Feeds:
ಲೇಖನಗಳು
ಟಿಪ್ಪಣಿಗಳು

Archive for ಆಗಷ್ಟ್, 2012

ಕೌಬಾಯ್, ಗೋಸ್ವಾಮಿ, ಗೋಕರ್ಣ ನುಂಗಿದವ…ಅಬ್ಬಬ್ಬ ಅದೆಷ್ಟು ಸಹಸ್ರನಾಮಾವಳಿ! ರಾಮಚಂದ್ರಪುರ ಮಠದಲ್ಲಿ ವಿಶ್ವ ಗೋಸಮ್ಮೇಳನ ನಡೆದಾಗ ಅಣಕಿಸಿದವರು ಅದೆಷ್ಟು ಮಂದಿ! ಗೋಮೂತ್ರ, ಸಗಣಿಗೆ ಸ್ವಾಮಿಗಳನ್ನು ಹೋಲಿಸಿ ಗೇಲಿ ಮಾಡಿದವರಿಗೆ ಲೆಕ್ಕವಿಲ್ಲ. ಹಾಗಂತ ಸ್ವಾಮಿಗಳು ಇವ್ಯಾದಕ್ಕೂ ಬಗ್ಗಲಿಲ್ಲ ಅಥವಾ ಕೆಸರಿಗೆ ಕಲ್ಲು ಎಸೆಯುವ ಯತ್ನವನ್ನೂ ಮಾಡಲಿಲ್ಲ. ಯಾರ ಪ್ರಶ್ನೆಗೂ ತಿರುಗಿ ಉತ್ತರ ಕೊಡಲಿಲ್ಲ. ತಾವು ಮಾಡಬೇಕಾದ ಕೆಲಸವನ್ನು ತಮ್ಮ ಪಾಡಿಗೆ ಮಾಡುತ್ತಾ ಹೊರಟರು. ಹಾಗೆ ನೋಡಿದರೆ ವಿಶ್ವ ಗೋಸಮ್ಮೇಳನದ ನಂತರ ಶ್ರೀಗಳಿಟ್ಟ ಹೆಜ್ಜೆ ನಿಜಕ್ಕೂ ಹೆಗ್ಗುರುತು.

ಹೌದು, ಇಲ್ಲಿ ಮಾತನಾಡುತ್ತಿರುವುದು ರಾಘವೇಶ್ವರ ಭಾರತಿ ಶ್ರೀಗಳ ಕುರಿತು. ಅದಕ್ಕಿಂತ ಹೆಚ್ಚಾಗಿ ಅವರ ಮತ್ತೊಂದು ಮಹತ್ತರ ಹೆಜ್ಜೆ ‘ರಾಮಕಥಾ’ದ ಕುರಿತು. ಆಡಿಕೊಳ್ಳುವವರ ಪಾಲಿಗೆ ಹವ್ಯಕ ಸ್ವಾಮಿಗಳಾಗಿ ಸೀಮಿತವಾಗಿರುವ ಶ್ರೀಗಳು, ಎಲ್ಲ ವರ್ಗವನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಜೀವಂತ ನಿದರ್ಶನ ರಾಮಕಥಾ. ಅದೆಷ್ಟೊ ಸಾವಿರ ವರ್ಷಗಳ ಹಿಂದೆ ನಡೆದ ರಾಮಾಯಣವನ್ನು ಇವತ್ತಿಗೆ ಪ್ರಸ್ತುತವಾಗುವಂತೆ ಸಾದರಪಡಿಸುವ ಸಾಹಸವೇ ರಾಮಕಥಾ. ಒಂದೇ ವೇದಿಕೆಯಲ್ಲಿ-ಏಕಕಾಲದಲ್ಲಿ ಪ್ರವಚನ, ಗಾಯನ, ನೃತ್ಯ, ರೂಪಕಗಳ ಸಮ್ಮಿಲನವಿದು.

