Feeds:
ಲೇಖನಗಳು
ಟಿಪ್ಪಣಿಗಳು

Archive for ಫೆಬ್ರವರಿ, 2010

ನಮ್ಮ  ಸಮಾಜದಲ್ಲಿ  ಕಳ್ಳರ್‍ಯಾರು, ಪೋಲಿಸರ್‍ಯಾರು ಅಂತಾ ಪತ್ತೆ ಹಚ್ಚುವುದು, ಎದುರಿಗೆ ನಿಂತವರಲ್ಲಿ  ಒಳ್ಳೆಯವರ್‍ಯಾರು, ಕೆಟ್ಟವರ್‍ಯಾರು ಎಂದು ಗುರುತಿಸುವಷ್ಟೇ ಕಷ್ಟದ ಕೆಲಸ. ಖಾಕಿ ತೊಟ್ಟವರೆಲ್ಲ  ಪೋಲಿಸರು ಎಂದು ಭಾವಿಸಿದರೆ,  ಗರಿ-ಗರಿ ಖಾದಿ ತೊಟ್ಟವರನ್ನು ಒಳ್ಳೆಯವರೆಂದು ಭಾವಿಸಿ ಮೋಸ ಹೋದ ಕುರಿಗಳ ಸಾಲಿಗೆ ನಾವೂ ಸೇರಿಬಿಡುತ್ತೇವೆ! ಅದೇನೆ ಇರಲಿ, ಕಥೆ ಏನಪ್ಪ  ಅಂದ್ರೆ, ನಾನು ಮೊನ್ನೆ ರಾತ್ರಿ ೮ಗಂಟೆ ನಂತರ ಮೆಜಸ್ಟಿಕ್ ಸುತ್ತ-ಮುತ್ತ ಒಂದು ರೌಂಡ್ ಹಾಕಿ ಬಂದೆ. ಬೆಂಗಳೂರಿಗೆ ಬಂದು ೩ ವರ್ಷ ಆಯಿತು ಅಂತಾ ಹೇಳಿಕೊಳ್ಳಲು ನನಗೆ ನಿಜಕ್ಕೂ ನಾಚಿಕೆಯಾಗತ್ತೆ. ಗಾಂ ನಗರವನ್ನೇ  ನಾನಿನ್ನು  ಸರಿಯಾಗಿ ನೋಡಿಲ್ಲ. ಅಸೈನ್‌ಮೆಂಟ್ ಇದ್ದಾಗ ಹೊರಗಡೆ ಹೋಗುವುದು ಬಿಟ್ಟರೆ, ಮತ್ತೆ ತಿರುಗಾಡುವುದು ಬಹಳ ಕಡಿಮೆ. ಹಾಗಾಗಿಯೇ ಇವತ್ತಿಗೂ ಲಾಲ್‌ಬಾಗ್ ಸರಿಯಾಗಿ ಗೊತ್ತಿಲ್ಲ. ವಿಶ್ವೇಶ್ವರಯ್ಯ  ಮ್ಯೂಸಿಯಂ ಅಂತಾ ಒಂದಿದೆಯಂತೆ ಎಂದು ಕೇಳಿದ್ದೇನಷ್ಟೆ!

