Feeds:
ಲೇಖನಗಳು
ಟಿಪ್ಪಣಿಗಳು

Archive for ಆಗಷ್ಟ್, 2008

ಆಫೀಸ್‌ನಲ್ಲಿ ಕುಳಿತು ಹಲವಾರು ಕಂಪನಿಗಳ, ಷೇರು ವ್ಯವಹಾರಗಳ, ಹಣದುಬ್ಬರದ ಸುದ್ದಿ ಬರೆದೂ ಬರೆದೂ, ಬೇಜಾರಾಗಿತ್ತು. ಎರಡು ದಿನದ ಮಟ್ಟಿಗೆ ಮೈಸೂರು ಕಡೆ ಮುಖ ಮಾಡಲು ನಿರ್ಧರಿಸಿದೆ. ರೈಲಿಗೆ ಬಂದ್ರೆ ಬೇಗ ಬರ್ತಿಯ ಅಂತಾ ಗೆಳೆಯ ರಾಘು ಹೇಳಿದ್ದ. ಹಾಗಾಗಿ ಬೆಳಿಗ್ಗೆ ಏಳುವರೆ ಟ್ರೈನ್‌‍ಗೆ ಹೋಗುವುದು ಅಂತಾ ಐದು ಮುಕ್ಕಾಲಿಗೆ ಎದ್ದು ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ರೈಲ್ವೇ ನಿಲ್ದಾಣಕ್ಕೆ ಓಡಿ ಟಿಕೆಟ್ ಗಿಟ್ಟಿಸಿದೆ. ಪ್ಲಾಟ್ ಪಾರಮ್ ನಂ.೭ ರಲ್ಲಿ ರೈಲು ಸಿದ್ದವಾಗಿ ನಿಂತಿತು. ಮೈಸೂರು-ಅರಸೀಕೆರೆ ಅಂತಾ ಬೋರ್ಡ್ ತೂಗಾಡುತ್ತಿತ್ತು.  ರೈಲು ಹತ್ತಿ ಸೀಟು ಹಿಡಿದು, ಪಕ್ಕದಲ್ಲಿದವರ ಹತ್ತಿರ “ಇದು ಮೈಸೂರಿಗೆ ಹೋಗುವ ಟ್ರೈನ್ ಅಲ್ವಾ” ಅಂದೆ. ಅವ ಹೌದು ಅಂದ. ನಾನು ಹೌದು ಅಂತಾ ಭಾವಿಸಿ ಬೈರಪ್ಪನವರ ಅನ್ವೇಷಣ ಕಾದಂಬರಿಯ ಪುಟ ತೆರೆದುಕೊಂಡು ಕುಳಿತೆ.

ಟ್ರೈನ್ ಹಳಿ ತಪ್ಪಿತ್ತು… ಅಲ್ಲಲ್ಲ… ನಾನು ಹಳಿ ತಪ್ಪಿದ್ದೆ ಎಂದು ನನಗೆ ಗೊತ್ತಾಗಿದ್ದು ರೈಲು ಬಂಗಾರ ಪೇಟೆ ದಾಟಿದ ನಂತರ! ಮೈಸೂರಿಗೆ ಹೋಗುವ ಟ್ರೈನ್ ಅಂತಾ ನಾನು ಕೋಲಾರಕ್ಕೆ ಹೋಗುವ ರೈಲು ಹತ್ತಿ ಕುಳಿತಿದ್ದೆ! ಹೇಗೇಗೋ ಒದ್ದಾಡಿಕೊಂಡು ರಾತ್ರಿ ಏಳು ಘಂಟೆಗೆ ಮೈಸೂರು ತಲುಪಿದೆ. ೧೨ ತಾಸಿನ ಮೈಸೂರು ಪಯಣವಾಯಿತು!
                                                            *****

ಬೆಳಿಗ್ಗೆ ಆರು ಗಂಟೆಗೆ ಚಾಮುಂಡಿ ಬೆಟ್ಟ ಏರಿದ್ದು. ಅಬ್ಬ ಎಷ್ಟು ಎತ್ತರದ ಬೆಟ್ಟ ಅದು. ಅನಾದಿ ಕಾಲದಂತೆ. ಅದಕ್ಕೆ ಆ ಪರಿ ಮೆಟ್ಟಿಲುಗಳನ್ನು ಹೇಗೆ ನಿರ್ಮಿಸಿರಬಹುದು ಅಂತಾ? ಯಾಕಂದ್ರೆ ಇಂಡಿಯಾದವರು ತಂತ್ರಜ್ಞಾನದಲ್ಲಿ ಹಿಂದೆ ಅಂತಾ ನಾವು ಯಾವಾಗಲೂ ಗೊಣಗುತ್ತಿರುತ್ತೇವೆ ಅಲ್ವಾ? ಅನ್ನಿಸುತ್ತಿತ್ತು ಆ ಬೆಟ್ಟಕ್ಕೆ ಮೆಟ್ಟಿಲು ಕೊರೆದು, ಬೆಟ್ಟದ ಮೇಲೊಂದು ದೇವಾಸ್ಥಾನ ಕಟ್ಟಿದ್ದನ್ನು ನೋಡಿ.

ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳ ಕುರಿತು ಎಲ್ಲೋ ಅಲ್ಪ ಸ್ವಲ್ಪ ಓದಿದ್ದೆ. ಆದ್ರೂ ಅವೆಲ್ಲಾ ಇತಿಹಾಸದ ಕಥೆಗಳಲ್ವಾ? ಅವಕ್ಕೆ ಆಧಾರ ಅನ್ನುವುದು ಏನೂ ಇಲ್ಲ. ಬರದವನೇ ಆಧಾರ ಅಷ್ಟೆ! ಹಾಗಾಗಿ ಅದನ್ನು ನಂಬಲು ನಾವು ಮೂರು ಮೂರು ಸಲ ಆಲೋಚನೆ ಮಾಡುತ್ತೇವೆ. ಅಲ್ಲಾ ನಾವು ಆವಾಗಲೇ ಅದನ್ನು ಕಂಡು ಹಿಡಿದಿದ್ವಿ, ಇದನ್ನು ಆವಿಷ್ಕಾರ ಮಾಡಿದ್ವಿ ಅಂತೀವಿ ಆದ್ರೆ ಅವೆಲ್ಲಾ ಯಾಕೆ ಬಳಕೆಗೆ ಬರಲಿಲ್ಲ ಅಂತಾ?

ತಂತ್ರಜ್ಞಾನದ ಮಹಿಮೆ ತಿಳಿಯಬೇಕು ಅಂದ್ರೆ ಒಮ್ಮೆ ಮಣಿಪಾಲ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಹತ್ತಿರ ಹೋಗಿ ನಿಂತುಕೊಳ್ಳಬೇಕು. ಕೈ ತುಂಡಾದವರು ಕಾಲಲ್ಲಿ ರಕ್ತ ಸುರಿಯುತ್ತಾ ಇರುವವರು, ತಲೆ ಒಡೆದು…ಅಬ್ಬಬ್ಬಾ! ಒಂದು ಕಡೆ ತಂತ್ರಜ್ಞಾನದಿಂದಾಗಿ ಅದೇ ಮಣಿಪಾಲ ಆಸ್ಪತ್ರೆ ಜೀವ ಉಳಿಸತ್ತೆ. ಇನ್ನೊಂದೆಡೆ ವಾಹನದಂಥ ಆಧುನಿಕತೆ ಜೀವ ಕಳೆಯತ್ತೆ. ಹಾಗಾಗಿಯೇ ನಮ್ಮವರು ಜೀವ ಕಳೆಯುವ ತಂತ್ರಜ್ಞಾನವನ್ನು ಕಂಡುಹುಡುಕಿದರೂ ಆಚರಣೆಗೆ ತರಲಿಲ್ಲ ಅನ್ಸತ್ತೆ. ತಂತ್ರಜ್ಞಾನದ ಉಪಯೋಗದ ಜತೆಗೆ ಅನಾಹುತವನ್ನು ನಮ್ಮ ಹಿಂದಿನವರು ಆಲೋಚಿಸುತ್ತಿದ್ದರು ಅಂತಾ ನನ್ನಗನ್ನಿಸತ್ತೆ.  ಆದ್ರೂ ಅದು ಇತಿಹಾಸ!
                                                        ****
ಉಡುಪಿ ರಾಜಾಂಗಣದ ಸಂಪರ್ಕ ಕಡಿದು ಹೋದ ಮೇಲೆ ಯಕ್ಷಗಾನ ನೋಡಿರಲಿಲ್ಲ. ಏನೇ ಹೇಳಿ ನಾವು ಉಡುಪಿಯಲ್ಲಿದ್ದಾಗ ಅರ್ಥಾತ್, ಅದಮಾರು ಮಠದ ಪರ್ಯಾಯದ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ನನಗಂತೂ ಯಕ್ಷಗಾನದ ಹುಚ್ಚು. ತೆಂಕೋ, ಬಡಗೋ ಒಟ್ಟು ಆಟ ಅಂತಾದ್ರೆ ಆಯಿತು.

 
ಮೈಸೂರಿನ ಪುರಭವನದಲ್ಲಿ ಮೊನ್ನೆ ನಿಡ್ಲೆ ಮೇಳದ ಆಟವಿತ್ತು. “ಅದು ಹೇಳುವಷ್ಟು ಲಾಯಕ್ಕು ಇರಲಿಲ್ಲೆ ಮಾರಾಯರೇ. ಅವ ಎಂಥ ಭಾಗವತ. ಸುಖಯಿಲ್ಲೆ. ವಿದೂಷಕ ಒಬ್ಬನ್ನ ಬಿಟ್ಟು ಆಟಕ್ಕೇ ಆಟವೇ ಥಂಡು. ತೆಂಕಿನ ಕುಣಿತ ಕಾಣಕ್ಕ್ ಅಂದ್ರೆ ಎಡನೀರು ಮ್ಯಾಳದ್ದು. ಅಮ್ಮಣ್ಣಾಯರ ಪದ್ಯ….” ಬಹುಶಃ ಉಡುಪಿಯಲ್ಲೇ ಇದ್ದಿದ್ದರೆ ಆ ಮಾತು ಹೇಳಬಹುದಿತ್ತು. ಆದ್ರೆ ಬೆಂಗಳೂರಿಗೆ ಬಂದ ಮೇಲೆ ಪಾಲಿಗೆ ಬಂದದ್ದೇ ಪಂಚಾಮೃತ! ಚಿಟ್ಟಾಣಿ ಕುಣಿತ, ಗಣಪತಿ ಭಟ್ಟರ ಪದ್ಯ…ಬೆಂಗಳೂರಿನ ಯಾವುದೋ ಮೂಲೆಯಲ್ಲಿ ನಡೆದರೂ, ಈ ಪುರುಸೊತ್ತು ಇಲ್ಲದ ಬದುಕು, ಹಾಳು ಟ್ರಾಪಿಕ್ಕುಗಳ ನಡುವೆ ಹೋಗುವುದೇ ಬೇಡ ಅನ್ನಿಸತ್ತೆ.

