Feeds:
ಲೇಖನಗಳು
ಟಿಪ್ಪಣಿಗಳು

Archive for ಆಗಷ್ಟ್, 2010

ಲೇಖಕರೊಬ್ಬರು ಈ ಪರಿ ಚರ್ಚೆಯಾಗುತ್ತಾರೆ ಎಂದಾದರೆ, ಖಂಡಿತ ಒಳ್ಳೆಯ ಬೆಳವಣಿಗೆ. ಸಮಾಜದ ವಿರೋಧ, ಚರ್ಚೆಗಳಿಗೆ ಬೆಲೆ ಕೊಡದೆ ತಾವು ಹೇಳಬೇಕಾದ್ದನ್ನು ಹೇಳುವ ಲೇಖಕರ ಸಂಖ್ಯೆ ವಿರಳ. ಆ ಮಟ್ಟಿಗೆ ನನಗಂತೂ ಶಿವರಾಮ ಕಾರಂತರು ಇಷ್ಟದ ಲೇಖಕರು. ಅವರ ಅನೇಕ ಕಾದಂಬರಿಯ ವಿಚಾರಗಳೇ ಒಂತರಹ ವಿವಾದಿತ. ದೇವರನ್ನು  ಯಾವತ್ತೂ ಒಪ್ಪಿಕೊಳ್ಳಲಿಲ್ಲ. ಮಠಾದೀಶರನ್ನು ಕಾಲ್ಪನಿಕ ಪಾತ್ರಗಳ ಮೂಲಕ ಹಾಸಿಗೆ ಮೇಲೆ ಮಲಗಿಸಿದರು! ಕಾವಿ ತೊಟ್ಟವರಲ್ಲೂ  ಕೊಳಕರಿದ್ದಾರೆ ಎಂದು ಸಾರಿದರು. ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾದರೂ ತಲೆ ಕೆಡಿಸಿಕೊಳ್ಳಲಿಲ್ಲ. ಬರೆಯಬೇಕಾದ ವಿಚಾರಗಳನ್ನು ಬರೆಯುತ್ತಲೇ ಹೋದರು. ಟಿಆರ್‌ಪಿಗೋಸ್ಕರ, ಸವಿ ಉಣ್ಣುವ ಸಲುವಾಗಿ ಕಾರಂತರು ಜೇನು ಗೂಡಿಗೆ ಕಲ್ಲು  ಹೊಡೆದರು ಎಂದು ಕೆಲವರು ಹೇಳಬಹುದು! ಕಾರಂತರು ಬದುಕಿದ್ದರೆ ಈ ಮಾತಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗೇಲ್ಲ  ತನ್ನನ್ನು ವಿಮರ್ಶಿಸುತ್ತಿದ್ದಾರೆ ಎಂಬುದು ಭೈರಪ್ಪನವರ ಕಿವಿಗೂ ತಲುಪಿದಂತಿಲ್ಲ!

