Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2010

ಸ್ನೇಹಿತರೆ,

ಯಾರೊ ಅನಾಮಧೇಯ ವ್ಯಕ್ತಿಯೊಬ್ಬ ಪದೆ, ಪದೆ ನನ್ನ ಬ್ಲಾಗಿಗೆ ಕೆಟ್ಟ ಪ್ರತಿಕ್ರಿಯೆ ಹಾಕಲು ಶುರು ಮಾಡಿದ್ದಾನೆ. ನನ್ನ ಹಿಂದಿನ ಬರಹಕ್ಕೆ ಆತ ಹಾಕಿದ ಕಮ್ಮೆಂಟ್‌ಗೆ ನಾನು ಉತ್ತರ ನೀಡಿರುವೆ. ಆತನಿಗೆ ನೀಡಿದ ಉತ್ತರ್ ಇಲ್ಲಿದೆ. ನನ್ನ ಮೇಲ್‌ ಐಡಿಯ ನಕಲು ರೂಪದಲ್ಲಿ ಆತ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಇದನ್ನು ನಿಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ..

ಆತ ಹಿಂದಿನ ಲೇಖನಕ್ಕೆ ಹಾಕಿದ ಪ್ರತಿಕ್ರಿಯೆಗೆ ನನ್ನ ಉತ್ತರ ಇಲ್ಲಿದೆ…

ಹಲೊ ಪಯಣಿಗ ಅವರೆ
ನೀವು ನನ್ನ ಬರಹಗಳನ್ನು ಬೈದು ಹಾಕಿದ ಮೊದಲ ಕಮ್ಮೆಂಟ್‌ನ್ನು ಡಿಲಿಟ್‌ ಮಾಡಿದೆ. ಪುನಃ ಮತ್ತೆ ಕಮ್ಮೆಂಟ್‌ ಹಾಕಿರುವಿರಿ. ಹಾಗಾಗಿ ಪ್ರಕಟಿಸುತ್ತಿರುವೆ. ಬೈಗುಳ ತಪ್ಪು ತಿದ್ದಿಕೊಳ್ಳುವಂತಿದ್ದರೆ ಖಂಡಿತಾ ಒಪ್ಪುತ್ತಿದೆ. ನನ್ನದು ಪಯಣಿಗ ೨೦೦೫ ಎಂಬ ಈ ಮೇಲ್‌ ಐಡಿ. ನೀವು ಪಯಣಿಗ೩೦೦೦ ಎಂಬ ಐಡಿ ಸೃಷ್ಟಿಸಿ ಈ ಕೆಲಸ ಮಾಡುತ್ತಿರುವಿರಿ. ಎಲ್ಲ ಸ್ನೇಹಿತರ ಗಮನಕ್ಕೆ ಇಲ್ಲಿ ಕಮ್ಮೆಂಟಿಸಿರುವ ಪುಣ್ಯಾತ್ಮನ ಐಪಿ ಸಂಖ್ಯೆ 117.192.207.136. ಇದು ನಾನು ಒಳ್ಳೆ ಮಾತಿನಲ್ಲಿ ಪಯಣಿಗನಿಗೆ ಹೇಳಿರುವ ಕಿವಿ ಮಾತು. ತಪ್ಪು ತಿದ್ದಿಕೊಳ್ಳದಿದ್ದರೆ ನಿನ್ನ ಭಾಷೆಯಲ್ಲೇ ಉತ್ತರ ನೀಡಬೇಕಾಗುತ್ತದೆ ಪಯಣಿಗ…

ಆತ ಹಾಕಿರುವ ಪ್ರತಿಕ್ರಿಯೆ ಹಾಗೂ ಆತನ ಕುರಿತ ಮಾಹಿತಿ…

girish
girijah@gmail.com
117.192.206.18
Submitted on 2010/11/28 at 6:30 am

ಇಂಥ ಡಬ್ಬಾ ಬ್ಲಾಗಿನ ಬರಹಗಳನ್ನು ಯಾರ್ ಕದೀತಾರೋ ಆ ಶಿವನೇ ಬಲ್ಲ…. ಅಂತ ಭ್ರಮೆಗಳ್ನೆಲ್ಲ ಇತ್ಕೊಂಡಿದೀಯಾ ಗುರೂ

 

payaniga
payaniga3000@gmail.com
117.192.207.136

ತನ್ನನ್ನು ತಾನೇ ಬೈದಂಗೆ ಮಾಡಿಕೊಂಡು, ತನ್ನನ್ನೇ ಹೊಗಳಿಕೊಳ್ಳುವ ಲೇಖನ. ಇದನ್ನೇ ನಮ್ಮ ಪರಮಗುರುವಿನ ಭಾಷೆಯಲ್ಲಿ ಸ್ವಕುಚಮರ್ದನ ಅಂತಾರೆ. ಹೆಂಗೈತೆ ಮೈಗೆ ?

Read Full Post »

ಆಟೋ ಹತ್ತುವುದು ಅಂದ್ರೆ ನಂಗೆ ತುಂಬಾ ಭಯ. ಯಾಕಂದ್ರೆ ಅವರ ಕೈಯಲ್ಲಿ  ಜಗಳ ಮಾಡದೇ ಇಳಿದ ದಿನವೇ ಇಲ್ಲ. ಬೇಕಾದ ಜಾಗದಲ್ಲಿ  ಇಳಿಸಲ್ಲ, ಹಾಡುಹಗಲೇ ಅಷ್ಟು  ಕೊಡಿ, ಇಷ್ಟು  ಕೊಡಿ ಅಂತಾರೆ..ಹೀಗೆ ಹತ್ತೆಂಟು ಬಗೆಯ ತರ್‍ಲೆಗಳು ಆಟೋದವರದ್ದು. ಇನ್ನೂ, ಆಟೋ ಹತ್ತಿದ ಮೇಲೆ ಕೆಲ ಚಾಲಕರು ಮಾತಾಡುತ್ತಾರೆ ಮತ್ತು ಕೆಲವರನ್ನು ಕಂಡಾಗ ಮಾತಾಡಿಸಬೇಕು ಅನ್ನಿಸತ್ತೆ. ಇನ್ನು ಹಲವರನ್ನು ನೋಡಿದ್ರೆ ಮಾತಾಡಿಸುವುದೇ ಬೇಡ ಅನ್ನಿಸತ್ತೆ. ಆದ್ರೂ ಸಾಮಾನ್ಯವಾಗಿ ಅವರ ಸಂಪಾದನೆ, ಬೆಂಗಳೂರಿನ ಬದುಕು ಇತ್ಯಾದಿಗಳ ಕುರಿತಾಗಿ ಕೇಳುತ್ತೇನೆ.

