Feeds:
ಲೇಖನಗಳು
ಟಿಪ್ಪಣಿಗಳು

Archive for ಜುಲೈ, 2014

ದುಡ್ಡು, ದುಡ್ಡು, ದುಡ್ಡು…ಎಷ್ಟರ ಮಟ್ಟಿಗೆ ಎಂದರೆ ಮುಂದೊಂದು ದಿನ ಹಣವೆಂಬುದು ತನ್ನ ಮೌಲ್ಯವನ್ನು ಕಳೆದುಕೊಂಡು ಶೂನ್ಯವಾಗಬಹುದೇನೋ ಎಂಬ ಭಯ ಶುರುವಾಗಿದೆ. ದುಡ್ಡಿಗಾಗಿ ನಾವು ನಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದೇ ಈ ಅನುಮಾನಕ್ಕೆ ಕಾರಣ. ಒಂದು ಕಸದ ಬಗ್ಗೆ ಪ್ರತಿಕ್ರಿಯಿಸುವಾಗ ನಿರ್ದೇಶಕ ಯೋಗ್‌ರಾಜ್ ಭಟ್ಟರು ಮುದೊಂದು ದಿನ ನಾವು ಸ್ನಾನ ಇಲ್ಲದೇ, ಬಟ್ಟೆಯಿಲ್ಲದೇ, ಕಸದ ರಾಶಿಯಲ್ಲಿ ಬದುಕುವ ಅನಾಗರೀಕರಾಗಬಹುದು. ಕಾಲಚಕ್ರ ತಿರುಗಬಹುದು ಎಂದಿದ್ದರು. ಅವರ ಮಾತು ನಿಜ. ಹಾಗಾಗಿದ್ದರೆ ಜಗತ್ತು ಚೆನ್ನಾಗಿರಬಹುದೇನೊ ಎನ್ನಿಸಲು ಶುರುವಾಗಿದೆ.
ಮೊನ್ನೆ ಒಂದು ಪುಟ್ಟ ಅಪಘಾತ. ಗಂಡ-ಹೆಂಡತಿ-ಮಗು ರಾತ್ರಿ ಯಾವುದೋ ಮದುವೆ ರಿಸೆಪ್ಷೆಬ್ ಮುಗಿಸಿಕೊಂಡು ಬೈಕ್‌ನಲ್ಲಿ ಬರುತ್ತಿದ್ದರು. ಲಾರಿಯ ತುದಿ ಬೈಕ್ ಕನ್ನಡಿಗೆ ತಗುಲಿ ಬೈಕ್ ಬಿದ್ದಿದೆ. ಬೈಕ್ ಓಡಿಸುತ್ತಿದ್ದ ಹೆಂಡತಿ ಕೆಳಕ್ಕೆ ಬಿದ್ದಿದ್ದಾಳೆ. ಗಂಡ-ಮಗುವಿಗೆ ಅದೃಷ್ಟವಶಾತ್ ಏನು ಆಗಿಲ್ಲ. ಆದರೆ ಹೆಂಡತಿ ತಲೆಗೆ ಪೆಟ್ಟಾಗಿದೆ. ಎಲ್ಲ ನಿಂತುಕೊಂಡು ಅಪಘಾತ ನೋಡಿದವರೇ ಹೊರತು ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಗಂಡ ಇಬ್ಬರು ಅಪರಿಚಿತ ಗಂಡಸರನ್ನು ಸ್ಥಳದಲ್ಲಿ ಬಿಟ್ಟು ಮಗುವನ್ನು ಎದೆಗವಚಿಕೊಂಡು ಸಮೀಪದಲ್ಲೇ ಇರುವ ವೈದ್ಯರನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಆತ ಹೋಗಿ ವಾಪಾಸ್ ಬರುವುದರೊಳಗೆ ಆ ಇಬ್ಬರು ಪುಣ್ಯಾತ್ಮರು ಪ್ರಾಣ ಹೋಗುತ್ತಿರುವ ಹೆಣ್ಣಿನ ಮಾಂಗಲ್ಯ ಸರದಿಂದ ಹಿಡಿದು ಎಲ್ಲವನ್ನೂ ದೋಚಿಕೊಂಡು ಪರಾರಿಯಾಗಿದ್ದಾರೆ. ಜೀವನ್ಮರಣ ಹೋರಾಟದಲ್ಲಿ ಹೆಣ್ಣು ಮಗಳು ಸತ್ತಿದ್ದಾಳೆ. ಇದು ಬೆಂಗಳೂರಿನಲ್ಲಿ ತೀರಾ ಇತ್ತೀಚೆಗೆ ನಡೆದ ನೈಜ ಘಟನೆ.