ಆದ್ರೂ  ಚರ್ಚೆ ಮಜ ಕೊಡುತ್ತಿದೆ. ಸಪ್ಪೆಯಾಗಿದ್ದ ಅಂತರ್ಜಾಲ ಲೋಕಕ್ಕೆ ಹೊಸ ಖದರು ನೀಡಿದೆ! ಅಂದಹಾಗೆ, ಭೈರಪ್ಪನವರನ್ನು  ಏಕಮುಖಿ ಲೇಖಕ ಎಂದು ಬೊಬ್ಬೆ ಹೊಡೆಯುತ್ತಿರುವ ಕೆಲ ಅಂತರ್ಜಾಲ ತಾಣಗಳು, ಭೈರಪ್ಪನವರ ವಿರೋಧಿ ಮುಖದ ಬರವಣಿಗೆಗಳನ್ನು  ಮಾತ್ರ ನಿರಂತರವಾಗಿ ಯಾಕೆ ಪ್ರಕಟಿಸುತ್ತಿವೆ ಎಂದು ನಾವು ಕೇಳಬಹುದು ಅಲ್ವಾ?! ಇದು ನನಗಂತೂ ಮೊದಲನೆ ಅನುಭವವಲ್ಲ. ಸಾಕಷ್ಟು  ಚರ್ಚೆಗಳಲ್ಲಿ  ಗಮನಿಸಿದ್ದೇನೆ. ಕೆಲ ತಾಣಗಳು ತಾನೂ ಏನು ಸಾರಬೇಕೋ, ಅದನ್ನು  ಸಾರಲು ಶತಾಯಗತಾಯ ಯತ್ನ ನಡೆಸುತ್ತವೆ. ಅವರ ಲೆಕ್ಕದಲ್ಲಿ  ಒಂದಷ್ಟು  ಮಂದಿ ಮಾತ್ರ ಬರಹಗಾರರು(ಅವರ ಮೂಗಿನ ನೇರಕ್ಕೆ ಬರೆಯಬಲ್ಲವರು). ಅಂದಮೇಲೆ, ಭೈರಪ್ಪನವರು ತಾವು ಏನು ಹೇಳಬೇಕು ಅಂದುಕೊಂಡಿದ್ದರೋ, ಅದನ್ನು ಹೇಳುವುದರಲ್ಲಿ  ತಪ್ಪೇನಿದೆ? ಈ ತಾಣಗಳು ತುಪ್ಪ  ಸುರಿಯುವ ಚರ್ಚೆಗಳು ಕೂಡ ಹಿಟ್ಸ್  ಹೆಚ್ಚಿಸಿಕೊಳ್ಳುವ ಸವಿಯೂಟ ಯಾಕಾಗಿರಬಾರದು? ಆಲೋಚಿಸಿದರೆ, ಎರಡೂ ದಿಕ್ಕಿನಲ್ಲಿ  ಆಲೋಚಿಸಲು ಬರುತ್ತದೆ.

ಯಾವುದಾದರೂ ಅಷ್ಟೆ   ವಿಮರ್ಶೆ ಮಾಡುವುದು ತುಂಬಾ ಸುಲಭ. ಭೈರಪ್ಪನಂತಹ ಬರಹಗಾರರಿಗೆ ಕಥೆ ಹೆಣೆಯುವುದು, ೨೫೦ ಪುಟದ ಕಾದಂಬರಿ ರಚಿಸುವುದು ದೊಡ್ಡ  ಕೆಲಸವೇ ಅಲ್ಲ  ಅಂತಾ ಸರಾಗವಾಗಿ ಹೇಳುವುದು ಸುಲಭ. ಹಾಗೆ ಹೇಳುವವರಿಗೆ, ಅದೇ ಕೆಲಸವನ್ನು  ನೀವೂ ಮಾಡಬಹುದಲ್ಲ  ಎಂದರೆ ಪಿತ್ತ ನೆತ್ತಿಗೇರಿ ಬಿಡುತ್ತದೆ. ಆವರಣಕ್ಕೆ ಅನೇಕ ಅನಾವರಣಗಳು ಹುಟ್ಟಿಕೊಂಡವು. ಅವೆಲ್ಲ  ಎಷ್ಟು  ಚರ್ಚೆಯಾದವು, ಖರ್ಚಾದವು ಅನ್ನುವುದೆಲ್ಲ  ನಂತರದ ಮಾತು ಬಿಡಿ! ಆವರಣದ ವಿರುದ್ಧ  ಬೊಬ್ಬೆ ಹೊಡೆದ ಅದೆಷ್ಟು  ಮಂದಿ, ಅನಾವರಣವನ್ನು ಒಪ್ಪಿಕೊಂಡರೂ ಅಂತಲೂ ಕೇಳಬಾರದು! ಅದೇ ರೀತಿ ಒಂದಷ್ಟು  ಮಂದಿ ಕವಲಿಗೆ ಪ್ರತಿಯಾಗಿ ತೆವಲನ್ನಾದರೂ ಬರೆಯಬಹುದಿತ್ತು!

