Feeds:
ಲೇಖನಗಳು
ಟಿಪ್ಪಣಿಗಳು

Archive for ಅಕ್ಟೋಬರ್, 2010

ನಥ ದಾಸ್ ಮನಿಕ್‌ಪುರಿ  ಅಲಿಯಾಸ್ ಓಂಕಾರ್ ದಾಸ್!
ಸಾಕಷ್ಟು  ಸುದ್ದಿ  ಮಾಡಿರುವ ಅವರನ್ನು ನಮ್ಮ ಸುದ್ದಿ ವಾಹಿನಿಗಳು ಹಿಂಬಾಲಿಸುತ್ತಿವೆ. ಕೆಲವು ವಾಹಿನಿಯ ವರದಿಗಾರರು ಮತ್ತು ಕ್ಯಾಮರಾಮೆನ್‌ಗಳು ಅವರ ಮನೆಯ ವಠಾರದಲ್ಲೇ ಬೀಡು ಬಿಟ್ಟಿದ್ದಾರೆ. ಆವತ್ತು ಬೆಳಗಿನ ಮುಂಜಾನೆಯದು. ನಮ್ಮ ನಥ ಚೆಂಬು ಹಿಡಿದು ಗುಡ್ಡದ ಕಡೆ ಹೊರಟ್ಟಿದ್ದಾರೆ. ಯಾರೋ ಒಬ್ಬ ವರದಿಗಾರರ ಅದನ್ನು ಗಮನಿಸುತ್ತಾನೆ. ಕ್ಯಾಮರಮೆನ್‌ನ್ನು ಎಬ್ಬಿಸಿ ಎದುರುಗಡೆ ಇಟ್ಟಿದ್ದ  ಸ್ಟೂಲ್ ಮೇಲೆ ಹತ್ತಿಸುತ್ತಾನೆ. ಕೊನೆಗೆ ನಥ ಕಾಣೆಯಾದ ಎಂಬುದು ದೊಡ್ಡ  ಸುದ್ದಿಯಾಗುತ್ತದೆ. ಆ ವರದಿಗಾರ ನಥ ಮಲ, ಮೂತ್ರ ಮಾಡುವ ಜಾಗವನ್ನು ತೋರಿಸಿ ವೀಕ್ಷಕರಿಗೆ ಬಣ್ಣ ಬಣ್ಣದ ವಿವರಣೆ ನೀಡುತ್ತಾನೆ. ಆ ದೃಶ್ಯ ನೋಡುತ್ತಿದ್ದಾಗ ನಮ್ಮ  ವಾಹಿನಿಗಳ ಕುರಿತು ರೇಜಿಗೆ ಬರುತ್ತದೆ.

ರಾಜಕೀಯ ಬೆಳವಣಿಗೆಯಾಗುತ್ತಿರುವಾಗ ರಾಜಕಾರಣಿಗಳ ಮನೆ ಮುಂದೆ ಬೀಡು ಬಿಟ್ಟ  ಮಾಧ್ಯಮ ಮಂದಿಯನ್ನು ನೋಡಿದರೆ ನೀವು ದಂಗಾಗಿ ಹೋಗುತ್ತೀರಿ. ಅಂದಹಾಗೆ ಇದು ಸರಿಯೋ ತಪ್ಪೊ  ವಿಶ್ಲೇಷಿಸುವುದು ಮಾಧ್ಯಮದಲ್ಲಿರುವವರ ಮಟ್ಟಿಗೆ  ಕಷ್ಟದ ಕಾಯಕ. ಆದಾಗ್ಯೂ ಮಾಧ್ಯಮಕ್ಕೆ ಯಾಕೆ ಇಂಥ ಸ್ಥಿತಿ ಬಂದೊದಗಿದೆ ಎಂಬುದನ್ನು ಅವಲೋಕಿಸಿಕೊಳ್ಳಬೇಕಿದೆ.

