ಇತ್ತೀಚಿನ ದಿನದಲ್ಲಿ ಈ ಫೇಸ್‌ಬುಕ್‌ಗೆ ಬರೋದಕ್ಕೆ ಭಯ ಆಗ್ತಿದೆ. ಬೇನಾಮಿ ಹೆಸರಿನಲ್ಲಿ ಬರುವ ರಿಕ್ವೆಸ್ಟ್‌ಗಳ ಹಾವಳಿ ಒಂದು ಕಡೆಯಾದ್ರೆ, ಇನ್‌ಬಾಕ್ಸ್‌ಗೆ ನೂರಾರು ಸಂದೇಶಗಳು. ಒಂದೆಡೆ ಸೆಕ್ಸ್‌ಚಾಟ್‌ಗೆ ಹಪಹಪಿಸುವ ಜನ. ನಗ್ನ ದೇಹದ ಚಿತ್ರಕ್ಕೆ ಹಾತೊರೆಯುವವರು ಇನ್ನೊಂದೆಡೆ. ನಾವು ಪ್ರತಿಕ್ರಿಯಿಸಬೇಕು ಅಂತಿಲ್ಲ. ಅವರ ಪಾಡಿಗೆ ಅವರು ಕೇಳುತ್ತಲೆ ಇರ್ತಾರೆ. ಅವರ ಕಾಮ ದಾಹ ತಣಿಸಲು ಹೆಣ್ಣುಬೇಕು. ಹೆಣ್ಣು ಅಂದ್ರೆ ಬೋಗದ ಸರಕು. ರಾತ್ರಿಯ ರಾಣಿ. ಅವಳ ಭಾವನೆಗಳು, ನೋವು ಸಂಕಟಗಳನ್ನು ಕೇಳುವ ವ್ಯವಧಾನ ಯಾರಿಗೂ ಇಲ್ಲ. ಈ ವರ್ಚ್ಯುವಲ್ ಜಗತ್ತಿನಲ್ಲಿ ಅದು ಯಾರಿಗೂ ಬೇಕಿಲ್ಲ. ಇದಕ್ಕೆ ತುಪ್ಪ ಸುರಿದಂತೆ ನಗ್ನ ದೇಹದೊಂದಿಗಿನ ಸೆಲ್ಫಿ ಈಗಿನ ಟ್ರೆಂಡ್.
***
ಫಿಲಿಫೈನ್ಸ್!
ಏಷ್ಯಾ ಖಂಡದ ಒಂದು ಪುಟ್ಟ ದ್ವೀಪವಿದು. ಹಸಿವು, ಬಡತನ ಇವತ್ತಿಗೂ ಇಲ್ಲಿ ಪ್ರಸ್ತುತ. ಯಾಕಂದ್ರೆ ಈ ದೇಶಕ್ಕೆ ತನ್ನದು ಅಂತೊಂದು ಗಟ್ಟಿಯಾದ ಆದಾಯದ ಮೂಲವಿಲ್ಲ. ಇಂಥ ದೇಶದಲ್ಲಿ ಈಗ ೩೨ ವರ್ಷದ ಹಿಂದೆ ಜನಿಸಿದವಳು ನಾನು.
ಇಲ್ಲಿ ಹಲವು ಪುಟ್ಟ, ಪುಟ್ಟ ದ್ವೀಪಗಳಿವೆ. ಅದರ ಅಂಚಿನಲ್ಲಿ ನಗರಗಳು. ಹಾಗಂತ ಅವ್ಯಾವುವು ಮಹಾನಗರಗಳಾಗಿ ಬೆಳೆದಿಲ್ಲ. ಅನೇಕರಿಗೆ ಉದ್ಯೋಗ ನೀಡುವ, ಹಸಿವು ನೀಗಿಸುವ ಕೇಂದ್ರಗಳಾಗಿಲ್ಲ. ಚರ್ಚಿಗೆ ಹೋಗುವವರು ಹಾಗೂ ಚರ್ಚಿಗೆ ಹೋಗದವರು ಎಂಬ ಎರಡೇ ಜಾತಿ ಇಲ್ಲಿ.
