ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದಲ್ಲಿನ ಮೂಢನಂಬಿಕೆಯನ್ನು ತೊಡೆದು ಹಾಕುವ ಮೂಲಕ ಹೊಸದೊಂದು ಕ್ರಾಂತಿ ಮಾಡಲು ಹೊರಟಿದ್ದು ಈಗ ಹಳೆಸುದ್ದಿಯಾಯ್ತು. ಜ್ಯೋತಿಷ್ಯದಿಂದ ಆರಂಭಿಸಿ ಪೂಜೆ ಪುನಸ್ಕಾರಕ್ಕೂ ಸರ್ಕಾರಿ ಪರ್ಮಿಟ್ ಬೇಕು ಎಂಬ ಮುಖ್ಯಮಂತ್ರಿಗಳ ನಿಲುವುವಿಗೆ ಈಗಾಗಲೇ ಪರ-ವಿರೋಧದ ಮಾತುಗಳು ಕೇಳಿಬಂದಿತ್ತು. ಮೂಢನಂಬಿಕೆ ಪ್ರತಿಬಂಧಕ ವಿದೇಯಕದ ಕರಡು ಸಿದ್ಧವಾಗಿದೆ. ಮೂಢ ನಂಬಿಕೆಗಳಿಗೆ ಕಡಿವಾಣ ಖಂಡಿತ ಸ್ವಾಗತಾರ್ಹ. ಆದರೆ ಯಾವುದು ಮೂಢ ಎಂಬುದು ಇಲ್ಲಿ ಬಹುಮುಖ್ಯ ಪ್ರಶ್ನೆ.
ಸ್ವಾಮೀಜಿಗಳ ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಜ್ಯೋತಿಷ್ಯ, ಪೂಜಾ ಸಾಮಾಗ್ರಿಗಳ ಮಾರಾಟ ಇವೆಲ್ಲವೂ ಮೂಢತೆಯ ಪಟ್ಟಿಯಲ್ಲಿ ಸೇರುವ ಅಪಾಯವಿದೆ. ಕಪಟ ಜ್ಯೋತಿಷ್ಯಗಳಿಂದ ಇವತ್ತು ಇಡೀ ಜ್ಯೋತಿಷ್ಯ ಜಗತ್ತು ಒಂದು ರೀತಿ ಸುಳ್ಳಿನ ಕಂತೆ ಅನ್ನಿಸಿರುವುದು ನಿಜ. ಹಾಗಂತ ಜ್ಯೋತಿಷ್ಯವನ್ನು ಮೂಢತೆಯ ಪಟ್ಟಿಗೆ ಸೇರಿಸುವುದು ತೀರಾ ಹಾಸ್ಯಾಸ್ಪದವಾಗುತ್ತದೆ. ಯಾಕೆಂದರೆ ಜ್ಯೋತಿಷ್ಯದಲ್ಲಿ ಪದವಿ ನೀಡುವ ವ್ಯವಸ್ಥೆ ಇದೆ. ಅರ್ಥಾತ್ ಎಂಜಿನಿಯರಿಂಗ್, ವೈದ್ಯಕೀಯ ಪದವಿಗಳಿದ್ದಂತೆ ಜ್ಯೋತಿಷ್ಯ ಎಂಬುದು ಕೂಡ ಒಂದು ವ್ಯವಸ್ಥಿತ ಕಲಿಕೆಯ ವಿಚಾರ.