ಅರಮನೆ, ಕೆಆರ್‌ಎಸ್ಸ್ ಎಲ್ಲಾ ನೋಡುವ ನನ್ನ ಆಲೋಚನೆಯನ್ನು ಹಳಿ ತಪ್ಪಿದ ರೈಲು ನುಂಗಿ ಹಾಕಿತ್ತು…

Read Full Post »

ಹೇ ಪುಟ್ಟಿ,
ನಿನಗೊಂದು ವಿಷ್ಯಾ ಗೊತ್ತಾ?  ನಿನ್ನೆ ಅದೇನೋ ಸಿಗಲಿಲ್ಲ ಅಂತಾ ನನ್ನ ಸೂಟ್‌ಕೇಸ್‌ನಲ್ಲಿನ ಹರಗಣಗಳನೆಲ್ಲಾ ಹರಡಿಕೊಂಡು ಕೂತಿದ್ದೆ. ಆಗ ನಾನು, ನಿನಗೆ ಈಗ ನಾಲ್ಕು ವರ್ಷದ ಕೆಳಗೆ ಬರೆದ ಸೊಗಸಾದ… ಅಲ್ಲಲ್ಲ ನಿನ್ನನ್ನು ಅದ್ಬುತವಾಗಿ ಬಕರಾ ಮಾಡಿದ ಪತ್ರವೊಂದು ಸಿಕ್ತು! ವಾಸ್ತವವಾಗಿ ಆ ಪತ್ರ ನಿನ್ನ ಕೈಯಲ್ಲಿ ಇರಬೇಕಾಗಿತ್ತು. ಆದ್ರೆ ಅದು ಹೇಗೆ ಮತ್ತೆ ನನ್ನ  ಕೈಗೆ ಬಂತೋ ಗೊತ್ತಿಲ್ಲ. ಅಂದಹಾಗೇ ಆ ಪತ್ರ ಯಾವುದು ಅಂತಾ ನೆನಪಿಗೆ ಬಂತಾ? ನಾನು ಬಕರಾ ಆಗಿದ್ದರೆ  ನಿನಗೆ ಆ ಪತ್ರ ಚೆನ್ನಾಗಿ ನೆನಪಿರುತಿತ್ತು. ಆದರೆ ಬಕರಾ ಆಗಿದ್ದು ನೀನಲ್ಲ! ಹಾಗಾಗಿ ನೆನಪಿದ್ದರೂ ಖಂಡಿತಾ “ನೆನಪೇ ಇಲ್ಲ ಕಣೋ” ಅಂತಿಯಾ ಅನ್ನೋದು ಗೊತ್ತು. ಆದ್ರೂ ಹೀಗೆ ಸುಮ್ನೆ ಕೇಳಿದೆ ಅಷ್ಟೆ!

ಅದೇ ಕಣೇ, ನೀನು ನನಗೆ ಪ್ರಪೋಸ್ ಮಾಡಿದ ನಂತರ ನಾನು ನಿನಗೊಂದು ಸೊಗಸಾದ ಪತ್ರ ಬರೆದುಕೊಟ್ಟಿದ್ದೆನಲ್ಲ, ಅದೇ ಪತ್ರದ ಕುರಿತಾಗಿ ನಾನು ಮಾತಾಡ್ತ ಇರೋದು. ತಾಳು ಪತ್ರದ ಒಂದಿಷ್ಟು ಸಾಲನ್ನು ಓದುತ್ತೀನಿ. ಆಮೇಲಾದರೂ ನಿನಗೆ ಆ ಪತ್ರ ನೆನಪಿಗೆ ಬರತ್ತಾ ನೋಡು…

ಹಾಯ್ ಪುಟ್ಟಿ,
“ಪುಟ್ಟಿ” ಇದು ನಾನು ಇನ್ಮೇಲೆ ನಿನ್ನನ್ನು ಪ್ರೀತಿಯಿಂದ ಕರೆಯೋ ಹೆಸರು. ನೀನು ನೋಡ್ಲಿಕ್ಕೆ ಹಳೇ ಮುದುಕಿ ತರ ಇದ್ದೀಯಾ. ಆದ್ರೂ ನಿನಗೆ ಅಜ್ಜಿ ಅಂತಾ ಕರೆದರೆ ಬೇಜಾರಾಗಬಹುದು… ಅಲ್ಲಲ್ಲ ನನಗೆ ಅವಮಾನ ಆಗಬಹುದು ಅಂತಾ ಪುಟ್ಟಿ ಅಂತಾ ಹೆಸರಿಟ್ಟಿದ್ದೇನೆ. ನೀನು ನನ್ನಂತ ಒಳ್ಳೆ ಹುಡುಗನ ಮೇಲೆ ಅದ್ಯಾಕೆ ಕಣ್ಣು ಹಾಕಿದೆಯೋ ನನಗಂತೂ ಅರ್ಥವಾಗ್ತಾ ಇಲ್ಲ! ನೀನು ಮೆಂಟಲಿ ಸ್ವಲ್ಪ ವೀಕ್ ಅಂತಾ ಯಾರೋ ಹೇಳಿದ್ದು ಕೇಳಿದ್ದೆ. ಬೇಜಾರಾಗಿ, ಲವ್ ಫೇಲ್ ಆಯಿತು ಅಂತಾ ಕೋಪ ಮಾಡಿಕೊಂಡು, ಬಾವಿ ಹಾರಿ ಸತ್ತರೆ ಅನ್ನೋ ಭಯದಿಂದ ನಾನು ನಿನ್ನ ಪ್ರಪೋಸ್‌ನ್ನು ಒಪ್ಪುತ್ತಿದ್ದೇನೆ. ಆದ್ರೆ ಹಾಗೆ ಒಪ್ಪುವ ಮೊದಲು ಒಂದಿಷ್ಟು ವಿಚಾರ ಹೇಳಿ ಬಿಡುತ್ತೇನೆ. ಆ ಮೇಲೂ ನೀನು ನನ್ನನ್ನು ಪ್ರೀತಿಸುತ್ತೇನೆ ಅಂದ್ರೆ ಪ್ರೀತಿಸು. ನನ್ನದೇನೂ ಅಭ್ಯಂತರವಿಲ್ಲ.

ನಾನು ಹುಟ್ಟಾ ಒರಟ. ಜತೆಗೆ ಜಗಳಗಂಟ ಕೂಡ. ಒಬ್ಬ ಹುಡುಗನಿಗೆ ಏನೆಲ್ಲಾ ಚಟಗಳು ಇರಬಾರದೋ ಅವೆಲ್ಲಾ ನನಗಿದೆ. ದಿನಾ ರಾತ್ರಿ ಮನೆಗೆ ಬಂದೇ ಬಿಡ್ತೀನಿ ಅಂತಾ ಹೇಳೋಕಾಗಲ್ಲ. ಆದ್ರೆ ವಾರಕೊಮ್ಮೆಯಾದ್ರೂ ಬರ್ತಿನಿ. “ಮದ್ವೆ ಆದಮೇಲೆ ಸರಿಹೋಗ್ತಾನೆ. ಹೆಂಡ್ತಿಯಾದ ನಾನು ನಿನಗೆ ಲಗಾಮು ಹಾಕ್ತಿನಿ…ಊಹುಂ ಅದನ್ನು ಕನಸಿನಲ್ಲಿಯೂ ಕಾಣಬೇಡ. ಹಾಗೆ ಕನಸು ಕಂಡು ಬಂದ ಎರಡು ಮೂರು ಹುಡುಗಿಯರೂ ಕೈಲಾಗದೇ ಸೋತು ವಾಪಾಸ್‌ ಹೋಗಿದಾರೆ. ನಮ್ಮ ಅಪ್ಪ, ಅಮ್ಮನಿಗೂ ನಾನು ಮದ್ವೆ ಆದ ಮೇಲೆ ಸರಿಹೋಗಬಹುದು ಅನ್ನೋ ತೆವಲಿದೆ. ಎಷ್ಟೊ ಗಂಡು ಹುಡುಗರ ಅಪ್ಪ,ಅಮ್ಮ ಹಾಗೇ ಅಂದುಕೊಂಡು ಮಗನಿಗೆ ಮದ್ವೆ ಮಾಡಿ, ಹೆಣ್ಣುಮಗಳೊಬ್ಬಳ ಸುಂದರವಾದ ಬಾಳನ್ನು ಹಾಳು ಮಾಡಿ ಬಿಡ್ತಾರೆ. ಹಾಗಾಗಿ ನಾನು ನಿನಗೆ ಮೊದಲೇ ಹೇಳಿಬಿಡ್ತೀನಿ ನನ್ನನ್ನು ಸರಿ ಮಾಡ್ತಿನಿ ಅನ್ನೋ ಕನಸು ಕಟ್ಟಿಕೊಂಡು ಮಾತ್ರ ನನ್ನ ಸಹವಾಸಕ್ಕೆ ಬೀಳಬೇಡ.

ಇನ್ನೂ ನನಗೊಂದು ಉದ್ಯೋಗ, ಮನೆ…ಊಹುಂ ಅವನ್ನೆಲ್ಲಾ ಕೇಳಲೇಬೇಡ. ನನ್ನ ಖರ್ಚಿಗೆ ಎಷ್ಟೋ ಬೇಕೋ, ಅಷ್ಟನ್ನು ಹೇಗೋ ಸಂಪಾದನೆ ಮಾಡ್ತೀನಿ. ಆಯುಷ್ಯ ಪೂರ್ತಿ ಹೋಟೆಲ್ಲು, ಬಾರ್‌ಗಳಲ್ಲಿ ಕಾಲ ಕಳೆಯೋ ನನಗೆ ಮನೆಯ ಅವಶ್ಯಕತೆಯೇ ಇಲ್ಲ. ಹೆಂಡ್ತಿ, ಸಂಸಾರ…ನನ್ನಂತವನಿಗೆ ಹೇಳಿ ಮಾಡಿಸಿದ್ದಲ್ಲಾ ಅಂತಾ ಯ್ಯಾವತ್ತೋ ನಿರ್ಧರಿಸಿಬಿಟ್ಟಿದ್ದೀನಿ.

ಈ ಶಾಕ್ ಸುಧಾರಿಸಿಕೊಳ್ಳಲು ನಿನಗೆ ತುಂಬಾ ದಿನ ಬೇಕು ಅಂದುಕೊಂಡಿದ್ದೀನಿ. ನೋಡು ಸರಿಯಾಗಿ ಆಲೋಚನೆ ಮಾಡು. ದೀಪ ಸುಡತ್ತೆ ಅಂತಾ ಗೊತ್ತಿದ್ದರೂ ಕೈ ಇಟ್ಟೆ ನೋಡುತ್ತೇನೆ ಅನ್ನೋದು ಸರಿಯಲ್ಲ ಅಂದುಕೊಳ್ಳುತ್ತೇನೆ. ಅದಕ್ಕೂ ಮೀರಿದ್ದು ನಿನ್ನಿಷ್ಟ.
ಇಂತಿ
ಮೂರು ಬಿಟ್ಟವ!