ನಾನು ಚಿಕ್ಕವಳಿದ್ದಾಗಲೆ ಅಮ್ಮನ್ನ ಕಳೆದುಕೊಂಡೆ. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ ಅಜ್ಜಿ-ತಾತ ಕೂಡ ದೂರವಾದ್ರು. ನಮ್ಮದೇ ಬೀದಿಯಲ್ಲಿದ್ದ ಆಂಟಿ ಮನೆಯಲ್ಲಿ ಬೆಳೆದೆ. ಅಪ್ಪನ್ನ ಬಗ್ಗೆ ತಿಳಿದುಕೊಳ್ಳಲಿಕ್ಕೆ ನನ್ನಮ್ಮ ಸಿಂಗಲ್ ಮಾಮ್!
ಇದೆಲ್ಲ ಹೇಳೊ ಮೊದ್ಲು ಈ ದ್ವೀಪದ ಸಂಬಂಧಗಳ ಬಗ್ಗೆ ಹೇಳಿಬಿಡ್ತೀನಿ. ಇಲ್ಲಿ ಆರೇಂಜ್ ಮ್ಯಾರೇಜ್ ಎಂಬ ಕಲ್ಪನೆಯೇ ಇಲ್ಲ. ಎಲ್ಲರೂ ಅವರವರ ಹುಡುಗನ್ನ ಅವರವರೇ ಆರಿಸಿಕೊಳ್ಳೋದು ಹೆಚ್ಚು. ಎಲ್ಲೋ ನೂರರಲ್ಲಿ ಒಂದೆರಡು ಮದುವೆಗಳು ಮಾತ್ರ ಕುಟುಂಬದವರಿಂದ ನಿಶ್ಚಿತವಾಗಿ ಆಗುತ್ತೆ. ೧೪-೧೬ ವರ್ಷಕ್ಕೆ ಇಲ್ಲಿನ ಹುಡುಗಿ ಸಂಬಂಧದ ಬಲೆಯಲ್ಲಿ ಬೀಳ್ತಾಳೆ. ಇಲ್ಲಿ ಹುಡುಗಿಯರು ಜಾಸ್ತಿ ಓದಲ್ಲ. ೧೮-೨೦ ವರ್ಷಕ್ಕೆ ಮದ್ವೆ ಆಗುತ್ತೆ. ಒಂದಷ್ಟು ಸಂಬಂಧಗಳು ಮದ್ವೆಗೆ ಮುಂಚೆಯೆ ಮುರಿದು ಬಿಡುತ್ತೆ. ಇನ್ನೊಂದಷ್ಟು ಮದ್ವೆವರೆಗೂ ತಲುಪುತ್ತೆ.
ಇಲ್ಲಿನ ಗಂಡಸರಿಗೆ ಸಂಸಾರದ ಬಗ್ಗೆ, ಸಂಬಂಧಗಳ ಬಗ್ಗೆ ಜಾಸ್ತಿ ಕಾಳಜಿಯಿಲ್ಲ. ಅದಕ್ಕಿಂತ ಮುಖ್ಯವಾಗಿ ಒಂದು ಉದ್ಯೋಗ ಅಂತಿಲ್ಲ. ಒಂದಷ್ಟು ಜನ ಮೀನು ಮಾರುತ್ತಾರೆ. ಇನ್ನೊಂದಷ್ಟು ಜನ ಅದು-ಇದು ಸಣ್ಣಪುಟ್ಟ ಕೆಲಸ ಮಾಡ್ತಾರೆ. ಕೆಲವ್ರು ಕೃಷಿನೂ ಮಾಡ್ತಾರೆ. ಆದ್ರೆ ಪಟ್ಟಣ್ಣವಾಸಿಗಳಲ್ಲಿ ದೊಡ್ಡ ಓದು, ದೊಡ್ಡ ಉದ್ಯೋಗ ಅಂತಿರೋದು ಕಡಿಮೆ. ಆವತ್ತಿನ ದುಡಿಮೆ ಆವತ್ತಿನ ಊಟ ಅನ್ನೋ ಸ್ಥಿತಿ.