ಸ್ವಾಮಿಗಳು, ಪ್ರವಚನ ಎಂಬಿತ್ಯಾದಿ ಪದಗಳು ಬಂದಮೇಲೆ ಅಲ್ಲಿ ಸಂಸ್ಕೃತ ಬರಲೇಬೇಕಲ್ಲವೇ? ಸಂಸ್ಕೃತ ಬಂತು ಅಂದಮೇಲೆ ಅದಕ್ಕೆ ಬ್ರಾಹ್ಮಣರ ಕಾರ್ಯಕ್ರಮ ಎಂಬ ಹಣೆಪಟ್ಟಿ ಕೊಡದಿದ್ದರೆ ಹೇಗೆ?! ಯಸ್, ರಾಮಕಥಾ ಇಷ್ಟವಾಗಿದ್ದು ಇದೇ ಕಾರಣಕ್ಕೆ. ಶ್ರೀಗಳು ಸಂಸ್ಕೃತ ಶ್ಲೋಕಗಳನ್ನು ಕನ್ನಡೀಕರಿಸಿದ್ದಾರೆ. ಅಂದರೆ ಸಂಸ್ಕೃತ ಶ್ಲೋಕಗಳಿಗೆ ಕನ್ನಡದಲ್ಲಿ ಅರ್ಥ ಹೇಳಿದ್ದಾರೆ ಎಂದಲ್ಲ. ಮಂಕುತಿಮ್ಮನ ಕಗ್ಗದ ರೀತಿಯಲ್ಲಿ ರಾಮಾಯಣದ ಕಥೆಗಳನ್ನು ಹೇಳುವ ಪುಟ್ಟ-ಪುಟ್ಟ ಪದ್ಯಗಳನ್ನು ರಚಿಸಿದ್ದಾರೆ. ಕನ್ನಡದ ಪದ್ಯಗಳನ್ನು ಹೇಳುತ್ತಾ ರಾಮನ ಜೀವನವನ್ನು ವಿವರಿಸುತ್ತಾರೆ. ಡಿವಿಜಿ ಮತ್ತು ಕುವೆಂಪು ಇಬ್ಬರು ಕವಿಗಳು ಕನ್ನಡದಲ್ಲಿ ಆ ಪ್ರಯತ್ನ ಮಾಡಿದ್ದರು. ಸಂಸ್ಕೃತವನ್ನು ಕನ್ನಡೀಕರಿಸುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದರು. ಹಾಗಾಗಿಯೇ ನಾವು ಅವರನ್ನು ವಿಶ್ವಕವಿಗಳೆಂದು ಒಪ್ಪಿಕೊಂಡಿದ್ದು. ಮನುಜಮತವಾದಿಗಳೆಂದು ಸ್ವೀಕರಿಸಿದ್ದು.

ರಾಮಕಥಾದ ಮೂಲಕ ರಾಘವೇಶ್ವರರು ಕೂಡ ಮನುಜಮತದತ್ತ ಸಾಗುವ ಯತ್ನ ನಡೆಸಿದ್ದಾರೆ. ರಾಮಾಯಣವನ್ನು ಸಾರ್ವತ್ರಿಕರಣಗೊಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಹೊತ್ತಿಸೆನ್ನಾತ್ಮದಲಿ ಶ್ರೀರಾಮ ಜ್ಯೋತಿ
ಕೆತ್ತಿಸೆನ್ನೆದೆಯಲಿ ಶ್ರೀರಾಮ ಮೂರ್ತಿ
ಹರಿಸೆನ್ನ ಹೃದಯಕೆ ಶ್ರೀರಾಮ ಕೀರ್ತಿ…ಶ್ರೀಗಳು ಅಪ್ಪಟ ಕನ್ನಡದಲ್ಲಿ ಶ್ರೀರಾಮನನ್ನು ಕರೆದ ಬಗೆಯಿದು.

