Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘kannada blog’

Goa-Zuari.jpg“ಮೊಣಕಾಲಿಗಿಂತ ಕೆಳಗೆ ಬರದಂತೆ ಲಂಗ ತೊಟ್ಟ ಲಲನೆಯರು, ಬ್ರೆಜಿಲ್ ಬೀದಿಯಂತೆಯೋ, ಕೊಲಂಬಿಯಾದ ತಪ್ಪಿಲಿನಂತೆಯೋ ಕಾಣುವ ಕೇರಿಗಳು, ಅಲ್ಲಲ್ಲಿ ಕೇಳಿಸುವ ಪೋರ್ಚುಗೀಸ್ ಮಿಶ್ರಿತ ಕೊಂಕಣಿ, ಅರೆಬರೆಬೆಂದ ಹಿಂದಿ, ಮತಾಂತರಗೊಂಡ ಮೀನುಗಾರರು, ಜಗತ್ತಿನ ಪರಿವೇ ಇಲ್ಲದೆ ಪ್ರೀತಿಯಲ್ಲಿ ಮುಳುಗಿದ ಜೋಡಿಗಳು, ವಾರಾಂತ್ಯ ಕಳೆಯಲು ಬಂದ ಸಹೋದ್ಯೋಗಿಗಳು, ಬದುಕಿನ ಎಲ್ಲ ದುಃಖವನ್ನು ಮರೆಯಲೆಂಬಂತೆ ಕೈಯ್ಯಲ್ಲಿ ಸಾರಾಯಿ ಸೀಸೆ ಹಿಡಿದು ತಿರುಗುವ ಈಗಷ್ಟೆ ಮೀಸೆ ಚಿಗುರಿದ ತರುಣರು, ಲೆಕ್ಕ ಮಾಡಿ ಮೂರು ಮನೆಗೆ ಒಂದರಂತೆ ಸಿಗುವ ಬಾರುಗಳು, ಬದುಕಿನ ಜರ್ನಿಯನ್ನು ಮುಗಿಸಿದವರಂತೆ ಬಸ್ಸಿನಲ್ಲೇ ಕುಳಿತು ಬೈಬಲ್ ಓದುವ ಮುದುಕಿಯರು, ಒಣ ಮೀನಿನ ವಾಸನೆ, ಘನಮಾಡಿದ ಅಕ್ಕಿಯಲ್ಲಿ ಸಿಗುವ ಕಲ್ಲಿನಂತೆ ಅಪರೂಪಕ್ಕೆ ಕಾಣಿಸುವ ಹಣೆಗೆ ಕುಂಕುಮವಿಟ್ಟ ಶ್ರೀಮತಿಯರು…ಇವ್ಯಾವುದರ ಪರಿವೂ ಇಲ್ಲದೆ ಅವಳು ತನ್ನ ಹಾದಿಯಲ್ಲಿ ಸಾಗುತ್ತಿರುತ್ತಾಳೆ. ಭಾರತದ ಸ್ವರ್ಗವದು…” ಹಾಗಂತ ಆಫೀಸಿನ ಕೊಲೀಗು ವತ್ಸಲ ಹೇಳಿದಾಗಲೇ ಯಾಕೆ ಆಕೆಯನ್ನು ಮೀಟ್‍ಮಾಡಿ ಬರಬಾರದು ಅನ್ನಿಸ್ತು..
***
“ಮೇಡಂ, ಆಚೆಗೊಂದು ಡ್ಯಾಂ, ಈಚಿಗೊಂದು ಡ್ಯಾಂ. ಆದ್ರೂ ಕುಡಿಯಾಕೆ ನೀರು ಇರಹಂಗೆ ಇಲ್ರಿ. ಈ ಲೋಂಡ ದಾಟಿದ್ರೆ ಮುಗಿತು ನೋಡ್ರಿ ಕಥಿ. ಮಳಿಯಾದ್ರ ಬದುಕು, ಇಲ್ಲಂದ್ರ ಇಲ್ರಿ, ಅದ್ಕ ಹಿಂಗ ಗಂಟು ಮೂಟಿ ಕಟ್‍ಕೊಂಡು ಗುಳೆ ಹೋಗ್ತೀವ್ರಿ…”
ರೈಲಿನಲ್ಲಿ ಕುಳಿತ ಭೀಮಪ್ಪ ತನ್ನ ಅಳಲನ್ನು ಹೇಳಿಕೊಳ್ಳುತ್ತಿದ್ದ.
“ಧಾರವಾಡ ದಾಟಿದ್ರೆ ಮುಗಿತ್ರಿ. ಬೆಳಗಾಂ, ಬಾಗಲಕೋಟಿ, ಗದಗ…ಹಿಂಗೆ ಎಲ್ಲಿ ನೋಡಿದ್ರು ನೀರು ಸಿಗಹಂಗೆ ಇಲ್ರಿ. ಅದ್ಕಾರಿ ನಾವು ಕಳಸಾ-ಬಂಡೂರಿ ಯೋಜನೆಯಾಗಬೇಕು ಅಂತ ಸೆಟೆದು ನಿಂತಿವ್ರಿ. ಕೊನಿಗೆ ಕನಿಷ್ಟ ಪಕ್ಷ ಕುಡಿಯಾಕಾದ್ರು ನೀರು ಸಿಗ್‍ತೈತ್ರಿ. ಘಟ್ಟದ ಕೆಳಗೆ ಇಳಿದ್ರೆ ದೊಡ್ಡ ಸಮುದ್ರಾನೆ ಐತಿ. ಆದ್ರೆ ಪ್ರಯೋಜನ ಏನ್ ಬಂತ್ರಿ? ಸಮುದ್ರದ ನೀರು ಸಮುದ್ರದ್ದೆ. ಪಟ್ಟಣ್ಣದಲ್ಲಿ ಕುಳಿತ್ ಮಂದಿಗೆ ನಮ್ ನೋವು ಅರ್ಥ ಆಗಂಗೆ ಇಲ್ರಿ…”
ಭೀಮಪ್ಪನ ಮಾತು ಮುಂದುವರಿಯುವ ಹೊತ್ತಿಗೆ ರೈಲು ಭೀಮಘಢದ ದಟ್ಟ ಕಾಡನ್ನು ತಲುಪಿಯಾಗಿತ್ತು.
ಬೆಳಗಾವಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಜೀವಜಲವೆಂದರೆ ಮಲಪ್ರಭ ಹಾಗೂ ಮಹಾದಾಯಿ ನದಿಗಳು ಎಂದು ಅಪ್ಪ ಹೇಳುತ್ತಿದ್ದ ನೆನಪು. ಭೀಮಘಡದಲ್ಲಿ ಹುಟ್ಟುವ ಮಹಾದಾಯಿಗೆ ಗಂಡನ ಮನೆ ಗೋವಾ. ಆಕೆಯೂ ನನ್ನಂತೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತಿರುವವವಳು. ಮಹಾದಾಯಿ ಮೈತುಂಬಿಕೊಂಡಿರುವ ಹೊತ್ತಿನಲ್ಲಿ ಎಲ್ಲರಿಗೂ ಬೇಕು.
ನನಗೆ ನೆನಪಿನಲ್ಲಿ ಉಳಿದಂತೆ ನರಗುಂದ, ರೋಣ, ನವಲಗುಂದ, ಸವದತ್ತಿ ಭಾಗದ ನೀರಿನ ಹಾಹಾಕಾರ ನೀಗಿಸಲು ನಾವು ಹೈಸ್ಕೂಲ್‍ಗೆ ಹೋಗುವ ಹೊತ್ತಿಗೆ ಮಲಪ್ರಭೆ ಅಣೆಕಟ್ಟು ಕಟ್ಟಲಾಯ್ತು.
ಬೆಳಗಾವಿ ಜಿಲ್ಲೆಯ ಮತ್ತೊಂದು ಮಗ್ಗುಲಿನಲ್ಲಿರೋದು ಮಹಾದಾಯಿ ನದಿ. ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ, ದೂದ್‍ಸಾಗರ್ ಮೊದಲಾದ ಉಪನದಿಗಳಿಂದ ಕೂಡಿದ ಕಣಿವೆಯದು. ತವರುಮನೆಯಲ್ಲಿ ಮೈತುಂಬಿಕೊಂಡು ಸಡಗರದಿಂದ ಹೊರಟ ಹುಡುಗಿ ಗಂಡನ ಮನೆಯ ಹೊಸ್ತಿಲು ತುಳಿದಂತೆ ಇದೆ ಗೋವಾ ಎಂದು ನಮ್ಮೂರು ಕಡೆ ಆಗಾಗ ಹೇಳ್ತಾ ಇರ್ತಾರೆ.
ಈ ಅಣೆಕಟ್ಟು ಒಂದಷ್ಟು ಜನರ ಬದುಕಿಗೆ ಬೆಳಕು ನೀಡಿದರು ಮತ್ತೊಂದಷ್ಟು ಮಂದಿಯ ಬದುಕನ್ನು ಮುಳುಗಿಸುತ್ತದೆ. ಹಾಗೆ ಮುಳುಗಡೆಯಾಗಿ ಮಲಪ್ರಭೆಯ ದಂಡೆಯಿಂದ ಎದ್ದು ಬಂದವರಲ್ಲೊಬ್ಬರು ನಾವು. ಹಲವರ ಬದುಕು ಮುಳುಗಿಸಿದ ಈ ಅಣೆಕಟ್ಟು ಭರ್ತಿಯಾಗಿದ್ದು ಅಷ್ಟರಲ್ಲೇ ಇದೆ.
***
“ಮಗ ಗೋವಾಕ್ಕೆ ಹೋದ್ರೆ ಬದುಕು ಮರೆತುಹೋಗುತ್ತೆ ಕಣೆ. ಭೂಲೋಕದ ಸ್ವರ್ಗವದು. ಬರಿ ಅಮಲು. ನೀನೊಂದ್ಸಲ ಅಲ್ಲಿಗೆ ಹೋಗಿ ಬಾ. ನಂತ್ರ ಬದುಕಿನಲ್ಲಿ ಹೀಗೆಲ್ಲ ಗೌರಮ್ಮ ಥರ ಕುಳಿತಿರಲ್ಲ. ಐ ವಿಲ್ ಬೆಟ್ ಯು…”
ವತ್ಸಲಾಗೆ ಹೇಗಾದ್ರು ಮಾಡಿ ನನ್ನನ್ನು ಮೊದಲಿನಂತೆ ನೋಡುವ ಆಸೆ. ನನಗಿಂತ ಹೆಚ್ಚಾಗಿ ಆಕೆಗೆ ನನ್ನ ಬದುಕಿನಲ್ಲಿ ಖುಷಿ ಕಾಣುವ ಇರಾದೆ.
ಯಾರಿಗಾಗಿ ಬದುಕುತ್ತಿದ್ದೇನೆ? ಯಾಕಾಗಿ ಬದುಕುತ್ತಿದ್ದೇನೆ? ಇವೆರಡು ಬಹುವಾಗಿ ಕಾಡುತ್ತಿರುವ ಪ್ರಶ್ನೆ. ಉತ್ತರ ಹುಡುಕಾಟ ನಿರಂತರ ಎಂದುಕೊಳ್ಳುತ್ತ ತಲೆಯೆತ್ತಿದ್ರೆ ಜನವೆಲ್ಲ ರೈಲನ್ನು ಇಳಿಯುವ ಧಾವಂತದಲ್ಲಿದ್ರು. ಕಿಟಕಿಯಾಚೆಗೆ ಹಳದಿ ಬಣ್ಣದಲ್ಲಿ ವಾಸ್ಕೊಡ ಗಾಮ ಎಂಬ ಬೋರ್ಡು ಕಾಣಿಸುತ್ತಿತ್ತು.
ಗೋವಾವನ್ನು ಕಂಡುಹಿಡಿದವನು ವಾಸ್ಕೋಡಿಗಾಮ. ಆತನೇ ಭಾರತಕ್ಕೆ ಮೊದಲು ಬಂದ ವಿದೇಶಿ ನೌಕಾಯಾನಿ ಅಂತೆಲ್ಲ ಹೈಸ್ಕೂಲಿನ ಪಾಠದಲ್ಲಿ ಓದಿದ ನೆನಪು. ಈ ಬದುಕು ಎಷ್ಟು ವಿಚಿತ್ರ. ಹೈಸ್ಕೂಲ್‍ನಲ್ಲಿ ನಾನು ಹೀಗೆಲ್ಲ ಇರಲೇ ಇಲ್ಲ. “ಹೆಣ್ಣುಮಕ್ಕಳು ಎಷ್ಟು ತಗ್ಗಿ, ಬಗ್ಗಿ ನಡೆದ್ರು ಸಾಲದು. ಕೊಟ್ಟ ಹೆಣ್ಣು ಯಾವತ್ತಿದ್ರು ಕುಲಕ್ಕೆ ಹೊರಗೆ. ಗಂಡನ ಮನೆ ದೀಪ ಬೆಳಗೋಳು. ಅಲ್ಲಿ ನಿನ್ನ ಜೊತೆ ದಿನ ಅಪ್ಪ, ಅಮ್ಮಬರಲ್ಲ. ನೀನು ಹೀಗೆ ಗಂಡುಬೀರಿ ಥರ ಇದ್ರೆ ಎಲ್ಲೂ ಬದುಕಲ್ಲ. ಶಿಸ್ತು ಕಲಿ, ಎದುರಾಡೋದು ಬಿಡು…” ದಿನ ಬೈದು, ಬೈದು ಅಮ್ಮ ನನ್ನ ಧ್ವನಿಯನ್ನು ಸಾಕಷ್ಟು ಕರಗಿಸಿದ್ದಳು. ಊರಿನ ಉಳಿದೆಲ್ಲ ಟಿಪಿಕಲ್ ಹುಡುಗಿಯರಂತೆ ನನ್ನನ್ನು ತಯಾರು ಮಾಡಿದ್ಲು. ಅಮ್ಮ ಹೇಳಿದ್ದು ನಿಜ. ಬದುಕಿನ ಹಾರಾಟ, ಚೀರಾಟ ಎಲ್ಲ ಜಾಸ್ತಿ ದಿನ ಜೊತೆ ಇರಲಾರದು ಎಂದುಕೊಳ್ಳುವ ಹೊತ್ತಿಗೆ ನಾನು ಗೋವಾ ತಲುಪಿದ್ದೇನೆ ಎಂಬುದು ದಿಟವಾಯ್ತು. ಹೊರಗಿಳಿದು ಬಂದ್ರೆ ಕ್ಯಾಬ್‍ನವನು ಕಾಯುತ್ತಿದ್ದ. ಹೊಟೆಲ್‍ನಲ್ಲಿ ರೂಮು ಬುಕ್ ಆಗಿತ್ತು. ನನ್ನ ಪ್ರಶ್ನೆಗೆ ಇಲ್ಲಾದರು ಉತ್ತರ ಸಿಗಬಹುದಾ ಎಂಬ ಆಸೆಯೊಂದು ಸಣ್ಣಗೆ ಚಿಗುರಿತ್ತು.
***
ಮುಳುಡಗೆಯಾದ ನಂತರ ಅಪ್ಪ ನರಗುಂದ ತಾಲೂಕಿನ ಶಿರಕೋಳದ ಹಣಸಿಯಲ್ಲಿ ಒಂದಷ್ಟು ಭೂಮಿ ಖರೀದಿಸಿ ಬೇಸಾಯ ಆರಂಭಿಸಿದರು. ಅಮ್ಮ ಹೊಲದ ಕೆಲಸದಲ್ಲಿ ಅಪ್ಪನಿಗೆ ಸಾಥ್. ಅದ್ಯಾಕೊ ಅಲ್ಲಿ ವಿದ್ಯಾಭ್ಯಾಸ ಅಷ್ಟೊಂದು ಚೆನ್ನಾಗಿಲ್ಲವೆಂದು ಕಾಲೇಜಿಗೆ ಧಾರವಾಡಕ್ಕೆ ಬಂದೆ.
ಧಾರವಾಡದ ಎಲ್‍ಎಲ್‍ಬಿಯ 5 ವರ್ಷ ಬದುಕಿನ ಸುವರ್ಣಯುಗ. ಆಗೆಲ್ಲ ಬದುಕಿನ ಕುರಿತಾಗಿ ಪ್ರಶ್ನೆಗಳಿರಲಿಲ್ಲ. ಹಾಸ್ಟೆಲ್ ಗೆಳೆತಿಯರು, ಕಾಲೇಜಿನಲ್ಲಿ ಚುಡಾಯಿಸುವ ಹುಡುಗರು, ಸುತ್ತಾಟ, ತಿನ್ನೋದು, ಕಾರ್ಯಕ್ರಮಗಳು, ಸಿನಿಮಾ, ಸಂಗೀತ, ಕ್ಲಾಸು, ಓದು…ಇವಿಷ್ಟು ಬಿಟ್ಟು ಬೇರೆಯ ಜಗತ್ತು ಗೊತ್ತಿರಲಿಲ್ಲ.
ಹೀಗೆ ದಿನ ಕಳೆಯುತ್ತಿರುವಾಗ ಪರಿಚಯವಾದವನು ಸುಮಂತ್. ಫೇಸ್ಬುಕ್, ವಾಟ್ಸಪು ಗೊತ್ತಿಲ್ಲದ ಕಾಲಕ್ಕೆ, ಇಂಟರ್‍ನೆಟ್ ಕಾಣದ ಸಮಯದಲ್ಲಿಯೇ ಸಖತ್ ಫ್ಲರ್ಟ್ ಮಾಡುತ್ತಿದ್ದ ಹುಡುಗ. ಹೂವಿನ ಮಕರಂದಕ್ಕೆ ದುಂಬಿಗಳು ಮುತ್ತಿಗೆ ಹಾಕುವಂತೆ ಚೆಂದದ ಹುಡುಗಿಯರು ಅವನನ್ನು ಸುತ್ತುವರಿಯುತ್ತಿದ್ದರು. ಅದ್ಯಾವುದೋ ಫುಟ್ಬಾಲ್ ಆಟಗಾರ ಹೇರ್‍ಸ್ಟೈಲ್, ಸ್ಮಾರ್ಟ್ ಆದ ಬೈಕು, ಜೀನ್ಸು, ಕೈಗೊಂದು ಬ್ಯಾಂಡ್…ಅವನ್ನ ನೋಡಿದ್ರೆ ಯಾವ ಮಗ್ಗುಲಿನಿಂದಲೂ ಯಾರೂ ತಿರಸ್ಕರಿಸುವಂತೆ ಇರಲಿಲ್ಲ. ಆದ್ರು ನಂಗೆ ಹುಡುಗರು ಅಂದ್ರೆ ಸ್ವಲ್ಪ ದೂರ. “ನೋಡು ಬದುಕಿನಲ್ಲಿ ಮದ್ವೆ ಅಂತ ಆಗೋದು ಒಂದೇ ಸಲ. ಪಟ್ಟಣ್ಣಕ್ಕೆ ಹೋಗಿ ನೀನು ಕೆಡಬ್ಯಾಡ. ಹಂಗೇನಾದ್ರು ಮಾಡಿದ್ರೆ ನಾವಿಬ್ರು ಜೀವಂತವಾಗಿರಲ್ಲ. ನಮಗೆ ಎಲ್ಲಕ್ಕಿಂತ ಮರ್ಯಾದೆ ಮುಖ್ಯ” ಎಂದು ಮನೆ ಬಿಟ್ಟು ಹೊರಡುವಾಗ ಅಮ್ಮ ಹೇಳಿದ ಮಾತುಗಳೆ ಕಿವಿಯಲ್ಲಿ ಗುನುಗುತ್ತಿತ್ತು.
ತನ್ನಿಂದ ಯಾರು ದೂರವಿರುತ್ತಾರೋ ಅವ್ರನ್ನು ಪಟಾಯಿಸಿಕೊಳ್ಳಬೇಕು ಅನ್ನೋದು ಅವನ ಕ್ರೇಜ್. ಹಾಗೆ ಪುಷ್ಪ, ಶೀತಲ್‍ನನ್ನು ಆತ ಪಟಾಯಿಸಿದ್ದ. ಆ ನಂತರ ಅವನ ಕಣ್ಣು ಬಿದ್ದಿದ್ದು ನನ್ನ ಮೇಲೆ.
***
ಸ್ನಾನ ಮುಗಿಸಿ ರೆಡಿಯಾಗಿ ರೂಮಿನಿಂದ ಹೊರಬಂದು ನೋಡಿದಾಗ ವತ್ಸಲ ಹೇಳಿದ್ದು ಒಂದು ಕ್ಷಣಕ್ಕೆ ನಿಜವೆನ್ನಿಸ್ತು. ಇದು ಭಾರತದ ಸ್ವರ್ಗ. ಅಮಲಿನ ಜಗತ್ತು. ಭೋರ್ಗರೆಯುವ ಸಮುದ್ರದ ತಟದಲ್ಲಿ ತುಟಿಗೆ ತುಟಿಯಿಟ್ಟು ಪ್ರೀತಿಸಿಕೊಳ್ಳುತ್ತಿರುವವರು ಅದೆಷ್ಟು ಜನ, ಮರಳಿನ ದಂಡೆಯಲ್ಲಿ ಬಗೆಬಗೆಯ ಆಟವಾಡಿ ಬದುಕಿನ ನೋವನ್ನೆಲ್ಲ ಮರೆಯುತ್ತಿರುವವರು ಅದೆಷ್ಟು ಮಂದಿ. ನಾನ್ಯಾಕೆ ಈ ಬದುಕನ್ನು ನೋವು ಅಂತ ಆಲೋಚಿಸುತ್ತೇನೆ. ಅವರೆಲ್ಲ ಬದುಕಿನ ಖುಷಿಯನ್ನು ಅನುಭವಿಸುತ್ತಿರಬಹುದಲ್ಲವೇ?
ಒಂಚೂರು ಮೇಲಕ್ಕೆ ಇಣುಕಿದ್ರೆ, ಮೂರು ಜಿಲ್ಲೆಯದ್ದು ಅದೇ ಗೋಳು. ಹತ್ತಾರು ಕಿಲೋಮೀಟರ್ ದೂರಕ್ಕೆ ಹೋಗಿ ನೀರು ಹೊತ್ತುಕೊಂಡು ಬರಬೇಕು. ಹೀಗಾಗಿ ಊರಿಗೆ ಹೋಗಲಿಕ್ಕೆ ಬೇಜಾರು. ಆದ್ರು ಅಪ್ಪ-ಅಮ್ಮನ ಪ್ರೀತಿಗಾದ್ರು ಊರಿಗೆ ಹೋಗ್ಲೆಬೇಕು. ನೀರಿಲ್ಲದ ಊರಿನಲ್ಲಿ ಸ್ವಚ್ಛತೆಯನ್ನು ನಿರೀಕ್ಷೆ ಮಾಡುವಂತಿಲ್ಲ. ಆದರೆ ಅಪ್ಪ-ಅಮ್ಮ ಎಂಬ ನಾಲ್ಕು ಅಕ್ಷರ ಇದನ್ನೆಲ್ಲ ಮರೆಸಿ ಒಂದಷ್ಟು ಖುಷಿ ಕೊಡುತ್ತಿತ್ತು.
ನನ್ನ ಮದುವೆ ಮಾಡಿ ಎರಡೇ ವರ್ಷಕ್ಕೆ ಭೀಕರವಾದ ಬರಗಾಲ. ಊರಲ್ಲಿ ನೀರಿಲ್ಲದೆ, ಹೊಲದಲ್ಲೆ ಏನು ಬೆಳೆಯದೆ, ಮದ್ವೆಗೆ ಮಾಡಿದ ಸಾಲ ತೀರಿಸಲಾಗದೆ ಅಪ್ಪ ಆತ್ಮಹತ್ಯೆ ಮಾಡಿಕೊಂಡ್ರು. “ಮಗ ಈ ಮಹಾದಾಯಿ ಯೋಜನೆಯೊಂದು ಆಗಿಬಿಡ್ಲಿ. ನಮ್ಮ ಡ್ಯಾಂಗೆ ನೀರು ಬರುತ್ತೆ. ನಾನು ಹೊಲದಾಗೆ ಬಂಗಾರ ಬೆಳೆದು ನಿಗೊಂದು ನಕ್ಲೇಸ್ ಮಾಡಿಸಿಕೊಡ್ತೀನಿ…” ಎನ್ನುತ್ತಿದ್ದ ಅಪ್ಪನ ಮುಗ್ಧ ಪ್ರೀತಿಯೇ ಇಲ್ಲದ ಮೇಲೆ ಬದುಕಿನಲ್ಲಿ ಇನ್ನೇನು ಇದೆ? ಅಪ್ಪನ್ನ ಕಳೆದುಕೊಂಡಿದ್ದೇ ನಾನಿಂದು ಬದುಕಿನ ಅರ್ಥ ಹುಡುಕುವಂತೆ ಮಾಡಿರಬಹುದಾ?
ಮಹಾದಾಯಿಯನ್ನು ಮಲಪ್ರಭೆಗೆ ತಂದು ಸೇರಿಸುವ ಕನಸು ಹೊತ್ತವರ ಜಗತ್ತು ಅಲ್ಲಿದೆ. ಉತ್ತಬೇಕು, ಬಿತ್ತಬೇಕು, ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಲಾಯರ್ ಮಾಡಬೇಕು. ಮಗಳಿಗೊಂದು ಸರ, ಮಗನಿಗೊಂದು ಉಂಗುರ…ಇದನ್ನೇ ಬದುಕಿನ ಸರ್ವಸ್ವವೆಂಬಂತೆ ತಿಳಿದವರ ಜಗತ್ತದು.
“ಮಗ ನೀನು ಈ ಕೊಂಪೆಯಲ್ಲಿದ್ದು ನಮ್ಮ ಥರ ಸಾಯಬೇಡ. ಬೆಳಿಗ್ಗೆ ಎದ್ರೆ ನೀರಿಲ್ಲ, ರಾತ್ರಿ ಮಲಗೋವಾಗ ನೀರಿಲ್ಲ. ನೀನು ಭರ್ತಿ ನೀರು ಇರೋ ಪಟ್ಟಣ್ಣ ಸೇರು. ಗಂಡ, ಸಂಸಾರ, ಮಕ್ಕಳು ಅಂತ ಸುಖವಾಗಿ ಇರು. ನಂಗಂತು ಗಂಡು ಮಗ ಆಗ್ಲಿಲ್ಲ. ನಿಂಗಾದ್ರು ಆಗ್ಲಿ…” ಅಮ್ಮನ ಪ್ರಪಂಚವದು.
“ನನ್ಮಗಂದ್ ಬಾಸು. ನೋಡೊ ಆ ಫಿಗರ್‍ನ ಹೆಂಗೆ ಪಟಾಯಿಸಿದ. ಆಫೀಸ್ ಹೆಂಗೆ ದರಿದ್ರ ಆಗಿದೆ ನೋಡು. ಅವನಿಗಿದೆ ಹಬ್ಬ..” ಜೋರಾಗಿ ಕಿರುಚಿತ್ತಿದ್ದ.
“ಲೋ ಹೇಳಿದೆ ಮಗ ಈ ಬಿಸಿಲಿನಲ್ಲಿ ಬೀಯರ್ ಕುಡಿಬೇಡ ಅಂತ. ಈಗ ನೋಡು ನಿನ್ನ ಕಂಟ್ರೋಲ್ ಮಾಡೋಕೆ ಆ ಶಿವನೆ ಬರಬೇಕು..” ಅವನ ಗೆಳೆಯ ತಲೆಮೇಲೆ ಕೈಹೊತ್ತು ಕುಳಿತ್ತಿದ್ದ.
“ಲೋ ಬಾರೋ ಐ ಆಮ್ ಫಿಟ್ ಆಂಡ್ ಫೈನ್. ನಂಗೇನು ಆಗಿಲ್ಲ. ಲೋ ಮಚ್ಚ ಇನ್ನು ಎರಡು ಬಾಟಲಿ ಕುಡಿದಿಲ್ಲ ಕಣೋ. ಇಷ್ಟಕ್ಕೆಲ್ಲ ಕಿಕ್ ಕೊಡುತ್ತೇನೋ ಈ ದರಿದ್ರ ಬೀರು? ಗೋವಾಕ್ಕೆ ಬಂದಿರೋದು ಕುಡಿಯೋಕೆ. ಚೆನ್ನಾಗಿ ಕುಡಿದು ಈ ಸಮುದ್ರದಂಚಲ್ಲಿ ಮಲಗಿಬಿಡ್‍ಬೇಕು ಮಚಾ. ಏನು ಅಂದ್ರೆ ಏನು ಗೊತ್ತಾಗಬಾರದು ನಂಗೆ. ಹಂಗೆ ಕುಡಿಬೇಕು ಮಚಾ. ಬಾರೋ ಮಗ..”
ಒಂದೇ ನದಿಯ ಎರಡು ತೀರಗಳಲ್ಲಿ ಅದೆಷ್ಟು ವ್ಯತ್ಯಾಸವಿದೆ ಅಲ್ವಾ?
***
ಗಂಡು-ಹೆಣ್ಣು ವ್ಯತ್ಯಾಸವೇನಿದೆ? ಇಬ್ರದ್ದು ಜೀವವಲ್ವಾ? ಇಬ್ರು ಉಸಿರಾಡಲ್ವಾ? ನಮ್ಮಿಬ್ರ ನಡುವೆ ದಿನ ಇದೇ ಜಗಳ. “ಆಯ್ತಮ್ಮ ಇನ್ಮುಂದೆ ನಾನು ಚೂಡಿದಾರ್ ಹಾಕ್ಕೊತೀನಿ. ನೀನು ಪ್ಯಾಂಟ್-ಶರ್ಟ್ ಹಾಕಿಕೊ. ನಾನು ಮನೆಲಿ ಪಾತ್ರೆ ತೊಳೆದುಕೊಂಡು ಇರ್ತಿನಿ. ನೀನು ಆಫೀಸ್‍ಗೆ ಹೋಗು ಆಯ್ತಾ?”
“ಅಲ್ಲ ಕಣೋ ನೀನು ಹಾಗ್ಯಾಕೆ ಅಂದುಕೊಳ್ತಿಯಾ? ಗಂಡು ಈ ಕೆಲಸ ಮಾಡಬೇಕು? ಹೆಣ್ಣು ಈ ಕೆಲಸ ಮಾಡಬೇಕು ಅಂತ ಉಳಿದವರ ಥರ ನೀನು ಯಾಕೆ ಟಿಪಿಕಲ್ ಆಗಿ ಯೋಚಿಸ್ತೀಯಾ? ಇಬ್ರು ಕೆಲಸಕ್ಕೆ ಹೋಗೋಣ. ಇಬ್ರು ಪಾತ್ರೆ ತೊಳೆಯೋಣ. ಗಂಡ-ಹೆಂಡ್ತಿ ಅನ್ನೋದು ಮಂಚದಲ್ಲಿ ದೇಹ ಶೇರ್ ಮಾಡಿಕೊಳ್ಳೋದಕ್ಕೆ ಮಾತ್ರವಲ್ಲ ಕಣೋ. ಎಲ್ಲದಕ್ಕು..”
“ಯಾವತ್ತು ಹೆಣ್ಣು-ಗಂಡು ಒಂದೇ ಆಗ್ಲಿಕ್ಕೆ ಸಾಧ್ಯವಿಲ್ಲ. ನಿಂಗೆ ಹೇರೋ ಶಕ್ತಿ ಇದೆ. ಅದಕ್ಕೆ ನೀನು ಹೆಣ್ಣು, ತಾಯಿ ಎಲ್ಲವೂ ಹೌದು. ನೋಡು ನಿನ್ನಷ್ಟು ಕಾಳಜಿ, ಪ್ರೀತಿ ನಂಗೆ ಯಾವತ್ತೂ ಬರಲ್ಲ ಕಣೆ. ಒಂದಷ್ಟು ಕೆಲಸ ನೀನೇ ಮಾಡಿದ್ರೆ ಚೆಂದ. ಇನ್ನೊಂದಷ್ಟು ನಾನು ಮಾಡಿದ್ರೆ ಚೆಂದ..”
“ಅಲ್ಲ ಕಣೋ ಸುಮಂತ್ ನಾನು ನಿಂಗೆ ಅದನ್ನೆ ಹೇಳ್ತಾ ಇರೋದು. ನಿಂಗೆ ನೀನೇ ಯಾಕೆ ಈಥರ ರಿಸ್ಟ್ರಿಕ್ಷನ್ ಹಾಕ್ಕೊತೀಯಾ? ನೀನು ಮಾಡೋದನ್ನ ನಾನು ಮಾಡಬಾರದು ಅಂತ ಯಾಕೆ ಅಂದುಕೊಳ್ತೀಯಾ ಅದಕ್ಕು ಹೆರಿಗೆಗೂ ಯಾಕೆ ಹೋಲಿಕೆ ಮಾಡ್ತೀಯಾ? ನಿನ್ನ ಸಹಕಾರವಿಲ್ಲದೆ ನಾನು ಹೆರೋಕೆ ಸಾಧ್ಯವಿಲ್ಲ. ಹೋಗ್ಲಿ ಬಿಡು. ಮತ್ತ್ಯಾಕೆ ಆ ವಿಷ್ಯದಲ್ಲಿ ಜಗಳ?…”
ಒಂದರ್ಥದಲ್ಲಿ ಬದುಕಿನುದ್ದಕ್ಕು ಗೆದ್ದಿದ್ದು ಅವನೇ. ನನ್ನ ಎದುರು ಅವನು ಪ್ರತಿ ಸಲ ಸೋಲು ಒಪ್ಪಿಕೊಳ್ತಿದ್ದ. “ಆಯ್ತಮ್ಮ. ನಿನ್ನ ಒಪ್ಪಿಸೋಕೆ ಸಾಧ್ಯವಿಲ್ಲ. ನೀನೇ ಗೆದ್ದೆ ಬಿಡು. ಈವಾಗ ನಾನು ಏನು ಮಾಡಬೇಕು ಹೇಳು?” ಎನ್ನುತ್ತ ಪ್ರೀತಿಯ ಸೆಟೆಯಲ್ಲಿ ಸೆಳೆದುಬಿಡ್ತಿದ್ದ. ಸೋಲಬಾರದು ಅಂದುಕೊಂಡ ನಾನು ಅವನ ಪ್ರೀತಿಗೆ ಸೋತುಬಿಡ್ತಿದ್ದೆ.
“ನನ್ನ ಲೈಫ್‍ಲ್ಲಿ ಕನಿಷ್ಟ 4 ಹುಡುಗಿಯರನ್ನು ಅನುಭವಿಸಿದೀನಿ ಕಣೆ. ನಾನು ಇರೋದೇ ಹೀಗೆ. ಏನಿವಾಗ ನಿಂದು? ಬೇಕಿದ್ರೆ ಮದ್ವೆಯಾಗು ಇಲ್ಲ ಅಂದ್ರೆ ಬಿಡು. ನಾನು ನಿನ್ನ ಪ್ರೀತಿಸ್ತೀನಿ. ಕೇರ್ ಮಾಡ್ತೀನಿ ಅಷ್ಟೆ. ಹಾಗಂತ ನನ್ನ ಲೈಫು, ನನ್ನ ಟೇಸ್ಟ್ ಯಾವುದಕ್ಕು ಕಡಿವಾಣ ಹಾಕಿಕೊಳ್ಳಲ್ಲ. ನಾನು ನಿನ್ನ ಮೈ ಮುಟ್ಟೋ ಮೊದ್ಲೆ ಗೊತ್ತಿರಲಿಲ್ವಾ ನಾನು ಹೀಗೆ ಅಂತ? ಮತ್ತ್ಯಾಕೆ ನೀನು ನನ್ನ ಲವ್ ಮಾಡಿದೆ? ಮತ್ತ್ಯಾಕೆ ಹತ್ರ ಬಂದೆ? ಬಟ್ಟೆ ಕಳಚುವಾಗಲಾದ್ರು ನಿಂಗೆ ಜ್ಞಾನೋದಯ ಆಗ್ಲಿಲ್ಲ. ಮಿಕ್ಕಿದೆಲ್ಲ ವೇದಾಂತ ಮಾತಾಡ್ತೀಯ? ಲಾಯರ್ ಆಗಿ ಇದೊಂದು ಪಾಯಿಂಟ್ ನಿಂಗೆ ಹೊಳೆಯಲಿಲ್ವಾ?”
***
ಸಣ್ಣಗೆ ಹುಟ್ಟಿ ಗೌರಮ್ಮನಂತೆ ಬೆಳೆದು ಮಹಾದಾಯಿಯಾಗಿ, ಅರ್ಧದಲ್ಲಿ ಸೀರೆ ಬದಲಿಸಿ ಮಾಡರ್ನ್ ಜಗತ್ತಿಗೆ ಮೈಕೊಡವಿ, ಹೃದಯ ಬಿಚ್ಚಿ ಮಾಂಡೋವಿಯಾಗಿ ಹರಿದ ಆಕೆಯೀಗ ಅರಬ್ಬಿ ಸಮುದ್ರ ಸೇರುವ ತುದಿಗೆ ಬಂದು ನಿಂತಿದ್ದೇನೆ. ಅವಳು ತನ್ನನ್ನು ತಾನು ಮರೆತು ಲೀನವಾಗುವ ಹೊತ್ತು. ಅದೆಷ್ಟು ವಿಶಾಲವಾಗಿ ಮೈಚಾಚಿಕೊಂಡಿದ್ದಾಳೆಂದರೆ, ಅರಬ್ಬಿ ಸಮುದ್ರದ ತುದಿ ಯಾವುದು? ಮಾಂಡೋವಿಯ ತುದಿ ಯಾವುದು ತಿಳಿಯುತ್ತಿಲ್ಲ. ಇಬ್ಬರು ಒಬ್ಬರನ್ನೊಬ್ಬರು ಸೇರಿ ಬಿಟ್ಟಿದ್ದಾರೆ. ಅದೇ ಅಲ್ವಾ ಬದುಕಿನ ಧ್ಯಾನಸ್ಥ ಸ್ಥಿತಿ. ನಮ್ಮನ್ನು ನಾವು ಮರೆತು, ನಮಗೆ ನಾವು ಯಾರೆಂದು ಗೊತ್ತಿಲ್ಲದ ಸ್ಥಿತಿ.
ಅದ್ಯಾಕೊ ಬದುಕಲ್ಲಿ ಮೈಕೊಡವಿ ಎಳಬೇಕು ಅನ್ನಿಸ್ತು. “ಅದೆಷ್ಟು ದಿನ ಅಂತ ಹೀಗೆ ಗೌರಮ್ಮ ಥರ ಕುಳಿತಿರುತ್ತೀಯಾ? ಬಾರೆ ಸಾಕು. ನಾವು ಕಂಡಿದೀವಿ ಈಥರದವರನ್ನು. ಹೀಗೆ ಕುಳಿತವರ್ಯಾರು ಬದುಕಿನಲ್ಲಿ ಉದ್ದಾರ ಆಗಲಿಲ್ಲ. ಉರಿಯೋ ವಯಸ್ಸಲ್ಲಿ ಉರಿದು ಎಂಜಾಯ್ ಮಾಡಬೇಕು. ಆಮೇಲೆ ಗಂಡ, ಸಂಸಾರ ಎಲ್ಲ ಇದ್ದಿದ್ದೆ” ಎನ್ನುವ ಗೆಳತಿಯರ ಮಾತು ಕಿವಿಗೆ ಕುಕ್ಕು ತೊಡಗಿತು.
ಕಂಡ-ಕಂಡ ಹುಡುಗಿಯರನ್ನ ಆಟ ಆಡಿಸಿ ಬುಟ್ಟಿಗೆ ಹಾಕಿಕೊಳ್ಳೊ ಸುಮಂತನ್ನ ಆಟ ಆಡಿಸಬೇಕು ಅಂತ ಹಠಕ್ಕೆ ಬಿದ್ದೆ. ಬಲವಂತವಾಗಿ ಬದುಕಿಗೆ ಹಾಕಿಕೊಂಡಿದ್ದ ಎಲ್ಲ ಚೌಕಟ್ಟುಗಳನ್ನು ಕಳಚಿಕೊಂಡೆ. ಅವನ ಜೊತೆ ರೇಸಿಗೆ ಬಿದ್ದೆ. ಅಷ್ಟೆ, ಮುಗೀತು. ಅವನ್ನ ಓವರ್ ಟೇಕ್ ಮಾಡೋ ಭರದಲ್ಲಿ ನನಗೆ ಗೊತ್ತಿಲ್ಲದ್ದಂತೆ ಬದುಕಿನಲ್ಲಿ ಯೂಟರ್ನ್ ತೆಗೆದುಕೊಳ್ಳಲಾಗದಷ್ಟು ದೂರ ಸಾಗಿ ಬಂದಿದ್ದೆ.
***
ಡೈಮಂಡ್, ಇಸ್ಪೀಟು, ಆಟೀನು, ಕಳವರ…ಕ್ಯಾಸಿನೋದಲ್ಲಿ ಕುಳಿತವನಿಗೆ ಹಡಗಿನಾಚೆಯ ಮಾಂಡೋವಿ ಆಟ ಕಾಣುಸುತ್ತಿಲ್ಲ. ಪಕ್ಕದ ಹುಡುಗಿ ಆಗಾಗ ಡ್ರಿಂಕ್ಸ್ ಸರ್ ಗ್ಲಾಸ್‍ಗೆ ಸುರಿಯುತ್ತಿದ್ದಾಳೆ. ಆಡಿ, ನೀವಿನ್ನು ಆಟ ಆಡಿ. ಕಳೆದುಕೊಂಡ ದುಡ್ಡು ಮತ್ತೆ ಬರುತ್ತೆ ಅಂತ ಚಿಯರ್ ಮಾಡುತ್ತಿದ್ದಾಳೆ. “ಸಾಕಪ್ಪ ಒಂದ್ಸಲ ಕಳೆದುಕೊಂಡ ದುಡ್ಡು ಮತ್ತೆ ಬಂತು” ಎಂದು ಒಂದಷ್ಟು ದುಡ್ಡು ಗೆದ್ದವ ಹೊರಡಲು ರೆಡಿಯಾದ್ರೆ, ಆಕೆ ಬಿಡುತ್ತಿಲ್ಲ. ನನ್ನ ಜೊತೆಯೂ ಸ್ವಲ್ಪ ಆಟವಾಡಲ್ವಾ ಎಂದು ಕೈ ಚಾಚುತ್ತಿದ್ದಾಳೆ. ಈತನಿಗೆ ಮತ್ತೆ ಕಳೆದು ಹೋಗಬಹುದೆಂಬ ಭಯ. ಎಷ್ಟಂದ್ರು ಜೂಜಾಟವದು. ಪಾಂಡವರು ಸರ್ವಸ್ವವನ್ನು ಕಳೆದುಕೊಂಡ ಆಟವದು. ಸೌಂದರ್ಯ ಸಮರದಲ್ಲಿ ಸೋತವನೆ ಅಮರ…
ಅದೆಷ್ಟು ವಿಚಿತ್ರವಾಗಿದೆ ಬದುಕಿನ ಎರಡು ತೀರಗಳು. ಘಟ್ಟದ ಮೇಲಿನ ಮಹಾದಾಯಿ ಕೆಳಗಿಳಿಯುತ್ತಿದ್ದಂತೆ ಮಾಂಡೋವಿ. ನಿಜ ಮಹಾದಾಯಿಗಿಂತ ಮಾಂಡೋವಿ ಸಖತ್ ಥ್ರಿಲ್ಲಿಂಗ್. ಆದ್ರೆ ಅದೆಷ್ಟು ದಿನ? ವಾರಾಂತ್ಯದ ರಜ ಕಳೆಯುವ 2-4 ದಿನ. ನಂತರ ಮತ್ತದೆ ಬದುಕು, ಮತ್ತದೆ ಜಗತ್ತು. ಇದೆಲ್ಲ “ಒಂಥರ ರಿಚಾರ್ಜ್ ಪಾಯಿಂಟ್ ಥರ ಕಣೆ…” ಅವನ ಮಾತು ನೆನಪಾಗುತ್ತಿದೆ.
ಬದಲಾದೆ. ಯಾರಿಗಾಗಿ, ಯಾಕಾಗಿ ಬದ್ಲಾದೆ ಅಂದ್ರೆ ಉತ್ತರವಿಲ್ಲ. ಹಾಗಂತ ಬದ್ಲಾಗಿದ್ದಕ್ಕೆ ಬೇಸರವೂ ಇಲ್ಲ. ಯಾರೂ ಊಹಿಸದ ಹಾಗೆ ಬದ್ಲಾಗಿಬಿಟ್ಟೆ. ಒಂಥರ ಘಟ್ಟ ಇಳಿದ ಮಹಾದಾಯಿಯಂತೆ. ಲೈಫ್‍ಸ್ಟೈಲ್ ಬದ್ಲಾಯ್ತು. ಮೈ-ಮನಗಳೆಲ್ಲ ಬದ್ಲಾಯ್ತು. ಸುಮಂತ್ ಮಾಡಿದ್ದೆಲ್ಲ ಸರಿ. ಅದು ಅವನ ಆಯ್ಕೆ. ಅವನ ದಾರಿ ಎಂಬಷ್ಟರ ಮಟ್ಟಿಗೆ ಬದ್ಲಾಗಿಬಿಟ್ಟೆ.
ಆದ್ರು ಕೊನೆಗೆ ಉಳಿದ್ದಿದ್ದು ಅನಾಥ ಭಾವ ಮಾತ್ರ. ಯಾರು ಎಷ್ಟು ದಿನ ಅಂತ ಬದುಕಿನಲ್ಲಿ ಜೊತೆಗಿರುತ್ತಾರೆ? ಎಲ್ಲ ಒಂದಷ್ಟು ದಿನ ಬಂದು ಹೋಗುವ ಆಗುಂತಕರು ಅಷ್ಟೆ. ನಿನ್ನೆ ಜೊತೆಗಿದ್ದ ಗೆಳೆಯ, ಗೆಳತಿ ನಾಳೆ ಹಾಗೆ ಇರ್ತಾರೆ ಅನ್ನೋಕ್ಕೆ ಆಗಲ್ಲ. ಬೇರೆಯವರ ಕಥೆ ಹಾಳಾಗ್ಲಿ, ಮೊನ್ನೆ ಹಾಗಿದ್ದ ನಾನು ಇವತ್ತು ಹೇಗಾದೆ? ನಾಳೆ ಹೇಗಿರುತ್ತೇನೆ? ನಂಗೆ ಗೊತ್ತಿಲ್ಲ.
ಈ ಬದುಕಿನ ಅರ್ಥವೇನು? ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಅದೇ ಒಂಟಿತನ ಕಾಡ್ತಾ ಇದೆ. ಕೆಲವು ಸಲ ಹಾಗೆ. ಎಲ್ಲ ಜೊತೆಗಿದ್ರು ನಾವು ಒಂಟಿ ಅನ್ನಿಸಲು ಶುರುವಾಗಿ ಬಿಡುತ್ತೆ. ನಮ್ಮ ಸುತ್ತ ಯಾರಿಲ್ಲ ಅನ್ನಿಸುತ್ತೆ. ಇದ್ರು ಅವ್ರೆಲ್ಲ ಎಷ್ಟು ದಿನ ಇರ್ತಾರೆ ಅನ್ನಿಸುತ್ತೆ. ಯಾಕಂದ್ರೆ ನಾವು ಒಂಟಿಯಾಗಿ ಬಂದಿರೋದು. ಹೋಗೋದು ಒಂಟಿಯಾಗಿಯೇ ಅಲ್ವಾ?
***
12 ದಿನಗಳ ಆಸ್ಪತ್ರೆ ವಾಸ ಬದುಕನ್ನು ಸಾಕಾಗಿಸಿತ್ತು. ಆದಾಗ್ಯೂ ಅವನ್ನ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕೂಡಿಟ್ಟ 6 ಲಕ್ಷ ಕಳೆದುಕೊಂಡೆ ಅಷ್ಟೆ.
ಹೇಳಿದ್ನಲ್ಲ ಅವನ್ನ ಓವರ್ ಟೇಕ್ ಮಾಡೋ ಭರದಲ್ಲಿ ನಾನು ನನ್ನ ದಾರಿಯತ್ತ ತಿರುಗಿ ನೋಡಲಾಗದಷ್ಟು ದೂರ ಸಾಗಿ ಬಂದಿದ್ದೆ. ಅವನ ನನ್ನ ಪಟಾಯಿಸಿದ್ದ. ಪುಷ್ಪ ಅವನ ಜೊತೆಗಿನ ರಾತ್ರಿಗಳನ್ನು ಹಂಚಿಕೊಳ್ಳುವಾಗ ಕೇಳಲು ಅಹಸ್ಯವೆನಿಸುತ್ತಿತ್ತು. ಆದ್ರೆ ನಾನು ಅವನ ಬಲೆಗೆ ಬಿದ್ದಿದ್ದೆ. ಅದೇ ನನಗೆ ಅರ್ಥವಾಗದ ಪ್ರಶ್ನೆ. ಹೆಣ್ಣು-ಗಂಡಿಗೆ ವ್ಯತ್ಯಾಸವಿಲ್ಲ ಎಂಬಷ್ಟು ಗಟ್ಟಿಗಿತ್ತಿ ನಾನು. ಹೆಣ್ಣು ಭೋಗದ ಸರಕಲ್ಲ ಎಂಬ ಥಿಯೆರಿ ನಂದು. ಆದ್ರೆ ನಂಗೆ ತದ್ವಿರುದ್ಧವಾಗಿ ಯೋಚಿಸುವವನ ಜೊತೆ ಪ್ರೀತಿ! ಅವನ ಪ್ರೀತಿಗೆ ಮರುಳಾಗಿದ್ದೆ. ಅದಕ್ಕೆ ಇರಬೇಕು ಪ್ರೀತಿ ಕುರುಡು ಎನ್ನುವುದು.
‘ಪ್ರೀತಿಗೂ ಸೆಕ್ಸ್‍ಗು ಸಂಬಂಧವಿಲ್ಲ. ಅದೊಂದು ಬದುಕಿನ ಬೇರೆಯದೆ ಸ್ಥಿತಿ’ ಎನ್ನುತ್ತಿದ್ದ. ನಿಜ. ಮದ್ವೆಯಾದ ಮೇಲೂ ಆತ 3-4 ಹುಡುಗಿಯರನ್ನು ಅನುಭವಿಸಿದ್ದ. ಅದನ್ನು ನನ್ನ ಬಳಿ ಹೇಳಿದ್ದ ಕೂಡ. ಆದ್ರು ನನ್ನ ಮೇಲೆ ಒಂಚೂರು ಪ್ರೀತಿ ಕಡಿಮೆಯಾಗಲಿಲ್ಲ. ಮೊದ್ಲು ನಂಗೆ ಸ್ವಲ್ಪ ಪೊಸೆಸೀವ್‍ನೆಸ್, ನನ್ನಿಂದ ಅವ ದೂರವಾಗಬಹುದೆಂಬ ಭಯ ಕಾಡಿತ್ತು. ಆಮೇಲೆ ಅನ್ನಿಸಿದ್ದು ಅವಳ ಜೊತೆ 10 ನಿಮಿಷ ಸುಖಿಸಬಹುದು. ಆದ್ರೆ ಕೊನೆಗೆ ಬದುಕು ನನ್ನೊಂದಿಗೆ ಅಲ್ವಾ? ಅಂತ. ಸರಿ ಅದು ನಿನ್ನ ಟೇಸ್ಟು ಅಂದೆ.
ನಂತ್ರ ಅವನಿಗು ಅರಿವಾಗಿರಬೇಕು. ಬೇರೆ ಹುಡುಗಿಯರ ಸಹವಾಸ ಬಿಟ್ಟಿದ್ದ. ನನ್ನನ್ನು ಪ್ರೀತಿಸಲು, ಪೂಜಿಸಲು ಶುರು ಮಾಡಿದ್ದ.
ಅಪ್ಪನ್ನ ಕಳೆದುಕೊಂಡೆ. ಅಮ್ಮನು ಜಾಸ್ತಿ ದಿನ ಬದುಕಲಿಲ್ಲ. ಬದುಕು ಅನಾಥವೆನಿಸಲು ಶುರುವಾಯ್ತು. ಬದುಕಿನಲ್ಲಿ ಏನಿದೆ ಎಂಬ ಪ್ರಶ್ನೆ ಶುರುವಾಗಿದ್ದು ಅಪ್ಪ ಸತ್ತ ನಂತ್ರ. ಬದುಕಿನ ತುದಿ ಯಾವುದು? ನಾನು ಏಕೆ ಬದುಕ್ತಾ ಇದೀನಿ? ನಾನು ಒಂದಿನ ಸಾಯ್ತೀನಿ. ಯಾವತ್ತು ಸಾಯಬಹುದು? ಹೇಗೆ ಸಾಯಬಹುದು ಅಂತೆಲ್ಲ ಯೋಚಿಸತೊಡಗಿದೆ. ಆಗೆಲ್ಲ ಅವನ ಪ್ರೀತಿ ನನ್ನನ್ನು ಬೇರೆ ಜಗತ್ತಿಗೆ ಕರೆದುಕೊಂಡು ಹೋಗುತ್ತಿತ್ತು.
ಬದುಕಿನ ಮಧ್ಯದಲ್ಲಿ ಇವ ಕೂಡ ನನ್ನ ಬಿಟ್ಟು ಹೋಗಬಹುದೆಂಬ ಕನಸು ಕಂಡಿರಲಿಲ್ಲ. ಊರಿಗೆ ಬಂದಾಗ ಒಂದು ದಿನ ಹಾವು ಕಚ್ಚಿಬಿಡ್ತು ಅಷ್ಟೆ. ಆಮೇಲೆ ಸುಮಾರು 12 ದಿನ ಆಸ್ಪತ್ರೆಲಿ. ಸಾಯುವ ಮೊದ್ಲು ಆತ ಹೇಳಿದ ಮಾತು: “ನನ್ನ ಕ್ಷಮಿಸಿ ಬಿಡು. ಸಂತೋಷದ ಅಮಲಿನಲ್ಲಿ ಸುಮಾರಷ್ಟು ಜನರ ಭಾವನೆಗಳ ಜೊತೆ ಆಟವಾಡಿಬಿಟ್ಟೆ” ಅಷ್ಟು ಹೇಳಿ ಮಾತು ಮುಗಿಸಿದ.
***
ನಿಜ, ಇಲ್ಲಿದ್ದವರೆಲ್ಲ ಖುಷಿಯ ಉತ್ತುಂಗದಲ್ಲಿದ್ದಾರೆ. ಅಮಲಿನಲ್ಲಿದ್ದಾರೆ. ಒಂದು ರೀತಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಾರೆ. ಯಾರಿಗೂ ಯಾವುದರ ಪರಿವಿಲ್ಲ. ಸುಖದ ಹಗಲು, ಸಂತೋಷದ ರಾತ್ರಿ, ಉನ್ಮಾದತೆ…ಬದುಕಿನ ಸುಖಕ್ಕೆ ಇದಕ್ಕಿಂತ ಹೆಚ್ಚಾಗಿ ಇನ್ನೇನು ಬೇಕು ಅಂತ ನಾನು ಇವರಂತೆ ಆಲೋಚಿಸಿದ್ದರೆ ಇರುವಷ್ಟು ದಿನ ಖುಷಿ-ಖುಷಿಯಾಗಿ ಇರಬಹುದಿತ್ತೇನೋ.
ಮತ್ತದೆ ಪ್ರಶ್ನೆ. ಸಮುದ್ರದೊಳಗೆ ಲೀನವಾದ ಮಾಂಡೋವಿ ಇನ್ನೆಷ್ಟು ದೂರ ಹರಿಯಬಹುದು? ಎಲ್ಲಿಗೆ ಹೋಗಿ ನಿಲ್ಲಬಹುದು ಅವಳ ಬದುಕಿನ ಪಯಣ? ಖಂಡಿತ ಗೊತ್ತಿಲ್ಲ. ಹಾಗೆ ಅರಬ್ಬಿ ಸಮುದ್ರವನ್ನು ಅರಸಿಕೊಂಡು ಹೋದರು ಅವಳ ಅಂತ್ಯದ ಬಿಂದು ಸಿಗಲಿಕ್ಕಿಲ್ಲ. ನಮ್ಮೂರಿನಲ್ಲಿ ಹುಟ್ಟಿದಾಕೆ ಈ ಊರಲ್ಲಿ ಅಂತ್ಯವಾಗಿದ್ದು ಗೊತ್ತಿದೆ. ಹಾಗಂತ ಅದು ಅವಳ ಸಾವಲ್ಲ. ಈ ಆತ್ಮ ಮತ್ತು ದೇಹವೆಂಬ ಪರಿಕಲ್ಪನೆಗೂ ಇದಕ್ಕು ಸಂಬಂಧವಿರಬಹುದಾ? ಬದುಕು ಪೂರ್ವ ನಿರ್ಧಾರಿತ ಎಂಬುದು, ಈ ಜಾತಕ-ಭವಿಷ್ಯವೆಂಬ ಪರಿಕಲ್ಪನೆಗಳೆಲ್ಲ ನಿಜವಿರಬಹುದಾ? ಇಲ್ಲ ಅಂದ್ರೆ ದ್ವೇಷಿಸುತ್ತಿದ್ದ ಅವನೇಕೆ ನನ್ನ ಬದುಕಿನ ಭಾಗವಾಗುತ್ತಿದ್ದ? ಸರ್ವವನ್ನು ವ್ಯಾಪಿಸಿಕೊಂಡವನು ಅದೇಕೆ ಹಾಗೆ ಅರ್ಧದಲ್ಲಿ ಬಿಟ್ಟು ಹೋಗುತ್ತಿದ್ದ? ಉತ್ತರ ಕಾಣುತ್ತಿಲ್ಲ.
ದೇಹ ಶಾಶ್ವತವಲ್ಲ. ಆತ್ಮವಾಗಿ ಮಾಂಡೋವಿ ಅರಬ್ಬಿ ಸಮುದ್ರ ಸೇರಿದ್ದಾಳೆ. ನಾನು ಅವಳಂತೆ ಹೊರಟಿದ್ದೇನೆ ಆತ್ಮಾವಲೋಕನ ಮಾಡಿಕೊಳ್ಳುತ್ತ. ಎಲ್ಲಿಗೆ ಹೋಗಿ ಸೇರುವನೆಂಬ ಅರಿವಿಲ್ಲ…ಮತ್ತೆ ಗೊತ್ತಿಲ್ಲದಂತೆ ಅವನ ಮಡಿಲನ್ನೇ ಸೇರಬಹುದೇ?

Read Full Post »

60698_10151105350039403_322647882_nಮನುಷ್ಯನಿಗೆ ಎಷ್ಟೇ ಉತ್ಸಾಹವಿದ್ರು, ಒಂದು ಹಂತದಲ್ಲಿ ಅದು ಕುಸಿದುಹೋಗುತ್ತೆ. ಅಯ್ಯೋ ಸಾಕು ಅನ್ನಿಸಿಬಿಡುತ್ತೆ. ಅದು ನನ್ನಂತ ಸೋಮಾರಿಗಂತು ಬಲುಬೇಗ ನಿದ್ದೆ! ಜೀವನದಲ್ಲಿ ಅತ್ಯಂತ ಸುಖವಾದ ಕೆಲಸ ಅಂದ್ರೆ ನಿದ್ದೆ. ಒಂಥರ ಬದುಕಿದ್ದು ಸಾಯುವ ಸ್ಥಿತಿ. ಹಾಗಾಗಿಯೇ ಸಾವಿಗೆ ಚಿರನಿದ್ರೆ ಅಂತ ಇಟ್ಟಿರಬೇಕು. ನೀವು ಎಚ್ಚರವಿದ್ದಾಗ ದೇಹದ ಯಾವ ಜಾಗಕ್ಕೆ ವಿಶ್ರಾಂತಿ ಸಿಕ್ಕರು, ಮನಸ್ಸು ಮಾತ್ರ ಏನಾದ್ರು ಒಂದು ಆಲೋಚನೆ ಮಾಡ್ತಾ ಇರುತ್ತೆ. ಅದಕ್ಕೆ ವಿಶ್ರಾಂತಿ ಕೊಡಬಲ್ಲದ್ದು ನಿದ್ದೆ ಮಾತ್ರ!

ಆ ಕಡೆ ಸಾಹಿತ್ಯ ಸಮ್ಮೇಳನದ ಗದ್ದಲ. ಫೇಸ್‌ಬುಕ್‌ನಲ್ಲಿ ಜೋಶಿಯವರ ಚಂಡೆ-ಮದ್ದಳೆ! ಅದ್ರಿಂದ ಲಿಂಕ್‌ ತೆಗೆದುಕೊಂಡು ನೀವು ಶ್ರೀವತ್ಸ ಜೋಶಿಯವರ ಫೇಸ್‌ಬುಕ್‌ ಪ್ರೊಫೈಲ್‌ಗೆ ಭೇಟಿ ಕೊಟ್ಟರೆ ಕಾಣೋದು ‘ಬತ್ತದ ತೆನೆ ಮತ್ತು ಅದರ ಕೆಳಗೆ ಬತ್ತದ ಉತ್ಸಾಹ, ಎಲ್ಲರಲಿ ಇರಲಿ’ ಎಂಬ ಸಾಲು. ಅದ್ನ ನೋಡಿ ನೀವು ಈ ಪುಣ್ಯಾತ್ಮ ಯಾವುದೋ ರೈತ ಇರಬೇಕು ಅಥವಾ ಯಾವುದೋ ಕೃಷಿ ಸಮೂಹದ ಕಾರ್ಯಕರ್ತ ಇರಬೇಕು ಅಂದುಕೊಂಡ್ರೆ ಯಾಮಾರಿದ್ರಿ. ಅವರು ಮೂಲತಃ ರೈತರಾಗಿರಬಹುದು, ಅವರ ಹೆಸರಿನಲ್ಲಿ ಗದ್ದೆಯೂ ಇರಬಹುದು. ಆದ್ರೆ ಅವರೀಗ ಮಾಡುತ್ತಿರುವುದು ಸಾಫ್ಟ್‌ವೇರ್‌ ಕೃಷಿ. ಅಮೆರಿಕದ ಐಬಿಎಂನಲ್ಲಿ ಯಾವುದೋ ಹಿರಿಯ ಹುದ್ದೆಯಲ್ಲಿದ್ದಾರೆ ಅಂತಷ್ಟೆ ಗೊತ್ತು.

ವಿಷ್ಯ ಅದಲ್ಲ, ಮಾತಾಡಬೇಕಿರುವುದು ಈ ಬತ್ತದ ಉತ್ಸಾಹ ಬಗ್ಗೆ! ಈ ಅನಿವಾಸಿ ಭಾರತೀಯರಿಗೆ ಭಾರತ ಅನ್ನೋದು ಒಂಥರ ಕ್ರೇಜ್‌(ಹೆಂಗಸರಿಗೆ ತವರು ಮನೆಗೆ ಹೋಗುವಾಗ ಆಗುವ ಖುಷಿಯಂತೆಯೂ ಇರಬಹುದು!) ಅವರು ವಿದೇಶದಿಂದ ಬರುವಾಗಲೇ ಒಂದು ಟೈಂಟೇಬಲ್‌ ಹಾಕಿಕೊಂಡು ಬಂದಿರುತ್ತಾರೆ. ನಾವೆಲ್ಲ ಪರೀಕ್ಷೆಗೆ ಕರೆಕ್ಟಾಗಿ ೭ ದಿನ ಇರುವಾಗ ಟೈಂ ಟೇಬಲ್‌ ಹಾಕಿಕೊಂಡು ಓದ್ತಾ ಇದ್ವಲ್ಲ, ಅದೇ ಥರ! ಈ ಶ್ರೀವತ್ಸ ಜೋಶಿ ಬರುವಾಗಲೂ ಇಂಥದ್ದೆ ಒಂದು ಟೈಂಟೇಬಲ್ಲು ಹಾಕಿಕೊಂಡು ಬಂದಿರುತ್ತಾರೆ. ಅದ್ರಲ್ಲಿ ಒಂದು ಭಾಗ ನಮ್ಮ ನಾಡಿನ ಪತ್ರಿಕಾ ಕಚೇರಿಗಳಿಗೆ ಭೇಟಿ ಇರುತ್ತೆ. ಹಿಂಗೆ ಒಂದ್ಸಲ ಅವರ ಟೈಂ ಟೇಬಲ್‌ ಪ್ರಕಾರ ನಮ್ಮ ದಟ್ಸ್‌ ಕನ್ನಡ ಶ್ಯಾಮ್‌ ಕರೆದುಕೊಂಡು ಬಂದಾಗ ಪರಿಚಿತವಾದ್ರು ಜೋಶಿಯವ್ರು. ಆಮೇಲೆ ಒಂದೆರಡು ಸಲ ಸಿಕ್ಕಿರಬೇಕು.

ಫೇಸ್‌ಬುಕ್‌ನ್ನು ಅರ್ಥಪೂರ್ಣವಾಗಿ, ವಿಚಾರಪೂರ್ಣವಾಗಿ ಇಡಬಲ್ಲ ಜೊತೆಗೆ ಆಗಾಗ ನಗಿಸಬಲ್ಲ ಹಾಸ್ಯಧಾರಿಗಳಲ್ಲಿ ಜೋಶಿ ಕೂಡ ಒಬ್ಬರು. ಕೆಲವೊಮ್ಮೆ ಅವರ ವಿಚಾರಗಳು ತೀರಾ ಗಂಭೀರವಾಗಿ ಇರುತ್ತವೆ. ನಂತರ ಹೋಗುವ ಚರ್ಚೆ ಮತ್ತು ಬರುವ ಕಮ್ಮೆಂಟ್‌ಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಈ ಫನ್‌ ಮಾಡುವುದು ಒಂದು ಬಗೆಯ ಕಲೆ. ನವೀನ್‌ ಸಾಗರ ಮತ್ತು ಶ್ರೀವತ್ಸ ಜೋಶಿಗೆ ನೀವು ನಿರ್ಜೀವವಾದ, ಅತ್ಯಂತ ಗಟ್ಟಿಯಾದ ಕಬ್ಬಿಣ್ಣದ ಸುತ್ತಿಗೆ ಬೇಕಾದ್ರೂ ಕೊಡಿ, ಅದ್ರಿಂದಲೇ ನಗು ತರಿಸುತ್ತಾರೆ!

‘ಸಾರ್‌ ನೀವು ಸಂಸ್ಕೃತ ಎಲ್ಲಿ ಕಲಿತ್ತಿದ್ದು’ ಅಂತ ಜೋಶಿಯವರಿಗೆ ಕೇಳಿದೆ.

‘ಅಷ್ಟೆಲ್ಲ ಸೀನ್ ಇಲ್ಲಾ ಸಾರ್. ಎಂಟನೆಯಿಂದ ಸೆಕೆಂಡ್ ಪಿಯುವರೆಗೆ ಸಂಸ್ಕೃತ ಒಂದು ಸಬ್ಜೆಕ್ಟ್. ಆಮೇಲೂ ಸ್ವಲ್ಪ ಟಚ್ ಇಟ್ಕೊಂಡೆ ಅಷ್ಟೇ’ ಅಂದ್ರು.

ಆದ್ರೂ ನಿಮ್ಮ ಸಂಸ್ಕೃತ ಜ್ಞಾನ ಚೆನ್ನಾಗಿದೆ. ಆಮೇಲೆ ಆಸಕ್ತಿಯಿಂದ ಅಧ್ಯಯನ ಮಾಡಿದ್ರಾ ಅಂತ ಮತ್ತೊಂದು ಪ್ರಶ್ನೆ.

‘ಎಸ್ಸೆಸ್ಸೆಲ್ಸಿವರೆಗೂ ಕನ್ನಡಮಾಧ್ಯಮದಲ್ಲಿ ಶಿಕ್ಷಣ ಆದ್ದರಿಂದ ಕನ್ನಡ+ಸಂಸ್ಕೃತ ಭಾಷೆಗಳ ಮೇಲೆ ಪ್ರೌಢಿಮೆಗೆ ಕಾರಣವಾಯಿತು. ಮತ್ತೊಂದೆಂದರೆ ನನಗೆ ಯಾವುದೇ ಭಾಷೆಯಾಗಲೀ ಅದರ ಬಗ್ಗೆ ಆಸಕ್ತಿ ಹೆಚ್ಚು. ಕನ್ನಡದೊಂದಿಗೆ ಅದನ್ನು ಕಂಪೇರ್ ಮಾಡಿನೋಡೋದು ಇತ್ಯಾದಿ ಮಾಡ್ತಿರ್ತೇನೆ’ ಇದು ಅವರ ಪ್ರತ್ಯುತ್ತರ.

ಮೂಲತಃ ಕಾರ್ಕಳದವರಾದ ಜೋಶಿಯವರು ಆಗಾಗ ಪತ್ರಿಕೆಗಳಲ್ಲಿ ಪ್ರಯೋಗವಾಗುವ ತಪ್ಪು ಪದಗಳನ್ನು ಹುಡುಕಿ ಜಾಡಿಸುತ್ತಿರುತ್ತಾರೆ. ಶತಾವಧಾನಿ ಗಣೇಶರ ಸಹಸ್ರಾವಧಾನವಾದಾಗ ಒಂದರ್ಥದಲ್ಲಿ ಜೋಶಿಯವರು ಅದ್ವಾನಿಗಳಾಗಿದ್ದರು! ಬಹುಶಃ ಆಗ ಅವರು ಮಲಗಿದ್ದು ಸುಳ್ಳು. ಇಲ್ಲಿ ಹಗಲು ಅವಧಾನ ಆಗುವಾಗ ಅವರಿಗಲ್ಲಿ ರಾತ್ರಿ. ಅವಧಾನ ಮುಗಿಸಿಕೊಂಡು ಸಾವಧಾನವಾಗಿ ಆಫೀಸ್‌ಗೆ ಹೋಗುತ್ತಿದ್ದರು ಅನ್ನಿಸುತ್ತೆ.

ನಾವೆಲ್ಲ ಫೇಸ್‌ಬುಕ್‌ನಲ್ಲಿ ಒಂದು ಫೋಸ್ಟ್‌ ಹಾಕಿ ಬಿಟ್ಟುಬಿಡುತ್ತೇವೆ. ಕೊನೆಗೊಮ್ಮೆ ನೆನಪಾದಾಗ ನೋಡುತ್ತೇವೆ. ನಾನಂತು ಪೋಸ್ಟ್‌ ಹಾಕಿದಮೇಲೆ ಬರುವ ಕಮ್ಮೆಂಟ್‌ಗಳಿಗೆ ಉತ್ತರ ನೀಡಲಾಗದಷ್ಟು ಸೋಮಾರಿ! ಆದ್ರೆ ಜೋಶಿಯವರು ಆ ಪೋಸ್ಟ್‌ನ ಪೂರ್ತಿ ಚರ್ಚೆಯಲ್ಲಿ ಇರುತ್ತಾರೆ ಮತ್ತು ೧೨೦ ಕಮ್ಮೆಂಟ್‌ನಲ್ಲಿ ಒಂದು ೪೦ ಕಮ್ಮೆಂಟ್‌ ಅವರದ್ದೇ ಇರುತ್ತೆ!

ಜೋಶಿಯವರು ಶೇರ್‌ ಮಾಡುವ ಎಷ್ಟೋ ವಿಚಾರಗಳನ್ನು ನಮ್ಮ ನಾಡಿನ ಪತ್ರಿಕೆಗಳು ಎತ್ತಾಕಿಕೊಂಡು ಲೇಖನ ಮಾಡಿ ಪ್ರಕಟಿಸಿದ್ದನ್ನು ನಾನು ಗಮನಿಸಿರುವೆ. ಆಗೆಲ್ಲ ಓಹೊ ಇದನ್ನು ಜೋಶಿಯವರು ಆವತ್ತೆ ಫೇಸ್‌ಬುಕ್‌ನಲ್ಲಿ ಹಾಕಿದ್ದರು ಅಂದುಕೊಳ್ಳುತ್ತಿರುತ್ತೇನೆ. ಅವರು ಯಾವ ವಿಷಯ ಹಂಚಿಕೊಂಡರು ಅದಕ್ಕೊಂದು ಸವಿಸ್ತಾರವಾದ ವಿವರಣೆ ಹಾಕಿರುತ್ತಾರೆ ಮತ್ತು ಅದು ತುಂಬಾ ಮೌಲ್ಯಯುತವಾಗಿ ತಿಳಿದುಕೊಳ್ಳುವಂತೆ ಇರುತ್ತೆ. ಅಲ್ಲಿಗೆ ಅವರು ಫೇಸ್‌ಬುಕ್‌ ಎಂಬ ಜಾಲತಾಣವನ್ನು ತಮ್ಮ ನಿತ್ಯದ ಕೆಲಸದಂತೆ ತುಂಬಾ ಶ್ರದ್ಧಾ-ಭಕ್ತಿಯಿಂದ ನಿಭಾಯಿಸುತ್ತಾರೆ ಎಂಬುದು ದಿಟವಾಯ್ತು!

ಜೋಶಿ ಕಂಡ್ರೆ ನಮ್ಮಲ್ಲಿ ಸುಮಾರಷ್ಟು ಜನಕ್ಕೆ ಆಗಲ್ಲ. ಯಾಕಂದ್ರೆ ಅವರು ತಪ್ಪಿದ್ರೆ ಸೀದಾ-ಸಾದಾವಾಗಿ ಹೇಳಿಬಿಡುತ್ತಾರೆ ಮತ್ತು ಸಾರ್ವಜನಿಕವಾಗಿ ಶೇರ್‌ ಮಾಡುತ್ತಾರೆ. ಇದನ್ನು ತಮಗೆ ಮಾಡಿದ ಅಪಮಾನ ಅಂತ ಕೆಲವರು ಅಂದುಕೊಳ್ಳುತ್ತಾರೇನೋ! ಆದ್ರೆ ಬಹುಶಃ ಜೋಶಿಯವರಿಗೆ ನೋವು ಮಾಡುವ ಉದ್ದೇಶ ಇರಲಿಕ್ಕಿಲ್ಲ. ಹೀಗೆ ಕಾಮಿಡಿ ಮಾಡುವ, ಫನ್‌ ಮಾಡುವ ಕೆಲ ಕ್ಯಾರೆಕ್ಟರ್‌ಗಳನ್ನು ನೋಡಿದ್ದೇನೆ, ತಮ್ಮಿಂದ ಬೇರೆಯವರಿಗೆ ನೋವಾಯ್ತು ಅನ್ನಿಸಿದ್ರು ಅವ್ರು ತುಂಬಾ ಹರ್ಟ್‌ ಆಗ್ತಾರೆ. ಬೇರೆಯವರಲ್ಲಿ ನಗು ಕಾಣುವವರಿಗೆ ಯಾವತ್ತೂ ನೋವು ರುಚಿಸದು.

ಜೋಶಿಯವರ ಹಳೆಗನ್ನಡ ಜ್ಞಾನ ನೋಡಿದ್ರೆ ಹೊಟ್ಟೆ ಉರಿಯುತ್ತೆ! ಇಷ್ಟೆಲ್ಲದರ ನಡುವೆ ನೀವು ಐಬಿಎಂಗೆ ಹೋಗ್ತೀರೋ ಇಲ್ವೋ?! ಅಂದ್ರೆ, ಅವರು ಆಫೀಸನಲ್ಲಿ ಇದ್ದುಕೊಂಡೆ ಫೇಸ್‌ಬುಕ್‌ ಮೆಂಟೈನ್‌ ಮಾಡುತ್ತಿರುತ್ತಾರೆ. ಆದ್ರೆ ಕೆಲವು ಅಂಕಣಕಾರರ ಥರ ತಮ್ಮ ಲೇಖನವನ್ನು ಬೇರೆಯವರ ಬಳಿ ಬರೆಸಿ ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಳ್ಳುವುದು ಸುಳ್ಳು!!! ಯಾಕಂದ್ರೆ ಇಡೀ ಚರ್ಚೆಯಲ್ಲಿ ಜೋಶಿಯವರು ಭಾಗಿಯಾಗಿರುತ್ತಾರೆ ಮತ್ತು ಪರೀಕ್ಷಿಸಲೆಂದು ಪಿಂಗ್‌ ಮಾಡಿದ್ರೆ ಉತ್ತರ ಕೊಡ್ತಾರೆ!

ವಾಸ್ತವವಾಗಿ ಶ್ರೀವತ್ಸ ಜೋಶಿಯವರು ಎಂಜಿನಿಯರ್‌. ಅವ್ರು ತಂತ್ರಜ್ಞಾನದ ಬಗ್ಗೆ, ಸಾಫ್ಟ್‌ವೇರ್‌ ಬಗ್ಗೆ ಬರೆಯಬೇಕು. ಆದ್ರೆ ಅವ್ರು ಅದ್ರ ಹೊರತಾಗಿದ್ದನ್ನು ಬರೀತಾರೆ. ನಂಗೆ ಅವ್ರು ಇಷ್ಟವಾಗುವುದು ಇದೇ ಕಾರಣಕ್ಕೆ. ಸಂಸ್ಕೃತಕ್ಕು-ಸಾಫ್ಟ್‌ವೇರ್‌ಗೂ ಸಂಬಂಧವೇ ಇಲ್ಲ. ಸಾಫ್ಟ್‌ವೇರ್‌ ವೃತ್ತಿ. ಸಾಹಿತ್ಯ ಪ್ರವೃತ್ತಿ. ಸಾಕಷ್ಟು ಜನಕ್ಕೆ ಕಥೆ, ಕವಿತೆ ಪ್ರವೃತ್ತಿಯಾಗಿರುತ್ತದೆ. ಗಂಭೀರವಾದ ಸಾಹಿತ್ಯದತ್ತ ಒಲವು ಇರುವುದಿಲ್ಲ. ಆದ್ರೆ ಇವ್ರು ಅದಕ್ಕೆ ತುಸು ತದ್ವಿರುದ್ಧ.

ಕೆಲವೊಮ್ಮೆ ಅವ್ರು ತೀರಾ ಕಿರಿಕಿರಿ ಅನ್ನಿಸಬಹುದು. ಈ ಮನುಷ್ಯ ಏನಪ್ಪ ಬೇರೆ ಕೆಲಸವೇ ಇಲ್ಲವಾ ಅನ್ನಿಸಬಹುದು. ಹಾಗಂದುಕೊಂಡ್ರೆ ಅದು ನಮ್ಮ ತಪ್ಪು. ಯಾಕಂದ್ರೆ ಅವ್ರು ಯಾರನ್ನು ಬನ್ನಿ, ನನ್ನ ಫೇಸ್‌ಬುಕ್‌ ನೋಡಿ ಅಂತ ಕರೆದಿಲ್ಲ. ಅದಕ್ಕಿಂತ ಮುಖ್ಯವಾಗಿ ಅನಾವಶ್ಯವಾಗಿ ಯಾರನ್ನು ಟ್ಯಾಗ್‌ ಮಾಡುವುದಿಲ್ಲ. ಬೇಡ ಅಂದ್ರೆ ನೀವು ಅವರನ್ನು ಬ್ಲಾಕ್‌ ಮಾಡಬಹುದು. ನೀವು ಬ್ಲಾಕ್‌ ಮಾಡಿದ್ದೀರಾ ಎಂಬ ಕಾರಣಕ್ಕೆ ಅವರ ಫೇಸ್‌ಬುಕ್‌ ಅಪ್‌ಡೇಟ್‌ ನಿಲ್ಲುತ್ತದೆ ಎಂದು ನನಗಂತೂ ಅನ್ನಿಸುವುದಿಲ್ಲ!

ನಾವೆಲ್ಲ ‘ಕೊಳಗದೊಳಗಿನ ಕಪ್ಪೆಗಳು’ ಅಂತ ನಾನು ಎಷ್ಟೋ ಸಲ ಅಂದುಕೊಳ್ಳುತ್ತೀರುತ್ತೇನೆ. ನಮಗೆ ನಮ್ಮ ಜಗತ್ತೇ ದೊಡ್ಡದು. ನಾವೇ ಬುದ್ಧಿವಂತರು. ಆದ್ರೆ ಆ ಜಗತ್ತಿನಿಂದ ಹೊರಬಂದ್ರೆ ನಮಗಿಂತ ಅದೆಷ್ಟು ಬುದ್ಧಿವಂತರು ಇಲ್ಲಿದ್ದಾರೆ. ಅದರ ಅರಿವು ಜೋಶಿಯವರಿಗಿದೆ. ಯಾಕಂದ್ರೆ ಅವ್ರು ಆರ್‌.ಗಣೇಶ್‌ರಂಥ ಶ್ರೇಷ್ಠರನ್ನು ಕಂಡವರು. ಹಾಗಾಗಿ ನೀವು ಏನೇ ಕೆಲಸ ಹೇಳಿದ್ರು ಕೂಡ ಜೋಶಿಯವರು ಖುಷಿಯಿಂದ ಮಾಡಿಕೊಡುತ್ತಾರೆ ಮತ್ತು ಅದರಿಂದ ಯಾವುದೇ ಲಾಭ ಅಪೇಕ್ಷಿಸುವುದಿಲ್ಲ. ಹಾಗಾಗಿಯೇ ತೀರಾ ಕಮರ್ಷಿಯಲ್ಲಾಗಿ, ಸುಮ್ಮನೆ ಏನೇನೋ ಬರೆದು ಸಮಯ ಹಾಳು ಮಾಡುವುದಕ್ಕಿಂತ ಕೈಯ್ಯಲ್ಲಿರುವ ೩ ಪುಟ ಟ್ರಾನ್ಸ್‌ಲೇಷನ್‌ ಮಾಡಿದ್ರೆ ದುಡ್ಡು ಬರುತ್ತೆ ಎಂದುಕೊಳ್ಳುವ ನನಗೂ ಕೂಡ, ಆ ಟ್ರಾನ್ಸ್‌ಲೆಷನ್‌ ತುಸು ಹೊತ್ತು ಬದಿಗಿಟ್ಟು ಜೋಶಿಯವರ ಬಗ್ಗೆ ಹೀಗೆಲ್ಲ ಬರೆಯಬೇಕು ಅನ್ನಿಸಿದ್ದು.

ಕನ್ನಡ, ತುಳು, ಕೊಂಕಣಿ, ಇಂಗ್ಲೀಶ್, ಹಿಂದಿ, ಸಂಸ್ಕೃತ, ತೆಲುಗು ಮತ್ತು ತಮಿಳು – ಇವಿಷ್ಟು ಭಾಷೆಗಳು ಬರುತ್ತವೆ. ಇಷ್ಟೆಲ್ಲ ಆಗಿ ಅವರ ಜೋಶಿಯವರ ಮಾತೃಭಾಷೆ ಮರಾಠಿ!!!

ಜೋಶಿಯವರೆ ನಿಮ್ಮ ಬತ್ತದ ಉತ್ಸಾಹ ಬರಗಾಲದಲ್ಲೂ ‘ಪಂಚ(ಚ್‌)’ರ್‌ ಆಗದೆ ಇರಲಿ…https://www.facebook.com/srivathsa.joshi?fref=ufi

Read Full Post »

ಹಾಯ್ ಪುಟ್ಟಿ,
ಎಕ್ಸ್‌ಟ್ರೀಮ್ಲಿ, ಎಕ್ಸ್‌ಟ್ರೀಮ್ಲಿ ಸ್ವಾರಿ ಕಣೆ! ನಿಂಗೊಂದು ಪತ್ರ ಬರಿದೆ ವರ್ಷಗಳೆ ಕಳೆದು ಹೋಗಿತ್ತು ನೋಡು. ಮದ್ವೆ ಆದ್ಮೇಲೆ ಹುಡುಗ್ರು ಕಳೆದು ಹೋಗ್ತಾರೆ ಅನ್ನೋ ನಿನ್ನ ಮಾತಿಗು, ನಾನು ಪತ್ರ ಬರಿದೆ ಇರೋದಕ್ಕೂ ಸರಿ ಹೋಗಿತ್ತು. ಹಾಗಂತ ನಿನ್ನ ಮೇಲೆ ನಂಗೆ ಪ್ರೀತಿ ಕಡಿಮೆ ಆಗಿದೆ ಅಂತಲ್ಲ. ಮದ್ವೆಗು ಮೊದ್ಲು ನಿನ್ನ ಎಷ್ಟು ಪ್ರೀತಿಸುತ್ತಿದ್ನೊ, ಈಗ ಅದಕ್ಕಿಂತ ಒಂಚೂರು ಜಾಸ್ತಿನೆ ಪ್ರೀತಿಸ್ತೀನಿ. ಈ ಮಾತು ಕೇಳಿ ನೀನು ’ಹನ್ನೊಂದು ಗಂಟೆ ಶಿವಮೊಗ್ಗ ಟ್ರೈನ್ ಹೋಯ್ತು’ ಅಂದುಕೊಂಡು ಇರ್ತಿಯ ಅಂತ ನಂಗೆ ಖಚಿತವಾಗಿ ಗೊತ್ತು. ಆದ್ರೂ ಪತ್ರ ಯಾಕೆ ಬರೆದಿಲ್ಲ ಅಂದ್ರೆ, ಈಗ ದಿನ ಎದುರಿಗೆ ಸಿಕ್ತಿಯಲ್ವಾ ಅದ್ಕೆ!
ಆದ್ರು ಪತ್ರದ ಸವಿಯೇ ಬೇರೆ ಬಿಡು! ಹಾಗಾಗಿ ನಿನ್ನ ಹಕ್ಕೋತ್ತಾಯದ ಮೇರೆಗೆ ಈ ಪತ್ರ. ಲೈಫ್ ಸಿಕ್ಕಾಪಟ್ಟೆ ಬ್ಯೂಸಿ ಆಗಿದೆ. ಈ ಹಾಳಾದ ಸಂಸಾರ ಅಂತ ಆದ್ಮೇಲೆ ನಿಜವಾಗ್ಲೂ ಕಳೆದು ಹೋಗಿಬಿಟ್ಟಿದ್ದೀನಿ. ಹಿಂದೆ ಆಗಿದ್ರೆ ನಾನೊಬ್ಬನೆ. ಹೆಂಗೆ ಬದುಕಿದ್ರು ಕಳೀತಿತ್ತು. ’ಉಂಡ್ಯ, ತಿಂದ್ಯ, ಮಲಗಿದ್ಯ…ಅದೆಲ್ಲಕ್ಕಿಂತ ಹೆಚ್ಚಾಗಿ ಸ್ನಾನ ಮಾಡಿ ದೇವರ ಪೂಜೆ ಮಾಡಿದ್ಯ’ ಅಂತ ಕೇಳೋರು ಯಾರು ಇರಲಿಲ್ಲ! ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬಂದ್ರು ನಡೆಯುತ್ತಿತ್ತು. ಬರದೆ ಇದ್ರು ಓಕೆ, ಓಕೆ.
ಅದ್ಕೆ ಕಣೆ ನಾನು ನಿಂಗೆ ಯಾವಾಗ್ಲೂ ರೇಗಿಸುವುದು ’ನೀ ಊರಿಗೆ ಹೋದ ನಮ್ಮ ಮನೆ ಮಹಡಿ ಮೇಲೆ ಬಾವುಟ ಹಾರಿಸಿ ಸ್ವತಂತ್ರ ದಿನಾಚರಣೆ ಆಚರಿಸುತ್ತೀನಿ. ಬಂದವರಿಗೆಲ್ಲ ಬೋಂದಿ ಲಾಡು ಕೊಡ್ತೀನಿ’ ಅಂತ! ಈ ಸ್ವತಂತ್ರ ದಿನಾಚರಣೆ, ಗಾಂಧಿ ಜಯಂತಿ ಮಜವೇ ಬೇರೆ ಬಿಡು. ಶಾಲೆಯಲ್ಲಿ ತಿಂದ ಬೋಂದಿ ಲಾಡಿನ ರುಚಿ, ನಿನ್ನ ಕೈಯಡುಗೆಯ ರುಚಿ ಎರಡು ಒಂದೆ ಅಂತ ಅರ್ಥವಾಗುವುದು ನೀನು ಊರಿಗೆ ಹೋದಾಗಲೆ!
ಅಯ್ಯೊ ನೋಡು ಈ ಪುರಾಣದಲ್ಲಿ ವೆರಿ ವೆರಿ ಇಂಪಾರ್ಟೆಂಟ್ ವಿಚಾರವನ್ನೆ ಮರೆತುಬಿಟ್ಟೆ. ಅಂದಹಾಗೆ ನಿಮ್ಮಪ್ಪ ಜೋಯ್ಸರು ಆರಾಮ ಇದಾರಾ?! ಛೇ, ಆಗೆಲ್ಲ ನಾನು ಜೋಯ್ಸರನ್ನ ಏಕವಚನದಲ್ಲಿ ಆರಾಮವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಈಗ ಹಾಗಾಗಲ್ಲ. ಯಾಕಂದ್ರೆ ಅವ್ರು ತಮ್ಮ ಮಗಳನ್ನು ’ತನು,ಮನದಿಂದ’ ಧಾರೆ ಎಳೆದು ಕೊಟ್ಟಿದ್ದಾರೆ. ಧನವನ್ನು ಮಾತ್ರ ಕೊಡದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೆ! ಹೋಗ್ಲಿ ಬಿಡು ಯಾರು ಕೊಟ್ಟ ದುಡ್ಡು ಎಷ್ಟು ದಿನ ಬರುತ್ತೆ ಅಲ್ವಾ? ಆದ್ರೂ ಕೊಟ್ಟಿದ್ರೆ ಕಾಫಿಪುಡಿ ಖರ್ಚಿಗೆ ಆಗ್ತಾ ಇತ್ತೇನಪ್ಪ! ಅವ್ರು ನಂಗೆ ಅಂತ ಕೊಡೋದು ಬೇಡವಾಗಿತ್ತು. ಮಗಳ ಸುಖ-ದುಃಖ, ಶಾಂತಿ, ನೆಮ್ಮದಿಗೆ ಅಂತ ಕೊಟ್ಟಿದ್ರೆ ಸಾಕಾಗಿತ್ತು. ಹಿಂಗೆಲ್ಲ ಜೋರಾಗಿ ಅಂದುಬಿಟ್ರೆ ನಾಳೆಯಿಂದ ನೀನು ಮನೆಯಲ್ಲಿ ಕಾಫಿ ಮಾಡೋದನ್ನೆ ನಿಲ್ಲಿಸಿಬಿಡ್ತಿಯ!
ಇವತ್ತು ಸುಮ್ಮನೆ ನಿಂಗೆ ಬರೆದ ಹಳೆಯ ಪತ್ರಗಳು, ನೀನು ಅದ್ಕೆ ಬರೆದ ಉತ್ತರಗಳನ್ನು ಜಾಲಾಡುತ್ತ ಕುಳಿತ್ತಿದ್ದೆ. ಅಬ್ಬಬ್ಬ ಆವತ್ತೆಲ್ಲ ಅದೆಷ್ಟು ಕನಸುಗಳು ನಮ್ಮಿಬ್ಬರದ್ದು. ನಮ್ಮಿಬ್ಬರ ಜೋಡಿ ಅಂದ್ರೆ ಜಗತ್ತಿನಲ್ಲಿ ಸ್ವರ್ಗಕ್ಕೆ ಮೂರೆ ಗೇಣು. ಮೊಬೈಲ್ ಇಲ್ಲದ ಕಾಲದಲ್ಲಿ, ಇಂಟರ್‌ನೆಟ್ ಕಾಣದ ಯುಗದಲ್ಲಿ ನಾವಿಬ್ಬರು ಅಂದೆಂಥ ಅದ್ಭುತವಾದ ಲವ್ ಮಾಡಿಬಿಟ್ವಿ. ಈಗ ನೆನಪಿಸಿಕೊಂಡ್ರೆ ಒಂಥರ ಥ್ರಿಲ್ ಆಗುತ್ತೆ. ಇನ್‌ಲ್ಯಾಂಡ್ ಲೆಟರ್‌ನಿಂದ ಇಷ್ಟೊಂದು ಅದ್ಭುತವಾದ ಲವ್ ಸಾಧ್ಯವ ಅನ್ನಿಸುತ್ತೆ. ಟಿಫನ್ ಬಾಕ್ಸ್‌ನಿಂದ, ನೋಟ್‌ಬುಕ್‌ನಿಂದ…ಇನ್ನು ಎಂಥೆಂಥವುಗಳಿಂದಲೋ ಲವ್ ಆಗುತ್ತಂತೆ. ಅಂಥದ್ರಲ್ಲಿ ನಮ್ಮ ಇನ್‌ಲ್ಯಾಂಡ್ ಲೆಟರ್ ಮಹಾ ಅಲ್ಲ ಬಿಡು!
ಅಂದ್ಹಾಗೆ ನಿಮ್ಮ ತೀರ್ಥಹಳ್ಳಿ ಹೇಗಿದೆ? ತುಂಗಾನದಿಯಲ್ಲಿ ನೀರಿದೆ ತಾನೆ? ನೆನಪಿದ್ಯ ನಿಂಗೆ, ನಾನು ಲವ್ ಮಾಡಲ್ಲ ಅಂದಿದ್ದಕ್ಕೆ ನೀನು ನೀರಿಲ್ಲದ ನದಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು! ಹಾಗೇನಾದ್ರು ಆಗಿದ್ರೆ ನನ್ನ ಬದುಕಿನಲ್ಲಿ ಎಂಥೆಂಥ ಕಾಮಿಡಿ ಸೀನ್‌ಗಳೆಲ್ಲ ಮಿಸ್ ಆಗ್ತಿತ್ತು. ಅದ್ಯಾಕೊ ನನಗೆ ಇವತ್ತಿಗು ನಿಮ್ಮೂರು ತೀರ್ಥಹಳ್ಳಿ ವಂಡರ್‌ಫುಲ್ ಕಣೆ. ನೀನು ಹುಟ್ಟಿದ ಊರು ಅಂತಲ್ಲ, ನಿನ್ನ ತವರೂರು ಅಂತಾನೂ ಅಲ್ಲ. ಆದ್ರೂ ತೀರ್ಥಳ್ಳಿ ಅಂದ್ರೆ ಏನೋ ಒಂಥರ ಟಚ್ಚಿ, ಟಚ್ಚಿ!
ನೀನು ಇಲ್ಲಿ ನನ್ನ ಪಕ್ಕದಲ್ಲಿ ಕುಳಿತಿದಿಯಲ್ವಾ? ಸೋ, ನಾನು ಪತ್ರನ ಮತ್ತೆ ನಿನ್ನ ಅಡ್ರೆಸ್‌ಗೆ ಪೋಸ್ಟ್ ಮಾಡಲ್ಲ. ಈಗ ನಿಂದು-ನಂದು ಒಂದೆ ಅಡ್ರೆಸ್! ಆಗಾಗ ಡೋರ್ ನಂಬರ್ ಮಾತ್ರ ಬದ್ಲಾಗ್ತ ಇರುತ್ತೆ. ಹಾಗಾಗಿ ಇಲ್ಲೇ ಪತ್ರ ಓದಿ ನನ್ನ ಒಂದು ರೂಪಾಯಿ ಉಳಿತಾಯ ಮಾಡು. ಮತ್ತೆ ಮನೆ ಕಡೆ ಎಲ್ಲ ಆರಾಮಲ್ವಾ?
ಸರಿ ಕಣೆ ಆಫೀಸ್‌ಗೆ ಟೈಂ ಆಯ್ತು. ಪುರುಸೊತ್ತು ಆದಾಗ ಇನ್ನೊಂದು ಪತ್ರ ಬರಿತೀನಿ. ಅಲ್ಲಿವರೆಗೂ ಹ್ಯಾಪಿ ಇಂಡಪೆಂಡೆನ್ಸ್ ಡೆ. ನಾನು ಈ ಸಿಲಿಕಾನ್ ಸಿಟಿಗೆ ಬಂದು ಶಾನೆ ಇಂಪ್ರ್ಯೂ ಆಗಿದೀನಿ ಕಣೆ. ಮೊದ್ಲಿನ ಥರ ಗುಗ್ಗು ಅಲ್ಲ. ಪೆದ್ದು ಅಲ್ಲ. ನೀಟಾಗಿ ಡ್ರೆಸ್ ಮಾಡಿಕೊಂಡು ಆಫೀಸ್‌ಗೆ ಹೋಗ್ತೀನಿ. ಅದ್ಕೆ ಪತ್ರದ ತುಂಬೆಲ್ಲ ಇಷ್ಟೊಂದು ಇಂಗ್ಲಿಷ್ ಪದಗಳು.
ಸರಿ ಬರ‍್ಲಾ? ಬರಬೇಡ ಅಂದ್ರು ಸಂಜೆ ಗ್ಯಾರೆಂಟಿ ಬರ್ತಿನಿ! ಅಲ್ಲಿವರೆಗೂ ನಿಂಗೆ ಮತ್ತೊಮ್ಮೆ ಹ್ಯಾಪಿ ಇಂಡಪೆಂಡೆನ್ಸ್ ಡೆ.
ಇಂತಿ
ನಿನ್ನ ಪುಟ್ಟ

Read Full Post »