“ಎಲ್ಲಾ ಭಾರತೀಯರು ಒಟ್ಟಾಗಿ ಒಂದು ಸಲ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ಕೊಚ್ಚಿಕೊಂಡು ಹೋಗುತ್ತಿತ್ತು. ಆವತ್ತು ಇಂಗ್ಲೆಂಡ್ ಅನ್ನೋದು ಭಾರತದ ಒಂದು ಜಿಲ್ಲೆಗೆ ಸಮನಾಗಿತ್ತು. ಆದ್ರೂ ಕೂಡಾ ಭಾರತೀಯರು ಆಂಗ್ಲರ ಗುಲಾಮರಾದರು. ಅದಕ್ಕೆ ಕಾರಣ ಭಾರತದ ಮಣ್ಣು. ಈ ದೇಶದ ಮಣ್ಣು ಅಂತಹದ್ದು. ಈ ಮಣ್ಣಿನಲ್ಲಿ ಮಹಾವೀರ, ಬುದ್ಧ, ಪತಂಜಲಿಗಳು ಜನಿಸುತ್ತಾರೆಯೇ ಹೊರತು, ಒಬ್ಬ ಹಿಟ್ಲರ್, ಒಬ್ಬ ಮುಸಲೋನಿಯನ್ನು ಈ ನಾಡು ಜಗತ್ತಿಗೆ ನೀಡಲಾರದು. ಐದು ಸಾವಿರ ವರ್ಷದ ಇತಿಹಾಸದಿಂದ ಸಾಬೀತಾದ ಮಾತಿದು” ಇಂತಹದ್ದೊಂದು ಸುಂದರ ಸಾಲುಗಳು ಓದಲು ಸಿಕ್ಕಿದ್ದು ಓಶೋ ರಜನೀಶರ “ನನ್ನ ಪ್ರಿಯ ಭಾರತ” ಅನ್ನೋ ಪುಸ್ತಕದಲ್ಲಿ.
ಭಾರತದ ರಸ್ತೆಗಳು ಸರಿಯಿಲ್ಲ, ರಾಜಕಾರಣ ಸರಿಯಿಲ್ಲ, ಮೂಲಭೂತ ವ್ಯವಸ್ಥೆಗಳು ಸರಿಯಿಲ್ಲ…ಹಾಗಂತ ವಾದಿಸುವ ಮಂದಿಯಲ್ಲಿ ನಾನು ಒಬ್ಬ! ಆದರೆ ನನ್ನ ವಾದ ಅದು ಸರಿಯಾದರೆ ಉತ್ತಮವೇನೋ ಅನ್ನುವ ದಾಟಿಯದ್ದು. ಅಮೆರಿಕವನ್ನು, ಜಪಾನ್, ಚೀನಾವನ್ನು…ಮುಂದಿಟ್ಟುಕೊಂಡು ವಾದಿಸುವುದಾದರೆ ನನ್ನ ಲೆಕ್ಕದಲ್ಲಿ ಭಾರತದಲ್ಲಿ ಎಲ್ಲವೂ ಸರಿಯಾಗಿದೆ. ನನ್ನಲ್ಲಿ ಆ ಪರಿಕಲ್ಪನೆ ಕಟ್ಟಿಕೊಟ್ಟಿದ್ದು ಓಶೋ ಎಂದರೆ ತಪ್ಪಾಗಲಾರದು. ನಮ್ಮೆಲ್ಲ ಕೂಗುಗಳಿಗಿಂತಲೂ ಭಿನ್ನವಾದ, ನಮಗೆ ಗೊತ್ತಿರದ ಅಥವಾ ಗೊತ್ತಿದ್ದರೂ ಅರ್ಥೈಸಿಕೊಳ್ಳಲಾಗಿರದ, ದಿವ್ಯ, ಭವ್ಯ ಭಾರತದ ವಾಕ್ಚಿತ್ರದಂತಿರುವ ಓಶೋರ ಪುಸ್ತಕ ಸಾಕಷ್ಟು ಜನರ ನಿಲುವುಗಳನ್ನು ಬದಲಿಸುವ ಶಕ್ತಿ ಹೊಂದಿದೆ.