ಅರಮನೆಯೋ, ಗುರುಮನೆಯೋ ಸೆರೆಮನೆಯೋ
ಶ್ರೀರಾಮನಿರುವೆಡೆಗೆ ಬಿಡದಾನು ಬರುವೆ
ಶ್ರೀರಾಮ ಬರುವೆಡೆ ಬಿಡದಾನು ಬರುವೆ
ಶ್ರೀರಾಮ ನಿನ್ನಡಿಗೆ ಎಡೆಬಿಡದೆ ಬರುವೆ…ಕನ್ನಡ ಕಲಿತವರೆಲ್ಲರಿಗೂ ಅರ್ಥವಾಗುವ ಸಾಲುಗಳಿವು. ಇಂಥ ಸಾಲುಗಳಿಂದಲೇ ಕೂಡಿದೆ ರಾಘವೇಶ್ವರರ ರಾಮಕಥನ. ಇದನ್ನೂ ಹವ್ಯಕರಿಗೆ, ಬ್ರಾಹ್ಮಣರಿಗೆ ಸೀಮಿತ ಎನ್ನಬಹುದು ಕೆಲವರು. ಅದು ಅವರ ಮನೋವ್ಯಾಧಿಯನ್ನು ಸೂಚಿಸುತ್ತದೆಯಷ್ಟೆ!

ರಾಮಕಥಾ ಇಷ್ಟಕ್ಕೆ ಸೀಮಿತವಾಗಿದ್ದರೆ, ಅದರ ಕುರಿತು ಪ್ರತ್ಯೇಕವಾಗಿ ಬರೆಯುವ ಅಗತ್ಯವಿರಲಿಲ್ಲ. ಇದಕ್ಕಿಂತ ಮಿಗಿಲಾದ ಮತ್ತೊಂದಷ್ಟು ವೈಶಿಷ್ಠ್ಯಗಳು ಅಲ್ಲಿದೆ. ಶ್ರೀಗಳು ಪ್ರವಚನ ರೂಪದಲ್ಲಿ ರಾಮಾಯಣವನ್ನು ವಿವರಿಸುತ್ತಾ ಹೋಗುತ್ತಾರೆ. ನಡು-ನಡುವೆ ಹಾಡಿನ ವೈಭವ. ರಾಮನ ಕುರಿತಾದ ಭಕ್ತಿಗೀತೆಗಳ ಗಾನ ಲಹರಿ. ಕೊಳಲು, ತಬಲದ ನಿನಾದಗಳೊಂದಿಗೆ ರಾಮನ ಗೀತೆಗಳನ್ನು ಕೇಳುತ್ತಿದ್ದರೆ ಭಕ್ತಿಯೆಂಬುದು ತಾನಾಗಿಯೇ ಅರಳುತ್ತದೆ. ರಾಮನಿದ್ದಾನೊ ಇಲ್ಲವೊ ಗೊತ್ತಿಲ್ಲ. ಆದರೆ ಹಾಡುವ ಕಂಠಕ್ಕೆ, ಕೊಳಲಿಗೆ, ತಬಲಕ್ಕೆ ಆ ಭಕ್ತಿ ಹುಟ್ಟಿಸುವ ಶಕ್ತಿ ಇರುವುದಂತೂ ಸುಳ್ಳಲ್ಲ. ಅದು ಇಲ್ಲಿ ಸ್ಪಷ್ಟವಾಗಿ ಸಾಬೀತಾಗುತ್ತದೆ. ಹಾಡುಗಳ ನಡುವೆಯೇ ಕಲಾವಿದರಿಬ್ಬರು ಹಾಡಿನ ಸಾರ ಹೇಳುವ ಚಿತ್ರ ಬಿಡಿಸುತ್ತಾರೆ. ಒಬ್ಬರು ಮರಳಿನಲ್ಲಿ ರಾಮಾಯಣದ ಚಿತ್ರಣ ಮೂಡಿಸಿದರೆ, ಮತ್ತೊಬ್ಬರು ಡ್ರಾಯಿಂಗ್‌ನಲ್ಲಿ ರಾಮನ ಜೀವನವನ್ನು ಕೆತ್ತಿಕೊಡುತ್ತಾರೆ. ಈ ಜುಗಲ್‌ಬಂದಿಯಂತೂ ಕಲಾ ದೃಷ್ಟಿಕೋನದಲ್ಲಿ ನೋಡಿದರೆ ಅದ್ಬುತ.