ಆವತ್ತಿನ ಶಾಕ್ ಸುಧಾರಿಸಿಕೊಳ್ಳಲು ನಿನಗೆ ತಿಂಗಳಗಟ್ಟಲೇ ಹಿಡಿಯಿತು. ನಾನು ಹೇಳಿದೆಲ್ಲಾ ನಿಜವಾ ಅನ್ನೋದನ್ನಾ ನೀನು ಸಾಕಷ್ಟು ಸಲ ಪರೀಕ್ಷೆ  ಮಾಡಿದ್ದೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. “ಇಲ್ಲ ಕಣೋ ನನಗೆ ನಿನ್ನ ಮೇಲೆ ನಂಬಿಕೆ ಇತ್ತು. ಒಮ್ಮೆ  ನೀನು ಹಾಗೆ ಆಗಿದ್ರೂ ನಾನು ನಿನ್ನನ್ನೇ ಸ್ವೀಕರಿಸಬೇಕು ಅನ್ನುವಷ್ಟು ಪ್ರೀತಿ ಹೃದಯದಲ್ಲಿ ಉಕ್ಕಿತು’ ಅಂತೆಲ್ಲಾ  ಈಗ ನೀನು ಭಾಷಣ ಬಿಗಿತೀಯಾ ಬಿಡು! ಆದ್ರೂ ನನ್ನ ಕರ್ಮವೋ ನಿನ್ನ ಪುಣ್ಯವೋ ಗೊತ್ತಿಲ್ಲ ನಂಗೆ ಕೊನೆಗೂ ಗಂಟು ಬಿದ್ದೆ!
ಇಂತಿ
ನಿನ್ನವ.

Read Full Post »

(ಈ ಬರಹ ಆರಂಭಿಸುವ ಮೋದಲೇ ಒಂದು ಮಾತನ್ನು ಹೇಳಿ ಬೀಡುತ್ತೇನೆ. ಈ ಲೇಖನ ನನ್ನನ್ನು ಸ್ತ್ರೀ ವಾದಿಯನ್ನಾಗಿಸಬಹುದು. ಆದರೆ ನನಗಂತೂ ಯಾವುದೇ ವಾದಿತನದ “ವ್ಯಾದಿಯಿಲ್ಲ”. ವಾಸ್ತವಕ್ಕೆ ಸರಿಯಾಗಿ ಅಂಟಿಕೊಂಡು ಹೋಗುತ್ತೇನೆ)
 ಬಾಳೇಹಳ್ಳಿ ಅಕ್ಷತಾ ಆತ್ಮಹತ್ಯೆ ಮಾಡಿಕೊಂಡಳಂತೆ. ಹಾಗಂತ ಗೆಳೆಯ ರಾಘು ಮೆಸೇಜ್ ಮಾಡಿದ್ದ. ನನಗೊಮ್ಮೆ ಹೃದಯ ಚುರ್ ಅಂದಂತಾಯಿತು. ಹೈಸ್ಕೂಲ್ ಓದುತ್ತಿರುವಾಗ ನನ್ನ ಸೀನಿಯರ್ ಆಗಿದ್ದ ಹುಡುಗಿಯವಳು. ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವಳು. ಅಬ್ಬಬ್ಬಾ ಅಂದರೆ ೨೪ ವರ್ಷ ಆಗಿರಬಹುದು ಅವಳಿಗೆ. ಅಷ್ಟು ಕಿರಿ ವಯಸ್ಸಿನ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ಸುದ್ದಿ ಕೇಳಿದಾಗ ನೋವಾಯಿತು.

ಊರಿನಿಂದ ಯಾರೋ ಫೋನ್ ಮಾಡಿದ್ದರು. ಹೀಗೆ ಮಾತಾಡುವಾಗ ಅಕ್ಷತಾ ಸಾವಿನ ಸುದ್ದಿ ಬಂತು.
ಯಾರೋ ಇತರೆ ಪೈಕಿಯವನ ಜತೆ ಲವ್ ಇತ್ತಂತೆ ಅವಳಿಗೆ. ಸಂಬಂಧವೂ ಇತ್ತು ಅಂತಿದಾರೆ…
ನನಗೆ ಕೋಪ ನೆತ್ತಿಗೇರಿತು.
ನಿಮ್ಮ ಈ ಚುಚ್ಚು ಮಾತುಗಳೇ ಅವಳನ್ನ ಸಾಯುವಂತೆ ಮಾಡಿದ್ದು. ಅವಳು ಯಾರಿಗೆ ಬಸುರಿಯಾದರೇನು? ಬಾಣಂತಿಯಾದರೇನು? ಅದರಿಂದ ನಿಮ್ಮ ಗಂಟೇನು ಖರ್ಚಾಗತ್ತೆ…ರೇಗಿದೆ
ಅಲ್ಲಾ ಬಡವರ ಮನೆ ಕೂಸು ಹಂಗೆಲ್ಲಾ ಮಾಡಿಕೊಂಡರೆ ಅಪ್ಪಾ, ಅಮ್ಮ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವುದು ಬ್ಯಾಡದಾ? ಅಂತಾ ರಾಗ ಶುರುವಿಟ್ಟರು.

ಹೌದು ನಮ್ಮ ಸಮಾಜದ ಇದೇ ಧೋರಣೆಯೇ ಅಂತಹ ಕಿರಿ ವಯಸ್ಸಿನ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿರುವುದು. ನನಗೆ ಇಷ್ಟು ವರ್ಷವಾದರೂ “ಶೀಲ ಎಂಬುದು ದೇಹದಲ್ಲಿ ಅಡಗಿದೆಯಾ? ಅಂಗಾಂಗದಲ್ಲಿ ಅಡಗಿದೆಯಾ? ಮನಸ್ಸಲ್ಲಿ ಅಡಗಿದೆಯಾ? ಎಂಬ ಸಂಗತಿ ಅರ್ಥವಾಗಲಿಲ್ಲ!” “ಹೆಣ್ಣು ಬಸುರಿಯಾಗುತ್ತಾಳೇ ಎಂಬ ಒಂದೇ ಒಂದು ಕಾರಣಕ್ಕೆ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಾಳೆ. ಸೆಕ್ಸ್ ಎಂಬುದು ಹೆಣ್ಣನ್ನು ಶೋಷಿಸಲು ಬಳಸುವ ವಸ್ತುವಾಗುತ್ತಿದೆ. ಇದು ನಮ್ಮ ಸಮುದಾಯದಲ್ಲಿ ಮಾತ್ರವಲ್ಲ, ಮುಸ್ಲಿಂ, ಕ್ರಿಶ್ಚಿಯನ್ ಸಮಾಜದಲ್ಲಿಯೂ ಹೆಣ್ಣಿನ ಸ್ಥಿತಿ ಇದಕ್ಕಿಂತ ಶೋಚನೀಯವಾಗಿದೆ’ ಅನ್ನುತ್ತಿದ್ದಳು ಅಕ್ಕ.

ಸಮಾಜದ ಎಷ್ಟೋ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಇದೇ ಕಾರಣಕ್ಕೆ. ವಯಸ್ಸಿನ ದೋಷದಿಂದಲೋ, ಅಚಾತುರ್ಯದಿಂದಲೋ ಯಾರ ಜೊತೆಗೋ ಸಂಬಂದ ಬೆಳೆಸುತ್ತಾರೆ. ಅವರನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾರೆ. ಅಪ್ಪಾ ,ಅಮ್ಮ ನೀನು ಆ ಹುಡುಗನನ್ನು ಮದುವೆಯಾಗುವುದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸುತ್ತಾರೆ. ಕೊನೆಗೆ ಬೆಸತ್ತ ಹೆಣ್ಣು ಮಗಳು ನೇಣಿಗೆ ಶರಣಾಗುತ್ತಾಳೆ. ಹೆಚ್ಚಿನ ಆತ್ಮಹತ್ಯೆ ಹಿಂದಿರುವ ಕಥೆಯಿಷ್ಟೆ!

ಸತ್ತ ಮೇಲೆ ಸಮಾಜದ ಒಂದಿಷ್ಟು ಮಂದಿ ಛೇ ಅವಳು ಸಾಯಬಾರದಿತ್ತು. ಜನ್ಮ ಜನ್ಮಕ್ಕೂ ಇನ್ನು ಅನುಭವಿಸಬೇಕು. ಮಳ್ಳು ಕೂಸು ಬದುಕಿನಲ್ಲಿ ಏನು ಬಂದರೂ ಎದುರಿಸಬೇಕಿತ್ತು ಅಂತಾ ಪಶ್ಚಾತಾಪದ ಮಾತಾಡುತ್ತಾರೆ. ಇನ್ನೂ ಕೆಲವರು ಯಾರದ್ದೋ ಜೊತೆಗೆ ಸಂಬಂದ ಇತ್ತಂತೆ. ಸತ್ತಳು ಅಂತಾ ಆಡಿಕೊಳ್ಳುತ್ತಾರೆ.

ಒಮ್ಮೆ ಅವಳು ಸಾಯದೇ ಬದುಕಿದಿದ್ದರೆ ಈ ಸಮಾಜ ಅವಳನ್ನು ಹೇಗೆ ಸ್ವೀಕರಿಸುತ್ತಿತ್ತು ಎಂಬುದು ಮುಖ್ಯವಾದ ಪ್ರಶ್ನೆ. ಒಂದಿಷ್ಟು ದಿನ ಅವಳ, ಅಪ್ಪಾ ಅಮ್ಮನೂ ಅವಳನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಇಡೀ ಸಮಾಜ ಅವಳ ಎದುರಿಗೆ ಆಡಿಕೊಳ್ಳಬಾರದ ಮಾತುಗಳನ್ನೆಲ್ಲಾ ಆಡಿಕೊಳ್ಳುತ್ತಿತ್ತು. ಇನ್ನೂ ನಮ್ಮ ಹಳ್ಳಿ ಹೆಂಗಸರಂತೂ… ತಾವು ಎಷ್ಟು ಸರಿ ಇದ್ದೇವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಗಂಡ ಊರಲ್ಲಿ ಇಲ್ಲದಿದ್ದಾಗ ಯಾರ್ಯಾರಿಗೋ ಫೋನ್ ಮಾಡಿ ಕರೆಸಿಕೊಂಡು ಸುಖ ತೆಗೆದುಕೊಳ್ಳುತ್ತೇವೆ ತಾವು ಎಂಬುದು ಕೆಲ ಹೆಂಗಸರಿಗೆ ಗೊತ್ತೆ ಇರುವುದಿಲ್ಲ! ನೀಲಗರಿ ಪ್ಲಾಂಟೇಶನ್ನಿಗೆ ಹೋಗಿ ಯಾರ ಜೊತೆಗೋ ಮೆಯ್ದು ಬರುವುದು ಆ ಹೆಂಗಸರಿಗೆ ನೆನಪೇ ಇರುವುದಿಲ್ಲ! ಆದರೆ ಇಂತಹ ಒಬ್ಬ ಹೆಣ್ಣು ಮಗಳು ಎದುರಿಗೆ ಸಿಕ್ಕರೆ ಆಡಬಾರದ ಮಾತುಗಳನ್ನೆಲ್ಲಾ ಆಡುತ್ತಾರೆ. ಹುಡುಗಿ ಶ್ರೀಮಂತರ ಮನೆ ಕೂಸಾಗಿದ್ದರೆ ಅವಳು ಆಚೆ ಹೋದ ನಂತರ ಆಡುತ್ತಾರೆ. ಬಡವರ ಮನೆ ಕೂಸಾದರೆ ಎದುರಿಗೆ ಆಡುತ್ತಾರೆ. ಇದು ನಮ್ಮ ಸಮಾಜದ ಸ್ಥಿತಿ. ಇವುಗಳನ್ನೆಲ್ಲಾ ಸಹಿಸಿಕೊಂಡು ಆ ಹೆಣ್ಣು ಮಗಳು ಬದುಕಬೇಕು. ಇದನ್ನು ನೆನಸಿಕೊಂಡೇ ಎಷ್ಟೋ ಹೆಣ್ಣು ಮಕ್ಕಳು ನೇಣಿಗೆ ಶರಣಾಗುವುದು ಅನ್ನಿಸತ್ತೆ ನನಗೆ.