ನಾವೇನು ಅಂಕಗಣಿತದ ಸೂತ್ರಗಳನ್ನು ನೋಡುತ್ತೇವೋ ಅಂಥ ಹತ್ತಾರು ಸೂತ್ರಗಳ ಸಮ್ಮಿಲನವೇ ಜ್ಯೋತಿಷ್ಯ ಅನ್ನಿಸಿಕೊಳ್ಳುತ್ತದೆ. ಗ್ರಹ, ನಕ್ಷತ್ರ, ಪಂಚಾಂಗ, ತಿಥಿ, ವಾರ, ರಾಶಿ…ಹೀಗೆ ಹಲವಾರು ಅಂಶಗಳನ್ನು ಜ್ಯೋತಿಷ್ಯ ಜಗತ್ತು ಹೊಂದಿದೆ. ನಾವೇನು ಇವತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಮಾತನಾಡುತ್ತೇವೋ, ಅಂಥ ಎಲ್ಲ ಸೂರ್ಯ-ಚಂದ್ರ, ನಕ್ಷತ್ರಗಳ ಕುರಿತು ಜ್ಯೋತಿಷ್ಯ ಜಗತ್ತು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಮಾತನಾಡಿದೆ. ಜ್ಯೋತಿಷ್ಯದಲ್ಲಿ ಗ್ರಹಗಣಿತ ಎಂಬ ಒಂದು ವಿಭಾಗವಿದೆ. ಗ್ರಹಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ಲೆಕ್ಕಿಸಿ ಅದರ ಆಧಾರದ ಮೇಲೆ ಫಲ ಹೇಳುವುದು. ಇದನ್ನು ನೋಡಿದರೆ ಜ್ಯೋತಿಷ್ಯದ ಹಿಂದೆ ನಿಂತಿರುವ ಗಣಿತ ಅರ್ಥವಾಗುತ್ತದೆ. ಜ್ಯೋತಿಷ್ಯದಲ್ಲೂ ಹಲವು ವಿಧಗಳಿವೆ. ಹಸ್ತ ಸಾಮುದ್ರಿಕದಲ್ಲಿ ಲೆಕ್ಕಾಚಾರವಿಲ್ಲದೇ ಹಸ್ತ ನೋಡಿ ಹೇಳುತ್ತಾರೆ. ಅದೊಂದನ್ನು ಇಟ್ಟುಕೊಂಡು ಇಡೀ ಜ್ಯೋತಿಷ್ಯ ಜಗತ್ತು ಮೂಢ ಎಂದು ಪರಿಗಣಿಸಲು ಹೊರಟರೆ, ವಿಜ್ಞಾನವೂ ಕೂಡ ಮೂಢವೇ.ಬಹುಶಃ ಈ ಹೇಳಿಕೆ ನಿಮಗೆ ಹುಚ್ಚುತನ ಎನ್ನಿಸಬಹುದು. ಆದರೆ ಇಡೀ ವೈಜ್ಞಾನಿಕ ಜಗತ್ತಿನಲ್ಲಿ ಇರುವಷ್ಟು ಪರಮ ಮೂಢತೆ ನಿಮಗೆ ಮತ್ತೆಲ್ಲೂ ಸಿಗುವುದಿಲ್ಲ.
ನಾವು ಪರಮಾಣು ಆವಿಷ್ಕಾರವಾಗುವರೆಗೂ ಅಣುವೇ ಒಂದು ವಸ್ತುವಿನ ಅಂತಿಮ ರೂಪ ಎಂದು ನಂಬಿಕೊಂಡು ಕುಳಿತಿದ್ದೆವು. ಅಣುವಿನ ಕುರಿತು ಸಹಸ್ರಾರು ವಿಜ್ಞಾನಿಗಳು ಲಕ್ಷಾಂತರ ಪ್ರಮೇಯಗಳನ್ನು(ಥೇರಂ)ಮಂಡಿಸಿದರು. ಆದರೆ ಯಾವತ್ತೂ ಅಣುವನ್ನು ವಿಭಜಿಸಿ ಪರಮಾಣು ಸೃಷ್ಟಿಸಬಹುದು ಎಂಬುದು ನಿಜವಾಯಿತೋ, ಅಂದು ಅಣು ಆಧಾರಿತ ಅನೇಕ ಸಿದ್ದಾಂತಗಳು ಬಿದ್ದುಹೋದವು. ಇವತ್ತು ಪರಮಾಣುವನ್ನು ವಿಭಜಿಸಿ ಎಲೆಕ್ಟ್ರಾನ್‌ಗಳ ಜಗತ್ತಿನಲ್ಲಿದ್ದೇವೆ. ಅರ್ಥಾತ್ ನಾವು ಎಷ್ಟೋ ಶತಮಾನದವರೆಗೂ ಅಣುವೇ ಒಂದು ವಸ್ತುವಿನ ಅಂತಿಮ ರೂಪ ಎಂಬ ಮೂಢತೆಯಲ್ಲಿ ಬದುಕಿದ್ದೆವು ಅಲ್ವಾ?
ನೀವು ಗಣಿತದ ಪ್ರಪಂಚಕ್ಕೆ ಹೊಕ್ಕರೆ ಇಂಥ ಸಾವಿರಾರು ಸಿದ್ಧಾಂತಗಳು ಸಿಗುತ್ತವೆ. ಒಬ್ಬ ವಿಜ್ಞಾನಿ, ಗಣಿತಜ್ಞ ಒಂದು ಸಿದ್ಧಾಂತವನ್ನು ಮಂಡಿಸಿರುತ್ತಾನೆ. ಅದನ್ನು ೫೦-೬೦ ವರ್ಷದವರೆಗೂ ವಿಜ್ಞಾನ ಜಗತ್ತು ಸತ್ಯ ಎಂದು ನಂಬಿಕೊಂಡಿರುತ್ತದೆ. ಆದರೆ ಅದೇ ಸೂತ್ರದ ಮೇಲೆ ಧೀರ್ಘ ಅಧ್ಯಯನ ಮಾಡಿದ ಮತ್ತೊಬ್ಬ, ಅದೇ ಸಿದ್ಧಾಂತವನ್ನು ಸುಳ್ಳು ಎಂದು ಸಾಬೀತುಪಡಿಸುತ್ತಾನೆ. ಇದನ್ನು ವಿಜ್ಞಾನ ಜಗತ್ತು ಯಾವತ್ತೂ ಮೂಢನಂಬಿಕೆ ಎಂದು ಒಪ್ಪಿಕೊಳ್ಳುವುದಿಲ್ಲ. ಅದು ಆವತ್ತಿನ ಕಾಲಕ್ಕಿದ್ದ ಸೂತ್ರಗಳು, ಸಿದ್ಧಾಂತಗಳ ಆಧಾರದ ಮೇಲೆ ಸತ್ಯವಾಗಿತ್ತು ಎಂಬುದನ್ನೇ ವಾದಿಸುತ್ತದೆ.