ರಾಮಕಥಾದ ವೇದಿಕೆಯೇ ಒಂದು ವಿಶಿಷ್ಠ ಯತ್ನ. ಪ್ರವಚನದ ನಡುವೆ ಶ್ರೀಗಳು ಮಾಯವಾಗಿಬಿಡುತ್ತಾರೆ. ರಾಮಾಯಣದ ಯಾವುದೋ ದೃಶ್ಯವನ್ನು ಬಿಂಬಿಸುವ ರೂಪಕ ಶುರುವಾಗುತ್ತದೆ. ಯಾವ ಪ್ರತಿಷ್ಠಿತ ನಾಟಕ ಕಂಪನಿಗೂ ಕಡಿಮೆ ಇಲ್ಲ ಎಂಬಂತಿದೆ ಕಲಾವಿದರ ಪ್ರದರ್ಶನ. ರಾಮಾಯಣದ ಯಾವುದೋ ಒಂದು ಘಟ್ಟ ರೂಪಕದ ಮೂಲಕ ಬಿತ್ತರಗೊಳ್ಳುತ್ತದೆ. ಅದೇ ವೇದಿಕೆಯಲ್ಲಿ ನಿಧಾನವಾಗಿ ಮತ್ತೆ ಶ್ರೀಗಳು ಪ್ರತ್ಯಕ್ಷವಾಗಿ ಪ್ರವಚನದ ಮೂಲಕ ಕಥೆ ಹೇಳಲು ಶುರುವಿಡುತ್ತಾರೆ. ಕಥೆ ಹೆಚ್ಚಾಯಿತು ಎನ್ನುವಾಗ ಹಾಡಿನ ಮೂಲಕ ರಾಮಾಯಣ ಆರಂಭವಾಗುತ್ತದೆ. ಅಂದಹಾಗೆ ಇಲ್ಲಿ ಪವಾಡ ನಡೆಯುವುದಿಲ್ಲ. ಅಥವಾ ಇದೇನೂ ಹೀಗೂ ಉಂಟೆ ಎಂಬಂಥ ವೇದಿಕೆಯೂ ಅಲ್ಲ. ತಾಂತ್ರಿಕವಾಗಿ, ಲೈಟ್, ಪರದೆಗಳ ಮೂಲಕ ವೇದಿಕೆಗೆ ಅಷ್ಟು ಸೊಗಸಾದ ರೂಪ ನೀಡಲಾಗಿದೆ.

