್ಲ  ಚಾಣಾಕ್ಯರಿದ್ದಾರೆ. ಆದರೆ ಅಧಿಕಾರ ಮಾತ್ರ ಶಿವರಾಜ್ ಪಾಟೀಲರಂಥ ದಕ್ಷಾತೀದಕ್ಷ ಮಂತ್ರಿಗಳ ಕೈಯಲ್ಲಿದೆ! ರಕ್ಷಣಾ ಇಲಾಖೆಯಲ್ಲಿ  ನಡೆಯುವ ಭ್ರಷ್ಟಾಚಾರವನ್ನು ವಿರೋಸುವ ಅಧಿಕಾರಿಗಳಿಗೆ ಅದೆಷ್ಟು  ಕಿರುಕುಳ ನೀಡುತ್ತಾರೆ, ಅದೆಷ್ಟು  ಸಲ ವರ್ಗಾವಣೆ ಮಾಡುತ್ತಾರೆ ಅಂತಾ ಆ ಇಲಾಖೆಯಲ್ಲಿರುವ ಯಾರನ್ನಾದರೂ ಸುಮ್ಮನೆ ಕೇಳಿ ನೋಡಿ…

 

 

ಒಬ್ಬ  ಶಾಸಕ, ಒಂದು ಪಕ್ಷ , ಚುನಾವಣೆಗಾಗಿ ಖರ್ಚು ಮಾಡುವ ಹಣಕಾಸಿನ ಲೆಕ್ಕಾಚಾರ ಕೇಳಿದರೆ, ಅವರು ಚುನಾವಣೆ ನಂತರ ಸಂಪಾದಿಸುವ ಕಾಸು ಹೆಚ್ಚು  ಅನ್ನಿಸುವುದಿಲ್ಲ! ಅವರು ಯಾರಿಗಾಗಿ ಆ ಪರಿ ಹಣ ಖರ್ಚು ಮಾಡುತ್ತಾರೆ ಅಂದರೆ…ಮತದಾರರಿಗಾಗಿ, ಮತಕ್ಕಾಗಿ! ಮತದಾರ ಸರಿಯಾದರೆ, ವ್ಯವಸ್ಥೆ ಸರಿಯಾಗಬಹುದಾ? ಎಲ್ಲಾ  ಪಕ್ಷಗಳು, ಎಲ್ಲಾ  ನಾಯಕರು ಒಂದೇ ಮನೋಭಾವದರು! ಅಂದಮೇಲೆ ಯಾರು ಸರಿಯಾದರೂ ವ್ಯವಸ್ಥೆ  ಸರಿಯಾಗದು. ಸಾಮಾನ್ಯನೊಬ್ಬ  ವ್ಯವಸ್ಥೆ ವಿರುದ್ಧ  ಏನೂ ಮಾಡಲಾಗದು ಅಲ್ಲವೇ?

 

 

ಇನ್ನೂ, ನಮ್ಮ  ಎಲ್ಲಾ  ಇಲಾಖೆಗಳ ಕಥೆಯೂ ಹಾಗೆ. ಹೆಚ್ಚಿನ  ಅಧಿಕಾರಿಗಳ ಹಣೆಯಬರಹವೇ ಹಾಗೆ. ಇದನ್ನು ವಿರೋಧಿಸುವ ಹೋರಾಟಗಾರರು ನಮ್ಮಲ್ಲಿ  ಇಲ್ಲ  ಅಂದೇನಲ್ಲ. ದುರಂತವೆಂದರೆ ಅಂತಹ ಹೋರಾಟಗಾರರೇ, ತಮ್ಮ ವೈಯಕ್ತಿಕ ಕೆಲಸವನ್ನು ಹಿಂದುಗಡೆಯಿಂದ ಲಂಚ ಕೊಟ್ಟು  ಮಾಡಿಸಿಕೊಂಡುಬಿಡುತ್ತಾರೆ! ನಂತರ ಭ್ರಷ್ಟತೆಯ ವಿರುದ್ಧ, ವ್ಯವಸ್ಥೆ ವಿರುದ್ಧ ಪುಂಖಾನುಪುಂಕವಾಗಿ ಭಾಷಣ ಬಿಗಿಯುತ್ತಾರೆ.

 

 

ಹೋರಾಟ, ರಾಷ್ಟ್ರಪ್ರೇಮ ಎಲ್ಲಾ  ಇವತ್ತು  ಹೆಚ್ಚಿನ ಹೋರಾಟಗಾರರ ಅಸ್ತಿತ್ವ ಉಳಿಸಿಕೊಳ್ಳುವ ಸಾಧನವಾಗಿದೆ. ಇನ್ನೂ ಕೆಲವರಿಗೆ ಮನೆ, ಸೈಟು, ಕಾರುಗಳನ್ನೂ ಸಂಪಾದಿಸಿಕೊಡುತ್ತಿದೆ!

 

 

ಹಾಗಾದರೆ ತಪ್ಪು  ಯಾರದ್ದು?

 

 

ಮತ್ತದೇ ರಾಗ, ಮತ್ತದೇ ಗೋಳು….ಗೊತ್ತಿಲ್ಲ. ಮೊನ್ನೆಯಿಂದಲೂ  ತಪ್ಪಿತಸ್ಥರನ್ನು ಹುಡುಕುತ್ತಲೇ ಇದ್ದೆ…ಕೊನೆಯದಾಗಿ ನನಗೆ ಸಿಕ್ಕ ಉತ್ತರ…

 

 

ಅಲ್ಲಿ  ಸಾಯುವ ಸೈನಿಕ ಸಾಯುತ್ತಲೇ ಇರುತ್ತಾನೆ, ದಾಳಿಯ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಅಧಿಕಾರಿಗಳ ವರ್ಗಾವರ್ಗಿ ನಡೆಯುತ್ತಲೇ ಇರುತ್ತದೆ. ಸೈನಿಕ, ಸಾಮಾನ್ಯ ಸತ್ತಾಗ, ಬಣ್ಣ ಬಣ್ಣದ ಬಟ್ಟೆಯೊಂದಿಗೆ ಶಿವರಾಜ್ ಪಾಟೀಲ್ ಸಂದರ್ಶನ…ಸತ್ತವರ ಕುಟುಂಬಕ್ಕೆ ಲಕ್ಷ ರೂ ಪರಿಹಾರ…ದಾಳಿ ನಡೆದ ೩-೪ ದಿನ ದೇಶಾದ್ಯಂತ ಹೈ ಅಲರ್ಟ್, ದಾಳಿ ಮುಗಿದು ೧೫ ದಿನವೋ, ತಿಂಗಳೋ ಕಳೆಯುವುದರೊಳಗೆ ಮತ್ತೊಂದು ದಾಳಿ….ಅಂದಹಾಗೆ ನನಗೆ ಸಿಕ್ಕ ಉತ್ತರ…

 

 

ವ್ಯವಸ್ಥೆಯೊಳಗೊಂದಾಗು ಮಂಕುತಿಮ್ಮ!

 

 

(ಈ ಬರಹ ನಿಮಗೆ ಅತಿಶಯೋಕ್ತಿ ಅನ್ನಿಸಬಹುದು. ಆದರೆ ಒಂದಿಷ್ಟು  ಸುತ್ತಾಡಿ, ಸಮಾಜದ ಒಂದಿಷ್ಟು  ವ್ಯಕ್ತಿಗಳನ್ನು ಒಡನಾಡಿ ಸಂಪಾಸಿದ ಅನುಭವಗಳೇ ಇಲ್ಲಿ ಹುದುಗಿವೆ)

 

Read Full Post »

ನಮ್ಮ ರಾಜಕಾರಣಿಗಳಿಗೆ ಬುದ್ಧಿ ಬಾರದಿದ್ದರೂ, ಭಯೋತ್ಪಾದಕರಿಗೆ ಷಂಡರ ಜತೆ ಸೆಣಸಾಡಿ ಬೇಸರ ಬಂದಿರಬೇಕು! ಎಷ್ಟು  ಬಾಂಬ್ ಇಟ್ಟರೂ ಭಾರತೀಯರಂತೂ ನಿದ್ದೆಯಿಂದ ಎಚ್ಚೆತ್ತುಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿರಬೇಕು! ಹಾಗಾಗಿಯೇ ಅವರು ಈ ಸಲ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ರಣ ಕಹಳೆಗೆ ಮತ್ತೊಂದು ಕರೆ ನೀಡಿದ್ದಾರೆ…

ಬೆಳಿಗ್ಗೆ ಎದ್ದು  ಪೇಪರ್ ನೋಡಿದಾಗ ಒಮ್ಮೆಲೆ ಶಾಕ್ ಆದಂತಾಯಿತು. ಇಡೀ ಮುಂಬಯಿ ನಗರದ ತುಂಬೆಲ್ಲಾ  ತಳಮಳ ಅನ್ನುವುದನ್ನು ಮುಖಪುಟದಲ್ಲಿ  ದಪ್ಪ, ದಪ್ಪ  ಅಕ್ಷರಗಳಲ್ಲಿ  ಕೊಟ್ಟಿದ್ದರು. ಭಯೋತ್ಪಾದಕರಿಂದ ಹೊಸದೊಂದು ಪ್ರಯೋಗ ಎಂಬಂತೆ ಬಣ್ಣಿಸಿದ್ದರು. ತಕ್ಷಣ ಟಿವಿ ಹಾಕಿದೆ.