ಯಸ್, ನಾನೀಗ ಹೇಳಲು ಹೊರಟ್ಟಿದ್ದು ಅದೇ ವಿಚಾರವನ್ನು. ಜ್ಯೋತಿಷ್ಯ ಅನ್ನುವುದು ಕೂಡ ಆವತ್ತಿನ ಗ್ರಹಗತಿಗೆ, ಆವತ್ತಿನ ಕಾಲಮಾನಕ್ಕೆ ಸರಿಯಾಗಿಯೇ ಇತ್ತು! ಜ್ಯೋತಿಷ್ಯ ಎಂದರೆ ಕವಡೆ ಹಾಕಿ, ರುದ್ರಾಕ್ಷಿ ಹಿಡಿದು ಟೀವಿ ಮುಂದೆ ಬೊಗಳೆ ಬಿಡುವ ಒಂದು ವರ್ಗವೆಂದು ನಿವ್ಯಾಕೆ ಪರಿಗಣಿಸುವಿರಿ? ಆ ಜಗತ್ತು ತುಂಬಾ ವಿಶಾಲವಾಗಿದೆ. ಆರ್ಯಭಟ, ಭಾಸ್ಕರಾಚಾರ್ಯರಂಥ ಶ್ರೇಷ್ಠರು ರಚಿಸಿದ ಕೃತಿಗಳು ಅದರ ಹಿಂದಿವೆ. ನಂಬಿಕೆ, ಮೂಢನಂಬಿಕೆ ಎಂಬುದನ್ನು ವಿವರಿಸುವುದೇ ಬಲು ಸವಾಲಿನ ಕೆಲಸ. ನನಗೆ ಸತ್ಯ ಎಂದು ಕಂಡಿದ್ದು ಇನ್ನೊಬ್ಬನಿಗೆ ಸುಳ್ಳಾಗಿ ಕಾಣಿಸುತ್ತದೆ. ಅಂತಿಮವಾಗಿ ಸಾಮಾಜಿಕವಾಗಿ ಸತ್ಯ ಅನ್ನಿಸುವುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ. ದೇವರು, ಧರ್ಮ, ಆಧ್ಯಾತ್ಮದ ವಿಚಾರಗಳು ಕೂಡ ಹಾಗೆ. ಇವೆಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರಗಳು. ನಿಮ್ಮ ಈಶ್ವರ ಹೀಗೆ ಇದ್ದಾನೆ ಎಂಬುದನ್ನು ನಿರೂಪಿಸಿ, ಗಣಪತಿಗೆ ಸೊಂಡಿಲು ಇದೆ ಎಂದು ನೀವು ಹೇಗೆ ಸಾಬೀತುಪಡಿಸುವಿರಿ ಎಂದರೆ ಬಹುಶಃ ಉತ್ತರ ಸಿಗಲಾರದು. ಹಾಗಂದ ಮಾತ್ರಕ್ಕೆ ಕೋಟ್ಯಂತರ ಜೀವಿಗಳು ನಂಬಿಕೆಯನ್ನು ಮೂಢ ಎಂದು ತೆಗೆದು ಹಾಕಲು ಆಗುವುದಿಲ್ಲ.
ಸಾರಾಯಿ ಕುಡಿದರೆ ಆರೋಗ್ಯಕ್ಕೆ ಹಾನಿಕರ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೂ ಅದನ್ನು ಸೇವಿಸುವವರು ಅನೇಕರಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಬೀಡಿ, ಸಿಗರೇಟು ಮಾರಾಟಕ್ಕೆ ನಿಬಂಧನೆ ಇರಬಹುದು, ಆದರೆ ಸೇದಲು ಯಾವುದೇ ನಿಬಂಧನೆ ಇಲ್ಲ. ದೇವರು, ಧರ್ಮದ ವಿಚಾರದಲ್ಲಿ ಕೆಲವರಿಗೆ ಮೋಸ ಆಗಬಹುದು. ಇದನ್ನು ಬಳಸಿಕೊಂಡು ಮೋಸ ಮಾಡುವವರು ಇರಬಹುದು. ಹಾಗಂತ ಇಡೀ ವ್ಯವಸ್ಥೆಯನ್ನೇ ತೆಗೆದು ಹಾಕುವುದು ಥರವಲ್ಲ.
