Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2012

‘ಹಿಂದಿರುಗಿ ನೋಡಿದರೆ ಬದುಕು ಯಾವತ್ತೂ ಖುಷಿ ಕೊಡಬೇಕು. ನೆನಪುಗಳು ನಗು ತರಿಸಬೇಕು. ಫಿಸಿಕ್ಸ್, ಕೆಮಿಸ್ಟ್ರಿ ಯಾವುದೂ ಬದುಕನ್ನು ಕಲಿಸಲ್ಲ ಕಣೋ. ಏನಿದ್ರು ಅನುಭವ ಮಾತ್ರ ಬದುಕಿನ ಜೊತೆ ಶಾಶ್ವತವಾಗಿ ಉಳಿಯೋದು. ಬದುಕಿನುದ್ದಕ್ಕೂ ಬರೋದು’ ಹಾಗಂತ ಹೇಳಿದ್ದು ನನ್ನ ಕೆಮಿಸ್ಟ್ರಿ ಲೆಕ್ಚರ್ ಸೋಮಯಾಜಿ. ‘ಥೂ, ಡಿಗ್ರಿಯಲ್ಲಿದ್ದೇನೆ ಅಂದುಕೊಳ್ಳಲಿಕ್ಕೆ ನಾಚಿಕೆಯಾಗುತ್ತೆ. ಒಳ್ಳೆ ಎಲಿಮೆಂಟ್ರಿ ಸ್ಕೂಲ್ ಮಕ್ಕಳ ಥರ ಕಿವಿಚಟ್ಟೆ ಹಿಡಿದು ಬುದ್ಧಿ ಹೇಳ್ತಾರಪ್ಪ ಇವ್ರು’ ಅಂತಾ ನಾನು ಅವರನ್ನು ಸಾಕಷ್ಟು ಸಲ ಬೈದುಕೊಂಡಿದ್ದಿದೆ. ಸೋಮಯಾಜಿ ಅಂದ್ರೆ ಇಡೀ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಒಂಥರ ಗೌರವ ಭಾವ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋದಕ್ಕೆ ಅವರು ಜೀವಂತ ನಿದರ್ಶನ. ಕರೆಕ್ಟಾಗಿ ಮೂರುವರೆ ಅಡಿ ಎತ್ತರವಿದ್ದರು. ಪಾಠ ಮಾತ್ರ ಅದ್ಭುತ. ಅವರ ಕ್ಲಾಸ್‌ಗೂ ಬಂಕ್ ಹಾಕುತ್ತಿದೆ. ಅದಕ್ಕಾಗಿಯೇ ಅವರು ನನಗೆ ಕಿವಿ ಹಿಡಿದು ಬುದ್ಧಿ ಹೇಳುತ್ತಿದ್ದರು ಅನ್ನೋದು ನಂತರದ ಮಾತು ಬಿಡಿ!

