ಆಕೆ ವಿಮಾನ ಓಡಿಸುತ್ತೇನೆ ಅಂತ ಹೊರಟಾಗ ಹಲವರು ಹಗುರವಾಗಿ ಮಾತನಾಡಿದ್ರು. ನಿನಗೇನು ಹುಚ್ಚು ಹಿಡಿದಿದೆಯಾ ಅಂತ ಬೈದಿದ್ದರು. ಅಯ್ಯೋ ಕೈಗಳಿಲ್ಲದ ನೀನು ಕಾಗದದ ವಿಮಾನವನ್ನುಕೂಡ ಮಾಡಿ ಹಾರಿಸಲು ಸಾಧ್ಯವಿಲ್ಲ ಅಂತ ಕೆಲವ್ರು ಹಿಯ್ಯಾಳಿಸಿದ್ದರು. ಇದೇ ಮಾತನ್ನು ಸವಾಲಾಗಿ ಸ್ವೀಕರಿಸಿದ ಆಕೆ ಕಾಲಿನಿಂದಲೇ ವಿಮಾನ ಹಾರಿಸುವ ಸಾಹಸ ಮಾಡುತ್ತಾಳೆ. ಕೈಗಳಿಲ್ಲದಿದ್ದರೂ ಕರಾಟೆಯಲ್ಲಿ ೨ ಬ್ಲ್ಯಾಕ್‌ಬೆಲ್ಟ್ ಗೆಲ್ಲುತ್ತಾಳೆ. ಕಾಲಿನಿಂದ ಕಾರಿನ ಸ್ಟೈರಿಂಗ್ ತಿರುಗಿಸುತ್ತಾಳೆ. ಬದುಕಿನಲ್ಲಿ ಅದಿಲ್ಲ, ಇದಿಲ್ಲ ಅಂತ ಸದಾ ಕೊರುಗವವರಿಗೆ ಈಕೆಯ ಬದುಕು ಸ್ಪೂರ್ತಿಯಾಗಬಹುದು…
ಎಷ್ಟೊ ಸಲ ಹಾಗೆ ಆಗುತ್ತೆ. ಅವಕಾಶ ಸಿಕ್ಕಾಗ ನಾವದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲ್ಲ. ಆದ್ರೆ ಸಿಗದ ಅವಕಾಶಕ್ಕಾಗಿ ಸದಾ ಹಾತೊರೆಯುತ್ತೇವೆ. ನಮ್ಮ ತಪ್ಪಿಗೆ ಬೇರೆಯವರನ್ನು ದೂಷಿಸುತ್ತೇವೆ. ಆದರೆ ಯಾರೂ ನಿರೀಕ್ಷಿಸಿರದ ಅವಕಾಶಗಳನ್ನ ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಂಡು ಸಾಧಿಸಿದವಳ ಕಥೆಯೊಂದು ಇಲ್ಲಿದೆ. ತನ್ನ ಕಾಲುಗಳಿಂದಲೇ ವಿಮಾನ ಓಡಿಸುವ ಆ ಹೆಣ್ಣುಮಗಳ ಹೆಸ್ರು ಜೆಸ್ಸಿಕ ಕಾಕ್ಸ್. ಮೂಲತಃ ಫಿಲಿಫೈನವಳಾದ ಈಕೆ, ಸಾಹಸಕ್ಕಾಗಿ ಕಾಲಿನಿಂದ ವಿಮಾನ ಓಡಿಸಲಿಲ್ಲ. ವಿಷ್ಯ ಅಂದ್ರೆ ಈಕೆಗೆ ಎರಡೂ ಕೈಗಳಿಲ್ಲ. ಆದ್ರೆ ವಿಮಾನ ಓಡಿಸುವ ಹಂಬಲ. ಆಗ ಈಕೆಗೆ ಕಂಡಿದ್ದು ತನ್ನ ಕಾಲುಗಳು!
