Feeds:
ಲೇಖನಗಳು
ಟಿಪ್ಪಣಿಗಳು

Archive for ಜನವರಿ, 2017

ಒಂದು ಕನಸು ಮತ್ತು ಎರಡು ಪುಸ್ತಕ!

Posterಇವತ್ತು ನಾಲ್ಕು ಜನ ಬರಹಗಾರರನ್ನು ಒಟ್ಟು ಹಾಕಿ ಒಂದು ಪತ್ರಿಕೆಯ ಪುರವಣಿಗೆ ಬರೆಸುವುದೇ ದೊಡ್ಡ ಕಷ್ಟ. ಅಂಥದ್ರಲ್ಲಿ ಒಂದು ಪುಸ್ತಕಕ್ಕೆ ಬರೆಸುವುದು ದೊಡ್ಡ ಸಾಹಸ…’ ಹಿಂದಿನ ಪುಸ್ತಕದ ಟೈಂನಲ್ಲಿ ಗೆಳೆಯ ವಿಕಾಸ್ ನೆಗಿಲೋಣಿ ಹೇಳಿದ ಮಾತಿದು. ನಂಗೂ ಅದೇ ಭಯಂಕರ ಅನುಮಾನ ಇತ್ತು. ಆದ್ರೂ ’ಇಂಥದ್ದೊಂದು ಪುಸ್ತಕಕ್ಕೆ ನಾಲ್ಕಾರು ಜನರ ಕೊಡುಗೆ ಇದ್ರೆ ಆ ಪುಸ್ತಕದೊಳಗಿನ ಸರಕಿನ ಮೌಲ್ಯ ಹೆಚ್ಚಾಗುತ್ತೆ’ ಎಂಬ ನಂಬಿಕೆ ನನ್ನದು. ಧೈರ್ಯ ಮಾಡಿ ಒಂದಷ್ಟು ಗೆಳೆಯರನ್ನು ಕೇಳಿದೆ. ಒಂದಲ್ಲ, ಎರಡನೇ ಪುಸ್ತಕವೂ ಅದೇ ಮಾದರಿಯಲ್ಲಿ ರೆಡಿ ಆಯ್ತು ಅನ್ನೋದೇ ಖುಷಿ. ’ನೀವೂ ಪತ್ರಕರ್ತರಾಗಬೇಕೆ?’ ಪುಸ್ತಕಕ್ಕೆ ಬರೆದುಕೊಡಿ ಅಂತ ಕೇಳಿದ್ದು ಕೆಲವು ಗೆಳೆಯರನ್ನು ಮಾತ್ರ. ಅದ್ರಲ್ಲಿ ಯಾರೂ ’ಆಗಲ್ಲ’ ಎನ್ನದೇ ಖುಷಿಯಿಂದಲೇ ಬರೆದುಕೊಟ್ಟಿದ್ದಾರೆ. ಅದೇ ಖುಷಿಗಾಗಿ ಇದೊಂದು ಸಣ್ಣ ಬರಹ ಕೂಡ.
ಈ ಕೋಡ್ಸರ ದಿನ ಫೋನ್ ಮಾಡಿ ಟಾರ್ಚರ್ ಕೊಡ್ತಾನಪ್ಪ. ಏನೋ ಒಂದು ಬರೆದುಕೊಟ್ಟರೆ ಸಾಕು… ಹಾಗಂತ ಮೂಲಾಜಿಗೆ ಬಿದ್ದು ನಮ್ಮ ಎರಡೂ ಪುಸ್ತಕಕ್ಕೂ ಯಾರೂ ಬರೆದಿಲ್ಲ. ಎಲ್ಲರೂ ’ಇದು ನನ್ನದೇ ಸ್ವಂತ ಪುಸ್ತಕ’ ಎಂದುಕೊಂಡೆ ಬರೆದವರು. ಈ ಅನುಭವ ನಂಗೆ ಎರಡೂ ಪುಸ್ತಕದಲ್ಲಿ ಆಗಿದೆ.