ಅವಲೋಕಿಸಿ ಕ್ರಮ ತೆಗೆದುಕೊಳ್ಳುವವರು ಯಾರು ಎಂಬುದು ದೊಡ್ಡ ಪ್ರಶ್ನೆ. ನನ್ನಂಥ ತೀರಾ ಅನುಭವವಿಲ್ಲದವ ಅವಲೋಕಿಸಿದರೆ, ಅದು ತಲೆಹರಟೆಯಾಗುತ್ತದೆ ಮತ್ತು ಏನು ಪ್ರಯೋಜನವಿಲ್ಲ ಕೆಲಸವಾಗುತ್ತದೆ! ಟಿವಿ-೯ ಕನ್ನಡಕ್ಕೆ ಬಂದಾಗ, ೨೪ ಗಂಟೆಯ ಸುದ್ದಿ  ವಾಹಿನಿ ಎಂಬ ಪರಿಕಲ್ಪನೆಯೇ ಹೊಸತಾಗಿತ್ತು. ಜೊತೆಗೆ ಪ್ರತಿ ಸ್ಪರ್ಧೆಯೂ ಇರಲಿಲ್ಲ. ಸಹಜವಾಗಿ ಕ್ಲಿಕ್ ಆಯಿತು. ನಂತರ ಬಂದ ಸುವರ್ಣ ವಾಹಿನಿ ಆರಂಭದಲ್ಲಿ  ಎಡವಿದರೂ, ಸದ್ಯಕ್ಕೆ ಒಂದು ಹಂತಕ್ಕೆ ಬಂದು ನಿಂತಿದೆ. ಈಗ ಸಮಯ ವಾಹಿನಿ ಬೇರೆ ಶುರುವಾಗಿದೆ. ಜನಶ್ರಿ ಹಿಂದೆ ಜನ ಓಡುತ್ತಿದ್ದಾರೆ. ದುರಂತವೆಂದರೆ ಎಲ್ಲಾ  ವಾಹಿನಿಗಳಲ್ಲೂ  ಒಂದೇ ಬಗೆಯ ಕಾರ್‍ಯಕ್ರಮಗಳು. ಕಾಫಿ-ಪೇಸ್ಟ್  ಕ್ರಿಯಾಶೀಲತೆ. ನನ್ನ  ಅಥವಾ ನನ್ನಂಥ ಅನೇಕ ಗೆಳೆಯರಿಗೆ ಆ ವಾಹಿನಿಗಳ ಪ್ರವೇಶ ಪರೀಕ್ಷೆಯಲ್ಲಿ  ಉತ್ತೀರ್ಣವಾಗುಷ್ಟೂ  ಕ್ರಿಯಾಶೀಲತೆ ಇಲ್ಲ  ಎಂಬುದು ನಂತರದ ಮಾತು ಬಿಡಿ!

ಇನ್ನೂ ಸುದ್ದಿ  ವಿಶ್ಲೇಷಣೆ. “ನಾಳೆ ಮಧ್ಯಾಹ್ನ ಯಾವ ಚಾನಲ್‌ನಲ್ಲಿ  ನ್ಯೂಸ್ ನೋಡಲಿ ಎಂದು ಯೋಚಿಸುತ್ತಿರುವೆ. ನೈಜ ಸುದ್ದಿಯನ್ನು ಇದ್ದಹಾಗೆ ಬಿತ್ತರಿಸುವ ಚಾನೆಲ್‌ಗಳ್ಯಾವವೂ ಕಾಣುತ್ತಿಲ್ಲ! ಎಲ್ಲಾ  ಉತ್ಪ್ರೇಕ್ಷಾಲಂಕಾರಕ್ಕೆ ಬದ್ಧರಾಗಿರುವಂತಿವೆ!” ಅಯೋಧ್ಯೆ ವಿಚಾರಕ್ಕೆ ಸಂಬಂಸಿದಂತೆ ತೇಜಸ್ವೀನಿ ಹೆಗಡೆಯವರು ಹಾಕಿಕೊಂಡ ಬಜ್ ಇದು.
“ಅಲ್ಲಾ  ವಿ….ಅಲ್ಲಿ  ಸಾವು ಏನು ಸಂಭವಿಸಿಲ್ವಾ?’ ಮಳೆ ದುರಂತ ಆದ್ರೆ ಟಿವಿ ವಾಹಿನಿಗಳು ವರದಿಗಾರರನ್ನು ಕೇಳುವ ಮೊದಲ ಪ್ರಶ್ನೆಯೇ  ಇದು. ಏನು ಪತ್ರಕರ್ತರು ಮಾರಾಯ ನೀವು. ಬೇರೆಯರವನ್ನು ಸಾಯಿಸಲಿಕ್ಕೆ ನೋಡ್ತೀರ” ಹಾಗಂತ ಮಣಿಪಾಲದ ಉಮೆಶ್ ಮೊನ್ನೆ ಬೈಯ್ಯುತ್ತಿದ್ದ.