ರಾಮಾಯಣ ನಡೆದಿರುವುದರ ಕುರಿತು ನಮ್ಮಲ್ಲಿ ಸಾಕಷ್ಟು ಚರ್ಚೆಗಳಿವೆ. ರಾಮಸೇತುವೆ ಎಂಬುದು ಬಹುದೊಡ್ಡ ವಿವಾದಕ್ಕೆ ಗ್ರಾಸವಾಗಿತ್ತು. ಸಹಸ್ರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಕಥೆಯನ್ನು ನಡೆದಿದೆ ಎಂದು ಸಾಬೀತುಪಡಿಸುವುದು ತುಸು ಕಷ್ಟದ ಕೆಲಸ. ಆದರೆ ಆ ಕಥೆಯ ಹಿಂದಿನ ಸಾಹಿತ್ಯವನ್ನು ನಾವು ಸ್ವೀಕರಿಸಬಹುದಲ್ಲವೆ? ಕಥೆಯ ಸಾರವನ್ನು ತೆಗೆದುಕೊಳ್ಳಬಹುದಲ್ಲವೆ? ರಾಮಾಯಣ, ಮಹಾಭಾರತಗಳನ್ನು ಮತ್ತೆ-ಮತ್ತೆ ಸಾದರಪಡಿಸುವ ಉದ್ದೇಶವಿಷ್ಟೆ. ಅಲ್ಲಿನ ಮೌಲ್ಯಗಳನ್ನು ನಾವು ಇವತ್ತಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲಿನ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಪಾಲಿಸಬೇಕು ಎಂಬುದು ಈ ಮಹಾಗ್ರಂಥಗಳನ್ನು ಮರು ವ್ಯಾಖ್ಯಾನಿಸುವ ಮೂಲ ಉದ್ದೇಶ. ಆ ಕಾರ್ಯವನ್ನು ರಾಘವೇಶ್ವರ ಶ್ರೀಗಳು ಅದ್ಬುತವಾಗಿ ಮಾಡಿದ್ದಾರೆ. ಇವತ್ತಿನ ತಲೆಮಾರಿಗೆ ಅರ್ಥವಾಗುವ ಪುಟ್ಟ ಉಪಕಥೆಗಳೊಂದಿಗೆ, ನಗರದ ಕಛೇರಿಗಳ ನಿದರ್ಶನಗಳೊಂದಿಗೆ ಶ್ರೀಗಳು ರಾಮಾಯಣವನ್ನು ವಿವರಿಸುತ್ತಿದ್ದರೆ, ನಮ್ಮದೇ ಆಫೀಸಿನ ಪಕ್ಕದ ಕ್ಯಾಬಿನ್‌ನಲ್ಲಿ ನಡೆದ ಕಥೆಯನ್ನು ಹೇಳಿದ ಅನುಭವವಾಗುತ್ತದೆ.

ರಾಮಕಥಾ ರಾಮಚಂದ್ರಪುರ ಮಠದ ಪಡುಸಾಲೆಯಲ್ಲಿ ನಡೆಯುತ್ತಿಲ್ಲ ಅಥವಾ ಯಾವುದೋ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿಲ್ಲ. ಬದಲಾಗಿ ಸಾರ್ವಜನಿಕ ವೇದಿಕೆಯಲ್ಲಿ ನಡೆಯುತ್ತಿದೆ. ಎಲ್ಲರಿಗೂ ಮುಕ್ತ ಪ್ರವೇಶವಿರುವ ಸ್ಥಳದಲ್ಲಿ ಜರುಗುತ್ತಿದೆ. ಇದರರ್ಥ ರಾಮ ಸಾರ್ವತ್ರಿಕವಾಗಿ ಲಭಿಸಬೇಕು ಎಂಬುದು. ಮೊನ್ನೆಯಷ್ಟೆ ಮಲ್ಲೇಶ್ವರಂನ ಮಹಿಳಾ ಕಾಲೇಜು ಆವರಣದಲ್ಲಿ ರಾಮಕಥಾದ ಒಂದು ಭಾಗ ಮುಕ್ತಾಯಗೊಂಡಿದೆ. ಸೆಪ್ಟೆಂಬರ್ ೨ರಿಂದ ಅರಮನೆ ಮೈದಾನದಲ್ಲಿ ಮತ್ತೆ ರಾಮನ ಅವತಾರವಾಗಲಿದೆ. ಎಲ್ಲರಿಗೂ ಮುಕ್ತಪ್ರವೇಶ.