’ಪತ್ರಿಕೆಗೆ ಬರೆಯೋದು ಹೇಗೆ?’ ಬುಕ್‌ಗೆ ೧೩ ಜನ ಬರೆದಿದ್ದಾರೆ. ಈ ಸಲ ೬ ಜನ. ಎಲ್ಲ ಬರಹಗಳೂ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಹಾಗಂತ ನಾನು ಕೇಳಿದ ತಕ್ಷಣ ಬರೆದುಕೊಡಲೇ ಬೇಕು ಎಂಬ ಮೂಲಾಜು ಯಾರಿಗೂ ಇರಲಿಲ್ಲ. ನಾನು ಕೂಡ ಎಲ್ಲರೂ ಬರೆದುಕೊಡಲೇ ಬೇಕು ಅಂತ ಅಪೇಕ್ಷಿಸಿರಲಿಲ್ಲ ಹಾಗೂ ಬರೆದು ಕೊಡುತ್ತಾರೆ ಅಂತ ನಿರೀಕ್ಷೆಯನ್ನೂ ಮಾಡಿರಲಿಲ್ಲ. ಒಂದು ಪ್ರಯತ್ನ ನೋಡೋಣ ಅಂತಲೇ ಹೊರಟ್ಟಿದ್ದು.
ಖಂಡಿತ ಎರಡೂ ಪುಸ್ತಕಗಳೂ ಪತ್ರಿಕೋದ್ಯಮದಲ್ಲಿ ದಾಖಲೆಯಾಗಿ ಉಳಿಬಲ್ಲವು ಅನ್ನುವುದರಲ್ಲಿ ಅನುಮಾನವಿಲ್ಲ. ”ನೀವೂ ಪತ್ರಕರ್ತರಾಗಬೇಕೆ?’ ಹೀಗೊಂದು ಪುಸ್ತಕದ ಪರಿಕಲ್ಪನೆಯಿದೆ. ಇದ್ರಲ್ಲಿ ನೀವು ಇಂಥದ್ದನ್ನೇ ಬರೆದುಕೊಡಬೇಕು ಸರ್’ ಅಂತ ರವಿಶಂಕರ್.ಕೆ.ಭಟ್ಟರಿಗೆ(ಅವ್ರು ಕೆಲವಷ್ಟು ವಿಷಯದಲ್ಲಿ ಭಯಂಕರ ಪರ್ಟಿಕ್ಯುಲರ್) ಕೇಳಿದೆ. ಒಪ್ಪಿಕೊಳ್ಳಲಿಕ್ಕೆ ಆ ಮನುಷ್ಯ ಟೈಂ ತಗೊಂಡ್ರು. ಬಟ್ ಒಪ್ಪಿಕೊಂಡರೆ ಬರೆದುಕೊಡ್ತಾರೆ ಅಂತ ಭರವಸೆ ಇತ್ತು. ನಿಜ ಹೇಳಬೇಕು ಅಂದ್ರೆ ನಾನು ಅವರಿಗೆ ಈ ಅಸೈನ್‌ಮೆಂಟ್ ಕೊಟ್ಟ ಕ್ಷಣದಿಂದ ಅವ್ರು ಬರೆಯುವ ಸ್ಥಿತಿಯಲ್ಲೇ ಇರಲಿಲ್ಲ. ನಾನು ಇದ್ನೆಲ್ಲ ಕಣ್ಣಾರೆ ನೋಡ್ತಾ ಇದ್ದಿದ್ರಿಂದ ಅವ್ರಿಗೆ ಕೊಟ್ಟ ಡೆಡ್‌ಲೈನ್‌ನ ಚೂರು, ಚೂರೇ ವಿಸ್ತರಣೆ ಮಾಡ್ತಾ ಹೋದೆ. ಕೊನೆಗ್ಯಾಕೊ ಇದು ಆಗಿಹೋಗುವ ಕೆಲಸ ಅಲ್ಲ ಅನ್ನಿಸ್ತು. ’ಸರ್ ಇಂತಿಷ್ಟು ದಿನದಲ್ಲಿ ಬೇಕೆ ಬೇಕು’ ಅಂದೆ. ೬ ದಿನ ನಿರಂತರವಾಗಿ ಬರೆದಿದಾರೆ. ಅದು ಸಖತ್ ಇಂಟರೆಸ್ಟಿಂಗ್. ಅವರ ಆಫೀಸಿನ ಪಾಳಿ ಮುಗಿಯುವುದು ರಾತ್ರಿ ೧.