ಕಸ್ತೂರಿ ಬಾ ರಸ್ತೆಗೆ ಹೋಗಬೇಕಿತ್ತು. ೧೨ ಗಂಟೆಗೆ ಕಾರ್‍ಯಕ್ರಮ ಇದ್ದದ್ದು. ಸಣ್ಣದೊಂದು ನಿದ್ದೆ ತೆಗೆದು ಎದ್ದಾಗ ೧೧.೪೦ ಆಗಿತ್ತು. ಹೊರಗಡೆ ನೋಡಿದ್ರೆ ಕಿಟಿಕಿಟಿ ಮಳೆ. ಕಷ್ಟಪಟ್ಟು  ಮುಖ್ಯ ರಸ್ತೆಗೆ ಬಂದು ನಾಲ್ಕಾರು ಆಟೋಗಳಿಗೆ ಕೈ ಮಾಡಿದೆ. ಕೈ ನೋವು ಬಂತು ಹೊರತು ಆಟೋ ನಿಲ್ಲಿಸಲಿಲ್ಲ. ಅಷ್ಟೊತ್ತಿಗೆ ಒಂದು ಬಸ್ ಬಂತು. ಶ್ರೀನಿವಾಸ ನಗರಕ್ಕೆ ಹೋಗಿ ಇಳಿದೆ. ಬಸ್‌ಸ್ಟಾಂಡ್‌ನಲ್ಲೇ ಒಬ್ಬ  ಆಟೋದವರೊಬ್ಬರು ನಿಂತಿದ್ದ. ಕೇಳುತ್ತಿದ್ದಂತೆ ಹತ್ತಿ ಸರ್ ಅಂದ. ಕೈಯಲ್ಲಿ  ಸಿಗರೇಟು ಹಿಡಿದ ಅವರನ್ನು ನೋಡಿ, ಇವತ್ತು ಹೇಗೂ ಜಗಳ ಇದೆ ಅಂತಾ ಆಟೋ ನಂಬರ್ ನೋಡಿಕೊಂಡೆ. ನಾವು ಕೂರುವ ಸೀಟ್‌ನ ಎದುರುಗಡೆ ಅವರ ಪರವಾನಗಿ ಪತ್ರ ಇರುತ್ತದೆ. ಸಿಗ್ನಲ್‌ನಲ್ಲಿ  ಅದರ ಫೋಟೊವನ್ನೂ ತೆಗೆದುಕೊಂಡೆ ಅವರಿಗೆ ಗೊತ್ತಾಗದಂತೆ! ಜತೆಗೆ ಬೆಂಗ್ಳೂರು ಇನೋಗೆ ಮೆಸೇಜ್ ಮಾಡಿ ಶ್ರೀನಿವಾಸ ನಗರ-ಕಸ್ತೂರಿ ಬಾ ರಸ್ತೆಗೆ ಎಷ್ಟು  ದೂರ ಅಂತ ತಿಳಿದುಕೊಳ್ಳುವ ಯತ್ನ ಮಾಡಿದೆ. ವಿದ್ಯಾಪೀಠ, ಆಶ್ರಮ, ನ್ಯಾಷನಲ್ ಹೈ ಸ್ಕೂಲ್, ಮಿನರ್ವ, ರವೀಂದ್ರ ಕಲಾಕ್ಷೇತ್ರ…೫.೫ ಕಿ.ಮೀ…೪೯ರೂ ಅಂತ ಆ ಕಡೆಯಿಂದ ಸಂದೇಶ ಬಂತು.

ನಾನು ಯಾವುದೋ ಲೆಕ್ಕಾಚಾರ ಹಾಕಿಕೊಂಡು ಅವರ ಹಾದಿ ತಪ್ಪಿಸಿದ್ದೆ. ಆತ ಸೀದಾ ಗವಿಪುರಂ ಕಡೆ ಸಾಗಿದ. ಸರ್ ಮಾರ್ಕೆಟ್ ಮೇಲೆ ಹೋಗಬೇಕಾ ಅಂದರು. ಅಷ್ಟೊತ್ತಿಗೆ ಮಿನರ್ವ ಮೇಲೆ ಹೋಗುವುದು ಹತ್ರ ಎಂದು ಬೆಂಗಳೂರು ಇನೋದಿಂದ ಗೊತ್ತಾಗಿತ್ತು. ಹಾಗಾಗಿ ಹತ್ತಿರದ ರಸ್ತೆಯಲ್ಲಿ  ಹೋಗಿ ಅಂದೆ! ನಾನು ಮಿನರ್ವ ಮೇಲೆ ಹೋಗ್ಬೇಕು ಅಂತಾ ಹೊರಟರೆ, ನೀವು ಹೀಗೆ ಹೋಗಿ ಅಂತಾ ಸುಮ್ಮನೆ ಸುತ್ತು ಹಾಕ್ಸಿದ್ರಲ್ಲ  ಅಂತಾ ಅವರು ಹೊರಟರು.

ಟೌನ್‌ಹಾಲ್‌ವರೆಗೆ ನಾನು ಮೊಬೈಲ್‌ನಲ್ಲಿ  ಏನೋ ಮಾಡುತ್ತಿದೆ. ಹಾಗಾಗಿ ಅವರೂ ಸುಮ್ಮನಿದ್ದರು. ಕೊನೆಗೆ ಸರ್ ದಿನಕ್ಕೆ  ಎಷ್ಟು  ಸಂಪಾದನೆ ಆಗತ್ತೆ, ಮಕ್ಕಳು..ಇತ್ಯಾದಿ ವಿಚಾರಿಸಿದೆ. ಅಕ್ಷರಶಃ ಅಚ್ಚರಿ ಕಾದಿತ್ತು. “ದಿನಕ್ಕೆ ೫೦೦ರೂ. ಆಗತ್ತೆ. ನಾನು ಜಾಸ್ತಿ ಆಟೋ ಓಡಿಸಲ್ಲ. ಇದು ನನ್ನ ಫ್ರೆಂಡ್ ಆಟೊ. ನಂಗೆ ಒಂದು ಕಾಲು ಇಲ್ಲ…” ಎಂದು ಅವರು ತಮ್ಮ  ತುಂಡಾದ ಕಾಲನ್ನು ತೋರಿಸಿದಾಗ ನನ್ನ  ಮೈ ಜುಂ ಎಂದಿತ್ತು. ಒಂದೇ ಕಾಲಲ್ಲಿ  ಆಟೋ ಓಡಿಸುತ್ತಾರೆ. ಅವರ ತಾಯಿಗೆ ಹೃದಯದ ಶಸ್ತ್ರ ಚಿಕಿತ್ಸೆಯಂತೆ. ಹಾಗಾಗಿ ಕಳೆದ ೪ ದಿನದಿಂದ ಹಗಲು ರಾತ್ರಿ ಆಟೋ ಓಡಿಸುತ್ತಿದ್ದಾರಂತೆ.