ಶಂಕರಾಚಾರ್ಯರು ಮಂಡನ ಮಿಶ್ರರೊಂದಿಗೆ ಚರ್ಚೆಗಿಳಿಯುತ್ತಾರೆ. ಮಿಶ್ರರ ಹೆಂಡತಿಯೇ ಆ ಚರ್ಚೆಗೆ ಜಡ್ಜು! ವಾದದಲ್ಲಿ ಶಂಕರರು ಗೆಲ್ಲುತ್ತಾರೆ. ಆದರೆ ಅದು ಅರ್ಧ ಗೆಲುವು ಎಂದು ಜಡ್ಜ್ ಆಗಿದ್ದ ಮಿಶ್ರರ ಹೆಂಡತಿ ಭಾರತಿ ಹೇಳುತ್ತಾಳೆ! ಕೊನೆಗೆ ಆಕೆಯೇ ವಾದಕ್ಕಿಳಿಯುತ್ತಾಳೆ. ಶಂಕರರು ಜಯ ಸಾಧಿಸಲಾಗದೇ ಅನುಭವ ಪಡೆದು ಬರುವನೆಂದು ಹೊರಟು ಹೋಗುತ್ತಾರೆ…ತುಂಬಾ ಸುಂದರ ಕಥೆಯದು.
ಶಂಕರರಿಗೆ ಗೆಲುವು ಸಾಧ್ಯವಾಗಲಿಲ್ಲ ಅನ್ನೋದಕ್ಕಿಂತ, ಗೆಲುವಿನ ಬೆನ್ನತ್ತಿ ಹೋಗಲು ಮನಸಾಗಲಿಲ್ಲವಂತೆ… ಹಾಗಂತ ವಾದಿಸುವ ಓಶೋ, ಆ ಘಟನೆಯನ್ನು ಮತ್ತೊಂದರ ಜತೆ ನಿಲ್ಲಿಸಿ ತುಲನೆ ಮಾಡುವುದಂತೂ ನಿಜಕ್ಕೂ ಅದ್ಬುತ. ಭಾರತ ಜಗತ್ತಿಗೆ ತನ್ನನ್ನು ತಾನು ಗೆಲ್ಲುವುದನ್ನು ಭೋಧಿಸಿದ ರಾಷ್ಟ್ರ. “ಅಲೆಗ್ಸಾಂಡರ್, ಹಿಟ್ಲರ್ ಎಲ್ಲಾ ಜಗತ್ತನ್ನೇ ಗೆಲ್ಲಲು ಹೊರಟರು. ಅವರು ಶ್ರೇಷ್ಠರಲ್ಲ. ಯಾಕೆಂದರೆ ಅವರಿಗೆ ಅವರನ್ನೇ ಜಯಿಸಿಕೊಳ್ಳಲು ಆಗಲಿಲ್ಲ. ಹಾಗೆ ಜಯಿಸಲು ಸಾಧ್ಯವಾಗಿದ್ದಿದ್ದರೆ ಅವರಿಗೆ ಜಗತ್ತನ್ನು ಗೆಲ್ಲಬೇಕು ಅನ್ನಿಸುತ್ತಿರಲಿಲ್ಲ. ಪ್ರಪಂಚದಲ್ಲಿ ರಕ್ತದ ಹೊಳೆ ಹರಿಯುತ್ತಿರಲಿಲ್ಲ. ಮಹಾವೀರ, ಬುದ್ದರು ತಮ್ಮನ್ನು ತಾವು ಗೆದ್ದರು. ಆ ಮುಖೇನ ವಿಶ್ವವನ್ನೇ ಯಾರಿಗೂ ಗೊತ್ತಾಗದಂತೆ ಗೆದ್ದುಬಿಟ್ಟರು. ಅದು ಭಾರತದ ಶ್ರೇಷ್ಠತೆ” ಅನ್ನುತ್ತಾ ಹೋಗುವ ಓಶೋ ಸಾಲುಗಳನ್ನು ಓದುತ್ತಿದ್ದರೆ…ಅಬ್ಬಾ ರೋಮಾಂಚನವದು.