ಖಂಡಿತ ಒಂದಷ್ಟು ಮೂಢತೆ ಸಮಾಜದಿಂದ ದೂರವಾಗಬೇಕು. ದೇವರ ಹೆಸರಿನಲ್ಲಿ ಅಮಾಯಕ ಜೀವಿಗಳನ್ನು ಬಲಿಪಶು ಮಾಡುವವರಿಗೆ ಶಿಕ್ಷೆಯಾಗಬೇಕು. ಒಂದಷ್ಟು ವಿಚಾರದಲ್ಲಿ ಜನ ಜಾಗೃತರಾಗಬೇಕು. ಆಡಳಿತ ಯಂತ್ರದಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಹಾಗಂತ ಎಲ್ಲ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ತರುವ ಯತ್ನವಾಗಬಾರದು. ಪೂಜೆ-ಪುನಸ್ಕಾರಗಳಿಗೆ ಕಡಿವಾಣ ಹಾಕುವ ಹುನ್ನಾರವಾಗಬಾರದು. ಯಾಕೆಂದರೆ ಆಗ ಜನ ಜಾಗೃತರಾಗುವ ಬದಲು ಮಸೀದಿ, ಚರ್ಚುಗಳನ್ನು ಈ ಇಲಾಖೆಯ ಅಧೀನಕ್ಕೆ ತನ್ನಿ ಎಂಬ ಗಲಾಟೆಯೇ ದೊಡ್ಡದಾಗುತ್ತದೆ!
ಸಿದ್ದರಾಮಯ್ಯನವರಿಗೆ ಇನ್ನೊಂದು ವಿಚಾರ ಗೊತ್ತಿರಲಿಕ್ಕಿಲ್ಲ. ಇವತ್ತು ಧಾರ್ಮಿಕ ಕೇಂದ್ರವೇ ಇಲ್ಲದ ಜಾಗ ಪ್ರಪಂಚದ ಯಾವ ಮೂಲೆಯಲ್ಲಿ ಹುಡುಕಿದರೂ ಸಿಗುವುದಿಲ್ಲ. ಮಸೀದಿಯಾಗಲೀ, ಚರ್ಚ್ ಆಗಲಿ ಅಥವ ಅವರ ನಂಬಿಕೆಯ ಕೇಂದ್ರವಾಗಲಿ ಪ್ರತಿ ದೇಶದ ಪ್ರತಿ ಹಳ್ಳಿಯಲ್ಲೂ ಇದ್ದೇ ಇದೆ. ವಾರಕ್ಕೊಂದು ದಿನವಾದರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ. ಕೆಲ ರಾಷ್ಟ್ರಗಳಲ್ಲಿ ಈ ಸಾಮೂಹಿಕ ಪ್ರಾರ್ಥನೆ ಕೂಡ ಕಡ್ಡಾಯ ಎಂಬಂತಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲೇ ಬೇಕಾದವರು ಮಾತ್ರ ದೇವರನ್ನು ನಂಬಬಹುದು. ಬೇಡವಾದವರು ದೇವರನ್ನು ನಿಂದಿಸಬಹುದು. ನಿಂದನೆ ಕೃತಿ ಬರೆಯಬಹುದು. ದೇವತೆಗಳನ್ನು ಬೆತ್ತಲೆ ಮಾಡಿ ಚಿತ್ರ ಬಿಡಿಸಬಹುದು!
ಅಯ್ಯೊ, ಎಲ್ಲಕ್ಕಿಂತ ಮುಖ್ಯವಾಗಿ ಹೇಳಲು ಮರೆತ್ತಿದ್ದೆ. ರಾಜಕಾರಣಕ್ಕಿಂತ ದೊಡ್ಡ ಮೂಢನಂಬಿಕೆ ಇನ್ಯ್ನಾವುದಿದೆ ಹೇಳಿ! ಜನರ ನಂಬಿಕೆಯಂತೆ ಜನಪ್ರತಿನಿಧಿಗಳು ಇದ್ದಿದ್ದರೆ ಇವತ್ತು ನಮ್ಮ ದೇಶ ಎಷ್ಟೋ ಉತ್ಕೃಷ್ಟ ಸ್ಥಿತಿಯಲ್ಲಿ ಇರುತ್ತಿತ್ತು ಅಲ್ವಾ?!!!