ವಿಮಾನ ಹಾರಿಸುವುದು, ಪೈಲೆಟ್ ಆಗೋದು ಅಂದ್ರೆ ಖಂಡಿತಾ ಹುಡುಗಾಟಿಕೆಯ ಮಾತಲ್ಲ. ಪೈಲೆಟ್ ಆಗಬೇಕು ಅಂದ್ರೆ ಅದಕ್ಕೆ ಹಲವಾರು ನೀತಿ-ನಿಯಮಗಳಿವೆ. ಇಂತಿಷ್ಟು ಅಡಿ ಎತ್ತರವಿರಬೇಕು, ಇಷ್ಟು ತೂಕವಿರಬೇಕು, ಕೈಕಾಲುಗಳೆಲ್ಲ ಸರಿಯಾಗಿರಬೇಕು. ಉಸಿರಾಟದ ತೊಂದರೆ ಇರಬಾರದು. ಹೀಗೆ ಹತ್ತೆಂಟು ಬಗೆಯ ನಿಯಮಗಳು. ಅಂಥದ್ರಲ್ಲಿ ಕೈಗಳಿಲ್ಲದ ಹುಡುಗಿ ವಿಮಾನ ಓಡಿಸಲು ಸಾಧ್ಯವಾ…?
ಜೆಸ್ಸಿಕ ವಿಮಾನ ಓಡಿಸುತ್ತೇನೆ ಅಂತ ಹೊರಟಾಗ ಹಲವರು ಹಗುರವಾಗಿ ಮಾತನಾಡಿದ್ರು. ನಿನಗೇನು ಹುಚ್ಚು ಹಿಡಿದಿದೆಯಾ ಅಂತ ಬೈದರು. ಅಯ್ಯೋ ಕೈಗಳಿಲ್ಲದ ನೀನು ಪೇಪರ್ ವಿಮಾನವನ್ನು ಕೂಡ ಮಾಡಿ ಹಾರಿಸಲು ಸಾಧ್ಯವಿಲ್ಲ ಅಂತ ಕೆಲವ್ರು ಹಿಯ್ಯಾಳಿಸಿದ್ರು…ಆಗೆಲ್ಲ ಜೆಸ್ಸಿಕ ಕಣ್ಣೀರು ಹಾಕಿದ್ದಳು. ತನ್ನ ವಿಮಾನ ಹಾರಾಟ ಕೇವಲ ಕನಸು ಅಂದುಕೊಂಡಿದ್ದಳು. ಆಗಸದಲ್ಲಿ ವಿಮಾನದೊಂದಿಗೆ ಸರ್ಕಸ್, ಸಾಹಸ ಇವೆಲ್ಲ ಅಂದುಕೊಂಡಷ್ಟು ಸುಲಭದ ಮಾತಲ್ಲ. ಡ್ರೈವಿಂಗ್ ಲೈಸೆನ್ಸ್ ಪಡೆದಷ್ಟು ಸುಲಭವಾಗಿ ವಿಮಾನ ಚಾಲನೆ ಪರವಾನಗಿ ಪಡೆಯಲು ಸಾಧ್ಯವೇ ಇಲ್ಲ. ನಮ್ಮ ಭಾರತದಲ್ಲಿ ಅವ್ರಿಗೆ ದುಡ್ಡು ಕೊಟ್ಟರೆ ಲೈಸೆನ್ಸ್ ಸಿಗಹಬಹುದೇನೋ! ಆದ್ರೆ ಅಮೆರಿಕದಂಥ ರಾಷ್ಟ್ರದಲ್ಲಿ ಇದು ಸಾಧ್ಯವೇ ಇಲ್ಲದ ಮಾತಾಗಿತ್ತು.
ಕೈಗಳಿಲ್ಲದ ಹುಡುಗಿ ವಿಮಾನ ಓಡಿಸಲು ಹೊರಟರೆ ಸಹಜವಾಗಿಯೇ ಒಂದು ಭಯ ಮೂಡುತ್ತೆ. ಆದ್ರೆ ಇವೆಲ್ಲವನ್ನೂ ಮೀರಿ ಜೆಸ್ಸಿಕ ವಿಮಾನ ಹಾರಿಸಿಯೇ ಹಾರಿಸುತ್ತೇನೆ ಅಂತ ಹಠಕ್ಕೆ ಬೀಳುತ್ತಾಳೆ. ‘ವಿಮಾನ ಕಲಿಸಿ ಎಂದು ಜೆಸ್ಸಿಕ ನಮ್ಮ ಬಳಿ ಬಂದಾಗ ನಮಗೆ ವಿಚಿತ್ರ ಅನ್ನಿಸಿತ್ತು. ಯಾಕಂದ್ರೆ ಆಕೆಗೆ ೨ ಕೈಗಳು ಇರಲಿಲ್ಲ. ಹೀಗಾಗಿ ಆಕೆಯ ಮನವೊಲಿಸಲು ಪ್ರಯತ್ನಿಸಿದೆವು. ಆದರೆ ಮತ್ತೆ ಮರುದಿನ ಅವಳು ನಮ್ಮ ಬಳಿ ಬಂದಳು. ವಿಮಾನ ಕಲಿಯಲೇಬೇಕು ಎಂದು ಹಠ ಹಿಡಿದಳು. ಹೀಗಾಗಿ ವಿಮಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿ ತರಬೇತಿ ಶುರು ಮಾಡಿದೆವು. ಇವತ್ತು ಆಕೆ ಸ್ವತಂತ್ರವಾಗಿ, ಏಕಾಂಗಿಯಾಗಿ ವಿಮಾನ ಹಾರಾಟ ನಡೆಸುವುದು ನೋಡುವಾಗ ಕಣ್ಣುಗಳು ತುಂಬಿ ಬರುತ್ತವೆ’ ಎನ್ನುತ್ತಾರೆ ಆಕೆಯ ತರಬೇತುದಾರ ಪರಿಶ್ ಟ್ರವೀಕ್.
