Feeds:
ಲೇಖನಗಳು
ಟಿಪ್ಪಣಿಗಳು

Archive for ಮಾರ್ಚ್, 2010

ಕಾರ್ತೀಕದ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು
ಹಣತೆಗಳ ನಡುವೆಯೂ
ಜಗುಲಿ ಕತ್ತಲಾಗಿತ್ತು

ಬಿಕ್ಕುತ್ತಿದ್ದಳು ಒಬ್ಬಳೇ
ಕಣ್ಣೀರು ಇಳಿಯದಂತೆ
ಅಳುವಿನ ಸದ್ದು
ಯಾರಿಗೂ ಕೇಳದಂತೆ

ಉಕ್ಕಿದ ನೆರೆ ಕಾರಣವಲ್ಲ
ಅವಳ ನಗು ಮಾಸಲು
ನಾಲಗೆ ಹೊರಳುತ್ತಿಲ್ಲ
ಬೇಸರದ ಕಾರಣ ಹೇಳಲು

ಬಲು ದೂರ ನಡೆದಿದ್ದಾನೆ
ನಡು ಹಾದಿಯಲ್ಲಿ  ಕೈಬಿಟ್ಟು
ದೂರು ಕಾರಣಗಳ
ಸರಮಾಲೆಯನ್ನು ಎದುರಿಗಿಟ್ಟು

ಕಾರ್ತೀಕದ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು…

(ವಿ.ಸೂ:- ಅಕ್ಷರ ವಿಹಾರಕ್ಕೆ ೨ ವರ್ಷ ತುಂಬಿದೆ. ಇಲ್ಲಿನ ಬರಹಗಳನ್ನು ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು)

Read Full Post »

ಮತ್ತೊಮ್ಮೆ  ಎಂ.ಎಫ್ ಹುಸೇನ್ ಎಂಬ ವಿಶ್ವವಿಖ್ಯಾತ ಕಲಾವಿದರು ಚರ್ಚೆಯಲ್ಲಿದ್ದಾರೆ. ಅವರು, ಅವರನ್ನು ಪ್ರೀತಿಸುವ ರಾಷ್ಟ್ರಕ್ಕೆ ಹೋಗುತ್ತಾರಂತೆ.  ಆದ್ರೂ, ಭಾರತದ ಶೇ.೯೯ರಷ್ಟು  ಜನ ಅವರನ್ನು ಪ್ರೀತಿಸುತ್ತಾರೆ ಎಂಬ ವಿಶ್ವಾಸ ಅವರಿಗಿದೆಯಂತೆ! ಹಾಗಂತ ಆಂಗ್ಲ  ವಾಹಿನಿಯೊಂದು  ಹುಸೇನ್ ಅವರ ಅಮೃತ ವಚನವನ್ನು ಬಿತ್ತರಿಸುತ್ತಿತ್ತು. ಹಿಂದು ದೇವತೆಗಳ ಬೆತ್ತಲೆ ಚಿತ್ರದ ಪ್ರಕರಣದಿಂದ ಹುಸೇನ್ ದೇಶ ಘಾತುಕರ ಪಟ್ಟಿಯಲ್ಲಿ  ಸೇರಿದರು. ಆಗ ದೇಶದಲ್ಲಿ  ದೊಡ್ಡ  ಗಲಭೆಯೇ ನಡೆಯಿತು. ಆದಾಗ್ಯೂ,  ಒಂದಷ್ಟು  ಕಲಾಪ್ರಿಯರು ಮಾತ್ರ ಹುಸೇನ್ ಸಾಹೇಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಪುಂಖಾನು ಪುಂಖವಾಗಿ ಪುಂಗಿ ಊದಿದರು. ಅಂಥವರಲ್ಲಿ  ಗಿರೀಶ್ ಕಾನಾರ್ಡ್ ಎಂಬ ಜ್ಞಾನಪೀಠ ಸಾಹಿತಿಗಳು ಒಬ್ಬರು! ಅದೇನೆ ಇರಲಿ, ಹುಸೇನ್‌ಗೆ ಬೇರೆ ದೇಶದ ನಾಗರೀಕತ್ವ ಲಭ್ಯವಾಗುತ್ತಿರುವುದು ದೊಡ್ಡ  ಸುದ್ದಿ. ಭಾರತದವರು ಶ್ರೇಷ್ಠ  ಕಲಾವಿದನೊಬ್ಬರನ್ನು  ಅವಮಾನಿಸಿದರು ಎಂಬಂಥ ಭಾವನೆ ಮೂಡಿಸಲು ಕೆಲ ಮಾಧ್ಯಮಗಳು ಹೊರಟಿವೆ. ಕೆಲ ಸಂಪಾದಕರು ಸಂತಾಪಕೀಯ ಬರೆದಿದ್ದಾರೆ!