ಬುದ್ದ, ಚೈತನ್ಯ, ಮೀರಾಳ ಕಥೆಗಳು, ಕುರುಡನಾಗಿಯೂ ಘಜ್ನಿಯನ್ನು ಕೊಂದ ಪೃಥ್ವಿರಾಜನ ಕಥೆ…..ಹೀಗೆ ಒಂದರ ಮೇಲೊಂದು ಕಥೆಗಳು. ಎಲ್ಲವೂ ರೋಮಾಂಚನಗೊಳಿಸುವಂತಹವೆ. ಭಾರತ ಯಾಕೆ ವಿಶ್ವದ ಇತರರಿಗಿಂತ ಬಿನ್ನ, ಭಾರತದಲ್ಲಿನ ಆಧ್ಯಾತ್ಮಿಕತೆಯ, ಧ್ಯಾನದ ಮಹಿಮೆ ಏನು? ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಭಾರತಕ್ಕಿರುವ ಅಗಾಧ ಶಕ್ತಿಯಾದರೂ ಏನೂ? ಹೀಗೆ ಹಲವು ವೈಚಾರಿಕ ಸಂಗತಿಗಳ ಭಂಡಾರ ಈ ಪುಸ್ತಕ.
ಹಾಗಂತ, ಭಾರತ ಎಂದಿಗೂ ಹೇಡಿಯಲ್ಲ, ಶಾಂತಿಪ್ರಿಯವಷ್ಟೆ. ಹಿಂಸೆಯ ವಿರೋದಿಯಷ್ಟೆ. ಭಾರತೀಯರೆಲ್ಲರೂ ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ತೊಳೆದು ಹೋಗುತಿತ್ತು, ಇಂಗ್ಲೆಂಡ್ ನಾಶಮಾಡಲು ನಮಗೆ ಅಣುಬಾಂಬ್ ಬೇಕಿರಲಿಲ್ಲ, ಉಚ್ಛೆಯೇ ಸಾಕಿತ್ತು! ಅನ್ನೊ ಈ ಮಾತನ್ನು ಅಲೆಗ್ಸಾಂಡರ್ ವಿರುದ್ದ ಹೋರಾಡಿದ ಪೋರಸ್‌ನ ಉದಾಹರಣೆ ಕೊಟ್ಟು, ಕುರುಡ ಪೃಥ್ವಿರಾಜನ ಕಥೆಯನ್ನು ಹೇಳಿ ವಿವರಿಸುವುದಿದೆಯಲ್ವಾ? ….ಊಹುಂ ಅದನ್ನು ನನಗಂತೂ ಮಾತುಗಳಿಂದ ವಿವರಿಸಲಾಗುತ್ತಿಲ್ಲ.
ಹಾಗಂತ ವಿಶ್ವದ ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು, ನಾವೇ ಶ್ರೇಷ್ಠ ಅಂತಾ ನಿರೂಪಿಸಿಕೊಳ್ಳಲು ಹೊರಟ ಪುಸ್ತಕ ಇದಲ್ಲ. ಎಲ್ಲೂ ಭಾರತದ ವೈಭವವಿಲ್ಲ. ಭಾರತ ಶ್ರೇಷ್ಠ ಅನ್ನೋ ದಾಟಿಯ ಮಾತಿಲ್ಲ. ಸಕಾರಾತ್ಮಕ ಭಾರತದ ಚಿತ್ರಣವಿದೆ, ಗತಿಸಿಹೋದ ಇತಿಹಾಸದ ಕಥೆಗಳಿವೆ ಅಷ್ಟೆ. ಯೋಗಿಗಳ ಸಾಧುಗಳ ಕಥೆಯಿದೆ. ಆಧ್ಯಾತ್ಮಿಕಥೆಯ ಮಂಥನವಿದೆ. ಇಡೀ ಪುಸ್ತಕದ ತಿರುಳೇ ಆಧ್ಯಾತ್ಮ ಅಂದರೂ ತಪ್ಪಾಗಲಾರದು.
