Feeds:
ಲೇಖನಗಳು
ಟಿಪ್ಪಣಿಗಳು

Archive for ಜೂನ್, 2013

ಅಂತೂ ಕರ್ನಾಟಕದ ರಾಜಕೀಯ ಪ್ರಹಸನಕ್ಕೆ ತೆರೆ ಬಿದ್ದಿದೆ. ಕಿತ್ತಾಟ, ಜಗಳ, ಭ್ರಷ್ಟಾಚಾರ ಎಲ್ಲವಕ್ಕೂ ತಕ್ಕ ಉತ್ತರ ಸಿಕ್ಕಿದೆ. ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿಯೂ ಆಗಿದೆ. ಇನ್ನಾದ್ರೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಬಹುದೇನೋ ಎಂಬುದು ಹಲವರ ನಿರೀಕ್ಷೆ. ಆದರೆ ಈ ನಿರೀಕ್ಷೆ ಹುಸಿಯಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ! ೫೦ ವರ್ಷಗಳಲ್ಲಿ ದೇಶದಲ್ಲಿ ಏನೂ ಬದಲಾವಣೆ ಮಾಡದ ಕಾಂಗ್ರೆಸ್ ೫ ವರ್ಷದಲ್ಲಿ ಏನು ಕಡಿದು ಕಟ್ಟೆ ಹಾಕುತ್ತೆ ಅಂತ ಕೆಲವರು ರಾಗ ಎಳೆಯುತ್ತಿದ್ದಾರೆ. ‘ಕ್ಷಮಿಸಿ, ಇನ್ನು ೫ ವರ್ಷಗಳ ಕಾಲ ಕರ್ನಾಟಕದ ಆಡಳಿತವನ್ನು ದಿಲ್ಲಿಗೆ ಹಸ್ತಾಂತರಿಸಲಾಗಿದೆ!’ ಎಂದು ವಿಧಾನಸೌಧದ ಮುಂದೆ ಒಂದು ಬೋರ್ಡ್ ಬರೆಸಲಾಗುತ್ತಿದೆಯಂತೆ! ಹಾಗಂತ ಕೆಲವರು ಆಡಿಕೊಳ್ಳುತ್ತಿದ್ದಾರೆ. ವಿಧಿಯಿಲ್ಲದೆ ಜನ ಕಾಂಗ್ರೆಸ್ ಆರಿಸಿದ್ದಾರೆ ಹೊರತು, ಇದು ಕಾಂಗ್ರೆಸ್‌ನ ಗೆಲುವಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ಜನ ಹೀಗೆ ಆಡಿಕೊಳ್ಳಲಿಕ್ಕೂ ಹಲವಾರು ಕಾರಣಗಳಿವೆ. ಕರ್ನಾಟಕ ಏಕೀಕರಣದ ನಂತರ ೩೮ ವರ್ಷಗಳ ಕಾಲ ರಾಜ್ಯವನ್ನು ಆಳಿದ ಬಹುದೊಡ್ಡ ಪಕ್ಷ ಕಾಂಗ್ರೆಸ್. ೧೯೫೬ರಿಂದ ೧೯೭೧ರವರೆಗೆ, ಅಂದರೆ ನಿರಂತರವಾಗಿ ೧೫ ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ನಿಜಲಿಂಗಪ್ಪನವರಿಂದ ಶುರುವಾದ ಕಾಂಗ್ರೆಸ್ ಆಡಳಿತ ವೀರೇಂದ್ರ ಪಾಟೀಲರವರೆಗೆ ಮುಂದುವರಿಯುತ್ತೆ. ಬಂಡಾಯ, ಆಂತರಿಕ ಕಲಹದ ನಡುವೆಯೂ ಮತ್ತೆ ಕಾಂಗ್ರೆಸ್‌ನ್ನು ಜನ ಗೆಲ್ಲಿಸುತ್ತಾರೆ. ದೇವರಾಜ್ ಅರಸು ೧೯೭೨ರಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ಮುಂದಿನ ಅವಧಿಯಲ್ಲೂ ಅವರೇ ಸಿಎಂ ಆಗಿ ಮರು ಆಯ್ಕೆಗೊಳ್ಳುತ್ತಾರೆ. ಆದರೆ ಎರಡನೇ ಅವಧಿಯಲ್ಲಿ ಹೆಚ್ಚು ಕಾಲ ಉಳಿಯದ ಅರಸು, ಗುಂಡುರಾವ್‌ಗೆ ಅಧಿಕಾರ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ವಾಸ್ತವವಾಗಿ ಕರ್ನಾಟಕ ಬೇರೆ ಪಕ್ಷದ ತೆಕ್ಕೆಗೆ ಬಂದಿದ್ದು ೧೯೮೩ರಲ್ಲಿ. ಜನತಾಪರಿವಾರದಿಂದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುತ್ತಾರೆ. ೧೯೫೬ರಿಂದ ೧೯೮೩ರ ಜನವರಿ.೬ರವರೆಗೂ, ಅಂದರೆ ೨೭ ವರ್ಷಗಳ ಕಾಲ ನಮ್ಮ ರಾಜ್ಯ ಕಾಂಗ್ರೆಸ್ ಕೈಯಲ್ಲಿತ್ತು. ಏಕೀಕರಣದ ನಂತರ ೬ ಜನ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ. ಆದರೆ ನಮ್ಮ ರಾಜ್ಯ ಆವತ್ತು ಎಷ್ಟು ಅಭಿವೃದ್ಧಿ ಆಗಿತ್ತು ಅನ್ನುವುದು ಮಾತ್ರ ಕೇಳಬಾರದ ಪ್ರಶ್ನೆ!
ಜನತಾ ಪರಿವಾರದ ಒಳಜಗಳ ಅಧಿಕಾರವನ್ನು ಹೆಚ್ಚು ಕಾಲ ಉಳಿಯಲು ಬಿಡುವುದಿಲ್ಲ. ೧೯೮೩ರಿಂದ೮೫ರವರೆಗೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ವಿಧಾನಸಭೆಯನ್ನು ವಿಸರ್ಜಿಸಿ ಮತ್ತೆ ೧೯೮೫ರಲ್ಲಿ ಸಿಎಂ ಸ್ಥಾನಕ್ಕೆ ಏರುತ್ತಾರೆ. ಆದರೆ ಇಲ್ಲಿ ಅವರು ಅಧಿಕಾರದಲ್ಲಿ ಉಳಿಯುವುದು ಕೇವಲ ೩೪೨ ದಿನ ಮಾತ್ರ. ಜನತಾ ಪರಿವಾರದ ಒಳಜಗಳದಿಂದಾಗಿ ಮುಂದಿನ ೨೮೧ ದಿನಗಳ ಕಾಲ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿರುತ್ತಾರೆ.
ಇವತ್ತಿನ ಸ್ಥಿತಿಯಂತೆ ಆವತ್ತಿನ ಜನತಾಪರಿವಾರದ ಜಗಳ ಕಾಂಗ್ರೆಸ್‌ಗೆ ಮತ್ತೆ ಲಾಭ ಮಾಡಿಕೊಡುತ್ತದೆ. ೧೯೮೯ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಿತ್ತಾಟ, ಗುದ್ದಾಟದ ನಡುವೆ ೩ ಮುಖ್ಯಮಂತ್ರಿಗಳೊಂದಿಗೆ ೫ ವರ್ಷವನ್ನು ಪೂರೈಸುತ್ತದೆ. ಒನ್ಸ್ ಅಗೈನ್ ಈ ಕಿತ್ತಾಟದ ಲಾಭವನ್ನು ಜನತಾದಳ ಪಡೆದುಕೊಳ್ಳುತ್ತದೆ. ೧೯೯೪ರಲ್ಲಿ ದೇವೆಗೌಡರು ಸಿಎಂ ಆಗುತ್ತಾರೆ. ಅದೃಷ್ಟ ಖುಲಾಯಿಸಿ ಪ್ರಧಾನಿ ಕುರ್ಚಿ ಕರೆದಾಗ ಗೌಡರು ಸಿಎಂ ಸ್ಥಾನವನ್ನು ಜೆ.