Feeds:
ಲೇಖನಗಳು
ಟಿಪ್ಪಣಿಗಳು

Archive for ಏಪ್ರಿಲ್, 2009

ಒಂದು ಪುಸ್ತಕ ಬಿಡುಗಡೆ  ಆ ಪರಿ ಜನ ಸೇರಬಹುದೆಂದು ಬಹುಶಃ ಯಾರೂ ನಿರೀಕ್ಷಿಸಿರಲು ಸಾಧ್ಯವೇ ಇಲ್ಲ. ರವೀಂದ್ರ ಕಲಾ ಕ್ಷೇತ್ರದ ಎರಡೂ ಅಂತಸ್ತು ಭರ್ತಿಯಾಗಿತ್ತು. ಅಮ್ಮನ ಅಭಿಮಾನಿಗಳು, ಮಣಿಯ ಅಭಿಮಾನಿಗಳು, ಪ್ರಕಾಶ್ ರೈಯನ್ನು  ಪ್ರೀತಿಸುವವರು…ವೇದಿಕೆಯಲ್ಲಿದ್ದ  ದಿಗ್ಗಜರ ಅಭಿಮಾನಿ ಬಳಗವೇ ಅಲ್ಲಿತ್ತು…

ಮುಂಚೆ ಬಂದ  ೩೦೦ ಮಂದಿಗೆ ಮಾತ್ರ ತಿಂಡಿ ವ್ಯವಸ್ಥೆ.  ಬೇಗ ಬಂದುಬಿಡಿ  ಅಂತಾ ಮಿತ್ರರಾದ ಜೆ.ಪಿ ಸರ್ ಹಿಂದಿನ ದಿನವೇ ಆಫೀಸ್‌ನಲ್ಲಿ   ಜೋಕ್ ಮಾಡಿದ್ದರು. ಜೆ.ಪಿ ಸರ್ ಜೋಕಿನಿಂದಲೇ ನನಗಂತೂ ಸೀಟು ಸಿಕ್ಕಿದ್ದು  ಅಂದರೂ  ತಪ್ಪಾಗಲಾರದು. (ಲೇಟಾಗಿ ಬಂದ ಜೆ.ಪಿ ನಿಂತುಕೊಂಡೇ ಕಾರ್ಯಕ್ರಮ ವಿಕ್ಷಿಸಿದರು ಅನ್ನಿಸತ್ತೆ!)  ಅಮ್ಮನೆಂಬ  ಭಾವಜೀವವನ್ನು  ವೇದಿಕೆಗೆ  ಕರೆತಂದಿದ್ದು  ಗೀತೆಯ ದಿಬ್ಬಣ. ಉಪಾಸನ ಮೋಹನ್ ತಂಡದ ಗೀತಗಾಯನದಿಂದ ಕಾರ್ಯಕ್ರಮಕ್ಕೆ  ಚಾಲನೆ ದೊರೆಯಿತು.

ಪ್ರಕಾಶ್ ರೈ  ಅವರು ಒನ್‌ಡೌನ್‌ನಲ್ಲಿ  ಬರುತ್ತೇನೆಂದು ಪಟ್ಟು  ಹಿಡಿದ ಕಾರಣ, ಕೃಷ್ಣೆ  ಗೌಡರನ್ನು  ಒಪನಿಂಗ್ ಇಳಿಸುವುದು  ಅನಿವಾರ್ಯವಾಯಿತು! ಗೌಡರು ಎಷ್ಟಂದರೂ  ಹರಟೆ ಮಲ್ಲರು! ನನಗಂತೂ ಗೌಡರ ಮಾತು ಹೊಸತಲ್ಲ. ಹಾಗಾಗಿ ನಿರೀಕ್ಷೆಯಂತೆ  ಭರ್ಜರಿ  ಬ್ಯಾಟಿಂಗ್. ತಂಡಕ್ಕೆ ಭದ್ರವಾದ ಬುನಾದಿ. ಹರಟೆಯಲ್ಲಿ  ನಗಿಸಲಿಕ್ಕಾಗಿಯೇ ಒಂದಷ್ಟು  ಜೋಕ್ಸ್  ಹೇಳುವ ಗೌಡರು, ಇಲ್ಲಿ  ತುಂಬಾ ಗಂಭಿರವಾಗಿ, ಕಳಕಳಿಯುತವಾಗಿಯೇ ಮಾತನಾಡಿದರು  ಅಂದರೂ ತಪ್ಪಿಲ್ಲ.  ಪುಸ್ತಕದ ಕುರಿತಾಗಿ  ಮಾತನಾಡಬೇಕಿದ್ದ  ಗೌಡರು ಸ್ವಲ್ಪ  ಜಾಸ್ತಿ  ಹೊತ್ತು  ಮಾತಾಡಿದರೂ ಕೂಡ, ಕುಳಿತವರ್‍ಯಾರಿಗೂ ಬೋರ್ ಬರಲಿಲ್ಲ. ಯಾಕೆಂದರೆ ತುಂಬಾ ಜವಬ್ದಾರಿಯುತವಾಗಿ ಮಾತಾಡಿದ್ದರು.

ಪ್ರಕಾಶ್ ರೈ  ಅವರು ಒನ್‌ಡೌನ್‌ನಿಂದಲೂ ತಪ್ಪಿಸಿಕೊಂಡರು! ಹಾಗಾಗಿ ‘ರವಿ ಬೆಳೆಗೆರೆ’ ಎಂಬ ಮಾತಿನ ಮಾಂತ್ರಿಕ ಫೀಲ್ಡ್‌ಗೆ ಇಳಿಯುವುದು  ಅನಿವಾರ್ಯವಾಯಿತು.  ಪದ್ಮನಾಭನಗರದ  ಕ್ಷುದ್ರಮಾಂತ್ರಿಕರ ಮನೆ ಹತ್ತಿರದ ಪ್ರಭಾವ ಬೆಳೆಗೆರೆ ಅವರ  ಮಾತಿನಲ್ಲಿ  ಪ್ರತಿಧ್ವನಿಸುತ್ತಿತ್ತು! ಅಮ್ಮನ  ಸುಳ್ಳು  ಭಾವಗಳನ್ನು ಮೀಟಿದರೆ, ಅಪ್ಪನ  ಸುಳ್ಳು ನಗೆಗಡಲಿನಲ್ಲಿ  ಪ್ರೇಕ್ಷಕ ವರ್ಗವನ್ನು ಮುಳುಗಿಸಿತ್ತು.  ಪ್ರಿಯ ವಿಕ್ಷಕರೇ, ಮಂದೇನಾಯಿತು ವಿಕ್ಷೀಸಿ ಚಿಕ್ಕದ್ದೊಂದು ಬ್ರೇಕ್‌ನ ನಂತರ…ಅನ್ನುವಂತಿತ್ತು  ನಡುವೆ ನುಸುಳಿ ಬಂದ ಸನ್ಮಾನ, ಕೃತಜ್ಞತೆಯ ಕಾರ್ಯಕ್ರಮ!

ಇನ್ನು  ತಡವಾಗಿ ಇಳಿದರೆ  ಆಡಲು ಓವರ್ ಸಿಗುವುದಿಲ್ಲ  ಎಂದು ಖಾತ್ರಿ ಪಡಿಸಿಕೊಂಡ ರೈ, ಕೊನೆಗೂ  ಮಾತಿಗಿಳಿದರು. ಆಡಿದ್ದು  ಕಡಿಮೆ  ಮಾತು. ಆದ್ರೂ  ತುಂಬಾ ಸೊಗಸಾಗಿತ್ತು. ‘ರೈ’ ಅವರಿಗೆ ಕನ್ನಡ ಮರೆತಿಲ್ಲ  ಎಂಬುದು ಪ್ರೇಕ್ಷಕನಿಗೆ ಖಾತ್ರಿಯಾಗುವ ಹೊತ್ತಿಗೆ ಮಾತು ನಿಲ್ಲಿಸಿಬಿಟ್ಟಿದ್ದರು!

ಅಧ್ಯಕ್ಷೀಯ ಭಾಷಣ… ಒಂತರಹ ಕ್ಯಾಪ್ಟನ್ ಆಟ…ಸಭೆಗೆ ತಕ್ಕದಾದ ಬ್ಯಾಟಿಂಗ್…ಎಲ್ಲರ ಮಾತನ್ನು ಕ್ರೋಢಿಕರಿಸಿ,  ಸಭಾ ಧ್ವನಿಯನ್ನು ಮೊಳಗಿಸಿದವರು ವಿಶ್ವೇಶ್ವರ ಭಟ್ ಸರ್. ‘ಮಣಿಕಾಂತ್’ ಎಂಬ ವ್ಯಕ್ತಿತ್ವವನ್ನು  ಪರಿಚಯಿಸಿದವರು, ಆಲೂಗಡ್ಡೆ  ಧಾರಣೆ ಬರೆಯುತ್ತಿದ್ದ ಮಣಿಕಾಂತ್, ಬೆಳೆದ ಪರಿಯನ್ನು ವಿವರಿಸಿದವರು…ಈ ಎಲ್ಲ   ಕ್ರೆಡಿಟ್  ಕೂಡ  ಭಟ್ ಸರ್‌ಗೆ ಸಲ್ಲುತ್ತದೆ. ಹಾಗಾಗಿಯೇ  ಅವರ ಮಾತಿಗೆ ಸಭೀಕರಿಂದ ಗಂಭಿರವಾದ ಚಪ್ಪಾಳೆ…ಕಾರ್ಯಕ್ರಮ ಮುಗಿದೇ ಹೋಗಿತ್ತು.  ಅದಾಗಲೇ  ಗಂಟೆ  ಒಂದುವರೆಯಾಗಿದ್ದ  ಕಾರಣ, ಮತ್ತೆ  ಗೀತೆ  ಹಾಡಿದರೂ  ಜನರಲ್ಲಿ  ಭಾವನೆ ಮೂಡಲಾರದು ಎಂಬುದು  ಆಯೋಜಕರಿಗೆ ಖಾತ್ರಿಯಾಗಿತ್ತು.

ಒಂದು ಚೆಂದದ ಕಾರ್ಯಕ್ರಮ. ಅದಕ್ಕೆ ಮಣಿಕಾಂತ್ ಅವರ ಬರವಣಿಗೆ ಮತ್ತು ವ್ಯಕ್ತಿತ್ವ  ಎರಡು ಕೂಡ ಕಾರಣ ಅನ್ನಲೇ ಬೇಕು. ಜತೆಗೆ ಅಮ್ಮನೆಂಬ ಜೀವವೂ  ಕಾರಣ. ಅಂದಹಾಗೆ ಪುಸಕ್ತ,   ಕಾರ್ಯಕ್ರಮಕ್ಕಿಂತಲೂ  ಸೊಗಸಾಗಿದೆ. ಹಾಗಾಗಿ, ಕಾರ್ಯಕ್ರಮ ತಪ್ಪಿಸಿಕೊಂಡವರು ವ್ಯಥೆಪಡಬೇಕಾದ  ಅವಶ್ಯಕತೆ  ಖಂಡಿತವಾಗಿಯೂ  ಇಲ್ಲ…

ಅಮ್ಮ ಬಚ್ಚಿಟ್ಟ  ಸುಳ್ಳುಗಳ ನೆನಪಿನಿಂದಲಾದರೂ ವೃದ್ದಾಶ್ರಮಗಳ ಸಂಖ್ಯೆ ಕಡಿಮೆಯಾಗಬಹುದಾ? ಹೆಂಡತಿ  ಬಂದ ಕೂಡಲೇ ಹಲವಾರು ನೆವ ಹೇಳಿ ಅಮ್ಮನನ್ನು ದೂರ ಮಾಡುವ ಮಕ್ಕಳ ಸಂಖ್ಯೆ ಕ್ಷೀಣಿಸಬಹುದಾ? ಆ ಮಗನ ಮನೆಯಲ್ಲಿ  ಮೂರು ತಿಂಗಳು ಇರು, ನಾನು ಮಾತ್ರ ನಿನ್ನ  ಮಗನಾ ಎಂದು ಗೊಣಗುವವರು ಪರಿವರ್ತನೆ  ಆಗಬಹುದಾ…ಎಂಬುದೆಲ್ಲ   ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಏಕೆಂದರೆ, ಒಂದು ಪುಸ್ತಕ, ತನ್ನ  ವ್ಯಾಪ್ತಿಗೆ  ನಿಲುಕಿದಷ್ಟು  ಮಾತ್ರ ಪರಿವರ್ತನೆ ಮಾಡಬಹುದು ಅಲ್ವಾ?