ಮೊನ್ನೆ ಮೆಜೆಸ್ಟಿಕ್‌ನಲ್ಲಿ  ಟ್ರಾಫಿಕ್ ಜಾಮ್ ಆಗಿತ್ತು. ಅಲ್ಲಿ  ಟ್ರಾಫಿಕ್ ಜಾಮ್ ಆದ್ರೆ, ಕ್ಲಿಯರ್ ಆಗಲು ಎಷ್ಟು  ಹೊತ್ತು ಬೇಕಾಗಬಹುದೆಂಬ ಸ್ಪಷ್ಟವಾದ ಅರಿವಿದೆ. ಯಾಕೆಂದ್ರೆ, ಈ ಹಿಂದೆ ೩-೪ ಸಲ ಗಂಟೆಗಟ್ಟಲೆ  ಬಸ್ ಒಳಗೆ ಕುಳಿತು ಜಪ ಮಾಡಿದ್ದಿದೆ. ಹಗಲಾದ್ರೆ ಆಚೆ-ಈಚೆ ತಿರುಗಾಡೋ ಚೆಂದದ ಹುಡುಗಿಯರಿಗೆ ಲೈನ್ ಹಾಕಿಕೊಂಡಾದ್ರೂ ಹೊತ್ತು ಕಳೆಯಬಹುದಿತ್ತು! ಆದ್ರೆ, ರಾತ್ರಿ ಅದು ಸಾಧ್ಯವಿಲ್ಲ  ಅಂದುಕೊಳ್ಳುವ ಹೊತ್ತಿಗೆ ನ್ಯಾಷನಲ್ ಮಾರ್ಕೇಟ್ ನೆನಪಿಗೆ ಬಂತು. ಅದನ್ನು  ನಾನು ಕೇಳಿದ್ದೆ, ಆದ್ರೆ ಕಣ್ಣಾರೆ ನೋಡಿರಲಿಲ್ಲ. ಯಾಕೆ ಇವತ್ತು ಆ ಕೆಲಸ ಮಾಡಬಾರದು ಅಂದುಕೊಂಡು ಗೆಳಯನಿಗೆ ಫೋನ್ ಮಾಡಿದ್ರೆ, ಅವನಿಗೆ ಸರಿಯಾಗಿ ಅಡ್ರೆಸ್ ಹೇಳಲಿಕ್ಕೆ ಬರುವುದಿಲ್ಲ. ಯಾಕಂದ್ರೆ ಅವ ಸೂಚಿಸುತ್ತಿರುವ ಲ್ಯಾಂಡ್ ಮಾರ್ಕ್‌ಗಳ್ಯಾವುದೂ ನನಗೆ ಪರಿಚಯವಿಲ್ಲ! ಕಾನಿಷ್ಕ ಹೋಟೆಲ್, ಸ್ವಪ್ನ ಬುಕ್ ಹೌಸ್ ಎರಡೇ ಗಾಂದಿನಗರದಲ್ಲಿ  ನನಗೆ ಗೊತ್ತಿರುವುದು. ನನ್ನ  ಹತ್ತಿರ ಬೈಸಿಕೊಳ್ಳುತ್ತಲೇ ಅಡ್ರೆಸ್ ಹೇಳಿದ ಅವ.

ಹರಸಾಹಸ ಮಾಡಿಕೊಂಡು ನ್ಯಾಷನಲ್ ಮಾರ್ಕೇಟ್ ಕಡೆ ಹೆಜ್ಜೆ ಹಾಕಿದೆ. ಜೀನ್ಸ್  ಪ್ಯಾಂಟ್ ಧರಿಸಿದ್ದರಿಂದ, ಕಿಸೆಯೊಳಗಿನ ಮೊಬೈಲನ್ನೂ ಯಾರು ಖದಿಯಲು ಸಾಧ್ಯವಿಲ್ಲ  ಎಂಬ ಧೈರ್ಯ. ಆದ್ರೂ, ಈ ಬೆಂಗಳೂರಲ್ಲಿ  ಮೊಬೈಲ್ ಖದಿಯುವವರ  ಕಥೆ ರೋಮಾಂಚನಕಾರಿಯಾಗಿದೆ. ಅದನ್ನ ಮತ್ತೊಮ್ಮೆ ಹೇಳ್ತಿನಿ. ನ್ಯಾಷನಲ್ ಮಾರ್ಕೇಟ್‌ನ ದರ್ಶನ ಪಡೆದು, ವಾಪಸ್ ಹೊರಟಾಗ…ಈ ರಸ್ತೆ ಯಾವ ಕಡೆ ಹೋಗಿ ಸೇರಿಬಹುದು ಎಂಬ ಕುತುಹಲ ಶುರುವಾಯಿತು. ನಾನು ಅಪರಿಚಿತ ಸ್ಥಳಕ್ಕೆ ಹೋದ್ರೆ, ಅಕ್ಕ-ಪಕ್ಕದ ರಸ್ತೆಗಳತ್ತ ಒಮ್ಮೆ ಕಣ್ಣಾಡಿಸಿ ಬರುತ್ತೇನೆ. ಮುಂದಿನ ಸಲ ಗೆಳೆಯರಿಗೆ ಫೋನ್ ಮಾಡಿ ಮತ್ತೆ ಬೈಸಿಕೊಳ್ಳುವ ಸಾಹಸ ಬೇಡ ಎಂಬ ಉದ್ದೇಶದಿಂದ. ನಾನು ಅಂದಾಜಿಸಿದಂತೆ ಅದು ಮೈಸೂರ್ ಬ್ಯಾಂಕ್-ಮೆಜೆಸ್ಟಿಕ್ ನಡುವಣ ರಸ್ತೆಯಾಗಿತ್ತು. ಜನತಾ ಬಜಾರ್‌ನಿಂದ ಒಳಗೆ ಹೋದ್ರೆ, ಆನಂದ್ ರಾವ್ ಸರ್ಕಲ್‌ನಿಂದ ನೆಟ್ಟಗೆ ಹೊರಟರೆ ಗಾಂ ನಗರ ಸಿಗತ್ತೆ ಅಂತಾ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಾ, ಎಲ್ಲೋ ನೋಡುತ್ತಾ ಹೆಜ್ಜೆ  ಹಾಕುತ್ತಿದೆ…ಬರ್ತಿಯೇನಪ್ಪ  ಅಂದ್ಲು  ಒಬ್ಬಳು ಹುಡುಗಿ…ಅಲ್ಲಲ್ಲ  ಆಂಟಿ! ಒಂದು ಕ್ಷಣ ನನಗೆ ಏನು ಅರ್ಥವಾಗಲಿಲ್ಲ. ಆಮೇಲೆ ಗೊತ್ತಾಯಿತು, ನಾನು ಬೆಂಗಳೂರಿನ ಪರಿಶುದ್ಧ ಕೆಂಪು ಬೀದಿಯಲ್ಲಿ  ಹೋಗುತ್ತಿದ್ದೇನೆ ಅಂತಾ.