ಅದ್ಯಾಕೊ ಗೊತ್ತಿಲ್ಲ ಸೋಮಯಾಜಿ ಅವರಿಗೆ ನನ್ನ ಕಂಡರೆ ಬಹಳ ಇಷ್ಟ. ಹಾಗಾಗಿಯೇ ಸ್ಟಾಫ್‌ರೂಂಗೆ ಹೋದಾಗಲೆಲ್ಲ ಕೆಮಿಸ್ಟ್ರಿಯಿಂದ ಹೊರತಾದ ಸಾಕಷ್ಟು ಫಿಲಾಸಫಿ ಹೇಳುತ್ತಿದ್ದರು. ಅವರು ಹೇಳಿದ್ದರಲ್ಲಿ ಒಂದಷ್ಟು ಗೋಲ್ಡನ್ ವರ್ಡ್ಸ್‌ಗಳು ಇವತ್ತಿಗೂ ನನ್ನ ಕಿವಿಯಲ್ಲಿ ಗುಂಯ್ ಅನ್ನುತ್ತಿದೆ. ಅವರು ಹೇಳಿದ ಹಾಗೆ ನಾನು ಕಲಿತ ಕೆಮಿಸ್ಟ್ರಿ, ಮ್ಯಾಥ್ಸ್, ಫಿಸಿಕ್ಸ್ ಯಾವೂದು ಬದುಕಿನಲ್ಲಿ ಎಳ್ಳುಕಾಳಷ್ಟು ಪ್ರಯೋಜನಕ್ಕೆ ಬರಲಿಲ್ಲ. ಕಲಿತಿದ್ದು ಒಂದು, ಆಯ್ದುಕೊಂಡಿದ್ದು ಮತ್ತೊಂದು ವೃತ್ತಿ. ಹಿಂದಿರುಗಿ ನೋಡಿದ್ರೆ ಬದುಕು ತುಂಬಾ ಮಜಾ ಅನ್ನಿಸುತ್ತಿದೆ. ಜೊತೆಗಿದ್ದ, ಒಂದೇ ಬೆಂಚಿನಲ್ಲಿ ಕೀಟಲೆ ಮಾಡಿದ್ದ, ಬಳಪ, ಚಾಕಲೇಟ್‌ಗಳಿಗಾಗಿ ಜಗಳವಾಡಿದ್ದ ದೋಸ್ತಿಗಳಲೆಲ್ಲ ಇವತ್ತು ಏನೇನೋ ಆಗಿದ್ದಾರೆ. ಯಾವ್ಯಾವುದೋ ಕ್ಷೇತ್ರದಲ್ಲಿದ್ದಾರೆ. ಕೆಲವರ ಪರಿಚಯ ಇನ್ನು ಉಳಿದಿದೆ. ಕೆಲವರು ಫೇಸ್‌ಬುಕ್, ಆರ್ಕುಟ್‌ನಂಥ ಸಾಮಾಜಿಕ ತಾಣದಲ್ಲಿ ದೋಸ್ತಿಗಳು ಅನ್ನೋದು ನಿಜ. ಆದರೆ ಅವರ ಕುರಿತು ಪ್ರೊಫೈಲ್‌ನಲ್ಲಿ ಇರುವಷ್ಟೇ ಮಾಹಿತಿ ಮಾತ್ರ ನಮ್ಮ ಬಳಿಯಿರುತ್ತೆ. ಇದರ ಹೊರತಾಗಿ ಅವರ ಜೊತೆಗಿನ ಹಳೆ ದಿನಗಳ ನೆನಪಷ್ಟೇ ಬಾಕಿ ಉಳಿದಿದೆ!

ಹಳೆ ಗೆಳೆಯರು ಎಲ್ಲೋ ಅಚಾನಕ್ಕಾಗಿ ಸಿಕ್ಕಿಬಿಡುತ್ತಾರೆ. ಹುಡುಗರಾಗಿದ್ದರೆ, ಏನೋ ಮಗ, ಏನ್ ಸಮಾಚಾರ…ಇತ್ಯಾದಿ ಮಾತು. ಹುಡುಗಿಯರಾಗಿದ್ದರೆ ಶಿಸ್ತುಬದ್ಧ ಮಾತು. ಹೆಚ್ಚಿನವರಿಗೆ ಮದುವೆ ಆಗಿರುತ್ತೆ. ಪಕ್ಕದಲ್ಲಿ ಗಂಡ ಇರುತ್ತಾನೆ…ಹೀಗಾಗಿ ಹಳೆ ಪರಿಚಯ ಅಂತಾ ಜಾಸ್ತಿ ಕ್ಲೋಸ್ ಆಗಿರಲು