ಓಶೋ ಇಷ್ಟವಾಗೋದು ಅದಕ್ಕೆ. ಯಾವುದೇ ಇಸಂ, ಧರ್ಮ, ಮತಗಳಿಗೆ ಅವಲಂಬಿತವಾಗದೇ, ಯಾವ ವಿಚಾರವನ್ನೂ ತೀರಾ ವೈಭವೀಕರಿಸದೇ, ಶುದ್ದ ಆಧ್ಯಾತ್ಮವನ್ನು ಸರಳವಾಗಿ ಹೇಳುತ್ತಾ ಹೋಗುತ್ತಾರೆ. ಯಾವುದೇ ಮುಚ್ಚುಮರೆ, ಕಟ್ಟಲೆಗಳ ಕೊಂಡಿಗೆ ಸಿಲುಕಿಕೊಳ್ಳದೆ ವಾಸ್ತವವನ್ನು ಬಿಚ್ಚಿಡುತ್ತಾ ಹೋಗುತ್ತಾರೆ…
“ಜಗತ್ತಿನಲ್ಲಿರೋ ಎಲ್ಲಾ ಧರ್ಮಗಳೂ ಶ್ರೇಷ್ಠ. ಎಲ್ಲದಕ್ಕೂ ಅದರದೇ ಆದ ಸೊಬಗಿದೆ ,ಅದರದೇ ಆದ ದೌರ್ಬಲ್ಯಗಳಿವೆ. ನಮಗೆ ಪಾಶ್ಚಾತ್ಯ ಸಂಸ್ಕೃತಿ ಬೇಡ ಅಂತೀವಿ ,ಆದ್ರೆ ಪಾಶ್ಚಾತ್ಯರು ಕಂಡು ಹುಡುಕಿದ ಆಧುನಿಕ ಸೌಲಭ್ಯಗಳೆಲ್ಲಾ ಬೇಕು .ಯಾಕೆ ಅಂತ ಕೇಳಿದ್ರೆ “ಚೆನ್ನಾಗಿರೋದೆಲ್ಲ ಇರ್ಲಿ ಕಣ್ರಿ ಕೆಟ್ಟದಾಗಿರೋದು ಬೇಡ” ಅಂತಾರೆ!
ಟೀವಿ ಭಾರತೀಯ ಸಂಸ್ಕೃತಿ ಅಲ್ಲ ,ಮೊಬೈಲ್ ಭಾರತೀಯ ಸಂಸ್ಕೃತಿ ಅಲ್ಲ, ವಿಡೀಯೋ ಕ್ಯಾಮೆರಾ ಭಾರತೀಯ ಸಂಸ್ಕೃತಿ ಅಲ್ಲ, MP3 ಭಾರತೀಯ ಸಂಸ್ಕೃತಿ ಅಲ್ಲ, ಆದರೂ ಇವು ನಮಗೆ ಬೇಕು . ಆದ್ರೆ ವ್ಯಾಲಂಟೈನ್ಸ್ ಡೇ ಮಾತ್ರ ಬೇಡ!” ಹಾಗಂತ ಸಂದೀಪ್ ಕಾಮತರು ತುಂಬಾ ಚೆಂದದ, ಯೋಚನಾಯೋಗ್ಯವಾದ ಬರಹ ಬರೆದಿದ್ದಾರೆ.
ಕಾಮತ್‌ರಂತೆ ಆಲೋಚನೆ ಮಾಡುವವರು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ಆದರೆ, ಅದರ ಬೆನ್ನಲ್ಲೇ ವಿದೇಶಿಯರು ಸಾಕಷ್ಟು ತಂತ್ರಜ್ಞಾನವನ್ನು ಭಾರತದಿಂದ ಕದ್ದು ಹೋಗಿದ್ದಾರೆ ಅಂತಾ ಆಧಾರಸಹಿತವಾಗಿ ಬರೆದವರೂ ನಮ್ಮ ನಾಡಿನಲ್ಲಿ ಸಿಗುತ್ತಾರೆ. “ಭಾರತದ ಸಾಕಷ್ಟು ಪುಸ್ತಕಗಳು ವಿಶ್ವ ವಿಖ್ಯಾತ ಬ್ರಿಟನ್ ಲೈಬ್ರರಿಯಲ್ಲಿದೆ’” ಅಂತಾ ಯಾರೋ ಬರೆದ್ದಿದ್ದನ್ನು ನಾನೊಮ್ಮೆ ಓದಿದ್ದೆ. ಚೆನ್ನಾಗಿರೋದೆಲ್ಲ ಇರ್ಲಿ ಅಂತಾ ಅವರು ತೆಗೆದುಕೊಂಡು ಹೋಗಿರಬೇಕು ಅಂದುಕೊಂಡು ಸುಮ್ಮನಾಗಿದ್ದೆ.
