ಸದನದಲ್ಲಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆಯ ಕಾವು ತಣಿದಿದೆ. ಹಾಗಂತ ಮಾಧ್ಯಮಗಳಲ್ಲಿ ಆ ದೃಶ್ಯವನ್ನು ಮರುಪ್ರಸಾರ ಮಾಡುವುದು ನಿಂತಿಲ್ಲ. ಈಗಾಗಲೇ ಹುಟ್ಟಿಕೊಂಡಿರುವ ಜೋಕ್‌ನಂತೆ ನಮ್ಮ ದೃಶ್ಯಮಾಧ್ಯಮಗಳು ಸವದಿ ವೀಕ್ಷಿಸಿದ ೨ ನಿಮಿಷದ ವೀಡಿಯೊವನ್ನು ಕಾಲು-ಬಾಲು ಸೇರಿಸಿ ರಾಜ್ಯದ ೧೨ ಕೋಟಿ ಜನತೆಗೆ, ೧೨ ತಾಸುಗಳ ಕಾಲ ಉಣಬಡಿಸಿವೆ. ಇಲ್ಲಿ ಸಚಿವರ ಜೊತೆ, ಘಟನೆಯನ್ನು ಮಾಧ್ಯಮಗಳು ನಿರ್ವಹಿಸಿದ ರೀತಿಯೂ ಬಹುಮುಖ್ಯವಾಗುತ್ತದೆ. ರಾಷ್ಟ್ರೀಯ ವಾಹಿನಿಗಳೂ ವೀಡಿಯೊವನ್ನು ಸಂಪೂರ್ಣವಾಗಿ ಬ್ಲರ್ ಮಾಡಿ ಬಿತ್ತರಿಸಿದವು. ಆದರೆ ನಮ್ಮ ಕನ್ನಡದ ವಾಹಿನಿಗಳು ಸವದಿ ನೋಡಿದ ವೀಡಿಯೊದ ಮೂಲ ತುಣಕನ್ನು ಪ್ರದರ್ಶಿಸಿ ಸಾಮರ್ಥ್ಯ ಮೆರೆದವು. ಸವದಿ, ನೋಡಿದ್ದು, ಹೇಳಿದ್ದು, ನೋಡದೇ ಉಳಿದ್ದಿದ್ದು ಎಲ್ಲವನ್ನೂ ಬಿತ್ತರಿಸಿದವು!
ಸಾರ್ವಜನಿಕ ವಾಹಿನಿಗಳು ಈ ಪರಿ ಕೀಳುಮಟ್ಟಕ್ಕೆ ಇಳಿಯಬಹುದಾ ಎಂದರೆ, ತಕ್ಷಣ ವಾಹಿನಿಗಳಿಂದ ಬರುವ ಉತ್ತರ ಟಿಆರ್‌ಪಿ. ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅನ್ನುವ ಮಾಯಾಜಿಂಕೆ ದೃಶ್ಯಮಾಧ್ಯಮವನ್ನು ಆಳುತ್ತಿದೆ. ಎಷ್ಟು ಜನ ನಮ್ಮ ವಾಹಿನಿ ನೋಡಿದರು ಎಂಬುದನ್ನು ಸೂಚಿಸುವ ಈ ರೇಟಿಂಗ್, ಜಾಹೀರಾತು ದೃಷ್ಟಿಯಿಂದ ವಾಹಿನಿಗಳಿಗೆ ಅಗತ್ಯ. ಹೆಚ್ಚು ರೇಟಿಂಗ್ ಇರುವ ವಾಹಿನಿಗೆ ಹೆಚ್ಚು ಜಾಹೀರಾತು ಸಹಜವಾಗಿಯೇ ಬರುತ್ತೆ. ಹೀಗಾಗಿಯೇ ಪ್ರತಿ ವಾಹಿನಿ ನಂಬರ್ ಒನ್ ಪಟ್ಟಕ್ಕಾಗಿ ಗುದ್ದಾಟ ನಡೆಸುವುದು. ಇವತ್ತು ಮಾಧ್ಯಮ ಉದ್ಯಮವಾಗಿದೆ. ಇಲ್ಲಿ ಬರುವ ಲಾಭವನ್ನೇ ಮಾಲೀಕರು ಕೇಳುತ್ತಾರೆ. ಆದರ್ಶ, ಸಮಾಜ ಸೇವೆ..ಇವೆಲ್ಲವೂ ಹುಚ್ಚುತನ.
ಕಳೆದ ೬ ತಿಂಗಳಿನಿಂದ ನಾನು ಪ್ರತಿ ವಾರ ಟಿಆರ್‌ಪಿ ವೀಕ್ಷಿಸುತ್ತಿದ್ದೇನೆ. ಕನ್ನಡದಲ್ಲಿ ಟಿಆರ್‌ಪಿ ಆಧಾರದಲ್ಲಿ ಟಿವಿ೯ ನಂಬರ್ ಒನ್ ವಾಹಿನಿ. ೬ ತಿಂಗಳ ಹಿಂದೆ ೨೬೦-೨೮೦ ಪಾಯಿಂಟ್‌ನಲ್ಲಿದ್ದ ವಾಹಿನಿ, ಈ ವಾರ ೧೬೫ ಪಾಯಿಂಟ್‌ಗೆ ಬಂದು ನಿಂತಿದೆ. ಇನ್ನು ದ್ವಿತೀಯ ಸ್ಥಾನದಲ್ಲಿ ಸುವರ್ಣ ನ್ಯೂಸ್ ನಿಂತಿದೆ. ೬ ತಿಂಗಳ ಹಿಂದೆ ೮೫-೯೫ ಪಾಯಿಂಟ್‌ನಲ್ಲಿದ್ದ ವಾಹಿನಿ ಇವತ್ತು ೪೫ಕ್ಕೆ ಬಂದು ನಿಂತಿದೆ. ಜನಶ್ರಿ, ಸಮಯ, ಕಸ್ತೂರಿ ನ್ಯೂಸ್‌ಗಳು ೨೦-೩೦ರ ಗಡಿಯಿಂದ ಮೇಲೇಳುತ್ತಿಲ್ಲ. ಹಾಗೆ ನೋಡಿದ್ರೆ ಕಳೆದ ೬ ತಿಂಗಳಲ್ಲಿ ಸುದ್ದಿವಾಹಿನಿ ನೋಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ನಾವು ಮೊದಲು ಸುದ್ದಿ ಕೊಟ್ಟೆವು, ನಾವು ಅತ್ಯಂತ ವೇಗವಾಗಿ ಸುದ್ದಿಕೊಟ್ಟೆವು, ನಾವು ಬ್ರೇಕಿಂಗ್ ನ್ಯೂಸ್ ಕೊಟ್ಟೆವು…ಇವೆಲ್ಲ ದೃಶ್ಯಮಾಧ್ಯಮದಲ್ಲಿ ದುಡಿಯುವವರ ಭ್ರಮೆ. ಇದರಿಂದ ಟಿಆರ್‌ಪಿ ಮೇಲೆ ಆಗುವ ಪರಿಣಾಮ ಅಲ್ಪ. ಯಾಕಂದ್ರೆ ಯಾವೊಬ್ಬ ವೀಕ್ಷಕನೂ ಇವತ್ತು ೨೪*೭ ಸುದ್ದಿವಾಹಿನಿಯನ್ನು ಪಟ್ಟು ಹಿಡಿದು ನೋಡುವುದಿಲ್ಲ. ಯಾವುದೋ ಧಾರವಾಹಿಯ ನಡುವೆ, ರಿಯಾಲಿಟಿ ಷೋನಲ್ಲಿ ಜಾಹೀರಾತು ಬಂದಾಗ ನೋಡುಗನ ದೃಷ್ಟಿ ೨೪*೭ ಕಡೆ ಹೊರಳುತ್ತದೆ. ಅದರ ಹೊರತಾಗಿ ೯ಗಂಟೆಯ ನ್ಯೂಸ್‌ನಂಥ ಬೆರಳೆಣಿಕೆಯಷ್ಟು ಪ್ರಮುಖ ನ್ಯೂಸ್‌ಗೆ ಖಾಯಂ ವೀಕ್ಷಕರಿದ್ದಾರೆ. ಹೀಗಾಗಿ ಯಾವ ಸುದ್ದಿಯನ್ನು ಯಾರೂ ಮೊದಲು ನೀಡಿದ್ದು, ಯಾರು ಬ್ರೇಕ್ ಮಾಡಿದ್ದು ಎಂಬಿತ್ಯಾದಿ ಅಂಶಗಳು ಅದೆಷ್ಟೋ ವೀಕ್ಷಕರಿಗೆ ತಿಳಿದೇ ಇರುವುದಿಲ್ಲ. ಇನ್ನೂ ಖಾಯಂ ಆಗಿ ಸುದ್ದಿವಾಹಿನಿ ವೀಕ್ಷಿಸುವವರು ಕೂಡ ಈ ಬ್ರೇಕಿಂಗ್ ಎಂಬ ಹುಚ್ಚುತನದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ.