ಹುಸೇನ್ ಸಾಹೇಬ್ರ ಕನಸಿನ ಯೋಜನೆ ಪೂರ್ಣಗೊಳಿಸಲು ಖತಾರ್‌ನಲ್ಲಿ  ಅವಕಾಶ ನೀಡುತ್ತಾರಂತೆ. ಹಾಗಾಗಿ ಅವರಿಗೆ ಖತಾರ್‌ನಲ್ಲಿ  ಕಲೆಯನ್ನು  ಆರಾಸುತ್ತಾ ಬದುಕುವ ಆಸೆಯಂತೆ. ಭಾರತೀಯರಿಗೆ ನವ್ಯ ಕಲೆಯ ರುಚಿ ಗೊತ್ತಿಲ್ಲ  ಎಂದು ಸಂದರ್ಶನದಲ್ಲಿ  ಎಂ.ಎಫ್ ಹುಸೇನ್ ಗುಡುಗಿದ್ದಾರೆ.  ೯೫ರ ಪ್ರಾಯದ ಹುಸೇನ್‌ಗೆ,  ಇಷ್ಟು  ವರ್ಷ ತಾನೂ ಭಾರತದಲ್ಲೇ  ಬದುಕಿದ್ದೆ  ಎಂಬುದು ಮರೆತಂತಿದೆ. ಆರಂಭದಿಂದಲೂ ಅವರನ್ನು  ಒಬ್ಬ  ಕಲಾವಿದ ಎಂಬುದನ್ನು ಗುರುತಿಸಿದ್ದು  ಭಾರತೀಯ ಜನತೆ ಎಂಬುದು ನೆನಪಿನಲ್ಲಿ ಉಳಿದಿರಲಿಕ್ಕಿಲ್ಲ. ಹಾಗಾಗಿ ಭಾರತದ ಕೆಲವರ ಕಲಾ ಅಭಿರುಚಿಯ ಕುರಿತು ಗುಡುಗಲು ಆರಂಭಿಸಿದ್ದಾರೆ.

ಮಹಾರಾಷ್ಟ್ರದ ಪಂದಾಪುರ ಎಂಬಲ್ಲಿ  ೧೯೧೫ರಲ್ಲಿ  ಹುಸೇನ್ ಜನಿಸಿದರು. ಅರ್ಥಾತ್ ಅವರು ತೀರಾ ಗಡಿ ಪ್ರದೇಶದವರೇನಲ್ಲ.  ಇವರು ಆರಂಭದಲ್ಲಿ  ಕಲಿತದ್ದು  ಮುಂಬಯಿಯ ಜೆ.ಜೆ ಸ್ಕೂಲ್ ಆಫ್ ಆರ್ಟ್‌ನಲ್ಲಿ. ಇವರಿಗೆ ಚಿತ್ರ ಬಿಡಿಸಲು ಹೇಳಿಕೊಟ್ಟ  ಗುರುಗಳು ಭಾರತೀಯರು. ೧೯೪೦ರ ದಶಕದಿಂದ ಇವರ ಚಿತ್ರಗಳು ಜನಪ್ರಿಯವಾಗಲು ಶುರುವಾಯಿತು. ಇವರೊಬ್ಬ  ಕಲಾವಿದ ಎಂಬುದನ್ನು  ದೇಶ ಗುರುತಿಸಿತು. ೧೯೫೫ರಲ್ಲಿ  ಇವರಿಗೆ ಪ್ರದ್ಮಶ್ರೀ ಪ್ರಶಸ್ತಿ ಲಭ್ಯವಾಗಿತ್ತು. ೧೯೭೩ರಲ್ಲಿ  ಪದ್ಮಭೂಷಣ ಪ್ರಶಸ್ತಿಯೂ ದೊರೆಯಿತು. ೧೯೮೬ರಲ್ಲಿ  ರಾಜ್ಯ ಸಭೆಗೆ ನೇಮಕಗೊಂಡರು. ೧೯೯೧ರಲ್ಲಿ  ಪದ್ಮವಿಭೂಷಣವನ್ನೂ ಗಿಟ್ಟಿಸಿದರು! ಅಷ್ಟರ  ಮಟ್ಟಿಗೆ ದೇಶ ಅವರ ಕಲೆಯನ್ನು ಗೌರವಿಸಿದೆ, ಪ್ರೋತ್ಸಾಹಿಸಿದೆ.