‘ಧರ್ಮಸ್ಥಳದ ಹೆಗಡೆಯವರು ೩೦,೦೦೦ರೂ. ಕೊಟ್ಟಿದ್ದಾರೆ. ಪೇಜಾವರರು ೧೦,೦೦೦ರೂ. ಕೊಟ್ಟಿದ್ದಾರೆ. ಎಲ್ಲಾ ಆಸ್ಪತ್ರೆಯಲ್ಲಿ  ಇದ್ದಾರೆ. ಇವತ್ತು ಸಂಜೆ ಆಪ್‌ರೇಷನ್. ನಾನು ಹೋಗ್ಬೇಕು…ಮಕ್ಕಳು ಇಲ್ಲ. ಎಂಇಎಸ್ ಇವನಿಂಗ್ ಕಾಲೇಜ್‌ನಲ್ಲಿ  ಡಿಗ್ರಿ ಓದಿ ಕೆಲಸಕ್ಕೆ ಸೇರಿದೆ. ನಂತರ ವಿಆರ್‌ಎಸ್ ತಗೊಂಡೆ. ಅಪ್ಪನಿಗೆ ಕ್ಯಾನ್ಸರ್ ಆಗಿತ್ತು. ೭ ಲಕ್ಷ  ಖರ್ಚಾಯಿತು. ಎಷ್ಟಂದ್ರೂ ಹೆತ್ತವರು, ಅವರನ್ನು ನೋಡದೆ ಇರಲು ಮನಸ್ಸು ಬರೋದಿಲ್ಲ. ಕೆಲವರು ದುಡ್ಡಿಗೆ ಹೆದ್ರಿ ಅವರನ್ನೂ ಬಿಟ್ಟುಬಿಡ್ತಾರೆ. ನನ್ನ ಕಣ್ಣಿಗೆ ಬೇರೆ ಆಪ್‌ರೇಷನ್ ಆಯ್ತು…ಶುಗರ್‌ನಿಂದ ಒಂದು ಕಾಲು ಕತ್ತರಿಸಿದರು…ನಂದು ಕಥೆ ಬಿಡಿ ಸರ್…ಇದ್ನೆಲ್ಲ ಹೇಳಿಕೊಂಡಿದ್ದಕ್ಕೆ ಬೇಜಾರು ಇಲ್ವಲ್ವ…ಗ್ರಹಚಾರ ಬಂದ್ರೆ ಹೇಗೆಲ್ಲ  ಬರುತ್ತೆ ನೊಡಿ ಸರ್…’ಅವರು ಮಾತು ಮುಗಿಸುವ ವೇಳೆಗೆ ನನ್ನ  ಕಣ್ಣು ಒದ್ದೆಯಾಗಿತ್ತು. ಇಳಿಯುವಾಗ ಸ್ವಲ್ಪ  ಹಣ ಕೊಟ್ಟು  ಇಳಿಯಬೇಕು ಅನ್ನಿಸಿತ್ತು.

ಕಸ್ತೂರಿ ಬಾ ರಸ್ತೆ ಬಂತು. ‘ಸರ್ ತಪ್ಪು  ತಿಳಿಯಬೇಡಿ..ಇವತ್ತು ಬೆಳಿಗ್ಗೆ ಬ್ಲಡ್‌ಬ್ಯಾಂಕ್‌ಲ್ಲಿ  ೧,೦೦೦ರೂ. ಕೊಟ್ಟು  ಬಂದೆ…’ಎನ್ನುತ್ತಾ ಕೈ ಹಿಡಿದುಕೊಂಡರು. ಮೀಟರ್‌ನದ್ದು ೬೦ರೂ. ಆಗಿತ್ತು. ಪರ್ಸ್‌ನಲ್ಲಿದ್ದ  ೨೦೦ ರೂ. ಕೊಟ್ಟು  ತಾಯಿ ಆರೋಗ್ಯವಾಗಿರಲಿ, ಏನಾದ್ರು ಸಹಾಯ ಬೇಕಿದ್ರೆ ಕೇಳಿ ಅಂತಾ ವಿಸಿಟಿಂಗ್ ಕಾರ್ಡ್ ಕೊಟ್ಟು  ಬಂದೆ…ಆಮೇಲೆ ಅನ್ನಿಸಿತ್ತು ಅವರು ಹೇಳಿದ್ದೆಲ್ಲ  ಒಮ್ಮೆ ಸುಳ್ಳು  ಆಗಿರಬಹುದಾ? ಎಂದು. ದಿನಕ್ಕೆ ಎಷ್ಟೋ  ಕಳೆಯುತ್ತೇವಂತೆ, ಸುಳ್ಳೋ, ಸತ್ಯವೋ ಎಂದು ಹೆಜ್ಜೆ ಹಾಕಿದೆ.

ನಂಗೆ ಇಂಥ ಅದೆಷ್ಟೋ  ಅನುಭವ ಆಗಿದೆ ಮತ್ತು ಆಗುತ್ತಿರುತ್ತದೆ. ಹೋಟೆಲ್‌ನಲ್ಲಿ  ನಿಂತು ತುತ್ತು ಬಾಯಿಗೆ ಹಾಕುತ್ತಿದ್ದಾಗ ಯಾರಾದ್ರು ಬಂದು ಬೇಡಿದರೆ ನನಗಂತೂ ಊಟವೇ ಇಳಿಯುವುದಿಲ್ಲ. ನಮ್ಮ ದೇಶ ಶ್ರೀಮಂತರಿರುವ ಬಡ ರಾಷ್ಟ್ರ  ಎಂಬುದಕ್ಕೆ  ನನ್ನ ಸಹಮತವಿದೆ. ಒಂದು ಪ್ಲೆಟ್ ವೆಜ್ ಬಿರಿಯಾನಿಗೆ ಪಂಚಾತಾರ ಹೋಟೆಲ್‌ನಲ್ಲಿ  ೪೫೦ರೂ. ಕೊಟ್ಟು  ತಿನ್ನುವ ಸಾಕಷ್ಟು  ಮಂದಿಯನ್ನು ನೋಡಿದ್ದೇನೆ. ವಾರದಲ್ಲಿ  ೩ ದಿನ ಕೆಲಸದ ನಿಮಿತ್ತ ಅಂಥ ಹೋಟೆಲ್‌ಗಳಿಗೆ ಹೋಗುವುದು ನನ್ನ ನಿತ್ಯದ ಬದುಕು. ಹಾಗಾಗಿ ಆ ವರ್ಗದ ಮುಖ ಪರಿಚಯ  ಚೆನ್ನಾಗಿದೆ. ಸಿನಿಮಾ ಮಂದಿ, ರಾಜಾಕಾರಣಿಗಳು, ಉದ್ಯಮಿಗಳು, ಸಾಫ್ಟ್‌ವೇರ್ ಈ ನಾಲ್ಕು ವರ್ಗವನ್ನು ಮಾತ್ರ ನಾವಲ್ಲಿ  ಕಾಣಬಹುದು. ಕೆಲವು ಹೋಟೆಲ್‌ಗಳಲ್ಲಿ  ಉಳಿದರೆ, ಒಂದು ದಿನದ ಬಾಡಿಗೆ ೮,೦೦೦-೧೪,೦೦೦ರೂ.ವರೆಗಿದೆ.  ೩೬೫ ದಿನವೂ ಅರ್ಧದಷ್ಟು  ರೂಂಗಳು ಭರ್ತಿಯಾಗಿರುತ್ತವೆ. ಪಂಚತಾರ ಶ್ರೇಣಿಯ ಕನಿಷ್ಠ ೩೫ ಹೋಟೆಲ್‌ಗಳಾದ್ರೂ ಮಹಾನಗರಿಯಲ್ಲಿದೆ.