ಹಾಂಗತ ಹೆಣ್ಣು ಮಗಳು ಕಂಡ ಕಂಡ ಹುಡುಗನಿಗೆ ಬಸಿರಾಗುವುದು ಸರಿ ಎಂದು ವಾದಿಸುತ್ತಿಲ್ಲ. ತಾನು ಬಯಸಿದ ಹುಡುಗನ ಜತೆಗೆ ಸಂಬಂಧ ಹೊಂದಬೇಕಾದರೂ ಮದುವೆಯಾಗಲೇ ಬೇಕಾ? ಸಂಬಂಧ ಇಟ್ಟುಕೊಂಡರೂ ಅಪ್ಪಾ ಅಮ್ಮ ಕಟ್ಟಿದ ಹುಡುಗನನ್ನೇ ಮದುವೆಯಾಗಬೇಕಾ?   ಹೆಣ್ಣಿಗೆ ವಯಕ್ತಿಕ ಬದುಕು ಅನ್ನುವುದೋ ಇಲ್ಲವಾ? ಎಂಬುದು ನನ್ನ ಪ್ರಶ್ನೆ. ಹೆಣ್ಣನ್ನು ನಾವು ಬಸಿರಾಗುತ್ತಾಳೆ ಎಂಬ ಕಾರಣದಿಂದ ಶೋಷಿಸುವುದಾದರೆ ಒಮ್ಮೆ ಗಂಡಸು ಬಸಿರಾಗುವುದಾಗಿದ್ದರೆ ಈ ಸಮಾಜದ ಸ್ಥಿತಿ ಹೇಗೆ ಆಗುತ್ತಿತ್ತು ಒಮ್ಮೆ ಅವಲೋಕಿಸಿ ನೋಡಿ.

ನಾವು ವೇಶ್ಯೆಯರನ್ನು, ಸೂಳೆಯರನ್ನು ಬೈಯ್ಯುತ್ತೇವೆ. ಅದೊಂದು ನೀಚ ವೃತ್ತಿ ಅನ್ನುತ್ತೇವೆ. ಗಂಡಸಿಗೆ ತೃಷೆ ಇಲ್ಲದಿದ್ದರೆ ವೇಶ್ಯಾವಾಟಿಕೆ ಏಕೆ ಹುಟ್ಟುತ್ತಿತ್ತು? ಒಮ್ಮೆ ಆಲೋಚಿಸಿ ನೋಡಿ. ಎಷ್ಟು ಗಂಡಂದಿರು ಹೆಂಡತಿಯ ಕಣ್ಣು ತಪ್ಪಿಸಿ ಯಾರ್ಯಾರ ಜೊತೆಗೋ ಮಲಗಿ ಬರುವುದಿಲ್ಲ ಹೇಳಿ? ಆದರೆ ಅದೇ ಕೆಲಸ ಹೆಣ್ಣು ಮಾಡಿದರೆ? ಅವಳಿಗೆ ಹೊಟ್ಟೆ ಮುಂದು ಬರುವುದರಿಂದ ಅವಳು ಅಂತಹ ಕೆಲಸ ಮಾಡಿದ್ದಾಳೆ ಎಂಬುದು ಗೊತ್ತಾಗಿ ಬಿಡುತ್ತದೆ! (ಇವತ್ತು ಕಾಲ ಬದಲಾಗಿದೆ. ಹೊಟ್ಟೆ ಮುಂದೆ ಬರದಂತೆಯೂ ಮಲಗೆದ್ದು ಬರಲು ಬರುತ್ತದೆ! ಬೆರಳೆಣಿಕೆ ಹೆಣ್ಣು ಮಕ್ಕಳು ಹಾಗೇ ಮಲಗೆದ್ದು ಬರುತ್ತಿದ್ದಾರೆ! ಆದರೆ ಗಂಡಸಿಗಿರುವಷ್ಟು ಚಟ ಹೆಣ್ಣಿಗಿಲ್ಲ ಎಂಬುದು ನನ್ನ ನಂಬಿಕೆ)

“ನಾವು ಎರಡು ಲಿಂಗಗಳ ಸಮ್ಮಿಲದಿಂದಲೇ ಹುಟ್ಟಿದವರು. ಕಾಮ ಕ್ರಿಯೆಯ ಫಲವೇ ಪ್ರತಿಯೊಂದು ಜೀವಿಗಳು. ಹಾಗಾಗಿ ಪ್ರತಿ ಜೀವಕ್ಕೂ ಕಾಮದ ವಾಸನೆ, ತೃಷೆ ಸಹಜ. ಎಕ್ಸ್, ವೈಎಂಬ ಭಿನ್ನ ಕ್ರೋಮೋಸೋಮ್‌ಗಳು  ಗಂಡಸಿನಲ್ಲಿ ಇರುವುದರಿಂದ ಅವನಿಗೆ ತೃಷೆ ಒಂಚೂರು ಹೆಚ್ಚು. ಆದರೆ ಹೆಣ್ಣಿನಲ್ಲಿ ಈ ಭಿನತೆಯ ಕ್ರೋಮಸೋಮ ಇಲ್ಲ. ಏಕತೆಯ ಕ್ರೊಮೋಸೋಮ್ ಹಾಗಾಗಿ ಅವಳಿಗೆ ಲೈಂಗಿಕ ಚಟ ಸ್ವಲ್ಪ ಕಡಿಮೆ” ಅನ್ನುತ್ತಾರೆ ಓಶೋ.  ಅವರ ಮಾತು ಅಕ್ಷರಶಃ ನಿಜ ಹಾಗಾಗಿ ಎಲ್ಲಾ ಜೀವಿಗಳಲ್ಲೂ ಸೆಕ್ಸ್ ಸಹಜ. ಸೆಕ್ಸ್ ಇಲ್ಲದಿದ್ದರೆ ಜೀವ ಸಂಕುಲದ ನಿರಂತರತೆ ಸಾಧ್ಯವಿತ್ತಾ?

ಏನೋ ನನಗಂತೂ ಈ ಸಮಾಜದ ಧೊರಣೆಯೇ ಅರ್ಥವಾಗುವುದಿಲ್ಲ. ಅನುಭವದಲ್ಲಿ ಕಿರಿಯವನಾದ್ದರಿಂದ ನನ್ನ ಆಲೋಚನೆಯೇ ಸರಿಯಿಲ್ಲದೆಯೂ ಇರಬಹುದು.! ಆದರೂ ನನ್ನ ವರಗೆಯ, ಇನ್ನೂ ಬದುಕಿ ಬಾಳಿಬೇಕಾದವರೆಲ್ಲಾ ಸಾಯುತ್ತಾರೆ ಎಂದರೆ ನಿಜಕ್ಕೂ ನೋವಾಗತ್ತೆ. ಆ ನೋವನ್ನು ಇಲ್ಲಿ ತೊಡಿಕೊಂಡೆ ಅಷ್ಟೆ.

Read Full Post »

ಕಾವೇರಿ ಗಲಾಟೆಯಂತೆ, ಬೆಂಗಳೂರು ಬಂದಂತೆ…ಅವಳು ಮಣಗುಡುತ್ತಿದ್ದರೂ ಕಿವಿಗೆ ಬೀಳದವನಂತೆ ಬ್ಯಾಗ್‌ ಏರಿಸಿ, ಶೂ ಕಟ್ಟಿ ಆಫೀಸ್‌ನತ್ತ ಮುಖ ಮಾಡಲು ಸಜ್ಜಾದೆ.

 ರೀ ಇವತ್ತಿಗೆ ಮದ್ವೆಯಾಗಿ ಒಂದು ವರ್ಷ ಕಳೆಯಿತು. ಹಾಯಾಗಿ ಯಾವುದಾದರೂ ದೇವಸ್ಥಾನಕ್ಕೆ ಹೋಗಬಾರದ? ಹೇಗೂ ಬೆಂಗಳೂರು ಬಂದಂತೆ…ಮತ್ತೆ ರಾಗ ಎಳೆದಳು.

ಸ್ವಾತಂತ್ರ್ಯ ದಿನಕ್ಕೂ ರಜೆ ಕೊಡದ, ಧ್ವಜ ಹಾರಿಸದ ಎಂಎನ್‌ಸಿ ನಮ್ಮದು. ಅಂತಹದರಲ್ಲಿ ಯಕಶ್ಚಿತ್ ಸ್ಟ್ರೈಕ್‌ಗೆ ರಜ ಕೊಡ್ತಾರಾ. ಮುಂದುಗಡೆ ಬಾಗಿಲಿಗೆ ಬೀಗ ಜಡಿದು ಹಿಂದುಗಡೆಯಿಂದ ಕೆಲಸ ಮಾಡಿಸುತ್ತಾರೆ. ಒಂದು ದಿನ ರಜ ಕೊಟ್ಟರೂ ಅವರಿಗೆ ಲಕ್ಷಾಂತರ ನಷ್ಟವಾಗುತ್ತೆ…ಅನ್ನುತ್ತಲೇ ಶೂ ಕಟ್ಟಿ ಬಾಗಿಲ ಬಳಿ ಹೊರಟೆ. ಫೋನ್ ರಿಂಗಣಿಸಿತು. ಮ್ಯಾನೇಜರ್ ವಿಶ್ವನಾಥನ ಕರೆ. ಇವತ್ತು ರಕ್ಷಣ ವೇದಿಕೆಯವರು ಹೋರಾಟ ಮಾಡುತ್ತಾರಂತೆ. ಬಾಗಿಲು ಮುಚ್ಚದ ಕಂಪನಿಗಳಿಗೆ ಕಲ್ಲು ಹೊಡಿತಾರಂತೆ! ಹಾಗಾಗಿ ಬಾಸು ಆಫೀಸ್‌ಗೆ ರಜ ಕೊಡಲು ಹೇಳಿದಾರೆ ಇವತ್ತು. ಸೋ ನಿಮಗೆಲ್ಲಾ ರಜೆ ಎಂದು ಕರೆ ಕಟ್ಟು ಮಾಡಿದ. ಮುಂಡೆವಕ್ಕೆ ದಿನ ಬೆಳಗಾದರೆ ಕುಡಿಯಲು ಕಾವೇರಿ ನೀರೇ ಬೇಕು ಅಂತಾ ಗೊತ್ತಿಲ್ಲ. ಯಾರೋ ಗಲಾಟೆ ಮಾಡುತ್ತಾರಂತೆ. ಅದಕ್ಕೆ ಇವರು ರಜ ಕೊಡುತ್ತಾರಂತೆ. ಇಂತಹವರಿಂದಲೇ ದೇಶ ಹಾಳಾಗುತ್ತಿದೆ ಎಂದು ಗೊಣಗುತ್ತಾ ಶೂ ಕಳಚಿ ಬಿಸಾಡಿ, ಬ್ಯಾಗನ್ನು ಸೋಫಾದ ಮೇಲೆ ಎಸೆದು ರೂಮು ಸೇರಿದೆ.