೩೦. ಅದರ ನಂತರ ಬೆಳಗಿನ ಜಾವ ೪ ಗಂಟೆವರೆಗೆ ಆಫೀಸಿನಲ್ಲಿಯೇ ಕುಳಿತು, ದಿನ ಬರೆದಿದ್ದನ್ನು ನನಗೆ ಮೇಲ್ ಮಾಡಿ ಹೋಗ್ತಿದ್ರು. ಹೀಗೆ ೬ ದಿನ ಮಾಡಿದ್ದಾರೆ. ಜೊತೆಗೆ ಪುಸ್ತಕವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಾಕಷ್ಟು ಸಲಹೆ, ಸೂಚನೆ ಕೊಟ್ಟಿದ್ದಾರೆ. ಇಷ್ಟಲ್ಲದೆ ಪೂರ್ತಿ ಪುಸ್ತಕದ ಕೆಲಸ ಮುಗಿದ ಮೇಲೆ ಎಲ್ಲ ಲೇಖನಗಳನ್ನು ಒಮ್ಮೆ ಕಣ್ಣಾಡಿಸಿ ಸಣ್ಣ, ಪುಟ್ಟ ತಪ್ಪುಗಳನ್ನು ಸರಿಪಡಿಸುವಲ್ಲಿಯೂ ಅವರ ಕೈವಾಡವಿದೆ. ಈ ಪ್ರೀತಿಗೆ ಏನು ಹೇಳೋಣ ಅಥವಾ ಏನು ಕೊಡೋಣ ಅಲ್ವಾ?
ರುದ್ರಣ್ಣ ಹರ್ತಿಕೋಟೆ ಅವರದ್ದು ಆಲ್‌ಮೋಸ್ಟ್ ಇದೇ ರೀತಿ ಕಥೆ. ಮನೆಯಲ್ಲಿ ಯಾರಿಗೋ ಅನಾರೋಗ್ಯ, ಆಸ್ಪತ್ರೆ ಓಡಾಟದ ನಡುವೆ ’ವಿನಾಯಕ ಕ್ಷಮೆ ಇರಲಿ. ತಡವಾಗಿ ಹೋಯ್ತು’ ಎನ್ನುತ್ತಲೇ ಲೇಖನ ಕೊಟ್ಟವರು. ’ಸರ್ ನೀವು ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ನಾನಿನ್ನು ಹುಟ್ಟೇ ಇರಲಿಲ್ಲ. ಅಷ್ಟು ದೊಡ್ಡ ಮಾತು ಯಾಕೆ ಸರ್’ ಅಂದೆ. ಅಷ್ಟಾಗಿಯೂ, ’ಇಲ್ಲ ಸರ್ ಇದಕ್ಕೆ ಇನ್ನೊಂದಷ್ಟು ಸೇರಿಸಿದ್ರೆ ಚೆನ್ನಾಗಿತ್ತು’ ಅಂತ ಮತ್ತೆ ಶಿಕ್ಷೆ ಕೊಟ್ಟೆ! ಅದನ್ನೂ ತೀರ ಖುಷಿಯಿಂದಲೇ ಪೂರೈಸಿಕೊಟ್ಟರು.