ಹಿಂದೊಮ್ಮೆ ಬರೆದಿದ್ದೆ ಉಡುಪಿಯ ರಥಬೀದಿಯಲ್ಲಿ  ಬದುಕುವ ಒಂದು ಅಜ್ಜಿ  ಹಾಗೂ ಕುರುಡು ಮಗನ ಕುರಿತು. ಶಾಮಿಲಿಯಲ್ಲಿ  ಬಡಿಸುವುದು ಮುಗಿಸಿಕೊಂಡು ಬರುತ್ತಿದೆ. ೮೦೦ ಜನರಿಗೆ ಆಗುವಷ್ಟು  ಅಡುಗೆ ಉಳಿದು ವ್ಯರ್ಥವಾಗಿತ್ತು.  ರಾತ್ರಿ ೧೦.೩೦ ಆಗಿರಬಹುದು. ವುಡ್‌ಲ್ಯಾಂಡ್ ಹೋಟೆಲ್ ಎದುರುಗಡೆಯ ಕಸದ ತೊಟ್ಟಿಯಲ್ಲಿ  ಈ ಅಜ್ಜಿ  ಅಳಿದುಳಿದ ಅನ್ನಕ್ಕಾಗಿ ಹುಡುಕುತ್ತಿತ್ತು. ಕುರುಡು ಮಗನನ್ನು ಎದುರುಗಡೆ ಕೂರಿಸಿಕೊಂಡು. ಬಹುಶಃ ಬದುಕಿನಲ್ಲಿ  ಯಾವತ್ತೂ ಮರೆಯಲಾಗದ ಚಿತ್ರಣವದು. ಕಣ್ಣಿಗೆ ಕಟ್ಟಿ ಹೋಗಿದೆ. ನೆನಪಿಸಿಕೊಂಡರೆ ಇವತ್ತಿಗೂ ೨ ಹನಿ ನೀರು ಇಳಿಯುತ್ತದೆ ಕಣ್ಣಿನಿಂದ…

ಬಡ ಹಾಗೂ ಶ್ರೀಮಂತ ವರ್ಗದ ೨ ಮುಖಗಳು ನಿತ್ಯದ ಬದುಕಿನಲ್ಲಿ  ಕಾಣಿಸುತ್ತದೆ. ಹಾಗಾಗಿಯೆ ನನ್ನ ಪಾಲಿಗೆ ದುಡ್ಡು  ಯಾವತ್ತೂ ಮುಖ್ಯವಾದ ಸಂಗತಿ ಆಗಿಲ್ಲ. ಅಕಾರ, ದುಡ್ಡು  ಇರುವವರೆಗೂ ನಮ್ಮ ಹಿಂದೆ ಅನೇಕರು ಇರುತ್ತಾರೆ. ಜೈ ಕಾರ ಹಾಕುತ್ತಾರೆ. ಯಾವ ಹಂತದಲ್ಲಿ  ನಾವು ಅದನ್ನು ಕಳೆದುಕೊಳ್ಳುತ್ತೇವೆ ಎನ್ನಲು ಸಾಧ್ಯವಿಲ್ಲ. ಕಳೆದುಕೊಂಡು ಗಳಿಗೆಯಲ್ಲಿ  ನಮ್ಮ  ಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಟೋದವವನ ಕಥೆ ಕೇಳಿ ನಮ್ಮ  ಬದುಕಿನಲ್ಲೂ ಇನ್ನು ಏನೇನು ಕಾಣಬೇಕಿದಿಯೋ ಅನ್ನಿಸಿದೆ…

Read Full Post »

ಅದು ಉಡುಪಿ ರಥಬೀದಿಯಲ್ಲಿರುವ ಮಠವೊಂದರ ಜಗುಲಿ. ಅಷ್ಟಮಠದಲ್ಲಿನ ಶ್ರೀಗಳೊಬ್ಬರು ಶಂಕರಾಚಾರ್ಯರಿಗೆ ಬಹಿರಂಗವಾಗಿ ಬೈದರಂತೆ ಎಂಬಂಥ ಸುದ್ದಿ ಬಿಸಿ ಬಿಸಿ ಚರ್ಚೆಯಾಗುತ್ತಿತ್ತು.  ‘ಸ್ವಾಮಿಜಿನಕ್ಳು ಪೂರ ಅಂಚ ಮಾಂತ ಪಾತೆರೆಗ್ ಇದ್ದಿಯತ್ತ ಮಾರಾಯ(ಸ್ವಾಮಿಗಳು ಆ ರೀತಿ ಮಾತನಾಡಬಾರದು)’ ಹಾಗಂತ ಕೆಲವರು ಹೇಳುತ್ತಿದ್ದರು. ‘ಅಡ್ಡ ನಾಮದಕ್ಲೇಗ್ ಅಂಚಾನೆ ಪಣೊಡ್ಯ. ಇದ್ಯಾಂಡ್ ಅಕ್ಲೇಗ್ ಬುದ್ದಿ ಬರ್‌ಪುರಿ…(ಅಡ್ಡ ನಾಮದವರಿಗೆ ಆ ರೀತಿಯೇ ಹೇಳಬೇಕು, ಇಲ್ಲವೆಂದರೆ ಅವರಿಗೆ ಬುದ್ಧಿ ಬರುವುದಿಲ್ಲ)’ ಎಂದು ಮತ್ತೊಂದಷ್ಟು ಮಂದಿ ಹೇಳುತ್ತಿದ್ದರು. ಇಂಥ ವಾದ-ವಿವಾದ ರಥಬೀದಿಗೆ ಹೊಸತೇನಲ್ಲ. ಸುಮಾರು ೫ ವರ್ಷಗಳ ಕಾಲ ನಾವೆಲ್ಲ ಇಂಥ ಅದೆಷ್ಟೋ ಅರ್ಥವಿಲ್ಲದ ಚರ್ಚೆಗಳನ್ನು ನೋಡಿದ್ದೇವೆ. ಮಠದಲ್ಲಿ ಬಿಟ್ಟಿಯಾಗಿ ಹಾಕಿದ ಭೂರಿ ಭೋಜನ ಕರಗುವವರೆಗೂ ಕೆಲವರು ಇಂಥ ಈ ವಾದ-ವಿವಾದಲ್ಲಿ ಮಗ್ನರಾಗಿರುತ್ತಾರೆ! ಬಹುಶಃ ಅಡ್ಡ ನಾಮದ ಮಠಗಳಿಗೆ ಭೇಟಿ ಕೊಟ್ಟರೆ, ಅಲ್ಲೂ  ಇಂಥದ್ದೆ ಚರ್ಚೆ ನಡೆಯುತ್ತಿರಬಹುದೆಂದು ಭಾವಿಸಿ ಸುಮ್ಮನಾಗುತ್ತಿದ್ದೆವು.