ಸಾಧ್ಯವಿಲ್ಲ. ಇನ್ನೂ ಕೆಲವರಿಗೆ ಮಕ್ಕಳು-ಮರಿಯಾಗಿರುತ್ತೆ. ನಾವು ಕಾರಿಡಾರ್‌ನಲ್ಲಿ ನಿಂತು ಲೈನ್ ಹಾಕಿದ್ದು ನಿಜವಾದ್ರೂ, ಅವೆಲ್ಲ ಒಂಥರ ಮೈ ಆಟೋಗ್ರಾಫ್ ಚಿತ್ರದ ಕಥೆ ಇದ್ದಂಗೆ! ಅರೆ, ನಾವೆಲ್ಲ ಎಷ್ಟು ದೊಡ್ಡವರು ಆಗಿ ಬಿಟ್ಟಿದ್ದೇವೆ. ಮದುವೆ ಆಗಿ ಹೋಗಿದೆ. ಬದುಕಿಗೊಂದು ಶಿಸ್ತಿನ ದಿನಚರಿ. ಬೆಳಿಗ್ಗೆ ೯ ಗಂಟೆಯಾದ್ರೆ ‘ರೀ ತಿಂಡಿಗಾಯು’ ಅಂತಾ ಹೆಂಡ್ತಿ ಎಬ್ಬಿಸುತ್ತಾಳೆ. ರಾತ್ರಿ ೮-೯ಗಂಟೆಯೊಳಗೆ ಗೂಡು ಸೇರಿಕೊಳ್ಳಬೇಕು. ಬರಲಿಲ್ಲ ಅಂದ್ರೆ ಗಾಬರಿ, ಆ ಕಡೆಯಿಂದ ೮-೧೦ ಕರೆಗಳು…! ಚೆಂದದ ಹುಡುಗಿ ಎದುರಿಗಿದ್ದಾಳೆ ಅಂತಾ ರಾಜರೋಷವಾಗಿ ನೋಡುವ ಹಾಗಿಲ್ಲ. ಯಾಕಂದ್ರೆ ನಾವು ಅಂಕಲ್ ಎಂದು ಜಗತ್ತಿಗೆ ಗೊತ್ತಿದೆ! ಇದ್ನೆಲ್ಲ ಜಾಸ್ತಿ ಬರೆದರೂ ಇದೇನಪ್ಪ ಬರೀ ಹುಡುಗಿಯರ ಮಾತು ಅಂತೆಲ್ಲ ಅಪಾರ್ಥವಾಗಿ, ಅದೊಂದು ದೊಡ್ಡ ಇಷ್ಯು ಆಗಿ..ಉಸ್ಸಪ್ಪೊ ಟಾಪಿಕ್ ಚೇಂಜ್…ಸೀನ್ ಕಟ್

ಎಲ್ಲಿ ಫಿಸ್ಸಿಕ್ಸು, ಎಲ್ಲಿ ಸಿನಿಮಾ? ಎಲ್ಲಿ ಸೀರಿಯಲ್? ಸಿನಿಮಾ ಬರಯಲೇ ಬೇಕು ಎಂದು ಹಠಕ್ಕೆ ಬಿದ್ದು ಕೆಲ ಮಹಾನುಭವರಿಗೆ ಪುಗ್ಸಟ್ಟೆ ೬೨-೬೫ ದೃಶ್ಯಗಳನ್ನು ಬರೆದುಕೊಟ್ಟಿದ್ದು, ಸೀರಿಯಲ್ ಕಥೆ ಹೆಣೆದಿದ್ದು, ಅದು ರಿಜೆಕ್ಟ್ ಆಗಿದ್ದು..ನಮ್ಮತ್ರ ಸ್ಟೋರಿ ಲೈನ್ ತೆಗೆದುಕೊಂಡು ಬೇರೆಯವರು ಕಥೆ ಮಾಡಿಕೊಂಡಿದ್ದು…ಎಲ್ಲರ ಬದುಕಿನಲ್ಲೂ ಇದೆಲ್ಲ ಮಾಮೂಲು ಅನ್ನಿಸುತ್ತಿದೆ…ಆಫ್ ದಿ ರೆಕಾರ್ಡ್ ಮಾತಾಡಿದ್ರೆ ಫೀಲ್ಡ್‌ನಲ್ಲಿ ಇಂಥ ಅದೆಷ್ಟೋ ಕಥೆಗಳು ಸಿಗುತ್ತವೆ ಎಂದು ಗೊತ್ತಾಗಿದ್ದು ಯೋಗರಾಜ್ ಭಟ್ಟರು ತಮ್ಮ ಹಳೆ ಕಥೆಗಳನ್ನು ಹರವಿಕೊಂಡು