ನಾಲ್ಕಾರು ಸಲ ಅನುಭವಿಸಿದ ನಂತ್ರ ಅವನಿಗೆ ಹುಡುಗಿ ಬೇಜಾರು ಬರುತ್ತೆ. ಅದಕ್ಕಿಂತ ಒಂದು ಸಂಸಾರ, ಒಂದು ಸೂರು ಅಂತ ಕಟ್ಟಿಕೊಳ್ಳಲು ಕೈಯಲ್ಲಿ ಏನು ಇರಲ್ಲ. ಮದ್ವೆ ಹೊತ್ತಿಗೆ ವರಾತ ತೆಗಿತಾನೆ. ಹುಡುಗಿ ಜೋರಿದ್ರೆ ಮದ್ವೆ ಆಗುತ್ತೆ. ಆದ್ರೆ ಮದ್ವೆ ಮರುದಿನದಿಂದ ಅವನು ಹೆಂಡ್ತಿಗೆ ಹೊಡೆಯಲು ಶುರು ಮಾಡ್ತಾನೆ. ಕುಡಿತಾನೆ. ಬೇರೆ ಹುಡುಗಿಯರ ಸಹವಾಸ ಆರಂಭಿಸ್ತಾನೆ. ಹೀಗೆಲ್ಲ ಆಗುವಾಗ್ಲು ನಿದ್ದೆ ಬರದ ರಾತ್ರಿಯಲ್ಲಿ ಹೆಂಗಸರಿಗೆ ೨-೩ ಮಕ್ಕಳು ಆಗುತ್ತೆ. ಕೆಲವರು ಮದ್ವೆಗೆ ಮುಂಚಿನ ಸಂಬಂಧದಲ್ಲಿ ಮಕ್ಕಳು ಮಾಡಿಕೊಂಡು, ನಂಬಿದ ಹುಡುಗನಿಂದ ಮೋಸ ಹೋಗಿ ಸಿಂಗಲ್ ಮಾಮ್ ಪಟ್ಟ ಕಟ್ಟಿಕೊಳ್ತಾರೆ. ಬಲವಂತವಾಗಿ ಮದ್ವೆ ಆದವರು ೬-೭ ವರ್ಷ ಸಂಸಾರ ಮಾಡಿ, ಆತನಿಂದ ಹೊಡೆತ ತಿಂದು, ಅವನ ಜೊತೆ ಬದುಕಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿ ಮಕ್ಕಳನ್ನು ಕಟ್ಟಿಕೊಂಡು ಸಿಂಗಲ್ ಮಾಮ್ ಆಗಿ ಹೊರಬೀಳ್ತಾರೆ. ಇದೆಲ್ಲ ಆಗೋ ಹೊತ್ತಿಗೆ ಆಕೆಗೆ ಅಬ್ಬಬ್ಬ ಅಂದ್ರೆ ೨೫-೨೭ ವರ್ಷ ಆಗಿರುತ್ತೆ. ಬದುಕು ಬಟಾನು ಬಯಲಿಗೆ ಬಂದಿರುತ್ತೆ. ಅವಳೊಬ್ಬಳೆ ಸಾಲದು ಎಂಬಂತೆ ೧,೨,೩ ವರ್ಷದ ೨-೩ ಮಕ್ಕಳು ಬೇರೆ ಅವಳ ಹೆಗಲಿನಲ್ಲಿ.
***
ಲೊಪೇಜ್ ವಿಕಿ ನನ್ನ ಹೆಸ್ರು. ಸಂಬಂಧಿಗಳಿಲ್ಲದೆ ಅನಾಥವಾಗಿದ್ದ ನಾನು ೧೮ನೇ ವರ್ಷದಲ್ಲಿ ನನ್ನ ಹುಡುಗನ್ನ ಹುಡುಕಿಕೊಂಡೆ. ಮದ್ವೆನೂ ಆಯ್ತು. ಮದ್ವೆಗೆ ಮೊದಲೆ ಬಸಿರಾಗಿದ್ದೆ. ಮದ್ವೆಯಾಗಿ ೫ ವರ್ಷ ಸಂಸಾರದ ನಡೆದಿತ್ತು. ೨ ಮಕ್ಕಳು ಆಗಿದ್ದವು. ೩ನೇ ಮಗು ಹೊಟ್ಟೆಯಲ್ಲಿತ್ತು. ಆಗ ೫ ತಿಂಗಳು ನನಗೆ.
