ನಿನ್ನೆ ಅದ್ಯಾಕೊ ಹಳೆಯ ಡೈರಿಯನ್ನು ಹರವಿಕೊಂಡು ಕುಳಿತ್ತಿದ್ದೆ. ಅವಳ ನೆನಪು ಮರೆಯಾಗಿಯೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ನೆನಪಾದಳು! ಡೈರಿಯ ನೆವವಿಲ್ಲದಿದ್ದರೆ ಅವಳ ನೆನಪಾಗುತ್ತಿರಲಿಲ್ಲ…ಅಲ್ಲಲ್ಲ… ಅವಳ ನೆನಪು ಮರುಕಳಿಸಲು ಶುರುವಾದ್ದರಿಂದಲೇ ಡೈರಿಯ ಪುಟ ತಿರುವಿಹಾಕಿದ್ದು! ನಿಜ ಹೇಳಬೇಕೆಂದರೆ, ಅವಳು ಮತ್ತೆ, ಮತ್ತೆ ನೆನಪಾಗುತ್ತಿರಲಿ ಎಂಬ ಉದ್ದೇಶದಿಂದ ದಪ್ಪ ದಪ್ಪನೆಯ ಅಕ್ಷರದಲ್ಲಿ ಅವಳ ಹೆಸರನ್ನು ಡೈರಿಯಲ್ಲಿ ಬರೆದಿಟ್ಟಿರುವುದು!
ನಾನು ಅವಳನ್ನು ಪ್ರೀತಿಸಿದೆ, ಹಾಗಂತ ಅವಳು ನನ್ನನ್ನು ಪ್ರೀತಿಸಬೇಕಾಗಿತ್ತು ಎಂಬ ಹಠವೇನಿರಲಿಲ್ಲ. ಆದರೂ, ಅವಳು ನನ್ನನ್ನು ಪ್ರೀತಿಸಲಿಲ್ಲ ಎಂಬ ಸಿಟ್ಟು! ನನ್ನಲ್ಲಿ ಏನು ಕೊರತೆಯಿತ್ತು ಎಂದು ಅವಳು ಹೇಳಲಿಲ್ಲ. ನಾನು ಅವಳನ್ನು ಕೇಳಲಿಲ್ಲ…
ಅವಳಿಗೂ ಅವಳದ್ದೇ ಆದ ಕನಸು, ಕಲ್ಪನೆಗಳಿವೆ. ನಾನು ಹೇಗೆ ನನ್ನ ಮೂಗಿನ ನೇರಕ್ಕೆ ಸರಿಯಾಗಿ ಆಲೋಚನೆ ಮಾಡುತ್ತೇನೋ, ಅದೇ ತರಹ ಅವಳು, ಅವಳ ಮೂಗಿನ ನೇರಕ್ಕೆ ಸರಿಯಾಗಿ ಆಲೋಚಿಸುತ್ತಾಳೆ…ಇವೆಲ್ಲವೂ ನನಗೆ ಅರ್ಥವಾಗುತ್ತದೆ. ಆದರೂ ಅವಳ ಕುರಿತಾಗಿ ಕೋಪ. ನಾನಷ್ಟು ಹತ್ತಿರದವನಾಗಿದ್ದರೂ, ಬೇರೆಯವನ ಸಂಗಡ…ಮತ್ತದೇ ಆಲೋಚನೆ!
ಆಕೆ ಇನ್ನು ಕೈಗೆ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿದೆ. ಹಾಗಂತ, ಆಕೆ ಸಿಕ್ಕರೂ ಸಿಗಬಹುದೆಂಬ ಪುಟ್ಟ ಕನಸು ಮಾತ್ರ ಮನಸಿನಿಂದ ದೂರವಾಗಿದೆ ಎನ್ನಲು ಸಾಧ್ಯವಿಲ್ಲ! ಪಾಪದ ಹುಡುಗಿ, ಚೆಂದದ ಹುಡುಗಿ, ಮುದ್ದು ಮುದ್ದಾದ ಹುಡುಗಿ…ಹಾಗಂತ ಅವಳ ಕುರಿತಾಗಿ ಕಲ್ಪನೆಯೊಂದು ಒಡಮೂಡುವ ಹೊತ್ತಿನಲ್ಲೇ, ಪಾಪಿ, ಮೋಸಗಾರ್ತಿ…ನನ್ನೊಳಗಣ ಸಿಟ್ಟು ಜಾಗೃತವಾಗಿಬಿಡುತ್ತದೆ!