ಮುಂಬಯಿನಲ್ಲಿ ಮತ್ತೆ ಉಗ್ರರ ಅಟ್ಟಹಾಸ
೮೦ ಸಾವು, ಕನಿಷ್ಠ ೨೦೦ ಮಂದಿಗೆ ಗಾಯ…

ಯಾವ ಚಾನೆಲ್ ತಿರುವಿದರೂ ಅದು ಬ್ರೇಕಿಂಗ್ ನ್ಯೂಸ್! ಮಲಗಾಂವ್ ಸೋಟದ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಭಯೋತ್ಪಾದಕರು ಮತ್ತೊಂದು ಸರಿಯಾದ ಏಟು ನೀಡಿದ್ದಾರೆ ಅಂದುಕೊಳ್ಳುತ್ತಾ ಸುಮ್ಮನಾದೆ.

ಆಫೀಸ್‌ಗೆ ಬಂದರೆ ಟಿವಿ ಉರಿಯುತ್ತಲೇ ಇತ್ತು. ನಮ್ಮ ಏಜೆನ್ಸಿ  ವಿಭಾಗದವರು ಹೈ ಅಲರ್ಟ್ ಆಗಿದ್ದರು!  ಟ್ರಿಡೆಂಟ್ ಹೋಟೆಲ್‌ನಲ್ಲಿ ೧೨ ಉಗ್ರರು, ಅಶೋಕನಿಲ್ಲ, ಶೋಕ ಉಳಿದಿದೆ…ಇಂತಹ ಹತ್ತು ಹಲವು ಸುದ್ದಿಗಳನ್ನು ಕುಟ್ಟುತ್ತಲೇ ಇದ್ದರು!

ಬಾಂಬ್ ಇಟ್ಟು  ಎಲ್ಲಿಯೋ ಅಡಗಿ ಕುಳಿತುಕೊಳ್ಳುತ್ತಿದ್ದ  ಭಯೋತ್ಪಾದಕರ ಈ ಸಲ ನಿಜಕ್ಕೂ ಭಯ ಹುಟ್ಟು  ಹಾಕುವ ಕೆಲಸ ಮಾಡಿದ್ದಾರೆ. ರರಂತೆ ಗನ್ ಹಿಡಿದು ನಗರಕ್ಕೆ ಬಂದು ಮನಸಿಗೆ ಬಂದಂತೆ ಗುಂಡು ಹಾರಿಸುತ್ತಿದ್ದಾರೆ ಎಂಬ ಸುದ್ದಿ  ಕೇಳಿ ನನಗೆ ತುಂಬಾ ಸಂತೋಷವಾಗುತ್ತಿದೆ! ಆ ಪರಿ ಬಾಂಬ್ ಇಟ್ಟು  ದೇಶದ ಲಕ್ಷಾಂತರ ಜನರನ್ನು  ನಿತ್ಯ ಬಲಿ ತೆಗೆದುಕೊಂಡಾಗಲೂ ನಾವು ಎಚ್ಚೆತ್ತುಕೊಳ್ಳಲಿಲ್ಲ. ಕಾಶ್ಮೀರವೆಂಬುದು ಉಗ್ರರ ಅಡ್ಡೆಯಾಗುತ್ತಿದೆ ಎಂದರೂ ನಮ್ಮ ಗಮನ ಅತ್ತ ಹೋಗುತ್ತಿಲ್ಲ. ಹಾಂಗತ ಈ ಸಲವೂ ನಾವೇನು ಎಚ್ಚೆತ್ತುಕೊಳ್ಳುತ್ತೇವೆ ಎಂದೇನಲ್ಲ!

ವೀರಪ್ಪನ್ ಎಂಬ ಇಲಿಯನ್ನು…ಅಲ್ಲಲ್ಲ..ಹುಲಿಯನ್ನು ಹಿಡಿಯಲು ನಮ್ಮ ಸರಕಾರಗಳು ನಡೆಸಿದ ಬೃಹತ್ ಕಾರ್ಯಾಚರಣೆಯ ಕುರಿತು ನಿಮಗೆಲ್ಲಾ  ತಿಳಿದಿರಬಹುದು. ತಮಿಳುನಾಡು, ಕರ್ನಾಟಕದ ಗಡಿ ಭಾಗದಲ್ಲಿ  ರಾಜಾರೋಷವಾಗಿ ತಿರುಗುತ್ತಿದ್ದ  ಒಬ್ಬ  ವೀರಪ್ಪನ್ ಅನ್ನು  ಹಿಡಿಯಲು ನಮ್ಮವರು ಅದೆಷ್ಟು  ದಶಕಗಳ ಕಾಲ ಹೋರಾಟ ಮಾಡಿದರು! ಅದೆಷ್ಟು   ವೀರ ಯೋಧರು ಆ ಕಾರ್ಯಾಚರಣೆಯಲ್ಲಿ  ಮರಣವನ್ನಪ್ಪಿದರು! ಸರಕಾರದಿಂದ ಕಾರ್ಯಾಚರಣೆಗಾಗಿ ಅದೆಷ್ಟು  ಕೋಟಿ ಬಿಡುಗಡೆಯಾಯಿತು. ಆ ಹಣ ಅದೆಷ್ಟು  ಜನರ ಮಡಿಲು ಸೇರಿತು…?!

ವೀರಪ್ಪನ್ ಮುಗಿದು ಹೋದ ಅಧ್ಯಾಯ ಬಿಡಿ. ಈಗ ಕರ್ನಾಟಕದಲ್ಲಿ  ನಡೆಯುತ್ತಿರುವ ನಕ್ಸಲ ನಿಗ್ರಹ ಕಾರ್ಯಾಚರಣೆಯತ್ತ ಒಂಚೂರು ಕಣ್ಣಾಡಿಸಿ… ಹೆಬ್ರಿ ಮತ್ತು  ಆಗುಂಬೆ ಕಾಡುಗಳ ನಡುವೆ ನಕ್ಸಲರು ಅಡಗಿದ್ದಾರೆ ಅನ್ನುತ್ತಾರೆ. ಸಾವಿರ ಮೈಲು ವಿಸ್ತೀರ್ಣದ ಆ ಕಾಡಿನಲ್ಲಿರುವ ನಕ್ಸಲರನ್ನು ಹಿಡಿಯಲು ಐದಾರೂ ವರ್ಷದಿದಂಲೂ ನಮ್ಮ ರಕ್ಷಣಾ ವ್ಯವಸ್ಥೆ  ಪರದಾಡುತ್ತಲೇ ಇದೆ! ತಂತ್ರಜ್ಞಾನದಲ್ಲಿ  ಭಾರತ ಯಾವತ್ತೂ ಹಿಂದುಳಿದ ರಾಷ್ಟ್ರವಲ್ಲ. ಭೂಮಿಯ ಆಳದಲ್ಲಿ  ಅಡಗಿ ಕುಳಿತಿರುವ ವಸ್ತುಗಳನ್ನು ಹುಡುಕಬಹುದು. ಆಗಸದಲ್ಲಿರುವ ವಸ್ತುಗಳನ್ನು ಮನೆಯಲ್ಲೇ ಕುಳಿತು ನೋಡಬಹುದು. ಅಷ್ಟರ  ಮಟ್ಟಿಗಿನ ತಂತ್ರಜ್ಞಾನ ನಮ್ಮಲ್ಲಿದೆ. ಹಾಗಿರುವಾಗ ಹೆಬ್ರಿಯಂಥ ಕಾಡಿನಲ್ಲಿರುವ ನಕ್ಸಲರು ನಮ್ಮ  ರಕ್ಷಣ ಇಲಾಖೆಯ ಕಣ್ಣಿಗೆ ಬೀಳುವುದಿಲ್ಲವೇಕೆ?