 ರೀ ಇವತ್ತಿಗೆ ನಮ್ಮ ಮದ್ವೆಯಾಗಿ ಒಂದು ವರ್ಷ ಆಯಿತು. ಏನೂ ಸ್ಪೆಷಲ್ ಅಡುಗೆ ಮಾಡಲಿ? ಅವಳು ಸತ್ತು ಎರಡು ವರ್ಷವಾಯಿತು ನಾನು ಏನು ತಿನ್ನಲಿ? ಊಹುಂ! ಹಾಗಂತ ಹೆಂಡತಿಗೆ ಹೇಳಲು ಮನಸ್ಸಾಗಲಿಲ್ಲ. ತಲೆ ನೋಯುತ್ತಿದೆ. ನನಗೇನು ಬೇಡ. ಮಧ್ಯಾಹ್ನ ಎಚ್ಚರ ಆದ್ರೆ ಊಟ ಮಾಡುತ್ತೆನೆ…ರೂಮು ಬಾಗಿಲು ಹಾಕಿಕೊಂಡೆ. ಅವಳು ತಿರುಗಿ ಏನನ್ನು ಕೇಳಲಿಲ್ಲ. ಕೇಳಿದ್ದರೂ ಅದು ನನಗಂತೂ ಕೇಳುತ್ತಿರಲಿಲ್ಲ. ಅಷ್ಟು ಗಟ್ಟಿಯಾಗಿ ರೂಮಿನ ಬಾಗಿಲು ಜಡಿದಿದ್ದೆ.
 

ಕಿಟಕಿ ಬಾಗಿಲು ತೆರೆದೆ. ಸದಾ ಗಿಚಿಗುಡುತ್ತಿದ್ದ ಮಹಾನಗರಿ ಮೈತುಂಬಾ ಮೌನ ಆವರಿಸಿತ್ತು. ಲಾರಿ, ಬಸ್ಸುಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳೆಲ್ಲಾ ಬಿಕೋ ಅನ್ನುತ್ತಿತ್ತು. ಬೀದಿಯಲ್ಲಿ ನೋಣಗಳು ಇತ್ತೇನೋ ಆದರೆ ಜನವಂತೂ ಇರಲಿಲ್ಲ! ದೇವರೆ ವಾರಕ್ಕೆ ಮೂರು ಕಾವೇರಿ ಹೋರಾಟ ನಡೆಯಲಿ ಎನ್ನುತ್ತಾ ದಿಂಬಿಗೆ ತಲೆ ಕೊಡುತ್ತಾ ಹಾಸಿಗೆಗೆ ಒರಗಿದೆ.

 ಮಾಣಿ ಹಗಲೇ ಎಣ್ಣೆ ಹೊಡುದ್ಯೆನೋ. ಅಲ್ಲಾ ಅವಳ ಮೇಲೆ ಬೈಕು ಹತ್ತಿಸ್ತಾ ಇದ್ದ್ಯೆಲ್ಲಾ…

ಬೀಡಾ ಅಂಗಡಿ ವೆಂಕಟೇಶಣ್ಣ ಕಿರುಚುತ್ತಾ ಇದ್ದರೆ ನನ್ನ ಎದೆ ಡವಗುಡುತ್ತಿತ್ತು. ದಿನ ಹಗಲೆ ಟೈಟ್ ಆಗ್ತಾ ಇದ್ದೆ. ಆದ್ರೆ ಇವತ್ತು ದೇವರಾಣೆಗೂ ಒಂದೇ ಒಂದು ಗುಟುಕು ಕುಡಿದಿಲ್ಲ. ಹಣೆ ಬರಹ ನಂದು ಒಂದು ಪೆಗ್‌ ಏರಿಸಿ ಬಂದಿದ್ದರೆ ಹೀಗಾಗುತ್ತಿರಲಿಲ್ಲವೇನೋ… ಅವಳನ್ನು ಸೀನನ ರಿಕ್ಷಾಕ್ಕೆ ಹತ್ತಿಸಿದೆ. ವೆಂಕಟೇಶಣ್ಣನು ಬಂದು ಸಹಾಯ ಮಾಡಿದರು. ಎಚ್ಚರ ತಪ್ಪಿತ್ತು ಅಷ್ಟೆ. ಆದರೂ ಹನಿ ರಕ್ತವೆನೂ ತೊಟ್ಟಿಕ್ಕಿರಲಿಲ್ಲ.  ಹೆಣ್ಣು ಮಕ್ಕಳು ಎಲ್ಲದರಲ್ಲೂ ತುಂಬಾ ಸೂಕ್ಷ್ಮ ಎಂಬುದನ್ನು ಕೇಳಿದ್ದರಿಂದ ಏನಾದ್ರೂ ಆದ್ರೆ ಅನ್ನೋ ಭಯ.

 ಸಂಜಿವಿನಿ ಆಸ್ಪತ್ರೆಗೆ ತಗೊಂಡು ಹೋಗು. ನಾನು ಬೈಕಲ್ಲಿ ಬರ್ತೀನಿ. ಸೀನನಿಗೆ ಹೇಳಿದೆ. ವೆಂಕಟೇಶಣ್ಣನಿಗೆ ಏನೋ ಮಾಡಿ ಬಾಯಿ ಮುಚ್ಚಿಸಿದೆ.

 ಆದ್ರೂ ನನ್ನ ಸರ್ವೀಸನಲ್ಲಿ ಇದು ಫಸ್ಟ್ ಆಕ್ಸಿಡೆಂಟು. ಎರಡು ಮೂರು ಬಾಟಲಿ ಏರಿಸಿಕೊಂಡು ಬೈಕ್ ಹೊಡೆದರೂ ಈ ವರೆಗೂ ಯಾರಿಗೂ ಕುಟ್ಟಿಲ್ಲ. ಹಣೆ ಬರಹ ಅದು ಹುಡುಗಿಗೆ ತಾಗಬೇಕಿತ್ತಾ? ನೋಡಿದ್ರೆ ಊರಿಗೆ ಹೊಸಬಳ ತರಹ ಕಾಣ್ತಾಳೆ. ಇದೇನಾದ್ರೂ ಅಪ್ಪನ ಕಿವಿಗೆ ಬಿದ್ರೆ ನನ್ನ ತಿಥಿ ಗ್ಯಾರಂಟಿ. ಅವನೊಬ್ಬ ಬೆವರ್ಸಿ ಅಪ್ಪಾ. ನಾನು ತಪ್ಪು ಮಾಡುವುದನ್ನೆ ಕಾಯ್ತಿರ್ತಾನೆ ಅಂತೆಲ್ಲಾ ಯೋಚಿಸುತ್ತಾ ಸಾಗುವಾಗ ಸಂಜೀವಿನಿ ಆಸ್ಪತ್ರೆ ಬಂದಿತ್ತು.

 ಮುದುಕರ ಕೇರಿಗೆ ಸೂಳೆನೇ ಶೃಂಗಾರಿ ಅನ್ನೋ ತರಹದ್ದು ನಮ್ಮೂರಿನ ಸಂಜೀವಿನಿ ಆಸ್ಪತ್ರೆ. ಆ ಡಾಕ್ಟರಮ್ಮನಿಗೆ ಬಸುರಿ ಹೆಂಗಸರನ್ನ ಅಬಾರ್ಷನ್ ಮಾಡಿಸುವುದು, ಥಂಡಿ, ಜ್ವರಕ್ಕೆ ಮಾತ್ರೆ ಕೊಡುವುದು ಬಿಟ್ಟರೆ ಮತ್ತೆನೂ ಗೊತ್ತಿಲ್ಲ. ತಲೆ ನೋವು ಅಂದ್ರೆ ತಲೆಗೆ ಇಂಜೆಕ್ಷನ್ ಕೊಡುವ ಸಾಗರದ ಐತಾಳ  ಡಾಕ್ಟರ ಜಾತಿಯವಳು ಈ ಹಡ್ಬೆ ಹೆಂಗಸು. ಇನ್ನು ಏನೇನೋ ಇಲ್ಲದೇ ಹೋಗಿರುವ ಖಾಯಿಲೆಯಲ್ಲ ಇದೆ ಅನ್ನತ್ತೋ, ಯಾವ  ಇಂಜೆಕ್ಷನ್ ಹೆಟ್ಟಬೇಕು ಅನ್ನತ್ತೋ… ಅದೇ ಚಿಂತೆಯಲ್ಲೇ ಅವಳನ್ನು ಮಲಗಿಸಿದ್ದ ವಾರ್ಡಗೆ ಹೋದೆ. ಡಾಕ್ಟರ್ ಮಾಲತಿಯಮ್ಮ ಆ ಪುಣ್ಯಾಗ್ತಿತ್ತಿಯನ್ನು ಪರೀಕ್ಷಿಸಿ ಹೊರಬರುತ್ತಿದ್ದಳು. ಕೆಲಸ ಆಗಬೇಕು ಅಂದ್ರೆ ಕಥೆ ಕಾಲನ್ನಾದರೂ ಹಿಡಿಯಬೇಕು ಅನ್ನೋ ಅಪ್ಪನ ಮಾತು ನೆನಪಾಯಿತು. ಸಟಕ್ಕನೆ ಎರಡು ಕೈಜೋಡಿಸಿ ಡಾಕ್ಟರಮ್ಮನಿಗೊಂದು ನಮಸ್ಕಾರ ಹೊಡೆದೆ.  ಆಯಮ್ಮ ಹಲ್ಲು ಕಿರಿಯುತ್ತಾ ಅಂತ ಮೇಜರ್ ಏನೂ ಇಲ್ಲ, ಪ್ರಜ್ಞೆ ತಪ್ಪಿದೆ ಅಷ್ಟೆ ಎಂದಿತು. ನಂಗೆ ಜೀವ ಬಂದಹಾಗೆ ಆಯಿತು. ಹೋಗಿ ಅವಳಿರುವಲ್ಲಿ ಕೂತೆ. ಜೇಬಲ್ಲಿ ಇದ್ದ ಸಿಗರೇಟ್ ಪ್ಯಾಕ್ ತೆಗೆದು ಸಿಗರೇಟು ಸೇದುತ್ತಾ ಮುಂದೇನು ಮಾಡಬೇಕೆಂದು ಯೋಚಿಸುತ್ತಾ ಕುಳಿತೆ. ನನ್ನ ಯೋಚನಾ ವೋಗಕ್ಕೆ ಅರ್ಧ ಪ್ಯಾಕ್ ಸಿಗರೇಟು ಖರ್ಚಾಗಿತ್ತು.

