Feeds:
ಲೇಖನಗಳು
ಟಿಪ್ಪಣಿಗಳು

Archive for ಏಪ್ರಿಲ್, 2011

ಹಿಂದೆ ನಮ್ಮ ಕಡೆ ೩ ಗಂಟೆ ಕೆಲ್ಸ ಅಂದ್ರೆ ಜನಪ್ರಿಯವಾಗಿತ್ತು. ಬೆಳಿಗ್ಗೆ ೯ ಗಂಟೆಗೆ ಬಂದ ಆಳು, ೩ ಗಂಟೆವರೆಗೆ ಕೆಲ್ಸ ಮಾಡಿ ಹೋಗ್ತಿದ್ದ. ಮಧ್ಯಾಹ್ನ ಊಟ ಹಾಕಿದ್ರೆ, ೬ ಗಂಟೆವರೆಗೂ ಕೆಲ್ಸ ಮಾಡ್ತಿದ್ದ. ದಿನದ ಕೂಲಿ ಗಂಡು ಆಳಿಗೆ ೬೦ರೂ. ಹೆಣ್ಣು ಆಳಿಗೆ ೨೫ ರೂ. ಮತ್ತು ಒಂದು ಸಿದ್ದೆ ಅಕ್ಕಿ. ಈಗ ಪರಿಸ್ಥಿತಿ ಬದಲಾಗಿದೆ. ಆಳು ಲೆಕ್ಕಕ್ಕೆ ಕೆಲ್ಸ ಮಾಡುವವರೇ ಕಡಿಮೆ. ಎಲ್ಲ ಗುತ್ತಿಗೆ. ಕ್ಷಮಿಸಿ, ಇವತ್ತಿನ ನವೀನ ಭಾಷೆಯಲ್ಲಿ ಹೇಳಬೇಕಂದ್ರೆ ಔಟ್‌ಸೋರ್ಸಿಂಗ್. ಗೊಬ್ಬರ ಹಾಕಲು ೨೦೦೦ರೂ. ಗುತ್ತಿಗೆ ಅಂದ್ರೆ ಮುಗೀತು. ದುಡ್ಡು ಕೊಡೋದು ಮಾತ್ರ ಯಜಮಾನನ ಕೆಲ್ಸ. ಉಳಿದಿದ್ದೆಲ್ಲ ಸೇರೆಗಾರನ(ಕಾಂಟ್ರ್ಯಾಕ್ಟರ್) ಜವಾಬ್ದಾರಿ. ಆಳು ಬಂದ್ರ, ಕುಳಿತ್ತಿದ್ದಾರಾ, ಮಲಗಿದ್ದಾರಾ ಇತ್ಯಾದಿಯಾಗಿ ಪರಿಶೀಲನೆ ಮಾಡುವ ಅಗತ್ಯವಿಲ್ಲ.

ಇನ್ನೂ ಆಳು ಲೆಕ್ಕಕ್ಕೆ ಬರುವವರು ೧೦ ಗಂಟೆಗೆ ಕಡಿಮೆ ಬರಲ್ಲ. ೩ ಗಂಟೆ ಆಗುತ್ತಿದ್ದಂತೆ ರೈಟು! ನಾವು ಮಹಾನಗರಿಯ ಮಂದಿ ಆ ವಿಚಾರದಲ್ಲಿ ತುಂಬಾ ಸಿನ್ಸಿಯರ್. ಅಯ್ಯೋ ನನ್ನ ಗಂಡ ಟಿಸಿ‌ಎಸ್‌ನಲ್ಲಿ ಎಂಜಿನಿಯರ್. ನನ್ನ ಗಂಡ ವಿಪ್ರೊ ಔಟ್‌ಸೋರ್ಸಿಂಗ್ ಹೆಡ್ಡು ಅಂತೆಲ್ಲ ಬಾಯಿ ತುಂಬಾ ಕೊಚ್ಚಿಕೊಳ್ಳುವ ಆಂಟಿಯರನ್ನು ಕಂಡಾಗ ನನಗೆ ನಗಬೇಕಾ/ಅಳಬೇಕಾ ಅನ್ನುವ ಗೊಂದಲ ಇಂದಿಗೂ ಬಗೆಹರಿದಿಲ್ಲ. ಆಫ್‌ಕೋರ್ಸ್ ದೊಡ್ಡ ಹುದ್ದೆ, ದೊಡ್ಡ ಜವಬ್ದಾರಿ, ಎ.ಸಿ ಕಂಪನಿ. ವೊಲ್ವೋ ಬಸ್‌ನಲ್ಲಿ ಪಿಕಪ್ ಆಂಡ್ ಡ್ರಾಪ್ ಎಲ್ಲದೂ ಹೌದು. ಆದ್ರೆ ಈ ಕೆಲಸ ನಮ್ಮೂರಿನ ಮಂದಿ ಮಾಡುವ ಕೂಲಿಗಿಂತ ಶ್ರೇಷ್ಠವಾಗಿದ್ದು ಅಂತ ನನಗೆ ಅನ್ನಿಸ್ತಾ ಇಲ್ಲ. ಅದಕ್ಕೆ ಹಲವಾರು ಕಾರಣ ಇದೆ.