ಒಂದು ಸುದ್ದಿವಾಹಿನಿಗೆ ಪ್ರಮುಖ ಅಸ್ತ್ರ ಒಂದೊಳ್ಳೆ ಕಾರ್ಯಕ್ರಮ. ಬಹುಶಃ ೬ ತಿಂಗಳಿನಿಂದ ಟಿಆರ್‌ಪಿಯಲ್ಲಿ ಹೆಚ್ಚು ವ್ಯತ್ಯಾಸವಾಗದೆ ಇರುವ ಕಾರ್ಯಕ್ರಮವೆಂದರೆ ರಾತ್ರಿ ೯-೯.೩೦ರವರೆಗೆ ಪ್ರಸಾರವಾಗುವ ಟಿವಿ-೯ ವಿಶೇಷ ಹಾಗೂ ಸುವರ್ಣ ನ್ಯೂಸ್‌ನಲ್ಲಿ ಪ್ರತಿನಿತ್ಯ ಬೆಳಿಗ್ಗೆ ೮-೯ರವರೆಗೆ ಪ್ರಸಾರವಾಗುವ ಬ್ರೇಕ್‌ಫಾಸ್ಟ್ ಮತ್ತು ರಾತ್ರಿ ೯ಗಂಟೆಯ ಸುವರ್ಣಸುದ್ದಿ. ಇದರ ಹೊರತಾಗಿ ಕ್ರೀಡಾ ಬುಲೆಟಿನ್‌ಗಳು, ಸಿನಿಮಾ ಸುದ್ದಿಗಳು ಒಂದಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ನಾವಿಲ್ಲಿ ಸುದ್ದಿಯನ್ನು ಎಷ್ಟು ವೇಗವಾಗಿ ಕೊಡುತ್ತೇವೆ ಎಂಬುದರ ಜೊತೆಗೆ, ಎಷ್ಟು ಅದ್ಭುತವಾಗಿ ಕೊಡುತ್ತೇವೆ ಎಂಬುದು ಮುಖ್ಯವಾಗುತ್ತದೆ.
ನನಗಂತೂ ಇವತ್ತಿಗೂ ನ್ಯೂಸ್ ಅಂದಕೂಡಲೆ ಕಣ್ಮುಂದೆ ಬರುವುದು ಈಟಿವಿಯ ಅಗ್ರ ರಾಷ್ಟ್ರೀಯ ವಾರ್ತೆ. ಕನ್ನಡದ ಸುದ್ದಿ ಜಗತ್ತಿಗೊಂದು ಚೆಂದದ ಸ್ವರೂಪ ಕೊಟ್ಟಿದ್ದು ಈಟಿವಿ. ಅದೇ ಈಟಿವಿಯಿಂದ ಬಂದ ಅನೇಕರು ಇವತ್ತು ದೃಶ್ಯ ಮಾಧ್ಯಮದಲ್ಲಿ ತುಂಬಿದ್ದಾರೆ. ಆದರೆ ಅಂಥದ್ದೊಂದು ನ್ಯೂಸ್ ಬುಲೆಟಿನ್ ಮಾಡಲು ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ! ಇದೀಗ ನಮ್ಮೊಂದಿಗೆ ಪ್ರತಿನಿಧಿ ಶ್ರೀ….ಗಳು ನೇರಸಂಪರ್ಕದಲ್ಲಿದ್ದಾರೆ ಎಂಬ ನ್ಯೂಸ್ ಚಾನೆಲ್‌ಗಳ ಹಿಂಸೆ ನೋಡಿ ಅನೇಕರು ಬೈದಿಕೊಂಡಿರುತ್ತಾರೆ.
ಯಡಿಯೂರಪ್ಪ ಪರಪ್ಪನ ಅಗ್ರಹಾರದಲ್ಲಿ ಯಾವ ಸೋಪು ಬಳಸಿದ್ರು ಅಂತಾ ಒಂದು ವಾಹಿನಿಯ ವರದಿಗಾರ ನೇರ ಪ್ರಸಾರ ನೀಡುತ್ತಿರುತ್ತಾನೆ. ಇನ್ನೊಂದು ವಾಹಿನಿಯವನು ಯಡಿಯೂರಪ್ಪ ತಲೆಗೆ ಸ್ನಾನ ಮಾಡಿದ್ರೊ, ಇಲ್ಲವೊ…?! ಮಾಡಿದ್ದರೆ ಯಾವ ಶಾಂಪೂ ಬಳಸಿರಬಹುದು ಎಂಬ ಕುರಿತು ಕಥೆ ಕಟ್ಟಿ ಹೇಳುತ್ತಿರುತ್ತಾನೆ! ಬಹುಶಃ ಅರ್ಧ ಗಂಟೆಯ ಸುದ್ದಿಯನ್ನು ಯಾವುದೇ ಖರ್ಚಿಲ್ಲದೆ ತುಂಬಿಸಲಿಕ್ಕೋಸ್ಕರವೇ ಈ ಲೈವ್‌ಚಾಟ್ ಎಂಬ ದುರಂತ ಹುಟ್ಟಿದ್ದಿರಬೇಕು! ಖಂಡಿತಾ ವರದಿಗಾರನೊಬ್ಬ ಚೆಂದವಾಗಿ ವಿವರಣೆ ಕೊಟ್ಟರೆ, ಅದು ಕೇಳಲು ಸೊಗಸಾಗಿ ಇರುತ್ತದೆ. ಜೊತೆಗೆ ಆ ವಿವರಣೆ ಮಿತಿಯಲ್ಲಿದ್ದರೆ ಚೆಂದ. ಇದರಲ್ಲಿ ಸುದ್ದಿ ಓದುವ ನಿರೂಪಕರ ಪಾಲು ಇರುತ್ತದೆ. ಇವರು ಎಷ್ಟು ಅದ್ಭುತವಾಗಿ ಪ್ರಶ್ನೆ ಕೇಳುತ್ತಾರೊ, ಅಷ್ಟು ಅದ್ಭುತವಾಗಿ ಲೈವ್‌ಚಾಟ್ ಬರುತ್ತದೆ. ಇಲ್ಲವಾದರೆ ಯಡಿಯೂರಪ್ಪ ಬಳಸಿದ ಬೆಡ್‌ಶಿಟ್, ಬಕೆಟ್, ಬ್ರಶ್…ಇತ್ಯಾದಿಗಳು…!
ನೀವು ಜಾಹೀರಾತು ಬಂದಾಗ ಸುದ್ದಿ ವಾಹಿನಿ ನೋಡುವಿರಿ. ನಾವು ನಿತ್ಯವೂ ಈ ಕರ್ಮಕಾಂಡ ನೋಡಬೇಕು! ಇಂಥ ಒಂದು ಅದ್ಭುತ ಅನುಭವಕ್ಕಾಗಿಯೇ ನಾನು ಕೂಡ ದೃಶ್ಯಮಾಧ್ಯಮಕ್ಕೆ ಕಾಲಿಟ್ಟಿದ್ದು. ಅಲ್ಲಿನ ಸವಾಲು, ಸಮಸ್ಯೆ ತಿಳಿದುಕೊಳ್ಳಬೇಕು ಎಂಬ ಚಟವಿತ್ತು. ಬಹುಶಃ ಒಂದು ವರ್ಷದ ಅವಧಿಯಲ್ಲಿ ದೃಶ್ಯ ಮಾಧ್ಯಮವನ್ನು ಸಾಕಷ್ಟು ಅರ್ಥೈಸಿಕೊಂಡಿರುವೆ. ಇಲ್ಲಿ ಮಾಡಬಹುದಾದ ಹೊಸ ಸಾಧ್ಯತೆಗಳು ಗೊತ್ತಾಗಿದೆ.