ಸುಮಾರು ೭೦ ವರ್ಷಗಳಿಂದ ಹುಸೇನ್ ಕಲಾವಿದರಾಗಿ ಬದುಕುತ್ತಿದ್ದಾರೆ. ಆದಾಗ್ಯೂ,  ಅವರ ಚಿತ್ರಗಳ ಕುರಿತು ವಿವಾದ ಎದಿದ್ದು  ೧೯೯೬ರಲ್ಲಿ.  ಅಲ್ಲಿವರೆಗೂ ಅವರೊಬ್ಬ  ದೇಶದ ಯಶಸ್ವಿ ಕಲಾವಿದರಾಗಿದ್ದರು. ಮಹಭಾರತದ ವರ್ಣನೆಯುಳ್ಳ ಅನೇಕ ಚಿತ್ರಗಳನ್ನು ಕೆತ್ತಿದ್ದರು. ಮಾರಾಟ ಮಾಡಿದ್ದರು. ಅತ್ಯಂತ ದುಬಾರಿ ಸಂಭಾವನೆ ಪಡೆದ ಚಿತ್ರ ಕಲಾವಿದ ಎಂಬ ಖ್ಯಾತಿ ಹುಸೇನ್‌ಗಿದೆ. ಅವರ ಚಿತ್ರವೊಂದು ೨೦ ಲಕ್ಷ ಡಾಲರ್‌ಗೆ ಮಾರಾಟವಾಗಿದೆ. ಇಷ್ಟೆಲ್ಲದರ  ನಡುವೆ ಒಂದಷ್ಟು  ಚಲನಚಿತ್ರಗಳಿಗೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ಹುಸೇನ್ ಕೆಲಸ ಮಾಡಿದ್ದಾರೆ. ಭಾರತೀಯ ಕಲಾವಿದರು ಅಭಿನಯಿಸಿದ ಚಿತ್ರಗಳನ್ನು ವಿದೇಶದಲ್ಲಿ  ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಯಾವತ್ತು ಹುಸೇನ್ ಹಿಂದು ದೇವತೆಗಳ ಚಿತ್ರ ಕೆತ್ತಿ ಮಾರಾಟ ಮಾಡಲು ಮುಂದಾದರೋ, ಆವತ್ತು ದೇಶದ ಜನತೆ ಸಿಡಿದ್ದೆದಿತು. ೧೯೯೦ರಲ್ಲಿ  ಇವರು ಕೆಲ ಹಿಂದು ದೇವತೆಗಳ ಚಿತ್ರವನ್ನು ಬೆತ್ತಲಾಗಿ ಬರೆದರು,  ಸೆಕ್ಸ್  ದೃಷ್ಟಿಕೋನದಲ್ಲಿ  ಬರೆದರು ಎಂದು ಅನೇಕ ಲೇಖನಗಳು ಹೇಳುತ್ತಿವೆ.  ಈ ಚಿತ್ರಗಳು ೧೯೭೦ರಲ್ಲೇ  ಕೆತ್ತನೆಯಾಗಿದ್ದರೂ, ೧೯೯೬ರವರೆಗೂ ಚರ್ಚೆಗೆ ಬರಲಿಲ್ಲ  ಎಂದು ಇನ್ನು  ಹಲವರ ವಾದಿಸುತ್ತಿದ್ದಾರೆ. ಈ ಘಟನೆ ನಂತರ ಅವರ ವಿರುದ್ಧ  ೧,೨೫೦ ಪ್ರಕರಣಗಳು ದಾಖಲಾದವು. ಅವುಗಳಲ್ಲಿ  ೩ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಅಷ್ಟರ ಮಟ್ಟಿಗೆ ಹುಸೇನ್ ಅವರನ್ನು ರಕ್ಷಿಸುವ ಯತ್ನ ನಡೆದಿದೆ.