Read Full Post »

ತುಂಬಾ ಹಿಂದೇನಲ್ಲ, ಈಗೊಂದು ೮-೧೦ ವರ್ಷದ ಕೆಳಗೆ ನಮ್ಮೂರಿನಲ್ಲಿದದ್ದು ಒಂದೇ ಟಿ.ವಿ! ನಮ್ಮೂರಿನಲ್ಲಿ ಮಾತ್ರವಲ್ಲ, ನಮ್ಮ ಸುತ್ತ-ಮುತ್ತಲಿನ ಬಹುತೇಕ ಹಳ್ಳಿಗಳ ಕಥೆಯೂ ಹಾಗೇ ಇತ್ತು. ಊರಿಗೊಂದು ಟಿ.ವಿ, ಕೇರಿಗೊಂದು ಫೋನು, ನೂರಾರು ಮನೆಗಳಿಗೊಂದು ಕಾರು…

ಪ್ರತಿ ಭಾನುವಾರ ಬರುತ್ತಿದ್ದ ‘ಶ್ರೀ ಕೃಷ್ಣ’ ಮತ್ತು ‘ಜೈ ಹನುಮಾನ್’ ಧಾರಾವಾಹಿಗಳು ಆಗಿನ ಕಾಲದಲ್ಲಿ ಬಹು ಜನಪ್ರಿಯ. ಭಾನುವಾರ ಬೆಳಿಗ್ಗೆ ೯ ಗಂಟೆಯಾಯಿತೆಂದರೆ, ಅರ್ಧದಷ್ಟು ಊರು ಮೀನಾಕ್ಷಕ್ಕನ ಮನೆಯ ಟಿ.ವಿ ಮುಂದಿರುತ್ತಿತ್ತು. ಸೋಮವಾರದಿಂದ-ಶುಕ್ರವಾರದವರೆಗೆ ಸಂಜೆ ೪.೩೦ ಆಯಿತೆಂದರೆ ಊರಿನ ಹೆಂಗಸರಿಗೆಲ್ಲ ‘ಮಾಯಾಮೃಗ’ದ ಮೋಡಿ! ಭಾನುವಾರ ಸಂಜೆ ೪ ಗಂಟೆಗೆ ದೂರದರ್ಶನದ ಪರದೆ ಮೇಲೆ ಮೂಡಿ ಬರುತ್ತಿದ್ದ ಕನ್ನಡ ಚಲನಚಿತ್ರ ಪ್ರದರ್ಶನ ತಪ್ಪಿಸಿಕೊಂಡರೆ, ಏನ್ನನ್ನೋ ಕಳೆದುಕೊಂಡ ಭಾವ!

ಅಂದಹಾಗೆ, ಡಿಶ್ ಎಂಬುದು ಕೂಡ ನಮ್ಮೂರಿಗೆ ಕಾಲಿಟ್ಟಿದ್ದು ತೀರಾ ಇತ್ತೀಚೆಗೆ. ಆವತ್ತಿನ ದಿನಗಳಲ್ಲಿ ನಮಗೆ ಗೊತ್ತಿದದ್ದು ‘ಡಿಡಿ.೧’ ಎಂಬ ಕರ್ಮಠ ಸರಕಾರಿ ಚಾನೆಲ್ ಮಾತ್ರ!

ಅಂಗಡಿಯಲ್ಲೊಂದು ಸಾರ್ವಜನಿಕ ಫೋನ್. ಅದನ್ನು ಬಿಟ್ಟರೆ, ಖಂಡಿಕದ ಹೆಗಡೆಯವರ ಮನೆ, ಗೀಜಗಾರು ಅನಂತಣ್ಣನ ಮನೆ, ಗೋಳಗೋಡು ಸುಬ್ರಾಯರ ಮನೆ ಪೋನು…ಸರಿಯಾಗಿ ಲೆಕ್ಕ ಹಾಕಿದರೆ, ಇಡೀ ಸಾಗರ ತಾಲೂಕಿನಲ್ಲಿ ಒಟ್ಟು ೧೦೦ ಫೋನ್‌ಗಳು ಇರಿಲಿಲ್ಲವೇನೋ!

ಹೆಗಡೆಯವರ ಮನೆ ಕಾರನ್ನು ಕೈಯಿಂದ ಮುಟ್ಟುವುದು ಒತ್ತಟ್ಟಿಗಿರಲಿ, ದೂರದಿಂದ ನೋಡುವುದೆಂದರೆ ದೊಡ್ಡ ಸಂಭ್ರಮ! ಕಾರು ಇಟ್ಟುಕೊಂಡವ ಹತ್ತೂರಿನಲ್ಲೇ ಆಗರ್ಭ ಶ್ರೀಮಂತ. ಕಾರು ಎಂಬುದು ಅಡಿಕೆ ವ್ಯಾಪಾರದವರ, ನೂರಾರು ಎಕರೆ ಆಸ್ತಿ ಹೊಂದಿದ ಹೆಗಡೆ ಕುಟುಂಬದವರ ಸ್ವತ್ತು…ಶಿರವಂತೆ ಸೀಮೆಗೊಂದು, ಭೀಮನಕೋಣೆ ಕೇರಿಗೊಂದು, ತುಂಬೆ ವಠಾರಕ್ಕೊಂದು…ಹೀಗೆ ಬೆರಳೆಣಿಕೆಯಷ್ಟು ಕಾರುಗಳು ಮಾತ್ರ ನಮ್ಮ ತಾಲೂಕಿನಲ್ಲಿ ಬುರ್‌ಗುಡುತ್ತಿದ್ದವು.

ಈಗ ಕಾಲ ಬದಲಾಗಿದೆ. ಕೈಯಲ್ಲೊಂದು ರಿಮೋಟು, ನಿಮಿಷ ನಿಮಿಷಕ್ಕೂ ಬದಲಾಯಿಸಬಹುದಾದಷ್ಟು ಚಾನೆಲ್‌ಗಳು…ಪ್ರತಿ ಮನೆಯ ಪ್ರವೇಶದ್ವಾರದಲ್ಲಿ ಕಾಣ ಸಿಗುತ್ತದೆ. ಕಾರು ಇಟ್ಟುಕೊಂಡು ದರ್ಪದಿಂದ ಮೆರೆಯುತ್ತಿದ್ದ ಹೆಗಡೆಯವರ ಉತ್ಸಾಹ ಕುಗ್ಗಿಹೋಗಿದೆ. ಹೆಗಡೆಯವರ ಮನೆ ಕೆಲಸ ಮಾಡುತ್ತಿದ್ದ ಮಂಜನ ಮಗನೂ, ಇವತ್ತು ವೆಂಕಟಗಿರಿಯಪ್ಪ ಹೆಗಡೆಯವರ ಎದುರೇ ಕಾರು ಓಡಿಸುತ್ತಾನೆ!

ಟ್ರಿಣ್, ಟ್ರಿಣ್…ಮಕ್ಕಳ ಆಟಿಕೆ ವಸ್ತುವಿದ್ದಂತೆ. ಮನೆಗೆರಡು ಫೋನ್. ಜತೆಗೆ ಆಳಿಗೊಂದು ಮೊಬೈಲ್…

ಟಿ.ವಿ ನೋಡಲು ಹೋದ ನಮ್ಮನ್ನೆಲ್ಲ ಓಡಿಸುತ್ತಿದ್ದ ಮೀನಾಕ್ಷಕ್ಕನ ಎದುರು, ನಿಮ್ಮ ಮನೆ ಟಿವಿ ಒಂದೇ ಅಲ್ಲ ಅಂತಾ ಸಿಟ್ಟಿನಿಂದ ಕೂಗುತ್ತಿದ್ದದ್ದೇನೋ ನಿಜ. ಆದರೆ, ನಮ್ಮ ಮನೆಯಲ್ಲೂ ಒಂದು ಟಿ.ವಿ ಪೆಟ್ಟಿಗೆ ಪ್ರತಿಷ್ಠಾಪನೆಗೊಳ್ಳಬಹುದಾ? ನಾವು ಮುಂದೊಂದು ದಿನ ಬೈಕನ್ನಾದರೂ ಕೊಳ್ಳುವ ಮಟ್ಟಕ್ಕೆ ಬೆಳೆಯುತ್ತೇವಾ ಅಂತೆಲ್ಲ ದಿನಗಟ್ಟಲೇ ಕನಸು ಕಾಣುತ್ತಿದ್ದದಂತೂ ಸುಳ್ಳಲ್ಲ…ಅವೆಲ್ಲ ಈಗ ಬರಹದ ಸರಕುಗಳು ಹೊರತು, ಕನಸು ಕಾಣುವಷ್ಟು ದೊಡ್ಡ ವಸ್ತುಗಳಲ್ಲ ಅಲ್ವಾ?!

Read Full Post »

‘ಜನರಿಂದ, ಜನರಿಗಾಗಿ, ಜನರೇ  ನಡೆಸಲ್ಪಡುವ ಸರಕಾರವನ್ನು ಪ್ರಜಾಪ್ರಭುತ್ವ  ವ್ಯವಸ್ಥೆ  ಪ್ರತಿಪಾದಿಸುತ್ತದೆ…’ ಬಹುಶಃ ಇದು ಐದನೇ  ತರಗತಿಯ ಸಮಾಜ ವಿಜ್ಞಾನದಲ್ಲಿ  ಓದಿದ ಸಾಲುಗಳಿರಬೇಕು.  ‘ನಮ್ಮ ದೇಶದಲ್ಲಿರುವುದು ಪ್ರಜಾಪ್ರಭುತ್ವ  ವ್ಯವಸ್ಥೆ.  ನಮ್ಮ ದೇಶದಲ್ಲಿ  ಇಂಗ್ಲೆಂಡ್ ಮಾದರಿಯ ಸಂಸತ್ತಿದೆ….’ ಇದೂ ಕೂಡ ಸಮಾಜಶಾಸ್ತ್ರದ  ಸಾಲುಗಳು ಅನ್ನುವುದರಲ್ಲಿ  ಅನುಮಾನವೇ ಇಲ್ಲ!