ಹೌದು, ಆತ್ಮವಿಶ್ವಾಸವೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಜೆಸ್ಸಿಕ ಸಾಬೀತುಪಡಿಸುತ್ತಾಳೆ. ಖಾಸಗಿ ತರಬೇತಿ ಶಾಲೆಯೊಂದಕ್ಕೆ ಎಂಟ್ರಿ ಕೊಟ್ಟ ಜೆಸ್ಸಿಕ ವಿಮಾನ ಹಾರಾಟದ ತರಬೇತಿಗೆ ಅಣಿಯಾಗುತ್ತಾಳೆ. ದೈಹಿಕವಾಗಿ ಎಲ್ಲ ಸರಿ ಇರುವ ವ್ಯಕ್ತಿಗಳಿಗೆ ೬ ತಿಂಗಳ ವಿಮಾನ ಹಾರಾಟ ತರಬೇತಿ ನೀಡಲಾಗುತ್ತೆ. ಆದ್ರೆ ಜೆಸ್ಸಿಕಗೆ ಕೈಗಳಿಲ್ಲ. ಹೀಗಾಗಿ ಕನಿಷ್ಠ ೩ ವರ್ಷವಾದ್ರೂ ತರಬೇತಿ ಬೇಕು ಅನ್ನುತ್ತಾರೆ. ಅದಕ್ಕೆ ಒಪ್ಪಿಕೊಂಡ ಜೆಸ್ಸಿಕ ತರಬೇತಿಗೆ ಸೇರುತ್ತಾಳೆ.
ಅಕ್ಟೋಬರ್ ೧೦,೨೦೦೮! ಇದು ಜೆಸ್ಸಿಕ ಬದುಕಿನಲ್ಲಿ ಮಹತ್ವದ ದಿನ. ಈಕೆ ಪೈಲೆಟ್ ಎಂದು ಪರವಾನಗಿ ಪಡೆದ ದಿನವಿದು. ಹಗುರವಾದ ಕ್ರೀಡಾ ವಿಮಾನವನ್ನು ೧೦,೦೦೦ ಅಡಿ ಎತ್ತರದಲ್ಲಿ ಹಾರಿಸಲು ಪರವಾನಗಿ ಪಡೆಯುತ್ತಾಳೆ. ಜೊತೆಗೆ ಆವತ್ತೇ ವಿಮಾನವನ್ನು ಹಾರಿಸುತ್ತಾಳೆ ಕೂಡ. ನಂತರ ವಿಮಾನ ಸ್ಕಾಲರ್‌ಶಿಪ್‌ಗೆ ಕೂಡ ಅರ್ಹತೆ ಪಡೆಯುತ್ತಾಳೆ. ಕಾಲುಗಳಿಂದಲೇ ಹೆಡ್‌ಸೆಟ್ ಹಾಕಿಕೊಳ್ಳುತ್ತಾಳೆ. ಸೀಟ್ ಬೆಲ್ಟ್‌ನ್ನು ಸೊಂಟಕ್ಕೇರಿಸಿಕೊಳ್ಳುತ್ತಾಳೆ.
