Feeds:
ಲೇಖನಗಳು
ಟಿಪ್ಪಣಿಗಳು

Archive for ಅಕ್ಟೋಬರ್, 2008

ಹಾಯ್ ಕೋತಿ,
ಮೆಸೆಜ್ ಮಾಡೋಣ ಅಂದ್ರೆ ನಿನ್ನ ಹತ್ತಿರ ಫೋನ್ ಇಲ್ಲ. ಲ್ಯಾಂಡ್ ಲೈನ್‌ಗೆ ಕಾಲ್ ಮಾಡಿದ್ರೆ ನಿಮ್ಮಪ್ಪನ ಶನಿ ಕಾಟ ತಪ್ಪಿದ್ದಲ್ಲ. ಲೆಟರ್ ಹಾಕ್ಲಿಕ್ಕೆ ನಂಗೆ ಟೈಂ ಇಲ್ಲ! ಹೀಗಾಗಿ ನಿನ್ನ ಜತೆ ಹರಟೆ ಹೋಡೆಯದೇ ತುಂಬಾ ದಿನಗಳಾಯ್ತು. ನನ್ನ ಜತೆಗೆ ಮಾತನಾಡದ ಬೇಸರ ನುಂಗಿಕೊಳ್ಳಲು ‘ಅದೇ ಮಾತು, ಅದೇ ರಾಗ, ಅದೇ ಕಿರಿಕಿರಿ…ಅವನ ಜತೆ ಮಾತನಾಡದೇ ಇದ್ದಷ್ಟು ಒಳಿತು’ ಅಂತಾ ದೊಡ್ಡದಾಗಿ ನೀನು ಫೋಸ್ ಕೊಟ್ಟೇ ಕೊಡ್ತಿಯ ಅಂತಾ ನಂಗೆ ಚೆನ್ನಾಗಿ ಗೊತ್ತು ಬಿಡು.

ಅಂದಹಾಗೆ…ಏನೋ ಹೇಳಬೇಕು ಅಂತಾ ಹೊರಟ್ಟಿದ್ದೆ ಇನ್ನೆನೋ ನೆನಪಾಗಿ ಹೇಳಬೇಕಾದ ವಿಚಾರವೇ ಮರೆತು ಹೋಯಿತು ನೋಡು. ಎಲ್ಲಾ ನಿನ್ನ ಸಹವಾಸ ದೋಷ.

ವಿಷಯ ಏನಪ್ಪಾ ಅಂತಂತಂದ್ರೆ…ಹುಡುಗಿ ಬದುಕು ಈಸೀನಾ, ಹುಡುಗರ ಬದುಕು ಈಸೀನಾ ಅಂತಾ ನಾನು,ನೀನು ಜಗಳ ಹೊಡೆಯುತ್ತಿದ್ದದ್ದು ನೆನಪಿದೆಯಾ? ಆ ಜಗಳದಲ್ಲಿ ನೀನು ಗೆದಿದ್ದರೆ, ನಿಂಗೆ ಚೆನ್ನಾಗಿ ನೆನಪಿರುತ್ತಿತ್ತು. ಆದ್ರೆ ಗೆದ್ದವನು ನಾನಲ್ವಾ!!! ಆ ಜಗಳ ಈಗ ಮತ್ತ್ಯಾಕೆ ನೆನಪಾಯಿತು ಅಂತೀಯಾ? ಮೊನ್ನೆ ಅದೇನಾಯಿತು ಅಂದ್ರೆ…

ಏನೂ ಆಗಿಲ್ಲ!!!

ಅಂದಹಾಗೆ ನನ್ನ ಬ್ಲಾಗಿನಲ್ಲಿ ಮಹಿಳಾವಾದದ ಕುರಿತು ಚರ್ಚೆ ಆರಂಭಿಸಿದ್ದು ನಿಂಗೆ ಹೇಳಿದ್ದೆ ಅಲ್ವಾ? ಅದು ಮುಂದುವರಿದು ನಂಗೆ ಮಹಿಳಾ ದ್ವೇಷಿ, ಪುರುಷವಾದಿ ಅಂತೆಲ್ಲಾ ಹೊಸ ಹೊಸ ಬಿರುದು ಸಿಕ್ತು. ಹಾಗೆ ಬಿರುದು ಕೊಟ್ಟವರಿಗೆಲ್ಲಾ ನಿನ್ನಂಥ ಬಜಾರಿಯೊಬ್ಬಳು ನನ್ನ ಗೆಳತಿ ಅಂತಾ ಹೇಳಲೇ ಇಲ್ಲ. (ಯಾಕಂದ್ರೆ ನಿನ್ನನ್ನು ನೀನೇ ಹುಡುಗಿ ಅಂತಾ ಒಪ್ಪಿಕೊಳ್ಳಲ್ವಲ್ಲಾ?)

ಈ ಜಗತ್ತು ಒಂತರಹ ವಿಚಿತ್ರ ಕಣೆ, ಇಲ್ಲಿ ಕುಂತರೂ ತಪ್ಪು, ನಿಂತರೂ ತಪ್ಪು ಅನ್ನುವ ಮಂದಿಯೇ ಹೆಚ್ಚು(ನಿನ್ನನ್ನು ಸೇರಿಸಿ). ಒಬ್ಬರನ್ನು ಹೊಗಳಿದರೆ ಅಥವಾ ಒಬ್ಬರ ಪರ ಬರೆದರೆ ಅವರಿಗೆ ಬಕೆಟ್ ಹಿಡಿದ ಅಂತಾರೆ. ಒಬ್ಬರನ್ನು ಬೈದರೆ ಅಹಂಕಾರಿ ಅಂತಾರೆ. ಸುಮ್ಮನೆ ಕೂತರೆ ಸೋಮಾರಿ ಅಂತಾರೆ! ನೀನು ಸೀರೆ ಉಟ್ಟಾಗ ಗೌರಮ್ಮ ಅಂತಾ, ಚೂಡಿ ಹಾಕಿದ್ರೆ ಈಗಿನ ಕಾಲದ ಬಜಾರಿ ಅಂತಾ ಅಣಗಿಸುತ್ತಿರುತ್ತೇನಲ್ಲ, ಇದು ಒಂತರಹ ಹಾಗೆ! ನಾವ್ಯಾರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮನ್ನು ನಮಗೆ ತೃಪ್ತಿಪಡಿಸಿಕೊಳ್ಳುವುದೇ ಕಷ್ಟ. (ಹಾಗಂತ ನಾನು ನಿನ್ನನ್ನು ಅಣಗಿಸುವುದು, ರೇಗಿಸುವುದು ಬಿಡುತ್ತೇನೆ ಅಂದುಕೊಳ್ಳಬೇಡ)

ಹುಡುಗಿಯರು ಗುರುತಿಸಿಕೊಳ್ಳಬಾರದವರ ಜತೆ ಗುರುತಿಸಿಕೊಂಡ್ರೆ ಎಷ್ಟು ಕಷ್ಟ , ಏನೆಲ್ಲಾ ಅಪವಾದಗಳು ಬರತ್ತೆ ಅಂತಾ ನೀನು ಯಾವಾಗ್ಲೂ ಹೇಳ್ತಾ ಇರ್‍ತಿದ್ಯಲ್ಲ(ಹಾಗೆ ಹೇಳುವವಳು ನನ್ನ ಸಹವಾಸ ಯಾಕೆ ಮಾಡಿದೆ ಅನ್ನೋದು ಮಾತ್ರ ಅರ್ಥವಾಗ್ಲಿಲ್ಲ) ಅದು ನಿಜ ಅಂತಾ ನನಗೆ ಈಗೀಗ ಅರ್ಥವಾಗ್ತಾ ಇದೆ! ಟೋಟಲೀ ಹೇಳೋದಾದ್ರೆ ಈ ಜಗತ್ತೇ ಸರಿಯಿಲ್ಲ. ಅಥವಾ ಜಗತ್ತು ಸರಿಯಿಲ್ಲ ಅಂತಾ ಭಾವಿಸಿಕೊಳ್ಳುವ ನಾವು ಸರಿಯಿಲ್ಲದೇ ಇರಬಹುದು. ಹೋಗ್ಲಿ ಬಿಡು ನಾನು ನೀನು ಅಂಥ ಗಂಭೀರ ವಿಚಾರ ಚರ್ಚೆ ಮಾಡುವುದರ ಪ್ರಯೋಜನವೇನು ಅಲ್ವಾ?

ಮತ್ತೆ ವಿಶೇಷ…ನಾನು ಈ ಸಲ ಸುರ್ಘ ರಜೆ ಹಾಕಿ ದೀಪಾವಳಿಗೆ ಬರಬೇಕು ಅಂದುಕೊಂಡಿದ್ದೇನೆ. ಎಲ್ಲೆಲ್ಲೋ ತಿರುಗುವ ಸ್ಕೆಚ್ ಹಾಕಿಟ್ಟಿದ್ದೇನೆ. ನನ್ನ ಈ ಎಲ್ಲಾ ಕಾರ್ಯಗಳಿಗೂ ನಿಮ್ಮ ಸಹಕಾರ ಖಂಡಿತವಾಗಿಯೂ ಬೇಕು. ಸಹಕಾರ ನೀಡದೇ ಇದ್ದರೂ ಒಂತರಹ ಉಪಕಾರವೇ. ನಾನು ಒಬ್ಬನೇ ಹೋಗಿ ತಿರುಗಿ ಬಂದರೆ ಖರ್ಚು ಸ್ವಲ್ಪ ಕಡಿಮೆಯಾಗತ್ತೆ. ನಿನ್ನನ್ನು ಕಟ್ಟಿಕೊಂಡು ಹೋದರೆ….?!!!

ಇಲ್ಲಿಗೆ ನನ್ನ ಪತ್ರ ಮುಗಿಸುತ್ತಾ ಇದ್ದೇನೆ. ದೀಪಾವಳಿಗೆ ಊರಿಗೆ ಬರುವೆ. ಹಾಗಾಗಿ ತಾವು ಈ ಪತ್ರಕ್ಕೆ ಉತ್ತರ ಬರೆಯುವ ಸಾಹಸವನ್ನು ದಯವಿಟ್ಟು ಮಾಡಬೇಡಿ…ಬಹುವಚನ ಕೊಟ್ಟೆ ಅಂತಾ ಹಿಗ್ಗಬೇಡ. ಊರಿಗೆ ಬಂದಾಗ….

ಇಂತಿ
ಕೋತಿಯ ಸಂಗಾತಿ

Read Full Post »

ಬ್ರಾಹ್ಮಣರು ಭೋಜನಪ್ರಿಯರು, ಹೊಟ್ಟೆಬಾಕರು…ಬ್ರಾಹ್ಮಣರಿಗೆ ನೀವು ಅದೇನು ಬೇಕಾದರೂ ಅಣಗಿಸಿಕೊಳ್ಳಿ! ಬ್ರಾಹ್ಮಣರು ಡೈರಿ ಬರೆದರೆ ಅದರಲ್ಲಿ ೬೦ ಪುಟ ಊಟದ ವಿಚಾರವೇ ಇರತ್ತೆ ಅಂತಾ ಬೇಕಾದರೂ ಬೈದುಕೊಳ್ಳಿ! ಆದರೆ ಒಂದಿಷ್ಟು ಪದಾರ್ಥಗಳ ರುಚಿ ಅವರ ಕೈಯಲ್ಲಲದೇ ಮತ್ಯಾರಿಂದಲೂ ತರಿಸಲು ಅಸಾಧ್ಯ. ಅಂತಹದ್ದೇ ಸಾಲಿಗೆ ಸೇರಿದ ಒಂದು ಪದಾರ್ಥ ಸಣ್ಣಕ್ಕಿ ಕೇಸರಿಬಾತು.

ಒಂದು ಕಾಲದಲ್ಲಿ ಉತ್ತರ ಕನ್ನಡದ ಮದ್ವೆ, ಮುಂಜಿ ಅಂದ್ರೆ ಅದಕ್ಕೆ ಕಜ್ಜಾಯ ಸಣ್ಣಕ್ಕಿ ಕೇಸರಿಬಾತೇ ಅಂತಾ ಕಡಾಖಂಡಿತವಾಗಿ ಹೇಳಬಹುದಾಗಿತ್ತು! ಆ ಪರಿ ಸಣ್ಣಕ್ಕಿ ಕೇಸರಿಬಾತು ಸಿದ್ದಾಪುರ ಸೀಮೆಯಲ್ಲಿ ಫೇಮಸ್ಸು! ನಾನಂತೂ ಅಜ್ಜನ ಮನೆಯನ್ನು ಕೇಸರಿಬಾತು, ತಂಬೂಳಿ ಅನ್ನದ ಕೇರಿ ಅಂತಾನೇ ಆಡಿಕೊಳ್ಳುತ್ತಿದ್ದೆ! ಅಜ್ಜನ ಮನೆಯ ಆಯಿ ಸತ್ತ ಮೇಲೆ ಅದರ ನೆನಪೇ ಮಾಸಿ ಹೊದಂತಾಗಿದೆ. ಮೊನ್ನೆ ಆಯಿ ಕುರಿತು ಮಾತಾಡುತ್ತಿರುವಾಗ ಸಡನ್ನಾಗಿ ಈ ಕೇಸರಿ ಬಾತಿನ ನೆನಪಾಯಿತು ನೋಡಿ.

ಘಮಘಮಿಸುವ ಸಣ್ಣಕ್ಕಿ, ಅದಕ್ಕೆ ತಕ್ಕಂತೆ ಕಾಶ್ಮೀರದ ಶುದ್ಧ ಕೇಸರಿ. ಆಯಿ ಮಾಡಿಟ್ಟ ಎಮ್ಮೆ ತುಪ್ಪ. ಇವಿಷ್ಟು ಇದ್ದರೆ ಕೇಸರಿಬಾತು ರೆಡಿ ಅಂತಾ ಆವಾಗ ನನ್ನ ಲೆಕ್ಕ. ನಾನು ಮನೆಯಲ್ಲಿ ಒಂದೆರಡು ಸರಿ ಈ ಕೇಸರಿ ಬಾತು ಮಾಡುವ ಸಾಹಸಕ್ಕೆ ಕೈಹಾಕಿದ್ದೆ. ರುಚಿ ಬಾರದೇ ಹೋದಾಗಲೆಲ್ಲಾ ಕೇಸರಿ ಮೇಲೆ, ತುಪ್ಪದ ಮೇಲೆ ರೇಗಾಡುತ್ತಿದೆ! ದರಿದ್ರ ಶೆಟ್ಟಿ ಸಣ್ಣಕ್ಕಿ ಅಂತಾ ಯಾವುದೋ ಅಕ್ಕಿ ಕೊಟ್ಟಿದ್ದಾನೆ. ಅಪ್ಪಾ , ಶೆಟ್ಟಿ ಅಂಗಡಿಯದ್ದು ಪ್ಯೂರ್ ಸಣ್ಣಕ್ಕಿ ಅಂತಾ ತಂದಿದಾರೆ ಅಂತಾ ಕೆಲವೊಮ್ಮೆ ಅಪ್ಪನ ಮೇಲೂ ರೇಗಾಡುತ್ತಿದ್ದೆ! ಒಟ್ಟಲ್ಲಿ ಸುಮಾರು ಸಲ ಸಣ್ಣಕ್ಕಿಯಿಂದ ಕೇಸರಿ ಬಾತಿನ ತರಹದ್ದೇ ಐಟಮ್ ಮಾಡಿದ್ದೆ ಬಿಡಿ!

ಸಣ್ಣಕ್ಕಿಯನ್ನು ಹದದಲ್ಲಿ ಬೇಯಿಸಿ ಒಂದಿಷ್ಟು ಸಕ್ಕರೆ,ತುಪ್ಪ ಸುರಿದು ಪಾಕ ಬರಿಸಿದರೆ, ರುಚಿಗೆ ತಕ್ಕಷ್ಟು ಉಪ್ಪು ಸುರಿದರೆ, ಮೇಲಿಂದ ಒಂದಿಷ್ಟು ಕೇಸರಿ, ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ ಎಸೆದರೆ ಸಣ್ಣಕ್ಕಿ ಕೇಸರಿ ಬಾತ್ ರೆಡಿ..ಅಂತಾ ಬಾಯಲ್ಲಿ ಹೇಳುವುದು ತುಂಬಾ ಸುಲಭ. ಹಾಗೆ ಹೇಳುತ್ತಾ ಬಾಯಿ ಚಪ್ಪರಿಸಿಕೊಂಡು ತಿನ್ನುವುದು ಮತ್ತೂ ಸರಳ! ಆದರೆ ರುಚಿ ತರಿಸಲು ಒದ್ದಾಡುವ ಪರಿ ಅಡುಗೆ ಭಟ್ಟರಿಗೆ ಮಾತ್ರ ಗೊತ್ತು.

ಮತ್ತೆ ಬೆಂಗಳೂರಿಗೆ ಬೈದರೆ ನೀವು ನನ್ನನ್ನು ಬೈಯ್ಯಬಹುದು. ಅಷ್ಟು ಕಷ್ಟದಲ್ಲಿ ಯಾಕೆ ಬೆಂಗಳೂರಲ್ಲಿ ಇರಬೇಕು. ಮನೆಗೆ ಹೋಗ್ರಿ ಸುಮ್ಮನೆ ಅಂತಾ ಸಲಹೆ ಕೊಡಬಹುದು! ಹಾಗಾಗಿ ಮತ್ತೆ ಬೆಂಗಳೂರಿಗೆ ಬೈಯ್ಯುವ ಸಾಹಸಕ್ಕೆ ಕೈ ಹಾಕಲಾರೆ. ಈ ಮಾತಿನ ಅರ್ಥ ಏನು ಎಂಬುದು ಅರ್ಥವಾಯಿತಲ್ಲಾ?! ಒಟ್ಟಲ್ಲಿ ನಾನು ಸಣ್ಣಕ್ಕಿ ಕೇಸರಿ ರುಚಿ ಕಾಣದೆ ಏಳೆಂಟು ವರ್ಷವೇ ಕಳೆಯಿತು. ಈಗೀಗ ಊರ ಬದಿಗೂ ಕೇಸರಿಬಾತು ಇಲ್ಲ ಅಂತಾ ಮೊನ್ನೆ ಭಾವ ಹೇಳುತ್ತಿದ್ದ. ಅವನ ಮಾತು ಇಷ್ಟೆಲ್ಲಾ ಬರೆಯುವಂತೆ ಮಾಡಿತು ನೋಡಿ!

 

Read Full Post »

ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧೀಜಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ! ಸೈದ್ಧಾಂತಿಕ ಪಿತ್ತ ನೆತ್ತಿಗೇರಿದ ಕೆಲ ಆರ್‌ಎಸ್‌ಎಸ್ ಮಂದಿ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಅನೇಕ ಕಾರಣ ಕೊಟ್ಟು ಸಮರ್ಥಿಸುತ್ತಾರೆ! ಆದರೆ ಒಬ್ಬನೇ ಒಬ್ಬ ಗಾಂಧಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಕುರಿತು ಯಾರೂ ಮಾತಾಡುವುದೇ ಇಲ್ಲ. ದೇಶದ ಎಲ್ಲಾ ಕ್ರಾಂತಿಕಾರಿಗಳನ್ನು ಎದುರುಹಾಕಿಕೊಂಡು ಕೊನೆಯುಸಿರಿರುವವರೆಗೂ ಅಹಿಂಸೆ ಮಂತ್ರ ಜಪಿಸಿದ ಮಹ್ಮಾತನ ಸಾಧನೆಯ ಕುರಿತು ಇಲ್ಲಿ ಚರ್ಚೆಯೇ ಆಗುವುದಿಲ್ಲ!

೧೩ ನೇ ವಯಸ್ಸಿನಲ್ಲಿ ಮಡದಿಯನ್ನು ಕಟ್ಟಿಕೊಂಡ, ತನ್ನ ೨೦ ನೇ ವಯಸ್ಸಿಗೆ ೪ ಮಕ್ಕಳನ್ನು ಪಡೆದು ಸಮಾಜದ ಸಾಮಾನ್ಯನಂತೆ ಬದುಕುತ್ತಿದ್ದ , ಬ್ಯಾರಿಸ್ಟರ್ ಪದವಿಗಾಗಿ ಹಪಹಪಿಸುತ್ತಿದ್ದ ಯುವಕನೊಬ್ಬ ಮುಂದೊಂದು ದಿನ ಆ ಪರಿ ಎತ್ತರಕ್ಕೇರುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ೧೮೯೦ರ ದಶಕದಲ್ಲಿ ಕಾನೂನು ಪದವಿ ಪಡೆಯಲು ದೂರದ ಇಂಗ್ಲೆಂಡ್‌ಗೆ ತೆರಳಿದ ಹುಡುಗನೊಬ್ಬ ದೇಶಕ್ಕೆ ಮರಳಿ, ಸಮುದ್ರದ ದಂಡೆಯಲ್ಲಿ ಕುಳಿತು ಸತ್ಯಾಗ್ರಹ ನಡೆಸುತ್ತಾನೆ, ಸತ್ಯ, ಶಾಂತಿ,ಅಂಹಿಸೆ ಎಂಬ ಮಂತ್ರ ಜಪಿಸಿಕೊಂಡು ದೇಶದುದ್ದಕ್ಕೂ ಸಂಚರಿಸುತ್ತಾನೆ…ಊಹುಂ ಬೇರೆಯವರು ಹಾಳಾಗಲಿ ಸ್ವತಃ ಅವರೇ ಇಂತಹದ್ದೊಂದು ಕನಸು ಕಂಡಿರಲಿಕ್ಕಿಲ್ಲ!

ಮೋಹನ್‌ದಾಸ ಕರಮ್‌ಚಂದ್ ಗಾಂಧಿ!!

ಈ ಹೆಸರನ್ನು ಕೇಳದವರ್‍ಯಾರಿದ್ದಾರೆ ಹೇಳಿ? ಮಹಾತ್ಮ, ರಾಷ್ಟ್ರಪಿತ, ಬಾಪು…ಅದೆಷ್ಟು ಅಕ್ಕರೆಯ ಅಡ್ಡ ಹೆಸರುಗಳು ಅವರಿಗೆ. ಅಂತಹ ಮಹಾತ್ಮ ತೀರಾ ಪಡ್ಡೆ ಹುಡುಗರ ತರಹ ತಮ್ಮ ಬಾಲ್ಯವನ್ನು ಕಳೆದವರು ಎಂದರೆ ಯಾರಿಗೂ ನಂಬಿಕೆ ಬರಲಿಕ್ಕಿಲ್ಲ. ತಮ್ಮ ೨೦ನೇ ವಯಸ್ಸಿನಲ್ಲೇ ಗಾಂಧೀಜಿ ೪ ಮಕ್ಕಳ ತಂದೆಯಾಗಿದ್ದರು ಎಂದರೆ ಅಚ್ಚರಿಯಾಗಬಹುದು. ೧೮೬೯ರ ಅ.೨ ರಂದು ಗುಜರಾತಿನ ಪೋರಬಂದರು ಎಂಬ ಪುಟ್ಟ ಪಟ್ಟಣದಲ್ಲಿ ಹುಟ್ಟಿದ ಗಾಂಧೀಜಿ ೧೮೮೮ ರಲ್ಲಿ ಕಾನೂನು ಪದವಿಗೋಸ್ಕರ ಲಂಡನ್‌ಗೆ ತೆರಳಿದರು. ಅಲ್ಲಿ ಅಧ್ಯಯನ ಪೂರೈಸಿದ ಗಾಂಧೀಜಿ ಮುಂಬಯಿಗೆ ಮರಳಿ ಮತ್ತೆ ವೃತ್ತಿ ಜೀವನಕೋಸ್ಕರ ೧೮೯೩ ರಲ್ಲಿ ದಕ್ಷಿಣಾಫ್ರಿಕಾದತ್ತ ಪಯಣ ಬೆಳೆಸಿದರು.

ಬಾಪುವಿನ ಸಾಧನಾ ಬದುಕು ಆರಂಭವಾಗುವುದೇ ಆಫ್ರಿಕಾದಿಂದ. ಪೀಟರ್ ಮ್ಯಾರಿಟ್ಸ್‌ಬರ್ಗ್ ಎಂಬ ನಗರದಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡು ರೈಲು ಪ್ರಯಾಣ ಮಾಡುತ್ತಿದ್ದ ಗಾಂಧೀಜಿಯನ್ನು ರೈಲಿನಿಂದ ಹೊರಹಾಕಲಾಯಿತು. ವರ್ಣಭೇದ ನೀತಿಯ ಫಲವಾಗಿ ರೈಲಿನಿಂದ ಹೊರಬಂದ ಬಾಪು ವರ್ಣಭೇದ ನಿತಿಯನ್ನು ದಕ್ಷಿಣಾಫ್ರಿಕಾದಿಂದ ಕಿತ್ತೆಸೆಯುತ್ತೇನೆಂದು ಆವತ್ತೇ ಪಣ ತೊಟ್ಟರು. ಅಲ್ಲಿನ ಅವಮಾನವೇ ಅವರನ್ನು ಸಾಮಾಜಿಕ ಚಟುವಟಿಕೆಯತ್ತ ಕರೆ ತಂದಿತು ಎಂದರೂ ತಪ್ಪಗಲಾರದು. ಆ ನಂತರವೂ ಅವರು ಸಾಕಷ್ಟು ಸಲ ಕೆಂಪುಮೂತಿ ಬ್ರಿಟಿಷರಿಂದ ಅವಮಾನ ಅನುಭವಿಸಿದರು. ದರ್ಬನ್ ನ್ಯಾಯಾಲಯ ಯಾವುದೋ ಕಾರಣಕ್ಕಾಗಿ ಒಮ್ಮೆ ಅವರು ಧರಿಸಿದ್ದ ಪೇಟ ಕಳಚುವಂತೆ ಆದೇಶ ನೀಡಿತ್ತು! ಅಲ್ಲಿನ ಸಾಕಷ್ಟು ಹೊಟೆಲ್‌ಗಳಲ್ಲಿ ಬಿಳಿಯರಲ್ಲದ ಬಾಪುವಿಗೆ ವರ್ಣಭೇದದ ರಾಜಮರ್ಯಾದೆ ದೊರೆಯುತಿತ್ತು!

ವರ್ಣಭೇದ ನೀತಿಯ ವಿರುದ್ಧ ಹೋರಾಡಲು, ಆಫ್ರಿಕಾದಲ್ಲಿನ ಭಾರತೀಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳಲು ನಿರ್ಧರಿಸಿದ ಗಾಂಧೀಜಿ, ೧೮೯೪ ರಲ್ಲಿ ನಟಾಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪಿಸಿದರು. ೧೯೦೬ರಲ್ಲಿ ಅಲ್ಲಿನ ಸರಕಾರ ಭಾರತೀಯ ನಿವಾಸಿಗಳಿಗೆ ವಿರುದ್ಧವಾದ ಕಾನೂನನ್ನು ಜಾರಿಗೆ ತಂದಿತು. ೧೯೦೬ರ ಸೆ.೧೧ ರಂದು ಗಾಂಧೀಜಿ ಈ ಕಾನೂನಿನ ವಿರುದ್ಧ ಶಾಂತಿಯುತ ಹೋರಾಟಕ್ಕೆ ಇಳಿದರು. ಸತ್ಯಾಗ್ರಹ ಸೂತ್ರವನ್ನು ಮೊದಲ ಬಾರಿಗೆ ಆ ಹೋರಾಟದಲ್ಲಿ ಪ್ರಯೋಗಿಸಿದರು. ಅಲ್ಲಿಂದ ನಂತರ ಸತ್ಯಾಗ್ರಹ ಬಾಪು ಹೋರಾಟದ ಅವಿಭಾಜ್ಯ ಅಂಗವಾಯಿತು. ಗಾಂಧೀಜಿ ನಡೆಸುವುದು ಹೋರಾಟವಲ್ಲ , ಅದು ಸತ್ಯಾಗ್ರಹ ಎನ್ನುವಷ್ಟರ ಮಟ್ಟಿಗೆ ಆ ಸೂತ್ರ ಯಶಸ್ಸು ಸಾಧಿಸಿತು. ಇದರಿಂದಾಗಿ ಗಾಂಧೀಜಿಗೆ ಸೆರೆಮನೆ ವಾಸದ ಸೌಭಾಗ್ಯ ಲಭಿಸಿತು! ಅಲ್ಲಿಂದ ಮುಂದೆ ಅವರಿಗೆ ಹೋರಾಟ ಎಂಬದು ದಿನಚರಿಯಾಯಿತು. ವರ್ಣಭೇದ ನೀತಿಯ ವಿರುದ್ಧ ನಿರಂತರವಾಗಿ ಸೆಣೆಸಿದ ಬಾಪು ೧೯೧೫ ರಲ್ಲಿ ಅಲ್ಲಿಂದ ಭಾರತಕ್ಕೆ ಮರಳಿದರು.

ಕ್ರಾಂತಿಕಾರಿಗಳ ಅಬ್ಬರ ಜೋರಾಗಿದ್ದ ಕಾಲವದು. ೧೮೫೭ ರ ದಂಗೆಯಿಂದ ಮಹತ್ತರ ಪಾಠ ಕಲಿತ ದೇಶದಲ್ಲಿನ ಕ್ರಾಂತಿಕಾರಿಗಳು ಬ್ರಿಟಿಷರನ್ನು ಮಟ್ಟ ಹಾಕಲು ಸರ್ವ ಸನ್ನದ್ಧರಾಗಿದ್ದರು. ಚಂದ್ರಶೇಖರ್ ಆಜಾದ್ ಬಣ ಒಂದೆಡೆ ಕ್ರಾಂತಿಯ ಕಿಚ್ಚು ಹತ್ತಿಸಲು ಪ್ರಯತ್ನಿಸುತ್ತಿದ್ದರೆ, ಸಾವರ್‌ಕರ್ ಸದ್ದುಗದ್ದಲವಿಲ್ಲದೇ ಯುದ್ಧಕ್ಕೊಂದು ವೇದಿಕೆ ನಿರ್ಮಿಸಲು ಅಣಿಯಾಗುತ್ತಿದ್ದರು. ಅಂತಹ ಸಂದರ್ಭದಲ್ಲಿ ದೇಶಕ್ಕೆ ಕಾಲಿಟ್ಟ ಗಾಂಧೀಜಿ ಶಾಂತಿ, ಉಪವಾಸ, ವನವಾಸದ ಮಂತ್ರ ಜಪಿಸಿದರೆ ಮೂಸಿ ನೋಡುವವರು ಇರಲಿಲ್ಲ ಬಿಡಿ!

ನೂರಾರು ಸಾವರ್‌ಕರ್‌ಗೆ ಎದುರಾಗಿ ಒಬ್ಬನೇ ಒಬ್ಬ ಬಾಪು, ಕುದಿಯುವ ಬಿಸಿ ರಕ್ತದ ಸಹಸ್ರಾರು ಯುವಕರಿಗೆ ಎದುರಾಗಿ ಒಬ್ಬನೇ ಒಬ್ಬ ಗಾಂಧಿ…ಆದರೂ ಅವರು ಸತ್ಯ, ಶಾಂತಿ, ಅಹಿಂಸೆ ಎಂಬ ಮಂತ್ರವನ್ನು ಬಿಡಲಿಲ್ಲ. ರಕ್ತ ಹರಿಸಿ ದೇಶದೆ ದಾಸ್ಯ ವಿಮುಕ್ತಿಗೊಳಿಸುವ ಸಿದ್ದಾಂತವನ್ನು ಒಪ್ಪಲಿಲ್ಲ. ವ್ಯಕ್ತಿಯ ತಾಕತ್ತು ಎಂತಹ ಸನ್ನಿವೇಶವನ್ನೂ ಬದಲಿಸಬಲ್ಲದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಆ ಕಾರಣಕ್ಕಾಗಿಯೇ ಜಗತ್ತು ಅವರಿಗೆ ಮಹಾತ್ಮ ಎಂಬ ಗೌರವ ನೀಡಿದ್ದು. ನಮ್ಮ ಬಾಪು ಎಲ್ಲರಿಗಿಂತ ಭಿನ್ನ ಅನ್ನಿಸಿಕೊಂಡಿದ್ದು.

ಆಫ್ರಿಕಾದಿಂದ ಮರಳಿದ ನಂತರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿಕೊಂಡರು. ೧೯೧೮ರ ಖೇಧಾ ಸತ್ಯಾಗ್ರಹ ಅವರ ಹೋರಾಟಕ್ಕೊಂದು ಹೊಸ ಖದರು ನೀಡಿತು. ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಗುಜರಾತ್‌ನ ಹಳ್ಳಿಗಳ ಅಭಿವೃದ್ಧಿಗೆ ಮುಂದಾದರು. ಅಲ್ಲಿನ ಜನರನ್ನು ಅದರಲ್ಲೂ ಮುಖ್ಯವಾಗಿ ಕೆಳವರ್ಗದ ಮಂದಿಯನ್ನು ಸಂಘಟಿಸುವ ಸಾಹಸಕ್ಕೆ ಕೈ ಹಾಕಿದರು. ತಮ್ಮ ಅನುಯಾಯಿಗಳಾಗಿ ಬಂದವರಿಗೆ ಸತ್ಯ, ಅಹಿಂಸೆ, ಶಾಂತಿಯ ಮಂತ್ರವನ್ನು ಉಪದೇಶಿಸಿದರು. ಅಲ್ಲೇ ಒಂದು ಆಶ್ರಮ ನಿರ್ಮಿಸಲು ಕೈಹಾಕಿದರು. ಗಾಂಧೀಜಿ ಎಂಬ ವ್ಯಕ್ತಿತ್ವ ಗುಜರಾತ್ ಪ್ರಾಂತ್ಯದ ಜನರಲ್ಲಿ ಅದ್ಯಾವ ಪರಿ ಅಚ್ಚಾಗಿತ್ತು ಅಂದರೆ, ಅವರನ್ನು ಬ್ರಿಟಿಷರು ಬಂಧಿಸಿದಾಗ ಸಹಸ್ರಾರು ಜನ ಜೈಲಿನ ಮುಂದೆ ಧರಣಿ ನಡೆಸಿದರು. ಅಲ್ಲಿಂದ ಮುಂದೆ ಗಾಂಧೀಜಿ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

೧೯೨೧ ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಾಯಕರಾಗಿ ಆಯ್ಕೆಯಾದರು. ೧೯೧೯ ರ ಜಲಿಯನ್ ವಾಲಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ನಡೆಸಿದ ಅಸಹಕಾರ ಚಳುವಳಿ, ಸುಮಾರು ೬೦,೦೦೦ ಕಾರ್ಯಕರ್ತರೊಂದಿಗೆ ಉಪ್ಪಿನ ಮೇಲೆ ತೆರಿಗೆ ವಿಧಿಸುವ ಬ್ರಿಟಿಷರ ನಿಲುವಿನ ವಿರುದ್ಧ ೧೯೩೦ ರಲ್ಲಿ ಆರಂಭಿಸಿದ ದಂಡಿ ಸತ್ಯಾಗ್ರಹ, ೧೯೪೨ ಕ್ವಿಟ್ ಇಂಡಿಯಾ ಚಳುವಳಿ, ವಿದೇಶಿ ವಸ್ತುಗಳ ಬಹಿಷ್ಕರಿಸಿ ಅದಕ್ಕೆ ಪರ್ಯಾಯವಾಗಿ ಹುಟ್ಟುಹಾಕಿದ ಸ್ವರಾಜ್ ಆಂದೋಲನ…ಹೀಗೆ ರಾಷ್ಟ್ರಪಿತ ಸಂಘಟಿಸಿದ ಚಳುವಳಿಗೆ ಲೆಕ್ಕವೇ ಇಲ್ಲ. ಅವರನ್ನು ಹಿಂಬಾಲಿಸಿ ಬಂದ ಮಂದಿಯೂ ಲೆಕಕ್ಕೇ ಸಿಗುವುದಿಲ್ಲ.