ಮೆಲುಗಡೆಯ ಆಗುಂಬೆ, ಕೆಳಗಡೆಯ ಹೆಬ್ರಿ, ಪೂರ್ವ, ಪಶ್ಚಿಮದ ಕುಂದಾಪುರ, ಹೊಸಂಗಡಿ..ಇತ್ಯಾದಿ ಸ್ಥಳಗಳನ್ನು ಗಟ್ಟಿಯಾಗಿ ಸುತ್ತುವರಿದು, ನಕ್ಸಲಿರುವ ಜಾಗದಲ್ಲಿ  ನಾಲ್ಕು ಬಾಂಬ್ ಎಸೆದರೆ ಯಾಕೆ ಮೂರು ದಿನದಲ್ಲಿ  ನಕ್ಸಲ್ ಎಂಬ ಸಮಸ್ಯೆ ಬಗೆಹರಿಯುವುದಿಲ್ಲ ಸ್ವಾಮಿ? ನಕ್ಸಲರನ್ನು ತಯಾರು ಮಾಡುವ ಒಂದಿಷ್ಟು  ವಿಶ್ವವಿದ್ಯಾನಿಲಯದ ಪುಂಗಿ ಬಂದ್ ಮಾಡಿದರೆ, ಒಂದಿಷ್ಟು  ಪ್ರಾಧ್ಯಾಪಕರ ಕೈ ಕಾಲು ಮುರಿದು, ಒದ್ದು ಒಳಗೆ ಹಾಕಿದರೆ ಮಲೆನಾಡಿನ ಅಮಾಯಕರು ಸಾಯುವುದು ತಪ್ಪುವುದಿಲ್ಲವೇ?

ಊಹುಂ ಅದನೆಲ್ಲಾ  ಹೇಳಲೇ ಬೇಡಿ. “ನಕ್ಸಲರನ್ನು ಹಿಡಿಯುವುದು ಬಾಯಲ್ಲಿ  ಹೇಳಿದಷ್ಟು  ಸುಲಭವಲ್ಲ! ಐಎಎಸ್, ಐಪಿಎಸ್ ಪದವಿ ಪಡೆದು ಬಂದವರಿಗೆ ನೀವು ಹೇಳಿ ಕೊಡಬೇಕಾ?” ಅನ್ನುತ್ತಾರೆ ನಮ್ಮ ಮಂತ್ರಿ-ಮಹೋದಯರು! ನಕ್ಸಲರು ಇಲ್ಲದ ಜಾಗದಲ್ಲಿ  ಕಾರ್ಯಾಚರಣೆ ನಡೆಸುತ್ತಾರೆ. ‘ಕಪ್ಪೆ ಹಿಡಿದು ಕೊಳಗಕ್ಕೆ ತುಂಬಿದೆ’ ಅನ್ನುವ ಆಟ ಆಡುತ್ತಾರೆ. ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿ  ಅಂತಾ ಹಣ ಮಂಜೂರು ಮಾಡಿಸಿಕೊಳ್ಳುತ್ತಾರೆ…ಮುಂದಿನದ್ದನ್ನು ಹೇಳುವುದೇನೂ ಬೇಡ ಅಲ್ಲವೆ?!

ಹೀಗಿದೆ ನೋಡಿ ನಮ್ಮ  ವ್ಯವಸ್ಥೆ! ಸೆಪ್ಟೆಂಬರ್ ೧೧ರ ದಾಳಿ ನಂತರ ಅಮೆರಿಕದ ಒಂದು ಕೂದಲು ಅಲ್ಲಾಡಿಸಲು ತುರ್ಕ ಭಯೋತ್ಪಾದಕರಿಂದ ಸಾಧ್ಯವಾಗಲಿಲ್ಲ. ಆದರೆ ನಮ್ಮ ದೇಶದಲ್ಲಿ…?!

ಭಯೋತ್ಪಾದನೆ ವಿಷಯದಲ್ಲೂ  ಅಕ್ಷರಶಃ ಅಂತಹದ್ದೇ ವ್ಯವಸ್ಥೆ  ಚಾಲನೆಯಲ್ಲಿದೆ. ಒಂದು ದಾಳಿ ಹಿಂದಿನ ಕೈವಾಡ ಹುಡುಕುವುದು ನಮಗೆ ಪಂಚವಾರ್ಷಿಕ ಯೋಜನೆ! ಅದಕ್ಕೆ ಅದೆಷ್ಟೋ  ಸಮಿತಿ, ಅದೆಷ್ಟೋ  ಪೀಠ, ಅದೆಷ್ಟೋ ಅಕಾರಿಗಳ ನೇಮಕ! ಅದೆಲ್ಲಕ್ಕಿಂತ ಹೆಚ್ಚಾಗಿ ಅದೆಷ್ಟೋ ನಿಧಿ ಬಿಡುಗಡೆ! ಭಯೋತ್ಪಾದಕರನ್ನು ಹಿಡಿದರು ಎಂಬ ಸುದ್ದಿ ಅಪರೂಪಕ್ಕೊಮ್ಮೆ ಗೊತ್ತಾಗುತ್ತದೆ. ಅವರಿಗೆ ಯಾವ ಶಿಕ್ಷೆಯಾಯಿತು? ಯಾವ ರಾಜಕಾರಣಿಗಳ ಆಶ್ರಯ ದೊರೆಯಿತು ಎಂಬ ಅಂಶಗಳು ಬೆಳಕಿಗೆ ಬರುವುದೇ ಇಲ್ಲ!

ಭಗತ್ ಸಿಂಗ್, ಆಜಾದ್, ಂಗ್ರಾನಂಥ ಕ್ರಾಂತಿಕಾರಿಗಳನ್ನು ಹುಟ್ಟು ಹಾಕಿದ ನಾಡು ನಮ್ಮದು ಅನ್ನುತ್ತಾರೆ! ನನಗಂತೂ ಆ ಕುರಿತು ಇತ್ತೀಚೆಗೆ ತುಂಬಾ ಅನುಮಾನ ಶುರುವಾಗಿಬಿಟ್ಟಿದೆ. ಇಂಥ ಭ್ರಷ್ಟರ  ನಾಡಿನಲ್ಲಿ  ಅವರೆಲ್ಲಾ  ಹುಟ್ಟಿದ್ದರಾ ಎಂಬ ಪ್ರಶ್ನೆ  ಕಾಡುತ್ತಲೇ ಇದೆ…

ಎಸ್.ಎಲ್ ಬೈರಪ್ಪನವರೋ ಅಥವಾ ಇನ್ನ್ಯಾರೋ ಸಮಾಜ ಚಿಂತಕರು ಭಯೋತ್ಪಾದಕರು, ಮತಾಂಧರು ಮಾಡುತ್ತಿರುವ ಕೆಲಸಗಳ ಕುರಿತಾಗಿ ಹೇಳಿದರೆ  ನಾಡಿನ ಕೋಮು ಸೌಹಾರ್ದತೆ ಹಾಳಾಗಿ ಬಿಡುತ್ತದೆ! ನಮ್ಮ ಸಮಾಜದ ಒಂದಷ್ಟು  ಜನರಲ್ಲಿ  ಸಹೋದರತ್ವದ  ಬಾವ  ಜಾಗೃತವಾಗಿಬಿಡುತ್ತದೆ!

ಆಗಲಿ ಬಿಡಿ, ಬೆಂಗಳೂರಿನ ಡಾಲರ್‍ಸ್  ಕಾಲೋನಿ, ಬ್ರಿಗೆಡ್ ರಸ್ತೆ, ಎಂ.ಜಿ ರಸ್ತೆಗಳಲ್ಲಿ  ಇಂತಹದ್ದೊಂದು ದಾಳಿ ನಡೆಯಲಿ. ಸಹಸ್ರಾರು ಜನ ಸಾಯಲಿ…ಆಮೇಲಾದರೂ ದೇಶದಲ್ಲಿನ ಪುರುಷತ್ವ ಜಾಗೃತವಾಗಬಹುದು. ಭಯೋತ್ಪಾದನೆ ಹೆಸರಲ್ಲಿ  ನಿಧಿ ಬಿಡುಗಡೆಗೊಳಿಸುವ ಕಾರ್ಯ ನಿಲ್ಲಬಹುದು!!!