ಸತ್ತಿದ್ದಾರೆ ಎಂದರೆ ಮಾತ್ರ ಎಕ್ಸ್‌ಕ್ಲುಸೀವ್ ಸುದ್ದಿ. ಸತ್ತರೆ ಮಾತ್ರ ಸುದ್ದಿಗೊಂದು ಆಯಾಮ ದೊರೆಯುವುದು. ರಾಜಕಾರಣಿಗಳು ಎಚ್ಚರವಾಗುವುದು ಎಂಬ ಧೋರಣೆಯನ್ನು ಸುದ್ದಿ ಮನೆಯ ಸಾಕಷ್ಟು  ಮಂದಿ ತಳೆದಿದ್ದಾರೆ. ಅದಕ್ಕೆ ದರಿದ್ರ ರಾಜಕೀಯ ವ್ಯವಸ್ಥೆಯೂ ಕಾರಣವಿರಬಹುದು.

ಅಲ್ಲಿ  ನಥ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬ ಸುದ್ದಿಯೇ ಇಡೀ ಚಿತ್ರದ ಕಥೆ. ಅದು ಹೇಗೋ ಸುದ್ದಿ ಮನೆಯನ್ನು ತಲುಪುತ್ತದೆ. ರಾಜಕಾರಣಿಗಳ ಮನೆ ಬಾಗಿಲು ಮುಟ್ಟುತ್ತದೆ. ನಂದಿನಿ ಎಂಬ ವರದಿಗಾರ್ತಿಯನ್ನು ನೋಡಿದಾಗ ಐಬಿಎನ್, ಎನ್‌ಡಿಟಿವಿ ವಾಹಿನಿಗಳು ಕಣ್ಣೆದುರು ಕುಣಿಯುತ್ತವೆ. ಇದೀಗ ಸಾಕಷ್ಟು ಕನ್ನಡದ ವಾಹಿನಿಗಳು ಐಬಿಎನ್‌ನಿಂದ ಸೂರ್ತಿ ಪಡೆದಿವೆ! ನಥ ಸಾವಿನ ಹಿಂದೆ ನಡೆಯುವ ರಾಜಕೀಯ ಚೆಲ್ಲಾಟ, ಅದಕ್ಕೆ ಸುದ್ದಿ  ಮನೆಯ ಸ್ಪಂದನ…ಅಮೀರ್‌ಖಾನ್ ಪ್ರೊಡೆಕ್ಷನ್, ಮಾಧ್ಯಮದ ಮೇಲಿದ್ದ  ಅಷ್ಟು  ನಂಜನ್ನೂ ಕಕ್ಕಿದೆ.
ಸುದ್ದಿಯ ಮೌಲ್ಯ ಕಳೆದೇ ಹೋಗಿದೆ. ೨೪ ತಾಸು ಸುದ್ದಿ  ನೀಡುವ ವಾಹಿನಿಗಳಲ್ಲಿ  ೨೩.೫ ತಾಸು ಎಕ್ಸ್‌ಕ್ಲುಸೀವ್ ಸುದ್ದಿಗಳೇ ಬರುತ್ತಿರುತ್ತದೆ! ಕೂಸು ಹುಟ್ಟುವ ಮುನ್ನ ಕುಲಾವಿ ಎಂಬಂತೆ, ಘಟನೆ ನಡೆಯುವ ಮೊದಲೇ ಸುದ್ದಿ  ಬಿತ್ತರವಾಗುತ್ತಿರುತ್ತದೆ. ಮಗು ಬಾವಿಗೆ ಬಿದ್ದ  ಸುದ್ದಿ, ಆಕೆ ಬಾವಿಯಿಂದ ಏಳುವವರೆಗೂ ಲೈವ್! ಮುದ್ರಣ ಮಾಧ್ಯಮ ಕೂಡ ತೀರಾ ಹೊರತಾಗಿಲ್ಲ. ಆದ್ರೂ ೨೪*೭ರಷ್ಟು  ಕೆಟ್ಟಿಲ್ಲ(ವಿ.ಸೂ:-ಸುದ್ದಿಯನ್ನು ನೀಡುವ ವಿಚಾರದಲ್ಲಿ ಮಾತ್ರ).