ಎಲ್ಲ ಮುಗಿಯಿತು. ಗಂಡ ತನ್ನ ಹೆಂಡತಿಯನ್ನು ಕಳೆದುಕೊಂಡು ದುಖಃ ಮಡುಗಟ್ಟಿದ ಮೇಲೆ ಬೈಕ್ ತರಲು ಪೋಲೀಸ್ ಸ್ಟೇಷನ್‌ಗೆ ಹೋಗಿದ್ದಾರೆ. ಬೈಕ್‌ನಲ್ಲಿ ಆ ಹೆಣ್ಣುಮಗಳ ಪರ್ಸ್ ಮತ್ತು ಮೊಬೈಲ್ ಇತ್ತು. ೩೦೦೦ ಸಾವಿರ ರೂ. ನಗದು ಹಣವಿತ್ತಂತೆ. ಮನೆಗೆ ಬಂದು ನೋಡಿದರೆ ಎರಡೂ ಮಾಯ! ಪೊಲೀಸರನ್ನು ಕೇಳಿದರೆ ವಿಷಯವೇ ಗೊತ್ತಿಲ್ಲ ಎನ್ನುತ್ತಿದ್ದಾರೆ. ಸಾವಿನ ಮನೆಯ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದೇ ಎಂದರೆ ಇದೆ ಇರಬೇಕು! ಹೆಂಡತಿ ಕಳೆದುಕೊಂಡ ದುಖಃದಲ್ಲಿರುವ ಅವರಿಗೆ ಯಾರ ಮೇಲೂ ಹೋರಾಡುವ ಉತ್ಸಾಹವಿಲ್ಲ.
ಇದು ತೀರಾ ನನ್ನ ಪರಿಚಿತರ ಮನೆಯಲ್ಲಿ ನಡೆದ ಘಟನೆ. ಆದರೆ ಬೆಂಗಳೂರಿನಲ್ಲಿ ದಿನಕ್ಕೆ ಇಂಥ ಹತ್ತಾರು ಘಟನೆ ನಡೆಯುತ್ತದೆ. ಬಸ್ಸು, ಲಾರಿ ತಲೆ ಮೇಲೆ ಹತ್ತಿ ಹೋದರು ಎಷ್ಟೋ ಸಲ ನೋಡಲು ಯಾರೂ ಇರುವುದಿಲ್ಲ. ಅಯ್ಯೊ ನಮಗ್ಯಾಕೆ ಆ ಸಾಹವಾಸ, ಸುಮ್ಮನೆ ರಿಸ್ಕ್, ಬಾಡಿ ಮುಟ್ಟಿದ್ರೆ ಕೇಸು, ಅಲೆದಾಟ ಎಂದು ಎಷ್ಟೋ ಜನ ನಿಂತಲ್ಲೇ ಇಣುಕಿ ನೋಡಿಕೊಂಡು ಹೋಗುತ್ತಾರೆ. ಅನಾಥವಾಗಿ ಚೀರಾಡಿದರೂ ಸಾಯುವ ಹೊತ್ತಿನಲ್ಲಿ ನೀರು ಕೊಡುವವರು ಗತಿಯಿಲ್ಲ. ಇದು ಈ ಮಹಾನಗರಿಯ ಕಥೆ-ವ್ಯಥೆ ಎರಡೂ ಹೌದು.
ಇನ್ನೂ ಕಳ್ಳರಿಗೆ ಬಸ್ ಪಲ್ಟಿ ಹೊಡೆದರೆ, ಅಪಘಾತವಾದರೆ ಇಲ್ಲಿ ಸುಗ್ಗಿ! ಈಗೊಂದು ಸ್ವಲ್ಪ ತಿಂಗಳ ಹಿಂದೆ ತುಮಕೂರು-ಬೆಂಗಳೂರು ಹೈವೆಯಲ್ಲಿ ಇಂಥದ್ದೆ ಘಟನೆ ಆಗಿ ಅದರಲ್ಲಿ ಪೊಲೀಸ್ ಪೇದೆಗಳೇ ಆಭರಣ-ಹಣ ಲೂಟಿ ಮಾಡಿ ಸಿಕ್ಕಿಬಿದ್ದ ಘಟನೆ ದೊಡ್ಡ ಸುದ್ದಿ ಮಾಡಿತ್ತು. ಅಂಥ ನೂರಾರು ಪ್ರಕರಣಗಳಲ್ಲಿ ಒಂದೆರಡು ಸುದ್ದಿ ಮಾಡುತ್ತವೆ.