ದೇಶಕ್ಕೆ  ಸ್ವಾತಂತ್ರ್ಯ  ಬಂದು ಆರು ದಶಕಗಳು ಕಳೆದಿವೆ…ಅರ್ಥಾತ್  ಬ್ರಿಟಿಷರ ದಾಸ್ಯದಿಂದ…ಅಲ್ಲಲ್ಲ…ಆಳುವವರ ಕೈಗೆ  ನಮ್ಮ  ದೇಶವನ್ನಿತ್ತು  ಅರವತ್ತು ವರ್ಷಗಳೇ ಕಳೆದಿವೆ. ನಾವು ಆಯ್ಕೆ  ಮಾಡಿದ ಶಾಸಕನೊಬ್ಬನ ಅಕಾರವನ್ನು  ನಮ್ಮಿಂದ ಕಸಿದುಕೊಳ್ಳಲು ಈವರೆಗೆ  ಸಾಧ್ಯವಾಗಿದೆಯಾ? ಸುಮ್ಮನೆ  ಕಸಿದುಕೊಳ್ಳಬೇಕು ಎಂಬುದು ನನ್ನ  ವಾದವಲ್ಲ. ಆತ ನರಸತ್ತ  ಶಾಸಕ, ಭ್ರಷ್ಟ  ಶಾಸಕ…ಅಂತೆಲ್ಲ  ಗೊತ್ತಾದ ಮೇಲಾದರೂ, ಜನರ ನಿರೀಕ್ಷೆಗಳಿಗೆ ಸ್ಪಂದಿಸದೇ  ಹೋದಮೇಲಾದರೂ…ಆ ಕ್ಷೇತ್ರದ ಜನ ಆತನ ಆಯ್ಕೆಯನ್ನು ಅನುರ್ಜಿತಗೊಳಿಸಲು ಸಾಧ್ಯವಾಗಿದೆಯಾ?

ಗ್ರಾಮ ಪಂಚಾಯ್ತಿ ಚುನಾಯಿತ ಸದಸ್ಯನ ಸದಸ್ಯತ್ವ ಬಹಿಷ್ಕರಿಸುವ ಹಕ್ಕೇ ನಮ್ಮಗಿಲ್ಲ…ಅಂತಹದ್ದರಲ್ಲಿ  ಶಾಸಕ…!

ಹೌದು ಆಯ್ಕೆ  ಮಾಡುವುದು  ಮಾತ್ರ ನಮ್ಮ ಹಕ್ಕು. ಆಳುವುದು ಆತನ ಹಕ್ಕು! ಇದು  ಪ್ರಜಾಪ್ರಭುತ್ವ! ಹಾಗಂತ ‘ಕಮ್ಯುನಿಸಂ’ ಅನ್ನುವುದು ಈವರೆಗೆ ಎಲ್ಲೂ  ಗೆದ್ದಿಲ್ಲ ಬಿಡಿ!

ನನಗೆ ಮತದಾನದ ಹಕ್ಕು  ಬಂದು ೪ ವರ್ಷ ಕಳೆದಿದೆ. ಈವರೆಗೂ ಮತದಾರರ ಪಟ್ಟಿಯಲ್ಲಿ  ನನ್ನ  ಹೆಸರನ್ನು  ಸೇರಿಸಿಕೊಂಡಿಲ್ಲ. ಇನ್ನೂ, ಮತ ಹಾಕುವ ಗೌಜಿಗಂತೂ  ಹೋಗಲೇ ಇಲ್ಲ!  ‘ದೇಶದ ಕುರಿತಾಗಿ ಮಾತನಾಡುವ ನಿಮ್ಮಂಥವರೇ ಮತ ಹಾಕದಿದ್ದರೆ  ಹ್ಯಾಂಗೆ?’ ಹಾಗಂತ ನೀವು ಕೇಳುವ ಮೊದಲೇ ನನ್ನನ್ನು ಕೆಲವರು ಪ್ರಶ್ನಿಸಿದ್ದಾರೆ. ಸಂಘದ ಪರ ವಕಾಲತ್ತು ವಹಿಸುವ ನೀವು, ಕೇಸರಿ ಪಂಥದವರಿಗೊಂದು ಓಟು ಒತ್ತಿ  ಬನ್ನಿ  ಅಂತಾ ಪುಗಸಟ್ಟೆ   ಸಲಹೆ ಕೊಟ್ಟವರೂ ಇದ್ದಾರೆ!

ಯಾರೇನೇ ಹೇಳಿದರೂ ನನಗಂತೂ ಮತ ಹಾಕಲು ಮನಸು ಬರುತ್ತಿಲ್ಲ.   ಅಂದಹಾಗೆ, ನೀವು ಮತಹಾಕಬೇಡಿ  ಅಂತಾ ಹೇಳುವ ಯಾವ ಹಕ್ಕು  ನನಗಿಲ್ಲ. ಬಹಿರಂಗವಾಗಿ ಮತದಾನ ಬಹಿಷ್ಕರಿಸುವುದು  ಕಾನೂನುರೀತ್ಯಾ  ಅಪರಾಧ! ಇನ್ನೊಬ್ಬರಿಗೆ  ಮತ ಹಾಕಬೇಡಿ  ಅಂತಾ ಸಲಹೆ  ನೀಡಿದರೆ, ಕೋಲು ಹಿಡಿದು, ಪೀಪಿ ಊದುತ್ತಾ  ಬರುವ ಪೊಲೀಸ್ ಮಾಮ ನಿಮ್ಮನ್ನು  ಬಂಸಿ, ಜೈಲಿಗೆ  ಹಾಕುತ್ತಾನೆ! ಹೆಂಡ, ಹಣ ಹಂಚಿದವರನ್ನು  ಯಾವತ್ತೂ  ಜೈಲಿಗೆ ಹಾಕುವುದಿಲ್ಲ  ಬಿಡಿ! ಯಾಕೆಂದರೆ ಅವರು ಯಾವತ್ತಿದ್ದರೂ ನಮ್ಮ, ವ್ಯವಸ್ಥೆಯ, ಕಾನೂನಿನ ಪ್ರಭುಗಳು! ಅದೆಲ್ಲಕ್ಕಿಂತ ಹೆಚ್ಚಾಗಿ  ಕಾನೂನು ಎಂಬುದು ನಮ್ಮ ದೇಶದಲ್ಲಿ   ಪಾಲಿಸುವವರಿಗೆ ಮಾತ್ರ!

ನನಗೆ ತಿಳುವಳಿಕೆ ಬಂದ ನಂತರ ಐದಾರು ಚುನಾವಣೆಯನ್ನು ಕಂಡೆ. ಒಂದು ಕಾಲದಲ್ಲಿ , ಖಂಡಿಕಾ, ಕುಗ್ವೆ, ಗೀಜಗಾರು ಕೇರಿಗಳ  ಮತದಾರರಿಗೆ ಹೆಂಡ, ಸೀರೆ  ‘ಹಸ್ತಾಂ’ತರ ಕೇವಲ ಒಂದೇ  ಪಕ್ಷದಿಂದ ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ವಾಜಪೇಯಿ ಪ್ರಧಾನಿಯಾಗಿ ಇಳಿದ ನಂತರ ನಡೆದ ಎಲ್ಲ  ಚುನಾವಣೆಗಳ ಪರಿಭಾಷೆಯೂ ಬದಲಾಗಿದೆ. ಗೆಲುವಿನ ರಹಸ್ಯವನ್ನು ರಾಜ್ಯದ ಇತರೆ ಪಕ್ಷದವರು ತಿಳಿದುಕೊಂಡಿದ್ದಾರೆ.

ಸಾಗರದಲ್ಲಿ   ಕಾಗೋಡು ತಿಮ್ಮಪ್ಪರ  ವಿರುದ್ಧ   ಬೇಳೂರು ಗೋಪಾಲಕೃಷ್ಣ  ಮೊದಲ ಬಾರಿಗೆ  ರ್ಸ್ಪಸಿದ ಚುನಾವಣೆ, ಬಹುಶಃ ನಾನು ಕಂಡ ಅತ್ಯಂತ ಕರಾಳ ಚುನಾವಣೆ ಅಥಾವ ನನಗೆ ರಾಜಕೀಯವನ್ನು, ಬಿಜೆಪಿ ಹಣೆಬರಹವನ್ನು ತಿಳಿಸಿಕೊಟ್ಟ  ಚುನಾವಣೆ.  ಅಲ್ಲಿಂದ  ಮುಂದೆ  ನಡೆದ  ಚುನಾವಣೆಗಳಲ್ಲಿ  ಹೆಂಡ, ಹಣ, ಸೀರೆ…ಹಂಚಿಕೆಯಾಗದ ಚುನಾವಣೆಯೇ ಇಲ್ಲದಂತಾಯಿತು.

ಚುನಾವಣೆಯ ಮುನ್ನಾ  ದಿನ ನೀವೊಮ್ಮೆ  ಕುಗ್ವೆ, ಗಾಳೀಪುರದ ಕೇರಿಗಳನ್ನು ನೋಡಲೇಬೇಕು!(ಚುನಾವಣೆ ಮುನ್ನಾ  ದಿನ ನಮ್ಮ  ದೇಶದ  ಬಹಳಷ್ಟು  ಕೇರಿಗಳ ಕಥೆ  ಹಾಗೇ ಬಿಡಿ!) ಆ ಪರಿ ಕುಡಿದವನಿಗೆ ಮಾರನೇ ದಿನ ಯಾವ ಪಕ್ಷಕ್ಕೆ  ಮತ ಹಾಕಬೇಕು, ನಿನ್ನೆ  ಹೆಂಡ ಹಂಚಿದ್ದು  ಯಾವ ಪಕ್ಷದವರು ಎಂಬ ಅರಿವಾದರೂ ಇರುತ್ತದೆಯಾ?!

ಅಂದಹಾಗೆ, ಮತದಾರನನ್ನು  ರಾಜಕಾರಣಿಗಳು ಖರೀದಿಸುತ್ತಾರೆ ಅನ್ನೋಣವಾ? ಅಥವಾ, ಮತದಾರರು ಮತವನ್ನು ಮಾರಾಟ ಮಾಡಿಕೊಳ್ಳುತ್ತಾರೆ ಎಂದು ಹೇಳೋಣವಾ?

‘ನಾವೇಷ್ಟೇ ಸರಿಯಾದವರನ್ನು  ನಿಷ್ಠೆಯಿಂದ ಆಯ್ಕೆ  ಮಾಡಿಕಳುಹಿಸಿದರೂ, ಕೊನೆಗೆ ಭ್ರಷ್ಟರಾಗುತ್ತಾರೆ. ತಿನ್ನ  ಬೇಕಾದಷ್ಟನ್ನು  ತಿಂದು ತೇಗುತ್ತಾರೆ…ಹಾಗಾಗಿ  ನಾವು ಕೂಡ ಚುನಾವಣೆಗೆ ಪೂರ್ವದಲ್ಲಿ  ಅವರು ಕೊಡುವುದನ್ನು ತಿನ್ನಲು ಕಲಿತಿದ್ದೇವೆ. ರಾಜಕಾರಣಿ ಕೊಡುವ ದುಡ್ಡನ್ನು  ನಾನೊಬ್ಬ   ಮುಟ್ಟದಿದ್ದರೆ, ನಮ್ಮೂರಿನವರು ಮಾತ್ರ ರಾಜಕಾರಣಿಗಳ ಆಮೀಷಕ್ಕೆ ಒಳಗಾಗದಿದ್ದರೆ…’ ಅನ್ನುತ್ತಾರೆ ಊರಿನ ಮಂದಿ. ಪ್ರತಿ ಊರಿನ ನಾಗರೀಕರು  ಹೇಳುವುದೂ ಇದೇ ಮಾತನ್ನು!!!