ಊರಲ್ಲಿ ಕೆಲಸದವನಿಗೆ ಒಂದು ದೊಡ್ಡ ಮಾತು ಆಡುವಂತಿಲ್ಲ. ಆಡಿದರೆ ಅವ ಮರುದಿನದಿಂದ ಕೆಲಸಕ್ಕೆ ಬರಲ್ಲ. ಆದ್ರೆ ಮಹಾನಗರಿಯಲ್ಲಿ ಹಾಗಲ್ಲ. ೮ ಗಂಟೆಗೆ ಲಾಗ್ ಇನ್ ಇರೋದಪ್ಪ ಎಂದು ಉಸಿರು ಕಟ್ಟಿಕೊಂಡು ಓಡುವವರು ಅದೇಷ್ಟು ಮಂದಿ. ೧೦ ನಿಮಿಷ ತಡವಾಗಿ ಹೋಗುವಷ್ಟೂ ಸ್ವತಂತ್ರ ಇಲ್ಲ. ಕಂಪನಿ ನಿಗದಿಪಡಿಸಿದ ಸಮಯಕ್ಕೆ ೧೦-೧೫ ನಿಮಿಷ ಆಚೀಚೆ ಹೋಗಬಹುದು. ಅದಕ್ಕೂ ಹೆಚ್ಚು ತಡವಾದರೆ ಆವತ್ತಿನ ಸಂಬಳ ಕಟ್. ಒಂದು ದಿನದ ಸಂಬಳ ೧೦೦೦ರೂ! ಪುಗ್ಸಟ್ಟೆ ಕಳೆದುಕೊಳ್ಳಲು ಯಾರು ಇಷ್ಟಪಡುವುದಿಲ್ಲ. ಲಾಗ್‌ಔಟ್ ಟೈಂನಲ್ಲೂ ನಾವು ಅಷ್ಟೆ ನಿಷ್ಠಾವಂತರು. ೮ ಗಂಟೆ ಅಂತ ನಿಯಮ ಇದ್ದರೂ, ೧೦,೧೨,೧೪ ಗಂಟೆ ದುಡಿಸುವ ಕಂಪನಿಗಳೂ ಇವೆ. ನಾವು ಯಾವ ಬೇಜಾರು ಇಲ್ಲದೆ, ಬೇಜಾರಾದರೂ ತೋರಿಸಿಕೊಳ್ಳಲು ಸಾಧ್ಯವಾಗದೆ ದುಡಿದು ಬರುತ್ತೇವೆ.