ಇನ್ನು, ನಳಂದಾ ವಿಶ್ವವಿದ್ಯಾನಿಲಯಕ್ಕೆ ದಾಳಿಕೋರರು ಬೆಂಕಿ ಇಟ್ಟರು ಎಂದು ಅನೇಕ ಇತಿಹಾಸಕಾರರು ಬರೆಯುತ್ತಾರೆ. ಅದು ಎಷ್ಟರ ಮಟ್ಟಿಗೆ ಸತ್ಯವಾಗಿರಬಹುದು ಎಂದು ನಾನು ಯಾವತ್ತೂ ನನ್ನೊಳಗೆ ಪ್ರಶ್ನಿಸಿಕೊಂಡಿಲ್ಲ. ಹಾಗಾಗಿಯೇ ಎಂಪಿ೩, ಸಿಡಿ ಪ್ಲೇಯರ್…ಇತ್ಯಾದಿಗಳನ್ನು ಪಾಶ್ಚಾತ್ಯರೇ ಕಂಡುಹಿಡಿದದ್ದು ಎಂಬ ಕುರಿತಾಗಿಯೂ ನಾನು ಪ್ರಶ್ನೆ ಮಾಡುವುದಿಲ್ಲ!
ಇನ್ನು ಧರ್ಮದ ವಿಷಯ…ಪ್ರತಿ ಧರ್ಮಕ್ಕೂ ಅದರದ್ದೇ ಆದ ಒಂದು ದೇಶವಿದೆ. ಆ ಧರ್ಮದ ಅನುಯಾಯಿಗಳು, ಆರಾಧಕರು ಎಲ್ಲೆಡೆ ಸಿಗುತ್ತಾರೆ. ಆದರೆ ನಮ್ಮ ಧರ್ಮದ ವಿಷಯ ಹಾಗಲ್ಲ. ನಾವು ಬಾಂಗ್ಲಾ ನಿರಾಶ್ರಿತರಿಗೂ ನೆಲೆ ಕೊಡುತ್ತೇವೆ. ಟಿಬೆಟ್‌ನಿಂದ ವಲಸೆ ಬಂದವರಿಗೂ ಮುಂಡಗೋಡು, ಬೈಲುಕುಪ್ಪೆಗಳಲ್ಲಿ ಮನೆ ಮಾಡಿಕೊಡುತ್ತೇವೆ. ನಮ್ಮ ಹಬ್ಬಗಳ ಜತೆಗೆ ಅವರ ಹಬ್ಬವನ್ನೂ ಸಹೋದರತೆಯಿಂದ ಆಚರಿಸುತ್ತೇನೆ…ಇಷ್ಟರ ಮಟ್ಟಿಗಿನ ವಿಶಾಲ ಮನೋಭಾವ, ಸ್ವಾತಂತ್ರ್ಯ ಬೇರೆ ಯಾವುದಾದರೂ ದೇಶದಲ್ಲಿ ಇದೆಯಾ?( ನನಗೆ ಗೊತ್ತಿಲ್ಲ. ಹಾಗಾಗಿಯೇ ನಿಮ್ಮನ್ನು ಕೇಳಿದ್ದು)
ಇಷ್ಟು ಸ್ವಾತಂತ್ರ್ಯ ಕೊಟ್ಟಾಗಲೂ ನಮ್ಮ ಆಚರಣೆಗಳ ಕುರಿತು ಅಪಹಾಸ್ಯ ಮಾಡುತ್ತಾರೆ, ನಮ್ಮ ಧರ್ಮದ ಹುಳುಕುಗಳನ್ನು ಎತ್ತಿ ಹಿಡಿಯುತ್ತಾರೆ, ನಿಮ್ಮ ಧರ್ಮ ಸರಿಯಿಲ್ಲ, ನಮ್ಮ ಧರ್ಮಕ್ಕೆ ಬನ್ನಿ ಅಂತಾ ಮಾನಸಿಕವಾಗಿ ದುರ್ಬಲವಾಗಿರುವ ಮಂದಿಯನ್ನು ಆಮಿಷವೊಡ್ಡಿ ಸೆಳೆದುಕೊಳ್ಳುವ ಯತ್ನ ಮಾಡುತ್ತಾರೆ ಎಂದಾದರೆ….ಯಾರಿಗೆ ನೋವಾಗುವುದಿಲ್ಲ ಹೇಳಿ?