ನಿಜ, ದುಡ್ಡಿನ  ಖಯಾಲಿಯೇ ಹಾಗೆ. ಎದುರಿನಿಂದ ಬೇಡ, ಬೇಡವೇ ಬೇಡ…ಅಂತೆಲ್ಲ  ಹೇಳಿ, ಹಿಂದಿನಿಂದ ದುಡ್ಡು  ತೆಗೆದುಕೊಳ್ಳುವ ಮಂದಿಗೆ ನಮ್ಮ ದೇಶದಲ್ಲಿ  ಯಾವತ್ತೂ ಕೊರತೆಯಾಗಲಿಲ್ಲ!

ಪ್ರಜೆಯೇ ದುಡ್ಡು, ಹೆಂಡ  ಸ್ವೀಕರಿಸಲು ಸಿದ್ಧವಿರುವಾಗ ಪ್ರಭು ಕೊಡುವುದು ತಪ್ಪು  ಅನ್ನಲು ಸಾಧ್ಯವೇ?!

ಇನ್ನು  ರಾಜಕಾರಣಿಗಳು…ಜನ ಬಯಸುತ್ತಾರೆ ಹಾಗಾಗಿ ಕೊಡುತ್ತೇನೆ ಅನ್ನುತ್ತಾರೆ. ನಾವು  ಗೆಲುವಿನ ಮಂತ್ರ ಕಲಿಯದಿದ್ದರೆ, ಇನ್ನು  ೫೮ ವರ್ಷ ಇಂದಿರಮ್ಮನ  ಕಾಲುಬುಡದಲ್ಲೇ ದೇಶ ಕೊಳೆಯುತ್ತಿತ್ತು  ಅನ್ನುತ್ತಾರೆ  ಕೇಸರಿ  ಪಾಳಯದವರು. ಆಗ, ಊರಿಗೆಲ್ಲ  ಆದರ್ಶದ ಉಪದೇಶ  ಮಾಡುವ ಸಂಘದ  ಹಿರಿಯರ ಬಳಿಯೂ  ಉತ್ತರ ಇಲ್ಲದಂಥಾಗುತ್ತದೆ! ಯಾಕೆಂದರೆ, ‘ಆಫರೇಷನ್ ಕಮಲ’ ನಡೆಯದಿದ್ದರೆ, ರಾಜ್ಯದ  ಕೆಲ ರಾಜಕಾರಣಿಗಳ  ‘ಕೈ’ಚಳಕದ ಎದುರು ಕಮಲ ಅರಳುತ್ತಿರಲಿಲ್ಲ….ಒಟ್ಟಿನಲ್ಲಿ  ಜನ ನೋಡುತ್ತಾರೆ ಹಾಗಾಗಿ ನಟಿಯರ ಬಟ್ಟೆ  ಕಳಚುತ್ತೇವೆ ಅಂತಾ ಸಿನಿಮಾ ಮಂದಿ ಹೇಳುವ ಕಥೆ ಹಾಗಾಗಿದೆ ನಮ್ಮ  ರಾಜಕಾರಣ!

ಇದನ್ನೆಲ್ಲ  ಕಂಡ ನನ್ನಂಥವ ಯಾರ ಸಹವಾಸವೂ ಬೇಡ ಅನ್ನಿಸುವುದು ತಪ್ಪಾ?
ಮತ ಹಾಕದೇ ಇರುವುದು ತಪ್ಪು   ಎಂಬುದೇನೋ ನಿಜ. ‘ಮತದಾನ ಮೂಲಭೂತ ಹಕ್ಕಾದರೆ, ಮತದಾರನ ನೋವಿಗೆ ಸ್ಪಂದಿಸುವುದು ಮುಲಭೂತ ಕರ್ತವ್ಯವಲ್ಲವಾ? ಎಂದು ಪ್ರಶ್ನಿಸುವ ಹಕ್ಕು  ಕೂಡ ನಮಗಿಲ್ಲ  ಅಂತಾದರೆ, ನಾವೇಕೆ ಮತ ಹಾಕಬೇಕು’ ಎಂದು  ನಾನು ಕೇಳುವಂತೆಯೂ ಇಲ್ಲವಲ್ಲ!

‘ಆದರ್ಶದ ಪ್ರತೀಕ, ಭ್ರಷ್ಟತೆ ವಿರೋದಿಸಲಿಕ್ಕಾಗಿ ಸ್ಪರ್ಧೆ…’ ಅಂತೆಲ್ಲ  ಭಾಷಣ ಬಿಗಿಯುವ ಪಕ್ಷೇತರರಿಗೆ ಮೊದಲನೆಯದಾಗಿ ಠೇವಣಿಯೇ ಬರುವುದಿಲ್ಲ! ೨೦೦ ಮಂದಿಯಲ್ಲೊಬ್ಬ  ಪಕ್ಷೇತರ ಗೆದ್ದರೆ, ಅವ ಕೂಡ ಚುನಾವಣೆ ನಂತರ ಮತ್ತ್ಯಾವುದೋ  ಪಕ್ಷ  ಸೇರುತ್ತಾನೆ. ಮುಂದಿನ ಚುನಾವಣೆಯಲ್ಲಿ   ಹೇಗೆ ಗೆಲ್ಲಬೇಕು ಎಂಬುದನ್ನು  ಕಲಿಯುತ್ತಾನೆ…
ಮತ್ತ್ಯಾರಿಗೆ ಮತ ಹಾಕೋಣ ಹೇಳಿ?

ಚುನಾವಣೆ ಬಹಿಷ್ಕಾರ ಎಂಬುದು ಒಂದು ಸಮಸ್ಯೆಗೆ ಪರಿಹಾರ ಒದಗಿಸಬಹುದೇನೋ. ಆದರೆ, ಅದು ‘ಬೆಕ್ಕಿಗೆ ಗಂಟೆ  ಕಟ್ಟುವವರು ಯಾರು’ ಎಂಬ ಪ್ರಹಸನಕ್ಕಿಂತ ಭಿನ್ನವಾದದ್ದೇನಲ್ಲ.  ಎಲ್ಲಿಯವರೆಗೆ ಒಂದು ಊರಿನ, ಒಂದು ಕೇರಿಯ ಜನ ಒಗ್ಗಟ್ಟಾಗುವುದಿಲ್ಲವೋ, ಅಲ್ಲಿಯವರೆಗೂ  ನಾವು ಆಳುವವರ ಗುಲಾಮರೇ!

ಇಲ್ಲ ,  ಸಭ್ಯಸ್ಥರು ಮತ ಹಾಕಬಹುದಾದ ಪಕ್ಷವನ್ನಾಗಲೀ, ಅಭ್ಯರ್ಥಿಯನ್ನಾಗಲೀ  ಈ ವ್ಯವಸ್ಥೆಯಲ್ಲಿ   ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅಂದಹಾಗೆ, ನಾನಾಗಲೀ, ನೀವಾಗಲೀ ಮತ ಹಾಕದಿದ್ದರೂ ಕೂಡ,  ನಮ್ಮ  ಕ್ಷೇತ್ರದಿಂದ  ಒಬ್ಬ  ಅಭ್ಯರ್ಥಿ ಗೆದ್ದೇ  ಗೆಲುತ್ತಾನೆ, ಸಂಸದನಾಗುತ್ತಾನೆ, ಅದೃಷ್ಟವಿದ್ದರೆ ಮಂತ್ರಿಯೂ  ಆಗುತ್ತಾನೆ ಎಂಬುದು ಮರೆತೇ ಹೋಗಿತ್ತು ನೋಡಿ!!!

Read Full Post »

A Wednesday!

ಒಂದು ಚೆಂದದ ಚಿತ್ರ ಎಂಬುದನ್ನು ಯಾವೊಬ್ಬ  ಬ್ಲಾಗಿಗನಿಗೂ ಹೊಸತಾಗಿ ಹೇಳುವ ಅವಶ್ಯಕತೆ ಇಲ್ಲ. ಅನೇಕ ಬ್ಲಾಗ್ ಮಿತ್ರರು ಆ ಚಿತ್ರದ ಕುರಿತು ಈಗಾಗಲೇ ಸಾಕಷ್ಟು  ವಿಮರ್ಶೇ ಬರೆದಿದ್ದಾರೆ. ನಾನು ತುಂಬಾ ತಡವಾಗಿ ಬರೆಯುತ್ತಿದ್ದೇನೆ…ಅಲ್ಲಲ್ಲ  ತುಂಬಾ ತಡವಾಗಿ ಆ ಚಿತ್ರ ನೋಡಿದೆ ಎಂಬುದನ್ನು ನೇರವಾಗಿ ಹೇಳಲು ಒಂಚೂರು ಸಂಕೋಚವಾಯಿತು! ಆ ಚಿತ್ರದ  ಹೀರೋ ಯಾರು ಅಂತಾ ಗೊತ್ತಿಲ್ಲ. ಹಿರೋಯಿನ್ ಅಂತೂ ಕಾಣಿಸಲೇ  ಇಲ್ಲ.  ಇನ್ನು, ಐಟಂ ಸಾಂಗ್…ಯಾವುದೇ  ಸಾಂಗ್ ಕೂಡ ಕಿವಿಗೆ ಕೇಳಿಸಲಿಲ್ಲ(ಟಾಕೀಸ್‌ಗೆ ಹೋಗಿ, ೫೦ರೂ. ಟಿಕೆಟ್‌ನಲ್ಲಿ  ನೋಡಿಲ್ಲ. ಹಾಗಾಗಿ ಹೀರೋಯಿನ್ ಕಾಣಿಸಲೇ ಇಲ್ಲ  ಅಂತಾ ತೀರಾ ಬೇಸರವೇನೂ ಆಗಲಿಲ್ಲ!). ನಿರ್ದೇಶಕರ ಹೆಸರು ಚಿತ್ರ ಆರಂಭವಾಗುವ ಮೊದಲೇ ಬಂದಿತ್ತಾದರೂ, ನೋಡಲು ಪುರುಸೊತ್ತು ಆಗಲಿಲ್ಲ…

ಆತ, ಸಾಮಾನ್ಯ ಅಂದರೆ ತೀರಾ ಸಾಮಾನ್ಯ ಮನುಷ್ಯ. ನೋಡಲಿಕ್ಕೆ  ಸಭ್ಯಸ್ಥನ  ತರಹ ಕಾಣುತ್ತಾನೆ. ಪೊಲೀಸ್ ಠಾಣೆಗೆ ಬಂದು ಜೆ ಆಂಡ್ ಕೆ ಎಂಬ ಹೆಸರುಳ್ಳ  ಬ್ಯಾಗ್‌ವೊಂದನ್ನು  ಯಾರಿಗೂ ಕಾಣದಂತೆ  ಇಟ್ಟು ಹೋಗುತ್ತಾನೆ….