೯೨ನೇ ವರ್ಷದಲ್ಲಿ  ಕೇರಳ ಸರಕಾರ ರಾಜಾ ರವಿ ವರ್ಮ ಪ್ರಶಸ್ತಿಯನ್ನು  ನೀಡಿತು. ಇದು ಮತ್ತೊಂದು ವಿವಾದವನ್ನು ಸೃಷ್ಟಿಸಿತು.  ೨೦೦೮ರಲ್ಲಿ  ಮಹಾಭಾರತದಲ್ಲಿ  ಬರುವ ಗಂಗಾ ಜಮುನ ಯುದ್ಧ  ವಿವರಿಸುವ ಚಿತ್ರ ಬರೆದು ೧೬ ಲಕ್ಷ  ಡಾಲರ್ ಗಳಿಸಿದರು. ಇಂಥ ಅದೆಷ್ಟೋ  ಚಿತ್ರ ಬರೆದು ರೊಕ್ಕ  ಎಣಿಸುವಾಗ ಅವರಿಗೆ ದೇಶದ ನೆನಪಾಗಲಿಲ್ಲ. ದೇಶದಿಂದ ಇಷ್ಟೆಲ್ಲ  ಪಡೆದ ಹುಸೇನ್, ದೇಶಕ್ಕಾಗಿ ಏನು ಮಾಡಿದ್ದಾರೆ? ಹಿಂದುಗಳ ಕಥೆ ಒತ್ತಟ್ಟಿಗಿರಲಿ, ಸಂಕಷ್ಟದಲ್ಲಿರುವ ಅನೇಕ ಮುಸ್ಲೀಂ ಬಂಧುಗಳಿದ್ದಾರೆ. ಅವರಿಗಾಗಿ ಹುಸೇನ್ ನೀಡಿರುವ ಕಾಣಿಕೆ ಏನು? ಊಹುಂ, ಎಷ್ಟು  ತಡಕಾಡಿದರೂ ಸಿಗುವುದಿಲ್ಲ. ಯಾಕಂದ್ರೆ, ದೇಶದಿಂದ ಲಾಭ ಪಡೆದರೂ ಹೊರತೂ, ದೇಶಕ್ಕಾಗಿ ಏನು ನೀಡಲಿಲ್ಲ.

೧೯೯೮ರಲ್ಲಿ  ಹುಸೇನ್ ಮನೆ ಮೇಲೆ ದಾಳಿ ನಡೆಯಿತು. ಬಜರಂಗದಳ, ಶಿವಸೇನೆ  ಕಾರ್‍ಯಕರ್ತರು ಈ ದಾಳಿಯ ಮುಂದಾಳತ್ವ ವಹಿಸಿದ್ದರು. ಅಲ್ಲಿಂದ  ನಂತರ  ಹುಸೇನ್ ಮೇಲೆ ಸರಣಿ ಪ್ರಕರಣಗಳು ದಾಖಲಾದವು. ಸಮನ್ಸ್‌ಗೆ  ಪ್ರತಿಕ್ರಿಯಿಸಲು ವಿಫಲವಾದ ಇವರಿಗೆ, ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಕೂಡ ನೀಡಿತು.  ಇದೆನ್ನಲ್ಲ  ನೋಡಿ ಭಯಗೊಂಡ ಮಹಾನುಭವರು ದೇಶ ಬಿಟ್ಟರು. ದುಬೈ, ಲಂಡನ್‌ಗಳಲ್ಲಿ  ವಾಸಿಸಲು ಶುರುವಿಟ್ಟರು. ಈಗ ಖತಾರ್‌ಗೆ ಹೋಗುತ್ತಿದ್ದಾರಂತೆ!