ಸಾವಿರಾರು ರೂಪಾಯಿ ಮೌಲ್ಯದ ಟಿಕೆಟ್ ಇಟ್ಟಿದ್ದರೆ, ರಾಮಕಥಾದ ಬಗ್ಗೆ ಮಾತನಾಡುವ ಅಗತ್ಯವೇ ಬರುತ್ತಿರಲಿಲ್ಲ. ಅಥವಾ ಅಷ್ಟೆಲ್ಲ ಬೃಹತ್ ಮೊತ್ತದ ಟಿಕೆಟ್ ಇಟ್ಟಾಗ, ವೇದಿಕೆಯನ್ನು ಅದ್ದೂರಿಯಾಗಿಸುವುದು ಸಾಹಸ ಅನ್ನಿಸುತ್ತಿರಲಿಲ್ಲ. ಆದರಿಲ್ಲಿ ಪ್ರವೇಶ ಶುಲ್ಕವಿಲ್ಲ. ಕಾಣಿಕೆಯನ್ನು ಹಾಕಬೇಕಿಲ್ಲ. ಹೋಗಿದ್ದಕ್ಕೆ ಪ್ರಸಾದ ಅಂತಾ ಪುಗ್ಸಟ್ಟೆಯಾಗಿ ಲಡ್ಡು ಕೊಟ್ಟು ಕಳಿಸುತ್ತಾರೆ. ದುಡ್ಡು ಸುಲಿಗೆಗಾಗಿ ಸ್ವಾಮಿಯ ಮತ್ತೊಂದು ನಾಟಕ ಎಂದು ಕೊಂಕು ತೆಗೆಯುವ ಬಾಯಿಗೆ ಬೀಗ ಬಿದ್ದಿದೆ.

ಆಫ್‌ಕೋರ್ಸ್ ಒಂದು ಮಠ ನಡೆಯಬೇಕಿದ್ದರೆ ಹಣದ ಅಗತ್ಯ ತುಂಬಾ ಇರುತ್ತದೆ. ಕಾಗದದ ನೋಟಿನ ಈ ಯುಗದಲ್ಲಿ ಯಾವುದೂ ಪುಗ್ಸಟ್ಟೆ ಸಿಕ್ಕುವುದಿಲ್ಲ. ಹಾಗಂತ ಸ್ವಾಮಿಗಳು ಹಣದ ಹಿಂದೆ ಬೀಳಬೇಕೆಂದಲ್ಲ. ಆದರೆ ಸ್ವಾಮಿಗಳಿಗೂ ಹಣದ ಪರಿಕಲ್ಪನೆ ಇರುವುದು ಅನಿವಾರ್ಯವಾಗುತ್ತದೆ. ನಮ್ಮ ನಾಡಿನ ದುರಂತವೆಂದರೆ ತೆಗಳುವವರ ಕಣ್ಣಿಗೆ ಉಚಿತವಾಗಿ ಮಾಡಿದ ಒಳ್ಳೆ ಕೆಲಸಗಳು ಕಾಣಿಸದಿರುವುದು. ಒಂದು ದಿನಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಿ ನಡೆಸುತ್ತಿರುವ ಈ ಕಾರ್ಯಕ್ರಮವನ್ನು ನೀವೆಲ್ಲರೂ ನೋಡಲೇಬೇಕು. ಆ ಶ್ರೀರಾಮಚಂದ್ರನನ್ನು ಕಣ್ಣು ತುಂಬಿಕೊಳ್ಳಲೇಬೇಕು. ಬಹುತೇಕರಿಗೆ ಗೊತ್ತಿಲ್ಲ ಅನ್ನಿಸುತ್ತೆ ಬಾಲ್ಯದಲ್ಲಿ ಶ್ರೀಕೃಷ್ಣ ಕೂಡ ಕೌಬಾಯ್ ಆಗಿದ್ದನೆಂದು! ಹೌದು, ಗೋಪಾಲಕನಾಗಿ ಹಲವು ವರ್ಷ ಕಳೆದ ನಂತರವೇ ಆತ ಭಗವಾನ್ ಶ್ರೀಕೃಷ್ಣನಾಗಿದ್ದು. ಕೌಬಾಯ್ ಎನ್ನುವವರಿಗೆ ಇದಷ್ಟು ಅರ್ಥವಾದರೆ ಸಾಕು.

Read Full Post »