ಹೌದು, ಮಠ-ಮಠಗಳ ನಡುವಣ ಈ ಕಲಹ ಹೊಸತೇನಲ್ಲ. ಇತ್ತೀಚೆಗಷ್ಟೆ  ಓಂಕಾರೇಶ್ವರ ಮಠದ ಉತ್ತರಾಧಿಕಾರಿ ನೇಮಕಕ್ಕಾಗಿ ಸಮಾಜದ ೨ ಪ್ರತಿಷ್ಠಿತ ಮಠಗಳು ಬೀದಿಗಿಳಿದು ಹೊಡೆದಾಡಿದ್ದನ್ನು  ನಾವೆಲ್ಲ  ಕಂಡಿದ್ದೇವೆ. ದೇವಸ್ಥಾನವೊಂದರ ಪಾರುಪತ್ಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಮಠಗಳ ಕುರಿತು ಸಾಕಷ್ಟು  ಓದಿದ್ದೇವೆ. ನಮ್ಮ  ಈ ಮಠಾಧೀಶರಿಗೆಲ್ಲ  ಅದೇನಾಗಿದೆಯೋ ಅರ್ಥವಾಗುತ್ತಿಲ್ಲ. ಒಂದು ಕಾಲದಲ್ಲಿ ಅನೇಕ ಸಂಸಾರಗಳ ನಡುವಣ ಕಲಹ ಬಗೆಹರಿಸುವುದು, ಆಸ್ತಿ ವಿವಾದಕ್ಕಾಗಿ ನಡೆಯುತ್ತಿದ್ದ ಹೊಡೆದಾಟ ತಪ್ಪಿಸುವುದು ಮೊದಲಾದ ಕಾರ್ಯಗಳನ್ನು  ನಮ್ಮ  ಸ್ವಾಮಿಜಿಗಳು ಮಾಡುತ್ತಿದ್ದರು. ಮಠಗಳು ಎಂದರೆ ನ್ಯಾಯಪೀಠಗಳಂತಿದ್ದವು. ಪಂಚಾಯ್ತಿಯಲ್ಲಿ  ಬಗೆಹರಿಯದ ಕಲಹಗಳನ್ನು ಸ್ವಾಮಿಜಿಗಳ ಬಳಿ ಪರಿಹರಿಸಿಕೊಳ್ಳಬಹುದು ಎಂಬಂಥ ನಂಬಿಕೆ ಇತ್ತು.

ಆದರೆ ಇವತ್ತು?!
ಸ್ವಾಮೀಜಿಗಳ ಸಮಸ್ಯೆ, ಹೊಡೆದಾಟ, ಕಲಹ ಬಗೆಹರಿಸಲು ನ್ಯಾಯಾಲಯ, ಆರಕ್ಷಕರು ಬೇಕಾಗಿದ್ದಾರೆ. ಸ್ವಾಮೀಜಿಗಳ ಬೆನ್ನಿಗೆ ರಾಜಕಾರಣಿ ಇಲ್ಲ  ಎಂದಾದರೆ, ಆ ಜನಾಂಗ ಕೆಲಸಕ್ಕೆ ಬಾರದೆಂಬ ಸ್ಥಿತಿ! ಮಂತ್ರಿ ಮಹೋದಯರು ಮಠಕ್ಕೆ ಭೇಟಿ ನೀಡದಿದ್ದರೆ, ಅದಕ್ಕಿಂತ ಹೆಚ್ಚಾಗಿ ಅನುದಾನ ಘೋಷಿಸದಿದ್ದರೆ, ನಮ್ಮ ಮಠಾಧೀಶರಿಗೆ ಎಲ್ಲಿಲ್ಲದ ಬೇಸರ. ನಿಜ, ಕಾಲಕ್ಕೆ ತಕ್ಕಂತೆ ಮಠಗಳು, ಸ್ವಾಮೀಜಿಗಳೂ ಬದಲಾಗಬೇಕು. ಆದರೆ ಆ ಬದಲಾವಣೆ ಎಲ್ಲಿಯವರೆಗೆ ಬೇಕು ಮತ್ತು ಯಾವ ತರಹದ್ದಾಗಿರಬೇಕು ಎಂಬುದು ಮುಖ್ಯವಾದ ಪ್ರಶ್ನೆ.

ನಮ್ಮಲ್ಲಿ  ಸ್ವಾಮೀಜಿಗಳು ಮತ್ತು ಮಠಗಳ ಕುರಿತು ವಿಪರೀತ ನಂಬಿಕೆ. ಸ್ವಾಮೀಜಿಗಳ ಕೈಯಿಂದ ಸಿಕ್ಕ ಅಕ್ಕಿ ಕಾಳು ಮಂತ್ರಾಕ್ಷತೆ. ನೀರು ತೀರ್ಥ…ಈ ನಂಬಿಕೆಗೂ ಒಂದು ಕಾರಣವಿದೆ.  ಮಠಾಧೀಶರು ಎಂದರೆ ದೇವರ ಮತ್ತೊಂದು ಅವತಾರ ಎಂಬಂತೆ ಆರಾಸುತ್ತೇವೆ. ಯಾಕಂದ್ರೆ ಅವತ್ತಿನ ಕಾಲದಲ್ಲಿ  ಈ ಮಠಾಶರ ಜೀವನ ಶೈಲಿಯೇ ಹಾಗಿತ್ತು. ಮಠ ಅಂದಕೂಡಲೆ ನನಗಂತೂ ನೆನಪಿಗೆ ಬರುವುದು ಸಾಗರ ತಾಲೂಕಿನ ವರದಹಳ್ಳಿ  ಸಮೀಪ ನೆಲೆಸಿದ್ದ  ಶ್ರೀಧರ ಸ್ವಾಮಿಗಳ ಕುರಿತು ಅಪ್ಪ  ಹೇಳುತ್ತಿದ್ದ ಕಥೆಗಳು.  ಅವರು ಮೂರೇ ತುತ್ತು ಊಟ ಮಾಡುತ್ತಿದ್ದರಂತೆ. ಅದಕ್ಕೆ ಅಪ್ಪ ಹೇಳಿದ ಕಾರಣ ತುಂಬಾ ಚೆನ್ನಾಗಿದೆ. ಸ್ವಾಮಿಗಳು ಎಲ್ಲಾ  ಗುಣದಿಂದ ಮುಕ್ತಿ ಹೊಂದಿರಬೇಕು ಎಂಬ ಕಲ್ಪನೆ ನಮ್ಮ ಧರ್ಮದ್ದು. ಆಹಾರ ಅತಿಯಾಗಿ ಸೇವಿಸಿದರೆ ಸ್ವಾಭಾವಿಕವಾಗಿ ರಜೋ ಮತ್ತು ತಮೋ ಗುಣಗಳು ದೇಹವನ್ನು ಅಂಟಿಕೊಳ್ಳುತ್ತವೆ. ಆಲಸ್ಯ ಬರುತ್ತದೆ. ಹಾಗಾಗಿ ಹಿಂದಿನ ಕಾಲದ ಸನ್ಯಾಸಿಗಳು ಮೂರೇ ತುತ್ತು ಊಟ ಮಾಡುತ್ತಿದ್ದದ್ದು…ವಾಹ್! ವೈಜ್ಞಾನಿಕವಾಗಿಯೂ ಒಪ್ಪಬಹುದಾದ ಪರಿಕಲ್ಪನೆ ಇದು.