ಹೇಳಿದ್ನಲ್ಲ ಎಲ್ಲ ಟಿಪಿಕಲ್ ಗಂಡಸರಂತೆ ಇವನು. ಆದ್ರು ಹೊಡೆತ ತಿನ್ನುತ್ತಲೇ ೫ ವರ್ಷ ಸಾಗಿಸಿದ್ದೆ. ಯಾಕೋ ಸಾಕು ಇವನ ಸಹವಾಸ ಅನ್ನಿಸ್ತು. ಅಲ್ಲಿಂದ ಹೊರಬಿದ್ದೆ. ಬದುಕಿನ ನೋವು-ಸಂಕಟ ಅರ್ಥವಾಗಿತ್ತು. ಕಣ್ಣಲ್ಲಿ ನೀರಿತ್ತು.
ಮನೆಯಿಂದ ಹೊರಗೆ ಬಿದ್ದೆ. ಇಲ್ಲಿ ಅಷ್ಟು ಸುಲಭದಲ್ಲಿ ತಿಂಗಳ ಖರ್ಚಿಗೆ ಸಾಕಾಗುವಷ್ಟು ಕೆಲಸ ಸಿಗಲ್ಲ. ಹೀಗೆ ಮನೆಯಿಂದ ಹೊರಬಿದ್ದು ವರ್ಷಾನುಗಟ್ಟಲೆ ಕೆಲಸ ಹುಡುಕುತ್ತಿರುವವರು, ಹಸಿವಾದವರು ಅನೇಕರು ಇರ್ತಾರೆ. ಅವರು ಏನು ಕೆಲಸ ಹೇಳಿದ್ರು ಮಾಡ್ತಾರೆ. ಅಂಥ ಸಮುದ್ರಕ್ಕೆ ಅನಿವಾರ್ಯವಾಗಿ ಬಿದ್ದೆ. ನನಗಿಂತ ಹೆಚ್ಚಾಗಿ ನನ್ನ ಪುಟ್ಟ ಮಕ್ಕಳ ಹೊಟ್ಟೆಯಲ್ಲಿ ಹಸಿವಿತ್ತು. ಜೊತೆಗೆ ಹೊಟ್ಟೆಯೊಳಗಿದ್ದ ಮಗುವಿನ ಉಸಿರಿತ್ತು. ಆದ್ರೆ ಯಾವ ಕಾರಣಕ್ಕು ನಾನು ನನ್ನ ನಂಬಿಕೆಯ ಜೊತೆ, ನೈತಿಕತೆಯ ಜೊತೆ ಸೋಲಬಾರದು ಅಂತ ಗಟ್ಟಿಯಾಗಿ ನಿರ್ಧಾರ ಮಾಡಿಕೊಂಡಿದ್ದೆ.
ಬೆಳಿಗ್ಗೆ ೩ ಗಂಟೆಗೆ ಎದ್ದು ಮೀನು ಮಾರೋರಿಗೆ ಹೋಗಿ ಸಹಾಯ ಮಾಡಿದೆ. ಯಾರ‍್ಯಾರ ಮನೆಯಲ್ಲಿ ಬಟ್ಟೆ ತೊಳೆಯೋದು ಇದೆ? ಕ್ಲೀನ್ ಮಾಡೋದಿದೆ ಅಂತ ಹುಡುಕಿಕೊಂಡು ಹೊರಟೆ. ಹಾಗಂತ ಇಲ್ಲಿ ಕ್ಲೀನ್ ಮಾಡೋದು, ಬಟ್ಟೆ ತೊಳೆಯೋದು ಎಲ್ಲ ನಮ್ಮ ಹೊಟ್ಟೆ ತುಂಬಿಸುವ ಉದ್ಯೋಗವಲ್ಲ. ಆದ್ರು ಬಸುರಿಯಾಗಿದ್ದರಿಂದ ಹೆರಿಗೆವರೆಗೂ ಈ ಕೆಲಸ ಮಾಡಲೇ ಬೇಕಾಯ್ತು.