ಮ್ಯಾನೇಜರ್ ಮೇಲೆ, ನಿರ್ದೇಶಕರ ಮೇಲೆ ಕೋಪ ಬಂದರೂ, ಅದ್ನೆಲ್ಲ ತಡೆದುಕೊಂಡು ಮನೆಗೆ ಬಂದು ಹೆಂಡ್ತಿ ಮೇಲೋ, ಗಂಡನ ಮೇಲೋ ತೀರಿಸಿಕೊಳ್ಳುತ್ತೇವೆ. ಆಫೀಸ್‌ನಲ್ಲೇ ತೀರಿಸಿಕೊಂಡು ಬಿಟ್ಟರೆ ಕೆಲಸ ಕಳೆದು ಹೋಗುತ್ತದೆ ಎಂಬ ಭಯ. ನಮ್ಮೂರಿನಲ್ಲಿ ಒಂದು ದೊಡ್ಡ ಮಾತು ಆಡಿದರೆ ಆಳು ಕೆಲಸಕ್ಕೆ ಬರುವುದಿಲ್ಲ ಎಂಬ ಭಯ. ಎಂಥ ವಿಪರ್ಯಾಸ ನೋಡಿ! ಅಂದಹಾಗೆ ಮಾಹಾನಗರಿಯಲ್ಲಿ ಒಂದು ದಿನದ ಆಳು ಲೆಕ್ಕ ೨೫೦ರಿಂದ ಶುರುವಾಗಿ ಸಾವಿರಾರು ರೂಪಾಯಿ ಅಲ್ವಾ?! ಹಾಗಾಗಿ ನಾವೆಲ್ಲ ಈ ಪರಿ ನಿಷ್ಠಾವಂತರಾಗಿರುವುದರಲ್ಲಿ ತಪ್ಪಿಲ್ಲ. ನಮ್ಮೂರ ವೆಂಕಟೇಶನಿಗೆ ದಿನದ ಕೂಲಿ ಅಮ್ಮಮ್ಮ ಅಂದ್ರೆ ೧೫೦ರೂ. ಹಾಗಾಗಿ ಆತ ಆ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ.

ಮಹಾನಗರಿಯಲ್ಲಿ ಕೆಲಸಕ್ಕೆ ಕಂಪನಿಗೆ ಹೋಗ್ಲಿಕ್ಕೆ ಅಂತಾನೆ ಬೆಳಗಿನ ಜಾವ ೩, ೪ ಗಂಟೆಗೆ ಎದ್ದು ಓಡುವವರು, ಕಾಗೆ ಕೂಗುವ ಮೊದಲೇ ಕುಕ್ಕರ್ ಕೂಗಿಸುವವರನ್ನು ಕಂಡು ನಾನಂತೂ ಬೆವರಿ ಹೋಗಿದ್ದೇನೆ. ಮಳೆ ಇರ‍್ಲಿ, ಗಾಳಿ, ಚಳಿ ಇರ‍್ಲಿ ೩ ಗಂಟೆಗೆ ಎದ್ದು ಹೋಗ್ತಾರೆ. ದೇವರ ತಲೆ ಮೇಲೆ ಹೂವು ತಪ್ಪಿದ್ದರೂ, ಈ ಮಂದಿಗಳು ತಮ್ಮ ಪಾಳಿಯನ್ನು ತಪ್ಪಿಸಲ್ಲ. ನಾವೆಲ್ಲ ಅಟೆಂಡೆನ್ಸ್ ಸಿಗತ್ತೆ ಅಂತ ಶಾಲೆಗೆ ಹೋಗುತ್ತಿದ್ದ ಹಾಗೆ! ಆಫೀಸ್ ಒಳಹೊಕ್ಕ ನಂತರದ ಕುರಿತು ನನಗೆ ಅಷ್ಟೊಂದು ಮಾಹಿತಿಯಿಲ್ಲ. ಕೆಲವರಿಗೆ ಸಿಕ್ಕಾಪಟ್ಟೆ ಕೆಲ್ಸ ಇರುತ್ತಂತೆ. ಇನ್ನು ಕೆಲವರಿಗೆ ೮ ಗಂಟೆ ಕಳೆಯುವುದು ಹೇಗೆ ಎಂಬ ಸಮಸ್ಯೆಯಂತೆ. ಹಾಗಾಗಿ ಸುಡುಗಾಡು ರಾಜಕೀಯ ಮಾಡಿಕೊಂಡು, ಯಾರದ್ದೋ ಹೆಂಡ್ತಿ, ಇನ್ಯ್ನಾರದ್ದೋ ಗಂಡ ವೀಕೆಂಡ್‌ಗಳಲ್ಲಿ ಯಾವ ಫಿಲ್ಮಂ ನೋಡಬೇಕು, ಯಾವ ಪಾರ್ಕ್‌ಗೆ ಹೋಗಬೇಕು, ಎಲ್ಲಿಗೆ ಟ್ರಕ್, ಹನಿಮೂನು ಅಂತೆಲ್ಲ ಲೆಕ್ಕಾಚಾರ ಹಾಕ್ತಾ ಇರ್ತಾರಂತೆ! ಹಾಗಂತ ನನ್ನ ಒಂದಷ್ಟು ಗೆಳೆಯರು ಮಾತಾಡುವುದನ್ನು ಕೇಳಿದ್ದೇನೆ. ನಾನು ವೈಯಕ್ತಿವಾಗಿ ಗಮನಿಸಿದಂತೆ ಶನಿವಾರ ಮತ್ತು ಭಾನುವಾರ ಆನ್‌ಲೈನ್‌ನಲ್ಲಿ ಇರುವವರ ಸಂಖ್ಯೆ ವಿರಳ. ಅದೇ, ವಾರದ ದಿನಗಳಲ್ಲಿ ಜಿಟಾಕ್,ಫೇಸ್‌ಬುಕ್‌ಗಳಲ್ಲಿ ಸಿಕ್ಕಾಪಟ್ಟೆ ಮಂದಿ ಬ್ಯುಸಿ ಇರ್ತಾರೆ. ಅದು ಅವರು ಕಚೇರಿಯಲ್ಲಿ ಇದ್ದಾರೆ ಎಂಬುದುರ ಸೂಚಕ! ಇನ್ನು ಸಾಕಷ್ಟು ಕಚೇರಿಗಳಲ್ಲಿ ಸಾಮಾಜಿಕ ತಾಣ, ಬ್ಲಾಗು, ವೆಬ್ ಎಲ್ಲ ಬ್ಲಾಕ್ ಆಗಿದೆ ಅಂತ ಅವರಿವರು ಮಾತಾಡುವುದನ್ನು ಕೇಳಿರಬಹುದು. ಇದು ಒಂಥರ ನಮ್ಮೂರಿನ ಕಡೆ ಕವಳ ಬ್ಯಾನ್ ಮಾಡಿದ ರೀತಿ. ಒಬ್ಬ ಆಳಿಗೆ ಕೆಲಸಕ್ಕೆ ಬಂದ ನಂತರ ೧೦-೨೦ ಕವಳ ಬೇಕು. ಕವಳ ಹಾಕಲು ೫ ನಿಮಿಷ, ತುಪ್ಪಲು ೫ ನಿಮಿಷ. ಕೆಲಸ ಕೊಟ್ಟ ಯಜಮಾನ ಹೈರಾಣು. ಇದನ್ನು ಗಮನಿಸಿಯೇ ಕಂಪನಿಗಳು ಅಂತರ್ಜಾಲ ಬಳಕೆಗೆ ಕಡಿವಾಣ ಹಾಕಿರಬೇಕು!