ಭಿಕ್ಷುಕರಿಗೆ, ಬಡವರಿಗೆ ಕೈಮೊಗೆದು ಹಣ್ಣು-ಹಂಪಲು, ಕಂಬಳಿ, ಚಾಪೆ ಕೊಡುತ್ತಿದ್ದ  ಶ್ರೀಧರರ ಕುರಿತು ಕೇಳಲು ನನಗೆ ಇವತ್ತಿಗೂ ಆಸಕ್ತಿ. ಅಪ್ಪ , ಭಕ್ತಿಯ ಪರಾಕಾಷ್ಠೆಯಲ್ಲಿ  ಅವರನ್ನು ಹೊಗಳುತ್ತಿದ್ದಾರೇನೋ ಅನ್ನಿಸುತ್ತಿತ್ತು. ಆದರೆ, ಇಂಥ ಶ್ರೀಧರರ ಕುರಿತು ಇನ್ನೋರ್ವ ಯತಿಗಳಾದ ಸಚ್ಚಿದಾನಂದರು ಬರೆದ ಪುಸ್ತಕ ನಿಜಕ್ಕೂ ಅದ್ಭುತವಾಗಿದೆ. ಇವತ್ತು ನಮ್ಮ ಮಠಗಳು ಭಿಕ್ಷುಕರಿಗೆ ಹಣ್ಣು ಕೊಡುವುದಿರಲಿ, ಹತ್ತಿರಕ್ಕೂ ಸೇರಿಸುವುದಿಲ್ಲ. ಸ್ವಾಮೀಜಿಗಳಿಗೆ/ಅವರ ಪರಿವಾರಕ್ಕೆ ಸೇವಿಸಲು ದುಡ್ಡು ಕೊಟ್ಟು  ಹಣ್ಣು ತರಬೇಕಾದ ಸ್ಥಿತಿಯಿದೆ. ಹೀಗಿರುವಾಗ ಅವರಾದರೂ ಹೇಗೆ ಹಣ್ಣು ಹಂಪಲು ಕೊಟ್ಟಾರು ಹೇಳಿ?! ಇವತ್ತಿನ ಯತಿಗಳೊಬ್ಬರು ಭಿಕ್ಷುಕರನ್ನು ಹತ್ತಿರಕ್ಕೆ ಕರೆದು ಹಣ್ಣು/ಊಟ ಕೊಟ್ಟ  ನಿದರ್ಶನ ಎಲ್ಲಾದರೂ ಇದೆಯಾ? ಹಸು, ನಾಯಿಗಳಂಥ ಪ್ರಾಣಿಗಳಿಗೂ ತೀರ್ಥ ಕುಡಿಸಿದ ದಾಖಲೆ ಸಿಗಬಹುದಾ? ಶ್ರೀಧರರ ಜೀವನ ಚರಿತ್ರೆಯೊಂದಿಗೆ ಇಂದಿನ ಸ್ಥಿತಿ ಅವಲೋಕಿಸಿದರೆ ನಿಜಕ್ಕೂ ಬೇಸರವಾಗುತ್ತದೆ.

ಸ್ವಾಮೀಜಿಗಳಿಗೆ ಅಡ್ಡ-ಉದ್ದ-ಸಾಷ್ಟಾಂಗ ನಮಸ್ಕಾರ ಮಾಡುವ ಪದ್ಧತಿ ನಮ್ಮಲ್ಲಿದೆ. ಅವರ ಪಾದ ತೊಳೆದು ಪೂಜೆ ಮಾಡುವ ಭಕ್ತರೂ ಇದ್ದಾರೆ. ಶ್ರೀಗಳು ಎಂದರೆ ಎಲ್ಲವನ್ನೂ  ಜಯಿಸಿ ನಿಂತವರು, ಅವರಿಗೆ ರಾಗ-ದ್ವೇಷಗಳಿಲ್ಲ, ಯಾವುದೇ ಆಕ್ಷೇಪಾರ್ಹ  ಗುಣಗಳಿಲ್ಲ, ನಿರ್ಲಿಪ್ತದ ಮತ್ತೊಂದು ರೂಪವೇ ಸನ್ಯಾಸ ಎಂಬಂಥ ನಂಬಿಕೆ ನಮ್ಮಲ್ಲಿದೆ. ಮನುಷ್ಯನಲ್ಲಿ  ಇರಬಹುದಾದ ಯಾವ ಗುಣವೂ ಅವರಲ್ಲಿ  ಕಾಣುವುದಿಲ್ಲ. ಹಾಗಾಗಿ ಸಾಮಾನ್ಯರಿಗಿಂತ ಶ್ರೀಗಳು ಶ್ರೇಷ್ಠರಾಗುತ್ತಾರೆ. ಆ ಕಾರಣಕ್ಕಾಗಿಯೇ ನಾವು ಸ್ವಾಮೀಜಿಗಳ ಪಾದ ತೊಳೆಯುತ್ತೇವೆ. ಅವರಿಗೆ ಶಿರಬಾಗಿ ಶರಣು ಹೋಗುತ್ತೇವೆ. ಅವರು ನೀಡಿದ ಅಕ್ಕಿ ಕಾಳನ್ನೂ ಮಂತ್ರಾಕ್ಷತೆ ಎಂದು ಭಾವಿಸಿ ಸ್ವೀಕರಿಸುತ್ತೇವೆ.