ನೀವು, ನಿಮ್ಮ ಅನಿಸಿಕೆಯನ್ನು ಮನಸೋ ಇಚ್ಛೆ  ಬರೆಯಬಹುದು ಎಂದಾದರೆ, ಒಬ್ಬ  ಕೃತಿಕಾರನಿಗೆ ಆತನ ಅಭಿಪ್ರಾಯ ಬರೆಯುವ ಹಕ್ಕಿಲ್ಲವೆ? ಜನಪ್ರಿಯವಾದಕ್ಷಣ ಅವರ ಎಲ್ಲಾ  ಬರಹಗಳನ್ನು ಒಪ್ಪಿಕೊಳ್ಳಬೇಕು ಎಂಬುದು ನನ್ನ ವಾದವಲ್ಲ. ಆದರೆ, ವಿರೋಧಕ್ಕೂ ಒಂದು ಮಿತಿ ಇರುತ್ತದೆ. ಅದಿಲ್ಲವಾದರೆ, ಅವರ ಅಭಿಮಾನಿಗಳು ತೆವಲು ದಾಟಿಯ ಉತ್ತರವನ್ನೇ ನೀಡುತ್ತಾರೆ ಮತ್ತು ಅದನ್ನು ಅನಿವಾರ್ಯವಾಗಿ ಸ್ವೀಕರಿಸಬೇಕಾಗುತ್ತದೆ. ಕವಲು ಕಾದಂಬರಿಗಿಂತ, ಭೈರಪ್ಪನವರ ಪೂರ್ವಾಪರ, ಹಿಂದಿನ ಕಾದಂಬರಿಗಳ ತುಲನೆಯೇ ಹೆಚ್ಚಾಗುತ್ತಿದೆ. ಕಾದಂಬರಿಯನ್ನು  ತಮ್ಮ  ಮೂಗಿನ ನೇರಕ್ಕೆ, ಬದುಕಿಗೆ ಹೋಲಿಸಿಕೊಂಡು ಬರೆದಾಗ ಇಂಥ ಅಪಾಯಗಳು ಸಹಜ.

ಇವತ್ತಿಗೂ ಭೈರಪ್ಪನವರ ಅಂಚು ಕಾದಂಬರಿ ನನಗೆ ಇಷ್ಟವಾಗಿಲ್ಲ. ಹಾಗಂತ ಕವಲು ಚರ್ಚೆಯ ವೇದಿಕೆಯಲ್ಲಿ  ಅದನ್ನು ಹೇಳುವುದು ಸರಿಯಲ್ಲ.  ಅದೆಲ್ಲಕ್ಕಿಂತ ಮಿಗಿಲಾಗಿ, ಯಾರೂ  ಎಷ್ಟೇ ಬೊಬ್ಬೆ  ಹೊಡೆದರೂ, ತಲೆ ಕೆಡಿಸಿಕೊಳ್ಳುವ ಜಾಯಿಮಾನ ಭೈರಪ್ಪನವರದ್ದಲ್ಲ  ಎಂಬುದು ಒಂದು ಆವರಣದಿಂದಲೇ ಸಾಬೀತಾಗಿದೆ. ತಾವೂ ಹೇಳಬೇಕಾದ್ದನ್ನು ಯಾವ ಮೂಲಾಜು ಇಲ್ಲದೆ  ಹೇಳುತ್ತಾರೆ. ಕಾರಂತರು, ಕೇವಲ ಮನುಷ್ಯರು ಕಾದಂಬರಿಯಲ್ಲಿ  ಸ್ವಾಮಿಜಿಯೊಬ್ಬರಿಗೆ ಹೆಂಗಸಿನ ಜೊತೆಗೆ ಸಂಬಂಧ ಬೆಸೆಯುವ ಸನ್ನಿವೇಶ ಸೃಷ್ಟಿಸುತ್ತಾರೆ. ಅದು ಆ ಕಾಲಕ್ಕೆ ತೀರಾ ಅಭಾಸ ಅನ್ನಿಸಬಹುದಾದ ಸನ್ನಿವೇಶವಾಗಿತ್ತು ಎಂದು ಉಡುಪಿ ಕಡೆಯ ತೀರಾ ಕರ್ಮಠರು ಹೇಳಿದ್ದನ್ನು ಕೇಳಿದ್ದೆ. ಆದರೆ ನಿತ್ಯಾನಂದ ಸ್ವಾಮಿಯನ್ನು ನೋಡಿದಾಗ ಕಾರಂತರ ಕಲ್ಪನೆ ಸರಿಯಾಗಿಯೇ ಇದೆ ಅನ್ನಿಸುತ್ತದೆ. ಈಗಾಗಲೇ ಬದಲಾವಣೆಯ ಹಾದಿ ಹಿಡಿದಿರುವ ನಮ್ಮ  ಸಮಾಜ ಕೂಡ ಮುಂದೊಂದು ದಿನ ಭೈರಪ್ಪನವರ ಕಲ್ಪನಾ ಜಗತ್ತಿನಂತಾಗಬಹುದು ಅಲ್ಲವೇ? ಕಾದಂಬರಿ, ಕಥೆಗಳು ವಾಸ್ತವ ಅಲ್ಲ. ಅವೆಲ್ಲ  ಕಲ್ಪನೆಗಳು. ಅದನ್ನೇ  ವಾಸ್ತವ ಎಂಬಂತೆ ಬೊಬ್ಬೆ  ಹೊಡೆಯುವವರಿಗೆ ಯಾವುದೇ ಮದ್ದಿಲ್ಲ. ಭೈರಪ್ಪನವರಂತೆ ಕೇಳಿಯೂ, ಕೇಳಿಸದಂತೆ ಇರುವುದೇ ಉತ್ತಮ ಔಷಧ ಎಂದು ನನಗೂ ಅನ್ನಿಸುತ್ತಿದೆ.