ಹೊತ್ತಲ್ಲದ ಹೊತ್ತಿನಲ್ಲಿ ಪಾಳಿಗಳನ್ನು ಮಾಡಿಕೊಂಡು, ಯಾವುದೋ ಹೊತ್ತಲ್ಲಿ ಮಲಗಿ, ಇನ್ನಾವುದೋ ಹೊತ್ತಲ್ಲಿ ಎದ್ದು ಆಸ್ಪತ್ರೆಗೆ ದುಡ್ಡು ಹಾಕುವ ಮಂದಿ ನೋಡಿದ್ರೆ, ಇದು ಇವತ್ತಿನ ಅನಿವಾರ್ಯತೆಯಾ ಅನ್ನಿಸುತ್ತಿದೆ. ನಾವು ಯಾವ ಪರಿ ಮುರ್ಖರಾಗಿದ್ದೇವೆ ಅಂದ್ರೆ, ಮೊನ್ನೆ ಗೆಳೆಯನೊಬ್ಬ ಹೇಳುತ್ತಿದ್ದ. ಅವರ ಆಫೀಸ್‌ನಲ್ಲಿ ಎಷ್ಟೋ ಮಂದಿ ನಲ್ಲಿ ನೀರಿನಿಂದ ಬಾಯಿ ಮುಕ್ಕಳಿಸುವುದಿಲ್ಲವಂತೆ. ಇನ್‌ಫೆಕ್ಷನ್ ಆದ್ರೆ ಎಂಬ ಮುನ್ನೆಚ್ಚರಿಕೆ ಅಂತೆ ಅದು! ಅದೇ ಮಂದಿ ಮೆಕ್‌ ಡೋನಾಲ್ಡ್, ಕೆ‌ಎಫ್‌ಸಿ, ಎಂಟಿ‌ಆರ್‌ಗೆ ವಿಕೆಂಡ್‌ಗೆ ಹೋಗಿ, ರಾಸಾಯನಿಕಗಳನ್ನು ಸುರಿದ ಆಹಾರವನ್ನು ಹೊಟ್ಟೆ ಬಿರಿಯುವ ಹಾಗೆ ತಿಂದು ಬರುತ್ತಾರೆ. ನಲ್ಲಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದಕ್ಕಿಂತ ಇಂಥ ಹೋಟೆಲ್‌ಗಳಲ್ಲಿ ತಿನ್ನುವುದು ಆರೋಗ್ಯಕ್ಕೆ ಹಾನಿ ಎಂಬುದು ಎಲ್ಲರಿಗೂ ಗೊತ್ತು. ಯಾಕಂದ್ರೆ ಎಲ್ಲರೂ ಎಂಜಿನಿಯರ್, ಎಂಬಿ‌ಎ ವಗೈರೆ, ವಗೈರೆ ಪದವಿ ಪಡೆದು ಬಂದವರು ಅಲ್ವಾ? ಆದ್ರೂ ಕೂಡ ಅದೇ ಎಡವಟ್ಟುತನ ಮಾಡುವುದು ಬುದ್ಧವಂತಿಕೆಯ ಔನ್ನತ್ಯವಿರಬೇಕು!