ಹರಟೆಗೆ ಕುಳಿತಾಗ…ಅವೆಲ್ಲ ಕಥೆಗಳನ್ನು ಅವ್ರು ತಮ್ಮ ಪ್ರತಿ ಸಿನಿಮಾದಲ್ಲಿ ಒಂದೊಂದು ದೃಶ್ಯವಾಗಿ ತರುತ್ತಾರೆ. ಇವತ್ತು ಎತ್ತರದಲ್ಲಿರುವ ಕೆಲವರ ಕಥೆ ಕೇಳಿದ್ರೆ ನಮ್ಮ ಲೈಫು ಸಾವಿರ ಪಾಲು ಉತ್ತಮ. ಅವರಷ್ಟು ಅವಮಾನ, ಅಸಹಾಯಕತೆ ಯಾವುದೂ ನಮಗೆ ಎದುರಾಗಿಲ್ಲ. ಯಾಕಂದ್ರೆ ಇವತ್ತು ಕಾಲ ಬದಲಾಗಿದೆ. ಅವಕಾಶಗಳು ಸಾಕಷ್ಟು ಇವೆ…ಎಲ್ಲಕ್ಕಿಂತ ಹೆಚ್ಚಾಗಿ ಒಂದು ಫೀಲ್ಡ್‌ಗೆ ಕಾಲಿಡುವ ಮೊದಲು, ವ್ಯಕ್ತಿಯನ್ನು ಭೇಟಿ ಮಾಡುವ ಮೊದಲು ಆ ಕುರಿತು ಮಾಹಿತಿ ನೀಡುವ ಗೆಳೆಯರಿದ್ದಾರೆ.

ಹಾಗಂತ ಬದುಕಿಗೆ ಮಿತಿಯಿಲ್ಲ. ಮಿತಿ ಇರಬಾರದು ಕೂಡ. ೧೦ ರೂಪಾಯಿ ಇದ್ದ ಕಾಲಕ್ಕೆ ೧೦೦ರೂಪಾಯಿ ಇದ್ದರೆ ಏನಾದ್ರು ಮಾಡಬಹುದಿತ್ತು ಅನ್ನಿಸುತ್ತಿತ್ತು. ೧೦೦ ರೂಪಾಯಿ ಬಂದ ಕಾಲಕ್ಕೆ ಜಗತ್ತು ೧೦೦೦ರೂಪಾಯಿ ಹಿಂದೆ ಓಡುತ್ತಿತ್ತು. ಇದು ಕೊನೆಗೆ ಲಕ್ಷವಾಯ್ತು. ೧೦ ಲಕ್ಷಕ್ಕೆ ಬಂತು. ಈಗ ಬೆಂಗಳೂರಿನಲ್ಲಿ ಒಂದು ಕೋಟಿ ರೂಪಾಯಿ ಇದ್ದರೆ ಏನಾದ್ರು ಮಾಡಬಹುದಿತ್ತು ಅನ್ನಿಸುತ್ತಿದೆ. ‘ದೋಸ್ತಾ ಬದುಕಿನ ಜರ್ನಿ ಸೈಕಲ್‌ನಿಂದ ಶುರು. ಹೈಸ್ಕೂಲ್‌ನಲ್ಲಿ ಹೊಸ ಸೈಕಲ್ ತಗಂಡು ಹೊಡೆಯುವ ಮಜವೇ ಬೇರೆ. ನಂತ್ರ ಬೈಕು ಬಂತು. ಹೊಸ ಬೈಕ್ ತೆಗೆದುಕೊಂಡಾಗ ಅದೇನು ಖುಷಿ. ಈಗ ಕಾರು ಬೇಕು ಅನ್ನಿಸುತ್ತಿದೆ. ಇಷ್ಟಕ್ಕೆ ಮುಗೀತು ಅಂದುಕೊಳ್ಳಬೇಡ. ಕಾರು ಬಂದ ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಬಯಕೆ ಶುರುವಾಗುತ್ತೆ’ ಹಿಂಗೆ ಹರಟೆ ಹೊಡೆಯುತ್ತಿದ್ದಾಗ ಗೆಳೆಯ ಶ್ರೀನಿಧಿ ಹೇಳಿದ ಮಾತು. ನೂರಕ್ಕೆ ನೂರರಷ್ಟು ನಿಜವಾದ ಮಾತು.

li

ಸ್ವಲ್ಪ ಹುಚ್ಚುತನ ಅನ್ನಿಸಬಹುದು. ಆದ್ರೂ ನಿಜ. ಇತ್ತೀಚೆಗೆ ಯಾವುದಾದ್ರೂ ಫುಟ್‌ಪಾತ್‌ನಲ್ಲಿ ದಿನವಿಡೀ ಮಲಗಬೇಕು ಅನ್ನಿಸ್ತಾ ಇದೆ. ಮರಳಿನ ಮೇಲೆ ಮಲಗಿದ್ರೂ ಬರೋದು ಅದೇ ನಿದ್ದೆ. ಬಂಗಾರದ ಮಂಚದ ಮೇಲೆ ಮಲಗಿದ್ರೂ ಬರೋದು ಅದೇ ನಿದ್ದೆ. ಮಲಗಿದ ಮೇಲೆ ನನಗಂತೂ ದೇವರಾಣೆ ಮಲಗಿದ ಜಾಗ, ಕಚ್ಚಿದ ಸೊಳ್ಳೆ ಯಾವುದೂ ಗೊತ್ತಿರಲ್ಲ. ಎಷ್ಟರ ಮಟ್ಟಿಗೆ ಅಂದ್ರೆ, ನನ್ನ ಹೆಂಡ್ತಿ ‘ರಾತ್ರಿ ನೀವು ಮಲಗಿದ್ದಾಗ ನಿಮ್ಮ ಮೀಸೆ ಕಟ್ಟು ಮಾಡಿದ್ದೆ’ ಅಂತ ನನ್ನ ಆಗಾಗ ರೇಗಿಸ್ತಾ ಇರ್ತಾಳೆ. ಒಂದ್ಸಲ ಮೀಸೆ ಕಟ್ಟು ಮಾಡಿದ್ಲೇನೋ ಅನ್ನೋ ಸಣ್ಣ ಅನುಮಾನ ಕೂಡ ಇದೆ! ಹೋಗ್ಲಿ ಬಿಡಿ…ಹೊಸ ಸೀನ್ ಏನು ಅಂದ್ರೆ, ದಿನಕ್ಕೆ ೧೦-೧೫ ಸಾವಿರ ಶುಲ್ಕ ವಿಧಿಸುವ, ಬೆಳ್ಳಿ ತಟ್ಟೆಯಲ್ಲಿ ಊಟೋಪಚಾರ ಮಾಡುವ ತಾಜ್‌ನಂಥ ಐಷಾರಾಮಿ ಹೋಟೆಲ್‌ನಲ್ಲಿ ನಾಲ್ಕಾರು ರಾತ್ರಿ ಕಳೆದಿದ್ದೇನೆ. ಅಲ್ಲಿನ ಐಷಾರಾಮಿ ಜಗತ್ತಿನ ಅನುಭವ ಆಗಿದೆ. ಆದ್ರೆ ಯಾವತ್ತೂ ಫುಟ್‌ಪಾತ್ ಮೇಲೆ, ಮರಳು ರಾಶಿ ಮೇಲೆ ಮಲಗಿಲ್ಲ. ಅಲ್ಲಿನ ಅನುಭವ ಇವತ್ತಿಗೂ ಆಗಿಲ್ಲ.

ಒಂದೊಮ್ಮೆ ಮಲಗಿದ್ರೆ, ಆಕ್ಸಿಡೆಂಟ್ ಸಿನಿಮಾದ ಥರ ಯಾವುದಾದ್ರೂ ವಾಹನ ಮೈಮೇಲೆ ಹರಿದು ಬಿಟ್ರೆ? ನಾಯಿಯೋ, ಇಲಿಯೋ, ಕುಡಿದ ಅಮಲಿನಲ್ಲಿರುವ ಮನುಷ್ಯರೋ ರಾತ್ರಿ ಬಂದು ಮೈಮೇಲೆ ಉಚ್ಚೆ ಹೊಯ್ದು ಬಿಟ್ಟರೆ? ಖಂಡಿತಾ ಫುಟ್‌ಪಾತ್ ಮೇಲೆ ಒಂದು ರಾತ್ರಿ ಮಲಗೋದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಫುಟ್‌ಪಾತ್ ಮೇಲೆ ಬದುಕುವ ಮಂದಿಯನ್ನು ತುಚ್ಛವಾಗಿ ನೋಡುವುದು, ಅವರನ್ನು ಹೀಯಾಳಿಸುವುದು, ಅವರ ಎದುರು ನಮ್ಮ ದೊಡ್ಡಸ್ತಿಕೆ ಮೆರೆಯುವುದು ತುಂಬಾ ಸುಲಭದ ಮಾತು. ಆದ್ರೆ ಅವರಂತೆ ಒಂದು ದಿನ ಕಳೆಯುವುದು..ಊಹುಂ, ಬಿಲ್‌ಕುಲ್ ಸಾಧ್ಯವಿಲ್ಲದ ಮಾತು. ಯಾಕಂದ್ರೆ ನಾವೆಲ್ಲ ಸದಾ ಎತ್ತರದ್ದನ್ನು ಆಲೋಚಿಸುತ್ತೇವೆ ಹೊರತು, ಕೆಳಗಿನದ್ದನಲ್ಲ…ಫಾರ್ ಎ ಚೇಂಜ್ ಫುಟ್‌ಪಾತ್‌ನಲ್ಲಿ ಮಲಗುವ ಆಲೋಚನೆ ಮಾಡಿನೋಡಿ ಸಾಕು!

ಈಗೊಂದು ತಿಂಗಳ ಹಿಂದೆ ಒಂದು ಕಾರ್ಯಕ್ರಮದ ಸಲುವಾಗಿ ಒಂದು ವಾರಗಳ ಕಾಲ ಉತ್ತರ ಕರ್ನಾಟಕಕ್ಕೆ ಹೋಗಿದ್ದೆ. ನನ್ನ ಬದುಕಿನಲ್ಲಿ ಫಸ್ಟ್ ಟೈಂ ಆ ಭಾಗಕ್ಕೆ ಹೋಗಿದ್ದು..ಈ ಮೊದಲನೆಯ ಅನುಭವಗಳೆಲ್ಲ ತುಂಬಾ ಖುಷಿ ಕೊಡುತ್ತವೆ ನೋಡಿ. ಮೊದಲ ಸಲ ರೈಲು ನೋಡಿದ್ದು ಬೀರೂರಿನಲ್ಲಿ..ಉದ್ದನೆಯ ಬೋಗಿಯ ರೈಲು ನೋಡಿ ಖುಷಿಯೋ, ಖುಷಿ. ನಾವೆಲ್ಲ ಲೈಫ್‌ಲ್ಲಿ ರೈಲು ಹತ್ತಲು ಸಾಧ್ಯವಿಲ್ಲ. ಇದು ಶ್ರೀಮಂತರ ವಾಹನ ಎಂದು ಸಿಕ್ಕಾಪಟ್ಟೆ ಬೇಸರಪಟ್ಟುಕೊಂಡಿದ್ದೆ. ನನ್ನ ಜನರಲ್ ನಾಲ್ಡೇಜ್ ಸಿಕ್ಕಾಪಟ್ಟೆ ಕಡಿಮೆ. ಹೀಗಾಗಿ ರೈಲು ಉಳಿದೆಲ್ಲ ವಾಹನಗಳಿಗಿಂತ ಅತಿ ಕಡಿಮೆ ದರದ ಪ್ರಯಾಣ ಸೇವೆ ನೀಡುತ್ತದೆ ಅಂತಾ ಗೊತ್ತಾಗಿದ್ದು ಈಗೊಂದು ೪-೫ ವರ್ಷದ ಹಿಂದೆ.

ವಿಮಾನ ಸಿಕ್ಕಾಪಟ್ಟೆ ಸ್ಪೀಡ್ ಹೋಗುತ್ತೆ. ಎರಡೂವರೆ ಗಂಟೆಯಲ್ಲಿ ಮುಂಬೈ ತಲುಪುತ್ತೇವೆ…ವಾವ್ಹ್, ವಿಮಾನ ಸೂಪರ್ ಅನ್ನಿಸಿತ್ತು ಮೊದಲ ಸಲ ಪುಣೆಗೆ ಹೋದಾಗ. ‘ಕೋಡ್ಸರ ಹೆಂಗಿತ್ರಿ ವಿಮಾನ ಪ್ರಯಾಣ’ ಅಂತಾ ವಿಶ್ವೇಶ್ವರ ಭಟ್ಟರು ಕೇಳಿದ್ದು, ಖುಷಿ-ಖುಷಿಯಿಂದ ಉತ್ತರ ಕೊಟ್ಟಿದ್ದು ಎಲ್ಲವೂ ಹಸಿ-ಹಸಿಯಾಗಿರುವಾಗ ದೆಲ್ಲಿಗೆ ಹೋಗುವ ಭಾಗ್ಯ ಬಂತು. ವಿಮಾನದ ಮತ್ತೊಂದು ಮುಖ ಪರಿಚಯ ಆಯ್ತು. ಡಿಸೆಂಬರ್ ತಿಂಗಳು. ಮಂಜಿನ ಹವಾ. ಬೆಂಗಳೂರು ನಿಲ್ದಾಣದಲ್ಲಿ ಸುಮಾರು ೪ ಗಂಟೆ ತಡವಾಗಿ ವಿಮಾನ ಹೊರಡ್ತು. ಆ ಕಡೆಯಿಂದ ಬರುವಾಗ ೫ ಗಂಟೆ ವೇಟಿಂಗ್! ಕೆಎಸ್‌ಆರ್‌ಟಿಸಿ ಬಸ್ಸಾಗಿದ್ರೆ, ಡಿಪೊ ಮ್ಯಾನೇಜರ್ ಹತ್ರ ಗಲಾಟೆ ಮಾಡಿಯಾದ್ರೂ ಬಸ್ಸು ಹೊರಡಿಸಬಹುದಿತ್ತು. ಆದ್ರೆ ಅದು ವಿಮಾನ! ಅಲ್ಲಿರುವವರೆಲ್ಲ ಸಿಕ್ಕಾಪಟ್ಟೆ ಡೀ‘ಸೆಂಟ್’ ಮಂದಿ. ಗಲಾಟೆ ಮಾಡಿದ್ರೆ ಸೆಕ್ಯುರಿಟಿ ಕರೆದು ಹೊರಗೆ ಕಳುಹಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ವಿಮಾನ ಯಾಕೆ ತಡ ಎಂಬುದನ್ನು ಟೆಕ್ನಿಕಲ್ ಭಾಷೆಯಲ್ಲಿ ವಿವರಿಸುತ್ತಾರೆ. ನಾವು ತಿರುಗಿ ಪ್ರಶ್ನೆ ಕೇಳಿದ್ರೆ ಉತ್ತರ ಕೊಡಲು ಆ ಹುಡುಗಿಗೆ ಗೊತ್ತಿರಲ್ಲ..ಇದೊಂಥರ ನಾವು ಕಾಲ್‌ಸೆಂಟರ್ ಮಂದಿ ಹತ್ರ ನಮ್ಮ ಮೊಬೈಲ್ ಸೇವೆ ಸರಿಯಿಲ್ಲ ಎಂದು ಸುಮ್ಮನೆ ಜಗಳ ಮಾಡಿದ ಹಾಗೆ! ಅದಕ್ಕಿಂತ ಸುಮ್ಮನಿರುವುದೇ ಲೇಸು ಅಲ್ವಾ?