ಮುಂಬಯಿ ಮಹಾನಗರಿ, ರೌಡಿಸಂ, ಯಾರದ್ದೋ  ಬೆದರಿಕೆಗೆ ಹೆದರಿ  ಠಾಣೆಗೆ ಓಡಿ ಬರುವ ಸಿನಿಮಾ ಹೀರೋ…..ಇವೆಲ್ಲವೂ  ಹಾಗೆ ಸುಮ್ಮನೆ  ಬಂದು ಹೋಗುವ ಸನ್ನಿವೇಶಗಳು…

ಚಿತ್ರದ ಕಥೆ ಬಿಚ್ಚಿಕೊಳ್ಳುವುದೇ  ಆ ಮಹಡಿಯ ತುತ್ತ ತುದಿಯಿಂದ. ನಿರ್ಮಾಣಗೊಳ್ಳುತ್ತಿರುವ ಅಪಾರ್ಟ್‌ಮೆಂಟ್ ಒಂದರ ಅಂತಿಮ ಅಂತಸ್ತದು. ೭೫ರ ಪ್ರಾಯದ ವ್ಯಕ್ತಿಯೊಬ್ಬ  ಕುಳಿತಿದ್ದಾನೆ. ಒಂದು ಲ್ಯಾಪ್‌ಟ್ಯಾಪ್, ಒಂದಷ್ಟು  ಸಿಮ್‌ಕಾರ್ಡ್‌ಗಳು, ಒಂದು ಮೊಬೈಲ್, ಬ್ರೆಡ್ಡು, ಟೀ…ಕೊನೆಗೆ ಪ್ಲಾಸ್ಟಿಕ್  ಕವರ್‌ನಲ್ಲಿ  ಟೊಮೆಟೊ, ಸೌತೆ, ಮೆಣಸಿನ ಕಾಯಿ!
ಮುಂಬಯಿ ಮುಖ್ಯ  ಪೊಲೀಸ್  ಠಾಣೆಯಲ್ಲಿ  ಬಾಂಬ್ ಇರಿಸಲಾಗಿದೆ….ಮಹಡಿಯ ತುತ್ತ ತುದಿಯಿಂದ ಹೊರಟ ಫೋನ್ ಕರೆ, ಪೊಲೀಸ್ ಮುಖ್ಯಸ್ಥ  ಪ್ರಕಾಶ್  ರಾಥೋಡ್ ಕಚೇರಿಯನ್ನು ತಲುಪುತ್ತದೆ.

ಹೈ ಅಲರ್ಟ್!
ಮುಂಬಯಿ ನಗರಿ, ಪೊಲೀಸ್ ಇಲಾಖೆ…ಎಲ್ಲವೂ  ಹೈ ಅಲರ್ಟ್.

ಅಂತಹದ್ದೇ  ಒಂದು ಕರೆ, ಯುಟಿವಿಯ ಥಳಕು-ಬಳುಕಿನ ಸುಂದರಿಯ ಮೊಬೈಲ್‌ಗೂ ಹೋಗುತ್ತದೆ!  ಆ ಸುಂದರಿಗೆ ಅದೇನೂ ಅರ್ಥವಾಯಿತೋ, ಬಾಂಬ್ ಬ್ಲಾಸ್ಟ್  ಅಂದರೆ ಏನೂ ಅಂತಾ ತಿಳಿದಳೋ ಗೊತ್ತಿಲ್ಲ! (ಬಾಂಬ್ ಬ್ಲಾಸ್ಟ್  ಆದರೆ, ತನ್ನ  ಜೀವ ಹೊಗತ್ತೆ  ಅನ್ನುವ ಪರಿಕಲ್ಪನೆ ಆಕೆಯಲ್ಲಿ  ಇರಲಿಲ್ಲವೋ ಅಥವಾ, ಬಾಂಬ್ ಬ್ಲಾಸ್ಟ್  ಅಂದರೆ ಏನೂ ಅಂತಲೇ ಆಕೆಗೆ ಗೊತ್ತಿಲ್ಲವೋ , ಅಥವಾ ಚಾನೆಲ್  ಚೀಫ್ ಹೇಳಿದರೂ  ಎಂಬ ಕಾರಣಕ್ಕೆ  ಓಡಿದಳೋ  ಎಂಬುದನ್ನು ನೀವು  ಚಿತ್ರದ  ನಿರ್ದೇಶಕರನ್ನೇ ಕೆಳಬೇಕು!) ಒಟ್ಟಲ್ಲಿ  ಬ್ರೇಕಿಂಗ್ ನ್ಯೂಸ್ ಅನ್ನುತ್ತಾ ಕ್ಯಾಮೆರಾಮನ್ ಜತೆ ಓಡುವ  ವಾಸ್ತವ  ಚಿತ್ರಣವದು!!!

ಒಬ್ಬನೇ ಒಬ್ಬ  ಸಾಮಾನ್ಯ ಮನುಷ್ಯ  ಇಡೀ ವ್ಯವಸ್ಥೆಯನ್ನು  ಆಡಿಸುತ್ತಾನೆ. ಮುಖ್ಯಮಂತ್ರಿಗಳ ಮುಖದಲ್ಲಿ   ಬೆವರಿಳಿಸುತ್ತಾನೆ. ಪೊಲೀಸ್ ವ್ಯವಸ್ಥೆಯನ್ನು  ಬೆಚ್ಚಿಬೀಳಿಸುತ್ತಾನೆ…ಕೊನೆಗೆ ಬಂದಿತರಾದ ೪ ಭಯೋತ್ಪಾದಕರನ್ನು  ಬಿಡುವಂತೆಯೂ  ಸವಾಲು ಎಸೆಯುತ್ತಾನೆ. ಎಲ್ಲೋ  ಒಂದು ಕಡೆ ಬಾಂಬ್ ಇಟ್ಟಿದ್ದೇನೆ….ನೀವು ಆ ನಾಲ್ವರನ್ನು  ಬಿಡದೇ ಹೋದರೆ, ಸಹಸ್ರಾರು ಜನರ ಜೀವ ಹೋಗತ್ತೆ…

ಮೈಯೆಲ್ಲ  ಉರಿಯುತ್ತಿತ್ತು. ಸಹಸ್ರಾರು ಜನರ ಜೀವ ಹೋಗತ್ತೆ  ಎಂಬ ಕಾರಣಕ್ಕೆ,  ಹಿಡಿದ ೪ ಮಂದಿಯನ್ನು  ಬಿಟ್ಟರೆ, ಮತ್ತೆ  ೪೦,೦೦೦ ಮಂದಿಯ ಜೀವ ತೆಗೆಯುತ್ತಾರೆ, ದರಿದ್ರ  ವ್ಯವಸ್ಥೆ  ನರಸತ್ತ  ಆರಕ್ಷಕರು….ನಾನು ನೋಡುತ್ತಿರುವುದು ಸಿನಿಮಾ ಎಂಬುದು ನನಗೆ ಅಕ್ಷರಶಃ ಮರೆತು ಹೋಗಿತ್ತು  ಮಾರಾಯ್ರೆ!

ಆತ ವಾಸ್ತವವಾಗಿ ಭಯೋತ್ಪಾದಕನಲ್ಲ. ಭಯೋತ್ಪಾದಕರ ಹಾವಳಿ  ನಿಯಂತ್ರಿಸಲು ವಿಫಲವಾದ ಭ್ರಷ್ಟ  ವ್ಯವಸ್ಥೆಗೊಂದು  ಹೊಸ ಸಂದೇಶ ಕೊಡಲು  ಹೊರಟ ಸಾಮಾನ್ಯ ನಾಗರಿಕ…ಎಂಬುದು ಗೊತ್ತಾಗುವ ಹೊತ್ತಿಗೆ ಚಿತ್ರ ಮುಗಿಯುವ ಹಂತ ತಲುಪಿರುತ್ತದೆ.  ಆತ, ತನ್ನ  ‘ಆಫರೇಷನ್  ಬ್ಲಾಸ್ಟ್ ’  ಮುಗಿಸಿ  ಕೊನೆಗೆ  ಟೊಮೆಟೋ, ಸೌತೆ, ಮೆಣಸಿನ ಕಾಯಿ  ಇರುವ ಪ್ಲಾಸ್ಟಿಕ್  ಕವರ್‌ನೊಂದಿಗೆ  ಅಪಾರ್ಟ್‌ಮೆಂಟ್‌ನಿಂದ ಇಳಿದುಬರುತ್ತಾನೆ. ಪೊಲೀಸ್ ಮುಖ್ಯಸ್ಥ   ಪ್ರಕಾಶ್ ರಾಥೋಡ್,  ಅವನ ಬಳಿಯೇ ಟೈಂ ಕೇಳುತ್ತಾರೆ…ನೋಡುವಂತಹ  ಅಂತ್ಯವದು… ಎಲ್ಲರೂ  ನೋಡಬೇಕಾದ ಸಿನಿಮಾ, ಅದರಲ್ಲೂ   ವ್ಯವಸ್ಥೆಯ  ಪರ ವಕಲತ್ತು  ವಹಿಸಿಕೊಂಡು ಆಶಾವಾದದ ಉತ್ತುಂಗದಲ್ಲಿರುವ  ಮಂದಿಯೆಲ್ಲ  ಒಮ್ಮೆ  ನೋಡಲೇ ಬೇಕಾದ ಸಿನಿಮಾ ಕೂಡ!

ಒಬ್ಬ  ವ್ಯಕ್ತಿ, ಒಂದು ಮೊಬೈಲ್ , ಒಂದೇ ಒಂದು ಲ್ಯಾಪ್‌ಟಾಪ್, ನಾಲ್ಕಾರು  ಸಿಮ್‌ಗಳು…ಇಡೀ ಪೊಲೀಸ್ ವ್ಯವಸ್ಥೆಯನ್ನು  ಬೆಚ್ಚಿಬೀಳಿಸುತ್ತಾನೆ…ಇದು ಸಾಧ್ಯವಾ?
ಒಬ್ಬ  ಹಿಟ್ಲರ್ ಇಡೀ ಜಗತ್ತನ್ನು  ಆಳಿದ. ಮುಸಲೋನಿ  ಅನೇಕರ ಬೆವರಿಳಿಸಿದ. ಒಬ್ಬನ್ನೇ  ಒಬ್ಬ  ಮುಷರಫ್, ಭಯೋತ್ಪಾದಕರ ತೆಕ್ಕೆಯಲ್ಲಿರುವ ಪಾಕಿಸ್ತಾನವನ್ನು  ಅಂಗೈನಲ್ಲಿ  ಆಡಿಸಿಬಿಟ್ಟ…

ಹಾಗಂದ ಮಾತ್ರಕ್ಕೆ, ಒಬ್ಬ  ವ್ಯಕ್ತಿಯಿಂದ, ಒಬ್ಬ  ಭಯೋತ್ಪಾದಕನಿಂದ ಮುಂಬೈ ಮಹಾನಗರಿಯನ್ನು  ಅಲ್ಲಾಡಿಸಲು  ಸಾಧ್ಯವಾ…?