ತುಂಬ ದಿನದಿಂದ ಸ್ವಂತದ್ದು ಏನಾದ್ರು ಮಾಡ್ಬೇಕು ಅಂತ ಆಲೋಚಿಸುತ್ತಾ ಇದ್ದೇನೆ. ಗೆಳತಿ ಹತ್ರ ಅಂಗಡಿ ಇಡ್ಲ ಕೇಳಿದ್ದಕ್ಕೆ ಸಿಕ್ಕಾಪಟ್ಟೆ ಉಗಿದಳು. ಅವಳಿಗೂ ನನ್ನ ಗಂಡ ಅಲ್ಲಿ ಇದು, ಇಲ್ಲಿ ಅದು ಅಂದುಕೊಳ್ಳುವ ಚಪಲ! ಯಾರ‍್ಯಾರು, ಯಾವ್ಯಾವ ಕೆಲಸ ಮಾಡ್ಬೇಕು ಅದನ್ನೇ ಮಾಡಬೇಕು ಎಂಬುದು ಅವಳ ವಾದ. ನಿಜ, ಧೀರೂಬಾಯಿ ಅಂಬಾನಿ ಹಾಗೆ ಅಂದುಕೊಂಡಿದ್ದರೆ, ಇವತ್ತು ಅನಿಲ್, ಮುಕೇಶ್ ಕೂಡ ಪೆಟ್ರೋಲ್ ಹಾಕುತ್ತಿರಬೇಕಿತ್ತು ಅಂದಾಗ ಅವಳಲ್ಲಿ ಉತ್ತರವಿಲ್ಲ. ಎಲ್ಲರಿಗೂ ಒಂದು ಕಂಪನಿ ಕಟ್ಟುವ ಶಕ್ತಿ, ಸಾಮರ್ಥ್ಯ ಇರಲಾರದು ಎಂಬುದನ್ನು ಒಪ್ಪೋಣ. ಆದ್ರೆ ಸ್ವತಂತ್ರ ಕಳೆದುಕೊಂಡು ಬದುಕುವ ಅನಿವಾರ್ಯತೆಯೂ ಇಲ್ಲ ಎಂಬುದು ನಿಜ ಅಲ್ವಾ? ಬ್ರಿಟಿಷರು ಸ್ವತಂತ್ರ ಕೊಟ್ಟು ೬೦ ವರ್ಷವಾದರೂ ನಾವು ಗುಲಾಮರಾಗಿದ್ದೇವೆ. ಆಗ ತಿಳುವಳಿಕೆ ಇಲ್ಲದೆ ಗುಲಾಮರಾದ್ವಿ, ಈಗ ಅದು ಹೆಚ್ಚಾಗಿ ಗುಲಾಮರಾಗಿದ್ದೇವೆ!