Read Full Post »

ಅದ್ಯಾಕೋ ಗೊತ್ತಿಲ್ಲ ನಮ್ಮ ಬ್ಲಾಗ್‌ಲೋಕದ ತುಂಬೆಲ್ಲ ಜಾತಿಯ ಕುರಿತು ಚರ್ಚೆ ನಡೆಯುತ್ತಿದೆ. ಮೇಲ್ಜಾತಿಯವರನ್ನು ಬೈಯ್ಯುವ ಸಂಪ್ರದಾಯ ಮುಂದುವರಿದಿದೆ. ಹಾಗಾಗಿ once again ಮತ್ತೊಂದು ವಿವಾದಿತ ಲೇಖನವೊಂದಕ್ಕೆ ಕೈಹಾಕುತ್ತಿದ್ದೇನೆ!?!

ಜಾತ್ಯಾತೀತವಾದ ಎಂದರೆ ಮೇಲ್ಜಾತಿಯವರನ್ನು ಬೈಯ್ಯುವುದಾ?

ಹಾಗಂತ ಒಂದು ಪ್ರಶ್ನೆ ಎತ್ತಿದ ಕೂಡಲೇ ನಮ್ಮ ಸೋ ಕಾಲ್ಡ್ ಜಾತ್ಯಾತೀತವಾದಿಗಳ ತಲೆ ೮೦೦ ವರ್ಷಗಳ ಹಿಂದಿನ ಇತಿಹಾಸಕ್ಕೆ ಹೋಗಿ ಬಿಡುತ್ತದೆ! ಆ ಊರಲ್ಲಿ ದಲಿತರು ಕೆರೆ ನೀರು ಮುಟ್ಟುವಂತಿಲ್ಲ, ಈ ಊರಲ್ಲಿ ಕೆಳವರ್ಗದವರು ಮೇಲ್ಜಾತಿ ಕೇರಿಗೆ ಬರುವಂತಿಲ್ಲ೮೦೦ ವರ್ಷಗಳ ಕಾಲ ಬ್ರಾಹ್ಮಣರು ದಲಿತರನ್ನು ಶೋಷಿಸಿದ್ದಾರೆ….ಉದ್ದುದ್ದ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ!

ಸ್ವಾಮಿ ಪ್ರಶ್ನೆ ಅದಲ್ಲ, ಜಾತ್ಯಾತೀತತೆ ಅಂದರೆ ಮತ್ತೆ ಅಲ್ಲಿ ಯಾಕೆ ದಲಿತ, ಬ್ರಾಹ್ಮಣ ಅಂತಾ ತಾರತಮ್ಯ…?

ಊಹುಂ, ಮತ್ತದೇ ಉತ್ತರಬ್ರಾಹ್ಮಣರು ದಲಿತರನ್ನು ಹಿಂದೆ ತುಳಿದರು..ಈಗಲೂ ತುಳಿಯುತ್ತಿದ್ದಾರೆ

ಅಲ್ಲಾ ಸ್ವಾಮಿ ಬ್ರಾಹ್ಮಣರನ್ನು ಬೈದರೆ ಸಮಸ್ಯೆ ಪರಿಹಾರವಾಗತ್ತಾ?

ಊಹುಂ ಮತ್ತದೇ ರಾಗ, ಬ್ರಾಹ್ಮಣರು ದಲಿತರಿಗೆ ಗರಟೆಯಲ್ಲಿ ನೀರು ಕೊಡುತ್ತಾರೆ

ಇಂತಹದ್ದೊಂದು ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿದೆಯಾ? ಈವರೆಗೆ ಪರಿಹಾರ ಹುಡುಕಲು ಹೋದ ಬಹತೇಕ ಮಂದಿ ಸೋತಿದ್ದಾರೆ!

ಮೇಲ್ಜಾತಿಯವರು ಕೆಳವರ್ಗದವರನ್ನು ಶೋಷಿಸಿದರು, ಶೋಷಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯೆ ಕಲಿಯಲು ಅವಕಾಶ ನೀಡಲಿಲ್ಲ. ದೇವಸ್ಥಾನದ ಒಳಕ್ಕೆ ಬಿಡಲಿಲ್ಲ. ಸಹ ಪಂಕ್ತಿಯಲ್ಲಿ ಊಟ ಹಾಕಲಿಲ್ಲ. ಅಂಬೆಡ್ಕರ್‌ಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಗಲಿಲ್ಲಇಂತಹದ್ದೊಂದು ಕೂಗನ್ನು ನನಗೆ ತಿಳುವಳಿಕೆ ಬಂದ ದಿನದಿಂದಲೂ ಕೇಳುತ್ತಲೇ ಇದ್ದೇನೆ.

ಅಚ್ಚರಿ ಎಂದರೆ ನಮ್ಮ ದೇಶದಲ್ಲಿ ದಲಿತರ ಪರ ದ್ವನಿ ಎತ್ತಿದವರು, ಶೋಷಣೆಯ ವಿರುದ್ಧ ಹೋರಾಡಿದವರಲ್ಲಿ ಮೇಲ್ಜಾತಿಯವರದ್ದೇ ಸಿಂಹಪಾಲು.(ವ್ಯವಸ್ಥೆಯ ವಿರುದ್ಧ ಮಾತನಾಡಲಾಗದಷ್ಟು ದಲಿತರನ್ನು ಮೇಲ್ವರ್ಗದವರು ಹೆದರಿಸಿದ್ದಾರೆ! ತುಳಿದಿದ್ದಾರೆಹೀಗಾಗಿ ಅವರು ಬಂದಿದ್ದನ್ನೆಲ್ಲಾ ಸ್ವೀಕರಿಸುತ್ತಾರೆ ಎಂದು ಮತ್ತೆ ಮೇಲ್ವರ್ಗದವರನ್ನು ಬೈಯ್ಯುತ್ತಾರೆ ಹೊರತೂ ಮೇಲ್ಜಾತಿಯವ ಮಾಡುತ್ತಿರುವ ಉತ್ತಮ ಕಾರ್ಯದ ಬಗೆಗೆ ಮಾತನಾಡುವುದಿಲ್ಲ ಬಿಡಿ! ಅಥವಾ ಅವ ಮೇಲ್ಜಾತಿಯವನಲ್ಲ. ಹುಟ್ಟುತ್ತಲೇ ತನ್ನ ಜನಿವಾರ ಕಿತ್ತು ಬಿಸಾಡಿದ ಅಂತಲೂ ಹೇಳುತ್ತಾರೆ. ಒಟ್ಟಿನಲ್ಲಿ ಮೇಲ್ಜಾತಿಯ ಒಂದಿಷ್ಟು ಮಂದಿ ಕೆಳವರ್ಗದ ಶ್ರೇಯಸ್ಸಿಗಾಗಿ ದುಡಿದಿದ್ದಾರೆ ಎಂಬುದನ್ನು ನಮ್ಮ ಜಾತ್ಯಾತೀತವಾದಿಗಳು ಒಪ್ಪಿಕೊಳ್ಳುವುದೇ ಇಲ್ಲ!)

ಇವತ್ತು ಕೆಳವರ್ಗದ ಸಾಕಷ್ಟು ಜನ ವಿದ್ಯೆ ಪಡೆಯುತ್ತಿದ್ದಾರೆ. ಅಧಿಕಾರಿಗಳಾಗುತ್ತಿದ್ದಾರೆ. ಅದೆಷ್ಟೋ ಜನ ಜಾತಿಯ ವಿರುದ್ಧ ಸೆಟೆದು ನಿಂತಿದ್ದಾರೆ. ರಾಮಕೃಷ್ಣ ಆಶ್ರಮದಂಥ, ಆರ್‌ಎಸ್‌ಎಸ್‌ನಂಥ ಅದೆಷ್ಟೋ ಸಂಸ್ಥೆಗಳು ಜಾತಿ ಹೋಗಲಾಡಿಸಲು ಹೋರಾಡುತ್ತಿವೆ. ಆದಾಗ್ಯೂ ಜಾತಿ ಪದ್ಧತಿ ಇದೆ ಅಂದರೆ ಕಾರಣವೇನು?(ಬ್ರಾಹ್ಮಣರೇ ಕಾರಣ ಅನ್ನುತ್ತಾರೆ!)