ರಶ್ಮಿ ಕೂಡ ಅದೇ ಥರ. ಲೇಖನದ ಬರೆದಿದ್ದರ ಜೊತೆಗೆ ಇಡೀ ಪುಸ್ತಕವನ್ನು ೩ ಸಲ ನೋಡಿ ಒಂದಷ್ಟು ತಪ್ಪು ಹೆಕ್ಕಿ ಕೊಟ್ಟರು. ಬೆಳಗಿನ ಜಾವ ಎದ್ದು ಹೋಗಿ ಮುಖಪುಟ ಚಿತ್ರ ಕ್ಲಿಕ್ಕಿಸಿಕೊಂಡ ಬಂದ ಸೋಮಣ್ಣ, ಸುರೇಶ್ ಸರ್, ಚಂದ್ರ ಗಂಗೊಳ್ಳಿ….ಎಲ್ಲರೂ ಅದೇ ಥರ. ಹಾಗೆ ನೋಡಿದ್ರೆ ಇಡೀ ಈ ಟೀಂನಲ್ಲಿ ನಾನು ಮತ್ತು ರಶ್ಮಿ ಇಬ್ಬರೇ ತುಂಬ ಚಿಕ್ಕವರು. ಅದೇ ಕಾರಣಕ್ಕೆ ನಾವು ಪುಸ್ತಕದಲ್ಲಿ ಮಾರ್ಗದರ್ಶನ, ಉಪದೇಶದ ಸಾಹಸ ಮಾಡ್ಲಿಲ್ಲ! ಜಸ್ಟ್ ವಿಷಯ ಏನಿದೆ ಅಷ್ಟನ್ನು ಹೇಳಿ ಮುಗಿಸಿದ್ದೇವೆ.
ಪುಸ್ತಕದ ಸಾಹಸಕ್ಕೆ ಬಿದ್ದಿದ್ದು, ಮಿಥಿಲಾ ಪ್ರಕಾಶನ ಮಾಡಿದ್ದು ಎರಡೂ ದುಡ್ಡಿಗೋ, ಹೆಸರಿಗೋ ಅಲ್ಲ. ಪುಸ್ತಕವನ್ನು ನಾನೇ ಪ್ರಕಟಿಸ್ತೀನಿ ಅಂತ ಹೊರಟಾಗ್ಲೆ ನಾಗೇಶ್ ಹೆಗಡೆ ಬೇಡ ಎಂದಿದ್ದರು. ಮಣಿಕಾಂತ್, ನವೀನ್ ಇಬ್ಬರೂ ಇದ್ರಲ್ಲಿನ ಕಷ್ಟಗಳನ್ನು ಹೇಳಿದ್ರು. ಮಜ ಅಂದ್ರೆ ಮೊದಲನೆ ಪುಸ್ತಕದಲ್ಲೂ ನಾನು ಬರೆದ ಲೇಖಕರಿಗೆ ೨ ಪುಸ್ತಕದ ಹೊರತಾಗಿ ಏನೂ ನೀಡಿಲ್ಲ. ಏನು ಕೊಡಬಹುದು ಅಂತ ಮೊದಲನೇ ಪುಸ್ತಕದ ಬಿಡುಗಡೆ ಹೊತ್ತಿಗೆ ನಾನು, ಶ್ರೀನಿಧಿ ಟಿ.ಜಿ. ಇಬ್ಬರೂ ಭಯಂಕರ ಚರ್ಚೆ ಮಾಡಿ, ಏನು ಕೊಟ್ಟರೂ ಚಿಕ್ಕದಾಗುತ್ತೆ, ಏನೂ ಕೊಡೋದೇ ಬೇಡ ಅಂತ ಡಿಸೈಡ್ ಮಾಡಿದ್ವಿ! ಕನಿಷ್ಠ ಒಂದು ಹತ್ತು ಪುಸ್ತಕವನ್ನಾದ್ರು ಉಡುಗೊರೆಯಾಗಿ ಕೊಡಬಹುದಿತ್ತೇನೋ, ಅದನ್ನು ತಲುಪಿಸೋಕೂ ಸೋಮಾರಿತನ ಮಾಡಿದೆ. ಬಟ್ ಈ ಸಲ ಖಂಡಿತ ಆ ಕೆಲಸ ಮಾಡುವೆ.