ಹೀಗೆ ಕೆಲಸ ಹುಡುಕಿದಾಗ ಸಿಗಲ್ಲ. ಪುಟ್ಟ ಮಕ್ಕಳು ಇರುತ್ತವೆ. ಅವಕ್ಕೆ ಹಾಲು ಕುಡಿಸೋಕೆ ದುಡ್ಡು ಇರಲ್ಲ. ಆಗ ಅನೇಕ ಹೆಂಗಸ್ರು ದಾರಿ ತಪ್ಪಿ ಬಿಡ್ತಾರೆ. ದುಡ್ಡು ಕೊಡ್ತಾರೆ ಅಂದ್ರೆ ತಮ್ಮ ದೇಹದ ಭಾಗಗಳನ್ನು ಮಾರಾಟಕ್ಕಿಡ್ತಾರೆ. ಹಾಗಾಗಿ ಇಲ್ಲಿನ ಹೆಣ್ಣುಮಕ್ಕಳು ಬೇರೆ ದೇಶದವರಿಗೆ ಕಾಮದ ಸರಕು. ಫೇಸ್‌ಬುಕ್‌ನಲ್ಲಿ ಪಿಂಗ್ ಮಾಡಿ, ಯಾರಾದ್ರು ದುಡ್ಡು ಕೊಟ್ಟರೆ, ನಗ್ನ ಚಿತ್ರ ನೀಡಿ ದುಡ್ಡು ಕೊಟ್ಟವರನ್ನ ಖುಷಿಪಡಿಸಿ ಇವರ ಹೊಟ್ಟೆ ತುಂಬಿಸಿಕೊಳ್ಳೋದು ಇಲ್ಲಿನ ಅನೇಕರ ಹೊಟ್ಟೆಪಾಡು. ಎಲ್ಲರೂ ಹೀಗಲ್ಲ. ಆದ್ರೆ ಅಂಥ ಕೆಲವರಿಂದ ಈ ದೇಶದ ಎಲ್ಲ ಹೆಣ್ಣುಮಕ್ಕಳು ಸೆಕ್ಸ್ ಚಾಟ್‌ಗೆ ತೆರೆದುಕೊಂಡವರು ಅಂತ ಬೇರೆಯವರು ಭಾವಿಸಿಬಿಡ್ತಾರೆ.
***
ಇನ್ನು ಹೆಚ್ಚು ದಿನ ಕೆಲಸ ಮಾಡಿದ್ರೆ ಹಸಿವು ನೀಗಲ್ಲ ಅನ್ನಿಸ್ತು. ಮಗುಗೆ ಒಂದು ೪ ತಿಂಗಳು ಆಗ್ತಾ ಇದ್ದ ಹಾಗೆ ಹೊರಟೆ. ಇಲ್ಲಿನ ಒಂದು ಸಮಾಧಾನ ಸಂಗತಿ ಅಂದ್ರೆ ಒಂದಷ್ಟು ಏಜೆನ್ಸಿಗಳು ವಿದೇಶದಲ್ಲಿ ಕೆಲಸ ಕೊಡಿಸುತ್ತವೆ. ಹಾಗೆ ಕೆಲಸ ಕೊಡಿಸುವ ಒಂದು ಏಜೆನ್ಸಿಗೆ ಹೋಗಿ ನನ್ನ ಅರ್ಜಿ ಎಲ್ಲ ಪ್ರೊಸೆಸ್ ಮಾಡಿಸಿದೆ. ನಾನು ವಿದೇಶದಲ್ಲಿ ಕೆಲಸ ಮಾಡ್ಲಿಕ್ಕೆ ಅರ್ಹ ಅಂತ ಸರ್ಟಿಫಿಕೆಟ್ ಸಿಕ್ತು. ಆದ್ರೆ ಪ್ರೊಸೆಸಿಂಗ್ ಫೀ ಕೊಡ್ಲಿಕ್ಕೆ ಹಣ ಇರಲಿಲ್ಲ. ನೀವು ಅಲ್ಲಿ ಹೋಗಿ ಕೆಲಸಕ್ಕೆ ಸೇರಿ. ನಿಮ್ಮ ೫ ತಿಂಗಳ ಸಂಬಳದಲ್ಲಿ ಸ್ವಲ್ಪ ಸ್ವಲ್ಪ ನಮ್ಮ ಹಣ ಕಟ್ ಮಾಡಿಕೊಳ್ತೀವಿ ಅಂತ ಏಜೆನ್ಸಿಯವರು ಸಹಾಯ ಮಾಡಿ ಪುಣ್ಯಕಟ್ಟಿಕೊಂಡ್ರು.