ಹಿಂದೊಮ್ಮೆ  ನಮ್ಮ  ಪೊಲೀಸ್  ಇಲಾಖೆಯ ಕುರಿತು, ನಾವು ನಕ್ಸಲ್ ಮತ್ತು ಭಯೋತ್ಪಾದಕ  ಪಿಡುಗು ಹತ್ತಿಕ್ಕಲು  ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಇದೇ  ವೇದಿಕೆಯಲ್ಲಿ  ಬರೆದಿದ್ದೆ.  ನಾಯಿಯೊಂದು  ಬಾಂಬ್ ಪತ್ತೆ  ಮಾಡುತ್ತದೆ ಎಂದಾದರೆ, ನಾಯಿಗೆ ಬುದ್ದಿ  ಕಲಿಸುವ ಮಾನವನಿಂದ ಭಯೋತ್ಪಾದಕತೆ ಮಟ್ಟ   ಹಾಕುವುದು ಅಸಾಧ್ಯವಾ  ಎಂಬ ದಾಟಿಯಲ್ಲಿತ್ತು  ಆ ಬರಹ. ಆಗ  ಒಂದಷ್ಟು  ಜನ ಬೊಬ್ಬೆ  ಹೊಡೆದರು. ನಿರಾಶವಾದದ ಪರಮಾವ ಅಂತಾ ಕೂಗಾಡಿದರು! ಸಾಯಲಿ ಅಂತಾ…ಅಲ್ಲಲ್ಲ…ಅವರೆಲ್ಲ  ತುಂಬಾ ತಿಳಿದವರು, ಅವರ ತಿಳುವಳಿಕೆಯನ್ನು  ಯಾಕೆ  ಘಾಸಿಗೊಳಿಸಬೇಕು  ಎಂಬ ಕಾರಣಕ್ಕಾಗಿ  ನಾನು  ಕೂಡ ಆ ಚರ್ಚೆ  ಮುಂದುವರಿಸಲಿಲ್ಲ  ಬಿಡಿ!

ಇವತ್ತು  ನಾನಿಲ್ಲಿ  ಏನೇ ಹೇಳಿದರೂ  ಅಕ್ಷಮ್ಯ  ಅಪರಾಧವಾಗುತ್ತದೆ. ಒಂದಷ್ಟು   ಮಂದಿಯ ಮನಸ್ಸಿಗೆ  ನೋವಾಗುತ್ತದೆ. ಆದರೆ, ಆ ಸಿನಿಮಾದ ಕೊನೆ  ಭಾಗದಲ್ಲಿ  ಆ ‘ಸಾಮಾನ್ಯ ನಾಗರಿಕ’ ಕೇಳುವ ಒಂದಷ್ಟು  ಪ್ರಶ್ನೆಗಳನ್ನು  ದೇಶದ ಪ್ರತಿಯೊಬ್ಬ  ಪ್ರಜೆಯೂ ಕೂಡ  ಕೇಳಿಕೊಳ್ಳಲೇ ಬೇಕು. ಈ ಸಮಾಜದಲ್ಲಿ  ನಮ್ಮ  ಜವಬ್ದಾರಿ ಏನಿದೆ ಅನ್ನುವುದು  ಅರಿತಕೊಳ್ಳಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ  ಒಬ್ಬ  ವ್ಯಕ್ತಿ  ಮನಸು ಮಾಡಿದರೆ ಏನೆಲ್ಲಾ  ಮಾಡಬಹುದು ಅನ್ನುವುದು ಚಿತ್ರದಿಂದ ಕಲಿಯಬೇಕು ಅಂದರೆ… ಅದು ಸಿನಿಮಾ, ಆ ನಿರ್ದೇಶಕನಿಗೆಷ್ಟು  ಸಾಮಾಜಿಕ ಜವಬ್ದಾರಿ ಇದೆ? ಅದನ್ನೆಲ್ಲ  ಬರೆಯುವ ನಿಮಗೆಷ್ಟು  ಜವಬ್ದಾರಿ ಇದೆ  ಅಂತಾ ಕೇಳುವ ಮಂದಿಯೇ  ನಮ್ಮಲ್ಲಿ   ಹೆಚ್ಚಾಗಿದ್ದಾರೆ! ಅಂದಹಾಗೆ, ಹಾಗೆ ಕೇಳುವ ಎಲ್ಲ  ಅಭಿವ್ಯಕ್ತಿ  ಸ್ವಾತಂತ್ರ್ಯವೂ  ಅವರಿಗಿದೆ ಬಿಡಿ!

‘ಪಬ್ ಮೇಲೆ ದಾಳಿ ಮಾಡಿದ  ರಾಮಸೇನೆ, ಪುತ್ತೂರಿನ ಅತ್ಯಾಚಾರ ಪ್ರಕರಣದ ವಿರುದ್ಧ  ಹೋರಾಡಬೇಕಿತ್ತು, ನಮ್ಮ  ಮನೆ ಅಂಗಳದಲ್ಲಿನ  ಅಂಗಿ-ಚೆಡ್ಡಿ  ಕಳುವಾಗಿದ್ದರ  ವಿರುದ್ಧ  ಪ್ರತಿಭಟನೆ ಮಾಡಬೇಕಿತ್ತು…’  ಅಂತಾ  ಸಲಹೆ ಕೊಡುವುವವರೇ ಹೆಚ್ಚಾಗಿದ್ದರೆ  ಹೊರತು, ನಾನು ಪುಟ್ಟದೊಂದು  ಮಹಿಳಾ ಸಂಘಟನೆ ಕಟ್ಟಿ  ಅತ್ಯಾಚಾರ ಪ್ರಕರಣವನ್ನು  ವಿರೋಸಬಹುದಾಗಿತ್ತಲ್ಲಾ , ಆರೋಪಿಗೆ ಈಗಲಾದರೂ ಶಿಕ್ಷೆ  ಆಗುವಂತೆ ಮಾಡಬಹುದಿತ್ತಲ್ಲ … ಊಹುಂ ಕೇಳಲೇ ಬೇಡಿ, ಆ ರಿಸ್ಕ್‌ಗಳೆಲ್ಲ  ನಮಗ್ಯಾಕೆ ಬೇಕು? ಹೋರಾಟ, ಜೈಲು…ಇದೆಲ್ಲ   ಉಸಾಪರಿಗಳು ಯಾರಿಗೆ ಬೇಕು ಹೇಳಿ?!

ಕ್ಷಮಿಸಿ  ನನ್ನ  ಮಾತಿಗೆ  ಯಾರೂ ಕೂಡ ಅಪ್ಪಿ-ತಪ್ಪಿಯೂ ಚಪ್ಪಾಳೆ  ಹೊಡೆಯುವುದು ಬೇಡ! ಚಪ್ಪಾಳೆ  ಗಿಟ್ಟಿಸಿಕೊಳ್ಳಲಿಕ್ಕಾಗಿ ಇದನ್ನು ಖಂಡಿತಾ  ಬರೆದಿಲ್ಲ…

ಅಯ್ಯೋ  ಮರೆತೇ  ಹೋಗಿತ್ತು  ನೋಡಿ…ಮುಂಬಯಿ ದಾಳಿ ನಂತರ ಮತ್ತೆ ದಾಳಿ  ಆಗಲೇ ಇಲ್ಲ?!
ಛೇ, ಭಯೋತ್ಪಾದಕರಿಗೂ  ರಿಸೆಷನ್ ಪ್ರಾಬ್ಲಂ  ಇರಬೇಕು!

ಅಯ್ಯೋ  ನನಗ್ಯಾಕೆ ಆ ಸುದ್ದಿ, ದೇಶಕ್ಕಾಗಿದ್ದೇ, ನನಗೂ  ಕೂಡ  ಆಗತ್ತೆ!  ಅಂದಹಾಗೆ, ಬುಧವಾರಕ್ಕೊಂದು  ಸಲಾಂ, ಜತೆಗೆ ಬುಧವಾರದಂಥ ಚಿತ್ರದ ಸೃಷ್ಟಿಯ ಮಟ್ಟಕ್ಕೆ  ನಮ್ಮ  ದೇಶವನ್ನು ಕೊಂಡುಹೋದ  ಶುಕ್ರವಾರದ  ಆ ಕರ್ಮಠ ಜಗತ್ತಿಗೂ….!!!

Read Full Post »

‘೨೫೦ ಪದ ಮಿತಿಯ ಒಳಗೆ ಬರೆಯಿರಿ. ನಿಮ್ಮ  ಬರಹ, ಒಂದು ಫುಲ್‌ಸ್ಕೇಲ್ ಹಾಳೆಯಷ್ಟಿರಲಿ.  ಬರಹಗಳೆಲ್ಲ  ಪುಟದ ಒಂದೇ ಮಗ್ಗುಲಿನಲ್ಲಿ  ಇರಲಿ…’ ಕಳೆದ  ೫೮ ವರ್ಷಗಳಿಂದಲೂ ಇಂತಹ ಸಾಲುಗಳನ್ನು ನಾವು ಪತ್ರಿಕೆಗಳಲ್ಲಿ  ನೋಡುತ್ತಾ ಬಂದಿದ್ದೇವೆ. ಅಂತಹ ನೀತಿ-ನಿಯಮಾವಳಿಗಳನ್ನು ಬ್ಲಾಗ್‌ಲೋಕಕ್ಕೂ ಅಳವಡಿಸಿಕೊಳ್ಳುವ ಅಗತ್ಯವಿದೆಯಾ?  ‘ಮನಸಿಗೆ ಬಂದಿದ್ದನ್ನೆಲ್ಲ  ಗೀಚಿಕೊಳ್ಳಲು ‘ಬ್ಲಾಗ್’ ಎಂಬುದು ನಿಮ್ಮ  ಪರ್ಸನಲ್ ಡೈರಿಯಾ?’ ಎಂದು ಕೇಳುವವರಿಗೆ ಉತ್ತರಿಸುವ ಅಗತ್ಯವಿದೆಯಾ? ಅಥವಾ ಬ್ಲಾಗಿಗರ ಒಕ್ಕೂಟ, ತನ್ನದೇ ಆದ ನೀತಿ-ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆಯಾ…ಪ್ರಶ್ನೆಗಳ ಸರಮಾಲೆಯೇ ನನ್ನ  ಮುಂದಿದೆ. ಕೇವಲ ನನ್ನ  ಮುಂದೆ ಮಾತ್ರವಲ್ಲ, ನಿಮ್ಮ  ಮುಂದೆ ಕೂಡ ಇದೆ!