ಪುಸ್ತಕ ಮಾಡುವುದರ ಜೊತೆಗೆ ಅದನ್ನು ತಲುಪಿಸುವುದು ಮಹತ್ವದ್ದು. ಆಗ ಮಾತ್ರ ಅದಕ್ಕೆ ಹಾಕಿದ ಶ್ರಮ ಸಾರ್ಥಕ. ಸಾವಿರ ಕಾಪಿ ಪ್ರಿಂಟ್ ಹಾಕಿ ಅದ್ರಲ್ಲಿ ೩೦೦ ಲೈಬ್ರರಿಗೆ ಹಾಕಿ, ಮತ್ತೆ ೨೦೦ ಪರಿಚಯಸ್ಥರಿಗೆಲ್ಲ ಕೊಟ್ಟು ಉಳಿದ ೫೦೦ ಪುಸ್ತಕವನ್ನು ಪಂಚವಾರ್ಷಿಕ ಯೋಜನೆಯಲ್ಲಿ ಖಾಲಿ ಮಾಡಿದ್ರೆ, ನಮ್ಮ ಶ್ರಮಕ್ಕೆ ಅರ್ಥವಿರಲ್ಲ. ಹಾಗಾಗಿಯೇ ನಾನು ಬೇರೆ ಪ್ರಕಾಶನಕ್ಕೆ ಪುಸ್ತಕ ಕೊಡುವ ಸಾಹಸ ಮಾಡಲಿಲ್ಲ. ’ನೀವೂ ಪತ್ರಕರ್ತರಾಗಬೇಕೆ?’ ಪುಸ್ತಕಕ್ಕೆ ಆಲ್‌ಮೋಸ್ಟ್ ೩ ತಿಂಗಳು ಶ್ರಮ ಹಾಕಿದೀನಿ. ಪ್ಲಸ್ ಉಳಿದ ಲೇಖಕರ ಶ್ರಮವಿದೆ. ನಾನು ಮೊದಲನೆ ಪುಸ್ತಕದಲ್ಲಿ ಹೇಳಿದಂತೆ ಕನಿಷ್ಠ ೫೦೦೦ ಜನರನ್ನು ಈ ಪುಸ್ತಕ ತಲುಪಿದ್ರೆ ನಮ್ಮ ಶ್ರಮ ಸಾರ್ಥಕ. ಮಾರ್ಕೆಟಿಂಗ್‌ಗೆ ಇನ್ನೊಂಚೂರು ಎಫರ್ಟ್ ಹಾಕಿದ್ರೆ ’ಪತ್ರಿಕೆಗೆ ಬರೆಯೋದು ಹೇಗೆ?’ ಇಷ್ಟೊತ್ತಿಗೆ ಎರಡನೇ ಮುದ್ರಣವನ್ನು ಖಾಲಿ ಮಾಡಬಹುದಿತ್ತು. ಆದ್ರೆ ನಾನೇ ಸೀರಿಯಲ್, ಶಾರ್ಟ್ ಮೂವಿ ಮತ್ತೊಂದು ಹೊಸ ಪುಸ್ತಕ ಅಂತ ಒಂದಷ್ಟು ತಲೆ ಮೇಲೆ ಹಾಕಿಕೊಂಡು ಆ ಪುಸ್ತಕದ ಮಾರ್ಕೆಟಿಂಗ್‌ನಲ್ಲಿ ಸೋಮಾರಿಯಾದೆ. ನವಕರ್ನಾಟಕ, ಸಪ್ನ, ಬಿಬಿಸಿಯಲ್ಲಿ ಪುಸ್ತಕ ಇವತ್ತಿಗೂ ಚೆನ್ನಾಗಿ ಮಾರಾಟವಾಗ್ತಿದೆ. ಅದಕ್ಕೆ ಸ್ಟಿಕ್‌ಆನ್ ಆಗಿರುವೆ!