ಮಕ್ಕಳನ್ನು ಇಲ್ಲೇ ಆಂಟಿ ಮನೇಲಿ ಬಿಟ್ಟೆ. ಪುಟ್ಟ ಮಗುನು ಬಿಟ್ಟು ಸಿಂಗಪುರಕ್ಕೆ ಹೊರಟೆ. ಅಲ್ಲಿ ಸಿಕ್ಕಿದ್ದು ಮನೆಯೊಂದರಲ್ಲಿ ಪುಟ್ಟ ಕಂದನನ್ನು ನೋಡಿಕೊಳ್ಳುವ ಕೆಲಸ. ಬದುಕು ಹೇಗಿರುತ್ತೆ ನೋಡಿ. ನನ್ನ ಪುಟ್ಟ ಕಂದನ್ನ ಬಿಟ್ಟು, ಯಾರೋ ದುಡ್ಡು ಕೊಡ್ತಾರೆ ಅಂತ ಇನ್ನೊಬ್ಬರ ಮನೆ ಕಂದನ ನೋಡಿಕೊಳ್ಳುವ ಕೆಲಸ!
ವರ್ಷ ಆಗುವ ಹೊತ್ತಿಗೆ ಎಲ್ಲವೂ ಅಂದುಕೊಂಡಂತೆ ಆಯ್ತು. ಕೈಯಲ್ಲಿ ಸ್ವಲ್ಪ ದುಡ್ಡು ಸೇರ‍್ತು. ಪ್ರತಿ ತಿಂಗಳು ಮಕ್ಕಳಿಗೆ ಅಂತ ಊರಿಗೆ ಇಲ್ಲಿಂದಲೇ ದುಡ್ಡು ಕಳಿಸ್ತಾ ಇದ್ದೆ. ವರ್ಷ ಆದಮೇಲೆ ಎಲ್ಲ ಮಕ್ಕಳನ್ನು ಕರೆದುಕೊಂಡು ಬಂದು ಇಲ್ಲಿ ಸೆಟೆಲ್ ಆದೆ. ಇಲ್ಲಿಗೆ ಬಂದು ೯ ವರ್ಷವಾಯ್ತು.
***
ನಗೊಂದು ಜೊತೆ ಬೇಕು. ನನ್ನ ಭಾವನೆಗಳನ್ನು ಹಂಚಿಕೊಳ್ಳಬೇಕು. ಬದುಕಿನಲ್ಲಿ ಬರಿ ನೋವೇ. ಇನ್ನಾದ್ರು ಚೂರು ಖುಷಿಪಡಬೇಕು ಅಂತ ಫೇಸ್‌ಬುಕ್‌ಗೆ ಬಂದೆ. ಒಂದಷ್ಟು ಜನರನ್ನು ಸ್ನೇಹಿತರನ್ನಾಗಿಸಿಕೊಂಡೆ. ಅವರ ಜೊತೆ ಮಾತಾಡುತ್ತ ನೋವನ್ನು ಮರೆತೆ. ಹೀಗೆ ಇಂಗ್ಲೆಂಡ್‌ನವನೊಬ್ಬ ಸ್ನೇಹಿತನಾದ. ೬ ತಿಂಗಳ ಚಾಟ್‌ನಲ್ಲಿ ಇಬ್ಬರು ಕಷ್ಟ-ಸುಖ ಹೇಳಿಕೊಂಡು ಫ್ರೆಂಡ್ಸ್ ಆದ್ವಿ. ನಾವಿಬ್ರು ಮದ್ವೆನೂ ಆಗಬೇಕು ಅಂತ ನಿರ್ಧಾರ ಮಾಡಿದ್ವಿ.