ಫೆ.೬, ೨೦೦೬ರಂದು ಇಂಡಿಯಾ ಟುಡೆ ನಿಯತಕಾಲಿಕೆ ‘ಆರ್ಟ್ ಫಾರ್ ಮಿಸನ್ ಕಾಶ್ಮೀರ್’ ಎಂಬ ಹೆಸರಲ್ಲಿ  ಜಾಹೀರಾತನ್ನು ಪ್ರಕಟಿಸಿತು. ಅದರಲ್ಲಿ  ಭಾರತ ಮಾತೆ ಬೆತ್ತಲಾಗಿದ್ದಳು. ಮ್ಯಾಪ್‌ನ ನಾನಾ ಕಡೆಗಳಲ್ಲಿ  ದೇಶದ ರಾಜ್ಯಗಳು ಹಂಚಿಹೋಗಿದ್ದವು. ಈ ಚಿತ್ರ ಪ್ರದರ್ಶನವನ್ನು  ನಾಫಿಸ ಅಲಿ ಆಫ್ ಆಕ್ಷನ್ ಇಂಡಿಯಾ(ಎನ್‌ಜಿಒ) ಮತ್ತು ಅಪ್ಪಾರಾವ್ ಆರ್ಟ್ ಗ್ಯಾಲರಿಗಳು ಹಮ್ಮಿಕೊಂಡಿದ್ದವು. ಈ ಚಿತ್ರದ ಕತೃವಿಗೆ ಭಾರತ ರತ್ನ ನೀಡಬೇಕೆಂದು ಕೆಲವರು ವಾದಿಸಿದರು!

ಅಭಿವ್ಯಕ್ತಿ ನಿಜ, ಆದರೆ ಅದಕ್ಕೂ ಒಂದು ಮಿತಿ ಇರಬೇಕಲ್ಲ? ಡೆನ್ಮಾರ್ಕ್‌ನ ಪತ್ರಿಕೆಯೊಂದರಲ್ಲಿ  ಪ್ರಕಟವಾದ ಪೈಗಂಬರ್ ವ್ಯಂಗಚಿತ್ರವನ್ನು  ಸ್ಥಳೀಯ ಪತ್ರಿಕೆಯೊಂದು ಪ್ರಕಟಿಸಿತ್ತು. ಆಗ ರಾಜ್ಯದಲ್ಲಿ  ಗಲಭೆ ನಡೆಯಿತು. ಪತ್ರಿಕೆ ಸಂಪಾದಕರು ಬಂಧನಕ್ಕೆ ಒಳಗಾದರು. ಇದು ಈಗೊಂದು ೩-೪ ವರ್ಷದ ಹಿಂದಿನ ಘಟನೆ. ಆದರೆ, ಹಿಂದು ದೇವತೆ ಬೆತ್ತಲೆ ಚಿತ್ರ ಬಿಡಿಸಿದ ಕಲಾವಿದ, ಭಾರತ ರತ್ನ ಪ್ರಶಸ್ತಿ ಅಪೇಕ್ಷಿತರ ಪಟ್ಟಿಯಲ್ಲಿದ್ದಾನೆ. ಅವರು ದೇಶ ಬಿಟ್ಟು  ಹೊರಟ್ಟಿದ್ದಕ್ಕೆ ಹಲವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕೆಲವರಿಗೆ, ಅವರ ಹೆಂಡತಿಯ ಬೆತ್ತಲೆ ಚಿತ್ರ ಬರೆದು ಮಾರಾಟ ಮಾಡಿದಾಗ ಮಾತ್ರ ಅಭಿವ್ಯಕ್ತಿ ಪದದ ಅರ್ಥ ತಿಳಿಯಬಹುದೇನೋ ಅಲ್ವಾ?!

Read Full Post »