ನನ್ನ ಪಾಲಿಗಿದು ಮೊದಲ ಸಾಹಿತ್ಯ ಸಮ್ಮೇಳನ. ಸಭಾಂಗಣಕ್ಕೆ ಬಹುಶಃ ಒಂದೇ ಪ್ರವೇಶ ದ್ವಾರ ಅಂದುಕೊಳ್ಳುತ್ತೇನೆ. ಅಲ್ಲಿನ ಜನಜಗುಂಳಿ ನೋಡಿಯೇ ದಂಗಾಗಿ ಹೋಗಿದ್ದೆ. “ಸರ್, ಸರಕಾರಿ ಅಧಿಕಾರಿಗಳಿಗೆ ಅಟೆಂಡೆನ್ಸ್ ಸರ್ಟಿಫಿಕೆಟ್ ಎಲ್ಲಿ ಕೊಡ್ತಾರೆ? ನಿನ್ನೆ ಎಲ್ಲ ಕಡೆ ಹುಡುಕಾಡಿದೆ ಸಿಗಲಿಲ್ಲ…ಅಲ್ಲಿ ನಿಂತಿದ್ದ ಪೋಲಿಸ್ ಪ್ಯಾದೆಯ ಬಳಿ ಕೇಳಿದವರು ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕರಂತೆ.
ಎಷ್ಟು ಜಿಲ್ಲೆಯಿಂದ ಯಾವ್ಯಾವ ಇಲಾಖೆಯವರು ಬಂದಿರಬಹುದು ಎಂದು ಲೆಕ್ಕ ಹಾಕುತ್ತಾ ನಡೆಯುವಾಗ ಗೊತ್ತಿಲ್ಲದಂತೆ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪ್ರವೇಶವಾಗಿದ್ದೆ. ಎಡಗಡೆ ಪುಸ್ತಕ ಮಳಿಗೆಗಳು. ಬಲಗಡೆ ಸಭಾಂಗಣ. ಎಲ್ಲಿಗೆ ಹೋಗಬೇಕು ಎಂದು ನಿರ್ಧಾರ ಮಾಡಿರಲಿಲ್ಲ. ಅಲ್ಲಿನ ಹಲವರು ನನ್ನಂತೆ ಗೊಂದಲದಲ್ಲಿ ಇದ್ದಂತಿತ್ತು.
ಮೈದಾನದ ಧೂಳು ಮೂಗಿಗರಚುತ್ತಿತ್ತು. ಜನಪದ ಗೋಷ್ಠಿಯಲ್ಲಿ ಗಣ್ಯರೊಬ್ಬರು ಮಾತನಾಡುತ್ತಿದ್ದರು. ಲಕ್ಷಾಂತರ ಜನ ಸಮ್ಮೇಳನಕ್ಕೆ ಜಮಾಯಿಸಿದ್ದು ನಿಜವಾದರೂ, ಸಭಾಂಗಣದಲ್ಲಿ ಸಾಕಷ್ಟು ಕುರ್ಚಿಗಳು ಖಾಲಿಯಿದ್ದವು. ಕುಳಿತ್ತಿದ್ದವರಲ್ಲಿ ಬಹುತೇಕರಿಗೆ ಹಳೆಯ ಗೆಳೆಯರು, ಬಂಧುಗಳು ಸಿಕ್ಕಿದ್ದರು ಅನ್ನಿಸತ್ತೆ. ಕುರ್ಚಿಗಳನ್ನು ತಮಗೆ ಬೇಕಾದಂತೆ ತಿರುಗಿಸಿಕೊಂಡು ಹರಟೆ ಹೊಡೆಯುತ್ತಿದ್ದರು. ವೇದಿಕೆ ಮೇಲೆ ವಿಚಾರ ಮಂಥನ ನಡೆಯುತ್ತಲೆ ಇತ್ತು. ವೇದಿಕೆ ಮೇಲಿದ್ದವರಿಗೆ ಇಂಥ ಬೃಹತ್ ಸಭೆಗಳಲ್ಲಿ ಮಾತನಾಡಿ ಅಭ್ಯಾಸವಾಗಿರಬೇಕು ಬಹುಶಃ. ಹಾಗಾಗಿ ನನ್ನ ಗಮನಕ್ಕೆ ಬಂದ ಯಾವ ವಿಚಾರಗಳೂ ಅವರ ಗಮನಕ್ಕೆ ಬರಲಿಲ್ಲ. ಅವರ ಪಾಡಿಗೆ ಅವರು ಮಾತನಾಡುತ್ತಲೆ ಇದ್ದರು.