ಎಚ್.ಪಟೇಲರಿಗೆ ಬಿಟ್ಟು ಹೋಗುತ್ತಾರೆ. ಆದರೆ ನಂತರದ ಚುನಾವಣೆಯಲ್ಲಿ ಮತ್ತೆ ಜನ ಕಾಂಗ್ರೆಸ್‌ನತ್ತ ಒಲವು ತೋರುತ್ತಾರೆ. ೧೯೯೯ರಲ್ಲಿ ಜಯಭೇರಿ ಭಾರಿಸಿದ ಕಾಂಗ್ರೆಸ್ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಸರ್ಕಾರ ರಚಿಸುತ್ತದೆ. ಮತ್ತೆ ೨೦೦೪ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಬಹುಮತ ಬರುವುದಿಲ್ಲ. ಹೀಗಾಗಿ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಧರ್ಮಸಿಂಗ್ ಸಿಎಂ ಆಗುತ್ತಾರೆ. ಒಂದೂ ಮುಕ್ಕಾಲು ವರ್ಷ ಕಳೆಯುವ ಹೊತ್ತಿಗೆ ಕೈ ಎತ್ತಿದ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿ ಟ್ವೆಂಟಿ-೨೦ ಸರ್ಕಾರ ರಚಿಸುತ್ತಾರೆ. ಇಲ್ಲಿ ಯಡಿಯೂರಪ್ಪಗೆ ಮೋಸ ಮಾಡಿದ ಆರೋಪಕ್ಕೆ ಗುರಿಯಾಗುತ್ತಾರೆ.
ಪರಿಣಾಮವಾಗಿ ೨೦೦೮ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುತ್ತೆ. ನಂತರ ನಡೆದಿದ್ದು ರಾಜಕೀಯ ಪ್ರಹಸನ. ಏಕೀಕರಣದ ನಂತರ ೧೯೮೩-೮೯ರವರೆಗೆ, ೧೯೯೪-೯೯ರವರೆಗೆ, ೨೦೦೬-೨೦೦೯ರವರೆಗೆ, ೨೦೦೯-೧೩ರವರೆಗೆ ಒಟ್ಟಾರೆಯಾಗಿ ೧೯ ವರ್ಷ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್‌ಯೇತರ ಸರ್ಕಾರ ಅಸ್ತಿತ್ವದಲ್ಲಿ ಇದಿದ್ದು. ಉಳಿದ ೩೮ ವರ್ಷಗಳ ಕಾಲ ಕಾಂಗ್ರೆಸ್ ನಮ್ಮ ರಾಜ್ಯವನ್ನು ಆಳಿದೆ. ದುರಂತವೆಂದರೆ ಮುಖ್ಯಮಂತ್ರಿ ಕುರ್ಚಿಗೆ ಏರಿದ ದಿಗ್ಗಜರ ಕ್ಷೇತ್ರವೇ ಇನ್ನೂ ಅಭಿವೃದ್ಧಿಗೊಂಡಿಲ್ಲ! ಇದು ಕಾಂಗ್ರೆಸ್ ವಿರೋಧಿಯೋ ಅಥವ ಬಿಜೆಪಿ, ಜೆಡಿಎಸ್ ಪರವೋ ಅಲ್ಲ. ರಾಜ್ಯದ ವಾಸ್ತವ ಚಿತ್ರಣ.