***
ಪರ್ಯಾಯ ಏನು?
ಇದು ಮಾಧ್ಯಮದಲ್ಲಿದ್ದವರು ಕೇಳುವ ಪ್ರಶ್ನೆ. ಒಂದು ಪುಟ ತುಂಬಿಸುವಾಗಲೇ ಸಹನೆ ಕಳೆದು ಹೋಗಿರುತ್ತದೆ. ೨೪*೭ಗೆ ಆಗುವಷ್ಟು  ಸುದ್ದಿ  ತುಂಬಿಸುವುದು ಖಂಡಿತ ಕಷ್ಟದ  ಕಾಯಕ. ಅದು ಒಳಗಿದ್ದವರಿಗೆ ಮಾತ್ರ ಅರ್ಥವಾಗುತ್ತದೆ. ಸ್ಪರ್ಧೆ ಪ್ರಬಲವಾಗಿದೆ. ನಾವು ಹೋಗುವ ಮೋದಲೇ ಇನ್ನೊಂದು ವಾಹಿನಿ ವರದಿಗಾರ ಆ ಸುದ್ದಿಯನ್ನು ವೀಕ್ಷಕರಿಗೆ ನೀಡಿ ಆಗಿರುತ್ತದೆ. ಹಾಗಾದ್ರೆ ನಮ್ಮ  ವಾಹಿನಿ ಹೊಸ ಸುದ್ದಿ  ನೀಡುವುದು ಹೇಗೆ? ನಾವು ಪ್ರೇಕ್ಷಕರನ್ನು ಆಕರ್ಷಿಸುವುದು ಹೇಗೆ? ಇದು ಎಲ್ಲಾ  ವಾಹಿನಿಗಳಲ್ಲಿ  ಎದುರಾಗುವ ಪ್ರಶ್ನೆ. ಬೆಳೆದು ನಿಂತ ವಾಹಿನಿ, ಪತ್ರಿಕೆ, ಸಾಹಿತಿ ಏನು ಕೊಟ್ಟರೂ ಜನ ರುಚಿಯಾಗಿದೆ ಎಂದು ಸ್ವೀಕರಿಸುತ್ತಾರೆ. ಆದ್ರೆ ಚಂದನ ವಾಹಿನಿಯಲ್ಲಿ  ಬರುವ ಮಾರ್ಗದರ್ಶಿಯಂಥ ಅದ್ಭುತ ಕಾರ್‍ಯಕ್ರಮ ಜನರಿಗೆ ತಲುಪುವುದೇ ಇಲ್ಲ. ಮಸಾಲೆ ಇಲ್ಲದ ಸುದಿಯನ್ನು ಜನ ನೋಡುವುದಿಲ್ಲ. ಗ್ರಾಹಕ ಇಲಾಖೆ ಕುರಿತು ಬರೆದ ವರದಿಗೆ ಪ್ರತಿಕ್ರಿಯೆ ಹಾಳಾಗಲಿ, ಇಲಾಖೆಯಲ್ಲಿ  ವರ್ಷಕ್ಕೆ ೩ ದೂರು ದಾಖಲಾಗುವುದಿಲ್ಲ! ಅದೇ ಯಾರನ್ನಾದ್ರೂ ಬೈದ ಸುದ್ದಿಯಿದ್ದರೆ, ಅದಕ್ಕೆ ಸಿಗುವ ಪ್ರತಿಕ್ರಿಯೆಯೇ ಬೇರೆ. ಕೃತಕವಾಗಿ ಅಳಿಸುವ ರಿಯಾಲಿಟಿ ಶೋಗಳಿಗೆ ಸಿಗುವ ಟಿಆರ್‌ಪಿ, ಒಂದು ಒಳ್ಳೆ ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ಸಿಗುವುದಿಲ್ಲ  ಎಂಬಿತ್ಯಾದಿ ಮಾಧ್ಯಮ ಮಂದಿಯ ವಾದ ಸತ್ಯ.