‘ಬಾಪು ಕುಟಿ’ ರಜನಿ ಭಕ್ಷಿ ಬರೆದ ಸುಂದರ ಪುಸಕ್ತವದು. ಗಾಂಧಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಒಂದಿಷ್ಟು ಸಾಧಕರ ಕಥೆಯದು. ಬಾಪು ನೆಲೆಸಿದ ಕುಟಿಯಿಂದ ಆರಂಭವಾಗುವ ಕಥೆಯಲ್ಲೆಲ್ಲೂ ಬಾಪುವಿನ ಪಾತ್ರ ನೇರವಾಗಿ ಬರುವುದೇ ಇಲ್ಲ. ಬಾಪು ಚಿಂತನೆಗಳನ್ನು ಅಳವಡಿಸಿಕೊಂಡ ಪ್ರಾಧ್ಯಾಪಕರು, ವಿಜ್ಞಾನಿಗಳು…ಹೀಗೆ ಹಲವು ಪಾತ್ರಗಳ ಮೂಲಕ ಗಾಂಧೀಜಿಯನ್ನು, ಅವರ ತತ್ವಗಳ ಗಾಢತೆಯನ್ನು ಪರಿಚಯಿಸುವ ಅದ್ಬುತ ಪ್ರಯತ್ನವನ್ನು ಭಕ್ಷಿ ಮಾಡುತ್ತಾರೆ. ಅಂತಹವರ ಕಥೆಯನ್ನು ಕೇಳಿದಾಗಲೆಲ್ಲಾ ನನಗೆ ಬಾಪು ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ.

ಅಂತಹ ಶ್ರೇಷ್ಠರ ಕುರಿತಾಗಿ ಈ ತಲೆಮಾರಿನ ಯುವಕರಿಗೆ ಅಂದೆಹದ್ದೋ ಅಸಡ್ಡೆ! ಯಾವುದೇ ದುಶ್ಚಟವಿಲ್ಲದ ಒಬ್ಬ ವ್ಯಕ್ತಿಯನ್ನು ಗಾಂಧೀಜಿಗೆ ಹೋಲಿಸಿ ಅಪಹಾಸ್ಯ ಮಾಡುತ್ತಾರೆ ಇಂದಿನ ಯುವಕರು. ದುಶ್ಚಟವಿಲ್ಲದ ಮಂದಿಯ ಆದರ್ಶದ ಪ್ರತೀಕವಾಗಿ ಗಾಂಧೀಜಿ ನಿಲ್ಲುತ್ತಾರೆ ಎಂದರೆ ನಿಜಕ್ಕೂ ಅದು ಹೆಮ್ಮೆಯ ವಿಚಾರ. ಆದರೆ ಅಪಹಾಸ್ಯದ ಪ್ರತೀಕವಾಗಿ ಮಹಾತ್ಮನನ್ನು ಮುಂದೆ ನಿಲ್ಲಿಸುವುದು ನಿಜಕ್ಕೂ ಬೇಸರದ ಸಂಗತಿ. ಹಾಗಂತ ಗಾಂಧಿ ಮೇಲೆ ಗೂಬೆ ಕೂರಿಸುವ ಯತ್ನ ಇವತ್ತು ನಿನ್ನೆಯದ್ದೇನಲ್ಲ! ನಿರಂತರವಾಗಿ ನಡೆಯುತ್ತಲೇ ಬಂದಿದೆ. ಭಗತ್‌ಸಿಂಗ್‌ರನ್ನು ಬಿಡಿಸುವ ತಾಕತ್ತು ಗಾಂಧೀಜಿಗೆ ಇತ್ತು. ಆದರೂ ಅವರು ಬೇಕಂತಲೇ ಭಗತ್‌ರನ್ನು ಬಿಡಿಸಲಿಲ್ಲ ಎಂದು ಸಾರಿಕೊಂಡು ತಿರುಗಾಡುವ ಮಂದಿಗೆ ನಮ್ಮಲ್ಲಿ ಕೊರತೆಯಿಲ್ಲ!

ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ! ಸೈದ್ಧಾಂತಿಕ ಪಿತ್ತ ನೆತ್ತಿಗೇರಿದ ಕೆಲ ಆರ್‌ಎಸ್‌ಎಸ್ ಮಂದಿ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಅನೇಕ ಕಾರಣ ಕೊಟ್ಟು ಸಮರ್ಥಿಸುತ್ತಾರೆ! ಗಾಂಧೀಜಿಯನ್ನು ಸಮಾಜಘಾತುಕ ಎಂದು ಬಿಂಬಿಸಲು ಬೇಕಾದ ಸರ್ವಪ್ರಯತ್ನವನ್ನು ಮಾಡುತ್ತಾರೆ. ಗಾಂಧಿ ಹತ್ಯೆಯಿಂದ ಮಾಧವ್ ಸದಾಶಿವ ಗೊಳವಲ್ಕರ್ ಅವರಿಗಾದ ಅನ್ಯಾಯದ ಅಜ್ಜಿ ಕಥೆಗಳನ್ನು ಹೇಳುತ್ತಾರೆ!

ಇನ್ನೂ ಅಪ್ಪಟ ನೆಹರೂ ಸಿದ್ದಾಂತಕ್ಕೆ ಅಂಟಿಕೊಂಡು ಬಂದಿರುವ ಕೆಲ ಮೂಲಭೂತವಾದಿ ಕಮ್ಯೂನಿಸ್ಟರಿಗೂ ಗಾಂಧೀಜಿ ಅಂದರೆ ಅಲರ್ಜಿ! (ಎಷ್ಟಂದರೂ ಕಮ್ಯೂನಿಸಂ ಅನ್ನುವುದು ಆವತ್ತಿನ ಕಾಲದಿಂದಲೂ ನೆಹರೂ ಕುಟುಂಬ ಸಾಕಿಕೊಂಡ ಬಂದ … ಅಲ್ಲವೇ?!) ಇವರೆಲ್ಲರ ನಡುವೆಯೂ ಗಾಂಧಿ ತತ್ವಗಳನ್ನು ತಮ್ಮ ಪಾಡಿಗೆ ತಾವು ಅನುಸರಿಸಿಕೊಂಡು ಬದುಕುತ್ತಿರುವ ಬೆರಳೆಣಿಕೆಯಷ್ಟು ಮಂದಿ ಈಗಲೂ ಇದ್ದಾರೆ ಎಂಬುದು ಒಂಚೂರು ಸಮಾಧಾನದ ಸಂಗತಿ.