ನನ್ನ ಇಂಗ್ಲೆಂಡ್ ಕರೆಸಿಕೊಳ್ತೀನಿ, ಹಾಗೆ ಹೀಗೆ ಅಂತೆಲ್ಲ ಕಥೆ ಹೇಳಿದ್ದ ಅವ ೬ ತಿಂಗಳ ಬಳಿಕ ಬೇರೆಯದೆ ವರಾತ ತೆಗೆದ. ವೀಸಾಕ್ಕೆ ದುಡ್ಡು ಕೊಡು ಅಂತೆಲ್ಲ ಕೇಳಿದ. ಯಾಕೊ ಅನುಮಾನ ಬಂತು. ಕೊನೆಗೆ ಅವನ ನಿಜ ಬಣ್ಣ ಬಯಲಾಯ್ತು. ಅವನು ಫೇಕ್. ಅವನಿಂದ ನಂಗೇನು ನಷ್ಟ ಆಗ್ಲಿಲ್ಲ. ಬದುಕಿನ ಹಾದಿಯಲ್ಲಿ ತುಂಬಾ ಜನ ದೇಹದ ಸುಖಕ್ಕೆ ಕೇಳಿದ್ರು. ಕೊಡೋದಿದ್ರೆ ೫ ತಿಂಗಳ ಮಗು ಹೊಟ್ಟೆಯಲ್ಲಿದ್ದಾಗ್ಲೆ ಕೊಟ್ಟು ಬದುಕಿನಲ್ಲಿ ಸೆಟೆಲ್ ಆಗ್ತಿದ್ದೆ. ಆವಾಗ್ಲೆ ಹೇಳಿದ್ನಲ್ಲ ನಾನು ಬದುಕಿನಲ್ಲಿ ಸೋಲಬಾರದು ಅಂತ ನಿರ್ಧಾರ ಮಾಡಿದ್ದೆ. ಅದಕ್ಕೆ ಅಲ್ಲಿಂದ ಈ ಸಿಂಗಪುರದವರೆಗೆ ಬಂದೆ.
ಆತನಿಂದ ನಂಗೇನು ಆಗ್ಲಿಲ್ಲ. ಬಟ್ ಭಾವನೆಗಳ ಮೇಲೆ ಸಮಾಧಿ ಕಟ್ಟಿದ. ನಂಬಿಕೆಗಳನ್ನು ಘಾಸಿಗೊಳಿಸಿದ. ಗಂಡಸಿನ ಕುರಿತು ಮತ್ತೆ ಚಿಗುರಿದ್ದ ನಂಬಿಕೆಗೆ ಕೊಳ್ಳಿ ಇಟ್ಟ. ಹಾಗಂತ ನಾನೇನು ಗಂಡಸಿನ ವಿರೋಧಿಯಲ್ಲ.
ನಗ್ನವಾದವಳು ಬೇಕು. ಸುಖ ಕೊಡಬೇಕು. ಖುಷಿಪಡಿಸಬೇಕು. ಸುಮಾರು ೫ ವರ್ಷದಲ್ಲಿ ಮೊದಲು ೨ ವರ್ಷ ಬಿಟ್ಟು ನಂತರದ ೩ ವರ್ಷ ಗೊಂಬೆಯಂಥೆ ನಿಂತು ಆ ಕೆಲಸ ಮಾಡಿದ್ದೇನೆ. ಮತ್ತೆ ಅದನ್ನು ಮಾಡಲು ಮನಸ್ಸಿಲ್ಲ. ಕೊನೆಯದಾಗಿ ಒಂದೇ ಮಾತು. ನಗ್ನತೆ ನಾವು ಹುಟ್ಟುತ್ತಲೆ ನಮ್ಮ ಜೊತೆ ಬಂದಿರುತ್ತೆ. ನೆನಪಿಟ್ಟುಕೊಳ್ಳಿ. ಕಣ್ತುಂಬಿಕೊಳ್ಳಿ. ಒಂದು ಹೆಣ್ಣು ನಗ್ನವಾಗದೆ ನೀವ್ಯಾರು ಹುಟ್ಟಲ್ಲ. ಎಂಜಾಯ್ ಸೆಲ್ಫಿ ವಿತ್ ನ್ಯೂಡ್. ಥ್ಯಾಂಕ್ಸ್
(ಭಾವಾನುವಾದ)