ಪ್ರತಿ ಸಲ ಹಬ್ಬಕ್ಕೆ ಹೊರಟಾಗ್ಲೂ  ಮೆಜೆಸ್ಟಿಕ್ ಬಳಿ ಟ್ರಾಫಿಕ್ ಜಾಮ್ ಆಗಿರತ್ತೆ. ಹಾಗಾಗಿ ಮೈಸೂರು ಬ್ಯಾಂಕ್ ಬಳಿ ಇಳಿದು, ಅಲ್ಲಿಂದ ನಡೆದು ಹೋಗುವುದು ಅಭ್ಯಾಸವಾಗಿದೆ. ಆ ರಸ್ತೆ ಒಂತರಹ ಸೂಳೆಯರ ಬೀದಿ ಅನ್ನೋದು  ೨ ವರ್ಷದ ಹಿಂದೆ  ಗೊತ್ತಾಗಿತ್ತು. ಆದ್ರೆ ಗಾಂನಗರದ ಗಲ್ಲಿಯಲ್ಲೂ  ಈ ದಂಧೆ ನಡೆಯತ್ತಾ ಅಂತಾ ಯೋಚಿಸುತ್ತಿರುವಾಗ…ಎದುರಿಗೊಬ್ಬ  ಪೋಲಿಸ್ ಪ್ಯಾದೆ ಕಂಡ. ಅವನೆದುರಿಗೆ ಆಕೆ ರಾಜಾರೋಷವಾಗಿ ವ್ಯಾಪಾರ ಕುದುರಿಸುತ್ತಿದ್ದಳು. ಇದನ್ನೆಲ್ಲ  ೨ ನಿಮಿಷ ಸುಮ್ಮನೆ ನಿಂತು ನೋಡಿದೆ…ಅದಕ್ಕೆ ನನಗೆ ಕಳ್ಳರು ಮತ್ತು ಪೋಲಿಸರ ನಡುವಣ ವ್ಯತ್ಯಾಸ ಅರ್ಥವಾಗದೆ ಇದ್ದಿದ್ದು. ಇನ್ನೂ ಸಾಕಷ್ಟು  ಕಾರಣ, ಘಟನೆಗಳಿಂದಾಗಿ ನನಗೆ ಪೋಲಿಸ್ ಮತ್ತು ಕಳ್ಳರನ್ನು  ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಅವೆಲ್ಲವನ್ನೂ  ಇಲ್ಲಿ  ವಿವರಿಸಲು ಸಾಧ್ಯವಿಲ್ಲ…ಅಂದುಕೊಳ್ಳುವ ಹೊತ್ತಿಗೆ ನಮ್ಮೂರಿನ ಅವಾಂತರದ ಅಶೋಕಣ್ಣ  ನೆನಪಾದ. ಅವನಿಗೆ ನಾನು ಈ ಹೆಸರಿಡಲು ಒಂದು ಕಾರಣವಿದೆ.