ಅಭಿವೃದ್ಧಿ ವಿಚಾರ ಬಂದಾಗ ನಾವು ಗುಜರಾತ್ ಕುರಿತು ಮಾತನಾಡುತ್ತೇವೆ. ಮೋದಿ ಆಡಳಿತ ಬಂದ ನಂತರ ಗುಜರಾತ್ ಅಭಿವೃದ್ಧಿಯಾಗಿರುವುದು ಇದಕ್ಕೆ ಬಹುಮುಖ್ಯ ಕಾರಣ. ಕಳೆದ ವರ್ಷ ಇಂಡಿಯಾ ಟುಡೆ ಮಾಡಿದ ಸಮೀಕ್ಷೆ ಪ್ರಕಾರ ಗುಜರಾತ್ ಅಭಿವೃದ್ಧಿಯಲ್ಲಿ ನಂಬರ್ ಒನ್ ರಾಜ್ಯ. ಕೇರಳಕ್ಕೆ ೨ನೇ ಸ್ಥಾನ. ಕರ್ನಾಟಕ ೧೦ನೇ ಸ್ಥಾನದಲ್ಲಿದೆ. ಇನ್ನೂ ಅಭಿವೃದ್ಧಿಗೆ ಪ್ರಮುಖವಾದ ಮಾನದಂಡ ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್‌ನ ವರದಿ. ರಾಜ್ಯದ ಜನಸಂಖ್ಯೆ, ಆದಾಯ, ಜಿಡಿಪಿ ಎಲ್ಲವನ್ನೂ ನಿರ್ಧರಿಸಿ ಈ ಸೂಚ್ಯಂಕ ಹೊರಬರುತ್ತದೆ. ಇದರಲ್ಲಿ ಕರ್ನಾಟಕಕ್ಕೆ ೧೨ನೇ ಸ್ಥಾನ. ಕೇರಳ ಮತ್ತು ದಿಲ್ಲಿ ಮೊದಲೆರಡು ಸ್ಥಾನಗಳಲ್ಲಿವೆ. ಯಾವ ಅಂಕಿ-ಅಂಶಗಳನ್ನು ತೆಗೆದು ನೋಡಿದರೂ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕಕ್ಕೆ ೧೦ರ ನಂತರದ ಸ್ಥಾನವೇ!
ವಿಸ್ತೀರ್ಣದಿಂದ ದೇಶದ ೮ನೇ ಬಹುದೊಡ್ಡ ರಾಜ್ಯ ನಮ್ಮದು. ಆದಾಗ್ಯೂ ಅಭಿವೃದ್ಧಿಯ ವಿಚಾರದಲ್ಲಿ ಬಹಳಷ್ಟು ಹಿಂದಿದ್ದೇವೆ. ಉತ್ತರ ಕರ್ನಾಟಕದ ಬಹುಭಾಗದಲ್ಲಿ ಅನ್ನಕ್ಕಿಂತ ಹೆಚ್ಚಾಗಿ ನೀರಿನ ಸಮಸ್ಯೆ. ಅಕ್ಕಿ ಸಿಕ್ಕರೂ ನೀರು ಸಿಗುವುದಿಲ್ಲ. ಇನ್ನೂ ಕೋಲಾರ, ಚಿಕ್ಕಬಳ್ಳಾಪುರದ ಕಡೆಗೂ ಕುಡಿಯುವ ನೀರಿಗೆ ಹಾಹಾಕಾರ. ಸರ್ಕಾರ ಮೊದಲು ಕುಡಿಯುವ ನೀರಿನ ಪೂರೈಕೆ ಮಾಡಬೇಕಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ೧ ರೂಪಾಯಿ ಕೆ.ಜಿ. ಅಕ್ಕಿ ಘೋಷಿಸಿದ್ದಾರೆ. ಇದು ವಾದ-ವಿವಾದಕ್ಕೆ ಕಾರಣವಾಗಿದೆ. ಬಡವರಿಗೆ ೧ ರೂಪಾಯಿಗೆ ಅಕ್ಕಿ ನೀಡುವುದು ಖಂಡಿತ ಉತ್ತಮ ನಿರ್ಧಾರ. ಆದರೆ ಆ ಅಕ್ಕಿ ತಿನ್ನಲು ಯೋಗ್ಯವಾಗಿರುತ್ತದೆಯಾ ಎಂಬುದು ಬಹುದೊಡ್ಡ ಪ್ರಶ್ನೆ. ಬಿಜೆಪಿ ಸರ್ಕಾರ ಕೂಡ ೩ ರೂಪಾಯಿಗೆ ಅಕ್ಕಿ ಘೋಷಿಸಿತ್ತು. ರೇಷನ್ ಕಾರ್ಡ್ ಹಿಡಿದು ನ್ಯಾಯಬೆಲೆ ಅಂಗಡಿ ಮುಂದೆ ನಿಂತಾಗಲೇ ಈ ಅಕ್ಕಿಯ ಯೋಗ್ಯತೆ ಗೊತ್ತಾಗುವುದು. ಹಲವು ಕಡೆ ದನ ತಿನ್ನಲು ಯೋಗ್ಯವಲ್ಲದ ಅಕ್ಕಿ ಪೂರೈಕೆಯಾಗುತ್ತದೆ. ಸೊಸೈಟಿ ಅಕ್ಕಿ ಸಹವಾಸ ಬೇಡಪ್ಪ ಅಂತ ಜನ ಆಡಿಕೊಳ್ಳುತ್ತಾರೆ. ಅಂಥ ಅಕ್ಕಿಯನ್ನು ೧ ರೂಪಾಯಿಗೆ ಕೊಡುವ ಬದಲು ತಿನ್ನಲು ಯೋಗ್ಯವಾದ ಅಕ್ಕಿಯನ್ನು ೬ ರೂಪಾಯಿ ಕೆಜಿಗೆ ಕೊಟ್ಟರೂ ಪರ್ವಾಗಿಲ್ಲ ಅನ್ನೋದು ಬಡವರ ವಾದ.