ಹೀಗೆ ವಿಮಾನ ಹಾರಿಸಿದ ಈಕೆ ಎಲ್ಲೆಡೆ ಸುದ್ದಿಯಾಗುತ್ತಾಳೆ. ಅಮೆರಿಕದ ಟಿವಿ ಚಾನೆಲ್‌ಗಳು ಜೆಸ್ಸಿಕ ಇಂಟರ್‌ವ್ಯೂ ಮಾಡಿ ಬಿತ್ತರಿಸುತ್ತವೆ. ಇವೆಲ್ಲ ಜೆಸ್ಸಿಕಳ ಇನ್ನಷ್ಟು ಸಾಧನೆಗೆ ಸ್ಪೂರ್ತಿಯಾಗುತ್ತವೆ. ಈಕೆಯ ಬೆನ್ನೆಲುಬಾಗಿ ನಿಲ್ಲಲ್ಲು ಹಲವರು ಬರುತ್ತಾರೆ. ‘ನಾನು ಖಾಸಗಿ ವಿಮಾನದಲ್ಲಿ ಚಲಿಸುವಾಗಲೆಲ್ಲ ನನಗೆ ವಿಮಾನ ಹಾರಿಸಬೇಕೆಂಬ ಆಸೆಯಾಗುತ್ತಿತ್ತು. ನನ್ನ ಈ ಕನಸು ೪ ವರ್ಷಗಳ ಹಿಂದೆ ನನಸಾಯಿತು. ಜಗತ್ತಿನಲ್ಲಿ ಯಾವುದೂ ಸುಲಭವಲ್ಲ. ಎಲ್ಲವೂ ಸವಾಲು. ಆ ಸವಾಲನ್ನು ಎದುರಿಸುವ ಛಲವಿರಬೇಕು. ನಾನು ವಿಮಾನ ಹತ್ತಿದಾಗ ಹೆಡ್‌ಸೆಟ್ ಹಾಕಿಕೊಳ್ಳೋದು, ಸೀಟ್ ಬೆಲ್ಟ್ ಹಾಕಿಕೊಳ್ಳೋದು ಸವಾಲಾಗಿತ್ತು. ವಿಮಾನಗಳ ಸಿಕ್ವೆನ್ಸ್ ಕಲಿಯುವುದು ಮತ್ತೂ ಸವಾಲಾಗಿತ್ತು’ ಯಶಸ್ವಿಯಾಗಿ ವಿಮಾನ ಹಾರಿಸಿ ಕೆಳಗಿಳಿದ ಜೆಸ್ಸಿಕ ಈ ಮಾತನ್ನು ಹೇಳುವಾಗ ಎಂಥವರ ಕಣ್ಣುಗಳು ತುಂಬಿ ಬರುತ್ತವೆ.
ಪಾಲಕರು ನೀಡಿದ ಶಿಕ್ಷಣದಂತೆ ಮಕ್ಕಳು ಬೆಳೆಯುತ್ತವೆ ಅನ್ನೋದಕ್ಕೆ ಜೆಸ್ಸಿಕ ಬದುಕು ಜೀವಂತ ನಿದರ್ಶನ. ಹುಟ್ಟಿನಿಂದಲೇ ಕೈಗಳಲಿಲ್ಲದ ಈಕೆಗೆ ಕಾಲುಗಳನ್ನೇ ಕೈಗಳನ್ನಾಗಿಸಿ ಕೊಟ್ಟವರು ಈಕೆಯ ತಂದೆ-ತಾಯಿ.ಮಗು ಹುಟ್ಟುತ್ತಿದ್ದಂತೆ ಮೊದಲು ಸಂಭ್ರಮಪಡುವವಳು ಅಮ್ಮ. ಮತ್ತೆ ಆ ಸಂಭ್ರಮಕ್ಕೆ ಧ್ವನಿಯಾಗುವವನು ಅಪ್ಪ. ೧೯೮೩ರಲ್ಲಿ ಜೆಸ್ಸಿಕಾ ಹುಟ್ಟಿದಾಗಲೂ ಆಕೆಯ ತಾಯಿ ಇನೇಜ ಕಾಕ್ಸ್ ಎಲ್ಲಿಲ್ಲದಷ್ಟು ಸಂತಸಗೊಂಡಿದ್ದರು. ತಂದೆ ವಿಲಿಯಂ ಕಾಕ್ಸ್ ಕೂಡ ಖುಷಿ-ಖುಷಿಯಾಗಿದ್ದರು. ಆದರೆ ಈ ಖುಷಿ ಬಹಳ ಹೊತ್ತು ನಿಲ್ಲಲಿಲ್ಲ. ಅದಾಗ ತಾನೇ ಹುಟ್ಟಿದ ಮಗುವಿಗೆ ಕೈಗಳು ಇಲ್ಲ ಅಂದಾಗ ತಂದೆ-ತಾಯಿಗಳ ಮುಖ ಸಪ್ಪೆಯಾಗಿತ್ತು. ಜೆಸ್ಸಿಕಾ ತಂದೆ ವಿಲಿಯಂ ಕಾಕ್ಸ್ ಬ್ಯಾಂಡ್ ಟೀಚರ್. ಹುಟ್ಟುತ್ತಲೆ ಕೈಗಳನ್ನು ಕಳೆದುಕೊಂಡ ತನ್ನ ಮಗಳನ್ನು ಹೊತ್ತುಕೊಂಡು ಊರೂರು ಅಲೆಯುತ್ತಾರೆ. ಕೈಗಳನ್ನು ಸರಿಪಡಿಸುವ ವೈದ್ಯರಿಗಾಗಿ ಹುಡುಕಾಡುತ್ತಾರೆ. ಆದರೆ ಯಾರ ಬಳಿಯೂ ಜೆಸ್ಸಿಕ ಸಮಸ್ಯೆಗೆ ಉತ್ತರ ಸಿಗುವುದಿಲ್ಲ.