ನಾನು ಉಡುಪಿಯಲ್ಲಿ  ಡಿಗ್ರಿ ಓದ್ತಾ ಇರೋವಾಗ ಎಂ.ಎಫ್ ಹುಸೇನ್ ಭಾರತ ಮಾತೆಯ ಬೆತ್ತಲು ಚಿತ್ರ ಬಿಡಿಸಿದ್ದ. ಅದನ್ನ  ಗಿರೀಶ್ ಕಾರ್ನಾಡ್ ಎಂಬ ಮಹಾಶಯರೊಬ್ಬರು ಸಮರ್ಥಿಸಿಕೊಂಡಿದ್ದರು. ಕಲಾವಿದನಿಗೆ ಆ ಹಕ್ಕಿದೆ ಎಂದಿದ್ದರು. ನಿಮ್ಮ ಹೆಂಡತಿಯದ್ದೋ, ಸಹೋದರಿಯದ್ದೋ ಬೆತ್ತಲೆ ಚಿತ್ರ ಬರೆದರೆ, ಆಗ ಕಲೆಯನ್ನು ಸ್ವಾಗತಿಸುವಿರಾ ಎಂಬ ಪ್ರಶ್ನೆಯಿಟ್ಟು  ಒಂದು ಲೇಖನ ಬರೆದಿದ್ದೆ. ಅದನ್ನು ಹೊಸದಿಗಂತ ಪತ್ರಿಕೆ ಪ್ರಕಟಿಸಿತ್ತು. ಇದರ ನಡುವೆ, ಅಲ್ಲಿನ ಎಬಿವಿಪಿ ಘಟಕದವರು ಕಾರ್ನಾಡ್ ಹೇಳಿಕೆ ವಿರೋಸಿ ಉಡುಪಿ ಸಿಟಿ ಬಸ್ ಬಸ್‌ಸ್ಟ್ಯಾಂಡ್‌ನಲ್ಲಿ  ಪ್ರತಿಭಟನಾ ಸಭೆ ಆಯೋಜಿಸಿದ್ದರು. ನನ್ನ  ಲೇಖನ ಓದಿದ ಹಿರಿಯರೊಬ್ಬರು ಆ ಸಭೆಗೆ ಬನ್ನಿ, ಮಾತಾಡಿ ಅಂತಾ ಕರೆದಿದ್ದರು. ಹಾಗಾಗಿ ನಾನು ಹೋಗಿದ್ದೆ. ಸಭೆ ಸುತ್ತಲು ಪೋಲಿಸ್ ಕಾವಲಿತ್ತು. ನಿಂತು ಮಾತಾಡುತ್ತಿದ್ದ  ಹಿರಿಯರ ಜತೆ ನಾನಿದ್ದೆ. ಇದನ್ನ ನಮ್ಮೂರಿನ ಅಶೋಕಣ್ಣ  ನೋಡಿ ಬಿಟ್ಟಿದ್ದಾನೆ. ಅವನು ಎಲ್ಲಿಗೋ ಅಡುಗೆಗೆ ಅಂತಾ ಹೊರಟವನಂತೆ! ನೋಡಿಕೊಂಡು ಸುಮ್ಮನಿರಲಿಲ್ಲ. ಮನೆಗೆ ಹೋಗಿ ವರದಿ ಒಪ್ಪಿಸಿದ್ದಾನೆ.

ಸವಿತಕ್ಕ  ನಿಮ್ಮನೆ ಮಾಣಿ ಉಡುಪಿ ಬಸ್‌ಸ್ಟಾಂಡಲ್ಲಿ  ಇದ್ದಿದ್ದ. ಅವನ ಸುತ್ತಲೂ ಪೋಲಿಸ್ರು ಇದ್ದಿದ್ವಪ್ಪ  ಎಂಬ ಅವನ ಅನುಮಾನಯುತ ಮಾತು ಕೇಳಿದ ಅಮ್ಮ, ಬೆವರುತ್ತ ಪೋನ್ ಮಾಡಿದಳು. ‘ಅಪಿ ಎಂಥದಾ ಪೋಲಿಸರ ಜತೆ ಇದ್ದಿದ್ಯಡಲಾ, ಏನಾತ ನಿಂಗೆ?!’  ನನಗೆ ಏನು ಅರ್ಥವಾಗ್ಲಿಲ್ಲ. ಕೊನೆಗೆ ಅಮ್ಮನೇ ವಿಷಯ ವಿವರಿಸಿದಳು…ಹುಂ, ಹೌದೆ ಅಮ, ಒಂದು ಹುಡುಗಿಗೆ ಚುಡಾಯಿಸಿದ್ದಕ್ಕೆ  ಪೋಲಿಸರು ಎಳ್ಕಂಡು ಹೋಗಿದ್ದ ಅಂತಾ ಅಮ್ಮನಿಗೆ ರೈಲು ಹತ್ತಿಸಿದರೂ, ಕೊನೆಗೆ ವಾಸ್ತವ ವಿವರಿಸಿ ಸಮಾಧಾನ ಪಡಿಸುವಾಗ ಸುಸ್ತಾಗಿದ್ದೆ. ಆದ್ರೂ ಅಮ್ಮನಿಗೆ ನನ್ನ ಮೇಲೆ ನಂಬಿಕೆ ಬಂದಂತೆ ಕಾಣಲಿಲ್ಲ! ಅಷ್ಟರ  ನಂತರ ಅವಾಂತರ ಅಶೋಕಣ್ಣನಾದ.