ಅಕ್ಕಿ ಕೊಟ್ಟರೆ, ಮನೆ ನಿರ್ಮಿಸಿಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂಬುದು ಮೂರ್ಖತನ. ಇದು ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಕೊಟ್ಟಿದ್ದೇವೆ ಎಂಬುದನ್ನು ತೋರಿಸಿಕೊಳ್ಳುವ ತಂತ್ರವಷ್ಟೆ. ಊರಿಗೆ ಊರು ಅಭಿವೃದ್ಧಿ ಆಗಬೇಕು. ಕುಡಿಯುವ ನೀರು, ಶಾಲೆ, ಊರಿಗೆ ಸರಿಯಾದ ಸಂಪರ್ಕ, ರಸ್ತೆಗಳು ಬೇಕು. ಇರುವ ಜನರಿಗೆ ಭಿಕ್ಷೆ ರೂಪದಲ್ಲಿ ನೀವು ಏನ್ನನ್ನು ನೀಡುವುದು ಬೇಡ. ದುಡಿಯುವ ಕೈಗಳಿಗೆ ಸೂಕ್ತವಾದ ಕೆಲಸ ಕೊಡಿ. ಅವರಿಗೆ ಆದಾಯದ ಮಾರ್ಗ ಹುಡುಕಿ, ಸರ್ಕಾರವೂ ಅದರಿಂದ ಆದಾಯ ಪಡೆಯಲಿ. ರಾಜ್ಯದ ೨೨೪ ಕ್ಷೇತ್ರವೂ ಏಕಕಾಲಕ್ಕೆ ಅಭಿವೃದ್ಧಿಯಾಗಬೇಕು ಎಂದಲ್ಲ. ಒಂದು ಸರ್ಕಾರದಲ್ಲಿ ಕನಿಷ್ಠ ಒಂದು ಮಾದರಿ ಕ್ಷೇತ್ರವನ್ನಾದರೂ ನಾವು ನಿರೀಕ್ಷಿಸಬಹುದಾ? ಅನೇಕ ಯುವ ರಾಜಕಾರಣಿಗಳು ಈ ಸಲ ವಿಧಾನಸಭೆ ಪ್ರವೇಶಿಸಿದ್ದಾರೆ. ಅಂಥವರಲ್ಲಿ ಒಬ್ಬರ ಕ್ಷೇತ್ರವನ್ನು ನಾವು ಈ ಸಲ ಮಾದರಿ ಕ್ಷೇತ್ರ ಅನ್ನಬಹುದಾ?