 ಇವತ್ತು ನೋಡಿದರೆ ನಿಜಕ್ಕೂ ಎಂತಹ ಹುಡುಗರನ್ನು ಮರುಳು ಮಾಡುವ ಸೌಂದರ್ಯವುಳ್ಳ ಹುಡುಗಿ. ಆದ್ರೆ ಆವತ್ತು ನಂಗೆ ಅದ್ಯಾವುದು ಬೇಡವಾಗಿತ್ತು. ಅವಳ ಜೀವ ಉಳಿದು ಮನೆ ತಲುಪಿದರೆ ಸಾಕು. ಯಾವುದೇ ಅವಘಡವೂ ಆಗದ್ದಿದ್ದರೆ ಸಾಕು ಅನ್ನುವಂತಾಗಿತ್ತು. ಇನ್ನೂ ಸರಿಯಾಗಿ ಹೇಳುವುದಾದರೆ ನನ್ನ ಪಾಲಿಗೆ ಆ ಘಳಿಗೆಯಲ್ಲಿ ಅವಳು ಶನಿಯಾಗಿದ್ದಳು.    

ಇನ್ನೊಂದು ಸಿಗರೇಟು ಹೊತ್ತಿಸಿ ಅವಳ ಕಾಲು ಬುಡದಲ್ಲಿ ಅವಳನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಪುಣ್ಯಾಗ್ತಿತ್ತಿ ಕಣ್ಣು ತೆರೆದಳು. ಜೀವ ಬಂದಹಾಗಾಯಿತು ನನಗೆ. ಡಾಕ್ಟರಮ್ಮ ಏನೇ ಹೇಳಿದರೂ ನಂಗೆ ಸಮಾಧಾನ ಆಗಿರಲಿಲ್ಲ. ಡಾಕ್ಟರಮ್ಮನ ಮೇಲೆ ನಂಬಿಕೆ ಅನ್ನೋದಂತೂ ಮೊದಲೇ ಇಲ್ಲ. ನಿಜಕ್ಕೂ ದೀರ್ಘವಾದೊಂದು ಉಸಿರು ಬಿಟ್ಟೆ. ಅವಳು ಕಣ್ಣು ತೆರೆದು ನನ್ನ ಸಿಗರೇಟನ್ನೆ ದಿಟ್ಟಿಸಿದಳು. ಆಸ್ಪತ್ರೆಯಲ್ಲಿ ಸಿಗರೇಟು ಸೇದಬಾರದು ಅನ್ನೋ ಪರಿಜ್ಞಾನವೂ ಬೇಡವ ನಿನಗೆ ಅಂತಾ ಲೊಳಗುಟ್ಟಿರಬೇಕು ಅವಳು! ಇದು ನಿಮ್ಮಪ್ಪನ ಆಸ್ಪತ್ರೆಯಲ್ಲ ಬಿದ್ಕಳೆ ಸುಮ್ಮನೆ ಅನ್ನುವ ಎಂಬಷ್ಟು ಕೋಪ ಬಂತು. ಆದರೂ ಹಾಸಿಗೆ ಮೇಲೆ ಮಲಗಿರುವ ರೋಗಿ ಅವಳು ಅಂತಾ ಸುಮ್ಮನಾದೆ.

 ಹೆಚ್ಚುಹೊತ್ತು ಬೇಕಾಗಲಿಲ್ಲ ಅವಳು ಎದ್ದು ಚೇತರಿಸಿಕೊಳ್ಳಲು. ಡಾಕ್ಟರಮ್ಮ ಹೇಳಿದಂತೆ ಪ್ರಜ್ಞೆ ತಪ್ಪಿತ್ತು ಅಷ್ಟೆ. ಸಿಗರೇಟು ಸೇದುತ್ತಿದ್ದ ನನ್ನ ಭಂಗಿ ನೋಡಿಯೇ ದಂಗು ಬದಿದು ಹೋಗಿದ್ದಳು ಅವಳು! ಹೆಚ್ಚೆನೂ ಮಾತಾಡಲಿಲ್ಲ. ಆದರೂ ಅವಳನ್ನು ಸರಿಯಾದ ಜಾಗಕ್ಕೆ ಸೇರಿಸುವುದು ಅನಿವಾರ್ಯವಾಗಿತ್ತು. ಊರಿಗೆ ಹೊಸ ಫಿಗರ್‌ನಂತೆ ಕಾಣುತ್ತೀಯಾ ಯಾರ ಮನೆ ಕೂಸು ನೀನು ಹೇಳು ಮನೆ ತಲುಪಿಸಿ ಬರುತ್ತೀನಿ ಮಾತು ಮುಗಿಸುವುದರೊಳಗೆ ಗುಡ್ಡೆದಿಂಬದ ರಾಮಭಟ್ಟರು ಮನೆ ಅಂದಳು. ಬೈಕ್‌ನಲ್ಲೇ ಹತ್ತಿಸಿಕೊಂಡು ಹೋಗಿ ಅವಳ ಮನೆ ಹತ್ತಿರ ಅವಳನ್ನು ಬಿಸಾಕಿ ಬರೋಣ ಅಂದುಕೊಂಡೆ. ಆದರೆ ಅವಳ ಕೈನಟಿಕ್ ಹೋಂಡಾ ಇತ್ತಲ್ಲ! ಸರಿ ರೀಕ್ಷಾದಲ್ಲಿ ಹತ್ತಿಸುತ್ತೀನಿ ಮನೆಗೆ ಹೋಗಿ ಮಲಗು. ನಿನ್ನ ಬೈಕನ್ನ ಸಂಜೆಯೊಳಗೆ ಮನೆಗೆ ಸೇರಿಸುತ್ತೀನಿ. ವಿಜಯತ್ತೆಗೆ ಹೇಳು ಪ್ರಸನ್ನ ಬೈಕ್ ತಂದಿಡ್ತಿ ಹೇಳಿದ್ದ, ಹಿಂಗೆಲ್ಲಾ ಆತು ಅಂತಾ ಎಂದೆ. ಪಾಪ ತರತರ ನಡುಗುತ್ತಿದ್ದಳು. ಬೈಕ್ ಮೇಲೆ ಕುತುಕೊಳ್ಳಲು ಗೊತ್ತಿಲ್ಲದವರಿಗೆಲ್ಲಾ ಬೈಕ್ ಕೊಡ್ತಾರೆ ಶ್ರೀಮಂತರು. ನಮ್ಮ ಪ್ರಾಣ ತೆಗೆಯಲಿಕ್ಕೆ… ಈ ರಕ್ಕಸನಿಂದ ಆದಷ್ಟು ಬೇಗ ಬಿಡುಗಡೆ ಸಿಕ್ಕಿದರೆ ಸಾಕು ಅನ್ನಿಸಿರಬೇಕು ಅವಳಿಗೆ! ಮುಖ ಸಪ್ಪೆಯಾಗಿತ್ತು. ಈಗಲೋ ಆಗಲೋ ಕಣ್ಣಿಂದ ನೀರು ಇಳಿಯುತ್ತದೆ ಅನ್ನೋಹಾಗಿತ್ತು. ನನಗೆ ಅಳುವವರನ್ನು ಕಂಡರೆ ಮೊದಲೇ ಭಯ. ರಿಕ್ಷಾ ಹತ್ತಿಸಿ ಕಳುಹಿಸಿಬಿಟ್ಟೆ.

 ಕೂಸು ವಿಜಯತ್ತೆ ಮನೆಯದ್ದು…ಸಮಾಧಾನವಾಯಿತು. ತಲೆ ಮೇಲಿನ ಅರ್ಧ ಭಾರ ಇಳಿದ ಹಾಗಾಯಿತು. ಅದೇನೋ ಗೊತ್ತಿಲ್ಲ ನಾನು ಕುಡಿದು ಊರತುಂಬಾ ಗಲಾಟೆ ಮಾಡಿದರೂ ನನ್ನನ್ನು ಕರೆದು ಕೂರಿಸಿಕೊಂಡು ಬುದ್ದಿ ಹೇಳಿದವಳು ವಿಜಯತ್ತೆ ಮಾತ್ರ. ಈ ವಯಸ್ಸಿಗೆ ಕುಡಿತ ಯಾಕೆ ಕಲಿತೆ ಅಂತಾ ಬಿಡಿಸಿ ಬಿಡಿಸಿ ಪ್ರಶ್ನೆ ಕೇಳಿದವಳು ಅವಳು ಮಾತ್ರ. ಉಳಿದವರೆಲ್ಲಾ ನನ್ನನ್ನು ಕುಡುಕ, ಕುಡುಕ ಅಂತಾ ದೂರ ಇಟ್ಟವರೆ. ನನ್ನ ಅಪ್ಪಾ, ಚಿಕಮ್ಮನ್ನು ನಾನು ಕುಡಿತೀನಿ ಅನ್ನೋ ಕಾರಣಕ್ಕೆ ಸರಿಯಾಗಿ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಹುಟ್ಟಿಸಿದ ತಪ್ಪಿಗೆ ಕೇಳಿದಾಗಲೆಲ್ಲಾ ಕಾಸು ಕೊಡುತ್ತಿದ್ದರು ಅಷ್ಟೆ.  ಹಾಗಾಗಿಯೇ ನಂಗೆ ವಿಜಯತ್ತೆ ಅಂದ್ರೆ ಮೊದಲಿನಿಂದಲೂ ಪ್ರಾಣ.

 ಹುಡುಗಿ ಬದುಕಿದ್ದಾಳೋ. ಸತ್ತಿದ್ದಾಳೊ ಅಂತಾ ನೋಡಿಕೊಂಡು ಅವಳದ್ದು ಈ ಕಿರಿಕ್‍ ಹೋಂಡಾ… ಅಲ್ಲಲ್ಲ ಕೈನೆಟಿಕ್ ಹೋಂಡಾ ಕೊಟ್ಟು ಬರೋಣ ಅಂತಾ ಸಾಯಂಕಾಲ ನಾಲ್ಕುವರೆ ಸಮಯಕ್ಕೆ ವಿಜಯತ್ತೆ ಮನೆ ತಾವ ಹೋದೆ. ಕೂಸು ಅಂಗಳದಲ್ಲೆ ಇತ್ತು. ಅನಿಷ್ಟ ಶನಿ ಎದುರಿಗೆ ಇದೆ ಅಂದುಕೊಂಡೆ. ಹಲ್ಲು ಕಿರಿದಳು. ನಯವಾಗಿಯೆ ಮಾತಾಡಿಸಿದಳು. ಊಹುಂ ನನ್ನ ವರ್ತನೆ ನೋಡಿ ಅವಳು ನನ್ನ ಎಡ ಬಲಕ್ಕೂ ಸುಳಿಯರಾಳಲು ಅಂದುಕೊಂಡಿದ್ದೆ. ಅಯ್ಯಪ್ಪಾ ಹುಡುಗಿಯರು ನನ್ನಂತಹವನನ್ನು ನೋಡಿಯೂ ಹಲ್ಲು ಕಿರಿಯುತ್ತಾರಾ? ಇವಳಿಗೆ ಬೆಳಿಗ್ಗೆ ತಲೆಗೇನಾದ್ರೂ ಏಟು ಬಿದ್ದಿರಬಹುದಾ?! ಅನುಮಾನ ಶುರುವಾಯಿತು. ನಿನ್ನ ಗಾಡಿ ಇಲ್ಲೆ ಬಡಿದಿದ್ದೀನಿ. ವಿಜಯತ್ತೆ ಇಲ್ವಾ..?