ಶಿವರಾಮ ಕಾರಂತರು ಹುಚ್ಚು ಮನಸಿನ ಹತ್ತು ಮುಖಗಳುಕೃತಿಯ ಒಂದು ಕಡೆ ಬರೆದುಕೊಳ್ಳುತ್ತಾರೆ. ‘ಶಿವರಾಮ ದಲಿತರ ಕೇರಿಗೆ ಹೋಗಿ ಪಾಯಿಖಾನೆ ಗುಂಡಿತೊಡುವಾಗ ಬ್ರಾಹ್ಮಣ ಅನ್ನಿಸಲಿಲ್ಲ. ಆದರೆ ಚುನಾವಣೆಗೆ ನಿಂತಾಗ ಬ್ರಾಹ್ಮಣನಾಗಿಬಿಟ್ಟ!’(ಇದು ಅವರ ಯಥಾವತ್ತು ಸಾಲುಗಳಲ್ಲ. ಈ ಅರ್ಥ ಬರುವಂತೆ ಬರೆದುಕೊಂಡಿದ್ದಾರೆ. ಆ ಕೃತಿ ಓದಿ ಸಾಕಷ್ಟು ವರ್ಷ ಕಳೆದಿರುವುದರಿಂದ ಯಥಾವತ್ತು ಸಾಲುಗಳು ಮರೆತು ಹೋಗಿದೆ. ಕ್ಷಮೆ ಇರಲಿ)ಇನ್ನೂ ವ್ಯವಸ್ಥೆಯ ವಿರುದ್ಧ, ಸಂಪ್ರದಾಯದ ವಿರುದ್ಧ ಹೋರಾಡಿದ ಅಡಿಗರಿಗೆ ಕಡೆ ಘಳಿಗೆಯಲ್ಲಿ ನಮ್ಮ ಸಮಾಜದ ಒಂದಿಷ್ಟು ಮಂದಿ ನೀಡಿದ ಸಮ್ಮಾನವಾದರೂ ಎಂತಹದ್ದು?! ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಸಮಾಜದಲ್ಲಿ ಸಿಗುತ್ತವೆ.

ಇನ್ನೂ ಆರ್‌ಎಸ್‌ಎಸ್‌ನ್ನು ಜನಿವಾರಿಗಳ ಸಂಘಟನೆ ಅಂತಾ ಬೈಯ್ಯುತ್ತಾರೆ. ದಲಿತರಿಗಾಗಿ, ಚಿಂದಿ ಆಯುವ ಮಕ್ಕಳಿಗಾಗಿ ಆರ್‌ಎಸ್‌ಎಸ್ ನಡೆಸುತ್ತಿರುವ ನರೇಂದ್ರ ನೆಲೆ, ಸೇವಾ ಪ್ರತಿಷ್ಠಾನಗಳು ನಮ್ಮ ಕಣ್ಣಿಗೆ ರಾಚುವುದೇ ಇಲ್ಲ. ನೆಲೆ, ಪ್ರತಿಷ್ಠಾನಕ್ಕಾಗಿ ಬದುಕನ್ನು ಮುಡುಪಾಗಿಟ್ಟಿರುವ ಮಂದಿಯಲ್ಲಿ ಬ್ರಾಹ್ಮಣರು, ಕೊಂಕಣಿಗರೇ ಹೆಚ್ಚು ಎಂಬುದು ನಮಗೆ ತಿಳಿಯುವುದೇ ಇಲ್ಲ! ಸ್ವಯಂಸೇವಕರಲ್ಲಿ ಕೆಳವರ್ಗದವರೂ ಇದ್ದಾರೆ, ಎಲ್ಲರೂ ಒಂದೇ ಸೂರಿನಲ್ಲಿ ವಾಸಿಸುತ್ತಾರೆ. ಒಟ್ಟಿಗೆ ಊಟ ಮಾಡುತ್ತಾರೆ ಎಂಬುದೆಲ್ಲಾ ಗೊತ್ತಿದ್ದರೂ ಜನಿವಾರಿ, ಬಿಜೆಪಿಇತ್ಯಾದಿ ಬೈಗುಳ ತಪ್ಪಿದ್ದಲ್ಲ!

ಸ್ವಾಮಿ ಒಂದು ರಾಮಚಂದ್ರಾಪುರ ಮಠ ಹೋಮಕ್ಕೆ ತುಪ್ಪ ಸುರಿದಾಗ ನಿಮಗೆ ಹೊಟ್ಟೆಗಿಲ್ಲದವರ ನೆನಪಾಗುತ್ತದೆ. ಆದರೆ ಒಂದು ಆದಿಚುಂಚನಗಿರಿಯಲ್ಲಿ ಸುರಿಯುವ ತುಪ್ಪದ ಲೆಕ್ಕದ ಉಸಿರೇ ನಿಮ್ಮಲ್ಲಿ ಇಲ್ಲವಲ್ಲ? ಉಪ್ಪಾರ ಮಠಗಳು, ಕೊಳದ ಮಠಗಳು ಪಟ್ಟಾಭಿಷೇಕದ ಹೆಸರಲ್ಲಿ ದುಂದುವೆಚ್ಚ ಮಾಡುವಾಗ ಚಿಂದಿ ಆಯುವವರ ಹೊಟ್ಟೆ ತುಂಬಿರುತ್ತದೆಯಾ?

ನಮ್ಮ ಸಮಾಜದಲ್ಲಿ ಕೆಳವರ್ಗದಿಂದ ಹಿಡಿದು ಮೇಲ್ವರ್ಗದವರೆಗಿನ ಪ್ರತಿ ಜಾತಿಗೂ ಅದರದ್ದೇ ಆದ ಮಠಗಳಿವೆ. ಸ್ವಾಮಿಗಳಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿಲ್ಲವೇ? ಪೇಜಾವರರು, ರಾಘವೇಶ್ವರರು, ಶೃಂಗೇರಿ ಶ್ರೀಗಳು ಮಾತ್ರ ನಿಮ್ಮ ಕಣ್ಣನ್ನು ಕುಕ್ಕುವುದು ಯಾಕೆ?

ಕೆಳಜಾತಿಯಲ್ಲೂ ಅನೇಕ ಪಂಗಡಗಳಿವೆ. ಬೆಸ್ತರು ತಮಗಿಂತ ಕೆಳ ಜನಾಂಗಕ್ಕೆ ನೀರು ಕೊಡುವುದಿಲ್ಲ. ದಲಿತರಲ್ಲೂ ಹಲವು ಪಂಗಡಗಳಿವೆ. ಗೌಡ ಜನಾಂಗದಲ್ಲೂ ಸಾಕಷ್ಟು ತಾರತಮ್ಯವಿದೆ. ಅವೆಲ್ಲಾ ನಿಮ್ಮ ಗಮನಕ್ಕೆ ಬರುವುದೇ ಇಲ್ಲವೇ? ಅಂದಹಾಗೆ ಈ ಎಲ್ಲಾ ತಾರತಮ್ಯಗಳೂ ೮೦೦ ವರ್ಷಗಳ ಹಿಂದಿನಿಂದಲೇ ನಡೆದುಕೊಂಡು ಬರುತ್ತಿದೆ!

ಅದೇನೆ ಇರಲಿ, ಸಮಾಜ ಬದಲಾವಣೆಯ ಹಾದಿ ತುಳಿದರೂ ಜಾತಿಯ ಬೇರು ಗಟ್ಟಿಯಾಗಿ ಉಳಿದುಕೊಂಡಿದೆ ಅಂದರೆ ಅದಕ್ಕೆ ಮೇಲ್ಜಾತಿಯವರು ಮಾತ್ರ ಕಾರಣ ಎಂದು ದೂಷಿಸಿವುದು ಖಂಡಿತಾ ಹುಚ್ಚುತನದ ಪರಾಮಾವಧಿ.

ರೆಡ್ಡಿಗಳ ಪ್ರಾಬಲ್ಯವಿರುವ ನಾಡಿನಲ್ಲಿ ಬ್ರಾಹ್ಮಣನೊಬ್ಬ ಟಿಕೆಟ್ ಗಿಟ್ಟಿಸಲು ಸಾಧ್ಯವಾ? ಬ್ರಾಹ್ಮಣನ ಕ್ಷೇತ್ರದಲ್ಲಿ ಲಿಂಗಾಯತ ಗೆಲ್ಲಲ್ಲು ಸಾಧ್ಯವಾ? ದಲಿತರ ಕೇರಿಗಳ ಮತವನ್ನು ಗೌಡ ಜನಾಂಗದವ ಗಿಟ್ಟಿಸುತ್ತಾನಾ…?

ಹೌದು, ನಮ್ಮ ಇಡೀ ರಾಜಕೀಯ ವ್ಯವಸ್ಥೆ ನಿಂತಿರುವುದೇ ಈ ಲೆಕ್ಕಾಚಾರದ ಮೇಲೆ. ಇದಕ್ಕೆ ಯಾವ ಪಕ್ಷವೂ ಹೊರತೇನಲ್ಲ. ಜಾತ್ಯಾತೀತ ಎಂಬ ಬ್ಯಾನರ್ ಹೊತ್ತ ಪಕ್ಷಗಳು ಹಗಲಿರುಳು ಜಾತ್ಯಾತೀತವಾದವನ್ನು ಕನವರಿಸಿದರೂ , ಟಿಕೆಟ್ ಕೊಡುವುದು ಜಾತಿ ಪ್ರಾಬಲ್ಯದ ಮೇಲೇನೆ! ಹಾಗೇ ನೋಡಿದರೆ ನಮ್ಮ ರಾಜ್ಯ ರಾಜಕಾರಣದಲ್ಲಿ ಬ್ರಾಹ್ಮಣರ ಸಂಖ್ಯೆ ತೀರಾ ಕಡಿಮೆ. ಆದರೂ ಜಾತಿ ಸಂಘರ್ಷ ಇದೆಯಲ್ಲಾ ಸ್ವಾಮಿ?!