ಇಂದಿನ ಬಹುತೇಕ ಸ್ವಾಮೀಜಿಗಳಿಗೂ ಮನುಷ್ಯರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ  ಅನ್ನಿಸುತ್ತಿದೆ. ರಾಗ-ದ್ವೇಷಗಳಿಲ್ಲ  ಎಂದಾದ ಮೇಲೆ ಮಠ-ಮಠಗಳ ನಡುವೆ ಕಲಹ ಯಾಕೆ ಏರ್ಪಾಡಾಗುತ್ತದೆ ಅಲ್ವಾ? ಮಠಾಧೀಶರು ಆಸ್ತಿ ವಿವಾದಕ್ಕಾಗಿ, ಪೀಠಾಧಿಪತಿಗಳ ನೇಮಕಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾದ ಸ್ಥಿತಿ ಏಕೆ ಎದುರಾಗುತ್ತದೆ? ಇದನ್ನೆಲ್ಲ  ನೋಡಿದಾಗ ಶ್ರೀಗಳಲ್ಲಿ  ಸಾಮಾನ್ಯರಿಗಿಂತ ಅತೀತವಾದ ಯಾವ ಗುಣವೂ ನನಗಂತೂ ಕಾಣುತ್ತಿಲ್ಲ. ಹಾಗಂದ ಮೇಲೆ ಅವರಿಗ್ಯಾಕೆ ಕಾಲಿಗೆ ಬೀಳಬೇಕು? ಪಾದ ತೊಳೆದು ಪೂಜಿಸಬೇಕು? ಪಲ್ಲಕ್ಕಿ  ಮೇಲೆ ಮೆರವಣಿಗೆ ಮಾಡಬೇಕು ಎಂಬಿತ್ಯಾದಿಯಾಗಿ ಕೇಳಿದರೆ ಕರ್ಮಠರು ನಮ್ಮ ಮೇಲೆ ಎಗರಿ ಬೀಳುತ್ತಾರೆ. ಪತ್ರಕರ್ತರು, ಬುದ್ಧಿಜೀವಿಗಳು ಎಲ್ಲಾ  ಹೀಗೆ…ಅಂದುಬಿಡುತ್ತಾರೆ!

ಸ್ವಾಮೀಜಿಗಳ ಕುರಿತು ಮಾತನಾಡುವುದೇ ಒಂದು ಕಾಲದಲ್ಲಿ  ಮಹಾಪರಾಧವಾಗಿತ್ತು. ಶ್ರೀಗಳು ಮುನಿಸಿಕೊಂಡು ಪೀಠದಲ್ಲಿ  ಕುಳಿತು ಶಾಪ ಕೊಟ್ಟರೆ, ಆ ಪಾಪ ಎಲ್ಲಿಗೆ ಹೋದರೂ ಪರಿಹಾರವಾಗುವುದಿಲ್ಲ  ಎನ್ನುತ್ತಿದ್ದರು ನಮ್ಮ ಕಡೆ. ‘ಹರ ಮುನಿದರೆ ಹರಿ ಕಾಯುವನು, ಹರಿ ಮುನಿದರೆ ಗುರು ಕಾಯುವನು, ಗುರು ಮುನಿದರೆ…?’ ಎಂಬ ಮಾತು ಕೂಡ ಇತ್ತು. ರಾಜಕಾರಣಿಗಳ ಬೆನ್ನು ಬಿದ್ದಿರುವ, ಭರ್ತಿ ಕಾಣಿಕೆ ಹಾಕುವವರಿಗೆ ಮನತುಂಬ ಹರಸುವ ಒಂದಷ್ಟು  ಸ್ವಾಮೀಜಿಗಳನ್ನು ಕಂಡಾಗ, ಅವರ ಪಾಪವನ್ನೇ ಯಾರಾದ್ರೂ ಪರಿಹರಿಸಬೇಕಿದೆಯೇನೋ ಅನ್ನಿಸುತ್ತದೆ.

ಚಾತುರ್ಮಾಸ ವ್ರತದಲ್ಲಿ  ಭಕ್ತರಿಗೆ ಧರ್ಮೋಪದೇಶವಿರುತ್ತದೆ. ಒಮ್ಮೆ ಆ ಉಪದೇಶ ಕೇಳಲು ಹೋಗಿ ನೋಡಿ…ದಿಟ್ಟೊ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರ ಭಾಷಣವಿದ್ದಂತೆ! ಇನ್ನು ಮೊದಲಿನ ಹಾಗೆ ಅಧ್ಯಯನ ಮಾಡುವ, ಪೂಜೆ ಪುನಸ್ಕಾರ ಮಾಡುವ, ಧರ್ಮ ಕಾರ್‍ಯದಲ್ಲಿ  ಮಗ್ನರಾಗಿರುವ ಯತಿಗಳ ಪ್ರಮಾಣವೂ ಕಡಿಮೆ. ಸಿನಿಮಾದಿಂದ ಹಿಡಿದು ಎಲ್ಲಾ ಬಗೆಯ ಅಂಗಡಿ ಮುಗ್ಗಟ್ಟುಗಳ ಉದ್ಘಾಟನೆಗೂ ಮಠಾಧೀಶರು ಲಭ್ಯವಿದ್ದಾರೆ!