ನೀವೂ ತೀರಾ ಆಲೋಚಿಸಿದರೆ, ಈ ನನ್ನ  ಬರಹ ಕೂಡ ಬ್ಲಾಗ್ ಹಿಟ್ಸ್  ಹೆಚ್ಚಿಸಿಕೊಳ್ಳುವ ತಂತ್ರ ಎಂದು ನಿಮಗೆ ಅನ್ನಿಸಬಹುದು ಮತ್ತು ಆ ಅನಿಸಿಕೆ ಸಹಜ. ಕನ್ನಡ ಸಾಹಿತ್ಯ ಲೋಕ ಸದಾ ನೆನಪಿನಲ್ಲಿಟ್ಟುಕೊಳ್ಳಬಹುದಾದ ಕಾದಂಬರಿಗಳನ್ನು ನೀಡಿದ ಬೈರಪ್ಪರಂಥ ಲೇಖಕರನ್ನು, ಒಂದು ಕಾದಂಬರಿಯಿಂದಾಗಿ ಈ ಪರಿ ತೆಗಳುವುದು ನನಗಂತೂ ಸರಿ ಅನ್ನಿಸಲಿಲ್ಲ. ಕವಲಿನಂತೆ ಹಿಂದಿನ ಆ ಕೃತಿಯಿತ್ತು, ಮಂದ್ರ ಹೀಗಿತ್ತು, ದಾಟು ಹಾಗಿತ್ತು ಎಂದು ಈ ಸನ್ನಿವೇಶಕ್ಕೆ ಅವುಗಳನ್ನು ಜೋಡಿಸುವುದು ತೀರಾ ಬಾಲಿಶ ಅನ್ನಿಸುತ್ತದೆ. ಕಡೆಯದಾಗಿ, ಅವರವರ ಭಾವಕ್ಕೆ, ಅವರವರ ಭಕುತಿಗೆ…

(ವಿ.ಸೂ:- ಈ ಲೇಖನ ಇತರೆಡೆ ಪ್ರಕಟಿಸಲು ಲೇಖಕರ ಅನುಮತಿ ಇರುವುದಿಲ್ಲ)

Read Full Post »