ಹೀಗಾಗಿ ಉಳಿದವರೆಲ್ಲ ಕೈಗಳಿಂದ ಮಾಡುವ ಕೆಲಸವನ್ನು ಕಾಲಿನಿಂದ ಮಾಡಲು ಕಾಕ್ಸ್‌ಗೆ ಹೇಳಿಕೊಡುತ್ತಾರೆ. ಈಕೆ ಚಿಕ್ಕವಳಿದ್ದಾಗ ತಾಯಿ ಆಕೆಯ ಪಾದಗಳ ಮೇಲೆ ಗೊಂಬೆಯನ್ನಿಡುತ್ತಾಳೆ. ಪಾದಗಳನ್ನು ಬಳಸಿ ಕಾಕ್ಸ್ ಆಟ ಆಡುತ್ತಾಳೆ. ಇದ್ರಿಂದ ತಾಯಿ ಸ್ಪೂರ್ತಿ ಪಡೆಯುತ್ತಾಳೆ. ಮಗಳನ್ನು ಇತರೆ ಕೆಲಸಗಳನ್ನು ಕಾಲಿನಿಂದ ಮಾಡಲು ಪ್ರೇರೇಪಿಸುತ್ತಾಳೆ. ಇದು ಭವಿಷ್ಯದಲ್ಲಿ ಜಗತ್ತಿನಲ್ಲಿ ಹಾರಾಡಲು ಜೆಸ್ಸಿಕಾಗೆ ಸಹಕಾರಿಯಾಗುತ್ತೆ. ಹಾಗೆ ನೋಡಿದ್ರೆ ಜೆಸ್ಸಿಕ ಇಡೀ ಬದುಕು ಆಕೆಯ ತಂದೆ-ತಾಯಿಗಳ ಯಶಸ್ಸು ಹೌದು. ಈಕೆಗೆ ೨ ವರ್ಷದವಳಿದ್ದಾಗ ಅಂಗನ್ಯೂನತೆ ಸರಿಪಡಿಸುವ ಸಾಧನ ತಂದುಕೊಡುತ್ತಾರೆ. ಈಕೆ ೭ನೇ ತರಗತಿಗೆ ಬರುವಾಗ ಇದರ ಬಳಕೆಯನ್ನೂ ನಿಲ್ಲಿಸುತ್ತಾಳೆ. ತಾನು ಸ್ವಾವಲಂಬಿಯಾಗಬೇಕೆಂಬ ಕನಸು ಕಾಣುತ್ತಾಳೆ.