ನಮ್ಮೂರಿನ ಬಹುತೇಕ ಮನೆಗಳಲ್ಲಿ ಸಂಜೆ ಯಶಸ್ವಿಯಾಗಿ ಓಡುವುದು ‘ಜಿ’ ಹಿಂದಿ ವಾಹಿನಿ. ಅದರ ಹೊರತಾಗಿ ಗುರುರಾಘವೇಂದ್ರ ವೈಭವ, ಮುಕ್ತದಂಥ ಒಂದೆರಡು ಧಾರವಾಹಿಗಳು. ಇದರಿಂದ ವೀಕ್ಷಕರನ್ನು ಸುದ್ದಿವಾಹಿನಿಯತ್ತ ಡೈವರ್ಟ್ ಮಾಡುವುದು ಅಷ್ಟು ಸುಲಭದ ಮಾತೇನಲ್ಲ. ಹಾಗಾಗಿಯೇ ಪ್ರತಿವಾರವೂ ಸುದ್ದಿವಾಹಿನಿ ನೋಡುವ ವೀಕ್ಷಕರ ಸಂಖ್ಯೆ ಕುಸಿಯುತ್ತಿರುವುದು. ಜೊತೆಗೆ ಹೊಸತಾಗಿ ಬಂದ ಸುದ್ದಿವಾಹಿನಿಗಳಿಗೆ ಖಾಯಂ ನೋಡುಗರು ಹಂಚಿಹೋಗುತ್ತಾರೆ. ಖಂಡಿತವಾಗಿಯೂ ಹೇಳುತ್ತೇನೆ ಟಿಆರ್‌ಪಿ ಹೆಸರಿನಲ್ಲಿ ಬಟ್ಟೆ ಬಿಚ್ಚುವ ಕಾರ್ಯಕ್ರಮಕ್ಕೆ ಅಂತಿಮವಾಗಿ ಬರುವ ರೇಟಿಂಗ್ ೦.೫-೧. ಕೆಲವಕ್ಕೆ ೦.೫ಗಿಂತ ಕಡಿಮೆ ಬರುವುದು ಉಂಟು. ಗಂಗೂಲಿ ಸೊನ್ನೆ ಹೊಡೆಯುತ್ತಾನೆ ಎಂದರೆ, ನನಗೂ ಅದನ್ನು ಹೊಡೆಯಲು ಬರುವುದಿಲ್ಲವಾ? ಎಂಬುದು ಹಳೆ ಗಾದೆ. ಹಾಗೆ ಒಂದಷ್ಟು ಒಳ್ಳೆ ಕಾರ್ಯಕ್ರಮ ಮಾಡಿದರೆ ಗಂಟೇನು ಖರ್ಚಾಗುತ್ತೆ ಅಲ್ವಾ? ವಾಹಿನಿಗಳ ಪ್ರಮುಖ ಖುರ್ಚಿಯಲ್ಲಿ ಕುಳಿತವರ ಮನಸ್ಥಿತಿ ಬದಲಾಗಬೇಕು. ಜೊತೆಗೆ ತಮ್ಮ ಅಂಗಳದಲ್ಲಿ ವಾಹಿನಿಗಳಿಗೆ ಉಗಿಯುವ ಜನ, ಆ ಉಗಿತವನ್ನು ವಾಹಿನಿಗಳ ಕಚೇರಿಗೂ ತಲುಪಿಸುವ ಪ್ರಯತ್ನ ಮಾಡಬೇಕು. ಜನ ಈ ಕಾರ್ಯಕ್ರಮಕ್ಕೆ ಉಗಿಯುತ್ತಿದ್ದಾರೆ ಎಂಬುದು ಒಳಗೆ ಕುಳಿತ ನಮಗೆ ತಿಳಿದರೆ ಮಾತ್ರ ಕಾರ್ಯಕ್ರಮ ಬದಲಾಯಿಸಲು ಸಾಧ್ಯ.