“ಎಂತುದಾ ಮಾಣಿ ನಿಂದು ಗಲಾಟೆ, ಪಾಪದ ಕೂಸು ಸಿಕ್ಕಿದ್ದು ಹೇಳಿ ನೀ ಹಾಂಗೆಲ್ಲಾ ಜೋರು ಮಾಡದನಾ? ಅನ್ನುತ್ತಾ ಅಂಗಳಕ್ಕೆ ಧಾವಿಸಿದರು ವಿಜಯತ್ತೆ.

ಇಲ್ಲೆ ಪಾಪ ಕೂಸಿಗೆ ಬೆಳಿಗ್ಗೆ ತಲೆಗೆ ಏಟು ಬಿದಿದು ಕಾಣ್ಸುತ್ತು. ಅದ್ಕೆ ಗಟ್ಟಿ ಧ್ವನಿಲಿ ಮಾತಾಡಿದೆ ಅಷ್ಟೆ…

ನಿನ್ನಂತಹವನ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ತಲೆಗೂ ಬಿಳ್ತು ಮತ್ತೊಂದಕ್ಕೂ ಬೀಳ್ತು. ನಿನ್ನ ಕಟ್ಟಿಕೊಳ್ಳವಳನ್ನ ಆ ದೇವರೆ ಕಾಪಾಡಕ್ಕು ಒಳಗೆ ಬಾ ಕಾಫಿ ಕುಡಿಲ್ಲಕ್ಕಡ? ಈ ಹೊತ್ತಲ್ಲಿ ಕಾಫಿ ಕುಡಿತ್ಯಾ ಅಥವಾ…?

ಇಲ್ಲೆ ಮಾರಾಯಿತಿ ಅದೇನು ಕಾಫಿ ಹಂಗೆ ಮೂರು ರೂಪಾಯಿಗೆ ಸಿಕ್ತು ಅಂದ್ಕೊಂಡಿದ್ದ್ಯೆನೆ. ಅದೆಲ್ಲಾ ಕಾಸ್ಟ್ಲಿ ಮಾರಾಯಿತಿ. ಅಪ್ಪಾ ಕೊಡೋ ದುಡ್ಡು ವಾರಕ್ಕೆ ಒಂದ್ಸಾರಿ ಕುಡಿಯಕ್ಕು ಸಾಕಾತ್ತಲ್ಲೆ ಮಾರಾಯಿತಿ…

ಮನೆಯಾಳತನ ಸಿಗೋ ಮಾವನ ಮನೆ ನೋಡು…ಸಾಕು ಬಾ ಕಾಫಿ ಕುಡಿಲ್ಲಕ್ಕಡ ಅಡುಗೆ ಮನೆಗೆ ಕರೆದರು.

ಸರಿ ಈ ಇಲೆಮೆಂಟು ನಿಮ್ಮ ಮನೆಗೆ ಹ್ಯಾಂಗೆ ಬಂದು ಸೇರಿಕೊಂಡ್ತು ಮಾರಾಯಿತಿ. ಬೆಳ್ಳಿಗೆ ಆಗಿದ್ದು ಗೊತ್ತಾಗಿರಕ್ಕಲ್ಲ ನಿಂಗೆ…

ಗೊತಾತು ಪಾಪ ಕೂಸು ಗಾಡಿ ಕಲಿತಾ ಇದ್ದು. ಅಲ್ಲಾ ಗಾಡಿ ಕಲಿತ ನಿಂಗಾದ್ರೂ ಪ್ರಜ್ಞೆ ಬ್ಯಾಡ್ದನಾ?

ಅದ್ದಿದ್ದರೆ ನಾನು ಈ ಊರಲ್ಲಿ ಎಂತಕೆ ಇರ್ತಿದ್ನೆ ಮಾರಾಯಿತಿ…

ಇವಳು ನಮ್ಮನೆ ರಾಜಗೋಪಾಲ್ ಭಾವನ ಮಗಳು. ಈ ವರ್ಷ ಅವಕ್ಕೆ ಆಂದ್ರದಿಂದ ಬೆಂಗಳೂರಿಗೆ ಟ್ರಾನ್ಸ್‌ಫರ್ ಆತು.  ಹಾಂಗಾಗಿ ಎಲ್ಲಾ ಬೈಂದ. ನಿಂಗೆ ಇವಳನ್ನು ನೋಡಿದಾ ನೆನಪೇ ಇಲ್ಲ್ಯೆನೋ ಅಲ್ದಾ? ನೋಡಕ್ಕೆ ಅವು ಊರಿಗೆ ಬಪ್ಪುದೇ ಅಪರೂಪ. ಈ ಬ್ಯಾಂಕಲ್ಲಿ ಇದ್ದವರ ಹಣೆಬರಹವೆ ಹಿಂಗೆ ನೋಡು. ಸವಿರ್ಸಲ್ಲಿ ಅರ್ದಕರ್ದ ಹೊರರಾಜ್ಯದಲ್ಲೆ ಕಳೆದು ಬಿಡ್ತಾ…

ನನ್ನ ಹೆಸರು ಸುಮಾ ಅಂತಾ.. ಫಸ್ಟ್ ಪಿಯುಸಿ ಮುಗತ್ತು. ಇಷ್ಟು ದಿನ ವಿಶಾಖ ಪಟ್ಟಣಂಲ್ಲಿ ಇದ್ದಿದ್ಯ. ಈಗ  ಅಪ್ಪಂಗೆ ಬೆಂಗಳೂರಿಗೆ ಟ್ರಾನ್ಸ್‌ಫರ್ ಆಯ್ದು…

ಛೇ ನಿಜಕ್ಕೂ ಪಾಪದ ಕೂಸು ಸುಮ್ನೆ ರೇಗಾಡಿಬಿಟ್ಟೆ. ಒಂತರಹ ಸಂಕಟ ಶುರುವಾಯಿತು. ಆದ್ರೂ ಅಂತಹ ಸಂಕಟ, ಕರುಣೆ ಎಲ್ಲಾ ನನ್ನಲ್ಲಿ ಉಳಿಯುವುದು ಸ್ವಲ್ಪ ಕಾಲ ಮಾತ್ರ.

ಪುಟ್ಟಿ ಸ್ವಾರಿ. ಸಾಧ್ಯಾವಾದ್ರೆ ನಮ್ಮ ಮನೆಗೆ ಬಾ. ನನ್ನ ಅಮ್ಮ ವಿಜಯತ್ತೆ ಹಂಗೆ ಕಾಫಿ ಕೊಟ್ಟು ಕಳಿಸ್ತಾ ಅಂತಾ ನಾನೇನು ಭರವಸೆ ಕೊಡ್ನ್ತಲ್ಲೆ.

ನಿಮ್ಮ ಮನೆಲ್ಲಿ ಕಾಫಿ ಮಾಡಿಕೊಂಡು ಕುಡ್ಕಂಡು ಬತ್ಯಾ ತಗಾ..

ಸರಿ ನಾನ್ನಿನ್ನು ಹೊರಡ್ತಿ

ಅವರು ಬರಲಿಲ್ಲ. ಅವಳು ಸಿಗಲಿಲ್ಲ. ಅವಳನ್ನು ಮತ್ತೆ ಹುಡುಕುವ ಗೌಜಿಗೂ ನಾನು ಹೋಗಲಿಲ್ಲ. ಆದ್ರೂ ಅವಳು ನನ್ನ ಹೃದಯದಲ್ಲಿ ಪುಟ್ಟದೊಂದು ತಲ್ಲಣ ಹುಟ್ಟುಹಾಕಿದಳು. ನಿದ್ದೆ ಬರುತ್ತಿತ್ತಾದರೂ ಯಾಕೋ ನಿದ್ದೆ ಬರಲಿಲ್ಲ. ಹೆಂಡತಿ ಬಳಿ ಒಂದು ಲೋಟ ಕಾಫಿ ಕೊಡುವಂತೆ ಕೂಗಿದೆ. ಆದರೂ ನನ್ನಲ್ಲಿ ಆ ದಿನಗಳಷ್ಟು ಅಬ್ಬರವಿಲ್ಲ. ಅದಿಗಿಂತ ಎಷ್ಟೋ ಸೌಮ್ಯವಾಗಿದ್ದೇನೆ. ಅದಕೆಲ್ಲಾ ಅವಳೇ ಕಾರಣ.
                                    *****
ಊಹುಂ ಕಾಫಿ ಕುಡಿದರೂ ನನಗೆ ಅವಳ ನೆನಪುಗಳಿಂದ ಹೊರಬರಲಾಗುತ್ತಿಲ್ಲ. ಹೆಂಡತಿ ಏನೂ ಗೊಣಗುತ್ತಿದ್ದರೂ ಉತ್ತರಿಸಬೇಕನ್ನಿಸುತಿಲ್ಲ.

 ಪಿಯುಸಿ ಮುಗಿಸಿ ಎಂಜಿನಿಯರಿಂಗ್‌ಗೆ ಅಂತಾ ಬೆಂಗಳೂರಿಗೆ ಬಂದು ಪಿಇಎಸ್‌ ಕಾಲೇಜು ಸೇರಿದೆ. ನನ್ನ ಹುಡುಗಾಟ, ತೆವಲುತನ ಯಾವುದು ನಿಂತಿರಲಿಲ್ಲ. ಹೀಗೆ ಎರಡು ಸೆಮ್ ಕಳೆದಿತ್ತು. ಅದು ಮೂರನೆ ಸೆಮ್ ಪ್ರಾರಂಭದ ದಿನ. ಫಸ್ಟ್ ಸೆಮ್‌ಗೆ ಬಂದಿರುವ ಹುಡುಗಿಯರನ್ನು ನೋಡಿ, ಒಂದಿಷ್ಟು ಅಣಗಿಸಿ ಬರಬೇಕು ಅಂತಾ ನಾವೆಲ್ಲಾ ಸ್ಕೆಚ್ ಹಾಕಿಕೊಂಡು ಕಾರಿಡಾರ್‌ನಲ್ಲಿ ನಿಂತಿದ್ದೆವು. ಆಕಾಶ ನೀಲಿ ಬಣ್ಣದ ಚೂಡಿ ತೊಟ್ಟಿದ್ದ, ಉದ್ದ ಜಡೆಯ ಹುಡುಗಿಯೊಬ್ಬಳು ನನ್ನ ಮುಂದೆ ಹಾದು ಹೋದಳು. ನಾನು ಮುಖ ನೋಡಲಿಲ್ಲ.