ಅಬ್ಬಬ್ಬ ತಿರುಗಿ ನೋಡಿದ್ರೆ ಲೈಫು ಎಷ್ಟು ಸುಂದರ! ಆಫೀಸ್‌ನಲ್ಲಿ ನನಗಿಂತ ಕೊನೆಗೆ ಬಂದವನಿಗೆ ನನಗಿಂತ ಹೆಚ್ಚು ಸಂಬಳ. ನನಗಿಂತ ಕಿರಿಯವನಿಗೆ ಒಳ್ಳೆ ಹುದ್ದೆ! ಹೀಗೆಲ್ಲ ದಿನವೂ ಅನ್ನಿಸುತ್ತೆ. ಆದ್ರೆ ನನಗಿಂತ ಕಡಿಮೆ ಸಂಬಳದಲ್ಲಿ ಹೆಚ್ಚು ಕೆಲಸ ಮಾಡುವವರು, ಹಗಲಿರುಳು ಆಫೀಸ್‌ಗಾಗಿ ದುಡಿಯುವವರು, ಆಫೀಸ್ ಬಿಟ್ಟು ಬೇರೆ ಜಗತ್ತು ಗೊತ್ತಿಲ್ಲದವರು…ಇವ್ರನ್ನೆಲ್ಲ ನೋಡಿದಾಗ ನಾವೇ ಬೆಟರ್ ಅನ್ನಿಸುತ್ತೆ. ಮತ್ತೊಂದಷ್ಟು ಕನಸುಗಳು ಗರಿಗೆದರುತ್ತವೆ. ಲೈಫ್‌ನಲ್ಲಿ ಒಂದು ಸಿನಿಮಾ ಮಾಡಬೇಕು, ಮತ್ತಷ್ಟು ಪುಸ್ತಕ ಬರೆಯಬೇಕು, ಇನ್ನೊಂದಷ್ಟು ಅನುಭವ ಪಡೆಯಬೇಕು, ಕೆಲವಷ್ಟು ದೇಶ ಸುತ್ತಬೇಕು, ಇನ್ನೊಂದಷ್ಟು ಸ್ಲಂ ಜಗತ್ತನ್ನು ನೋಡಬೇಕು…ಅಂತ್ಯವಿಲ್ಲದ ಜರ್ನಿ. ಲೈಫ್‌ನಲ್ಲಿ ಒಂದೇ ಸಾಕು ಅನ್ನಿಸುವ ಏಕೈಕ ಸಂಗತಿ ಅಂದ್ರೆ “ಹೆಂಡ್ತಿ ಮಾತ್ರ!!!” ಇದನ್ನ ನನ್ನ ಹೆಂಡ್ತಿ ನೋಡಿದ್ರೆ ನಾಳೆ ನನ್ನ ಮಾರ್ನಿಂಗ್ ಕಾಫಿ ಕಟ್! ಅವಳಿಗೆ ಗೊತ್ತು ಬೆಳಿಗ್ಗೆ ಕಾಫಿ ಕೊಡದೆ ಇದ್ದರೆ ನನ್ನ ಅಬ್ಬರ ಫುಲ್ ಬಂದ್ ಆಗುತ್ತೆ ಅಂತಾ! ಅಳವನ್ನು ಸಮಾಧಾನ ಮಾಡಿ, ‘ಸಂಜೆ ಒಂದು ಮಸಾಲೆ ಪುರಿ ತಂದುಕೊಡುತ್ತೇನೆ ಕಂದಾ’ ಅಂತಾ ಮಾಲಿಷ್ ಮಾಡಿ ಕಾಫಿ ಕುಡಿಯುವ ಹೊತ್ತಿಗೆ…ಒನ್ಸ್ ಅಗೈನ್ ಲೈಫ್ ಈಸ್ ಬ್ಯೂಟಿಫುಲ್ ಅನ್ನಿಸಲು ಶುರುವಾಗಿರುತ್ತೆ!

Read Full Post »