ನಮ್ಮ ದುರಂತ ಇದೇ ನೋಡಿ. ನಾವು ಬೈದಿದ್ದು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅವರನ್ನು ತಲುಪುವ ಒಂದು ಪ್ರಯತ್ನ ನಾವು ಮಾಡಬಹುದು. ವರದಹಳ್ಳಿ ಕುರಿತು ಮೊನ್ನೆ ಲವಲವಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರ ಕುರಿತು ಹಲವರು ಬ್ಲಾಗ್ ಲೋಕದಲ್ಲಿ ಬೊಬ್ಬೆ ಹೊಡೆದರು. ಲೇಖಕರನ್ನು ಬೈದರು ಹೊರತೂ, ಯಾರೂ ಕೂಡ ಲೇಖನದ ಕುರಿತು ಸ್ಪಷ್ಟೀಕರಣ ಕೊಡಿ ಅಂತ ಒಂದು ಪತ್ರವನ್ನು ವಿ.ಕ ಕಚೇರಿಗೆ ಬರೆಯಲಿಲ್ಲ. ವಾಸ್ತವವಾಗಿ ಲೇಖನ ಪ್ರಕಟವಾದ ನಂತರ ಅದು ಪತ್ರಿಕೆಯ ಸ್ವತ್ತಾಗುತ್ತೆ. ಹಾಗಾಗಿ ಅದರಲ್ಲಿ ಲೇಖಕನಿಗೆ ಮರು ಉತ್ತರ ಕೊಡುವ ಸ್ವಾತಂತ್ರ್ಯ ಇರುವುದಿಲ್ಲ. ಖಂಡಿತವಾಗಿಯೂ ನಾಲ್ಕರು ಮಂದಿ ಕಚೇರಿಗೆ ಹೋಗಿ ಆ ಲೇಖನವನ್ನು ಸೂಕ್ತವಾದ ರೀತಿಯಲ್ಲಿ ಪ್ರತಿಭಟಿಸಿದ್ದರೆ ಸ್ಪಷ್ಟೀಕರಣ ಸಿಗುತ್ತಿತ್ತು. ಒಂದು ಪುಟದ ಮಾನ ಹರಾಜಿಗೆ ನಮ್ಮ ಪತ್ರಿಕೆಗಳು ಒಂದೇ ಸಾಲಿನ ಸ್ಪಷ್ಟೀಕರಣ ನೀಡುತ್ತವೆ ಎಂಬುದು ನಂತರದ ಮಾತು ಬಿಡಿ. ಆದರೆ ಅಷ್ಟಾದರೂ ಸಿಗುತ್ತಿತ್ತು. ಆ ಪ್ರಯತ್ನ ಮಾಡದೇ ನಾವು ಸುಮ್ಮನೆ ಮನೆಯಲ್ಲಿ ಕುಳಿತು ಬೊಬ್ಬೆ ಹೊಡೆಯುತ್ತೇವೆ. ಹೀಗಾಗಿ ಇಂಥ ಪ್ರಮಾದಗಳಲ್ಲಿ ಸಾರ್ವಜನಿಕರ ಪಾಲೂ ಇದೆ.
ಅದ್ಯಾಕೊ ನೀಲಿ ಚಿತ್ರ ತೋರಿಸಿದ ವಾಹಿನಿಗಳ ನಿಲುವು ಬೇಸರ ತರಿಸಿದೆ. ಹೀಗಾಗಿ ನಾನೊಬ್ಬ ದೃಶ್ಯ ಮಾಧ್ಯಮದ ಪ್ರತಿನಿಧಿ ಎಂಬುದನ್ನು ಮರೆತು, ನನ್ನ ಮಿತಿಯಿಂದ ಹೊರಬಂದು ಇಷ್ಟೆಲ್ಲ ಬರೆದಿದ್ದೇನೆ. ನಾಳೆ ನಾನು ಮುಖ್ಯಸ್ಥನ ಸ್ಥಾನದಲ್ಲಿ ಕುಳಿತರೂ ನನ್ನಿಂದಲೇ ಇಂಥ ತಪ್ಪುಗಳು ಮರುಕಳಿಸುತ್ತದೆಯೋ, ಏನೋ ಗೊತ್ತಿಲ್ಲ. ಇವುಗಳ ಹಿಂದಿರಬಹುದಾದ ಆಡಳಿತ ಮಂಡಳಿ ಒತ್ತಡದ ಕುರಿತು ನನಗೆ ಅರಿವಿಲ್ಲ…