ಟಿಆರ್‌ಪಿ ಬರಲಿಲ್ಲ  ಎಂದರೆ ಜಾಹೀರಾತು ಬರುವುದಿಲ್ಲ. ಜಾಹೀರಾತು ಇಲ್ಲವಾದರೆ ವಾಹಿನಿಗೆ ಆದಾಯದ ಮೂಲವೇ ಇಲ್ಲ. ನಷ್ಟದಲ್ಲಿ  ವಾಹಿನಿ ನಡೆಸಲು ಯಾವ ಯಜಮಾನ ಒಪ್ಪುತ್ತಾನೆ? ಈಗ ನಡೆಯುತ್ತಿರುವ ಬಹುತೇಕ ಕಾರ್‍ಯಕ್ರಮಗಳಿಗೆ ಉತ್ತಮ ಟಿಆರ್‌ಪಿ ಇದೆ. ಅಂದ ಮೇಲೆ ಆ ಕಾರ್‍ಯಕ್ರಮ ಸರಿಯಿಲ್ಲ  ಎಂದು ಹೇಗೆ ಹೇಳುತ್ತೀರಿ? ಒಬ್ಬಿಬ್ಬರು ಹೇಳುತ್ತಿರುತ್ತಾರೆ. ಅವರಿಗಾಗಿ ವಾಹಿನಿ ನಡೆಸುವುದು ಸಾಧ್ಯವಿಲ್ಲ  ಎನ್ನುತ್ತಾರೆ ಉನ್ನತ ಸ್ಥಾನದಲ್ಲಿ  ಕುಳಿತವರು.

ಮಜ ಅಂದ್ರೆ ಬಹುತೇಕರು ಬೈಯುತ್ತಲೇ ಕಾರ್‍ಯಕ್ರಮ ನೋಡುತ್ತಾರೆ! ಏನು ಪರ್ಯಾಯ ಮನೋರಂಜನೆ ಇಲ್ಲದಿರುವುದು ಕಾರಣವಾಗಿರಬಹುದು. ಅದಕ್ಕಿಂತ ಮುಖ್ಯವಾಗಿ ಎಲ್ಲರೂ, ತಮ್ಮ  ಆಪ್ತರ ಬಳಿ, ಬಸ್ ನಿಲ್ದಾಣದಲ್ಲಿ  ಬೀಡಾ ಅಂಗಡಿಯಲ್ಲಿ  ಬೈಯ್ಯುವವರೆ. ಹಾಗಾಗಿ ಆ ಬೈಗುಳ ವಾಹಿನಿಯ ಕಚೇರಿ ತಲುಪುವುದೇ ಇಲ್ಲ. ಒಂದು ಕಾರ್‍ಯಕ್ರಮ ಸರಿಯಿಲ್ಲ  ಎಂದು ಎಷ್ಟು  ಮಂದಿ ವಾಹಿನಿಯ ಮುಖ್ಯಸ್ಥರಿಗೆ ಪತ್ರ ಬರೆದಿರುವಿರಿ? ಪ್ರಾಮಾಣಿಕವಾಗಿ ಹೇಳಿ. ಓದುಗರ ಓಲೆಯಲ್ಲಿ  ಪ್ರಕಟವಾಗದೆ ಇರಬಹುದು. ಆದ್ರೆ, ಈ ಕಾರ್‍ಯಕ್ರಮಕ್ಕೆ/ಲೇಖನಕ್ಕೆ ಜನ ಬೈಯ್ಯುತ್ತಿದ್ದಾರೆ ಎಂಬ ಅರಿವು ಒಳಗೆ ಕುಳಿತವರಿಗೆ ಆಗುತ್ತದೆ. ಅನ್ಯಾಯವಾದರೆ ಇಂಥ ಕಚೇರಿಗೆ ದೂರು ನೀಡಿ ಎಂದು ಬರೆದರೆ, ಅಲ್ಲಿನ ಅಕಾರಿಯೊಬ್ಬರ ಫೋನ್ ನಂಬರ್ ಹಾಕಬೇಕಿತ್ತು ಎನ್ನುವ ಜನ ನಮ್ಮವರು!