ಇಲ್ಲಿ ಆಘಾತಕಾರಿ ಅಂಶ ಎಂದರೆ ವ್ಯಕ್ತಿ ಜೀವಕ್ಕಿಂತ ಆತನ ಬಳಿ ಇರುವ ಹಣ, ಆಭರಣ ದೋಚುವ ಪ್ರವೃತ್ತಿ. ಪೊಲೀಸ್-ಕಳ್ಳ, ಸಾಮಾನ್ಯ ಎಂಬ ಬೇಧವಿಲ್ಲದೇ ಇವತ್ತು ಈ ಕೆಲಸ ನಡೆಯುತ್ತದೆ. ಸಿಕ್ಕಷ್ಟು ಇವತ್ತಿನ ಖರ್ಚಿಗಾಯ್ತು ಎಂಬ ಧೋರಣೆ. ಎದುರಿಗಿರುವ ವ್ಯಕ್ತಿ ಸಾಯುತ್ತಿದ್ದಾನೆ, ನೀರು ಕೊಡಬೇಕು. ಸಂಕಟಪಡುತ್ತಾ ಚೀರುತ್ತಿದ್ದಾನೆ ಎಂಬ ಕನಿಷ್ಠ ಮಾನವೀಯತೆಯನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಎಲ್ಲವನ್ನೂ ಹೀಗೆ ಜನರಲೈಸ್ ಮಾಡಲು ಸಾಧ್ಯವಿಲ್ಲ. ಆದರೆ ಬೆಂಗಳೂರಿನ ಅಪಘಾತದಲ್ಲಿ ೧೦ರಲ್ಲಿ ೬ ಪ್ರಕರಣಗಳು ಹೀಗೆ ಆಗುತ್ತಿವೆ!
’ಸಾರ್ ನೋ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿದ್ರೆ ಎತ್ತಾಕಿಕೊಂಡು ಹೋಗ್ತಾರೆ. ಕಾರು ವಾಪಾಸ್ ತರುವಾಗ ಒಳಗೆ ಏನು ಇರಲ್ಲ. ಸ್ಪೇರ್‌ಪಾರ್ಟ್‌ಗಳನ್ನು ಬಿಚ್ಚಿ ಮಾರಿಬಿಡ್ತಾರೆ ಸಾರ್. ನೋಡಿ ಸಾರ್ ಕಾರನ್ನು. ಇಂಟಿರಿಯರ್‌ಗೆ ೬೦ ಸಾವಿರ ರೂ ಖರ್ಚುಮಾಡಬೇಕು ಈಗ ಮತ್ತೆ’ ಹಾಗಂತ ಎದುರುಗಡೆ ಮನೆಯ ಅಂಕಲ್ ಮೊನ್ನೆ ತಮ್ಮ ದುಖಃ ತೋಡಿಕೊಳ್ಳುತ್ತಿದ್ದರು. ಇದು ಕೂಡ ನಡೆದ ನೈಜ ಘಟನೆ. ಹಾಗಿದ್ದರೆ ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ? ಯಾರ ವಿರುದ್ಧ ಹೋರಾಟ ಮಾಡೋಣ? ಯಾರನ್ನು ತಪ್ಪಿತಸ್ಥರನ್ನಾಗಿಸೋಣ.
ಮನೆ ಬಾಗಿಲಿನಲ್ಲಿ ನಿಲ್ಲಿಸಿದ ನನ್ನದೇ ಬೈಕ್‌ನ ಪೆಟ್ರೋಲ್‌ನ್ನು ೩ ಸಲ ಕದ್ದರು. ಕೊನೆಗೆ ಜೆಸಿ ರಸ್ತೆ ಹೋಗಿ ಒಂದು ಲಾಕರ್ ಹಾಕಿಸಿಕೊಂಡು ಬಂದೆ. ಅಂದರೆ ಬೆಂಗಳೂರು ೧೦೦ ರೂಪಾಯಿ ಪೆಟ್ರೋಲ್ ಕದಿಯುವಷ್ಟರ ಮಟ್ಟಿಗೆ ಬೆಳೆದಿದೆ. ಸಾಯುತ್ತಿರುವವರ ಸರ-ಬಳೆ ದೋಚುತ್ತಾರೆ ಎಂದಾದ ಮೇಲೆ ನಿರ್ಜಿವ ವಸ್ತುಗಳನ್ನು ಕದಿಯುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಬಿಡಿ.
ಇತ್ತೀಚಿನ ೨-೩ ವರ್ಷಗಳಲ್ಲಿ ಇಂಥ ಪ್ರಕರಣಗಳು ತೀರಾ ಹೆಚ್ಚಾಗಿವೆ. ಬೆಂಗಳೂರು ಬಾನೆತ್ತರಕ್ಕೆ ಬೆಳೆಯುತ್ತಿರುವುದು, ಇಲ್ಲಿನ ಬಾಡಿಗೆ, ಬದುಕು ದುಸ್ಥರವಾಗಿರುವುದು ಇದಕ್ಕೆ ಕಾರಣವಾಗಿರಬಹುದು.