ಪುಸ್ತಕ ಉದ್ಯಮ ಖಂಡಿತ ನಷ್ಟದ್ದಲ್ಲ. ಮೊದಲನೆ ಆವೃತ್ತಿ ಸ್ವಲ್ಪ ಕಷ್ಟ. ಖರ್ಚು ಜಾಸ್ತಿ. ಒಂದಷ್ಟು ಉಚಿತವಾಗಿ ಕೊಡಲೇ ಬೇಕಾಗುತ್ತೆ. ಜೊತೆಗೆ ಪುಸ್ತಕದಂಗಡಿಗಳು ದುಡ್ಡು ಕೊಡುವುದು ಸಖತ್ ಲೇಟ್ ಆಗುತ್ತೆ. ಬಟ್ ದ್ವೀತಿಯ ಆವೃತ್ತಿಯಿಂದ ತಕ್ಕಮಟ್ಟಿನ ಲಾಭ ಸಿಗುತ್ತೆ. ಹೀಗಾಗಿ ಮೊಸಳೆ ಕಣ್ಣೀರಿನ ಸೀನ್‌ಗಳು, ಯಾವುದೋ ಗ್ರ್ಯಾಂಟ್‌ಗಳಿಗೆ ಲಾಭಿಗಳೆಲ್ಲ ಖಂಡಿತ ಇಲ್ಲ!
ಒನ್ಸ್ ಅಗೈನ್ ಮತ್ತೆ ಹೇಳಲಿಕ್ಕೆ ಹೊರಟ್ಟಿದ್ದು ಅದನ್ನೇ. ಒಬ್ಬ ಶ್ರೀವತ್ಸ ಜೋಶಿಗೆ, ರೋಹಿತ್‌ಗೆ, ಟಿ.ಜಿ, ಡಿ.ಎಸ್.ಗೆ, ಭಟ್ಟರಿಗೆ…ಹಾಗೂ ಬರೆದ ಎಲ್ಲ ಲೇಖಕರಿಗೂ ’೫೦೦೦ ರೂ. ಗೌರವ ಧನ ಕೊಡ್ತೀನಿ, ಒಂದಿಪ್ಪತ್ತು ಪುಸ್ತಕ ಕೊಡ್ತೀನಿ’ ಅಂದ್ರು, ಅವರಿಗದು ದೊಡ್ಡ ಮೊತ್ತವಲ್ಲ ಹಾಗೂ ವಿಷಯವೂ ಅಲ್ಲ. ನಂಗೆ ಏನೋ ಒಂದು ಕೊಟ್ಟಿದ್ದೀನಿ ಎಂಬ ಸಮಾಧಾನ ಆಗಬಹುದು ಅಷ್ಟೆ. ಹೀಗಾಗಿ ಖಂಡಿತ ಅವರ ಪ್ರೀತಿಗೆ ಧನ್ಯವಾದಕ್ಕಿಂತ ದೊಡ್ಡ ಪದ ನನ್ನ ಬಳಿಯಿಲ್ಲ. ಕೊನೆಯದಾಗಿ ನನಗನ್ನಿಸಿದ್ದು ’ನಾವು ಒಳ್ಳೆಯವರಾಗಿದ್ರೆ, ನಮಗೂ ಒಳ್ಳೆಯವರೇ ಸಿಗ್ತಾರೆ…’
’ನೀವೂ ಪತ್ರಕರ್ತರಾಗಬೇಕೆ?’ ಖಂಡಿತ ತುಂಬಾ ಸುಂದರವಾಗಿ ಮೂಡಿಬಂದಿದೆ. ಅವರ ಬರಹಕ್ಕೆ ನ್ಯಾಯ ಒದಗಿಸುವಂತೆ ಚೆಂದವಾದ ವಿನ್ಯಾಸ, ಮುದ್ರಣದ ಪ್ರಯತ್ನವನ್ನೂ ಮಾಡಿದ್ದೇನೆ ಎಂಬ ನಂಬಿಕೆ ನನ್ನದು. ೨೧ ಶನಿವಾರ ಸಿಗೋಣ. ಪುಸ್ತಕದ ಜೊತೆ ಇನ್ನೊಂದಷ್ಟು ಮಾತಾಡೋಣ ಅಲ್ವಾ?

Read Full Post »