ಮಗುವಿಗೆ ಕೈ ಇಲ್ಲ ಅಂದ್ರೆ ಹೆಚ್ಚಿನ ತಂದೆ-ತಾಯಿಗಳು ಮಕ್ಕಳನ್ನು ಹೊರಗೆ ಕಳುಹಿಸುವುದಿಲ್ಲ. ಸ್ವತಂತ್ರವಾಗಿ ಬದುಕಲು ಬಿಡುವುದಿಲ್ಲ. ಏನೋ ಜಗತ್ತೇ ತಲೆ ಮೇಲೆ ಬಿತ್ತು ಅನ್ನುವ ಹಾಗೆ ಅಳುತ್ತಾ ಕೂರುತ್ತಾರೆ. ಆದರೆ ಜೆಸ್ಸಿಕಾ ಪಾಲಕರು ಹಾಗೆ ಮಾಡಲಿಲ್ಲ. ಆಕೆಯನ್ನು ೩ನೇ ವರ್ಷದಲ್ಲೇ ಜಿಮ್ನಾಸ್ಟಿಕ್ ತರಗತಿಗೆ ಸೇರಿಸುತ್ತಾರೆ. ೬ನೇ ವರ್ಷದಲ್ಲಿ ಈಜು ಕ್ಲಾಸಿಗೆ ಕಳುಹಿಸುತ್ತಾರೆ ಅಂದರೆ ನಂಬ್ಲಿಕ್ಕೆ ಸಾಧ್ಯವಿದೆಯಾ…?
ಜೆಸ್ಸಿಕ ಹುಮ್ಮಸ್ಸು ಇಲ್ಲಿಗೆ ತಣ್ಣಗಾಗುವುದಿಲ್ಲ. ಆಕೆಯ ಪಾಲಕರ ಪ್ರೋತ್ಸಾಹ ಇಷ್ಟಕ್ಕೆ ನಿಲ್ಲುವುದಿಲ್ಲ. ಆಕೆಯನ್ನ ಡ್ಯಾನ್ಸ್ ಕ್ಲಾಸಿಗೆ ಕಳುಹಿಸುತ್ತಾರೆ. ಅಡುಗೆ ಹೇಳಿಕೊಡುತ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ಇವತ್ತು ಜೆಸ್ಸಿಕ ಅಡುಗೆ ಮಾಡುತ್ತಾಳೆ. ಯಾರ ಹಂಗಿಲದೆಯೆ ತಿನ್ನುತ್ತಾಳೆ. ತನ್ನ ಕೂದಲನ್ನು ತಾನೇ ಬಾಚಿಕೊಳ್ಳುತ್ತಾಳೆ. ಎಲ್ಲವೂ ಎರಡೂ ಕೈಗಳ ಸಹಾಯವಿಲ್ಲದೆ ನಡೆಯುತ್ತದೆ! ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ ಬದುಕಿನಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಾಳೆ. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಾಳೆ. ಈಕೆಯ ಎಲ್ಲ ಸಾಧನೆಗೂ ತಾಯಿ ಕಾರಣ. ಜೆಸ್ಸಿಕಾಳನ್ನು ಎಲ್ಲ ಚಟುವಟಿಕೆಗಳಿಗೆ ಉತ್ತೇಜಿಸುತ್ತಿದ್ದಳು. ಅವಳ ಬದುಕಿನಲ್ಲಿ ಹೊಸ ಅವಕಾಶಗಳನ್ನು ನೀಡುತ್ತಿದ್ದಳು. ಕಾಲೇಜು ದಿನಗಳಲ್ಲಿ ಜೆಸ್ಸಿಕಾಳನ್ನು ಏಕಾಂಗಿಯಾಗಿ ಹೊರಗಡೆ ಕಳುಹಿಸುತ್ತಾರೆ. ಇದರಿಂದ ಜೆಸ್ಸಿಕಾಗೆ ಆತ್ಮವಿಶ್ವಾಸ ಬರುತ್ತದೆ.
ಹೈಸ್ಕೂಲ್ ದಿನದಲ್ಲಿ ರಾಷ್ಟ್ರೀಯ ಯುವ ನಾಯಕತ್ವ ಸಮಾವೇಶಕ್ಕೆ ೨ ವಾರಗಳ ಕಾಲ ಹೋಗಲು ನಿರ್ಧರಿಸುತ್ತಾಳೆ. ಜೆಸ್ಸಿಕಾ ಜೊತೆ ಆಕೆಯ ತಾಯಿ ಕೂಡ ಹೋಗಲು ಅಣಿಯಾಗಿರುತ್ತಾರೆ. ಆದರೆ, ಜೆಸ್ಸಿಕಾ ಏಕಾಂಗಿಯಾಗಿ ಸಮಾವೇಶಕ್ಕೆ ಹೋಗುತ್ತಾಳೆ. ಇದರಿಂದ ಆಕೆಯ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರಿಂದ ನನ್ನ ಬದುಕನ್ನು ನಾನೇ ನಿರ್ವಹಿಸುವುದರ ಅರಿವಾಯಿತು. ಮೊದಲು ನನ್ನ ಸಂಗತಿಗಳನ್ನು ನಾನು ಜೋಡಿಸಿಕೊಳ್ಳುವುದು ಕಷ್ಟವಾಗುತ್ತಿತ್ತು ಎಂದು ಜೆಸ್ಸಿಕ ಹೇಳುತ್ತಾಳೆ.