ಯಸ್ ಬೀದಿಯಲ್ಲಿ ಪಾನಿಪುರಿ ಮಾರುವವನು ಯಾವ ಮೂಲಾಜು ಇಲ್ಲದೇ ೩೦೦ರೂಪಾಯಿ ಮಾಮೂಲಿಯನ್ನು ಕೊಡಬೇಕಾದವನಿಗೆ ಕೊಡಲೇ ಬೇಕು. ಇಲ್ಲವಾದರೆ ಮರುದಿನ ಅವನ ಜೀವನೋಪಾಯಕ್ಕೆ ದಾರಿ ಇಲ್ಲ. ಎಲ್ಲಿ ನೋಡಿದರೂ ದುಡ್ಡು, ದುಡ್ಡು. ಸಾಯುವಾಗ ಯಾರೂ ನಮ್ಮ ಹೆಣಕ್ಕೆ ದುಡ್ಡು ಹಾಕಿ ಸುಡಲಾರರು ಎಂಬ ಪರಿವು ನಮಗಿಲ್ಲ. ದುಡ್ಡು ಬೇಕು ನಿಜ. ಆದರೆ ಅದಕ್ಕೊಂದು ಮಿತಿಬೇಕು. ಬೇರೆಯವರ ಸಾವು-ಬದುಕಿನ ನಡುವೆಯೂ ನಮಗೆ ಮುಖ್ಯವಾಗುವುದು ದುಡ್ಡು-ಬಂಗಾರ ಎಂದಾದರೆ ನಾವೆಲ್ಲಿಗೆ ಬಂದು ನಿಂತಿದ್ದೇವೆ ಎಂಬ ಆತಂಕ ಕಾಡುತ್ತದೆ.
ಒಂದರ್ಥದಲ್ಲಿ ಅನಾಗರೀಕ, ಅಲೆಮಾರಿ ಬದುಕೇ ಉತ್ತಮ ಎನ್ನಿಸುತ್ತಿದೆ. ಅಲ್ಲಿ ದುಡ್ಡಿನ ಹಂಗಿಲ್ಲ. ಎಲ್ಲರೂ ನಗ್ನರಾಗಿರುವುದರಿಂದ ರೇಪು, ಕೊಲೆಗಳ ಮಾತಿಲ್ಲ. ಒಂದು ರೀತಿ ಪಶು-ಪಕ್ಷಿ-ಪ್ರಾಣಿಗಳಂತೆ ನೆಮ್ಮದಿಯ ಜೀವನ. ಅಲ್ಲಿ ಕೊಲೆಯಂತೆ, ಇಲ್ಲಿ ದರೋಡೆಯಂತೆ ಎಂಬುದಿಲ್ಲ. ನಮಗೆ ನಾವೇ ಕಟ್ಟಿಕೊಂಡ ಮರ್ಯಾದೆ ಎಂಬ ಕೋಟೆ ಅಲ್ಲಿ ಇಲ್ಲವಾದರೂ ಕೃತಕ ಪ್ರಾಣ ಸಂಚಕಾರದ ಭಯವಿಲ್ಲ ಅಲ್ಲವೇ?
ಯಸ್ ಇತ್ತೀಚಿನ ದಿನಗಳಲ್ಲಿ ಈ ಮಹಾನಗರಿಗಳ ವಿದ್ಯಾಮಾನಗಳನ್ನು ಗಮನಿಸಿದರೆ ಹಾಗನ್ನಿಸಲು ಶುರುವಾಗಿದೆ. ಹಾಗಂತ ಅದ್ಯಾವುದೂ ಸಾಧ್ಯವಿಲ್ಲದ ಮಾತು. ಕೆಳಗಿನ ಮನೆಯಲ್ಲಿ ಯಾರೋ ಸತ್ತಿದ್ದಾರೆ ಎಂಬುದು ಮೇಲಿನ ಮನೆಯವನಿಗೆ ಗೊತ್ತಿಲ್ಲದ ಈ ಮಹಾನಗರಗಳಲ್ಲಿ ವ್ಯಕ್ತಿಯೊಬ್ಬನಿಗೆ ಇನ್ನೊಬ್ಬನ ಜೀವದ ಬೆಲೆ ಗೊತ್ತಾಗುವುದು ತೀರಾ ಅವರಿಗೆ ಆತ್ಮೀಯವಾದವರನ್ನು ಕಳೆದುಕೊಂಡಾಗ ಅನ್ನಿಸುತ್ತದೆ. ಪ್ಲೀಸ್ ಇಂದಿನಿಂದಲಾದರೂ ಸಾಯುತ್ತಿರುವವರನ್ನು ತುದಿಯಲ್ಲಿ ನಿಂತು ಚೆಂದ ನೋಡುವ ವ್ಯಕ್ತಿಗಳು ನೀವಾಗಬೇಡಿ. ಕನಿಷ್ಠ ಪಕ್ಷ ನೀರು ಕೊಟ್ಟು ಪ್ರಾಣ ಉಳಿಸಲು ಪ್ರಯತ್ನಿಸಿ. ಪ್ರಾಣಕ್ಕಾದ್ರೂ ಬೆಲೆ ಕೊಡಿ ಪ್ಲೀಸ್.