ಸ್ವಲ್ಪ  ಸಂಕೀರ್ಣವಾದ ವಿಚಾರವಿದು. ಬ್ಲಾಗ್‌ಗಳಿಗೊಂದು ನೀತಿ-ನಿಯಮ ಬೇಕು ಎಂದು ವಾದಿಸುವ ಮಂದಿಯಷ್ಟೇ, ಬೇಡ ಅನ್ನುವವರು ಇದ್ದಾರೆ! ‘ಬ್ಲಾಗ್ ಎಂಬುದು ಯಾರ ಅಪ್ಪನ ಮನೆಯ ಸ್ವತ್ತು ಅಲ್ಲ.  ನಮ್ಮ  ಸ್ವಂತದ್ದು. ನಾವೇನು ಬೇಕಾದರೂ ಬರೆದುಕೊಳ್ಳುತ್ತೀವಿ. ಇಷ್ಟವಿದ್ದರೆ ಓದಿ, ಇಲ್ಲವಾದರೆ ಬೇಡ’ ಎಂಬ ಮನೋಧೋರಣೆ ಒಂದಷ್ಟು  ಮಂದಿಯದಾದರೆ, ಬ್ಲಾಗಿಗರಿಗೆ ಸಾಮಾಜಿಕ ಕಳಕಳಿ ಬೇಕು. ವಿವೇಕ ಇರಬೇಕು ಎಂದು ವಾದಿಸುವವರಿಗೂ ಕೊರತೆಯೇನಿಲ್ಲ. ‘ರಾಷ್ಟ್ರದ ವಿಚಾರಕ್ಕೆ ನಾವೇಲ್ಲ  ಸ್ಪಂದಿಸಲೇಬೇಕು.  ಸಂಸ್ಕೃತಿ ಕಳಕಳಿ ಎಲ್ಲರಿಗೂ ಅಗತ್ಯ’ ಎಂದು ನನ್ನಂತೆ ಮೊಂಡು ಹಠ ಮಾಡುವವರಿಗೂ ಇಲ್ಲಿ  ಜಾಗವಿದೆ. ಪ್ರಗತಿಯ ಹಾದಿಯಲ್ಲಿ  ಸಾಗಬೇಕು. ಸಂಸ್ಕೃತಿ  ಚೌಕಟ್ಟನ್ನು ದಾಟಿ ಬರಬೇಕು ಎನ್ನುವವರ ವೇದಿಕೆಯೂ ಇಲ್ಲಿದೆ.  ಬಕೆಟ್ ಹಿಡಿಯುವವರಿಗೂ ಸ್ಥಳವಿದೆ. ಬಕೆಟ್ ಹಿಡಿಯುವವರನ್ನು ಜಾಡಿಸುವವರಿಗೂ ಜಾಗವಿದೆ! ಇಂತಹದ್ದೊಂದು ವೇದಿಕೆಗೆ ‘ಹೀಗೇ ಇರಬೇಕು’ ಅಂತಾ ಚೌಕಟ್ಟು  ಹಾಕಲು ಸಾಧ್ಯವಿದೆಯಾ?

ಅರೆ, ವಿಷಯ ಮತ್ತಷ್ಟು  ಗಂಭೀರವಾಗುತ್ತಾ ಹೋಗುತ್ತಿದೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳು  ಉದ್ಭವವಾಗುತ್ತಿದೆ. ಉತ್ತರ ಎಲ್ಲಿದೆ?

ಬ್ಲಾಗ್ ಎಂಬ ಲೋಕವನ್ನು ಒತ್ತಟ್ಟಿಗಿಟ್ಟು,  ಸ್ವಲ್ಪ  ಹೊತ್ತು  ಸಾಹಿತ್ಯ, ಪತ್ರಿಕಾ ಪ್ರಪಂಚಕ್ಕೆ ಒಮ್ಮೆ ಹೋಗೋಣ. ಸಾಹಿತ್ಯ ಲೋಕಕ್ಕೆ ನೀತಿ ನಿಯಮ ಇದೆ…ಹಾಗಂತ ಅಂದುಕೊಂಡರೆ ತಪ್ಪಾಗಬಹುದು. ವಾತ್ಸಾಯನನ ಕಾಮಸೂತ್ರದಿಂದ, ವಾದಿರಾಜರ ಕೃತಿಗಳವರೆಗೂ ನಮ್ಮ  ಸಾಹಿತ್ಯ ಲೋಕದ ವ್ಯಾಪ್ತಿಯಿದೆ. ‘ವಿಕ್ರಮ’ದಿಂದ ‘ಪೋಲಿಸ್ ನ್ಯೂಸ್’ವರೆಗೂ ಪತ್ರಿಕಾ ಪ್ರಪಂಚ ಹಬ್ಬಿದೆ. ‘ವಿಕ್ರಮ’ದ ಪ್ರಸರಣಾ ಸಂಖ್ಯೆಗಿಂತ ‘ಪೋಲಿಸ್ ನ್ಯೂಸ್’ನ ಪ್ರಸರಣಾ ಸಂಖ್ಯೆ ಅಕವಾಗಿದೆ ಎಂಬುದು ನಂತರದ ಮಾತು ಬಿಡಿ! ಕೌಂಡಿನ್ಯ, ಬಿ.ವಿ ಅನಂತರಾಮು…ಕುವೆಂಪು, ಮಾಸ್ತಿ, ಭೈರಪ್ಪ….ಲೇಖಕರ ಬಳಗದಲ್ಲೂ  ಅದೇ ರೀತಿಯ ವಾತಾವರಣ.

ಹೀಗೀರುವಾಗ ಬ್ಲಾಗ್‌ಗಳಿಗೊಂದು ಸಹಿಂತೆ ಬೇಕಾ? ‘ಮಾಧ್ಯಮಕ್ಕೊಂದು ಸಂಹಿತೆ ಬೇಕು’ ಅಂತಾ ಹೇಳಹೊರಟ ಗೃಹಮಂತ್ರಿಗಳ ಮಾತನ್ನೇ ಕೇಳುವವರಿಲ್ಲ. ಅಂತಹದ್ದರಲ್ಲಿ , ಬ್ಲಾಗ್‌ಗೆ ಸಂಹಿತೆ ಬೇಕು ಎಂಬ ನಮ್ಮ  ಮಾತನ್ನು ಯಾರು ಕೇಳಿಯಾರು ಹೇಳಿ?! ಹಾಗಂತ, ನಾನು ಹೇಳುವುದನ್ನು,  ಹೇಳದೇ ಇರಲು ಸಾಧ್ಯವಿದೆಯಾ?  ಅಥವಾ, ನೀವು ಹಾಗೆಲ್ಲ  ಹೇಳಬೇಡಿ ಎಂದು ನನಗೆ ಹೇಳುವ ಅಕಾರ ಬೇರೆ ಯಾರಿಗಾದರೂ ಇದೆಯಾ?!

ಅಯ್ಯೋ ಮತ್ತದೇ ದ್ವಂದ, ಮತ್ತದೇ ರಗಳೆ…

ಗಂಭೀರವಾಗಿ ಹೊರಟ ಬರಹದ ಲಹರಿ ಹಾಸ್ಯದತ್ತ ಸಾಗುತ್ತಿದೆ! ಹೌದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ  ಅನ್ನಿಸಿದೆ ನನಗೆ. ಹಾಗಾಗಿ, ಸ್ವಲ್ಪ  ಹಾಸ್ಯ ಮಾಡಿಬಿಡೋಣ ಅಂತಾ! ನೀವ್ಯಾಕೆ  ಈ ವಿಚಾರವನ್ನು ಗಂಭೀರವಾಗಿ ಬರೆಯಲಿಲ್ಲ  ಅಂತಾ ಕೇಳುವ ಹಾಗಿಲ್ಲ . ಅಥವಾ ಯಾಕೆ ಹಾಸ್ಯವಾಗಿ ಬರೆಯುತ್ತಿದ್ದೀರಾ, ನಿಮಗೆ ಸಾಮಾಜಿಕ ಕಳಕಳಿ ಇಲ್ಲವಾ? ಅಂತಾ ಪ್ರಶ್ನಿಸುವ ಹಾಗೂ ಇಲ್ಲ.

ಹಾಗೂ ಇಲ್ಲ  ಹೀಗೂ  ಇಲ್ಲ…ಎಂತದು ಮಾರಾಯ್ರೆ ನಿಮ್ಮ  ಚೊರೆ. ನಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಉಂಟು ಮಾರಾಯ್ರೆ…ಹಾಗಂತ  ಈ ಬರಹದ ಕುರಿತ ನಿಮ್ಮ  ಸಿಟ್ಟನ್ನು  ನೀವಿಲ್ಲಿ  ಬಹಿರಂಗವಾಗಿ ಪ್ರಕಟಿಸುವಂತಿಲ್ಲ  ನೆನಪಿರಲಿ!

“ನೀವು ಒಂದಷ್ಟು  ಬ್ಲಾಗ್‌ಗಳನ್ನು ಮಾತ್ರ ಓದುತ್ತೀರಿ. ಒಂದಷ್ಟು  ಬ್ಲಾಗ್‌ಗೆ ಮಾತ್ರ ಕಮ್ಮೆಂಟ್ ಮಾಡುತ್ತೀರಿ…ಹಾಗಂತ  ನೀವು ನಮ್ಮ  ಬ್ಲಾಗ್‌ಗೆ ಬರಲೇ ಬೇಕು ಅಂತೇನಿಲ್ಲ. ಆದ್ರೂ  ಬೇರೆ ಬ್ಲಾಗ್‌ಗಳಿವೆ ಎಂಬುದು ನಿಮ್ಮ  ಗಮನಕ್ಕೆ ಇರಲಿ ಅಂತಾ ಹೆಳಿದೆ…

ಹೌದು, ನೀವು ಕಡೆಯ ಒಂದು ಸಾಲನ್ನು ಸೇರಿಸಲೇ ಬೇಕು. ನನ್ನ  ಬ್ಲಾಗ್ ಅನ್ನು ಬಂದು ನೋಡಲಿ ಎಂಬ ಭಾವನೆ ನಿಮ್ಮಲ್ಲಿ  ಇದ್ದರೂ ಕೂಡ, ಅದನ್ನು ಮುಚ್ಚಿಡುವ ಪ್ರಯತ್ನ ಮಾಡಲೇ ಬೇಕು!!! ‘ನಾನೇನು ಬನ್ನಿ  ಎಂದು ಯಾರನ್ನು  ಅಕ್ಷತೆ ಕೊಟ್ಟು  ಕರೆಯಲಿಲ್ಲ’ ಎಂಬ ಸಾಲನ್ನು ಓದುಗರರಿಗೆ ಆಗಾಗ ನೆನಪು  ಮಾಡಿಕೊಡುತ್ತಿರಬೇಕು…ಕ್ಷಮಿಸಿ..ನೆನಪು ಮಾಡಿಕೊಟ್ಟಂತೆ ನಟಿಸಬೇಕು!