ಹಾಗಂತ ನಾನಿಲ್ಲಿ  ಮಾಧ್ಯಮವನ್ನು ಸಮರ್ಥಿಸುತ್ತಿಲ್ಲ. ಆದರೆ, ಇಲ್ಲಿ  ವೀಕ್ಷಕ ವರ್ಗದ ತಪ್ಪೂ  ಇದೆ. ಬೈಗುಳವನ್ನು ವಾಹಿನಿಯ ಬಾಗಿಲಿಗೆ ತಲುಪಿಸುವಷ್ಟು  ಪುರುಸೊತ್ತು, ಸಹನೆ ಯಾರಿಗೂ ಇಲ್ಲ. ಪೆಟ್ರೋಲ್‌ನಲ್ಲಿ  ಅನ್ಯಾಯವಾದ್ರೆ ದೂರು ನೀಡಿ ಎಂದು ಬರೆದಿರುತ್ತೇವೆ. ಇಲಾಖೆಗೆ ಹೋದರೆ ವರ್ಷಕ್ಕೆ ೨ ದೂರು ದಾಖಲಾಗಿರುವುದಿಲ್ಲ. ಕೊನೆಗೆ ಅನ್ಯಾಯ ನಡೆಯುತ್ತಿದೆ ಎಂದು ಹೇಳುವ ನೈತಿಕತೆಯನ್ನೇ ನಾವು ಕಳೆದುಕೊಳ್ಳುತ್ತೇವೆ. ಇಂಥ ಸಾಕಷ್ಟು  ಅನುಭವ ನನಗೆ ವೈಯಕ್ತಿಕವಾಗಿ ಆಗಿದೆ.

ಸುದ್ದಿ  ನೀಡುವ ವಿಧಾನದಲ್ಲಿ  ಬದಲಾವಣೆ ಆಗಲೇ ಬೇಕಿದೆ. ಇದಕ್ಕೂ ಮೊದಲು,  ಸರಕಾರಿ ಹುದ್ದೆಯನ್ನು ಭರ್ತಿ ಮಾಡಿಕೊಳ್ಳುವಂತೆ ಸುದ್ದಿಮನೆಯನ್ನು ತುಂಬಿಕೊಳ್ಳುವ ಟ್ರೆಂಡ್‌ನಿಂದ ಮಾಧ್ಯಮಗಳು ಹೊರಬರಬೇಕಿದೆ. ಹೇಗೆ ಸರಕಾರಿ ಕಚೇರಿ ಭರ್ತಿಯನ್ನು  ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲವೋ ಹಾಗೆ, ಮಾಧ್ಯಮದಲ್ಲೂ  ಕೂಡ! ನಾವು ಕ್ರಿಯಾಶೀಲರು ಎಣಿಸಿದ್ದ ಅನೇಕ ಗೆಳೆಯರು, ತಾವು ದಡ್ಡರು ಎಂದು ಸ್ವ ನಿರ್ಧಾರ ಮಾಡಿಕೊಂಡು ಬೇರೆ ಕ್ಷೇತ್ರಕ್ಕೆ ಹೋಗಿದ್ದಾರೆ ಮತ್ತು ಹೋಗುತ್ತಿದ್ದಾರೆ. ಒಂದಲ್ಲ  ಒಂದು ದಿನ ವ್ಯವಸ್ಥೆ  ಬದಲಾಗಬಹುದು ಎಂಬ ಭರವಸೆಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ.