ಹೇಗೆ ತೂಗಿ ನೋಡಿದರೂ ಜಾತಿಯನ್ನು ಬೆಳೆಸುವಲ್ಲಿ, ಭದ್ರವಾಗಿ ಕಾಪಾಡಿಕೊಂಡು ಬರುವುದರ ಹಿಂದೆ ಪ್ರತಿಯೊಬ್ಬ ರಾಜಕಾರಣಿಯ ಶ್ರಮ ಅಪಾರವಾಗಿದೆ! ಅದರ ಜತೆಗೆ ಪ್ರತಿ ಜಾತಿಯ ಪಾಲು ಇದೆ!

ಜಾತಿ ಬ್ಯಾನೆರ್‌ನಡಿ ಅದೆಷ್ಟು ಪ್ರೆಸ್‌ಮೀಟ್ ನಡೆಯುತ್ತವೆ ಎಂಬುದನ್ನು ನೀವು ಒಮ್ಮೆ ಬೆಂಗಳೂರಿನ ಪ್ರೆಸ್‌ಕ್ಲಬ್‌ಗೆ ಬಂದು ನೋಡಿ. ಯಾವುದೇ ಚುನಾವಣೆಯಲ್ಲಿ ಗೆದ್ದ ಸ್ವಜಾತಿಯ ಅಭ್ಯರ್ಥಿಯನ್ನು ಅದೆಷ್ಟು ಜಾತಿ ಬಾಂಧವರು ಸ್ವಾಗತಿಸುತ್ತಾರೆ, ಪತ್ರಿಕೆಗಳಲ್ಲಿ ಅದೆಷ್ಟು ಅಭಿನಂದನೆಗಳ ಜಾಹೀರಾತು ಬರುತ್ತವೆ ಎಂಬುದನ್ನು ಸುಮ್ಮನೆ ಒಮ್ಮೆ ಗಮನಿಸಿ ನೋಡಿ. ಆ ನಂತರವೂ ಜಾತಿ ಪದ್ಧತಿಗೆ ಮೇಲ್ಜಾತಿಯವರು ಮಾತ್ರ ಕಾರಣ ಅನ್ನಿಸಿದರೆ ನಿಮ್ಮ ಬೈಗುಳದ ಚಾಳಿ ಮುಂದುವರಿಸಿ.

ಅಂದಹಾಗೆ ಈ ಲೇಖನದ ಕುರಿತು ಮುಕ್ತ ಚರ್ಚೆಗೆ ಅವಕಾಶವಿದೆ. ಆದರೆ ಅದೇ ೮೦೦ ವರ್ಷದ ಹಿಂದಿನ ಪುರಾಣ, ಗರಟೆ, ಚಂಬುಗಳ ಕುರಿತಾಗಿ ಪ್ರಶ್ನೆ ಎತ್ತುವುದರ ಬದಲು ಪ್ರಸ್ತುತ ಏನಾಗುತ್ತಿದೆ, ಏನಾಗಬೇಕಾಗಿದೆ ಎಂಬುದನ್ನು ಚರ್ಚಿಸೋಣ. ನೀವು ಗರಟೆ, ಚೆಂಬಿನ ಕುರಿತಾಗಿ ಚರ್ಚಿಸುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ನಾನು ಚರ್ಚೆಯಲ್ಲಿ ಭಾಗವಹಿಸದೇ ವೇದಿಕೆಯನ್ನು ನಿಮಗೆ ಬಿಟ್ಟುಕೊಡುತ್ತೇನೆ!

ಅಂದಹಾಗೆ ಈ ಲೇಖನವನ್ನು ಓದಿದ ಕೆಲವರು ನನ್ನನ್ನೂ ಮೇಲ್ಜಾತಿಯ ವಕ್ತಾರ ಅಂತಾ ಬೈದುಕೊಳ್ಳಲೂಬಹುದು ಅಲ್ವಾ?!

Read Full Post »

ಎಲ್ಲಾ ಕಾದಂಬರಿಗಳನ್ನು ಓದಿ ಮುಗಿಸಿದ ನಂತರ ಬೈರಪ್ಪನವರನ್ನು ಓದಲು ಶುರುವಿಡು. ಮೊದಲೇ ಬೈರಪ್ಪರ ಕಾದಂಬರಿ ಓದಿ ಬಿಟ್ಟರೆ ನಿನಗೆ ಉಳಿದ ಲೇಖಕರ ಕಾದಂಬರಿಗಳು ಸಪ್ಪೆ ಅನ್ನಿಸುತ್ತವೆ….’ಸಿದ್ಧಾಂತದ ಸೊಗಡಿಲ್ಲದ, ಎಡ, ಬಲಗಳ ಪರಿವೇ ಇಲ್ಲದ, ಸಾಹಿತ್ಯದಲ್ಲೂ ತೀರಾ ಆಸಕ್ತಿ ಇಲ್ಲದ ನನ್ನ ಗೆಳೆಯ ರಾಜಾರಾಮ (ಟೆಕ್ಕಿ)ಹೇಳುತ್ತಿದ್ದ. ಅವ ರೂಮಿಗೆ ತಂದಿದ್ದ ಅನ್ವೇಷಣದಿಂದ ನನಗೆ ಎಸ್.ಎಲ್ ಬೈರಪ್ಪರೆಂಬ ಕಾದಂಬರಿಲೋಕದ ಸರದಾರರ ಪರಿಚಯವಾಗಿದ್ದು.

ಅನ್ವೇಷಣದ ವಿಶ್ವನಾಥ ಇವತ್ತಿಗೂ ನನ್ನ ಕಣ್ಣು ಕಟ್ಟುತ್ತಿದ್ದಾನೆ. ಎಂತಹ ಅದ್ಬುತ ಪಾತ್ರವದು. ಎಲ್ಲಿಂದ ಆರಂಭವಾಗುವ ಆ ಪಾತ್ರ ಎಲ್ಲಿಗೆ ಹೋಗಿ ನಿಲ್ಲುತ್ತದೆ?! ಒಬ್ಬ ವಿಶ್ವನಾಥ ಬದುಕಿನ ಅದೆಷ್ಟು ಮಜಲುಗಳನ್ನು ಹಾಯ್ದುಹೋಗಿದ್ದಾನೆ?! ವಿಶ್ವನಾಥನ ಗೆಳೆಯ ಗಂಗಣ್ಣ, ವಿಶ್ವನಾಥನನ್ನು ಕೈಹಿಡಿದ ಹೆಂಡತಿಇತ್ಯಾದಿ ಪಾತ್ರಗಳ ಮೂಲಕ ಸಮಾಜದ ಸಾಕಷ್ಟು ಕುಟುಂಬಗಳ ಚಿತ್ರಣವನ್ನು ಲೇಖಕರು ಕಣ್ಣೆದುರಿಗೆ ಬರುವಂತೆ ಕಟ್ಟಿಕೊಡುತ್ತಾರೆ.