ಅವನೇನಾದ್ರೂ ನಾನು ಗಾಂಧಿ ನಗರದ ಗಲ್ಲಿಯಲ್ಲಿ ನಿಂತಿದ್ದನ್ನು  ನೋಡಿದ್ರೆ ಅನ್ನೋ  ತಲೆಹರಟೆ ಪ್ರಶ್ನೆಯೊಂದು ಮನದೊಳಗೆ ಉದ್ಭವವಾಯಿತು! ಅವನೇ ಬೇಕು ಅಂತೇನಿಲ್ಲ…ಊರು ಕಡೆಯ ಯಾರೂ ನೋಡಿದ್ರೂ ಸಾಕಿತ್ತು…ಅಂದುಕೊಳ್ಳುವಾಗ ನನ್ನ ಉಡುಪಿ ರೂಮಿನ ಗೆಳೆಯ ವಿಶ್ವಾಸನಿಗಾದ ಇಂಥದ್ದೇ ಒಂದು ಅವಾಂತರ ನೆನಪಾಯಿತು. ನಗು ಉಕ್ಕಿ ಬಂತು, ಟ್ರಾಫಿಕ್ಕು ಕ್ಲಿಯರ್ ಆಗಿರಬಹುದೆಂಬ ಆಲೋಚನೆಯೂ ಶುರುವಾಯಿತು. ಮತ್ತೆ  ಮೆಜೆಸ್ಟಿಕ್ ಕಡೆಗೆ ಹೆಜ್ಜೆ ಹಾಕಿದೆ. ಅಂದುಕೊಂಡಂತೆ, ಬಸ್‌ಗಳು ಬುರುಗುಡುತ್ತ ಓಡಲು ಶುರುವಿಟ್ಟಿದ್ದವು…

Read Full Post »

ಮಿಶ್ರ ತಳಿ!
ಇದನ್ನು ಕಲಬೆರಕೆಯ ಮುಂದುವರಿದ ರೂಪ ಎಂದು ಭಾವಿಸಬಹುದು. ಒಂದೆಡೆ ಜೈವಿಕ ತಂತ್ರಜ್ಞಾನದ(ಬಿಟಿ) ಕುರಿತು ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಹೈಬ್ರಿಡ್ ಬೀಜಗಳು ಸದ್ದು ಗದ್ದವಿಲ್ಲದೇ ಹೊಲಗಳಲ್ಲಿ  ಮೊಳಕೆಯೊಡೆಯುತ್ತಿವೆ. ಹೌದು, ಹೈಬ್ರಿಡ್ ಬೀಜ ಮಾರಾಟ ಇವತ್ತು ಕೋಟಿ ವಹಿವಾಟಿನ ಉದ್ಯಮ. ಇಂಥ ಬೀಜಗಳನ್ನು ಮಾರಾಟ ಮಾಡುವ ಸಾವಿರಾರು ಕಂಪನಿಗಳು ನಮ್ಮ ದೇಶದಲ್ಲಿವೆ. ಇಂದು ಮಾರಾಟವಾಗುತ್ತಿರುವ ಬಹುತೇಕ ಆಹಾರ ಉತ್ಪನ್ನದ ಬೀಜಗಳು(ಸೀಡ್ಸ್) ಹೈಬ್ರಿಡ್ ಎಂಬುದಕ್ಕೆ ಸಾಕ್ಷಿಯಂತಿತ್ತು, ನಗರದಲ್ಲಿ  ನಡೆದ ಬೀಜ ಉತ್ಪಾದಕರ ಸಮಾವೇಶ!