ಒಂದು ಹಂತದಲ್ಲಿ  ನಾನೂ ಕೂಡ ಅವಕಾಶಕ್ಕಾಗಿ ಅಲೆದು, ಅಲೆದು ಬೇಸತ್ತು ಮಾಧ್ಯಮದಿಂದ ಹೊರಟು ನಿಂತಿದ್ದೆ. ಅಂಥ ಘಳಿಗೆಯಲ್ಲಿ  ಆಪ್ತರಾದವರು ನೆರವಿಗೆ ಬಂದರು. ಬರವಣಿಗೆಗೆ ಮರು ಜೀವ ಕೊಟ್ಟರು…ಇದನ್ನೆಲ್ಲ  ಮತ್ತೊಮ್ಮೆ ಬರೆಯುವೆ. ಯಾರಾದ್ರೂ ಪತ್ರಿಕೋದ್ಯಮ ಓದುತ್ತಿದ್ದೇನೆ ಅಂದ್ರೆ, ಲಾಭಿ ಮಾಡುವುದು, ಬಕೆಟ್ ಹಿಡಿಯುವುದು ಹೇಗೆ ಎಂದು ಮೊದಲು ಕಲಿತುಕೊಳ್ಳಿ ಎನ್ನಲ್ಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಈ ಕ್ಷೇತ್ರದಿಂದ ಅಷ್ಟೆ  ಪ್ರಮಾಣದ ಫಲಿತಾಂಶ ನಿರೀಕ್ಷಿಸಬಹುದು.

ಅಮಿರ್‌ಖಾನ್ ನನ್ನ  ಇಷ್ಟದ  ನಟ. ಪ್ರತಿ ಸಲ ಏನಾದ್ರೂ ಹೊಸತು ಮಾಡುತ್ತಾರೆ. ಲಗಾನ್ ,ತಾರೆ ಝಮೀನ್ ಪರ್ ನಂತರ ಪೀಪ್ಳಿ  ಲೈವ್ ಆ ತಂಡದ ಮತ್ತೊಂದು ಅದ್ಭುತ ಕೊಡುಗೆ. ಕಲಾತ್ಮಕವಾದ ಚಿತ್ರ. ಅರ್ಥವಾಗುವುದು ತುಸು ಕಷ್ಟ. ಅರ್ಥವಾದರೆ ಅದ್ಭುತ ಸಿನಿಮಾ. ಇದನ್ನು  ಕನ್ನಡದ ನಿರ್ದೇಶಕರು ಮತ್ತು ಚಿತ್ರ ವಿಮರ್ಶೆ ಮಾಡುವ ಉನ್ನತ ಸ್ಥಾನದಲ್ಲಿ  ಕುಳಿತವರು ಖುದ್ದಾಗಿ ನೋಡಬೇಕು. ಒಂದು ಹಂತಕ್ಕೆ ಬೆಳೆದು ನಿಂತಾಗ ಎಂಥ ವಾಹಿನಿಯನ್ನೂ ಜಾಡಿಸಬಹುದು ಎಂಬುದಕ್ಕೆ ಅಮೀರ್ ಖಾನ್ ತಂಡ ಸಾಕ್ಷಿ. ಕವರ್ ಕೊಟ್ಟು  ವಿಮರ್ಶೆ ಬರೆಸಿಕೊಳ್ಳುವ ಬದಲು, ನಮ್ಮ ನಿರ್ದೇಶಕರು ಆ ಮಟ್ಟಕ್ಕೆ ಏರಿದ್ದರೆ ವ್ಯವಸ್ಥೆ ತುಸು ಬದಲಾಗುತ್ತಿತ್ತೇನೋ ಅಲ್ವಾ?!

Read Full Post »