ಆದರೂ ನಾವು ಗಾಂಧಿಯನ್ನು ಅರ್ಥೈಸಿಕೊಳ್ಳಬೇಕಾದ ದಿಕ್ಕಿನಿಂದ ಅರ್ಥೈಸಿಕೊಳ್ಳುತ್ತಿಲ್ಲ. ನುಡಿದಂತೆ ಬದುಕಿನ ರಾಷ್ಟ್ರಪಿತನ ಶ್ರೇಷ್ಠ ಬದುಕನ್ನು ನೆನಪಿಸಿಕೊಳ್ಳುವುದಿಲ್ಲ. ಒಬ್ಬನೇ ಒಬ್ಬ ಗಾಂಧಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಕುರಿತು ಯಾರೂ ಮಾತಾಡುವುದೇ ಇಲ್ಲ. ದೇಶದ ಎಲ್ಲಾ ಕ್ರಾಂತಿಕಾರಿಗಳನ್ನು ಎದುರುಹಾಕಿಕೊಂಡು ಕೊನೆಯ ಉಸಿರಿರುವವರೆಗೂ ಅಹಿಂಸೆ ಮಂತ್ರ ಜಪಿಸಿದ ಮಹ್ಮಾತನ ಸಾಧನೆಯ ಕುರಿತು ಇಲ್ಲಿ ಚರ್ಚೆಯೇ ಆಗುವುದಿಲ್ಲ ಎಂದರೆ ನಾಚಿಕೆಯಾಗತ್ತೆ ಅಲ್ವಾ?

 

Read Full Post »

ಪಂಚಮುಖಿ ಗೆಳೆಯರ ಬಳಗದ ಗಣೇಶೋತ್ಸವ ಮೆರವಣಿಗೆಯಂತೆ ಅದು! ದೀಪಾವಳಿ ಹತ್ತಿರ ಬಂದರೂ ಈ ಊರಲ್ಲಿ ಇನ್ನೂ ಗಣೇಶನಿಗೆ ಮುಕ್ತಿ ಸಿಕ್ಕಿಲ್ಲ ಅಂದುಕೊಳ್ಳುತ್ತಾ ಮೆರವಣಿಗೆ ನೋಡಲು ಹೊರಗಡೆ ಬಂದೆ. ಅದೇನು ಜಬರ್‌ದಸ್ತ್ ಉತ್ಸವ ಅಂತೀರಾ?! ಮೆರವಣಿಗೆ ಹೋಗಿ ಹತ್ತು ನಿಮಿಷವಾದರೂ ನನಗೆ ಹಾಯ್ದುಹೋಗಿದ್ದು ಗಣೇಶನ ಮೆರವಣಿಗೆಯೋ ಅಥವಾ ಶವಯಾತ್ರೆಯೋ ಅನ್ನೋದು ಬಗೆಹರಿಯಲಿಲ್ಲ!

ಅದ್ಯಾಕೊ ನನಗೆ ಉತ್ಸವ, ಮೆರವಣಿಗೆ ಅಂದಾಗಲೆಲ್ಲಾ ಉಡುಪಿಯದ್ದೇ ನೆನಪಾಗತ್ತೆ. ಅಲ್ಲಿನ ಕೊಂಕಣಿ ಮಂದಿ ನವರಾತ್ರಿ ವೇಳೆಯಲ್ಲಿ ಒಂದು ಶಾರದೋತ್ಸವ ಮಾಡ್ತಾರೆ, ಚೌತಿಯಲ್ಲಿ ಗಣೇಶೋತ್ಸವ ಮಾಡ್ತಾರೆ…ಆ ಎರಡು ಕಾರಣಕ್ಕೆ ಮಾತ್ರ ನಮಗೆಲ್ಲಾ ಕೊಂಕಣಿ ಮಂದಿ ಇಷ್ಟವಾಗುವುದು! ವರ್ಷದ ೩೬೫ ದಿನವೂ ಆ ಮಂದಿ ಮನೆ ಬಾಗಿಲು ತೆರೆದಿರುವುದಿಲ್ಲ! ಆ ಮನೆಗಳಿಗೆ ಬಂದುಹೋಗುವವರೂ ಇಲ್ಲ ಅನ್ನಿಸತ್ತೆ! ನಾವು ಕಾಲೇಜಿಗೆ ಹೋಗುವ ಬೀದಿ ತುಂಬಾ ಕೊಂಕಣಿಗರದ್ದೇ ಮನೆಗಳಿತ್ತು. ಸದಾ ಬಾಗಿಲು ಮುಚ್ಚಿರುತ್ತಿತ್ತು. ವೈವೇ, ಕಸಲ್‌ರೇ, ಕಿತ್ತಲೇ ಮಾಮೂ…ಎನ್ನುತ್ತಾ ಪಕ್ತಾ ದುಡ್ಡು ಮಾಡುವುದೊಂದು ಬಿಟ್ಟು ಈ ಜುಗ್ಗರಿಗೆ ಮತ್ತೇನೂ ಗೊತ್ತಿಲ್ಲ ಅಂತಾ ಕಾಲೇಜಿಗೆ ಹೋಗುವಾಗಲೆಲ್ಲಾ ಆ ಮಂದಿಗೆ ಬೈದುಕೊಂಡೇ ಹೋಗುತ್ತಿದ್ದೇವು!

ಕೇವಲ ದುಡ್ಡು ಮಾಡುವುದು ಮಾತ್ರವಲ್ಲ, ಮಾಡಿದ ದುಡ್ಡನ್ನು ಖರ್ಚು ಮಾಡುವ ಕಲೆಯನ್ನೂ ಕೊಂಕಣಿಗರು, ದಕ್ಷಿಣ ಕನ್ನಡದ ಮಂದಿಯಿಂದಲೇ ಕಲಿಯಬೇಕು. ಉತ್ಸವ ಅಂದಾಗ ನನಗೆ ಇವತ್ತಿಗೂ ಕಣ್ಮುಂದೆ ಬಂದು ನಿಲ್ಲುವುದು ಎಲ್.ವಿ.ಟಿ ದೇವಸ್ಥಾನದ ಶಾರದೋತ್ಸವ. ಏನಿಲ್ಲ ಅಂದ್ರು ಸುಮಾರು ೧೫-೨೦ ಟ್ಯಾಬ್ಲೊಗಳ ಮೆರವಣಿಗೆ ಅದು. ಪ್ರತಿವರ್ಷವೂ ವಿಭಿನ್ನ ಟ್ಯಾಬ್ಲೊಗಳು. ಇನ್ನು ಚಂಡೆ ಬಡಿತಕ್ಕೆ ದಕ್ಷಿಣ ಕನ್ನಡ ಟ್ರೇಡ್ ಮಾರ್ಕ್. ಗಬ್ಬು ಹಾ(ಆ)ರ್ಕೆಸ್ಟ್ರಾದ ಸೊಗಡಿಲ್ಲದ, ಚಂಡೆ, ವಾದ್ಯಗಳ ಅದ್ಬುತ ಉತ್ಸವ ಅದು. ಮಧ್ಯರಾತ್ರಿ ೧.೩೦-೨ ಗಂಟೆಯವರೆಗೂ ನಡೆಯುವ ಆ ಮೆರವಣಿಗೆಯನ್ನು ಉಡುಪಿಯಲ್ಲಿ ಇದ್ದಷ್ಟು ಕಾಲವೂ ಮಿಸ್ ಮಾಡಿಕೊಳ್ಳಲಿಲ್ಲ.