ಹಾಗಂತ ಎಲ್ಲರೂ ಹೀಗೆಯೇ ಎನ್ನಲು ಸಾಧ್ಯವಿಲ್ಲ. ಸ್ವಾಮೀಜಿಗಳು ಪೂರ್ತಿಯಾಗಿ ‘ಮಠ ಹತ್ತಿ ಹೋಗಿದ್ದಾರೆ’ ಎಂಬ ವಾದ ಸರಿಯಲ್ಲ.  ಧರ್ಮದಿಂದ ದೂರ ಹೊರಟವರನ್ನು ವಾಪಸ್ ತರುವ ಯತ್ನ ಮಾಡುತ್ತಿರುವಂಥ ಹರಿಹರಪುರದ ಶ್ರೀಗಳಂಥವರೂ ಇದ್ದಾರೆ. ‘ಸ್ವಾಮೀಜಿ ಮಠದ ಕುರಿತು ಏನಾದ್ರು ಬರೆಯಬಹುದಾ’ ಅಂತಾ ಕೇಳಿದ್ರೆ, ‘ನಾವು ಪ್ರಚಾರದಿಂದ ದೂರ’ ಎಂದು ಖಡಕ್ ಆಗಿ ಹೇಳುವ ಅಂತ ಶ್ರೀಗಳು ಸಿಗುವುದು ಅಪರೂಪ.
ಮಗಳ/ಮಗನ ಮದ್ವೆ ಮಾಡುತ್ತೇನೆ, ಮಕ್ಕಳಿಗೆ ಓದಿಗೆ ದುಡ್ಡು  ಬೇಕು, ಕ್ಯಾನ್ಸರ್ ಚಿಕಿತ್ಸೆಗೆ ನೆರವು…ಹೀಗೆ ಯಾರು ಬಂದರೂ ಯಾವತ್ತೂ ಬರಿಗೈನಲ್ಲಿ  ಕಳುಹಿಸದ ಪೇಜಾವರ ಶ್ರೀಗಳು ಕೆಲವಷ್ಟು  ಕಾರಣಕ್ಕೆ ಇಷ್ಟವಾಗುತ್ತಾರೆ. ‘ಏ ಪೆರಂಪಳ್ಳಿ…’ಎಂದು ಶಿಷ್ಯರನ್ನು  ಕೂಗುತ್ತಾ ಇರುವ ಪೇಜಾವರು ಶ್ರೀಗಳು ಮಠದಲ್ಲಿ  ಇದ್ದಾರೆ ಎಂದರೆ, ನೆರವು ಕೇಳಿಕೊಂಡು ಬರುವ ಮಂದಿ ತಪ್ಪಿದ್ದಲ್ಲ  ಎಂದೇ ಅರ್ಥ. ಇದೇ ಪೇಜಾವರರು, ಜನ ಬೆಂಬಲ ನೀಡಲಿಲ್ಲ  ಎಂಬ ಕಾರಣ ನೀಡಿ ಪಟ್ಟು  ಹಿಡಿದ ನಾಗಾರ್ಜುನ ಹೋರಾಟವನ್ನು ದಿಢೀರನೆ ಕೈಬಿಟ್ಟಿದ್ದನ್ನು ನೆನಪಿಸಿಕೊಂಡರೆ ಬೇಜಾರಾಗುತ್ತದೆ. ಶತಮಾನದಷ್ಟು  ಹಳೆಯದಾದದ ೨ ಏಕಾದಶಿ ಕಾಳಗ ನಿಲ್ಲಿಸದಿದ್ದಾಗ ದುಃಖವಾಗುತ್ತದೆ. ಮಠಾಧೀಶರು ಸಮುದ್ರ ದಾಟುವುದು  ಸರಿಯಲ್ಲ  ಎಂಬ ಇವರ ವಾದವನ್ನು  ಯಾವ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಸಮುದ್ರದಲ್ಲಿ  ಈಜುವುದು, ಡ್ರಂ  ಬಾರಿಸುವುದು, ತೆಂಗಿನ ಮರ ಹತ್ತುವುದು ಎಲ್ಲವೂ ಸರಿ ಎಂದಾದರೆ, ಧರ್ಮ ಪ್ರಚಾರಕ್ಕಾಗಿ ಸಮುದ್ರ ದಾಟುವುದರಲ್ಲಿ ತಪ್ಪೇನಿದೆ?  ಯತಿಗಳೊಬ್ಬರು ಅಧಿಕೃತ ಮ…ಳು, ಅನಧಿಕೃತ ಪ…ರನ್ನು ಹೊಂದಬಹುದಾ ಎಂಬ ಪ್ರಶ್ನೆಗೆ ಉಗ್ರ ಹೋರಾಟದ ನಡೆಸುತ್ತೇವೆ ಎಂಬ ಉತ್ತರ ಬಂದಿತ್ತು. ಹೋರಾಟ ಎಲ್ಲಿ  ನಡೆಯುತ್ತಿದೆಯೋ ಆ ಕೃಷ್ಣನೇ ಬಲ್ಲ!

ಇಲ್ಲಿ  ಸಮುದ್ರ ದಾಟುವುದು ಮತ್ತು ಅದರ ಹಿಂದಿನ ನಂಬಿಕೆ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿಲ್ಲ ಅಥವಾ ಯಾರನ್ನೂ ಸಮರ್ಥಿಸುತ್ತಿಲ್ಲ. ಅದಕ್ಕಿಂತ ದೊಡ್ಡ  ಪ್ರಮಾದಗಳು ನಡೆಯುತ್ತಿರುವಾಗ,  ಇಂಥ ಕಾರಣಕ್ಕಾಗಿ ಹೋರಾಟ ಮಾಡುವುದು ಎಷ್ಟು  ಸಮಂಜಸ ಎಂಬುದಷ್ಟೆ  ಇದರ ಹಿಂದಿನ ಆಶಯ. ಇದೇ ಸಮುದ್ರದ ನೆವ ಇಟ್ಟುಕೊಂಡು ಪೇಜಾವರ  ಶ್ರೀಗಳಿಂದ ಅಷ್ಟ  ಮಠದ ಯಾವ ಯತಿಗಳೂ ಪುತ್ತಿಗೆ ಪರ್ಯಾಯದ ಮೆರವಣಿಗೆ/ದರ್ಬಾರಿನಲ್ಲಿ  ಭಾಗವಹಿಸಲಿಲ್ಲ. ಯತಿಗಳು ತೀರಾ ಸಣ್ಣ  ಮಕ್ಕಳಂತೆ ಹಠ ಹಿಡಿಯುವುದು ಸರಿಯಾ? ಇದರಿಂದ ಭಕ್ತ ಸಮೂಹಕ್ಕೆ ಸಿಗುವ ಸಂದೇಶವಾದರೂ ಏನು?

ಯಾರ ಮಾತನ್ನು  ಕೇಳದ ಸ್ಥಿತಿಯಲ್ಲಿ  ನಮ್ಮ  ಅನೇಕ ಮಠಗಳಿವೆ. ರಾಜಾಕಾರಣಿಗಳು, ಸಾಹಿತಿಗಳು, ಮಾಧ್ಯಮದ ಮಂದಿಗೆಲ್ಲ  ಕಾಲ ಕಾಲಕ್ಕೆ ತೀರ್ಥ-ಪ್ರಸಾದ ನೀಡಿ ಸಂಭಾಳಿಸುವುದು ನಮ್ಮ ಅನೇಕ ಯತಿಗಳಿಗೆ ಕರಗತವಾಗಿದೆ. ಹೀಗಾಗಿ ಈ ಬರಹ ಹೊಸ ಅಲೆಯನ್ನು  ಮೂಡಿಸುತ್ತದೆ ಎಂಬ ಭ್ರಮೆಯಂತೂ  ಖಂಡಿತ ಇಲ್ಲ. ಇಷ್ಟಾದರೂ  ಜನ ಪಾದ ತೊಳೆದು ಸಾಷ್ಟಾಂಗ ನಮಸ್ಕಾರ ಮಾಡುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ನಿಜಕ್ಕೂ ಭಾರತೀಯರ ಔದಾರ್ಯತೆ ಮತ್ತು ನಂಬಿಕೆ ದೊಡ್ಡದು…

Read Full Post »