ನಾನು ಬಿಎಸ್‌ಸ್ಸಿ ಓದುತ್ತಿದ್ದಾಗ ನಮ್ಮ ಫಿಸಿಕ್ಸ್ ಪ್ರಾಧ್ಯಾಪಕರಾದ ಎ.ಪಿ ಭಟ್ಟರು, ತರಗತಿಯಲ್ಲಿ ಮಂದ್ರಕಾದಂಬರಿ ಕುರಿತು ಹೇಳಿದ್ದರು. ಎಲ್ಲಿಯ ಫಿಸಿಕ್ಸ್, ಎಲ್ಲಿಯ ಮಂದ್ರ? ಪ್ರಾಧ್ಯಾಪಕರು ಮಂದ್ರಕುರಿತು ಸಾಹಿತ್ಯದ ಒಗರೆ ಇಲ್ಲದ ತರಗತಿಯಲ್ಲಿ ಮಾತಾಡುತ್ತಾರೆ ಎಂದರೆ

 

ಹೌದು, ಮಂದ್ರ ಪ್ರತಿಯೊಬ್ಬನೂ ಓದಬಹುದಾದ ಕಾದಂಬರಿ. ಅಲ್ಲಿಯ ಕಥಾ ನಾಯಕ, ಸಂಗೀತ ಗುರು ಮೋಹನ್‌ಲಾಲ್‌ನ(ಕಥಾ ನಾಯಕನ ಹೆಸರು ಸರಿಯಾಗಿ ನೆನಪಿಲ್ಲ. ನಾನು ಈ ಕಾದಂಬರಿ ಓದಿ ೪೫ ವರ್ಷವೇ ಕಳೆದಿದೆ)ಬದುಕಿನ ಸುತ್ತ ಹೆಣೆಯಲ್ಪಟ್ಟಿರುವ ಆ ಕಾದಂಬರಿಯಲ್ಲಿ ಪ್ರತಿಯೊಬ್ಬನ ಬದುಕೂ ಇದೆ. ಹಾಗಾಗಿಯೇ ಇರಬೇಕು ಲ್ಯಾಬ್, ಪ್ರಯೋಗಗಳಲ್ಲಿ ಮುಳುಗಿರುವವರ ಪಾಲಿಗೂ ಆ ಕಾದಂಬರಿ ಅದ್ಬುತ ಅನ್ನಿಸುವುದು. ಒಬ್ಬ ಸಭ್ಯ ಗಂಡನನ್ನು ಬಿಟ್ಟು ಸಂಗೀತ ಗುರುವಿನ ಹಿಂದೆ ಓಡಿಬರುವ ಶಿಷ್ಯೆ, ಕೆಲಸದವಳನ್ನೂ ಬಿಡದ ಶ್ರೇಷ್ಠ ಸಂಗೀತಗಾರ

 

ಇನ್ನೂ ಧರ್ಮರ್ಶಿ, ಮಂತಾತರಗೊಂಡ ಹಿಂದುವಿನ ಬದುಕನ್ನು, ಆತ ಸಮಾಜದಲ್ಲಿ ಎದುರಿಸುವ ಬವಣೆಗಳನ್ನು ಬಿಂಬಿಸುವ ಕೃತಿ. ಇದಕ್ಕೆ ಒಂಚೂರು ಬಲಪಂಥೀಯ ಒಗರು ಇದೆಯಾದರೂ ಖಂಡಿತವಾಗಿಯೂ ಇಲ್ಲಿನ ಪಾತ್ರಗಳು ಲೆಕ್ಕಾಚಾರ ಹಾಕಿ ಸೃಷ್ಟಿಸಿದವು ಅನ್ನಿಸುವುದಿಲ್ಲ.

 

ಅಂಚು, ಭಿತ್ತಿಅವೆಲ್ಲಾ ನಮ್ಮ ಕಣ್ಣಿಗೆ ರಾಚುವುದೇ ಇಲ್ಲ. ಒಂದು ಆವರಣವನ್ನು ಮುಂದಿಟ್ಟುಕೊಂಡು ಬೈರಪ್ಪನವರು ರಾಜ್ಯಕ್ಕೆ ಬೆಂಕಿ ಇಟ್ಟರು ಎಂಬಂತೆ ಕೂಗಾಡುತ್ತೇವೆ. ಕರ್ನಾಟಕ ಮತ್ತೊಂದು ಗುಜರಾತ್ ಆಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತೇವೆ! ‘ಓದುಗನನ್ನು ಗಮನದಲ್ಲಿಟ್ಟುಕೊಂಡು ಸಾಮನ್ಯನು ಓದುವ ಸಾಹಿತ್ಯ ರಚಿಸುವ ಕನ್ನಡದ ಲೇಖಕರಲ್ಲಿ ಬೈರಪ್ಪ ಮೊದಲಿಗರು. ನಂತರ ರವಿ ಬೆಳೆಗೆರೆಹಾಗಂತ ಹಿರಿಯರೊಬ್ಬರು ಯಾವುದೋ ಕೃತಿಯ ಮುನ್ನುಡಿಯಲ್ಲಿ ಬರೆದಿದ್ದನ್ನು ಓದಿದ ನೆನಪು. ಅನುಮಾನವೇ ಇಲ್ಲ. ಹಾಗಾಗಿಯೇ ಬೈರಪ್ಪನವರ ಕೃತಿಗಳು ಆ ಪರಿ ಮಾರಾಟವಾಗುವುದು.

 

ರಾಜಾರಾಮಗ್ರಹಣಎಂಬ ಮತ್ತೊಂದು ಕಾದಂಬರಿಯನ್ನು ಹೊತ್ತು ತಂದಿದ್ದಾನೆ. ಪಟ್ಟು ಬಿಡದೇ ಅದನ್ನು ಓದಿ ಮುಗಿಸಿದೆ. ೧೯೭೦ರ ದಶಕದಲ್ಲಿ ಬರೆದ ಗ್ರಹಣ ಇವತ್ತಿಗೂ ಪ್ರಸ್ತುತ ಅನ್ನಿಸುತ್ತಿದೆ. ಸಾಮಾನ್ಯರ ಬದುಕಿನ ವಿಶಿಷ್ಟವಾದ ಅನುಭವಗಳನ್ನೇ ಕಾದಂಬರಿಯ ಎಳೆಯನ್ನಾಗಿಸಿಕೊಂಡು ಬರೆಯುತ್ತಾರೆ. ನಮ್ಮ ಇತರ ಲೇಖಕರು ಬರೆದ ಕಾದಂಬರಿ ಆಯಾ ಕಾಲಘಟ್ಟಕ್ಕೆ ಸೀಮಿತ. ಆದರೆ ಬೈರಪ್ಪ ಮೂರು ತಲೆಮಾರಿನವರೆಗೂ ಪ್ರಸ್ತುತ. ಬೈರಪ್ಪ ಹಾಗಾಗಿಯೇ ಇಷ್ಟವಾಗುತ್ತಾರೆ…’ಎಂಬ ರಾಜಾರಾಮನ ಮಾತು ಅಕ್ಷರಶಃ ನಿಜ ಅನ್ನಿಸುತ್ತಿದೆ.

ಪರ್ವನಾನಿನ್ನೂ ಓದಿಲ್ಲ. ಅದು ಇವೆಲ್ಲಕ್ಕಿಂತ ಅದ್ಬುತವಂತೆ. ಹಾಗಂತ ಗೆಳೆಯ ಹೇಳುತ್ತಿದ್ದ. ಆದರೂ ಬೈರಪ್ಪರಿಗೆ ಒಬ್ಬ ಪ್ರತಿರ್ಸ್ಪ ಈ ತಲೆಮಾರಿನಲ್ಲಿ ಇದ್ದಾರಾ? ವಿಶ್ವನಾಥನಿಗಿಂತ ಅದ್ಬುತ ಎನ್ನಬಹುದಾದ ಪಾತ್ರ ಬೇರೆ ಯಾವುದಾದರೂ ಕಾದಂಬರಿಕಾರರಿಂದ ಸೃಷ್ಟಿಯಾಗಬಹುದಾ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ.

ವಿಶ್ವನಾಥನ ಪಾತ್ರ ಸೃಷ್ಟಿಸಲಾಗದಿದ್ದರೂ, ಅವನ ಪಾತ್ರವನ್ನು ಬಗೆಬಗೆಯಾಗಿ ವಿರ್ಮಶಿಸುವ ಮಂದಿ ನಮ್ಮ ಸಮಾಜದಲ್ಲಿ ಬಹಳಷ್ಟಿದ್ದಾರೆ ಬಿಡಿ!

Read Full Post »

(ಸೂಚನೆ: ಬದುಕಿಗೆ ಹಳತಾದರೂ, ಬರಹಕ್ಕೆ ಇದೊಂದು ಹೊಸ ಪ್ರಯೋಗ. ಹಳೆ ಟ್ರೆಂಡಿನ ಬರಹಗಳನ್ನು ಬರೆದು, ಬರೆದೂ ಬೇಜಾರು ಬಂದಿದೆ. ಹಾಗಾಗಿ ಒಂಚೂರು ವಿಚಿತ್ರವಾದ ಬರಹವನ್ನು ಸಾದರಪಡಿಸಲು ಹೊರಟ್ಟಿದ್ದೇನೆ! ಇದನ್ನು  ಓದುಗರಾದ ನೀವು ಹೇಗೆ ಬೇಕಾದರೂ ಸ್ವೀಕರಿಸಿ. ಇಲ್ಲಿ  ಬರುವ ಎಲ್ಲಾ  ಸನ್ನಿವೇಶಗಳೂ ಕೇವಲ ಕಾಲ್ಪನಿಕ!!!)