‘ಕೆಲವು ಸಲ ನಾನೇಕೆ ಕೈಗಳಿಲ್ಲದೆ ಜನಿಸಿದೆ ಅನ್ನಿಸಿದುಂಟು. ಆಗೆಲ್ಲ ನಾನು ಹೇಳಿಕೊಂಡ ಮಾತಿದು. ನನಗೆ ಒಂದು ಭಾಗದಲ್ಲಿ ವೀಕ್‌ನೆಸ್ ಇದ್ದರೆ, ಮತ್ತೊಂದು ಭಾಗದಲ್ಲಿ ಬಲವಿದೆ. ಕೆಲವರು ಪರಿಪೂರ್ಣ ಅನ್ನಿಸುತ್ತಾರೆ. ಆದರೆ ನನ್ನ ಪ್ರಕಾರ ಪ್ರತಿಯೊಬ್ಬರಲ್ಲೂ ಒಂದೆಲ್ಲ ಒಂದು ವೀಕ್‌ನೆಸ್ ಇರುತ್ತದೆ. ಇದು ದೈಹಿಕ ಆಗಿರಬಹುದು ಅಥವಾ ಮಾನಸಿಕ ಆಗಿರಬಹುದು. ಒಟ್ಟಿನಲ್ಲಿ ನಾವೆಲ್ಲರೂ ಸಮಾನರಾಗಿರುವ ಒಂದು ಹಂತ ಎಲ್ಲರಲ್ಲೂ ಇರುತ್ತದೆ’ ಹೀಗಂತ ಜೆಸ್ಸಿಕ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಳ್ಳುತ್ತಾಳೆ.
ಜೆಸ್ಸಿಕ ಎಲ್ಲರಿಗೂ ಭಿನ್ನ ಅನ್ನಿಸೋದು ಇದಕ್ಕಾಗಿಯೇ ನೋಡಿ. ಈಕೆಯ ಬದುಕು ಕೇವಲ ವಿಮಾನ ಹಾರಾಟಕ್ಕೆ ಮಾತ್ರ ಸೀಮಿತವಾಗಲಿಲ್ಲ. ಈಕೆ ಕಾಲಿನಿಂದಲೇ ಕಾರನ್ನು ಓಡಿಸಲು ಕಲಿತಳು. ಆಗಸದಲ್ಲಿ ಹಾರಿದಂತೆ ರಸ್ತೆಯಲ್ಲೂ ಕಾರಿನೊಂದಿಗೆ ಚಲಿಸಿದಳು. ಈಜುತ್ತಾಳೆ. ಇಷ್ಟೆ ಅಲ್ಲ ಐಸ್ ಸ್ಕೇಟ್ ಮಾಡುತ್ತಾಳೆ. ಪಿಯಾನೊ ಭಾರಿಸುತ್ತಾಳೆ. ಕೀಬೋರ್ಡ್‌ನಲ್ಲಿ ಟೈಪ್ ಮಾಡುತ್ತಾಳೆ. ಲೆನ್ಸ್‌ನ್ನು ಕಣ್ಣಿಗಿಟ್ಟುಕೊಳ್ಳುತ್ತಾಳೆ. ಡ್ಯಾನ್ಸ್ ಮಾಡುತ್ತಾಳೆ. ಫೋನ್‌ನಲ್ಲಿ ಮಾತನಾಡುತ್ತಾಳೆ!