ಆ ಕ್ಷೇತ್ರದಲ್ಲಿ ಎಲ್ಲ ಊರಿಗೂ ಸಂಪರ್ಕ ಇರಬೇಕು. ಕುಡಿಯುವ ನೀರಿಗೆ ಕೊರತೆಯಾಗಬಾರದು. ಕನಿಷ್ಠ ದೂರಕ್ಕೊಂದು ಶಾಲೆ ಬೇಕು. ವಿದ್ಯುತ್ ಸಂಪರ್ಕ ಇರಬೇಕು. ರಸ್ತೆ ಉತ್ತಮವಾಗಿರಬೇಕು. ವರ್ಷಕ್ಕೆ ೫ ಕ್ಷೇತ್ರವನ್ನು ಈ ಮಾನದಂಡದಲ್ಲಿ ಅಭಿವೃದ್ಧಿಗೊಳಿಸಿದರೂ ನಮ್ಮ ರಾಜ್ಯ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಅದರ ಅನುಷ್ಠಾನದ ಕುರಿತು ಮಾತ್ರ ಗಮನಹರಿಸುವುದಿಲ್ಲ. ಯೋಜನೆ ಘೋಷಿಸಿ ಹಣ ಮಂಜೂರು ಮಾಡಿ, ಮಾಧ್ಯಮಗಳ ಮುಂದೆ ಭಾಷಣ ಬಿಗಿದರೆ ಮುಗೀತು ಅನ್ನೋದು ಸರ್ಕಾರಗಳ ಧೋರಣೆ. ಆದರೆ ಆ ಯೋಜನೆಗಳು ಎಷ್ಟರ ಮಟ್ಟಿಗೆ ತಲುಪಬೇಕಾದವರನ್ನು ತಲುಪುತ್ತದೆ ಎಂಬುದು ಮುಖ್ಯ. ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಇದೆ. ಯಾರೂ ಮೃಷ್ಠಾನ ಭೋಜನವನ್ನು ಕೇಳುವುದಿಲ್ಲ. ಕನಿಷ್ಠ ಆರೋಗ್ಯಯುತವಾದ ಊಟ ಎಷ್ಟು ಶಾಲೆಗಳಲ್ಲಿ ಸಿಗುತ್ತಿದೆ ಎಂಬುದನ್ನು ಸರ್ಕಾರ ಒಮ್ಮೆ ಅವಲೋಕಿಸಬೇಕಿದೆ. ಅದೇ ಕಥೆ ಒಂದು ರೂಪಾಯಿ ಕೆಜಿ ಅಕ್ಕಿಗೂ ಮುಂದುವರಿಯುತ್ತದೆ. ಟೆಂಡರ್ ಹಿಡಿದ ದಲ್ಲಾಳಿಗಳು ಯೋಜನೆಯ ಫಲಾನುಭವಿಗಳಾಗುತ್ತಿದ್ದಾರೆ ಹೊರತು ಮತ ಹಾಕಿದ ಜನರಲ್ಲ. ಈ ದುರಂತದಿಂದ ನಮ್ಮ ರಾಜ್ಯ ಪಾರಾಗಬೇಕಿದೆ.
ಸಿದ್ದರಾಮಯ್ಯನವರ ಮುಂದೆ ೨ ಬಹುದೊಡ್ಡ ಸವಾಲುಗಳಿವೆ. ಒಂದು ೩೮ ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಏನು ಮಾಡಿಲ್ಲ ಎಂಬ ಆರೋಪವನ್ನು ಹುಸಿಯಾಗಿಸುವುದು. ಎರಡನೇಯದಾಗಿ ಕರ್ನಾಟಕದ ಆಡಳಿತ ದಿಲ್ಲಿಗೆ ಹಸ್ತಾಂತರವಾಗಿಲ್ಲ ಎಂಬುದನ್ನು ಸಾಬೀತುಪಡಿಸುವುದು. ಸಿದ್ದರಾಮಯ್ಯನವರೇ ನಾವು ನಿಮ್ಮಿಂದ ಬೇರೆ ಏನ್ನನ್ನೂ ಅಪೇಕ್ಷಿಸುತ್ತಿಲ್ಲ. ನೀವು ಮುಖ್ಯಮಂತ್ರಿಗಳಾಗಿ ಒಂದು ವರ್ಷ ಕಳೆಯುವುದರೊಳಗೆ ಒಂದು ಮಾದರಿ ಕ್ಷೇತ್ರವನ್ನು ರಾಜ್ಯಕ್ಕೆ ಪ್ರಸ್ತುಪಡಿಸಿ. ಇದನ್ನು ನಿಮ್ಮಿಂದ ನಿರೀಕ್ಷಿಸಬಹುದಾ?

 

 

 

Read Full Post »