ಸುಮಾರು ೩೦೦ಕ್ಕೂ ಹೆಚ್ಚು  ಬೀಜ ಉತ್ಪಾದನ ಕಂಪನಿಗಳ ಪ್ರತಿನಿಗಳು ಅಲ್ಲಿದ್ದರು. ೩೫ಕ್ಕೂ ಹೆಚ್ಚು  ಬೀಜ ಉತ್ಪಾದನಾ ಕಂಪನಿಗಳು ಪ್ರದರ್ಶನ ಮಳಿಗೆ ತೆರೆದಿದ್ದವು. ಎಲ್ಲೂ  ಕೂಡಾ ನಾಟಿ ಬೀಜ ಕಣ್ಣಿಗೆ ಕಾಣಲಿಲ್ಲ. ಹೈಬ್ರಿಡ್ ಬೀಜದಿಂದ ಬೆಳೆದ ಬೃಹತ್‌ಗಾತ್ರದ ತರಕಾರಿಗಳು ಕಣ್ಣಿಗೆ ರಾಚುತ್ತಿತ್ತು. ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ, ಇವತ್ತು ನಾಟಿ ಬೀಜ  ಮಾರುಕಟ್ಟೆಯಲ್ಲಿ  ದೊರೆಯುತ್ತಿಲ್ಲ. ನಮ್ಮ ಮನೆ ಅಜ್ಜಿಯೋ, ಆಯಿಯೋ ಮಳೆಗಾಲದಲ್ಲಿ  ಎತ್ತಿಟ್ಟ  ಅವರೆ, ಬೀನ್ಸ್  ಬೀಜಗಳು ಮಾತ್ರ ನಮ್ಮ ಪಾಲಿಗೆ ಉಳಿದಿರುವ ನಾಟಿ.
ಉದ್ದ ಬದನೆ, ಗುಂಡಾಕಾರದ ಬದನೆ ಎಂಬ ೨ ಪ್ರಮುಖ ತಳಿಗಳು ಬದನೆಯಲ್ಲಿ. ಇವುಗಳಲ್ಲಿ  ಹತ್ತಾರು ಬಗೆಯ ಉಪ ತಳಿಗಳಿವೆ. ಹಸಿರು, ಕಂದು ಕೆಂಪು…ಹೀಗೆ ನಾಲ್ಕಾರು ಬಣ್ಣದ ಬದನೆಕಾಯಿಗಳಿವೆ. ಹಸಿರು ಮೆಣಸು, ಕೆಂಪು ಮೆಣಸು. ಇದರಲ್ಲೂ  ಬ್ಯಾಡಗಿ ಕಡ್ಡಿ, ದಪ್ಪ…ನಾಲ್ಕಾರು ಜಾತಿಯ ಮೆಣಸುಗಳಿವೆ. ಸುಮಾರು ೫೦-೬೦ ತರಕಾರಿಗಳ ಹೈಬ್ರಿಡ್ ಬೀಜಗಳನ್ನು ಸಹಸ್ರಾರು ಕಂಪನಿಗಳು ಮಾರುತ್ತಿವೆ ಎನ್ನುತ್ತಾರೆ ಇಂಡೊ-ಅಮೆರಿಕನ್ ಹೈಬ್ರಿಡ್ ಸಂಸ್ಥೆಯ ಪ್ರಭಾಕರ ರೆಡ್ಡಿ.

ಲಾಭದಾಯಕ, ಆದ್ರೂ…?
ನಾಟಿ ಬೀಜ ಬಳಸಿ ಬೆಳೆದ ಒಂದು ಮಾಮೂಲಿ ಕಲ್ಲಗಂಡಿ ಹಣ್ಣು ಸರಾಸರಿ ೫-೧೦ ಕೆ.ಜಿ ತೂಕವಿರಬಹುದು. ಆದರೆ, ಹೈಬ್ರಿಡ್ ಬೀಜದಿಂದ ೨೫ಕೆ.ಜಿ ತೂಕದ ಕಲ್ಲಂಗಡಿ ಬೆಳೆಯಲು ಸಾಧ್ಯ. ಹಾಗಂದಮೇಲೆ, ಹೈಬ್ರಿಡ್ ಬಳಕೆ ಉತ್ತಮವಲ್ಲವೆ? ಇದರಿಂದ ಹೆಚ್ಚು  ಬೆಳೆ ಲಭ್ಯವಾಗುವುದಿಲ್ಲವೇ?