“ಕಮ್ಮೆಂಟ್ ಹೆಚ್ಚಾಗಬೇಕು ಅಂದರೆ, ಅನಾಮಧೇಯ ಹೆಸರಲ್ಲಿ  ನೀವೇ ಒಂದಷ್ಟು  ಕಮ್ಮೆಂಟ್ ಹಾಕಿಕೊಳ್ಳಬೇಕು. ಹಿಟ್ಸ್  ಹೆಚ್ಚಾಗಬೇಕು ಅಂದರೆ, ಅವಶ್ಯಕತೆ ಇರಲಿ, ಇರದಿರಲಿ ಎಲ್ಲ  ಬ್ಲಾಗ್‌ಗಳಿಗೂ ಹೋಗಿ ನೀವು ಕಮ್ಮೆಂಟ್ ಜಡಿಯಬೇಕು! ಲೇಖನ ಚೆನ್ನಾಗಿರಲಿ, ಇರದೇ ಇರಲಿ…ನಿಮ್ಮ ಲೇಖನ ಚೆನ್ನಾಗಿದೆ ಅಂತಾ ಹೊಗಳಲೇ ಬೇಕು…ಯಾಕೆಂದರೆ, ಅವರು ನಮ್ಮ  ಬ್ಲಾಗಿಗೆ ಬಂದು ಲೇಖನ ಚೆನ್ನಾಗಿದೆ ಅನ್ನಬೇಕಲ್ಲ! ಲೇಖನದ ಪ್ರತಿಕ್ರಿಯೆಗಳ ಸಂಖ್ಯೆ ೫೦, ೧೦೦ರ ಗಡಿ ದಾಟಬೇಕಲ್ಲ!!! ಇದು ನಮ್ಮ  ಬ್ಲಾಗ್ ಲೋಕದ ಸ್ಥಿತಿ. ಅದಕ್ಕೆ ಕಡಿವಾಣ ಹಾಕಲೇ ಬೇಕು…” ಅಂತಾ ಗೆಳೆಯರ್‍ಯಾರೋ ಹೇಳುತ್ತಾರೆ.  ಅದನ್ನು  ಕೇಳಿ ಬಂದ ನಾನು, ಹೌದೆಲ್ಲ  ಅಂತಾ, ಅವರ ಕೊರಗನ್ನೆಲ್ಲ   ಯಥಾವತ್ತಾಗಿ ಬರೆದು ಬಿಡುತ್ತೇನೆ! ಹೇಳಿದವರು ಮಾತ್ರ, ‘ಅಯ್ಯೋ ನಮಗ್ಯಾಕೆ ರಿಸ್ಕು. ವಿವಾದ…’ ಅಂತಾ  ನನ್ನ ಬರಹಕ್ಕೆ  ಕಮ್ಮೆಂಟೂ  ಮಾಡದೇ ನುಣುಚಿಕೊಂಡು ಬಿಡುತ್ತಾರೆ! ನಾನು ನಿಷ್ಠುರವಾದಿಯಾಗುತ್ತೇನೆ, ಎಲ್ಲರ ಕೆಂಗಣ್ಣಿಗೆ  ಬೀಳುತ್ತೇನೆ…ಅಯ್ಯೋಯ್ಯೋ  ನಾನು ಮತ್ತೊಂದು ವಿವಾದಕ್ಕೆ  ಎಡೆ ಮಾಡಿಕೊಡುತ್ತಿದ್ದೀನಿ ಅಂತಾ ಅನ್ನಿಸುತ್ತಿದೆ. ನನಗೆ ವಾಸ್ತವ ಯಾವುದು, ವಿವಾದ ಯಾವುದು ಅಂತಾ ಗೊತ್ತೇ ಆಗುವುದಿಲ್ಲ.  ಕ್ಷಮೆ ಇರಲಿ ಪ್ಲೀಸ್…!!!

ಮತ್ತದೇ ಪ್ರಶ್ನೆ, ಇಂತಹ ಬ್ಲಾಗ್‌ಲೋಕಕ್ಕೆ ನೀತಿ-ನಿಯಮದ ಅಗತ್ಯವಿದೆಯಾ?!

ನಾನು ಬೇಕು ಅಂದರೆ, ಸಂದೀಪ್ ಕಾಮತ್ ಬೇಡ ಅನ್ನುತ್ತಾರೆ.  ಸಂದೀಪ್ ಬೇಡ ಅಂದರೆ, ನಾನು ಬೇಕು ಅನ್ನುತ್ತೇನೆ! ನಮ್ಮಿಬ್ಬರ ನಡುವಣ ವಾದದಿಂದ ಸೂರ್ತಿ ಪಡೆದ ಮತ್ತೊಂದಷ್ಟು  ಜನ ಈ ಚರ್ಚೆಯಲ್ಲಿ  ಭಾಗವಹಿಸುತ್ತಾರೆ. ಇನ್ನು, ಕೆಲವರು ಈ ಚರ್ಚೆಯ ಕುರಿತಾಗಿ ತಮ್ಮ  ಬ್ಲಾಗಿನಲ್ಲಿ  ಗೀಚಿಕೊಳ್ಳುತ್ತಾರೆ.

ಸೆಕ್ಷನ್ ೧೪೭!
ಉದ್ವಿಗ್ನ, ಬ್ಲಾಗ್ ಲೋಕ ಅಕ್ಷರಶಃ ಉದ್ವಿಗ್ನ. ಆರೋಪಿ ಸ್ಥಾನದಲ್ಲಿ  ಕೋಡ್ಸರ ಹಾಗೂ ಸಂದೀಪ್ ಕಾಮತ್!!! ವಿಕಾಸ್ ಹೆಗಡೆ ಅರೆಸ್ಟ್!!!

ಅಯ್ಯೋ ನೀವ್ಯಾಕೆ ಒಂದಷ್ಟು  ಜನರ ಹೆಸರನ್ನೇ ಯಾವಾಗ್ಲು  ಬಳಸುತ್ತೀರಾ? ನಿಮಗೆ ಬೇರೆಯವರ ಹೆಸರು ಗೊತ್ತಿಲ್ಲವಾ? ಮತ್ತೆ ತಕರಾರು! ಅದನ್ನು ಸರಿದೂಗಿಸಿಕೊಳ್ಳಲು ನಾನು ಹೆಣಗಾಡಬೇಕು. ನಾನ್ಯಾಕೆ ಅವರ ಹೆಸರನ್ನೇ ಬಳಸಿಕೊಂಡೆ ಎಂಬುದನ್ನು ಆಲೋಚಿಸಬೇಕು! ಆಲೋಚನೆ  ಇಲ್ಲದೇ ಬಳಸಿದ ಹೆಸರುಗಳು ಮತ್ತೊಂದು ಆಲೋಚನೆಯನ್ನು ಹುಟ್ಟು  ಹಾಕಿಕೊಡುತ್ತದೆ. ಪ್ರಶ್ನಿಸಿದವನ  ಮೇಲೆ ಪುಟ್ಟದೊಂದು ಅನುಮಾನ ಶುರುವಾಗುತ್ತದೆ…

‘ಬ್ಲಾಗ್ ಲೋಕ ತಣ್ಣಗಾಗುತ್ತದೆ. ತಣ್ಣಗಾಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ…’ಹಾಗಂತ ಲೇಖನ ಬರೆಯಲು ಮನಸು ಬರುತ್ತದೆ. ಗಂಭೀರವಾಗಿ ಬರೆಯಬೇಕೋ, ಹಾಸ್ಯವಾಗಿ ಬರೆಯಬೇಕೋ? ಹಾಸ್ಯವಾಗಿ ಬರೆದರೂ  ಕಷ್ಟ, ಗಂಭೀರವಾಗಿ ಬರೆದರೂ ಕಷ್ಟ.  ‘ಇದು ಶುದ್ಧಾತೀಶುದ್ಧ  ಹಾಸ್ಯ  ಬರಹ ಸ್ವಾಮಿ’ ಅಂತಾ ಹೇಳಿಕೊಳ್ಳಬೇಕಾದ ಪರಿಸ್ಥಿತಿ! ಬರೆಯುವುದೇ ಬೇಡ. ಇಲ್ಲಿ  ಅಭಿವ್ಯಕ್ತಿ  ಸ್ವತಂತ್ರ ಕಸಿದುಕೊಂಡಿದ್ದಾರೆ…“ಅಲ್ಲ  ಬ್ಲಾಗ್‌ನಲ್ಲಿ  ಬರೆದು ನಮಗೆ ಆಗಬೇಕಾದ್ದಾದರೂ ಏನು? ದುಡ್ಡು  ಸಿಗುವುದಿಲ್ಲ, ಪತ್ರಿಕೆಗಳ ಹಾಗೆ ಲಕ್ಷಾಂತರ ಓದುಗರಂತೂ ಇಲ್ಲವೇ ಇಲ್ಲ!  ಅಂದಹಾಗೆ, ಮುಖ್ಯವಾಹಿನಿಯಲ್ಲಿ  ಬರೆಯಿರಿ ಅಂತಾ ಹೇಳಿದರೂ, ಕೆಲವೊಮ್ಮೆ ಬರೆಯಲು  ಮೂಡು ಬರುವುದಿಲ್ಲ.  ನಮ್ಮ  ಮೂಡಿಗೆ ನಿಲುಕುವ ಬರಹಗಳು ಪ್ರಕಟಣೆಗೆ ಯೋಗ್ಯವಾಗಿರುವುದಿಲ್ಲ! ಧಾರವಾಹಿಗೆ ಕಥೆ ಬರೆದುಕೊಡು ಅಂತಾ ಗೆಳೆಯರು ಕೇಳಿದರೂ, ಅಯ್ಯೋ ನನಗೆ ಸಿರಿಯಲ್‌ಗೆ ಬರೆಯುವಷ್ಟು  ತಾಳ್ಮೆಯಿಲ್ಲ  ಅಂತಾ ತಪ್ಪಿಸಿಕೊಳ್ಳುತ್ತೇನೆ…”ಹಾಗಂದುಕೊಳ್ಳುವ ಹೊತ್ತಿಗೆ, ಅನ್ನಿಸಿದ್ದನ್ನೆಲ್ಲ  ಸೇರಿಸಿ  ಮತ್ತೊಂದು ಬರಹವನ್ನು ಬ್ಲಾಗ್‌ಗೆ ಹಾಕಿರುತ್ತೇನೆ! ಯಾಕೆಂದರೆ ಇದು ನನ್ನ  ಮುಕ್ತ ತಾಣ. ಹಾಗೆ ಬರೆಯಬೇಕು, ಹೀಗೆ ಬರೆಯಬೇಕು ಅಂತಾ ಇಲ್ಲಿ  ಯಾರು ಹೇಳುವವರು ಇಲ್ಲ. ನಿರ್ದೇಶಕನಿಗೆ, ಕ್ಯಾಮರಕ್ಕೆ  ತಕ್ಕಂತ ಕಥೆ ಇಲ್ಲಿ  ಬೇಡ. ಥಳಕು ಬಳುಕಿನ ವೈಯ್ಯಾರಿಯರನ್ನು ಅನಾವಶ್ಯಕವಾಗಿ ತಂದು ಕುಣಿಸಿ, ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಅವಶ್ಯಕತೆಯಂತೂ ಖಂಡಿತಾ ಇಲ್ಲ!

ಅಯ್ಯೋ ಚರ್ಚೆ ಹಾದಿ ತಪ್ಪಿಹೋಗಿದೆ…ಅಲ್ಲಲ್ಲ  ಬರಹದ  ಟ್ರ್ಯಾಕ್ ತಪ್ಪಿದೆ. ನೀತಿ ಸಂಹಿತೆಯ ವಿಷಯ ಮರೆತೇ ಹೋಗಿದೆ. ನಗಿಸುವ ಬರದಲ್ಲಿ  ವೈಚಾರಿಕತನವೇ ಇಲ್ಲದಂತಾಗಿದೆ! ಅಂದಹಾಗೆ ಇದೂ ಕೂಡ ಹಾಸ್ಯ ಬರಹ ಸ್ವಾಮಿ…ಅಂತಾ ಹೇಳಬೇಕಾ? ಹೇಳದಿದ್ದರೆ, ಕೆಲವರಿಗೆ ಮತ್ತೆ ನನ್ನ ಕುರಿತು ಅನುಮಾನ ಶುರುವಾಗಬಹುದೆಂಬ ಭಯ!

ಕಡೆಯ ಪ್ರಶ್ನೆ ಏನೆಂದರೆ, ಬ್ಲಾಗ್‌ಗೊಂದು ನೀತಿ ಸಂಹಿತೆ ಬೇಕಾ?!

ನಿಮ್ಮ  ಪ್ರತಿಕ್ರಿಯೆಗಳು ಖಂಡಿತಾ ಮುಖ್ಯ…!!! ಹಾಗಂತ, ನಾನೇನು ಪ್ರತಿಕ್ರಿಯೆಗೋಸ್ಕರ ಬರೆಯುವವ ಅಂದುಕೊಳ್ಳಬೇಡಿ!!!

Read Full Post »