ಇದೆಲ್ಲಕ್ಕಿಂತ ಅಚ್ಚರಿ ಅಂದ್ರೆ ಎರಡೂ ಕೈಗಳಿಲ್ಲದ ಈಕೆ ಕರಾಟೆಯಲ್ಲಿ ಬ್ಲಾಕ್‌ಬೆಲ್ಟ್ ಪಡೆದಿದ್ದಾಳೆ. ಅದು ಒಂದಲ್ಲ, ೨ ಬ್ಲಾಕ್ ಬೆಲ್ಟ್‌ಗಳು ಈಕೆಯ ಮಡಿನಲ್ಲಿವೆ. ಅಮೆರಿಕದ ಟೈಕವಾಂಡೊ ಅಸೊಸಿಯೇಷನ್‌ನಿಂದ ಬ್ಲಾಕ್ ಬೆಲ್ಟ್ ಪಡೆದ ಮೊದಲ ಮಹಿಳೆ ಈಕೆ. ಇಂತಿಪ್ಪ ಜೆಸ್ಸಿಕಾ ಕಾಕ್ಸ್ ಅರಿಜೊನ ವಿಶ್ವವಿದ್ಯಾನಿಲಯದಿಂದ ಸೈಕೊಲಜಿ ಪದವಿಧರೆ. ಇತರರಿಗೆ ಸ್ಪೂರ್ತಿ ನೀಡಬಲ್ಲ ವಾಗ್ಮಿ. ಈಕೆಯ ಅನೇಕ ಭಾಷಣಗಳು ಬಲು ಜನಪ್ರಿಗೊಂಡಿವೆ. ಸುಮಾರು ೧೭ ದೇಶಗಳಲ್ಲಿ ಭಾಷಣ ಮಾಡಿದ್ದಾಳೆ.
೨೯ ವರ್ಷದ ಜೆಸ್ಸಿಕ ತನಗೆ ಕರಾಟೆ ತರಬೇತಿ ನೀಡಿದ ಅಮೆರಿಕದ ಪ್ಯಾಟ್ರಿಕ್ ಚೆಂಬರ್ಲೇನ್ ಜೊತೆ ಮದುವೆಯಾಗುತ್ತಾಳೆ. ಮದುವೆಗೆ ತನ್ನಂತೆ ಕೈ ಕಳೆದುಕೊಂಡ ಅನೇಕರನ್ನು ಕರೆಯುತ್ತಾಳೆ. ಅವರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಾಳೆ. ಅಲ್ಲಿಗೆ ಬಂದ ತೆರೆಸಾ ಅನ್ನುವ ಕೈಗಳಿಲ್ಲದ ಪುಟಾಣಿ ಹುಡುಗಿಯೊಬ್ಬಳು ‘ಜೆಸ್ಸಿಕ ನೋಡಿದ ನಂತರ ಬದುಕಿನಲ್ಲಿ ಎಲ್ಲವೂ ಸಾಧ್ಯ ಅನ್ನಿಸಿತು. ನಾವು ಮದುವೆಯಾಗಬಹುದು. ಆದರೆ ಸೂಕ್ತ ವ್ಯಕ್ತಿಯನ್ನು ಹುಡುಕುವುದು ನೈಜವಾದ ಸಮಸ್ಯೆ’ ಅಂದಾಗ ನೆರೆದಿದ್ದವರ ಕಣ್ಣುಗಳಲ್ಲಿ ಕಂಬನಿ ಕಾಣಿಸಿತ್ತು.
ಕೆಲವೊಮ್ಮೆ ತನ್ನ ಮೇಲೆ ತನಗೆ ಬೇಸರವಾಗಿ ಹೊರಗಡೆ ಹೋಗಲು ಜೆಸ್ಸಿಕ ಹಿಂಜರಿದಿದ್ದುಂಟು. ಇಂತಿಪ್ಪ ಜೆಸ್ಸಿಕಾ ೧೮ನೇ ವರ್ಷಕ್ಕೆ ಎಲ್ಲ ಅಂಗಾಗಂಗಳು ಸರಿ ಇರುವ ಒಬ್ಬ ವ್ಯಕ್ತಿಗಿಂತ ಹೆಚ್ಚಿನ ಸಾಧನೆ ಮಾಡುತ್ತಾಳೆ. ವಾವ್ ಎಷ್ಟು ಅದ್ಭುತ ಅಲ್ವಾ ಜೆಸ್ಸಿಕ ಬದುಕು. ಕೈ-ಕಾಲುಗಳೆಲ್ಲ ಸರಿ ಇರುವ ನಾವು ವೇಸ್ಟ್ ಅನ್ನಿಸಲು ಶುರುವಾಗಿ ಬಿಡುತ್ತೆ ಈಕೆಯ ಕಥೆ ಕೇಳುತ್ತಿದ್ರೆ ಅಲ್ವಾ? ಹೌದು, ಇಂಥ ಜೆಸ್ಸಿಕ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ…
(ಕನ್ನಡಪ್ರಭದಲ್ಲಿ ಪ್ರಕಟಿತ ಬರಹ)