ಬೆಳಿಗ್ಗೆ ೩ ಗಂಟೆಗೆ ಎದ್ದು ಆಫೀಸಿಗೆ ಹೋಗುವ ಮಂದಿ ಕಂಡಾಗಲೆಲ್ಲ, ನನಗೆ ಇವರಿಗ್ಯಾಕೆ ಈ ಪರಿ ದಾರಿದ್ರ್ಯ ಬಂದಿದೆ ಅನ್ನಿಸುತ್ತದೆ. ಎಲ್ಲವೂ ದುಡ್ಡಿನ ಮಹಿಮೆ. ಇಲ್ಲಿ ಅದಕ್ಕಿಂತ ಹೆಚ್ಚಾಗಿ ಯಾವುದೂ ಇಲ್ಲ. ಪ್ರಪೋಷನ್, ಇನ್‌ಕ್ರಿಂಟ್ ಮೊದಲಾವುಗಳಿಗಾಗಿ ಮೈ ಮಾರಿಕೊಳ್ಳುವ ಹಂತಕ್ಕೆ ನಾವು ಬಂದಿದ್ದೇವೆ. ಎತ್ತರದ ಹುದ್ದೆ, ಎತ್ತರದ ಸಂಬಳಕ್ಕಾಗಿ ನಾವು ನಮ್ಮ ಹೆಂಡತಿ, ಗಂಡನ್ನನ್ನೂ ಮರೆಯಲೂ ತಯಾರಾಗಿದ್ದೇವೆ. ಇಂಥ ಕಾಲದಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ಬಯಸುವ, ಇಂಥ ಹೋಲಿಕೆಗಳನ್ನೆಲ್ಲ ಮಾಡುವ, ಹೀಗೆಲ್ಲ ಆಲೋಚಿಸುವ ನಾನೇ ಮುರ್ಖನಿರಬೇಕು ಅಂತ ನನಗೆ ಎಷ್ಟೋ ಸಲ ಅನ್ನಿಸುತ್ತದೆ.

ಅಂದ ಹಾಗೆ ಇದೇ ಭಾನುವಾರ  (ಮೇ.೧)ದಂದು ನನ್ನ ಮೊದಲ ಪುಸ್ತಕ “ಅಕ್ಷರ ವಿಹಾರ” ಲೋಕಾಪರ್ಣೆಗೊಳ್ಳುತ್ತಿದೆ. ಸುಂದರ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ. ಒಂದು ಪುಸ್ತಕಕ್ಕೆ ಆಗುವಷ್ಟು ಬರೆದಿದ್ದೇನೆ ಅಂದರೆ, ಅದರ ಹಿಂದೆ ಖಂಡಿತ ಬ್ಲಾಗ್ ಲೋಕದ ಶಕ್ತಿಯಿದೆ. ನಿಮ್ಮ ಪ್ರೋತ್ಸಾಹ, ಕಾಲೆಳೆತ ಎಲ್ಲವೂ ಇದೆ. ಅಂದ ಮೇಲೆ ನೀವೇ ಕಾರ್ಯಕ್ರಮದಲ್ಲಿ ಇಲ್ಲದಿದ್ದರೆ ಹೇಗೆ ಅಲ್ವಾ? ಮುದ್ದಾಂ ಬರಬೇಕು ಎಂಬುದು ನನ್ನ ಅಕ್ಕರೆಯ ಆಹ್ವಾನ. ಮಿಸ್ ಮಾಡೋದಿಲ್ಲ ಅಲ್ವಾ?

ಸ್ಥಳ:-ಬಿ.ಎ ಜಗದೀಶ ವಿಜ್ಞಾನ ಕೇಂದ್ರ,

ನ್ಯಾಷನಲ್ ಕಾಲೇಜು ಆವರಣ, ಜಯನಗರ(ಎಚ್.ಎನ್ ಕಲಾಕ್ಷೇತ್ರದ ಬಳಿ)

ಸ್ಥಳ:-ಬಿ.ಎ ಜಗದೀಶ ವಿಜ್ಞಾನ ಕೇಂದ್ರ,

ನ್ಯಾಷನಲ್ ಕಾಲೇಜು ಆವರಣ, ಜಯನಗರ(ಎಚ್.ಎನ್ ಕಲಾಕ್ಷೇತ್ರದ ಬಳಿ)

Read Full Post »