 ಇದ್ಯಾವ ಫಿಗರೋ ಒಳ್ಳೆ ಗೌರಮ್ಮನ ತರಹ ಇದೆಯಲ್ಲೋ…

ಸಟಕ್ಕನೆ ತಿರುಗಿದಳು. ಎದೆಯೊಮ್ಮೆ ಡಬ್ಬ ಅಂದಿತ್ತು.

ಏ ಸುಮಾ…ನೀನು…ನೀನಿಲ್ಲಿ….

ನಡುಗುತ್ತಿದ್ದೆ. ಯಾಕೆ ನಡುಗಿದೆನೋ ನನಗಂತೂ ಗೊತ್ತಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರಿಡಾರಿನಲ್ಲಿ ನಿಂತು ಹುಡುಗಿಯರನ್ನು ಅಣಗಿಸುವುದು ದೊಡ್ದ ವಿಷಯವೇ ಅಲ್ಲ. ಹುಡುಗಿ ಅಂದ್ರೆ ಮೂರು ಮಾರು ಹಾರುತ್ತಿದ್ದ ನನ್ನಂತಹವನು ಕಾರಿಡಾರನಲ್ಲಿ ನಿಂತು ಹುಡುಗಿಯನ್ನು ಚುಡಾಯಿಸುತ್ತೀನಿ ಅಂದರೆ ಕಾಲೇಜಿನ ಪರಿಸರ ಹೇಗಿರಬಹುದು.

ಏ ಪ್ರಸನ್ನ ನೀನು…

ಕಳೆದು ಹೋದವಳು ಅವಳಾಗಿಯೇ ಸಿಕ್ಕಿದಳು ಅಂದುಕೊಂಡೆ.
ಆಮೇಲೆ ಕ್ಯಾಂಟೀನ್‌ಗೆ ಹೋಗಿ ಕುಳಿತೆವು. ಅವಳು ನಮ್ಮ ಕಾಲೇಜಿನಲ್ಲೆ ಎಂಜಿನಿಯರಿಂಗ್‌ಗೆ ಸೇರಿದ್ದಾಳೆ ಅಂತಾ ಗೊತ್ತಾಯಿತ್ತು. ಅಪ್ಪ ಇಲ್ಲೆ ಕತ್ರಿಗುಪ್ಪೆಯಲ್ಲಿ ಬ್ಯಾಂಕ್‌ ಮ್ಯಾನೇಜರ್‌. ನಾವು ಇಲ್ಲೆ ಮನೆ ಮಾಡಿದಿವಿ….ಹೀಗೆ ಒಂದು ಮುಕ್ಕಾಲು ಗಂಟೆ ಅದು,ಇದು ಅಂತಾ ಹರಟಿರಬಹುದು. ಊರಲ್ಲಿ ನಾನು ಅವಳು ಹಾಗೆಲ್ಲಾ ಹರಟ್ಟಿದ್ದರೆ ದೊಡ್ಡ ಸುದ್ದಿಯೇ ಆಗುತ್ತಿತ್ತು. ಆದ್ರೆ ಬೆಂಗಳೂರಿನಲ್ಲಿ ಅವೆಲ್ಲಾ ಮಾಮೂಲು. ಅಷ್ಟಕ್ಕು ಒಬ್ಬರ ಮುಖ ಇನ್ನೊಬ್ಬರಿಗೆ ಪರಿಚಯವಿಲ್ಲದ ನಾಡಿದು. ಮುಖ ಪರಿಚಯ ಮಾಡಿಕೊಂಡು ಆಗಬೇಕಾದ್ದು ಏನೂ ಇಲ್ಲ!

 ಮೊದ ಮೊದಲಿಗೆ ಗೆಳೆತನವಾಗಿತ್ತು ಹೋಗುಹೋಗುತ್ತಾ ಪ್ರೀತಿಗೆ ತಿರುಗಿತು. ಇಬ್ಬರೂ ಪ್ರೀತಿಯಲ್ಲಿ ಮುಳುಗಿದೆವು. ಸುತ್ತಾಡಲು ಶುರುವಿಟ್ಟೆವು. ನನ್ನ ಕುಡಿತ, ಸಿಗರೇಟು…ಇವ್ಯಾವ ಚಟವೂ ನನ್ನಿಂದ ದೂರವಾಗಿರಲಿಲ್ಲ. ಅದು ಅವಳಿಗೂ ಗೊತ್ತಿತ್ತು! ಸಿಕ್ಕಾಗಲೆಲ್ಲಾ ಭೊಧನೆಗೆ ಶುರುವಿಟ್ಟಳು. ಹಂತ ಹಂತವಾಗಿ ನನ್ನ ಚಟಗಳನ್ನೆಲ್ಲಾ ಬಿಡಿಸಿದಳು. ಅದರ ಪ್ರಭಾವ ಎಷ್ಟಿತ್ತೆಂದರೆ ಅವಳು ಸತ್ತಾಗ ನನ್ನ ತಲೆ ಎಷ್ಟು ಹಾಳಾದರೂ ನನಗೆ ಮತ್ತೆ ಕುಡಿಯಬೇಕು ಅನ್ನಿಸಲಿಲ್ಲ, ಸಿಗರೇಟ್ ಸೇದಬೇಕು ಅನ್ನಿಸಲಿಲ್ಲ. ಅಷ್ಟು ನಾಜೂಕಿನಿಂದ ಅವಳು ನನ್ನ ಚಟವನ್ನು ದೂರ ಮಾಡಿದ್ದಳು.

 ನನಗಂತೂ ಕೂತುಹಲವಿತ್ತು. ನನ್ನಂತಹ ಶುದ್ದ ಒರಟನ ಬಲೆಗೆ ಅವಳು ಏಕೆ ಬಿದ್ದಳು ಮತ್ತು ಹೇಗೆ ಬಿದ್ದಳು ಎಂಬುದು. ನನ್ನ ಕಂಡ ದಿನ ಅವಳು ಹೆದರಿದ್ದಳಂತೆ, ವಿಜಯತ್ತೆ ಬಳಿ ಹೋಗಿ ನನ್ನ ಕುರಿತು ಹೇಳಿದಳಂತೆ. ಆಗ ವಿಜಯತ್ತೆ ನನ್ನ ಬದುಕಿನ ಕಥೆ ಹೇಳಿದರಂತೆ. ನನ್ನ ಕುರಿತು ಒಂದು ಒಳ್ಳೆ ಅಭಿಪ್ರಾಯ ಅವಳಲ್ಲಿ ಮೂಡುವಂತೆ ಮಾಡಿದರಂತೆ ಹಾಗಂತ ಅವಳೆ ಒಂದು ದಿನ ನನ್ನ ಬಳಿ ಹೇಳಿದ್ದಳು.

 ಪ್ರೇಯಸಿಯಾಗಿ, ಅದಕ್ಕಿಂತ ಮೀಗಿಲಾಗಿ ನನ್ನ ಬದುಕಿನ ಒಬ್ಬ ಗೆಳತಿಯಾಗಿ ಅವಳು ನನ್ನ ಬದುಕಿಗೆ ಅಂಟಿಕೊಂಡಳು. ಆವತ್ತು ನನಗೆ ಕೆಲಸ ಸಿಕ್ಕಿದ ಸಂಭ್ರಮ. ಪಾರ್ಟಿ ಕೊಡಿಸು ಅಂತಾ ಹಠ ಹಿಡಿದಳು. ನನಗೆ ಒಂಚೂರು ಮನಸ್ಸಿರಲಿಲ್ಲ. 

ಬೇಡ ಸುಮಿ ಇನ್ನೊಂದು ದಿನ ಪಾರ್ಟಿ ಕೊಡುಸ್ತೀನಿ ಪ್ಲೀಸ್ ಹಠ ಮಾಡಬೇಡ. ನನಗೆ ಇವತ್ತು ಹೊರಗಡೆ ಹೋಗಲು ಮೂಡಿಲ್ಲ…

ಊಹುಂ ಕೇಳಲಿಲ್ಲ. ಮಗುವಿನಂತೆ ಹಠ ಹಿಡಿದಳು. ನನ್ನ ಸ್ಕೂಟರನಲ್ಲೇ ಹೋಗೋಣ. ನೀನು ಹಿಂದೆ ಕೂಳಿತುಕೋ ಸಾಕು ಅಂತಾ ಶಾಂತಿಸಾಗರ್ ಹೋಟೆಲ್‌ಗೆ ಕರೆದುಕೊಂಡು ಹೋದಳು.

 ಪಾರ್ಟಿ ಮುಗಿಸಿ ಬರುತ್ತಾ ಇದ್ದ್ವಿ ಬಸ್ಸೊಂದು ನಮ್ಮ ಬೈಕ್‌ಗೆ ಡಿಕ್ಕಿ ಹೊಡೆದದ್ದು ಗೊತ್ತು. ಮುಂದೇನಾಯಿತೋ ಗೊತ್ತಿಲ್ಲ. ನಾನು ಆಸ್ಪತ್ರೆಯ ಐಸಿಯುದಲ್ಲಿ ತಿಂಗಳ ಕಾಲವಿದ್ದೆ. ಆದರೂ ಒಂದು ದಿನವೂ ಅವಳು ನನ್ನನ್ನು ನೋಡಲು ಬರಲಿಲ್ಲ. ಪಕ್ಕದಲ್ಲಿದ್ದವರನ್ನು ಕೇಳಿದ್ರೆ ಇಲ್ಲ ಅವಳು ಆಸ್ಪತ್ರೆಗೆ ಸೇರಿದಾಳೆ ಅಂದರು. ಆಸ್ಪತ್ರೆ ಎಂಬ ನರಕದಿಂದ ಹೊರಬಂದ ಮೇಲೆ ಗೊತ್ತಾಯಿತು ಆವತ್ತಿನ ಆಕ್ಸಿಡೆಂಟ್‌ನಲ್ಲಿ ಅವಳು ತೀರಿಹೋದಳು ಅಂತಾ. ಇವತ್ತಿಗೆ ಅವಳು ತೀರಿ ಎರಡು ವರ್ಷವಾಯಿತು…ರೀ ಇವತ್ತಿಗೆ ಮದ್ವೆಯಾಗಿ ವರ್ಷವಾಯಿತು. ದೇವಸ್ಥಾನಕ್ಕೆ ಹೋಗಿ ಬರೋಣ ಅಂದ್ರೆ…ಹೆಂಡತಿ ರಾಗ ಎಳೆದಳು. ಅವಳು ಸತ್ತ ಮೇಲೆ ವಿಜಯತ್ತೆ ಹಠ ಮಾಡಿ ನನಗೆ ಗಂಟು ಹಾಕಿದ ಹುಡುಗಿಯಿವಳು.

Read Full Post »