ಓಶೋ ಹೇಳಿದಂತೆ ಭಾರತೀಯರ ತಾಳ್ಮೆ ಒಂದು ಹಂತದವರೆಗೆ ಸೀಮಿತ. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು, ನಮ್ಮ ಮನೆಯ ಹೆಣ್ಣುಮಕ್ಕಳ ಮಾನ ತೆಗೆಯಲು ಯತ್ನಿಸುವವರೆಗೂ ನಾವು ಅವರ ವಿರುದ್ಧ ಸಿಡಿದೇಳಲಿಲ್ಲ. ಪಾಪ ಸಾಯಲಿ, ಅವರು ನಮ್ಮಂತೆ ಮನುಷ್ಯರು, ಅವರದ್ದು ಹೊಟ್ಟೆಪಾಡು.. ಅಂತಾ ಸುಮ್ಮನಿದ್ದೆವು. ಆದ್ರೆ ಯಾವತ್ತು ರ್ಯಾಂಡ್‌ನಂಥ ದುಷ್ಟ ಅದಿಕಾರಿ ದೇಶದೊಳಗೆ ಕಾಲಿಟ್ಟನೋ, ಆವತ್ತು ಚಾಪೆಕರ್ ಸಹೋದರರು ಸಿಡಿದ್ದೆದರು… ಸ್ಯಾಂಡರ್ಸ್‌ನ ಹೇಯ ಕೃತ್ಯ ನೋಡಲಾಗದ ಭಗತ್, ಆಜಾದ್…ಮೊದಲಾದವರು ಕತ್ತಿ ಹಿಡಿದರು.
ನಮ್ಮ ಹುಳುಕುಗಳನ್ನು ಕೆದಕುವ ಪಾಶ್ಚಾತ್ಯರ ಒಳಹುಳುಕುಗಳನ್ನು ನಾವು ಕೆದಕುವುದು ತಪ್ಪಾ? ಅಷ್ಟಕ್ಕು ಅವರದ್ದು ಎಲ್ಲವೂ ಸರಿಯಾಗಿದೆಯಾ? ನೀವೇ ಹೇಳಿ.
ಕಾಮತರ ಮಾತು ಕೇಳಿ ತುಂಬಾ ಹಿಂದೆ ಬರೆದಿದ್ದ “ನನ್ನ ಪ್ರಿಯ ಭಾರತ” ನೆನಪಾಯಿತು. ಆ ಲೇಖನವನ್ನೆ ಎಡಿಟ್ ಮಾಡಿ ಹಾಕಿದ್ದೇನೆ. “ನನ್ನ ಪ್ರಿಯ ಭಾರತ” ತುಂಬಾ ಸೊಗಸಾದ ಪುಸ್ತಕ. ನಾಡಿನ ಖ್ಯಾತ ಬರಗಾರರ ಸಾಲಿನಲ್ಲಿ ಒಬ್ಬರಾದ ವಿಶ್ವೇಶ್ವರ ಭಟ್ಟರು ಆ ಪುಸ್ತಕವನ್ನು ಅಷ್ಟೆ ಸೊಗಸಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ನೀವು ಒಮ್ಮೆ ಆ ಪುಸ್ತಕ ಓದಿ…