ಇದು ಒಂತರಹ ಖಾಯಿಲೆಯಾಗಿರಬಹುದೆಂದು ಡಾಕ್ಟರ್ ಬಳಿ ಹೋದರೆ, ಅವರು ನಿಮಗ್ಯಾವುದೇ ರೋಗವಿಲ್ಲ ಎನ್ನುತ್ತಾರೆ. ಜಾತಕದಲ್ಲೂ ದೋಷ ಕಾಣುತ್ತಿಲ್ಲ ಎಂಬುದು ಜ್ಯೋತಿಷಿಗಳ ಉತ್ತರ! ಹಾಗಾದರೆ ನನ್ನ ಸಮಸ್ಯೆಗೆ ಪರಿಹಾರ ಸೂಚಿಸುವ ಶಕ್ತಿ ಇರುವುದು ಅವಳಿಗೆ ಮಾತ್ರವಾ?! ಹಾಗಂದುಕೊಳ್ಳುವ ಹೊತ್ತಿಗೆ ಮನಸು ಮತ್ತ್ಯಾವುದೋ ಲಹರಿಗೆ ಹೋಗಿ ಬಿಡುತ್ತದೆ…ಈ ಜಗತ್ತಿನಲ್ಲಿ ಇವಳೊಬ್ಬಳೇ ವಿಶ್ವ ಸುಂದರಿಯಾ?
ಛೇ, ಹಾಗಂತ ಅವಳು ಯಾವತ್ತೂ ನನ್ನಲ್ಲಿ ಹೇಳಿಕೊಂಡಿಲ್ಲ. ನಾನೇ ಅವಳನ್ನು ವಿಶ್ವ ಸುಂದರಿ, ನನ್ನ ಕನಸು-ಕಲ್ಪನೆಗಳ ರಾಣಿ…ಅಂತೆಲ್ಲ ಭಾವಿಸಿಕೊಂಡಿದ್ದು! ಆದರೂ ಅವಳ ಮೇಲೆ ನಾನು ಸುಮ್ಮ ಸುಮ್ಮನೆ ರೇಗುವುದೇಕೆ? ಪ್ರೀತಿಯ ಹಿಂದೆ ಸಿಟ್ಟು, ದ್ವೇಷ ಇರತ್ತೆ ಅಂತಾ ಬಲ್ಲವರು ಹೇಳುತ್ತಾರೆ…ಆದರೂ ನನಗಂತೂ ಉತ್ತರ ಸಿಗುತ್ತಿಲ್ಲ! ನನ್ನೆಲ್ಲ ಸಮಸ್ಯೆಗಳನ್ನು ಮತ್ತೆ ಅವಳ ಬಳಿ ತೆಗೆದುಕೊಂಡು ಹೋದರೆ ಪರಿಹಾರ ಸಿಗಬಹುದು ಅನ್ನಿಸುತ್ತಿದ್ದರೂ, ಅದಕ್ಕೆ ಮನಸ್ಸು ಒಪ್ಪುತ್ತಿಲ್ಲ.
ಹಾಗಾಗಿ, ಎಲ್ಲವೂ ಹಾಗೇ ಸುಮ್ಮನೆ…ಅಲ್ವಾ?!
(ವಿ.ಸೂ:-ಸಿಂಪ್ಲಿ ಸಿಟಿಗಾಗಿ ಹಾಗೆ ಸುಮ್ಮನೆ ಬರೆದ ಸ್ವಕಲ್ಪಿತ ಹಳೆ ಬರಹ)