(ನಿನ್ನೆಯ ಕನ್ನಡಪ್ರಭದಲ್ಲಿ ಪ್ರಕಟಿತ ಬರಹ. ಒಂದಷ್ಟು ಅಕ್ಷರದೋಷಗಳಿವೆ. ಕ್ಷಮೆ ಇರಲಿ…)

Read Full Post »

ಬದುಕೆಂದರೆ ಹಾಗೆ…

ಹಾಗಿದ್ದರೆ ಹೀಗಿರಬೇಕಿತ್ತು
ಹೀಗಿದ್ದರೆ ಹಾಗೆ ಚೆನ್ನಾಗಿತ್ತು
ಬದುಕೆಂದರೆ ಹಾಗೆ
ಇರುವುದ ಬಿಟ್ಟು ಇಲ್ಲದಿರುವುದರ ತುಡಿತ
ಬೆಂಕಿಯೊಳಗೆ ಕೈಯಿಟ್ಟು ಸುಟ್ಟುಕೊಳ್ಳುವ ತವಕ

ನನ್ನೊಳಗೆ ನಾನು ಕೆಟ್ಟವನು
ಬೇರೆಯವರಿಗೆ ಒಳ್ಳೆಯವನು
ಬೇರೆಯವರೊಳಗೆ ನಾ ನೀಚ
ನನ್ನೊಳಗೆ ನಾ ಉತ್ತಮನು
ಬದುಕೆಂದರೆ ಹಾಗೆ

ಗೊತ್ತಿದ್ದು ಗೊತ್ತಿಲ್ಲದಂತಿರಬೇಕು
ಕಂಡು ಕಾಣದಂತೆ ನಟಿಸಬೇಕು
ಬದುಕೆಂದರೆ ಹಾಗೆ
ಇದೊಂದು ನಾಟಕ ರಂಗ
ಇಲ್ಲಿ ನಾವೆಲ್ಲ ಕಲಾವಿದರು

ಇಲ್ಲಿ ಯಾವುದಕ್ಕೂ ಬೆಲೆಯಿಲ್ಲ
ಯಾರೂ ಶಾಶ್ವತರಲ್ಲ
ಎಲ್ಲರೂ ಹಾಗೆ ಬಂದು
ಹೀಗೆ ಹೋಗುವವರು
ಬದುಕೆಂದರೆ ಹಾಗೆ

ಯಾರಿಗೂ ಯಾರೂ ಅನಿವಾರ್ಯವಲ್ಲ
ಬದುಕಿಗೂ ಯಾವುದೂ ಅನಿವಾರ್ಯವಲ್ಲ
ಬದುಕೆಂದರೆ ಹಾಗೆ
ಹಾಗೆ ಬೇಕಾದರೂ ಬದುಕಬಹುದು
ಹೀಗೇ ಬೇಕಾದರೂ ಬದುಕಬಹುದು
ಬದುಕೆಂದರೆ ಹಾಗೆ!

Read Full Post »