ಚಂಡೆಗೆ ಸರಿಯಾಗಿ ಕುಣಿಯುವ ಯಜಮಾನರ ತಂಡ ಒಂದು ದಿಕ್ಕಾದರೆ, ಇನ್ನೊಂದೆಡೆ ನಮ್ಮ ಮಠದ ಹುಡುಗರ ನರ್ತನ! ಮೆರವಣಿಗೆ ಕುಣಿತ ಅಂದ್ರೆ ಕುಡುಕರ ಕುಣಿತ ಅನ್ನೋ ಆಪಾದನೆಯಿದೆ. ಆದ್ರೆ ಉಡುಪಿ ಮಾತ್ರ ಅದರಿಂದ ಹೊರತು. ಉಡುಪಿ ಪರಿಸರದ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರು ತೀರಾ ಸಭ್ಯಸ್ತ ಮಂದಿ. ಕಾಲೇಜಿಗೆ ಬರುವ ಚೆಂದ ಚೆಂದದ ಕೊಂಕಣಿ ಹುಡುಗಿಯರೂ ಹೆಜ್ಜೆ ಹಾಕುತ್ತಿದ್ದರು. ಅದನ್ನು ನೋಡಲೇಂದೇ ಕೆಲವರು ಹೋಗುತ್ತಿದ್ದರೂ ಎಂಬುದು ಸತ್ಯವಾದರೂ, ಎಲ್ಲಿಯೂ ಅಸಭ್ಯ ವರ್ತನೆ ಇರುತ್ತಿರಲಿಲ್ಲ. ಹುಡುಗಿಯರೂ ಸೇರಿದಂತೆ ಎಲ್ಲರೂ ಉತ್ಸವದ ಆನಂದ ಸವಿಯುವ ಮನೋಭಾವದವರಾಗಿದ್ದರು. ಅಂದಹಾಗೆ ಕೆಲವರು ಟೈಟಾಗಿ ಬರುತ್ತಿರಲಿಲ್ಲ ಎಂದೇನಲ್ಲ! ಅವರ ಕುಣಿತಕ್ಕೆ ಆಯೋಜಕರು ಪ್ರತ್ಯೇಕ ಗಲ್ಲಿ ಒದಗಿಸಿಕೊಟ್ಟು ಮೆರವಣಿಗೆಯ ಶಿಸ್ತನ್ನು ಕಾಪಾಡುತ್ತಿದ್ದರು. ಆ ಶಿಸ್ತಿನಿಂದಲೇ ಇರಬೇಕು ಇವತ್ತಿಗೂ ಅಲ್ಲಿನ ಉತ್ಸವ ನೆನಪಾಗುವುದು.

ಆಡಂಬರಕ್ಕೆ ದಕ್ಷಿಣ ಕನ್ನಡದ ಮಂದಿ ಅಂತಾ ಮೊದಲೇ ಹೇಳಿದೆ. ಹೌದು, ಕೇವಲ ಕೊಂಕಣಿ ಮಂದಿಯ ಮೆರವಣಿಗೆ ಮಾತ್ರವಲ್ಲ, ರಥಬೀದಿಯಲ್ಲಿ ನಡೆಯುವ ಮೆರವಣಿಗೆ, ಪರ್ಯಾಯದ ಮೆರವಣಿಗೆ, ಅಷ್ಟಮಿ,ವಿಟ್ಲಪಿಂಡಿ…ಊಹುಂ ಯಾವುದನ್ನೂ ತೆಗೆದು ಹಾಕುವಂತಿಲ್ಲ. ಶಿರೂರು ಸ್ವಾಮಿಗಳನ್ನು ಜನ ಏನೂ ಬೇಕಾದರೂ ಆಡಿಕೊಳ್ಳಲಿ, ಆದರೆ ಆ ಸ್ವಾಮಿಗಳಿಂದ ಮೆರವಣಿಗೆಗೊಂದು ಹೊಸ ರಂಗು ಬರುತ್ತಿದ್ದದಂತೂ ಸುಳ್ಳಲ್ಲ. ಹುಲಿವೇಷ, ಡ್ರಮ್ ಕುಣಿತ…ಪ್ರತಿವರ್ಷ ಮೆರವಣಿಗೆಯಲ್ಲೊಂದು ಹೊಸತನ ತಂದಿಟ್ಟ ಹೆಗ್ಗಳಿಕೆ ಶೀರೂರು ಶ್ರೀಗಳದ್ದೆ ಬಿಡಿ!

ತಗೋಳೇ, ತಗೋಳೇ…ಅವ ಕಿರುಚುತ್ತಲೇ ಇದ್ದ. ಯಾರು,ಯಾರಿಂದ,ಏನನ್ನು ತಗೋಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲರೂ ‘ಹೋ’ ಎಂದು ಕಿರುಚುತ್ತಾ, ನಲಿಯುತ್ತಲೇ ಇದ್ದರು…ಇದು ಪಂಚಮುಖಿ ಗೆಳೆಯರ ಬಳಗದ ಗಣೇಶೋತ್ಸವದ ಒಂದು ಸ್ಯಾಂಪಲ್ ಅಷ್ಟೇ. ಊರು ತುಂಬಾ ಬಣ್ಣ, ಬಣ್ಣದ ದೀಪ ಹಾಕಿ, ಒಂದಿಷ್ಟು ಕುಡುಕರನ್ನು ಸೇರಿಸಿಕೊಂಡು , ಹಾರ್ಕೆಸ್ಟ್ರಾ ಮಾಡಿಕೊಂಡು, ಯಾರೋ ದೇಣಿಗೆ ಕೊಟ್ಟ ಒಂದಿಷ್ಟು ದುಡ್ಡು ಹಾಳು ಮಾಡುವ ಬದಲು ದಕ್ಷಿಣ ಕನ್ನಡದ ರೀತಿಯಲ್ಲಿ ಅಚ್ಚುಕಟ್ಟಾದ, ಸಂಸಾರವೇ ಭಾಗವಹಿಸಬಹುದಾದ ಮೆರವಣಿಗೆ ಆಯೋಜಿಸಲು ಬೆಂಗಳೂರಿನ ಮಂದಿಗೆ ಏಕೆ ಸಾಧ್ಯವಾಗುವುದಿಲ್ಲ ಎಂಬುದೇ ನನಗೆ ಅರ್ಥವಾಗದು. ಅಂಥ ಉತ್ಸವ ನೋಡಿ ಒಂದಿಷ್ಟು ಬೈದು, ಉಡುಪಿ ಉತ್ಸವ ನೆನಪಿಸಿಕೊಳ್ಳುವುದೊಂದೇ ನನ್ನಿಂದಾಗುವ ಕೆಲಸ ಎಂಬುದನ್ನು ನೆನಪಿಸಿಕೊಂಡಾಗಲೆಲ್ಲಾ ಬೇಸರವಾಗತ್ತೆ…

Read Full Post »