ಪುಟ್ಟಣ್ಣ,
ನೀನು ದೀಪಾವಳಿಗೆ ಊರಿಗೆ ಬಂದು ಹೋದ ನಂತರ ನಿನ್ನ  ಪತ್ರ ಕೈತಲುಪಿತು. ಪೋಸ್ಟಿವನರ ವ್ಯಾಪಾರ ಗೊತ್ತಿದ್ದರೂ, ಬರುವ ಮೂರು ದಿನ ಮೊದಲು ಪತ್ರ ಹಾಕಿದ ನಿನಗೆ ಚೆನ್ನಾಗಿ  ಬೈಯ್ಯಬೇಕು ಅನ್ನಿಸುತ್ತಿದೆ. ಹಬ್ಬಕ್ಕೆ ಊರಿಗೆ ಬಂದರೂ ನಮ್ಮ  ಮನೆಗೆ ಬಾರದೇ ಬೆಂಗಳೂರಿಗೆ ಮರಳಿದ್ದರ ಹಿನ್ನೆಲೆ ಅರ್ಥವಾಗಲಿಲ್ಲ.(ನನ್ನ  ಕುಡುಕ ಅಪ್ಪನಿಗೆ ಹೆದರಿಕೊಂಡೇ ಬರಲಿಲ್ಲ  ಅಂದುಕೊಳ್ಳುತ್ತೇನೆ!)

ನನ್ನ , ನಿನ್ನ ನಡುವಣ ಸ್ನೇಹಕ್ಕೆ, ಸಹೋದರತ್ವಕ್ಕೆ ಈಗ ಮೂರರ ಸಂಭ್ರಮ. ಮೂರು ವರ್ಷದ ಕೆಳಗಿನ ದೀಪಾವಳಿಯಂದೇ ನನಗೆ ನಿನ್ನ ಪರಿಚಯವಾಗಿದ್ದು. ನಮ್ಮ ಮನೆಯಲ್ಲಿ  ಹಬ್ಬ  ಇಲ್ಲ  ಅಂತಾ ನಾನು ಆವತ್ತು ನಿಮ್ಮ ಮನೆಗೆ ಬಂದಿದ್ದೆ ನೆನಪಿದೆಯಾ? ಕುಡುಕ ಅಪ್ಪ, ಅದೆಂತಹದ್ದೋ ಪಟ್ಟ  ಕಟ್ಟಿಕೊಂಡ ಅಮ್ಮನ ನಡುವೆ ಬದುಕುತ್ತಿದ್ದ  ನನಗೆ, ನಿನ್ನಂತಹ ಒಬ್ಬ  ಅಣ್ಣ  ಸಿಗುತ್ತಾನೆ  ಎಂಬ ಪರಿಕಲ್ಪನೆಯೂ ಇರಲಿಲ್ಲ. ನನ್ನ  ಬದುಕು ಆ ದರಿದ್ರ ಸಂಸಾರದಲ್ಲೇ ಮುಗಿದುಹೋಯಿತು ಅಂದುಕೊಂಡಿದ್ದೆ….

ದಿನ ರಾತ್ರಿಯಾಗುತ್ತಿದ್ದಂತೆ ಕುಡಿದು ಬಂದು ಅಮ್ಮನ ಹತ್ತಿರ ಗಲಾಟೆ ಮಾಡುವ ಅಪ್ಪನನ್ನು ಕಂಡಾಗ, ಆದಷ್ಟು  ಬೇಗ ನಾನು ಸತ್ತರೆ ಸಾಕು ಅನ್ನಿಸುತ್ತಿತ್ತು. ಮನೆಯ ಹೊಸ್ತಿಲು ದಾಟಿದರೆ ಅಮ್ಮನ ಕುರಿತು ಆಚೀಚೆ ಮಂದಿಯ ಮಾತು…

‘ಅಮ್ಮಾ, ಅವರೆಲ್ಲಾ  ನಿನ್ನ ಕುರಿತು, ನಿನ್ನ ಶೀಲದ ಕುರಿತು ಆಡುವ ಮಾತು ನಿಜವಾ?’ ಎಂದು ಯಾವತ್ತೂ ಅಮ್ಮನನ್ನು ಕೇಳಲು ಮನಸಾಗಲಿಲ್ಲ. ಯಾಕೆಂದರೆ ಅಂತಹ ಅಪ್ಪನ  ಜತೆ ಬದುಕುತ್ತಿದ್ದ  ಅಮ್ಮನ ಕಷ್ಟ  ನಿತ್ಯ ಕಣ್ಣಿಗೆ ಕಟ್ಟುತ್ತಿತ್ತು.

ಅಮ್ಮನಿಂದ ನಮಗೂ ಸಮಾಜದಲ್ಲಿ ನೆಮ್ಮದಿಯಿಲ್ಲ ಅಂತಾ ಸಿಡುಕಿದ್ದಕ್ಕೆ ನೀನೊಮ್ಮೆ ನನಗೆ ಚೆನ್ನಾಗಿ ಬೈದಿದ್ದೆ‘ ನೆನಪಿದೆಯಾ? ‘ಅಮ್ಮ ಹೇಗೆ ಬದುಕಿದ್ದಳೋ ಗೊತ್ತಿಲ್ಲ. ಅಪ್ಪ  ನಯಾ ಪೈಸೆ ಕಾಸು ಕೊಡದಿದ್ದಾಗಲೂ  ನಿಮ್ಮನ್ನು ಸಾಕಿದ್ದಾಳೆ…’ ಅಂತಾ ನೀನು ಬುದ್ಧಿವಾದ ಹೇಳಿದ ಮೇಲೆ, ಅಮ್ಮನ ಕುರಿತು ನನಗೆ ಗೌರವ ಹೆಚ್ಚಾಗಿದ್ದು.
ನಿನ್ನ  ಸ್ನೇಹವಾದ ಮೇಲೆ ಅಮ್ಮನ ಕುರಿತು ಆಲೋಚಿಸುವುದನ್ನೇ ಬಿಟ್ಟು  ಬಿಟ್ಟೆ.  ಅಪ್ಪನನ್ನು ಕಂಡಾಗಲೆಲ್ಲಾ  ಗಂಡಸು ಎಂದರೆ ನನಗೆ ಮೈ ಉರಿಯುತಿತ್ತು. ನಿಜ ಹೇಳಬೇಕು ಅಂದ್ರೆ ನಿನ್ನ  ಒಡನಾಟ ಆಗುವವರೆಗೂ ನಾನು ಪುರುಷದ್ವೇಷಿಯಾಗಿದ್ದೆ!

ನಿನ್ನ, ನನ್ನ  ನಡುವಣ ಸಂಬಂಧದ ಕುರಿತು ಎದುರಿನಿಂದ ಅಲ್ಲದಿದ್ದರೂ, ಹಿಂದಿನಿಂದ ಮಾತಾಡಿಕೊಂಡ ಮಂದಿ ಸಾಕಷ್ಟಿದ್ದಾರೆ. ವಿದ್ಯಾವಂತ ಮಂದಿಯೂ ನಮ್ಮಿಬ್ಬರ ಸ್ನೇಹದ ಕುರಿತು ಸಂಶಯ ಪಟ್ಟಿದ್ದಾರೆ, ಪಡುತ್ತಲೇ  ಇದ್ದಾರೆ! ಮತ್ತೆ ಆ ವಿಷಯಗಳನ್ನೆಲ್ಲಾ  ಕೆದಕಿದರೆ ನೀನು ಚೆನ್ನಾಗಿ ಬೈಯ್ಯುತ್ತೀಯಾ ಅಂತಾ ಗೊತ್ತು. ಆದ್ರೂ ದೀಪಾವಳಿ ಜತೆಗೆ ಇವೆಲ್ಲಾ  ನೆನಪಾಯಿತು. ನೆನಪಾಗಿದ್ದನ್ನು  ನಿನ್ನ  ಹತ್ತಿರವಲ್ಲದೇ  ಇನ್ಯಾರ ಹತ್ತಿರ ಹೇಳಿಕೊಳ್ಳಲಿ ಹೇಳು? ಸೋ, ನೀನು ಬೈಯ್ಯಲ್ಲ  ಅಂದುಕೊಂಡಿದ್ದೇನೆ. ಏ ಕೋತಿ ಇದೊಂದ್ಸಾರಿ ಬೈಯ್ಯಬೇಡ ಕಣೋ ಪ್ಲೀಸ್…
ಇಂತಿ
ಪುಟ್ಟಮ್ಮಿ

Read Full Post »