ಪುಸ್ತಕ ಮಳಿಗೆಯಲ್ಲಿ ಟೀ ಶರ್ಟ್ ಮಾರಾಟ ಮಾಡುವಂತಿಲ್ಲ…ಎಂಬ ಗಣ್ಯರ ಘರ್ಜನೆ ಕುರಿತು ಯಾರೋ ಬರೆದಿದ್ದು ಈಗಷ್ಟೆ ಓದಿದೆ. ಅದು ಲಾಭಿಯ ಒಂದು ಗುಟುಕು. ಉಳಿದ ವಿಚಾರಗಳಲ್ಲಿ ನಡೆಯುವ ಇಂಥ ಲಾಭಿ ನೋಡಿದರೆ ದಂಗಾಗುತ್ತದೆ…ಅಂದ ಸಂಸ್ಕೃತಿ, ಸಾಹಿತ್ಯದ ವರದಿಗಾರಿಕೆ ಮಾಡುವ ಗೆಳೆಯನೊಬ್ಬ. ಹಾಗಿದ್ದಲ್ಲಿ ಸಮ್ಮೇಳನ ನಡೆಸುವುದು ಯೋಗ್ಯವಾಗಿದೆ ಬಿಡು. ಒಂತರಹ ರಸ್ತೆ ಗುತ್ತಿಗೆ ನೀಡಿದ ಹಾಗೆ, ಮೋರಿ ರಿಪೇರಿಗೆ ಟೆಂಡರ್ ಕರೆದ ಹಾಗೆ ಸಾಹಿತ್ಯ ಸಮ್ಮೇಳನ ಅಂದುಕೊಳ್ಳೋಣ. ಸಮ್ಮೇಳನದ ನೆಪದಲ್ಲಾದರೂ ಕನ್ನಡದ ಬಾವುಟ ಹಾರುತ್ತದೆ. ಒಂದಷ್ಟು ಕನ್ನಡ ಪುಸ್ತಕಗಳು ಖರ್ಚಾಗುತ್ತವೆ…ಅಷ್ಟೊತ್ತಿಗೆ ಆತನ ಮಾತು ಊಟದತ್ತ ಹೊರಳಿತು.
ಊಟಕ್ಕೆ ಗಲಾಟೆ ನಡೆಯದ ಸಮ್ಮೇಳನವೇ ಇಲ್ಲ ಎಂಬುದು ಅನೇಕರ ಅಭಿಪ್ರಾಯ. ಶುಕ್ರವಾರದ ದಿನ ಊಟಕ್ಕಾಗಿ ಆದ ಗಲಾಟೆ ನೋಡಿ ಆ ಅಭಿಪ್ರಾಯ ನಿಜ ಅನ್ನಿಸಿತು. ಸಾಹಿತ್ಯ ಸಮ್ಮೇಳನ ಮತ್ತೊಂದು ಸಿಟಿ ಮಾರುಕಟ್ಟೆ ಥರ ಇದೆ ಅಂದಿದ್ದಕ್ಕೆ ಕೆಲ ಗೆಳೆಯರು ಆಕ್ಷೇಪಿಸಿದ್ದಾರೆ. ನಿಜ, ಜನ ಜಾಸ್ತಿ ಆದ್ರೆ ಜಾತ್ರೆ ಅನ್ನುತ್ತೇವೆ. ಕಡಿಮೆ ಆದ್ರೆ ಸಮ್ಮೇಳನ ವಿಫಲ ಅನ್ನುತ್ತೇವೆ. ಆ ಬಗ್ಗೆ ನನ್ನ ತಕರಾರು ಇಲ್ಲ. ಆದ್ರೆ ಇಂಥ ಸಮ್ಮೇಳನ ಯಾಕೆ ಎಂಬುದು ಪ್ರಶ್ನೆ.
ಉಚಿತ ಊಟವನ್ನು ಮೊದಲು ರದ್ದು ಮಾಡಬೇಕು. ನಾವು ಬರುವುದು ಸಾಹಿತ್ಯದ ಮೇಲಣ ಪ್ರೀತಿಗೆ ಹೊರತೂ, ಊಟಕ್ಕಾಗಿ ಅಲ್ಲ ಎಂಬುದು ಖಾತ್ರಿಯಾಗಬೇಕು. ಹಾಜರಾತಿ ಕೊಡುತ್ತೇವೆ ಎಂದು ಸರಕಾರಿ ಕಚೇರಿಗಳಿಗೆ ಆದೇಶ ನೀಡುವುದು ಬಿಡಬೇಕು. ಜಿಲ್ಲಾ ಕೇಂದ್ರಗಳಿಂದ ಉಚಿತ ವಾಹನದಲ್ಲಿ ಜನ ಕರೆದುಕೊಂಡು ಬರುವುದಕ್ಕೆ ಕಡಿವಾಣ ಬೀಳಬೇಕು. ಹಾಗೆ ಮಾಡಲು ಇದೇನು ರಾಜಕಾರಣಿಗಳ ಸಭೆ ಅಲ್ಲ ಅಲ್ವಾ?