ಹೌದು, ನಮ್ಮ ರಾಜ್ಯದ ಪ್ರತಿಯೊಬ್ಬ ರೈತರು ಹೀಗೇ ಆಲೋಚಿಸುತ್ತಿದ್ದಾರೆ. ಆರ್ಥಿಕವಾಗಿ ಹೈಬ್ರಿಡ್ ಬೀಜ ಬಳಕೆ ಲಾಭದಾಯಕ. ನಾಟಿ ಬೀಜಕ್ಕಿಂತ ಅತ್ಯತ್ತಮ ಫಸಲನ್ನು ಇದರಿಂದ ಪಡೆಯಬಹುದು. ಬೇಕಾದ ರುಚಿಯ ಹಣ್ಣು-ತರಕಾರಿಗಳನ್ನು ಉತ್ಪಾದಿಸಬಹುದು. ಆದರೆ, ಇಲ್ಲಿ  ಒಂದು ಆಹಾರ ಬೆಳೆಯ ಮೂಲ ಸಹಜತೆ ಕಳೆದು ಹೊಗುತ್ತದೆ. ಪ್ರಯೋಗ ಶಾಲೆಯಲ್ಲಿ  ಉತ್ಪಾದನೆಯಾಗುತ್ತಿರುವ ಬೀಜಗಳು ಒಂದು ರೀತಿಯಲ್ಲಿ  ರಾಸಾಯನಿಕ ಆಹಾರವನ್ನು ಸೃಷ್ಟಿಸುತ್ತಿವೆ.

‘ನಮ್ಮ  ದೇಶದ ಜನಸಂಖ್ಯೆಗೆ ಅಗತ್ಯವಾದಷ್ಟು  ಆಹಾರ ಉತ್ಪಾದನೆ ಸಾಧ್ಯವಾಗಿದ್ದು  ಹೈಬ್ರಿಡ್ ತಳಿಯಿಂದ. ಹೀಗಾಗಿ ಈ ತಳಿ ವಿರೋಸಲು ಸಾಧ್ಯವಿಲ್ಲ. ಹಾಗಂತ ಪೂರ್ಣವಾಗಿ ಸ್ವಾಗತಿಸಲು ಆಗುವುದಿಲ್ಲ.  ಕೆಲ ಸಹಜವಾದ ಮೈಕ್ರೊನ್ಯೂಟ್ರಿಯೆಂಟ್‌ಗಳು(ಸೂಕ್ಷ್ಮ  ಪೌಷ್ಠಿಕಾಂಶಗಳು) ಈ ಬೆಳೆಯಲ್ಲಿ  ಕಡಿಮೆ ಇರುತ್ತದೆ. ಹೀಗಾಗಿ ಈ ಆಹಾರದಿಂದ ದೇಹಕ್ಕೆ ಲಭ್ಯವಾಗುವ ಆರೋಗ್ಯಯುತ ಅಂಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.  ನಾಟಿ ಬೀಜದ ಮೂರು ಕಲ್ಲಂಗಡಿ ಹಣ್ಣು, ಹೈಬ್ರಿಡ್ ಬೀಜದ ಒಂದು ಕಲ್ಲಂಗಡಿಗೆ ಸರಿ ಎನ್ನುವುದು ನಿಜ. ಆದರೆ ಇದು, ತೂಕ ಮತ್ತು ಗಾತ್ರದಲ್ಲಿ  ಮಾತ್ರ. ಶಕ್ತಿಯಲ್ಲಿ, ಪೌಷ್ಠಿಕಾಂಶದಲ್ಲಿ  ನಾಟಿಯದೇ ಮೇಲುಗೈ’ ಎನ್ನುತ್ತಾರೆ ಪರಿಸರ ತಜ್ಞ  ನಾಗೇಶ್ ಹೆಗಡೆ.

ಏನಿದು ಹೈಬ್ರಿಡ್?
ಹೆಸರೇ ಹೇಳುವಂತೆ ಇದು ಮಿಶ್ರ ತಳಿ. ಇಲ್ಲಿ  ಒಂದೇ ಪ್ರಬೇಧದ ತಳಿಗಳನ್ನು ಸಂಯೋಗಗೊಳಿಸಲಾಗುತ್ತದೆ. ಮಾವಿನ ಮರವೊಂದು ಉತ್ತಮ ರುಚಿಯ ಕಾಯಿಗಳನ್ನು ನೀಡುತ್ತದೆ. ಆದರೆ, ಈ ಮರದಲ್ಲಿ  ಹೆಚ್ಚಿನ ಫಸಲು ಬರುವುದಿಲ್ಲ. ಇಂಥ ಸಂದರ್ಭದಲ್ಲಿ  ಹೆಚ್ಚು  ಕಾಯಿ ಬಿಡುವ ಮಾವಿನ ಮರಕ್ಕೆ, ಉತ್ತಮ ರುಚಿಯ ಅಂಶವನ್ನು ಸೇರಿಸುತ್ತಾರೆ. ಇವತ್ತು  ಈ ಕ್ಷೇತ್ರ ವಾಣಿಜ್ಯ ಉದ್ಯಮವಾಗಿ ಬೆಳೆದಿದೆ. ಪ್ರಯೋಗಶಾಲೆಗಳಲ್ಲಿ  ಬೀಜ ಉತ್ಪಾದನೆ ನಡೆಯುತ್ತಿದೆ.  ೧೯೨೦ರಲ್ಲಿ  ಅಮೆರಿಕದ ವಾಣಿಜ್ಯ ಮಾರುಕಟ್ಟೆಗೆ ಮೊದಲ ಸಲ ಹೈಬ್ರಿಡ್ ಜೋಳ ಕಾಲಿಟ್ಟಿತ್ತು.

೬,೦೦೦ ಕೋಟಿ ರೂ. ಮಾರುಕಟ್ಟೆ
ದೇಶದ ಬೀಜ ಉತ್ಪಾದಕ ಮಾರುಕಟ್ಟೆ  ೬,೦೦೦ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದೆ. ಇದರಲ್ಲಿ ಶೇ. ೯೫ರಷ್ಟು ಪಾಲು ಹೈಬ್ರಿಡ್ ಬೀಜಗಳದ್ದು. ಬಿಟಿ ಹತ್ತಿ ದೇಶದ ಯಶಸ್ವಿಯ ಕಥೆ. ತಂತ್ರಜ್ಞಾನವನ್ನು ಸರಕಾರ ಸರಿಯಾಗಿ ಅಧ್ಯಯನ ಮಾಡಿ, ವಿಜ್ಞಾನಿಗಳ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಭಾರತೀಯ ಬೀಜ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ಲವಲವಿಕೆಗೆ ತಿಳಿಸಿದ್ದಾರೆ.

ಒಂದು ಸಲ ಹೈಬ್ರಿಡ್ ಮಾಡಿದ ಉತ್ಪನ್ನದಿಂದ ಮೂಲ ಬೀಜ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಮರುಬೆಳೆಗೆ ಪುನಃ ಹೊಸ ಬೀಜವನ್ನು ಖರೀದಿಸುವುದು ಅನಿವಾರ್ಯ. ನಾವು ಬೆಳೆಯ ಜತೆಗೆ ಬೀಜ ಉತ್ಪಾದಕ ಕಂಪನಿಗಳನ್ನೂ ಪ್ರತಿ ವರ್ಷ ಬೆಳೆಸುತ್ತೇವೆ ಎಂದರೆ ತಪ್ಪಿಲ್ಲ!

ಆಂದೋಲನ ಅಗತ್ಯ
‘ನಾವು ಪೂರ್ಣವಾಗಿ ನಾಟಿ ಕಳೆದುಕೊಳ್ಳುತ್ತಿರುವುದು ದೌರ್ಭಾಗ್ಯಕಾರಿ. ಈ ಕುರಿತು ಜಾಗೃತಿ, ಆಂದೋಲನ ಅಗತ್ಯವಿದೆ. ಸಾವಯುವ ಕೃಷಿಯಲ್ಲೂ  ಹೈಬ್ರಿಡ್ ಬೀಜ ಬಳಕೆಯಾಗುತ್ತಿದೆ. ಹೀಗಾಗಿ ರಾಜ್ಯದ ಆಯ್ದ ಜಿಲ್ಲೆಗಳನ್ನಾದರೂ ನಾಟಿ ಬೆಳೆಯುವ ಪ್ರದೇಶವನ್ನಾಗಿ ಪರಿವರ್ತಿಸಬೇಕು. ಈ ಕುರಿತು ತಕ್ಕಮಟ್ಟಿನ ಆಂದೋಲನ ನಡೆಯಬೇಕು’ ಎನ್ನುತ್ತಾರೆ ನಾಗೇಶ್ ಹೆಗಡೆ.

Read Full Post »