ಗೋಷ್ಠಿಗಳ ಕಥೆಯ ಕುರಿತು…ಕನ್ನಡದ ಸ್ಥಿತಿ ಗತಿ ಚರ್ಚಿಸಲು ನಾವು ಇಂಥ ಸಮ್ಮೇಳನ ನಡೆಸುವುದು ಎಂಬುದು ಖಂಡಿತ ನಿಜ. ಆದರೆ ಆ ಚರ್ಚೆ ಹೇಗಿರಬೇಕು ಎಂಬುದು ಮುಖ್ಯವಾದ ಪ್ರಶ್ನೆ. ೩-೪ ದಿನ ಗೋಷ್ಠಿಗಳು ನಡೆಬೇಕು ಎಂದೇನಿಲ್ಲ. ನಡೆದ ಚರ್ಚೆ ವ್ಯವಸ್ಥಿತವಾಗಿದ್ದರೆ, ಮಾತನಾಡಿದ್ದು ಸಾರ್ಥಕವಾಗುತ್ತದೆ. ಗೋಷ್ಠಿ ನಡೆಯುತ್ತಿರುತ್ತದೆ. ಒಬ್ಬ ಮಜ್ಜಿಗೆ ಮಾರುತ್ತಾನೆ, ಇನ್ನೊಬ್ಬ ಪಾಪ್‌ಕಾರ್ನ್ ಮಾರುತ್ತಾನೆ, ಮತ್ತೊಬ್ಬ ಐಸ್‌ಕ್ರೀಂ ಹಿಡಿದು ಬರುತ್ತಾನೆ. ಈ ಕರ್ಮಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೇದಿಕೆ ನಿರ್ಮಿಸುವ ಅವಶ್ಯಕತೆಯಿದೆಯಾ?
ಇನ್ನು ಗೋಷ್ಠಿಗಳಲ್ಲಿ ಮಾತನಾಡುವವರನ್ನು ಯಾವ ಮಾನದಂಡದಿಂದ ಆಯ್ಕೆ ಮಾಡುತ್ತಾರೆ ಮತ್ತು ಯಾರು ಆಯ್ಕೆ ಮಾಡುತ್ತಾರೆ ಎಂಬುದು ನನಗಂತೂ ತಿಳಿದಿಲ್ಲ. ಅದಕ್ಕೆ ಸಾಹಿತಿಗಳ ಸಮಿತಿ ರಚನೆಯಾಗುತ್ತದೆಯಾ ಅಥವಾ ಪರಿಷತ್ತಿನ ಪದಾಧಿಕಾರಿಗಳಿಂದ ಆಯ್ಕೆ ನಡೆಯುತ್ತದೆಯಾ? ಗೊತ್ತಿದ್ದವರು ತಿಳಿಸಿ.
ಸಮ್ಮೇಳನ ಮುಗಿದ ನಂತರ ಕಾಗದ, ಪ್ಲಾಸ್ಟಿಕ್ ಕಸ, ಸಮ್ಮೇಳನದಲ್ಲಿ ಹೊರ ಬಂದ ರಾಜಕಾರಣಿಗಳ ಹುಸಿ ಭರವಸೆ, ಕನ್ನಡದ ಭಾಷಣ ಬಿಗಿದು ಮಕ್ಕಳನ್ನು ಆಂಗ್ಲ ಶಾಲೆಗೆ ಕಳುಹಿಸುವ ಸಾಹಿತಿಗಳು ಇದರ ಹೊರತಾಗಿ ಮತ್ತ್ಯಾವ ಫಲಿತಾಂಶವೂ ನನಗಂತೂ ಕಾಣುತ್ತಿಲ್ಲ. ರಸ್ತೆ, ಮೋರಿ ಟೆಂಡರ್‌ನ ಹಾಗೆ ಈ ಸಮ್ಮೇಳನವೂ ಒಂದು ಎಂದು ಭಾವಿಸುವುದಾದರರೆ, ಖಂಡಿತ ಅದಕ್ಕೆ ನಮ್ಮದೂ ಜೈಹೊ! ಅದಿಲ್ಲ, ಒಂದು ನಿದಿರ್ಷ್ಠ ಗುರಿ ಇಟ್ಟುಕೊಂಡು ಸಮ್ಮೇಳನ ನಡೆಸುತ್ತೇವೆ ಎಂದಾದರೆ, ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ ಅಷ್ಟೆ. ನಾನೊಬ್ಬ ಸಾಹಿತಿ ಅಂತಾ ಸ್ವಯಂ ಘೋಷಣೆ ಮಾಡಿಕೊಂಡರೂ, ಅದನ್ನು ಒಪ್ಪಲು ಯಾರೂ ತಯಾರಿಲ್ಲ!!! ನೀವು ಒಪ್ಪಲು ಕೇಳುವ ಯಾವ ಆಧಾರವೂ ನನ್ನಲ್ಲಿ ಇಲ್ಲ. ಹೀಗಾಗಿ ಈ ಹಿಂದಿನ ೭೬ ಸಮ್ಮೇಳನಗಳಿಂದಾದ ಲಾಭ ನನಗೆ ತಿಳಿದಿಲ್ಲ. ಆದ್ದರಿಂದ ಈ ಲೇಖನ ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ…